ಲೇಖನ
*ಸ್ನೇಹಿತರ ಅಕಾಲಿಕ ಸಾವುಗಳು ಕ್ಷಯವಾಗಲಿ,
ಸವಿನೆನಪುಗಳು ಅಕ್ಷಯವಾಗಲಿ*
ಅಕ್ಷಯ ತೃತೀಯ ದಿನ ಭಾರತೀಯರಿಗೆ ಬಹಳ ಪವಿತ್ರ ಮತ್ತು ಉತ್ತಮ ದಿನವೆಂದು ಪರಿಗಣಿತವಾಗಿದೆ, ಇದನ್ನು ಆಸ್ತಿಕನಾದ ನಾನು ಸಹ ನಂಬಿರುವೆ, ಅದಕ್ಕೆ ಪೂರಕವೆಂಬಂತೆ ಈ ವರ್ಷದ ಅಕ್ಷಯ ತೃತೀಯ ದಿನದಂದು ನನ್ನ ಸ್ನೇಹಿತರು ಸಿಕ್ಕರು ಸ್ನೇಹ ಅಕ್ಷಯವಾಯಿತು. ಹೌದು 22 ವರ್ಷಗಳ ಹಿಂದೆ ಒಡನಾಡಿದ ಸ್ನೇಹಿತರು ನನಗೆ ಅಂದು ದೊರೆತರು, ವಾಟ್ಸಪ್, ಪೇಸ್ಬುಕ್ ಟ್ವಿಟರ್, ಇಲ್ಲದ ಆ ಕಾಲದ ಸ್ನೇಹಿತರನ್ನು ಒಂದೆಡೆ ಸೇರಿಸುವುದು ಕಷ್ಟಸಾಧ್ಯವಾದರೂ ಆ ಕೆಲಸಕ್ಕೆ ಮುನ್ನಡಿ ಬರೆದಿದ್ದರು ನನ್ನ ಸ್ನೇಹಿತರು , ಅದರ ಫಲವೇ ಅಕ್ಷಯ ತೃತೀಯ ದಿನದಂದು 42 ಅಕ್ಷಯವಾದ ಗೆಳೆಯ, ಗೆಳತಿಯರ ಸಂಗಮ , ಈ ಸವಿ ಸಂಗಮಕ್ಕೆ ಕಾರಣರಾದ, ಹೇಮಂತ್ ಕುಮಾರ್ ಮತ್ತು ಗೆಳೆಯರ ನೆನೆಯದೇ ಹೇಗಿರಲಿ?
ಒಬ್ಬೊಬ್ಬ ಗೆಳೆಯ, ಗೆಳತಿಯರ ಪೋಟೋ ನೋಡಿ ,ಹೇಗಿದ್ದ ಹೇಗಾದ, ಅಂಗಿದ್ಲು ಈಗ ಇಂಗಿದಾಳೆ ಎಂದು ಅಚ್ಚರಿ ಭರಿತವಾದ ಸಂತಸ ಹಂಚಿಕೊಂಡೆವು.
1999 ರಲ್ಲಿ ನಾನು ಟಿ ಸಿ ಹೆಚ್ ಮುಗಿಸಿದೆ ಅದಕ್ಕಿಂತ ಮೊದಲು ನಾನು ಡಿಗ್ರಿ ಮುಗಿಸಿದ್ದರಿಂದ ಬಿ ಎಡ್ ಮಾಡಲು ಅಪ್ಲಿಕೇಶನ್ ಹಾಕಿದ್ದೆ , ಅದೃಷ್ಟವೆಂಬಂತೆ ಮೈಸೂರಿನ ಕಾಲೇಜ್ ಆಪ್ ಟೀಚರ್ ಎಜುಕೇಷನ್ ಅಲ್ಲಿ ನನಗೆ ಸೀಟು ದೊರಕಿತು, ಅದಕ್ಕೆ ಮಹಾರಾಜಾ ಕಾಲೇಜು ಮತ್ತು ಗವರ್ನಮೆಂಟ್ ಬಿ ಎಡ್ ಕಾಲೇಜು ಎಂಬ ಹೆಸರು ಇತ್ತು . ಮಧ್ಯಕರ್ನಾಟಕದ ಚಿತ್ರದುರ್ಗ ದಿಂದ ಹೋದ ನನಗೆ ಮೊದಲಿಗೆ ಮೈಸೂರು ಹೊಸ ನಗರ, ಇದು ನನ್ನಲ್ಲಿ ಭಯ ಮತ್ತು ಕುತೂಹಲ ತರಿಸಿತ್ತು .ಮಹಾರಾಜರ ಕಾಲದ ದೊಡ್ಡ ಕಟ್ಟಡದ ಮುಂದೆ ನಿಂತಾಗ ನನಗೆ ,ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ಎಂಬ ಬೋರ್ಡ್ ನನ್ನ ಸ್ವಾಗತಿಸಿತು. ಅಂದಿನಿಂದ ಕ್ರಮೇಣವಾಗಿ ಸ್ನೇಹಿತರ ಒಡನಾಟ ,ಕಲಿಕೆ ,ಕೀಟಲೆ ,ತರಲೆ,ಇವುಗಳ ಮಧ್ಯೆ ಹತ್ತು ತಿಂಗಳು ಕಳೆದದ್ದೆ ತಿಳಿಯಲಿಲ್ಲ, ತರಬೇತಿ ಮುಗಿದಾಗ ಯಾಕೆ ಇಷ್ಟು ಬೇಗ ತರಬೇತಿ ಮುಗಿಯಿತು ಎಂದುಕೊಂಡೆವು( ಬಹುಶಃ ನಮ್ಮ ಮನದ ಬಯಕೆ ಅರಿತು ಈಗ ಬಿ ಎಡ್ ಎರಡು ವರ್ಷಗಳ ಅವಧಿಗೆ ಹೆಚ್ಚು ಮಾಡಿರಬಹುದು).
ಈ ಅವಧಿಯು ನನ್ನ ಜೀವನದ ಸುವರ್ಣ ಅಕ್ಷರಗಳಲ್ಲಿ ಬರೆದಿಡಬಹುದಾದ ದಿನಗಳು, ರಾಜ್ಯದ ವಿವಿಧ ಜಿಲ್ಲೆಗಳಿಂದ ತರಭೇತಿ ಗೆ ಬಂದ ನನ್ನ ಸ್ನೇಹಿತರ ನೋಡಿದರೆ ಅದೊಂದು ಕರ್ನಾಟಕದ ಪ್ರತಿಬಿಂಬ ವಾಗಿತ್ತು ,ಅಷ್ಟೇ ಏಕೆ ಸಕ್ಕಿಂ ಮೂಲದ ಅನ್ನಪೂರ್ಣ ತಮಂಗ್ ಎಂಬುವರು ನಮ್ಮ ಜೊತೆಗೆ ಓದುತ್ತಿದ್ದರು ಅದಕ್ಕೆ ನಮ್ಮ ಕಾಲೇಜ್ ಭಾರತದ ಪ್ರತಿಬಿಂಬ ವಾಗಿತ್ತು ಎಂದರೂ ತಪ್ಪಿಲ್ಲ.
ಹತ್ತು ತಿಂಗಳಲ್ಲಿ ಕಳೆದ ಗೆಳೆಯರು 22 ವರ್ಷಗಳ ನಂತರ ವಾಟ್ಸಪ್ ನಲ್ಲಿ ಸಿಕ್ಕು ಉಭಯ ಕುಷಲೋಪರಿ ವಿಚಾರಿಸಿದರೆ ಹೇಗಿರಬೇಡ... ಸವಿ ...ಸವಿ..ನೆನಪುಗಳ ಅನಾವರಣ...
ನೆನಪುಗಳನ್ನು ಎಲ್ಲಿಂದ ಆರಂಭ ಮಾಡಲಿ ಎಲ್ಲಿ ನಿಲ್ಲಿಸಲಿ ಆರಂಭ ಮಾಡಬಹುದು ಆದರೆ ಅಲೆಗಳಂತೆ ಅವು ಬರುತ್ತಲೇ ಇರುವವು....
ಪಡುವಾರಹಳ್ಳಿಯ, ಚುಂಚನಗಿರಿ ಹಾಸ್ಟೆಲ್ ನಿಂದ ಹಿಡಿದು, ಚಾಮುಂಡಿ ಬೆಟ್ಟ, ಕಾಲೇಜ್ ಟೀಚಿಂಗ್ ಪ್ರಾಕ್ಟೀಸ್, ಸಿಟಿಜನ್ ಶಿಪ್ ಕ್ಯಾಂಪ್, ಟೂರ್, ಉಪ್.... ಏನಿತ್ತು ಏನಿರಲಿಲ್ಲ.
ಗೆಳೆಯರು ಒಂದೊಂದೆ ಹಳೆಯ ನೆನಪಿನ ಫೋಟೋಗಳನ್ನು ವಾಟ್ಸಪ್ ಗುಂಪಿನಲ್ಲಿ ಹಾಕುತ್ತಿದ್ದರೆ .ನೆನಪುಗಳು ಮತ್ತೆ ಒತ್ತರಿಸಿ ಬಂದವು.
ಪ್ರಸ್ತುತ ಬಹುತೇಕರು ಮದುವೆಯಾಗಿ ಮಕ್ಕಳನ್ನು ಪಡೆದಿರುವ ನಾವು , ನಮ್ಮ ಮಕ್ಕಳಿಗೆ ಜೀವನದಲ್ಲಿ ಮುಂದುವರೆಯಬೇಕು ಎಂದು ಬೋಧನೆ ಮಾಡುವ ನಾವು
ನಿಜ ಅರ್ಥದಲ್ಲಿ ಗೆಳೆಯರ ಜೊತೆ ನೆನಪಿನ ದೋಣಿಯಲ್ಲಿ ಇಪ್ಪತ್ತೆರಡು ವರ್ಷಗಳ ಹಿಂದಕ್ಕೆ ಹೋಗಿದ್ದೆವು .
ಅಂದು ಮಾಡಿದ ಕೀಟಲೆಗಳು, ಸಣ್ಣ ಜಗಳಗಳು, ಅಲ್ಲಲ್ಲಿ ,ಅಸೂಯೆಗಳು, ಅಸೈನ್ಮೆಂಟ್ ಟೆಸ್ಟ್, ಟೀಚಿಂಗ್ ಪ್ರಾಕ್ಟೀಸ್ ಟೂರ್ ,ಕ್ಯಾಂಪ್ .....ಎಲ್ಲಾ ನೆನಪುಗಳು ಒತ್ತರಿಸಿ ಬಂದವು ,ಆ ನೆನಪುಗಳೇ ಜಿದ್ದಿಗೆ ಬಿದ್ದಂತೆ ನಾನು ಮೊದಲು ನಾನು ಮೊದಲು ಎಂದು ನಮ್ಮ ಸ್ಮೃತಿ ಪಟಲದ ಮೇರೆ ಬರಲಾರಂಬಿಸಿದವು.
ಮೂರುದಿನಗಳ ಕಾಲ ವಾಟ್ಸಪ್ ಗುಂಪಿನಲ್ಲಿ ಪರಸ್ಪರ ಈಗಿನ ಊರು ,ಕೆಲಸ, ಮಕ್ಕಳು ಸಂಸಾರ ಪರಿಚಿತವಾದ ನಂತರ ಮತ್ತೆ ಆನ್ಲೈನ್ ನಲ್ಲೆ ತರಲೆ ಕೀಟಲೆ, ಕಾಲೆಳೆಯುವುದು ಆರಂಭ, ಲಾಕ್ ಡೌನ್ ಕೋವಿಡ್ ,ಮರೆತು ನಮ್ಮ ನೆನಪುಗಳ ಅನ್ಲಾಕ್ ಮಾಡಿ ಸ್ವಚ್ಛಂದ ವಾಗಿ ನಮ್ಮ ಬಿ ಎಡ್ ಸ್ನೇಹಲೋಕದಲ್ಲಿ ತೇಲುತ್ತಿದ್ದೆವು.
ಆಗಲೇ ನೋಡಿ ಬರಸಿಡಿಲಿನಂತೆ ಬಂದ ಸುದ್ದಿ ನಮ್ಮನ್ನು ದುಃಖ ಸಾಗರದಲ್ಲಿ ಮುಳುಗುವಂತೆ ಮಾಡಿತು.
"ದೇವೇಂದ್ರ ಬಡಿಗೇರ್" ಇನ್ನಿಲ್ಲ ಎಂಬ ಪೋಸ್ಟ್ ಹಂಚಿದ ಗೆಳೆಯ ಅವನ ಆತ್ಮಕ್ಕೆ ಶಾಂತಿ ಕೋರಿದ. ಬಡಿಗೇರ್ ನಮ್ಮ ಜೊತೆ ಬಿ ಎಡ್ ಮಾಡಿದ ಪ್ರತಿಭಾನ್ವಿತ ಗೆಳೆಯ,
ಮೂರುದಿನದಿಂದ ನಲಿದ ಮನಸ್ಸುಗಳು ಒಮ್ಮೆಲೆ ಘಾಸಿಗೊಂಡವು.
ಬಹಳ ಬೇಸರದಿಂದ ಗೆಳೆಯನ ಆತ್ಮಕ್ಕೆ ಶಾಂತಿ ಕೋರುವುದೊಂದೆ ನಮ್ಮ ಕರ್ತವ್ಯವಾಗಿತ್ತು....
ಬಹಳ ನೋವಿನಿಂದ ಹೇಳುತ್ತಿರುವೆ ಗೆಳೆಯ ಹೋಗಿ ಬಾ.... ನಿನ್ನ ಆತ್ಮಕ್ಕೆ ಚಿರ ಶಾಂತಿ ಲಬಿಸಲಿ, ....
ಸ್ನೇಹಿತರ ಅಕಾಲಿಕ ಮರಣಗಳು ಕ್ಷಯವಾಗಲಿ... ಮಧುರ ನೆನಪುಗಳು ಅಕ್ಷಯವಾಗಲಿ.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
No comments:
Post a Comment