22 May 2021

ಕಾಯಕ ? ಕಿರುಗಥೆ


 


*ಇರುವುದೆಲ್ಲವ ಬಿಟ್ಟು* ಕಿರು ಕಥೆ


ಸುರೇಶ ಟೀ ಕಪ್ ಹಿಡಿದು ಪಡಸಾಲೆಯಲ್ಲಿ ಕುಳಿತಿದ್ದ,

ಅವನ ಅಮ್ಮ "ಏನೋ ಹುಡ್ಗ ನೀನು,  ಇಪ್ಪತ್  ವರ್ಸದಾಗೆ ಇಪ್ಪತ್ ಕೆಲ್ಸ ಬಿಟ್ ಬಿಟ್ಯಲ್ಲೋ , ನನ್ಗೂ ವಯಸ್ಸಾತು, ದುಡಿಯಾಕ್ ಹೋಗ್ಲಿಲ್ಲ ಅಂದರೆ ಯಂಗಪ್ಪ ಜೀವ್ನ ಮಾಡಾದು" 


"ನಾನೇನ್ ಮಾಡಾನವ್ವ ,ಎಲ್ಲಿಗೆ ಕೆಲ್ಸಕ್ಕೆ ಹೋದ್ರು ಏನಾದ್ರು ಸಮಸ್ಯೆ ನನ್ ತಪ್ ಇಲ್ದಿದ್ರೂ ಕೆಲ್ಸ ತೆಗಿತಾರೆ, ಮೊನ್ನೆ ಕೆಲ್ಸ ಬಿಟ್ಟ ಡಾಕ್ಟ್ರು ಕ್ಲಿನಿಕ್ ನಾಗೆ ,ಆ ಡಾಕ್ಟ್ರು ನರ್ಸ್ ತಬ್ಬಿಕೆಂಡು ಕುಂತ್ಗಂಡಿದ್ದ, ನಾನು ಎಲ್ಲಾರ್ನ ಕರ್ದು ತೋರಿಸ್ದೆ ,ಆಯಪ್ಪ ಸಿಟ್ ಬಂದು ಕೆಲ್ಸದಿಂದ ತೆಗೆದ, ಇದು ನನ್ ತಪ್ ಏನವ್ವ" ಮುಗ್ದವಾಗಿ ಕೇಳಿದ ಸುರೇಶ


"ಅದ್ಸರಿ ಆ ಪೆಟ್ರೋಲ್ ಬಂಕ್ ,ಕೆಲ್ಸ ಯಾಕ್ ಬಿಟ್ಟೆ"


"ಮೊದಲು ನನಗೆ ಗೊತ್ತಿರಲಿಲ್ಲ ಒಂದು ಲೀಟರ್ ಪೆಟ್ರೋಲ್ ಅಂತ ಹಾಕಿದ್ರೆ ಬರೀ ಮುಕ್ಕಾಲು ಮಾತ್ರ ಬರುತ್ತೆ ಅಂತ ರಮೇಶ ಒಂದಿನ ನನ್ ಕಿವಿಯಾಗೆ ಹೇಳಿದ್ದ, ನಾನು ಪೆಟ್ರೋಲ್ ಹಾಕಿಸಿಕೊಳ್ಳಾಕೆ ಬರೋರ ಕಿವಿಯಾಗ್ ಹೇಳ್ದೆ, ಜನ ಒಟ್ಟಾಗಿ ಬಂದು ನಮ್ಮ ಸಾವ್ಕಾರ್ ಮೇಲೆ ಗಲಾಟೆ ಮಾಡಿದ್ರು, ಇದಕ್ಕೆ ಕಾರಣ ನಾನಾ? ಇದು ನನ್ ತಪ್ಪಾ? ನೀನೇ ಹೇಳವ್ವ.ಕೇಳಿದ ಮಗ


ಹೀಗೆ ಇಪ್ಪತ್ತು ಕೆಲಸ ಬಿಟ್ಟಿದ್ದಕ್ಕೂ ಸುರೇಶನ ಬಳಿ ಸಮರ್ಥನೆ ಇತ್ತು ,ಅಮ್ಮನಿಗೂ ಇವನು ಸರಿ ಎಂದು ತಿಳಿದಿದ್ದರೂ, ಹೊಟ್ಟೆ ಪಾಡು ಕೇಳದೇ ಮಗನ ವಿರುದ್ಧ ಸಿಟ್ಟಿನಿಂದ ಮತ್ತೊಂದು ಕೆಲಸ ಹುಡುಕಲು ಹೇಳಿದರು.


ಅದೇ ಸಮಯಕ್ಕೆ ಇವರ ಮನೆಗೆ ಬಂದ ಮರಿಸಿದ್ದಪ್ಪ " ಏ.. ಸುರೇಶ ಗೊರಕೇದೇಪುರದಲ್ಲಿ ದೇವರ ಗುಡಿನಾಗೆ ಕೆಲ್ಸ ಮಾಡಾಕೆ ಯಾರೋ ಬೇಕು ಅಂದಿದ್ರು, ಹೋಗ್ತಿಯಾ? ಕೇಳಿದರು .

ಇರುವುದೆಲ್ಲವ ಬಿಟ್ಟ ಸುರೇಶ, ದೇವಾಲಯದ ಕೆಲಸ ಬಿಡುತ್ತಾನೆಯೇ?


ಇವತ್ತಿಂದಲೇ ಕೆಲಸಕ್ಕೆ ಹೋಗುವೆ ಅಣ್ಣ ಎಂದು ಸಿದ್ದನಾದ .


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

No comments: