30 August 2021

ಮಾಲ್ಗುಡಿ ಡೇಸ್


 


ಮಾಲ್ಗುಡಿ ಡೇಸ್ ಅಂದ ತಕ್ಷಣ ಆರ್. ಕೆ  .ನಾರಾಯಣ್, ಶಂಕರ್ ನಾಗ್ ನಮ್ಮ ಕಣ್ಮುಂದೆ ಬಂದು ನಿಲ್ಲುವರು , ದೇಶಾದ್ಯಂತ ಆ ಧಾರಾವಾಹಿ ಮಾಡಿದ ಮೋಡಿ ಎಲ್ಲರಿಗೂ ತಿಳಿದದ್ದೆ.ಅದೇ ಹೆಸರಿನ ಚಿತ್ರವನ್ನು ಮೊನ್ನೆ ಒಂದು ವಾಹಿನಿಯಲ್ಲಿ ನೋಡಿದೆ .ಬಹು ದಿನಗಳ ನಂತರ ಕುಟುಂಬ ಸಮೇತ ಒಂದು ಉತ್ತಮ ಸದಭಿರುಚಿಯ ಚಿತ್ರ ನೋಡಿದ ಸಂತಸ ಮನೆ ಮಾಡಿತು.


ಕಿಶೋರ್ ಮೂಡುಬಿದಿರೆ ಅವರು ಉತ್ತಮ ಕಥೆಯ ಜೊತೆಯಲ್ಲಿ ,ಟೈಟ್ ಆದ ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿಯನ್ನು ಬಹಳ ಚೆನ್ನಾಗಿ ನಿಭಾಯಿಸಿದ್ದಾರೆ.ಈ ಮೂಲಕ ಕನ್ನಡಕ್ಕೆ ಮತ್ತೊಬ್ಬ ಭರವಸೆಯ ನಿರ್ದೇಶಕ ಲಭಿಸಿದಂತಾಗಿದೆ.


ಲಕ್ಷ್ಮಿ ನಾರಾಯಣ ಎಂಬ  ಪ್ರಖ್ಯಾತ ಕವಿಯ ಪಾತ್ರದಲ್ಲಿ ವಿಜಯರಾಘವೆಂದ್ರ ತನ್ನ ಇಳಿವಯಸ್ಸಿನಲ್ಲಿ ಬರವಣಿಗೆ ವಿದಾಯ ಹೇಳಿ , ಮಗಳ ಜೊತೆ ಅಮೆರಿಕ ಗೆ ಹೋಗಲು ಇಷ್ಟ ಪಡದೇ ಮನೆಬಿಟ್ಟು ಹೊರಡುತ್ತಾರೆ ಅದೇ ಸಮಯದಲ್ಲಿ ,  ಪ್ರಕೃತಿ ಪಾತ್ರಧಾರಿ ಗ್ರೀಷ್ಮ  ತನ್ನ ಬಾಸ್ ನ ಹೆಣ್ಣುಬಾಕತನಕ್ಕೆ ಮಂಗಳಾರತಿ ಎತ್ತಿ ಅವನ ಮುಖದ ಮೇಲೆ ರಾಜೀನಾಮೆ ಚೀಟಿ ಎಸೆದು ಕಾರಿನಲ್ಲಿ ಒಂದು ಲಾಂಗ್ ಜರ್ನಿ ಹೋಗಲು ಒಬ್ಬಂಟಿಯಾಗಿ ಹೊರಟಾಗ ಆಕಸ್ಮಿಕ ಅಪಘಾತದಲ್ಲಿ  ಲಕ್ಷ್ಮಿ ನಾರಾಯಣ ರವರ ಭೇಟಿಯಾಗಿ ಇವರಿಬ್ಬರೂ ಸೇರಿ ಹೊರಟ ಲಾಂಗ್ ಡ್ರೈವ್ ಇಡೀ ಚಿತ್ರ ಆವರಿಸಿಕೊಂಡಿದೆ.


ಲಕ್ಷ್ಮಿ ನಾರಾಯಣ ರವರು ತನ್ನ ಬಾಲ್ಯದ ಗೆಳತಿಯನ್ನು ನೋಡಲು ಮಾಲ್ಗುಡಿಗೆ ಹೊರಡುವರು ಈ ಪಯಣದಲ್ಲಿ ಪ್ರಕೃತಿ ಮತ್ತು ಲಕ್ಷ್ಮಿ ನಾರಾಯಣ ರವರ ಪ್ರೇಮ ಕಥೆಗಳ ಪ್ಲಾಶ್ ಬ್ಯಾಕ್ ನೋಡಲು ನಮಗೆ ಲಭ್ಯ. ಪ್ರಕೃತಿಗೆ ಅವಳ ಗೆಳೆಯ ವಿಜಯ್ ಸಿಕ್ಕನೇ? ನಮ್ಮ ಕವಿಗೆ  ಅವರ ಬಾಲ್ಯದ ಗೆಳತಿ  ಲಿನೆಟ್ಟಾ   ಸಿಕ್ಕಳೇ? ಇಲ್ಲವೆ ಎಂಬುದನ್ನು ನೀವು ಚಿತ್ರ ನೋಡಿಯೇ ತಿಳಿಯಬೇಕು.

ಬೆಂಗಳೂರಿನಿಂದ ಮಾಲ್ಗುಡಿಗೆ ಸಾಗುವ ಓಪನ್ ಎಲ್ಲೊ ಕಲರ್  ಗಾಡಿಯಲ್ಲಿ ಪ್ರೇಕ್ಷಕರೇ ಒಂದು ಟ್ರಿಪ್ ಹೋದಂತಿರುತ್ತದೆ, ಉತ್ತಮ ಛಾಯಾಗ್ರಹಣ ಕಣ್ಣಿಗೆ ಹಬ್ಬ .ಶೃಂಗೇರಿ, ಆಗುಂಬೆ ,ಪಶ್ಚಿಮ ಘಟ್ಟ , ಪಾಂಡಿಚೆರಿ ಯ ದೃಶ್ಯಗಳನ್ನು ಚಿತ್ರದಲ್ಲಿ ನೋಡಿಯೇ ಸವಿಯಬೇಕು.

ಗಗನ್ ಬಡೇರಿಯಾ ಅವರ ಸಂಗೀತ ಗಮನ ಸೆಳೆಯುತ್ತದೆ . ಸಂಚಿತ್ ಹೆಗಡೆ ಹಾಡಿರುವ 

ಚಿತ್ರದ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿದೆ.


ಪ್ರತಿಯೊಬ್ಬರಿಗೆ ಬಾಲ್ಯದ ತಮ್ಮದೇ ಆದ ಸಿಹಿಕಹಿ ನೆನಪುಗಳು ಸಾಮಾನ್ಯ. ಅಂತಹ ನೆನಪುಗಳನ್ನು ಅಗಾಗ್ಗೆ ನೆನಪುಮಾಡಿಕೊಳ್ಳುವೆವು . ಈ ಚಿತ್ರ ನೋಡುವಾಗ 

ಮತ್ತೆ ನಮ್ಮ ಬಾಲ್ಯಕ್ಕೆ ನಮಗರಿವಿಲ್ಲದೆ  ಹೋಗಿ ಬಂದ ಅನುಭವವಾಗುತ್ತದೆ. 

ಚಿನ್ನಾರಿ ಮುತ್ತನಾಗಿ ರಾಷ್ಟ್ರ ಪ್ರಶಸ್ತಿ ಪಡೆದ ವಿಜಯ ರಾಘವೇಂದ್ರ ರವರು ಮತ್ತೊಮ್ಮೆ ಪ್ರಶಸ್ತಿ ಪಡೆದರೂ ಅಚ್ಚರಿಯಿಲ್ಲ. ಅರವತ್ತಕ್ಕೂ ಹೆಚ್ಚು ವಯಸ್ಸಿನ ಕವಿಯ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ.


ಇತರೆ ಪಾತ್ರಗಳು ಸಹ ಮುಖ್ಯ ಪಾತ್ರಕ್ಕೆ ಪೂರಕವಾಗಿವೆ ಆರ್ಯನ್ ಗೌಡ,ಬ್ಯಾಂಕ್ ಜನಾರ್ದನ್, ಶೈಲಶ್ರೀ, ರಿಚರ್ಡ್ ಲೂಯಿಸ್,ವಿದ್ಯಾ ಮೂರ್ತಿ, ಮುಂತಾದವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ..


ಕರೋನಾ ಮೊದಲ ಅಲೆ ಶುರಾವಾದಾಗ ಬಿಡುಗಡೆಯಾದ ಈ ಚಿತ್ರ ಎಲ್ಲಾ ಸಹೃದಯ ಕನ್ನಡಿಗರಿಗೆ ಚಿತ್ರ ಮಂದಿರದಲ್ಲಿ ನೋಡಲು ಸಾದ್ಯವಾಗಲಿಲ್ಲ  ಈಗ ಓಟಿಟಿ ಮತ್ತು ಕಿರುತೆರಯಲ್ಲಿ ಲಭ್ಯ. ಒಂದು ಸದಭಿರುಚಿಯ ಚಿತ್ರವನ್ನು ಕನ್ನಡದ ಮನಗಳು ನೋಡಿ ಉತ್ತಮ ಚಿತ್ರಗಳನ್ನು ಪ್ರೋತ್ಸಾಹ ಮಾಡುವಿರೆಂದು ನನ್ನ ಭಾವನೆ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಕೃಷ್ಣನೇ ಸರ್ವಸ್ವ


 ಕೃಷ್ಣನೇ ಸರ್ವಸ್ವ


ಕೃಷ್ಣನೆಂದರೆ ಆಕರ್ಷಣೆ

 ಕೃಷ್ಣನೆಂದರೆ ದೈವ

 ಕೃಷ್ಣನೆಂದರೆ ಸರ್ವಸ್ವ

 ಕೃಷ್ಣನೆಂದರೆ ಜೀವನ|

ಅವನ ಸದಾ ಸ್ಮರಿಸುತಾ

ಮಾಡಿಕೊಳ್ಳೋಣ ನಮ್ಮ

ಜೀವನವ ಪಾವನ||

29 August 2021

ಸನ್ಮಾನ (ನ್ಯಾನೋ ಕಥೆ)

 


*ಸನ್ಮಾನ* (ನ್ಯಾನೋ ಕಥೆ)


ಕಾಲಿಲ್ಲದವಳು ಎಂದು ಅವಳನ್ನು ಬಾಲ್ಯದಲ್ಲಿ ಊರವರು ಮೂದಲಿಸಿದ್ದರು. 

ಇಂದು ಅದೇ ಊರಿನಲ್ಲಿ ಅಂದು ನಿರ್ಲಕ್ಷ್ಯಕ್ಕೆ ಒಳಗಾದ ಭಾಗ್ಯಮ್ಮ   ಸನ್ಮಾನ  ಸ್ವೀಕರಿಸುತ್ತಿದ್ದಾರೆ. 

"ವಿಕಲಚೇತನೆ ಭಾರತಕ್ಕೆ ಬಂಗಾರದ ಪದಕ ಪಡೆದಿರುವುದು ನಮ್ಮ ದೇಶದ ಭಾಗ್ಯ "ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ  ಸಮಯಸಾಧಕ ಮೂರ್ತಿ ಭಾಷಣ ಮಾಡುವಾಗ ,ಸರ್ಕಾರ ಉಚಿತವಾಗಿ  ವಿಕಲಚೇತನರಿಗೆ ನೀಡುವ ಮೂರು ಚಕ್ರದ ಬೈಕ್ ನೀಡಲು ಸಾವಿರ ರೂ ಲಂಚ ಪಡೆದದ್ದು ಭಾಗ್ಯ ಳಿಗೆ ನೆನಪಾಯಿತು. 


#ಸಿಹಿಜೀವಿ


28 August 2021

ಸಂತನೊಂದಿಗೆ ಸಿಹಿಜೀವಿಯ ನಾಲ್ಕು ಮಾತು .ವಿಮರ್ಶೆ

 


"ಸಂತನೊಂದಿಗೆ  ಸಿಹಿಜೀವಿಯ ನಾಲ್ಕು ಮಾತುಗಳು"

  ಕರ್ನಾಟಕ ಸರ್ಕಾರ ಕನ್ನಡ ಪುಸ್ತಕ ಪ್ರಾಧಿಕಾರದ  ಧನಸಹಾಯ ಪಡೆದ
ಶ್ರೀಮತಿ ವಾಣಿ ಭಂಡಾರಿ ಮೇಡಂರವರ ಮೊದಲ ಗಜಲ್ ಸಂಕಲನದ ಬಗ್ಗೆ ಸಿಹಿಜೀವಿಯ ನಾಲ್ಕು ಮಾತುಗಳು . ಕನ್ನಡ ಉಪನ್ಯಾಸಕರು, ಕವಿಗಳು ,ಅಂಕಣಕಾರರು, ಗಜಲ್ ಕಾರರು , ಗಾಯಕರು ಈಗೆ ಬಹುಮುಖ ಪ್ರತಿಭೆಯಾದ ವಾಣಿ ಭಂಡಾರಿ ರವರು   ಏಳನೇ ತರಗತಿಯಿಂದಲೇ ಸಾಹಿತ್ಯ ಆಸಕ್ತಿಯನ್ನು ಹೊಂದಿ   ಸಾಹಿತ್ಯ ಚಟುವಟಿಕೆಗಳಲ್ಲಿ ಮತ್ತು ಸಂಗೀತ ಕಲಿಕೆಯನ್ನು ಮಾಡಿರುವ ಬಗ್ಗೆ ಗಜಲ್ ಸಂಕಲನದಲ್ಲಿ ಅವರ ನುಡಿಗಳಲ್ಲಿ ವ್ಯಕ್ತವಾಗುತ್ತದೆ. ಅವರ ಗಜಲ್ ಗಳು ಅವರ ದೀರ್ಘ  ಸಾಹಿತ್ಯದ ಕೃಷಿಯನ್ನು  ಸಶಕ್ತವಾಗಿ ಬಿಂಬಿಸುತ್ತವೆ.

     
ಮೂರು ವರ್ಷಗಳ ಹಿಂದೆ  ಹನಿ ಹನಿ ಇಬ್ಬನಿ ಸಾಹಿತ್ಯ ಬಳಗದಲ್ಲಿ ಪರಿಚಿತರಾದ ವಾಣಿ ಭಂಡಾರಿ ರವರು ಸದಾ ಹಸನ್ಮುಖಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬರೆಯುತ್ತಾ ನನ್ನಂತಹ ಕಲಿಕಾರ್ತಿಗಳಿಗೆ ಸಕಾಲಿಕ ಪ್ರೋತ್ಸಾಹ ಮತ್ತು ಸಲಹೆ ನೀಡುತ್ತಾ ಬಂದಿದ್ದಾರೆ.

   "ಸಂತೆನೊಳಗಿನ ಧ್ಯಾನ" ಎಂಬ ಶೀರ್ಷಿಕೆಯೇ  ಆಕರ್ಷಕ ಮತ್ತು ಕುತೂಹಲ ಪುಸ್ತಕ ಓದಿ ಮುಗಿಸಿದ ಮೇಲೆ ಈ ಶೀರ್ಷಿಕೆಯ ಔಚಿತ್ಯ ನನಗೆ ಮನವರಿಕೆಯಾಯಿತು.

ಈ  ಗಜಲ್ ಸಂಕಲನದಲ್ಲಿ  ಹೆಣ್ಣಿನಲ್ಲಿರುವ ನೋವುಗಳು, ಸಮಾಜದ ಅಂಕು ಡೊಂಕುಗಳು, ಸಮಯಸಾಧಕ ಜನರ ಡೋಂಗಿತನ, ನಮ್ಮ ಏಳಿಗೆಯನ್ನು ಕಂಡು  ಕಾಲೆಳೆಯುವ ಹಿತಶತೃಗಳ ಪ್ರಲಾಪ ,ಈಗೆ ವಿವಿಧ ವಿಷಯ ವಸ್ತುಗಳನ್ನು ಆಯ್ಕೆ ಮಾಡಿಕೊಂಡು ಬರೆದ ಬಹುತೇಕ ಗಜಲ್ ಗಳು ಸಮಾಜ ಮುಖಿಯಾಗಿರುವುದು ಗಮನಾರ್ಹ.

 
ಮೂರನೇ ಗಜಲ್ ನಲ್ಲಿ ಬರುವ
"ಕಣ್ಣಿದ್ದೂ ಕುರುಡಾಗಿ ನಿಂತಿದ್ದಾರೆ ಕೆಸರಿನ ಕಮಲದ ಏಳಿಗೆ ಸಹಿಸಲ್ಲ " ಎಂದು ಬದುಕ ಆಲಯದಲ್ಲಿ ಒಂಟಿ ಪಯಣ ಮಾಡುವಾಗ ಹೊಟ್ಟೆ ಕಿಚ್ಚಿನ ಜನರು ನೀಡುವ ಉಪದ್ರವಗಳ ಬಗ್ಗೆ ಸಂಕುಚಿತ ಭಾವದ ಮಾನವರಿಗೆ ಸೂಕ್ಷ್ಮವಾಗಿ ತಿವಿದಿದ್ದಾರೆ.

ಇತಿಹಾಸದ ಪುಟಗಳಲ್ಲಿ ,ಪುರಾಣಗಳ ಬೆಳಕಲ್ಲಿ ನೋಡಿದಾಗ ಹಿಂಸೆಯ ವಿರುದ್ದವಾಗಿ ಅಹಿಂಸೆ ,ದ್ವೇಷದ ವಿರುದ್ದವಾಗಿ ಪ್ರೀತಿಯು ಜಯ ಗಳಿಸಿರುವುದು ಸರ್ವ ವೇದ್ಯ.ಈ ಹಿನ್ನೆಲೆಯಲ್ಲಿ ಗಜಲ್ ಕಾರ್ತಿ ಯವರು
ಎಂಟನೆಯ ಗಜಲ್ ನಲ್ಲಿರುವಂತೆ
"ಗುದ್ದಲಿ ಹಾರೆ ಪಿಕಾಸಿ ಎಲ್ಲಾ ಚುಚ್ಚಿ ರಕ್ತ ಬರಿಸಿ ನಕ್ಕು ನಲಿದಿದ್ದವು|
ಕಾಲ ಕಾಯುವುದಿಲ್ಲ ಬಿಡಿ ಬೊಗಸೆ ಕಂಗಳ ಪ್ರೀತಿಗೂ ಒಮ್ಮೆ ಬಲ ಬರುತ್ತದೆ||"
ಎಂದು ಹೇಳುವ ಮೂಲಕ ಪ್ರೀತಿ ಮತ್ತು ಅಹಿಂಸೆಯನ್ನು ಜಗತ್ತಿನಲ್ಲಿ ಪಸರಿಸೋಣ ಎಂಬ ಸಂದೇಶ ನೀಡಿದ್ದಾರೆ.

ಗಜಲ್ ಸಂಕಲನದ ಹದಿನೈದನೇ ಗಜಲ್ ನಲ್ಲಿ ಕವಯಿತ್ರಿಯವರು

" ಕವಿಯ ಕೊಲ್ಲುವ ಭರದಲ್ಲಿ ಕವಿತೆಯ ಆಶಯ ಮರೆಯದಿರಿ|
ಕವಿಗೆ ಚುಚ್ಚುವ ಆವೇಶದಲ್ಲಿ ಕವಿಭಾವ ಏನೆಂದು ತಿಳಿಯದೇ ಮುನ್ನುಗ್ಗದಿರಿ||"
ಎಂದು ಮೊಸರಲ್ಲಿ ಕಲ್ಲು ಹುಡುಕುವ ಧೀರರಿಗೆ ಕಿವಿಮಾತು ಹೇಳಿರುವರು .
ಇದೇ ಭಾವದ ಇಪ್ಪತ್ತನೆಯ ಗಜಲ್ ನಲ್ಲಿ
"ಕವಿಯನ್ನು ಕೊಂದವರ ಕಂಡಿದ್ದೇನೆ ಆದರೆ ಕಾವ್ಯ ಸಾಯಲಿಲ್ಲ|
ಕವಿ ಭಾವವನ್ನು ಅರ್ಥೈಸದವರ ಕಂಡಿದ್ದೇನೆ ಆದರೆ ಭಾವ ಬತ್ತಲಿಲ್ಲ||"
ಎಂದು ಕವಿಭಾವ ಅರ್ಥೈಸದೆ ಬರೀ ಒಣ ಟೀಕೆ ಮಾಡುವ ಮೂಢರ ಬಗ್ಗೆ ಕನಿಕರ ತೋರುತ್ತಲೇ ಅಂತವರಿಗೆ ಚಾಟಿ ಬೀಸಿದ್ದಾರೆ.

ಪ್ರೀತಿಯಲ್ಲಿ ಮೋಸ ಮಾಡಿ ಕೈಕೊಟ್ಟು ಓಡಿ ಹೋದ ಪ್ರೇಯಸಿಯ ನೆನದು ತನ್ನ ತಾನೆ ಸಮಾಧಾನ ಮಾಡಿಕೊಳ್ಳುವ ಪರಿಯನ್ನು ನಲವತ್ತೈದನೇ ಗಜಲ್ ಬಹಳ ಚೆನ್ನಾಗಿ ಬಿಂಬಿಸುತ್ತದೆ.
"ಹೃದಯ ಹಿಂಡಿದ ಕಿರಾತಕಿಯ ನೆನೆಪುಗಳು ಏತಕೆ ಸುಮ್ಮನಿದ್ದು ಬಿಡು|
ನಿನ್ನಂತರಂಗದ ಒಲವು ದಿಕ್ಕರಿಸಿದ ಜಾರಿಣಿಯ ಪ್ರೀತಿ ಏಕೆ ಬೇಕು ಕೊರಗದೇ ಇದ್ದು ಬಿಡು||"
ಎಂದು ಖಾರವಾದ ಪದಗಳಲ್ಲಿ ಹೇಳಿದ್ದಾರೆ .

ಪ್ರೀತಿ ಇಲ್ಲದ ಮೇಲೆ ಹೂವು ಅರಳುವುದು ಹೇಗೆ ? ಎಂಬ ಣವಿ ಯವರ ಕಾವ್ಯ ದಂತೆ
"ಒಲವಿರದ ಮನದ ಬಾವಿಯೊಳಗೆ ವಾಣಿ ಬದುಕಲಾರಳು |
ಗೋರಿಯೊಳಗೆ ಚುರನಿದ್ರಿಸಲು ಓಗೊಟ್ಟು ಬಂದಾಗಿದೆ ಗಾಲಿಬ್|| ಎಂಬ ಶೇರ್ ನಲ್ಲಿ ಪ್ರೀತಿಯಿರುವೊಡೆ ಮಾತ್ರ ನಾನಿರುವೆ ಪ್ರೀತಿಯಿಲ್ಲದೆಡೆ ಇರುವುದಕ್ಕಿಂತ ಇಹವ ತ್ಯಜಿಸುವುದೇ ಮೇಲು ಎಂದು ಅಭಿವ್ಯಕ್ತಿ ಪಡಿಸಿದ್ದಾರೆ.

ಹೀಗೆ ಒಂದಕ್ಕಿಂತ ಒಂದು ಚೆಂದದ ೬೦  ಗಜಲ್ ಒಳಗೊಂಡ ಈ ಸಂಕಲನ ಓದುಗರ ಮನ ಕಲಕದೆ ಇರದು.
ಇನ್ನೂ ಸ್ವಲ್ಪ  ಗಜಲ್ ಸಾಹಿತ್ಯ ಅಧ್ಯಯನ ಮಾಡಿದರೆ ಮತ್ತು ವಿವಿಧ ಪ್ರಕಾರಗಳ ಗಜಲ್ ಬರೆಯಲು ಪ್ರಯತ್ನ ಪಟ್ಟರೆ ಇನ್ನೂ ಸುಂದರ ರಚನೆ ವಾಣಿ ಭಂಡಾರಿ ಮೇಡಂ ರವರಿಗೆ ಬರೆಯಲು ಸಾದ್ಯವಿದೆ.ಅವರ ಲೇಖನಿಯಿಂದ ಮುಂದಿನ ದಿನಗಳಲ್ಲಿ ಗಜಲ್ ಸಂಕಲನ ಸೇರಿ ಕವನ, ವಿಮರ್ಶೆ, ಅಂಕಣರಹ ,ಕಥೆ, ಕಾದಂಬರಿ ಹೀಗೆ ವಿವಿದ ಪ್ರಕಾರಗಳಲ್ಲಿ ಪುಸ್ತಕಗಳು ಪ್ರಕಟವಾಗಲಿ ಎಂದು ಹಾರೈಸುವೆ.

        ಗಜಲ್ ಸಂಕಲನ:-ಸಂತನೊಳಗಿನ ಧ್ಯಾನ
ಕವಯಿತ್ರಿ:- ವಾಣಿ ಭಂಡಾರಿ
ಬೆಲೆ:-೧೦೦/-
ಪ್ರಕಾಶನ : ಭಂಡಾರಿ ಪ್ರಕಾಶನ
ಶಿವಮೊಗ್ಗ
ವರ್ಷ : ೨೦೨೦

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ


27 August 2021

ಕೊರೆಯುವವರು ಮತ್ತು ಸುತ್ತಿಗೆಗಳು


 

ಕೊರೆಯುವವರು ಮತ್ತು ಸುತ್ತಿಗೆಗಳು 

ಕೆಲವೊಮ್ಮೆ ನಮ್ಮ ಆತ್ಮೀಯರು, ಬಂಧುಗಳು, ಸಹೋದ್ಯೋಗಿಗಳು, ನಮ್ಮ ಜೊತೆಗೆ  ಮುಖತಃ ಅಥವಾ ಪೋನ್ ನಲ್ಲಿ ಮಾತನಾಡುವಾಗ ನಮಗೆ ಅವರ ಮಾತು ಕೇಳಲು ಸಮಯವಿದೆಯೇ? ಅಥವಾ ಇಷ್ಟ ಇದೆಯಾ? ಎಂದು ಕೇಳದೇ ಟೇಕನ್  ಫಾರ್ ಗ್ರಾಂಟೆಡ್ ಎಂಬಂತೆ ಗಂಟೆಗಟ್ಟಲೆ ಮಾತನಾಡಲು ಶುರು ಮಾಡುವರು. ಇದು ನಮಗೆ ಕಿರಿಕಿರಿಯಾದರೂ ಅವರೊಂದಿಗೆ ನೇರವಾಗಿ ನಮ್ಮ ಅಭಿಪ್ರಾಯಗಳನ್ನು ತಿಳಿಸಲು ನಮಗೂ ಮುಜುಗರ .

ಇನ್ನೂ ಕೆಲ ಮಹಾಶಯರು ಎದುಗಿರುವವರು ಮಾತನಾಡಲು ಅವಕಾಶ ನೀಡದೆ ತಾವೆ ವಟ ವಟ ಮಾತನಾಡುತ್ತಾ ತಮ್ಮ ಪಾಂಡಿತ್ಯ ತೋರುವರು.ಕೆಲವೊಮ್ಮೆ ವಿತಂಡವಾದಕ್ಕೂ ಇಳಿಯುವರು.
ಇಂತವರಿಂದ ಕೆಲವೊಮ್ಮೆ ನಾವು ತಪ್ಪಿಸಿಕೊಳ್ಳಲೇ ಬೇಕು ಅದಕ್ಕೆ ನಾವು ಹೀಗೆ ಮಾಡಬಹುದು.

೧ ವ್ಯಕ್ತಿಗಳು ಕರೆಯಲ್ಲಿ ಇದ್ದರೆ ನನಗೆ ಮತ್ತೊಂದು ಮುಖ್ಯವಾದ ಕರೆ ಬರುತ್ತಿದೆ ನಂತರ ಕರೆ ಮಾಡುವೆ ಎಂದು ಹೇಳಿ ಕರೆ ಕಟ್ ಮಾಡಬಹುದು.

ನಮಗೆ ಇಷ್ಟವಿಲ್ಲದಿದ್ದರೂ
ಕೆಲವರು ಮಾಡುತ್ತಲೆ 
ಇರುವರು ಕರೆ|
ಅಂತವರಿಗೆ ಮತ್ತೊಂದು
ಕರೆಯಿದೆ ಎಂದು
ಪೋನ್ ಕಟ್ 
ಮಾಡುವುದು ಖರೆ||

೨ ಕೊರೆಯುವ ವ್ಯಕ್ತಿ ಎದುರುಗಿದ್ದರೆ ಒಂದು ಅತೀ ತುರ್ತು ಕೆಲಸವಿದೆ ಎಂದು ಎದ್ದು ಹೋಗಬಹುದು.

ಕೆಲವರು ಕೊರೆಯುತ್ತಾರೆ
ಕೇಳುವವರ ತಾಳ್ಮೆ
ಪರೀಕ್ಷೆ ಮಾಡಲು|
ಅಂತವರ ಮುಂದೆ
ಅವರಿಗೆ ಗೊತ್ತಿಲ್ಲದೆ
ಕಿವಿಯಲ್ಲಿ 
ಇಟ್ಟುಕೊಂಡಿರುವೆ 
ಇಯರ್ ಪೋನ್
ಹೊಸ ಮಾಡೆಲ್ಲು||



೩ ಸುತ್ತಿಗೆ ಆಸಾಮಿ ಜೊತೆಗೆ ಕಾರ್ಯ ನಿರ್ವಹಿಸುವುದು ಅನಿವಾರ್ಯವಾದರೆ ಅವರ ಮಾತಿಗೆ ಕಡಿಮೆ ಪ್ರತಿಕ್ರಿಯೆ ನೀಡಿ ‌ನಮ್ಮ ಕೆಲಸದಲ್ಲಿ ತಲ್ಲೀನವಾಗುದು.

ಕೆಲವರೇ ಹಾಗೆ 
ಮಾತು ನಿಲ್ಲಿಸುವುದಿಲ್ಲ
ಒಂದು ಅಥವಾ ಎರಡು
ಸುತ್ತಿಗೆ|
ಅದಕ್ಕೆ ಅಂತವರಿಗೆ
ನಾಮಕರಣವಾಗುತ್ತದೆ
ಸುತ್ತಿಗೆ||

ಸಿಹಿಜೀವಿ
ಸಿ ಜಿ ವೆಂಕಟೇಶ್ವರ.

26 August 2021

ಸಿಹಿಜೀವಿಯ ಬಾಳಿನ ಏಳು ಬೀಳುಗಳು .


 


ಸಿಹಿಜೀವಿಯ ಜೀವನದ  ಏಳು ಬೀಳುಗಳು
ಸಾಮಾನ್ಯ ಬಡ ಕುಟುಂಬದಿಂದ ಬಂದ ನಾನು ಹುಟ್ಟಿದ ಐದು ವರ್ಷಕ್ಕೆ ಅಪ್ಪ ಹಾವು ಕಡಿದು ತೀರಿಕೊಂಡರು . ಅಮ್ಮನ ನೆರಳಲ್ಲಿ ಬೆಳೆದ ನಾನು ಶಾಲೆಗೆ ಹೋಗುತ್ತಾ ರಜಾದಿನಗಳಲ್ಲಿ  ಅಮ್ಮನ ಜೊತೆಯಲ್ಲಿ  ಈರುಳ್ಳಿ ಕೊಯ್ಯುವ,  ಹತ್ತಿ ಬಿಡಿಸುವ , ರಾಗಿ ಹೊಲ ಕೊಯ್ಯುವ, ರಸ್ತೆ ಕಾಮಗಾರಿ,  ಬಾವಿ ಮಣ್ಣು ಹೊರುವ ಕೂಲಿ ಕೆಲಸ  ಕೆಲಸ ಮಾಡುತ್ತಾ ಬೆಳೆವನು

್ರಾಥಮಿಕ ಶಾಲಾ ಹಂತದಲ್ಲೇ ಓದಿನಲ್ಲಿ ಮುಂದಿದ್ದ ನನ್ನನ್ನು ನಮ್ಮ ತಿಪ್ಪೇಸ್ವಾಮಿ ಶಿಕ್ಷಕರು ಶಾಲಾ ಮಾನಿಟರ್ ಮಾಡಿದ್ದರು. ಇದು ನನ್ನಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿತು .ಎಷ್ಟೋ ಬಾರಿ ನಮ್ಮ ಶಿಕ್ಷಕರು ರಜೆ ಮೇಲೆ ತರಳಿದಾಗ ನಾನೇ ಇಡೀ ನಾಲ್ಕು ತರಗತಿಗಳನ್ನು ಆ ಚಿಕ್ಕ ವಯಸ್ಸಿನಲ್ಲಿಯೇ ನಿಭಾಯಿಸಿದ್ದನ್ನು ನೆನದು ಈಗಲೂ ನನ್ನ ಬಗ್ಗೆ ನನಗೇ ಹೆಮ್ಮೆ ಆಗುತ್ತದೆ.

ಐದನೆಯ ತರಗತಿಗೆ ನಮ್ಮ ಚೌಡಗೊಂಡನಹಳ್ಳಿ ಗ್ರಾಮದಿಂದ  ಎರಡು ಕಿಲೋಮೀಟರ್ ದೂರದ ಉಪ್ಪರಿಗೇನಹಳ್ಳಿ ಗ್ರಾಮಕ್ಕೆ ಹೋಗಬೇಕಾಯಿತು .ಪ್ರತಿದಿನ ನಮ್ಮ ಪುಸ್ತಕಗಳನ್ನು ಹೊತ್ತುಕೊಂಡು ಕೈಚೀಲಗಳಿಲ್ಲದೇ ಒಂದು ಎಲೆಸ್ಟಿಕ್ ಕಟ್ಟಿಕೊಂಡು ಹೆಗಲಮೇಲೆ ಹೊತ್ತು ಮತ್ತೊಂದು ಕೈಯಲ್ಲಿ ಅಮ್ಮ ನೀಡಿದ ಮುದ್ದೆ ಸಾರು ಇರುವ ಟಿಪನ್ ಕ್ಯಾರಿಯರ್ ಹಿಡಿದು ದಿನವೂ  ನಾಲ್ಕು ಕಿಲೋಮೀಟರ್ ದೂರವನ್ನು ಕಾಲಲ್ಲಿ ಚಪ್ಪಲಿಯೂ ಇಲ್ಲದೆ ನಡೆದುಕೊಂಡು ಹೋಗಿ ವಿದ್ಯಾಭ್ಯಾಸ ಮುಂದುವರೆಸಿದೆನು.

ನಾನು ಒಂಭತ್ತನೆಯ ತರಗತಿ ಪಾಸಾಗಿ ಬೇಸಿಗೆ ರಜೆಯಲ್ಲಿ ಅಮ್ಮನ ಜೊತೆಗೆ ನಮ್ಮೂರಿಂದ ನೂರೈವತ್ತು ಕಿಲೋಮೀಟರ್ ದೂರದಲ್ಲಿರುವ ಶಿವಮೊಗ್ಗ ಕ್ಕೆ ಭತ್ತ ಕೊಯ್ಯುವ ಮತ್ತು ಬಡಿಯಲು ಕೂಲಿ ಹೋಗಿದ್ದೆ. ಅಲ್ಲಿ ನಾಯಿಗೂಡಿಗೂ ಕಡೆಯಾದ ಮನೆಗಳಲ್ಲಿ ಸೊಳ್ಳೆಗಳ ಕಾಟ ಸಹಿಸಿಕೊಂಡು ಕಷ್ಟ ಪಟ್ಟು ದುಡಿದರೂ ಮೆಸ್ತ್ರಿಯ ಮೋಸದಿಂದ ಮಾಡಿದ ಶ್ರಮಕ್ಕೆ ಸರಿಯಾದ ಕೂಲಿ ಸಿಗದೇ ಹುಟ್ಟೂರಿಗೆ ಬೇಸರದಿಂದ ಹಿಂತಿರುಗಿದ್ದೆ.

ಕಷ್ಟಗಳು ಒಟ್ಟಿಗೆ ಬರುತ್ತವಂತೆ , ಒಮ್ಮೆ ಜ್ವರ ಎಂದು ಅಮ್ಮ ನನ್ನ ಹೊರ ಕೆರೆ ದೇವ ಪುರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಯಾವುದೋ ಪರೀಕ್ಷೆ ಮಾಡಿ ನಿಮ್ಮ ಮಗನಿಗೆ ಟಿ ಬಿ ಇದೆ ಎಂದರು . ಹಾಗಂದರೆ ಏನು ಎಂದು ನನಗೂ ನನ್ನ ಅಮ್ಮನಿಗೆ ತಿಳಿಯಲಿಲ್ಲ ,ಡಾಕ್ಟರ್ ಆ ಖಾಯಿಲೆಯ ಬಗ್ಗೆ ವಿವರಿಸಿದಾಗ ಅಮ್ಮನ ಕಣ್ಣಲ್ಲಿ ಧಾರಾಕಾರವಾಗಿ ನೀರು ಹರಿಯಿತು. ಡಾಕ್ಟರ್ ಅಮ್ಮನ ಸಮಾಧಾನ ಮಾಡಿ ಪ್ರತಿ ದಿನ ಇವನಿಗೆ ಮೂರು ತಿಂಗಳ ಕಾಲ ದಿನಕ್ಕೆ ಒಂದು  ಇಂಜೆಕ್ಷನ್ ಮತ್ತು ಮಾತ್ರೆ ಕೊಡುವೆ ಎಂದರು.
ದಿನವೂ ಉಪ್ಪೇರಿಗೇನಹಳ್ಳಿಗೆ ಶಾಲೆ ಗೆ ತರಳಿ ಎರಡು ಪಿರೀಯಡ್ ಪಾಠ  ಮುಗಿಸಿಕೊಂಡು ಶಿಕ್ಷಕರ ಅನುಮತಿ ಪಡೆದು ಬಸ್ ಏರಿ ಹೊರ ಕರೆ ದೇವ ಪುರದ ಆಸ್ಪತ್ರೆಗೆ ತೆರಳಿ ಇಂಜೆಕ್ಷನ್ ಪಡೆದು ಮತ್ತೆ ಶಾಲೆಗೆ ಬಂದು ಸಂಜೆ ನಡೆದುಕೊಂಡು ನಮ್ಮ ಊರು ತಲುಪುತ್ತಿದ್ದೆ.

ಹೀಗೆ ಮೂರು ತಿಂಗಳ ನಂತರ ಪುನಃ ಪರೀಕ್ಷೆ ಮಾಡಿದ ಡಾಕ್ಟರ್ ನಾನು ಟಿ ಬಿ ರೋಗದಿಂದ ಸಂಪೂರ್ಣವಾಗಿ ಗುಣಮುಖ ಆಗಿರುವುದನ್ನು ಅಮ್ಮನಿಗೆ ಹೇಳಿದರು ಅಮ್ಮ ಮತ್ತೆ ಅತ್ತರು ಈ ಬಾರಿ ಸಂತೋಷದಿಂದ .ಅಲ್ಲೇ ಎಲ್ಲರಿಗೂ ಕೇಳುವಂತೆ ಚೌಡವ್ವ, ತಿಮ್ಮಪ್ಪ ನೀವು ದೊಡ್ಡೋರು ಕಣಪ್ಪ ಎಂದು ಆಕಾಶ ನೋಡಿ ಕೈಮುಗಿದರು.

ಎಸ್ಸೆಸ್ಸೆಲ್ಲಿ ಓದಲು ಅಮ್ಮ ಯರಬಳ್ಳಿಯ ಮಾವನವರ ಮನೆಗೆ ಕಳಿಸಿದರು. ಬೆಳಿಗ್ಗೆ ಎದ್ದು ಎತ್ತು ಎಮ್ಮೆಗಳ ಸಗಣಿ ಬಾಚಿ . ಕೈಕಾಲು ಮುಖತೊಳೆದುಕೊಂಡು ಎಂಟು ಗಂಟೆಗೆ ಕಾಲೇಜಿಗೆ ಹೋಗಿ ,ಹನ್ನೊಂದು ಗಂಟೆಗೆ ಮನೆಗೆ ಬಂದು ಊಟ ಮಾಡಿ  ಎಮ್ಮೆ ಮೇಯಿಸಲು ಹೊಲ ಕ್ಕೆ ಹೋಗಿ ಅಲ್ಲೇ ಹೋಮ್ ವರ್ಕ್ ಮಾಡುತ್ತಾ ಓದುತ್ತಿದ್ದೆ  .ಹೀಗೇ ಎಮ್ಮೆ ಮೇಯಿಸುತ್ತಾ ಪರೀಕ್ಷೆ ಬರೆದ ನಾನು ಇಡೀ ಕಾಲೇಜಿಗೆ ಅತೀ ಹೆಚ್ಚು ಅಂಕ ಪಡೆದು ಫಸ್ಟ್ ಕ್ಲಾಸ್ ನಲ್ಲಿ ಪಿ ಯು ಸಿ ಪಾಸದ ನಾನು ಅಕ್ಕ ಪಕ್ಕದ ಹಳ್ಳಿಯವರ ಬಾಯಲ್ಲಿ ಹೊಗಳಿಸಿಕೊಂಡು ಒಳಗೊಳಗೇ ಖುಷಿ ಪಟ್ಟೆ .

ಶಿಕ್ಷಕನಾಗಬೇಕೆಂದು ಟಿ ಸಿ ಎಚ್ ಕಾಲೇಜು ಸೇರಿದೆ ಆರು ತಿಂಗಳಾದ ಮೇಲೆ ತಿಳಿಯಿತು ಅದು ಅನಧಿಕೃತವಾದ ಕಾಲೇಜ್ ಎಂದು .ಪರೀಕ್ಷೆ ಬರೆಯಲು ಸರ್ಕಾರ ಒಪ್ಪದಾದಾಗ ನನ್ನ ಗೆಳೆಯರ ಜೊತೆಯಲ್ಲಿ ವಿಧಾನಸೌಧದ ಮುಂಬಾಗ ಸತ್ಯಾಗ್ರಹ ಮಾಡಿದೆವು ಸರ್ಕಾರದವರ ಮನ ಕರಗಲಿಲ್ಲ. ಅಷ್ಟೂ ಜನ ಸ್ನೇಹಿತರು ಅಲ್ಲೇ ಕಣ್ಣಿನಲ್ಲಿ ನೀರು ಇಂಗುವವರೆಗೆ ಅತ್ತು, ನಮ್ಮ ಊರಿಗೆ ಹಿಂತಿರುಗಿದೆವು.

ಸುದೀರ್ಘ ಕಾನೂನು ಹೋರಾಟದ ಮೂಲಕ ಹೈಕೋರ್ಟ್ ನಮ್ಮ ಟಿ ಸಿ ಹೆಚ್ ಪರೀಕ್ಷೆ ಬರೆಯಲು ಅನುಮತಿ ನೀಡಿತು.
ಟಿ ಸಿ ಹೆಚ್ ಮುಗಿಸಿ 1999 ರಲ್ಲಿ ಸರ್ಕಾರಿ  ಪ್ರಾಥಮಿಕ ಶಿಕ್ಷಕನಾಗಿ ಹುಚ್ಚವ್ವನಹಳ್ಳಿಯಲ್ಲಿ ಕೆಲಸಕ್ಕೆ ಸೇರಿದೆ.
ಮೊದಲ ತಿಂಗಳ ಸಂಬಳದಲ್ಲಿ ಅಮ್ಮನಿಗೆ ಸೀರೆ ಕೊಡಿಸಿದೆ ಅಮ್ಮ ಅಂದೂ ಅತ್ತರು.

ಪ್ರಸ್ತುತ ಪ್ರೌಢಶಾಲಾ ಶಿಕ್ಷಕನಾಗಿ ಕೆಲಸ ಮಾಡುತ್ತಿರುವೆ. ಈ ೨೧ ವರ್ಷಗಳಲ್ಲಿ ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಿದ ಸಂತೃಪ್ತಿ ಇದೆ. ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕಾರ ಲಭಿಸಿದೆ . ಹಲವು ಸಂಘಸಂಸ್ಥೆಗಳು ನನ್ನ ಕಿರು ಸಾಧನೆಯ ಗುರ್ತಿಸಿ  ರಾಜ್ಯ ಮಟ್ಟದ ಸಾಹಿತ್ಯ ಪುರಸ್ಕಾರ ನೀಡಿವೆ.
ಸಾಹಿತ್ಯದ ಆಸಕ್ತಿ ಕ್ರಮೇಣವಾಗಿ ಬೆಳೆದು , ಕಥೆ, ಕವನ ,ಗಜಲ್ ಹನಿಗವನ ,ಕಾದಂಬರಿ , ಹೀಗೆ ವಿವಿಧ ಪ್ರಕಾರಗಳಲ್ಲಿ  ಬರೆಯುತ್ತಿರುವೆ.
ಈಗಾಗಲೆ ಮೂರು ಪುಸ್ತಕ ಪ್ರಕಟಮಾಡಿರುವೆ .ಇನ್ನೂ ಬರೆಯುತ್ತಾ ಇರುವೆ.
ಮಡದಿ ,ಇಬ್ಬರು ಹೆಣ್ಣು ಮಕ್ಕಳು ತಾಯಿಯೊಂದಿಗೆ  ಸಂತಸದಿಂದ ಜೀವನ ಸಾಗಿಸುತ್ತಿರುವೆ. ಇದಕ್ಕೆ ನನ್ನ ಅಣ್ಣ ಮತ್ತು ಕುಟುಂಬದ ಬೆಂಬಲ ಸಹಕಾರ ಮರೆಯಲಾರೆ .
ನಲವತ್ತಾರು ವಸಂತಗಳನ್ನು ಪೂರೈಸಿರುವ ನಾನು ಜೀವನದಲ್ಲಿ ಹಲವಾರುಏಳು ೀಳುಗಳಿಗೆ ಸಾಕ್ಷಿಯಾಗಿರುವೆ.  ಕಷ್ಟಗಳು ಬಂದಾಗ ಕುಗ್ಗದೇ ಸುಖಬಂದಾಗ ಹಿಗ್ಗದೆ ಸ್ಥಿತಪ್ರಜ್ಞ ನಾಗಲು ಪ್ರಯತ್ನ ಮಾಡುತ್ತಿರುವೆ.ಮುಂದಿನ ಜೀವನ ಬಂದಂತೆ ಸ್ವೀಕರಿಸಲು ಮಾಗುತ್ತಿದ್ದೇನೆ ..

*ಸಿಹಿಜೀವಿ
ಸಿ ಜಿ ವೆಂಕಟೇಶ್ವರ

*ಇಂದಿನ ಸಿಂಹ ಧ್ವನಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ "ಭಾವಗೀತೆಗೆ ಮನಸೋಲುವ ಸಿಹಿಜೀವಿಗಳು೨೬/೮/೨೧"*


 

*ಇಂದಿನ ಸಿಂಹ ಧ್ವನಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ "ಭಾವಗೀತೆಗೆ ಮನಸೋಲುವ ಸಿಹಿಜೀವಿಗಳು"*

25 August 2021

ಸಿಹಿಜೀವಿಗಳು ಮತ್ತು ಭಾವಗೀತೆ


 


ಸಿಹಿಜೀವಿ ಮತ್ತು ಭಾವಗೀತೆ 


ಭಾವಗೀತೆಗಳು ನಮ್ಮ ಭಾವನೆಗಳನ್ನು ಕೆದಕಿ ಕವಿಯ ಭಾವಗಳನ್ನು ಸವಿಯಲು ಸೃಷ್ಟಿಸಿರುವ ಸೃಜನಶೀಲ ರಚನೆಗಳು .


ಕುವೆಂಪು ಆದಿಯಾಗಿ ದ ರಾ ಬೇಂದ್ರೆ, ಜಿ ಎಸ್ ಶಿವರುದ್ರಪ್ಪ, ಎಚ್ ಎಸ್ ವೆಂಕಟೇಶ ಮೂರ್ತಿ , ಬಿ ಆರ್ ಲಕ್ಷ್ಮಣ ರಾವ್ ಮುಂತಾದವರ ಭಾವಗೀತೆಗಳು ನಮ್ಮ ಭಾವನೆಗಳನ್ನು ಬಡಿದೆಬ್ಬಿಸಿವೆ .ನಾವು ಅವುಗಳನ್ನು ಇಂದಿಗೂ ಆಸ್ವಾದಿಸುತ್ತಿರುವೆವು.

ಭಾವಗೀತೆಗಳು ಧ್ವನಿಮುದ್ರಣ ರೂಪದಲ್ಲಿ ಎಲ್ಲರ ತಲುಪುವಲ್ಲಿ ಸಂಗೀತ ಸಂಯೋಜಕರ ಮತ್ತು ಗಾಯಕರ ಪಾತ್ರ ಹಿರಿದು. ಪಿ ಕಾಳಿಂಗರಾಯರಿಂದ ಹಿಡಿದು ಮೈಸೂರು ಅನಂತಸ್ವಾಮಿ, ರಾಜು ಅನಂತಸ್ವಾಮಿ, ಜಿ ವಿ ಅತ್ರಿ, ಸಿ ಅಶ್ವಥ್, ಶಿವಮೊಗ್ಗ ಸುಬ್ಬಣ್ಣ, ಬಿ ಆರ್ ಛಾಯ, ಇತ್ಯಾದಿ ಗಾಯಕ ಗಾಯಕಿಯರು ನಮಗೆ ಭಾವಗೀತೆಗಳನ್ನು ನಮ್ಮ ಕರ್ಣಗಳಿಗೆ ತಲುಪಿಸುರುವರು.

ಮನವು ಬೇಸರದಲ್ಲಿದ್ದಾಗ ಔಷಧದಂತೆ, ಸಂತೈಸುವ ಗೆಳೆಯ ಅಥವಾ ಗೆಳತಿಯಂತೆ, ತಲೆ ನೇವರಿಸಿ ಸಾಂತ್ವನ ಹೇಳುವ ತಂದೆ ತಾಯಿಯಂತೆ ಭಾವಗೀತೆಗಳು ಮನಕ್ಕೆ ಮುದ ನೀಡುತ್ತವೆ.


ನಿಸಾರ್ ಅಹಮದ್ ರವರ "ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ...." ಗೀತೆ ಕೇಳುತ್ತಿದ್ದರೆ ನಮ್ಮ ನಾಡಿನ ಸೊಭಗು ಕಣ್ಮುಂದೆ ಬಂದು ನಮ್ಮ ನಾಡಗುಡಿಯ ಬಗ್ಗೆ ಅಭಿಮಾನ ಮೂಡದಿರದು.


ಬೇಂದ್ರೆ ಅಜ್ಜನವರ 

"ನೀ ಹೀಂಗ ನೋಡಬ್ಯಾಡ...ನನ್ನ .." ಗೀತೆ ಕೇಳುತ್ತಿದ್ದರೆ ಎಂತಹ ಕಟುಕರ  ಕಣ್ಣಲ್ಲೂ ನಾಲ್ಕು ಹನಿ ಉದುರದೇ ಇರದು.


ಪ್ರೇಮಕವಿ ಜಿ ಎಸ್ ಎಸ್ ರವರ. ಎಲ್ಲಾ ಹಾಡುಗಳು ಕೇಳುಗರ ಕಿವಿಗೆ ಹಬ್ಬ ." ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ "...ಯಿಂದ ಹಿಡಿದು... "ಬಳೆಗಾರ ಚೆನ್ನಯ ಬಾಗಿಲಿಗೆ ಬಂದಿಹನು...." ರಾಯರು ಬಂದರು ಮಾವನ ಮನೆಗೆ ರಾತ್ರಿ ಆಗಿತ್ತು.... "   "ಕಾಣದ ಕಡಲಿಗೆ ಹಂಬಲಿಸಿದೇ ಮನ ...." ಇತ್ಯಾದಿ ಗೀತೆಗಳು ಶ್ರೋತೃಗಳನ್ನು ಯಾವುದೋ ಲೋಕಕ್ಕೆ ಕರೆದೊಯ್ಯುತ್ತವೆ .


ಸುಬ್ರಾಯ ಚೊಕ್ಕಾಡಿ ರವರ "ಮುನಿಸು ತರವೇ ಮುಗುದೇ ... ಹಾಡು ಮುನಿದ ನಲ್ಲೆಯ ಸಮಾಧಾನ ಮಾಡುವ ಪರಿ ಯಾರಿಗೆ ಇಷ್ಟ ಆಗಲ್ಲ ಹೇಳಿ? 

 ರಾಷ್ಟ್ರ ಕವಿ ಕುವೆಂಪು ರವರ 

"ಬಾರಿಸು ಕನ್ನಡ ಡಿಂಡಿಮ.. " ಕೇಳುತ್ತಿದ್ದರೆ ನಮ್ಮ  ನಾಡಿನ ಬಗ್ಗೆ ಅಭಿಮಾನ ಮೂಡದೆ ಇರದು.


ಚೆನ್ನವೀರ ಕಣವಿಯವರ "ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ" ಹಾಡು ಕೇಳುತ್ತಾ ಹಾಗೆ ಯಾರೋ ತಟ್ಟಿ ಮಲಗಿಸಿದರೇನೊ ಎಂಬ ಭಾವ ಮೂಡುವುದು.


ಸತ್ಯಾನಂದ ಪತ್ರೋಟ ರವರ "ಬಡವನಾದರೆ ಏನು ಪ್ರಿಯೆ.. ಕೈತುತ್ತು ಉಣಿಸುವೆ" ಗೀತೆಯು ಯುವ ಪ್ರೇಮಿಗಳ ಮನದಲ್ಲಿ ಇಂದಿಗೂ ರಿಂಗಣಿಸುತ್ತಿರುವುದು ಸುಳ್ಳಲ್ಲ.


ಹೀಗೆ ಪಟ್ಟಿ ಮಾಡುತ್ತಾ ಹೋದರೆ ಬೆಳೆಯುತ್ತಲೇ ಹೋಗುತ್ತದೆ.ಭಾವಗೀತೆಗಳೇ ಹಾಗೆ ಭಾವನೆಗಳಿಗೆ ಬೆಲೆ ಕೊಡುವ ಜೀವಿಗಳು ಪದೇ ಪದೇ ಕೇಳುವಂತೆ, ಕಾಡುತ್ತವೆ ಮೋಡಿಮಾಡುತ್ತವೆ  .


ಬನ್ನಿ ಭಾವಗೀತೆಗಳ ಭಾವನೆಗಳು ನಮ್ಮ ಭಾವನೆಗಳೊಂದಿಗೆ ಸೇರಿಸಿ ಕೇಳುತ್ತಾ ಇಂತಹ ಅದ್ಬುತ ಗೀತೆಗಳನ್ನು ರಚಿಸಿದ ಕವಿಮನಗಳಿಗೆ, ಸಂಗೀತ ಸಂಯೋಜಕರಿಗೆ ಗಾಯಕರಿಗೆ ಧನ್ಯವಾದಗಳ ಸಮರ್ಪಿಸಿ, ಸಂತಸಗೊಂಡು ಸಂತಸವ ಹಂಚಿ ಸಂತಸದಿಂದ ಬಾಳೋಣ 


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


ಇಂದಿನ ಸಿಂಹ ಧ್ವನಿ, ಪ್ರತಿನಿಧಿ ಮತ್ತು ಜನಮಿಡಿತ ಪತ್ರಿಕೆಗಳಲ್ಲಿ ಪ್ರಕಟವಾದ ನನ್ನ ಲೇಖನ ಸಂಪಾದಕರು ಮತ್ತು ಸಿಬ್ಬಂದಿ ಗೆ ಧನ್ಯವಾದಗಳು🙏🙏೨೫/೮ ೨೧


 

ಇಂದಿನ ಸಿಂಹ ಧ್ವನಿ, ಪ್ರತಿನಿಧಿ ಮತ್ತು ಜನಮಿಡಿತ ಪತ್ರಿಕೆಗಳಲ್ಲಿ ಪ್ರಕಟವಾದ ನನ್ನ ಲೇಖನ ಸಂಪಾದಕರು ಮತ್ತು ಸಿಬ್ಬಂದಿ ಗೆ ಧನ್ಯವಾದಗಳು🙏🙏 ೨೫/೮ ೨೧


 

ಇಂದಿನ ಪ್ರತಿನಿಧಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ ಸಂಪಾದಕರು ಮತ್ತು ಸಿಬ್ಬಂದಿ ಗೆ ಧನ್ಯವಾದಗಳು🙏🙏೨೫/೮/೨೧


 ಇಂದಿನ ಪ್ರತಿನಿಧಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ ಸಂಪಾದಕರು ಮತ್ತು ಸಿಬ್ಬಂದಿ ಗೆ ಧನ್ಯವಾದಗಳು🙏🙏

24 August 2021

ನೋವುಗಳು ನೂರಿವೆ....



ನನ್ನ ಕಣ್ಣಂಚಲಿ

 ಇಳಿಯುತಿವೆ ನಾಲ್ಕು ಹನಿ

 ಕಾಣಲಾರಿರಿ ನೀವು

 ನನ್ನ ಮನದ ದನಿ. 


ನೋವುಗಳು ನೂರಿವೆ

 ಹೇಳಲಾರೆನು ಎಲ್ಲರಿಗೆ

ನುಂಗಿರುವೆ ಸಾವಿರ

 ಅವಮಾನಗಳು ಗೊತ್ತು ಅವನಿಗೆ

 

ಜೀವನವೇ ಆಟವೆಂಬುದು

 ನನಗೆ ಮೊದಲು ತಿಳಿದಿರಲಿಲ್ಲ

 ನಾಟಕದ ಮಂದಿಯ ಆಟವನ್ನು

 ದಿನವೂ ವೀಕ್ಷಿತಿರುವೆನಲ್ಲ  


ಬಾಳೆಂಬ ನನ್ನ ಬಾಳೆಲೆ

 ಮುಳ್ಳಿನ ಮೇಲಿದೆ

 ಹರಿಯದೆ ಬಿಡಿಸಿಕೊಳ್ಳುವೆ

 ಮನದಲಿ ಆತ್ಮವಿಶ್ವಾಸವಿದೆ. 


ಸಿಹಿಜೀವಿ

 ಸಿ ಜಿ ವೆಂಕಟೇಶ್ವರ. 

 

NEP 2020.ಲೇಖನ


 


ಹೊಸ ಭರವಸೆಯ ಶಿಕ್ಷಣ ನೀತಿ 


ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರುವ ಮೂಲಕ ಕರ್ನಾಟಕ ರಾಜ್ಯ ಇತಿಹಾಸ ಸೃಷ್ಟಿ ಮಾಡಿದೆ ತನ್ಮೂಲಕ ಇತರೆ ರಾಜ್ಯಗಳಿಗೆ ಮಾದರಿಯಾಗಿದೆ.

2020 ರ ಹೊಸ ಶಿಕ್ಷಣ ನೀತಿಯು ದೇಶದ ಶಿಕ್ಷಣ ಕ್ಷೇತ್ರದಲ್ಲಿ ಅಪಾರವಾದ ಬದಲಾವಣೆಗಳನ್ನು ತರುವ ಮೂಲಕ ರಾಷ್ಟ್ರದ  ಬೆಳವಣಿಗೆಗೆ ಪೂರಕವಾದ ವಾತಾವರಣ ಸೃಷ್ಟಿಸುವ ಕನಸು ಕಂಡಿದೆ.


ಈಗಾಗಲೇ 1968 ಮತ್ತು 1986 ರ ಶಿಕ್ಷಣ ನೀತಿಗಳಿಂದ ದೇಶದ ಶಿಕ್ಷಣ ವ್ಯವಸ್ಥೆ ತಕ್ಕ ಮಟ್ಟಿಗೆ ಬದಲಾವಣೆಗಳನ್ನು ಕಂಡಿದ್ದರೂ  ಇಪ್ಪತ್ತೊಂದನೇ ಶತಮಾನದ ಆಧುನಿಕತೆಯ ,ತಂತ್ರಜ್ಞಾನದ, ಕೃತಕ ಬುದ್ದಿ ಮತ್ತೆಯ , ಬೆಳವಣಿಗೆಗೆ ತಕ್ಕಂತೆ ಅನಿವಾರ್ಯವಾಗಿ ಶಿಕ್ಷಣದ ಆದ್ಯತೆ ಮತ್ತು ಗುರಿಗಳು ಬದಲಾಗಬೇಕಾಗಿತ್ತು ಈ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಭಾರತೀಯರಾದ ನಾವುಗಳು ಅಪ್ಡೇಟ್ ಆಗಲು ಸ್ವಾಗತಿಸಲೇ ಬೇಕಿದೆ.


ಈಗಿರುವ 10+2 ಮಾದರಿಯ ಶಿಕ್ಷಣವನ್ನು 5+3+3+4 ಮಾದರಿಯಲ್ಲಿ ಬದಲಾವಣೆ ಮಾಡಲು ವೈಜ್ಞಾನಿಕ ತಳಹದಿಯನ್ನು ನೀತಿ ನಿರೂಪಕರು ವಿಶ್ಲೇಷಣೆ ಮಾಡಿರುವುದನ್ನು ಗಮನಿಸಬಹುದು. ಸಾಮಾನ್ಯವಾಗಿ ಮಗುವಿನ ಮೆದುಳಿನ 85%ರಷ್ಟು ಬೆಳವಣಿಗೆಯು  6 ವರ್ಷಗಳ ವರೆಗೆ  ಆಗುತ್ತದೆ ಈ ಹಂತದಲ್ಲಿ ಮಗುವಿಗೆ ಕಥೆ, ಹಾಡು, ಸಂಗೀತಗಳ ಮೂಲಕ ಹೇಳಿಕೊಟ್ಟರೆ ಜೀವನ ಪೂರ್ತಿ ನೆನಪಿರುತ್ತದೆ , ಇದನ್ನು ಈಗಿನ ಕೆಲ ಖಾಸಗಿ ಶಾಲೆಗಳು  ಕಿಂಡರ್ ಗಾರ್ಟನ್, ಬೇಬಿ ಸಿಟ್ಟಿಂಗ್ , ಪ್ರೀ ಸ್ಕೂಲ್ ಹೀಗೆ ವಿವಿಧ ಹೆಸರುಗಳಿಂದ ಜಾರಿಗೆ ತಂದಿದ್ದರೂ ಅದು ಕೇವಲ ಉಳ್ಳವರ ಮತ್ತು ಕೆಲವೇ ಮಕ್ಕಳ ಪಾಲಿಗೆ ಲಭ್ಯವಾಗಿತ್ತು .ಈಗ ಸರ್ಕಾರ ದೇಶಾದ್ಯಂತ ಈ ವ್ಯವಸ್ಥೆ ಜಾರಿಗೆ ತರುವುದರ ಮೂಲಕ  ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶಿಕ್ಷಣದಲ್ಲಿ ಹೊಸ ಮನ್ವಂತರ ಕ್ಕೆ ನಾಂದಿ ಹಾಡಲಿದೆ.


ಉದ್ದೇಶಿತ ಹೊಸ ಶಿಕ್ಷಣ ನೀತಿಯಲ್ಲಿ ಸಂಕಲನಾತ್ಮಕ ಮೌಲ್ಯ ಮಾಪನಕ್ಕಿಂತ ರೂಪಣ ಮೌಲ್ಯ ಮಾಪನ ಕ್ಕೆ ಒತ್ತು ನೀಡಿರುವುದು ಮತ್ತೊಂದು ಸ್ವಾಗತಾರ್ಹ ಬೆಳವಣಿಗೆ. ಇದರ ಜೊತೆಯಲ್ಲಿ ಅಭಿವ್ಯಕ್ತಿ ಪ್ರಕ್ರಿಯೆ ಅಧಾರಿತ ಶಿಕ್ಷಣ ವ್ಯವಸ್ಥೆ ಗೆ ಹೆಚ್ಚು ಒತ್ತು ನೀಡಿದೆ. ಕೇವಲ ಸಾಂಪ್ರದಾಯಿಕ ವಿಷಯಗಳಾದ ಗಣಿತ ,ವಿಜ್ಞಾನ, ವಿಷಯಗಳ ಜೊತೆಗೆ ಕಲೆ, ದೈಹಿಕ ಶಿಕ್ಷಣ, ವೃತ್ತಿ ಶಿಕ್ಷಣ, ಕೃತಕ ಬುದ್ಧಿಮತ್ತೆ, ಮುಂತಾದ ವಿಷಯಗಳನ್ನು ಕಲಿಕೆಯನ್ನು ಪಠ್ಯ ಕ್ರಮದಲ್ಲಿ ಸೇರಿಸಲು ಉದ್ದೇಶಿಸಿದೆ. ಇದು ಮುಂದಿನ ದಿನಗಳ ಅಗತ್ಯತೆ ಕೂಡಾ ಎಂಬುದನ್ನು ನಾವು ಗಮನಿಸಬೇಕಿದೆ.


ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲಿ ಆಗಬೇಕೆಂಬುದನ್ನು  ಈ ನೀತಿಯು ಒತ್ತಿ ಹೇಳಿದೆ .ಇದನ್ನು ಯಾರೂ ಅಲ್ಲಗಳೆಯಲಾರರು. ಇದರ ಜೊತೆಗೆ ಉನ್ನತ ಶಿಕ್ಷಣಕ್ಕೆ ಸಹ ಮಾತೃ ಭಾಷೆಯ ಮಾದ್ಯಮ ದಲ್ಲಿ ಕಲಿಯಲು ಅನುವು ಮಾಡಿಕೊಡುತ್ತದೆ ಸ್ಥಳೀಯ 11 ಭಾಷೆಯಲ್ಲಿ ಬಿ. ಟೆಕ್ ಅಧ್ಯಯನ ಮಾಡಬಹುದು ಅದರಲ್ಲಿ ನಮ್ಮ ಕನ್ನಡ ಭಾಷೆ ಸಹ ಸೇರಿದೆ ಇದು ವಿದ್ಯಾರ್ಥಿಗಳ ಕಲಿಕೆ ದೃಷ್ಟಿಯಿಂದ ಮತ್ತು ನಮ್ಮ ಭಾಷೆಯ ಬೆಳವಣಿಗೆಗೆ ಪೂರಕ ಎಂಬುದರಲ್ಲಿ ಸಂದೇಹವಿಲ್ಲ 


ಉನ್ನತ ಶಿಕ್ಷಣದಲ್ಲಿ ಬಹುಶಿಸ್ತೀಯ ಅಧ್ಯಯನಕ್ಕೆ ಈ ನೀತಿಯು ಅನುವುಮಾಡಿಕೊಡುತ್ತದೆ ವಿಜ್ಞಾನ ಕಲಿಯುವವರಿಗೆ ಮಾನವಿಕ ವಿಷಯಗಳ ಕಲಿಯಲು, ಮಾನವಿಕ ವಿಷಯ ಕಲಿಯುವರಿಗೆ ವಿಜ್ಞಾನ ಕಲಿಯಲು ಪ್ರೇರಣೆ ನೀಡುವುದು ಎಲ್ಲರಿಗೂ ಎಲ್ಲಾ ಜ್ಞಾನ ಪಡೆಯಲು ಸಹಾಯಕವಾಗಿದೆ.ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಬಹುಶಿಸ್ತಿನ , ಬಹುವಿಷಯಗಳ ,ಶಿಕ್ಷಣದ ಜೊತೆಗೆ ವಿವಿಧ ಶಿಕ್ಷಣ ವಿಭಾಗಗಳ ನಡುವೆ ,ಸಂವಹನ, ಚರ್ಚೆ, ಸಂಶೋದನೆ ಮಾಡಲು ಹೊಸ ಶಿಕ್ಷಣ ನೀತಿ ಪ್ರೇರಣೆ ನೀಡುತ್ತವೆ .


ಇಂತಹ ಉದಾತ್ತವಾದ ಚಿಂತನೆಗಳಿಂದ ಕೂಡಿರುವ , ಹೊಸ ಶಿಕ್ಷಣ ನೀತಿಯು ಭವಿಷ್ಯದ ಉತ್ತಮ ನಾಗರಿಕರನ್ನು ಮಾನವ ಸಂಪನ್ಮೂಲ ವ್ಯಕ್ತಿಗಳಾಗಿ ರೂಪಿಸಿ ತನ್ಮೂಲಕ ನಮ್ಮ ರಾಷ್ಟ್ರದ ಪ್ರಗತಿಯನ್ನು ಕಾಣಲು ಬಯಸಿದೆ. ಇಂತಹ ನೀತಿಯು ನಮ್ಮ ರಾಜ್ಯದಲ್ಲಿ ಮೊದಲಿಗೆ ಜಾರಿಗೆ ಬಂದಿರುವುದು ಕನ್ನಡಾಂಬೆಯ ಮುಕುಟಕ್ಕೆ ಮತ್ತೊಂದು ಗರಿ ಸೇರ್ಪಡೆ ಆದಂತಾಗಿದೆ. ಇದರ ಜೊತೆಗೆ ಈ ನೀತಿಯ ಸಮರ್ಪಕವಾದ ಅನುಷ್ಠಾನ ನಮ್ಮೆಲ್ಲರ ಹೊಣೆ ಎಂಬುದನ್ನು ಮರೆಯಬಾರದು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


22 August 2021

ನನ್ನಣ್ಣ .ಎರಡು ಹನಿ

 



ನನ್ನಣ್ಣನ ಕುರಿತು ಎರಡು ಹನಿ


ನನ್ನಣ್ಣ ಕೃಷಿಕ 



ನನ್ನಣ್ಣ ಸುರೇಶ

ಮನೆಯವರು ಕನಸು 

ಕಂಡರು ನನ್ನಣ್ಣ  ಓದಲಿ  

 ಬಿಸ್ಸಿ ಕೃಷಿ|

ಇಂದು ಅವನು 

ನಿಜವಾಗಿಯೂ

ಅನ್ನದಾತ  ಅದರಲ್ಲೇ

ಕಾಣುತಿರುವ ಖುಷಿ||


ಜೈ ಜವಾನ್ ಜೈ ಕಿಸಾನ್


ನನ್ನಣ್ಣ ಕನಸ ಕಂಡನು

ಆಗಬೇಕೆಂದು ಜವಾನ್|

ಎದೆಯಳತೆ ಕಡಿಮೆಯೆಂದು

ತಿರಸ್ಕರಿಸಿದರು .

ನಾನು ಎದೆಯುಬ್ಬಿಸಿ 

ಹೇಳುವೆನು ನನ್ನಣ್ಣ ಕಿಸಾನ್||

ಜೈ ಜವಾನ್ 

ಜೈ ಕಿಸಾನ್



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

20 August 2021

ಲಕುಮಿಗೆ ನಮನ


 


ಖುಷಿ


ಖುಷಿಯಾಗುವುದೆನ್ನ

ಮನ ನಾ ಮುಂಜಾನೆಯ

ನಿದ್ದೆಯಿಂದೆದ್ದಾಗ |

ನಮಿಸುವೆನು ಶಿರಬಾಗಿ 

ವರಮಹಾಲಕುಮಿಗೆ

ಬದುಕಿಸಿದ್ದಕ್ಕಾಗಿ ಮತ್ತೊಂದು

ಮತ್ತೊಂದು ದಿನ

ನೋಡಲು ಈ ಜಗ ||


ಸಿಹಿಜೀವಿ 



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

18 August 2021

ಡುಂಡಿರಾಜರು


 


ಇವರು ಕನ್ನಡದ

ಹೆಮ್ಮೆಯ ಹನಿ ಕವಿ 

ಡುಂಡಿರಾಜರು|

ಇವರ ಕವಿತೆ ,ಹನಿ,

ಓದಲು ಮತ್ತು ಕೇಳಲು 

ಎಲ್ಲರೂ ಹಾಜರು||


(ಇಂದು ಹನಿ ಕವಿ ಡುಂಡಿರಾಜರ ಜನ್ಮ ದಿನ ಅವರಿಗೆ ಈ ಹನಿ ಅರ್ಪಣೆ)

ಗೆದ್ದೆತ್ತಿನ ಬಾಲ ‌.ಹನಿ

 

ನನ್ನ ಗುಣಗಳ ಹೊಗಳಿ

ಹಲವರು ಏರಿಸಿರುವರು

ಹೊನ್ನ ಶೂಲ|

ಅದೇನು ಅಚ್ಚರಿಯಲ್ಲ

ಬಿಡಿ ಎಲ್ಲರೂ ಹಿಡಿದೇ

ಹಿಡಿಯುವರು 

ಗೆದ್ದೆತ್ತಿನ ಬಾಲ||


(ಇಂದು ಹನಿ ಕವಿ ಡುಂಡಿರಾಜರ ಜನ್ಮ ದಿನ ಅವರಿಗೆ ಈ ಹನಿ ಅರ್ಪಣೆ)



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

17 August 2021

ಖರ್ಚು ಯಾಕೆ ? ಹನಿಗವನ


 ತವರು ಮನೆಯವರು

ಬಂದರೆ ನನ್ನಾಕೆಗೆ

ವಿಧ ವಿಧದ

ಭಕ್ಷ್ಯ ಭೋಜನ ಮಾಡಿ

ಬಡಿಸುವ ಬಯಕೆ|

ನಮ್ಮ ಕಡೆಯವರು

ಬಂದರೆ ಗೊನಗುವಳು

ಸಾಮಾನ್ಯ ಅಡುಗೆ ಸಾಕು

ವಿಶೇಷ ಅಡಿಗೆಗೆ ಸುಮ್ಮನೆ

ಖರ್ಚು ಯಾಕೆ?||




ಸಿಹಿಜೀವಿ

ಸಿ ಜಿ ವೆಂಕಟೇಶ್ವರ


ಶಾಲೆ ಆರಂಭವಾಗುತ್ತಿದೆ.....


 


ಶಾಲೆಯ ಆರಂಭವಾಗುತ್ತಿದೆ

ಬನ್ನಿ ಮಕ್ಕಳೆ ಶಾಲೆಯ ಕಡೆಗೆ 


ಬಹುದಿನಗಳ ನಂತರ ಮಕ್ಕಳು ಶಾಲೆಯ ಕಡೆಗೆ ಹೆಜ್ಜೆ ಹಾಕಲು ನಮ್ಮ ಸರ್ಕಾರ ಮುಹೂರ್ತ ಫಿಕ್ಸ್ ಮಾಡಿದೆ. ಇದೇ ತಿಂಗಳ  ಇಪ್ಪತ್ಮೂರರಿಂದ ಎಂಟು ಮತ್ತು ಒಂಭತ್ತನೆಯ ತರಗತಿಗಳನ್ನು ಅರ್ಧ ದಿನದ ಅವಧಿಗೆ ತೆರೆಯಲು ಅನುಮತಿಯನ್ನು ನೀಡಿದೆ. ಇದಕ್ಕೆ ಒಲ್ಲದ ಮನಸ್ಸಿನಿಂದ ಪೋಷಕರು ಒಪ್ಪಿದ್ದಾರೆ .ಸರ್ಕಾರದ ಸದಾಶಯಕ್ಕೆ ನಾಗರೀಕರು ಮತ್ತು ಶಿಕ್ಷಕರು ಸ್ವಾಗತಿಸಿದ್ದಾರೆ. 


ಬಹುದಿನಗಳಿಂದ ಕರೋನ ಮಹಾಮಾರಿಯಿಂದ  ಔಪಚಾರಿಕ ಕಲಿಕೆಯಿಂದ ವಂಚಿತರಾದ ಮಕ್ಕಳು ಕಲಿಕೆಯ ಹಳಿಗೆ ಬರುವಂತಾಗಲಿ ಇದಕ್ಕೆ ಸಮುದಾಯದ, ಶಿಕ್ಷಕರ,  ಪೋಷಕರ ಬೆಂಬಲ ಅಗತ್ಯ.ತನ್ಮೂಲಕ ಮಕ್ಕಳ ಸುರಕ್ಷಿತ ಕಲಿಕೆಗೆ ಸರ್ವರೂ ಪಣತೊಡಬೇಕಿದೆ 


ಸುರಕ್ಷಿತ ಕಲಿಕೆ ಹೇಗೆ?


ಶಾಲೆ, ಕಾಲೇಜು ಆವರಣದಲ್ಲಿ ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸಬೇಕಿದೆ.ಶಿಕ್ಷಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು  ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಿದೆ. ವಿದ್ಯಾರ್ಥಿಗಳು ತಮ್ಮ ಪೋಷಕರಿಂದ ಶಾಲೆಗೆ ಕಳಿಸಲು ಮತ್ತು ಕೋವಿಡ್ ನಿಯಮ ಪಾಲನೆ ಮಾಡುವ ಕುರಿತು ಒಪ್ಪಿಗೆ ಪತ್ರ ತರಬೇಕಿದೆ.


ವಸತಿ ಶಾಲೆಗಳಲ್ಲಿ ಹಾಗೂ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ 72 ಗಂಟೆಗಳ ಅಂತರದಲ್ಲಿ ಕೊವಿಡ್ ನೆಗೆಟಿವ್ ವರದಿ ಸಲ್ಲಿಸಬೇಕಿದೆ.ಶಾಲೆ-ಕಾಲೇಜಿಗೆ ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯವಲ್ಲದಿದ್ದರೂ ಪೋಷಕರು ಸ್ವ ಇಚ್ಛೆಯಿಂದ ಮಕ್ಕಳನ್ನು ಶಾಲೆಗೆ ಕಳಿಸಬೇಕು ಬೌತಿಕ ತರಗತಿಗೆ ಅನಿವಾರ್ಯ ಕಾರಣದಿಂದಾಗಿ ಹಾಜರಾಗದ ವಿದ್ಯಾರ್ಥಿಗಳು  ಅನ್​ಲೈನ್​ ತರಗತಿಯಲ್ಲಿ ಕಲಿಕೆ ಮುಂದುವರೆಸಬಹುದು .

ತರಗತಿಯ  ಕೊಠಡಿಯಲ್ಲಿ 20 ವಿದ್ಯಾರ್ಥಿಗಳಿಗೆ ಮಾತ್ರ ಕಲಿಕೆಗೆ ಅವಕಾಶ ನೀಡಲಾಗುತ್ತದೆ ಬ್ಯಾಚ್ ಮಾದರಿಯಲ್ಲಿ ತರಗತಿ ಭೋದನೆ ನಡೆಯುತ್ತದೆ ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿಗೆ ವ್ಯಾಕ್ಸಿನ್ ಕಡ್ಡಾಯವಾಗಿರುವುದರಿಂದ ಪೋಷಕರು ಧೈರ್ಯದಿಂದ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಬಹುದು.


ಸಾಮಾಜಿಕ ಅಂತರದ ದೃಷ್ಟಿಯಿಂದ ಕಲಿಕೆಗೆ ಶಾಲೆಯ ಎಲ್ಲಾ ಕೊಠಡಿಗಳನ್ನು ಬಳಕೆ ಮಾಡುವುದರಿಂದ ಎಲ್ಲಾ ಕೊಠಡಿಗಳ ಸ್ಯಾನಿಟೈಸ್ ಮಾಡಿ ನೈರ್ಮಲ್ಯ ಕಾಪಾಡಲಾಗುವುದು. ಮನೆಯಿಂದ ಬರುವಾಗ ಮಕ್ಕಳು ಮಾಸ್ಕ್ ,ಸ್ಯಾನಿಟೈಸ್, ಬಿಸಿನೀರು ತರಲಿ ,ಅಗತ್ಯ ಬಿದ್ದರೆ  ಶಾಲೆಗಳಲ್ಲಿ ಬಿಸಿ ನೀರು ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗುತ್ತದೆ.

 ಹೊರಗಡೆಯ ಜನರಿಗೆ ಶಾಲಾ ಪ್ರವೇಶ ನಿರ್ಬಂಧ ಹೇರಲಾಗಿದೆ ಎಸ್ ಡಿ ಎಂ ಸಿ ಸದಸ್ಯರು ಮತ್ತು ಪೋಷಕರು ಶಾಲಾ ಕಛೇರಿಗೆ ಮಾತ್ರ ಭೇಟಿ ನೀಡಲು ಅವಕಾಶವನ್ನು ನೀಡಿದೆ.

ಶಾಲೆಯ ಸುತ್ತಮುತ್ತ ತಿಂಡಿ ವ್ಯಾಪಾರಕ್ಕೆ ನಿರ್ಬಂಧವಿರುವುದು ಮಕ್ಕಳು ಅನವಶ್ಯಕವಾಗಿ ಅಂಗಡಿಗಳಲ್ಲಿ ಮುಂದೆ ಗುಂಪು ಸೇರದಂತೆ ಕ್ರಮ ಕೈಗೊಳ್ಳಬೇಕಿದೆ.

ಮಕ್ಕಳು ಗುಂಪಾಗಿ ಆಡುವ ಹೊರಂಗಣ ಆಟಕ್ಕೆ ಅವಕಾಶವಿಲ್ಲ

ಪ್ರತಿ ವಾರಕ್ಕೊಂದು ಭಾರಿ ಸ್ಥಳೀಯ ವೈದ್ಯಾಧಿಕಾರಿಗಳಿಂದ ಮಕ್ಕಳು ಹಾಗೂ ಶಿಕ್ಷಕರ ಆರೊಗ್ಯ ತಪಾಸಣೆ ಮಾಡಲಾಗುತ್ತದೆ .ಈ ವೇಳೆ ಕೋವಿಡ್ ಲಕ್ಷಣಗಳು ಕಂಡುಬಂದರೆ ಸೂಕ್ತ ವೈದ್ಯಕೀಯ ಚಿಕಿತ್ಸೆಯನ್ನು ನೀಡಲಾಗುತ್ತದೆ.


ಆದ್ದರಿಂದ ಬಹಳ ದಿನಗಳ ನಂತರ ಆರಂಭವಾಗುವ ಶಾಲೆಯಲ್ಲಿ  ನಮ್ಮ ಮಕ್ಕಳ ಕಲಿಕೆ ಉತ್ತಮವಾಗಲು ನಾವೆಲ್ಲರೂ ನಮ್ಮ ‌ನಮ್ಮ ಕರ್ತವ್ಯಗಳನ್ನು ಮಾಡೋಣ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಸಿಂಹ ಕಟಿ

 ಸ್ಪರ್ಧೆಗೆ


*ಸಿಂಹಕಟಿ*


ನನ್ನ ಬಯಕೆಯನ್ನು

ನನ್ನವಳಿಗೆ ಹೇಳಿದೆ

ನನಗೆ ಬಹಳ ಇಷ್ಟ

ಸಿಂಹ ಕಟಿ, ತೊಂಡೆ ತುಟಿ|

ಅವಳಂದಳು ಅದಕ್ಕೇನಂತೆ

ನಾನೂ ಪ್ಲಾಸ್ಟಿಕ್ ಸರ್ಜರಿ 

ಮಾಡಿಸಿಕೊಳ್ಳುವೆ ಕೊಡಿ

ಒಂದು ಕೋಟಿ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

16 August 2021

ಆಟವಲ್ಲ .ಹನಿ

 ಸ್ಪರ್ಧೆಗೆ


*ಆಟವಲ್ಲ*


ಎನು ಮಾಡಿದರೂ 

ಇರಬಾರದು ದುಡುಕು 

ಸಹನೆಯಿರಬೇಕು ತಿಳಿ 

ಆಟವಲ್ಲ ಇದು ಬದುಕು


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತರಗೆಲೆ ಸದ್ದು .ಹನಿ


 


ತರಗೆಲೆ ಸದ್ದು 


ಸಂತಸದಿ ನಲಿವೆವು

ನಮ್ಮವರೊಂದಿಗೆ

ಮನವು ಖುಷಿಯಾಗಿದ್ದಾಗ

ನಗುವೆವವು ಬಿದ್ದು ಬಿದ್ದು|

ಒಂಟಿಯಾಗಿದ್ದಾಗ 

ಕತ್ತಲೆಯಾಗಿದ್ದಾಗ 

ಮನಕೆ ದುಗುಡ

ಆವರಿಸಿದಾಗ 

ಭಯಗೊಳ್ಳುವೆವು

ಕೇಳಿ ತರಗೆಲೆಯ ಸದ್ದು||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


15 August 2021

ಭಾರತದ ಸಾಧನೆಗೆ ಹೆಮ್ಮೆ ಪಡೋಣ .


 


ಭಾರತದ ಸಾಧನೆಗೆ ಹೆಮ್ಮೆ ಪಡೋಣ 



ಸ್ವಾತಂತ್ರ್ಯದ ೭೫ ನೇ ಸಂಭ್ರಮಾಚರಣೆ ಆಚರಿಸುವ ಈ ದಿನದಂದು ನಾವು ಸಾಧಿಸಿರುವುದು ಬಹಳಷ್ಟು ಸಾಧಿಸಬೇಕಿರುವುದು ಮತ್ತಷ್ಟು.


ಈ ವರ್ಷದ ಸ್ವಾತಂತ್ರ್ಯ ಸಂಭ್ರಮದ ಧ್ಯೇಯ ವಾಕ್ಯ "ದೇಶ ಮೊದಲು ,ಯಾವಾಗಲೂ ಮೊದಲು" ಹೌದು ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಎಂಬಂತೆ ಭಾರತೀಯರಾದ ನಾವು ಮಾತೆಯ ಪಾದಗಳಲ್ಲಿ ವೀನೀತರಾಗಿ ವಂದಿಸಿ ಗೌರವಿಸಬೇಕು, ಅದನ್ನು ನಾವು ಮಾಡುತ್ತಲೇ ಬಂದಿದ್ದೇವೆ .ಅದರ ಫಲವಾಗಿ ನಾವೆಲ್ಲರೂ ಸೇರಿ ಅಭಿವೃದ್ಧಿಯ ತೇರನ್ನು ಎಳೆದಿದ್ದೇವೆ . ಈ ಎಪ್ಪತ್ನಾಲ್ಕು ವರ್ಷಗಳ ಸಾಧನೆಯನ್ನು ಒಮ್ಮೆ ಸಿಂಹಾವಲೋಕನ ಮಾಡಿದಾಗ ನಮ್ಮ ಬಗ್ಗೆ ನಮಗೇ ಹೆಮ್ಮೆ ಎನಿಸದಿರದು.



ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ರವರ ದೂರದೃಷ್ಟಿಯ ಫಲವಾಗಿ ನೂರಾರು ಸ್ಥಳಿಯ ಸಂಸ್ಥಾನಗಳಲ್ಲಿ ಹರಿದು ಹಂಚಿಹೋಗಿದ್ದ ಭಾರತೀಯರು ಏಕೀಕರಣಗೊಂಡು ಐಕ್ಯತೆಯ ಮಂತ್ರ ಸಾರಿದೆವು ಇದು ನಮ್ಮ ಹೆಮ್ಮೆಯ ಸಾಧನೆ.


ಬರಿದಾಗಿದ್ದ ಬೊಕ್ಕಸ ಬಿಟ್ಟು ಹೋದ ಬ್ರಿಟೀಷರನ್ನು ಬೈಯುತ್ತಾ ಕುಳಿತುಕೊಳ್ಳದೇ ನಾವುಗಳು ಹೆಮ್ಮೆಯ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ .ನಮ್ಮ ಜಿ .ಡಿ. ಪಿ ಸ್ವಾತಂತ್ರ್ಯ ಬಂದಾಗ 2.7 ಲಕ್ಷ ಕೋಟಿ ಇದ್ದದ್ದು ಈಗ 135 ಲಕ್ಷ ಕೋಟಿಗೆ ಏರಿಕೆ ಕಂಡಿದೆ. ಅದರ ಪರಿಣಾಮವಾಗಿ ಇಂದು ಪ್ರಪಂಚದ ಆರನೆಯ ಅತಿದೊಡ್ಡ  ಬಲಿಷ್ಠವಾದ ಆರ್ಥಿಕತೆಯಾಗಿ ಹೊರಹೊಮ್ಮಿದೆ  ಎಂಬುದಕ್ಕೆ ನಾವು ಹೆಮ್ಮೆ ಪಡಬೇಕಿದೆ.


ನಮ್ಮ ದೇಶಕ್ಕೆ ಸ್ವತಂತ್ರ ಲಭಿಸಿದ ಸಮಯದಲ್ಲಿ ದೇಶವು 

ಆಹಾರದ ಕೊರತೆಯಿಂದ ಬಳಲುತ್ತಿತ್ತು ಆಗ ದೇಶದ ಆಹಾರ ಉತ್ಪಾದನೆ 50 ದಶಲಕ್ಷ ಟನ್ ಈಗ ಅದು 250 ದಶಲಕ್ಷ ಟನ್ ದಾಟಿದೆ. ವಿಜ್ಞಾನ ತಂತ್ರಜ್ಞಾನ ದ ಸಹಾಯದಿಂದ ಹಸಿರು ಕ್ರಾಂತಿ, ನೀಲಿ ಕ್ರಾಂತಿ ಮುಂತಾದ ಕ್ರಾಂತಿಗಳ ಸಹಾಯದಿಂದ ಇಂದು ಆಹಾರದಲ್ಲಿ ನಾವು ಸ್ವಾವಲಂಬನೆ ಹೊಂದಿರುವೆವು ಇದು ಬಹುದೊಡ್ಡ ಸಾಧನೆ.


ಭಾರತವೆಂದರೆ ಬರೀ ಆಮದು ಮಾಡಿಕೊಳ್ಳುವ ದೇಶವೆಂಬ ಹಣೆಪಟ್ಟಿ ಕಳಚಿ ಕೈಗಾರಿಕೀಕರಣ ದಲ್ಲಿ ಇಂದು ನಾವು ಸಾಧಿಸಿರುವ ಪ್ರಗತಿ ನಮ್ಮ ರಪ್ತನ್ನು ಹೆಚ್ಚಿಸಿ ವಿದೇಶಿ ವಿನಿಮಯ ತಂದುಕೊಟ್ಟಿದೆ ಜೊತೆಗೆ ದೇಶದ ಆರ್ಥಿಕತೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ.


ಬಾಹ್ಯಾಕಾಶ ಕ್ಷೇತ್ರದಲ್ಲಿ 1975ರಲ್ಲಿ ಆರ್ಯಭಟ ಉಪಗ್ರಹ ಉಡಾವಣೆ ಮಾಡಿದ ಮೇಲೆ ಹಿಂತಿರುಗಿ ನೋಡಲೇ ಇಲ್ಲ ಏಕಕಾಲದಲ್ಲಿ ನೂರಾರು ಉಪಗ್ರಹಗಳ ಉಡಾವಣೆ ಸಾಧನೆ ,ಮಂಗಳಯಾನ, ಉದ್ದೇಶಿತ ಚಂದ್ರ ಯಾನ, ಆದಿತ್ಯ ಯಾನ ಇವುಗಳು ನಮ್ಮ ದೇಶದ ಇಸ್ರೋ ಸಾಧನೆಗಳು ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡುವಂತೆ ಮಾಡಿದೆ.


ಸಾರಿಗೆ ಸಂಪರ್ಕ ಕ್ಷೇತ್ರದಲ್ಲಿ ಕಳೆದೆರಡು ದಶಕದಲ್ಲಿ ಭಾರತವು ಅಭೂತಪೂರ್ವ ಸಾಧನೆ  ದಾಖಲಿಸಿದೆ. 1950 ದಶಕದಲ್ಲಿ ಒಟ್ಟು 4 ಲಕ್ಷ ಕಿಲೋಮೀಟರ್ ರಸ್ತೆ ನಿರ್ಮಾಣ ಆಗಿದ್ದರೆ ಪ್ರಸ್ತುತ 6 ಲಕ್ಷ ಕಿಲೋಮೀಟರ್ ಗೂ ಹೆಚ್ಚು ರಸ್ತೆ ನಿರ್ಮಾಣ ಮಾಡಲಾಗಿದೆ. 1995 ರಲ್ಲಿ ಆರಂಭವಾದ ಮೊಬೈಲ್ ಬಳಕೆ ಇಂದು 120 ಕೋಟಿ ಜನ ಮೊಬೈಲ್ ಬಳಸುತ್ತಿದ್ದಾರೆ .  ಸರಾಸರಿ ದಿನಕ್ಕೆ ಹದಿನೆಂಟು ರಿಂದ ಇಪ್ಪತ್ತು ಕಿಲೋಮೀಟರ್ ರಸ್ತೆ ‌ನಿರ್ಮಾಣ, ಪ್ರಪಂಚದಲ್ಲೇ ಅಗ್ಗದ ಇಂಟರ್ ನೆಟ್ ಲಭ್ಯತೆಯ ಪರಿಣಾಮವಾಗಿ ಇದು ಪ್ರಾಥಮಿಕ ಮತ್ತು ದ್ವೀತಿಯ ವಲಯದ ಆರ್ಥಿಕ ಕ್ಷೇತ್ರದಲ್ಲಿ ಪ್ರಗತಿಗೆ ನಾಂದಿಯಾಯಿತು.


ಸಾಕ್ಷರತೆ ಮತ್ತು ಉನ್ನತ ಶಿಕ್ಷಣದಲ್ಲಿ ನಮ್ಮ ಸಾಧನೆ ಗಮನಾರ್ಹ ಸ್ವಾತಂತ್ರ್ಯ ಬಂದಾಗ     ಕೇವಲ ಶೇಕಡಾ12℅ ರಷ್ಟು ಇದ್ದ ಸಾಕ್ಷರತೆ ಪ್ರಮಾಣ ಇಂದು   77% ಗೆ ಏರಿದೆ.  1950 ರಲ್ಲಿ27 ವಿಶ್ವ ವಿದ್ಯಾಲಯ ಇದ್ದವು ಪ್ರಸ್ತುತ 984 ವಿಶ್ವವಿದ್ಯಾಲಯಗಳು ಇಂದು ಭಾರತದಲ್ಲಿ ವಿದ್ಯಾದಾನ ನೀಡಿರುತ್ತಿರುವುದು ವಿದೇಶಿಯರ ಗಮನ ಸೆಳೆದಿದೆ.2020 ರ ಹೊಸ ಶಿಕ್ಷಣ ನೀತಿಯ ಮೂಲಕ ಭಾರತದ ಶಿಕ್ಷಣವನ್ನು ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ಕೊಂಡೊಯ್ಯಲು ಯೋಜನೆ ಸಿದ್ದವಾಗಿದೆ.


ಆರೋಗ್ಯ ಕ್ಷೇತ್ರದಲ್ಲೂ ಗಮನಾರ್ಹ ಸಾಧನೆ ನಮ್ಮದಾಗಿದೆ ವೈದ್ಯಕೀಯ ಮೂಲಸೌಕರ್ಯಗಳು ಹೆಚ್ಚಾಗಿವೆ ಅಂದು ಸರಾಸರಿ ಜೀವಿತಾವಧಿ 32 ವರ್ಷಗಳು ಈಗ ಅದು 75 ವರ್ಷಗಳಿಗೆ ಏರಿದೆ.ಕೊರೊನಾದಂತಹ ಕಾಲದಲ್ಲಿ ಲಸಿಕೆ ಕಂಡುಹಿಡಿಯುವಲ್ಲಿ ಭಾರತದ ವೈದ್ಯರು ಮತ್ತು ವಿಜ್ಞಾನಿಗಳ ಕೊಡುಗೆ ಅಪಾರ.


ಕ್ರೀಡಾಕ್ಷೇತ್ರದಲ್ಲಿ ಭಾರತವು ಎಲ್ಲಾ ಕ್ರೀಡೆಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುತ್ತಾ ಬಂದಿದೆ. ಅದಕ್ಕೆ ಇತ್ತೀಚೆಗೆ ಮುಕ್ತಾಯಗೊಂಡ ಒಲಿಂಪಿಕ್ ಕ್ರೀಡೆಗಳಲ್ಲಿ ನಮ್ಮ ದೇಶದ ಸಾಧನೆ ಉತ್ತಮವಾಗಿರುವುದು ನಮಗೆ ಸಂತಸ ತಂದಿದೆ. 


ಇನ್ನೂ ಅನೇಕ ಕ್ಷೇತ್ರದಲ್ಲಿ ಭಾರತದ ಸಾಧನೆ ನಮಗೆ ಹೆಮ್ಮೆ ತಂದಿದೆ. 


ಇದರ ಜೊತೆಗೆ ನಾವು ಹಲವು ಕ್ಷೇತ್ರದಲ್ಲಿ ಹಿನ್ನೆಡೆ ಅನುಭವಿಸುತ್ತಿರುವುದನ್ನು ಅಲ್ಲಗಳೆಯಲಾಗುವುದಿಲ್ಲ  . ಆರ್ಥಿಕ ಅಸಮಾನತೆ, ನಿರುದ್ಯೋಗ, ಸ್ವಜನಪಕ್ಷಪಾತ,  ಭ್ರಷ್ಟಾಚಾರ, ಜಾತಿ ಪದ್ದತಿ, ಕೋಮುವಾದ, ಆಂತರಿಕ ಕಚ್ಚಾಟ, ಇವುಗಳು ಶೀಘ್ರವಾಗಿ ತೊಲಗಬೇಕಿದೆ .ಈ ಅನಿಷ್ಟಗಳಿಂದ ಮುಕ್ತರಾಗಿ ಈಗ ಆಗಿರುವ ಪ್ರಗತಿಯ ಜೊತೆಗೆ ಇನ್ನೂ ಮುಂದೆ ಸಾಗಿ ಭಾರತಾಂಬೆಯ ಮೊಗದಲ್ಲಿ ಮಂದಹಾಸ ಮೂಡಿಸಬೇಕಿದೆ. ಸ್ವಾತಂತ್ರ್ಯ ಗಳಿಸಿದ ಎಪ್ಪತ್ತೈದು ವರ್ಷಗಳ ಅಮೃತ ಮಹೋತ್ಸವ ಆಚರಣೆಯ ಈ ಪರ್ವ ಕಾಲದಲ್ಲಿ ಏಕತೆ, ದೇಶಭಕ್ತಿ, ಮೌಲ್ಯಗಳು, ಮುಂತಾದ ಸುವಿಚಾರಗಳು ಅಮೃತವಾಹಿನಿಯಂತೆ ಭಾರತೀಯ ಎದೆಯಿಂದ ಎದೆಗೆ ಹರಿಯುತಿರಲಿ ಸತತ.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ




14 August 2021

ಸ್ವಾತಂತ್ರ ಸಂಭ್ರಮ .ಹನಿ


 


ಸ್ವಾತಂತ್ರ್ಯ ಸಂಭ್ರಮ 


ಸ್ವಾತಂತ್ರ್ಯ ಪಡೆದ

ನಮಗೆಲ್ಲರಿಗೂ 

ಎಪ್ಪತ್ತೈದನೇ ವರ್ಷದ

ಅಮೃತಮಹೋತ್ಸವದ

ಸಂಭ್ರಮ|

ಈ ಹೊತ್ತಿನಲ್ಲಿ

ನಾವೆಲ್ಲರೂ ಸೇರಿ

ಭಾರತಾಂಭೆಯ ಪಾದಕೆ

ಅರ್ಪಿಸೋಣ ದೇಶಭಕ್ತಿಯ

ಕುಸುಮ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಸ್ವಾತಂತ್ರದ ಕ್ರಾಂತಿ ದೀಪಗಳು


 


 ಸ್ವಾತಂತ್ರ್ಯ  ಕ್ರಾಂತಿ ದೀಪಗಳು


ಸ್ವಾತಂತ್ರ ಸೇನಾನಿಗಳೇ  ನಿಮಗಿದೋ ನಮ್ಮ ನಮನಗಳು |

ಮರೆಯಲಿ ಹೇಗೆ ನೀವು ಸ್ವಾತಂತ್ರ್ಯದ ಕ್ರಾಂತಿ ದೀಪಗಳು.||


ಸ್ವಾತಂತ್ರ್ಯ ನಮ್ಮ ಜನ್ಮಸಿದ್ದ ಹಕ್ಕೆಂದು

ಪ್ರತಿಪಾದಿಸಿದ ಲಾಲ್ ಬಾಲ್ ಪಾಲ್

ನಿಮ್ಮ ಬಲಿದಾನ ಹೇಗೆ ಮರೆಯಲಿ 

ಸ್ವಾತಂತ್ರ್ಯ ಹಬ್ಬದಂದು ನಿಮಗೆ ನೂರೊಂದು ನಮನ.||


ಪರಂಗಿಯವರ ವಿರುದ್ದ ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯ ವಿರುದ್ದ ಸಿಡಿದೆದ್ದ ವೀರ ರಾಣಿ ಝಾನ್ಸಿ ಲಕ್ಷ್ಮಿ ಬಾಯಿರವರಿಗೆ 

ಭಾರತೀಯರ ಹೃದಯ ತುಂಬಿದ ನಮನ.||


ಬ್ರಿಟೀಷರಿಗೆ ಸಿಂಹ ಸ್ವಪ್ನ ವಾಗಿದ್ದ  ವಿದೇಶಿ ನೆಲದಲ್ಲಿ ಭಾರತ ರಾಷ್ಟ್ರೀಯ ಸೇನೆ ಕಟ್ಟಿ ಸ್ವಾತಂತ್ರ್ಯ ತಂದುಕೊಟ್ಟ ನಿಜವಾದ "ನೇತಾಜಿ "ನಿಮಗೆ ಕೋಟಿ ನಮನ.||


ಸ್ವಾತಂತ್ರ್ಯವೇ ನನ್ನ ಉಸಿರು ಎಂದು ಗುಡುಗಿದ ತಾಯ್ನಾಡಿಗೆ ಬಲಿದಾನಗೈಯ್ದ 

ಚಂದ್ರಶೇಖರ್ ಆಜಾದ್ ನಿಮಗೆ ನಮ್ಮ ಮನಪೂರ್ವಕ ನಮನ.||


ಭತ್ತದ ಬದಲು ಬಂದೂಕು ನೆಡಿರೆಂದು ಕೆಂಪು ಮೂತಿಯವರ ವಿರುದ್ದ ಗುಡುಗಿ

ಸ್ವಾತಂತ್ರ್ಯ ಸಂಗ್ರಾಮವೆಂಬ ಯಜ್ಞದಲ್ಲಿ ಹವಿಸ್ಸಾದ ಭಗತ್ ಸಿಂಗ್ ರವರಿಗೆ ಮನದಾಳದ ನಮನ.||


ಕರಿನೀರಿನ ಶಿಕ್ಷೆ ಅನುಭವಿಸಿದರೂ ಭಾರತದ ಭವ್ಯ ಭವಿಷ್ಯದ ಕನಸು ಕಂಡು, ಕಾರಗೃಹದ ಕತ್ತಲೆ ಅನುಭವಿಸಿ ನಮಗೆ ಬೆಳಕು ನೀಡಿದ ನಂದಾದೀಪ ವಿ .ಡಿ ಸಾವರ್ಕರ್ ‌ನಿಮಗೆ ಭಕ್ತಿಯ ನಮನ .||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು




ಪುಸ್ತಕ ಬಿಡುಗಡೆ ವರದಿ . ಪ್ರಜಾಪ್ರಗತಿ ೧೪/೮/೨೧


 

ಜನಮಿಡಿತ ಲೇಖನ ೧೪/೮/೨೧


 

ಸಿಹಿಜೀವಿಯ ಗಜಲ್ ಪುಸ್ತಕ ಬಿಡುಗಡೆ .ವರದಿ ೧೩/೮ ೨೧


 

12 August 2021

ಸಿಹಿಜೀವಿಯ ಹನಿಗಳೊಂದಿಗೆ ಜೀವನ .


 



ನನ್ನ ಈವರೆಗಿನ ಬದುಕು ಅನೇಕ ಏಳು ಬೀಳುಗಳಿಂದ ಕೂಡಿದೆ.ಆದರೂ ಸುಂದರವಾಗಿದೆ.


ನನ್ನ ಬದುಕಲ್ಲಿ 

ಕಂಡಿದ್ದೇನೆ 

ಏಳು ಬೀಳು|

ಆಶಾವಾದವಿದೆ

ಮುಂದೂ ಕೂಡಾ

ಸಂಭ್ರಮಿಸುವೆ 

ನನ್ನ ಬಾಳು||



ನನಗೀಗ ನಲವತ್ತಾರು ವರ್ಷಗಳು ತುಂಬಿವೆ ಹಿಂತಿರುಗಿ ನೋಡಿದಾಗ ಕೆಲ ಸಿಹಿ ಕೆಲ ಕಹಿ ಘಟನೆಗಳು ನೆನಪಾಗುತ್ತವೆ


ನನಗೀಗ ವಯಸ್ಸು

ನಲವತ್ತಾರು|

ಹಿಂತಿರುಗಿ ನೋಡಿದರೆ

ನೆನಪುಗಳದೇ

ಕಾರುಬಾರು||



ನಾನೊಬ್ಬ ಅಧಿಕಾರಿ ಆಗಬೇಕೆಂಬ ಆಸೆಯಿತ್ತು ಈಗ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ.


ನನಗೂ ಆಸೆ

ಇತ್ತು ಒಬ್ಬ

ಗೌರವ ಪಡೆಯಲು

ದಕ್ಷ ಅಧಿಕಾರಿ

ಆಗಬೇಕೆಂದು|

ಶಿಕ್ಷಕನಾಗಿರುವೆ

ಎಲ್ಲೇ ಹೋದರೂ

ನಮಸ್ಕರಿಸುವರು

ಗೌರವದಿಂದಲಿ

ನನ್ನ ಶಿಷ್ಯರು

ಬಂದು ಬಂದು||


ಮೊದಲು ಭ್ರಮೆ ಇತ್ತು ಕೇವಲ ಗಂಡು ಮಕ್ಕಳು ಮಾತ್ರ ಹೆಚ್ಚು ಅವರೇ ವಂಶೊದ್ದಾರಕರು ಎಂದು ಸಮಾಜದ ಇಂದಿನ ಕೆಲ ಘಟನೆಗಳ ನೋಡಿ ಎಲ್ಲಾ ಮಕ್ಕಳು ಒಂದೆ ಎಂಬುದು ಮನವರಿಕೆಯಾಯಿತು.



ಬರೀ ಗಂಡು 

ಮಕ್ಜಳ ಪಡೆಯಲು

ಆಸೆ ಪಡುವರು

ಜನ ಈ ಹೊತ್ತು|

ನನಗೆ ಇಬ್ಬರು

ಹೆಣ್ಣು ಮಕ್ಕಳು

ಹೆಮ್ಮೆಯಿಂದ 

ಸಾಗುವೆನು ನಾನು

ಅವರ ಹೊತ್ತು||



ಒಟ್ಟಾರೆ ಇದುವರೆಗಿನ ಜೀವನ ತೃಪ್ತಿಕರವಾಗಿದೆ .ವರ್ತಮಾನ ದಲ್ಲಿ ಜೀವಿಸುತ್ತಿರುವೆ ಭವಿಷ್ಯದ ಬಗ್ಗೆ ಅಂತಹ ಆತಂಕವಿಲ್ಲ. ಸ್ವಲ್ಪ ಮಾಗಿದ್ದೇನೆ, ಸ್ವಲ್ಪ ಬಾಗಿದ್ದೇನೆ ,ಸ್ವಲ್ಪ ಕಲಿತಿದ್ದೇನೆ .ಇದನ್ನು ಬಳಸಿಕೊಂಡು ಮುಂದಿನ ಜೀವನವನ್ನು ಎಂಜಾಯ್ ಮಾಡುವೆ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


10 August 2021

ಜನಮಿಡಿತ .೧೦/೮/೨೧


 

ಜಯದ ಗೋಲು

 

ಜಯದ ಗೋಲು


ಜೀವನವೊಂದು 

ಕಾಲ್ಚೆಂಡಿನ ಆಟ 

ಚೆಂಡು ನಮಗೆ ಸಿಗದೆ

ಎದುರಾಳಿಗಳ ಮೇಲಾಟ,

ಅನಿಸಿಬಿಡಬಹುದು

ಬಂದೇ ಬಿಟ್ಟಿತು ಸೋಲು|

ಇವನ್ನೆಲ್ಲಾ ಮೆಟ್ಟಿ

ನಮ್ಮ ಆಟ ಆಡುತಾ

ಕೊನೆಗೆ ಹೊಡೆಯಲೇ

ಬೇಕು ಜಯದ ಗೋಲು ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

09 August 2021

ಸ್ವಾಭಿಮಾನ .ಹನಿ


 


ಸ್ವಾಭಿಮಾನ



ನಮ್ಮ ಹಿರಿಯರು ನಮಗೆ

ಸ್ವಾತಂತ್ರ್ಯ ಕೊಡಿಸಲು

ಮಾಡಿದ್ದಾರೆ ತ್ಯಾಗ

ಬಲಿದಾನ|

ನಾವೀಗ ಪಣತೊಡಬೇಕಿದೆ

ಉಳಿಸಿ ಬೆಳೆಸಲು ದೇಶದ

ಮಾನ ಸಮ್ಮಾನ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


07 August 2021

ಸತ್ಯದ ಹೊನಲು . ೭/೮/೨೧


 

ಸಿಹಿಜೀವಿಯ ಹನಿಗಳು.


 #ಭಾರತಕ್ಕೆ_ಬಂಗಾರ

#ಸಿಹಿಜೀವಿಯ_ಹನಿ


 

ಒಲಿಂಪಿಕ್ಸ್ನಲ್ಲಿ 

ಭರ್ಜಿ ಎಸೆತದಲ್ಲಿ 

ಭಾರತಕ್ಕೆ ಬಂದಿದೆ

ಬಂಗಾರ| 

ಇನ್ನೇಕೆ ತಡ 

ಎಲ್ಲರೂ ಸೇರಿ

ಕುಣಿಯೋಣ ಬಾರ ||



ಭಾರತಕ್ಕೆ ಬಂಗಾರದ

ಪದಕ ತಂದಿದೆ

ನೀರಜ್ ಚೋಪ್ರ 

ರವರ ಭರ್ಜಿ ಎಸೆತ|

ಇಡೀ ಭಾರತ ಇಂದು

ಸಂತಸದಲ್ಲಿ ಹುಚ್ಚೆದ್ದು

ಕುಣಿಯುತ್ತಿದೆ ಸತತ||


ಸಿಹಿಜೀವಿ 

ಸಿ ಜಿ ವೆಂಕಟೇಶ್ವರ


*ಇಂದಿನ ಪ್ರಜಾಪ್ರಗತಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ*೭/೮/೨೧


 

*ಇಂದಿನ ಪ್ರಜಾಪ್ರಗತಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ*

ಸಣ್ಣ ಖುಷಿಗಳನ್ನು ಎಂಜಾಯ್ ಮಾಡೋಣ. ಲೇಖನ


 


ಜೀವನದ ಸಣ್ಣ ಸಣ್ಣ ಖುಷಿಗಳನ್ನು ಅನುಭವಿಸಿ ಎಂಜಾಯ್ ಮಾಡುವುದರಲ್ಲೇ ಇದೆ ಸಂತಸದ ಗುಟ್ಟು.

ಇದಕ್ಕೆ ಹಣ ಬೇಕಿಲ್ಲ, ಅಂತಸ್ತು ಬೇಕಿಲ್ಲ ಸ್ವಚ್ಛ ಮತ್ತು ಮುಕ್ತ ಮನಸ್ಸು, ವಿಶಾಲ ಮನೋಭಾವ ಮಗುವಿನ ಮುಗ್ದತೆ ಇದ್ದರೆ ಅಷ್ಟೇ ಸಾಕು.


 ಮೊದಲು ನಾವು ನಮ್ಮಲ್ಲಿ ಮತ್ತು ನಮ್ಮ ಸುತ್ತ ಮುತ್ತ ಇರುವ ಪ್ರತಿಯೊಂದು ವಸ್ತುಗಳು ಮತ್ತು ವ್ಯಕ್ತಿಗಳು ಪ್ರಾಣಿಗಳನ್ನು ಪರಿಸರವನ್ನು ಗಮನವಿಟ್ಟು ನೋಡುವ , ಪ್ರಕೃತಿ ಸೌಂದರ್ಯ ಸವಿಯುವ ಮನೋಭಾವವನ್ನು ಬೆಳಿಸಿಕೊಳ್ಳಬೇಕು.


ಮನೆಯಲ್ಲಿ ಮಡದಿ ರುಚಿಕರ ಅಡಿಗೆ ಮಾಡಿದರೆ ಬಾಯಿ ಚಪ್ಪರಿಸಿ ತಿಂದು ಆ ಸಮಯದಲ್ಲಿ ಸಂತಸದಿಂದ ಅನುಭವಿಸಿ ಮಡದಿಗೆ ಒಂದು ಮೆಚ್ಚುಗೆ ನುಡಿ ಆಡಿದರೆ ನಮಗೂ ಖುಷಿ ಅವರಿಗೂ ಖುಷಿ.


ಮಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮನೆಗೆ ಬಂದಾಗ ಅವಳ ಸಂಭ್ರಮ ವರ್ಣಿಸಲಸದಳ ಅವಳ ಆ ಕ್ಷಣದ ಸಂತಸದಲ್ಲಿ ನಾವೂ ಭಾಗಿಯಾಗೋಣ. ಯಾವುದೋ ಕ್ರೀಡಾಸ್ಪರ್ಧೆಯಲ್ಲಿ  ಬಹುಮಾನ ಬಂದಾಗ ಕೆಲವೊಮ್ಮೆ ಕೆಲವರು ಕುಣಿದು ಕುಪ್ಪಳಿಸುವುದನ್ನು ನೋಡಿದ್ದೇವೆ .ಹೌದು ಆ ಸಂಭ್ರಮ ಆ ಕ್ಷಣದಲ್ಲಿ ಅನುಭವಿಸಬೇಕು, ಅದು ಬಿಟ್ಟು ಮೂರು ದಿನ ಆದ ಮೇಲೆ ಸೆಲೆಬ್ರೇಟ್ ಮಾಡ್ತೀನಿ , ನಾನು ರಿಟೈರ್ಡ್ ಆದ ಮೇಲೆ ಖುಷಿ ಪಡ್ತೀನಿ, ಇನ್ನೂ ದೊಡ್ಡ ಸ್ಪರ್ಧೆಯಲ್ಲಿ ಗೆದ್ದ ಮೇಲೆ ಎಂಜಾಯ್ ಮಾಡ್ತೀನಿ ಅನ್ನೋ ಮನೋಭಾವ ಸರಿಯಲ್ಲ.


ಮಕ್ಕಳಿಗೆ ಒಂದು ಚಾಕೊಲೇಟ್ ನೀಡಿದರೆ ಅವರು ಅದನ್ನು ಆ ಕ್ಷಣದಲ್ಲಿ ಬಾಯಲ್ಲಿ ಚೀಪುತ್ತಾ ,ಕಣ್ಮುಚ್ಚಿ, ಎಂಜಾಯ್ ಮಾಡ್ತಾ , ಹು....ಎಮ್ಮಿ...... ಸೂಪರ್ ಎಂದು ಸಿಹಿಕಹಿ ಚಂದ್ರು ವರ್ಣಿಸುವ ರೀತಿಯಲ್ಲಿ ಖುಷಿ ಖುಷಿಯಾಗಿ ತಿನ್ನುತ್ತಾರೆ .ದೊಡ್ಡವರಾದ ನಮಗೆ ಚಾಕೊಲೇಟ್ ನೀಡಿದರೆ ಎರಡೇ ಬಾರಿಗೆ ಕಟುಂ ... ಎಂದು ಕಡಿದು ಉದರಕ್ಕೆ ಇಳಿಸಿ ಏನೂ ಆಗಿಲ್ಲವೆಂಬಂತೆ ಎದ್ದು ಹೋಗುತ್ತೇವೆ.


ಈ ಬದುಕು ಅನಿಶ್ಚಿತ ಎಂಬುದು ಎಷ್ಟು ಸತ್ಯವೊ ,ಈ ಬದುಕು ಸೌಂದರ್ಯಮಯ ಎಂಬುದು ಅಷ್ಟೇ ಸತ್ಯ. ದಿನನಿತ್ಯದ ಜೀವನದಲ್ಲಿ ನಮಗೆ ಹಲವಾರು ಸವಾಲುಗಳು ಎದುರಾಗುತ್ತವೆ ಅವುಗಳ ನಡುವೆ ಹಲವಾರು ಸಂತಸದ ಕ್ಷಣಗಳು ಸಹಾ ಇರುತ್ತವೆ ಅವು ಚಿಕ್ಕ ಪುಟ್ಟ ಸಂತೋಷಗಳಾದರೂ ಅನುಭವಿಸೋಣ.


ಕೆಲವರು ಯಾವಾಗಲೂ ಹರಳೆಣ್ಣೆ ಕುಡಿದವರಂತೆ ,ಇನ್ನೂ ಕೆಲವರು ದೂರ್ವಾಸ ಮುನಿಗಳ ಅಪರಾವತಾರದಂತೆ ಮುಖ ಗಂಟು ಹಾಕಿಕೊಂಡೇ ಇರುವರು ಇಂತವರಿಗೇ ಸಣ್ಣ ಪುಟ್ಟ ಸಂಭ್ರಮದ ಕ್ಷಣಗಳಲ್ಲಿ ನಂಬಿಕೆ ಇರುವುದಿಲ್ಲ.ಮತ್ತೂ ಕೆಲವರು ಅತಿಯಾಸೆಯ ಭೂಪರು ಇವರಿಗೆ ಕೋಟಿ ಲಾಟರಿ ಹೊಡೆದರೂ  ಸಂತಸ ಪಡೆದೆ  ನೂರು ಕೋಟಿ ಯಾಕೆ ಬರಲಿಲ್ಲ ಎಂದು ಕರುಬುವರು, ಇನ್ನೂ ಕೆಲವರು ಹೊಟ್ಟೆ ಕಿಚ್ಚಿನ ಮೊಟ್ಟೆ ಕೋಳಿಗಳು ಇವರು ಸ್ನೇಹಿತರು ಬಂಧಗಳು ವಿಶೇಷವಾದ ಸಾಧನೆ ಮಾಡಿದ ಸಂಧರ್ಭದಲ್ಲಿ ಸಂತಸ ಪಡದೆ ಕೊರಗುತ್ತಾ ಕಾಲ ಕಳೆಯುವವರು.ನಾವು ಸಂತಸದಿಂದ ಇರಬೇಕಾದರೆ ಇಂತವರಿಂದ ದೂರವಿರುವುದೇ ಒಳ್ಳೆಯದು.


ನಾವು ಎಷ್ಟು ದಿನ ಬದುಕಿರುತ್ತೇವೆಯೋ ತಿಳಿದಿಲ್ಲ ಆದರೆ ಇರುವಷ್ಟು ದಿನ ಜೀವನದ ಪ್ರತಿ ಕ್ಷಣ ಸಣ್ಣ ಸಣ್ಣ       ಖುಷಿಗಳನ್ನು ಎಂಜಾಯ್ ಮಾಡುತ್ತಾ, ಸಂತಸ ಪಡೆಯುತ್ತಾ ಸಂತಸ  ಹಂಚುತ್ತಾ ಸಂತಸದಿಂದ ಬಾಳೋಣ . 


ನೀವೇನಂತೀರಾ?


ಸಿಹಿಜೀವಿ

ಸಿ ಜಿ ವೆಂಕಟೇಶ್ವರ





https://kannada.pratilipi.com/story/%E0%B2%B8%E0%B2%A3%E0%B3%8D%E0%B2%A3-%E0%B2%96%E0%B3%81%E0%B2%B7%E0%B2%BF%E0%B2%97%E0%B2%B3%E0%B2%A8%E0%B3%8D%E0%B2%A8%E0%B3%82-%E0%B2%8E%E0%B2%82%E0%B2%9C%E0%B2%BE%E0%B2%AF%E0%B3%8D-%E0%B2%AE%E0%B2%BE%E0%B2%A1%E0%B3%8B%E0%B2%A3-voqrldgphplc?utm_source=android&utm_campaign=content_share
*ಸಣ್ಣ ಖುಷಿಗಳನ್ನೂ ಎಂಜಾಯ್ ಮಾಡೋಣ*

06 August 2021

ರೈಲು ಹಳಿಗಳು ಸಂಧಿಸುತ್ತವೆ ? ಹನಿ


 

ದಟ್ಟವಾದ ಕಾಡಿನಲ್ಲಿ
ಏನಿದೆ ಎಂದು ಹೊರಗೆ
ನಿಂತು ಊಹಿಸುವುದೆಂದರೆ
ಭುವಿಯಲಿ ನಿಂತು
ತಾರೆಗಳ ಎಣಿಸಿದಂತೆ|

ಅವಳ ಮನದಲಿರುವ


ಭಾವನೆಗಳನ್ನು
ಹುಡುಕುವುದು ಎಂದರೆ
ದಟ್ಟವಾದ ಕಾಡಿನಲ್ಲಿ
ಎರಡು ರೈಲು ಹಳಿಗಳು
ಸಂದಿಸುತ್ತವೆ ಎಂದು
ಹುಡುಕಿ ಹೋದಂತೆ ||

04 August 2021

ನಾವೂ ಬಾಹ್ಯಾಕಾಶ ಪ್ರವಾಸ ಮಾಡಬಹುದು


 


ನಾವೂ ಬಾಹ್ಯಾಕಾಶ ಪ್ರವಾಸ ಮಾಡಬಹುದು.


ಒಂದು ಕಾಲದಲ್ಲಿ ಕಾಲ್ನಡಿಗೆಯಲ್ಲಿ ಪ್ರಯಾಣ ಕೈಗೊಳ್ಳುತ್ತಿದ್ದ ಮಾನವ ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆ ಆವಿಷ್ಕಾರಗಳ ಬಲದಿಂದ ಬಸ್ಸು,ರೈಲು, ಕಾರು ,ವಿಮಾನ ,ಹಡಗು ಹೀಗೆ ವಿವಿಧ ಸಾರಿಗೆ ಮಾದ್ಯಮಗಳ ಮೂಲಕ ಪಯಣ ಆರಂಭಿಸಿದ .


ಕೇವಲ ಸಂಶೋಧನಾ ದೃಷ್ಟಿಯಿಂದ ಬಾಹ್ಯಾಕಾಶ ಯಾನ ಮಾಡುತ್ತಿದ್ದ ಸರ್ಕಾರಗಳು ಮಾತ್ರ ಅಷ್ಟು ದುಬಾರಿಯಾದ ಹಣ ತೊಡಗಿಸಿ ಬಾಹ್ಯಾಕಾಶ ಯಾನ ಆರಂಬಿಸಿದವು. ಜೊತೆಗೆ ಹಲವಾರು ಉಪಗ್ರಹಗಳನ್ನು , ಉಡಾವಣೆ ಮಾಡಿದವು . ಮೊದಲ ಬಾರಿಗೆ ರಷ್ಯಾ ಸ್ಪುಟ್ನಿಕ್ ಎಂಬ ಕೃತಕ ಉಪಗ್ರಹ ಉಡಾವಣೆ ಮಾಡಿದಾಗ ಇಡೀ ಜಗತ್ತೇ ಬೆರಗುಗಣ್ಣಿನಿಂದ ನೋಡಿತ್ತು. ಈಗ ಉಪಗ್ರಹಗಳ ಉಡಾವಣೆ ಮಕ್ಕಳಾಟದಷ್ಟೇ ಸಾಮಾನ್ಯವಾಗಿದೆ .


1975 ರಲ್ಲಿ ಆರ್ಯಭಟ ಎಂಬ ಕೃತಕ ಉಪಗ್ರಹ ಉಡಾವಣೆ ಮಾಡಿದ ಭಾರತ ಇಂದು ಒಮ್ಮೆಲೇ ನೂರಕ್ಕೂ ಹೆಚ್ಚು ಉಪಗ್ರಹಗಳ ಉಡಾವಣೆ ಮಾಡುವ ಶಕ್ತಿ ಹೊಂದಿದೆ.


ಸರ್ಕಾರಗಳು ಮಾತ್ರ ಬಾಹ್ಯಾಕಾಶ ಯಾನ ಮಾಡುವ ಸಂಪ್ರದಾಯ ಕಡಿಮೆಯಾಗಿ ಸಂಶೋಧನೆಯಲ್ಲಿ ಖಾಸಗಿಯವರಿಗೆ ಅವಕಾಶವನ್ನು ನೀಡಿದಾಗ ವರ್ಜಿನ್ ಕಂಪನಿಯು ಮೊದಲಿಗೆ  ಯಶಸ್ವಿಯಾಗಿ ಬಾಹ್ಯಾಕಾಶ ಯಾನ ಪೂರೈಸಿ ಬಾಹ್ಯಾಕಾಶ ಪ್ರವಾಸಕ್ಕೆ ಮುನ್ನುಡಿ ಬರೆಯಿತು ಇದರಲ್ಲಿ ಆ ಕಂಪನಿಯು ಸಿ ಇ‌.ಒ . ರಿಚರ್ಡ್ ಬ್ರಾನ್ಸನ್ ಶ್ರಮ ಮೆಚ್ಚುವಂತದು ಜೊತೆಗೆ ಮೊದಲ ಬಾರಿ ತನ್ನ ಕಂಪನಿಯಿಂದ ಆಯೋಜನೆ ಮಾಡಿದ ಬಾಹ್ಯಾಕಾಶ ಪ್ರವಾಸಕ್ಕೆ ಖುದ್ದಾಗಿ ತಾನೆ ಹೋಗಿದ್ದು ಇಲ್ಲಿ ಉಲ್ಲೇಖನೀಯ.


ಇದರಿಂದ ಪ್ರೇರಿತನಾದ ಜೆಪ್ ಬಿಜೋಸ್ ಸಹ ಯಶಸ್ವಿಯಾಗಿ ಒಂದು ಬಾಹ್ಯಾಕಾಶ ಪ್ರವಾಸ ಆಯೋಜನೆ ಮಾಡಿದರು.ಇದು ಬಾಹ್ಯಾಕಾಶ ಪ್ರವಾಸ ಯುಗಕ್ಕೆ ಮುನ್ನುಡಿ. ವಿಶೇಷವೆಂದರೆ ಈ ಪ್ರವಾಸ ದುಬಾರಿ ಮತ್ತು ಸಿರಿವಂತರಿಗೆ ಮಾತ್ರ ಸಾದ್ಯವಾಗುತ್ತಿದೆ ಎಂಬುದು ಜನಸಾಮಾನ್ಯರಿಗೆ ಬೇಸರದ ಸಂಗತಿಯಾಗಿದೆ.


ಹಾಗಾದರೆ ಜನಸಾಮಾನ್ಯರಾದ ನಮಗೆ ಈ ಬಾಹ್ಯಾಕಾಶ ಪ್ರವಾಸ ಗಗನ ಕುಸುಮವೆ? ಖಂಡಿತವಾಗಿಯೂ ಇಲ್ಲ ನಮಗೆ ತಿಳಿದ ಮಟ್ಟಿಗೆ ಯಾವುದೇ ಹೊಸ ಸಂಶೋಧನೆ ಉಪಕರಣ ಬಂದಾಗ ಬೆಲೆ ಸಾಮಾನ್ಯವಾಗಿ ಹೆಚ್ಚಾಗಿ ಕಂಡುಬರುತ್ತದೆ , ಕ್ರಮೇಣವಾಗಿ ಆ ರಂಗಗಳಲ್ಲಿ ಸಂಶೋಧನೆ, ಪೈಪೊಟಿ ಇವುಗಳ ಪರಿಣಾಮವಾಗಿ ಬೆಲೆ ಕಡಿಮೆಯಾಗಿರುವುದು ನಮಗೆ ತಿಳಿದಿದೆ ಇದಕ್ಕೆ ಉದಾಹರಣೆ ಒಂದು ಕಾಲದಲ್ಲಿ ಸಿರಿವಂತರಿಗೆ ಸೀಮಿತವಾದ ವಿಮಾನಯಾನ ಇಂದು ಐನೂರು, ಸಾವಿರ ರೂಗಳ ಟಿಕೆಟ್ ಕೊಂಡು ದೇಶೀಯವಾಗಿ ವಿಮಾನ ಯಾನ ಕೈಗೊಳ್ಳಬಹುದು .ಇದಕ್ಕೆ ನಮ್ಮ ಕ್ಯಾಪ್ಟನ್ ಗೋಪಿನಾಥ್ ರವರಂತಹ ಸಹೃದಯಿ ಉದ್ಯಮಿಗಳ ಶ್ರಮ ಕೂಡಾ ಕಾರಣ ಎಂಬುದು ಸ್ಮರಣೀಯ.


ಇದೇ ಆಶಾವಾದದಿಂದ ನಾವು ಒಂದು ದಿನ ಬಾಹ್ಯಾಕಾಶ ಪ್ರವಾಸ ಮಾಡುವ ಕನಸು ಕಾಣೋಣ , ಕಂಡ ಕನಸನ್ನು ನನಸಾಗಿಸಿಕೊಳ್ಳೋಣ  ಬಾಹ್ಯಾಕಾಶದಲ್ಲಿ ನಿಂತು ಭೂತಾಯಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳೋಣ .





ಸಿಹಿಜೀವಿ

ಸಿ ಜಿ ವೆಂಕಟೇಶ್ವರ



03 August 2021

ಮಿಂಚು ಹುಳ .ಹನಿ


 *ಮಿಂಚುಹುಳ*


ಸಿರಿವಂತರ ನೋಡಿ

ಕೊರಗಬೇಡ 

ಕೀಳರಿಮೆ ಪಡಬೇಡ

ನಾನು ಬಡವ

ಅವನು ಶ್ರೀಮಂತ

ದೊಡ್ಡಕುಳ|

ಕಗ್ಗತ್ತಲೆಯಲ್ಲಿ

ಬೆಳಕ ನೀಡುವುದಿಲ್ಲವೆ

ಮಿಂಚು ಹುಳ?||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಆತ್ಮದ ಬೆಳಕು . ಹನಿ


 


ಆತ್ಮದ ಬೆಳಕು


ಭೌತಿಕ ಅಭಿವೃದ್ಧಿಯೇ

ನಿಜವಾದ ಬೆಳವಣಿಗೆ

ಎಂದು ಬೀಗಿದ್ದು ಸಾಕು|

ಇನ್ನಾದರೂ ನಾವು

ಜಾಗೃತಗೊಳಿಸಬೇಕಿದೆ

ಆತ್ಮದ ಬೆಳಕು||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ