20 May 2021

ಆ.. ದಿನದ ನೆನಪಾಯಿತು .ಲೇಖನ


 ಲೇಖನ 


ಆ  ದಿನದ ನೆನಪಾಯಿತು...


ಕ್ಯಾಲೆಂಡರ್ ನೋಡುತ್ತಾ ಕುಳಿತಾಗ ..

ಆ ದಿನದ ನೆನಪಾಯಿತು...

ಅಂದು ಮನೆಯಲ್ಲಿ ಯಾರೂ ಊಟ ಮಾಡಿರಲಿಲ್ಲ , ಹಳ್ಳಿಯಲ್ಲಿ ಆಗಿದ್ದರೆ ಯಾರಾದರೂ ಬಂದು ಊಟ ಮಾಡಿ ಎಂದು ಬಲವಂತ ಮಾಡುತ್ತಿದ್ದರೇನೋ? ಬಲವಂತಕ್ಕೆ ನಾವು ತಿನ್ನುತ್ತಿದ್ದೆವೇನೋ? ಆದರೆ ನಾವು ಇದ್ದದ್ದು ತೋಟದ ಮನೆಯಲ್ಲಿ. ಹಿರಿಯೂರು ಚಳ್ಳಕೆರೆ ಹೆದ್ದಾರಿಯ ಮಧ್ಯದಲ್ಲಿ ಹರ್ತಿಕೋಟೆ ಆದ ನಂತರ ಬರುವ ಕಳವೀಭಾಗಿ ಗೇಟ್ ಹತ್ತಿರವಿರುವ ತೋಟದ ಮನೆಯಲ್ಲಿ ನಮ್ಮ ವಾಸ. ಎಲ್ಲರಿಗೂ ಧೈರ್ಯ ಹೇಳಬೇಕಾದ ಎಪ್ಪತ್ತೈದು ವರ್ಷಕ್ಕಿಂತ ಹೆಚ್ಚು ವಯಸ್ಸಿನ ಲಕ್ಷ್ಮಜ್ಜಿ ಅಳು ಬೆಳಗಿನಿಂದ ನಿಂತಿಲ್ಲ, ಊಟ ಬೇಯಿಸಬೇಕಾದ  ರತ್ನಮ್ಮ, ಅಡಿಗೆ ಮನೆ ಕಡೆ  ಹೋಗಲಿಲ್ಲ, ಮೂವರು ಅಣ್ಣ ತಮ್ಮಂದಿರು ಮರಣ ಹೊಂದಿದ ಅವನನ್ನೇ ನೋಡುತ್ತಾ ,ತಲೆ ಮೇಲೆ ಕೈಹೊತ್ತು ಕುಳಿತಿದ್ದರು, ಅವನ ಒಡನಾಟ ನೆನೆದು ನಾನು ಮತ್ತು ನನ್ನ ಅಣ್ಣನೂ ಅಳಲು ಶುರು ಮಾಡಿದೆವು. ಸಂಜೆಯಾಗುತ್ತಾ ಬಂದಂತೆ ಹಿರಿಯ ಮಾವ ಕೃಷ್ಣ ಮೂರ್ತಿರವರು ಧೈರ್ಯ ತೆಗೆದುಕೊಂಡವರಂತೆ ಎದ್ದು " ಆಗಿದ್ದು ಆತು ,ಹೋಗಿರೋ ಜೀವ ಬರಲ್ಲ ,ಬರ್ರೀ ... ಮುಂದಿನ ಕಾರ್ಯ ಮಾಡಾನಾ "ಎಂದು ಎಲ್ಲರನ್ನೂ ಕರೆದರು. ಎಲ್ಲರೂ ಭಾರವಾದ ಮನಸ್ಸಿನಿಂದ, ದುಃಖವನ್ನು ತಡೆದುಕೊಂಡು 

ಭಾರವಾದ ಆ ದೇಹವನ್ನು ಹೊತ್ತು ತೆಂಗಿನ ಗಿಡದ ಕೆಳಗೆ ಗುಂಡಿ ತೋಡಿ ಮಣ್ಣಿನಲ್ಲಿ ಇಟ್ಟು " ಬಸವ ಹೋಗಿ ಬಾ , ನಿಮ್ಮ ಅವ್ವ ಗೌರಿ ನಿನ್ನ ಈದ ದಿನ ಬಸವ ಜಯಂತಿ ಅದಕ್ಕೆ ನಿನಗೆ ಬಸವ ಅಂತ ಹೆಸರು ಇಟ್ವಿ, ಇವತ್ತು ಬಸವ ಜಯಂತಿ ಏನ್ ವಿಧಿಯಾಟ ಇದು?   ನೀನು ನಮ್ ಮನೆನಾಗೆ ಒಬ್ಬ ಆಗಿದ್ದೆ ,ಕರುವಾಗಿದ್ದಾಗ ನೀನು ಆಡ್ತಿದ್ದ ಚಿನ್ನಾಟ, ಬೆಳೆದಾಗ ಗೊಬ್ಬರದ ಗಾಡಿ ಎಳೆಯೋ ನಿನ್ ಶಕ್ತಿ ಎಂಗ್ ಮರೀಲಿ " ಎಂದು ಲಕ್ಷ್ಮಜ್ಜಿ ಮತ್ತೆ ಅಳಲು ಶುರುಮಾಡಿದರು.

ಮನೆಯ ಸದಸ್ಯರೆಲ್ಲರೂ ಒಂದೊಂದು ಇಡಿ ಮಣ್ಣು ಹಾಕಿದರು.

ವಿಷಯ ತಿಳಿದು ಯರಬಳ್ಳಿಯಿಂದ ಮಹತ್ವಾಕಾಂಕ್ಷೆಯಿಂದ ಬಂದ  ಕೆಳವರ್ಗದ  ಪಾತಲಿಂಗ ದೂರದಲ್ಲಿ ನಿಂತು ಮಣ್ಣು ಮಾಡುವುದನ್ನೇ ನೋಡುತ್ತಾ " ಎಂತಾ ನೆಣ, ಇರೋ ಎತ್ತು ಅನ್ಯಾಯವಾಗಿ ಈ ಗೌಡ್ರು ಮಣ್ಣು ಪಾಲು ಮಾಡಿ ಬಿಟ್ರಲ್ಲಪ್ಪ " ಎಂದು ಕೈ ಕೈ ಹಿಸುಕಿಕೊಳ್ಳತೊಡಗಿದ ......


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

No comments: