29 May 2021

ನನ್ನ ಹಳ್ಳಿ ನನ್ನ ಹೆಮ್ಮೆ .ಲೇಖನ






 ನನ್ನ ಹಳ್ಳಿ ನನ್ಮ ಹೆಮ್ಮೆ 


ಮುಂಜಾನೆಯಲಿ ನಿದ್ರೆಯಿಂದ ಎದ್ದರೆ ಕಾಗೆ, ಕೋಳಿ, ಪಕ್ಷಿಗಳ ಅಲಾರ್ಮ್ , ಕುರಿ ಮೇಕೆಗಳ ಬ್ಯಾ..ಎಂಬ ಏನೋ ಹಿತಕರ ಸದ್ದು , ನಿತ್ಯ ಕರ್ಮ ಮುಗಿಸಿ, ಬಿಸಿ ನೀರ ಕುಡಿದು,ಪ್ರಾಕೃತಿಕ ಪ್ರಾಣಿ ಪಕ್ಷಿಗಳ ಹಿನ್ನೆಲೆಯಲ್ಲಿ ಯೋಗಾಭ್ಯಾಸ ,ಧ್ಯಾನ ,ಪ್ರಾಣಾಯಾಮ ಗಳ ಮುಗಿಸಿ, ಗ್ರೀನ್ ಟೀ ಕುಡಿದು ನಮ್ಮ ತೋಟದ ಕಡೆ ವಾಕ್ ಹೊರಟರೆ, ಅಲ್ಲಿಂದಲೇ ಸ್ವರ್ಗ ಸದೃಶ ಚಿತ್ರಗಳ ಅನಾವರಣ,ಅರೆಮಲೆನಾಡಿನ ನನ್ನೂರು ಅಡಿಕೆ ,ತೆಂಗು ತೋಟಗಳಿಂದ ಆವೃತವಾಗಿದೆ. ತೋಟದ ಪಕ್ಕದ ರಸ್ತೆಯಲ್ಲಿ ನಡೆಯುವಾಗ, ಆಗ ತಾನೆ ಅರಳಿದ ಹೊಂಬಾಳೆಯ ಒಂಥರಾ ಸುವಾಸನೆ ಸವಿದೇ ಧನ್ಯನಾಗಬೇಕು, ಮುಂದೆ ನಾಲ್ಕು ಹೆಜ್ಜೆ ಹಾಕಿದರೆ ಅಳಿಲುಗಳು ಮರಗಳ ಮೇಲೇರುತ್ತಾ ಇಳಿಯುತ್ತ ನನ್ನ ನೋಡಿ ಮರದ ಹಿಂದೆ ಬಚ್ಚಿ ಕೊಳ್ಳವುದ ನೋಡುವುದೇ ಸಂಭ್ರಮ, ಈ ಮಧ್ಯೆ ತೇಕಲವಟ್ಟಿಯ ಮರಡಿ ಗುಡ್ಡಗಳ ನಡುವೆ ರವಿರಾಯ ವಿಧಾನವಾಗಿ ಕೆಂಪನೆಯ ಚೆಂಡಿನಂತೆ ನಗುತ್ತಾ ಬರುವುದ ನೋಡಲು ಅದೃಷ್ಟ ಬೇಕು, ಹಿತವಾಗಿ ಮೈಗೆ ಸೋಕುವ ತಂಗಾಳಿ ಎರಡು ಕಿಲೋಮೀಟರ್ ನಡೆದರೂ ಸುಸ್ತು ಆಗದಂತೆ ಮಾಡಿಬಿಡುತ್ತದೆ.


ನಮ್ಮ ಅಡಿಕೆ ತೆಂಗಿನ ತೋಟದ ಒಳಗೆ ಕಾಲಿಡುವಾಗ,ಪುನಃ ನವಿಲಿನ ಧನಿಗಳ, ವಿವಿಧ ಪಕ್ಷಿಗಳ ಸ್ವಾಗತ  ಗೀತೆ ನನಗಾಗಿ ಕಾದಿರುತ್ತದೆ, ಸಾವಿರಕ್ಕೂ ಅಧಿಕವಿರುವ ಅಡಿಕೆ ತೆಂಗು ಮರಗಳು ,ಮೊದಲು ನನ್ನ ನೋಡು ಎಂದು ಜಿದ್ದಿಗೆ ಬಿದ್ದವರಂತೆ ತಮ್ಮ ಅಂದವ ತೋರುವವು, ತೋಟದ ಮೂಲೆ ಮೂಲೆಗಳಲ್ಲಿ ಓಡಾಡುತ್ತ ಸಣ್ಣ ಪುಟ್ಟ ಕೆಲಸ ಮಾಡಿ ಅಲ್ಲೇ  ನೀರು ಕುಡಿಯಲು ತಲೆ ಮೇಲೆತ್ತಿದಾಗಲೆ ಸೂರ್ಯದೇವ ನೋಡು ನಾನು ಇಲ್ಲಿಗೆ ಬಂದಿರುವೆ ಎಂದು ಸ್ವಲ್ಪ ಖಾರವಾದ ನೋಟ ಬೀರುವನು, ಮನೆಯಿಂದ  ಮಗಳು ಕರೆ ಮಾಡಿ ಈಗ ಒಂಭತ್ತೂವರೆ ಅಪ್ಪ ತಿಂಡಿ ರೆಡಿ ಬಾ ಎಂದಾಗ  ,ಪುನಃ ಮನೆ ಕಡೆ ಪಯಣ.


ಹಿಂಡು ಹಿಂಡಾಗಿ,ಪಿಚಿಕೆ ಹಾಕುತ್ತಾ, ಕಾಲು ಸವರುತ್ತಾ ಬರುವ ಕುರಿ ಮೇಕೆಗಳ ಹಿಂಡು, ಅದನ್ನು ಹಿಂಬಾಲಿಸುವ ಮೊಬೈಲ್ ನಲ್ಲಿ ಜೋರಾದ ಹಾಡುಗಳ ಹಾಕಿಕೊಂಡು, ಹೆಗಲಿಗೆ ನೀರು ತುಂಬಿದ ದೊಡ್ಡ ಪ್ಲಾಸ್ಟಿಕ್ ಬಾಟಲ್ ನ್ನು ಹೆಗಲಿಗೆ ತಗುಲಿಸಿಕೊಂಡು ಸಾಗುವ ಆಧುನಿಕ ಕುರಿಗಾಯಿಗಳು, ಅವರನ್ನು ನೋಡುತ್ತಾ ಕೆಲವರನ್ನು ಮಾತನಾಡಿಸುತ್ತಾ, ಮತ್ತೆ ಮನೆ ಬಂದುದೇ ಗೊತ್ತಾಗುವುದಿಲ್ಲ.


ಶುಚಿ ರುಚಿಯಾದ ತಿಂಡಿ ತಿಂದು , ಮನೆಯವರೊಂದಿಗೆ ಮಕ್ಕಳೊಂದಿಗೆ ಲೋಕಾಭಿರಾಮವಾಗಿ ಮಾತನಾಡಿ, ನನ್ನ ಮಕ್ಕಳು ಅವರ ಕೋರ್ಸ್ ಗೆ ಸಂಭಂದಿಸಿದ ಓದು ಬರಹದಲ್ಲಿ ತಲ್ಲೀನ , ನಾನು ಅದೂ ಇದೂ ಓದಿ, ನಮ್ಮ ಶಾಲೆಯ ಮಕ್ಕಳಿಗೆ ಆನ್ಲೈನ್ ನಲ್ಲಿ ವ್ಯಾಸಾಂಗದ ಬಗ್ಗೆ  ಸಲಹೆ ನೀಡಿ, ತೋಚಿದ್ದು ಗೀಚುತ್ತಾ , ಕುಳಿತರೆ ಸಮಯ ಸರಿದದ್ದೆ ತಿಳಿಯುವುದಿಲ್ಲ, 

ಎಲ್ಲರೂ ಊಟಕ್ಕೆ ಬನ್ನಿ ಎಂದಾಗ ಮಧ್ಯಾಹ್ನ ಒಂದೂವರೆ , ಸಹಭೋಜನ ಮುಗಿಸಿ, ಮಾವಿನ ಹಣ್ಣು ಸವಿದು, ಮಕ್ಕಳು ಮತ್ತೆ ಓದಿನಲ್ಲಿ ಆನ್ಲೈನ್ ಕ್ಲಾಸ್ ನಲ್ಲಿ ಮಗ್ನ ನಾನು ಒಂದು ಸಣ್ಣ ನಿದ್ದೆ ತೆಗೆದು ಮುಖ ತೊಳೆದುಕೊಂಡು ನಮ್ಮ ‌ಮನೆಯ ಮಹಡಿಯ ಮೇಲೆ ಹೋಗಿ ‌ಕುಳಿತರೆ ಮಗಳು ಟೀ ತಂದು ಕೊಡುವಳು .


ಟೀ ಕುಡಿದು ಪಶ್ಚಿಮಾಭಿಮುಖವಾಗಿ ನಿಂತರೆ ಮತ್ತೊಂದು ಸೌಂದರ್ಯ ಲೋಕದ ಅನಾವರಣ ಹಾಲೇನಹಳ್ಳಿಯಿಂದ ಹೊರಕೆರೆದೇವರ ಪುರದವರೆಗೆ ಉದ್ದವಾಗಿ  ಮಲಗಿದಂತಿರುವ ಪರ್ವತರಾಶಿ, ಅದರ ಮೇಲೆ ಅಲ್ಲಲ್ಲಿ, ಸಾಲಾಗಿ ನಿಲ್ಲಿಸಿರುವ ಗಾಳಿಯ ಯಂತ್ರಗಳು, ಕಣ್ಣು ಹಾಯಿಸಿದಷ್ಟೂ ಕಾಣುವ ಅಡಿಕೆ ತೋಟಗಳು, ಸೂರ್ಯನ ಸಂಜೆಯ ಕಿರಣಗಳು ಬಿದ್ದು   ತೆಂಗಿನ ಗರಿಗಳ ಮೇಲೆ ಹೊನ್ನ ಬಣ್ಣ ಪಡೆದು ನಲಿವುದನ್ನು ನೋಡುವುದೇ ಕರ್ಣಾನಂದಕರ. 

ನಿಧಾನವಾಗಿ ಹೊರಕೆರೆದೇವರ ಪುರದ ಲಕ್ಷಿ ನರಸಿಂಹ ಬೆಟ್ಟದ ಹಿಂದೆ ಕೆಂಪನೆಯ ಚೆಂಡಿನಾಕಾರದ ರವಿಯು ಅಸ್ತನಾದಾಗ ಪೂರ್ವದಲ್ಲಿ ಶಶಿ ಇಣುಕುತ್ತಿದ್ದ.


ರಾತ್ರಿ ಮನೆಯ ಸದಸ್ಯರೊಡನೆ ಮಾತುಕತೆಯೊಂದಿಗೆ ಊಟ, ನೆರೆಮನೆಯವರೊಡನೆ ಕೆಲಕಾಲ ಸಮಾಲೋಚನೆ  ,ಪ್ರಪಂಚದ ಅಂದಿನ ಸುದ್ದಿ ತಿಳಿಯಲು ವಾರ್ತೆಗಳ ನೋಡಿ , ಹಾಸಿಗೆಗೆ ತೆರಳಿದರೆ ನಿದಿರಾದೇವಿಯ ಆಲಿಂಗನ . ನಾಳೆ ಮತ್ತೆ ಅದೇ ದಿನಚರಿ, ಮೂಲತಃ ಹಳ್ಳಿಯವನಾದ ಕೆಲಸದ ಪ್ರಯುಕ್ತ ಪಟ್ಟಣದ ವಾಸ ಮಾಡುವ ನಾನು ಈಗ  ರಜೆಯ ಪ್ರಯುಕ್ತ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚೌಡಗೊಂಡನಹಳ್ಳಿಯಲ್ಲಿ  ಇರುವೆ . ನನ್ನ ಹಳ್ಳಿಯನ್ನು ಮೊದಲಿಗಿಂತ ಬೆರಗುಗಣ್ಣಿನಿಂದ ನೋಡುತ್ತಿರುವೆ ...ನನ್ನ ಹಳ್ಳಿ ನನ್ನ ಹೆಮ್ಮೆ...


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ಚೌಡಗೊಂಡನಹಳ್ಳಿ 

ಹೊಳಲ್ಕೆರೆ ತಾ ಚಿತ್ರದುರ್ಗ ಜಿಲ್ಲೆ


No comments: