*ಹೊಗೆ ಸೊಪ್ಪು*
ತಿಳಿದೂ ಕೂಡಾ ಹಾಳು
ಮಾಡಿಕೊಳ್ಳುವಿರೇಕೆ
ನಿಮ್ಮಯ ಆರೋಗ್ಯವನ್ನು
ಸೇವಿಸಿ ಹೊಗೇಸೊಪ್ಪು|
ಉತ್ತಮ ಅರೋಗ್ಯಕ್ಕೆ
ಇಂದೇ ತಿನ್ನುವುದಕ್ಕೆ
ಶುರು ಮಾಡಿರಿ
ತರಕಾರಿ ಮತ್ತು ಸೊಪ್ಪು||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ಹೊಗೆ ಸೊಪ್ಪು*
ತಿಳಿದೂ ಕೂಡಾ ಹಾಳು
ಮಾಡಿಕೊಳ್ಳುವಿರೇಕೆ
ನಿಮ್ಮಯ ಆರೋಗ್ಯವನ್ನು
ಸೇವಿಸಿ ಹೊಗೇಸೊಪ್ಪು|
ಉತ್ತಮ ಅರೋಗ್ಯಕ್ಕೆ
ಇಂದೇ ತಿನ್ನುವುದಕ್ಕೆ
ಶುರು ಮಾಡಿರಿ
ತರಕಾರಿ ಮತ್ತು ಸೊಪ್ಪು||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ಪವಾಡದ ಪುಸ್ತಕ
ಕಥೆ
ಅಂದು ನಾನು ಶಾಲೆಯಿಂದ ಮನೆಗೆ ಬರುವಾಗ ಸಂಜೆ ಐದೂಮುಕ್ಕಾಲು ಆಗಿರಬಹುದು, ಗಿರಿನಗರ ದಾಟಿ , ಶಿವರಾಮಕಾರಂತ ನಗರದ ಬೋರ್ಡ್ ಬಳಿ ನನ್ನ ಬೈಕ್ ಬಂದಂತೆ, ರಸ್ತೆಯ ಪಕ್ಕದಲ್ಲಿ ಒಂದು ಪುಸ್ತಕ ಬಿದ್ದಿರುವುದು ಗಮನಕ್ಕೆ ಬಂತು , ದೂರದಲ್ಲಿ ಬೈಕ್ ನಿಲ್ಲಿಸಿ,ಆ ಪುಸ್ತಕವನ್ನೆ ನೋಡುತ್ತಾ ನಿಂತೆ , ಅದರ ಪಕ್ಕದಲ್ಲೇ ಏಳೆಂಟು ಜನ ನಡೆದು ಹೋದರು, ಕೆಲವರು ಪುಸ್ತಕ ನೋಡಿದರೂ ಸುಮ್ಮನೆ ಮುಂದೆ ಹೋದರು, ನಾನು ಹೋಗಿ ಆ ಪುಸ್ತಕ ತೆಗೆದುಕೊಳ್ಳಲೇ? ಎಂದು ಒಂದು ಮನಸ್ಸು, ಬೇಡ ಯಾರದೋ ಬಿದ್ದಿರಬೇಕು, ಅವರೇ ಬಂದು ತೆಗೆದುಕೊಂಡು ಹೋಗಲಿ ಬೇರೆಯರ ವಸ್ತು ಮುಟ್ಟಬಾರದು ಎಂದು ಮತ್ತೊಂದು ಮನಸು, ಇದರ ಜೊತೆಗೆ ಅಮ್ಮ ಹೇಳಿದ ಮಾತು ನೆನಪಾಯಿತು, " ಮೂರು ಹಾದಿ ಕೂಡಿದ ಜಾಗದಲ್ಲಿ ಏನೇನೋ ಪೂಜೆ ಮಾಡಿ ಯಾವುದ್ಯಾವುದೋ ವಸ್ತು ಇಟ್ಟಿರುತ್ತಾರೆ, ಆ ವಸ್ತು ಮುಟ್ಟಬಾರದು ಮತ್ತು ದಾಟ ಬಾರದು" .
ಹೌದು ಇದೂ ಕೂಡ ಮೂರು ದಾರಿ ಸೇರುವ ಜಾಗ, ಏನು ಮಾಡಲಿ ?
ವೈಜ್ಞಾನಿಕ ಮನೋಭಾವ ಅದೂ ಇದೂ ಎಂದು ತರಗತಿಯಲ್ಲಿ ಪಾಠ ಮಾಡುವ ನಾನು ಇಂತಹ ಮೂಢನಂಬಿಕೆಗಳನ್ನು ನಂಬಬಾರದು ಎಂದು ನಿಶ್ಚಯ ಮಾಡಿಕೊಂಡು ಆ ಪುಸ್ತಕದ ಬಳಿ ಹೋಗಿ ಕೈಯಲ್ಲಿ ತೆಗೆದುಕೊಂಡೆ ಹೊಸದಾಗಿತ್ತು , ಅದು ನೋಟ್ ಪುಸ್ತಕ! ಹೆಚ್ಚು ಹಾಳೆಗಳಿರಲಿಲ್ಲ, ಆದರೂ ಆಕರ್ಷಕವಾಗಿತ್ತು,ನನ್ನ ಬೈಕ್ ನ ಸೈಡ್ ಬ್ಯಾಗ್ ನಲ್ಲಿ ಇಟ್ಟುಕೊಂಡು ಮನೆ ತಲುಪಿದೆ.
ರಾತ್ರಿ ಊಟದ ನಂತರ ಡೈರಿ ಬರೆದ ಮೇಲೆ ದಾರಿಯಲ್ಲಿ ಸಿಕ್ಕ ನೋಟ್ ಬುಕ್ ಕಡೆ ಕಣ್ಣು ಹೊರಳಿತು, ಎಂತಹ ಚೆಂದದ ಪುಸ್ತಕ ಇದರಲ್ಲಿ ಏನಾದರೂ ಬರೆಯಲೇ ? ಎಂದುಕೊಂಡು ಪೆನ್ನು ಕೈಗೆತ್ತಿಕೊಂಡೆ , ಏನು ಬರೆಯಲಿ? ಡೈರಿ ಬರೆಯಲು ಪುಸ್ತಕ ಇದೆ ,ಈಗ ತಾನೆ ಬರೆದೆ, ಮತ್ತೇನು ಬರೆಯಲಿ? ತಕ್ಷಣ ಪ್ರಾಥಮಿಕ ಶಾಲೆಯ ಶಿಕ್ಷಕರಾದ ತಿಪ್ಪೇಸ್ವಾಮಿ ರವರ ನೆನಪಾಯಿತು, ಆಗ ದಿನಕ್ಕೊಂದು ಒಳ್ಳೆಯ ಕೆಲಸ ಎಂದು ಪುಸ್ತಕದಲ್ಲಿ ಬರೆಯಿರಿ ಎಂದು ಬರೆಸಿ ಒಳ್ಳೆಯ ಕೆಲಸ ಮಾಡಲು ನಮ್ಮನ್ನು ಹುರಿದುಂಬಿಸಿದ್ದು ನೆನಪಿಗೆ ಬಂತು .
ಸರಿ ಹಾಗಾದರೆ ಈ ನೋಟ್ ಪುಸ್ತಕದಲ್ಲಿ ನಾಳೆ ಏನು ಒಳ್ಳೆಯ ಕೆಲಸವಾಗಬೇಕು ಎಂಬುದರ ಬಗ್ಗೆ ಬರೆಯುವೆ ಎಂದು ಯೋಚಿಸುವಾಗ 9 A ವಿಭಾಗದ ನಗ್ಮಾ ಹದಿನೈದು ದಿನದಿಂದ ಯೂನಿಫಾರ್ಮ್ ಹಾಕಿಕೊಂಡು ಬಂದಿರಲಿಲ್ಲ, ಕೇಳಿದರೆ "ನಮ್ಮ ತಂದೆಯವರು ಗಾರೆ ಕೆಲಸ ಮಾಡುತ್ತಿದ್ದರು ಸರ್ ,ಇತ್ತೀಚಿಗೆ ಕೆಲಸ ಇಲ್ಲ ಅದಕ್ಕೆ ದುಡ್ಡಿಲ್ಲ ,ಮುಂದಿನ ವಾರ ಕೊಡಿಸುತ್ತಾರಂತೆ" ಎಂದಳು. ಯಾಕೋ ಮನಸ್ಸಿಗೆ ಬೇಸರವಾಗಿ ನಾನೇ ಕೊಡಿಸಲೆ ಎಂದು ಮನದಲ್ಲಿ ಅಂದುಕೊಂಡರೂ ,ನಾಳೆ ಇದೇ ರೀತಿಯಲ್ಲಿ ಹಲವಾರು ಮಕ್ಕಳು ಬಂದರೆ ಅವರಿಗೆ ಕೊಡಿಸಲಾದೀತೇ?ಎಂದು ನಾನೇ ನನ್ನ ನಿರ್ಧಾರ ಸಮರ್ಥನೆ ಮಾಡಿಕೊಂಡು ಸುಮ್ಮನಾದೆ.
ಆ ಹೊಸ ಪುಸ್ತಕದಲ್ಲಿ " ನಗ್ಮಾ ಳಂತಹ ವಿದ್ಯಾರ್ಥಿನಿಗಳಿಗೆ ಯೂನಿಫಾರ್ಮ್ ಲಬಿಸಲಿ" ಎಂದು ಬರೆದು ಪುಸ್ತಕ ಎತ್ತಿಟ್ಟು ನಿದ್ದೆಗೆ ಜಾರಿದೆ.
ಮರುದಿನ ಶಾಲಾ ಪ್ರಾರ್ಥನೆಯ ವೇಳೆಯಲ್ಲಿ ಸುಮ್ಮನೆ ಎಲ್ಲಾ ವಿದ್ಯಾರ್ಥಿಗಳ ಕಡೆ ಕಣ್ಣು ಹಾಯಿಸಿದರೆ ಎಲ್ಲಾ ವಿದ್ಯಾರ್ಥಿಗಳು ಯೂನಿಫಾರ್ಮ್ ಹಾಕಿದ್ದರು, ನನಗೆ ಆಶ್ಚರ್ಯ, ನಾನು ಯೂನಿಫಾರ್ಮ್ ಕೇಳಿದ್ದಕ್ಕೆ ಪಾಪ ಆ ಹುಡುಗಿ ಶಾಲೆಗೆ ಬರದೇ ಹೋದಳೇ ಎಂದು ಬೇಸರ ಪಟ್ಟುಕೊಂಡೆ, ನಂತರ ಕೂಲಂಕಷವಾಗಿ ನೋಡಿದಾಗ ನಾಲ್ಕನೇ ಸಾಲಿನ ಐದನೇಯ ಹುಡುಗಿಯೇ ನಗ್ಮಾ! ಏನಾಶ್ಚರ್ಯ ಹೊಸ ಯೂನಿಫಾರ್ಮ್ ನೊಂದಿಗೆ ನಾಡಗೀತೆಯನ್ನು ತಲೆ ಎತ್ತಿ ಹಾಡುತ್ತಿದ್ದಳು.
ತರಗತಿ ಮುಗಿದ ಬಳಿಕ ನಗ್ಮಾ ಳನ್ನು ಕರೆದು "ಗುಡ್ ಗರ್ಲ್ ,ನೋಡು ಈಗ ಎಂತ ಚೆನ್ನಾಗಿ ಕಾಣುವೆ " ಎಂದೆ.
ನಿನ್ನೇ ಊರಿಂದ ನಮ್ಮಜ್ಜಿ ಬಂದಿತ್ತು ಸಾರ್ ತುಮ್ಕೂರಿಗೆ ಕರ್ಕೊಂಡ್ ಹೋಗಿ ಕೊಡಿಸ್ಕೆಂಡ್ ಬಂತು ಸಾರ್.." ಎಂದಳು.
ನಾನು ಸ್ಟಾಪ್ ರೂಂಗೆ ಹೋಗಿ ನೀರು ಕುಡಿದು ಮುಂದಿನ ತರಗತಿಗೆ ಹೋಗಲು ಮೆಟ್ಟಿಲು ಹತ್ತುವಾಗ , ರಾತ್ರಿ ನೋಟ್ ಪುಸ್ತಕದಲ್ಲಿ ಬರೆದ ಸಾಲು ನೆನಪಾಯಿತು, ಅರೆ.. ಅದು ನಿಜವಾಯಿತು ಎಂದುಕೊಂಡೆ.
ಎಂದಿನಂತೆ ಅಂದು ರಾತ್ರಿ ಹಾಸಿಗೆಯ ಮೇಲೆ ಹೊಸ ಪುಸ್ತಕದಲ್ಲಿ ಏನು ಬರೆಯಬೇಕು ಎಂದು ಯೋಚಿಸುವಾಗ ನಮ್ಮ ಮನೆಯವರು ಬೆಳಿಗ್ಗೆ " ರೀ... ಒಂದು ವಾರದಿಂದ ನೀರು ಬಂದಿಲ್ಲ,ಎಷ್ಟು ದಿನ ಅಂತ ಟ್ಯಾಂಕರ್ ಹಾಕಿಸಿಕೊಳ್ಳೋದು ? ಸಂಬಳ ಎಲ್ಲಾ ಟ್ಯಾಂಕರ್ ಗೆ ಹೋಗಲಿ ಬಿಡಿ" ಎಂದು ಗುರ್ ಅಂದಿದ್ದಳು .
ಪೆನ್ನು ತೆಗೆದುಕೊಂಡು " ನಗರದ ನೀರಿನ ಸಮಸ್ಯೆ ಬಗೆಹರಿಯಲಿ" ಎಂದು ಬರೆದಿಟ್ಟು ಮಲಗಿದೆ .
ಮುಂಜಾನೆಯ ನಾಲ್ಕೂವರೆ ಗಂಟೆಯ ಸವಿನಿದ್ದೆಯ ಸಮಯದಲ್ಲಿ ಹೊರಗೆ ಯಾರೋ ಗೇಟ್ ಬಡಿದರು ಕಣ್ಣು ಉಜ್ಜಿಕೊಂಡು ಹೊರಬಂದರೆ ಪಕ್ಕದ ಮನೆಯ ಚಂದ್ರು ರವರು
" ಏನ್ ಸಾರ್ ನೀರಿಲ್ಲ ಅಂತ ಇಷ್ಟು ದಿನ ಕಷ್ಟ ನೋಡಿನೂ ,ಸಂಪ್ ತುಂಬಿ ರೋಡಿಗೆ ಬಂದೈತೆ ನೀರು ಆಪ್ ಮಾಡಿ ಸಾ," ಎಂದು ಹೊರಟು ಹೋದರು "
"ಸಾರಿ ಸಾರ್ ನೋಡ್ಲಿಲ್ಲ ಎಂದು ಸಂಪ್ ನ ನಲ್ಲಿ ಆಪ್ ಮಾಡಿ ,ಟ್ಯಾಕ್ ಗೆ ನೀರು ಬಿಡಲು ಮೋಟಾರ್ ಆನ್ ಮಾಡಿದೆ, ಈ ಸದ್ದು ಕೇಳಿ ಹೊರಗೆ ಬಂದ ನನ್ನವಳ ಮೊಗದಲ್ಲಿ ಮಂದಹಾಸ ," ರೀ ಇವತ್ ಎರಡು ದೋಸೆ ಜಾಸ್ತಿ ನಿಮಗೆ "ಎಂದು ನುಲಿದಳು.
ಅಂದು ಸಂಜೆ ಊರಿಂದ ಪೋನ್ ಮಾಡಿದ ಅಣ್ಣ ಯಾಕೋ ಬೇಸರದಿಂದಲೇ ಮಾತನಾಡಿದ ,ಏನು ಕಾರಣ ಎಂದು ಬಲವಂತ ಮಾಡಿದಾಗ , ಬೋರ್ ವೆಲ್ ನೀರು ಪೂರಾ ಬತ್ತಿ ಹೋಗಿ ಒಂದು ವಾರದಿಂದ ನೀರಿಲ್ಲದೇ, ಬಿಸಿಲು ಹೆಚ್ಚಾಗಿ ಫಸಲಿಗೆ ಬಂದ ಅಡಿಕೆ ಮರಗಳು ಒಣಗುತ್ತಿವೆ "ಎಂದು ನೊಂದು ನುಡಿದ.
ಅಂದು ಸಂಜೆ ಮನೆಯಲ್ಲಿ ನನಗೆ ಇಷ್ಟವಾದ ಮಂಡಕ್ಕಿ ಉಸುಲಿ( ಪುರಿ) ಮಾಡಿ ,ಪಕೋಡ ಮಾಡಿದ್ದರೂ ಎರಡು ಪಕೋಡ ಸ್ವಲ್ಪ ಉಸುಲಿ ತಿಂದು ಎದ್ದುಬಿಟ್ಟಿದ್ದೆ, "ಇದ್ಯಾಕೆ ಇವತ್ತು ನಿಮ್ ಅಪ್ಪ ಇಷ್ಟು ಕಮ್ಮಿ ತಿಂದರು" ಎಂದು ಮಗಳ ಕೇಳಿದಳು ನನ್ನವಳು.
ರೈತರ ಕಷ್ಟಕ್ಕೆ ಕೊನೆಯೇ ಇಲ್ಲವೇ ಪಾಪ ಕಷ್ಟ ಜೀವಿಗಳು ಕಷ್ಟ ಪಟ್ಟರೂ ಸುಖವಿಲ್ಲ ಯಾವಾಗ ಈ ರೈತರ ಸಮಸ್ಯೆಗಳು ಬಗೆಹರಿಯುವುದು ಎಂದು ಚಿಂತಿಸುತ್ತಾ, ಪೆನ್ ತೆಗೆದುಕೊಂಡು ಹೊಸ ಪುಸ್ತಕದಲ್ಲಿ " ಈ ವರ್ಷ ಮಳೆ ಬೆಳೆ ಚೆನ್ನಾಗಿ ಆಗಲಿ" ಎಂದು ಬರೆದು ಮಲಗಿದೆ ,ನಿದ್ದೆ ಹತ್ತಲಿಲ್ಲ ,ಕಣ್ಣು ಮುಚ್ಚಿದರೆ ಒಣಗಿದ ಅಡಿಕೆ ಮರಗಳು ಬಂದು ನಿಂತವು.
ಬೆಳಿಗ್ಗೆ ಏಳು ಗಂಟೆ ,ಮಗಳು ತಂದು ಕೊಟ್ಟ
ಟೀ ಕುಡಿಯುತ್ತಾ, ಅಂದಿನ ನ್ಯೂಸ್ ಪೇಪರ್ ಓದುತ್ತಿರುವಾಗ, ಪೋನ್ ರಿಂಗಾಯಿತು,ನೋಡಿದೆ ಅಣ್ಣನದು
" ಒಳ್ಳೆ ಮಳೆ ಕಣಪ್ಪ, ಆ ತಿರುಪತಿ ತಿಮ್ಮಪ್ಪ ಕಣ್ ಬಿಟ್ಟ, ನಮ್ ತ್ವಾಟದ್ ಪಕ್ಕ ಇರೋ ಕೆರೆ ತುಂಬೈತೆ , ಇನ್ನೇನ್ ಮೋಸ ಇಲ್ಲ , ಒಳ್ಳೆ ಬೆಳೆ ಆಗುತ್ತೆ, ಅಬ್ಬಾಬ್ಬ.. ಅದೇನ್ ಮಳೆ ..ರಾತ್ರೆಲ್ಲಾ.... ಬಂತಪ್ಪ... " ಎಂದು ಸಂತೋಷದಿಂದ ಒಂದೇ ಸಮನೆ ಹೇಳಿದರು ಅಣ್ಣ.
ನಿನ್ನೆ ಸಂಜೆಯಿಂದ ಇದ್ದ ಬೇಸರ ಕಳೆದು
" ಏ ಇನ್ನೊಂದು ಕಪ್ ಟೀ ತೊಗೊಂಡ್ ಬಾ" ಎಂದೆ .
ಆ ಪುಸ್ತಕದ ಮಹಿಮೆ ಕಂಡು ಒಳಗೊಳಗೆ ಹೆಮ್ಮೆ, ಅಚ್ಚರಿ,ಸಂತೋಷವಾಯಿತು, ಪೇಪರ್ ನಲ್ಲಿ ಕೊರೋನಾದ ವೈರಾಣುವಿನ ಉಲ್ಬಣದ ಸುದ್ದಿ, ಲಕ್ಷಾಂತರ ಸಾವು ನೋವಿನ ಸುದ್ದಿ ಓದಿದಾಗ ಬೇಸರಗೊಂಡು ,ಇಂದು ಸಂಜೆ ಆ ಪುಸ್ತಕದಲ್ಲಿ " ಕೊರೋನಾ ತೊಲಗಲಿ ಜಗತ್ತು ಆರೋಗ್ಯವಾಗಿರಲಿ "ಎಂದು ಬರೆಯಬೇಕು ಎಂದು ಬೆಳಿಗ್ಗೆ ಯೇ ನಿಶ್ಚಯ ಮಾಡಿಕೊಂಡು ಅಂದು ಶಾಲೆಯಲ್ಲಿ ಇನ್ನೂ ಲವಲವಿಕೆಯಿಂದ ಪಾಠ ಮಾಡಿದೆ.
ಸಂಜೆಯ ವಾಕ್ ಮುಗಿಸಿ ದೊಡ್ಡ ಮಗಳಿಗೆ ಓದಿಕೊಡುವಾಗ ಚಿಕ್ಕ ಮಗಳು ತರಲೆ ಮಾಡುತ್ತಿದ್ದಳು," ಆಟ ಆಡು ಹೋಗು ಚಿನ್ನ" ಅಂದೆ "ಪೇಪರ್ ಬೋಟ್ ಆಟ ಆಡಲಾ "ಅಂದಳು ಹೂ... ಅಂದೆ
ಪ್ರತಿ ನಿಮಿಷಕ್ಕೊಂದು ಪೇಪರ್ ಬೋಟ್ ಮಾಡಿ " ಅಪ್ಪ.... ಹೇಗಿದೆ? ಕೇಳುತ್ತಿದ್ದಳು
" ವೆರಿ ಗುಡ್ ಸೂಪರ್ ಚಿನ್ನ " ಎನ್ನುತ್ತಿದ್ದೆ,
ಊಟದ ನಂತರ ಎಂದಿಗಿಂತಲೂ ಅಂದು ಬೇಗ ಹಾಸಿಗೆ ಮೇಲೆ ಹೋಗಿ ಪವಾಡದ ಪುಸ್ತಕದಲ್ಲಿ ಬರೆಯಲು ಹೊರಟೆ, ಹಾಳೆಗಳು ಖಾಲಿ! ಇದೇನು ಎಂದು ನೋಡಿದರೆ ಮುಂದಿನ ಖಾಲಿ ಹಾಳೆಗಳನ್ನು ಯಾರೋ ಹರಿದಿದ್ದರು,
" ಅಯ್ಯೋ ಎಂತಹ ಕೆಲಸ ಆಯಿತು, ಈ ಕೊರೋನಾ ತೊಲಗುವ ಕುರಿತು ನನಗೆ ಮೊದಲೇ ಯಾಕೆ ಹೊಳೆಯಲಿಲ್ಲ, ಎಂದು ನನ್ನನ್ನು ನಾನೇ ಹಳಿದುಕೊಂಡೆ, ಆದರೂ ಈ ಹಾಳೆಗಳನ್ನು ಹರಿದವರಾರು ಎಂದು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾಗ ಓಡಿ ಬಂದ ಚಿಕ್ಕ ಮಗಳು " ಅಪ್ಪಾ... ಈ ಪೇಪರ್ ಬೋಟ್ ಎಂಗಿದೆ" ಎಂದು ಕಣ್ಣ ಮುಂದೆ ಹಿಡಿದಾಗ, ಆ ಹಾಳೆ ಪವಾಡದ ಪುಸ್ತಕದ್ದು ಎಂದು ನನಗೆ ತಿಳಿಯದೇ ಇರಲಿಲ್ಲ....
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು.
ಮುಂಜಾನೆಯಲಿ ನಿದ್ರೆಯಿಂದ ಎದ್ದರೆ ಕಾಗೆ, ಕೋಳಿ, ಪಕ್ಷಿಗಳ ಅಲಾರ್ಮ್ , ಕುರಿ ಮೇಕೆಗಳ ಬ್ಯಾ..ಎಂಬ ಏನೋ ಹಿತಕರ ಸದ್ದು , ನಿತ್ಯ ಕರ್ಮ ಮುಗಿಸಿ, ಬಿಸಿ ನೀರ ಕುಡಿದು,ಪ್ರಾಕೃತಿಕ ಪ್ರಾಣಿ ಪಕ್ಷಿಗಳ ಹಿನ್ನೆಲೆಯಲ್ಲಿ ಯೋಗಾಭ್ಯಾಸ ,ಧ್ಯಾನ ,ಪ್ರಾಣಾಯಾಮ ಗಳ ಮುಗಿಸಿ, ಗ್ರೀನ್ ಟೀ ಕುಡಿದು ನಮ್ಮ ತೋಟದ ಕಡೆ ವಾಕ್ ಹೊರಟರೆ, ಅಲ್ಲಿಂದಲೇ ಸ್ವರ್ಗ ಸದೃಶ ಚಿತ್ರಗಳ ಅನಾವರಣ,ಅರೆಮಲೆನಾಡಿನ ನನ್ನೂರು ಅಡಿಕೆ ,ತೆಂಗು ತೋಟಗಳಿಂದ ಆವೃತವಾಗಿದೆ. ತೋಟದ ಪಕ್ಕದ ರಸ್ತೆಯಲ್ಲಿ ನಡೆಯುವಾಗ, ಆಗ ತಾನೆ ಅರಳಿದ ಹೊಂಬಾಳೆಯ ಒಂಥರಾ ಸುವಾಸನೆ ಸವಿದೇ ಧನ್ಯನಾಗಬೇಕು, ಮುಂದೆ ನಾಲ್ಕು ಹೆಜ್ಜೆ ಹಾಕಿದರೆ ಅಳಿಲುಗಳು ಮರಗಳ ಮೇಲೇರುತ್ತಾ ಇಳಿಯುತ್ತ ನನ್ನ ನೋಡಿ ಮರದ ಹಿಂದೆ ಬಚ್ಚಿ ಕೊಳ್ಳವುದ ನೋಡುವುದೇ ಸಂಭ್ರಮ, ಈ ಮಧ್ಯೆ ತೇಕಲವಟ್ಟಿಯ ಮರಡಿ ಗುಡ್ಡಗಳ ನಡುವೆ ರವಿರಾಯ ವಿಧಾನವಾಗಿ ಕೆಂಪನೆಯ ಚೆಂಡಿನಂತೆ ನಗುತ್ತಾ ಬರುವುದ ನೋಡಲು ಅದೃಷ್ಟ ಬೇಕು, ಹಿತವಾಗಿ ಮೈಗೆ ಸೋಕುವ ತಂಗಾಳಿ ಎರಡು ಕಿಲೋಮೀಟರ್ ನಡೆದರೂ ಸುಸ್ತು ಆಗದಂತೆ ಮಾಡಿಬಿಡುತ್ತದೆ.
ನಮ್ಮ ಅಡಿಕೆ ತೆಂಗಿನ ತೋಟದ ಒಳಗೆ ಕಾಲಿಡುವಾಗ,ಪುನಃ ನವಿಲಿನ ಧನಿಗಳ, ವಿವಿಧ ಪಕ್ಷಿಗಳ ಸ್ವಾಗತ ಗೀತೆ ನನಗಾಗಿ ಕಾದಿರುತ್ತದೆ, ಸಾವಿರಕ್ಕೂ ಅಧಿಕವಿರುವ ಅಡಿಕೆ ತೆಂಗು ಮರಗಳು ,ಮೊದಲು ನನ್ನ ನೋಡು ಎಂದು ಜಿದ್ದಿಗೆ ಬಿದ್ದವರಂತೆ ತಮ್ಮ ಅಂದವ ತೋರುವವು, ತೋಟದ ಮೂಲೆ ಮೂಲೆಗಳಲ್ಲಿ ಓಡಾಡುತ್ತ ಸಣ್ಣ ಪುಟ್ಟ ಕೆಲಸ ಮಾಡಿ ಅಲ್ಲೇ ನೀರು ಕುಡಿಯಲು ತಲೆ ಮೇಲೆತ್ತಿದಾಗಲೆ ಸೂರ್ಯದೇವ ನೋಡು ನಾನು ಇಲ್ಲಿಗೆ ಬಂದಿರುವೆ ಎಂದು ಸ್ವಲ್ಪ ಖಾರವಾದ ನೋಟ ಬೀರುವನು, ಮನೆಯಿಂದ ಮಗಳು ಕರೆ ಮಾಡಿ ಈಗ ಒಂಭತ್ತೂವರೆ ಅಪ್ಪ ತಿಂಡಿ ರೆಡಿ ಬಾ ಎಂದಾಗ ,ಪುನಃ ಮನೆ ಕಡೆ ಪಯಣ.
ಹಿಂಡು ಹಿಂಡಾಗಿ,ಪಿಚಿಕೆ ಹಾಕುತ್ತಾ, ಕಾಲು ಸವರುತ್ತಾ ಬರುವ ಕುರಿ ಮೇಕೆಗಳ ಹಿಂಡು, ಅದನ್ನು ಹಿಂಬಾಲಿಸುವ ಮೊಬೈಲ್ ನಲ್ಲಿ ಜೋರಾದ ಹಾಡುಗಳ ಹಾಕಿಕೊಂಡು, ಹೆಗಲಿಗೆ ನೀರು ತುಂಬಿದ ದೊಡ್ಡ ಪ್ಲಾಸ್ಟಿಕ್ ಬಾಟಲ್ ನ್ನು ಹೆಗಲಿಗೆ ತಗುಲಿಸಿಕೊಂಡು ಸಾಗುವ ಆಧುನಿಕ ಕುರಿಗಾಯಿಗಳು, ಅವರನ್ನು ನೋಡುತ್ತಾ ಕೆಲವರನ್ನು ಮಾತನಾಡಿಸುತ್ತಾ, ಮತ್ತೆ ಮನೆ ಬಂದುದೇ ಗೊತ್ತಾಗುವುದಿಲ್ಲ.
ಶುಚಿ ರುಚಿಯಾದ ತಿಂಡಿ ತಿಂದು , ಮನೆಯವರೊಂದಿಗೆ ಮಕ್ಕಳೊಂದಿಗೆ ಲೋಕಾಭಿರಾಮವಾಗಿ ಮಾತನಾಡಿ, ನನ್ನ ಮಕ್ಕಳು ಅವರ ಕೋರ್ಸ್ ಗೆ ಸಂಭಂದಿಸಿದ ಓದು ಬರಹದಲ್ಲಿ ತಲ್ಲೀನ , ನಾನು ಅದೂ ಇದೂ ಓದಿ, ನಮ್ಮ ಶಾಲೆಯ ಮಕ್ಕಳಿಗೆ ಆನ್ಲೈನ್ ನಲ್ಲಿ ವ್ಯಾಸಾಂಗದ ಬಗ್ಗೆ ಸಲಹೆ ನೀಡಿ, ತೋಚಿದ್ದು ಗೀಚುತ್ತಾ , ಕುಳಿತರೆ ಸಮಯ ಸರಿದದ್ದೆ ತಿಳಿಯುವುದಿಲ್ಲ,
ಎಲ್ಲರೂ ಊಟಕ್ಕೆ ಬನ್ನಿ ಎಂದಾಗ ಮಧ್ಯಾಹ್ನ ಒಂದೂವರೆ , ಸಹಭೋಜನ ಮುಗಿಸಿ, ಮಾವಿನ ಹಣ್ಣು ಸವಿದು, ಮಕ್ಕಳು ಮತ್ತೆ ಓದಿನಲ್ಲಿ ಆನ್ಲೈನ್ ಕ್ಲಾಸ್ ನಲ್ಲಿ ಮಗ್ನ ನಾನು ಒಂದು ಸಣ್ಣ ನಿದ್ದೆ ತೆಗೆದು ಮುಖ ತೊಳೆದುಕೊಂಡು ನಮ್ಮ ಮನೆಯ ಮಹಡಿಯ ಮೇಲೆ ಹೋಗಿ ಕುಳಿತರೆ ಮಗಳು ಟೀ ತಂದು ಕೊಡುವಳು .
ಟೀ ಕುಡಿದು ಪಶ್ಚಿಮಾಭಿಮುಖವಾಗಿ ನಿಂತರೆ ಮತ್ತೊಂದು ಸೌಂದರ್ಯ ಲೋಕದ ಅನಾವರಣ ಹಾಲೇನಹಳ್ಳಿಯಿಂದ ಹೊರಕೆರೆದೇವರ ಪುರದವರೆಗೆ ಉದ್ದವಾಗಿ ಮಲಗಿದಂತಿರುವ ಪರ್ವತರಾಶಿ, ಅದರ ಮೇಲೆ ಅಲ್ಲಲ್ಲಿ, ಸಾಲಾಗಿ ನಿಲ್ಲಿಸಿರುವ ಗಾಳಿಯ ಯಂತ್ರಗಳು, ಕಣ್ಣು ಹಾಯಿಸಿದಷ್ಟೂ ಕಾಣುವ ಅಡಿಕೆ ತೋಟಗಳು, ಸೂರ್ಯನ ಸಂಜೆಯ ಕಿರಣಗಳು ಬಿದ್ದು ತೆಂಗಿನ ಗರಿಗಳ ಮೇಲೆ ಹೊನ್ನ ಬಣ್ಣ ಪಡೆದು ನಲಿವುದನ್ನು ನೋಡುವುದೇ ಕರ್ಣಾನಂದಕರ.
ನಿಧಾನವಾಗಿ ಹೊರಕೆರೆದೇವರ ಪುರದ ಲಕ್ಷಿ ನರಸಿಂಹ ಬೆಟ್ಟದ ಹಿಂದೆ ಕೆಂಪನೆಯ ಚೆಂಡಿನಾಕಾರದ ರವಿಯು ಅಸ್ತನಾದಾಗ ಪೂರ್ವದಲ್ಲಿ ಶಶಿ ಇಣುಕುತ್ತಿದ್ದ.
ರಾತ್ರಿ ಮನೆಯ ಸದಸ್ಯರೊಡನೆ ಮಾತುಕತೆಯೊಂದಿಗೆ ಊಟ, ನೆರೆಮನೆಯವರೊಡನೆ ಕೆಲಕಾಲ ಸಮಾಲೋಚನೆ ,ಪ್ರಪಂಚದ ಅಂದಿನ ಸುದ್ದಿ ತಿಳಿಯಲು ವಾರ್ತೆಗಳ ನೋಡಿ , ಹಾಸಿಗೆಗೆ ತೆರಳಿದರೆ ನಿದಿರಾದೇವಿಯ ಆಲಿಂಗನ . ನಾಳೆ ಮತ್ತೆ ಅದೇ ದಿನಚರಿ, ಮೂಲತಃ ಹಳ್ಳಿಯವನಾದ ಕೆಲಸದ ಪ್ರಯುಕ್ತ ಪಟ್ಟಣದ ವಾಸ ಮಾಡುವ ನಾನು ಈಗ ರಜೆಯ ಪ್ರಯುಕ್ತ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚೌಡಗೊಂಡನಹಳ್ಳಿಯಲ್ಲಿ ಇರುವೆ . ನನ್ನ ಹಳ್ಳಿಯನ್ನು ಮೊದಲಿಗಿಂತ ಬೆರಗುಗಣ್ಣಿನಿಂದ ನೋಡುತ್ತಿರುವೆ ...ನನ್ನ ಹಳ್ಳಿ ನನ್ನ ಹೆಮ್ಮೆ...
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ಚೌಡಗೊಂಡನಹಳ್ಳಿ
ಹೊಳಲ್ಕೆರೆ ತಾ ಚಿತ್ರದುರ್ಗ ಜಿಲ್ಲೆ
ಉಸಿರಿರುವವರೆಗೆ
ಉಸಿರುಕೊಟ್ಟವರ ಮರೆಯದಿರು
ಉಸಿರಿದ್ದಾಗ ಮೆರೆಯದಿರು
ಉಸಿರು ಶಾಶ್ವತವಲ್ಲ ,
ಉಸಿರುನಿಂತರೂ ನಿನ್ನ
ಹೆಸರುಳಿಯಲಿ.
#ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
*ಆ ಪತ್ರ* ಕಥೆ
ನಾನು ಕಾಲೇಜಿನಿಂದ ಮನೆ ಸೇರುವ ಮುಂಚೆಯೇ ಸಾಕಷ್ಟು ಜನರು ಮನೆ ಮುಂದೆ ಸೇರಿದ್ದರು.
ನಾನು ಗಾಬರಿಯಿಂದ ಮನೆಯ ಒಳಗಡೆ ನಡೆದೆ , ನೆರೆದ ನೂರಕ್ಕೂ ಹೆಚ್ಚು ಜನರು ನನ್ನ ಕಡೆ ಅಪರಾಧಿಯಂತೆ ದುರುಗುಟ್ಟಿ ನೋಡುತ್ತಾ ನಿಂತಿದ್ದರು, ಹೊಸಿಲು ದಾಟಿ ಒಳಗೆ ಹೋದೆ, ಅಮ್ಮ ಅಳುತ್ತಾ ನೆಲದ ಮೇಲೆ ಕುಳಿತಿದ್ದರು, ಕುರ್ಚಿಯಲ್ಲಿ ಬಿಳಿಅಂಗಿ, ಬಿಳಿ ಪಂಚೆ ಉಟ್ಟ ವ್ಯಕ್ತಿ ಕುಳಿತಿದ್ದರು, ನನಗೆ ದೂರದಿಂದಲೇ ಗೊತ್ತಾಯಿತು ಅವರು ನಮ್ಮ ಊರ ಗೌಡರು, ಗಿರಿಜಾ ಮೀಸೆಯ ಒಳಗಿಂದಲೇ ಕೋಪದಲ್ಲಿ ಹಲ್ಲು ಕಡಿಯುವುದು ಕೇಳಿಸುತ್ತಿತ್ತು .
"ಬಂದೇನಪ್ಪ ಬಾ.....
ತಂದೆ ಇಲ್ಲದ ಮಗ ಅಂತ ಸಾಕಿದ್ದಕ್ಕೆ ಒಳ್ಳೆಯ ಗೌರವ ಕೊಟ್ಟೆ ಕಣಪ್ಪ, ಅಷ್ಟೊಂದು ಅವಸರ ಅಂತ ಹೇಳಿದ್ದರೆ ನೀನು ಡಿಗ್ರಿ ಓದಿಸೋದ್ ಬಿಟ್ಟು ಮದುವೆ ಮಾಡುತ್ತಿದೆ ಕಣೋ ಯಾಕೆ ಇಂಗ್ ಮಾಡ್ದೆ....? "
ಅಳುತ್ತಲೇ ಅಮ್ಮ ಕೇಳಿದರು
"ಅಮ್ಮ ಏನು ಹೇಳ್ತಿದಿಯಾ? ನನಗೇನೂ ಅರ್ಥವಾಗ್ತಿಲ್ಲ ,ಯಾಕೆ ಗೌಡ್ರು, ಈ ಜನ ಸೇರಿದಾರೆ? " ಆಶ್ಚರ್ಯಕರವಾಗಿ ಕೇಳಿದೆ.
"ನಾನು ಹೇಳ್ತೀನಿ ಬಾರೋ ,ನೀನ್ ಬಾಳ ಬುದ್ದಿವಂತ ಕಣೋ, ನಿನಗೆ ನನ್ ಮಗಳು ಬೇಕೇನೋ ಬೋ....ಮಗನೆ ? ಹಲ್ಲು ಕಡಿಯುತ್ತಾ ಕೇಳಿದರು ಗೌಡರು .
"ಗೌಡ್ರೆ ಸರಿಯಾಗಿ ಮಾತಾಡಿ , ಏನೋ ಹಿರಿಯರು ಅಂತ ಗೌರವ ಕೊಟ್ರೆ ಈ ಥರ ಮಾತಾಡ್ ಬೇಡ್ರಿ, ಸ್ವಲ್ಪ ಸಿಟ್ಟಿನಿಂದಲೆ ಹೇಳಿದೆ"
"ಒಂದು ಪತ್ರ ನನ್ನೆಡೆ ಎಸೆದು ಏನೋ ನಿನಗೆ ಗೌರವ ಕೊಡೋದು? ನೋಡು",ಎಂದರು
ನಾನೂ ಆ ಪತ್ರ ತೆಗೆದುಕೊಂಡ ಓದಿದೆ " ಭಾರತಿ ಐ ಲವ್ ಯೂ, ನಿನ್ನ ಬಿಟ್ಟರೆ ನಾನೂ ಯಾರನ್ನೂ ಮದುವೆಯಾಗಲಾರೆ ,ಮದುವೆಗೆ ಸಿದ್ದನಾಗಿರು"
ಇಂತಿ ನಿನ್ನ
ಮಂಜುನಾಥ್
ಈಗ ನನಗೆ ಅರ್ಥವಾಯಿತು ಮೂರು ದಿನದಿಂದ ನಮ್ಮ ಊರಿನ ಮೇಲಿನ ಮನೆ ರವಿಯಣ್ಣನ ಮಗ ಮಂಜುನಾಥ್ ಭಾರತಿಯ ಹಿಂದೆ ಅಲೆಯುತ್ತಿದ್ದ, ಇದು ಆ .... ಮಂಜುನಾಥನ ಕೆಲಸ ಎಂದು .
ಗೌಡರಿಗೆ ನನ್ನ ನೋಟ್ ಬುಕ್ ತೋರಿಸಿ, ಆ ಪತ್ರ ತೋರಿಸಿ , ನೋಡಿ ಗೌಡರೆ ಇದು ನನ್ನ ಹ್ಯಾಂಡ್ ರೈಟಿಂಗ್ ಅಲ್ಲ, ಇದು ಆ.... ಮಂಜುನಾಥನ ಕೆಲಸ ಎಂದೊಡನೆ ,ಆ ಪತ್ರವನ್ನು ಸರಕ್ಕನೆ ಕಿತ್ತುಕೊಂಡು ತನ್ನ ಪಟಾಲಂ ಜೊತೆ ಮೇಲಿನ ಮನೆಯ ರವಿಯವರ ಮನೆ ಕಡೆ ನಡೆದರು, ಅಮ್ಮ ಮಾತ್ರ ಒಳಗೆ ಬಿಕ್ಕುತ್ತಲೇ ಇದ್ದರು.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
ಪ್ರೆಂಡ್ ರಿಕ್ವೆಸ್ಟ್ ಕಳಿಸಿದ ಎಂಟು ನೂರಕ್ಕೂ ಹೆಚ್ಚು ಜನರನ್ನು ನಾನು ಅಕ್ಸೆಪ್ಟ್ ಮಾಡಿರಲಿಲ್ಲ, ಅದಕ್ಕೆ ಕಾರಣ, ಕೆಲವರು ಯಾವುದೋ ನಟ ನಟಿಯರ ಪೋಟೋ ಪ್ರೊಪೈಲ್ ಆಗಿ ಇಟ್ಟುಕೊಂಡರೆ ,ಕೆಲವರು ಕ್ರಿಕೆಟಿಗರ ಪೋಟೋ ಹಾಕಿಕೊಂಡಿದ್ದರು, ಒಮ್ಮೆ ಕೆಂಪು ಮುಖದ ಮುದ್ದು ಮೊಗದ ಸುಂದರಿಯೊಬ್ಬಳು ಪ್ರೆಂಡ್ ರಿಕ್ವೆಸ್ಟ್ ಕಳಿಸಿದ್ದಳು, ಜೊತೆಗೆ ಈಗಾಗಲೆ ನನ್ನ ಐವರು ಸ್ನೇಹಿತರು ಅವಳ ಪ್ರೆಂಡ್ ಆಗಿರುವುದನ್ನು ಪೇಸ್ ಬುಕ್ ನನಗೆ ಬೇಡವೆಂದರೂ ತಿಳಿಸಿತು, ಇರಲಿ ನೋಡೋಣ ಎಂದು ಅಕ್ಸೆಪ್ಟ್ ಮಾಡಿದೆ, ಮಾರನೇ ದಿನ ನನ್ನ ಮೆಸೆಂಜರ್ ನಲ್ಲಿ ಪ್ಲೀಸ್ ಶೇರ್ ಯುವರ್ ಪೋನ್ ನಂಬರ್ ಎಂಬ ಮೆಸೇಜ್ ಬಂತು.
ಇರಲಿ ಎಂದು ಕಳಿಸಿದೆ,ಮರುಘಳಿಗೆಯಲ್ಲೇ ವಾಟ್ಸಪ್ ನಲ್ಲಿ " ಐ ಲವ್ ಯೂ" ಎಂಬ ಸಂದೇಶ ಕೆಳಗಡೆ ಹಾರ್ಟ್ ಸಿಂಬಲ್ ನೊಂದಿಗೆ ಮಿಲಿಂದಾ ಎಂಬ ಬರಹ ನೋಡಿ ಸಂತಸ, ಅಚ್ಚರಿ, ಭಯ ಒಮ್ಮೆಲೆ ಆಯಿತು , ಎರಡೇ ದಿನಕ್ಕೆ ಬರೀ ಪೋಟೊ ನೋಡಿ ಲವ್? ಈಗೂ ಉಂಟಾ? ಅನಿಸಿತು ಮದುವೆಯಾಗುವ ವಯಸ್ಸಿಗೆ ಬಂದಿದ್ದರೂ ಡಿಗ್ರೀ ಮಾಡಿ ಮಾದರಿ ಕೃಷಿಕ ಎನಿಸಿಕೊಂಡು ಉತ್ತಮ ಬೆಳೆ ಬೆಳೆದು ಆರ್ಥಿಕವಾಗಿ ಸಬಲನಾದರೂ ಭಾರತದ ಹುಡುಗಿಯರ ಪೋಷಕರಿಗೆ ಏಕೋ ನನಗೆ ಕನ್ಯೆ ಕೊಡಲು ಹಿಂದು ಮುಂದೆ ನೋಡಿದ್ದರು. ನನ್ನ ಕ್ಲಾಸ್ ಮೇಟ್ ಪರಮೇಶಿ ಸರ್ಕಾರಿ ಕಛೇರಿಯಲ್ಲಿ ಜವಾನನಾದರೂ ಅವನಿಗೆ ಮದುವೆಯಾಗಿ ಆರು ವರ್ಷವಾಗಿವೆ, ಅವನಿಗೀಗ ಎರಡು ಮಕ್ಕಳು.
ಇದೆಲ್ಲಾ ನೆನೆದು ,ಯಾವ ಜಾತಿ ಯಾವ ದೇಶವಾದರೇನು ? ನನಗೆ ಮದುವೆಯಾಗಲು ಕನ್ಯೆ ಸಿಕ್ಕರೆ ಸಾಕು ಎಂದು ನನಗರಿವಿಲ್ಲದೇ
"ಐ ಲವ್ ಯೂ ಟೂ" ಮೆಸೇಜ್ ಟೈಪಿಸಿದ್ದೆ
ವಾರಗಳಿಂದ ನಮ್ಮ ಮೆಸೇಜ್ ವಿನಿಮಯ ಜರುಗಿತ್ತು ,
"ಐ ಹಾವ್ ಸಮ್ ಎಕಾನಾಮಿಕ್ ಕ್ರೈಸಿಸ್ , ಪ್ಲೀಸ್ ಸೆಂಡ್ ಪೈವ್ ಲ್ಯಾಕ್ ಟು ಮೈ ಬಿಲೋ ಅಕೌಂಟ್ ನಂಬರ್ " ಸಂದೇಶ ಓದಿದ ಮಂಜುನಾಥ ,
"ಒಕೆ ಯು ಡು ಒನ್ ಥಿಂಗ್ , ಪ್ಲೀಸ್ ಕಮ್ ಟು ಇಂಡಿಯಾ ಲೆಟ್ಸ್ ಮ್ಯಾರಿ, ಲೇಟರ್ ಐ ಸಾಲ್ವ್ ಯುವರ್ ಎಕಾನಮಿಕ್ ಪ್ರಾಬ್ಲಂ" ಟೈಪಿಸಿ ಕಳಿಸಿದ ಮೂರು ದಿನವಾದರೂ ಉತ್ತರವಿಲ್ಲ, ಅನುಮಾನವಿಲ್ಲ ಅವಳು ಮೆಸೇಜ್ ಓದಿರುವಳು ನೀಲಿ ಗುರುತಿನ ಎರಡು ಗೆರೆ ಎದ್ದು ಕಾಣುತ್ತಿವೆ ಜೊತೆಗೆ ನಾನು ಈಗಲೂ ಪ್ರತಿ ದಿನ ಗುಡ್ ಮಾರ್ನಿಂಗ್ ,ಗುಡ್ ನೈಟ್ ಮೆಸೇಜ್ ಕಳಿಸುತ್ತಿರುವೆ ಆದರೂ ಉತ್ತರವಿಲ್ಲ.
ನಿನ್ನೆ ರಾತ್ರಿ "ಆನಾ" ಎಂಬ ಇಂಗ್ಲೆಂಡ್ ಬೆಡಗಿಯ ಪ್ರೆಂಡ್ ರಿಕ್ವೆಸ್ಟ್ ಬಂದಿದೆ , ಅಕ್ಸೆಪ್ಟ್ ಮಾಡಲೋ ಬೇಡವೋ?......
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು .
*ಏಳು ಅದ್ಭುತಗಳು*
ವಿಶ್ವದ ಏಳು
ಅದ್ಭುತಗಳ
ನೋಡಿಲ್ಲವೆಂದು
ಏತಕ್ಕಾಗಿ
ಬೇಸರ ನಿನಗೆ|
ನಮ್ಮಲ್ಲೇ ಇವೆಯಲ್ಲ
೧ನೋಡಲು ಕಣ್ಣು
೨ಕೇಳಲು ಕಿವಿ
೩ಸ್ಪರ್ಷಕೆ ಚರ್ಮ
೪ವಾಸನೆಗೆ ಮೂಗು
೫ನಗಲು ವದನ
೬ಕಾರ್ಯಕೆ ಕೈಕಾಲು
೭ರುಚಿಗೆ ನಾಲಿಗೆ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ಸಿಹಿಜೀವಿಯ೪ ಹನಿಗಳು
೧
ಇರುವೆ ಎಂದು
ತಾತ್ಸಾರ ಬೇಡ
ಅದಕೂ ಇರುವುದು
ಜೀವ.
೨
ಇದೇ ಕೊನೇ ದಿನವೆಂದು
ಬದುಕು,ಇದು
ನಿನ್ನ ಜೀವನ
ಜೀವಿಸು,
ಪ್ರತಿನಿಮಿಷ.
೩
ಇರುವುದನ್ನು ಕಂಡು
ತೃಪ್ತಿಯಿಂದಿರು.ಇರದುದರ
ಕುರಿತು ಕೊರಗದಿರು
ಇರದವರು ಬಹಳಿಹರು
ಇರುವ ನೀನೇ ಧನ್ಯ
ಸಿಹಿಜೀವಿ.
೫
ಇಳೆಯಲಿಹವು
ಕೋಟಿ ಗಟ್ಟಲೆ
ಜೀವಿಗಳು
ನಿನಗೊಬ್ಬನಿಗೆ
ತೊಂದರೆಯಾಗಿಲ್ಲ,
ಕೊರಗದೇ ಎದ್ದು
ಜೀವಿಸು.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
*ಶೀಲ್ಡ್*
ಪಡೆದಿರುವ ಬಹುಮಾನ,
ಪದಕಗಳ ತೋರಿಸಿ ನನ್ನವಳು
ಹಂಗಿಸುತ್ತಿದ್ದಳು ರೀ ನೋಡಿ
ನೀವು ಒಂದಾದರೂ
ತೊಗೊಂಡಿಲ್ಲ ಶೀಲ್ಡ್|
ಮೊನ್ನೆ ಲಸಿಕೆ
ಹಾಕಿಸಿಕೊಂಡ ಮೇಲೆ
ಹೆಮ್ಮೆಯಿಂದ ಹೇಳಿದೆ
ನೋಡೇ ನಾನು ಪಡೆದೆ
ಎರಡು ಕೋವೀ"ಶೀಲ್ಡ್"||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ಜೀವಿಗಳ ಉಳಿಸಿ*
ಮರ ಕಡಿಯುವುದನ್ನು ನಿಲ್ಲಿಸಿ
ಭೂದೇವಿಗೆ ಕ್ಷಮೆಯ ಸಲ್ಲಿಸಿ
ಒಂದೊಂದು ಗಿಡ ಬೆಳೆಸಿ
ಪರಿಸರವ ಗೆಲ್ಲಿಸಿ
ಸಕಲ ಜೀವಿಗಳ ಉಳಿಸಿ
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ಹಸಿದ ಜೀವಗಳಿಗೆ ಅನ್ನ ನೀಡಿ
ನೊಂದವರಿಗೆ ಸಾಂತ್ವನವನ್ನ ನೀಡಿ
ಉಳ್ಳವರಿಗೆ ಬಹುಮಹಡಿಯಲಿ ವಾಸ
ಮನೆಯಿಲ್ಲದವರಿಗೆ ಸೂರನ್ನ ನೀಡಿ.
ಬಟ್ಟೆಯಿದ್ದರೂ ದಿಗಂಬರರು ನೋಡಿಲ್ಲಿ
ಮರ್ಯಾದಸ್ತರಿಗೆ ವಸನವನ್ನ ನೀಡಿ.
ಕಲಿತರೂ ಕತ್ತಲಲಿ ತೊಳಲುತಿಹರಲ್ಲ
ಅಂಧಕಾರಲ್ಲಿರುವವರಿಗೆ ಬೆಳಕನ್ನ ನೀಡಿ.
"ಸಿಹಿಜೀವಿ" ಗಳಿಗೆ ಸಂಕಟವಿಹುದಿಲ್ಲಿ
ಅಶಕ್ತರಿಗೆ ಸಹಾಯಹಸ್ತವನ್ನ ನೀಡಿ
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
*ಬಹುಗುಣರಿಗೆ ಸಿಹಿಜೀವಿಯ ಹನಿ ನಮನ*
*ಬಹುಗುಣ*
ಸಿಗುತ್ತಿಲ್ಲ ಇಂದು ನಮಗೆ
ಆಮ್ಲಜನಕ ಎಷ್ಟು
ಕೊಟ್ಟರೂ ಹಣ|
ಏಕೆಂದರೆ ಮರಗಳ
ಉಳಿಸಲಿಲ್ಲ ಹೇಳಿದಂತೆ
ಸುಂದರ ಲಾಲ್ ಬಹುಗುಣ||
*ಮನವಿ*
ಮರ ಕಡಿವುದು, ಪರಿಸರ
ಹಾಳು ಮಾಡುವುದು
ಒಂದೇ ಎರಡೇ
ನಮ್ಮಲ್ಲಿವೆ ನೂರಾರು
ದುರ್ಗುಣ|
ನಿಮ್ಮಲ್ಲಿರುವ ಒಂದಾದರೂ
ಒಳ್ಳೆಯ ಗುಣ ಕೊಡಿ
ಸುಂದರಲಾಲ್ ಬಹುಗುಣ||
*ಬಳುವಳಿ*
ಪರಿಸರ ಸಂರಕ್ಷಣೆ
ಮಾಡಲು ಸುಂದರ
ಲಾಲರು ಹಮ್ಮಿಕೊಂಡಿದ್ದರು
ಅಪ್ಪಿಕೋ ಚಳುವಳಿ|
ಅವರ ಆತ್ಮಕ್ಕೆ ಶಾಂತಿ
ಕೋರುವುದಾರೆ
ಈಗಿರುವ ಮರಗಳ
ಉಳಿಸಿ ಮುಂದಿನ
ಪೀಳಿಗೆಗೆ ನೀಡೋಣ
ಬಳುವಳಿ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529
ಸಿಗುತ್ತಿಲ್ಲ ಇಂದು ನಮಗೆ
ಆಮ್ಲಜನಕ ಎಷ್ಟು
ಕೊಟ್ಟರೂ ಹಣ|
ಏಕೆಂದರೆ ಮರಗಳ
ಉಳಿಸಲಿಲ್ಲ ಹೇಳಿದಂತೆ
ಸುಂದರ ಲಾಲ್ ಬಹುಗುಣ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
*ಇರುವುದೆಲ್ಲವ ಬಿಟ್ಟು* ಕಿರು ಕಥೆ
ಸುರೇಶ ಟೀ ಕಪ್ ಹಿಡಿದು ಪಡಸಾಲೆಯಲ್ಲಿ ಕುಳಿತಿದ್ದ,
ಅವನ ಅಮ್ಮ "ಏನೋ ಹುಡ್ಗ ನೀನು, ಇಪ್ಪತ್ ವರ್ಸದಾಗೆ ಇಪ್ಪತ್ ಕೆಲ್ಸ ಬಿಟ್ ಬಿಟ್ಯಲ್ಲೋ , ನನ್ಗೂ ವಯಸ್ಸಾತು, ದುಡಿಯಾಕ್ ಹೋಗ್ಲಿಲ್ಲ ಅಂದರೆ ಯಂಗಪ್ಪ ಜೀವ್ನ ಮಾಡಾದು"
"ನಾನೇನ್ ಮಾಡಾನವ್ವ ,ಎಲ್ಲಿಗೆ ಕೆಲ್ಸಕ್ಕೆ ಹೋದ್ರು ಏನಾದ್ರು ಸಮಸ್ಯೆ ನನ್ ತಪ್ ಇಲ್ದಿದ್ರೂ ಕೆಲ್ಸ ತೆಗಿತಾರೆ, ಮೊನ್ನೆ ಕೆಲ್ಸ ಬಿಟ್ಟ ಡಾಕ್ಟ್ರು ಕ್ಲಿನಿಕ್ ನಾಗೆ ,ಆ ಡಾಕ್ಟ್ರು ನರ್ಸ್ ತಬ್ಬಿಕೆಂಡು ಕುಂತ್ಗಂಡಿದ್ದ, ನಾನು ಎಲ್ಲಾರ್ನ ಕರ್ದು ತೋರಿಸ್ದೆ ,ಆಯಪ್ಪ ಸಿಟ್ ಬಂದು ಕೆಲ್ಸದಿಂದ ತೆಗೆದ, ಇದು ನನ್ ತಪ್ ಏನವ್ವ" ಮುಗ್ದವಾಗಿ ಕೇಳಿದ ಸುರೇಶ
"ಅದ್ಸರಿ ಆ ಪೆಟ್ರೋಲ್ ಬಂಕ್ ,ಕೆಲ್ಸ ಯಾಕ್ ಬಿಟ್ಟೆ"
"ಮೊದಲು ನನಗೆ ಗೊತ್ತಿರಲಿಲ್ಲ ಒಂದು ಲೀಟರ್ ಪೆಟ್ರೋಲ್ ಅಂತ ಹಾಕಿದ್ರೆ ಬರೀ ಮುಕ್ಕಾಲು ಮಾತ್ರ ಬರುತ್ತೆ ಅಂತ ರಮೇಶ ಒಂದಿನ ನನ್ ಕಿವಿಯಾಗೆ ಹೇಳಿದ್ದ, ನಾನು ಪೆಟ್ರೋಲ್ ಹಾಕಿಸಿಕೊಳ್ಳಾಕೆ ಬರೋರ ಕಿವಿಯಾಗ್ ಹೇಳ್ದೆ, ಜನ ಒಟ್ಟಾಗಿ ಬಂದು ನಮ್ಮ ಸಾವ್ಕಾರ್ ಮೇಲೆ ಗಲಾಟೆ ಮಾಡಿದ್ರು, ಇದಕ್ಕೆ ಕಾರಣ ನಾನಾ? ಇದು ನನ್ ತಪ್ಪಾ? ನೀನೇ ಹೇಳವ್ವ.ಕೇಳಿದ ಮಗ
ಹೀಗೆ ಇಪ್ಪತ್ತು ಕೆಲಸ ಬಿಟ್ಟಿದ್ದಕ್ಕೂ ಸುರೇಶನ ಬಳಿ ಸಮರ್ಥನೆ ಇತ್ತು ,ಅಮ್ಮನಿಗೂ ಇವನು ಸರಿ ಎಂದು ತಿಳಿದಿದ್ದರೂ, ಹೊಟ್ಟೆ ಪಾಡು ಕೇಳದೇ ಮಗನ ವಿರುದ್ಧ ಸಿಟ್ಟಿನಿಂದ ಮತ್ತೊಂದು ಕೆಲಸ ಹುಡುಕಲು ಹೇಳಿದರು.
ಅದೇ ಸಮಯಕ್ಕೆ ಇವರ ಮನೆಗೆ ಬಂದ ಮರಿಸಿದ್ದಪ್ಪ " ಏ.. ಸುರೇಶ ಗೊರಕೇದೇಪುರದಲ್ಲಿ ದೇವರ ಗುಡಿನಾಗೆ ಕೆಲ್ಸ ಮಾಡಾಕೆ ಯಾರೋ ಬೇಕು ಅಂದಿದ್ರು, ಹೋಗ್ತಿಯಾ? ಕೇಳಿದರು .
ಇರುವುದೆಲ್ಲವ ಬಿಟ್ಟ ಸುರೇಶ, ದೇವಾಲಯದ ಕೆಲಸ ಬಿಡುತ್ತಾನೆಯೇ?
ಇವತ್ತಿಂದಲೇ ಕೆಲಸಕ್ಕೆ ಹೋಗುವೆ ಅಣ್ಣ ಎಂದು ಸಿದ್ದನಾದ .
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
ಟೀ ಮತ್ತು ನನಗೆ
ಬಹಳ ಸಾಮ್ಯತೆ ಇದೆ
ಹೊರಗಿಂದ ನೋಡಿದಾಗ
ಹೊಗೆ ಮತ್ತು ಬಿಸಿ|
ಒಳಗಡೆ ಉತ್ತಮ ಸ್ವಾದ
ಒಮ್ಮೆ ಕುಡಿಯಲು
ಶುರು ಮಾಡಿದರೆ
ನಿಲ್ಲಿಸುವುದಿಲ್ಲ
ಬರುವವರೆಗೂ ಗಸಿ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ಲಕ್ಷ್ಮೀ ಪೋಟೋ*
ನಾನು ಗೌರಿಬಿದನೂರಿನ ಎಸ್ .ಎಸ್ ಇ. ಎ . ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ,ಒಬ್ಬ ಪೋಷಕರು ಸ್ಟಾಪ್ ರೂಮ್ ಹತ್ತಿರ ಬಂದು ಸಂಕೋಚದಿಂದ ಹೊರಗೇ ನಿಂತಿದ್ದರು, ನಾನು ಒಳಗಡೆ ಬನ್ನಿ ,ಎಂದೆ ಮಾಸಲು ಅಂಗಿ ಅಲ್ಲಲ್ಲಿ ತೂತು ಬಿದ್ದ ಪ್ಯಾಂಟ್ ಧರಿಸಿದ್ದರು ,ತಲೆಗೂದಲು ನೋಡಿದರೆ ಎಣ್ಣೆ ಕಂಡು ಬಹು ದಿನಗಳಾಗಿರಬಹುದು ಎಂದು ಅರ್ಥವಾಗುತ್ತಿತ್ತು, ಎರಡೂ ಕೈಗಳನ್ನು ಎದೆಯಭಾಗಕ್ಕೆ ಗಟ್ಟಿಯಾಗಿ ತಬ್ಬಿ ಹಿಡಿದುಕೊಂಡಿದ್ದರು, ನಾನು ಕರೆದದ್ದಕ್ಕೆ ಅಲ್ಲಲ್ಲಿ ಕಿತ್ತು ಹೋಗಿ ಒಂದೆರಡು ಬಾರಿ ಹೊಲಿಗೆ ಹಾಕಿದ್ದ ಹವಾಯ್ ಚಪ್ಪಲಿಗಳನ್ನು ಹೊರಗೆ ಬಿಟ್ಟು ಕೊಠಡಿ ಒಳಗೆ ಬರಲು ಸಿದ್ದರಾದರು,
" ಚಪ್ಪಲಿ ಹಾಕಿಕೊಂಡು ಬನ್ನಿ ಪರವಾಗಿಲ್ಲ " ಎಂದೆ
ಬ್ಯಾಡ ಸಾ, ಅಲ್ಲೇ ಇರಲಿ ಎಂದು ಒಳಗೆ ಬಂದು ಮತ್ತೆ ವಿಧೇಯ ವಿದ್ಯಾರ್ಥಿಯಂತೆ ನಿಂತರು,
"ನಾನೇ ಮತ್ತೆ ಕೇಳಿದೆ ಯಾರು ಬೇಕು ? ಏನಾಗಬೇಕಿತ್ತು ? "
"ಅದೇ ಸಾ, ನಮ್ ಅತಾವುಲ್ಲ ಅವನ ಬಗ್ಗೆ ಕೇಳ್ ಬೇಕಿತ್ತು, " ಎಂದರು
" ಯಾವ್ ಅತಾವುಲ್ಲ, ಯಾವ ಸೆಕ್ಷನ್ ಯಾವ ಮೀಡಿಯಂ? ಮತ್ತೆ ಪ್ರಶ್ನೆ ಹಾಕಿದೆ.
" ಒಂಭತ್ತನೆಯ ಕ್ಲಾಸು ಸಾ, " ಅಂದರು
ಆಗ ನನಗೆ ಅರ್ಥವಾಯಿತು ನಿಧಾನ ಕಲಿಕೆಯ ಅತಾವುಲ್ಲ ನಿಗೆ ಕಳೆದ ದಿನ ಅವರ ತಂದೆ ಕರೆದುಕೊಂಡು ಬರಲು ಹೇಳಿದ್ದು ,
" ಏನ್ ಸಾಹೇಬ್ರೇ ನಿಮ್ ಹುಡುಗ,ಅಷ್ಟು ಚೆನ್ನಾಗಿ ಓದ್ತಾ ಇಲ್ಲ ಮನೇನಲ್ಲಿ ಸ್ವಲ್ಪ ಗಮನ ಕೊಡಿ " ಎಂದೆ
" ನಮಿಗೆ ಓದು ಬರಲ್ಲ ಸಾ, ನಾನು ನಮ್ ಮನೆಯವರು ಕೂಲಿ ಮಾಡಾಕೆ ಹೋಗ್ತೀವಿ , ನೀವೇ ಏನಾನಾ ಮಾಡಿ ಸಾ, ಇವನ್ ಒಬ್ನೇ ಮಗ ಚೆಂದಾಕೆ ಓದ್ಲಿ ಅಂತ ನನ್ ಆಸೆ ಸಾ," ಮುಗ್ದತೆಯಿಂದ ಕೈಜೋಡಿಸಿ ಹೇಳಿದರು.
ಮುಂದೆ ನನಗೆ ಏನು ಹೇಳಬೇಕು ಎಂದು ತೋಚದೇ ಒಂದು ಸಹಿ ಮಾಡಿಸಿಕೊಂಡು ಸರಿ ಹೋಗಿ ಬನ್ನಿ ಎಂದೆ ,ಕೊಠಡಿಯ ಹೊರಗೆ ಹೋಗಿ ಚಪ್ಪಲಿ ಹಾಕಿಕೊಂಡು ಮತ್ತೊಮ್ಮೆ ಎರಡೂ ಕೈ ಎತ್ತಿ ಮುಗಿದು ಹೊರಟರು.
ಆ ತರಗತಿಯ ಇತರ ಮಕ್ಕಳಿಗೆ ಹೋಲಿಸಿದರೆ ಅತಾವುಲ್ಲ ಅಂತಹ ತರಲೇ ವಿದ್ಯಾರ್ಥಿ ಆಗಿರಲಿಲ್ಲ, ಆದರೆ ಓದುವುದು ಬರೆಯುವುದರಲ್ಲಿ ಹಿಂದು, ಇದೇ ಕಾರಣದಿಂದಾಗಿ
ಒಂದೆರಡು ಬಾರಿ ಏಟು ಕೊಟ್ಟದ್ದೂ ಇದೆ
ಪಾಪ ಅವನಿಗೆ ವಿದ್ಯೆ ತಲೆಗೆ ಹತ್ತಲೇ ಇಲ್ಲ ಅವನ ಕಲಿಕೆ ಸುಧಾರಿಸಲು ನಾನೂ ವಿವಿಧ ತಂತ್ರಗಳನ್ನು ಬಳಸಿದರೂ ಪ್ರಯೋಜನ ಆಗಲಿಲ್ಲ,
ಈ ಮಧ್ಯೆ ರಸ್ತೆಯಲ್ಲಿ, ಬಸ್ಟ್ಯಾಂಡ್ ನಲ್ಲಿ ಎಲ್ಲಿ ಸಿಕ್ಕರೂ ಅತಾವುಲ್ಲ ನ ತಂದೆ ಎಷ್ಟೇ ಜನರಿದ್ದರೂ ಚಪ್ಪಲಿ ಬಿಟ್ಟು ಕೈಮುಗಿದು" "ಈಗ ಎಂಗೆ ಓದ್ತಾನೆ ಸಾಮಿ ನನ್ ಮಗ" ಎಂದು ಧೈನ್ಯತೆಯಿಂದ ಕೇಳುತ್ತಿದ್ದರು.
ವಾರ್ಷಿಕ ಪರೀಕ್ಷೆ ಮುಗಿದು ಮೂರು ದಿನ ವಾಗಿತ್ತು , ಬೆಳಿಗ್ಗೆ ಒಂಭತ್ತು ಗಂಟೆಯ ಸಮಯ ಯಾರೋ ಮನೆಯ ಬಾಗಿಲು ಬಡಿದ ಸದ್ದಾಯಿತು,ಬಾಗಿಲು ತೆರೆದು ನೋಡಿದರೆ ಅದೇ ವಿಧೇಯತೆಯಿಂದ ನಿಂತಿದ್ದರು ಸಾಹೇಬರು, ಕೈಯಲ್ಲಿ ಏನೋ ಹಿಡಿದಿದ್ದರು,
" ಏನ್ ಸಾಹೆಬ್ರೆ ,ಯಾಕೆ ಬಂದಿದ್ದು "ಎಂದೆ
" ಏನೂ ಅಂದ್ಕಾ ಬ್ಯಾಡಿ ಸಾ, ಇದನ್ ತಕಳಿ, " ಮೆಲು ದನಿಯಲ್ಲಿ ಹೇಳಿದರು
" ಏನು ಇದು, ಇದೆಲ್ಲಾ ಬೇಡ,ಮನೆಗೆ ಹೋಗಿ " ಎನ್ನುತ್ತಿರುವಾಗಲೇ ಬಲವಂತವಾಗಿ ಅದನ್ನು ನನ್ನ ಕೈಯಲ್ಲಿ ಇಟ್ಟರು , ನನ್ನ ಕೈಗೆ ಬಂದಾಗ ಅದು ಏನೆಂದು ಸ್ಪಷ್ಟವಾಗಿತ್ತು ಇಂದೂವರೆ ಬೈ ಎರಡು ಅಡಿಯ ಲಕ್ಷ್ಮಿ ಪೋಟೋ!
ಆಗ ನನಗೆ ಧರ್ಮ ಸಂಕಟ ಶುರುವಾಯಿತು, ಈ ಪೋಟೋ ಪಡೆಯಲೇ ಅಥವಾ ಹಿಂದಕ್ಕೆ ಕೊಡಲೆ , ನಮ್ಮ ಸಂಭಾಷಣೆ ಕೇಳಿದ ನಮ್ಮ ಮನೆಯವರು ಹೊರಬಂದು
"ಶುಕ್ರವಾರ ಅಣ್ಣ ಮನೆಗೆ ಪೋಟೋ ತಂದ್ ಕೊಟ್ಟಿದ್ದಾರೆ ಇಸ್ಕೊಳ್ಲಿ" ಎಂದು ನನ್ನ ಕೈಯಿಂದ ಪೋಟೋ ತೆಗೆದುಕೊಂಡು ಒಳಗೆ ಹೋಗೇ ಬಿಟ್ಟರು.
ಮತ್ತೊಮ್ಮೆ ನನಗೆ ಕೈಮುಗಿದು ಬತ್ತಿನಿ ಸಾ, ನಮ್ ಹುಡ್ಗನ್ನ ನೋಡಿಕೊಳ್ಳಿ ಅಂದರು.
ಆಗ ನನಗೆ ಅರ್ಥವಾಯಿತು ಮಕ್ಕಳ ಆ ವರ್ಷದ ರಿಸಲ್ಟ್ ಮುಂದಿನ ಸೋಮವಾರ ಪ್ರಕಟಮಾಡಬೇಕೆಂಬುದು!
ಸರ್ಕಾರದ ಶಿಕ್ಷಣ ನೀತಿಯ ಪ್ರಕಾರ ಒಂದರಿಂದ ಒಂಬತ್ತನೆಯ ತರಗತಿಯ ಮಕ್ಕಳನ್ನು ಫೇಲ್ ಮಾಡುವಂತಿರಲಿಲ್ಲ ಹಾಗಾಗಿ ಅತಾವುಲ್ಲ ಸಹ ಪಾಸಾಗಿದ್ದ,
ಅವರ ತಂದೆ ನಾನೇ ಪಾಸು ಮಾಡಿಸಿದೆ ಎಂದುಕೊಂಡರು.
ಹತ್ತನೇ ತರಗತಿಯಲ್ಲಿ ಅವನ ಕಲಿಕೆ ಅದೇ ರೀತಿಯಲ್ಲಿ ಮಂದಗತಿಯಲ್ಲಿ ಸಾಗಿತ್ತು ,ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಅವರ ತಂದೆ ಕೈಮುಗಿದು ಅದೇ ಮಾತು
"ನನ್ ಮಗನ್ನ ನೋಡ್ಕಳಿ ಸಾ"
"ಈ ವರ್ಷ ನಾವೇನೂ ಮಾಡಾಕಾಗಲ್ಲ ಸಾಹೇಬ್ರೆ ಪಬ್ಲಿಕ್ ಪರೀಕ್ಷೆ "ಎಂದೆ
ಅದರೂ ನಾನೇ ಅವರ ಮಗನನ್ನು ಪಾಸು ಮಾಡಿಸುವೆ ಎಂಬ ಅದಮ್ಯ ವಿಶ್ವಾಸ ಅವರಿಗೆ .
ಹತ್ತನೇ ತರಗತಿಯ ಫಲಿತಾಂಶದ ದಿನ ಶಾಲೆಯ ಹತ್ತಿರ ತಂದೆ ಮಗ ಇಬ್ಬರೂ ಬಂದರು ಮಗ ಎಲ್ಲಾ ವಿಷಯಗಳಲ್ಲಿ ಪೇಲ್ ಆಗಿರುವುದನ್ನು ತಿಳಿದು ತಂದೆ ಅಲ್ಲೇ ಗಳಗಳನೆ ಅತ್ತು ಬಿಟ್ಟರು,ಅವರ ಮಗ ನಿರ್ಭಾಹುಕನಾಗಿ ನಿಂತಿದ್ದನು.
ಇಂದು ಬೆಳಿಗ್ಗೆ ದೇವರ ಕೋಣೆಯಲ್ಲಿ ಪೂಜೆ ಮಾಡುವಾಗ ಅವರು ಕೊಟ್ಟ ಲಕ್ಷ್ಮಿ ಪೋಟೋ ನೋಡಿ ಯಾಕೋ ಮತ್ತೊಮ್ಮೆ ಅತಾವುಲ್ಲ ಮತ್ತು ಅವರ ತಂದೆ ನೆನಪಾದರು.....
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
*ಟೈಟ್ ಲಾಕ್ಡೌನ್*
ಹೌದು ನಿಜ
ರಾಜ್ಯದಲ್ಲಿ ಬಹಳ
ಕಟ್ಟು ನಿಟ್ಟಾಗಿ
ಪಾಲನೆಯಾಗುತ್ತಿದೆ
ಲಾಕ್ ಡೌನ್ |
ನಾವು ಕಟ್ಟಿದಂತೆ ಲುಂಗಿ
ಮೇಲೆ ಮಾತ್ರ ಟೈಟ್
ಕೆಳಗೆ ಓಪನ್||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
ಆ ದಿನದ ನೆನಪಾಯಿತು...
ಕ್ಯಾಲೆಂಡರ್ ನೋಡುತ್ತಾ ಕುಳಿತಾಗ ..
ಆ ದಿನದ ನೆನಪಾಯಿತು...
ಅಂದು ಮನೆಯಲ್ಲಿ ಯಾರೂ ಊಟ ಮಾಡಿರಲಿಲ್ಲ , ಹಳ್ಳಿಯಲ್ಲಿ ಆಗಿದ್ದರೆ ಯಾರಾದರೂ ಬಂದು ಊಟ ಮಾಡಿ ಎಂದು ಬಲವಂತ ಮಾಡುತ್ತಿದ್ದರೇನೋ? ಬಲವಂತಕ್ಕೆ ನಾವು ತಿನ್ನುತ್ತಿದ್ದೆವೇನೋ? ಆದರೆ ನಾವು ಇದ್ದದ್ದು ತೋಟದ ಮನೆಯಲ್ಲಿ. ಹಿರಿಯೂರು ಚಳ್ಳಕೆರೆ ಹೆದ್ದಾರಿಯ ಮಧ್ಯದಲ್ಲಿ ಹರ್ತಿಕೋಟೆ ಆದ ನಂತರ ಬರುವ ಕಳವೀಭಾಗಿ ಗೇಟ್ ಹತ್ತಿರವಿರುವ ತೋಟದ ಮನೆಯಲ್ಲಿ ನಮ್ಮ ವಾಸ. ಎಲ್ಲರಿಗೂ ಧೈರ್ಯ ಹೇಳಬೇಕಾದ ಎಪ್ಪತ್ತೈದು ವರ್ಷಕ್ಕಿಂತ ಹೆಚ್ಚು ವಯಸ್ಸಿನ ಲಕ್ಷ್ಮಜ್ಜಿ ಅಳು ಬೆಳಗಿನಿಂದ ನಿಂತಿಲ್ಲ, ಊಟ ಬೇಯಿಸಬೇಕಾದ ರತ್ನಮ್ಮ, ಅಡಿಗೆ ಮನೆ ಕಡೆ ಹೋಗಲಿಲ್ಲ, ಮೂವರು ಅಣ್ಣ ತಮ್ಮಂದಿರು ಮರಣ ಹೊಂದಿದ ಅವನನ್ನೇ ನೋಡುತ್ತಾ ,ತಲೆ ಮೇಲೆ ಕೈಹೊತ್ತು ಕುಳಿತಿದ್ದರು, ಅವನ ಒಡನಾಟ ನೆನೆದು ನಾನು ಮತ್ತು ನನ್ನ ಅಣ್ಣನೂ ಅಳಲು ಶುರು ಮಾಡಿದೆವು. ಸಂಜೆಯಾಗುತ್ತಾ ಬಂದಂತೆ ಹಿರಿಯ ಮಾವ ಕೃಷ್ಣ ಮೂರ್ತಿರವರು ಧೈರ್ಯ ತೆಗೆದುಕೊಂಡವರಂತೆ ಎದ್ದು " ಆಗಿದ್ದು ಆತು ,ಹೋಗಿರೋ ಜೀವ ಬರಲ್ಲ ,ಬರ್ರೀ ... ಮುಂದಿನ ಕಾರ್ಯ ಮಾಡಾನಾ "ಎಂದು ಎಲ್ಲರನ್ನೂ ಕರೆದರು. ಎಲ್ಲರೂ ಭಾರವಾದ ಮನಸ್ಸಿನಿಂದ, ದುಃಖವನ್ನು ತಡೆದುಕೊಂಡು
ಭಾರವಾದ ಆ ದೇಹವನ್ನು ಹೊತ್ತು ತೆಂಗಿನ ಗಿಡದ ಕೆಳಗೆ ಗುಂಡಿ ತೋಡಿ ಮಣ್ಣಿನಲ್ಲಿ ಇಟ್ಟು " ಬಸವ ಹೋಗಿ ಬಾ , ನಿಮ್ಮ ಅವ್ವ ಗೌರಿ ನಿನ್ನ ಈದ ದಿನ ಬಸವ ಜಯಂತಿ ಅದಕ್ಕೆ ನಿನಗೆ ಬಸವ ಅಂತ ಹೆಸರು ಇಟ್ವಿ, ಇವತ್ತು ಬಸವ ಜಯಂತಿ ಏನ್ ವಿಧಿಯಾಟ ಇದು? ನೀನು ನಮ್ ಮನೆನಾಗೆ ಒಬ್ಬ ಆಗಿದ್ದೆ ,ಕರುವಾಗಿದ್ದಾಗ ನೀನು ಆಡ್ತಿದ್ದ ಚಿನ್ನಾಟ, ಬೆಳೆದಾಗ ಗೊಬ್ಬರದ ಗಾಡಿ ಎಳೆಯೋ ನಿನ್ ಶಕ್ತಿ ಎಂಗ್ ಮರೀಲಿ " ಎಂದು ಲಕ್ಷ್ಮಜ್ಜಿ ಮತ್ತೆ ಅಳಲು ಶುರುಮಾಡಿದರು.
ಮನೆಯ ಸದಸ್ಯರೆಲ್ಲರೂ ಒಂದೊಂದು ಇಡಿ ಮಣ್ಣು ಹಾಕಿದರು.
ವಿಷಯ ತಿಳಿದು ಯರಬಳ್ಳಿಯಿಂದ ಮಹತ್ವಾಕಾಂಕ್ಷೆಯಿಂದ ಬಂದ ಕೆಳವರ್ಗದ ಪಾತಲಿಂಗ ದೂರದಲ್ಲಿ ನಿಂತು ಮಣ್ಣು ಮಾಡುವುದನ್ನೇ ನೋಡುತ್ತಾ " ಎಂತಾ ನೆಣ, ಇರೋ ಎತ್ತು ಅನ್ಯಾಯವಾಗಿ ಈ ಗೌಡ್ರು ಮಣ್ಣು ಪಾಲು ಮಾಡಿ ಬಿಟ್ರಲ್ಲಪ್ಪ " ಎಂದು ಕೈ ಕೈ ಹಿಸುಕಿಕೊಳ್ಳತೊಡಗಿದ ......
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
ಮಾನವರಾಗೋಣ ಲೇಖನ ೨
ನಮ್ಮನ್ನು ನಾವು ಉದ್ಧರಿಸಿಕೊಳ್ಳೋಣ
ಬೆಳಗಿನ ವಾಯುವಿಹಾರದ ನಡಿಗೆಯ ನಂತರ, ವೈದ್ಯರ ಒಂದು ಗುಂಪು ಟೀ ಅಂಗಡಿಯಲ್ಲಿ ಟೀ ಕುಡಿಯುತ್ತಿದ್ದರು.
ಒಬ್ಬ ಮನುಷ್ಯ ದೂರದಿಂದ ಕುಂಟುತ್ತಾ ಬಹಳ ಶೋಚನೀಯವಾಗಿ ಬರುತ್ತಿದ್ದ..
ಅವನನ್ನು ನೋಡಿದ ಒಬ್ಬ ವೈದ್ಯರು ಇನ್ನೊಬ್ಬರಲ್ಲಿ ಮಾತನಾಡತೊಡಗಿದರು.
ಮೊದಲ ವೈದ್ಯರು ಹೇಳಿದರು - ಇವನಿಗೆ ನನ್ನ ಪ್ರಕಾರ ಎಡ ಮೊಣಕಾಲು ಸಂಧಿವಾತ ಆಗಿದೆ.ಎರಡನೇ ವೈದ್ಯರು" ಇಲ್ಲ ಇಲ್ಲ ನನ್ನ ಪ್ರಕಾರ 'ಪ್ಲಾಂಟರ್ ಫೆಸಿಟಿಸ್' ಆಗಿದೆ.
ಮೂರನೆಯ ವೈದ್ಯರು ಹೇಳಿದರು ಇಲ್ಲಪ್ಪ ಇವನಿಗೆ ಖಂಡಿತವಾಗಿ ಪಾದದ ಉಳುಕು ಇದೆ.
ನಾಲ್ಕನೇ ವೈದ್ಯರು ಹೇಳಿದರು - ಅವನನ್ನು ಸರಿಯಾಗಿ ನೋಡಿ ಆ ಮನುಷ್ಯನಿಗೆ ಒಂದು ಕಾಲು ಸರಿಯಾಗಿ ಎತ್ತಲು ಆಗುತ್ತಿಲ್ಲ ಅವನಿಗೆ ಕಾಲು ಹನಿ ಆಗಿದೆ.
ಐದನೇ ವೈದ್ಯರು ಹೇಳಿದರು - " ನನಗೆ ಅನಿಸುತ್ತದೆ ಹೆಮಿಪ್ಲೆಜಿಯಾದದಂತಹ ದೊಡ್ಡ ರೋಗ ಅವನನ್ನು ಆವರಿಸಿದೆ
ಆರನೇ ವೈದ್ಯರು ಏನಾದರೂ ಹೇಳುವ ಹೊತ್ತಿಗೆ, ಆ ಮನುಷ್ಯ ಅವರ ಬಳಿ ಬಂದು ಬಹಳ ನಯವಾಗಿ ಕೇಳಿದರು.
"ಸ್ವಾಮಿ ಹತ್ತಿರದಲ್ಲಿ ಎಲ್ಲಾದರೂ ಒಂದು ಚಮ್ಮಾರನ ಅಂಗಡಿ ಇದೆಯೇ?"
ಬರುವ ದಾರಿಯಲ್ಲಿ ನನ್ನ ಚಪ್ಪಲಿ ಹರಿದು ಹೋಯಿತು. ಎಂದಾಗ ಬೇಸ್ತು ಬೀಳುವ ಸರದಿ ವೈದ್ಯರದು.
ನಿರ್ದಿಷ್ಟವಾಗಿ ಒಂದು ವಿಷಯದ ಬಗ್ಗೆ ಎಲ್ಲರಿಗೂ ಮಾಹಿತಿ ಇದೆಯೋ ಇಲ್ಲವೋ, ಆದರೆ ತೋರ್ಪಡಿಸಿಕೊಳ್ಳಲು ಮಾತ್ರ ಎಲ್ಲರೂ ಜ್ಞಾನಿಗಳೇ....
ವ್ಯಕ್ತಿಗಳ ನಿಜವಾದ ಸಮಸ್ಯೆ, ಅವರ ಹಿನ್ನೆಲೆ ತಿಳಿಯದೇ ಇವರೇ ಒಂದು ತೀರ್ಮಾನಕ್ಕೆ ಬಂದು ಬಿಡುತ್ತಾರೆ, ಏನೂ ಗೊತ್ತಿಲ್ಲದೇ ಅವರ ವ್ಯಕ್ತಿತ್ವಕ್ಕೆ ಒಂದು ಸರ್ಟಿಫಿಕೇಟ್ ಸಹ ನೀಡಿ ಬಿಡುತ್ತಾರೆ .ಅದು ಬಹುತೇಕ ಬಾರಿ ನೆಗೆಟೀವ್ ಸರ್ಟಿಫಿಕೇಟ್ ಆಗಿರುತ್ತದೆ.
ನಮ್ಮಲ್ಲಿ ಬಹುತೇಕರಿಗೆ ಬೇರೆಯವರ ವಿಚಾರ ಎಂದರೆ ಏನೋ ಕೆಟ್ಟ ಕುತೂಹಲ, ಇನ್ನೂ ಕೆಲವರಿಗೆ ಬೇರೆಯವರ ಬಗ್ಗೆ ಮಾತನಾಡಿಕೊಳ್ಳದಿದ್ದರೆ ಅವರು ತಿಂದ ಅನ್ನ ಜೀರ್ಣವಾಗುವುದಿಲ್ಲ .ಇನ್ನೂ ಕೆಲವರು ತಮ್ಮ ಸಮಸ್ಯೆಗಳು ನೂರಿದ್ದರೂ ಬೇರೆಯವರ ಸಮಸ್ಯೆಗಳನ್ನು ಬಗೆಹರಿಸಲು ತಜ್ಞರಂತೆ ಮುಂದುಬೀಳುವರು, ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ ಇತರೆಯವರ ತಟ್ಟೆಯಲ್ಲಿ ನೊಣ ಹುಡುಕುವ ಪ್ರವೀಣರು ಇವರು.
ಅದಕ್ಕೆ ಅಣ್ಣನವರು " ನೆರೆಮನೆಯವರ ದುಃಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮದೇವ" ಎಂದು ಹೇಳಿರುವುದು.ಈ ನಿಟ್ಟಿನಲ್ಲಿ ನಾವು ಯೋಚಿಸಿದಾಗ ನಮ್ಮ ನ್ಯೂನತೆಗಳನ್ನು ಸರಿಪಡಿಸಿಕೊಂಡು ನಮ್ಮನ್ನು ನಾವು ಉದ್ದಾರ ಮಾಡಿಕೊಳ್ಳುವ ಕಡೆಗೆ ಗಮನ ಕೊಡಬೇಕು, ಅಂತೆಯೇ ಸ್ವಾಮಿ ವಿವೇಕಾನಂದರು ಹೇಳುತ್ತಾರೆ
" ನಿನ್ನನ್ನು ನೀ ಸುಧಾರಿಸಿಕೋ , ಜಗತ್ತಿನಲ್ಲಿ ಓರ್ವ ಮೂರ್ಖ ಕಡಿಮೆಯಾಗುತ್ತಾನೆ".
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
ಮಾನವರಾಗೋಣ ೩
*ಧೈರ್ಯವಂತರಾಗೋಣ*
ನಮ್ಮಲ್ಲಿ ಬಹಳ ಜನರು ಸಣ್ಣ ವಿಷಯಗಳಿಗೂ ಭಯ ಬಿದ್ದು ಮುಂಬರುವ ಅಪಾಯಗಳ ನೆನದು ಮತ್ತೂ ಭಯಗೊಳ್ಳುತ್ತಾರೆ.ಆದರೆ ಈ ಘಟನೆ ನೋಡೋಣ,
ಅಟ್ಲಾಂಟಿಕ್ ಮಹಾಸಾಗರದಲ್ಲಿ ಸುಮಾರು ವರ್ಷಗಳ ಹಿಂದೆ ಒಂದು ವಿಮಾನ ಪತನ ಆಯಿತು...
ವಿಮಾನ ನಾಪತ್ತೆ ಆದ ಸುದ್ದಿ ತಿಳಿದರು ಅದು ಎಲ್ಲಿ ಪತನ ಆಯಿತು ಎಂದು ತಿಳಿಯದೇ ಹುಡುಕಾಟ ನಡೆಸಿದರು ನಾಲ್ಕು ಐದು ದಿನಗಳ ನಂತರ
ವಿಮಾನ ಅಟ್ಲಾಂಟಿಕ್ ಮಹಾಸಾಗರದಲ್ಲಿ ಪತನ ಆಗಿದೆ ಎಂದು ತಿಳಿದುಬಂತು..
ಅದರಲ್ಲಿ ಯಾರಾದರೂ ಬದುಕಿ ಉಳಿಯುವ ಸಾಧ್ಯತೆ ಎಲ್ಲರೂ ಕೈ ಬಿಟ್ಟಿದ್ದರು
ಸೈನಿಕರ ಸರ್ಚ್ ಟೀಂ ಸಾಗರದಲ್ಲಿ ಹುಡುಕಾಟ ಶುರು ಮಾಡಿದರು
ಕೊನೆಗೂ ಸರ್ಚ್ ಟೀಂ ವಿಮಾನದ ಅವಶೇಷ ಪತ್ತೆ ಹಚ್ಚಿದರು
ಎಲ್ಲಿ ನೋಡಿದರೂ ಹೆಣಗಳು ಕಾಣುತ್ತಿದ್ದವು
ಅನತಿ ದೂರದಲ್ಲಿ ಅವರಿಗೆ ಕಂಡು ಬಂದ ದೃಶ್ಯ ನೋಡಿ ಸೈನಿಕರಿಗೆ ತಮ್ಮ ಕಣ್ಣುಗಳನ್ನೇ ನಂಬಲು ಆಗಲಿಲ್ಲ
ತೇಲುತ್ತಿರುವ ವಿಮಾನದ ಒಂದು ತುಂಡು ಮೇಲೆ ಒಬ್ಬಳು ಮಹಿಳೆ ಒಂದು ಸಣ್ಣ ಮಗುವನ್ನು ಎದೆಗೆ ಅಪ್ಪಿಕೊಂಡು ಮಲಗಿರುವ ದೃಶ್ಯ ಕೂಡಲೇ ಅಲ್ಲಿಗೆ ಹೋಗಿ ಅವರನ್ನು ಪರೀಕ್ಷೆ ಮಾಡಿ ನೋಡಿದರು ತಾಯಿ ಮಗು ಇನ್ನೂ ಉಸಿರಾಡುತ್ತಿದ್ದರು..
ಅವರು ಜೀವಂತ ಇರುವುದು ಖಾತ್ರಿ ಮಾಡಿಕೊಂಡು ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಬದುಕಿಸಿಸಿದರು..
ಇಡೀ ಜಗತ್ತಿಗೆ ಇದೊಂದು ಪವಾಡ ಎಂದು ಅನಿಸಿತು..
ಮೈ ಹೆಪ್ಪುಗಟ್ಟಿಸುವ ಚಳಿ ಸುತ್ತಲೂ ನೀರು ತೇಲುತ್ತಿರುವ ಹೆಣಗಳು ಆಹಾರ ಇಲ್ಲ ನೀರು ಇಲ್ಲ ಎಂತಹ ಗಟ್ಟಿ ಗುಂಡಿಗೆ ಇದ್ದರೂ ಅಂತಹ ಸನ್ನಿವೇಶದಲ್ಲಿ ಬದುಕಿ ಉಳಿಯುವುದು ನಿಜಕ್ಕೂ ಒಂದು ಪವಾಡ..
ಆಕೆ ಚೇತರಿಸಿಕೊಂಡ ಬಳಿಕ ಅವಳನ್ನು ಸಂದರ್ಶನ ಮಾಡಿದಾಗ ಆಕೆ ಹೇಳಿದ ಮಾತು
ಆಕಾಶದಲ್ಲಿ ವಿಮಾನ ಸ್ಪೋಟ ಆಯಿತು ಏನಾಯಿತು ಎಂದು ಅರಿವು ಆಗುವಷ್ಟರಲ್ಲಿ ನಾವು ವಿಮಾನದಿಂದ ಸಿಡಿದು ಗಾಳಿಯಲ್ಲಿ ತೇಲುತ್ತಾ ನೀರಿಗೆ ಬಂದು ಬಿದ್ದೆವು
ಸುತ್ತಲೂ ನೋಡಿದಾಗ ಬರೀ ನೀರು ಕೆಲವರು ಈಜಲು ಪ್ರಯತ್ನಿಸಿದರು ಕೆಲವರು ಆದ ಅಪಘಾತಕ್ಕೆ ನೀರಿಗೆ ಬೀಳುವ ಮೊದಲೇ ಮೃತಪಟ್ಟಿದ್ದರು
ಮಗು ನನ್ನ ತೊಡೆ ಮೇಲೆ ಇದ್ದುದರಿಂದ ನೀರಿಗೆ ಬೀಳುವ ವರೆಗೆ ಮಗುವನ್ನು ಅಪ್ಪಿಕೊಂಡೆ ಇದ್ದೆ ನಾನು ಈಜಲು ಪ್ರಯತ್ನಿಸಿದೆ ಮಗು ಹಿಡಿದುಕೊಂಡು ಈಜಲು ಆಗಲಿಲ್ಲ..
ತೇಲುತ್ತಿರುವ ವಿಮಾನದ ತುಣುಕು ಕಣ್ಣಿಗೆ ಬಿತ್ತು ಏನಾದರೂ ಆಗಲಿ ನಾನು ಸಾಯುವುದಿಲ್ಲ ಬದುಕಿಯೇ ಬದುಕುತ್ತೇನೆ ಎಂದು ಕಷ್ಟಪಟ್ಟು ಈಜಿ ಅದರ ಮೇಲೆ ಏರಿ ಕುಳಿತೆ
ನನಗೆ ಭರವಸೆ ಇತ್ತು ಯಾರಾದರೂ ಕಾಪಾಡುತ್ತಾರೆ ಎಂದು
ನನ್ನ ಧೈರ್ಯವೇ ನನ್ನನ್ನು ಬದುಕಿಸಿತು ...
ಈ ಮೇಲಿನ ಘಟನೆ ಗಮನಿಸಿದಾಗ ಕಷ್ಟ ಕಾಲದಲ್ಲಿ ಧೈರ್ಯ ನಮ್ಮ ಅಸ್ತ್ರವಾಗಬೇಕು ಎಂಬುದು ಮನವರಿಕೆಯಾಗುತ್ತದೆ ,ಇತ್ತೀಚಿನ ಕೆಲವು ಘಟನೆಗಳಲ್ಲಿ ಒಂದು ರೋಗಾಣುವಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡವರ ಸುದ್ದಿ ಓದಿದಾಗ ಇಂತಹ ದಿಟ್ಟ ಮಹಿಳೆಯ ಧೈರ್ಯ ಎಲ್ಲರಲ್ಲೂ ಎಲ್ಲಾ ಕಾಲದಲ್ಲೂ ಬರಬೇಕಿದೆ ,"ಧೈರ್ಯಂ ಸರ್ವತ್ರ ಸಾಧನಂ "ಎಂಬಂತೆ ಧೈರ್ಯ ನಮ್ಮ ಮೂಲಮಂತ್ರವಾಗಬೇಕು .ಜೀವನದಲ್ಲಿ ಏನೇ ಕಷ್ಟಗಳು ಎದುರಾದರೂ ಅವುಗಳನ್ನು ಎದುರಿಸಿ ಬಾಳಬೇಕು.
" ಹಿಂತಿರುಗಿ ನೋಡಬೇಡಿ,ಯಾವಾಗಲೂ ಮುನ್ನೆಡಿಯಿರಿ,ಅನಂತ ಶಕ್ತಿ, ಅನಂತ ಉತ್ಸಾಹ,ಅನಂತ ಸಾಹಸ,ಅನಂತ ತಾಳ್ಮೆ,ಇವುಗಳಿದ್ದರೆ ಮಾತ್ರ ಮಹತ್ಕಾರ್ಯ ಸಾಧಿಸಲು ಸಾಧ್ಯ " ಎಂಬ ಸ್ವಾಮಿ ವಿವೇಕಾನಂದರ ವಾಣಿ ನಮಗೆ ಮಾರ್ಗದರ್ಶನವಾಗಲಿ.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
"ಮಧುರ ಮೈತ್ರಿ* ಕಥೆ
ಅಲ್ಲಿ ನಗುವಿತ್ತು, ಸಂಭ್ರಮವಿತ್ತು, ಸಂತಸವಿತ್ತು, ದಂಪತಿಗಳು ಒಬ್ಬರ ಪಕ್ಕದಲ್ಲಿ ಒಬ್ಬರು ಕುಳಿತು ಮನಬಿಚ್ಚಿ ಮಾತನಾಡುತ್ತಿದ್ದರು, ಹೃದಯತುಂಬಿ ನಗುತ್ತಿದ್ದರು .
ಬೆಳೆಸೆಗೆ ಬಂದ ರಾಗಿ ಹೊಲದ ಬದುವಿನ ಮೇಲೆ ಕುಳಿತ ದಂಪತಿಗಳು ಆಗ ತಾನೆ ನಾಗಪ್ಪನ ಪೂಜೆ ಮಾಡಿ ಹುತ್ತಕ್ಕೆ ಹಾಲೆರೆದು ಮುತೈದೆಯರಿಗೆ ಬಾಗಿನ ನೀಡಿ, ಮನೆಗೆ ಹೋಗುವ ಮುನ್ನ ಲೋಕಾಭಿರಾಮವಾಗಿ ಮಾತನಾಡುತ್ತಾ, ನಗುತ್ತಾ, ಇರುವುದನ್ನು ಕಂಡ ಮರದ ಗಿಳಿಗಳು ಇವರನ್ನೇ ನೋಡುತ್ತಿದ್ದವು, ಹೊಲದ ಸನಿಹ ಇರುವ ರಸ್ತೆಯಲ್ಲಿ ಹೋಗುವ ಬೈಕ್ ಸವಾರರ ಕಣ್ಣುಗಳು ಇವರ ಮೇಲೆ ಬೀಳದಿರಲಿಲ್ಲ.
ಯಾರು ತಾನೆ ನೋಡಲ್ಲ ಹೇಳಿ, ಜರೀ ಪಂಚೆ ,ಕೆಂಪನೆಯ ಅಂಗಿ ತೊಟ್ಟ ಸ್ಪುರದ್ರೂಪಿ ಸುಜಯ್ ಯಾವ ಸಿನಿಮಾ ನಟನಿಗಿಂತ ಕಡಿಮೆ ಇರಲಿಲ್ಲ.ಜೊತೆಗೆ ಕುಳಿತ ನೀಲಿ ಸಾಂಪ್ರದಾಯಿಕ ಸೀರೆ ಉಟ್ಟು, ಅದಕ್ಕೆ ಹೊಂದಿಕೆಯಾಗುವ ರವಿಕೆ ತೊಟ್ಟು, ಎಡಕ್ಕೆ ಬಾಗಿದ ತುರುಬಿಗೆ ತಮ್ಮ ಹೊಲದಲ್ಲಿ ಬೆಳೆದ ಮಲ್ಲಿಗೆ ಕಾನಕಾಂಬರ ಹೂಗಳ ತಾನೆ ಕಟ್ಟಿಕೊಂಡು ಮುಡಿದಿದ್ದಳು ಆರತಿ, ಮೆಹೆಂದಿಯ ರಂಗು ಅವಳ ಅಂದವನ್ನು ಇನ್ನಷ್ಟು ಹೆಚ್ಚಿಸಿತ್ತು.
"ಇದೆಲ್ಲಾ ಹೇಗೆ ಸಾದ್ಯವಾಯಿತು ಸುಜಯ್, ನೀನು ಉತ್ತರ ನಾನು ದಕ್ಷಿಣ, ನೀನು ಹಳ್ಳಿಯ ರೈತನ ಮಗ ನಾನು ಪಟ್ಟಣದ ಕೆ ಎ ಎಸ್ ಅಧಿಕಾರಿಯ ಮಗಳು, ನೀನು ಪಕ್ಕಾ ಭಾರತೀಯ ಸಂಪ್ರದಾಯ ಪಾಲಿಸುವವ ನಾನು ಪಾಶ್ಚಾತ್ಯ ಸಂಸ್ಕೃತಿಯ ಆರಾಧಕಳು ಆದರೂ ನಾವು ಜೊತೆಯಾಗಿದ್ದು ಹೇಗೆ "
" ನಿನಗೇ ಗೊತ್ತು ಆರತಿ ,ಇದು ಶುರುವಾಗಿದ್ದು ,ತುಮಕೂರು ಯೂನಿವರ್ಸಿಟಿ ಕಲಾ ಕಾಲೇಜಿನಲ್ಲಿ ನಾವಾಗ ಬಿ ಎ ಓದುತ್ತಿದ್ದೆವು ... ಪ್ರೆಶರ್ಸ್ ವೆಲ್ಕಂ ಸಮಾರಂಭದಲ್ಲಿ ನನಗೆ ಹಾಡುವ ಅವಕಾಶ ಸಿಕ್ಕಿತು, ಮೈಕ್ ಮುಂದೆ ನಿಂತು. " ನೀನೊಂದು .....ಮುಗಿಯದ ಮೌನ....... ನಾನೇಗೆ.....ತಲುಪಲಿ ನಿನ್ನ......." ಎಂಬ ಹಾಡನ್ನು ಹಾಡಿ ನಾನು ಮುಗಿಸುವ ಮುನ್ನವೇ ಕರತಾಡನ ಮುಗಿಲು ಮುಟ್ಟಿತ್ತು. ಮತ್ತೊಮ್ಮೆ ಅದೇ ಹಾಡು ಹಾಡಲು ಒನ್ಸ್ ಮೋರ್ ಅಂದರು, ಎರಡನೆಯ ಬಾರಿಗೆ ಹಾಡನ್ನು ಹಾಡಿ ಮುಗಿಸಿದಾಗ ಶಿಳ್ಳೆಗಳ ಜೊತೆ ಚಪ್ಪಾಳೆ ಸದ್ದು ಕೇಳುತ್ತಲೇ ಇತ್ತು ,ಅದರಲ್ಲೂ ಎಲ್ಲರೂ ಚಪ್ಪಾಳೆ ನಿಲ್ಲಿಸಿದರೂ ,ನೀನು ಮಾತ್ರ ಮೈಮರೆತಂತೆ ಚಪ್ಪಾಳೆ ತಟ್ಟುತ್ತಲೇ ಇದ್ದೆ ಎಲ್ಲರೂ ನಿನ್ನತ್ತ ನೋಡಿದಾಗ ನಿನ್ನ ಗೆಳತಿಯರು ನಿನ್ನ ಕೈಗಳನ್ನು ಹಿಡಿದಾಗ ಮಾತ್ರ ನಿನ್ನ ಚಪ್ಪಾಳೆ ನಿಂತಿತು."
"ಹೌದು ಸುಜಯ್ ಈಗ ನನಗೆಲ್ಲಾ ನೆನಪಾಗುತ್ತಿದೆ. ನಮ್ಮಪ್ಪ ಗೆಜೆಟೆಡ್ ಅಧಿಕಾರಿಯಾಗಿದ್ದರಿಂದ ನಾನು ಚಿಕ್ಕವಳಿದ್ದಾಗಿನಿಂದ ಕಾನ್ವೆಂಟ್ ಶಾಲೆಯಲ್ಲಿ ಬೆಳೆದವಳು ಆ ಪ್ರಭಾವ ನನ್ನ ಉಡುಗೆ ,ತೊಡುಗೆ, ಆಹಾರ ವಿಹಾರ ಎಲ್ಲದರ ಮೇಲೆ ಕಂಡುಬಂತು, ನಾನು ಕೂಡಾ ಅಧಿಕಾರಿಯಾಗಬೇಕೆಂಬ ಗುರಿಯೊಂದಿಗೆ ಡಿಗ್ರಿ ಮಾಡಲು ಯೂನಿವರ್ಸಿಟಿ ಆರ್ಟ್ಸ್ ಕಾಲೇಜಿಗೆ ಸೇರಿದೆ.
ನಿನ್ನ ಹಾಡು ನನ್ನ ಮಂತ್ರಮುಗ್ದಗೊಳಿಸಿತು.
" ಮಂತ್ರವೋ ,,ಮುಗ್ದವೋ ,,ನೀನು ಮಾರನೆ ದಿನ ಬಂದು ನನಗೆ ಐ ಲವ್ ಯೂ ಹೇಳಿದಾಗ ಮಂತ್ರ, ತಾಯಿತ ಕಟ್ಟಿಸಿಕೊಳ್ಳುವಂತೆ ಶಾಕ್ ಆಗಿ ಬೆದರಿದ್ದೆ,
ನಾನು ನಿನಗೆ ತಕ್ಕವನಲ್ಲ , ಅಪ್ಪ ರೈತನಾಗಿ ಕಷ್ಟ ಪಡುತ್ತಿರುವರು, ನಾನು ಓದಿ ಲೆಕ್ಚರ್ ಆಗಬೇಕು ಅಪ್ಪ, ಅಮ್ಮನನ್ನು ಸುಖವಾಗಿ ನೋಡಿಕೊಳ್ಳಬೇಕು, ಸುಮ್ಮನೆ ನನ್ನ ಪಾಡಿಗೆ ನನ್ನ ಬಿಡು ಎಂದು ಅಂಗಲಾಚಿದೆ" ಎಂದು ನೆನೆಪು ಬಿಚ್ಚಿದ ಸುಜಯ್.
"ಆ..ಹಾ... ನಾನು ಬಿಟ್ಟೆನೆ ? ಬಿಡಲಿಲ್ಲ , ಈಗಲೂ ಬಿಟ್ಟಿಲ್ಲ ನೋಡು ನಿನ್ನ ಪಕ್ಕದಲ್ಲೇ ಕೂತಿರುವೆ "ಎಂದು ಮೈಗೆ ಮೈ ತಾಗಿಸಿ ಹಿತವಾಗಿ ಗುದ್ದುತ್ತಾ ಕೇಳಿದಳು ಆರತಿ.
" ಹೌದು ಮಾರಾಯ್ತಿ ನಿನ್ ಎಲ್ಲಿ ಸುಮ್ನೆ ಬಿಟ್ಟೆ ?ಪ್ರೀತಿ ಒಪ್ಪದಿದ್ದರೆ ವಿಷ ಕುಡಿಯುವೆ ಎಂದು ವಿಷದ ಬಾಟಲ್ ಅನ್ನು ಒಳ್ಳೆಯ ವಾಟರ್ ಬಾಟಲ್ ತರ ಯಾವಾಗಲೂ ಆ ಇಂಪೋರ್ಟೆಡ್ ಬ್ಯಾಗ್ ನಲ್ಲಿ ಇಟ್ಕೊಂಡು ಪದೇ ಪದೇ ಹೆದರಿಸುತ್ತಿದ್ದೆ, ಅದನ್ನು ನೋಡಿ , ಡಿಗ್ರೀ ಮುಗಿಯುವ ಮೊದಲೇ ಮದುವೆ ಬೇಡ ಎಂಬ ಒಂದು ಷರತ್ತಿನ ಮೇಲೆ ನಿನ್ನ ಪ್ರೀತಿಸಲು ಒಪ್ಪಿದ್ದು.
"ಹೌದು ಕಣೋ , ನಿನಗೆ ಇಷ್ಟ ಇಲ್ಲದಿದ್ದರೂ ಜೀನ್ಸ್ , ಮತ್ತು ಮಾಡ್ ಡ್ರೆಸ್ ಹಾಕಿಸಿ ಕಾಲೇಜಿಗೆ ಬಂದಾಗ ಹುಡುಗಿಯರು ನಿನ್ನೇ ನೋಡಿದಾಗ ಅವರ ಜೊತೆ ಜಗಳ ಮಾಡಿದ್ದು ನೆನಪಿದೆಯಾ?"
" ಅಯ್ಯೋ ನೆನಪಾ!? ಭಯಂಕರ ನೆನಪು ಅವತ್ತು ಪ್ರಿನ್ಸಿಪಾಲ್ ಬರದಿದ್ದರೆ ಆ ಸುರೇಖಾ ಳನ್ನು ಅದೇನು ಮಾಡುತ್ತಿದ್ದೆಯೋ ಮೊದಲ ಬಾರಿ ಇಡೀ ಕಾಲೇಜು ನಿನ್ನ ಮಾರಿ ರೂಪ ನೋಡಿತ್ತು " ಎಂದು ಜೋರಾಗಿ ನಕ್ಕ ಸುಜಯ್
"ಹೌದು ಮತ್ತೆ ನನ್ ಹುಡ್ಗನ್ನ ಲೈನ್ ಹಾಕೋಕೆ ಬಂದ್ಲು ಆ ಬಿತ್ರಿ ಬಿಡ್ತೀನಾ ನಾನು? .
ನಮ್ಮ ಪ್ರೀತಿ ವಿಷಯ ಮನೇಲಿ ಗೊತ್ತಾಗಿ ಅಪ್ಪಾ ಕಿರುಚಾಡಿದ್ರು ,ಚಿಕ್ಕವಳಿದ್ದಾಗಿಂದ ನನ್ ಹಠ ನೋಡಿದ್ದ ಅಪ್ಪ ,ಕೊನೆಗೆ ಏನಾರ ಮಾಡ್ಕೊಂಡು ಹಾಳಾಗೋಗು ಅಂದ್ರು, ಅದೇ ನಮ್ ಮದುವೆಗೆ ಗ್ರೀನ್ ಸಿಗ್ನಲ್,
ಡಿಗ್ರಿ ಮುಗೀತು ಮದುವೆ ಆಗೋಣ ಬಾ ಎಂದು ನಾನು ಕೇಳಿದಾಗ ನಿಂದು ಅದೇ ಹಳೇ ರಾಗ... ಲೆಕ್ಚರ್.... ರೈತರು.....ಕಷ್ಟ.....
ಕೊನೆಗೂ ಎರಡು ವರ್ಷ ಮದುವೆ ಬೇಡ ಎಂದೂ ನಾನೂ ತೀರ್ಮಾನ ಮಾಡಿ ನೀನು ಮಾನಸ ಗಂಗೋತ್ರಿಯಲ್ಲಿ ಎಂ ಎ ಮಾಡಲು ಹೊರಟೆ ನಾನು ಕೆ ಎ ಎಸ್ ಗೆ ಓದಲು ಬೆಂಗಳೂರಿಗೆ ಹೋದೆ, ಹೋಗುವಾಗ ನಿನಗೊಂದು ವಾರ್ನಿಂಗ್ ಕೊಟ್ಟಿದ್ದೆ ,"ವಾರಕ್ಕೊಮ್ಮೆ ಪತ್ರ ಬರೆಯದಿದ್ದರೆ ನಿನ್ನ ಕಥೆ ಅಷ್ಟೇ." ಎಂದು
" ಹದಿನೈದು ದಿನ ನನ್ನ ಕಾಗದ ಬರದಿದ್ದಾಗ ನೀನು ಹುಡುಕಿಕೊಂಡು ನಮ್ಮ ಹಳ್ಳಿ ಶೆಟ್ಟಿಹಳ್ಳಿ ಪಾಳ್ಯಕ್ಕೆ ಕಪ್ಪು ಕಾರಲ್ಲಿ ಬರ್... ಎಂದು ಡುಮು ಡುಮು ಮುಖದಲ್ಲಿ ಬಂದೆ. ಅಂದು ನಮ್ಮ ಅಪ್ಪನ ಹನ್ನೊಂದು ದಿನದ ತಿಥಿ ಕಾರ್ಯ ನೋಡಿ ನಿನ್ನ ಕಣ್ಣಲ್ಲಿ ನಾನು ಎರಡು ಹನಿ ಕಂಡೆ, " ಎಂದು ದೀರ್ಘವಾಗಿ ಉಸಿರು ಬಿಟ್ಟು ರಾಗಿಯ ಹೊಲದ ಕಡೆ ನೋಡುತ್ತಾ ಹೇಳಿದ ಸುಜಯ್.
" ಅಪ್ಪನಿಗೆ ಇಷ್ಟ ಇಲ್ಲದಿದ್ದರೂ ಒಪ್ಪಿಸಿ ದೇವರಾಯನದುರ್ಗ ದಲ್ಲಿ ಸ್ನೇಹಿತರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾದೆವು , ಅಪ್ಪ ಹಣ ಕೊಡುವೆ ಏನಾದರೂ ಬಿಸಿನೆಸ್ ಮಾಡಿ ಇದನ್ನಾದರೂ ಕೇಳು , ಹಳ್ಳಿಗೆ ಹೋಗಬೇಡ ಎಂದಾಗ , ನೀನು ಅದಕ್ಕೆ ಒಪ್ಪಲಿಲ್ಲ ಅದಕ್ಕೆ ನಿನ್ನೊಂದಿಗೆ ಹಳ್ಳಿಗೆ ಬಂದು ಬಿಟ್ಟೆ ಅಲ್ವ? ಪ್ರಶ್ನಿಸಿದಳು ಆರತಿ
" ಹೌದು ನೀನು ಮೊದಲು ನಮ್ಮ ಹಳ್ಳಿಗೆ ಬಂದಾಗ ನಮ್ಮ ಹಳ್ಳಿಯ ಪಡ್ಡೆ ಹುಡುಗರು ಮೊಳಕಾಲ ಮೇಲಿನ ನಿನ್ನ ಮಿಡಿಯನ್ನೇ ಜೊಲ್ಲು ಸುರಿಸಿಕೊಂಡು ನೋಡುತ್ತಿದ್ದುದನ್ನು ನಾನು ನಿನ್ನ ಗಮನಕ್ಕೆ ತಂದಾಗ ಅವತ್ತಿನಿಂದ ಈ ರೀತಿಯಾಗಿ ಸೀರೆ ಉಡುತ್ತಿರುವೆ ಎಂದು ಹೆಮ್ಮೆಯಿಂದ ಆರತಿಯ ಕಡೆ ನೋಡಿದ ಸುಜಯ್.
" ಹೌದು ಸುಜಯ್ ನೀನು ನನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವೆ, ನಾನು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುವೆ ನಮ್ಮದು ದೇವರೇ ಬೆಸೆದ ಮಧುರ ಮೈತ್ರಿ .
ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುವ ನೀನು ಇರುವಾಗ , ಒಳ್ಳೆಯ ಅಮ್ಮನಂತಹ ಅತ್ತೆ, ಸುಂದರವಾದ ರಾಗಿ ಹೊಲ ,ಇದೆಲ್ಲಾ ಇರುವಾಗ ಇನ್ನೇನು ಬೇಕು..."
ಮಧ್ಯ ದಲ್ಲೆ ಬಾಯಿ ಹಾಕಿ ಹೇಳಿದ
" ನಮ್ದು ಅಂತ ಒಂದು ಜೀವ...? ಮದುವೆಯಾಗಿ ಎರಡು ವರ್ಷಗಳ ನಂತರವೂ ನಮಗೊಂದು ಮಗು ಆಗಿಲ್ಲ ಅದೊಂದೇ ಕೊರಗು ಚಿನ್ನ "ಎಂದು ಬೇಸರದಿಂದ ನುಡಿದ ಸುಜಯ್.
" ಏಯ್ ಅದ್ಯಾಕೆ ಅಷ್ಟು ಬೇಜಾರ್ ಮಾಡ್ಕೊತಿಯಾ? ನಮಗೇನು ಮಹಾ ವಯಸ್ಸು ಆಗಿದೆ ? ಭಗವಂತ ಕಣ್ ಬಿಟ್ರೆ ಅದ್ಯಾವ ಲೆಕ್ಕ ....ಎಂದು ಥೇಟ್ ಹಳ್ಳಿಯ ಹೆಂಗಸಂತೆ ಮಾತನಾಡಿದಾಗ ರತ್ನಪಕ್ಷಿ( ಸಂಬಾರ್ ಗಾಗೆ) ಅವರ ಮುಂದೆ ಹಾರುತ್ತಾ ಹೋಗಿ ಮರದಲ್ಲಿ ಕುಳಿತಿತು.....
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
ಲೇಖನ
*ಸ್ನೇಹಿತರ ಅಕಾಲಿಕ ಸಾವುಗಳು ಕ್ಷಯವಾಗಲಿ,
ಸವಿನೆನಪುಗಳು ಅಕ್ಷಯವಾಗಲಿ*
ಅಕ್ಷಯ ತೃತೀಯ ದಿನ ಭಾರತೀಯರಿಗೆ ಬಹಳ ಪವಿತ್ರ ಮತ್ತು ಉತ್ತಮ ದಿನವೆಂದು ಪರಿಗಣಿತವಾಗಿದೆ, ಇದನ್ನು ಆಸ್ತಿಕನಾದ ನಾನು ಸಹ ನಂಬಿರುವೆ, ಅದಕ್ಕೆ ಪೂರಕವೆಂಬಂತೆ ಈ ವರ್ಷದ ಅಕ್ಷಯ ತೃತೀಯ ದಿನದಂದು ನನ್ನ ಸ್ನೇಹಿತರು ಸಿಕ್ಕರು ಸ್ನೇಹ ಅಕ್ಷಯವಾಯಿತು. ಹೌದು 22 ವರ್ಷಗಳ ಹಿಂದೆ ಒಡನಾಡಿದ ಸ್ನೇಹಿತರು ನನಗೆ ಅಂದು ದೊರೆತರು, ವಾಟ್ಸಪ್, ಪೇಸ್ಬುಕ್ ಟ್ವಿಟರ್, ಇಲ್ಲದ ಆ ಕಾಲದ ಸ್ನೇಹಿತರನ್ನು ಒಂದೆಡೆ ಸೇರಿಸುವುದು ಕಷ್ಟಸಾಧ್ಯವಾದರೂ ಆ ಕೆಲಸಕ್ಕೆ ಮುನ್ನಡಿ ಬರೆದಿದ್ದರು ನನ್ನ ಸ್ನೇಹಿತರು , ಅದರ ಫಲವೇ ಅಕ್ಷಯ ತೃತೀಯ ದಿನದಂದು 42 ಅಕ್ಷಯವಾದ ಗೆಳೆಯ, ಗೆಳತಿಯರ ಸಂಗಮ , ಈ ಸವಿ ಸಂಗಮಕ್ಕೆ ಕಾರಣರಾದ, ಹೇಮಂತ್ ಕುಮಾರ್ ಮತ್ತು ಗೆಳೆಯರ ನೆನೆಯದೇ ಹೇಗಿರಲಿ?
ಒಬ್ಬೊಬ್ಬ ಗೆಳೆಯ, ಗೆಳತಿಯರ ಪೋಟೋ ನೋಡಿ ,ಹೇಗಿದ್ದ ಹೇಗಾದ, ಅಂಗಿದ್ಲು ಈಗ ಇಂಗಿದಾಳೆ ಎಂದು ಅಚ್ಚರಿ ಭರಿತವಾದ ಸಂತಸ ಹಂಚಿಕೊಂಡೆವು.
1999 ರಲ್ಲಿ ನಾನು ಟಿ ಸಿ ಹೆಚ್ ಮುಗಿಸಿದೆ ಅದಕ್ಕಿಂತ ಮೊದಲು ನಾನು ಡಿಗ್ರಿ ಮುಗಿಸಿದ್ದರಿಂದ ಬಿ ಎಡ್ ಮಾಡಲು ಅಪ್ಲಿಕೇಶನ್ ಹಾಕಿದ್ದೆ , ಅದೃಷ್ಟವೆಂಬಂತೆ ಮೈಸೂರಿನ ಕಾಲೇಜ್ ಆಪ್ ಟೀಚರ್ ಎಜುಕೇಷನ್ ಅಲ್ಲಿ ನನಗೆ ಸೀಟು ದೊರಕಿತು, ಅದಕ್ಕೆ ಮಹಾರಾಜಾ ಕಾಲೇಜು ಮತ್ತು ಗವರ್ನಮೆಂಟ್ ಬಿ ಎಡ್ ಕಾಲೇಜು ಎಂಬ ಹೆಸರು ಇತ್ತು . ಮಧ್ಯಕರ್ನಾಟಕದ ಚಿತ್ರದುರ್ಗ ದಿಂದ ಹೋದ ನನಗೆ ಮೊದಲಿಗೆ ಮೈಸೂರು ಹೊಸ ನಗರ, ಇದು ನನ್ನಲ್ಲಿ ಭಯ ಮತ್ತು ಕುತೂಹಲ ತರಿಸಿತ್ತು .ಮಹಾರಾಜರ ಕಾಲದ ದೊಡ್ಡ ಕಟ್ಟಡದ ಮುಂದೆ ನಿಂತಾಗ ನನಗೆ ,ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ಎಂಬ ಬೋರ್ಡ್ ನನ್ನ ಸ್ವಾಗತಿಸಿತು. ಅಂದಿನಿಂದ ಕ್ರಮೇಣವಾಗಿ ಸ್ನೇಹಿತರ ಒಡನಾಟ ,ಕಲಿಕೆ ,ಕೀಟಲೆ ,ತರಲೆ,ಇವುಗಳ ಮಧ್ಯೆ ಹತ್ತು ತಿಂಗಳು ಕಳೆದದ್ದೆ ತಿಳಿಯಲಿಲ್ಲ, ತರಬೇತಿ ಮುಗಿದಾಗ ಯಾಕೆ ಇಷ್ಟು ಬೇಗ ತರಬೇತಿ ಮುಗಿಯಿತು ಎಂದುಕೊಂಡೆವು( ಬಹುಶಃ ನಮ್ಮ ಮನದ ಬಯಕೆ ಅರಿತು ಈಗ ಬಿ ಎಡ್ ಎರಡು ವರ್ಷಗಳ ಅವಧಿಗೆ ಹೆಚ್ಚು ಮಾಡಿರಬಹುದು).
ಈ ಅವಧಿಯು ನನ್ನ ಜೀವನದ ಸುವರ್ಣ ಅಕ್ಷರಗಳಲ್ಲಿ ಬರೆದಿಡಬಹುದಾದ ದಿನಗಳು, ರಾಜ್ಯದ ವಿವಿಧ ಜಿಲ್ಲೆಗಳಿಂದ ತರಭೇತಿ ಗೆ ಬಂದ ನನ್ನ ಸ್ನೇಹಿತರ ನೋಡಿದರೆ ಅದೊಂದು ಕರ್ನಾಟಕದ ಪ್ರತಿಬಿಂಬ ವಾಗಿತ್ತು ,ಅಷ್ಟೇ ಏಕೆ ಸಕ್ಕಿಂ ಮೂಲದ ಅನ್ನಪೂರ್ಣ ತಮಂಗ್ ಎಂಬುವರು ನಮ್ಮ ಜೊತೆಗೆ ಓದುತ್ತಿದ್ದರು ಅದಕ್ಕೆ ನಮ್ಮ ಕಾಲೇಜ್ ಭಾರತದ ಪ್ರತಿಬಿಂಬ ವಾಗಿತ್ತು ಎಂದರೂ ತಪ್ಪಿಲ್ಲ.
ಹತ್ತು ತಿಂಗಳಲ್ಲಿ ಕಳೆದ ಗೆಳೆಯರು 22 ವರ್ಷಗಳ ನಂತರ ವಾಟ್ಸಪ್ ನಲ್ಲಿ ಸಿಕ್ಕು ಉಭಯ ಕುಷಲೋಪರಿ ವಿಚಾರಿಸಿದರೆ ಹೇಗಿರಬೇಡ... ಸವಿ ...ಸವಿ..ನೆನಪುಗಳ ಅನಾವರಣ...
ನೆನಪುಗಳನ್ನು ಎಲ್ಲಿಂದ ಆರಂಭ ಮಾಡಲಿ ಎಲ್ಲಿ ನಿಲ್ಲಿಸಲಿ ಆರಂಭ ಮಾಡಬಹುದು ಆದರೆ ಅಲೆಗಳಂತೆ ಅವು ಬರುತ್ತಲೇ ಇರುವವು....
ಪಡುವಾರಹಳ್ಳಿಯ, ಚುಂಚನಗಿರಿ ಹಾಸ್ಟೆಲ್ ನಿಂದ ಹಿಡಿದು, ಚಾಮುಂಡಿ ಬೆಟ್ಟ, ಕಾಲೇಜ್ ಟೀಚಿಂಗ್ ಪ್ರಾಕ್ಟೀಸ್, ಸಿಟಿಜನ್ ಶಿಪ್ ಕ್ಯಾಂಪ್, ಟೂರ್, ಉಪ್.... ಏನಿತ್ತು ಏನಿರಲಿಲ್ಲ.
ಗೆಳೆಯರು ಒಂದೊಂದೆ ಹಳೆಯ ನೆನಪಿನ ಫೋಟೋಗಳನ್ನು ವಾಟ್ಸಪ್ ಗುಂಪಿನಲ್ಲಿ ಹಾಕುತ್ತಿದ್ದರೆ .ನೆನಪುಗಳು ಮತ್ತೆ ಒತ್ತರಿಸಿ ಬಂದವು.
ಪ್ರಸ್ತುತ ಬಹುತೇಕರು ಮದುವೆಯಾಗಿ ಮಕ್ಕಳನ್ನು ಪಡೆದಿರುವ ನಾವು , ನಮ್ಮ ಮಕ್ಕಳಿಗೆ ಜೀವನದಲ್ಲಿ ಮುಂದುವರೆಯಬೇಕು ಎಂದು ಬೋಧನೆ ಮಾಡುವ ನಾವು
ನಿಜ ಅರ್ಥದಲ್ಲಿ ಗೆಳೆಯರ ಜೊತೆ ನೆನಪಿನ ದೋಣಿಯಲ್ಲಿ ಇಪ್ಪತ್ತೆರಡು ವರ್ಷಗಳ ಹಿಂದಕ್ಕೆ ಹೋಗಿದ್ದೆವು .
ಅಂದು ಮಾಡಿದ ಕೀಟಲೆಗಳು, ಸಣ್ಣ ಜಗಳಗಳು, ಅಲ್ಲಲ್ಲಿ ,ಅಸೂಯೆಗಳು, ಅಸೈನ್ಮೆಂಟ್ ಟೆಸ್ಟ್, ಟೀಚಿಂಗ್ ಪ್ರಾಕ್ಟೀಸ್ ಟೂರ್ ,ಕ್ಯಾಂಪ್ .....ಎಲ್ಲಾ ನೆನಪುಗಳು ಒತ್ತರಿಸಿ ಬಂದವು ,ಆ ನೆನಪುಗಳೇ ಜಿದ್ದಿಗೆ ಬಿದ್ದಂತೆ ನಾನು ಮೊದಲು ನಾನು ಮೊದಲು ಎಂದು ನಮ್ಮ ಸ್ಮೃತಿ ಪಟಲದ ಮೇರೆ ಬರಲಾರಂಬಿಸಿದವು.
ಮೂರುದಿನಗಳ ಕಾಲ ವಾಟ್ಸಪ್ ಗುಂಪಿನಲ್ಲಿ ಪರಸ್ಪರ ಈಗಿನ ಊರು ,ಕೆಲಸ, ಮಕ್ಕಳು ಸಂಸಾರ ಪರಿಚಿತವಾದ ನಂತರ ಮತ್ತೆ ಆನ್ಲೈನ್ ನಲ್ಲೆ ತರಲೆ ಕೀಟಲೆ, ಕಾಲೆಳೆಯುವುದು ಆರಂಭ, ಲಾಕ್ ಡೌನ್ ಕೋವಿಡ್ ,ಮರೆತು ನಮ್ಮ ನೆನಪುಗಳ ಅನ್ಲಾಕ್ ಮಾಡಿ ಸ್ವಚ್ಛಂದ ವಾಗಿ ನಮ್ಮ ಬಿ ಎಡ್ ಸ್ನೇಹಲೋಕದಲ್ಲಿ ತೇಲುತ್ತಿದ್ದೆವು.
ಆಗಲೇ ನೋಡಿ ಬರಸಿಡಿಲಿನಂತೆ ಬಂದ ಸುದ್ದಿ ನಮ್ಮನ್ನು ದುಃಖ ಸಾಗರದಲ್ಲಿ ಮುಳುಗುವಂತೆ ಮಾಡಿತು.
"ದೇವೇಂದ್ರ ಬಡಿಗೇರ್" ಇನ್ನಿಲ್ಲ ಎಂಬ ಪೋಸ್ಟ್ ಹಂಚಿದ ಗೆಳೆಯ ಅವನ ಆತ್ಮಕ್ಕೆ ಶಾಂತಿ ಕೋರಿದ. ಬಡಿಗೇರ್ ನಮ್ಮ ಜೊತೆ ಬಿ ಎಡ್ ಮಾಡಿದ ಪ್ರತಿಭಾನ್ವಿತ ಗೆಳೆಯ,
ಮೂರುದಿನದಿಂದ ನಲಿದ ಮನಸ್ಸುಗಳು ಒಮ್ಮೆಲೆ ಘಾಸಿಗೊಂಡವು.
ಬಹಳ ಬೇಸರದಿಂದ ಗೆಳೆಯನ ಆತ್ಮಕ್ಕೆ ಶಾಂತಿ ಕೋರುವುದೊಂದೆ ನಮ್ಮ ಕರ್ತವ್ಯವಾಗಿತ್ತು....
ಬಹಳ ನೋವಿನಿಂದ ಹೇಳುತ್ತಿರುವೆ ಗೆಳೆಯ ಹೋಗಿ ಬಾ.... ನಿನ್ನ ಆತ್ಮಕ್ಕೆ ಚಿರ ಶಾಂತಿ ಲಬಿಸಲಿ, ....
ಸ್ನೇಹಿತರ ಅಕಾಲಿಕ ಮರಣಗಳು ಕ್ಷಯವಾಗಲಿ... ಮಧುರ ನೆನಪುಗಳು ಅಕ್ಷಯವಾಗಲಿ.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
I recalled yesterday's incident ,after I received a call from my wife I went to medical Shop to buy an pulse oximeter ,after my purchase I observed that there was big board " M R P liquor shop " in big board
Balaji medical center in small board ,in a same building.
"please don't disclose this matter to anyone, do you take drinks?" I asked
That person nod his head
" OK tomorrow let's go to same shop take drinks " I gave an offer
That man was so happy
Next day evening that man was came with me to shop I ordered "two cough syrup please " that man ,looked at my face once and at BOARD once .....
Sihijeevi
C G VENKATESHWARA
TUMKUR
*ಓಡುವುದು*
ಬಂದಿದೆ ನಮಗೆ ಕಷ್ಟದ
ಕಾಲವೆಂದು ಕೊರಗದಿರಿ
ಕಾಣದ ವೈರಾಣುವ ಸೋಲಿಸಿ
ಜಗ್ಗದೆ ಮುನ್ನೆಡೆಯಿರಿ.
ದೈಹಿಕ ಅಂತರವು ನಮ್ಮ
ನಿತ್ಯ ಮಂತ್ರವಾಗಲಿ
ಪದೇ ಪದೇ ಕೈತೊಳೆಯುವುದು
ನಮ್ಮ ಹವ್ಯಾಸವಾಗಲಿ.
ಅನವಶ್ಯಕವಾಗಿ ಮನೆಯಿಂದ
ಹೊರಗೆ ಬರದಿರಿ
ರೋಗನಿರೋಧಕ ಶಕ್ತಿ
ಹೆಚ್ಚಿಸಿಕೊಳ್ಳಲು ಮರೆಯದಿರಿ.
ವೈರಾಣುವಿಗೆ ಅಂಜುತ
ಎದೆಗುಂದದೆ ಧೈರ್ಯವಾಗಿರಿ
ಲಸಿಕೆ ಪಡೆದರೆ ಅದು
ಓಡುವುದು ನೋಡುತ್ತಿರಿ.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
ತಾಳ್ಮೆ ಮತ್ತು ನಗು ನಮ್ಮದಾಗಲಿ
ಒಬ್ಬ ಮರದ ಕೆಲಸದವನು ರಾತ್ರಿ ತನ್ನ ಕೆಲಸವನ್ನು ಮುಗಿಸಿ ಎಂದಿನಂತೆ ತನ್ನ ಅಂಗಡಿಯನ್ನು ಮುಚ್ಚಿ ಮನೆಗೆ ಹೊರಡುತ್ತಾನೆ. ಆ ಹೊತ್ತಿನಲ್ಲಿ ಒಂದು ದೊಡ್ಡ ಹಾವೊಂದು ಅಂಗಡಿಗೆ ನುಗ್ಗುತ್ತದೆ. ಅಲ್ಲಿ ತನಗೆ ಏನಾದರೂ ಆಹಾರ ಸಿಗಬಹುದೆಂದು ಅತ್ತ ಇತ್ತ ತಿರುಗುತ್ತದೆ. ಹಾವು ಹಾಗೆ ತಿರುಗುತ್ತಿರುವಾಗ, ಅಲ್ಲಿರುವ ಎರಡು ಬದಿಯಲ್ಲಿಯೂ ಹರಿತವಾಗಿರುವ ಒಂದು ಗರಗಸಕ್ಕೆ ತಾಗಿ ಅದಕ್ಕೆ ಸಣ್ಣದಾದ ಗಾಯವಾಗುತ್ತದೆ. ಹಾವಿಗೆ ಸಿಟ್ಟು ಬಂದು ಆ ಗರಗಸಕ್ಕೆ ಕಚ್ಚುತ್ತದೆ. ಆಗ ಅದರ ಬಾಯಿಗೆ ಕೂಡ ಗಾಯವಾಗುತ್ತದೆ. ಇದರಿಂದ ಹಾವಿನ ಸಿಟ್ಟು ಮತ್ತಷ್ಟು ಹೆಚ್ಚಾಗುತ್ತದೆ. ಕೂಡಲೇ ಅದು ಆ ಗರಗಸಕ್ಕೆ ಗಟ್ಟಿಯಾಗಿ ಸುತ್ತಿಕೊಂಡು ತನ್ನ ಹಿಡಿತವನ್ನು ಬಲಪಡಿಸುತ್ತದೆ. ಮರುದಿನ ಬೆಳಿಗ್ಗೆ ಮರದ ಕೆಲಸದವನು ತನ್ನ ಅಂಗಡಿಯನ್ನು ತೆರೆದಾಗ ಅವನಿಗೆ ಗರಗಸದಲ್ಲಿ ಸುತ್ತಿಕೊಂಡು ಸತ್ತಿದ್ದ ಹಾವು ಕಾಣುತ್ತದೆ.
ಈ ಮೇಲಿನ ಘಟನೆಯಲ್ಲಿ ಹಾವು ಬೇರೆಯವರ ಆಕ್ರಮಣದಿಂದ ಸಾಯಲಿಲ್ಲ, ಬದಲಿಗೆ ತನ್ನದೇ ಆದ ಸಿಟ್ಟು ಮತ್ತು ಹಠದಿಂದ ಸತ್ತಿತ್ತು.
ನಮಗೂ ಸಹ ಸಿಟ್ಟು ಬಲು ಬೇಗ ಬರುತ್ತದೆ ಸಿಟ್ಟಿನಿಂದ ನಾವು ಪ್ರತಿಕ್ರಿಯೆ ನೀಡುತ್ತಾ ಹೋಗಿ ಅದು ಕೊನೆಗೆ ನಮಗೆ ತೊಂದರೆ ಉಂಟುಮಾಡುವ ಉದಾಹರಣೆಗೆಗಳು ಬಹಳಷ್ಟು ಇವೆ,
ಕೋಪದಲ್ಲಿ ಕೊಯ್ದ ಮೂಗು ಮತ್ತೆ ಬಾರದು ಎಂಬಂತೆ ಕೋಪಿಸಿಕೊಳ್ಳುವ ಮೊದಲು ಅದರಿಂದಾಗುವ ಅನಾಹುತಗಳ ಬಗ್ಗೆ ಯೋಚಿಸಬೇಕಿದೆ.
ಕೋಪವು ಮೊದಲು ಯಾರಲ್ಲಿ ಉತ್ಪತ್ತಿಯಾಗುತ್ತದೋ ಅವರನ್ನೇ ದಹಿಸಿ ನಂತರ ಇತರರ ದಹಿಸುತ್ತದೆ.
ನಾವು ಕೆಲವೊಮ್ಮೆ ಜೀವನದಲ್ಲಿ ಎಲ್ಲದಕ್ಕೂ ಪ್ರತಿಕ್ರಿಯೆ ನೀಡುತ್ತಾ ನಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡಿಕೊಂಡು ನಂತರ ಕೊರಗುತ್ತೇವೆ, ಅನವಶ್ಯಕವಾಗಿ ಇತರರ ಮೇಲೆ ಕೋಪಮಾಡಿಕೊಂಡು ನಮ್ಮ ಮುಖದ 43 ಸ್ನಾಯುಗಳಿಗೆ ಕೆಲಸ ನೀಡಿ ನಮ್ಮ ಆರೋಗ್ಯವನ್ನು ನಾವೇ ಹಾಳು ಮಾಡಿಕೊಳ್ಳುವುದು ಬೇಡ, ಅದರ ಬದಲಾಗಿ ನಮ್ಮ ಕೋಪವನ್ನು ನಿಯಂತ್ರಣ ಮಾಡಿಕೊಂಡು ಕೇವಲ 17 ಸ್ನಾಯುಗಳ ಬಳಸಿಕೊಂಡು ನಗುತ್ತಾ ಜೀವಿಸೋಣ.ಬೇರೆಯವರ ಜೀವನದಲ್ಲೂ ನಗು ತರಲು ಪ್ರಯತ್ನಿಸಿಸೋಣ.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
ಕಥೆ
ಆದರ್ಶ ರೈತ
ಆರು ತಿಂಗಳಿಗೋ ಮೂರು ತಿಂಗಳಿಗೋ ಒಂದೋ ಎರಡೋ ಕಾರು ಬಂದರೆ ,ಆ ಕಾರಿನ ಹಿಂದೆ ದೂಳಿನ ಜೊತೆಗೆ ಓ .... ಎಂದು ಸಂತಸದಿ ಕೇಕೇ...ಹಾಕಿ ಓಡುತ್ತಿದ್ದರು ಆ ಹಳ್ಳಿಯ ಮಕ್ಕಳು.
ಅಂದು ಸೋಮವಾರ ಕೆಂಪು ಬಣ್ಣದ ಕಾರೊಂದು ಹಳ್ಳಿಗೆ ಆಗಮಿಸಿತು ,ಕಾರಿನ ಸದ್ದಿಗಿಂತ ಊರ ಹುಡುಗರ ಸದ್ದಿನಿಂದಲೇ ಊರವರಿಗೆ ಅರ್ಥವಾಯಿತು ,ಊರಿಗೆ ಯಾವುದೋ ಕಾರು ಬಂದಿದೆ ಎಂದು.
"ಇಲ್ಲಿ ಸತೀಶ್ ಅವರ ಮನೆ ಎಲ್ಲಿ? "
ಕಪ್ಪನೆಯ ಕನ್ನಡಧಾರಿ ಕಾರಿನಿಂದ ಇಳಿದು , ಮುಖಕ್ಕೆ ಮುತ್ತುತ್ತಿದ್ದ ಕೆಂಧೂಳನ್ನು ಎಡಗೈಯಿಂದ ಬೀಸಿಕೊಳ್ಳುತ್ತಾ ಕೇಳಿದರು.
"ಯಾವ ಸತೀಸಾ? ಸ್ವಾಮಿ .
ಭೂದೇವಮ್ಮನ ಮಗ ಸತೀಸಾನಾ?..
ವಡ್ಡರ ಸತೀಸಾನ? ಮ್ಯಾಗಳ್ ಮನೆ ಸತೀಸನಾ?" ಹಲ್ಕಿರಿಯುತ್ತಾ , ಎಲೆ ಅಡಿಕೆಯಿಂದ ಕೆಂಪಾದ ಹಲ್ಲುಗಳ ದರ್ಶನ ಮಾಡಿಸುತ್ತಾ ಪ್ರಶ್ನೆ ಹಾಕಿದ ವ್ಯಕ್ತಿಗೇ ಮರುಪ್ರಶ್ನೆ ಹಾಕಿದ ಆನಂದ.
" ಅದೇ ರೀ ನಿಮ್ ಊರಾಗೆ ರೇಷ್ಮೆ ಬೆಳೆ ಇದೆಯಲ್ಲ ಆ ಸತೀಶ್ "
"ಓ... ಅಂಗನ್ನಿ , ನಮ್ ಭೂದೇವಮ್ಮನ ಮಗ ಸತೀಸ ನಾ? ಬರ್ರೀ... ಇಲ್ಲೇ ನಮ್ಮೂರ್ ಇಸ್ಕೂಲ್ ಹಿಂದಿನ ಮನೆ , " ಎಂದು ಆ ವ್ಯಕ್ತಿಗಳನ್ನು ಭೂದೇವಮ್ಮನ ಮನೆ ಕಡೆ ಕರೆದುಕೊಂಡು ಹೋದ .
ಕೆಲವೊಮ್ಮೆ ಆ ಊರಿಗೆ ಕಾರು, ಜೀಪು ಬಂದರೆ ಜನರು ಭಯಭೀತರಾಗುತ್ತಿದ್ದರು ಕಾರಣ ಪಿ ಎಲ್ಡಿ ಬ್ಯಾಂಕ್ ನವರು ಸಾಲ ವಸೂಲಿ ಮಾಡಲು ಬಂದು, ಕೆಲವೊಮ್ಮೆ ಸಾಲ ಪಡೆದವರ ಮನೆಯಲ್ಲಿ ಇರುವ ಪಾತ್ರೆ ,ಪಗಡ, ಸಾಮಾನುಗಳನ್ನು ಜಪ್ತೀ ಮಾಡಿಕೊಂಡು ಹೊರಡುತ್ತಿದ್ದರು, ಬಹುತೇಕ ರೈತಾಪಿ ಜನರ ಊರಲ್ಲಿ, ಕೆಲವರು ಸಾಲ ಮಾಡಿ ತೀರಿಸಲು ಆಗದಿದ್ದಾಗ ,ಯಾವುದೇ ಕಾರು ಜೀಪು ಬಂದರೆ ಅದು ಸಾಲ ವಸೂಲಿ ಮಾಡುವ ಜೀಪು, ಎಂದು ಎದೆಯಲ್ಲಿ ಅಕ್ಕಿ ಕುಟ್ಟಿದ ಅನುಭವ, ಮೊದಲ ಸಾಲ ತೀರಿಸದೇ ನೊಂದ ರೈತಾಪಿ ಮಕ್ಕಳು, ಈ ಬ್ಯಾಂಕ್ ನವರು ಮನೆ ಬಳಿ ಬಂದು ರಾಧ್ದಾಂತ ಮಾಡಿ, ಇದ್ದ ಬದ್ದ ಸಾಮಾನುಗಳನ್ನು ಜಪ್ತೀ ಮಾಡಿದಾಗ ಎಷ್ಟೋ ರೈತರು ಅವಮಾನ ತಾಳದೇ ನೇಣಿಗೆ ಶರಣಾದ ಉದಾಹರಣೆ ಗಳೂ ಉಂಟು.
ಕನ್ನಡಕ ದಾರಿ ವ್ಯಕ್ತಿ ಯ ಜೊತೆಯಲ್ಲಿ ನಾಲ್ಕೈದು ವ್ಯಕ್ತಿಗಳು ತಮ್ಮ ಮನೆ ಕಡೆ ಬರುವುದ ನೋಡಿ , ಭೂದೇವಮ್ಮನಿಗೆ ಜೀವ ಹೋದಂತಾಯಿತು, ಮನದಲ್ಲೇ ಮಗನನ್ನು ಶಪಿಸಲು ಆರಂಭಿಸಿದರು ,
"ಬ್ಯಾಡ ಕಣಪ್ಪ ನಮಗೆ ನೀರಾವರಿ ಸವಾಸ, ಬರೇ ಬೆದ್ಲೇ ಸಾಕು, ಏನೋ ಭಗವಂತ ಎಲ್ಡೊರ್ಸ ಸೆನಾಗಿ ಬೆಳೆ ಕೊಟ್ಟದಾನೆ, ಅಂದ್ರೆ ಕೇಳ್ದಂಗೆ ,ನಿಗಿರ್ಕೆಂಡ್ ಪಿ ಎಲ್ಡಿ ಬ್ಯಾಂಕ್ ನಾಗೆ ಸಾಲ ಮಾಡಿ ಬೋರ್ ಕೊರ್ಸಿ ಅದೆಂತದೋ ರೇಷ್ಮೆ ಹಾಕಿದ , ಈಗ ನೋಡು ಸಾಲ ಕೇಳಾಕೆ ಬರ್ತದಾರೆ, ಸಿಕ್ ವಯಸ್ಸಲ್ಲೇ ಗಂಡುನ್ ಕಳ್ಕಂಡ್ರು, ಕೂಲಿ ನಾಲಿ ಮಾಡಿ ,ಹೊಟ್ಟೆ ಬಟ್ಟೇ ಕಟ್ಟಿ , ಮಕ್ಕಳನ್ ದೊಡ್ಡೋರ್ ಮಾಡಿ, ಎಲ್ಲಾರ್ತಾವ ಸೈ ಅನಿಸ್ಕೆಂಡಿದ್ದೆ , ಈಗ ಈಸ್ ದಿನ ಕಾಪಾಡ್ಕೆಂಡು ಬಂದ ಮಾನ ಮಾರ್ಯಾದೆ ಹರಾಜಾಗೋ ಅಂಗಾತಲ್ಲಪ್ಪ ,ಮೂಡ್ಲಗಿರಿ ತಿಮ್ಮಪ್ಪ ,ಈಗ ನಾನೇನು ಮಾಡ್ಲಿ? ಎಂದು ಬೇಸರದಿ ನಿಂತರು ಭೂದೇವಮ್ಮ.
" ಸತೀಶ್ ಅವರ ಮನೆ ಇದೇ ಏನಮ್ಮ,"
" ಹೂಂ ..ಕಣ್ಸಾಮಿ, ನಾನು ಅವ್ರ ಅಮ್ಮ, ಸತೀಸಾ ತೋಟುಕ್ ಹೋಗಿದಾನೆ ಯಾಕ್ ಸಾಮಿ"
"ಹತ್ರಿ ಕಾರು, ನೀವೂ ತೋಟಕ್ಕೆ ಹೋಗೋಣ " ಅಂದರು ಅಧಿಕಾರಿ
ಮತ್ತೆ ಭಯಭೀತರಾದ ಭೂದೇವಮ್ಮ, ಸಂಗೇನಹಳ್ಳಿಯಲ್ಲಿ ಸಾಲ ಕಟ್ಟಲು ತಕರಾರು ಮಾಡಿ ಗಲಾಟೆ ಮಾಡಿದ ಸಂಗಪ್ಪನನ್ನು ಕಾರಲ್ಲಿ ಕೂರಿಸಿಕೊಂಡು ಪೋಲೀಸ್ ಸ್ಟೇಷನ್ ಗೆ ಕರೆದುಕೊಂಡು ಹೋಗಿದ್ದ ವಿಷಯವನ್ನು ಮುಂದಿನ ಮನೆ ನಾಗಮ್ಮ ಹೋದ ವಾರ ಹೇಳಿದ್ದು ನೆನೆದು
ಮತ್ತೂ ಭಯವಾಯಿತು.
"ಯಾಕೆ ಸಾಮಿ, ನಾನು ಕಾರು ಗೀರು ಹತ್ತಲ್ಲ, " ಎಂದು ಅಳುಕುತ್ತಲೇ ಹೇಳಿದರು .
"ಅದೇನ್ ಇಸ್ಯ ,ಹೇಳ್ರೀ ಸಾರ್, ಪಾಪ ಆ ಹೆಣ್ಣೆಂಗ್ಸು ಭಯ ಬೀಳ್ತೈತೆ , ನೀವು ನೋಡಿದ್ರೆ ಕಾರ್ ಹತ್ತು ಅಮ್ತೀರಾ, ಯಾಕೆ , ಏನು ಎತ್ತ, " ಎಂದು ಕುರಿ ಹಟ್ಟಿಯ ಕಡೆ ಕುರಿಮರಿಗಳಿಗೆ ಮೇವು ಹಾಕಲು ಹೊರಟ ಲಿಂಗಣ್ಣ ಮೇವು ಆ ಕಡೆದು ಎಸೆದು ಭೂದೇವಮ್ಮನ ಮನೆಯ ಕಡೆ ಬಂದು ನಿಂತು ಕೇಳಿದ.
ಭೂದೇವಮ್ಮನಿಗೆ ಸ್ವಲ್ಪ ಧೈರ್ಯ ಬಂತು.
"ಯಜಮಾನ್ರೇ ನಾವು ಬಬ್ಬೂರು ಕೃಷಿ ಸಂಶೋಧನಾ ಕೇಂದ್ರದಿಂದ ಬಂದಿದಿವಿ, ನಿಮ್ ಊರ ಸತೀಶ್ ಅವ್ರಿಗೆ , ಈ ವರ್ಷದಲ್ಲಿ ಬೆಳೆದ ರೇಷ್ಮೆ ಬೆಳೆಗೆ ಜಿಲ್ಲಾ ಅತ್ಯುತ್ತಮ ಕೃಷಿಕ ಎಂಬ ಬಹುಮಾನ ಬಂದಿದೆ ಮತ್ತು ರಾಜ್ಯ ಮಟ್ಟದ ಬಹುಮಾನಕ್ಕೆ ಇವರ ಹೆಸರನ್ನು ಶಿಪಾರಸ್ಸು ಮಾಡಿದ್ದೇವೆ " ಎಂದಾಗ ಬಾಳ ಒಳ್ಳೆ ಸುದ್ದಿ ಸಾರ್ ,ಎಂದು ಲಿಂಗಣ್ಣ ಹೇಳುವಾಗಲೇ ಭೂದೇವಮ್ಮನಿಗೆ ಹೋದ ಜೀವ ಬಂದಂತಾಗಿ ಮನೆಯ ದೇವರ ಕೋಣೆಗೆ ಹೋಗಿ " ತಿರುಪತಿ ತಿಮ್ಮಪ್ಪ ನೀನು ದೊಡ್ಡಾನು ಕಣಪ್ಪ" ಎಂದು ಕೈಮುಗಿದು ,ಮನೆಯ ಹೊರಗೆ ಬಂದರು.
"ಈಗ ಬರ್ತೀರಲ್ಲ ಬನ್ನಿ ನಿಮ್ಮ ತೋಟ ತೋರ್ಸಿ ಅಮ್ಮ...
ಇನ್ನೂ ಒಂದ್ ಸೀಟ್ ಖಾಲಿ ಇದೆ ನೀವೂ ಬರಬಹುದು" ಎಂದು ಲಿಂಗಣ್ಣನಿಗೆ ಆ ಅಧಿಕಾರಿ ಹೇಳಿದ್ದೆ ತಡ
"ಲೇ ಪಾತಲಿಂಗ.... ನಮ್ ಕುರಿಯಟ್ಟಿತಾಕೋಗಿ ಆ ಸೊಪ್ಪು ಮರಿಗೆ ಹಾಕಲೆ" ಎಂದು ತನ್ನ ಮಗನಿಗೆ ಹೇಳಿ ಕಾರು ಹತ್ತಿಯೇ ಬಿಟ್ಟ.
ಕೆಂಧೂಳಿನೊಂದಿಗೆ ಕಾರು ಚಲಿಸಿದಾಗ ಮತ್ತೆ ಮಕ್ಕಳು ಓ... ಎಂದು ಕಾರಿನ ಹಿಂದೆ ಓಡಿದರು.
ಮನೆಯಿಂದ ಎರಡು ಕಿಲೋಮೀಟರ್ ದೂರ ಇರುವ ತೋಟದ ಕಡೆ ಕಾರು ಚಲಿಸಿತು ಕಲ್ಲು ಮಣ್ಣಿನ ರಸ್ತೆಯಲ್ಲಿ , ಕಾರಿನಲ್ಲಿ ಕುಳಿತವರು ತಾವೆ ತಾವಾಗಿ ಮೈ ಕುಣಿಸುತ್ತಿರುವರೋ ಎಂಬಂತೆ ಕಾರ್ ಇವರನ್ನು ಕುಣಿಸುತ್ತಿತ್ತು ,ತೋಟ ಬರುವವರೆಗೂ ಲಿಂಗಣ್ಣ ಅಧಿಕಾರಿಗಳಿಗೆ ಸತೀಶನ ಸದ್ದುಣಗಳ ಬಗ್ಗೆ ವರ್ಣನೆ ಮಾಡುತ್ತಲೇ ಇದ್ದರು, ಭೂದೇವಮ್ಮ ಒಳಗೊಳಗೇ ಹೆಮ್ಮೆ ಪಡುತ್ತಿದ್ದರು.
ಸಲಿಕೆ ಹಿಡಿದು ರೇಷ್ಮೆ ತೋಟಕ್ಕೆ ನೀರು ಹರಿಸುತ್ತಿದ್ದ ಸತೀಶ್ , ತನ್ನ ಹೊಲದ ಕಡೆ ಕಾರು ಬರುತ್ತಿರುವುದನ್ನು
ದೂರದಿಂದಲೇ ನೋಡಿದ, ಅಚ್ಚರಿ ಮತ್ತು ಕುತೂಹಲದಿಂದ ರಸ್ತೆಯ ಕಡೆಗೆ ಬಂದ, ಕಾರು ತನ್ನ ತೋಟದ ಬಳಿ ನಿಂತಿತು ,ಕಾರಿನಿಂದ ಪ್ಯಾಂಟ್ ಶರ್ಟ್ ಧಾರಿಗಳು ಇಳಿದರು, ಅವರ ಜೊತೆ ತನ್ನ ತಾಯಿ ಭೂದೇವಮ್ಮ, ಮತ್ತು ಲಿಂಗಣ್ಣ ಇಳಿದದ್ದು ನೋಡಿ ಗಾಬರಿಯಿಂದ ಕಾರಿನ ಕಡೆಗೆ ನಡೆದ.
" ಕಂಗ್ರಾಜುಲೇಶನ್ಸ್ ಸತೀಶ್ ..." ಎಂದು ಕನ್ನಡಕಧಾರಿ ವ್ಯಕ್ತಿ ಸತೀಶನ ಕೈ ಕುಲುಕಿದ , ಸತೀಶನಿಗೆ ಮತ್ತೂ ಗೊಂದಲವಾಗಿ ,ಅಮ್ಮ ,ಅಮ್ಮ ಲಿಂಗಣ್ಣ ನ ಕಡೆ ನೋಡಿದ
"ಏ .. ನಿನಿಗೆ ಪ್ರಶಸ್ತಿ ಬಂದೈತಂತಪ್ಪ,..
ಇಡೀ ಜಿಲ್ಲೆಗೆ ನೀನು ರೇಷ್ಮೆ ಸೆನಾಗಿ ಬೆಳ್ದದಿಯಾ ಅಮ್ತ , ನಿನಗೆ ಪ್ರಶಸ್ತಿ ಕೊಡ್ತಾರಂತೆ " ಲಿಂಗಣ್ಣ ಜೋರು ಧ್ವನಿಯಲ್ಲಿ ಹೇಳಿದ.
"ತ್ಯಾಂಕ್ಯೂ ಸರ್ ಬನ್ನಿ, ತೆಂಗಿನ ಮರ ಇನ್ನೂ ಎಳನೀರು ಬಿಟ್ಟಿಲ್ಲ , ಕುಡಿಯೋದಿಕ್ಕೆ ನೀರ್ ಕೊಡ್ಲಾ..ಸರ್..? ಕೇಳಿದ ಸತೀಶ.
"ಬೇಡ ಬನ್ನಿ ನಾವೇ ನಿಮಗೆ ,ಪ್ರಶಸ್ತಿ ಪತ್ರ, ಹಾರ, ಚೆಕ್, ಕೊಡ್ತೀವಿ, ಏ .. ರಮೇಶ, ಆ ಬ್ಯಾನರ್, ಪ್ರಶಸ್ತಿ ಅವನ್ನೆಲ್ಲ ತೊಗೊಂಬಾ..." ಎಂದು ಕೂಗಿದರು ಬಬ್ಬೂರು ಕೃಷಿ ಸಂಶೋಧನಾ ಸಂಸ್ಥೆಯ ರಾಧಾಕೃಷ್ಣನ್ ಕರ್ಜಗಿ ರವರು
"ಜಿಲ್ಲಾ ಮಟ್ಟದ ಆದರ್ಶ ರೈತ ಪ್ರಶಸ್ತಿ ವಿತರಣಾ ಸಮಾರಂಭ " ಎಂಬ ಬ್ಯಾನರ್ ಹಿಡಿದು ಇಬ್ಬರು ನಿಂತರು , ಕಾರು ನೋಡಿ ಅಕ್ಕಪಕ್ಕದ ತೋಟದ ರೈತರು ಸೇರಿ ನಲವತ್ತಕ್ಕೂ ಹೆಚ್ಚು ಜನ ಸೇರಿದ್ದರು,
"ಬಾಪ್ಪ ಸತೀಶ್ ಈ ಬ್ಯಾನರ್ ಮುಂದೆ ನಿಲ್ಲು ಪ್ರಶಸ್ತಿ ಕೊಡುತ್ತೇವೆ" ಎಂದರು ಕರ್ಜಗಿ ರವರು.
"ಸಾರ್ ನಾನು ಏನೇ ಮಾಡಿದ್ದರೂ ಅದಕ್ಕೆ ಸ್ಪೂರ್ತಿ, ಮತ್ತು ಕಾರಣ ನನ್ನ ಅಮ್ಮ ದಯವಿಟ್ಟು ನೀವು ಏನೇ ಕೊಟ್ಟರೂ ನನ್ನ ಅಮ್ಮನಿಗೆ ಕೊಡಿ ಸಾರ್" ಎಂದನು ಸತೀಶ.
"ಇದು ತಾಯಿ ಬಗ್ಗೆ ,ಪ್ರೀತಿ ಮತ್ತು ಗೌರವ ತೋರ್ಸೋ ರೀತಿ, ವೆರಿ ಗುಡ್ ನಿನ್ನಂತಹ ಮಕ್ಕಳು ಇರಬೇಕು ಕಣಪ್ಪ, ಆಯ್ತು ನಿಮ್ಮ ಅಮ್ಮನೂ ಬರ್ತಾರೆ ನೀನು ಬಾ" ಎಂದು ಬಲವಂತ ಪಡಿಸಿದ್ದಕ್ಕೆ
ಸತೀಶ ಅಮ್ಮನಜೊತೆ ಪ್ರಶಸ್ತಿ ಸ್ವೀಕಾರ ಮಾಡಿದ .
ಒಂದು ಪ್ರಶಸ್ತಿ ಪತ್ರ, ಗಂಧದ ಹಾರ, ಹಣ್ಣಿನ ಬುಟ್ಟಿ, ಮತ್ತು ಹತ್ತು ಸಾವಿರದ ಚೆಕ್ ನೀಡಿದರು,
"ನೋಡು ಸತೀಶ್ ಈ ಹಣವನ್ನು ಒಳ್ಳೆಯ ಕಾರ್ಯಕ್ಕೆ ಬಳಸಿಕೋ, ನಿನ್ನ ಹೆಸರನ್ನು ರಾಜ್ಯ ಮಟ್ಟಕ್ಕೆ ಕಳಿಸಿರುವೆ ,ನಿನಗೆ ಅದೃಷ್ಟ ಇದ್ದರೆ ಇದೇ ತರಹದ ಪ್ರಶಸ್ತಿಯನ್ನು ನೀಡಿ ರಾಜ್ಯದ ಮುಖ್ಯ ಮಂತ್ರಿಯವರು ನಿನ್ನ ಸನ್ಮಾನ ಮಾಡ್ತಾರೆ, ಒಳ್ಳೆದಾಗಲಿ, ರೇಷ್ಮೆಯಲ್ಲಿ ಇನ್ನೂ ಹೆಚ್ಚಿನ ಇಳುವರಿ ಪಡೆದು ಎಲ್ಲಾ ರೈತರಿಗೆ ಮಾದರಿಯಾಗು " ಎನ್ನುತ್ತಲೇ ಅಲ್ಲಿದ್ದವರು ಚಪ್ಪಾಳೆ ತಟ್ಟಿದರು.
ರೇಷ್ಮೆ ತೋಟ ಮತ್ತು ಪ್ರಶಸ್ತಿ ಪಡೆದ ಫೋಟೋಗಳನ್ನು ತೆಗೆಯಲಾಯಿತು ,
"ಸತೀಶ್ ನಿನಗೂ ಒಂದು ಪೋಟೋ ಕಳಿಸುತ್ತೇವೆ "ಎಂದರು ಕರ್ಜಗಿ ಸಾಹೇಬರು,
"ನಾನೂ ಬಿದ್ದಿದಿನಾ ಸಾ...." ಎಂದು ಕೇಳಿದ ಲಿಂಗಣ್ಣ
"ಹೂನಪ್ಪ ಬಿದ್ದಿದಿಯಾ ,ಈಗ...ಎತ್ತಬೇಕು " ಎಂದರು ಸಾಹೇಬರು
ಎಲ್ಲರೂ ಗೊಳ್ ಎಂದು ನಕ್ಕರು .
ಕಾರು ಊರ ಕಡೆ ಚಲಿಸಿತು. ಜನರು ಕಾರನ್ನು ಹಿಂಬಾಲಿಸಿದರು .
ಅಮ್ಮ. ಮಗನ ಕಣ್ಣುಗಳಲ್ಲಿ ಸಂತೋಷ ತುಂಬಿತುಳುಕುತ್ತಿತ್ತು.
ಒಂದು ವಾರದ ಬಳಿಕ ಬಬ್ಬೂರಿನಿಂದ ಪ್ರಶಸ್ತಿ ಪೋಟೋ ಬಂದಿತ್ತು, ಅಂದೇ ಹೊಳಲ್ಕೆರೆ ಗೆ ಕೆಲಸವಿದೆ ಎಂದು ಹೋದ ಸತೀಶ ಸಂಜೆ ಬಂದ,
"ಅಮ್ಮ ತಗೋ ನಿನಗೆ ನನ್ನ ಕಡೆಯಿಂದ ಒಂದು ಗಿಪ್ಟ್ ,ತೆಗೆದು ನೋಡು " ಎಂದನು
ಭೂದೇವಮ್ಮ ಕವರ್ ತೆಗೆದು ನೋಡಿದರು.
ಬಂಗಾರದ ಸರ!!!
ಇದೇನಪ್ಪ ಇದೆನ್ಯಾಕೆ ತಂದೆ, ಅದ್ರ ಬದ್ಲು ,ಪಿ. ಎಲ್ಡಿ ಬ್ಯಾಂಕ್ ಸಾಲ ತೀರಿಸ್ ಬೋದಾಗಿತ್ತು," ಎಂದರು ಭೂದೇವಮ್ಮ
"ಅಮ್ಮಾ ನಾಲ್ಕು ತಿಂಗಳು ಹಿಂದೆನೇ ಸಾಲ ತೀರಿದೆ , ನೀನೇನು ಯೋಚನೆ ಮಾಡಬೇಡ " ಸತೀಶ ಹೆಮ್ಮೆಯಿಂದ ಹೇಳಿದ
ಭೂದೇವಮ್ಮ
ಕೈಯಲ್ಲಿರುವ ಬಂಗಾರದ ಸರವನ್ನು ಒಮ್ಮೆ, ಸತೀಶನ ಪ್ರಶಸ್ತಿ ಪೋಟೋವನ್ನು ಒಮ್ಮೆ, ಹಾರ ಹಾಕಿರುವ ಶ್ರೀನಿವಾಸಯ್ಯನವರ ಪೋಟೋವನ್ನು ಒಮ್ಮೆ ನೋಡುತ್ತಾ.....
"ಈಗ ನಿಮ್ ಅಪ್ಪ ...ಇರ್ಬೇಕಿತ್ತು ಕಣಪ್ಪ..."ಎಂದಾಗ ಕಣ್ಣಿಂದ ನಾಲ್ಕು ಹನಿಗಳು ಉದುರಿದವು.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
*ಸದಾ ಜಗೃತವಾಗಿರಿ*
ಸದಾ ಜಾಗೃತವಾಗಿರಿ
ಮೈಯಲ್ಲಾ ಕಣ್ಣಾಗಿರಿ
ಕಷ್ಟಗಳು ಸಾಮಾನ್ಯ
ಹತ್ತುವಾಗ ಗಿರಿ|
ತುತ್ತ ತುದಿ ಏರಿದಾಗ
ಸಂತಸದಿಂದಿರಿ
ಆದರೆ ...
ತುತ್ತು ಕೊಟ್ಟವಳ
ಮರೆಯದಿರಿ....||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
*ತಗೊಂಡಿದ್ದೀರಾ?*
ಎದುರುಗಡೆ ಸಿಕ್ಕಿದವರಿಗೆಲ್ಲ
ಸುಮ್ಮನೆ ಕೇಳಿದೆ
ತಗೊಂಡಿದ್ದೀರಾ?|
90% ಜನ ಅಂದರು
ವೈನ್ ಶಾಪ್ ಬಂದ್ ಆಗಿದೆ
ನೀವೇ ನೋಡಿದ್ದೀರಾ ||
5% ಜನರೆಂದರು ನಾವು
ಎಣ್ಣೆ ಹಾಕಲ್ಲ ಏನ್
ಇಂಗ್ ಕೇಳ್ತಿದ್ದೀರಾ?|
5% ಜನ ಮಾತ್ರ ಕೇಳಿದರು
ಲಸಿಕೆ ಸ್ಟಾಕ್ ಇದ್ದಾಗ
ಪ್ಲೀಸ್ ತಿಳಿಸ್ತೀರಾ?||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು