28 May 2021

ಆ ಪತ್ರ .ಕಥೆ


 


*ಆ ಪತ್ರ* ಕಥೆ

ನಾನು ಕಾಲೇಜಿನಿಂದ ಮನೆ ಸೇರುವ ಮುಂಚೆಯೇ ಸಾಕಷ್ಟು ಜನರು ಮನೆ ಮುಂದೆ ಸೇರಿದ್ದರು.
ನಾನು ಗಾಬರಿಯಿಂದ ಮನೆಯ ಒಳಗಡೆ ನಡೆದೆ , ನೆರೆದ ನೂರಕ್ಕೂ ಹೆಚ್ಚು ಜನರು ನನ್ನ ಕಡೆ ಅಪರಾಧಿಯಂತೆ   ದುರುಗುಟ್ಟಿ ನೋಡುತ್ತಾ ನಿಂತಿದ್ದರು, ಹೊಸಿಲು ದಾಟಿ ಒಳಗೆ ಹೋದೆ, ಅಮ್ಮ ಅಳುತ್ತಾ ನೆಲದ ಮೇಲೆ ಕುಳಿತಿದ್ದರು,  ಕುರ್ಚಿಯಲ್ಲಿ ಬಿಳಿಅಂಗಿ, ಬಿಳಿ ಪಂಚೆ ಉಟ್ಟ ವ್ಯಕ್ತಿ ಕುಳಿತಿದ್ದರು, ನನಗೆ ದೂರದಿಂದಲೇ ಗೊತ್ತಾಯಿತು ಅವರು ನಮ್ಮ ಊರ ಗೌಡರು,  ಗಿರಿಜಾ ಮೀಸೆಯ ಒಳಗಿಂದಲೇ ಕೋಪದಲ್ಲಿ ಹಲ್ಲು ಕಡಿಯುವುದು ಕೇಳಿಸುತ್ತಿತ್ತು .

"ಬಂದೇನಪ್ಪ ಬಾ.....
ತಂದೆ ಇಲ್ಲದ ಮಗ ಅಂತ ಸಾಕಿದ್ದಕ್ಕೆ ಒಳ್ಳೆಯ ಗೌರವ ಕೊಟ್ಟೆ ಕಣಪ್ಪ, ಅಷ್ಟೊಂದು ಅವಸರ ಅಂತ ಹೇಳಿದ್ದರೆ ನೀನು ಡಿಗ್ರಿ ಓದಿಸೋದ್ ಬಿಟ್ಟು ಮದುವೆ ಮಾಡುತ್ತಿದೆ ಕಣೋ ಯಾಕೆ ಇಂಗ್ ಮಾಡ್ದೆ....? "
ಅಳುತ್ತಲೇ ಅಮ್ಮ ಕೇಳಿದರು

"ಅಮ್ಮ ಏನು ಹೇಳ್ತಿದಿಯಾ? ನನಗೇನೂ ಅರ್ಥವಾಗ್ತಿಲ್ಲ ,ಯಾಕೆ ಗೌಡ್ರು, ಈ ಜನ ಸೇರಿದಾರೆ? " ಆಶ್ಚರ್ಯಕರವಾಗಿ ಕೇಳಿದೆ.

"ನಾನು ಹೇಳ್ತೀನಿ ಬಾರೋ ,ನೀನ್ ಬಾಳ  ಬುದ್ದಿವಂತ ಕಣೋ, ನಿನಗೆ ನನ್ ಮಗಳು ಬೇಕೇನೋ ಬೋ....ಮಗನೆ ? ಹಲ್ಲು ಕಡಿಯುತ್ತಾ ಕೇಳಿದರು ಗೌಡರು .
"ಗೌಡ್ರೆ ಸರಿಯಾಗಿ ಮಾತಾಡಿ ,  ಏನೋ ಹಿರಿಯರು ಅಂತ ಗೌರವ ಕೊಟ್ರೆ ಈ ಥರ ಮಾತಾಡ್ ಬೇಡ್ರಿ, ಸ್ವಲ್ಪ ಸಿಟ್ಟಿನಿಂದಲೆ ಹೇಳಿದೆ"

"ಒಂದು ಪತ್ರ ನನ್ನೆಡೆ ಎಸೆದು ಏನೋ ನಿನಗೆ ಗೌರವ ಕೊಡೋದು? ನೋಡು",ಎಂದರು

ನಾನೂ ಆ ಪತ್ರ ತೆಗೆದುಕೊಂಡ ಓದಿದೆ " ಭಾರತಿ ಐ ಲವ್ ಯೂ, ನಿನ್ನ ಬಿಟ್ಟರೆ ನಾನೂ ಯಾರನ್ನೂ ಮದುವೆಯಾಗಲಾರೆ ,ಮದುವೆಗೆ ಸಿದ್ದನಾಗಿರು"
                       ಇಂತಿ ನಿನ್ನ
            ಮಂಜುನಾಥ್
ಈಗ ನನಗೆ ಅರ್ಥವಾಯಿತು ಮೂರು ದಿನದಿಂದ ನಮ್ಮ ಊರಿನ ಮೇಲಿನ ಮನೆ ರವಿಯಣ್ಣನ ಮಗ ಮಂಜುನಾಥ್ ಭಾರತಿಯ ಹಿಂದೆ ಅಲೆಯುತ್ತಿದ್ದ, ಇದು ಆ .... ಮಂಜುನಾಥನ ಕೆಲಸ ಎಂದು .
ಗೌಡರಿಗೆ ನ‌ನ್ನ ನೋಟ್ ಬುಕ್ ತೋರಿಸಿ, ಆ ಪತ್ರ ತೋರಿಸಿ , ನೋಡಿ ಗೌಡರೆ ಇದು ನನ್ನ ಹ್ಯಾಂಡ್ ರೈಟಿಂಗ್ ಅಲ್ಲ, ಇದು ಆ.... ಮಂಜುನಾಥನ ಕೆಲಸ ಎಂದೊಡನೆ ,ಆ ಪತ್ರವನ್ನು ಸರಕ್ಕನೆ ಕಿತ್ತುಕೊಂಡು ತನ್ನ ಪಟಾಲಂ ಜೊತೆ ಮೇಲಿನ ಮನೆಯ ರವಿಯವರ ಮನೆ ಕಡೆ ನಡೆದರು, ಅಮ್ಮ ಮಾತ್ರ ಒಳಗೆ ಬಿಕ್ಕುತ್ತಲೇ ಇದ್ದರು.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು

No comments: