30 November 2021

ನಂಬಿಕೆ ದ್ರೋಹಿಗಳು


 



*ನಂಬಿಕೆ ದ್ರೋಹಿಗಳು*


ನಂಬಿಕೆ ದ್ರೋಹಿಗಳು

ಸದಾ ನಮ್ಮೊಂದಿಗೆ

ಇದ್ದೇ ಇರುವರು 

ನಂಬಿಸಿ ದ್ರೋಹ ಎಸಗುತ್ತಾ

ಅವರಿವರಿಗೆ|

ತಿಪ್ಪರಲಾಗ ಹಾಕಿದರೂ 

ಮೋಸ ಮಾಡಲಾದೀತೆ

ಇಂತಹವರು ನಮ್ಮ

ದೇವರಿಗೆ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


29 November 2021

ಅವನು ಕರೆದಾಗ ಹೋಗಲು ಸಿದ್ದರಿರೋಣ .


 



ಅವನು ಕರೆದಾಗ ಹೋಗಲು ಸಿದ್ಸರಿರೋಣ .


"ಬೊಂಬೆ ಆಡ್ಸೋನು ಮ್ಯಾಲೆ ಕುಂತವ್ನೆ 

ನಮ್ಗೂ ನಿಮ್ಗೂ ಯಾಕೆ ಟೆನ್ಸನ್ನು" ಎಂಬ ಯೋಗರಾಜ್ ಭಟ್ಟರ ಹಾಡಿನಂತೆ . ಜೀವನದಲ್ಲಿ ಬಹುತೇಕ ಬಾರಿ ನಾವು ಅಂದುಕೊಂಡತೆ ಇರುವುದಿಲ್ಲ .ಬದುಕು  ಬಂದಂತೆ ಸ್ವೀಕರಿಸುವ ಮೂಲಕ ಜೀವನದಲ್ಲಿ ಮುಂದಡಿ ಇಡಬೇಕಿದೆ. Man proposes God disposes ಎಂಬ ಉಕ್ತಿಯಂತೆ ನಾವೇನೇನೋ ಪ್ಲಾನ್ ಮಾಡಿದರೂ ಅವನು ನಮ್ಮೆಲ್ಲಾ ಯೋಜನೆಗಳನ್ನು ತಲೆಕೆಳಗುಮಾಡಿ ಹೇಗಿದೆ ಆಟ? ಎಂದು ಮರೆಯಲೇ ನಿಂತು ನಗುವನು. 


ಅಂದರೆ ನಾವು ಯೋಜನೆ ಮಾಡಬಾರದಾ ? ಹಿಂಗೇ ಇರಬೇಕು ಎಂದು ಗುರಿ ಇಟ್ಟುಕೊಳ್ಳಲೇ ಬಾರದಾ? ಎಂದರೆ ಖಂಡಿತವಾಗಿ ಗುರಿಯೂ ಇರಲಿ . ಯೋಜನೆಯು ಇರಲಿ . ಅದಕ್ಕೆ ಪೂರಕವಾಗಿ ಪ್ರಯತ್ನ ಸಹ ಜಾರಿಯಲ್ಲಿ ಇರಲಿ ನಮ್ಮೆಲ್ಲ ಪ್ರಾಮಾಣಿಕವಾದ ಪ್ರಯತ್ನದ ನಡುವೆಯೂ ನಾವಂದುಕೊಂಡದ್ದು ಆಗಲಿಲ್ಲ ಎಂದರೆ ಬೇರೇನೋ ಯೋಚಿಸುತ್ತಾ, ಬೇಸರ ಮಾಡಿಕೊಂಡು ಮಾನಸಿಕವಾಗಿ ಕುಗ್ಗಿ ಖಿನ್ನತೆಯೆಡೆಗೆ ಜಾರಿ ಬದುಕಿನಲ್ಲಿ ಅನರ್ಥದ ನಿರ್ಧಾರ ಕೈಗೊಳ್ಳುವ ಮೂಲಕ ನಮ್ಮ ಅಮೂಲ್ಯವಾದ ಜೀವನ ಹಾಳು ಮಾಡಿಕೊಳ್ಳವ ನಿರ್ಧಾರವನ್ನು ಕೈಗೊಳ್ಳಬಾರದು. ಸೂರ್ಯ ಮುಳುಗಿದ ಎಂದು ಕೊರಗಿ ಕೂರುವ ಬದಲಿಗೆ ನಕ್ಷತ್ರಗಳ ನೋಡುವ ಕಾತರತೆ ಮತ್ತು ಸಂತಸ ಹೊಂದಬೇಕಿದೆ.ಎಲ್ಲಾ ಬಾಗಿಲುಗಳು ಮುಚ್ಚಿವೆ ಬೆಳಕು ಬರುತ್ತಿಲ್ಲ ಎಂದು ಪರಿತಪಿಸುವ ಬದಲಿಗೆ ಕಿಟಕಿಯ ಮೂಲಕ ಬರುವ ಬೆಳಕಿನ ಕಡೆಗೆ ಗಮನ ಹರಿಸಬಹುದು. ಜೀವನದಲ್ಲಿ ನಮಗೆ ನಾವಂದುಕೊಂಡ ಯಾವುದೋ ಸಿಗಲಿಲ್ಲ ಎಂದರೆ   ದೇವರು ನಮಗಾಗಿ ಮತ್ತೇನೊ ಕೊಡಲು ಸಿದ್ದತೆ ಮಾಡಿಕೊಂಡಿರುವ ಎಂದು ಭಾವಿಸಿ ಮುನ್ನೆಡೆಯೋಣ. ವಿಪ್ರೊ ಕಂಪನಿಯಲ್ಲಿ ಕೆಲಸ ಸಿಗಲಿಲ್ಲ ಎಂದು ಬೇಸರ ಪಟ್ಟುಕೊಂಡು ಚಿಂತೆ ಮಾಡುತ್ತಾ ಕುಳಿತಿದ್ದರೆ ನಾರಾಯಣ ಮೂರ್ತಿ ರವರು ಇನ್ಫೋಸಿಸ್ ಎಂಬ ದೈತ್ಯ ಕಂಪನಿಯು ಕಟ್ಟಿ ಸಾವಿರಾರು ಕೋಟಿ ವಹಿವಾಟು ನಡೆಸಿ ಸಾವಿರಾರು ಜನರಿಗೆ ಉದ್ಯೋಗ ಕೊಡಲು ಆಗುತ್ತಿರಲಿಲ್ಲ. 


ಇದೇ ರೀತಿಯಲ್ಲಿ ಜೀವನದಲ್ಲಿ ಕೆಲವೊಮ್ಮೆ ನಾವಂದುಕೊಂಡಂತೆ ಆಗದಿದ್ದರೆ ಬೇಸರ ಪಟ್ಟುಕೊಳ್ಳದೆ ಜೀವನವನ್ನು ಬಂದಂತೆ ಸ್ವೀಕರಿಸಿ ಮುನ್ನಡೆಯಬೇಕು ಜೀವನದ ಪ್ರತಿ ಕ್ಷಣವನ್ನು ಅನುಭವಿಸುತ್ತಾ ಅವನು ಕರೆದಾಗ ಹೋಗಲು ಕೂಡಾ ನಾವು ಸಿದ್ದರಾಗಿರಬೇಕು.



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

28 November 2021

ಸೌಗಂಧಿನಿ .ಹನಿಗವನ

 


*ಟೈಪ್ ಮಾಡು* 

ಸುಗಂಧ ಕೂಡಿಕೊಂಡ ಸೌಗಂಧಿನಿ 

ನುಲಿಯಿತ್ತಾ ಬಾಸ್ ಕ್ಯಾಬಿನ್

ಒಳಹೊಕ್ಕ ಆಪ್ತಸಹಾಯಕಿಗೆ

ಇಂದು ರಾತ್ರಿ ನೀನು ಫ್ರೀ ಇದ್ದರೆ

ನೋಡು|

ಮನದಲ್ಲೇ ಸಂತಸಗೊಂಡ ಅವಳು

ಗಗನದಲ್ಲಿ ಹಾರಾಡಿದಂತೆ ಖುಷಿಯಾದಳು.

ಬಾಸ್ ಮುಂದುವರೆದು ಹೇಳಿದ

ಈ ನಲವತ್ತು ಪೇಜ್ ಗಳ ಟೈಪು

ಮಾಡು!!


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

27 November 2021

ಕುಣಿಗಲ್ ಶೋಧ .ಪುಸ್ತಕ ವಿಮರ್ಶೆ


 



ಕುಣಿಗಲ್ ಶೋಧ .ಕೃತಿ ವಿಮರ್ಶೆ

(ಸಂಶೋಧನಾ ಲೇಖನಗಳ ಸಂಗ್ರಹ)

ಡಾ. ಕೆ ರೇವಣ ಸಿದ್ದಯ್ಯ .



ಬಿ .ಎಡ್. ಗೆಳೆಯ ಯೋಗಾನಂದ ರವರ ಮೂಲಕ ಪರಿಚಿತವಾದ ಡಾ. ಕೆ. ರೇವಣ ಸಿದ್ದಯ್ಯ ರವರು ಬರೆದ ಸಂಶೋಧನಾ ಕೃತಿಯನ್ನು ಓದಿದಾಗ ಬಹಳಷ್ಟು ಐತಿಹಾಸಿಕ ಸತ್ಯಗಳನ್ನು ತಿಳಿದೆನು. 


ಈ ಕೃತಿಗೆ ಆದಿಚುಂಚನಗಿರಿ ಮಹಾ ಸಂಸ್ಥಾನ ದ ಡಾ. ಶ್ರೀ. ನಿರ್ಮಲಾನಂದ ಸ್ವಾಮೀಜಿ ರವರ ಆಶೀರ್ವಚನ ಪುಸ್ತಕದ ಘನತೆಯನ್ನು ಹೆಚ್ಚಿಸಿದೆ. ಎಂ. ಪ್ರಕಾಶ ಮೂರ್ತಿ ರವರ ಮುನ್ನುಡಿ ಮತ್ತು ಜಾಣಗೆರೆ ವೆಂಕಟರಾಮಯ್ಯ ರವರ ಬೆನ್ನುಡಿ ಮೌಲಿಕವಾಗಿದೆ.


ಕುಣಿಗಲ್ ತಾಲ್ಲೂಕಿನ ಬೇಗೂರು ಪಂಚಾಯ್ತಿ ಕುರುಪಾಳ್ಯ ಗ್ರಾಮದ ರೈತಾಪಿ ಕುಟುಂಬದಿಂದ ಬಂದಿರುವ ಡಾ| ಕೆ. ರೇವಣಸಿದ್ದಯ್ಯ ರವರು ಪ್ರತಿಭಾವಂತ ಮತ್ತು ಭರವಸೆಯ  ಸಂಶೋಧಕರು , ವ್ಯಾಸಂಗದ ಹಂತದಲ್ಲೇ ಚಿಂತನೆ ಮತ್ತು ಬರವಣಿಗೆಯಲ್ಲಿ ತೊಡಗಿಸಿಕೊಂಡು ಜ್ಞಾನದ ಹಸಿವನ್ನು ನೀಗಿಸಿಕೊಳ್ಳಲು ಸಂಶೋಧನೆಯತ್ತ ಆಸಕ್ತಿ ಬೆಳೆಸಿ ಕೊಂಡಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಕುಣಿಗಲ್ ನಾಡು-ಇತಿಹಾಸ ಮತ್ತು ಪುರಾತತ್ವ ಅಧ್ಯಯನ' ಎಂಬ ವಿಷಯದ ಬಗ್ಗೆ ಪಿಹೆಚ್.ಡಿ ಪದವಿ ಪಡೆದುಕೊಂಡಿದ್ದಾರೆ.


ಯುವ ಸಂಶೋಧಕರು ತನ್ನ ತವರೂರು ಕುಣಿಗಲ್ ತಾಲ್ಲೂಕಿನ ಮೇಲಿನ ಅಭಿಮಾನ, ಆಸಕ್ತಿಯಿಂದ ಜನ್ಮ ನೀಡಿದ ಕರ್ಮಭೂಮಿಯನ್ನು ಪ್ರೀತಿಸುವುದು, ಅದರ ಇತಿಹಾಸದ ಬಗೆಗೆ ಆಸಕ್ತಿ ತಾಳುವುದು, ವಾಸ್ತವ ಇತಿಹಾಸವನ್ನು ಶೋಧಿಸುವುದು ಕರ್ತವ್ಯವೆಂದು ಭಾವಿಸಿ ಆ ದಿಸೆಯಲ್ಲಿ ಅವುಗಳ ಮೇಲೆ ಬೆಳಕು ಚೆಲ್ಲುವ ಕಾರ್ಯ ಪ್ರಶಂಸನೀಯ.


 ಕುಣಿಗಲ್ ಶೋಧ ಕೃತಿಯಲ್ಲಿ ೧೪ ಬಿಡಿ ಬರಹಗಳು ಬಹುತೇಕ ಸಂಶೋಧನಾತ್ಮಕ ಲೇಖನಗಳಾಗಿದ್ದು, ಕೃತಿಗೆ ಮಹತ್ವವನ್ನು ತಂದುಕೊಟ್ಟಿವೆ.


ಕುಣಿಗಲ್ ಪರಿಸರದ ನವಶೋಧಿತ ಕಬ್ಬಿಣದ ಕುಲುಮೆಗಳು ಎಂಬ ಲೇಖನವು ಲೇಖಕರಿಗೆ ಡಾ.ಎಂ. ಎಚ್. ಕೃಷ್ಣ ಮೆರಿಟ್ ಪ್ರಶಸ್ತಿಯನ್ನು ಪಡೆದಿರುವುದು ನಿಜಕ್ಕೂ ಅಭಿನಂದನಾರ್ಹ.


ಹುತ್ರಿದುರ್ಗ ಪರಿಸರದ ನವಶೋಧಿತ ಶಿಲಾಯುಗ ಸಂಸ್ಕೃತಿಯ ಸಮಾಧಿ ನೆಲೆಗಳು ಎಂಬ ಲೇಖನ ಓದುತ್ತಿದ್ದರೆ  ನಾವು ಹುತ್ರಿ ದುರ್ಗಕ್ಕೆ ಭೇಟಿ ನೀಡಿದ ಅನುಭವವಾಗುತ್ತದೆ.ಪೂರಕವಾಗಿ ನೀಡಿರುವ ಚಿತ್ರಗಳು ಓದುಗರಿಗೆ ಸಚಿತ್ರ ಮಾಹಿತಿ ನೀಡಲು ಸಹಕಾರಿಯಾಗಿವೆ.ಇದರಲ್ಲಿ ಉಲ್ಲೇಖಿತವಾದ ಕಲ್ಲುಸೇವಾ ಪದ್ದತಿಯು ಪಾರ್ಸಿ ಧರ್ಮದ ಶವಸಂಸ್ಕಾರ ಪದ್ಧತಿಯನ್ನು ನೆನಪಿಸುತ್ತದೆ.

 ಕುಣಿಗಲ್  ನಾಡಿನ ಕಂಬದ ನರಸಿಂಹನ ಆರಾಧನಾ ನೆಲೆಗಳು ಎಂಬ ಲೇಖನವು ಕುಣಿಗಲ್ ತಾಲೂಕಿನಲ್ಲಿ ಇರುವ ಹತ್ತಕ್ಕೂ ಹೆಚ್ಚು ನರಸಿಂಹ ದೇವರ ದೇಗುಲಗಳ ಸಮಗ್ರ ಮಾಹಿತಿಯನ್ನು ನೀಡುತ್ತವೆ.

ಬೇಗೂರು ಗ್ರಾಮದ  ಪ್ರಾಚ್ಯಾವಶೇಷಗಳು ಎಂಬ ಲೇಖನವು  ಬೇಗೂರಿನ ಕೆರೆ , ವೀರಗಲ್ಲುಗಳ ಬಗ್ಗೆ ಮಾಹಿತಿಯನ್ನು ನೀಡುತ್ತಾ ನಮ್ಮ ಪ್ರತೀ ಗ್ರಾಮಗಳು  ಸಾಂಸ್ಕೃತಿಕ ಪರಂಪರಾ ಕೇಂದ್ರಗಳು ಎಂಬ ಭಾವನಾತ್ಮಕ ಅಂಶವನ್ನು ತೆರೆದಿಡುತ್ತದೆ.

ಇನ್ನೂ ಈ ಪುಸ್ತಕದ ಇತರೆ ಲೇಖನಗಳಾದ 

ಪ್ರಾಚೀನ ಜೈನಕೇಂದ್ರ ಸಂಕೀಘಟ್ಟ ,

ಸ್ಥಳನಾಮಗಳ ಹಿನ್ನೆಲೆಯಲ್ಲಿ ಕುಣಿಗಲ್ ನಾಡಿನ ಕೋಟೆಗಳ ಅಧ್ಯಯನ, ಕುಣಿಗಲ್ ನಾಡಿನ ಶಾಸನೋಕ್ತ ಸ್ಥಳನಾಮಗಳು,

ಕುಣಿಗಲ್ ಪಟ್ಟಣದ ಪ್ರಾಚೀನ ದೇವಾಲಯಗಳು, ಕುಣಿಗಲ್ ಪರಿಸರದ ನಂಬಿಕೆ ಆಚರಣೆಗಳು,

ಕುಣಿಗಲ್ ಪರಿಸರದ ಸಾಂಪ್ರದಾಯಿಕ ಆಹಾರ ಪದ್ಧತಿ, ಕುಣಿಗಲ್ ತಾಲ್ಲೂಕಿನ ಶಾಸನೋಕ್ತ ಆಗ್ರಹಾರಗಳು, ಹುತ್ರಿದುರ್ಗದ ಪ್ರಾಚ್ಯಾವಶೇಷಗಳು,ಕುಣಿಗಲ್ ಸೀಮೆಯ ಸ್ಥಳಪುರಾಣ ಮತ್ತು ಐತಿಹ್ಯಗಳು,ಮಾರ್ಕೋನಹಳ್ಳಿ ಮತ್ತು ಮಂಗಳಾ ಜಲಾಶಯ ಮುಂತಾದ ಲೇಖನಗಳು ಸಮಗ್ರ ಸಂಶೋಧನಾ ಪ್ರಬಂಧಗಳಾಗಿದ್ದು ಇತಿಹಾಸದ ವಿದ್ಯಾರ್ಥಿಗಳು ಮತ್ತು ಸಾಂಸ್ಕೃತಿಕ ಪರಂಪರೆಯ ಬಗ್ಗೆ ಆಸಕ್ತಿ ಇರುವವರ ಪಾಲಿನ ಆಕರ ಗ್ರಂಥವಾಗಿದೆ ಎಂದರೆ ತಪ್ಪಾಗಲಾರದು. 



ಡಾ| ಕೆ. ರೇವಣಸಿದ್ಧಯ್ಯನವರು ತಮ್ಮ ಕೃತಿಯಲ್ಲಿ ಕುಣಿಗಲ್ ಬಗ್ಗೆ ಸರಿಯಾಗಿ ಪರಿಚಯವಿಲ್ಲದ ನನ್ನಂತಹ ಹೊರ ಜಿಲ್ಲೆಯಿಂದ ಬಂದವರಿಗೆ   ತಿಳಿಯದಿದ್ದ ಹೊಸ ಹೊಸ ಸಂಗತಿಗಳನ್ನು ದಾಖಲೆ ಸಹಿತವಾಗಿ ವಿವರಿಸಿರುವುದು  ಸಂತಸ ತಂದಿದೆ. ಅವರ ಸಂಶೋದನಾ ಕಾರ್ಯ ನಿರಂತರವಾದ ಕ್ಷೇತ್ರ ಅಧ್ಯಯನ ಈ ಪುಸ್ತಕದಲ್ಲಿ ಪ್ರತಿಬಿಂತವಾಗಿದೆ. ಶ್ರೀಯುತರು ಮುಂದಿನ ದಿನಗಳಲ್ಲಿ ಇಂತಹ ಮೌಲಿಕ ಕೃತಿಗಳನ್ನು ರಚಿಸುತ್ತಾ ಇತಿಹಾಸದ ಮೇಲೆ ಬೆಳಕು ಚೆಲ್ಲವ ಕಾರ್ಯ ಮಾಡಲಿ ಎಂದು ಆಶಿಸುತ್ತೇನೆ .



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

990925529 


ಪುಸ್ತಕದ ಹೆಸರು: ಕುಣಿಗಲ್ ಶೋಧ 

ಸಂಶೋಧನಾ ಲೇಖನಗಳ ಸಂಗ್ರಹ

ಲೇಖಕರು:ಡಾ. ಕೆ ರೇವಣ ಸಿದ್ದಯ್ಯ .

 ಪ್ರಕಾಶನ:  ಸುಹಾಸ್ ಗ್ರಾಫಿಕ್ಸ್, ಬೆಂಗಳೂರು

ಬೆಲೆ: 170 ₹


26 November 2021

ಜನಮಿಡಿತ .೨೭/೧೧/೨೧


 

ಆತ್ಮ ಸಾಕ್ಷಾತ್ಕಾರಕ್ಕಾಗಿ ದುಡಿಯೋಣ.


 


ಆತ್ಮ ಸಾಕ್ಷಾತ್ಕಾರ ಕ್ಕೆ ದುಡಿಯೋಣ 


Don't sit like a rock 

Work like a  clock


ಎಂಬ ನುಡಿಯಂತೆ ನಾವು ಸದಾ ಚಟುವಟಿಕೆಯಿಂದಿರಬೇಕು.ಬಳಸದ ವಸ್ತು ಕೊಳೆಯುತ್ತದೆ ಎನ್ನುವ ಮಾತಿನ ಹಿನ್ನೆಲೆಯಲ್ಲಿ ನಮ್ಮ ಸಕಲ  ಅಂಗಗಳು ಸದಾ ಕಾರ್ಯ ಪ್ರವೃತ್ತವಾಗಿರಬೇಕು. ನಾವು ಜೀವಿಸಲು ನಮಗೆ ಹಣ ಬೇಕು ಅದಕ್ಕೆ ನಾವು ಕೆಲಸ ಮಾಡಲೇಬೇಕು ಅದು ಯಾವುದಾದರೂ ಆಗಿರಬಹುದು ಕೆಲಸ ಮತ್ತು ಜೀವನ ಒಂದೇ ನಾಣ್ಯದ ಅವಿಭಾಜ್ಯ ಮುಖಗಳು. ಜೀವಿಸುತ್ತಾ ಕೆಲಸ ಮಾಡಬೇಕು ಕೆಲಸ ಮಾಡುತ್ತಾ ಜೀವಿಸಬೇಕು.


ಕೆಲವರು ಕೆಲಸ ಮಾಡದೇ ಜೀವಿಸಲು ಪಣ ತೊಟ್ಟಿರುವರು ಅಂತಹವರು ಮೊದಲಿಗೆ ಅತಿಯಾದ ಕೊಬ್ಬಿನ ಸಂಗ್ರಹ ಮತ್ತು ತೂಕದ ಸಮಸ್ಯೆಗಳನ್ನು ಆಹ್ವಾನ ಮಾಡಿಕೊಂಡು ಹಲವಾರು ದೈಹಿಕ ಖಾಯಿಲೆಗಳಿಗೆ ತುತ್ತಾಗುತ್ತಾರೆ.ಕೆಲಸ ಮಾಡದೇ ಸೋಮಾರಿಯಾಗುವವರು" ಸೋಮಾರಿಯ ತಲೆ ಸೈತಾನನ ನೆಲೆ " ಎಂಬಂತೆ ಅನಗತ್ಯ ಚಿಂತೆ ಮಾಡುತ್ತಾ ಇಲ್ಲ ಸಲ್ಲದ ಯೋಚನೆಗಳನ್ನು ಮಾಡುತ್ತಾ ಹಲವಾರು ಮಾನಸಿಕ ಕಾಯಿಲೆಗಳನ್ನು ಆಹ್ವಾನ ಮಾಡಿಕೊಳ್ಳುತ್ತಾರೆ.


ಕಾಯಕವೇ ಕೈಲಾಸ ಎಂಬ ಬಸವಣ್ಣನವರ ತತ್ವ ಪಾಲಿಸೋಣ .ಕೈಕೆಸರಾದರೆ ಬಾಯಿ ಮೊಸರು ಎಂಬ ಗಾದೆಯ ಸತ್ವವನ್ನು ಅರಿಯೋಣ. ನಮ್ಮ ಕಾಯ ಇರುವುದು ಕಾಯಕ ಮಾಡಲು ಎಂಬ ಅರಿವು ನಮ್ಮದಾಗಬೇಕು. ದುಡಿಮೆಯೇ ದುಡ್ಡಿನ ತಾಯಿ ಎಂದು ಸರ್ವರೂ ನಂಬಿದ್ದರೂ   ದುಡ್ಡು ಮಾಡಲು ಮಾತ್ರ ದುಡಿಯಬಾರದು .ದುಡ್ಡೇ ಜೀವನವಲ್ಲ .ನಾವು ಮಡಿಯುವ ಮುನ್ನ ದುಡಿಯೋಣ ಕೇವಲ ಭೌತಿಕ ಸಂಪಾದನೆಗೆ ಮಾತ್ರವಲ್ಲದೆ ಆತ್ಮಸಾಕ್ಷಾತ್ಕಾರಕ್ಕೂ ಸಹ.



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

25 November 2021

ಪೈಪ್ .ಹಾಸ್ಯ ಹನಿಗವನ


 *ಪೈಪ್*


ಭ್ರಷ್ಟ ಅಧಿಕಾರಿ ಹೇಳಿದ

ಮೊದಲೆಲ್ಲ ಲಂಚದ ಹಣವನ್ನು ಬೀರುವಿನಲ್ಲಿ

ಲಾಕರ್ ಗಳಲ್ಲಿ ಇಡುತ್ತಿದ್ದಳು ನನ್ನ ವೈಫ್|

ಈಗ ಅಷ್ಟೆಲ್ಲ ಕಷ್ಟ

ಪಡುವುದು ಬೇಕಿಲ್ಲ 

ಸಾಕು ಒಂದೆರಡು 

ಪಿ ವಿ ಸಿ ಪೈಪ್||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

22 November 2021

ಯೋಗವೇ ಔಷದ .ಹನಿಗವನ


 


ಯೋಗವೇ ಔಷದ 


ಆಧುನಿಕ ಅಶಿಸ್ತಿನ ಜೀವನದ 

ಪರಿಣಾಮವಾಗಿ ,ದೈಹಿಕ ಮತ್ತು

ಮಾನಸಿಕ ಒತ್ತಡಗಳಿಂದ 

ನಮ್ಮೆಲ್ಲರ ಬಾಧಿಸುತ್ತಿವೆ 

ಹಲವಾರು ವ್ಯಾಧಿ|

ಇವುಗಳಿಂದ ಮುಕ್ತಿ ಪಡೆಯಲು

ಅಳವಡಿಸಿಕೊಳ್ಳೋಣ ಯಮ,ನಿಯಮ,ಆಸನ,

ಪ್ರಾಣಾಯಾಮ, ಪ್ರತ್ಯಾಹಾರ

ಧಾರಣ,ಸಮಾಧಿ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

ಅನಾಥವಾಗಿರುವ ಕುರ್ಚಿ.ಲೇಖನ


 


ಅನಾತವಾಗಿರುವ ಕುರ್ಚಿ







ನಾನು ಮೊದಲ ಬಾರಿಗೆ ಕುರ್ಚಿ ನೋಡಿದ್ದು ನಮ್ಮ ಶಾಲೆಯಲ್ಲಿ  ಮರದ ಅಗಲವಾದ ಕುರ್ಚಿಯ ಮೇಲೆ ನಮ್ಮ ಶಿಕ್ಷಕರು ಕುಳಿತುಕೊಂಡು ಪಾಠ ಮಾಡುವುದನ್ನು ನೋಡಿ ನಾನೂ ಒಂದು ದಿನ ಅಂತಹ ಕುರ್ಚಿಯ ಮೇಲೆ ಕುಳಿತುಕೊಳ್ಳುವ ಕನಸು ಕಂಡೆ ಅಲ್ಲಿಯ ವರೆಗೆ ಕಾಯದೇ ಕೆಲವೊಮ್ಮೆ ನಮ್ಮ ಶಿಕ್ಷಕರು ಇಲ್ಲದೇ ಇದ್ದಾಗ ಕುರ್ಚಿಯ ಮೇಲೆ ಕುಳಿತು ಸಂಭ್ರಮ ಪಟ್ಟಿದ್ದೆ .
ಮುಂದೊಂದು ದಿನ ಶಿಕ್ಷಕನಾದೆ ಈಗ ತರಗತಿ ಕೋಣೆಯಲ್ಲಿ ನಾನೇ ರಾಜನಾದರೂ ಬಹುತೇಕ ಬಾರಿ ಸಿಂಹಾಸನ ಇದ್ದರೂ ಕೂರುವುದು ಕಡಿಮೆ. ನಿಂತು ಕೊಂಡು, ತರಗತಿಯ ಮಧ್ಯೆ ಓಡಾಡಿಕೊಂಡು, ಮಕ್ಕಳಿಗೆ ಹೇಳಿಕೊಡುವುದು ನನ್ನ ಅಭ್ಯಾಸ.

ಕೆಲವರಿಗೆ ಕುರ್ಚಿಯೆಂದರೆ ಎಲ್ಲಿಲ್ಲದ ವ್ಯಾಮೋಹ  ಗ್ರಾಮ ಪಂಚಾಯತ್ ಅಧ್ಯಕ್ಷನ ಕುರ್ಚಿಯಿಂದ ಹಿಡಿದು ಮುಖ್ಯಮಂತ್ರಿ, ಪ್ರಧಾನಮಂತ್ರಿ, ರಾಷ್ಟ್ರಪತಿ ಕುರ್ಚಿಯೇರಲು ಏನೇನು ತಂತ್ರ ಕುತಂತ್ರ  ಆಟ ದೊಂಬರಾಟ ನಾಟಕವಾಡುತ್ತಾರೆ ಎಂಬುದನ್ನು ನಾವು ನೋಡಿದ್ದೇವೆ .

ಕುರ್ಚಿಗೆ ಚೇರ್ , ಗಾದಿ, ಸೀಟು, ಪೀಠ  ಮುಂತಾದ ಸಮಾನಾರ್ಥಕ ಪದಗಳಿವೆ

ಏನೇನೋ ಕಸರತ್ತು
ಮಾಡುವರು ಏರಲು
ಗಾದಿ|
ಏರಿದ ಮೇಲೆ
ಮರೆಯದೇ
ತುಳಿವರು ಭ್ರಷ್ಟಾಚಾರದ
ಹಾದಿ |

ಮೊದಲು ಬರೀ ಮರದಿಂದ ಮಾಡಿದ ಕುರ್ಚಿಗಳು ಇದ್ದವು ಈಗ ‌ಕಬ್ಬಿಣ ಸ್ಟೀಲ್ ,ಪೈಬರ್, ಪ್ಲಾಸ್ಟಿಕ್ ಹೀಗೆ ತರಹೇವಾರಿ ವಸ್ತುಗಳಿಂದ ಮಾಡಿದ ವಿವಿಧ ವಿನ್ಯಾಸಗಳ ಕುರ್ಚಿಗಳು ಲಭ್ಯ ,ಬೆಲೆಗಳು ಸಹಾ ಕೆಲವು ಕೈಗೆಟುಕುವಂತಿದ್ದರೆ ಕೆಲವು ಗಗನ ಮುಖಿ.
ಹಿಂದಿನ ಕಾಲದಲ್ಲಿ ಅತಿಥಿಗಳು ಬಂದಾಗ ಈಚಲು ಅಥವಾ ಹಾಫಿನ ಚಾಪೆ ಹಾಕುತ್ತಿದ್ದರು ಚೌಡಗೊಂಡನಹಳ್ಳಿಯ ನಮ್ಮ ಮನೆಯಲ್ಲಿ ಕುರ್ಚಿ ಇರಲಿಲ್ಲ. ಯರಬಳ್ಳಿಯ ನಮ್ಮ ಮಾವನವರ ಮನೆಯಲ್ಲಿ ಆರಾಮ್ ಕುರ್ಚಿ ಇತ್ತು . ಕಟ್ಟಿಗೆಯಿಂದ ಮಾಡಿದ ನಾಜೂಕಿನ ಕೆಲಸದ ಆ ಕುರ್ಚಿ ಗೆ  ನಾವು ಕುಳಿತುಕೊಳ್ಳಲು  ಬಟ್ಟೆಯೇ ಮೂಲ ಮೇಲೆ ಮತ್ತು ಕೆಳಗೆ ದುಂಡನೆಯ ‌ಕೋಲಿಗೆ ಬಟ್ಟೆಯನ್ನು ಸಿಕ್ಕಿಸಿ ಆರಾಮವಾಗಿ ಅದರ ಮೇಲೆ ಪಡಿಸುವುದು ಅಂದಿನ ಐಶಾರಾಮಿ ಸ್ಥಿತಿಯನ್ನು ಸಹ ಸೂಚಿಸುತ್ತಿತ್ತು.
ನಮ್ಮ ಮಾವನವರಾದ ಬಿ  ಕೃಷ್ಣಮುರ್ತಿ  ರವರು ಆ ಆರಾಮ್ ಕುರ್ಚಿಯ ಮೇಲೆ ಆರಾಮಾಗಿ ಕುಳಿತ ಗತ್ತು ನೋಡಿ ನಾನೂ ಒಂದು ದಿನ ದೊಡ್ಡವನಾದ ಮೇಲೆ ಹೀಗೆ ಆರಾಮ್ ಕುರ್ಚಿಯಲ್ಲಿ ಕೂರಬೇಕು ಎಂದು ಅಂದುಕೊಂಡಿದ್ದೆ.

ಆರು ತಿಂಗಳ ಹಿಂದೆ ನಮ್ಮ ಮಾವನವರು ದೈವಾದೀನರಾದರು ಅವರು ಬಳಸಿದ ಆರಾಮ್ ಕುರ್ಚಿ ಈಗಲೂ ಅಟ್ಟದ ಮೇಲೆ ಅನಾಥವಾಗಿದೆ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು









ಪತಿರಾಯ .ಹನಿಗವನ


 


*ಪತಿರಾಯ*  ಹನಿಗವನ


ಇಂದು ಪುರುಷರ ದಿ‌ನ

ನಮ್ಮದೇ ದಿನವೆಂದು 

ಜೋರಾಗಿ ನಗುತ್ತಾ 

ಸಂತಸದಿಂದ ಇದ್ದನು ಪತಿರಾಯ 

ನಗುತ್ತಾ ಮೀಸೆ ತೀರುವುತ್ತಾ||

ಇದ್ದಕ್ಕಿದ್ದಂತೆ ನಗು ಮಾಯ,

ಅವನ ಸದ್ದೇ ಇಲ್ಲ .ಅಮ್ಮನವರು 

ಕೇಳಿದರು ಬಟ್ಟೆಗಳನ್ನು ಒಗೆದದ್ದು

ಪಾತ್ರೆ ತೊಳದದ್ದು , ಅಡುಗೆ

ಮಾಡಿದ್ದು ಮುಗೀತಾ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು


21 November 2021

*ಇಂದಿನ ಪ್ರಜಾಪ್ರಗತಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಕವನ*21/11/21


 

*ಇಂದಿನ ಪ್ರಜಾಪ್ರಗತಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಕಥೆ ೨೧/೧೧/೨೧

 


ಕಸದಲ್ಲರಳಿದ ಕಲೆ .ಲೇಖನ


 


ಕಸದಲ್ಲರಳಿದ ಕಲೆ


"ಅಪ್ಪಾ ನನಗೆ ಒಂದು ಪ್ಲಾಸ್ಟಿಕ್ ಗಾಳಿಪಟ ಕೊಡಿಸು. ನನ್ನ ಫ್ರೆಂಡ್ಸ್ ಎಲ್ಲಾ ತೊಗೊಂಡಿದಾರೆ ಇಲ್ಲೇ ಅಂಗ್ಡೀಲಿ ಸಿಗುತ್ತೆ ಬರೀ ಐವತ್ತು ರುಪಾಯಿ ಅಷ್ಟೇ  " ಎಂದು ಮಗಳು ದುಂಬಾಲು ಬಿದ್ದಳು .
"ಬೇಡ ಸುಮ್ಮನಿರಮ್ಮ ಆ ಗಾಳಿಪಟಗಳು ಪಾಲಿಥಿನ್ ಕವರ್ ನಿಂದ ಮಾಡಿವೆ, ಅವು ಪರಿಸರಕ್ಕೆ ಹಾನಿ, ಅದರ ದಾರವೂ ನೈಲಾನ್ ಮುಂತಾದ ರಾಸಾಯನಿಕಗಳಿಂದ ಮಾಡಿರುತ್ತಾರೆ , ಇವೆಲ್ಲಕ್ಕೂ ಮಿಗಿಲಾಗಿ ಈ ವಸ್ತುಗಳು ಚೀನಾದಿಂದ ಆಮದು ಮಾಡಿದ ವಸ್ತುಗಳು ಅವುಗಳನ್ನು ನಾವು ಕೊಂಡರೆ ನಮ್ಮ ಹಣ ಬೇರೆ ದೇಶಕ್ಕೆ ಹೋಗುತ್ತದೆ. ಬೇಡ ಸುಮ್ಮನಿರು" ಎಂದು ಜೀವಶಾಸ್ತ್ರ, ಪರಿಸರ ಶಾಸ್ತ್ರ ಸಮಾಜಶಾಸ್ತ್ರ ಮತ್ತು ಅರ್ಥಶಾಸ್ತ್ರದ ಉಪನ್ಯಾಸಕನಂತೆ ಒಂದೇ ಸಮನೆ ಉಪನ್ಯಾಸ ಕೊಟ್ಟೆ. ಆರನೇ ತರಗತಿಯ ನನ್ನ ಮಗಳಿಗೆ ಎಷ್ಟು ಅರ್ಥವಾಯಿತೋ "ಹೋಗಪ್ಪ..."ಎಂದು ಎದ್ದು ಹೋಗಿ ಟೀವಿ ಆನ್ ಮಾಡಿ ರಿಮೋಟ್ ಗುಂಡಿ ಒತ್ತಿದಳು .ಅದರಲ್ಲಿ ಒಂದು ಜಾಹಿರಾತಿನಲ್ಲಿ ಒಂದು ಮಗು ಏರ್ ಬಬಲ್ ಊದಿ ಸಂತಸ ಪಡುವ ದೃಶ್ಯ ಬಂತು .
"ಅಪ್ಪಾ ಹೋಗಲಿ ಈ ಏರ್ ಬಬಲ್ ಆದ್ರೂ ಕೊಡ್ಸು , ಪಕ್ಕದ್ ರೋಡ್ ನಲ್ಲಿ ಇರೋ ಅಂಗಡೀಲಿ ಇದೆ .ಬರೇ ಮೂವತ್ತು ರುಪಾಯಿ. " ಅಂದಳು
"ಅಲ್ಲಾಮ್ಮಾ..ಈ ಟೀವಿಯವರು....."
ಅಂದು ನಾನು ಇನ್ನೂ ಮಾತು ಮುಗಿಸಿರಲಿಲ್ಲ ನನ್ನ ಮಗಳು
"ಪರಿಸರ ಮಾಲಿನ್ಯ, ಬೇರೆ ದೇಶಕ್ಕೆ ದುಡ್ಡು ಟೀವಿ ಸರಿ ಇಲ್ಲ. ಅಲ್ವ ಅಪ್ಪಾ ? ಎಂದು ಎದ್ದು ಟೀವಿ ಆಪ್ ಮಾಡಿ ಅಡುಗೆ ಮನೆಗೆ ಹೋಗಿ
" ಇನ್ನೂ ತಿಂಡಿ ಆಗಲಿಲ್ವೇನಮ್ಮ " ಎಂದು ಜೋರಾಗಿ ಕೂಗಿದಳು.

ನನ್ನ ದೊಡ್ಡ ಮಗಳು ಪಿ ಯೂ ಸಿ ಓದುತ್ತಿದ್ದರಿಂದ ಅವಳ ಕಡೆ ತಿರುಗಿ ನನ್ನ ಭಾಷಣ ಮುಂದುವರೆಸಿದೆ.
"ಈ ಟೀವಿ ಚಾನೆಲ್ ಗಳು, ಸೋಶಿಯಲ್ ಮೀಡಿಯಾಗಳು ಬಂದು ನಮಗೆ  ಬೇಕಾದ, ಬೇಕಿಲ್ಲದ ವಸ್ತುಗಳನ್ನು ಮಾರ್ಕೆಟಿಂಗ್ ಮಾಡಲು ವಿಧ ವಿಧದ ಜಾಹಿರಾತುಗಳನ್ನು ನೀಡುತ್ತಾರೆ .ಅದರಲ್ಲೂ ಮಹಿಳೆಯರು ಮತ್ತು ಮಕ್ಕಳೇ ಅವರ ಟಾರ್ಗೆಟ್ ಇದೂ ಒಂದು ರೀತಿಯ ಶೋಷಣೆ ಎಂದರೆ ತಪ್ಪಾಗಲಾರದು.

ನಾನು ಬಾಲ್ಯದಲ್ಲಿ ಇದ್ದಾಗ ನಾನೂ ಗಾಳಿಪಟ ಮಾಡಿ ಹಾರಿಸಿರುವೆ. ಏರ್ ಬಬಲ್ ಮಾಡಿ ಆನಂದ ಪಟ್ಟಿರುವೆ.
ಆಗ ನಾವೇ ಗಾಳಿಪಟ ಮಾಡಿಕೊಳ್ಳುತ್ತಿದ್ದೆವು. ಸ್ನೇಹಿತರೆಲ್ಲಾ ಸೇರಿಕೊಂಡು ಯಾರದೋ ಮನೆಯ ಮುಂದಿನ ಹಳೆಯ ಬಿದಿರು ಕಡ್ಡಿ ಹುಡುಕಿಕೊಂಡು ಅದನ್ನು ಸೀಳಿಕೊಂಡು , ಚೌಕಾಕಾರ ಕಟ್ಟಿ ಹಳೆಯ ನ್ಯೂಸ್ ಪೇಪರ್ ಅಂಟಿಸಿ , ಎಲ್ಲಿಯೋ ತಿಪ್ಪೆಯಲ್ಲಿ ಬಿದ್ದ ಹಳೆಯ ಆಪಿನ ಚಾಪೆಯ ದಾರವನ್ನು ತಂದು ನಮ್ಮ ಗಾಳಿಪಟಕ್ಕೆ ಕಟ್ಟಿ ಮನೆಯ ಹಿಂದಿನ ಕಲ್ಲಿನ ಹೊಲದಲ್ಲಿ ಗಾಳಿಪಟವ ಹಾರಿಸುತ್ತಿದ್ದರೆ ನಮ್ಮ ಗಾಳಿಪಟ ಕ್ಕೂ ನಮಗೂ  ಸ್ವರ್ಗ ಮೂರೇ ಗೇಣು."
ಮಗಳು ಕುತೂಹಲದಿಂದ ಹೌದಾ ಅಪ್ಪ? ಎಂದಳು

ನಾನು ಮತ್ತೆ ಶುರುಮಾಡಿದೆ " ಏರ್ ಬಬಲ್ ಅಂತ ನಿನ್ನ ತಂಗಿ ಕೇಳಿದ್ದಳಲ್ಲಾ ಅದನ್ನೂ ನಾವೇ ಮಾಡಿ ಆಡಿ ನಲಿತಾ ಇದ್ವಿ"
ಎಂಗಪ್ಪಾ?
"ನಮ್ಮ ಊರಲ್ಲಿ ಅಮಟೆಕಾಯಿ ಗಿಡ ಅಂತ ಇದೆ .ಅದರ ಎಲೆ  ಒಂತರ ಔಡಲ ಗಿಡದ ಎಲೆ ತರ ಅಗಲ ಇರುತ್ತೆ. ಅದನ್ನು ಕಿತ್ತು ದೊನ್ನೆ ( ಬೌಲ್ ತರ) ಮಾಡಿಕೊಂಡು ಅದೇ ಗಿಡದ ಕಾಂಡದಿಂದ ಬರುವ ಬಿಳಿ ನೀರಿನಂತಹ ದ್ರವ ಸಂಗ್ರಹ ಮಾಡಿ ,ಒಂದು ಗರಿಕೆ ಕಡ್ಡಿಯನ್ನು ತೆಗೆದುಕೊಂಡು ಅದರ ಮುಂಬಾಗದಲ್ಲಿ ವೃತ್ತಾಕಾರದ ಗಂಟು ಹಾಕಿ, ಅದನ್ನು ಅಮಟೆಕಾಯಿ ಗಿಡದಿಂದ ಸಂಗ್ರಹಿಸಿದ ಬಿಳಿ ದ್ರಾವಣದಲ್ಲಿ ಅದ್ದಿ ಊದಿದರೆ ದೊಡ್ಡ ದೊಡ್ಡ ಬಬಲ್ ಗಳು ಮೇಲೆ ಹಾರುತ್ತಿದ್ದವು ವಾರದಲ್ಲಿ ಒಮ್ಮೆಯಾದರೂ ಹೀಗೆ ಆಡಿ ನಲಿಯುತ್ತಿದ್ದೆವು.
ಇನ್ನೂ ಹಸಿ  ತೆಂಗಿನ ಗರಿಯನ್ನು ಸೀಳಿ ಅದರಲ್ಲಿ ವಾಚು ,ಉಂಗುರ, ಪೀಪಿ ಮಾಡಿ ಆಟ ಆಡಿ ನಲಿಯುತ್ತಿದ್ದೆವು.ಗಣೇಶನ ಹಬ್ಬ ಬಂತೆಂದರೆ ಜೇಡಿ ಮಣ್ಣು ತಂದು ನಾವೇ ಗಣೇಶನ ವಿಗ್ರಹ ಮಾಡಿ ಪೂಜೆ ಮಾಡುತ್ತಿದ್ದೆವು .ಹೀಗೆ ನಾವು ಕಸದಿಂದ ರಸ ಮಾಡಿಕೊಂಡು ಆಟ ಆಡುತ್ತಿದ್ದೆವು ನೀವು ಪ್ರತಿಯೊಂದಕ್ಕೂ ಹಣ ಕೊಟ್ಟು ದುಂದುವೆಚ್ಚ ಮಾಡುತ್ತೀರಿ  ಅದರಲ್ಲೂ ನೀವು ಕೊಳ್ಳುವ ಕೆಲ ವಸ್ತುಗಳು ಪರಿಸರಕ್ಕೆ ಮಾರಕ  ಅಂತಹ ವಸ್ತುಗಳ ಬಳಕೆ ಕಡಿಮೆ ಮಾಡಬೇಕು " ಎಂದು ದೀರ್ಘವಾಗಿ ಹೇಳಿದೆ.
ಟಿಪನ್ ರೆಡಿಯಾಗಿದೆ ಬನ್ನಿ ಎಂದು ನಮ್ಮ ಮನೆಯವರು ಕರೆದಾಗ ಎದ್ದು ಕೈ ತೊಳೆದುಕೊಂಡು ತಟ್ಟೆಯ ಮುಂದೆ ಕುಳಿತೆವು.

ಬೇಸಿಗೆ ರಜದಲ್ಲಿ ನಮ್ಮ ಊರಿಗೆ ಹೋದಾಗ ಮಗಳು ನನ್ನ ಪರೀಕ್ಷೆ ಮಾಡಲು ಅಪ್ಪ   ಗಾಳಿಪಟ ,ಏರ್ ಬಬಲ್ ,ವಾಚು ಎಂದು ಕೇಳಿದಳು. ನಾನು ಮಾಡಿಕೊಟ್ಟ ಗಾಳಿಪಟ ಹಾರಿಸಿ ನಲಿದರು ಸ್ವಾಭಾವಿಕ ಜೈವಿಕ ಏರ್ ಬಬಲ್ ಕಂಡು ಆನಂದ ಪಟ್ಟರು. ತೆಂಗಿನಗರಿಯ ವಾಚು ಉಂಗುರ ಕಟ್ಟಿ ಕೊಂಡು ಖುಷಿಪಟ್ಟರು .
"ಅಪ್ಪಾ ಇದು ಪರಿಸರಕ್ಕೆ ಪೂರಕ ಕಸದಿಂದ ರಸ..... " ಎಂದು  ನನ್ನ ಎರಡನೇ ಮಗಳು  ಅನುಕರಣೆ ಮಾಡಿದಾಗ ಮನೆಯವರೆಲ್ಲ ಬಿದ್ದು ಬಿದ್ದು ನಕ್ಕೆವು.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು

20 November 2021

ಮಕ್ಕಳ ಬಾಲ್ಯ ಅಮೂಲ್ಯ ,ಅನುಭವಿಸಲು ಬಿಡಿ.ಕಥೆ


 

ಮಕ್ಕಳ ಬಾಲ್ಯ ಅಮೂಲ್ಯ
ಅನುಭವಿಸಲು ಬಿಡಿ. ಕಥೆ

ನಾನೀಗ ಸಮಾಜದಲ್ಲಿ ಒಂದು ಉತ್ತಮ ಸ್ಥಾನದಲ್ಲಿ ಇರುವೆ .ಸರ್ಕಾರಿ ಕೆಲಸ .ಸ್ವಂತ ಮನೆ. ಕುಟುಂಬ ಎಲ್ಲಾ ಇದೆ.ಸುಖಿ ಜೀವನ ನಡೆಸುತ್ತಿರುವೆ .ಆದರೆ ಇಂದು ದಿನಸಿ ಖರೀದಿಗಾಗಿ ಒಂದು ಹೋಲ್ಸೇಲ್  ಅಂಗಡಿಯ ಬಳಿ  ಹೋದಾಗ ನಡೆದ ಘಟನೆ ಬಹಳ ಬೇಸರ ತಂದಿತು ಜೊತೆಗೆ ಅದು ನನ್ನ ಬಾಲ್ಯದ ನೆನಪುಗಳನ್ನು ತರಿಸಿ ಇನ್ನೂ ಮನಸ್ಸು ಘಾಸಿಯಾಯಿತು.

ಆ ಬಾಲಕ ಬಹುಶಃ ಹದಿನಾಲ್ಕು ಅಥವಾ ಹದಿನೈದು ವರ್ಷ ಇರಬಹುದು. ಬೇಗ ದಿನಸಿ ಸಾಮಾನುಗಳನ್ನು ಗ್ರಾಹಕರಿಗೆ ಕೊಡಲಿಲ್ಲ ಎಂದು ಅಂಗಡಿಯ ಮಾಲೀಕ ಮನಸೋ ಇಚ್ಚೆ ಹೊಡೆದರು .ಇದನ್ನು ನೋಡಿ ಆ ಮಗುವನ್ನು ಏಕೆ ಹಾಗೆ ಹೊಡೆಯುತ್ತೀರಿ? ಎಂದು ಕೇಳಿದ್ದಕ್ಕೆ
"ಸಾರ್ ಅವನಿಗೆ ನಾನು ಕೂಲಿ ಕೊಡ್ತೀನಿ ,ಹೊಡೆಯೋ ಹಕ್ಕು ನನಗಿದೆ ಸುಮ್ನೆ ನಿಮ್ ಸಾಮಾನ್ ತಗೊಂಡ್ ಹೋಗಿ ಬಿಟ್ಟಿ ಸಲಹೆ ಬೇಡ" ಎಂದು ಸಿಟ್ಟಿನಿಂದ ಮಾತನಾಡಿದರು .

ನನಗೆ ನನ್ನ ಪೊಲೀಸ್ ಭಾಷೆ ಬಾಯಿಗೆ ಬಂದು ಬೈಯ್ಯಬೇಕು ಎಂದು ಮನಸಾದರೂ ನಾ‌ನು ಪೋಲಿಸ್ ಇನ್ಸ್ಪೆಕ್ಟರ್ ಎಂದೂ ಅವನಿಗೆ ಹೇಳಲಿಲ್ಲ ದಿನಸಿಯ ಹಣ ಕೊಟ್ಟು ಹಿಂತಿರುಗಿದೆ.

ಟಿಪನ್ ಕೊಡುವಾಗ "ಯಾಕ್ರಿ ಇವತ್ತು ಒಂತರ  ಡಲ್ ಆಗಿ  ಇದಿರಾ ಹುಷಾರಿಲ್ಲ ಅಂದ್ರೆ ರಜಾ ಹಾಕಿ"  ಎಂದು ನನ್ನಾಕೆ ಕೇಳಿದಳು " ಏನೂ ಇಲ್ಲ ಕಣೆ ಯಾಕೋ ಎರಡು ದಿನದಿಂದ ಮಳೆ ಬೀಳ್ತಾ ಇದೆಯಲ್ಲ, ಥಂಡಿ ಗಾಳಿ ಅದಕ್ಕೆ ಅಷ್ಟೇ " ಎಂದು ಸ್ಟೇಷನ್ ಕಡೆ ಪ್ರಯಾಣ ಬೆಳೆಸಿದೆ.

"ಸರ್ ನಿನ್ನೆ ಮೊಬೈಲ್ ಅಂಗಡಿ ಕಳ್ಳತನ ಕೇಸ್ ನಲ್ಲಿ ಮೂವರ್ನ ಅರೆಸ್ಟ್ ಮಾಡಿದಿವಿ ಕರ್ಕೊಂಬರ್ಲಾ" ಎಂದು  ಜಬಿಉಲ್ಲಾ ಕೇಳಿದಾಗ
" ಬ್ಯಾಡ ಜಬಿ ಆಮೇಲೆ ಕರ್ಕೊಂಬಾ " ಎಂದು ಹೇಳಿ ತಿರುಗುವ ವೀಲ್ ಚೇರ್ ನಲ್ಲಿ ಒಮ್ಮೆ ತಿರುಗಿದೆ.ನನ್ನ ನೆನಪೂ ತಿರುಗುತ್ತಾ ನನ್ನ ಬಾಲ್ಯ ಕ್ಕೆ ಕರೆದುಕೊಂಡು ಹೋಯಿತು.

ಐದಾರು ಎಕರೆ ಹೊಲವಿದ್ದರೂ ದುಡಿಯುವ ಅಭ್ಯಾಸ ಮರೆತ ಅಪ್ಪ ಇರೋ ಬರೋ ಚಟಗಳನ್ನು ಹತ್ತಿಸಿಕೊಂಡು ಊರ ತುಂಬ ಸುತ್ತುವ ಖಾಯಂ ಕೆಲಸ ಮಾಡುತ್ತಿದ್ದರು. ಆರು ಮಕ್ಕಳಿಗೆ ತಂದೆಯಾಗಿದ್ದುದೇ ಅವರ ಮಹಾನ್ ಸಾಧನೆ .ಅಮ್ಮ  ಕೂಲಿನಾಲಿ ಮಾಡಿ ನಮ್ಮ ಸಾಕಿದರು ಕೊನೆಯ ಮಗನಾದ ನನ್ನ ಮೇಲೆ ಸ್ವಲ್ಪ ಜಾಸ್ತಿ ಪ್ರೀತಿ ಎಂದೇ ಹೇಳಬೇಕು .
" ಏಯ್ ರವಿ ನೀನು ಅರಕಲಗೂಡು ಗೆ ಹೋಗು ಅಲ್ಲೇ ಓದು ಅಲ್ಲಿ ಸ್ಕೂಲ್ ಚೆನ್ನಾಗೈತಂತೆ  , ನಿಮ್ ಮಾವ ಅಜ್ಜಿ ಅತ್ತೆ ಚೆನ್ನಾಗಿ ನೋಡ್ಕಂತಾರೆ .ನೀನು ಓದಿ ಬುದ್ದಿವಂತ ಆಗ್ತಿಯಾ ಕಣಪ್ಪ ಈ ಊರಾಗೆ ಸ್ಕೂಲ್ ಇಲ್ಲ , ಪಕ್ಕದ ಊರಿಗೆ ಹೋಗಬೇಕು   ನಿಮ್ ಅಣ್ಣಾರು ಅಕ್ಕಾರು  ಯಾಕೋ ಯಾರೂ ಸರಿಯಾಗಿ ಓದಾ ಲಕ್ಷಣ ಕಾಣ್ತಾ ಇಲ್ಲ. ನೀನು ಸುಮ್ನೆ ಅಜ್ಜಿ ಮನೆಗೆ ಹೋಗಿ ಓದಪ್ಪ" ಎಂದು ಅಮ್ಮ ಹೇಳಿದರು ಅಮ್ಮನ ಮಾತಿನಂತೆ ಅಜ್ಜಿಯ ಊರಿಗೆ ಬಂದೆ.

ಬಂದ ಹೊಸತರಲ್ಲಿ ಮಾವ ಮತ್ತು ಮಾವನ ಹೆಂಡತಿ ಚೆನ್ನಾಗಿ ನೋಡಿಕೊಂಡರು ಕ್ರಮೇಣವಾಗಿ ನಾನು ಓದುವುದಕ್ಕಿಂತ ಮನೆ ಕೆಲಸಗಳೆ ಹೆಚ್ಚಾದವು.
ಬೆಳಿಗ್ಗೆ ಐದು ಗಂಟೆಗೆ ಎದ್ದು ಸುಮಾರು ನಾಲ್ಕೈದು ಎಮ್ಮೆ ಒಂದು ಜೊತೆ ಎತ್ತುಗಳ ಸಗಣಿ ಬಾಸಿ ,  ಕಸ ಹೊಡೆದು ತಿಪ್ಪೆಗೆ ಹೊತ್ತು ಹಾಕಿ, ಕಾಫಿ ಕುಡಿದು ಹೊಲಕ್ಕೆ ಹೋಗಿ ಹಸಿ ಹುಲ್ಲು ಕಿತ್ತು ತಲೆಯ ಮೇಲೆ ಹೊತ್ತು ತಂದು ಮನೆಗೆ ಹಾಕಿ ಮುಖ ತೊಳೆದು ಊಟ ಮಾಡಿ ಸಮಯ ನೋಡಿದರೆ ಒಂಭತ್ತೂವರೆ ಆಗಿರುತ್ತಿತ್ತು. ಗಬ ಗಬ ಸ್ವಲ್ಪ ತಿಂದು ಓಡಿ ಶಾಲೆ ಸೇರಿದಾಗ ಬೆಲ್ ಬಾರಿಸಿ ಶಾಲಾ ಪ್ರಾರ್ಥನೆ ಶುರುವಾಗಿರುತ್ತಿತ್ತು ಪೀಟಿ ಮೇಷ್ಟ್ರು ಕಾಟಪ್ಪ ಕಣ್ಣಲ್ಲೇ ವಾರ್ನಿಂಗ್ ನೀಡುತ್ತಿದ್ದರು.

ಶಾಲೆಯಲ್ಲಿ ಪಾಠ ಪ್ರವಚನ ಕೇಳಿ ಸಂಜೆ ಮನೆ ತಲುಪಿದ ತಕ್ಷಣ ದನಗಳಿಗೆ ಹುಲ್ಲು ಹಾಕುವುದು ಸೇದೋಬಾವಿಯಿಂದ ನೀರು ತರುವುದು ಅದೂ ಇದು ಕೆಲಸ ಮುಗಿಯೋ ಹೊತ್ತಿಗೆ ರಾತ್ರಿ ಎಂಟು ಗಂಟೆ ಆಗ ಪುಸ್ತಕ ಹಿಡಿದು ಕುಳಿತುಕೊಂಡ ಸ್ವಲ್ಪ ಹೊತ್ತಿಗೆ ಊಟಕ್ಕೆ ಕರೆ ಬರುತ್ತಿತ್ತು .ಉಂಡ ಮೇಲೆ ನಿದ್ರಾ ದೇವಿಯ ಆಲಿಂಗನಕ್ಕೆ ಮರುಳಾಗುತ್ತಿದ್ದೆ.

ಇದು ದಿನನಿತ್ಯದ ದಿನಚರಿ ಅಮ್ಮ ಒಮ್ಮೆ ನನ್ನ ನೋಡಲು ಮಾವನ ಮನೆಗೆ ಬಂದಾಗ ನನ್ನ ಪರಿಸ್ಥಿತಿ ನೋಡಿ ಮನದಲ್ಲೇ ನೊಂದುಕೊಂಡಿದ್ದನ್ನು ಗಮನಿಸಿದೆ .ಇಬ್ಬರ ಕಣ್ಣಲ್ಲೂ ನೀರು ರೆಪ್ಪೆಯವರೆಗೂ ಬಂದರೂ ತಡೆಹಿಡಿದೆವು ಕಾರಣ ನಮ್ಮ ಊರಲ್ಲಿನ ನಮ್ಮ ಮನೆಯ ಪರಿಸ್ಥಿತಿ.

ಹೀಗೆ ಅರ್ಧವಾರ್ಷಿಕ ಪರೀಕ್ಷೆ ಮುಗಿದು ನಮ್ಮ ಊರಿಗೆ ಹೋಗಲು ಕಾತರನಾಗಿದ್ದೆ ಮಾವ ಬೇಡ ಇಲ್ಲೇ ಇರು ಅಂದರು ಒಲ್ಲದ ಮನಸ್ಸಿನಿಂದ ಅಲ್ಲೇ ಉಳಿದೆ .ಅರ್ಧವಾರ್ಷಿಕ ಪರೀಕ್ಷೆ ಫಲಿತಾಂಶ ನೋಡಿ  ನನಗೇನೂ ಶಾಕ್ ಆಗಲಿಲ್ಲ ಕಾರಣ ನಾನು ಇಲ್ಲಿ ಓದಿದ್ದಕ್ಕಿಂತ ಮನೆಯಲ್ಲಿ ಜೀತದಂತೆ ಕೆಲಸ ಮಾಡಿದ್ದೆ ಜಾಸ್ತಿ. ಅಲ್ಲಿ ಇಡೀ ತರಗತಿಗೆ ಮೊದಲು ಬರುತ್ತಿದ್ದವನು   ಇಲ್ಲಿ ಕನ್ನಡ ಬಿಟ್ಟು ಉಳಿದೆಲ್ಲಾ ವಿಷಯಗಳಲ್ಲಿ ಪೇಲಾಗಿದ್ದೆ !
ಇದನ್ನು ಅಮ್ಮ ಮಾವನವರಿಗೆ ಹೇಳಲಿಲ್ಲ ಕೆಲಸ ಮಾಡುತ್ತಲೆ ಮುಂದಿನ ವಾರ್ಷಿಕ ಪರೀಕ್ಷೆಯನ್ನು ಚೆನ್ನಾಗಿ ಬರೆಯಲು ನಿಶ್ಚಯ ಮಾಡಿಕೊಂಡು ಓದಿದ ಫಲ ಒಂಭತ್ತನೆಯ ತರಗತಿಯನ್ನು ಪಾಸು ಮಾಡಿದ್ದೆ.

"ಅಮ್ಮ ನಾನು ಬೇರೆ ಊರಲ್ಲಿ ಓದುವೆ ಇಲ್ಲಿ ಬೇಡ " ಎಂದಾಗ ಮಾವನವರು ವಿರೋಧ ಮಾಡಿದರೂ ಅಮ್ಮ ನನ್ನ ಮಾತು ಮನ್ನಿಸಿ
ತಿಪ್ಪೇಸ್ವಾಮಣ್ಣನವರ ಸಲಹೆಯ ಮೇರೆಗೆ ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ಓದಲು ಸೇರಿಸಿದರು ಅಲ್ಲಿಂದ ನನ್ನ ಜೀವನದ ದಿಕ್ಕೇ ಬದಲಾಯಿತು.

"ಸಾರ್ ಯಾರೊ ಅಂಗಡಿ ಓನರ್ ಬಂದಿದಾರೆ ಒಳಕ್ಕೆ ಕಳಿಸ್ಲಾ?" ಜಬಿ ಕೇಳಿದ.
ಕಳಿಸು ಎಂದೆ
ನಮಸ್ಕಾರ ಮಾಡುತ್ತಾ ಒಳಗೆ ಬಂದ ಅಂಗಡಿ ಮಾಲೀಕ ನನ್ನ ನೋಡಿ  ಶಾಕ್ ಆದ
"ಸಾರ್ ನೀವೇ  ಸಾಹೇಬರು ಅಂತ ಗೊತ್ತಾಗ್ದೇ ಬೆಳಿಗ್ಗೆ ಏನೇನೊ ಅಂದ್ ಬಿಟ್ಟೆ ಕ್ಷಮಿಸಿ ಸಾರ್ ಕಾಲಿಗ್ ಬೀಳ್ತೀನಿ"

"ರೀ ಆ ಓದೋಕ್ ಹೋಗೋ ಹುಡ್ಗನ್ನ ಕೆಲಸಕ್ಕೆ ಇಟ್ಕೊಂಡಿರೋದೇ ತಪ್ ಅಂತಾದ್ರಲ್ಲಿ ಅಂಗ್ ಹೊಡಿತೀರಲ್ಲ ನಾಚ್ಕೆ ಆಗಲ್ವ ನಿಮಗೆ ? ಮಕ್ಕಳ ಬಾಲ್ಯ ಅಮೂಲ್ಯವಾದುದು ಕಣ್ರೀ , ಅದನ್ನು ಅನುಭವಿಸೋಕೆ ಬಿಡಿ. ಯಾಕೆ ಹಣದ ಆಸೆಗೆ ಮೃಗ ಆಗ್ತೀರಾ" ಎಂದು ಹೇಳುವಾಗ ಯಾಕೋ ಗದ್ಗದಿತನಾಗಿದ್ದು ನನ್ನ ಗಮನಕ್ಕೆ ಬಂತು ಅಂಗಡಿ ಮಾಲೀಕನೂ ಗಮನಿಸಿದ.
" ಕ್ಷಮಿಸಿ ಸಾರ್,  ತಪ್ಪಾತು ಸರ್ ನಾನು ಬ್ಯಾಡ ಅಂದ್ರು ಅವರ್ ಅಪ್ಪ ಕೆಲಸಕ್ ಬಿಟ್ ಹೋದ ಸರ್ "
" ಬಾಲಕಾರ್ಮಿಕ ಕಾಯ್ದೆ ಪ್ರಕಾರ ನಿನ್ನ ಮತ್ತು ಅವರಪ್ಪನ್ ಒಳಾಕ ಹಾಕ್ತೀನಿ ಆವಾಗ ಬುದ್ದಿ ಬರುತ್ತೆ"
" ಇಲ್ಲ ಸರ್ ನಾಳೆಯಿಂದ ನಾನು ಆ ಹುಡ್ಗನ್ನ ಅಲ್ಲ ಯಾರೇ ಮಕ್ಕಳನ್ನು ಅಂಗಡಿ‌ ಕೆಲಸಕ್ಕೆ ಇಟ್ಕೊಳಲ್ಲ " ಎಂದು ನಡುಗಿದರು ಆ ಅಂಗಡಿ ಮಾಲೀಕ.
ಅಷ್ಟ್ ಮಾಡ್ರಿ   ನಡೀರಿ ಮನೆಗೆ ಅಂತ ರೇಗಿದೆ. ಅವರು ಕಾಣೆಯಾದರು.

"ಸರ್ ಆ ಮೊಬೈಲ್ ಕಳ್ರು......."
ಎಂದು ಜಬಿ ಹೇಳಿದಾಗ ಆಮೇಲೆ  ನೋಡೋಣ ಎಂದು ಎದ್ದು ಮನೆಯ ಕಡೆ ಊಟಕ್ಕೆ ಹೊರಟೆ....

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು.

*ಇಂದಿನ ಪ್ರತಿನಿಧಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಕಥೆ "ಬಿಡುಗಡೆ"* ೨೦/೧೧/೨೧


 

19 November 2021

ನಮ್ಮ ದಿನ ( ಪುರುಷರ ದಿನದ ಪ್ರಯುಕ್ತ ಕವನ)



*ನಮ್ಮ ದಿನ*


ದಿನವೂ ನಾನು ಕೆಲಸ

ಮಾಡುತ್ತಲೇ ಇರುವೆನು

ಅದು, ಇದು ಎಂದೂ

ಯಾವುದೇ ಬೇಧವಿಲ್ಲದೇ 

ಎಂದಿಗೂ ಕೆಲಸ 

ಮಾಡುತ್ತಲೇ ಇರುವೆ.


ಇಂದು ಮಾತ್ರ ನಾನು

ಬೇಗ ಎದ್ದು ಹಾಲು ತರುವುದಿಲ್ಲ.

ಟೀ ಮಾಡುವುದಿಲ್ಲ ಅಷ್ಟೇ ಏಕೆ

ಅಡಿಗೆಯನೂ ಮಾಡುವುದಿಲ್ಲ.


ಪಾತ್ರೆಗಳನ್ನು ತೊಳೆಯುವುದಿಲ್ಲ

ಬಟ್ಟೆಗಳನ್ನು ಒಗೆಯುವುದಿಲ್ಲ.

ನೆಲವ ಒರೆಸುವುದಿಲ್ಲ ಒಟ್ಟಾರೆ

ಇಂದು ನಾನು ಬೇರೆ ಕೆಲಸಗಳನ್ನು

ಮಾಡುವುದೇ ಇಲ್ಲ.


ಹಾಗೇನಾದರೂ ಯಾರಾದರೂ 

ಕೆಲಸವನ್ನು ಮಾಡಲೇಬೇಕು

ಎಂದು ಒತ್ತಾಯ ಮಾಡಿದರೆ

ನನ್ನವರು ನನ್ನ ಸಹಾಯಕ್ಕೆ

ಬರುವರು .ಏಕೆಂದರೆ ಇಂದು

ನಮ್ಮ ದಿನ !

ಅಂತರರಾಷ್ಟ್ರೀಯ ಪುರುಷರ ದಿನ!


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

9900925529

 

ವ್ಯತ್ಯಾಸ. ಹನಿಗವನ



#ವ್ಯತ್ಯಾಸ 



ವಾಸ್ತವ 

ಅವಿನಾಶಿ

ಸಾರ್ವಕಾಲಿಕ

ಒಳಿತು ಮಾಡುವುದೇ ಸತ್ಯ|

ಅವಾಸ್ತವ

ವಿನಾಶಿ

ಕ್ಷಣಿಕ 

ಕೆಡುಕು ಮಾಡುವುದೇ ಮಿಥ್ಯ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

 

ಚಿನ್ನದ ಮಾಂಗಲ್ಯ ಸರ. ರೈಲು ಪಯಣದ ಅನುಭವ ಕಥನ .


 



ಚಿನ್ನದ ಮಾಂಗಲ್ಯ ಸರ .


  ಹದಿನೈದು ದಿನಗಳ ಉತ್ತರ ಭಾರತದ ಪ್ರವಾಸ ಮುಗಿಸಿ ಸಂತಸದಿಂದ ದೆಹಲಿಯ ರೈಲ್ವೇ ನಿಲ್ದಾಣದಲ್ಲಿ  ರಾಜಧಾನಿ ಎಕ್ಸ್ಪ್ರೆಸ್  ರೈಲು ಹತ್ತಿ ಬೆಂಗಳೂರಿನ ಕಡೆ ಹೊರಡಲು  ಸಿದ್ದರಾದೆವು. 

ರಾತ್ರಿ ಒಂಭತ್ತೂ ಒಂಭತ್ತೂವರೆ ಗಂಟೆ ಆಗಿರಬಹುದು. ನಾವೆಲ್ಲರೂ ನಮ್ಮ ಲಗೇಜ್ ಗಳನ್ನು ಸರಿಯಾದ ಜಾಗಗಳಲ್ಲಿ ಜೋಡಿಸಿಟ್ಟು ಮಲಗಿಕೊಳ್ಳಲು ಯೋಚಿಸುತ್ತಿದ್ದೆವು ಇನ್ನೂ ಕೆಲವರು ಆಸನಗಳಲ್ಲಿ  ಕುಳಿತು ಮಾತನಾಡುತ್ತಿದ್ದರು.

ರೈಲು ನಿಧಾನವಾಗಿ ಚಲಿಸುತ್ತಿರುವಾಗ ಇದ್ದಕ್ಕಿದ್ದಂತೆ ಪಕ್ಕದ ಭೋಗಿಯಲ್ಲಿ ಯಾರೊ ಕಿರುಚಿದ ಸದ್ದಾಯಿತು .ನಾವು ಹೋಗಿ ನೋಡಿದರೆ ಅವರು ನಮ್ಮ ಜೊತೆಯಲ್ಲಿ ಪ್ರವಾಸಕ್ಕೆ ಬಂದವರು. ಗಾಬರಿಯಿಂದ ಅವರು ಕೈಗಳನ್ನು ಎದೆಯಮೇಲೆ ಇಟ್ಟುಕೊಂಡು ನಡುಗುತ್ತಿದ್ದರು ಅವರ ಯಜಮಾನರು ಆ ಮಹಿಳೆಯನ್ನು ಸಂತೈಸುತ್ತಿದ್ದರು. ಏನಾಯಿತೆಂದು ಭಯಮಿಶ್ರಿತ ಕುತೂಹಲದಿಂದ ಕೇಳಿದೆವು." ರೈಲು ನಿಧಾನವಾಗಿ ಚಲಿಸುತ್ತಿದ್ದಂತೆ ಪ್ಲಾಟ್ ಫಾರ್ಮ್ ಮೇಲಿದ್ದ ಒಬ್ಬ ದಡಿಯ  ಕಿಟಕಿಯ ಮೂಲಕ  ಕೈಹಾಕಿ    ನಮ್ಮವರ ಬಂಗಾರದ ಮಾಂಗಲ್ಯ ಸರಕ್ಕೆ ಕೈಹಾಕಿ ಜಗ್ಗಿದ ನಮ್ಮವರು  ಮಾಂಗಲ್ಯ ಸರವನ್ನು ಎರಡೂ ಕೈಯಲ್ಲಿ ಬಿಗಿಯಾಗಿ ಹಿಡಿದುಕೊಂಡು ಕಿರುಚಿಕೊಂಡರು. ರೈಲಿನ ವೇಗ ಹೆಚ್ಚಾಯಿತು ಪ್ಲಾಟ್ ಪಾರ್ಮ್ ನಲ್ಲಿ ಓಡುತ್ತಾ ಆ ದಡಿಯ ಕತ್ತಲಲಿ ಮಾಯವಾದ .ನಮ್ಮವರು ಗಾಬರಿಯಿಂದ ಮಾಂಗಲ್ಯ ಸರ ನೋಡಿಕೊಂಡರು. ಮಾಂಗಲ್ಯ ಸರ ಹರಿದಿತ್ತು .ಆದರೆ ಸಣ್ಣ ತುಣುಕೊಂದು ಆ ಕಳ್ಳನ ಕೈ ಸೇರಿದ್ದು ಗಮನಕ್ಕೆ ಬಂತು .ಅಷ್ಟರಲ್ಲಿ ನೀವು ಬಂದಿರಿ" ಎಂದು ನಡೆದ ಘಟನೆಯನ್ನು ವಿವರಿಸಿದರು ಸೀನಪ್ಪನವರು.


ನಾವೆಲ್ಲರೂ ನಿಟ್ಟುಸಿರು ಬಿಟ್ಟು ಅವರಿಗೆ ಸಮಾಧಾನ ಮಾಡಿ ಧೈರ್ಯ ಹೇಳುವಾಗ ರೈಲ್ವೆ ಪೋಲೀಸ್ ಬಂದು" ಕಿಟಕಿಯ ಪಕ್ಕ ಕುಳಿತಾಗ ಜಾಗರೂಕತೆಯಿಂದ ಇರಬೇಕು. ರಾತ್ರಿ ವೇಳೆಯಲ್ಲಿ ಕಿಟಕಿಯ ಬಾಗಿಲು ಮುಚ್ಚಿ, ಅಪರಿಚಿತರೊಂದಿಗೆ ಹುಷಾರಾಗಿರಿ, ನಿಮ್ಮ ಲಗೇಜ್ ಗಳನ್ನು ಸರಪಣಿ ಮತ್ತು ಬೀಗದಿಂದ ಬಂದಿಸಿ. " ಎಂದು ಹಿಂದಿಯಲ್ಲಿ ಸಲಹೆ ಸೂಚನೆಗಳನ್ನು ನೀಡಿ ಹೊರಟರು. 


ನಾವು ನಮ್ಮ ಸೀಟುಗಳಿಗೆ ಹೋಗಿ ಮಲಗಿಕೊಂಡೆವು ಪದೇ ಪದೆ ರೈಲ್ವೆ ಪೋಲೀಸ್ ಹೇಳಿದ ಮಾತುಗಳು ನೆನಪಾಗಿ ನನ್ನ ಸೂಟ್ ಕೇಸ್ ಗೆ ಬೀಗ ಹಾಕಿ ಸರಪಳಿ ಬಿಗಿದಿದ್ದರೂ ಮತ್ತೆ ಮತ್ತೆ ಎದ್ದು ಅದನ್ನೇ ನೋಡುತ್ತಿದ್ದೆ. ರಾತ್ರಿ ಒಂದು ಗಂಟೆಯಾದರೂ ನಿದ್ದೆ ಬರಲಿಲ್ಲ .ರೈಲಿನಲ್ಲಿರುವವರೆಲ್ಲ ಮಲಗಿದ್ದರು ರೈಲು ಕತ್ತಲೆಯನ್ನು ಸೀಳಿಕೊಂಡು ಬೆಂಗಳೂರಿನ ಕಡೆ ಇನ್ನೂ ವೇಗವಾಗಿ ಓಡುತ್ತಿತ್ತು.



ಸಿಹಿಜೀವಿ 

ಸಿ ಜಿ ವೆಂಕಟೇಶ್ವರ.

17 November 2021

ಕೃತಜ್ಞ .ಹನಿಗವನ

 


*ಕೃತಜ್ಞ*  ಹನಿಗವನ



ನನ್ನ ಬದುಕಿಗೆ ತಿರುವು

ನೀಡಿದ ಮಹನೀಯರು 

ನನ್ನ ಜೀವನ ಬದಲಿಸಿದ

ಗುರುಗಳು ಮಾರ್ಗದರ್ಶಕರು

 ಒಬ್ಬಿಬ್ಬರಲ್ಲ|

ಪ್ರತಿದಿನವೂ ಕಲಿಯುತಿರುವೆ

ಪ್ರತಿದಿನವೂ ಕಲಿಸುತಿಹರು

ನನ್ನ ಬದುಕಿಗೆ ತಿರುವು

ನೀಡುತ್ತಲೇ ಇರುವರು

ಅವರೆಲ್ಲರನ್ನೂ ನಾನು

ಪ್ರತಿದಿನವೂ ನೆನೆಯದೇ 

ಇರುವುದಿಲ್ಲ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


ಪ್ರಜಾ ಪ್ರಗತಿ .೧೭/೧೧/೨೧


 

ವಿಶ್ವ ವಾಣಿ ೧೭/೧೧/೨೧


 

ಭಾರತ ನಂಬರ್ ಒನ್ ಆಗಬಹುದು.


 ಒಂದು ಕಾಲದಲ್ಲಿ "ಉದ್ಯೋಗಂ ಪುರುಷ ಲಕ್ಷಣಂ" ಎಂಬ ಉಕ್ತಿಯಿತ್ತು ಇಂದು ಉದ್ಯೋಗ ಮಾನವ ಲಕ್ಷಣವಾಗಿ ಮಾರ್ಪಾಡಾಗಿದೆ. ಜೊತೆಗೆ ಕೃಷಿ ಕೈಗಾರಿಕೆಗಳು ಮಾತ್ರ ಉದ್ಯೋಗದ ಆಧಾರ ಸ್ತಂಭಗಳು ಎಂಬ ಭಾವನೆ ಈಗಿಲ್ಲ. ಸರ್ಕಾರಿ ಕೆಲಸ ಮಾತ್ರ ಉತ್ತಮ ಇತರೆ ಕನಿಷ್ಟ ಎಂಬ ಭಾವನೆ ದೂರಾಗಿ ಖಾಸಗೀ ವಲಯ ಮತ್ತು ನವ ಉದ್ಯಮಗಳಿಗೆ ಇಂದು ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತಿದೆ.ಒಟ್ಟಿನಲ್ಲಿ ಪ್ರತಿಭೆ ಕೌಶಲಗಳನ್ನು ಹೊಂದಿದ್ದರೆ ಯಾರು ಬೇಕಾದರೂ ಉದ್ಯೋಗ ಮಾಡಬಹುದು ಮತ್ತು ಉದ್ಯೋಗದಾತರೂ ಆಗಬಹುದು.


ಕೋವಿಡ್ ನ ಸಂಕಷ್ಟದ ಕಾಲದಲ್ಲಿ ಸಾವಿರಾರು ಜನರು ಉದ್ಯೋಗ ಕಳೆದುಕೊಂಡು ತೊಂದರೆಗಳನ್ನು ಅನುಭವಿಸಬೇಕಾಯಿತು .ಕ್ರಮೇಣವಾಗಿ ಈಗ ಕೋವಿಡ್ ನಿಯಂತ್ರಣಕ್ಕೆ ಬಂದಿದ್ದು ಅಲ್ಲಲ್ಲಿ ಕೆಲಸಕ್ಕೆ ಜನರು ಬೇಕಾಗಿದ್ದಾರೆ. ಕೆಲಸ ಖಾಲಿ ಇದೆ ಎಂಬ ಬೋರ್ಡ್ ಗಳು ಕಾಣಿಸಿಕೊಳ್ಳುತ್ತಿವೆ. ಇದರ ಜೊತೆಯಲ್ಲಿ ಅರ್ಥಿಕ ಚಟುವಟಿಕೆಗಳು ಗರಿಗೆದರಿವೆ.ಇದು ನಿಜವಾಗಿಯೂ ಆಶಾದಾಯಕ ಮತ್ತು ಸಂತಸದಾಯಕ ಬೆಳೆವಣಿಗೆ.

ಇದು ನಮ್ಮ ದೇಶದಲ್ಲಿ ನಿರುದ್ಯೋಗದ ಪ್ರಮಾಣವು ಕಡಿಮೆಯಾಗುವ ಮತ್ತು ಉದ್ಯೋಗ ಸೃಷ್ಟಿ ಕ್ರಮೇಣವಾಗಿ ಹೆಚ್ಚಾಗುವ ಸೂಚನೆ ಎನ್ನಬಹುದು. 


ಭಾರತವು ಜಗತ್ತಿನಲ್ಲಿ ಜನಸಂಖ್ಯೆಯಲ್ಲಿ ಎರಡನೇ ಸ್ಥಾನವನ್ನು ಪಡೆದಿದ್ದು ಬಹುತೇಕ ಜನಸಂಖ್ಯೆಯು ಮಾನವ ಸಂಪನ್ಮೂಲವಾಗಿ ಪರಿವರ್ತನೆ ಮಾಡುವುದು ಇಂದಿನ ನಮ್ಮ ಗುರಿಯಾಗಬೇಕಿದೆ. ಪ್ರಸ್ತುತ ಚೀನಾ ಒಂಭತ್ತು ಟ್ರಿಲಿಯನ್ ಆರ್ಥಿಕತೆ ಹೊಂದಿ ಜಗತ್ತಿನಲ್ಲಿ ನಂಬರ್ ಒನ್ ಅರ್ಥಿಕತೆ ಎನಿಸಿಕೊಂಡಿದೆ. ಅಮೇರಿಕಾ ಆರು ಟ್ರಿಲಿಯನ್ ಆರ್ಥಿಕತೆಯನ್ನು ಹೊಂದಿ ದ್ವಿತೀಯ ಸ್ಥಾನ ಹೊಂದಿದೆ. ಸರ್ವರೂ ಪ್ರಾಮಾಣಿಕತೆಯಿಂದ ಕಾಯಕ ತತ್ವ ಪಾಲಿಸಿದರೆ, ಸರ್ಕಾರ, ಸಮುದಾಯ, ಸಕಾಲಿಕ ಬೆಂಬಲ ನೀಡಿದರೆ ಖಂಡಿತವಾಗಿ ಮುಂದೊಂದು ದಿನ ಭಾರತ ನಂಬರ್ ಓನ್ ಆಗಬಹುದು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

15 November 2021

ಬೆಳಗು ಬಾ .ಹನಿಗವನ


 



*ಬೆಳಗು ಬಾ*


ಕತ್ತಲಿನಲಿರುವೆ

ಆದರೆ ನಿನ್ನೊಂದಿಗಿನ

ನೆನಪುಗಳಿವೆ

ನನ್ನ ನೆನಪಿನ

ಬುತ್ತಿಯಲಿ| 

ಬೆಳಗು ಬಾ

ನನ್ನದೆಯ ಗುಡಿಯನು

ನಿನ್ನ ಪ್ರೀತಿಯ

ಬತ್ತಿಯಲಿ| |


#ಸಿಹಿಜೀವಿ

ಸಿ ಜಿ ವೆಂಕಟೇಶ್ವರ 

ತುಮಕೂರು 


ಮಕ್ಕಳ ಮೇಲಿನ ಸೈಬರ್ ಕ್ರೈಮ್ ಹೆಚ್ಚಳ ಆತಂಕಕಾರಿ. Cyber crime on chidren should be stopped

 


ಮಕ್ಕಳ ಮೇಲೆ ಸೈಬರ್ ಕ್ರೈಂ ಹೆಚ್ಚಳ ಆತಂಕಕಾರಿ ಬೆಳವಣಿಗೆ.

ವಿಜ್ಞಾನ ತಂತ್ರಜ್ಞಾನ ದ ಬಳಕೆ ವರವೂ ಹೌದು ಶಾಪವೂ ಹೌದು ಎಂಬುದಕ್ಕೆ ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾದ ಪ್ರಕರಣಗಳಲ್ಲಿ ಏರಿಕೆ ಕಂಡುಬರುತ್ತಿರುವುದೇ ಸಾಕ್ಷಿ.
ಈ ಸೈಬರ್ ಅಪರಾಧ ಪ್ರಕರಣಗಳು ಮಕ್ಕಳನ್ನೂ ಬಿಟ್ಟಿಲ್ಲ.
ಕಳೆದ ವರ್ಷಕ್ಕೆ ಹೋಲಿಸಿದರೆ ಮಕ್ಕಳ ವಿರುದ್ಧದ ಸೈಬರ್ ಅಪರಾಧ ಪ್ರಮಾಣ ಶೇಕಡ 400 ಏರಿಕೆಯಾಗಿದೆ. ಈ ಪೈಕಿ ಬಹುತೇಕ ಮಕ್ಕಳ ಲೈಂಗಿಕ ಶೋಷಣೆಗೆ ಸಂಬಂಧಿಸಿದವು ಎಂದು ಇತ್ತೀಚೆಗೆ ಬಿಡುಗಡೆಯಾದ ನ್ಯಾಷನಲ್ ಕ್ರೈಮ್ಸ್ ರೆಕಾರ್ಡ್ ಬ್ಯೂರೋ ದ (N C R B) ಡೇಟಾ ಹೇಳಿದೆ.

ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ 2020ರಲ್ಲಿ ದಾಖಲಾಗಿರುವ 842 ಆನ್ಲೈನ್ ಅಪರಾಧ ಕೇಸ್ಗಳ ಪೈಕಿ 738 ಕೇಸ್ಗಳು ಮಕ್ಕಳನ್ನು ಲೈಂಗಿಕ ಶೋಷಣಿಗೆ ಸಂಬಂಧಿಸಿವೆ. 2019ರಲ್ಲಿ ಮಕ್ಕಳ ವಿರುದ್ಧ ಆಗಿರುವ ಸೈಬರ್ ಅಪರಾಧಗಳ ಸಂಖ್ಯೆ 164, 2018ರಲ್ಲಿ ಇದು 117 ಮತ್ತು ಸಣ್ಣ ಪ್ರಮಾಣದ್ದೆಂಬಂತೆ ಭಾಸವಾದರೂ 2019ಕ್ಕೆ ಹೋಲಿಸಿದರೆ ಹೆಚ್ಚಾಗಿರುವ ಪ್ರಮಾಣ ಎಚ್ಚರಿಕೆ ನೀಡುವಂಥದ್ದು. ಯುನಿಸೆಫ್ ನ 2020ರ ವರದಿ ಪ್ರಕಾರ, ದಕ್ಷಿಣ ಏಷ್ಯಾದಲ್ಲಿ 25 ವರ್ಷ ಮತ್ತು ಅದರೊಳಗಿನವರ ಪೈಕಿ ಶೇಕಡ 13 ಜನರಿಗೆ ಇಂಟರ್ನೆಟ್ ಸೌಲಭ್ಯ ಮನೆಯಲ್ಲೇ ಸಿಕ್ಕಿದೆ. ಇದಕ್ಕೆ ಕೋವಿಡ್ ಪ್ರಯುಕ್ತ ಲಾಕ್ಡೌನ್ ಮತ್ತು ಆನ್ಲೈನ್ ತರಗತಿಗಳು ಕಾರಣ ಎಂದು ಹೇಳಲೇಬೇಕು.  ಕೆಳ ಮಧ್ಯಮ ಆದಾಯದ ರಾಷ್ಟ್ರಗಳಲ್ಲಿ ಶಾಲೆಗೆ  ಹೋಗುವ ಮಕ್ಕಳ ಪೈಕಿ ಶೇಕಡ 14 ಮಕ್ಕಳಿಗೆ ಮನೆಯಲ್ಲೇ ಇಂಟರ್ನೆಟ್ ಸೌಲಭ್ಯ ಲಭ್ಯವಿದೆ.ಈ ಸೌಲಭ್ಯಗಳನ್ನು ದುರುಪಯೋಗ ಮಾಡಿಕೊಂಡು  ಮಕ್ಕಳು ತಮಗರಿವಿಲ್ಲದೇ ಸೈಬರ್ ಅಪರಾದ ಪ್ರಕರಣಗಳಲ್ಲಿ ಸಿಲುಕಿರುವುದು ದುರದೃಷ್ಟಕರ ಸಂಗತಿಯಾಗಿದೆ.

ಭಾರತದಲ್ಲಿ ಕಳೆದ ವರ್ಷ ಮಕ್ಕಳ ಮೇಲಿನ ದೌರ್ಜನ್ಯ, ಅಪರಾಧ ಪ್ರಕರಣ 1,28,531 ಇತ್ತು. 2019ರಲ್ಲಿ ಇದು 1,48,185 ಇತ್ತು. ಪ್ರತಿನಿತ್ಯ 400ಕ್ಕೂ ಹೆಚ್ಚು ಮಕ್ಕಳ ಮೇಲಿನ ದೌರ್ಜನ್ಯ, ಅಪರಾಧ ಪ್ರಕರಣ ನಡೆದಿದೆ. ಅಪರಾಧ ಪ್ರಕರಣದಲ್ಲಿ ಇಳಿಕೆಯಾದರೂ, ಆನ್ಲೈನ್ ಅಪರಾಧ ಏರಿಕೆಯಾಗಿದೆ. ಎಂದು ವರದಿ ಹೇಳಿದೆ.
ದೇಶದ ಒಟ್ಟಾರೆ ಇಂತಹ ಪ್ರಕರಣಗಳಲ್ಲಿ ಉತ್ತರ ಪ್ರದೇಶದಲ್ಲಿ ಹೆಚ್ಚು ಪ್ರಕರಣಗಳು  ದಾಖಲಾಗಿವೆ. ಕರ್ನಾಟಕದಲ್ಲಿಯೂ 144 ಪ್ರಕರಣಗಳು ದಾಖಲಾಗಿ ಎರಡನೇ ಸ್ಥಾನದಲ್ಲಿರುವುದು ನಮಗೆ ಎಚ್ಚರಿಕೆಯ ಕರೆಗಂಟೆಯಾಗಿದೆ.

ಲಾಕ್ಡೌನ್ ಮತ್ತು ಶಾಲೆಗಳು ಮುಚ್ಚಿದ ಪರಿಣಾಮ ಸಮಾಜದಲ್ಲಿ ಬೆರೆಯುವ ಅವಕಾಶ ಸಿಗದೆ ಮಕ್ಕಳ ಮಾನಸಿಕ, ಸಾಮಾಜಿಕ ಯೋಗಕ್ಷೇಮವು ಆತಂಕದಲ್ಲಿದೆ. ಇದು ಮಕ್ಕಳಲ್ಲಿ ಒಂಟಿತನ, ಭಾವನೆಗಳ ವೈಪರೀತ್ಯ ಮುಂತಾದ ಸಮಸ್ಯೆಗಳನ್ನು ಸೃಷ್ಟಿಸಿದೆ. ಇದರ ಪರಿಣಾಮ ಮಕ್ಕಳು ಅನಿವಾರ್ಯವಾಗಿ, ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಇಂಟರ್ನೆಟ್ ಬಳಕೆ ಹೆಚ್ಚಿಸಿದ್ದಾರೆ. ಇದು ಮಕ್ಕಳನ್ನು ಗೊತ್ತಿಲ್ಲದೆಯೇ ಲೈಂಗಿಕ ಶೋಷಣೆಯ ಬಲೆಗೆ ಬೀಳುವಂತೆ ಮಾಡಿರಬಹುದು.

ಹಾಗಾದರೆ ಇಂತಹ ವಿಷಮ ಸ್ಥಿತಿಯಲ್ಲಿ ನಮ್ಮ ಮಕ್ಕಳನ್ನು ಕಾಪಾಡುವುದಾದರೂ ಹೇಗೆ? ಎಂಬುದರ ಬಗ್ಗೆ ಎಲ್ಲರೂ ಯೋಚಿಸಿ ಕಾರ್ಯ ಪ್ರವೃತ್ತರಾಗಬೇಕಿದೆ.

ಇಂಟರ್ನೆಟ್  ನ ಸರಿಯಾದ ಮತ್ತು ಸುರಕ್ಷಿತ ಬಳಕೆ ವಿಚಾರದಲ್ಲಿ ಮಕ್ಕಳಿಗೆ ಮಾರ್ಗದರ್ಶನ ನೀಡಬೇಕಾದ ಅವಶ್ಯಕತೆ ಇದೆ. ಆದರೆ ಸಮಾಜದಲ್ಲಿ ಈ ತಿಳಿವಳಿಕೆ ನೀಡಬೇಕಾದವರಿಗೆ ಈ ಬಗ್ಗೆ ಅರಿವಿನ ಕೊರತೆ ಇದೆ. ಇಂಟರ್ನೆಟ್ ಜಗತ್ತಿನಲ್ಲಿ ಮಕ್ಕಳು ಎದುರಿಸುತ್ತಿರುವ  ಅಪಾಯಗಳನ್ನು ಮನೆಯಲ್ಲಿ ಪೋಷಕರು ಮತ್ತು ಶಾಲೆಗಳಲ್ಲಿ ಶಿಕ್ಷಕರು  ವಿವರಿಸಬೇಕು. ಸೈಬರ್ ತಂತ್ರಜ್ಞಾನ ಮತ್ತು ಅದರಿಂದ ಆಗಬಹುದಾದ ಅಪರಾಧ ಪ್ರಕರಣಗಳ ಕುರಿತಾದ ಒಂದು ಸಾಮಾನ್ಯ ಕೈಪಿಡಿಯನ್ನು ತಜ್ಞರು ಸಿದ್ದಪಡಿಸಿ ಪಾಲಕರಿಗೆ, ಶಿಕ್ಷಣ ಸಂಸ್ಥೆ ಗಳಿಗೆ  , ಮಕ್ಕಳಿಗೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು .ಮನೆಯಲ್ಲಿ ಮಕ್ಕಳು ಮೊಬೈಲ್ ಮತ್ತು ಡಿಜಿಟಲ್ ಸಾಧನಗಳನ್ನು ಬಳಸುವಾಗ ನಿಗಾ ಇಟ್ಟಿರಬೇಕು.ಸಾಧ್ಯವಾದಷ್ಟೂ ನಮ್ಮ ಡಿಜಿಟಲ್ ಸಾಧನಗಳಿಗೆ ಆಂಟಿವೈರಸ್ ಮುಂತಾದ ಭದ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು.

ಈ ಮೇಲಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಮಕ್ಕಳ ಮೇಲಿನ ಸೈಬರ್ ಅಪರಾಧ ಪ್ರಕರಣಗಳನ್ನು ಸ್ವಲ್ಪಮಟ್ಟಿಗೆ ಕಡಿಮೆಮಾಡಬಹುದು.

ತಂತ್ರಜ್ಞಾನ ಎಂಬುದು ಎರಡು ಅಲಗಿನ ಕತ್ತಿ ಇದ್ದ ಹಾಗೆ ಈ ತಂತ್ರಜ್ಞಾನ ಬಳಸುವಾಗ ಬಹಳ ಜಾಗರೂಕತೆಯಿಂದ ಇರಬೇಕು ಆಗ ಮಾತ್ರ ಮಕ್ಕಳ ಮೇಲಿನ ಸೈಬರ್ ಅಪರಾಧ ಪ್ರಕರಣಗಳು ಕಡಿಮೆಯಾಗಲು ಸಾದ್ಯ.ಇಲ್ಲವಾದರೆ ಇಂಟರ್ನೆಟ್ ಇರುವ  ಮೊಬೈಲ್ ಎಂಬ ಟೈಂಬಾಂಬ್ ನ್ನು ಕೈಯಲ್ಲೇ  ಹಿಡಿದುಕೊಂಡು ಊರೆಲ್ಲಾ ಸುತ್ತುತ್ತೇವೆ.ಅಪಾಯ ನಮ್ಮ ಬೆನ್ನ ಹಿಂದೆಯೇ ಇದೆ ಎಂದು ನಮಗೆ ತಿಳಿಯುವುದೇ ಇಲ್ಲ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529


14 November 2021

ಶಿಶುಗೀತೆ ೩೧ .ಚಂದಮಾಮನ ತೋರಮ್ಮ .


 


ಶಿಶುಗೀತೆ ೩೧

ಅಮ್ಮಾ ಅಮ್ಮಾ ಬಾರಮ್ಮ
ಚಂದಮಾಮನ ತೋರಮ್ಮ.

ಬೆಳ್ಳಿಯ ಮೊಗದ ರಾತ್ರಿಯ ದೀಪ
ಕಳ್ಳರ ವೈರಿಯ ತೋರಮ್ಮ.

ಕತ್ತಲ ಜಗದ ಭಯವನು ತೊರೆಯಲು
ಸುತ್ತಲು ಬೆಳಗುವವನ ತೋರಮ್ಮ.

ಒಂದಿನ ಹಿಗ್ಗಿ ಒಂದಿನ ಕುಗ್ಗಿದರೂ
ಕಂದೀಲಿನಂತಿರುವವನ ತೋರಮ್ಮ.

ಜಗದ ಜನರ ಮನಗೆದ್ದ ಸುಂದರ
ಮೊಗದಲಿ ಜಿಂಕೆಯಿರುವವನ ತೋರಮ್ಮ .

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
9900925529

ಇಂದಿನ ಪ್ರಜಾಪ್ರಗತಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ ೧೪/೧೧/೨೧


 

*ಇಂದಿನ ಪ್ರಜಾಪ್ರಗತಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ "ಅಪ್ಪು ಐ ಮಿಸ್ ಯು"*

ಸಿಂಹ ಧ್ವನಿ .೧೪/೧೧/೨೧


 

*ಇಂದಿನ ಪ್ರತಿನಿಧಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ "ಅಪ್ಪು ಐ ಮಿಸ್ ಯು"*೧೪/೧೧/೨೧

 


*ಇಂದಿನ ನಾಡಿನ ಸಮಾಚಾರ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಮಕ್ಕಳ ಗೀತೆ. ಎಲ್ಲಾ ಮಕ್ಕಳಿಗೆ ಮಕ್ಕಳ ದಿನದ ಶುಭಾಶಯಗಳು*೧೪/೧೧/೨೧


 

13 November 2021

ಶಿಶುಗೀತೆ ೩೦ ನಾವು ಎಳೆಯರು .


 ಶಿಶುಗೀತೆ ೩೦ 

*ನಾವು ಎಳೆಯರು*


ನಾವು ಗೆಳೆಯರು ನಾವು ಎಳೆಯರು

ಜೊತೆ ಜೊತೆಯಲೇ ಬೆಳೆವೆವು

ಸ್ನೇಹದಿಂದಲಿ ಕೂಡಿ ಬಾಳುತ

ಹೊಸ ನಾಡನೊಂದ ಕಟ್ಟುವೆವು.


ಎಲ್ಲ ಸೇರಿ ಅಟಗಳನಾಡುತ

ಬೇಧ ಭಾವ ಮರೆವೆವು

ಜಾತಿ ಮತದ ಹೊಟ್ಟ ತೂರಿ

ಒಂದಾಗಿ ಬಾಳುವೆವು.


ಬಣ್ಣ ಬಣ್ಣದ ಬಟ್ಟೆಗಳ ತೊಟ್ಟು

ಕುಣಿದು ನಲಿಯುವೆವು

ಎಲ್ಲಾ ಬಣ್ಣ ಸೇರಿ ಬಿಳಿಯ 

ಬಣ್ಣವೆಂದು ಕಲಿತಿಹೆವು .


ಮೇಲು ಕೀಳು ನಮ್ಮಲಿಲ್ಲ ನಾವು

ಸಮಾನತೆಯ ರಾಯಬಾರಿಗಳು

ಭವಿಷ್ಯದ ಸುಂದರ ತೋಟದ 

ಈಗ ಬೆಳೆಯುತಿರುವ ಸಸ್ಯಗಳು.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

9900925529




11 November 2021

ಓಬವ್ಚ. ಹನಿಗವನ


 

ಶತೃಸೈನಿಕರ ಸದೆ ಬಡಿದು

ಕೋಟೆಯ ರಕ್ಷಿಸಿದ

ನಮ್ಮಲ್ಲೆರ ಪ್ರೀತಿ ಅವ್ವ|

ಅವಳೇ ದುರ್ಗವ ರಕ್ಷಿಸಿದ

ನಮ್ಮ ಹೆಮ್ಮೆಯ ಓಬವ್ವ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಮತದಾರರ ನೊಂದಣಿ ಸುಧಾರಿಸುವಲ್ಲಿ ಚುನಾವಣಾ ಸಾಕ್ಷರಾತಾ ಕ್ಲಬ್ ಗಳ ಪಾತ್ರ. ಪ್ರಬಂಧ. Role of electoral literacy clubs in register of new voters



ಮತದಾರರ ನೊಂದಣಿ  ಸುಧಾರಿಸುವಲ್ಲಿ ಚುನಾವಣಾ ಸಾಕ್ಷರಾತಾ ಕ್ಲಬ್ ಗಳ  ಪಾತ್ರ. ಪ್ರಬಂಧ.
Role of electoral literacy clubs in register of new voters

ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಆಡಳಿತದ ಚುಕ್ಕಾಣಿ ಹಿಡಿಯುವವರನ್ನು ಆಯ್ಕೆ ಮಾಡುವುದು ಪ್ರಜ್ಞಾವಂತ ಮತದಾರರ ಆದ್ಯ ಕರ್ತವ್ಯವಾಗಿದೆ. ಆದರೆ ಚುನಾವಣಾ ಸಮಯದಲ್ಲಿ ಮತದಾರರು ಮತದಾನ ಮಾಡುವಾಗ ನೀರಸ ಪ್ರತಿಕ್ರಿಯೆ ತೋರುತ್ತಿರುವುದು ಬಹಳ ಬೇಸರದ ಸಂಗತಿ.ಅದರಲ್ಲೂ ಕೆಲವರು ಹದಿನೆಂಟು ವರ್ಷಗಳು ದಾಟಿದ್ದರೂ  ತಮ್ಮ ಹೆಸರನ್ನು ನೊಂದಾಯಿಸದಿರುವುದು ದುರದೃಷ್ಟಕರ.

ಇತ್ತೀಚಿನ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಆರಂಭವಾದ "ಮತದಾರರ ಸಾಕ್ಷರತಾ ಕ್ಲಬ್ " ಗಳು ಮತದಾರರ ನೊಂದಣಿ ಮಾಡುವಲ್ಲಿ ಮತ್ತು ಮತದಾನ ಹೆಚ್ಚು ಮಾಡುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತಿವೆ.
ಮತದಾರರ ನೊಂದಣಿ ಮಾಡುವಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್ ಗಳ ಪಾತ್ರವನ್ನು ಈ ಕೆಳಕಂಡಂತೆ ವಿವರಿಸಬಹುದು.

೧ ಮತದಾರರ ನೊಂದಣಿಗೆ ಜಾತಾ ಆಯೋಜನೆ ಮಾಡುವುದು.
ಚುನಾವಣಾ ಸಾಕ್ಷರತಾ ಸಂಘದ ವತಿಯಿಂದ ಶಾಲಾ ಕಾಲೇಜುಗಳ ವ್ಯಾಪ್ತಿಯಲ್ಲಿ ಮತದಾರರ ನೋಂದಣಿಗೆ ಜಾತಾಗಳನ್ನು ಏರ್ಪಡಿಸುವ ಮೂಲಕ ಅರ್ಹ ಮತದಾರರ ನೊಂದಣಿ ಮಾಡಿಸಲು ಪ್ರಯತ್ನ ಮಾಡಬಹುದು.

೨ ರಾಷ್ಟ್ರೀಯ ಮತದಾರರ ದಿನ ಆಚರಣೆ ಮಾಡುವುದು.

ಶಾಲಾ ಕಾಲೇಜುಗಳಲ್ಲಿ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲು ವ್ಯವಸ್ಥೆ ಮಾಡಿ ಆ ಕಾರ್ಯಕ್ರಮದಲ್ಲಿ ಹದಿನೆಂಟು ವರ್ಷಗಳ ಮೇಲ್ಪಟ್ಟ ನೊಂದಣಿಯಾಗದ ಮತದಾನದ ಕರೆಸಿ ,ತಜ್ಞರಿಂದ ಉಪನ್ಯಾಸ ಏರ್ಪಡಿಸಿ ಮತದಾರರ ಪಟ್ಟಿಗೆ ಅವರ ಹೆಸರು ನೊಂದಣಿ ಮಾಡಿಸಲು ಮನವೊಲಿಸುವಲ್ಲಿ ಪ್ರಯತ್ನ ಮಾಡುತ್ತವೆ.

೩ ವಿಶೇಷ ನೊಂದಣಿ ಅಭಿಯಾನ ಆರಂಭಿಸುವುದು.

ಭಾರತ ಚುನಾವಣಾ ಆಯೋಗ ಮತ್ತು ರಾಜ್ಯ ಚುನಾವಣಾ ಆಯೋಗ ಆಗಾಗ್ಗೆ ನಡೆಸುವ ವಿಶೇಷ ಮತದಾರರ ನೋಂದಣಿ ಅಭಿಯಾನದಲ್ಲಿ ಶಾಲಾ ಕಾಲೇಜುಗಳ   ಚುನಾವಣಾ ಸಾಕ್ಷರತಾ ಕ್ಲಬ್ ಗಳು ಸಕ್ರಿಯವಾಗಿ ಪಾಲ್ಗೊಂಡು ಮತದಾರರನ್ನು ನೊಂದಣಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ.

ಉಪಸಂಹಾರ

ಕಳೆದೆರಡು ದಶಕಗಳಿಗೆ ಹೋಲಿಸಿದರೆ ಇತ್ತೀಚಿನ ದಿನಗಳಲ್ಲಿ ಚುನಾವಣೆಯಲ್ಲಿ ಮತದಾರರ ನೊಂದಣಿ ಮತ್ತು ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಾಗಿದೆ. ಇದಕ್ಕೆ ಚುನಾವಣಾ ಆಯೋಗದ ಪ್ರಯತ್ನ ದ ಜೊತೆಗೆ ಶಾಲಾ ಕಾಲೇಜುಗಳಲ್ಲಿ ಸಕ್ರೀಯವಾಗಿರುವ ಚುನಾವಣಾ ಸಾಕ್ಷರತಾ ಕ್ಲಬ್ಗಳ  ಕಾರ್ಯ ಶ್ಲಾಘನೀಯ. ಇದೇ ರೀತಿಯ ಪ್ರಯತ್ನಗಳು ಇನ್ನೂ ಹೆಚ್ಚು ನಡೆಯಬೇಕಿದೆ ಆಗ ಶೇಕಡಾ ನೂರರಷ್ಟು ನೊಂದಣಿ ಮತ್ತು ಮತದಾನ ನಡೆದು ನಮ್ಮ ಪ್ರಜಾಪ್ರಭುತ್ವ ಇನ್ನೂ ಗಟ್ಟಿಯಾಗುವುದರಲ್ಲಿ ಸಂದೇಹವಿಲ್ಲ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು


10 November 2021

ಖರೆ .ಹನಿಗವನ

 


*ಖರೆ*


ಕೆಲವರು ಯಾವುದೇ 

ಕಾರ್ಯಕ್ರಮಗಳಲ್ಲಿ

ಭಾಗವಹಿಸಿದರೆಂದರೆ 

ಕೊಟ್ಟೇ ಕೊಡುವರು

ಉಡುಗೊರೆ|

ಇನ್ನೂ ಕೆಲವರು 

ಬಹಳ ಜಿಪುಣರು

ಉಡುಗೊರೆ ನೀಡದೇ

ಗಡದ್ದಾಗಿ ಊಟ

ಮಾಡುವುದಂತೂ ಖರೆ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

*ಇಂದಿನ ಜನಮಿಡಿತ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ*೧೦/೧೧/೨೧


 *ಇಂದಿನ ಜನಮಿಡಿತ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ*

09 November 2021

*ಇಂದಿನ ಸಿಂಹ ಧ್ವನಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ*9/11/21


 

ನನ್ನಜ್ಜಿ ಮತ್ತು ನನ್ನಮ್ಮನ ಕೈರುಚಿ


 ನಮ್ಮ ಅಜ್ಜಿ ರಂಗಜ್ಜಿ  .ನನ್ನ ಅಮ್ಮನ ಅಮ್ಮ ಕಪ್ಪಾದ ಕೃಶಕಾಯದ ಹಲ್ಲುಗಳೆಲ್ಲಾ ಉದುರಿ ಮುಂದಿನ ಎರಡು ಉಬ್ಬಲ್ಲು ಮಾತ್ರ. ನಾವು ಇದ್ದೇವೆ ಎಂದು ಕಾಣಿಸುತ್ತಿದ್ದವು ಗೂನುಬೆನ್ನು ಕೈಯಲ್ಲೊಂದು ಕೋಲು ಸದಾ ಇರುತ್ತಿತ್ತು ಸುಮಾರು ಎಂಭತ್ತಕ್ಕೂ ಹೆಚ್ಚು ವಯಸ್ಸಾಗಿದ್ದರೂ ಕಣ್ಣಿನ ದೃಷ್ಟಿ ಚೆನ್ನಾಗಿತ್ತು. ನಾನು ಅಥವಾ ನನ್ನ ಅಮ್ಮ ಸ್ವಲ್ಪ ಕಾಲ ಅಜ್ಜಿಯ ಕಣ್ಣಿಗೆ ಬೀಳದಿದ್ದರೆ  " ಏ ಎಂಕ್ಟೀ..... ಏ ಸೀದೇವಿ  ಎಲ್ಲಿ ಹಾಳೊಗ್ ಹೊದ್ರಿ " ಎಂದು ಕೂಗಿದರೆ ಪಕ್ಕದ ಬೀದಿಗೂ ಕೇಳುತ್ತಿತ್ತು ಅಂತಹ ಕಂಚಿನ ಕಂಠ.

ನಮ್ಮ ರಂಗಜ್ಜಿ ನಾನು ಚಿಕ್ಕವನಾಗಿದ್ದಾಗ ನನಗೆ ಸಜ್ಜೆ ರೊಟ್ಟಿ ಸುಟ್ಟು ಕೊಡುತ್ತಿದ್ದರು ಅದರ ಸ್ವಾದ ರುಚಿ ಇದುವರೆಗೂ ತಿಂದಿಲ್ಲ .


ಸಜ್ಜೆಯ ಹಿಟ್ಟಿಗೆ ಒಣಗಿಸಿದ ಮೆಣಸಿನ ಕಾಯಿಯ ಬೀಜಗಳು,  ಎಳ್ಳಿನ ಕಾಳುಗಳುನ್ನು ಸೇರಿಸಿ ಹದವಾಗಿ ಮಿದ್ದು ತೆಳ್ಳಗೆ ರೊಟ್ಟಿ ತೊಟ್ಟಿ ಎಡ್ಲಿ ಒಲೆ ( ಒಲೆಯ ಪಕ್ಕದಲ್ಲಿ ನೀರು ಕಾಯಲು ಇರುವ ಮಣ್ಣಿನ ದೊಡ್ಡ ಮಡಿಕೆ) ಮೇಲೆ ಹದವಾಗಿ ಬೇಯಿಸುತ್ತಿದ್ದರು .ಹಸಿರಾದ ಸಜ್ಜೆ ಹಿಟ್ಟಿನ ರೊಟ್ಟಿ ಕಂದು ಬಣ್ಣಕ್ಕೆ ತಿರುಗುವವರೆಗೆ ಹೆಂಚಿನ ಮೇಲೆ  ಸುಡುತ್ತಿದ್ದರು .ನಂತರ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ದೊಡ್ಡ ಗುಡಾಣದಲ್ಲಿ    ( ದೊಡ್ಡ ಮಣ್ಣಿನ ಮಡಿಕೆ)ಶೇಖರಣೆ ಮಾಡಿ ದಿನವೂ ಸಂಜೆ ನಾನು ಶಾಲೆಯಿಂದ  ಬಂದಾಗ ಅರ್ಧ ರೊಟ್ಟಿ ಕೊಡುತ್ತಿದ್ದರು .ಇನ್ನೂ ಅರ್ಧ ಕೊಡಿ  ಅಜ್ಜಿ ಅಂದರೆ"  ಜಾಸ್ತಿ ತಿಂದ್ರೆ ಹುಚ್ಚಕೆಂಡು ಬಿಡ್ತಿಯಾ , ಹೊಟ್ಟೆ ಗಣೇಶಪ್ಪನಂಗೆ ಗುಡಾಣ ಆಗುತ್ತೆ ನಡಿ ನಡಿ ,ಆಟ ಆಡು ಹೋಗು  " ಎಂದು ಬುದ್ದಿವಾದ ಹೇಳಿ ಸ್ವಲ್ಪ ಚಿನಕುರುಳಿ ತಿನ್ನಲು ಕೊಡುತ್ತಿದ್ದರು .ರಂಗಜ್ಜಿ ಇಂದು ಸ್ವರ್ಗಸ್ಥರಾಗಿದ್ದಾರೆ. ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಎಲ್ಲಾದರೂ ನಾನು  ಸಜ್ಜೆ ರೊಟ್ಟಿ, ಚಿನಕುರುಳಿ ಕಂಡರೆ ರಂಗಜ್ಜಿಯ ನೆನಪಾಗುವುದು.

ನನ್ನ ಅಮ್ಮ ಶ್ರೀದೇವಮ್ಮ ಸಹ ಅಡಿಗೆಯಲ್ಲಿ ಎಕ್ಸಪರ್ಟ್ .ಕಡಿಮೆ ಸಮಯದಲ್ಲಿ ಎಲ್ಲ ತರಹದ ಅಡಿಗೆ ಮಾಡುವರು. ಅದರಲ್ಲೂ ಅವರು ಮಾಡುವ ತಪ್ಲೆ ರೊಟ್ಟಿ ನನ್ನಪೇವರೇಟ್.
ರಾಗಿ ಹಿಟ್ಟಿಗೆ ಈರುಳ್ಳಿ, ಮೆಣಸಿಬಕಾಯಿ, ಒಂದೆರಡು ತರಹದ ಸೊಪ್ಪನ್ನು ಸೇರಿಸಿ ರೊಟ್ಟಿ ತಟ್ಟಿ ಸ್ವಲ್ಪ ಎಣ್ಣೆ ಹಾಕಿ ಹೆಂಚಿನ ಮೇಲೆ ಬೇಯಿಸಿದ ಬಿಸಿ ರೊಟ್ಟಿ ತಿನ್ನಲು ಬೇರೆ ಯಾವುದೇ ಪಲ್ಯ ಅಥವಾ ಚಟ್ನಿ ಬೇಕಾಗುತ್ತಿರಲಿಲ್ಲ.ರೊಟ್ಟಿಯ ಜೊತೆಗೆ ಕೆಲವೊಮ್ಮೆ ಬೆಣ್ಣೆ ಅಥವಾ ತುಪ್ಪ ಸೇರಿಸಿ ತಿನ್ನುತ್ತಿದ್ದರೆ ಅದರ ಮಜವೇ ಬೇರೆ.
ಅಮ್ಮನ ಮತ್ತೊಂದು ರುಚಿಯಾದ ನನಗಿಷ್ಷದ ಖಾದ್ಯ ಬದನೇಕಾಯಿ ಬಜ್ಜಿ. ಬದನೇ ಕಾಯಿಯನ್ನು ಕೆಂಡದಲ್ಲಿ ಸುಟ್ಟು ಹದವಾಗಿ ಉಪ್ಪು ಉಳಿ, ಖಾರ, ಈರುಳ್ಳಿ ಸೇರಿಸಿ ಕೈಯಿಂದ ಕಿವುಚಿದರೆ ದಿಡೀರ್ ಬದನೇಕಾಯಿ ಬಜ್ಜಿ ರೆಡಿ .ಅದಕ್ಕೆ ಮುದ್ದೆ ಒಳ್ಳೆಯ ಕಾಂಬಿನೇಷನ್ ಒಂದು ಉಣ್ಣುವವರು ಎರಡು ಮುದ್ದೆ ಉಣ್ಣಬಹುದು.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ.

06 November 2021

ಲೈಪ್ ಈಸ್ ಬ್ಯೂಟಿಫಲ್ .ಲೇಖನ


 



ಲೈಫ್ ಈಸ್ ಬ್ಯೂಟಿಪುಲ್ .


ಜೀವನದಲ್ಲಿ ‌ಕೆಲವೊಮ್ಮೆ ರಿಸ್ಕ್ ಉನ್ನತವಾದ ಸಾಧನೆ ಮಾಡಬೇಕಾದರೆ ತೊಗೋಬೇಕು ಮತ್ತು ಕಷ್ಟ ಪಡಲೇಬೇಕು. ಆದರೆ ಯಾವಾಗಲೂ ಅದೇ ಮಾಡುತ್ತಾ ಕೂರಬಾರದು. ಒಂದು ಹಂತದ ಸಾಧನೆ ಮಾಡಿದ ಮೇಲೆ ಅತಿಯಾಸೆ ಪಡದೇ ಇರುವುದರಲ್ಲಿಯೇ ನೆಮ್ಮದಿಯ ಜೀವನ ನಡೆಸಬೇಕು. ಬೇಕು ಬೇಡಗಳ ಮದ್ಯೆ ಒಂದು ಸಣ್ಣ ಗೆರೆಯ ಬೆಲೆಯನ್ನು ನಾವು ಯಾವಾಗಲೂ ಅರಿತಿರಬೇಕು.

ಆಗ ಲೈಪ್ ಈಸ್ ಬ್ಯೂಟಿಫುಲ್‌.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಸಾವಯವ ಕೃಷಿ .ಪ್ರಬಂಧ


 ಸಾವಯವ ಕೃಷಿ 

ಪ್ರಬಂಧ


ಪೀಠಿಕೆ


 ನಗರೀಕರಣ ಮತ್ತು ಕೈಗಾರಿಕೀಕರಣದ ಪರಿಣಾಮವಾಗಿ  ಪರಿಸರ ಮಲಿನವಾಗಿರುವುದು ನಮಗೆ ತಿಳಿದೇ ಇದೆ .ಇದರ ಜೊತೆಯಲ್ಲಿ   ನಮ್ಮ ಬೆಳೆಯುತ್ತಿರುವ ಜನಸಂಖ್ಯೆಯ ಹಸಿವನ್ನು ಪೂರೈಸಲು, ಕೃತಕ ವಿಧಾನಗಳ ಮೂಲಕ ಬೆಳೆ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಉತ್ಪಾದನೆಯ ಸಮಯವನ್ನು ಕಡಿಮೆ ಮಾಡಲು ಹಾನಿಕಾರಕ ಕೃಷಿ ಪದ್ಧತಿಗಳನ್ನು ಬಳಸುತ್ತಿದ್ದೇವೆ . ಈ ವಿಧಾನಗಳಲ್ಲಿ ರಾಸಾಯನಿಕ ಗೊಬ್ಬರಗಳು, ಹಾನಿಕಾರಕ ಕೀಟನಾಶಕಗಳು, ಶಿಲೀಂಧ್ರನಾಶಕಗಳು, ಸಸ್ಯನಾಶಕಗಳು ಮತ್ತು ಕೀಟನಾಶಕಗಳ ಬಳಕೆಯನ್ನು ಬೆಳೆಗಳ ಉತ್ಪಾದನಾ ದರವನ್ನು ಸುಧಾರಿಸಲು ಬಳಸುತ್ತಿದ್ದೇವೆ. ಈ ತಂತ್ರಗಳು ರೈತರಿಗೆ ತಮ್ಮ ಇಳುವರಿಯನ್ನು ಸುಧಾರಿಸಲು ಸಹಾಯ ಮಾಡಬಹುದಾದರೂ, ಅವು ಪ್ರಕೃತಿಗೆ ವಿರುದ್ದವಾಗಿವೆ  ಮತ್ತು ನಾವು ಸೇವಿಸುವ ಆಹಾರವನ್ನು ವಿಷಯವನ್ನಾಗಿ ಪರಿವರ್ತಿಸುತ್ತಿವೆ. ಆದ್ದರಿಂದ ಮಾನವ ನಾಗರಿಕತೆಯ ಮೇಲೆ ಈ ದುರಂತವನ್ನು ತಡೆಗಟ್ಟಲು ಸಾವಯವ ಕೃಷಿಯು ಅಂತಿಮ ಪರಿಹಾರವಾಗಿದೆ.

ವಿಷಯ ವಿವರಣೆ.


 ಸಾವಯವ ಕೃಷಿಯು ಒಂದು ತಂತ್ರವಾಗಿದ್ದು, ಇದರಲ್ಲಿ ಗಾಳಿ, ನೀರು ಮತ್ತು ಮಣ್ಣಿನಂತಹ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಸುಸ್ಥಿರ ವಿಧಾನದ ಮೂಲಕ ಭೂಮಿಯ ಬಳಕೆ ಮಾಡಿಕೊಂಡು ಬೆಳೆಗಳನ್ನು ಬೆಳೆಸಲಾಗುತ್ತದೆ.  ಸಾವಯವ ಕೃಷಿ ಎಂದರೆ ಮಾನವ ನಿರ್ಮಿತ ರಾಸಾಯನಿಕಗಳನ್ನು ಬಳಸುವುದಿಲ್ಲ ಎಂದು ಅರ್ಥವಲ್ಲ.  ಅನೇಕ ಸಾವಯವ ಕೃಷಿ ವಿಧಾನಗಳಲ್ಲಿ, ಮಾನವ ನಿರ್ಮಿತ ರಸಗೊಬ್ಬರಗಳು ಮತ್ತು ಕೀಟನಾಶಕಗಳನ್ನು ಬೆಳೆ ಉತ್ಪಾದನೆಯನ್ನು ಸುಧಾರಿಸಲು ಬಳಸಲಾಗುವುದಿಲ್ಲ ಆದರೆ ಮಣ್ಣಿನ ಫಲವತ್ತತೆಯನ್ನು ಸುಧಾರಿಸಲು ಬಳಸಲಾಗುತ್ತದೆ.  ಅಂದರೆ ಈ ರಾಸಾಯನಿಕಗಳು ನೇರವಾಗಿ ಮಣ್ಣಿಗೆ ಹೋಗುತ್ತಿವೆಯೇ ಹೊರತು ನಾವು ಸೇವಿಸುವ ಆಹಾರಕ್ಕೆ ಅಲ್ಲ.  ಸಾವಯವ ಮತ್ತು ಅಜೈವಿಕ ಕೃಷಿಯ ನಡುವಿನ ವ್ಯತ್ಯಾಸವೆಂದರೆ ಸಾವಯವ ಕೃಷಿಯಲ್ಲಿ ರಾಸಾಯನಿಕಗಳು ಮಣ್ಣಿನ ಫಲವತ್ತತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಬೆಳೆಗಳಿಗೆ ತೊಂದರೆಯಾಗುವುದಿಲ್ಲ ಆದರೆ ಅಜೈವಿಕ ಕೃಷಿಯಲ್ಲಿ, ರಾಸಾಯನಿಕಗಳು ಮಣ್ಣಿನ ಫಲವತ್ತತೆಯನ್ನು ಕೆಡಿಸುತ್ತವೆ ಮತ್ತು ಕೃಷಿ ಉತ್ಪನ್ನಗಳಲ್ಲಿ ವಿಷ ಸಂಗ್ರಹವಾಗುತ್ತದೆ. ಅಂತಿಮವಾಗಿ ನಮ್ಮ ಆಹಾರ ಸರಪಳಿಗಳಿಗೆ ಕಂಟಕವಾಗುತ್ತದೆ.ಕೀಟನಾಶಕಗಳು ಮತ್ತು ಸಸ್ಯನಾಶಕಗಳಲ್ಲಿ ಇರುವ ಸತು, ಸೀಸ ಮತ್ತು ಮ್ಯಾಂಗನೀಸ್‌ನಂತಹ ಹಾನಿಕಾರಕ ರಾಸಾಯನಿಕಗಳನ್ನು ಮನುಷ್ಯರು ಸೇವಿಸುತ್ತಾರೆ, ಇದು ನಮ್ಮ ಆರೋಗ್ಯದ ಮೇಲೆ ಗಂಭೀರ ಅಪಾಯವನ್ನುಂಟುಮಾಡುತ್ತದೆ.


 ಸಾವಯವ ಕೃಷಿಯ ಕೆಲವು ಪ್ರಮುಖ ಪ್ರಯೋಜನಗಳೆಂದರೆ ಅಜೈವಿಕ ಕೃಷಿಗೆ ಹೋಲಿಸಿದರೆ ಆರೋಗ್ಯಕರ ಮತ್ತು ಗುಣಮಟ್ಟದ ಕೃಷಿ ಉತ್ಪಾದನೆಯು ತುಲನಾತ್ಮಕವಾಗಿ ಹೆಚ್ಚು.  ಅಲ್ಲದೆ, ಸಾವಯವ ಕೃಷಿಯು ಪರಿಸರ ಸ್ನೇಹಿಯಾಗಿದೆ ಏಕೆಂದರೆ ಇದು ಮಣ್ಣಿನ ಫಲವತ್ತತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಆ ಮೂಲಕ ಕೃಷಿ ಉದ್ದೇಶಗಳಿಗಾಗಿ ನಿರ್ದಿಷ್ಟ ಭೂಪ್ರದೇಶದ ಪುನರಾವರ್ತಿತ ಬಳಕೆ ಸಾಧ್ಯ.  ಇದು ಸ್ಥಳಾಂತರ ಕೃಷಿ ಪದ್ಧತಿಗಳಿಂದ ಉಂಟಾಗುವ ಅರಣ್ಯನಾಶವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.  ಸಾವಯವ ಕೃಷಿಯ ಇತರ ಪ್ರಯೋಜನಗಳೆಂದರೆ ಮಾರುಕಟ್ಟೆಯಲ್ಲಿ ಸಾವಯವ ಉತ್ಪನ್ನದ ಬೆಲೆ ಹೆಚ್ಚು ಅಂದರೆ ರೈತರಿಗೆ ಲಾಭದ ಪ್ರಮಾಣವೂ ಹೆಚ್ಚು.  ಈ ನಿರಂತರ ಕೃಷಿ ವಿಧಾನವು ರೈತರಿಗೆ ಬೆಳೆ ಇಳುವರಿಯಲ್ಲಿ ನಿರಂತರ ಮತ್ತು ನ್ಯಾಯಯುತ ಸಮತೋಲನವನ್ನು ಕಾಪಾಡಿಕೊಳ್ಳಲು ಮತ್ತು ನಮ್ಮ ಪರಿಸರವನ್ನು ಉಳಿಸಲು ಸಹಾಯ ಮಾಡುತ್ತದೆ.  ಸಾವಯವ ಕೃಷಿಯ ಮತ್ತೊಂದು ದೊಡ್ಡ ಪ್ರಯೋಜನವೆಂದರೆ ಅದು ಮಣ್ಣಿನ ಮಾಲಿನ್ಯವನ್ನು ತಡೆಯಲು ಸಹಾಯ ಮಾಡುತ್ತದೆ.


 ಸಾಂಪ್ರದಾಯಿಕ ಕೃಷಿ ಪದ್ಧತಿಗಳಿಗೆ ಹೋಲಿಸಿದರೆ, ಬೆಳೆಗಳ ಅವಶೇಷಗಳನ್ನು ಸುಡುವುದು, ಕೃಷಿ ಇಳುವರಿಯನ್ನು ಹೆಚ್ಚಿಸಲು ಹಾನಿಕಾರಕ ರಾಸಾಯನಿಕಗಳನ್ನು ಬಳಸುವುದು, ಮಣ್ಣಿನ ಮಾಲಿನ್ಯ ಮತ್ತು ತಳೀಯವಾಗಿ ಮಾರ್ಪಡಿಸಿದ ಜೈವಿಕ ತಂತ್ರಜ್ಞಾನದ ಬೆಳೆಗಳ ಅಭಿವೃದ್ಧಿಯನ್ನು ಸಾವಯವ ಕೃಷಿಯಲ್ಲಿ ಬಳಸಲಾಗುವುದಿಲ್ಲ.  ರಾಸಾಯನಿಕ ಗೊಬ್ಬರಗಳ ಬಳಕೆಯ ಮೇಲೆ ಸಂಪೂರ್ಣ ನಿಷೇಧವು ಮಣ್ಣಿನ ಹ್ಯೂಮಸ್ ಅಂಶ ಮತ್ತು ಸಾರಜನಕದ ಅಂಶವನ್ನು ಸುಧಾರಿಸಲು ಸಹಾಯ ಮಾಡುತ್ತದೆ.  ಅಲ್ಲದೆ, ದ್ವಿದಳ ಧಾನ್ಯಗಳನ್ನು ಅಂತರ ಬೆಳೆಯಾಗಿ ಮತ್ತು ಗೊಬ್ಬರದ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.



ಉಪಸಂಹಾರ 


 ಅರಣ್ಯನಾಶ, ಮಣ್ಣಿನ ಮಾಲಿನ್ಯ ಮತ್ತು ಜಲಮಾಲಿನ್ಯವನ್ನು ಒಳಗೊಂಡಿರುವ ಹಾನಿಕಾರಕ ಸಾಂಪ್ರದಾಯಿಕ ಕೃಷಿ ಪದ್ಧತಿಗಳಿಗೆ ಸಾವಯವ ಕೃಷಿಯು ಉತ್ತಮ ಪರ್ಯಾಯ ಕೃಷಿ ಪದ್ದತಿಯಾಗಿದೆ‌ .   ನಮ್ಮ ಕೃಷಿ-ಪರಿಸರ ವ್ಯವಸ್ಥೆ ಮತ್ತು ಜೀವವೈವಿಧ್ಯವನ್ನು ಉಳಿಸಲು ಸಹಾಯ ಮಾಡುವ ಸಾವಯವ ಕೃಷಿಯನ್ನು ಪ್ರಚಾರ ಮಾಡಲು ಸರ್ಕಾರಗಳು ಮತ್ತು ಅಂತರರಾಷ್ಟ್ರೀಯ ಸಮುದಾಯಗಳು ರೈತರಿಗೆ ಆರ್ಥಿಕವಾಗಿ ಸಹಾಯ ಮಾಡಬೇಕು.  ಅಲ್ಲದೆ, ಸಾವಯವ ಕೃಷಿಯನ್ನು ನಾವು ವಾಯು ಮಾಲಿನ್ಯವನ್ನು ಕಡಿಮೆ ಮಾಡುವ, ನೀರನ್ನು ಸಂರಕ್ಷಿಸುವ, ಮಣ್ಣಿನ ಸವೆತವನ್ನು ಕಡಿಮೆ ಮಾಡುವ, ಮಣ್ಣಿನ ಫಲವತ್ತತೆಯನ್ನು ಸುಧಾರಿಸುವ ಮತ್ತು ಆಹಾರದಲ್ಲಿ ವಿಷಕಾರಿ ರಾಸಾಯನಿಕಗಳು ಮತ್ತು ಕೃತಕ ಪದಾರ್ಥಗಳ ಬಳಕೆಯನ್ನು ಕಡಿಮೆ ಮಾಡುವ ಮಾರ್ಗವೆಂದು ಪರಿಗಣಿಸಬಹುದು.


 

ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು


 

05 November 2021

ಐ ಮಿಸ್ ಯೂ ಅಪ್ಪು. ಲೇಖನ


 


*ಐ ಮಿಸ್ ಯೂ ಅಪ್ಪು*

ನಾನು ಮೊದಲ ಬಾರಿ ಸಿನಿಮಾ ನೋಡಿದ್ದು ನಮ್ಮ ಶಿಕ್ಷಕರಾದ ತಿಪ್ಪೇಶಪ್ಪ ಮಾಸ್ಟರ್ ಜೊತೆ ಚಿತ್ರದುರ್ಗದ ರೂಪಾವಣಿ ಥಿಯೇಟರ್ ನಲ್ಲಿ. ಎರಡು ನಕ್ಷತ್ರಗಳು ಚಿತ್ರವನ್ನು ಥಿಯೇಟರ್ ನಲ್ಲಿ ನೋಡಿ ಬಂದು ನಮ್ಮ ಸ್ನೇಹಿತರಿಗೆ ಅದನ್ನು ರಸವತ್ತಾಗಿ ವರ್ಣನೆ ಮಾಡಿದ್ದೆ .ಜೊತೆಗೆ ಆ ಚಿತ್ರದ ಹಾಡುಗಳ ಪಲ್ಲವಿಯನ್ನು ಅದೇ ರಾಗದಲ್ಲಿ ಹಾಡುವುದನ್ನು ಕೇಳಿ ಕೆಲವರು ಖುಷಿಪಟ್ಟರೆ ಕೆಲವರು ಈ ಮೇಷ್ಟ್ರು ದುರ್ಗಕ್ಕೆ  ಬರೀ ಇವನನ್ನೇ ಕರ್ಕೊಂಡು ಹೋಗ್ತಾರೆ ಅಂತ ಉರ್ಕೊಳ್ಳೊರು ಹೆಚ್ಚಿದ್ದರು .ಆ ಚಿತ್ರದಲ್ಲಿ ಬರುವ" ನನ್ನ ಉಡುಪು ನಿನ್ನದು ನಿನ್ನ ಉಡುಪು ನನ್ನದು.....". ಹೌದು ಎಂದರೆ ಹೌದು...ಹೌದ....ಅಲ್ಲ ಎಂದರೆ ಅಲ್ಲ ...ಅಲ್ಲ..." ಎಂದು ಆಗಾಗ್ಗೆ ಗುನುಗುತ್ತಿದ್ದೆ.

ಮತ್ತೊಂದು ಭಾನುವಾರ ನಮ್ಮ ಶಿಕ್ಷಕರು ದುರ್ಗಕ್ಕೆ ಕರೆದುಕೊಂಡು ಹೋದಾಗ  "ಚಲಿಸುವ ಮೋಡಗಳು" ಚಿತ್ರ ತೋರಿಸಿದರು .ನನ್ನ ಗೆಳೆಯರು ನಾನು ಹಾಡುವ ರೀತಿಯನ್ನು ಮೆಚ್ಚಿದ್ದರಿಂದ ಈ ಬಾರಿ ಚಿತ್ರದ ಕಥೆ ಕಡೆಗೆ ಹೆಚ್ಚು ಗಮನ ಕೊಡದೇ ಬರಿ ಹಾಡುಗಳನ್ನು ಗಮನಿಸಿದ್ದೆ .
ಅದರ ಫಲವಾಗಿ  " ಚಂದಿರ ತಂದ ಹುಣ್ಣಿಮೆ ರಾತ್ರಿ.... ಗಾಳಿಯು ತಂದ ತಣ್ಣನೆ ರಾತ್ರಿ..... ಹಾಡನ್ನು ಥಿಯೇಟರ್ ನಿಂದ ಹೊರಬರುತ್ತಲೇ ಗುನುಗುತ್ತಿದ್ದೆ. ಬಸ್ ನಲ್ಲಿ ನಮ್ಮ ಊರಿಗೆ ಬರುವಾಗ " ಕಾಣದಂತೆ ಮಾಯವಾದನು...... ನಮ್ಮ ಶಿವ ಕೈಲಾಸ ಸೇರಿಕೊಂಡನು......" ಹಾಡನ್ನು ಸ್ವಲ್ಪ ಜೋರಾಗೆ ಹೇಳಿಕೊಂಡೆ  .ಬಸ್ ನ ಪ್ರಯಾಣಿಕರೊಬ್ಬರು ಹುಡುಗ ಚೆನ್ನಾಗಿ ಹಾಡ್ ಹೇಳ್ತಾನೆ ಇನ್ನೊಂದು ಸಲ ಹೇಳು ಎಂದರು .ನಾನು ನನ್ನ ಮಾಸ್ಟರ್ ಮುಖ ನೋಡಿದೆ ಅವರು ರಾಜ್ ಕುಮಾರ್ ಅಪ್ಪಟ ಅಭಿಮಾನಿ ಅದಕ್ಕೆ ಮತ್ತೊಮ್ಮೆ ಅಣ್ಣಾ ರವರ ಹಾಡು ಕೇಳಲು ಹಾಡು ಎಂಬಂತೆ ಸನ್ನೆ ಮಾಡಿದರು .ಬಸ್ ಚಿತ್ರಹಳ್ಳಿಗೆ ಬರುವವರೆಗೆ ನಾಲ್ಕು ಬಾರಿ ಅದೇ ಹಾಡನ್ನು ಕೇಳುಗರ ಒತ್ತಾಯದ ಮೇರೆಗೆ ಹಾಡಿದ್ದೆ ಅದರಲ್ಲಿ ಕೆಲವರು ಅಭಿಮಾನದಿಂದ ಐವತ್ತು ಪೈಸೆ ,ಮತ್ತು ಇಪ್ಪತ್ತೈದು ಪೈಸೆ ಕಾಯಿನ್  ನೀಡಿದರು!

ಬಸ್ ಇಳಿದು ನಮ್ಮ ಊರಿಗೆ ನಡೆದುಕೊಂಡು ಹೋಗುವಾಗ "ವೆಂಕಟೇಶ ಅಂತೂ ಹಾಡುಗಾರ ಆಗ್ ಬಿಟ್ಟೆಯಲ್ಲೊ.ವೆರಿ ಗುಡ್ ಇವತ್ತು ನಾವು ನೋಡಿದ್  ಪಿಚ್ಚರ್ ನಲ್ಲಿರೋ
ಇನ್ನೊಂದು ಹಾಡು ಹೇಳು ಅಂದರು.
ಜೇನಿನ ಹೊಳೆಯೊ....ಅಂದು ನಾನು ಹೇಳಿದೆ ಹಾಲಿನ ಹೊಳೆಯೊ...ಅಂತ ನಮ್ಮ ಮಾಸ್ಟರ್ ಧ್ವನಿ ಸೇರಿಸಿದರು. ಇಬ್ಬರೂ ಹಾಡುತ್ತಾ ನಡೆದಾಗ ನಮ್ಮ ಊರು ಬಂದದ್ದೇ ಗೊತ್ತಾಗಲಿಲ್ಲ ನಮ್ಮ ಹಾಡು ಕೇಳಿ ಗೊಲ್ಲರ ಚಿಕ್ಕಜ್ಜರ ನಾಯಿ ಬೊಗುಳಿದಾಗ ಹಾಡು ನಿಲ್ಲಿಸಿ ಮನೆ ಸೇರಿದೆವು.

ನಾನು ಹಾಡು ಹೇಳುವುದು ಬಹುತೇಕ ಹುಡುಗರಿಗೆ ಮತ್ತು ಸುಮಾರು ದೊಡ್ಡವರಿಗೆ ಪ್ರಚಾರ ಆಗಿತ್ತು .ನನಗರಿವಿಲ್ಲದೆ ನಾನಾಗ ನಮ್ಮ ಶಾಲೆಯ ಅನಧಿಕೃತವಾದ ಆಸ್ಥಾನ ಗಾಯಕನಾಗಿ ಹೊರಹೊಮ್ಮಿದ್ದೆ. ಶಾಲಾ ಸಮಾರಂಭದಲ್ಲಿ  , ಹೊರಸಂಚಾರ ಹೋದಾಗ ನನ್ನ ಹಾಡು ಮತ್ತು ಗಾಯನ ಖಾಯಂ ಅಗಿತ್ತು .ನನ್ನ ಜೊತೆಗೆ ನನ್ನ ಗೆಳೆಯ  ಆನಂದ ಸೇರಿಕೊಂಡು ಕೆಲವು ತೆಲುಗು ಹಾಡುಗಳನ್ನು ಹಾಡಿ ಎಲ್ಲರನ್ನೂ ರಂಜಿಸುತ್ತಿದ್ದೆವು .ಒಟ್ಟಿನಲ್ಲಿ ಆ ವಯಸಿನಲ್ಲಿ ನನ್ನದೇ ಪುಟ್ಟ ಆರ್ಕೆಸ್ಟ್ರಾ ತಂಡ ಸಿದ್ಧವಾಗಿತ್ತು. ಆದರೆ ವಾದ್ಯ ಪರಿಕರಗಳು ಇರಲಿಲ್ಲ!

ನನ್ನ ಗಾಯನ ಕೀರ್ತಿ ಹೇಗೋ ನಮ್ಮ ಮಾವನವರ ಊರಾದ ಯರಬಳ್ಳಿಗೂ ಹಬ್ಬಿತ್ತು . ಶಾಲೆಗೆ ನಮಗೆ  ಬೇಸಿಗೆ ರಜೆ ಇದ್ದಿದ್ದರಿಂದ  ಮಾರಮ್ಮನ ಜಾತ್ರೆಗೆ ಒಂದು ವಾರ ಮೊದಲೆ ಯರಬಳ್ಳಿ ಸೇರಿದ್ದೆ .ಅಲ್ಲಿ ನಮ್ಮ ಜಯರಾಂ ಮಾವನ ಮನೆ ಬಳಿ ಒಮ್ಮೆ ಕಾಣದಂತೆ ಮಾಯವಾದನು.....ಹಾಡು ಹಾಡಿದೆ. ಅಕ್ಕ ಪಕ್ಕದ ಮನೆಯವರು ಬಂದು ಕೇಳಿ ಖುಷಿ ಪಟ್ಟು ಕೆಲವರು ಐವತ್ತು ಪೈಸೆ ಕೆಲವರು ಒಂದು ರುಪಾಯಿ ಬಹುಮಾನ ನೀಡಿದರು. ಇದೇ ರೀತಿಯಲ್ಲಿ ಅಲ್ಲಲ್ಲಿ ಜನರ ಅಪೇಕ್ಷೆಯ ಮೇರೆಗೆ ಹಾಡಿ ಜಾತ್ರೆಯ ವೇಳೆಗೆ ನನ್ನ ಜೇಬಿನಲ್ಲಿ ಹತ್ತು ರೂಪಾಯಿ ಸಂಗ್ರಹವಾಗಿತ್ತು ಅಮ್ಮನಿಗೆ ಈ ವಿಷಯ ಹೇಳಿ ದುಡ್ಡು ತೋರಿಸಿದೆ. ಅಮ್ಮ ಒಳಗೊಳಗೇ ಖುಷಿ ಪಟ್ಟರೂ" "ಬರೇ ಪದಗಿದ ಹೇಳ್ಕೆಂಡು ತಿರಾಗದ್ ಬಿಟ್ಟು ಓದಾ ಕಡೆ ಮನಸ್ ಕೊಡು"  ಎಂದು ಗದರಿದರು.

ಇತ್ತೀಚಿಗೆ ಅಪ್ಪುರವರು ನಮ್ಮನ್ನು ಅಗಲಿದ ಸಮಯದಲ್ಲಿ ಅವರ ಕಾಣದಂತೆ ಮಾಯವಾದನು ಹಾಡು ಮತ್ತು ನಾನು ಹಾಡಿದ ಕಾಣದಂತೆ ಮಾಯವಾದನು ಹಾಡು ಯಾಕೋ ಬಹಳ ನೆನಪಾಯಿತು ಮತ್ತು ದೊಡ್ಮನೆ ಹುಡುಗನ ಅಕಾಲಿಕ ಅಗಲಿಕೆ ಬಹಳ ಕಾಡಿತು ಮತ್ತು ಕಾಡುತ್ತಿದೆ.ಐ ಮಿಸ್ ಯು ಅಪ್ಪು.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
990925529

ರೈತರ ಆತ್ಮಹತ್ಯೆ ನಿಲ್ಲಬೇಕಿದೆ. ಲೇಖನ

 


ರೈತರ ಆತ್ಮಹತ್ಯೆಗೆ ಕಾರಣಗಳು ಮತ್ತು ಪರಿಹಾರೋಪಾಯುಗಳು.  ಪ್ರಬಂಧ

ಪೀಠಿಕೆ

ಪ್ರತಿ ವರ್ಷ, ಭಾರತದಲ್ಲಿ 12000 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಭಾರತದಲ್ಲಿ ಅನ್ನದಾತನ ಆತ್ಮಹತ್ಯೆ ಮಾಮೂಲಿ ಎಂಬಂತೆ ಕಾಣುತ್ತಿದೆ. 
ಭಾರತವು ಕೃಷಿ  ಪ್ರಧಾನವಾದ ಆರ್ಥಿಕತೆಯಾಗಿದ್ದು, ಜನಸಂಖ್ಯೆಯ 70% ರಷ್ಟು ಜನರು ನೇರವಾಗಿ ಅಥವಾ ಪರೋಕ್ಷವಾಗಿ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿದ್ದಾರೆ.  ಭಾರತದಲ್ಲಿ ದ್ವಿತೀಯ ಮತ್ತು ತೃತೀಯ ವಲಯಗಳ ವೇಗದ ಬೆಳವಣಿಗೆಯ ಹೊರತಾಗಿಯೂ, ಬಹುಪಾಲು ಜನರು ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿದ್ದಾರೆ.  ಹಸಿರು ಕ್ರಾಂತಿಯು ದಿನನಿತ್ಯದ ಬಳಕೆಗಾಗಿ ಆಹಾರ ಧಾನ್ಯ ಉತ್ಪಾದನೆಯಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಿದೆ.  ಇಂದು, ಹೆಚ್ಚು ಹೆಚ್ಚು ರೈತರು ಕೃಷಿಗಾಗಿ ಆಧುನಿಕ ವಿಧಾನಗಳು ಮತ್ತು ಸಾಧನಗಳನ್ನು ಬಳಸಿ ಕೃಷಿ ಮಾಡುತ್ತಿದ್ದಾರೆ. ಆದರೂ ರೈತರ ಆತ್ಮಹತ್ಯೆಯ ಪ್ರಕರಣಗಳು ಹೆಚ್ಚಾಗುತ್ತಿರುವುದು ಬೇಸರದ ಸಂಗತಿಯಾಗಿದೆ.

ವಿಷಯ ವಿವರಣೆ.

ದೇಶದ ಏಳು ರಾಜ್ಯಗಳು ಕೃಷಿ ವಲಯದ ಆತ್ಮಹತ್ಯೆಗಳಲ್ಲಿ 87.5% ಪಾಲನ್ನು ಹೊಂದಿವೆ.  ಅವುಗಳೆಂದರೆ ಮಹಾರಾಷ್ಟ್ರ, ತೆಲಂಗಾಣ, ಕರ್ನಾಟಕ, ಛತ್ತೀಸ್ಗಢ, ಮಧ್ಯಪ್ರದೇಶ, ತಮಿಳುನಾಡು ಮತ್ತು ಆಂಧ್ರಪ್ರದೇಶ.  ಈ ರಾಜ್ಯಗಳಲ್ಲಿ ಮಹಾರಾಷ್ಟ್ರವು ಅತಿ ಹೆಚ್ಚು ಆತ್ಮಹತ್ಯೆಯ ಪ್ರಕರಣಗಳು ದಾಖಲಾಗಿವೆ.
ಹಸಿರು ಕ್ರಾಂತಿಯಿಂದ ಗರಿಷ್ಠ ಲಾಭ ಪಡೆದ ಪಂಜಾಬ್ ರಾಜ್ಯವೂ ರೈತರ ಆತ್ಮಹತ್ಯೆಯ ಪಾಲು ಹೊಂದಿದೆ ಎಂಬುದು ದುರದೃಷ್ಟಕರ ಸಂಗತಿಯಾಗಿದೆ. 1995 ರಿಂದ 2015 ರವರೆಗೆ, ಪಂಜಾಬ್ನಲ್ಲಿ 4687 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಮಾನ್ಸಾ ಜಿಲ್ಲೆ  ಒಂದರಲ್ಲೇ  1334 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದವು.

ಭಾರತದಲ್ಲಿ ರೈತರ ಆತ್ಮಹತ್ಯೆಗೆ ಕಾರಣಗಳು.

೧ ಕೃಷಿಯ ಉತ್ಪಾದನಾ  ವೆಚ್ಚದಲ್ಲಿ ಏರಿಕೆಯಾಗಿದೆ.

ಬೀಜಗಳು ಮತ್ತು ರಸಗೊಬ್ಬರಗಳು ಮತ್ತು ಕೀಟನಾಶಕಗಳಂತಹ ರಾಸಾಯನಿಕಗಳ ಬೆಲೆಗಳು ಹೆಚ್ಚಾಗಿವೆ ಕೃಷಿ ಉಪಕರಣಗಳ ವೆಚ್ಚ - ಟ್ರಾಕ್ಟರ್ಗಳು, ಪಂಪ್ಗಳು ಮುಂತಾದ ಕೃಷಿ ಉಪಕರಣಗಳ  ಬೆಲೆಗಳು ಏರಿವೆ.ಕಾರ್ಮಿಕ ವೆಚ್ಚಗಳು  ಪ್ರಾಣಿಗಳು ಮತ್ತು ಕಾರ್ಮಿಕರನ್ನು ನೇಮಿಸಿಕೊಳ್ಳುವುದು ಸಹ ಹೆಚ್ಚು ದುಬಾರಿಯಾಗುತ್ತಿದೆ.  ಇದರ ಜೊತೆಯಲ್ಲಿ ಇತ್ತೀಚಿನ ದಿನಗಳಲ್ಲಿ ಡೀಸೆಲ್ ಬೆಲೆ ಗಗನಮುಖಿಯಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

೨ ಸಾಲದ ತೊಂದರೆ .
"ಭಾರತದ ರೈತ ಸಾಲದಲ್ಲಿ ಹುಟ್ಟಿ ಸಾಲದಲ್ಲಿ ಬೆಳೆದು ಸಾಲದಲ್ಲೇ ಸಾಯುತ್ತಾನೆ " ಎಂಬ ಒ.ಹೆಚ್ ಕೆ ಸ್ಟೇಟ್ಸ್ ರವರ ಮಾತು ಇಂದಿಗೂ ನಿಜವಾಗಿದೆಯೇನು ಎನಿಸದಿರದು.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ, 2015 ರಲ್ಲಿ  3000 ರೈತರ ಆತ್ಮಹತ್ಯೆಗಳಲ್ಲಿ 2474  ಸಾಲವನ್ನು ತೀರಸಲಾರದೆ ಮಾಡಿಕೊಂಡ ಪ್ರಕರಣಗಳು ಎಂದು ತಿಳಿದು ಬಂದಿದೆ.  ಬ್ಯೂರೋದ ದತ್ತಾಂಶವು ರೈತರ ಆತ್ಮಹತ್ಯೆ ಮತ್ತು ಸಾಲದ ನಡುವಿನ ಬಲವಾದ ಸಂಬಂಧವನ್ನು ತೋರಿಸುತ್ತದೆ.  ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಈ ಎರಡು ರಾಜ್ಯಗಳು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮಾಣವೂ ಹೆಚ್ಚು.

೩ ನೇರ ಮಾರುಕಟ್ಟೆ ಏಕೀಕರಣದ ಕೊರತೆ .
ಇ-ನ್ಯಾಷನಲ್ ಅಗ್ರಿಕಲ್ಚರಲ್ ಮಾರ್ಕೆಟ್ (eNAM) ನಂತಹ ನವೀನ ಸರ್ಕಾರಿ ಯೋಜನೆಗಳ ಹೊರತಾಗಿಯೂ, ಈ ವಲಯದಲ್ಲಿ ಮಧ್ಯವರ್ತಿಗಳನ್ನು ತೆಗೆದುಹಾಕುವುದು ಹೆಚ್ಚು ಕಷ್ಟಕರವಾಗಿದೆ. ಇದು ರೈತರ ಶೋಷಣೆ ಮುಂದುವರೆಯುವಂತೆ ಮಾಡಿದೆ.

೪ ಅರಿವಿನ ಕೊರತೆ 
ರೈತರಿಗೆ ಸಹಾಯ ಮಾಡುವ ಉದ್ದೇಶದಿಂದ ಯೋಜನೆಗಳು ಮತ್ತು ನೀತಿಗಳಿದ್ದರೂ, ಭಾರತದಲ್ಲಿ ಅನಕ್ಷರತೆ ಮತ್ತು ಡಿಜಿಟಲ್ ಸಾಕ್ಷರತೆಯ ಕೊರತೆಯಿಂದ   ಬಹಳಷ್ಟು ರೈತರನ್ನು, ಈ ಯೋಜನೆಗಳು ತಲುಪುವುದಿಲ್ಲ  ಅವರು ಸರ್ಕಾರದಿಂದ ನೀಡಲಾಗುವ ಸವಲತ್ತುಗಳನ್ನು ಹೇಗೆ ಪಡೆಯುವುದು ಎಂದು ತಿಳಿಯದೆ ಬಳಲುತ್ತಿದ್ದಾರೆ.

೫ ನೀರಿನ ಬಿಕ್ಕಟ್ಟು 
ಆತ್ಮಹತ್ಯೆಗಳ ಅಂಕಿಅಂಶಗಳನ್ನು ಗಮನಿಸಿದರೆ ಮಹಾರಾಷ್ಟ್ರ ಮತ್ತು ಕರ್ನಾಟಕದಂತಹ ನೀರಿನ ಕೊರತೆಯ ಪ್ರದೇಶಗಳಲ್ಲಿ ಆತ್ಮಹತ್ಯೆಗಳ ಕೇಂದ್ರೀಕರಣವಿದೆ ಎಂದು ತೋರಿಸುತ್ತದೆ.  ಮುಂಗಾರು ವಿಫಲವಾಗುತ್ತಿರುವುದು ರೈತರ ಮೊಗದಲ್ಲಿ ಮಂದಹಾಸ ಮರೆಯಾಗಿಸಿದೆ. ಅಂತಾರಾಜ್ಯ ಜಲವಿವಾದಗಳು ರೈತರನ್ನು ಅನಗತ್ಯ ಸಂಕಷ್ಟಕ್ಕೆ ದೂಡುತ್ತಿವೆ.  ನೀರಿನ ಕೊರತೆಯು ಉತ್ಪಾದನೆಯನ್ನು ಬೇಡಿಕೆಗೆ ತಕ್ಕಂತೆ ಪೂರೈಸುವಲ್ಲಿ ವಿಫಲವಾಗಿದೆ.

೬ ಹವಾಮಾನ ಬದಲಾವಣೆ.  ಹವಾಮಾನ ಬದಲಾವಣೆಯು ರೈತರು ಮತ್ತು ಕೃಷಿಯ ಮೇಲೂ ಪರಿಣಾಮ ಬೀರುತ್ತಿದೆ.  ಅನಿಶ್ಚಿತ ಮಾನ್ಸೂನ್ ವ್ಯವಸ್ಥೆಗಳು, ಹಠಾತ್ ಪ್ರವಾಹ ಇತ್ಯಾದಿಗಳು ಬೆಳೆ ನಷ್ಟಕ್ಕೆ ಕಾರಣವಾಗಿವೆ.  ಅಕಾಲಿಕ  ಮಾನ್ಸೂನ್ ನಿಯಮಿತವಾಗಿ ಉತ್ಪಾದನೆಯ ಕೊರತೆಯನ್ನು ಉಂಟುಮಾಡುತ್ತದೆ.

ರೈತರ ಆತ್ಮಹತ್ಯೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳು .

ಸರ್ಕಾರಗಳ ಆರ್ಥಿಕ ನೀತಿಗಳು ಗ್ರಾಹಕರ ಪರವಾಗಿದ್ದು, ಬೆಲೆ ಏರಿಕೆಯ ಸಂದರ್ಭದಲ್ಲಿ ರೈತರ ಉತ್ಪನ್ನವನ್ನು ಅಗತ್ಯ ವಸ್ತುಗಳ ಪಟ್ಟಿಯ ಅಡಿಯಲ್ಲಿ ತರುವುದು ಮತ್ತು ಬೆಲೆ ನಿಯಂತ್ರಣಕ್ಕೆ ತರಲು  ರೈತರ ಉತ್ಪನ್ನಗಳ ಬೆಲೆ ಕಡಿತ ಮಾಡುವರು ಇದರ ಬದಲಾಗಿ ರೈತರಿಗೆ ನಷ್ಟ ಆಗದ ಹಾಗೆ ಬೆಲೆ ನೀತಿ ರೂಪಿಸಬೇಕಿದೆ.
ಕೆಲವೊಮ್ಮೆ  ಸರ್ಕಾರಗಳು ಸಾಲ ಮನ್ನಾ ಮಾಡಿವೆ.ಸಾಲ ಮನ್ನಾಕ್ಕಿಂತ ಹೆಚ್ಚಾಗಿ, ಪ್ರಾಥಮಿಕ ವಲಯವನ್ನು ಸುಧಾರಿಸಲು ಮರುಹೂಡಿಕೆ ಮತ್ತು ಪುನರ್ರಚನಾ ಕ್ರಮಗಳತ್ತ ಸರ್ಕಾರ ಗಮನಹರಿಸಬೇಕು.
ಪರಿಣಾಮಕಾರಿ ನೀರು ನಿರ್ವಹಣಾ ತಂತ್ರಗಳನ್ನು ಬಳಸುವುದು.  ಬೆಳೆಹಾನಿ ತಡೆಗಟ್ಟಲು ಸರಕಾರ ಗಮನಹರಿಸಬೇಕು.ಪ್ರತಿ ರೈತರಿಗೆ, ವಿಶೇಷವಾಗಿ ಬಡ ರೈತರಿಗೆ ಸಾಂಸ್ಥಿಕ ಹಣಕಾಸು ಲಭ್ಯವಾಗುವಂತೆ ಮಾಡುವುದು.  ಈ ನಿಟ್ಟಿನಲ್ಲಿ  ಭ್ರಷ್ಟಾಚಾರ ಕಡಿಮೆ ಮಾಡಬೇಕು.
ಕೃಷಿಯ ಆರ್ಥಿಕ ವಿಧಾನಗಳ ಬಗ್ಗೆ ರೈತರಿಗೆ ಪರಿಣಾಮಕಾರಿ ಮತ್ತು ಸಮಯೋಚಿತ ಸಮಾಲೋಚನೆ ನೀಡಬೇಕು.ಕೃಷಿಯಲ್ಲಿನ ತಾಂತ್ರಿಕ ಪ್ರಗತಿ ಬಡ ರೈತರಿಗೂ ದೊರೆಯಬೇಕು.ಸರ್ಕಾರವು ಸಣ್ಣ ರೈತರ ಜಮೀನುಗಳನ್ನು ಒಟ್ಟುಗೂಡಿಸಿ ಆರ್ಥಿಕವಾಗಿ ಕೃಷಿಯೋಗ್ಯ ಭೂಮಿಯಾಗಿ ಪರಿವರ್ತಿಸಲು ಪ್ರಯತ್ನಿಸಬೇಕು. ಸಣ್ಣ ರೈತರಿಗೆ ಪರ್ಯಾಯ ಆದಾಯದ ಮೂಲಗಳ ಬಗ್ಗೆ ಸಲಹೆ ನೀಡಬೇಕು ಮತ್ತು ಅದಕ್ಕಾಗಿ ತರಬೇತಿ ನೀಡಬೇಕು.
  ಸರ್ಕಾರವು ರೈತರೊಂದಿಗೆ  ಪಾಲುದಾರರೊಂದಿಗೆ ಸಮಾಲೋಚಿಸಿ, ರೈತರ ಸಾಲವನ್ನು ಕಡಿಮೆ ಮಾಡಲು, ಬೆಳೆ ಇಳುವರಿಯನ್ನು ಸುಧಾರಿಸಲು, ನೀರಿನ ಸಂಪನ್ಮೂಲಗಳನ್ನು ಸಮರ್ಥವಾಗಿ ನಿರ್ವಹಿಸಲು ಮತ್ತು ರೈತರಿಗೆ ಪರ್ಯಾಯ ಆದಾಯದ ಮೂಲಗಳನ್ನು ಮಾಡಲು ಪರಿಣಾಮಕಾರಿ ಮತ್ತು ದೀರ್ಘಕಾಲೀನ ಕ್ರಮಗಳನ್ನು ಕೈಗೊಳ್ಳಬೇಕಿದೆ.

ಉಪಸಂಹಾರ.

ನಮ್ಮ ದೇಶದ ನೇಗಿಲಯೋಗಿಯು ಇಂದು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸಲು ಸರ್ಕಾರಗಳು ಪ್ರಾಮಾಣಿಕ ಪ್ರಯತ್ನ ಮಾಡಿದರೆ, ಸಮುದಾಯದ ಸಕಾಲಿಕ ಬೆಂಬಲ ದೊರತರೆ, ಅನ್ನದಾತ ಎದುರಿಸುವ ಬಹುತೇಕ ಸಮಸ್ಯೆಗಳು ದೂರಾಗಿ ಅವರು ಎಲ್ಲರಂತೆ ಗೌರವಯುತವಾದ ಜೀವನ ನಡೆಸುವುದರಲ್ಲಿ ಸಂದೇಹವಿಲ್ಲ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ. ತುಮಕೂರು
9900925529


04 November 2021

ಎರಡು ಲಕ್ಷ..! ಮತ್ತೂ ಓದುಗರು...!


 


ಎರಡು ಲಕ್ಷ.....! ಮತ್ತೂ ಓದುಗರು!

ಮೊದಲಿಗೆ ನನ್ನ ಎಲ್ಲಾ ಓದುಗ ಬಂಧುಗಳಿಗೆ ಇದೋ ನನ್ನ ನಮನಗಳು .

ಇಂದು ದೀಪಾವಳಿಯ ದೀಪಗಳ ಜೊತೆಗೆ 200000 ಓದುಗರ ಸಂಭ್ರಮದ ಪಟಾಕಿ ನನ್ನ ಮನದಲ್ಲಿ ಸಿಡಿಯುತ್ತಿದೆ.ಇನ್ನೇನು ಬೇಕು? ಈ ಹಬ್ಬ ನನ್ನ ಜೀವನದಲ್ಲಿ ಮರೆಯಲಾಗದ ಹಬ್ಬ.

2017 ನೇ ಇಸವಿಯಲ್ಲಿ ಯೂಟ್ಯೂಬ್ ‌ನೋಡಿಕೊಂಡು ಏಕಲವ್ಯ ನಂತೆ ಆರಂಭಮಾಡಿದ ಶ್ರೀದೇವಿತನಯ.ಬ್ಲಾಗ್ಸ್ಪಾಟ್.ಕಾಮ್ sridevitanya.blogspot.com
ಇಂದು ಪ್ರಪಂಚದಲ್ಲಿ ಎರಡು ಲಕ್ಷ ಓದುಗರ ತಲುಪಿರುವುದು ಬಹಳ ಸಂತಸ ತಂದಿದೆ. ಈ ಸಂತಸಕ್ಕೆ ಕಾರಣ ನೀವು ಮತ್ತು ನೀವು .
ಮತ್ತೊಮ್ಮೆ ನಿಮ್ಮೆಲ್ಲರಿಗೂ ಸಾಷ್ಟಾಂಗ ನಮಸ್ಕಾರಗಳು .

03 November 2021

ನನ್ನ ಬಾಲ್ಯದ ತಿಂಡಿ ತಿನಿಸುಗಳು.


 


 



ಬಾಲ್ಯದ. ತಿಂಡಿ ತಿನಿಸುಗಳು.. 


ಬಾಲ್ಯಕ್ಕೂ ತಿಂಡಿ ತಿನಿಸುಗಳಿಗೂ ಅವಿನಾಭಾವ ಸಂಬಂಧವಿದೆ. ನಾನು ಬಾಲ್ಯದಲ್ಲಿ ಅಂಗಡಿಗಳಲ್ಲಿ ತಿಂಡಿ ತಿನಿಸುಗಳನ್ನು ತಿಂದಿದ್ದು ಕಡಿಮೆ. ಪರಿಸರದಲ್ಲಿ ಹೊಲದಲ್ಲಿ ,ತೋಟದಲ್ಲಿ ಬೆಳೆಯುವ ತಿನಿಸುಗಳನ್ನು ತಿಂದದ್ದೇ ಹೆಚ್ಚು.


ನಮ್ಮೂರಿನ ಅಂದಿನ ಎರಡು ಅಂಗಡಿಗಳಾದ  ಐಯ್ಯನೋರ ಅಂಗಡಿ ಮತ್ತು ಗುಂಡಜ್ಜನವರ ಅಂಗಡಿಗಳಲ್ಲಿ ಆಗಾಗ್ಗೆ ಕೆಲವು ತಿನಿಸುಗಳನ್ನು ಪಡೆದು ತಿನ್ನುತ್ತಿದ್ದೆ ಅಮ್ಮನಿಂದ ಕಾಡಿ ಬೇಡಿ ಹಣ ಪಡೆದು ಹತ್ತು ಪೈಸೆ ಗಳನ್ನು ಪಡೆದು ಹತ್ತು ಸೊಂಡಿಗೆ (ಬೋಟಿ) ಪಡೆದು ಕೈಯ ಹತ್ತು ಬೆರಳುಗಳಿಗೆ ಸಿಕ್ಕಿಸಿಕೊಂಡು ಒಂದೊಂದೇ ಬೆರಳ ಕಚ್ಚಿ ತಿನ್ನುತ್ತಾ ಆನಂದಿಸುತ್ತಿದ್ದೆ. ಕೆಲವೊಮ್ಮೆ ನಿಂಬೇ ಹುಳಿ ಪೆಪ್ಪರ್ ಮೆಂಟ್ ಚಿಕ್ಕ ಪೆಪ್ಪರ್ ಮೆಂಟ್ ಗಳನ್ನು ಕೊಂಡು ಜೇಬಿನಲ್ಲಿ ಹಾಕಿಕೊಂಡು ಒಂದೊಂದೇ ತಿನ್ನುತ್ತಿದ್ದೆ. ಇನ್ನೂ ಕೆಲವೊಮ್ಮೆ ಗಿರಗಿಟ್ಲೇ ಕೊಂಡು ಅದರೊಂದಿಗೆ ಇರುವ ದಾರವನ್ನು ನನ್ನ ಎರಡೂ ಕೈಗಳ ಬೆರಳಿಗೆ ಸಿಕ್ಕಿಸಿಕೊಂಡು ಗಿರಗಿಟ್ಲೇ ಆಡಿಸಿ ದಾರ ಕಿತ್ತು ಬಂದಾಗ ಗಿರಗಿಟ್ಲೇ ನೇರವಾಗಿ ಬಾಯಿಗೆ ಸೇರುತ್ತಿತ್ತು. ಶುಂಠಿ ಪೇಪರ್ ನಂತಹ ರುಚಿ ಇರುವ ಗಿರಗಿಟ್ಲೇ ಒಂಥರಾ ರುಚಿ ಈಗಲೂ ನೆನಪಲ್ಲಿದೆ.


  ನಾನು ನನ್ನ ಬಾಲ್ಯದಲ್ಲಿ ಅಂಗಡಿಯ ತಿನಿಸುಗಳಿಗಿಂತ ಪರಿಸರದಲ್ಲಿ ಬೆಳೆದ ತಿನಿಸು ತಿಂದದ್ದೇ ಹೆಚ್ಚು. ಮಳೆಗಾಲದಲ್ಲಿ ನಮ್ಮೂರ ಸುತ್ತಲೂ ಹಸಿರೋ ಹಸಿರು ರಾಗಿ,ಜೋಳ, ನವಣೆ ಸಜ್ಜೆ ಹೊಲಗಳು ನಮ್ಮ ಮನೆಯಿಂದ ನೂರಾರು ಹೆಜ್ಜೆಗಳನ್ನು ದಾಟಿದರೆ ಸಿಗುತ್ತಿದ್ದವು .ಈ ಹೊಲಗಳಲ್ಲಿ ಹೆಗಲಿಗೊಂದು ಚೀಲ ತಗುಲಾಕಿಕೊಂಡು ನಾನು ಮತ್ತು ನಮ್ಮ ಪಕ್ಕದ ಮನೆಯ ಸಣ್ಣಪ್ಪನವರ ಮಗ ಸೀನ ಗೊರ್ಜಿ ಸೊಪ್ಪ, ಕಿರ್ಕ್ಸಾಲೆ ಸೊಪ್ಪು, ಕೋಲನ್ನೇ ಸೊಪ್ಪು, ಪುಂಡಿ ಸೊಪ್ಪು, ಇನ್ನೂ  ಯಾವಾವುದೋ ಬೆರಕೆ  ಸೊಪ್ಪು ತಂದು ನನ್ನ ಅಮ್ಮನಿಗೆ ಕೊಟ್ಟರೆ ಅಮ್ಮ ಸಂಜೆಗೆ ಕುಕ್ಸೆಪ್ಪು ಎಂಬ ಸಾರು ಮಾಡುತ್ತಿದ್ದರು ಅದರ ಜೊತೆಗೆ ಒಂದು ಬಿಸಿಮುದ್ದೆ ಊಟ ಮಾಡುವ ಸ್ವಾದವನ್ನು ಸವಿದೇ ಅನುಭವಿಸುತ್ತಿದ್ದೆ.


ರಾಗಿಯು ಬೆಳೆಯ ತೆನೆ  ಸ್ವಲ್ಪ ಬೆಳಸೆ ಆದ ತಕ್ಷಣ ಯಾರ ಹೊಲವಾದರೂ ಸರಿ ನುಗ್ಗಿ  ಎಂಟರಿಂದ ಹತ್ತು ರಾಗಿ ತೆನೆ ಕಿತ್ತು ತಂದು ಅದರಿಂದ ಕಾಳು ಬೇರ್ಪಡಿಸಿ, ಅದಕ್ಕೆ ಸ್ವಲ್ಪ ಉಪ್ಪು, ಹಸಿಮೆಣಸಿನಕಾಯಿ, ಬೆಳ್ಳುಳ್ಳಿ ಸೇರಿಸಿ, ಟವಲ್ ನಲ್ಲಿ ಹಾಕಿ ಗಂಟುಕಟ್ಟಿ  ಮಡಿಚಿ ಕೈ ಮುಷ್ಟಿಯಲ್ಲಿ ಚೆನ್ನಾಗಿ ಗುದ್ದಿ ಬಿಚ್ಚಿ ನೋಡಿದರೆ " ಗುದ್ ಬೆಳಸೆ" ರೆಡಿ .ಗೆಳೆಯರೆಲ್ಲ ಸೇರಿ ತಿನ್ನುತ್ತಾ ಕುಳಿತರೆ ಅದರ ಮಜಾನೆ ಬೇರೆ.


ರಜಾ ದಿನಗಳಲ್ಲಿ ದನ ಕಾಯಲು ಹೋಗುತ್ತಿದ್ದ ನಾವು ದನ ಮೇಯಲು ಬಿಟ್ಟು ಬಿಳಿಜೋಳದ  ತೆನೆಗಳನ್ನು ಮುರಿದು ತೆನೆಯಿಂದ  ಜೋಳದ ಕಾಳು ಬೇರ್ಪಡಿಸಿ ಅಲ್ಲೆ ಮೂರು ಕಲ್ಲಿನ  ಗುಂಡುಗಳಿಂದ  ಒಲೆ  ಮಾಡಿ ಒಡೆದ ಮಡಿಕೆಯಲ್ಲಿ ಸ್ವಲ್ಪ ನೀರು ಹಾಕಿ ಅದರಲ್ಲಿ ಬಿಡಿಸಿದ ಹಸಿ ಜೋಳದ ಕಾಳು ಹಾಕಿ ಅಲ್ಲೇ ಸಿಗುವ ಸೌದೆಗಳಿಂದ ಬೇಯಿಸಿದಾಗ " ಜೋಳದ ಗುಗ್ಗುರಿ " ಸಿದ್ದವಾಗುತ್ತಿತ್ತು. ನಮ್ಮ ದನಗಳು ಹುಲ್ಲನ್ನು ಮೇಯುತ್ತಿದ್ದರೆ ನಾವು ಗುಗ್ಗರಿ ತಿನ್ನುತ್ತಾ ಅವುಗಳಿಗೆ ಕಂಪನಿ ನೀಡುತ್ತಿದ್ದೆವು.

ಇದೇ ತರಹ ಅವರೇ ಕಾಯಿ ಸೀಸನ್ ನಲ್ಲಿ ಹೊಲದಲ್ಲೇ ಹಸಿ ಅವರೆ ಕಾಯಿ ಬೇಸಿ ತಿಂದು ,ರಾತ್ರಿ ಮಲಗಿದಾಗ ಅಪಾನ ವಾಯು ಹೆಚ್ಚಾದಾಗ ಅಮ್ಮ " ಯಾರ್ ಹೊಲದ್ದು ಅವರೇ ಕಾಯಿನೋ ಇದು ಗಬ್ಬು ನಾತ"  ಅಂದರೂ ಕೇಳಿದರೂ ಕೇಳದಂತೆ ದುಪ್ಪಡಿ ಗುಬಾರಾಕಿಕೊಂಡು ಮಲಗುತ್ತಿದ್ದೆ.


ಕೊಟಗೇಣಿಯಿಂದ ಉಪ್ಪೇರಿಗೇನಹಳ್ಳಿಗೆ ಕಾಲು ದಾರಿಯಲ್ಲಿ ನಡೆದು ಶಾಲೆಗೆ ಹೋಗುವಾಗ ನಾನು ನನ್ನ ಗೆಳೆಯರು ದಿನವೂ ಗೊಲ್ಲರ ಹಳ್ಳಿಯ ಅಣ್ಣಪ್ಪನವರ ಹೊಲದ ಸಜ್ಜೆ ತೆನೆ ಗಳನ್ನು ತಿಂದು ಅರ್ಧ ಹೊಲದ ತೆನೆ ತಿಂದು ಮುಗಿಸಿದ್ದೆವು .ಹೊಲದ ಮಾಲಿಕ ಸಿಟ್ಟಿನಿಂದ ನಮ್ಮ ರಾಜಪ್ಪ ಮಾಸ್ಟರ್ ಗೆ ಹೇಳಿ ಬೆತ್ತದ ರುಚಿ ತೋರಿಸಿದ್ದ.


ಇನ್ನೂ ನನಗೆ ಪ್ರಿಯವಾದ ಮತ್ತೊಂದು ವಸ್ತು ಕಡ್ಲೆಕಾಯಿ.ನಮ್ಮೂರಲ್ಲಿ ಕಡ್ಲೇ ಕಾಯಿ ಬೆಳೆಯುತ್ತಿರಲಿಲ್ಲ.ನಮ್ಮ ಮಾವನವರ ಊರಾದ ಯರಬಳ್ಳಿಗೆ ಹೋದಾಗ ನನಗೆ ಕಡ್ಲೇಕಾಯಿ ಸುಗ್ಗಿ .ನಮಗೆ ಬೇಸಿಗೆ ರಜಾ ಬಿಡುವುದು ಮತ್ತು ಕಡಲೇಕಾಯಿ ಸೀಸನ್ ಒಂದೇ ಬಾರಿಗೆ ಬರುತ್ತಿದ್ದುದು ನನಗೆ ಎಲ್ಲಿಲ್ಲದ ಸಂತಸ.

ಯರಬಳ್ಳಿಗೆ ಹೋದ ತಕ್ಷಣ ನಮ್ಮ ಕರಿಯಪ್ಪ ಮಾವನ ಜೊತೆ ಕಡ್ಲೇಕಾಯಿ ಹೊಲ ಕಾಯಲು ರಾತ್ರಿ ಹೊರಡುತ್ತಿದ್ದೆ. ಹೊಲ ತಲುಪಿದ ಮೇಲೆ ನಮಗೆ ಎಷ್ಟು ಬೇಕೋ ಅಷ್ಟು ಕಡ್ಲೇಗಿಡ ಕಿತ್ತು ಅಲ್ಲೇ ಇರುವ ಸೌದೆ ಒಟ್ಟುಗೂಡಿಸಿ ಬೆಂಕಿ ಹಚ್ಚಿ ಸುಟ್ಟು ತಿನ್ನಲು ಶುರು ಮಾಡುತ್ತಿದ್ದೆವು

ಕೆಲವೊಮ್ಮೆ ಕಡ್ಲೇಕಾಯಿ ಜೊತೆಗೆ ಉಪ್ಪು ,ಹಸಿಮೆಣಸಿನ ಕಾಯಿ ಸೇರಿಸಿ , ಮತ್ತೆ ಕೆಲವು ಸಲ ಬೆಲ್ಲ ಸೇರಿಸಿ ಸುಟ್ಟ ಕಡ್ಲೇಕಾಯಿ ಸ್ವಾದ ಸವಿದ ನೆನಪು ಈಗಲೂ ಮರುಕಳಿಸುತ್ತಿದೆ.

ಈ ವರ್ಷ 

ದಸರಾ ಹಬ್ಬಕ್ಕೆ ಯರಬಳ್ಳಿಗೆ ಹೋದಾಗ ಕೆಲವೇ ಕೆಲವು ಕಡ್ಲೇಗಿಡದ ಹೊಲ ನೋಡಿದಾಗ ಅಂದು ನಾವು ಕಡ್ಲೇಗಿಡದ ಕಾಯಿ ಸುಟ್ಟು ತಿಂದ ನೆನಪಾಯಿತು.



ಸಿಹಿಜೀವಿ

ಸಿ ಜಿ ವೆಂಕಟೇಶ್ವರ




ಬೆಳಕಾಗಬೇಕು.ಹನಿಗವನ


 ಸರ್ವರಿಗೂ ನರಕ ಚತುರ್ದಶಿ ಮತ್ತು ದೀಪಾವಳಿ ಹಬ್ಬದ ಶುಭಾಶಯಗಳು🪔💐🌷🪔💐🌷


*ಬೆಳಕಾಗಬೇಕು*


ಈ ಹಿರಿಯ ಜೀವಗಳು

ಎಷ್ಟೋ ಜೀವಿಗಳಿಗೆ 

ತಮ್ಮ ಜೀವನದಲ್ಲಿ ಎಣ್ಣೆ 

ಸುರಿದು ಬೆಳಕಾಗಿದ್ದರು .

ಈ ಇಳಿ ವಯಸ್ಸಿನಲ್ಲಿ 

ದೀಪವನ್ನು ನೀಡುತ್ತಿದ್ದಾರೆ

ಬತ್ತಿ ಮತ್ತು ಎಣ್ಣೆಯನ್ನು ನಾವೇ 

ಹಾಕಿಕೊಳ್ಳಬೇಕು ಇಂತಹ ಇಳಿವಯಸ್ಸಿನವರಿಗೆ

ಬೆಳಕಾಗಬೇಕು. 


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

02 November 2021

ನನ್ನ ಬಾಲ್ಯದ ಮೊದಲ ಪ್ರವಾಸ. ಲೇಖನ


ನಾನಾಗ  ಉಪ್ಪರಿಗೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದೆ. ನಮ್ಮ ಮುಖ್ಯ ಶಿಕ್ಷಕರಾದ ರಾಜಪ್ಪ ಸರ್ ರವರು ಕಚ್ಚೆ ಪಂಚೆ ಹಾಕಿ ಬಲಗೈಯಲ್ಲಿ ಪಂಚೆಯ ಸೆರಗು ಮಡಿಚಿದರೆಂದರೆ ಯಾರಿಗೋ ಒದೆ ಬೀಳುವುದು ಖಚಿತವಾಗಿತ್ತು. ಅವರು ಹಾಗೆ ಒದೆ ಕೊಟ್ಟು ಕಲಿಸಿದ್ದಕ್ಕೆ ನಾನು ಇಂದು ಇಂಗ್ಲಿಷ್ ಅಲ್ಪ ಸ್ವಲ್ಪ ಕಲಿತು ಮಕ್ಕಳಿಗೆ ಕಲಿಸುತ್ತಿರುವುದು.


ಅಂದು ರಾಜಪ್ಪ ಮಾಸ್ಟರ್ ಬಲಗೈಯಲ್ಲಿ ಪಂಚೆಯ ಸೆರಗು ಮಡಿಚಿದರು. ನಾವು ಮನದಲ್ಲೇ ಇವತ್ತು ಯಾವಾನೋ  ಹುಡುಗನಿಗೆ ಗ್ರಾಚಾರ ಇದೆ ಎಂದು ತುಟಿಕ್ ಪಿಟಿಕ್ ಅನ್ನದೇ ಕುಳಿತಿದ್ದೆವು . 

"ಏ ನಿಮಗೆ ಸ್ಕಾಲಾರ್ಷಿಪ್ ಬಂದೈತೆ ಕಣ್ರಲಾ, ನಾಳೆ ನಿಮ್ಮ ಅಪ್ಪ ಅಮ್ಮನ ಕರ್ಕಂಬಂದು ಸೈನ್ ಮಾಡುಸ್ ಬೇಕು " ಅಂದರು .ನಾವು ಹೊಸ ಇಂಗ್ಲಿಷ್ ಪದ ಕೇಳಿ ಪಿಳಿ ಪಿಳಿ ಕಣ್ ಬಿಡುವುದು ನೋಡಿ ಅರ್ಥ ಮಾಡಿಕೊಂಡ ರಾಜಪ್ಪ ಸರ್ " ಏ ಸರ್ಕಾರದಿಂದ ನಿಮಿಗೆ ಓದಾಕೆ ದುಡ್ ಕೊಟ್ಟಾದಾರೆ ಅದೇ ಸ್ಕಾಲರ್ಶಿಪ್  , ನಾಳೆ ನಿಮ್ ಅಪ್ಪ ಅಮ್ನನ ಕರ್ಕಂಬರ್ರಿ " ಎಂದು ಗಡುಸಾದ ಧನಿಯಲ್ಲಿ ಹೇಳಿದರು.


ಮಾರನೇ ದಿನ ನನ್ನ ಅಮ್ಮ ಶಾಲೆಗೆ  ಬಂದು ರಿಜಿಸ್ಟರ್ ಗೆ ಸೈನ್ ಹಾಕಿದ ಮೇಲೆ " ನೋಡಮ್ಮ ಶ್ರೀದೇವಮ್ಮ ನಿಮ್ ಮಗುಂಗೆ ಎಪ್ಪತ್ತು ರುಪಾಯಿ ಸ್ಕಾಲರ್ಶಿಪ್ ಬಂದೈತೆ .ಈಗ ನಾನು ನಿಮಿಗೆ ದುಡ್ ಕೊಡಲ್ಲ , ನಿಮ್ ಹುಡ್ಗುನ್ನ ಮೈಸೂರು, ತಲಕಾಡು, ಶಿವನ ಸಮುದ್ರ ದ ಕಡೆ ಮೂರ್ ದಿನ ಟೂರ್ ಕರ್ಕಂಡು ಹೋಗ್ತೀವಿ" ಎಂದರು ನಮ್ಮ ಮುಖ್ಯ ಶಿಕ್ಷಕರು.

" ಅಲ್ಲಾ ಸಾ , ನಮ್ ಹುಡ್ಗ ಅಷ್ಟು ದೂರಾ ಯಾವಾಗ್ಲೂ ಹೋಗಿಲ್ಲ,......." ಅಂದು ಏನೋ ಹೇಳಲು ಮುಂದಾದರು ನಮ್ಮ ಅಮ್ಮ. ಮಧ್ಯದಲ್ಲಿ  ತಡೆದು "ಅದೆಲ್ಲಾ ಯೋಚ್ನೆ ಮಾಡ್ಬೇಡ ಕಣಮ್ಮ ನಿಮ್ ಹುಡ್ಗನ ಜವಾಬ್ದಾರಿ ನಮ್ದು ಸುಮ್ಮನೆ ಕಳ್ಸು" ಅಂದರು ರಾಜಪ್ಪ ಮಾಸ್ಟರ್. ಅಮ್ಮ ಸುಮ್ಮನಾದರು ನನ್ನ ಮೊಗದಲ್ಲಿ ಮಂದಹಾಸ ಆಗಲೇ ಮೈಸೂರು ಹೇಗಿರಬಹುದೆಂದು ಕಲ್ಪನಾ ಲೋಕಕ್ಕೆ ಜಾರಿದ್ದೆ.


ಪ್ರಾಥಮಿಕ ಶಾಲಾ ಶಿಕ್ಷಕರಾದ ತಿಪ್ಪೇಶಪ್ಪ ಮಾಸ್ಟರ್ ಜೊತೆಯಲ್ಲಿ ನಾಲ್ಕನೇ ತರಗತಿಯಲ್ಲಿ ಒಂದು ದಿನದ ಪ್ರವಾಸ ಹೋದ ನಂತರ ಹೊರಡುತ್ತಿರುವ ಮೂರು ದಿನದ ಪ್ರವಾಸಕ್ಕೆ ನನ್ನಮ್ಮ ಮೂರು ದಿನದಿಂದ ಸಿದ್ದತೆ ಮಾಡಿದರು. ಮಂಡಕ್ಕಿ ಉರಿದು ಕೊಟ್ಟರು, ಕಡ್ಲೇಕಾಯಿ ಉರಿದು ಕೊಟ್ಟರು. ಚಿನಕುರುಳಿ ಮಾಡಿದ್ದರು. ನಮ್ಮ ಕೇರಿಯ ಎಲ್ಲರಿಗೂ ನನ್ನ ಮಗ ಟೂರ್ ಹೊಗ್ತಾನೆ ಎಂದು ಸಂತಸ ಮತ್ತು ಆತಂಕದಿಂದ  ಹೇಳಿಕೊಂಡು ಬಂದಿದ್ದರು.


ಟೂರ್ ಹೋಗುವ ದಿನ ಬಂದೇ ಬಿಟ್ಟಿತು. ಅಂದು ಸಂಜೆ  ನಾಲ್ಕು ಗಂಟೆಗೆ  ಸ್ನಾನ ಮಾಡಿ ಸಿದ್ಧವಾಗಿ ನಮ್ಮ ಊರಿನಿಂದ ಉಪ್ಪರಿಗೇನಹಳ್ಳಿಗೆ ಬಂದು  ನಮ್ಮ ಶಾಲೆಯ ಮುಂದೆ ನಿಂತಿದ್ದ ಕೆಂಪು ಬಣ್ಣದ ಗೌರ್ಮೆಂಟ್ ಬಸ್ ನೋಡಿದೆವು .ಅದು ನಮ್ಮ ಮೊದಲ ಗೌರ್ಮೆಂಟ್ ಬಸ್ ಪ್ರಯಾಣ. ರಾತ್ರಿ ಬಸ್ ಗೆ ಪೂಜೆ ಕೊಲ್ಲಾಪುರದಮ್ಮ ಗುಡಿಯ ಮುಂದೆ ನಿಲ್ಲಿಸಿ ಪೂಜೆ ಮಾಡಿಸಿ ಅಧಿಕೃತವಾಗಿ ಪ್ರವಾಸ ಹೊರಟಾಗ ರಾತ್ರಿ  ಹತ್ತೂವರೆ .ನಮ್ಮಮ್ಮ ಟಾಟಾ ಮಾಡುತ್ತಾ ಹುಸಾರು ಕಣೋ ಎಂದು ಹೇಳುವುದು ಬಸ್ ದೂರ ಹೋದರೂ ಕತ್ತಲಲ್ಲಿ ಅಸ್ಪಷ್ಟವಾಗಿ ಕಾಣುತ್ತಿತ್ತು.


ರಾತ್ರಿ ಹನ್ನೆರಡು ಗಂಟೆಯವರೆಗೂ ಗೌರ್ಮೆಂಟ್ ಬಸ್ ಪ್ರಯಾಣದ ಅನಂದ ಅನುಭವಿಸುತ್ತಾ ಅಂತ್ಯಾಕ್ಷರಿ ಹಾಡುತ್ತಾ ಒಬ್ಬೊಬ್ಬರೇ ನಿದ್ರೆಗೆ ಜಾರಿದ್ದೆವು. ಬೆಳಗಿನ ಜಾವ ಐದೂವರೆಗೆ ನಮ್ಮ ಶಿಕ್ಷಕರು ನಮ್ಮ ಎಬ್ಬಿಸಿದರು. ಬಸ್ ಒಂದು ಹೊಳೆಯ ಬಳಿ ನಿಂತಿರುವುದು ಕಂಡಿತು. ಹೊಳೆಯ ಪಕ್ಕದಲ್ಲಿ ನಮ್ಮ ನಿತ್ಯ ಕರ್ಮ ಮುಗಿಸಿಕೊಂಡು ಹಲ್ಲುಜ್ಜಿ ಮುಖ ತೊಳೆದುಕೊಂಡು ಬಸ್ ನಲ್ಲಿ ಬಂದು ಕುಳಿತೆವು.ಬೆಳಿಗ್ಗೆ ಎಂಟು ಗಂಟೆಗೆ ಬಸ್ ಚಾಮುಂಡಿ ಬೆಟ್ಟ ಹತ್ತುತ್ತಾ ಇದೆ ಎಂದರು ದ್ಯಾಮಪ್ಪ ಮೇಷ್ಟ್ರು. ನಮಗೆ ಬಹಳ ಕುತೂಹಲದಿಂದ ಆ ಕಡೆ ನೋಡುತ್ತ ಮೈಸೂರ ಸೊಬಗ ಸವಿಯಲು ಆರಂಬಿಸಿದೆವು. ಕ್ರಮೇಣ ಬಸ್ ಬೆಟ್ಟದ ಮೇಲೆ ಚಲಿಸಿದಂತೆ ನಾಲ್ಕೈದು ಜನ ನನ್ನ ಸ್ನೇಹಿತರು ವಾಂತಿ ಮಾಡಲು ಶುರು ಮಾಡಿದರು." ಈ ಮುಂಡೆ ಮಕ್ಕಳಿಗೆ ಎಷ್ಟು ಸತಿ ಹೇಳಿದಿನಿ ಟೂರ್ ಗೆ ಬರೊವಾಗ ಸ್ವಲ್ಪ ಆಳ್ತಾಕ್ಕೆ ತಿನ್ರಿ ಅಂತ , ನೋಡ್ರಿ ಈಗ ಎರ್ರಾ ಬಿರ್ರಿ ತಿಂದು ಅಬ್ಕು...ಅಬ್ಕು... ಅಂತ ಕಕ್ಕೆಂಬತಾವೆ " ಎಂದು ಸಿಟ್ಟಿನಿಂದ ಎಲ್ಲರಿಗೂ ಬೈದರು ರಾಜಪ್ಪ ಮಾಸ್ಟರ್.


ಚಾಮುಂಡಿ ಬೆಟ್ಟದ ಮೇಲೆ ಬಸ್ ಇಳಿದು ಚಾಮುಂಡೇಶ್ವರಿ ದರ್ಶನ ಪಡೆದು ದೇವಾಲಯದ ದೊಡ್ಡ ಗೋಪುರವನ್ನು ಬೆರಗುಗಣ್ಣಿನಿಂದ ನೋಡಿ ಕಣ್ಗಳಲ್ಲೇ ಪೋಟೋ ತೆಗೆದುಕೊಂಡೆವು ಯಾಕೆಂದರೆ ಆಗ ನಮ್ಮ ಬಳಿ ಕ್ಯಾಮೆರಾಗಳು ಇರಲಿಲ್ಲ!



ಚಾಮುಂಡೇಶ್ವರಿಯ ದರ್ಶನದ ನಂತರ ತಿಂಡಿ ತಿಂದು ಬೆಟ್ಟ ಇಳಿಯುವಾಗ ಮತ್ತೆ ಕೆಲವರು ವಾಂತಿ ಮಾಡಿದಾಗ ರಾಜಪ್ಪ ಮಾಸ್ಟರ್ ಗುರಾಯಿಸಿದರು. 

ಮೊದಲ ಬಾರಿಗೆ ಜೂಗೆ ನಾವು ಹೊರಟೆವು ವಿಧ ವಿಧದ ಪ್ರಾಣಿ ಪಕ್ಷಿಗಳ ಕಂಡು ಬಹಳ ಸಂತಸ ಪಟ್ಟೆವು. ನಂತರ ಅರಮನೆಯ ವೈಭವ ನೋಡಿದೆವು ಸಂಜೆ ಕನ್ನಂಬಾಡಿ ಕಟ್ಟೆ ಮತ್ತು ಉದ್ಯಾನವನ, ಸಂಗೀತ ಕಾರಂಜಿ ನೋಡಿದೆವು ಅಷ್ಟೊತ್ತಿಗೆ ಧಣಿದಿದ್ದ ನಮಗೆ ಊಟ ಕೊಡಿಸಿ ಒಂದು ಕಲ್ಯಾಣ ಮಂಟಪದಲ್ಲಿ ಮಲಗಲು ನಮ್ಮ ಶಿಕ್ಷಕರು ವ್ಯವಸ್ಥೆ ಮಾಡಿದ್ದರು.


ಬೆಳಿಗ್ಗೆ ಐದಕ್ಕೆ ನಮ್ಮನ್ನು ಎಬ್ಬಿಸಿದ ನಮ್ಮ ಶಿಕ್ಷಕರು ನಮ್ಮನ್ನು ಮುಂದಿನ ದಿನದ ಪ್ರವಾಸಕ್ಕೆ ಅಣಿಗೊಳಿಸಿದರು. ಹೀಗೆ ತಲಕಾಡು, ಶಿವನಸಮುದ್ರ ಮುಂತಾದ ಸ್ಥಳಗಳನ್ನು ನೋಡಿದ ನಾವು ಸುರಕ್ಷಿತವಾಗಿ ಊರಿಗೆ ಬಂದೆವು . 


ಈಗ ಭಾರತದ ಬಹುತೇಕ ಪ್ರದೇಶದಲ್ಲಿ ಪ್ರವಾಸ ಮಾಡುವ ಜೊತೆಗೆ ನೇಪಾಳದ ಪ್ರವಾಸ ಕೂಡಾ ಮಾಡಿರುವೆ .ಸಾವಿರಾರು ರೂಪಾಯಿಗಳ ಖರ್ಚು ಮಾಡಿ ಎಷ್ಟೇ ದಿನಗಳ ಪ್ರವಾಸ ಮಾಡಿದ್ದರೂ ನಮ್ಮ ರಾಜಪ್ಪ ಮಾಸ್ಟರ್ ಎಪ್ಪತ್ತು ರೂಪಾಯಿಗಳಲ್ಲಿ ಮೂರು ದಿನದ ಪ್ರವಾಸ ಕರೆದುಕೊಂಡು ಹೋದ ನೆನಪುಗಳನ್ನು ಮರೆಯಲು ಸಾದ್ಯವಿಲ್ಲ. ಇತ್ತೀಚಿಗೆ ಗೂಳಿಹೊಸಹಳ್ಳಿಗೆ ಹೋದಾಗ ರಾಜಪ್ಪ ಮಾಸ್ಟರ್ ನೋಡಿದಾಗ ಎಲ್ಲಾ ಮತ್ತೆ ನೆನಪಾಯಿತು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು