30 April 2020

ಬರಬಾರದೆ ( ಭಾವಗೀತೆ )

*ಬರಬಾರದೆ* (ಹೆಣ್ಣಿನ ಸ್ವಗತ)
ಭಾವಗೀತೆ

ನನ್ನ ಇನಿಯ,ಮನದ ಗೆಳೆಯ, ಕಾದಿರುವೆ ನಾ, ನೀನೀಗ ಬರಬಾರದೆ |
ಕನಸಲ್ಲೂ ನೀ  ಮನದಲ್ಲೂ ನೀ,ಬಂದು ಈಗ
ಬಿಗಿದಪ್ಪಿಕೊಳಬಾರದೆ|
ನೀ ಇರುವ ಕ್ಷಣವು,ಸ್ವರ್ಗವು ಧರೆಗಿಳಿಯದೆ?||ಪ||

ನೀನಿರಲು ಗೆಲುವು,ನೀನೇನೆ ಒಲವು,ಪ್ರೀತಿಗೆ ಆಶಾಕಿರಣ|
ಒಲವಿನ ರಾಜ ,ಚೆಲುವಿನ ಸ್ನೇಹಿತ,
ನೀ ನನ್ನಯ ಅರುಣ|
ನೀನೇನೆ ಮಾರ, ಜೊತೆಯಾಗು ಬಾರ||
ಮನದನ್ನೆಯ ವರಿಸು ಬಾ|
ಧಿಕ್ಕರಿಸಿದೆ ನಾನು, ಅಪರಂಜಿಯು ನೀನು|
ಬದಲಾದ ಗೆಳತಿಗೆ
ಅವಕಾಶ ಕೊಡಬಾರದೆ|| ಪ||

ಆ ನಿನ್ನ ಸ್ಪರ್ಶ ,ನೀ ಕೊಟ್ಟು ಮುತ್ತು, ಎಡೆಬಿಡದೇ ನೆನೆಪಾಗಿದೆ|
ನಿದಿರೆ ಬರುತಿಲ್ಲ ,ಏನೂ ರುಚಿಸಲ್ಲ
ಏನೆಂದು ನಾ ಹೇಳಲಿ|
ಬರದಿದ್ದರೆ ನೀನು ,ನಾ ಬಾವಿ ಪಾಲು||
ಬರದೇ ನೀನಿರುವೆಯಾ?
ನೀ  ಬಂದೇ ಬರುವೆ ಪ್ರೇಮಾಮೃತ ತರುವೆ|
ಭರವಸೆಯು ನನಗಿದೆ
ನೀ ಬೇಗ ಬರಬಾರದೆ||ಪ||

*ಸಿ ಜಿ ವೆಂಕಟೇಶ್ವರ*
*ತುಮಕೂರು*

29 April 2020

ಸುಸ್ಥಿರ ಸಮಾಜಕ್ಕೆ ಬುದ್ದ ಬಸವಣ್ಣ ಅಂಬೇಡ್ಕರ್ (ಲೇಖನ)



*ಸುಸ್ಥಿರ ಸಮಾಜಕ್ಕಾಗಿ ಬುದ್ದ ಬಸವ ಅಂಬೇಡ್ಕರ್*
ಭಾರತೀಯ ಸಮಾಜವು ಅನಾದಿ ಕಾಲದಿಂದಲೂ ಸಾಮಾಜಿಕವಾಗಿ ಬದಲಾವಣೆ ಹೊಂದುತ್ತ , ವಿವಿದ ಸಂಸ್ಕೃತಿಗಳನ್ನು ಅಳವಡಿಸಿಕೊಂಡು, ಆಚರಣೆಗಳನ್ನು, ಸಂಪ್ರದಾಯಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡು ಬಂದಿದೆ. ಇದರ ಜೊತೆಗೆ ನಮ್ಮ ಸಮಾಜವು ವಿವಿಧ ಕಾರಣಗಳಿಂದ ಏಳು ಬೀಳು ಗಳನ್ನು ಕಂಡಿದೆ. ಕೆಲವೊಮ್ಮೆ ಸಮಾಜದಲ್ಲಿ ಮೂಢನಂಬಿಕೆಗಳು ಕಂದಾಚಾರಗಳು ತಾಂಡವವಾಡುವ ಸಂಧರ್ಭಗಳಲ್ಲಿ ಸಮಾಜಕ್ಕೆ ಬೆಳಕು ನೀಡಲು ಕಾಲ ಕಾಲಕ್ಕೆ ಮಹಾತ್ಮರು ಉದಯಿಸಿ ನಮ್ಮ ಸಮಾಜವನ್ನು ತಿದ್ದುವ ಕಾರ್ಯ ಮಾಡುತ್ತಾ ಸುಸ್ಥಿರ ಸಮಾಜ ನಿರ್ಮಾಣಕ್ಕೆ ಟೊಂಕ ಕಟ್ಟಿ ನಿಂತರು. ಅಂತಹ ಮಹನೀಯರಲ್ಲಿ ಬುದ್ದ, ಬಸವೇಶ್ವರರು, ಮತ್ತು ಅಂಬೇಡ್ಕರರು ಪ್ರಮುಖರು.
*ಸುಸ್ಥಿರ ಸಮಾಜದ ಅರ್ಥ*
ಮುಂದಿನ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಈಗಿನ ಸಮಾಜದ ಕೆಲವು ಮೌಲ್ಯಗಳನ್ನು, ಸತ್ಸಂಪ್ರದಾಯಗಳನ್ನು,ಉತ್ತಮ ಸಂಸ್ಕೃತಿಗಳನ್ನು, ಉಳಿಸಿ ಬೆಳೆಸಿಕೊಂಡು ಹೋಗುವ ಸಮಾಜವನ್ನು  ಸುಸ್ಥಿರ ಸಮಾಜ ಎನ್ನಬಹುದು.
ಇಂದಿನ ಆಧುನಿಕತೆಯ ಯಾಂತ್ರಿಕತೆಯ ಸಮಾಜವು,ತಂತ್ರಜ್ಞಾನದ ಫಲವಾಗಿ, ಅನ್ಯಸಂಸ್ಕೃತಿಗಳ ಪ್ರಭಾವದಿಂದಾಗಿ, ಮದ್ಯಮ ವರ್ಗದ ಬೆಳವಣಿಗೆಯ, ಪರಿಣಾಮವಾಗಿ ನಮ್ಮ ಸಮಾಜವು ಹಿಂದಿಗಿಂತಲೂ ಇಂದು ಅಭಿವೃದ್ಧಿ ಹೊಂದಿದೆ ಎನಿಸಿದರೂ ಮೌಲ್ಯಗಳ ಅಧಃಪತನ, ಪ್ರಾಮಾಣಿಕತೆಯ ಕೊರತೆ, ದೈಹಿಕ ಸುಖವೇ ಮೇಲು ,ಮುಂತಾದ ಭಾವನೆಗಳಿಂದಾಗಿ ಸಮಾಜಿಕ ಹಿಂಜರಿತವಾಗಿದೆಯೇನೋ ಎಂಬ ಅನುಮಾನ ನಮ್ಮನ್ನು ಕಾಡುವುದು
ಇಂತಹ ಸಂದಿಗ್ಧ ಸ್ಥಿತಿಯಲ್ಲಿ ನಮಗೆ ದಾರಿ ತೋರಿ ಸಮಾಜವನ್ನು ಸರಿದಾರಿಗೆ ತರುವ ಶಕ್ತಿ ಇರುವುದು ಬುದ್ದ ,ಬಸವಣ್ಣ ಮತ್ತು ಅಂಬೇಡ್ಕರ್ ರವರ ಚಿಂತನೆಗಳಿಂದ ಮಾತ್ರ ಸಾದ್ಯ.
*ಸುಸ್ಥಿರ ಸಮಾಜಕ್ಕೆ ಗೌತಮ ಬುದ್ಧ ರವರ ಚಿಂತನೆ*
ಸಾಮನ್ಯ ಶಕ ಪೂರ್ವದಿಂದಲೂ ಬುದ್ದ ನಮಗೆ ಬಾಳುವ ರೀತಿಯನ್ನು ಸಾರಿದರು ಸಮಾಜದಲ್ಲಿ ಮಾನವರು ಸಹಬಾಳ್ವೆಯಿಂದ ಬಾಳಲು ಆಸೆಯನ್ನು ಕಡಿಮೆ ಮಾಡಿಕೊಳ್ಳಬೇಕು.ತನ್ಮೂಲಕ ಇತರರ ಅಸೆಗೂ ಬೆಲೆ ನೀಡಬೇಕು ಎಂದು ಪ್ರತಿಪಾದಿಸಿದರು. ಆದರೆ ಇಂದು ನಮ್ಮ ಆಸೆಗಳಿಗೆ ಮಿತಿ ಇಲ್ಲ ಅದರ ಫಲವಾಗಿ ಸಮಾಜದಲ್ಲಿ ವರ್ಗ ಸಂಘರ್ಷಕ್ಕೆ ಕಾರಣವಾಗಿದೆ. ಬುದ್ದನ ತತ್ವ ಪಾಲಿಸಿದರೆ ಸಮಾಜದಲ್ಲಿ ಶಾಂತಿ ಲಬಿಸಿ ಇದು ಸುಸ್ಥಿರ ಸಮಾಜಕ್ಕೆ ನಾಂದಿಯಾಗುವುದು.
ಬುದ್ದನ ಅಷ್ಟಾಂಗ ಮಾರ್ಗ ಅನುಸಾರವಾಗಿ ನಾವು ಒಳ್ಳೆಯ ನಡತೆ, ಒಳ್ಳೆಯ ಗುಣ,ಒಳ್ಳೆಯ ನೋಟ,ಒಳ್ಳೆಯ ಕಾರ್ಯ, ಈಗೆ ಎಲ್ಲರಿಗೂ ನಾವು ಒಳ್ಳೆಯದು ಮಾಡಿದರೆ ಪರರು ನಮಗೆ ಒಳ್ಳೆಯದು ಮಾಡೇ ಮಾಡುವರು ಆಗ ಸಮಾಜವು ಆದರ್ಶ ಸಮಾಜವಾಗಿ ಸುಸ್ಥಿರ ಅಭಿವೃದ್ಧಿಗೆ ಮೂಲ ಕಾರಣವಾಗುತ್ತದೆ.
*ಸುಸ್ಥಿರ ಸಮಾಜಕ್ಕೆ ಬಸವೇಶ್ವರರ ಚಿಂತನೆ*
ಹನ್ನೆರಡನೆಯ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಯ ಮಾಡಿದ ಭಕ್ತಿ ಭಂಡಾರಿ ಬಸವಣ್ಣನವರು ಅಂದಿನ ಸಮಾಜದ ಮೌಢ್ಯಗಳನ್ನು ,ತೊಲಗಿಸಲು ಪಣತೊಟ್ಟು ಯಶಸ್ವಿಯಾಗಿ ಸಮಾಜ ಸುಧಾರಣೆ ಮಾಡಿದರು.
ಅವರ " ಅನುಭವ ಮಂಟಪ " ಪರಿಕಲ್ಪನೆಯು ಇಂದಿನ ಶಾಸನ ಸಭೆಯ ಮೂಲವಾಗಿದ್ದರೂ ಆ ಮೂಲ ಆಶಯವನ್ನು ನಾವಿಂದು ಮರೆತಿರುವುದು ದುರಂತ. ಎಲ್ಲಾ ವರ್ಗದ ಜನರನ್ನು ಸಮಾನವಾಗಿ ಕಾಣುವ ಪರಿಕಲ್ಪನೆಯು ಅಂದು‌ಸಂಚಲನ ಮೂಡಿಸಿತ್ತು ತಕ್ಕ ಮಟ್ಟಿಗೆ ಸಮಾಜವು ಬದಲಾವಣೆಗಳನ್ನು ಕಂಡಿತು ಆದರೆ ಇಂದು ಸಾಂವಿಧಾನಿಕ ಮಾನ್ಯತೆ ನೀಡಿ ಸಮಾನತೆ ನೀಡಿದರೂ ಅಸಮಾನತೆ ಎಲ್ಲೆಡೆಯೂ ಕಣ್ಣಿಗೆ ರಾಚಿ ನಮ್ಮನ್ನು ಅಣಕಿಸುತ್ತಿದೆ.
ಇನ್ನೂ ಬಸವಣ್ಣ ನವರ ವಚನಗಳು ನಮ್ಮ ಮತ್ತು ಸಮಾಜಕ್ಕೆ ಎಂದೂ ಆರದ ಕೈ ದೀವಿಗೆಗಳು ಅವರ ವಚನಗಳನ್ನು ಅರಿತು, ಅಳವಡಿಸಿಕೊಂಡು ನಡೆದರೆ ಸಮಾಜವು ಆದರ್ಶವಾಗುವುದಷ್ಟೇ ಅಲ್ಲ ಸುಸ್ಥಿರ ಸಮಾಜವು ನಿರ್ಮಾಣ ಆಗುವುದು.
*ಸುಸ್ಥಿರ ಸಮಾಜಕ್ಕೆ ಅಂಬೇಡ್ಕರ್ ರವರ ಚಿಂತನೆ*
ನಮ್ಮ ಭಾರತೀಯ ಸಂವಿಧಾನದ ಪಿತಾಮಹರೆಂದು ಪುರಸ್ಕೃತವಾದ ಅಂಬೇಡ್ಕರ್ ಶಿಕ್ಷಣ, ಸಂಘಟನೆ, ಹೋರಾಟದ ಪರಿಕಲ್ಪನೆಯನ್ನು ನಮಗೆ ಪರಿಚಯಿಸಿದರು ಮತ್ತು ಈ ಮೂಲಕ ವ್ಯಕ್ತಿ, ಸಮಾಜವು ಬದಲಾಗಬಹುದು ಎಂದು ನಮಗೆ ತೋರಿಸಿಕೊಟ್ಟರು .ಅವರು ನಮಗೆ ಪ್ರಪಂಚದಲ್ಲಿಯೇ ಉನ್ನತವಾದ, ಮತ್ತು ಶ್ರೇಷ್ಠ ಸಂವಿಧಾನವನ್ನು ನಮಗೆ ನೀಡಿದ್ದಾರೆ. ಈ ಸಂವಿಧಾನವು ಕೇವಲ ನಮ್ಮ ಆಡಳಿತದ ದಿಕ್ಸೂಚಿ ಮಾತ್ರವಲ್ಲದೆ ನಮ್ಮ ಸಮಾಜದ ಪ್ರತಿಬಿಂಬವೂ ಹೌದು. ಆದರೆ ನಾವು ದುರಾದೃಷ್ಟವಶಾತ್ ಇಂದು ಸಂವಿಧಾನಕ್ಕೆ  ವಿಮುಖರಾಗುತ್ತಿದ್ದೇವೇನೋ ಎಂಬ ಅನುಮಾನ ಈ  ನಮ್ಮ ಸಮಾಜವನ್ನು ನೋಡಿದರೆ ತಿಳಿಯುವುದು.
ಸಮಾನತೆಯನ್ನು ನಾವು ಎಲ್ಲರೂ ಪಡೆಯಬೇಕಿದೆ,ಅಸಮಾನತೆ ಹೋಗಲಾಡಿಸಲು ಹೋರಾಟವು ಅನಿವಾರ್ಯವಾಗಿದೆ.ಶಿಕ್ಷಣ ನಮ್ಮನ್ನು ಬದಲಾವಣೆ ಮಾಡಬಲ್ಲ ಸಾಧನ ಎಂದು ಅಂಬೇಡ್ಕರ್ ರವರು ಪ್ರತಿಪಾದಿಸಿದರು. ಈ ಅಂಶಗಳನ್ನು ನಾವೆಲ್ಲರೂ ಪುನರ್ಮನನ ಮಾಡಿಕೊಳ್ಳಬೇಕಿದೆ ಮತ್ತು ಸಮಾಜದಲ್ಲಿ ಅದನ್ನು ಅಳವಡಿಸಿಕೊಳ್ಳಬೇಕಿದೆ.ಹಾಗು ನಮ್ಮ ಮುಂದಿನ ಪೀಳಿಗೆಗೆ ಇಂತಹ ಉದಾತ್ತವಾದ ಚಿಂತನೆಗಳನ್ನು ವರ್ಗಾವಣೆ ಮಾಡಬೇಕಿದೆ.ಆಗ ಮಾತ್ರ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ.
ಏಷ್ಯದ ಬೆಳಕಾದ ಬುದ್ದ ನಮ್ಮ ಸಮಾಜವು ಎದುರಿಸುವ ಎಲ್ಲಾ ಮೂಲ ಸಮಸ್ಯೆಗಳನ್ನು ಪರಿಹರಿಸಲು ಹಲವಾರು ಮಾರ್ಗಗಳನ್ನು ನಮಗೆ ಬೋಧನೆಗಳ ರೂಪದಲ್ಲಿ ನೀಡಿರುವರು ಅವು ಸಾರ್ವಕಾಲಿಕವಾದವುಗಳು ಅವುಗಳ ಪಾಲನೆ ಮತ್ತು ಮುಂದಿನ ಪೀಳಿಗೆಗೆ ಅವುಗಳ ವರ್ಗಾವಣೆ ನಮ್ಮ ಆದ್ಯ ಕರ್ತವ್ಯ ಆಗಬೇಕಿದೆ.
ಭಕ್ತಿ ಮತ್ತು ಸಮಾಜ ಸುಧಾರಕರಾದ ಬಸವಣ್ಣನವರ ಸಮಾಜಮುಖಿ ಚಿಂತನೆಗಳು ಇಂದಿಗೂ ಪ್ರಸ್ತುತ ಅವರ ವಚನಗಳು ನಮಗೆ ದಾರಿ ದೀಪಗಳು ಸಮಾಜ ಪರಿವರ್ತನಾ ಸಾಧನಗಳು ಎಂದರೂ ತಪ್ಪಿಲ್ಲ. ಅವರ ಚಿಂತನೆಗಳು ಸುಸ್ಥಿರ ಸಮಾಜಕ್ಕೆ ಅಡಿಗಲ್ಲುಗಳು.
ಹಿಂದುಳಿದವರ ಸಬಲೀಕರಣದ ದಿಕ್ಸೂಚಿಗಳು ಅವರ ಚಿಂತನೆಗಳನ್ನು ಅಳವಡಿಸಿಕೊಂಡು ಸುಸ್ಥಿರ ಸಮಾಜ ನಿರ್ಮಾಣ ಮಾಡಬೇಕಿದೆ.
ಈಗೆ ಬುದ್ದ ,ಬಸವಣ್ಣನವರು ಮತ್ತು ಅಂಬೇಡ್ಕರ್ ರವರ ಚಿಂತನೆಗಳು ನಮ್ಮ ಸಮಾಜಕ್ಕೆ ಮಾರ್ಗದರ್ಶನ ಮಾಡುವ ಕೈಮರಗಳು ,ಕತ್ತಲಲಿ ಇರುವ ಸಮಾಜಕ್ಕೆ ಬೆಳಕು ನೀಡುವ ಶಾಶ್ವತವಾದ ಪಂಜುಗಳು ಅವರು ನೀಡಿದ ಸಂದೇಶಗಳನ್ನು ಪಾಲಿಸೋಣ ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳೋಣ ತನ್ಮೂಲಕ ಸುಸ್ಥಿರ ಸಮಾಜಕ್ಕೆ ಭದ್ರವಾದ ಅಡಿಪಾಯ ಹಾಕೋಣ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಯನ್ನು ಸಾಧಿಸೋಣ
*ಸಿ ಜಿ ವೆಂಕಟೇಶ್ವರ*
*ತುಮಕೂರು*

28 April 2020

ಅವನಾಗು ನೀನು( ಶಂಕರ ಜಯಂತಿ ನೆನಪಿಗೆ ಹನಿ)



*ಅವನಾಗು ನೀನು*

(ಇಂದು ಶಂಕರ ಭಗವತ್ಪಾದರು ಮತ್ತು ರಾಮಾನುಜಾಚಾರ್ಯರ ಜಯಂತಿ)

ಶಂಕರರು ಅಂದರು ಅದ್ವೈತ
ಮಧ್ವಾಚಾರ್ಯರಂದರು ದ್ವೈತ
ರಾಮಾನುಜರದು ವಿಶಿಷ್ಟಾದ್ವೈತ
ಬಸವೇಶ್ವರರದು ಶಕ್ತಿ ವಿಶಿಷ್ಟಾದ್ವೈತ
ಹೆಸರು ಬೇರೆಯಾದರೂ
ಎಲ್ಲರೂ ಹೇಳಿದ್ದೊಂದೆ
ಅವನಿಯಲಿ ಅವನಿರುವನು
ನಿದ್ದೆಯಿಂದ ಎದ್ದೇಳು
ಅವನಾಗು ನೀನು.

*ಸಿ ಜಿ ವೆಂಕಟೇಶ್ವರ*
*ತುಮಕೂರು*

ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಚುಟುಕುಗಳು



*ಚುಟುಕು ೧*

*ಕೃತಿ ಚೌರ್ಯ*

ಎಲ್ಲರೂ ಹೊಗಳಿದ್ದೇ ಹೊಗಳಿದ್ದು
ಆ ಲೇಖಕರ ಪಾಂಡಿತ್ಯ ಮತ್ತು ಶೌರ್ಯ
ಉಗುಳಲು‌ ಶುರು ಮಾಡಿದರು ಜನ
ತಿಳಿಯುತ್ತಲೇ ಅವರ ಕೃತಿ ಚೌರ್ಯ

*ಚುಟುಕು ೨*

*ಅರವಟ್ಟಿಗೆ*

ಬೇಸಿಗೆಯಲಿ ದಾಹವ ತಣಿಸಿಕೊಳ್ಳಲು
ನಾವು ಕುಡಿಯಲೇ ಬೇಕು ನೀರು ಆಗಾಗ್ಗೆ
ಮೂಕ ಪ್ರಾಣಿ ಪಕ್ಷಿಗಳ ದಾಹ ನೀಗಿಸಲು
ಕಾಡು,ನಾಡಿನಲಿ ಇಡಬೇಕಿದೆ ಅರವಟ್ಟಿಗೆ

*ಸಿ ಜಿ ವೆಂಕಟೇಶ್ವರ*
*ತುಮಕೂರು*

27 April 2020

ಎರಡು ಶಾಯರಿಗಳು

ಎರಡು ಶಾಯರಿಗಳು

*ಶಾಯರಿ೧*

ಕನಸು ಕಂಡಿದ್ದೆ ಗೆಳತಿ
ನಿನ್ನ ಜತೆಗೂಡಿ ನಡೆಯಬೇಕು
ಜೀವನವೆಲ್ಲಾ|
ನಡೆಯದೇ ನಿಂತು ಬಿಟ್ಟಿರುವೆ
ಈಗೀಗ ನಿನ್ನ ಸಮಾದಿಯ ಬಳಿ
ನಿನಗೆ ಕಾಣುತ್ತಿದೆಯಲ್ಲ?||

*ಶಾಯರಿ೨*

ಮರೆತು ಬಿಡು ಚೆಲುವೆ
ಇಂದಿನಿಂದ ನನ್ನ
ಅವಳು ಕನಸಲಿ ಬಂದಿದ್ದಳು
ಕಳೆದ ರಾತ್ರಿ|
ಮನಸು ಮೈಲಿಗೆಯಾಗಿದೆ
ಇನ್ನೆಲ್ಲಿದೆ ನನ್ನ ಶುದ್ದ
ಪ್ರೇಮಕ್ಕೆ ಖಾತ್ರಿ||.

*ಸಿ‌ ಜಿ ವೆಂಕಟೇಶ್ವರ*
*ತುಮಕೂರು*



26 April 2020

ತವರ ಕಾಪಾಡು ( ಜನಪದ ಗೀತೆ) ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದ ಜಾನಪದ ಗೀತೆ


ಜನಪದ ಗೀತೆ

*ತವರ ಕಾಪಾಡು*

ನನ್ನಯ ತವರೂರ ನಾಹ್ಯಾಗೆ ಮರೆಯಲಿ
ಚಿನ್ನಕ್ಕಿಂತಲೂ  ಮೇಲು| ಕೇಳೆ ಗೆಳತಿ
ರನ್ನದ ಗುಣದ ನನ್ನಪ್ಪ.||

ಅಮ್ಮನ ಕೈತುತ್ತು ಅಮೃತಕೆ ಸಮಾನ
ಕಮ್ಮನೆಯ ಕುರುಕಲು ನೀಡುತ್ತ| ದಿನಕೊಂದು
ಹಣ್ಣು ತಿನಿಸಿ ನಲಿಯೋಳು||


ಕೀಟಲೆ ಮಾಡುತ್ತ ತಮ್ಮ ಬರುತಿದ್ದ
ಕ್ವಾಟಲೆ ಕೊಟ್ಟರೂ ನನ್ನ ಪ್ರಾಣ|ಅಂತಹವನು
ಕೋಟಿ ಕೊಟ್ಟರೂ ಸಿಗೋದಿಲ್ಲ||

ಸಣ್ಣವನು ಅಲ್ಲ ನನ್ನ ಅಣ್ಣ
ಕಣ್ಣ ರೆಪ್ಪೆ ಹಂಗೆ ಕಾಪಾಡಿದ|ಅವನು
ಕೊಟ್ಟ ಉಡುಗೊರೆಗೆ ಸಮವಿಲ್ಲ||


ಇಂದ್ರನ ಅರಮನೆ ನನ್ನ ತವರ್ಮನೆ
ಚಂದಾಗಿ ಹಾಲ್ಕೊಡುವ ಕಾಮಧೇನು|ನಮ್ಮನೆ
ನಾರಾಯಣನ ಹ್ಯಾಗೆ ಮರೆಯಲಿ||

ಬಂಗಾರ ಬೆಳ್ಳಿ ಬ್ಯಾಡ ತವರಿಂದ
ತೊಂದರೆಯು ಬರದಂತೆ| ಶಿವನೆ
ನನ ತವರ ಕಾಪಾಡು||


*ಇಂದಿನ ಪ್ರಜಾಪ್ರಗತಿಯಲ್ಲಿ ನಾಗಾರಾಜ್ ಜಿ‌ ನಾಗಸಂದ್ರ ರವರ ಕಾದಂಬರಿ ಅಂತರ ಬಗ್ಗೆ ನನ್ನ ವಿಮರ್ಶೆ*

*ಇಂದಿನ ಪ್ರಜಾಪ್ರಗತಿಯಲ್ಲಿ ನಾಗಾರಾಜ್ ಜಿ‌ ನಾಗಸಂದ್ರ ರವರ ಕಾದಂಬರಿ ಅಂತರ ಬಗ್ಗೆ ನನ್ನ ವಿಮರ್ಶೆ*

ಇಂದಿನ *ಪ್ರತಿನಿಧಿ* ಪತ್ರಿಕೆಯಲ್ಲಿ ನನ್ನ ಶಿಶುಗೀತೆ *ಸಂಪತ್ತನ ದಿನಚರಿ* ಪ್ರಕಟವಾಗಿದೆ


ಇಂದಿನ  *ಪ್ರತಿನಿಧಿ*  ಪತ್ರಿಕೆಯಲ್ಲಿ ನನ್ನ ಶಿಶುಗೀತೆ *ಸಂಪತ್ತನ ದಿನಚರಿ*  ಪ್ರಕಟವಾಗಿದೆ

25 April 2020

ಪ್ರತಿನಿಧಿ ಪತ್ರಿಕೆಯಲ್ಲಿ ಪ್ರಕಟವಾದ ಹನಿ

ಪ್ರತಿನಿಧಿ ಪತ್ರಿಕೆಯಲ್ಲಿ ಪ್ರಕಟವಾದ ಹನಿ

ಎರಡು ಚುಟುಕುಗಳು

ಎರಡು ಚುಟುಕುಗಳು


*ದೇಗುಲಗಳು*

ಸಕಲ ಕಾಲಕೂ ಮನಕಾನಂದ ನೀಡುತ್ತಿವೆ
ಬೇಲೂರು ಹಳೇಬೀಡಿನ ಶಿಲಾಬಾಲಿಕೆಗಳು
ಕಲಾರಸಿಕರನ್ನು ಕೈಬೀಸಿ ಕರೆಯುತ್ತಲಿವೆ
ಕನ್ನಡ ನಾಡಿನ ವಿಶ್ವ ಪ್ರಸಿದ್ಧ ದೇಗುಲಗಳು.


*ನಿಲ್ಲುತ್ತಿಲ್ಲ*

ವೈರಾಣುವಿನ ಪ್ರವರಕ್ಕೆ ಹೈರಾಣಾಗಿದೆ ಜಗ
ಎಲ್ಲಡೆ ಮರಣಮೃದಂಗವು  ನಿಲ್ಲುತ್ತಿಲ್ಲ
ವೈದ್ಯರು,ನಾರಾಯಣ,ಶ್ರಮಿಸುತ್ತಲಿದ್ದಾರೆ
ಕಾಲವನ್ನು ತಡೆಯೋರು ಯಾರೂ ಇಲ್ಲ.

*ಸಿ ಜಿ ವೆಂಕಟೇಶ್ವರ*
*ತುಮಕೂರು*

24 April 2020

ಪುಸ್ತಕ ವಿಮರ್ಶೆ (ಜೋಗಿ ಕತೆಗಳು)


ಪುಸ್ತಕ ವಿಮರ್ಶೆ
ಇಂದು ನಾನು ಓದಿದ ಪುಸ್ತಕ ಜೋಗಿ ಕಥೆಗಳು
ಒಂದಕ್ಕಿಂತ ಒಂದು ವಿಭಿನ್ನವಾದ ಕಥಾವಸ್ತುವನ್ನು ಒಳಗೊಂಡ ೨೧ ಕಥೆಗಳನ್ನು ಒಂದೆ ಓದಿಗೆ ಆರಿಸಿಕೊಂಡು ಹೋದ ಪುಸ್ತಕ .ಜೋಗಿರವರ ಭಾಷೆ ಕಥೆಗಳಲ್ಲಿ ಬರುವ ತಿರುವುಗಳನ್ನು ಓದಿಯೇ ಅನುಭವಿಸಬೇಕು
ಅವರ ಗೆಳೆಯ ಸೂರಿಯವರ ವಿಮರ್ಶೆ ಪುಸ್ತಕದ ಮೊದಲ ಪುಟಗಳಲ್ಲಿ ಓದಿದ ಮೇಲೆ ಇಡಿ ಕಥೆಗಳ ಓದಿದ ಮೇಲೆ ಸೂರಿ ಒಬ್ಬ ಸಾಮಾನ್ಯ ಓದುಗನಂತೆ ವಿಮರ್ಶೆ ಮಾಡಿರುವುದು ನನ್ನ ಅರಿವಿಗೆ ಬಂತು.
ಈ ಕಥೆಗಳಲ್ಲಿ ಬರುವ ಬಹುತೇಕ ಪಾತ್ರಗಳು ನಾವು ಕೇಳಿದ ಮಹಾನ್ ವ್ಯಕ್ತಿಗಳದು ಉದಾಹರಣೆಗೆ ಪುರಂದರ ವಿಠ್ಠಲ ಗೊರೂರು ರಾಮಸ್ವಾಮಿ ಇತ್ಯಾದಿ .
ಒಟ್ಟಿನಲ್ಲಿ ಇಂದು ಒಂದು ಉತ್ತಮ ಪುಸ್ತಕ ಓದಿದ ಖುಷಿ
*ಸಿ.ಜಿ.ವೆಂಕಟೇಶ್ವರ*

ಸುಖಿ(ಹನಿ)

*ಸುಖಿ*

ಅವಳಿದ್ದರೆ ನನಗೆ ಸಂತಸ
ಅವರಿದ್ದರೆ ನಾನು ಸುಖಿ
ಎಂದು ಹಲುಬುತ್ತಿದ್ದೆ
ವಿಸ್ಮಯವೆಂದರೆ ಈಗೀಗ
ಅವರಿವರು ಇರದೇ
ಸುಖವಾಗಿರುವೆ ನಾನು
ಪರಮಾನಂದ ಅನುಭವಿಸುವೆ
ಇಲ್ಲದಿದ್ದರೆ " ನಾನು".

ಸಂಪತ್ತನ ದಿನಚರಿ (ಶಿಶುಗೀತೆ)

*ಸಂಪತ್ತನ ದಿನಚರಿ*

ಹತ್ತು ಹತ್ತು ಇಪ್ಪತ್ತು
ತೋಟಕೆ ಹೋದನು ಸಂಪತ್ತು.

ಇಪ್ಪತ್ತು ಹತ್ತು ಮೂವತ್ತು
ಗೆಳೆಯರ ದಂಡು ನೆರೆದಿತ್ತು.

ಮೂವತ್ತು ಹತ್ತು ನಲವತ್ತು
ಸವಿದರು ಹಣ್ಣುಗಳ ಗಮ್ಮತ್ತು.

ನಲವತ್ತು ಹತ್ತು  ಐವತ್ತು
ಕ್ರಮೇಣ ಹೊತ್ತು ಜಾರಿತ್ತು.

ಐವತ್ತು ಹತ್ತು ಅರವತ್ತು
ಮನೆ ಕಡೆ ಸವಾರಿ ನಡೆದಿತ್ತು.

ಅರವತ್ತು ಹತ್ತು ಎಪ್ಪತ್ತು
ಅಜ್ಜಿ ಕೊಟ್ಟರು ಸಿಹಿಮುತ್ತು.

ಎಪ್ಪತ್ತು ಹತ್ತು ಎಂಭತ್ತು
ಚಂದಿರ ಬಾನಲಿ ಬಂದಿತ್ತು .

ಎಂಭತ್ತು ಹತ್ತು ತೊಂಬತ್ತು
ಅಮ್ಮ ಕೊಟ್ಟರು ಕೈತುತ್ತು.

ತೊಂಬತ್ತು ಹತ್ತು ನೂರು
ಮಲಗುವ ಕೋಣೆ ಸೇರು

ಹತ್ತರಿಂದ ನೂರು ಈಗಿತ್ತು
ಸಂಪತ್ತನ ದಿನಚರಿ ಮುಗಿದಿತ್ತು

*ಸಿ ಜಿ ವೆಂಕಟೇಶ್ವರ*
*ತುಮಕೂರು*

23 April 2020

ಜೀವಾತ್ಮಗಳ ವಿಕ್ರಯ (ಕಾದಂಬರಿಯ ವಿಮರ್ಶೆ)

ಪುಸ್ತಕ ವಿಮರ್ಶೆ

ಕಾದಂಬರಿ ಜೀವಾತ್ಮಗಳ ವಿಕ್ರಯ

"ಜೀವಾತ್ಮಗಳ ವಿಕ್ರಯ" ಕಾದಂಬರಿಯ ಹೆಸರೇ ನನ್ನ ಓದಲು ಪ್ರೇರೇಪಿಸಿತು. ಹೆಸರಾಂತ ಆಂಗ್ಲ ಕಾದಂಬರಿಕಾರರಾದ ಶ್ರೀ ವಿದ್ಯಾಧರ ದುರ್ಗೇಕರ್ ರವರ ಮೊದಲ ಕನ್ನಡ ಕಾದಂಬರಿ ಈ ಜೀವಾತ್ಮಗಳ ವಿಕ್ರಯ

ಅಭಿವೃದ್ಧಿ ಮತ್ತು ಪರಿಸರದ ವಿಷಯಗಳು ಬಂದಾಗ ಬಹಳ ಸಲ‌ ಅಭಿವೃದ್ಧಿಯ ಹೆಸರಿನಲ್ಲಿ ಮುಗ್ದ ಜನರ ಶೋಷಣೆ ಮತ್ತು ಪರಿಸರದ ಮೇಲಿನ ದೌರ್ಜನ್ಯವು ಗೆಲುವು ಸಾಧಿಸಿರುವುದನ್ನು ನಾವು ಕಾಣುತ್ತೇವೆ.
ಈ ಕಾದಂಬರಿ ಸಹ ಅದೇ ರೀತಿಯ ಕಥಾವಸ್ತು ಇಟ್ಟುಕೊಂಡು ವಿಭಿನ್ನವಾದ ನಿರೂಪಣೆಯೊಂದಿಗೆ ಓದುಗರ ಮನಸೆಳೆಯುತ್ತದೆ.

ಬಯಲು ಸೀಮೆಯ ನನಗೆ ಕರಾವಳಿಯ ಬದುಕು ಅಷ್ಟಾಗಿ ಪರಿಚಿತವಿರಲಿಲ್ಲ ಈ ಕಾದಂಬರಿಯ ಮೊದಲೆರಡು ಅದ್ಯಾಯ ಓದುವಾಗ ಕರಾವಳಿಯ ಚಿತ್ರಣ ನನ್ನ ಕಣ್ಣ ಮುಂದೆ ಹಾದು ಹೋಯಿತು.

ಪ್ರಸ್ತುತ ಕಾದಂಬರಿಯಲ್ಲಿ ಕಾದಂಬರಿಕಾರರು ಬೃಹತ್ ಕೈಗಾರಿಕಾ ಸ್ಥಾಪನೆಗೆ ಅಲಿಗದ್ದೆ ಸೇರಿದಂತೆ  ಮೂರು ಹಳ್ಳಿಗಳನ್ನು ವಶಪಡಿಸಿಕೊಳ್ಳಲು ರಾಜಕಾರಣಿಗಳಾದ ಕುಬೇರ, ಮತ್ತು ದಾಮು ಹೇಗೆ ಹೊಂಚು ಹಾಕಿ ಸಂಚು ಮಾಡುವರು. ಇದಕ್ಕೆ ‌ಯುವ ವಕೀಲೆ ರೋಶನಿ ಮತ್ತು ಕಾಲೇಜು ಅದ್ಯಾಪಕ ಅಮರ್ ಹೇಗೆ ಎಲ್ಲಾ ರೀತಿಯಲ್ಲಿ ಪ್ರತಿಭಟನೆಗಳನ್ನು ಆಯೋಜಿಸಿ ಹಳ್ಳಿಯ ಜನರಿಗೆ ನ್ಯಾಯ ಕೊಡಿಸಲು ಬಹಳ ‌ಪ್ರಾಮಾಣಿಕ ಪ್ರಯತ್ನ ಮಾಡುವರು, ಆದರೆ ಭ್ರಷ್ಟಾಚಾರದ ವ್ಯವಸ್ಥೆ, ಅಪ್ರಮಾಣಿಕ ಪೊಲೀಸರು, ಅನಕ್ಷರಸ್ಥರು, ಚಟದಾಸರು ಈಗೆ ಹಲವಾರು ಜನರ ಷಡ್ಯಂತ್ರದಿಂದ ಹಳ್ಳಿಯ ಜನರು ಕೇವಲ ತಮ್ಮ ಜಮೀನನ್ನು ಬಿಟ್ಟು ಹೊರಡುವುದಿಲ್ಲ ತಮ್ಮ ಜೀವಾತ್ಮಗಳ ಮಾರಿಕೊಂಡು ನಿರ್ಜೀವವಾಗಿ ತಿಳಿಯದ ಜಾಗಕ್ಕೆ ಹೊರಡುವ ಜನರ ಕಂಡು ಕಾದಂಬರಿಯ ಕಡೆಯಲ್ಲಿ ನಮ್ಮ ಕಣ್ಣಲ್ಲಿ ಒಂದೆರಡು ಹನಿ ಜಿನುಗದಿರದು .

ಕುಬೇರ ಮತ್ತು ದಾಮುರಂತಹ ಗೋಮುಖ ವ್ಯಾಘ್ರರು ಹಳ್ಳಿಯ ಜನರನ್ನು ವಂಚಿಸುತ್ತಾ ಬಹುರಾಷ್ಟ್ರೀಯ ಕಂಪನಿಗೆ ಒಳಗೊಳಗೆ ಹೇಗೆ ಸಹಕರಿಸಿ ಸ್ವ ಕಲ್ಯಾಣ ಮಾಡಿಕೊಳ್ಳುವರು. ಹಾಗೂ ಹಳ್ಳಿಯಲ್ಲಿ ಅನೈತಿಕ ಚಟುವಟಿಕೆಗಳನ್ನು ಪ್ರೋತ್ಸಾಹ ನೀಡಿ  ಹೇಗೆ ಹಳ್ಳಿಯ ವಾತಾವರಣದಲ್ಲಿ ಕೆಟ್ಟ ಬದಲಾವಣೆ ತಂದರು ಎಂಬುದನ್ನು ಕಾದಂಬರಿಕಾರರು ಚೆನ್ನಾಗಿ ಬಿಂಬಿಸಿದ್ದಾರೆ  ಇಂದಿಗೂ ನಮ್ಮ ಸಮಾಜದಲ್ಲಿ ಇಂತವರು ಇರುವುದು ದುರದೃಷ್ಟಕರ.

ಹಳ್ಳಿಯಲ್ಲಿ ಧರ್ಮ ಸಮನ್ವಯತೆಯನ್ನು ಬಿಂಬಿಸುವಲ್ಲಿ ಕಾದಂಬರಿಕಾರರು ಉತ್ತಮವಾದ ಚಿತ್ರ ಕಟ್ಟಿಕೊಟ್ಟಿದ್ದಾರೆ, ಜೋನ್ , ಅಲೋಮ, ಪ್ರಾನ್ಸಿಸ್, ಮತ್ತು ಕಥಾನಾಯಕನ ನಡುವಿನ ಸಂಬಂಧ ,ಹಳ್ಳಿಯ ಜನರ ಅನ್ಯೋನ್ಯತೆ ಬಿಂಬಿಸಿದ್ದಾರೆ ಇದು ಇಂದಿನ ಸಮಾಜಕ್ಕೆ ಬೇಕಾದ ತುರ್ತು ಅಗತ್ಯ

ಗಂಭೀರವಾದ ವಿಷಯದ ಕುರಿತ ಕಾದಂಬರಿಯಲ್ಲಿ ಎರಡು ಮೂರು ಕಡೆ ಲೇಖಕರು ಓದುಗರಿಗೆ ಶೃಂಗಾರ ರಸದೌತಣ ನೀಡಿದ್ದಾರೆ.
ಯುವ ಜೋಡಿ ರೋಶನಿ ಮತ್ತು ಸಮರ್ ರೊಮ್ಯಾಂಟಿಕ್ ದೃಶ್ಯಗಳು ಓದುವಾಗ ಮೈಬಿಸಿಯಾಗುವುದು ಸುಳ್ಳಲ್ಲ .

ಒಟ್ಟಾರೆ ಹೇಳುವುದಾದರೆ ಈ ಕಾದಂಬರಿಯಲ್ಲಿ‌ ಅಲ್ಲಲ್ಲಿ ಕೆಲವು ಅನುವಾದ ದೋಷಗಳನ್ನು ಹೊರತುಪಡಿಸಿದರೆ ಚಿಂತನೆಗೆ ಹಚ್ಚುವ, ಸಮಾಜದ ಬಗ್ಗೆ ಕಾಳಜಿ ಇರುವ ,ಪರಿಸರ ಕಾಳಜಿ ಇರುವ ನಮ್ಮಲ್ಲಿ ಜಾಗೃತಿ ಮೂಡಿಸುವ ಒಂದು ಸುಂದರ ಕಾದಂಬರಿ ಎಂದು ಹೇಳಬಹುದು.
 ಇಂದು ವಿಶ್ವ ಪುಸ್ತಕ ದಿನ ಈ ದಿನದಂದು ನೀವು ಸಹ ಇಂತಹ ಕಾದಂಬರಿಯನ್ನು  ಓದಲು ಸಲಹೆ ನೀಡುವೆನು.
ವಂದನೆಗಳೊಂದಿಗೆ

ಸಿ ಜಿ ವೆಂಕಟೇಶ್ವರ
ತುಮಕೂರು

ಕಾದಂಬರಿ ಹೆಸರು: ಜೀವಾತ್ಮಗಳ ವಿಕ್ರಯ

ಕಾದಂಬರಿಕಾರರ ಹೆಸರು: ವಿದ್ಯಾಧರ ದುರ್ಗೇಕರ್.

ಪ್ರಕಾಶನ: ಅವಂತ ಗಾರ್ಡೆ ಪ್ರಕಾಶನ
ಬೆಂಗಳೂರು.

ಬೆಲೆ:೨೨೫

ಸಹೃದಯಿ (ವಿಶ್ವ ಪುಸ್ತಕ ದಿನದ ಹನಿ)

*ಸಹೃದಯಿ*

ಮುಂಗಾರು ಮಳೆಯನ್ನು
ಕಲ್ಪಿಸಿಕೊಳ್ಳುವನು
ಕವಿಯು ತನ್ನ ಮಸ್ತಕದಿ
ಸಹೃದಯಿ ಓದುಗ
ಮಳೆಯಲಿ ಮಿಂದು
ಪುಳಕಗೊಳ್ಳವ ಓದಿ ಪುಸ್ತಕದಿ.

*ಸಿ ಜಿ ವೆಂಕಟೇಶ್ವರ*
*ತುಮಕೂರು*

(ಇಂದು ವಿಶ್ವ ಪುಸ್ತಕ ದಿನ)

22 April 2020

ಸಹನೆ ಬೇಕು (ಭಾವಗೀತೆ)

*ಸಹನೆ ಬೇಕು*

(ಇಂದು ೨೧/೪/೨೦೨೦ ವಿಶ್ವ ಸೃಜನಶೀಲ ದಿನ)

ಕುಂಚವನಿಡಿದು ಬಣ್ಣಗಳ
ಚಿತ್ತಾರದಿಂದ ಚಿತ್ರ ಬಿಡಿಸಬೇಕು
ಆಹಾ ಎನ್ನುವ ಕಲಾಕೃತಿ
ರಚಿಸಲು ಕಲಾವಿದಗೆ ಸಹನೆ ಬೇಕು.

ಶೃತಿ ,ಲಯ, ಯತಿ ಗತಿ
ರಾಗ ತಾಳ ಗೊತ್ತಿರಬೇಕು
ಕಿವಿಗಿಂಪಾದ ಹಾಡು ಹಾಡಲು
ಸಂಗೀತಗಾರನಿಗೆ ಸಹನೆ ಬೇಕು.

ಮುದ್ರೆ, ಭಾವನೆ ತಾಣಗಳ
ಆಳವಾದ ಅಭ್ಯಾಸವಿರಬೇಕು
ಮನತಣಿಸುವ ನರ್ತನ ಮಾಡಲು
ನೃತ್ಯಗಾರ್ತಿಗೆ ಸಹನೆ ಬೇಕು

ಕಗ್ಗಲ್ಲನು  ಕಡೆದು ತಿದ್ದಿ ತೀಡಿ
ಮೂರುತಿ ಕೆತ್ತನೆ ಮಾಡಬೇಕು
ಕಣ್ಮನ ಸೆಳೆವ ಕಲಾಕೃತಿಗಳ
ರಚಿಸಲು ಶಿಲ್ಪಿಗೆ ಸಹನೆ ಬೇಕು.

*ಸಿ ಜಿ ವೆಂಕಟೇಶ್ವರ*
*ತುಮಕೂರು*





ಸಿಹಿಜೀವಿಯ ನಾಲ್ಕು ಶಾಯರಿಗಳು


*ಸಿಹಿಜೀವಿಯ ನಾಲ್ಕು ಶಾಯರಿಗಳು*

*ಶಾಯರಿ೧*


ಅವಳ ಮನೆ ಮುಂದೆ ನಿಂತು
ದಿನವೂ ಅವಳ ನೋಡುವುದೇ ವಿಸ್ಮಯ
ಅವರಮ್ಮ ಬಂದಳು ಬೈಯುತ
ಯಾವುದರಲ್ಲಿ  ಹೊಡೀ ಬೇಕು ನಿನ್ನ ಮನೆಕಾಯ.

*ಶಾಯಿರಿ೨*

ನೀನೆಷ್ಟು ಬೈದರೂ, ದೂರ ಸರಿದರೂ
ನನ್ನ ಹೃದಯದಲ್ಲಿ ಕಟ್ಟವೆ ನಿನಗೆ ಮಂದಿರ
ಪ್ರೀತಿಯಲಿ ನಾ ಸೋತರೂ ಚಿಂತೆಯಿಲ್ಲ
ಪ್ರೀತಿ ಮತ್ತು ಯುದ್ದದಲ್ಲಿ ಎಲ್ಲವೂಸುಂದರ.

*ಶಾಯರಿ ೩*

ಆ ಮುಂಗುರುಳ ನಾರಿ ಸಿಗದಿದ್ದರೆ
ನೇಣು ಹಾಕಿಕೊಳ್ಳಲು ಹುಡುಕಿದ ಹಗ್ಗ
ತಲೆ ಕಡಿಯುತ್ತಿದೆ ಎಂದು ಕೆರೆಯಲು
ಅವಳು ತೆಗೆದು ಬಿಟ್ಟಳು ವಿಗ್ಗ .

*ಶಾಯರಿ ೪*

ತಿಳಿದವರೆಂದರು
ಪ್ರೀತಿ ಮಾಯೆ ಹುಷಾರು
ಈಗ ನಾನಾಗಿರುವೆ ದೇವದಾಸ್
ಹುಡುಕುತಿಹೆನು ನನ್ನ ಪಾರು

*ಸಿ ಜಿ ವೆಂಕಟೇಶ್ವರ*
*ತುಮಕೂರು*

21 April 2020

ಸಮರಸ (ಹನಿಗವನ)

*ಸಮರಸ*

ಸಮರದಲ್ಲಿ
ಗೆಲ್ಲಲಾಗದ್ದನ್ನು
ಸಮರಸದಿ
ಗೆಲ್ಲಬಹುದಲ್ಲವೆ?
ಮರಗಿಡ ಬಳ್ಳಿ
ಕೂಡಿಬಾಳುವುದನ್ನು
ನೋಡಿಲ್ಲವೆ?

*ಸಿ ಜಿ ವೆಂಕಟೇಶ್ವರ*
*ತುಮಕೂರು*

20 April 2020

ಸಿಹಿಜೀವಿಯ ಮೂರು ಹನಿಗಳು

*ಸಿಹಿಜೀವಿಯ ಮೂರು ಹನಿಗಳು*

*೧*

*ಮರಳಿ ಗೂಡಿಗೆ*

ಹಳ್ಳಿಯನು ಕಾಲಕಸವಾಗಿ
ಕಂಡು ಪಟ್ಟಣಕ್ಕೆ
ಹಾರಿದರು |
ನಗರವೇ ಲೋಕವೆಂದು
ಮೆರೆದರು
ಕಾಲನು ಅಬ್ಬರಿಸಲು
ಮರಳಿ ಗೂಡಿಗೆ
ಸೇರಿದರು.||

*೨*

*ನಾಕ ಸಿಗದು*

ಎಲ್ಲಾ ಕಾಲಕೂ
ನಮ್ಮ ನಡೆ ನುಡಿ
ಒಂದೇ ಆಗಿದ್ದರೆ
ಲೋಕ ಮೆಚ್ಚುವುದು|
ಗೋಸುಂಬೆಯಂತೆ
ಕ್ಷಣಕೊಂದೊಂದು
ಬಣ್ಣ ಬದಲಾಯಿಸಿದರೆ
ನಮಗೆ ನಾಕ ಸಿಗದು.||

*೩*

*ಹುಷಾರು*

ಅವನಂದ ನಾನು
ಯಾವಾಗಲೂ
ಕಾಣುವೆ
ಸಿಹಿ ಕನಸು|
ಅವಳೆಂದಳು
ಹುಷಾರು
ಬರಬಹುದು
ಡಯಾಬಿಟಿಸ್ಸು.||

*ಸಿ ಜಿ ವೆಂಕಟೇಶ್ವರ*
*ತುಮಕೂರು*


19 April 2020

ಆಧುನಿಕ ಕೃತಘ್ನ ಸಮಾಜಕ್ಕೆ ಹಿಡಿದ ಕನ್ನಡಿ (ವಿಮರ್ಶೆ)

*ಆಧುನಿಕ ಕೃತಘ್ನ ಸಮಾಜಕ್ಕೆ ಹಿಡಿದ ಕನ್ನಡಿ*

ಪುಸ್ತಕ ವಿಮರ್ಶೆ

ಹೆಸರಾಂತ ಕಥೆಗಾರರು, ಅಂಕಣಕಾರರು, ಮತ್ತು ಕಾದಂಬರಿಕಾರರಾದ ನಾಗರಾಜ ಜಿ ನಾಗಸಂದ್ರ ರವರು ತಮ್ಮ ಕಾದಂಬರಿ "ಅಂತರ " ದಲ್ಲಿ ಆಧುನಿಕ ಕುಟುಂಬ ವ್ಯವಸ್ಥೆಯ ಸೂಕ್ಷ್ಮ ಚಿತ್ರಣ ನೀಡಿದ್ದಾರೆ.ಮದ್ಯಮ ವರ್ಗಗಳ ಆಸೆ,ತಳಮಳ,ತಲ್ಲಣ,ಅನ್ಯಾಯ ಮಾರ್ಗದಿ ಶ್ರೀಮಂತರಾಗುವವರ ಹಪಾಹಪಿತನ ಮುಂತಾದವುಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ.

ಮಕ್ಕಳನ್ನು ಬೆಳೆಸುವಾಗ ಹೇಗೆ ಪಾಲಕರು ತಮ್ಮ ಒಣ ಪ್ರತಿಷ್ಠೆಯನ್ನು ತೋರಿಸಿತ್ತಾ ಅವರಲ್ಲಿ ಮೌಲ್ಯಗಳನ್ನು ಬೆಳೆಸಲು ವಿಫಲವಾಗಿ ಕೊನೆಯಲ್ಲಿ ಅವರ ಮಕ್ಕಳ ಭವಿಷ್ಯವನ್ನು ಅವರೇ ಹಾಳು ಮಾಡುತ್ತಾರೆ. ಇದಕ್ಕೆ ವಿರುದ್ಧವಾಗಿ ಮಕ್ಕಳ ಬಾಲ್ಯದಲ್ಲಿ ಅವರಿಗೆ ಒಳ್ಳೆಯ ಸಂಸ್ಕಾರ,ವಿನಯ,ಸಭ್ಯತೆ,ಮುಂತಾದ ಸದ್ಗುಣಗಳನ್ನು ಬೆಳೆಸಿದರೆ ಅವರ ಬದುಕು ಹೇಗೆ ಹಸನಾಗುವುದು ಎಂದು ತಿಳಿಸುವ ಒಂದು ಮೌಲಿಕ ಕಾದಂಬರಿ ಎಂದರೆ ತಪ್ಪಾಗಲಾರದು.

ವಿವೇಚನೆ ಇಲ್ಲದೇ ಹೆಂಡತಿಯ ತಾಳಕ್ಕೆ ಕುಣಿದ ರಾಜೇಶ್, ಮತ್ತು ತಿಳುವಳಿಕೆಯಿಲ್ಲದ ನಯನ ಇವರಿಬ್ಬರೂ ಅಮಾಯಕ ಹಳ್ಳಿಯ ರಕ್ತ ಸಂಬಂಧಿಕರಿಗೆ ಮೋಸ ಮಾಡಿದ ಫಲವನ್ನು ಹೇಗೆ ಉಣ್ಣುವರು ಎಂಬುದನ್ನು ಲೇಖಕರು ಕಾದಂಬರಿಯಲ್ಲಿ ಬಹಳ ಸುಂದರವಾಗಿ ಚಿತ್ರಿಸಿದ್ದಾರೆ.

ಪೋಷಕರು ಸರಿ ದಾರಿಯಲ್ಲಿ ನಡೆದು ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ಮಾಡಿದರೆ ನಿರ್ಮಲ ಮತ್ತು ನಾಗೇಶ್ ದಂಪತಿಗಳಂತೆ ಅವರ ಮಕ್ಕಳು ಉನ್ನತ ಪ್ರಜೆಗಳಾಗುವ ಸಾಧ್ಯತೆ ಇದೆ.

ಪೋಲೀಸ್ ಅಧಿಕಾರಿ ಮಧುಕರ್,ಮತ್ತು ಅವರ ಪತ್ನಿ ಬಹಳ ದರ್ಪದಿಂದ ಇತರರನ್ನು ಬಹಳ ಕೀಳಾಗಿ ಕಾಣುತ್ತಿದ್ದ ಪರಿಣಾಮವಾಗಿ ಅವರ ಮಗ ಅಪ್ಪನ ಹಣ ಪೋಲು ಮಾಡುವ ಸಕಲ ಚಟಾದೀಶನಾಗಿ ಕೊನೆಗೆ ಅಪ್ಪನ ಮೇಲೆ ಕೈ ಮಾಡುವ ಹಂತಕ್ಕೆ ಹೋಗುತ್ತಾನೆ.

ಕಾದಂಬರಿಯ ಕೊನೆಯ ಹತ್ತು ಪುಟಗಳನ್ನು ಓದುವಾಗ ಕಣ್ಣುಗಳು ಒದ್ದೆಯಾದವು. ಈಗಲೂ ಕೆಲ ಪೋಷಕರು ನಮ್ಮ ಮಕ್ಕಳು ವಿದೇಶಕ್ಕೆ ಹೋಗಲು ಆಸೆ ಪಡುವರು ಈ ಕಾದಂಬರಿಯಲ್ಲಿ ರಾಜೇಶ್ ಬದುಕು ಸಾವಿನ ನಡುವೆ ಹೋರಾಡುತ್ತಾ ಕೊನೆಯಲ್ಲಿ ಮಗನ ನೋಡಲು ಆಸೆ ಪಟ್ಟರೆ ಮಗ ಬರುವಿದಿಲ್ಲ ಎಂದು ಕಠೋರವಾದ ನಿರ್ಧಾರ ಆಧುನಿಕ ಕೃತಘ್ನ ಸಮಾಜಕ್ಕೆ ಹಿಡಿದ ಕನ್ನಡಿಯಂತೆ ಕಾಣದಿರದು.
ಕಾದಂಬರಿಯ ಸಂಭಾಷಣೆ, ಬಿಗಿಯಾದ ನಿರೂಪಣೆ ಗಮನ ಸೆಳೆಯಿತು. ಅಲ್ಲಲ್ಲಿ ಅಚ್ಚಿನ ದೋಷಗಳನ್ನು ಬಿಟ್ಟರೆ ಇದೊಂದು ಸುಂದರವಾದ ಸಂದೇಶ ನೀಡುವ ಕಾದಂಬರಿ ಎನ್ನಬಹುದು.

ಪುಸ್ತಕದ ಹೆಸರು: ಅಂತರ (ಕಾದಂಬರಿ)

ಲೇಖಕರು : ನಾಗರಾಜ್ ಜಿ ನಾಗಸಂದ್ರ

ಪ್ರಕಾಶನ:ವರ್ಷಾ ಪ್ರಕಾಶನ ಬೆಂಗಳೂರು

ಬೆಲೆ :೧೩೦₹

*ಸಿ ಜಿ ವೆಂಕಟೇಶ್ವರ*
*ತುಮಕೂರು*

ಭೀಮ ವಿಜಯ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಕಥೆ

ಭೀಮ ವಿಜಯ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಕಥೆ  ಭಾಗ ಒಂದು

18 April 2020

ಶಿಲಾಬಾಲಿಕೆ(ವಿಶ್ವ ಪಾರಂಪರಿಕ ದಿನದ ಹನಿ)

*ಶಿಲಾಬಾಲಿಕೆ*

ಯಾವಾಗ ನೋಡಿದರೂ
ಅದೇ ಸೌಂದರ್ಯ
ಅದೇ ಲವಲವಿಕೆ
ಅವಳೇ ನಮ್ಮ
ನಾಡಿನ ಹೆಮ್ಮೆ
ಬೇಲೂರು ಶಿಲಾಬಾಲಿಕೆ.

(ಇಂದು ವಿಶ್ವ ಪಾರಂಪರಿಕ ದಿನ)

*ಸಿ ಜಿ ವೆಂಕಟೇಶ್ವರ*
*ತುಮಕೂರು*

ಕೂಡಿ ಬಾಳೋಣ (ಭಾವಗೀತೆ)

*ಕೂಡಿ ಬಾಳೋಣ*


ಕನಸುಗಳ ಮೂಟೆಯನ್ನು ಹೊತ್ತು
ಮನಸಿಟ್ಟು ಕಾಯಕ ಮಾಡೋಣ
ಮನಸುಗಳನ್ನು  ಬೆಸೆಯುತ್ತಾ
ಕೂಡಿಬಾಳಿ ಸ್ವರ್ಗಸುಖ ಕಾಣೋಣ||

ಸಹನೆಯ ತೋರತ ಸರ್ವರೆಡೆಗೆ
ಸಮರಸದಿ ಬಾಳಿ ಬದುಕೋಣ
ನಾನು ಅವನೆಂಬ ಭೇದ ತೊರೆದು
ಅವನಿಯಲಿ ಕೂಡಿ ಬಾಳೋಣ.||

ಅಸಮಾನತೆಯನ್ನು ತೊರೆಯುತ
ಸಮತೆಯನು ಪ್ರತಿಪಾದಿಸೋಣ
ಆ ಜನ ಈಜನ ಎಂದು ನೋಡದೆ
ಜನಾರ್ದನ ಮೆಚ್ಚುವಂತಿರೋಣ.||

ನಾಕುದಿನದ ಬಾಳಲಿ ಕಚ್ಚಾಟವೇಕೆ?
ಸಹಬಾಳ್ವೆಯನ್ನು ನಡೆಸೋಣ
ಕವಿಜನರು ಕಂಡ ಕನಸಂತೆ
ಭುವಿಯನ್ನು ನಾಕವ ಮಾಡೋಣ.||

*ಸಿ ಜಿ ವೆಂಕಟೇಶ್ವರ*
*ತುಮಕೂರು*

17 April 2020

ನಮಗೆಲ್ಲಿದೆ ಮತಿ(ಹನಿ ಹನಿ ವಿಸ್ಮಯ ಸ್ಪರ್ಧೆಯಲ್ಲಿ ಮೂರನೇಯ ಬಹುಮಾನ ಲಭಿಸಿದ ಕವನ

*ನಮಗೆಲ್ಲಿದೆ ಮತಿ*
 ಕವನ

ಬುದ್ದ ಬಸವಣ್ಣ ಅಂಬೇಡ್ಕರರು
ಬೋಧನೆ ಮಾಡಿದರು ಬೇಡ ಜಾತಿ
ಜಾತಿ ಧರ್ಮಕ್ಕೊಂದೊಂದು ಮಠವ
ಕಟ್ಟಿ ಕಚ್ಚಾಡುವ ನಮಗೆಲ್ಲಿದೆ ಮತಿ

ಹೆಣ್ಣು ಗಂಡೆಂಬ ತರತಮ ಅಳಿದಿಲ್ಲ
ಜನಸಂಖ್ಯೆ ಏರಿಕೆಗೆ ಕಡಿವಾಣವಿಲ್ಲ
ಉದ್ಯೋಗ ಮಾಡಲು ಕೆಲಸವಿಲ್ಲ
ನಮ್ಮಾತ್ಮಪ್ರೌಢಿಮೆಗೆ ಕೊರತೆಯಿಲ್ಲ.

ಗೊಡ್ಡು ಸಂಪ್ರದಾಯ ಕಂದಾಚಾರ
ಜ್ಞಾನವಿದ್ದೂ ಅಜ್ಞಾನಿಗಳಾಗುತಿಹೆವು
ಜನ ಮರುಳೊ ಜಾತ್ರೆ ಮರುಳೋ
ಈಗಲೂ ನಮಗೆ ಬುದ್ದಿ ಬಂದಿಲ್ಲ

ದಕ್ಷಿಣೆ ಪಡೆವ ಅಶಕ್ತ  ವರಗಳು
ಗರ್ಭದಲೆ ಮಡಿವ ಕಂದಮ್ಮಗಳು
ಮಾತೆಯರ ಮೇಲೆ ದೌರ್ಜನ್ಯಗಳು
ತರೆವುದಾವಾಗ ನಮ್ಮ ಕಣ್ಣುಗಳು.

*ಸಿ ಜಿ ವೆಂಕಟೇಶ್ವರ*
*ತುಮಕೂರು*

16 April 2020

ಸಿಹಿಜೀವಿಯ ೫ ಹನಿಗಳು

*ಸಿಹಿಜೀವಿಯ ೫ ಹನಿಗಳು*

*೧*

*ನಾರಾಯಣ*

ಜಂಬದಿ ಡಂಬದಿ
ಏತಕೆ ಮಾಡುವೆ
ದೇವರ ಪಾರಾಯಣ|
ಹಸಿದ ಹೊಟ್ಟೆಗೆ
ಅನ್ನವ ನೀಡು
ಅಲ್ಲೇ ಇರುವ
ನಮ್ಮ ನಾರಾಯಣ||

*೨*

*ಗೆಲುವು*


ಸಿಕ್ಕೇ ಸಿಗುವುದು
ನೀನೆಣಿಸಿದ ಗೆಲುವು
ಇದ್ದರೆ ನಿನಗೆ
ಜ್ಞಾನದ ಹಸಿವು


*೩*
*ಪಾಲು*

ಗೆಲುವು ಬಂತೆಂದು
ಹಿರಿಹಿರಿ ಹಿಗ್ಗಬೇಡ
ಅದರಲ್ಲಿ ಸೋಲಿನ
ಪಾಲಿದೆ ಮರೆಯಬೇಡ.

*೪*

*ಜೇಡ*

ಸೋತೆನೆಂದು
ಎಂದಿಗೂ ಕುಗ್ಗಬೇಡ
ಬಿಡುವುದೇ
ಬಲೆ ಹೆಣೆವುದ
ಸೋತ ಜೇಡ?

*೫*

*ಕನ್ನಡಿ*

ಬರುವುದು ಗೆಲುವು ಒಂದು ದಿನ
ಪ್ರಯತ್ನ ಮಾಡು ಪ್ರತಿ ದಿನ
ಸೋಲೇ ಗೆಲುವಿನ ಮುನ್ನುಡಿ
ಪ್ರಯತ್ನ ಯಶಸ್ವಿನ ಕನ್ನಡಿ.


*ಸಿ ಜಿ ವೆಂಕಟೇಶ್ವರ*
*ತುಮಕೂರು*


ಮರೆಯದಿರು (ಬಹುಮಾನ ಪಡೆದ ಚುಟುಕು)

*ಮರೆಯದಿರು* 
(ಹನಿ ಹನಿ ವಿಸ್ಮಯ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಚುಟುಕು )

ಸೋತೆನೆಂದು ಚಿಂತಿಸುತ ನೀ ಕೂರುವೆ ಏಕೀಗ
ಬಿದ್ದರು ಬಲೆಯನು ಹೆಣೆಯುವ ಜೇಡವ ನೋಡೀಗ
ನಿನ್ನೊಳಗಿರುವ ಶಕ್ತಿಯು ಹೆಚ್ಚಿದೆ ಮರೆಯದಿರು
ಗೆಲುವದು ಬಂದಾಗ ಹುಚ್ಚಾಗಿ ಮೆರೆಯದಿರು.

*ಸಿ ಜಿ ವೆಂಕಟೇಶ್ವರ*
*ತುಮಕೂರು*

15 April 2020

ಆರೈಕೆ ಮಾಡು(ಕವನ)



*ಆರೈಕೆ ಮಾಡು*

ನೀನು ಒಂದು ದಿನ
ಆಗುವೆ ಮುದುಕ
ಆಗ ನೀನು ಅರಿತು
ಕೊಳ್ಳುವೆ  ಬದುಕ

ಯೌವನ ಯಾರಿಗೂ
ಶಾಶ್ವತವಲ್ಲ
ಮಗನೆ ವೃದ್ಧಾಪ್ಯ
ಇದು ತಪ್ಪಲ್ಲ

ಹಣ್ಣೆಲೆ ಉದರುವ
ಕಾಲವು ಬಂದಿದೆ
ಚಿಗುರೆಲೆ ನಗುವ
ನೋಡಿ ನಲಿದಿದೆ

ಬಾಲ್ಯದಿ ನಡೆದೆನು
ಆಡಿಸಿ‌ ಕೈಕಾಲು
ಈಗ ಬಂದಿದೆ
ನೋಡಿಲ್ಲಿ ಕೈಕೋಲು

ಆರೈಕೆ ಮಾಡು
ಈ ಅಪ್ಪನನು
ಮಗನು ಹಿಡಿವ
ನಿನ್ನ ದಾರಿಯನು.

*ಸಿ ಜಿ ವೆಂಕಟೇಶ್ವರ*
*ತುಮಕೂರು*

ಸಿಹಿಜೀವಿಯ ಹತ್ತು ಹನಿಗಳು (ಸಹನೆ)

*ಚುಟುಕುಗಳು*

*೧*

*ವರ*

ದೇವರಿಗೆ ನೂರು ನಮನ
ಕೊಟ್ಟ ನನಗೆ ಸಾವಿರ ವರ
ಅಮ್ಮನೆಂಬ ಸಹನಾಮೂರ್ತಿ
ಕೊಡುಗೆಯು ದೊಡ್ಡ ವರ.

*೨*

*ಆತುರ*

ಸಹನೆಯಿಲ್ಲ ಎಲ್ಲೆಡೆ ಆತುರದ
ಪಾಸ್ಟ್ ಪುಡ್ ಜಮಾನ
ಇಂದು ಗಿಡ ನೆಟ್ಟು
ನಾಳೆ ಬಯಸುವರು ಹಣ್ಣನ್ನ.

*೩*

*ಜೀವನದಿ*

ರೂಢಿಸಿಕೊಂಡರೆ ನೀನು
ಸತ್ಯ, ಶಾಂತಿ ,ಸಹನೆಯ ಜೀವನದಿ
ಸರಾಗವಾಗಿ ಸಾಗರವ
ಸೇರುವುದು ಬದುಕೆಂಬ ‌ಜೀವನದಿ

*೪*

*ಸಿಂಹಿಣಿ*

ನನ್ನವಳು ಸಾಮಾನ್ಯವಾಗಿ
ಸಹನಾಮಣಿ ಸಹಧರ್ಮಿಣಿ
ಕೆರಳಿ ನಿಂತರೆ ನೋಡಬೇಕು
ಅವಳೊಂದು ಸಿಂಹಿಣಿ.

*೫*

*ಸಾಧನೆಯ ಮೂಲ*

ಮಾಡುವ ಕೆಲಸದಲ್ಲಿದ್ದರೆ
ಸಹನೆ, ಶ್ರದ್ಧೆ ಯಶ ಪಡೆವೆ
ಕಾಟಾಚಾರದ ಗುಣವಿದ್ದರೆ
ಏನೂ ಸಾಧಿಸದೆ ಮಡಿವೆ.

*೬*

*ತಾಯಿ*

ಸಹನೆಗೆ ಮತ್ತೊಂದು ಹೆಸರೇ
ನಮ್ಮ ಭೂಮಿತಾಯಿ
ಭೂತಾಯಿಯ ಪ್ರತಿರೂಪ
ನನ್ನನೆತ್ತ  ತಾಯಿ .

*೭*

*ನಮನ*

ಸಹನೆಗೆ ಮತ್ತೊಂದು ಹೆಸರೇ
ಜನ್ಮ ಕೊಟ್ಟ ನನ್ನಮ್ಮ
ಮಹಾನ್ ಕೊಡುಗೆಗೆ ಇದೋ
ನಮನ ನಿನಗೆ ಬ್ರಹ್ಮ .

*೮*

*ಮಹಾಜಾಣ*

ಸಾಧಕನಾದವನಿಗೆ ಇರಲೇಬೇಕು
ಸಹನೆಯೆಂಬ ಮಹಾಗುಣ
ಅಂತಹವನ ಹೊಗಳುವುದು
ಜಗವು ಮಹಾಜಾಣ .

*೯*

*ಪಶ್ಚಾತ್ತಾಪ ಪಡೆದಿರು*

ಸಹನೆಯು ದೌರ್ಬಲ್ಯದ
ಸಂಕೇತವೆಂದು ತಿಳಿಯದಿರು
ಕೋಪದ ಕೈಗೆ ಬುದ್ದಿ
ನೀಡಿ ಪಶ್ಚಾತ್ತಾಪ ಪಡೆದಿರು.

*೧೦*

*ತೂತು ಮಡಿಕೆ*

ಸಹನೆಯಲಿ ಕೇಳುವವನು
ಉತ್ತಮ ಮಾತುಗಾರನಾಗುವ
ಅರೆಬರೆ ಕಲಿತವನು
ತೂತು ಮಡಕೆಯಾಗುವ.

*ಸಿ ಜಿ ವೆಂಕಟೇಶ್ವರ*
*ತುಮಕೂರು*

14 April 2020

ಸಿಹಿಜೀವಿಯ ಹನಿ‌(ನಿಗ)

*ನಿಗ*

ಅವನು ರೂಪದಲಿ
ಚೆಲುವಾಂತ ಚೆನ್ನಿಗ
ಅದಕ್ಕೆ ಅವಳು
ಯಾವಾಗಲೂ
ಅವನ ಮೇಲೆ
ಇಟ್ಟಿರುವಳು ನಿಗ

*ಸಿ ಜಿ ವೆಂಕಟೇಶ್ವರ*
*ತುಮಕೂರು*

ಭಯವನು ತೊಲಗಿಸು (ಭಾವಗೀತೆ) ಹನಿ ಹನಿ ವಿಸ್ಮಯ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನವನ್ನು ಪಡೆದ ಭಾವಗೀತೆ

*ಭಯವನು ತೊಲಗಿಸು*

ಭಯದಲಿ‌ ಕುಳಿತು ಚಿಂತಿಸಬೇಡ
ಕಾಯಕ ಮಾಡಲು ನೀ ಕಲಿ
ನಿರ್ಭಯವಾಗಿ ಮುನ್ನುಗ್ಗಲು
ಯಶಸ್ಸು ಲಬಿಸುವುದು ನೀ ತಿಳಿ.

ವೇದನೆ ಪಡುತಾ ಚಿಂತಿಪೆಯೇಕೆ
ಕಾದುವ ಯೋಧನ ನೋಡಿ ಕಲಿ
ಸಾಧನೆ ಮಾಡಲು ಭಯವೇಕೆ
ಹೇಡಿಯಾಗದಿರು ರಣರಂಗದಲಿ.

ಜಯಗಳಿಸಲು ಇಲ್ಲ ಅಡ್ಡದಾರಿ
ಮಾಡುವ ಕೆಲಸದಿ‌ ಸ್ಪಷ್ಟತೆ ಇರಲಿ
ಧೈರ್ಯವೊಂದೇ ಗೆಲ್ಲುವ ರಹದಾರಿ
ನಾಯಕನಾಗು ಕಠಿಣವಾದ ಕೆಲಸದಲಿ.

ಭಯವನು‌ ತೊಲಗಿಸು ಮನದಿಂದ
ಒಳಗಿನ ಶಕ್ತಿಯು ಜಾಗೃತವಾಗುವುದು
ಅಭಯವನಿತ್ತರೆ ದೇವ ಮುದದಿಂದ
ತಮವು ಕಳೆದು ಜಗಕೆ ಬೆಳಕಾಗುವುದು.






13 April 2020

ಒಳಿತಿಗೆ ಸೋಲಿಲ್ಲ(ಭಾವಗೀತೆ)

*ಒಳಿತಿಗೆ ಸೋಲಿಲ್ಲ*

ಒಳಿತು ಮಾಡು ನೀ ಜಗಕೆ
ಆನಂದ ಸಿಗುವುದು ಮನಕೆ
ಸಹನೆಯ ಗಣಿಯು ನೀನಾಗು
ತಾಳ್ಮೆಯಿದ್ದರೆ ಗೆಲುವೆ ನೀನು.

ಉಳಿಗಳ ಪೆಟ್ಟಿಗೆ ಬೆದರದಿರು
ಬಿರುಗಾಳಿಗೆ  ನೀ ಜಗ್ಗದಿರು
ಅಳಿಯುವ ಜನರಿಗೆ ಕಿವುಡಾಗು
ನಿಧಾನವಾದರೂ ಮುಂದೆ ಸಾಗು.

ಕಷ್ಟಗಳಿದ್ದರೂ ಇರಲಿ ತಾಳ್ಮೆ
ಬಂದೆ ಬರುವುದು ಮುಂದೆ ಬಲ್ಮೆ
ಕಲಿಯಬೇಕು ಸೋಲಿನಲಿ ಸಹನೆ
ಅದುವೆ ಗೆಲುವಿನ ತವರುಮನೆ .

ಅಮೂಲ್ಯವಾದದು ಈ ಜೀವ
ಸಹಿಸಬೇಕು ಬರುವ ನೋವ
ಕೆಡುಕು ದೀರ್ಘಕಾಲ ಬಾಳಲ್ಲ
ಒಳಿತಿಗೆ ಎಂದೂ ಸೋಲಿಲ್ಲ.

ಮುಂಜಾನೆ ಕದನ(ಹನಿಗವನ)

*ಮುಂಜಾನೆ ಕದನ*

ಮುಂಜಾನೆ ಕಾಯತ್ತಿದ್ದೆ ನನ್ನವಳ
ನಸುನಗೆಯ ವದನಕೆ|
ತರಕಾರಿಯಿಲ್ಲ ಅಡುಗೆ ಹೇಗೆ ಮಾಡಲೆಂದು ಇಳಿದೇ ಬಿಟ್ಟಳು ಕದನಕೆ||

*ಸಿ ಜಿ ವೆಂಕಟೇಶ್ವರ*
*ತುಮಕೂರು*

ಗೋಕುಲ ನಿರ್ಗಮನ (ಗೀತನಾಟಕ ವಿಮರ್ಶೆ) ಪ್ರಥಮ ಬಹುಮಾನ ಪಡೆದ ವಿಮರ್ಶೆ




*ಗೀತನಾಟಕ ವಿಮರ್ಶೆ*
   ನಾಟಕ:  ಗೋಕುಲ ನಿರ್ಗಮನ
   
   ಕವಿ:   ಪು ತಿ ನರಸಿಂಹಾಚಾರ್
ಹೊಸಗನ್ನಡದ ಓದಿನ‌ ನಡುವೆ ಹಳಗನ್ನಡದ ಓದು ಮೊದಲಿಗೆ ತುಸು ಕಷ್ಟವಾದರೂ ಇತ್ತೀಚೆಗೆ ಕುವೆಂಪು ರವರ ಚಿತ್ರಾಂಗಧ ಕೃತಿ ಓದಿದ್ದರಿಂದ ಅಷ್ಟೇನೂ ಕಠಿಣ ಎನಿಸಲಿಲ್ಲ.
ದೇವರ ಪ್ರಾರ್ಥನೆಯ ಮೂಲಕ ಆರಂಭವಾಗುವ ಗೋಕುಲ ನಿರ್ಗಮನ ಗಿತನಾಟಕ ಗೀತೆಗಳಲ್ಲಿ ಮುಂದುವರೆಯುವುದು ವಿಶೇಷ. ರಾಗಗಳ ಬಗ್ಗೆ ಆವರಣದಲ್ಲಿ ಸೂಚನೆಗಳನ್ನು ನೀಡಿದ್ದರೂ ನಮಗೆ ರಾಗದ ಬಗ್ಗೆ ಅಷ್ಟು ತಿಳುವಳಿಕೆಯು ಇಲ್ಲದಿದ್ದರೂ ಗೀತೆಗಳ ಪ್ರಾಸ ಮತ್ತು ಅರ್ಥವನ್ನು ಅರಿಯಲು ಕಷ್ಟ ಆಗುವುದಿಲ್ಲ.
ವಿವಿಧ ಪಾತ್ರಗಳಾದ ಕಥಾ ನಾಯಕ ಕೃಷ್ಣ, ಬಲರಾಮ,ಅಕ್ರೂರ ,ರಾದೆ,ನಾಗವೇಣಿ ಗೋಪಿಕೆಯರು, ಗೋಪಾಲಕರು,ಹಿರಿಯರು, ಋಷಿಗಳು, ಎಲ್ಲರ ಪಾತ್ರಗಳನ್ನು ಗೀತನಾಟಕದಲ್ಲಿ ಅಚ್ಚುಕಟ್ಟಾಗಿ ಚಿತ್ರಿಸಿದ್ದಾರೆ ಕವಿ.
ಕೃಷ್ಣನ ಕೊಳಲಿನ ನಾದವನು ಕೇಳಿದ
ಬೃಂದಾವನದಲಿ ಸಖಿಯರ
ಸಖಿಯರ ಭಾವನೆಗಳನ್ನು ಸುಂದರವಾಗಿ ಚಿತ್ರಿಸಿದ್ದಾರೆ
ಸಂಗೀತದ ಮೂಲಕ ಕಥೆಯನ್ನು ಹೇಳುವ ಪರಿಯೇ ಚೆಂದ ಅದರಲ್ಲೂ ಪ್ರಾಸಗಳ ಮೂಲಕ ನಾನಾರ್ಥಗಳ ಸೂಚಿಸುವ ಸಂಭಾಷಣೆ ಈ ಗೀತನಾಟಕದ ಪ್ರಮುಖ ಅಗ್ಗಳಿಕೆ.
ಸುದಾಸ ನ ಮಾತಿನಲ್ಲಿ ಹೇಳುವಂತೆ "ಹುಚ್ಚು ಹೆಚ್ಚು ಜಗಕೆಲ್ಲ ಹುಚ್ಚು" ಎಂದು ಹೇಳಿರುವುದು ಈಗಲೂ ಆದ್ಯಾತ್ಮದ ಅನುಭೂತಿಯನ್ನು ಹೊಂದಿರುವವರಿಗೆ, ಆಸ್ತಿಕರಿಗೆ ಕೃಷ್ಣ ಹೆಸರ ಕೇಳುವುದೇ ಹುಚ್ಚು.
"ನಿದ್ದೆ ಬರದ ಉದ್ದವಾದ ಇರುಳಿನಂತೆ....."
ಎಂಬ ಗೋಪಿಕೆಯರು ಹಾಡುವ 
ಸಂಭಾಷಣೆ ರೂಪದ ಪದ್ಯಗಳೋದುವುದೆ ಮನಕ್ಕೆ ಮುದ ನೀಡುತ್ತದೆ.
"ನಾನೆ ನಲ್ಲ  ನಾನು ಎಲ್ಲ ನಾನು ನಾನಲ್ಲ ನಿಮ್ಮಕ್ಕರೆಯ ಹಾಲೊಳು ಕರಗಿಹೆನಲ್ಲ ನನಗು ನಾನಿಲ್ಲ " ಎಂಬ ಕೃಷ್ಣನ ಮಾತಿನಲ್ಲಿ ಸಾವಿರ ಅರ್ಥವಿದೆ.
ಕೃಷ್ಣ ನ ಕಂಡ ಹಿರಿಯರೂ ಕೂಡ ಅವನ ಕೊಳಲ ನಾದವನ್ನು ಆಲಿಸಿ ಮನದುಂಬಿ ಕುಣಿವರು.
ಒಂದು‌ ಹಂತದಲ್ಲಿ  ಕೃಷ್ಣನ ಕಂಡ ಋಷಿಗಳು ಸಹ ತಮಗರಿವಿಲ್ಲದೇ ಕೃಷ್ಣನ‌ಕಂಡು ಹಾಡಿ ಕುಣಿವರು ಇನ್ನೂ ಸಾಮಾನ್ಯ ಮಾನವರಾದ ನಾವು ಈ ಗೀತನಾಟಕದ ತಾಳ ,ಲಯ ಬದ್ದ ,ಪ್ರಾಸಬದ್ದಪದಗಳ ಓದುತ ಮನವು ಕುಣಿಯದಿರದು ಕಾಲುಗಳು ಮಿಸಕುದಿರವು.
ವೇಣು ವಿಸರ್ಜನ ಭಾಗದಲ್ಲಿ ಎಲ್ಲರ ಅಪೇಕ್ಷಣೀಯವಾಗಿ ಮತ್ತೆ ಕೊಳಲ ನುಡಿಸುವ ಕೃಷ್ಣನ ಸಂಗೀತ ಒಬ್ಬೊಬ್ಬರಿಗೆ ಒಂದು ರೀತಿ ಕೇಳುವುದು. ಈಗಲೂ ಅಷ್ಟೇ, ಕೃಷ್ಣ ಕೆಲವರಿಗೆ ಕಳ್ಳ, ಕೆಲವರಿಗೆ ಪ್ರಿಯಕರ,ಕೆಲವರಿಗೆ ದೈವ ಇತ್ಯಾದಿ.
ಕೊನೆಯಲ್ಲಿ ಕೊಳಲ ತೊರೆದು ಮತ್ತು ಗೋಕುಲದಿಂದ ನಿರ್ಗಮನದ ಸಮಯದಲ್ಲಿ ಎಲ್ಲರ ಶೋಕ ಮೇರೆ ಮೀರುವುದು, ಗೋಪಿಕೆಯರ ಮೂಲಕ ಕೃಷ್ಣ ನಿರ್ಗಮನದ ವಿಷಯ ತಿಳಿದ ರಾಧೆಯ ನೋವು ವರ್ಣಿಸಲು ಸಾಧ್ಯವಿಲ್ಲ.
"ಗುರು ಲಘುವೆನ್ನದೆ ಜಗವೆಲ್ಲ ಕುಣಿಸಿದ ಬಲುಮೆಯ ಕೊಳಲೆ "ಎಂಬ  ಸಾಲಿನೊಂದಿಗೆ ಮುಕ್ತವಾಗುವ ಈ‌ಗೀತನಾಟಕವನ್ನು ಓದಿದ ನಾವೇ ಧನ್ಯರು .ಈ‌ ಕಲಿಗಾಲದಲ್ಲಿ ಆಧುನಿಕತೆಯ ಭರಾಟೆಯಲ್ಲಿ ಭಗವನ್ನಾಮ‌ ಸಂಕೀರ್ತನೆಗೆ ಸಮಯವಿಲ್ಲ ಎಂದು ಸಬೂಬು ಹೇಳುವ ಮಂದಿ ಈ ಗೀತ ನಾಟಕ ಓದಿದರೆ ಕೃಷ್ಣನ ಸ್ಮರಣೆ ಮಾಡಿದಂತಾಗುವುದು.ಕೃಷ್ಣಾರ್ಪಣಮಸ್ತು...
*ಸಿ ಜಿ‌  ವೆಂಕಟೇಶ್ವರ*
*ತುಮಕೂರು*

ಎಂದು ಬರುವೆ ಗೆಳತಿ (ಕವನ)

*ಎಂದು ಬರುವೆ ಗೆಳತಿ* ಕವನ

ಹಸಿರಿನ ಕಾನನದಿ
ಗಿಡಮರದ ತಂಪಿನಲಿ
ಉಯ್ಯಾಲೆಯಾಡಿದೆವು
ಸಲ್ಲಾಪ ಮಾಡಿದೆವು
ನೆನಪಿದೆಯಾ ಗೆಳತಿ.

ನದಿಯ ದಂಡೆಯಲಿ
ಸನಿಹದಲ್ಲಿ ಕುಳಿತು
ಸುಮಧುರವಾಗಿ
ಸಂಭಾಷಣೆ ಮಾಡಿದ
ನೆನಪಿದೆಯಾ ಗೆಳತಿ

ಹೊಂಗೆಮರದಡಿಯಲ್ಲಿ
ತಂಪು ನೆರಳಿನಲ್ಲಿ
ನನ್ನೆದೆಗೆ ತಂಪಾಗುವ
ಮಾತಾನಾಡಿದ ಕ್ಷಣ
ನೆನಪಿದೆಯಾ ಗೆಳತಿ

ಹೊಂಗೆ ಮರದಡಿಯಲಿ
ನದಿಯ ದಂಡೆಯಲಿ
ಖಾಲಿಇರುವ ಉಯ್ಯಾಲೆಯ
ಬಳಿ ಕಾಯುತಿರುವೆ ನಿನಗಾಗಿ
ಎಂದು ಬರುವೆ ಗೆಳತಿ?

*ಸಿ ಜಿ‌ ವೆಂಕಟೇಶ್ವರ*
*ತುಮಕೂರು*

12 April 2020

ನೆಮ್ಮದಿ (ಮೂರು ಚುಟುಕುಗಳು)

*ಮೂರು ಚುಟುಕುಗಳು*

*೧*

*ನನ್ನೊಳಗೆ*

ಹುಡುಕುತ್ತಿದ್ದೆನು ಇದುವರೆಗೂ
ನೆಮ್ಮದಿಯನು ಹೊರಗೆ
ಈಗೀಗ ತಿಳಿಯುತ್ತಿದೆ ನನಗೆ
ಅದು ಇರುವುದು ನನ್ನೊಳಗೆ.

*೨*


*ಮೂಲ*

ತುಪ್ಪ ತಿನ್ನಲು ಸಿದ್ದರಿರುವರು
ಮಾಡಿಯಾದರೂ ಸಾಲ
ಹಾಸಿಗೆ ಇದ್ದಷ್ಟು ಕಾಲುಚಾಚಿದರೆ
ನೆಮ್ಮದಿಗೆ ಅದುವೆ ಮೂಲ

*೩*

*ಮಿತಿಗೊಳಿಸು*


ಹುಡುಕುವುದೇಕೆ ಎಲ್ಲಿಹುದು ನೆಮ್ಮದಿ  ಎಂದು  ಆ ಬದಿ ಈ ಬದಿ
ಆಸೆಗಳ ಮಿತಿಗೊಳಿಸಿದರೆ ಸಿಕ್ಕೇ ಸಿಗುವುದು ನೆಮ್ಮದಿ

*ಸಿ ಜಿ ವೆಂಕಟೇಶ್ವರ*
*ತುಮಕೂರು*




ಮೌನಿ (ಕವನ)

*ಮೌನಿ*

ಮೌನಕಿರುವುದು ನೂರು ಅರ್ಥ
ಮೌನವು  ಗೆದ್ದಿದೆ ಹಲವು ಅನರ್ಥ
ಮೌನವು ಬಂಗಾರವೂ ಹೌದು
ವ್ಯಕ್ತಿತ್ವದ ಸಿಂಗಾರವೂ ಹೌದು.

ಮೌನಿಯೆಂದರೆ ಮೂಗನಾಗುವುದಲ್ಲ
ಮೂಗಿನ ನೇರಕೆ ಮಾತಾನಾಡುವುದಿಲ್ಲ
ಮೌನಿಯಾದವ ಗೆದ್ದಿರುವ ಕಲಹಗಳ
ಉಳಿಸಿಕೊಂಡಿರುವ ಸಂಬಂಧಗಳ.

ಮೌನದಲ್ಲಿದೆ ಹಲವು ಪರಿಹಾರ
ಮೌನದಿಂದಿದ್ದರೆ ಶಾಂತಿ ಸಾಕಾರ
ದಾರಿಯಿದೆ ಆಂತರ್ಯದ ತುಮುಲಕೆ
ಅವಕಾಶವಿದೆ ಆತ್ಮಾನುಸಂಧಾನಕೆ

ಮೌನಿಯಾಗಬೇಕು ಟೀಕೆಗಳಿಗೆ
ಅಜ್ಞಾನಿಗಳ  ಮಾತುಗಳಿಗೆ
ಮೌನಿಯಾಗಬೇಕಿದೆ ನಾನು
ನನ್ನಿಂದಲೇ  ತೊಲಗಲು ನಾನು


*ಸಿ ಜಿ ವೆಂಕಟೇಶ್ವರ*
*ತುಮಕೂರು*


11 April 2020

ಗಟ್ಟಿ ಮೇಳ(ಭಾವಗೀತೆ)

*ಗಟ್ಟಿ ಮೇಳ*

ನನ್ನ ತೂಗುವ ತೊಟ್ಟಿಲು ನೀನಲ್ಲವೆ
ನಿನ್ನ ಸಂತೋಷ ಕೋರುವವ ನಾನಲ್ಲವೆ||

ನೀ ಬಳಿಯಿದ್ದರೆ ನನಗರಿವಿಲ್ಲದೆ
ನರ್ತಿಸುವುದೆನ್ನ  ಮನ
ದೂರಾದರೆ ಒಂದರೆಕ್ಷಣ
ಹೃದಯದಲ್ಲಿ ಕಂಪನ||

ಒಲವಿನ ಮಾತುಗಳಾಡುತ
ಬಳಿ ಬಂದರೆ ಜಗವ ಮರೆವೆ
ಕಾಣದೆ ದೂರಾದರೆ ಚಡಪಡಿಸಿ
ಎಲ್ಲಿದ್ದರೂ ಹುಡುಕಲು ಬರುವೆ||

ಸುಳಿದಾಡು ನನ್ನ ಹಿಂದೆ ಮುಂದೆ
ನನಗರಿವಿಲ್ಲದೆ ಎದೆ ತಪ್ಪುವುದು ತಾಳ
ದೇವತೆ ನೀನು ನನ್ನ ಬಾಳಿಗೆ
ಕೈ ಹಿಡಿದಾಗಲೆ ಆಗಿದೆ ಗಟ್ಟಿಮೇಳ||

*ಸಿ ಜಿ ವೆಂಕಟೇಶ್ವರ*
*ತುಮಕೂರು*


ಶಾಯರಿ

ಶಾಯರಿ

ಅವನು ನೋಡಿದ ಅವಳನ್ನು
ವಿವಿಧ ಕೋನಗಳ ಬದಲಿಸಿ|
ಅವಳು ಹೊಡೆದಳು ಅವನ
ಚಪ್ಪಲಿಯ ಬೆಲ್ಟ್ ಸಡಿಲಿಸಿ||

"ಸಿ ಜಿ ವೆಂಕಟೇಶ್ವರ*
*ತುಮಕೂರು*

10 April 2020

ಮೂರು ಶಾಯರಿಗಳು


*ಮೂರು  ಶಾಯರಿಗಳು*

*೧*

ನಾನು ಸದಾ ಅವಳ ಹೊಗಳುತ್ತಲೇ ಇದ್ದೆ
ಲಾವಣ್ಯವತಿ‌ ಗುಣವತಿ ಸೌಂದರ್ಯವತಿ|
ಬಿಟ್ಟೇ ಹೋದಳು ನನ್ನನು ಗೊಣಗುತ್ತ
ಮಾಡದೆ ಕೆಲಸ ವರ್ಣನೆಯಾಯಿತು ಅತಿ||.

*೨*

ನನಗೂ ಆಸೆ ಕಣೇ ಕೊಡಿಸಲು ನಿನಗೆ
ಬಂಗಾರದ ,ಬೆಳ್ಳಿಯ, ವಜ್ರದ ಒಡವೆಗಳನ್ನ|
ಮೊದಲು ನೋಡಿಕೋ ಧರಿಸಬೇಕಿರುವ
ನಿನ್ನ ಕೈ ಕಾಲು ಮೂಗು ಕಿವಿಗಳನ್ನ||

*೩*

ಕಾಯುತಲೇ ಇದ್ದೆ ಒಂದಲ್ಲ ಒಂದು
ದಿನ ಅವಳು ಬೀರುವಳು ಕಿರುನಗೆ|
ಧನವಿರುವವನ  ಮದುವೆಯಾಗಿ
ನನ್ನ ಹೃದಯಕ್ಕೆ ಹಾಕಿ ಹೋದಳು ಹೊಗೆ||

ಮನಸ್ಸು ಮಾಡು (ಭಾವಗೀತೆ)

*ಮನಸ್ಸು ಮಾಡು*

ಚಿಂತಿಪೆ ಏಕೆ ಓ ಗೆಳೆಯ
ಬೆಳಗಬೇಕು ನೀ ಧರೆಯ
ಏಳು ಎದ್ದೇಳು ನಿಲ್ಲದಿರು
ಕೈಲಾಗದವನೆಂದು ಕೊರಗದಿರು.

ಮನಸ್ಸು ಮಾಡು ನೀ ಗೆಳೆಯ
ತೆಗೆದಿಡು ಮನದ ಕೊಳೆಯ
ನಿನ್ನಲಿದೆ ಅಪಾರ ಶಕುತಿ
ಕಾಪಾಡುವಳು ಆ ಪಾರ್ವತಿ.

ಹಿಂದಡಿ‌ ಇಡದಿರು‌ ಎಂದು
ನುಗ್ಗುತಿರು ಜಗ ನಿನ್ನದೆಂದು
ಧೈರ್ಯವಂತರಿಗಿದೆ ದಾರಿ
ಶುರು ಮಾಡು ಮುಟ್ಟುವೆ ಗುರಿ.

ನೀನಾಗು ಒಂದು ಜೀವನದಿ
ಸಮರಸವಿರಲಿ ಜೀವನದಿ
ಅಶಕ್ತರ ಸಹಾಯಕೆ ಸನಿಹವಾಗು
ಮೂಕಪ್ರಾಣಿಗಳ ಸಂರಕ್ಷಕನಾಗು.

*ಸಿ ಜಿ ವೆಂಕಟೇಶ್ವರ*
*ತುಮಕೂರು*






09 April 2020

ಬದುಕಬೇಕು (ಕವನ)

*ಬದುಕಬೇಕು*

ಬದುಕಬೇಕು ನೀನು ಬದುಕಬೇಕು
ಇತರರಿಗೆ ದಾರಿ ದೀಪವಾಗಬೇಕು
ಪ್ರತಿಕ್ಷಣವು ಜೀವಿಸುತಲಿರಬೇಕು
ಶಿವಮೆಚ್ಚಿ ಅಹುದಹುದು ಎನ್ನಬೇಕು.

ಅವರಿವರ ತೆಗೆಳಿಕೆಗೆ ಕಿವಿಗೊಡಬೇಡ
ಸರಿದಾರಿಯಲಿ ನಡೆವುದ ಮರೆಯಬೇಡ
ಅನವರತ ನಡೆ ಗುರಿ ಮುಟ್ಟುವೆ ನೋಡ
ನೀ ಹಾಡು ನಿನ್ನೆದೆಯ ಗೆಲುವ ಹಾಡ.

ಜೀವನವಿದು ಮೂರು ದಿನದ ಬಾಳು
ಇರುವುದು ಬಾಳಲ್ಲಿ  ಏಳು ಬೀಳು
ನಿನ್ನಂತೆ ಇತರರ ಬಾಳು ಕೇಳು
ಸಕಲ ಚರಾಚರದೊಂದಿಗೆ ಬಾಳು.

ಸೋತೆನೆಂದು ಮೂಲೆಯಲಿ ಕೂರದಿರು
ಗೆಲುವು ಸಿಗದು‌ ಎಂದು ಕೊರಗದಿರು
ನಿನ್ನ ದಾರಿಗೆ ನೀನಾಗು‌ ಗುರು
ಸನ್ಮಾನಿಸುವರು ಗೆದ್ದಾಗ ಜನರು.

ಕಾಯಕದಿ ಕೈಲಾಸವನು ಕಂಡರೆ
ಜನರಲ್ಲಿ‌ ಜನಾರ್ದನನು ಕಂಡರೆ
ಹಂಚಿ‌ ತಿನ್ನುವ ಗುಣವ ನೀ ಕಲಿತರೆ
ನಂದನವಾಗುವುದು ಈ ಧರೆ.

*ಸಿ ಜಿ‌ ವೆಂಕಟೇಶ್ವರ*
*ತುಮಕೂರು*

08 April 2020

ಮನವಿ(ಹನುಮ ಜಯಂತಿಯ ಶುಭಾಶಯಗಳು)

ಮನವಿ

(ಇಂದು ಹನುಮ ಜಯಂತಿ)

ಇಂದು ನಿಮ್ಮ ‌ಜನಮದಿನ
ಮಾರುತಿ ತುಂಬಿಹನು ನನ್ನ ಮ‌ನ
ಕೊಡದಿದ್ದರೂ ಸರಿ ಧನ
ಹರಸು‌ ನೀಡಿ ಒಳ್ಳೆಯ ಗುಣ
ಆಗಲಿ ನನ್ನ ಜನ್ಮ ಪಾವನ

*ಸಿ ಜಿ ವೆಂಕಟೇಶ್ವರ*
*ತುಮಕೂರು*

07 April 2020

ಸಿಹಿಜೀವಿಯ ಹನಿಗಳು ( ವಿಶ್ವ ಆರೋಗ್ಯ ದಿನದ ನೆನಪಿಗಾಗಿ)


*ಸಿಹಿಜೀವಿಯ ಹನಿಗಳು*

*೧*

*ಪರಲೋಕ ರವಾನೆ*

ಅಶುದ್ಧ ಗಾಳಿಯ ಸೇವನೆ 
ದೇಹವಾಗಿದೆ ರೋಗದ ಮನೆ
ಕಾಲನ ಮಹಾಚಿತಾವಣೆ 
ಶೀಘ್ರ ಪರಲೋಕಕೆ ರವಾನೆ 

*೨*

*ಜೀವಿಸು*

ಕಾಲ ಕಾಲಕೆ ದೇಹವ ದಂಡಿಸು
ಒಳ್ಳೆಯ ಗಾಳಿಯ ಸೇವಿಸು
ಒಳ್ಳೆಯ ಸ್ನೇಹಲೋಕ ಗಳಿಸು
ಆರೋಗ್ಯದಿಂದ ಜೀವಿಸು 

*೩*

*ಜೀವನ*

ಲೋಕದಲ್ಲಿರುವ ಬಹುಪಾಲು
ಗಾಳಿಗೋಪುರದಲಿ ವಿಹರಿಸುವ ಜನ
ಕಾಲನು ಬಂದು ಈ ದೇಹ ನನ್ನದು
ಎಂದಾಗ ಅರಿವರು ಇಷ್ಟೆ ಜೀವನ 

*ಸಿ .ಜಿ ವೆಂಕಟೇಶ್ವರ*
*ತುಮಕೂರು*


ತಣಿಸು ಬಾರೆ ( ಭಾವಗೀತೆ)

*ತಣಿಸು ಬಾರೆ*

ಎಂದು ಆಗಮಿಸುವೆ ಮನದ
ರತಿ ಈ ಮನ್ಮಥನ ಸೇರಲು
ಮುನ್ನ ನೀಡಿದ ಮಧುರ
ವಚನವನು ಉಳಿಸಲು

ದಿನ ಕಳೆದು ಪಕ್ಷ,ಮಾಸಗಳು
ಉರುಳಿದರೂ ಸುಳಿವಿಲ್ಲ
ನಿನ್ನಧರದ ಮಧುಪಾನದ
ಮಧುರ ಮಹೋತ್ಸವ ಮರೆತಿಲ್ಲ

ಬೆಳಗು ಬೈಗೆಂಬ ಪರಿವಿಲ್ಲ
ನಿನ್ನ ಆಗಮನಕೆ ಕಾದಿಹೆನು
ಜೇನಹೊಳೆಯಲಿ ತೇಲಿದ
ಮಾಸದ ನೆನಪಲಿ ಬದುಕಿಹೆನು

ನಿನ್ನ ಸಂಗವು ಪರಮಂಗಲ
ನೀಡು ಪ್ರೇಮದಾಲಿಂಗನ
ನೀನೇ ಅಮೃತ ನನ್ನ ಬಾಳಿಗೆ
ತಣಿಸು ಬಾರೆ ಮೈ ಮನ

*ಸಿ ಜಿ ವೆಂಕಟೇಶ್ವರ*
*ತುಮಕೂರು*






06 April 2020

ಸುಲೋಚನ (ಭಾವಗೀತೆ)

*ಸುಲೋಚನ*

ನಾ ಬಂದಿಹೆ ಬಳಿ ಸಾರಿ
ನಿಂತಿಹೆನು ಪ್ರೀತಿ ಕೋರಿ
ನನ್ನ ಗುಳಿಕೆನ್ನೆಯ ರಾಣಿ
ಮಾಡು ಮುತ್ತಿನ ಬೋಣಿ

ಸುಂದರ ಕಣ್ಗಳ ಸುಲೋಚನ
ಬರುವೆ ಮಾಡದೆ ಆಲೋಚನೆ
ಬೇರಡೆ ಇಲ್ಲ ನನ ಗಮನ
ಬೆರೆಸೋಣ ನಮ್ಮ ಮೈಮನ

ಚಂದ್ರನ ತುಂಡಿನ ನಲ್ಲೆ
ಮೈಮಾಟ ಕಬ್ಬಿನ ಜಲ್ಲೆ
ಕೋಮಲ ಮಧುರ ಮಲ್ಲೆ
ವರಿಸುವೆ ನಾ ನಿನ್ನನು ಇಲ್ಲೆ

ಧರೆಗಿಳಿದವಳೆ ನನ್ನ ರತಿ
ನೀಡುವೆ ಜಗದೆಲ್ಲಾ ಪ್ರೀತಿ
ನೋಡುವುದಿಲ್ಲ ಜಾತೀ ಗೀತಿ
ನೀನಾಗು ಬಾ ನನ್ನ ಸತಿ

*ಸಿ ಜಿ ವೆಂಕಟೇಶ್ವರ*
*ತುಮಕೂರು*

ನಿರೀಕ್ಷೆ (ಕಥೆ) ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಮತ್ತು ನಗದು ಬಹುಮಾನವನ್ನು ಪಡೆದ ಕಥೆ

*ನಿರೀಕ್ಷೆ* ಕಥೆ

"ಅಮ್ಮಾ ನನಗೆ ಇಲ್ಲಿ ಊಟ ಸರಿಯಾಗಿ ಸೆಟ್ ಆಗ್ತಾ ಇಲ್ಲ, ಯಾಕೋ ಬೇಜಾರು, ನಿನ್ನ ನೋಡಬೇಕು ಅಂತ ಆಸೆ ಆಗ್ತಾ ಐತೆ ಉರಿಗ್ ಬರಲೇನಮ್ಮ " ಎಂದು ಪೋ‌ನಿನಲ್ಲೆ ಬಿಕ್ಕಳಿಸಿದ್ದನ್ನು ಕೇಳಿ ತಾಯಿ ಕರುಳು ಚುರ್     ಎಂದು ‌ಅಳುತ್ತಲೇ "ಯಾಕೋ ಮಗ ಏನಾತೋ? ನಿನ್ ಮನೆಗೆ ನೀನು ಬರೋಕೆ ಇದ್ಯಾಕೋ ಇಂಗ್ ಕೇಳ್ತಿಯಾ ನಾಳೆನೇ ಬಾ .ಬಸ್ ಚಾರ್ಜಿಗೆ ದುಡ್ ಐತೇನಪ್ಪ ."
"ಹೂಂಕಣಮ್ಮ ಐನೂರು ರುಪಾಯ್ ಐತೆ "ಎಂದ ಮಗ . "ಸರಿ ನಾಳೆ ಬಾರಪ್ಪ ಫೋನ್ ಇಕ್ಕನೇನಪ್ಪ ,ಸರಿ ನಾಳೆ ಬಾ ಹುಸಾರು" ಎಂದು ಅಮ್ಮ ಪೋನಿಟ್ಟಿರು.

"ನಿಮ್ಮಪ್ಪ  ನೀನು ಐದು ವರ್ಷ‌ ಇದ್ದಾಗ ಹಾವು ಕಡದು ತೀರಕಂಡರು ಹೆಣ್ಣೆಂಗಸಾದ ನಾನು ನಿನ್ನ ಹೊಟ್ಟೆ ಬಟ್ಟೆ ಕಟ್ಟಿ ಬೆಳಿಸಿ ಕೂಲಿನಾಲಿ ಮಾಡಿ ಇಸ್ಕೂಲಿಗೆ ಕಳಿಸಿದರೆ ಹತ್ತನೇ ಕ್ಲಾಸಿಗೆ ಪೇಲಾದೆ, ಮತ್ತೆ ಕಟ್ಟಿಸಿ ಮುಂದಕ್ಕೆ ಕಳಿಸಿದರೆ ಸರಿಯಾಗ್ ಒದ್ದೇ ಈಗ ಪಿಈಸಿನಲ್ಲೂ ಪೇಲಾದ್ಯಲ್ಲೋ, ಮಗ ನಿ‌ನಗೆ ಸ್ವಲ್ಪನಾದರು ಜಬಾಬ್ದಾರಿ ಬ್ಯಾಡವಾ? " ಎಂದು ಸಾಕವ್ವ ಒಂದೇ ಸಮನೆ ಮಗನನ್ನು ಬೈಯತ್ತಿದ್ದುದು ಇಡೀ ಓಣಿಗೆ ಕೇಳುತ್ತಿತ್ತು. ತಲೆ ತಗ್ಗಿಸಿಕೊಂಡು ಎಲ್ಲವನ್ನೂ ‌ಕೇಳುತ್ತಿದ್ದ ರಮೇಶ ಮೆಲ್ಲಗೆ " ನನಗೆ ಇದ್ದ್ಯಾ ತಲೆಗತ್ತತ ಇಲ್ಲ ಏನ್ ಮಾಡನಮ್ಮ . ನಾನು ಓದಿ ನಿ‌ನ್ನ ಚೆನ್ನಾಗಿ  ಸಾಕ್ ಬೇಕು ಅಂತ ಆಸೆ ಇಟ್ಕಂಡಿದಿನಿ ,ನಾನು ದುಡೀತಿನಿ ಸುಮ್ಕಿರಮ್ಮ ನೀನು" ಅಂದ .ಅಲ್ಲ ಕಣ್ಲಾ ಒಂದು ತಂಬಿದ್ ಸೆಂಬು ಅತ್ಲಾಗ್  ಎತ್ತಿ ಇತ್ಲಾಗ  ಇಕ್ಕಕೆ ಆಗಲ್ಲ ನಿನಗೆ , ನೀನು ಅದ್ಯೆಂಗ್ ದುಡಿತಿಯಲಾ? ಸುಮ್ಮನೇ ಮಾತು ಆಡ್ ಬೇಡ ಬಾ ಮುದ್ದೆ ಉಣ್ಣು" ಎಂದು ಅಮ್ಮ ತಟ್ಟೆಯನ್ನು ತಂದು ಸ್ವಲ್ಪ ಜೋರಾಗಿಯೇ ನೆಲಕ್ಕೆ ಕುಕ್ಕಿದರು  . ಆತು ನಾನು ನಾಳೆ ಬೆಂಗಳೂರಿಗೆ ಹೋಗಿ ಅಲ್ಲಿ ದುಡಿತೀ‌ನಿ ಪಕ್ಕದ ಮನೆ ರಾಜ ಅಲ್ಲಿ ಸಿಲಿಂಡರ್ ಮನೆ ಮನೆಗೆ ಹಾಕಿ‌ ದುಡ್ಡು  ದುಡಿತಾನಂತೆ ನಾನು ಅದೇ ಕೆಲ್ಸ ಮಾಡ್ತೀನಿ.ಎಂದ  ಸಾಕವ್ವ ನಿನಗೆಲ್ಲಿ ಆ ಕೆಲ್ಸ ಮಾಡಾಕ್ ಆಗ್ತೈತೆ ಸುಮ್ನೆ ಉಣ್ಣು ಎಂದು ಮುದ್ದೆ ಇಟ್ಟರು. ಇಲ್ಲವ್ವ ನಾಳೆ ನಾನು ಬೆಂಗಳೂರಿಗೆ ಹೋಗಾದೆಯಾ ಎಂದು ಮಗ ಹಠ ಹಿಡಿದ . ಸಾಕವ್ವ ಸಿಟ್ ಬಂದು ಆತು ಹೋಗಪ್ಪ ಅದೇನು‌ ದಬ್ಬಾಕ್ತಿಯೋ ದಬ್ಬಾಕ್ " ಎಂದರು

ಅಂದು ನಾನು ಅಂಗ್ ಮಗೀನ ಬೈ ಬಾರದಿತ್ತು ಮಗ ಈಗ ಹೆಂಗದೋ ಏನೋ ಎಲ್ಲಾ ನನ್ನಿಂದಾನೇ ಆಗಿದ್ದು ಎಂದು ಪರಿತಪಿಸುತ್ತಾ  ಪಕ್ಕದ ಮನೆಗೆ ಹೋಗಿ ರಾಜ ಯಾವಾಗ ಬತ್ತಾನೆ ? ನನ್ ಮಗನ್ನೂ ಕರ್ಕಂಬರಕೆ ಹೇಳು ಗಿರಜಕ್ಕ ಎಂದು ಗೋಗರೆದಳು.

ಬೆಂಗಳೂರು ದೂರದಿಂದ ಮಾತ್ರ ನೋಡಲು ಚೆಂದ ಒಳಗೆ ಬಂದಾಗ ಏನು ಎಂದು ರಮೇಶನಿಗೆ ಅರ್ಥವಾಗಲಹ ಬಹಳ ದಿನ ಬೇಕಾಗಲಿಲ್ಲ. ಕೆಲಸ ಕೇಳಲು ಮೊದಲನೇ ದಿನ ರಾಜನ ಜೊತೆ ಹೋದಾಗ ಓನರ್ ಈಗ ಕೆಲಸ ಖಾಲಿ‌ ಇಲ್ಲ  ಎರಡು ದಿನ ಬಿಟ್ಟು ಬಾ ಎಂದರು ಮೂರನೇ ದಿನಕ್ಕೆ ಹೇಗೋ ಸಿಲಿಂಡರ್ ಸಾಗಿಸುವ ಕೆಲಸ ಕೊಟ್ಟರು. ಮನೆಯಿಂದ ತಂದ ಹಣ ಖಾಲಿಯಾಗಿ ಹೋಟೆಲ್ನಲ್ಲಿ ತಿನ್ನುವುದು ನಿಲ್ಲಿಸಿ ರಾಜ ಮಾಡಿದ ಅನ್ನ ಮತ್ತು ನೀರಿನಂತಹ ಸಾರನ್ನು ಬಾಯಿಗೆ ಇಟ್ಟಾಗ ಅಮ್ಮನ ರುಚಿ ನೆನಪಾಗಿ ಅಳು ಬಂತು ಅಮ್ಮ ಎಷ್ಟೇ ರುಚಿಯಾಗಿ ಅಡಿಗೆ ಮಾಡದರೂ ಅದಕ್ಕೆ ಹೆಸರಿಡದೇ ಊಟ ಮಾಡಿದ್ದು ರಮೇಶನಿಗೆ ನೆನಪಿಲ್ಲ ." ನನ್ ಮಗನೆ ನನ್  ಅಡಿಗೆ ಜರಿತಿಯಾ ನಿನಿಗೆ ಮುಂದೆ ಗೊತ್ತಾಗುತ್ತೆ ಅಡಿಗೆ ಬೆಲೆ ಮುಚ್ಕೊಂಡು ತಿನ್ನೋ " ಎಂಬ ಅಮ್ಮನ ಮಾತು ಕಿವಿಯಲ್ಲಿ ಗುಯ್ಗುಡುತ್ತಿದ್ದವು.
ಸಿಲಿಂಡರ್ ಎತ್ತಿ ಇಳಿಸಿ ಕೈಗಳಲ್ಲಿ ಬೊಬ್ಬೆ ಬಂದು ಕೆಲವೊಮ್ಮೆ ರಕ್ತ ಸಹ ಸುರಿಯುತ್ತಿತ್ತು ಊರಿಗೆ ಹೋಗಿಬಿಡೋಣ ಎಂಬ ಮನಸು ಆದರೆ ಅಮ್ಮನ ಮಾತು ಕೇಳದೆ ಹಠದಿಂದ ಬಂದಿರುವೆ ದುಡಿಯಬೇಕು ಎಂದು ಗಟ್ಟಿ ಮನಸು ಮಾಡಿ ಕೆಲಸದಲ್ಲಿ ಮಾಡುತ್ತಾ ಬೆಂಗಳೂರಿನ ಜೀವನಕ್ಕೆ ಕ್ರಮೇಣ ಒಗ್ಗಿಕೊಂಡಿದ್ದ.

ಉಗಾದಿ ಹಬ್ಬಕ್ಕೆ ತಾನು ದುಡಿದ ಹಣದಲ್ಲಿ ಅಮ್ಮನಿಗೆ ಒಂದು ಸೀರೆ ತೆಗೆದುಕೊಂಡು, ತನಗೂ ಹಬ್ಬಕ್ಕೆ ಪ್ಯಾಂಟ್ ಶರ್ಟ್ ಕೊಂಡು ರಾಜನಿಗೆ ತೋರಿಸಿ ಸಂಭ್ರಮ ಪಟ್ಟಿದ್ದ.
ಅಮ್ಮನಿಗೆ ಪೋನ್ ಮಾಡಿ " ಅಮ್ಮ ಉಗಾಎ ಹಬ್ಬಕ್ಕೆ ನಾನೇ ನಿನಗೆ ಸೀರೆ ಮತ್ತು ನನಗೆ ಬಟ್ಟೆಗಳನ್ನು ತಗಂಡಿದಿನಿ ನೀನು ತಗಬ್ಯಾಡ ಹಬ್ಬಕ್ಕೆ ಬರುವಾಗ ತತ್ತಿನಿ" ಎಂದಿದ್ದ .ಅಮ್ಮನಿಗೆ ಈ ಮಾತು ಕೇಳಿ ಬಹು ಆನಂದದಿಂದ ಕಣ್ಣಲ್ಲಿ ಎರಡು ಹನಿಗಳು ಉದುರೇ ಬಿಟ್ಟವು.

ಮೂರು ತಿಂಗಳಿಂದ ಅಮ್ಮನ ಮುಖ ನೋಡದೇ ಇದ್ದದ್ದರಿಂದ ರೂಮಿನಲ್ಲಿ ಪ್ರತಿದಿನ ಒಂದೇ ರೀತಿ ಸಾರು ಅನ್ನ ತಿಂದು ಅಮ್ಮನ ಕೈರುಚಿ ನೆನಪಾಗಿ ನಾಳೆ ಅಮ್ಮನ ನೋಡುವೆ ಅಮ್ಮನು ಮಾಡುವ ರುಚಿ ರುಚಿಯಾದ ಊಟ ತಿನ್ನುವೆ ಎಂದು ಯೋಚಿಸುತ್ತಾ ಬಟ್ಟೆಗಳನ್ನು ಪ್ಯಾಕ್ ಮಾಡಿಕೊಂಡು ಬಸ್ಟ್ಯಾಂಡ್ ಗೆ ಬಂದ.

ಬಸ್ಟಾಂಡ್ ನಲ್ಲಿ‌ ಒಂದೂ ಬಸ್ ಇಲ್ಲ ಯಾಕೆ ಎಂದು ವಿಚಾರಿಸಿದಾಗ ಕರೋನ ಪ್ರಯುಕ್ತ ದೇಶಾದ್ಯಂತ ಬಂದ್ ಇರುವುದರಿಂದ ಬಸ್ ,ಆಟೋ ,ಯಾವುದೂ ಇಲ್ಲ ಅಂದರು .ರಾತ್ರಿ ‌ಎಂಟು‌ಗಂಟೆಯಾದರೂ ಯಾವುದೇ ವಾಹನ‌‌‌ ಸಿಗಲಿಲ್ಲ ಅಲ್ಲಿಗೆ ಜನ ಜಾತ್ರೆ ಸೇರಿತ್ತು ಎಲ್ಲರೂ ಇವನಂತೆ ಊರಿಗೆ ಹೊರಟವರೆ ಇದ್ದರು. ಒಂದು ಟ್ರಾಕ್ಟರ್ ಬಂತು ಜನ ಹೇಳದೇ ಕೇಳದೆ ಜೇನು ಹುಳ ಮುತ್ತಿದಂಗೆ ಮುತ್ತಿದರು ರಮೇಶ ಹೇಗೋ ಟ್ರಾಕ್ಟರ್ ಹತ್ತಿ ಕುಳಿತ
ನೆಲಮಂಗಲದ ಹತ್ತಿರ ಟ್ರಾಕ್ಟರ್ ನಿಂತಿತು ಇದ್ದಕ್ಕಿದ್ದಂತೆ ಜನ ದಡಬಡ ದುಮುಕಿದರು ನೋಡಿದರೆ ಪೊಲೀಸರು ಲಾಟಿ ಬೀಸುತ್ತಿದ್ದರು. "ಯಾವ ವೆಹಿಕಲ್ ಬಿಡಲ್ಲ ಡಿ ಸಿ ಆರ್ಡರ್ ನಡಿರಿ ಹಿಂದಕ್ಕೆ" ಎಂದು ಪೊಲೀಸ್ ರು ಘರ್ಜಿಸುತ್ತಿದ್ದರು. ಕೆಲ ಯುವಕರು ಟ್ರಾಕ್ಟರ್ ಇಳಿದು ರಾತ್ರಿ ಹನ್ನೆರಡು ಗಂಟೆಯ ಸಮಯದಲ್ಲಿ ಹೈವೆ ಯಲ್ಲಿ ನಡೆದು ಊರಿಗೆ ಹೋಗಲು ಹೆಜ್ಜೆ ಹಾಕಿದರು ರಮೇಶ ಅವರ ಜೊತೆ ಸೇರಿ ನಡೆದ .ಮಾತನಾಡುತ್ತಾ ದಾರಿ ಸಾಗಿದ್ದೇ ತಿಳಿಯಲಿಲ್ಲ, ಬೆಳಗಿನ ಜಾವ ಐದು ಗಂಟೆಗೆ ತುಮಕೂರು ಬಳಿ ಮತ್ತೆ ಪೊಲೀಸರು ತಡೆದು ಎಲ್ಲರನ್ನೂ ಅರೆಸ್ಟ್ ಮಾಡಿ ಅವರನ್ನು ಒಂದು ಹಾಸ್ಟೆಲ್ ನಲ್ಲಿ ಬಂದಿಸಿ ಊಟ ತಿಂಡಿ ವ್ಯವಸ್ಥೆ ಮಾಡಿದರು.
ರಮೇಶ ಪೊಲೀಸರಿಗೆ " ಸಾರ್ ನಮ್ಮವ್ವ ಅಲ್ಲಿ ಕಾಯ್ತಿರ್ತಾಳೆ ನಮ್ಮವ್ವನ ನೋಡ್ಬೇಕು ಬಿಡ್ರಿ ಸಾರ್ " ಎಂದು ಗೋಗರೆದ .ಪೋಲೀಸ್ ರು ಬಿಡುವರೆ? ಇತ್ತ ಹರ್ತಿಕೋಟೆಯಲ್ಲಿ ಸಾಕವ್ವ ಇಂದು ನನ್ನ ಮಗ ಊರಿಗೆ ಬರುವ ಎಂಬ ನಿರೀಕ್ಷೆಯೊಂದಿಗೆ ಸಂಭ್ರಮದಿಂದ ಎಲ್ಲರ ಬಳಿ ಹೇಳಿಕೊಂಡು ಬರುತ್ತಿದ್ದಳು " ಹೇ ಕೆಂಚ ಇವತ್ತು ನನ್ಮಗ ಬೆಂಗಳೂರಿಂದ  ಬತ್ತಾನೆ.... ಉಗಾದಿ ಹಬ್ಬಕ್ಕೆ ಬಟ್ಟೆ ತತ್ತಾನೆ ಕಣೋ....

*ಸಿ ಜಿ‌ ವೆಂಕಟೇಶ್ವರ*
*ತುಮಕೂರು*


ಮಹಾವೀರ ಜಯಂತಿಯ ಹನಿಗಳು (ಇಂದು‌ ಮಹಾವೀರ ಜಯಂತಿ)

*ಸಿಹಿಜೀವಿಯ ಹನಿಗಳು*

      *೧*
*ಮಹಾವೀರ*

(ಇಂದು ಮಹಾವೀರ ಜಯಂತಿ)

ಅವನಲ್ಲ ರಾಜ್ಯಗಳನು ಗೆದ್ದ ಧೀರ
ಅವನಲ್ಲ ರಾಜರ ಸೋಲಿಸಿದ ಶೂರ
ಅವನಲ್ಲ ಯುದ್ದಕಲೆಗಳನರಿತ  ವೀರ
ಅವನೇ ಶಾಂತಿ ತೋರಿದ *ಮಹಾವೀರ*

*೨*
*ಜಿನ*

ನೀನು  ಪಡೆದರೆ ಒಳ್ಳೆಯ ಜ್ಞಾನ
ನಿನ್ನಲಿದ್ದರೆ ಒಳ್ಳೆಯ ದರ್ಶನ
ನಿನ್ನದಾಗಿಸಿಕೊಂಡರೆ ಸುಗುಣ
ನೀನು ಆಗೇ ಆಗುವೆ * ಜಿನ*

*ಸಿ ಜಿ ವೆಂಕಟೇಶ್ವರ*
*ತುಮಕೂರು*