31 August 2020

ಯಾರು?

 ಕಳೆದ ವಾರದಿಂದ 

ಒಂದೇ ಪುಕಾರು|

ಚಂದನವನವನು

ನಶೆಯ ವನ 

ಮಾಡಿದವರಾರು||


ಸಿಹಿಜೀವಿ


ಹನಿ


 ಏಳು ಬೀಳು

ಉನ್ನತಿ ಅವನತಿ

ಏನೇ ಇದ್ದರೂ

ಈ ಜೀವನ ಸುಂದರ|

ಇದಕ್ಕೆ ಪುರಾವೆ ಬೇಕೇ?

ನೋಡಲ್ಲಿ ಬಾನಿನಲಿ 

ನಗುತಲಿರುವ ಚಂದಿರ||


*ಸಿಹಿಜೀವಿ*

*ಸಿ ಜಿ ವೆಂಕಟೇಶ್ವರ*

30 August 2020

ಇಲಿಯಂತಾದ ಮಾನವ


 ೨೦೨೦ ನಿಜಕ್ಕೂ

ಇಲಿಯಂತಹ ವರ್ಷ

ಬಹುತೇಕ ದಿನ 

ಇಲಿಯಂತೆ ನಾವಿದ್ದೆವು 

ಮನೆಯಲಿ.

ಕೆಲವೊಮ್ಮೆ ಆಹಾರ

ತರಲು ಹೊರಗೆ

ಹೋಗುತ್ತಿದ್ದೆವು

ಮನೆಯಿಂದಲಿ.

ಆಗಾಗ್ಗೆ ಆಹಾರ 

ಸಂಗ್ರಹ ಮಾಡುತ್ತಿದ್ದೆವು

ಮನೆಯಲಿ.

ಯಾರಾದರೂ ಹತ್ತಿರ

ಬಂದರೆ ಓಡಿ 

ಹೋಗುತ್ತಿದ್ದೆವು

ಮಾರು ದೂರದಲಿ.

ನಕ್ಕಿರಬಹುದು ಇಲಿ

ಮಾನವನಾದನು

ಇಲಿ ಈ ವರ್ಷದಲಿ?


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ಕಿತ್ತಾಟ ಏಕೆ?


 


ಕಿತ್ತಾಟವೇಕೆ ನಮ್ಮಲ್ಲಿ

ಯಾರು ಶ್ರೇಷ್ಠ ? ಯಾರು 

ಹೆಚ್ಚು ?ಎಂದು 

ಇಬ್ಬರೂ ಮಾಹಾಪುರುಷರೆ

ನಮ್ಮ  ರಾಯಣ್ಣ,ನಮ್ಮ ಛತ್ರಪತಿ


ಬೇಕಾಗಿಲ್ಲ ನಮಗೆ 

ರಾಜಕಾರಣಿಗಳ ಕಿತಾಪತಿ

ಕನಿಷ್ಠ ಬುದ್ದಿಯ 

ಬುದ್ದುಗಳಿಗೆ ಜ್ಞಾನೋದಯವ

ಮಾಡೋ ಸೀತಾಪತಿ .



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು.


19 August 2020

ಉದಕದೊಳಗಿನ ಕಿಚ್ಚು. ಕಾದಂಬರಿಯ ಭಾಗ ೧೨

    

"ಏ ಸತೀಶ ಇಬೂತಿ ತಾಂಬ ,ಆ ಕಡೆ ಮೀಸ್ಲು ನೀರು ಐತೆ ನೋಡು ತಗ, ಅರುಷ್ಣ ಕುಂಕುಮ ಹಚ್ಚು ,ಕಾಯ್ ಒಡಿ ಅಲ್ಲೇ ಕನಗ್ಲು ಐದಾವೆ ನೋಡು ಮುಡ್ಸು ,ಊದ್ಗಡ್ಡಿ ತಾಂಬ ಹಚ್ಚ್ಕೊಡ್ತೀನಿ ಟೈಮ್ ಆತು ಒಂಭತ್ತುವರೆ ಒಳಗೆ ಟೈಮ್ ಚೆನ್ನಗೈತಂತೆ ಐತಾರಪ್ಪ ಹೇಳವ್ರೆ ಬೇಗ ಪೂಜೆ ಮಾಡು " ಬಿಳಿಯಪ್ಪ ಹೇಳುತ್ತಲೇ ಇದ್ದ  ಒಂದೇ ಸಮನೆ ಹೇಳುವ ರೀತಿಯ ಕೇಳಿ ಗೊಂದಲಕ್ಕೆ ಒಳಗಾದರೂ ಪೂಜೆ  ಮಾಡುವಲ್ಲಿ ಸತೀಶ ನಿರತನಾಗಿದ್ದ ಕೆಲವೊಮ್ಮೆ ಮನದಲ್ಲೇ ಯಾಕೆ ಇಷ್ಟು ಬೇಗ ಪರೀಕ್ಷೆ ಮುಗಿತೋ ?ಯಾಕೆ ಬೇಗ ರಜಾ ಕೊಟ್ಟರೋ? ಮೂರು ದಿನದಿಂದ ಸುಜಾತ ನೋಡಕ್ಕಾಗಲಿಲ್ಲ ಸ್ಕೂಲ್ ಇದ್ದಿದ್ದರೆ ದಿನಾಲೂ ನೋಡ್ತಿದ್ದೆ.ಯಾವಾಗ ಪಾಸು ಪೇಲು ಹೇಳ್ತಾರೋ ಏನೋ " ಏ ಎಷ್ಟೊತ್ತಲೆ ಎತ್ತಿಗೆ ಪೂಜೆ ಮಾಡು ನಗಕ್ಕೆ ಊದಗಡ್ಡಿ ಬೆಳಗು" ಎಂದು ಬಿಳಿಯಪ್ಪ ಗದರಿದಾಗ ವಾಸ್ತವಕ್ಕೆ ಬಂದು ಪೂಜೆ ಊದುಗಡ್ಡಿ ಬೆಳಗಲು ಶುರುಮಾಡಿದ " ಲೇ ಅದೇನ್ ಪೂಜೆ ಮಾಡಾದ್ ಕಲ್ತಿದೆಯಲೇ ಹಣೆಗೆ ಕುಂಕುಮನೇ ಹಚ್ಕೊಂಡಿಲ್ಲ ಎಂದು ಪೇಪರ್ನಲ್ಲಿರುವ ಕುಂಕುಮ ಹೆಬ್ಬೆರಳಿನಿಂದ  ಹಿಡಿದು ಹಣೆಯ ಉದ್ದಕ್ಕೂ ಬಳಿದ " ಹೇ ಬಿಡು ಮಾಮ ನೀನು ಇಷ್ಟುದ್ದನೇ ಬಳಿಯೋದು" " ಇರಲಿ ಸುಮ್ಕಿರಲ ನೋಡೋ ನಾನು ಹಚ್ಕೊಂಡೆ " ಎಂದು ಹಣೆ ಉದ್ದಕ್ಕೂ ಕುಂಕುಮ ಬಳಿದುಕೊಂಡ  "ನಾವು ಹಿಂದುಗಳು ಕಣ್ಲಾ ಕುಂಕುಮ ಹಚ್ಕೊಳ್ಳಾಕೆ ನಾಚ್ಕೆ ಯಾಕೆ" ಅಂದ .ಬಾ ಇತ್ಲಾಗೆ ಹೊನ್ನರಾ ಹೊಡೆದು ಬತ್ತಿನಿ ಬಿಡು ಆ.. ಎಂದು ಎಡಗೈಯಲ್ಲಿ ಮಡಿಕೆಯ ಮೇಣಿ ಹಿಡಿದು ಬಲಗೈಯಲ್ಲಿ ಬಾರಿಕೋಲು ಹಿಡಿದು ಹೊಲದಲ್ಲಿ ಉಳಲು ಹೊರಟ ಬಿಳಿಯಪ್ಪ.

ಸತೀಶನಿಗೂ ಹೊನ್ನಾರ ಎಂದರೆ ಏನೆಂದು‌ ಗೊತ್ತಿರಲಿಲ್ಲ  ಬಿಳಿಯಪ್ಪ ಮನೆಯಿಂದ ಹೊಲಕ್ಕೆ ಬರುವ ದಾರಿಯಲ್ಲಿ ಹೇಳಿದ್ದ 

ಉಗಾದಿ ಹಬ್ಬದ ನಂತರ ‌ಬರುವ ಶ್ರೀರಾಮ ನವಮಿ ಹಬ್ಬದಂದು ಒಳ್ಳೆಯ ದಿನವಂತೆ  ಅಂದು ಒಳ್ಳೆಯ ಮಹೂರ್ತ ನೋಡಿ ಅವತ್ತು ಭೂಮಿ ತಾಯಿ ಪೂಜೆ ಮಾಡಿ ‌ಒಂದು ಗೀಟಾದ್ರೂ ಬೇಸಾಯ ಹೊಡೆದರೆ ಆ ವರ್ಷದ ಫಸಲು ಹೊನ್ನಂತೆ ಬೆಳೆದು ರೈತರಿಗೆ ಅನುಕೂಲವಾಗುತ್ತದೆ ಎಂಬ ನಂಬಿಕೆ ಇದೂ ಬಹುತೇಕ ನಿಜವೂ ಆಗಿತ್ತು. ಆದ್ದರಿಂದ ಊರಿನ ಎಲ್ಲಾ ರೈತರು ಏನು ಮರೆತರೂ  ಹೊನ್ನಾರ ಹೊಡೆವುದನ್ನು ಮರೆಯುವುದಿಲ್ಲ .


ದೊಡ್ಡಪ್ಪಗಳ ಕೆಂಗಲ ಹೊಲದಲ್ಲಿ ಮಡಿಕೆ ಹೊಡೆದಷ್ಟು ಬೆಣಚುಕಲ್ಲು ಭೂಮಿಯಿಂದ ತೇಲುತ್ತಲೇ ಇದ್ದವು .ಬೆಳಿಗ್ಗೆ ತಿಮ್ಮಕ್ಕ ಸೇರಿ ಸರಸ್ವತಜ್ಜಿ ಬಿಟ್ಟು  ಮನೆಯವರೆಲ್ಲ ಹೋಗಿ ತಂಪು ಹೊತ್ತಿನಲ್ಲಿ ದೊಡ್ಡ ಕಲ್ಲುಗಳನ್ನು ಒಂದೆಡೆ ಗುಡ್ಡೆ ಹಾಕಿ ಒಂದು ಈಚಲ ತೊಟ್ಟಿಯಲ್ಲಿ ತುಂಬಿ ತಲೆಯ ಮೇಲೆ ಹೊತ್ತು ಬದುವಿಗೆ ತಂದು ಹಾಕುತ್ತಿದ್ದರು .ಬೆಣಚುಕಲ್ಲು  ಆಯಿಸುವಾಗ ಎಲ್ಲರ ಕೈಗಳು ಒಂದಲ್ಲ ಒಂದು ಗಾಯವಾಗಿ  ಅಲ್ಲಲ್ಲಿ ಚಿಕ್ಕ ಚಿಕ್ಕ ಗಾಯಗಳಾಗಿ ರಕ್ತ ಬಂದಿತ್ತು .ಸತೀಶ ಅವನ ಕೈಗಾದ ರಕ್ತ ಮತ್ತು ಉಗುರುಗಳಿಂದ ಸಿಬಿರುಗಳನ್ನು ಎದ್ದದ್ದು ಕಂಡು ಯಾಕೋ ಅಂದು ಅಮ್ಮನ ನೆನೆಪಾಯಿತು . ನಮ್ಮಮ್ಮ ಈಗ ಎಲ್ಲಿರುವಳೋ? ಯಾರ ಮನೆಯಲ್ಲಿ ಕೂಲಿ ಮಾಡುವಳೋ? ಅವಳಿಗೂ ಈಗೆ ಗಾಯವಾಗಿರಬಹುದಾ? ಇಮ್ಮೆ ರಾಗಿ ಹೊಲ ಕೊಯ್ಯಲು ಹೋಗಿ ಎಡಗೈ ಕಿರುಬೆರಳು ಕೋಯ್ದುಕೊಂಡು ರಾತ್ರಿಯೆಲ್ಲ ನರಳಿದ್ದು ನೋಡಿ ನನಗೂ ಅಂದು ರಾತ್ರಿ ನಿದ್ರೆ ಬಂದಿರಲಿಲ್ಲ. ಅಮ್ಮ  ಊಟ ಮಾಡಿರುವಳೋ ಇಲ್ಲವೋ? ನನ್ನ ಹಾಗೆ ಅವಳಿಗೂ ನನ್ನ ನೆನಪಾಗುತ್ತಿರಬಹುದೇ? ಆಗದೇ ಏನು ಹೆತ್ತ ಕರುಳಲ್ಲವೇ? ಯಾಕೋ ಬಹಳ ದಿನಗಳ ನಂತರ ಸತೀಶನಿಗೆ ಸುಜಾತಳಿಗಿಂತ ಅಂದು ಅಮ್ಮ ಬಹಳ ನೆನಪಾಗುತ್ತಿತ್ತು.  "ಏ ಸತೀಶ ಬೇಗ ಕಲ್ಲು ಎತ್ತಿ ಹಾಕು ಬಿಸಿಲು ಜಾಸ್ತಿ ಆಗೋದ್ರೊಳಗೆ ಮನೆಗೆ ಹೋಗೋಣ " ಎಂದು ಮುರಾರಿ ಹೇಳುತ್ತಲೆ ಆತು ಮಾಮಾ ಎಂದು ತೊಟ್ಟಿ ಹೊತ್ತು ಬದುವಿನ ಕಡೆ ನಡೆದ.


ರಾತ್ರಿ ಅಮ್ಮನಿಗೆ ಅಂದಿನ ಹೊಲದಲ್ಲಿ ಮಾಡಿದ ಕೆಲಸದ ವರದಿ ಒಪ್ಪಿಸಿದ ಮುಕುಂದಯ್ಯ ನಾಳೆ ಏನು ಮಾಡಲಿ ಎಂಬುದನ್ನು ಅಮ್ಮನೇ ಹೇಳಲಿ ಎಂದು ಬಯಸಿದರು. ಮನೆಯಲ್ಲಿ ಕೊಟ್ಟು ತರುವುದು ಹಣಕಾಸಿನ ವ್ಯವಹಾರಗಳ ಮುಕುಂದಯ್ಯ ಮಾಡಿದರೂ ಹೊಲಮನೆಯ ಕೆಲಸಗಳನ್ನು ಹೇಗೆ ಮಾಡಬೇಕು? ಯಾವಾಗ ಮಾಡಬೇಕು ? ಎಲ್ಲಿಗೆ ಹೋಗಬೇಕು? ಮುಂತಾದವುಗಳನ್ನು ಅಮ್ಮನ ಕೇಳಿಯೇ ಮಾಡುತ್ತಿದ್ದರು.

" ಮಳೆ ಬರೋದ್ರೊಳಗೆ ತಿಪ್ಪೆಲಿರೋ ಗೊಬ್ರನ ಹೊಲಕ್ಕೇರಿ ,ಹಳ್ಡಿ ಕಬ್ಬುಣುದ್ ನೇಗಿಲೊಡಿಬೇಕು ,ಈ ವರ್ಷ ಕೆಂಗ್ಲೊಲ್ದಾಗೆ ಕಡ್ಲೆಕಾಯಿ ಹಾಕನಾ ,ಈ ವರ್ಸ ಭರಣಿ ಮಳೆ ಸೆನ್ನಾಗಿ  ಬರ್ಬೋದು ಸೇರಿಗ್ ಮಣ ಕಡ್ಲೇಕಾಯಿ ಆದರೆ ಒಳ್ಳೆ ಬೆಳೆ ಬರುತ್ತೆ ನಮ್ ಕೆಲ್ಸ ನಾವು ಮಾಡಾನ ಭೂಮ್ತಾಯಿ ಕೈ ಬಿಡಲ್ಲ  ಎಲ್ಲಾ ಆ ದೇವಿ ಒಳ್ಳೇದು ಮಾಡ್ತಾಳೆ " ಎಂದು  ಸರಸ್ವತಜ್ಜಿ ಹೇಳುತ್ತಲೆ " ಕೂಲೇರು ಯಾರೂ ಬರಲ್ಲ ಕಣವ್ವ ಎಲ್ಲ ಗೊಬ್ಬರ ಹೊಡಿತೈದಾರೆ " ಅಂದ ಬಿಳಿಯಪ್ಪ . ಆ ಮೂಲೆ ಮನೆ ಸೀತಪ್ಪನ ಮಗಳು ಶೀಲ ಗೊಬ್ಬರ ಹೊರತಾಳೆ ಗಾಡಿಗೆ ತುಂಬಾಕ್ ಸಾಕು ಅವರಪ್ಪ ಇವತ್ತು ಸಿಕ್ಕಿದ್ದ ಅವ್ರುದು ಗೊಬ್ಬರ ನಾಕು ಗಾಡಿ ಆಗುತ್ತಂತೆ ಅವ್ರುದು ಗಾಡಿ ಇಲ್ಲ ಅವಳು ಬದ್ಲಾಳು (ಬದಲಿ ಆಳು) ಬತ್ತಾಳೆ ಅವರ ಹೊಲಕ್ಕೆ ಗೊಬ್ಬರ ಹೊಡ್ಕೊಡಿ." ಆದೇಶ ನೀಡಿದರು ಅಜ್ಜಿ ಶೀಲಾಳ ಹೆಸರನ್ನು ಕೇಳಿದಾಕ್ಷಣ ಬಿಳಿಯನ ಕಣ್ಣಲ್ಲಿ ಮಿಂಚು, ಒಳಗೊಳಗೆ ಯಾವುದೊ ಲೆಕ್ಕಾಚಾರ, ಏನೋ ಅವ್ಯಕ್ತ ಸಂತೋಷ ,ಬೇಡವೆಂದರೂ ಹೊಂಗೆ ಮರದಡಿಯ ಶೃಂಗಾರ, ಬಿಸಿಯುಸಿರು, ಹಿತವಾದ ಮೈನೋವು, ನೆನಪಾಗುತ್ತಿತ್ತು." "ಏನೊ ಬಿಳಿಯ ಹೇಳಿದ್ದು ಕೇಳ್ತಾ " 

ಆತಮ್ಮ ಬೆಳಿಗ್ಗೆ ಬೇಗ ಎದ್ದು ಗೊಬ್ಬರ ಹೊಡಿಯಾಕೆ ಗಾಡಿ ಊಡ್ತೀನಿ"ಎಂದು ಚಾಪೆ ದುಪ್ಪಡಿ ತೆಗೆದುಕೊಂಡು ಅಂಗಳದಲ್ಲಿ ಹಾಕಿಕೊಂಡು ಆಕಾಶ ನೋಡುತ್ತಿದ್ದ ನಕ್ಷತ್ರಗಳ ಬದಲಾಗಿ ಶೀಲಾ ಕಾಣುತ್ತಿದ್ದಳು.


ಯಾಕೋ ಅಂದು ಬಿಳಿಯಪ್ಪನಿಗೆ ಸರಿಯಾಗಿ ನಿದ್ರೆ ಹತ್ತಲಿಲ್ಲ ಅಂದು ಅಜ್ಜಿ ಎಬ್ಬಿಸೋ ಮೊದಲೇ ಎದ್ದು ಜಾಲಿ ಮರದ ಕೆಳಗೆ ನಿಲ್ಲಿಸಿದ ಎತ್ತಿನ ಗಾಡಿಯ ಹತ್ತಿರ ಹೋದ. ಗಾಡಿಯ ಮೂಕಿಗೆ ನೊಗವನ್ನು ಹಗ್ಗದಿಂದ ಬಿಗಿದ ,ಏ ಗುರುಸಿದ್ದ ಎಷ್ಟೋತ್ತು ಸಗಣಿ ಬಾಸ್ತಿಯಲೆ ಆ ಮೂಲೇಲಿ ಕಣಿಗೆ ಐದಾವೆ ತಗಂಬಾರಲೆ ಅಂದ ಬಿಳಿಯಪ್ಪ ಸುಮಾರು ನಾಲ್ಕೈದು ಅಡಿ ಉದ್ದದ ಮೂರು ಬೆರಳುಗಳ ಗಾತ್ರದ ಎಂಟತ್ತು  ಕಟ್ಟಿಗೆ ತಂದು "ಅಣ್ಣ ಎಲ್ಲಿಡಲಿ" ಅಂದ "ನನ್ ತಲೆಮೇಲಿಡು ಲೇ ಗಾಡಿಯ ಎಳ್ಡೂ ಸೈಡ್ನಲ್ಲಿ ತೂತು ಅದವಾಲ್ಲ ಅದರಲ್ಲಿ ಒಂದೊಂದು ಸಿಗುಸಿ ಹೋಗು ಎಲ್ಲಾ ಬಿಡಿಸಿ ಹೇಳ್ಬೇಕು ಇವನಿಗೆ " ಎಂದು ಗೊನಗುತ್ತಾ ನೊಗದ ಹಗ್ಗ ಬಿಗಿ ಮಾಡಿದ ಬಿಳಿಯಪ್ಪ. 

ಮುರಾರಿ ಈಚಲ ಮರದ ಏಳು ಅಡಿ ಉದ್ದದ ನಾಲ್ಕು ಅಡಿ  ಅಗಲದ ಎರಡು ತಡಿಕೆಗಳನ್ನು ತಂದು ಗುರುಸಿದ್ದ ಇಟ್ಟ ಕಣಿಗೆಗಳ ಪಕ್ಕಕ್ಕೆ ಇಟ್ಟು ಏ ಬಿಳಿಯ ದಾರ ತಂದು ಈ ಕಣಿಗೆ ಮತ್ತು ತಡಿಕೆಗೆ ಬಿಳಿಯ ಲೇ ಅಂದರು " ಗಾಡಿಯ ಮುಂದೆ ಮತ್ತು ಹಿಂದೆ ತೆಂಗಿನ ಗರಿ ಇಟ್ಟು ."ಅಣ್ಣ ಕೀಲೆಣ್ಣೆ ಹಾಕ್ಬೇಕೇನಣ್ಣ ಅಚ್ಚಿಗೆ " ಕೇಳಿದ ಬಿಳಿಯಪ್ಪ ಹೂ ಮತ್ತೆ ಎಣ್ಣಿ ಹಚ್ಚಿ ತಿಂಗಳಾತು ತಾಂಬ ಎಣ್ಣಿ ಎಂದು ಚಕ್ರದ ಕಾಡಾಣಿ( ಚಕ್ರ ಹೊರಗೆ ಬರದಿರಲು ಸಿಗಸಿದ ಕಬ್ಬಿಣದ ಮೊಳೆ) ತೆಗೆದು ತನ್ನ ಹೆಗಲನ್ನು ಗಾಡಿಯ ಒಂದು ಬದಿಗೆ ಕೊಟ್ಟು ಮೆಲ್ಲಗೆ ಎತ್ತಿ ." ಚಕ್ರ ನಿಧಾನವಾಗಿ ಕಿತ್ತುಕೊಂಡು ಎಣ್ಣಿ ಅಚ್ಚು ಅಂದರು ಅದಕ್ಕೆ ಒಂದು ಡಬ್ಬಿಯಲ್ಲಿ ಎಣ್ಣೆ ಮತ್ತು ಕಬದಬೆ ಮೊಳೆಗೆ ಬಟ್ಟೆ ಕಟ್ಟಿದ್ದರು ಅದನ್ನು ಎಣ್ಣೆಗೆ ಹಾಕಿ ಗಾಡಿಯ ಅಚ್ಚು ಮತ್ತು ಚಕ್ರದ ಒಳಗೆ ಬಳಿದು ಮತ್ತೆ ಒಳಗೆ ತಳ್ಳಿದರು ಮತ್ತೊಂದು ಚಕ್ರಕ್ಕೆ ಹಾಗೆ ಎಣ್ಣೆ ಹಚ್ಚಿದರು.


ಸೂರ್ಯ ಇನ್ನೂ ರಂಗಪ್ಪನ ಪೌಳಿ ದಾಟಿ ಮೇಲೆ ಬಂದಿರಲಿಲ್ಲ ಬಿಳಿಯಪ್ಪ ಆತುರದಿಂದ ಎತ್ತುಗಳಿಗೆ ಕಡಲೆ ಕಾಯಿ ಇಂಡಿ ನೀರು ಕುಡಿಸಿ ,ಗಾಡಿಯ ನೊಗಕ್ಕೆ ಜೋಡಿಸಿ ಹಗಡನ್ನು ( ಎತ್ತಿನ ಕತ್ತಿನ ಮಧ್ಯೆ ಭಾಗಕ್ಕೆ ನೊಗಕ್ಕೆ ಸಿಗಿಸುವ ಕಡ್ಡಿ)  ಸಿಗಿಸಿ ,

ಸಲಿಕೆ ಗುದ್ದಲಿ ,ನಾಲ್ಕು ಈಚಲ ತಟ್ಟಿಗಳು ,ಮತ್ತು ಕೊಪ್ಪೆ ಮಾಡಿಕೊಳ್ಳಲು ನಾಲ್ಕು ಹಳೆಯ ಗೋಣಿ ಚೀಲಗಳನ್ನು  ಗಾಡಿಯಲ್ಲಿ ಹಾಕಿಕೊಂಡು 

ಮುರಾರಿ ಮತ್ತು ಸತೀಶನನ್ನು ಗಾಡಿಯಲ್ಲಿ ಕೂರಿಸಿಕೊಂಡು ಊರ ಬಾಗಿಲು ದಾಟಿ ತೋಪಿನ ಕಡೆ ಶರವೇಗದಲ್ಲಿ ಗಾಡಿ ಓಡಿಸಲು ಆರಂಬಿಸಿದ ಅದಕ್ಕಿಂತ ವೇಗವಾಗಿ ತೋಪಿ‌ನಲ್ಲಿ ಅವನ ಮನಸು ಯಾರನ್ನೋ ಹುಡುಕುತ್ತಿತ್ತು


ಬೇರೆ ಊರುಗಳಲ್ಲಿ ಅಂದಿನ ಕಾಲದಲ್ಲಿ ಇದ್ದ ತೋಪಿಗಿಂತ ಸುಂದರ ತೋಪು ಎಂದರೂ ತಪ್ಪಾಗಲಾರದು ಮಾರಮ್ಮನ ದೇವಸ್ಥಾನ ಎದುರಿನ ರಸ್ತೆಯ ದಾಟಿದರೆ ಸುಮಾರು ನಾಲ್ಕೂವರೆ ಎಕರೆ ಪ್ರದೇಶದಲ್ಲಿ ಬೇವಿನ ಮರ ,ಹುಣಸೆ ಮರಗಳಿಂದ ಕೂಡಿದ ಸುಂದರ ವನವೇ ಯರಬಳ್ಳಿ ತೋಪು . ಯಾವ ಪುಣ್ಯಾತ್ಮರು ನೆಟ್ಟು ಪೋಷಣೆ ಮಾಡಿದರೋ ಇಂದು ಬೃಹದಾಕಾರದಲ್ಲಿ ಬೆಳೆದು ಎಲ್ಲಾ ಕಾಲದಲ್ಲೂ ಹಚ್ಚ ಹಸುರಾಗಿ ನಳನಳಿಸುತ್ತಿವೆ. ಬಿಸಿಲಿನಲ್ಲಿ ಧಣಿದು ಬಂದವರಿಗೆ ನೆರಳು ನೀಡುತ್ತಿವೆ, ಮೇ ತಿಂಗಳಲ್ಲಿ ವರ್ಷಕ್ಕೊಮ್ಮೆ ನಡೆವ ಮಾರಮ್ಮನ ಜಾತ್ರೆಯ ಸಮಯದಲ್ಲಿ ಪರಸ್ಥಳದಿಂದ ಬರುವ ಭಕ್ತಾದಿಗಳಿಗೆ ಆಶ್ರಯ ತಾಣಗಳು, ಜಾತ್ರೆಯ ಸಮಯದಲ್ಲಿ ರಾಜಾರೋಷವಾಗಿ ,ಜಾತ್ರೆ ನಂತರ ಕದ್ದುಮುಚ್ಚಿ ಎಡ್ಡು ಇಸ್ಪೀಟು ಆಡಲು ಸಹ ಈ‌ತೋಪು ಜಾಗ ನೀಡಿದೆ . ಕೆಲ  ಪ್ರೇಮಿಗಳ ಪಾಲಿನ ಉದ್ಯಾನವನವೂ ಹೌದು .ಅದೇ ತೋಪಿನ ಆಗ್ನೇಯ ಭಾಗದಲ್ಲಿ ಕಂಬಣ್ಣನ ಹೆಂಡದ ಅಂಗಡಿಗೂ ಈ ತೋಪು‌ ಜಾಗ ನೀಡಿದೆ  ಊರಿನ ಬಹುತೇಕ ಮನೆಗಳ ಸಗಣಿ ತಿಪ್ಪೆಗಳು ಕೂಡ ಇದೇ ತೋಪಿನಲ್ಲಿವೆ  ಒಟ್ಟಿನಲ್ಲಿ ಯರಬಳ್ಳಿ ಊರಮುಂದಿನ ತೋಪಿನಲ್ಲಿ ಏನುಂಟು? ಏನಿಲ್ಲ?ಸಕಲವಿರುವ ಸಕಲರಿಗೆ ಬೇಕಾದ ವಿಸ್ಮಯ ತಾಣ ಎನ್ನಬಹುದು.



ತೋಪಿಗೆ ‌‌ ಎತ್ತಿನ ಗಾಡಿ ತಂದು ತಿಪ್ಪೆಯ ಹತ್ತಿರ ನಿಲ್ಲಿಸಿ ತಟ್ಟಿ, ಸಲಿಕೆ, ಗುದ್ದಲಿ ಹಾಕಿ ಗಾಡಿಗೆ ತುಂಬಲು ಸಿದ್ದರಾದರು ಆಗ ಬಿಳಿಯಪ್ಪ ಹುಡುಕುತ್ತಿದ್ದ ಹೆಣ್ಣು ಬಂದೇ ಬಿಟ್ಟಳು ,ದೂರದಿಂದಲೇ "ಏ ಗಿಡ್ಡಿ ಏಟೊತ್ತಿಗೆ ಬರೋದು ಜಲ್ದು ಬಾ," ಗಿಡ್ಡಿ ಬುಡ್ಡಿ ಅಂದ್ರೆ ಸೆನಾಗಿರಲ್ಲ ನೋಡಣ್ಣ ಮುರಾರಿ ಅಣ್ಣ" ಎಂದು ಹತ್ತಿರ ಬಂದು ತುಂಬಿದ ಗೊಬ್ಬರದ ತಟ್ಟಿ ತಲೆಯ ಮೇಲೆ ಇಟ್ಟುಕೊಂಡು  ತಂದು ಎತ್ತಿನ ಗಾಡಿಯಲ್ಲಿ  ಹಾಕುತ್ತಿದ್ದಳು. ಮುರಾರಿ ಅವರಿಗೆ ಸಹಾಯ ಮಾಡುತ್ತಿದ್ದ. ಸತೀಶ ಎತ್ತುಗಳ ಹಗ್ಗ ಹಿಡಿದು ಮುಂದೆ ಕುಳಿತಿದ್ದ. 

ಗಾಡಿ ತುಂಬಿದ ಮೇಲೆ ಯಾರಾದರೂ ಒಬ್ಬರು ಹೊಲಕ್ಕೆ ಗಾಡಿ‌ ಜೊತೆಗೆ ಬರ್ರಿ ತುಂಬಿದ ಗಾಡಿ ಸುರುವಾಕೆ ಬೇಕು ಎಂದು ಮನದಲ್ಲೇ ಶೀಲಾಳನ್ನು ಕರೆದುಕೊಂಡು ಹೋಗಲು ಹಾತೊರೆದ "ನಾನ್ ಬತ್ತೀನ್ ಮಾವ" ಎಂದ ಸತೀಶ " ಬ್ಯಾಡ ಸುಮ್ಕೀರು ಗಾಡಿ ಚಕ್ರ ಸಿಕ್ಕೆಂಡ್ರೆ ಚಕ್ರ ಹೊಡಿಬೇಕು ಗಾಡಿ ಹಾರ್ಬಿಡಬೇಕು ನಿನಗೆಆಗಲ್ಲ  ಎಂದ ಬಿಳಿಯಪ್ಪ. "ನಾನೇ ಹೊಲಕ್ಕೆ ಬತ್ತೀನಿ ನಡಿ "ಎಂದ  ಮುರಾರಿ ಅಣ್ಣನ ಮಾತಿಗೆ ಎದುರಾಡದೆ ರಾತ್ರಿಯೆಲ್ಲಾ ಕನಸು ಕಂಡಂತೆ ಇಂದು ಹೊಂಗೆ ಮರದ ತಂಪಲ್ಲಿ ಮತ್ತೊಮ್ಮೆ ಮೈ ಬಿಸಿಮಾಡಿಕೊಳ್ಳುವ ಅವಕಾಶ ತಪ್ಪಿದ್ದಕ್ಕೆ ಒಳಗೊಳಗೆ ಬೇಸರವಾಗಿದ್ದ ಬಿಳಿಯಪ್ಪನ ನೋಡಿ ಶೀಲಾ ಮುಸಿ ಮುಸಿ ನಗಲಾರಂಬಿಸಿದಳು. 


ಅಮ್ಮನ ಅಣತಿಯಂತೆ ಕಬ್ಬಿಣದ ನೇಗಿಲ ಹೊಡೆಯಲು  ತಮ್ಮ ಒಂದು ಜೊತೆ ಎತ್ತುಗಳ ಜೊತೆ ಐದು ಜೊತೆ ಎತ್ತು ಮತ್ತು ಕಬ್ಬಿಣದ ನೇಗಿಲಿನೊಂದಿಗೆ ಕೋಳಿ‌ಕೂಗುವ ಮೊದಲೇ ಹೊಲದಲ್ಲಿ ಹಾಜರಾಗಿ ಒಂದು ರೀತಿಯ ವಿಶೇಷವಾಗಿ ಸದ್ದು ಮಾಡುತ್ತಾ ಒಂದರ ಹಿಂದೊಂದು ಜೊತೆ ಎತ್ತು ಕಟ್ಟಿ ಕೊನೆಗೆ ಕಬ್ಬಿಣದ ನೇಗಿಲಿಗೆ ಕಟ್ಟಲಾಗಿತ್ತು .ಆ ನೇಗಿಲು ಸುಮಾರು ಎರಡರಿಂದ ಮೂರು ಅಡಿ ಮಣ್ಣನ್ನು ತಿರಿವಿಹಾಕುತ್ತಿತ್ತು . " ಮೊನ್ನೆ ಗೊಬ್ಬರ ಸೆಲ್ಲಿದ್ದೀಯಾ ಈಗ ಕಬ್ಬಿಣದ ನೇಗಲು ಹೊಡಿತೀಯ ಬಿಳಿಯ ಈ ನೆಲಕ್ಕೆ ನೀನು ಕಡ್ಲೇಕಾಯಿ ಹಾಕಿದರೆ ಬಂಪರ್ ಬೆಳೆ ಬೆಳಿತಿಯ ಕಣೋ ಎಂದ " ಎರಡನೇ ಜೊತೆ ಎತ್ತು ಹೊಡೆಯುವ ಗುಂಡಣ್ಣ. 

ಸೂರ್ಯ ನೆತ್ತಿಗೆ ಬಂದಂತೆಲ್ಲಾ ಎತ್ತುಗಳು ಚಲಿಸುವ ವೇಗ ಕಡಿಮೆಯಾಗಿ ನೇಗಿಲು ಹಿಡಿವ ರಾಮನಿಗೂ ಸುಸ್ತಾದಂತೆ ಕಂಡ .ಅಲ್ಲಿಗೆ ಅಂದಿನ ಮಡಿಕೆ ( ನೇಗಿಲು) ಹೊಡೆವುದು ನಿಲ್ಲಿಸಿ ಮನೆ ಕಡೆ ನಡೆದರು.


ಸರಸ್ವತಜ್ಜಿಯ ಆಸೆ ,ದೇವಿಯ ಕೃಪೆ ಆ ವರ್ಷ ಕಾಲ ಕಾಲಕ್ಕೆ  ಒಳ್ಳೆಯ ಮಳೆಯಾಗಿ  ಕಡ್ಲೇ ಕಾಯಿ ಬೆಳೆ ಬಂಪರ್ ಬಂತು. ಸೇರು ಬೀಜಕ್ಕೆ  ಒಂದೂವರೆ ಮಣ ಕಡ್ಲೆಕಾಯಿ ಬೆಳೆದ ದೊಡ್ಡಪ್ಪಗಳ ಬಗ್ಗೆ ಊರಲ್ಲೆಲ್ಲಾ ಮೆಚ್ಚುಗೆ ಮಾತನಾಡುತ್ತಿದ್ದರು. ಮನೆಯ ತುಂಬೆಲ್ಲ ಕಡಲೆಕಾಯಿ ಚೀಲಗಳನ್ನು ನೋಡಿ ಮನೆ ಮಂದಿಯ ಖುಷಿಗೆ ಪಾರವೇ ಇರಲಿಲ್ಲ. ಆದರೆ ಬಿಳಿಯಪ್ಪನ ಮನದಲ್ಲಿ ಯಾಕೋ ದುಗುಡ .ನಿನ್ನೆ ಶೀಲಾಳ ಮನೆಗೆ ಹೊರಕೆರೆದೇವರ ಪುರದ ಒಂಭತ್ತು ಜನ ಬಂದು ಹೋಗಿದ್ದರಂತೆ ಎಂಬ ಸುದ್ದಿಯನ್ನು ಗುರುಸಿದ್ದ ಹೇಳಿದ್ದ.

ಅಂದು ಚಾಪೆ ಹಾಕಿಕೊಂಡು ಅಂಗಳದಲ್ಲಿ ಅಂಗಾತ ಮಲಗಿ ಆಕಾಶ ನೋಡಿದ ಅಲ್ಲಿ ಬರೀ ನಕ್ಷತ್ರಗಳಿದ್ದವು ,ಶೀಲಾ ಕಾಣಿಸುತ್ತಿರಲಿಲ್ಲ.




ಮುಂದುವರೆಯುವುದು.....


ಸಿ ಜಿ ವೆಂಕಟೇಶ್ವರ


05 August 2020

ಸನ್ಮಾರ್ಗ- ಭಾಗ ೧೧


ಸನ್ಮಾರ್ಗ  ಭಾಗ ೧೧ 

ಹಿರಿಯೂರು ಕಡೆಯಿಂದ ಬರುವಾಗ ಊರು ಕಾಣುವ ಮೊದಲೇ ಎಡಭಾಗದಲ್ಲಿ ಸಣ್ಣದಾದ ಹೊಗೆ ಕಾಣುವುದು  .ಹತ್ತಿರ ಹೋದಂತೆ ಟಣ್ ಟಣಾ  ಟಣ್ ಎಂಬ ಸದ್ದು, ಅಲ್ಲೆ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿ ಬಲಗೈಯಲ್ಲಿ ಒಂದು ತಿರುಪಳಿ ತರುಗಿಸುತ್ತಿದ್ದ ಅದು ಕೊಳವೆಯ ಮೂಲಕ ಇದ್ದಿಲು ಇರುವ ಭಾಗಕ್ಕೆ ಸೇರಿತ್ತು ಜೋರಾಗಿ ತಿರುಗಿಸಿದರೆ ಜೋರಾದ ಕೆಂಡ  ನಿಧಾನವಾಗಿ ತಿರುಗಿಸಿದರೆ ಬೂದಿ ಆರಿ ಅಕ್ಕ ಪಕ್ಕದಲ್ಲಿ ಚದುರುತ್ತಿತ್ತು .ಕೆಂಪಾಗಿ ಕಾದ ಗುದ್ದಲಿಯನ್ನು ಇಕ್ಕಳದಿಂದ ಹಿಡಿದು ‌ತೆಗೆದು" ಹುಂ ಹಾಕು "

ಎಂದದ್ದೆ ತಡ , ದೊಡ್ಡ ಸುತ್ತಿಗೆಯಿಂದ ವಿಚಿತ್ರ ಸದ್ದು ಮಾಡುತ್ತಾ  ,ಒಂದೆ ಸಮನೆ ಬಡಿಯಲಾರಂಬಿಸಿದ ಮಹಂತೇಶ . ಸುಮಾರಾದವರಿಗೆ ಸುತ್ತಿಗೆ ಅಲ್ಲಾಡಿಸಲು ಆಗುತ್ತಿರಲಿಲ್ಲ  ,ಅಂದರೆ ನೀವೇ ಊಹಿಸಬಹುದು ಮಹಾಂತೇಶನ ದೈತ್ಯ ಶಕ್ತಿಯನ್ನು , ದೊಡ್ಡ ಏಟಾಕಿ  ಉಸ್ಸಪ್ಪಾ ಎಂದು ಕುಳಿತ ಮಹಂತೇಶ , ಅಲ್ಲೇ ಮಣ್ಣಿನ ಮಡಕೆಯಲ್ಲಿದ್ದ ನೀರನ್ನು ಒಂದು ಚೆಂಬಿನಲ್ಲಿ ತುಂಬಿಕೊಂಡು ಗಟಗಟ ಕುಡಿದುಬಿಟ್ಟ. ಎಡಗೈಯಲ್ಲಿ  ಇಕ್ಕಳದಲಿ ಕಾದ ಕಬ್ಬಿಣದ ತುಂಡು‌ಹಿಡಿದು , ಬಲಗೈಯಲ್ಲಿ ಸಣ್ಣ ಸುತ್ತಿಗೆ ಹಿಡಿದು , ಕಮ್ಮಾರಣ್ಣ ತನಗೆ ಬೇಕಾದ ಆಕಾರಕ್ಕೆ ತರಲು ಹೊರಟರೆ , ಕಬ್ಬಿಣ ಕ್ರಮೇಣವಾಗಿ ಕೆಂಪಿನಿಂದ ಕಪ್ಪಾಯಿತು. ಎಷ್ಟೇ ಏಟಾಕಿದರೂ ಬಗ್ಗದಿದ್ದಾಗ ಮತ್ತೆ ಗುದ್ದಲಿಯನ್ನು  ತಿದಿಗೆ ಇಟ್ಟು , ಕಪ್ಪಗಾಗಿದ್ದ ತನ್ನ ಟವಲಿನಿಂದ ಬೆವೆತ ಹಣೆ ಮೈ ಒರೆಸಿಕೊಂಡ ಕಮ್ಮಾರಣ್ಣ

"ಬಾರೋ ಮಾಂತೇಶ ಹಾಕು ನಾಕೇಟ" ಅಂದರು ಗೊಣಗುತ್ತಲೆ

"ಹೇ ಎಷ್ಟಂತ ಹಾಕಲಿ ನನಗೂ ಸಾಕಾಗಿದೆ ಮೈ ಕೈ ನೊವಾಗಿದೆ , ಆಗಲೇ ಐದು ಗಂಟೆ ಆತು ಲೇಟಾದ್ರೆ  ಕಂಬಣ್ಣನ ಹೆಂಡಂದಂಗಡಿ ಬಾಗಿಲು ಹಾಕುತ್ತೆ ತಗ" ಮತ್ತೆ ಟಣ್ ಟಣಾ ಟಣ್ ಶುರುವಾಯಿತು. "ಹು ನೋಡಪ್ಪ ಹನುಮಾಭೋವಿ , ಸಾಕಾ ಇಷ್ಟು ಮನೆ ಇದ್ದರೆ ಬಾಳ ಮೊಂಡಾಗಿತ್ತು ನಿನ್  ಗುದ್ದಲಿ.

" ಇನ್ನೋಂದ್ ಸ್ವಲ್ಪ ಚೂಪುಗ್ ಮಾಡು " ಎಂದಿದ್ದೇ ತಡ ,ಮಹಾಂತೇಶನ ಪಿತ್ತ ನೆತ್ತಿಗೇರಿ ಏ ಹನುಮಾಬೋವಿ ,ಜಾಸ್ತಿ ಚೂಪಾದರೆ ಗುದ್ದಲಿ  ನಿನ್ನ ಕಾಲ ಮೇಲೆ ಬಿದ್ದು  ,ಕಾಲು ತೂತು ಬೀಳುತ್ತೆ , ಸಾಕು ನಡಿ" ಅಂದ ಮಹಾಂತೇಶ.

" ಲೇ ಮಾಂತ ನಾನೇನು ಹೆಂಡ ಕುಡ್ದು ಕರಿಕೆ ಕಡಿಯಲ್ಲ ಕಣಲ   ,ಸುಮ್ಮನೆ ನಾಕೇಟಾಕು  , ಅದೆಲ್ಲಿಗೋ ಅಂದೆಲ್ಲಾ ಆಮೇಲೆ ಹೋಗುವಂತೆ ", ಎಂದರು ಹನುಮಾಭೋವಿ .

ಮಹಂತೇಶನ ಬಡಿತ ಜೋರಾಯಿತು, ಟಣ್ ಟಣಾ ‌ಟಣ್ ...

ಹನುಮಾಭೋವಿಗೆ ಆಗ ಅರವತ್ತೋ ಅರವತ್ತೈದು ಇರಬಹುದು, ಕಣ್ಣಿಗೆ ಕನ್ನಡಕ ಬಂದರೂ  ,ಹೊತ್ತಾರೆ ಎದ್ದು ಚೂಪಾದ ಗುದ್ದಲಿಯನ್ನು ಹೆಗಲಿಗೆ ಸಿಕ್ಕಿಸಿಕೊಂಡು , ಮೊದಲೇ ನಿಗದಿಪಡಿಸಿದ ಹೊಲದ ಕಡೆಗೆ ಪಯಣ ಆರಂಭಿಸುತ್ತಿದ್ದರು.

ಇನ್ನೂ ಸೂರ್ಯದೇವನ ಆಗಮನಕ್ಕೆ ಮುನ್ನವೆ , ಕೆರೆಏರಿಯ ಮೇಲೆ ನಡೆದು ಹೋಗುತ್ತಿದ್ದರೆ ಮನಕ್ಕೇನೊ ಮುದ . ಎಡಕ್ಕೆ ಕೆಂಪಾದ ಆಕಾಶ , ಬಲದಿಂದ ಹಿತವಾದ ತಂಗಾಳಿ , ಅಕ್ಕ ಪಕ್ಕ ಸೀಮೇಜಾಲಿಯ ಗಿಡಗಳು, ಆಗೊಮ್ಮೆ ಈಗೊಮ್ಮೆ ತಲೆ ಮೇಲೆ ಹಾಲು, ಮೊಸರಿನ ಗಡಿಗೆ ಹೊತ್ತು ಬರುವ ಗೊಲ್ಲರ ಹೆಣ್ಣುಮಕ್ಕಳು. ಇದು ಹೊರಗಿನವರಿಗೆ ವಿಶೇಷವಾಗಿ ಕಂಡರೂ ಹನುಮಾಭೊವಿಗೆ ದಿನ(ಸೂರ್ಯ) ಬರುವ ಮೊದಲು ದಿನದ ದಿನಚರಿಯ ಒಂದು ಭಾಗ . ದೇವರಲ್ಲಿ ಅವನ ಬೇಡಿಕೆ ಒಂದೆ ಇಂದು ಕರಿಕೆ( ಗರಿಕೆ ) ಕಡಿವ ಪ್ರದೇಶ ಮೆತ್ತಗಿರಲಿ , ಬಿಸಿಲು ಕಡಿಮೆಯಿರಲಿ  ,ಸಂಜೆ ಹೆಂಡದಂಗಡಿಗೆ ಹೋದಾಗ ಪಟಾಪಟಿ‌ ನಿಕ್ಕರ್ ಜೇಬಿನಲ್ಲಿ ದುಡ್ಡಿರಲಿ , ಅಷ್ಟೇ ಅವನ ಸಂತೃಪ್ತ ಜೀವನದ ಗುಟ್ಟು.

ಹನುಂತಾಭೋವಿ ಹೊಲಕ್ಕೆ  ಹೋಗಿ ಕರಿಕೆ ಕುಡಿಯಲು ಶುರು ಮಾಡುವನು ,ಬೇರು ಸಮೇತ ಕರಿಕೆ (ಗರಿಕೆ) ಕಡಿಯಲು ಕೆಲವೊಮ್ಮೆ ಎರೆ ನೆಲದಲ್ಲಿ ಐದಾರು ಅಡಿ ಆಳಕ್ಕೆ ಅಗೆಯಬೇಕಾದ ಪ್ರಸಂಗ ಬರುತ್ತಿತ್ತು  ,ಅಂತ ಸಮಯದಲ್ಲಿ ತಗಡಿನ ಬಿಲ್ಲೆಯಲ್ಲಿ ಮಣ್ಣನ್ನು ಹೊರಹಾಕಿ ಕರಿಕೆಯ ಮೂಲ ಹುಡುಕಿ ತೆಗೆಯುವ ಕಾಯಕ ನಿಜಕ್ಕೂ ಶ್ರಮದಾಯಕ. ರವಿರಾಯ ನಿಧಾನವಾಗಿ ಮೇಲೇರುತ್ತಿದ್ದಂತೆ ಹನುಮಾಭೋವಿಯ ಬರಿ ಮೈ ಚುರುಗುಟ್ಟುತ್ತಾ , ಬೆವರ ನೀರು ಇಳಿಯಲು ತಲೆಗೆ ಸುತ್ತಿದ್ದ ಟವಲ್ನಲ್ಲಿ ಉಸ್ ಎಂದು ಒರೆಸಿಕೊಂಡು  ,ಪಟಾಪಟಿ ನಿಕ್ಕರ್ ಜೋಬಿನಿಂದ ಒಂದು ಗಣೇಶ ಬೀಡಿ ತೆಗೆದು  ,ಬಾಯಿಗಿಟ್ಟು ಬೆಂಕಿಕಡ್ಡಿ ಗೀರಿ  ,ಎರಡೂ ಕೈಗಳನ್ನು ಬಾಯ ಬಳಿ ತಂದು ಹೊತ್ತಿಸಿ  ,ದಮ್ ಎಳೆದು ಆಕಾಶದೆಡೆ ಹೊಗೆ ಬಿಡುತ್ತಾ ಮನದಲ್ಲೇ ಏನೋ ದ್ಯಾನಿಸುತ್ತಾ ,ಮೋಟು ಬೀಡಿಯನ್ನು ಹೊಸಕಿ ಹಾಕಿ ಮತ್ತೆ ಗುದ್ದಲಿಗೆ ಕೈ ಹಾಕುತ್ತಿದ್ದ .

ಬಾಯಾರಿಕೆಯಾದರೆ , ಅಲ್ಲೇ ದೊಡ್ಡಪ್ಪಗಳ ಹೊಲದಲ್ಲಿ ಬೇಸಿಗೆಯಲ್ಲೂ ಇರುವ ಮಣ್ಣಿನ   ನೀರಿನ‌ ತೊಟ್ಟಿಯಲ್ಲಿ  ನೀರು‌ಕುಡಿಯುತ್ತಿದ್ದ  ,ಇನ್ನೊಂದು ಬದಿಯಲ್ಲಿ ಎಮ್ಮೆ ನೀರು ಕುಡಿಯುತ್ತಿತ್ತು.

"ಏ ಬಿಳಿಯಪ್ಪ ಬರೀ ಮಡಿಕೆ ಕುಳ (ನೇಗಿಲ ಮುಂದಿನ ಕಬ್ಬಿಣದ ಚೂರು ) ಇಡ್ಕಂಡು ಅಲ್ಲಾಡಿಸ್ಕಂಡು ಬಂದ್ರೆ ಇದ್ಲು ಬ್ಯಾಡೇನಪ್ಪ ಇವತ್ತು ನಾನು ಕುಳ ಮಾಡ್ಕೊಡಲ್ಲ ನಡಿ " ಎಂದು ಸಿಟ್ಟಾಗಿ ಕಡ್ಡಿ ಮುರಿದಂತೆ ಹೇಳಿ ಬಿಟ್ಟ ಕಮ್ಮಾರಣ್ಣ . ನಾಳೆ ಒಂದಿನ‌ ,ಆಯ್ತುವಾರ ಮಾತ್ರ ಬ್ಯಾಸಾಯ ಹೊಡೆಯೋದು ,ಸೋಮಾರ ಬ್ಯಾಸಾಯ ಹೊಡ್ಯಂಗಿಲ್ಲ ,ನಿನ್ಗು ಗೊತ್ತು ಈ ಸತಿ ಕುಳ ತಟ್ಟಿ ,  ಮನೆ ಮಾಡ್ಕೊಡು ಅದ್ಯಾಕೆ ಅಂಗಾಡ್ತಿಯಾ? ಮುಂದ್ಲುವಾರ ಬಾರೋವಾಗ ಶ್ಯಾನೆ ಇದ್ಲು ತತ್ತೀನಿ , ಈ ಸತಿ ಒಳ್ಳೆ ಉಳುಮೆ ಮಾಡುಬೇಕು ನಾನು " ಎಂದು  ಬಿಳಿಯಪ್ಪ ಒಂದೆ ಸಮನೆ ಮಾತನಾಡುತ್ತಿದ್ದ ಕಮ್ಮಾರಣ್ಣ ಗೊನಗುತ್ತಾ , ಮಡಿಕೆ ಕುಳಕ್ಕೆ ನಾಕೇಟು ಹಾಕಿ‌ , ಚೂಪು ಮಾಡುವ ಕಾರ್ಯದಲ್ಲಿ ‌ತಲ್ಲೀನನಾದ .

ಮನೆಯಿಂದ ಊರ ಹೊರಗೆ ತಂದಿಟ್ಟ ನೊಗ ,ಪಟಗಣ್ಣಿ, ಮಡಿಕೆ , ಹೂಟೆ ಹಗ್ಗ  ಇವುಗಳನ್ನು ಊರಮುಂದೆ ತರಬೇಕು, ಏಕೆಂದರೆ ಅದು ಆ ಊರಿನ ಸಂಪ್ರದಾಯ.

ಅದರ ಪ್ರಕಾರ ಯಾರೇ ಆದರೂ ಮನೆಯಿಂದಲೇ ನೇರವಾಗಿ ನೊಗ ಹೂಡಿ ಹೊಲಕ್ಕೆ ತೆರಳಬಾರದು . ಆದರೆ ಇದು ಎತ್ತಿನ ಗಾಡಿಗಳಿಗೆ ಅನ್ವಯವಾಗುತ್ತಿರಲಿಲ್ಲ.

ಸತೀಶ ನೊಗ ತಂದರೆ , ಬಿಳಿಯಪ್ಪ ಎತ್ತು‌ಹಿಡಿದು ಮಡಿಕೆ ಹಗ್ಗ ತಂದು . ಎತ್ತುಗಳ ಮೇಲೆ ನೊಗವಿಟ್ಟು ಅದರ ಮೇಲೆ ನೇಗಿಲು ಇಟ್ಟು ಹಗ್ಗದಿಂದ ಬಿಗಿದು ."ಆ ಬಿಡು ....."ಎಂಬ ಸದ್ದಿನೊಂದಿಗೆ ದೂಳು ಮಾಡುತ್ತಾ ಕೆಂಗಲು (ಕೆಂಪು ಮಣ್ಣ ) ಹೊಲದೆಡೆ  ಹೊರಟ . ನೊಗದಿಂದ ಮಡಿಕೆ ಇಳಿಸಿ ತಿರುಗಿಸಿ  ,ಭೂಮಿಯಲ್ಲಿ ಕುಳ ಹೋಗುವಂತೆ ಇಟ್ಟು ಹಗ್ಗದಿಂದ ನೊಗಕ್ಕೆ ಬಂದಿಸಿ , ಸ್ವಲ್ಪ ಮುಂದೆ ಹೋಗಿ ಕಡದು, ಬಳದು ,ನೋಡಿ ಮತ್ತೆ ಹಗ್ಗ ಸರಿಮಾಡಿ , ಎಡಗೈಯಲ್ಲಿ ಮಡಿಕೆ ಹಿಡಿ ಹಿಡಿದು , ಬಲಗೈಯಲ್ಲಿ ಬಾರುಕೋಲು ತಿರುಗಿಸುತ್ತಾ ಟೇಪು ಹಿಡಿದಂತೆ ಮೊದಲ ಸಾಲು ಹೊಡೆದು ತಿರುಗಿಕೊಳ್ಳುವಾಗ  ,ಗುಣಾರಳ್ಳಿ ಕೆರೆಯ ಮಗ್ಗುಲಿನಿಂದ ಸೂರ್ಯ ಇಣುಕಿನೋಡುತ್ತಿದ್ದ. ಯಾವದೋ ಚಿತ್ರ ಗೀತೆ ,ಮತ್ತಾವುದೋ ನಾಟಕದ ಹಾಡುಗಳನ್ನು ತನ್ನದೆ ರಾಗದಲ್ಲಿ ಹಾಡುತ್ತಾ , ಕೆಲವೊಮ್ಮೆ ಸಾಲು ತಪ್ಪಿದ ಎತ್ತುಗಳಿಗೆ ಬೈಯುತ್ತ  ,ಉಳುಮೆ ಕೆಲಸ ಮುಂದುವರೆಸಿದ ಬಿಳಿಯಪ್ಪ.

"ಅಡಿಕೆ ಎಲೆ ಐತೇನೊ ಬಿಳಿಯ" ಎಂದು ಹತ್ತಿರ ಬಂದವರು ಪಕ್ಕದ ಹೊಲದಲ್ಲಿ ಹೊಲ ಹೂಳುತ್ತಿದ್ದ ರಾಮಣ್ಣ

"ಅಡಿಕೆ ಐತೆ  ಎಲೆ ಒಣಗೈತೆ ತಗ "

ತಾನೂ ಎರಡು ಅಡಿಕೆಯನ್ನು ಬಾಯಲ್ಲಿ ಹಾಕಿಕೊಂಡು, ಒಣಗಿದ ವಿಳ್ಯೆದೆಲೆಗೆ  ಸುಣಗಾಯಿ ಡಬ್ಬಿಯಿಂದ ತೋರ್ಬೆರಳಲ್ಲಿ ಸುಣ್ಣ ತೆಗೆದು ಎಲೆಗೆ ಸವರಿ , ಬಾಯಲ್ಲಿ ತುರುಕಿಕೊಂಡು   ಇಬ್ಬರೂ ಜಗಿಯಲಾರಂಬಿಸಿದರು .

ನಿಮ್ಮೊಲ ಎಂಗೆ ಚೆನ್ನಾಗಿ ಅರಿಯುತ್ತಾ?( ಉಳುಮೆ ಆಳದ ಬಗ್ಗೆ) ಕೇಳಿದ ಬಿಳಿಯಪ್ಪ

" ಏ ನಮ್ಮದು ಜಜ್ಜು ನೆಲ ಸುಮಾರಾಗಿ ಅರಿಯುತ್ತೆ ಇನ್ನೆರಡ್ ದಿನ  ಬಿಟ್ರೆ ಮಡಿಕೆ ತೂರಲ್ಲ  , ಮಳೆ ಬಂದರೇನೆ ಬ್ಯಾಸಾಯ ನಂದು,ಸರಿ ಬಿಸ್ಲಾಗುತ್ತೆ ನಾನು ಹೋಗಿ ಮಡಿಕೆ ಹೊಡಿಬೇಕು ಅಂತ ಹೊರಟರು ರಾಮಣ್ಣ.

ಕ್ರಮೇಣವಾಗಿ ಬಿಸಿಲು ಬಲಿತಂತೆ ಹೊಟ್ಟೆ ತಾಳ ಹಾಕಲಾರಂಬಿಸಿತು , ದೂರದಲ್ಲಿ ಸತೀಶ ಬರುವುದು ಕಂಡು , ಸ್ಕೂಲ್ಗೆ ರಜಾ ಇರಾದಿಕ್ಕೆ ಸತೀಶ ಬುತ್ತಿ ತತ್ತಾನೆ ಎಂದು ಮನದಲ್ಲಿ ಅಂದುಕೊಂಡನು ಬಿಳಿಯಪ್ಪ.

ಕೈತೊಳೆದುಕೊಂಡು  ,ತಲೆಗೆ ಕಟ್ಟಿದ ಟವಲ್ ತೆಗೆದು ಗಂಗಳದಲ್ಲಿ(ತಟ್ಟೆ) ಜೋಳದ ಮುದ್ದೆ , ಉರಿದುಳ್ಳಿಕಾಳು ಸಾರಿನಲ್ಲಿ ಒಂದು   ಮುದ್ದೆ ಉಂಡು ಎರಡನೇ ಮುದ್ದೆಗೆ ಮಜ್ಜಿಗೆ ಕಲೆಸಿಕೊಂಡು ಚೆನ್ನಾಗಿ ಕಲೆಸಿ , ಸೊರ್ ....ಸೊರ್.... ಎಂದು ಸವಿಯತೊಡಗಿದ. ಕೊನೆಗೆ ಗಂಗಳದಲ್ಲೇ ಅರ್ಧ ಚೆಂಬಿನಷ್ಟು ಮಜ್ಜಿಗೆ ಹಾಕಿಸಿಕೊಂಡು , ಗಟಗಟನೆ  ಕುಡಿದು ಕೊನೆಗೆ ನೀರು ಕುಡಿವ ಶಾಸ್ತ್ರ ಮಾಡಿ , "ನೀರು ಅಲ್ಲಿ ಹೊಂಗೆ ಮರದಡಿ ಇಟ್ಟು ಹೋಗು"

ಎಂದು ಸತೀಶನಿಗೆ ಹೇಳಿದ .

ಸತೀಶ ಊರಕಡೆ ಹೆಜ್ಜೆ ಹಾಕಿದ .

ಸತೀಶ ಹೋಗಿ ಅರ್ಧ ಗಂಟೆ ಆಗಿರಬಹುದು .ದೂರದಿಂದ ಒಂದು ಹೆಣ್ಣಿನ ಆಕೃತಿ ಬರುತ್ತಿರುವದನ್ನು ಮಡಿಕೆ ಸಾಲಿನ ನಡುವೆಯೂ ಗಮನಿಸಿದ ಬಿಳಿಯಪ್ಪ .

ಇವಳ್ಯಾಕೆ ಇತ್ತ ಬರುತ್ತಿದ್ದಾಳೆ ? ಇವಳ ಅಪ್ಪನಿಗೆ ಬುತ್ತಿ ತಂದಳೆ? ಛೆ ಇಲ್ಲ ಅವರಪ್ಪ ಇವತ್ತು ಬ್ಯಾಸಾಯಕ್ಕೆ ಬಂದಿಲ್ಲ? ಮತ್ಯಾಕೆ ಬಂದಳು? ಹೊಲದಲ್ಲೇನಾದರೂ ಕಲ್ಲುಗಳ ಆರಸಿ ಹಾಕಲು? ಇಲ್ಲ ಅವರ ಹೊಲದಲ್ಲಿ ಕಲ್ಲುಗಳೆ ಇಲ್ಲ ? ಹೇ ಇವಳು ಅವಳಲ್ಲ , ಬ್ಯಾರೆ  ಯಾರೋ ಇರಬಹುದು , ನನಗೆ ಅವಳ ಭ್ರಮೆ, ಮೊನ್ನೆ ಗೌಡ್ರಬಾವಿಯಲ್ಲಿ ಭಜಾರಿಯಂತೆ ಜಗಳಕ್ಕೆ ನಿಂತಾಗ ಅವಳ ಕೈ ಸೋಕಿದಾಗ ಮೈಯೆಲ್ಲಾ ಕರೆಂಟ್ ಪಾಸಾದಂಗಾಗಿತ್ತು .

"ಏ ಗಿಡ್ಡಿ ನಿನಗೈತೆ ಕಣೆ" ಸಿಟ್ಟಿನಿಂದ ನುಡಿದ ಬಿಳಿಯಪ್ಪ

" ಏ ಹೋಗೊಲೋ ಕಂಡಿದಿನಿ ಇವ್ನೇನು ಬಿದುರು ಗಳ ಬೆಳದಂಗ್ ಬೆಳದವ್ನೆ"

ಅಂದು ತುಂಬಿದ ಬಿಂದಿಗೆ ಭರದಲ್ಲಿ ಎತ್ತಿ ಸೊಂಟದ ಮೇಲೆ ಇಡುವಾಗ  ,ಚೆಲ್ಲಿದ ನೀರು ಸೊಂಟದ ಕೆಳಗಿನ ಭಾಗ ನೆನೆಸಿತ್ತು. ಅದನ್ನೇ ನೋಡುತ್ತಾ ನಿಂತ ಬಿಳಿಯಪ್ಪ ಜಗಳ ಮರೆತಿದ್ದ. 

ನಿನ್ನೆಯ ಜಗಳದ ದೃಶ್ಯ ಬಿಳಿಯಪ್ಪನ ಕಣ್ಣ ಮುಂದೆ ಬಂದಿತು .

ಹತ್ತಿರಕ್ಕೆ    ಬರು  ಬರುತ್ತಾ ಪಕ್ಕಾ ಆಗಿತ್ತು ಅವಳೇ ಶೀಲಾ ! ರಂಬೆಯಂತೆ ಇಲ್ಲದಿದ್ದರೂ, ಕೊಂಬೆಗೆ ಲಂಗ ದಾವಣಿ ಹಾಕಿದರೆ ಉಬ್ಬು ತಗ್ಗು ಕಾಣುವಷ್ಟು ಸೌಂದರ್ಯಕ್ಕೇನೂ ಬರವಿರಲಿಲ್ಲ ,ಹಾಲಿನ ಬಿಳುಪಿಲ್ಲದಿದ್ದರೂ ಗೋದಿ ಬಣ್ಣದ, ಸಾಮಾನ್ಯರಿಗಿಂತ  ಅರ್ಧ ಅಡಿ ಕಡಿಮೆ ಎತ್ತರದ ಹುಡುಗಿ  ,ಓದಿನಲ್ಲಿ ಬಿಳಿಯಪ್ಪನಷ್ಟೆ ಓದಿ ಮೂರನೆ ಕ್ಲಾಸು ಪೇಲಾಗಿ , ಈಗ  ಹದಿನೆಂಟನೆ ವರ್ಷದ ಹರೆಯ ಎದ್ದು ಕಾಣುತ್ತಿತ್ತು. ಬಿದಿರಿನ ಬುಟ್ಟಿಯಲ್ಲಿನ ಬುತ್ತಿಯನ್ನು ತಲೆ ಮೇಲೆ ಹೊತ್ತು ಬರುವಾಗ ಕೆಲ ಅವಯವಗಳು ಹೆಚ್ಚೇ ಕುಲುಕುತ್ತಿರುವಂತಿದ್ದವು.

"ಏ ಗಿಡ್ಡಿ ..ಎನ್ ಸಮಾಚಾರ" ರಸ್ತೆಯಲ್ಲಿ ನಡೆವ ಶೀಲಾಳಿಗೆ  ಹೊಂಗೆ ಮರದ ಕೆಳಗೆ ಕೂತು ನೀರು ಕುಡಿಯುತ್ತಾ ಕೂಗಿದ ಬಿಳಿಯಪ್ಪ.

"ಗಿಡ್ಡಿ ಬುಡ್ಡಿ ಅಂದರೆ ಸೆನ್ನಗಿರಲ್ಲ ನೀನೇನು ನನಗೆ ಹೆಸರಿಕ್ಕಿದಿಯಾ?

ಎಂದು ದಾರಿ ಬಿಟ್ಟು, ಬಿಳಿಯಪ್ಪನ ಹೊಲದೆಡೆ ಹೆಜ್ಜೆ ಹಾಕಿದಳು ಶೀಲಾ,

"ನಾನು ಗಿಡ್ಡಿ ಅಂತಲೆ ಕರೀತಿನಿ ಏನೇ ಈಗ"

"ನನ್ನ ಸುದ್ದಿ ನಿನಗ್ ಗೊತ್ತಿಲ್ಲ ಎಲ್ಲ ಹುಡ್ಗೇರಂಗಲ್ಲ ನೋಡು ನಾನು"

" ಎನೇ ಏನ್ ಮಾಡ್ತಿಯೇ ನೀನು "

ಏನ್ ಮಾಡ್ತಿನಾ ನೋಡು ನಿನ್ನೆ ನೀರ್ಸೇದೋವಾಗ ಎಲ್ಲರ್ ಮುಂದೆ ಗಿಡ್ಡಿ ಅಂತಿಯಾ?"

ಮಾತನಾಡುತ್ತಾ ,ಮಾತನಾಡುತ್ತಾ ಆಗಲೇ ಬಿಳಿಯ ಕುಳಿತ ಹೊಂಗೆಯ ಮರದ ನೆರಳಿಗೆ ಬಂದು ನಿಂತಿದ್ದಳು.

ಬುತ್ತಿಯ ಬುಟ್ಟಿ ಕೆಳಗಿಟ್ಟು  ಕೈಯಿಂದ ಬಿಳಿಯನ ಹೊಡೆಯಲು ಮುಂದಾಗುತ್ತಿದ್ದಂತೆ, ಬಿಳಿಯ ಅವಳ ಕೈಹಿಡಿದ. ಕೊಸರಾಡಿ ಅವನ ಕೈಯಿಂದ ಬಿಡಿಸಿಕೊಳ್ಳುವ ಪ್ರಯತ್ನ ಮಾಡಿದಳು , ಗಂಡಿನ ಬಿಗಿಯಾದ ಹಿಡಿತ , ಮತ್ತು  ಬಿಸಿಯುಸಿರು  ತಾಗುತ್ತಿದ್ದಂತೆ

ಶೀಲಾಳು ಕೊಸರುವುದು ಕ್ರಮೇಣ ಕಡಿಮೆಯಾಯಿತು. ಉಸಿರು ಬಿಗಿಯಾಗಿ ,ದೇಹದ ಅಂಗಗಳಲ್ಲಿ ಎನೋ ಬದಲಾವಣೆ ಕಂಡಂತಾಯಿತು .ಅವನೂ ಹಿಡಿತ ಸಡಿಲಿಸಿದ ನಿಧಾನವಾಗಿ ಅವಳನ್ನು ಹತ್ತಿರ ಎಳೆದುಕೊಂಡ, ಅವಳ ಕಡೆ ಪ್ರತಿರೋಧ ಇರದಿರುವುದು ಮನವರಿಕೆಯಾಯಿತು .ಪಕ್ಕದ ಹೊಲದಲ್ಲಿ ರಾಮಣ್ಣ ತನ್ನ ಮಡಿಕೆ ( ನೇಗಿಲು) ಮುರಿದ ಪರಿಣಾಮ ಮನೆಗೆ ಹೋಗಿದ್ದು ನೆನಪಾಯಿತು, ಸುತ್ತಮುತ್ತ ಬರೀ ಕೆಂಗಲು ನೆಲ ,ಹೊಂಗೆ ಮರದಡಿ ಇವರ ಬಿಟ್ಟರೆ ಬೇರೆ ನರಮನುಷ್ಯರಿಲ್ಲ .

ಗಂಡಸಿನ ಬಿಸಿಯುಸಿರು ತಾಗುತ್ತಲೇ ಅವಳ ಕಾಮನೆಗಳ ಕಟ್ಟೆಯೊಡೆದು ಯಾವುದೋ ಸುಖಕೆ ಅವಳ ದೇಹ ಸಜ್ಜಾದಂತಿತ್ತು ,ಅವನ ಪರಿಸ್ಥಿತಿಯೂ ಅದಕ್ಕಿಂತ ಭಿನ್ನವಾಗೇನೂ ಇರಲಿಲ್ಲ ,ಅವನ ಮನದಲ್ಲಿ ಒಂದೇ ಪ್ರಶ್ನೆ ಇವಳೇನಾ ನಿನ್ನೆ ಬಜಾರಿಯಂತೆ ನನ್ನೊಂದಿಗೆ ಜಗಳ ಆಡಿದವಳು ?ಈಗ ಮದನ ಕಾಮ ಕ್ರೀಡೆಗೆ ಸಿದ್ದಳಾಗಿಹಳಲ್ಲ? ಎಂದು ಕೊಳ್ಳುತ್ತಾ, ಛೆ ಇಂತಹ ಸುಂದರ ಶೃಂಗಾರ ಸಮಯದಲ್ಲಿ ಆ ನೆನಪೇಕೆ? ಎಂದು ಅವಳನ್ನು ಇನ್ನೂ ಹತ್ತಿರಕ್ಕೆ ಬರಸೆಳೆದುಕೊಂಡನು .ಹೊಂಗೆ ಮರದ ತಂಪಿನಲೂ ಎರಡೂದೇಹಗಳಲ್ಲಿ ಬೆವರು ಹರಿದಿತ್ತು .ದೂರದಲ್ಲಿ ಬಿಸಿಲಿನಲ್ಲಿ ನೊಗವೊತ್ತು ನಿಂತ ಎತ್ತುಗಳು ಏದುಸಿರು ಬಿಡುತ್ತಿದ್ದವು.....

"ತಾಗಂಬಾರವ್ವ ಮುದ್ದೆ ಸಾರ್ನಾ " ಎಂದು ತಾನು ತಂದಿದ್ದ ಬಿದಿರು ಬುಟ್ಟಿ ಕೆಳಗಿಟ್ಟು ಅದಕ್ಕೆ ಹೊದಿಸಿದ್ದ ಬಿಳಿ ಬಟ್ಟೆ ಬಿಡಿಸಿದರು ಅಗಸರ ಮಾರಪ್ಪ .

ವರ್ಷ ಪೂರ್ತಿ ಕೆಲವರ ಮನೆಯಲ್ಲಿ ಆ ಊರಿನ ಅಗಸರು ಬಟ್ಟೆ ಒಗೆದು ಇಸ್ತ್ರಿ ಮಾಡಿ ಮನೆಗಳಿಗೆ ತಂದು ಕೊಡುತ್ತಿದ್ದರು. ಇದಕ್ಕೆ ಬದಲಾಗಿ  ಅವರು ಹಣ ಪಡೆಯದೇ ಪ್ರತಿದಿನ ಬೆಳಿಗ್ಗೆ ಈ ಎಲ್ಲಾ ಮನೆಗಳಿಂದ ಮುದ್ದೆ ಅನ್ನ .ಸಾರು. ಮಜ್ಜಿಗೆ ,ರೊಟ್ಟಿ ಹೀಗೆ ವಿವಿಧ ಆಹಾರದ ಪದಾರ್ಥಗಳನ್ನು ಒಂದೆ ಬುಟ್ಟಿಯಲ್ಲಿ ಹಾಕಿಸಿಕೊಂಡು ತರುತ್ತಿದ್ದರು. ಸಾರು ಹಾಕಿಸಿಕೊಳ್ಳಲು ಒಂದೇ ಪಾತ್ರೆ ಇರುತ್ತಿದ್ದರಿಂದ ಎಲ್ಲರ ಮನೆಯ ಎಲ್ಲಾ ತರದ ಸಾರನ್ನು ಒಂದೇ ಪಾತ್ರೆಯಲ್ಲಿ ಹಾಕಿಸಿಕೊಳ್ಳುತ್ತಿದ್ದರು ಅದಕ್ಕೆ "ಕೂಡಾಮ್ರ " ಅನ್ನುತ್ತಿದ್ದರು. ಕೂಡು + ಆಮ್ರ(ಸಾಂಬಾರು)  ಸತೀಶನ ಗೆಳೆಯ ಗೋಪಾಲ ಅಗಸರ ಹುಡುಗನಾದ್ದರಿಂದ ಅವನ ಗೆಳೆಯರು ಅವನಿಗೆ ಕೂಡಾಮ್ರ ಎಂದು ಅಡ್ಡೆಸರಿಟ್ಟಿದ್ದರು. "ಹೇ ಕೂಡಾಮ್ರ" ಎಂದ ತಕ್ಷಣ ಗೆಳೆಯರ ಹೊಡೆಯಲು ಅವನು ಓಡಿ ಬರುತ್ತಿದ್ದ.

ಒಂದು ಮುದ್ದೆ ,ಸ್ವಲ್ಪ ಅನ್ನ , ಒಂದು ಸೌಟು  ಸಾರು,ಒಂದು ಲೋಟ ಮಜ್ಜಿಗೆ ಹಾಕಿ "ಮಾರಣ್ಣ ಈ ಬಟ್ಟೆಗಳನ್ನು ಒಗೆದುಕೊಂಡು ಬಾ " ಎಂದು ಬಟ್ಟೆ ಗಂಟು ಕೊಟ್ಟಳು ತಿಪ್ಪಕ್ಕ.

ಬಟ್ಟೆ ಗಂಟಲಿನಲ್ಲಿ ಮೇಲಿದ್ದ ಪಟಾಪಟಿ ನಿಕ್ಕರ್ ಮೇಲಿನ ಕಲೆ ನೋಡಿ ತಿಪ್ಪಕ್ಕ ಇದು ಬಿಳಿಯಪ್ಪನ ನಿಕ್ಕರಾ? ಎಂದ

"ಹೌದು ಅಣ್ಣ ನಿಮಗೇಗೆ ಗೊತ್ತಾಯಿತು?" ಎಂದು ತಿಪ್ಪಕ್ಕ ಆಶ್ಚರ್ಯಕರವಾಗಿ ಕೇಳಿದಳು .

ನಾವು ಅಗಸರಮ್ಮ... ನಮಗೆ ಎಲ್ಲಾ ಗೊತ್ತಾಗುತ್ತೆ .... ಎಂದು ಮುಂದಿನ ಮನೆಗೆ ಹೊರಟರು ಮಾರಣ್ಣ.....

ಮುಂದುವರೆಯುವುದು

ಸಿ ಜಿ ವೆಂಕಟೇಶ್ವರ