ಮಾನವರಾಗೋಣ ಲೇಖನ ೨
ನಮ್ಮನ್ನು ನಾವು ಉದ್ಧರಿಸಿಕೊಳ್ಳೋಣ
ಬೆಳಗಿನ ವಾಯುವಿಹಾರದ ನಡಿಗೆಯ ನಂತರ, ವೈದ್ಯರ ಒಂದು ಗುಂಪು ಟೀ ಅಂಗಡಿಯಲ್ಲಿ ಟೀ ಕುಡಿಯುತ್ತಿದ್ದರು.
ಒಬ್ಬ ಮನುಷ್ಯ ದೂರದಿಂದ ಕುಂಟುತ್ತಾ ಬಹಳ ಶೋಚನೀಯವಾಗಿ ಬರುತ್ತಿದ್ದ..
ಅವನನ್ನು ನೋಡಿದ ಒಬ್ಬ ವೈದ್ಯರು ಇನ್ನೊಬ್ಬರಲ್ಲಿ ಮಾತನಾಡತೊಡಗಿದರು.
ಮೊದಲ ವೈದ್ಯರು ಹೇಳಿದರು - ಇವನಿಗೆ ನನ್ನ ಪ್ರಕಾರ ಎಡ ಮೊಣಕಾಲು ಸಂಧಿವಾತ ಆಗಿದೆ.ಎರಡನೇ ವೈದ್ಯರು" ಇಲ್ಲ ಇಲ್ಲ ನನ್ನ ಪ್ರಕಾರ 'ಪ್ಲಾಂಟರ್ ಫೆಸಿಟಿಸ್' ಆಗಿದೆ.
ಮೂರನೆಯ ವೈದ್ಯರು ಹೇಳಿದರು ಇಲ್ಲಪ್ಪ ಇವನಿಗೆ ಖಂಡಿತವಾಗಿ ಪಾದದ ಉಳುಕು ಇದೆ.
ನಾಲ್ಕನೇ ವೈದ್ಯರು ಹೇಳಿದರು - ಅವನನ್ನು ಸರಿಯಾಗಿ ನೋಡಿ ಆ ಮನುಷ್ಯನಿಗೆ ಒಂದು ಕಾಲು ಸರಿಯಾಗಿ ಎತ್ತಲು ಆಗುತ್ತಿಲ್ಲ ಅವನಿಗೆ ಕಾಲು ಹನಿ ಆಗಿದೆ.
ಐದನೇ ವೈದ್ಯರು ಹೇಳಿದರು - " ನನಗೆ ಅನಿಸುತ್ತದೆ ಹೆಮಿಪ್ಲೆಜಿಯಾದದಂತಹ ದೊಡ್ಡ ರೋಗ ಅವನನ್ನು ಆವರಿಸಿದೆ
ಆರನೇ ವೈದ್ಯರು ಏನಾದರೂ ಹೇಳುವ ಹೊತ್ತಿಗೆ, ಆ ಮನುಷ್ಯ ಅವರ ಬಳಿ ಬಂದು ಬಹಳ ನಯವಾಗಿ ಕೇಳಿದರು.
"ಸ್ವಾಮಿ ಹತ್ತಿರದಲ್ಲಿ ಎಲ್ಲಾದರೂ ಒಂದು ಚಮ್ಮಾರನ ಅಂಗಡಿ ಇದೆಯೇ?"
ಬರುವ ದಾರಿಯಲ್ಲಿ ನನ್ನ ಚಪ್ಪಲಿ ಹರಿದು ಹೋಯಿತು. ಎಂದಾಗ ಬೇಸ್ತು ಬೀಳುವ ಸರದಿ ವೈದ್ಯರದು.
ನಿರ್ದಿಷ್ಟವಾಗಿ ಒಂದು ವಿಷಯದ ಬಗ್ಗೆ ಎಲ್ಲರಿಗೂ ಮಾಹಿತಿ ಇದೆಯೋ ಇಲ್ಲವೋ, ಆದರೆ ತೋರ್ಪಡಿಸಿಕೊಳ್ಳಲು ಮಾತ್ರ ಎಲ್ಲರೂ ಜ್ಞಾನಿಗಳೇ....
ವ್ಯಕ್ತಿಗಳ ನಿಜವಾದ ಸಮಸ್ಯೆ, ಅವರ ಹಿನ್ನೆಲೆ ತಿಳಿಯದೇ ಇವರೇ ಒಂದು ತೀರ್ಮಾನಕ್ಕೆ ಬಂದು ಬಿಡುತ್ತಾರೆ, ಏನೂ ಗೊತ್ತಿಲ್ಲದೇ ಅವರ ವ್ಯಕ್ತಿತ್ವಕ್ಕೆ ಒಂದು ಸರ್ಟಿಫಿಕೇಟ್ ಸಹ ನೀಡಿ ಬಿಡುತ್ತಾರೆ .ಅದು ಬಹುತೇಕ ಬಾರಿ ನೆಗೆಟೀವ್ ಸರ್ಟಿಫಿಕೇಟ್ ಆಗಿರುತ್ತದೆ.
ನಮ್ಮಲ್ಲಿ ಬಹುತೇಕರಿಗೆ ಬೇರೆಯವರ ವಿಚಾರ ಎಂದರೆ ಏನೋ ಕೆಟ್ಟ ಕುತೂಹಲ, ಇನ್ನೂ ಕೆಲವರಿಗೆ ಬೇರೆಯವರ ಬಗ್ಗೆ ಮಾತನಾಡಿಕೊಳ್ಳದಿದ್ದರೆ ಅವರು ತಿಂದ ಅನ್ನ ಜೀರ್ಣವಾಗುವುದಿಲ್ಲ .ಇನ್ನೂ ಕೆಲವರು ತಮ್ಮ ಸಮಸ್ಯೆಗಳು ನೂರಿದ್ದರೂ ಬೇರೆಯವರ ಸಮಸ್ಯೆಗಳನ್ನು ಬಗೆಹರಿಸಲು ತಜ್ಞರಂತೆ ಮುಂದುಬೀಳುವರು, ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ ಇತರೆಯವರ ತಟ್ಟೆಯಲ್ಲಿ ನೊಣ ಹುಡುಕುವ ಪ್ರವೀಣರು ಇವರು.
ಅದಕ್ಕೆ ಅಣ್ಣನವರು " ನೆರೆಮನೆಯವರ ದುಃಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮದೇವ" ಎಂದು ಹೇಳಿರುವುದು.ಈ ನಿಟ್ಟಿನಲ್ಲಿ ನಾವು ಯೋಚಿಸಿದಾಗ ನಮ್ಮ ನ್ಯೂನತೆಗಳನ್ನು ಸರಿಪಡಿಸಿಕೊಂಡು ನಮ್ಮನ್ನು ನಾವು ಉದ್ದಾರ ಮಾಡಿಕೊಳ್ಳುವ ಕಡೆಗೆ ಗಮನ ಕೊಡಬೇಕು, ಅಂತೆಯೇ ಸ್ವಾಮಿ ವಿವೇಕಾನಂದರು ಹೇಳುತ್ತಾರೆ
" ನಿನ್ನನ್ನು ನೀ ಸುಧಾರಿಸಿಕೋ , ಜಗತ್ತಿನಲ್ಲಿ ಓರ್ವ ಮೂರ್ಖ ಕಡಿಮೆಯಾಗುತ್ತಾನೆ".
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
No comments:
Post a Comment