14 May 2021

ತಾಳ್ಮೆ ಮತ್ತು ನಗು ನಮ್ಮದಾಗಲಿ .ಮಹದಾನಂದ ಲೇಖನ ೧


 ಮಹದಾನಂದ ,ಲೇಖನ ೧ 


ತಾಳ್ಮೆ ಮತ್ತು ನಗು ನಮ್ಮದಾಗಲಿ 


ಒಬ್ಬ ಮರದ ಕೆಲಸದವನು ರಾತ್ರಿ ತನ್ನ ಕೆಲಸವನ್ನು ಮುಗಿಸಿ ಎಂದಿನಂತೆ ತನ್ನ ಅಂಗಡಿಯನ್ನು ಮುಚ್ಚಿ ಮನೆಗೆ ಹೊರಡುತ್ತಾನೆ. ಆ ಹೊತ್ತಿನಲ್ಲಿ ಒಂದು ದೊಡ್ಡ ಹಾವೊಂದು ಅಂಗಡಿಗೆ ನುಗ್ಗುತ್ತದೆ. ಅಲ್ಲಿ ತನಗೆ ಏನಾದರೂ ಆಹಾರ ಸಿಗಬಹುದೆಂದು ಅತ್ತ ಇತ್ತ ತಿರುಗುತ್ತದೆ. ಹಾವು ಹಾಗೆ ತಿರುಗುತ್ತಿರುವಾಗ,  ಅಲ್ಲಿರುವ ಎರಡು ಬದಿಯಲ್ಲಿಯೂ ಹರಿತವಾಗಿರುವ ಒಂದು ಗರಗಸಕ್ಕೆ ತಾಗಿ ಅದಕ್ಕೆ ಸಣ್ಣದಾದ ಗಾಯವಾಗುತ್ತದೆ. ಹಾವಿಗೆ ಸಿಟ್ಟು ಬಂದು ಆ ಗರಗಸಕ್ಕೆ ಕಚ್ಚುತ್ತದೆ. ಆಗ ಅದರ ಬಾಯಿಗೆ  ಕೂಡ ಗಾಯವಾಗುತ್ತದೆ. ಇದರಿಂದ ಹಾವಿನ ಸಿಟ್ಟು ಮತ್ತಷ್ಟು ಹೆಚ್ಚಾಗುತ್ತದೆ. ಕೂಡಲೇ ಅದು ಆ ಗರಗಸಕ್ಕೆ ಗಟ್ಟಿಯಾಗಿ ಸುತ್ತಿಕೊಂಡು ತನ್ನ ಹಿಡಿತವನ್ನು ಬಲಪಡಿಸುತ್ತದೆ. ಮರುದಿನ ಬೆಳಿಗ್ಗೆ ಮರದ ಕೆಲಸದವನು ತನ್ನ ಅಂಗಡಿಯನ್ನು ತೆರೆದಾಗ ಅವನಿಗೆ ಗರಗಸದಲ್ಲಿ ಸುತ್ತಿಕೊಂಡು ಸತ್ತಿದ್ದ ಹಾವು ಕಾಣುತ್ತದೆ.


ಈ ಮೇಲಿನ ಘಟನೆಯಲ್ಲಿ ಹಾವು ಬೇರೆಯವರ ಆಕ್ರಮಣದಿಂದ ಸಾಯಲಿಲ್ಲ, ಬದಲಿಗೆ ತನ್ನದೇ ಆದ ಸಿಟ್ಟು ಮತ್ತು ಹಠದಿಂದ ಸತ್ತಿತ್ತು.


ನಮಗೂ ಸಹ ಸಿಟ್ಟು ಬಲು ಬೇಗ ಬರುತ್ತದೆ ಸಿಟ್ಟಿನಿಂದ ನಾವು ಪ್ರತಿಕ್ರಿಯೆ ನೀಡುತ್ತಾ ಹೋಗಿ ಅದು ಕೊನೆಗೆ ನಮಗೆ ತೊಂದರೆ ಉಂಟುಮಾಡುವ ಉದಾಹರಣೆಗೆಗಳು ಬಹಳಷ್ಟು ಇವೆ, 

ಕೋಪದಲ್ಲಿ ಕೊಯ್ದ ಮೂಗು ಮತ್ತೆ ಬಾರದು ಎಂಬಂತೆ ಕೋಪಿಸಿಕೊಳ್ಳುವ ಮೊದಲು ಅದರಿಂದಾಗುವ ಅನಾಹುತಗಳ ಬಗ್ಗೆ ಯೋಚಿಸಬೇಕಿದೆ.

ಕೋಪವು ಮೊದಲು ಯಾರಲ್ಲಿ ಉತ್ಪತ್ತಿಯಾಗುತ್ತದೋ ಅವರನ್ನೇ ದಹಿಸಿ ನಂತರ ಇತರರ ದಹಿಸುತ್ತದೆ.


ನಾವು ಕೆಲವೊಮ್ಮೆ ಜೀವನದಲ್ಲಿ ಎಲ್ಲದಕ್ಕೂ ಪ್ರತಿಕ್ರಿಯೆ ನೀಡುತ್ತಾ ನಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡಿಕೊಂಡು ನಂತರ ಕೊರಗುತ್ತೇವೆ, ಅನವಶ್ಯಕವಾಗಿ ಇತರರ ಮೇಲೆ ಕೋಪಮಾಡಿಕೊಂಡು ನಮ್ಮ ‌ಮುಖದ 43 ಸ್ನಾಯುಗಳಿಗೆ ಕೆಲಸ‌ ನೀಡಿ ನಮ್ಮ ಆರೋಗ್ಯವನ್ನು ನಾವೇ ಹಾಳು ಮಾಡಿಕೊಳ್ಳುವುದು ಬೇಡ, ಅದರ ಬದಲಾಗಿ ನಮ್ಮ ಕೋಪವನ್ನು ನಿಯಂತ್ರಣ ಮಾಡಿಕೊಂಡು ಕೇವಲ 17 ಸ್ನಾಯುಗಳ ಬಳಸಿಕೊಂಡು ನಗುತ್ತಾ ಜೀವಿಸೋಣ.ಬೇರೆಯವರ ಜೀವನದಲ್ಲೂ ನಗು ತರಲು ಪ್ರಯತ್ನಿಸಿಸೋಣ.



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು


No comments: