30 May 2021

ಪವಾಡದ ಪುಸ್ತಕ .ಕಥೆ


 


ಪವಾಡದ ಪುಸ್ತಕ

ಕಥೆ

ಅಂದು ನಾನು ಶಾಲೆಯಿಂದ ಮನೆಗೆ ಬರುವಾಗ ಸಂಜೆ ಐದೂಮುಕ್ಕಾಲು ಆಗಿರಬಹುದು, ಗಿರಿನಗರ ದಾಟಿ , ಶಿವರಾಮಕಾರಂತ ನಗರದ ಬೋರ್ಡ್ ಬಳಿ ನನ್ನ ಬೈಕ್ ಬಂದಂತೆ, ರಸ್ತೆಯ ಪಕ್ಕದಲ್ಲಿ ಒಂದು ಪುಸ್ತಕ ಬಿದ್ದಿರುವುದು ಗಮನಕ್ಕೆ ಬಂತು , ದೂರದಲ್ಲಿ ಬೈಕ್ ನಿಲ್ಲಿಸಿ,ಆ ಪುಸ್ತಕವನ್ನೆ ನೋಡುತ್ತಾ ನಿಂತೆ , ಅದರ ಪಕ್ಕದಲ್ಲೇ ಏಳೆಂಟು ಜನ ನಡೆದು ಹೋದರು, ಕೆಲವರು ಪುಸ್ತಕ ನೋಡಿದರೂ ಸುಮ್ಮನೆ ಮುಂದೆ ಹೋದರು, ನಾನು ಹೋಗಿ ಆ ಪುಸ್ತಕ ತೆಗೆದುಕೊಳ್ಳಲೇ? ಎಂದು ಒಂದು ಮನಸ್ಸು, ಬೇಡ ಯಾರದೋ ಬಿದ್ದಿರಬೇಕು, ಅವರೇ ಬಂದು ತೆಗೆದುಕೊಂಡು ಹೋಗಲಿ ಬೇರೆಯರ ವಸ್ತು ಮುಟ್ಟಬಾರದು ಎಂದು ಮತ್ತೊಂದು ಮನಸು, ಇದರ ಜೊತೆಗೆ ಅಮ್ಮ ಹೇಳಿದ ಮಾತು ನೆನಪಾಯಿತು, " ಮೂರು ಹಾದಿ ಕೂಡಿದ ಜಾಗದಲ್ಲಿ ಏನೇನೋ ಪೂಜೆ ಮಾಡಿ ಯಾವುದ್ಯಾವುದೋ ವಸ್ತು ಇಟ್ಟಿರುತ್ತಾರೆ, ಆ ವಸ್ತು ಮುಟ್ಟಬಾರದು ಮತ್ತು ದಾಬಾದು" .

ಹೌದು ಇದೂ ಕೂಡ ಮೂರು ದಾರಿ ಸೇರುವ ಜಾಗ, ಏನು ಮಾಡಲಿ ?
ವೈಜ್ಞಾನಿಕ ಮನೋಭಾವ ಅದೂ ಇದೂ ಎಂದು ತರಗತಿಯಲ್ಲಿ ಪಾಠ ಮಾಡುವ ನಾನು ಇಂತಹ ಮೂಢನಂಬಿಕೆಗಳನ್ನು ನಂಬಬಾರದು ಎಂದು ನಿಶ್ಚಯ ಮಾಡಿಕೊಂಡು ಆ ಪುಸ್ತಕದ ಬಳಿ ಹೋಗಿ ಕೈಯಲ್ಲಿ ತೆಗೆದುಕೊಂಡೆ ಹೊಸದಾಗಿತ್ತು ,  ಅದು ನೋಟ್ ಪುಸ್ತಕ! ಹೆಚ್ಚು ಹಾಳೆಗಳಿರಲಿಲ್ಲ, ಆದರೂ ಆಕರ್ಷಕವಾಗಿತ್ತು,ನನ್ನ ಬೈಕ್ ನ ಸೈಡ್ ಬ್ಯಾಗ್ ನಲ್ಲಿ ಇಟ್ಟುಕೊಂಡು ಮನೆ ತಲುಪಿದೆ.

ರಾತ್ರಿ ಊಟದ ನಂತರ ಡೈರಿ ಬರೆದ ಮೇಲೆ ದಾರಿಯಲ್ಲಿ ಸಿಕ್ಕ ನೋಟ್ ಬುಕ್ ಕಡೆ ಕಣ್ಣು ಹೊರಳಿತು, ಎಂತಹ ಚೆಂದದ ಪುಸ್ತಕ ಇದರಲ್ಲಿ ಏನಾದರೂ ಬರೆಯಲೇ ? ಎಂದುಕೊಂಡು ಪೆನ್ನು ಕೈಗೆತ್ತಿಕೊಂಡೆ , ಏನು ಬರೆಯಲಿ? ಡೈರಿ ಬರೆಯಲು ಪುಸ್ತಕ ಇದೆ ,ಈಗ ತಾನೆ ಬರೆದೆ, ಮತ್ತೇನು ಬರೆಯಲಿ? ತಕ್ಷಣ ಪ್ರಾಥಮಿಕ ಶಾಲೆಯ ಶಿಕ್ಷಕರಾದ ತಿಪ್ಪೇಸ್ವಾಮಿ ರವರ ನೆನಪಾಯಿತು, ಆಗ ದಿನಕ್ಕೊಂದು ಒಳ್ಳೆಯ ‌ಕೆಲಸ ಎಂದು ಪುಸ್ತಕದಲ್ಲಿ ಬರೆಯಿರಿ ಎಂದು ಬರೆಸಿ ಒಳ್ಳೆಯ ಕೆಲಸ ಮಾಡಲು ನಮ್ಮನ್ನು ಹುರಿದುಂಬಿಸಿದ್ದು ನೆ‌ನಪಿಗೆ ಬಂತು  .
ಸರಿ ಹಾಗಾದರೆ ಈ ನೋಟ್ ಪುಸ್ತಕದಲ್ಲಿ ನಾಳೆ ಏನು ಒಳ್ಳೆಯ  ಕೆಲಸವಾಗಬೇಕು ಎಂಬುದರ ಬಗ್ಗೆ ಬರೆಯುವೆ ಎಂದು ಯೋಚಿಸುವಾಗ 9 A ವಿಭಾಗದ ನಗ್ಮಾ ಹದಿನೈದು ದಿನದಿಂದ ಯೂನಿಫಾರ್ಮ್ ಹಾಕಿಕೊಂಡು ಬಂದಿರಲಿಲ್ಲ, ಕೇಳಿದರೆ "ನಮ್ಮ ತಂದೆಯವರು ಗಾರೆ  ಕೆಲಸ ಮಾಡುತ್ತಿದ್ದರು ಸರ್ ,ಇತ್ತೀಚಿಗೆ ಕೆಲಸ ಇಲ್ಲ ಅದಕ್ಕೆ ದುಡ್ಡಿಲ್ಲ ,ಮುಂದಿನ ವಾರ ಕೊಡಿಸುತ್ತಾರಂತೆ" ಎಂದಳು. ಯಾಕೋ ಮನಸ್ಸಿಗೆ ಬೇಸರವಾಗಿ ನಾನೇ ಕೊಡಿಸಲೆ ಎಂದು ಮನದಲ್ಲಿ ಅಂದುಕೊಂಡರೂ ,ನಾಳೆ ಇದೇ ರೀತಿಯಲ್ಲಿ ಹಲವಾರು ಮಕ್ಕಳು ಬಂದರೆ ಅವರಿಗೆ ಕೊಡಿಸಲಾದೀತೇ?ಎಂದು ನಾನೇ ನನ್ನ ‌ನಿರ್ಧಾರ ಸಮರ್ಥನೆ ಮಾಡಿಕೊಂಡು ಸುಮ್ಮನಾದೆ.

ಆ ಹೊಸ ಪುಸ್ತಕದಲ್ಲಿ " ನಗ್ಮಾ ಳಂತಹ ವಿದ್ಯಾರ್ಥಿನಿಗಳಿಗೆ ಯೂನಿಫಾರ್ಮ್ ಲಬಿಸಲಿ" ಎಂದು ಬರೆದು ಪುಸ್ತಕ ಎತ್ತಿಟ್ಟು ನಿದ್ದೆಗೆ ಜಾರಿದೆ.

ಮರುದಿನ ಶಾಲಾ ಪ್ರಾರ್ಥನೆಯ ವೇಳೆಯಲ್ಲಿ ಸುಮ್ಮನೆ ಎಲ್ಲಾ ವಿದ್ಯಾರ್ಥಿಗಳ ಕಡೆ ಕಣ್ಣು ಹಾಯಿಸಿದರೆ ಎಲ್ಲಾ ವಿದ್ಯಾರ್ಥಿಗಳು ಯೂನಿಫಾರ್ಮ್ ಹಾಕಿದ್ದರು, ನನಗೆ ಆಶ್ಚರ್ಯ, ನಾನು ಯೂನಿಫಾರ್ಮ್ ಕೇಳಿದ್ದಕ್ಕೆ ಪಾಪ ಆ ಹುಡುಗಿ ಶಾಲೆಗೆ ಬರದೇ ಹೋದಳೇ ಎಂದು ಬೇಸರ ಪಟ್ಟುಕೊಂಡೆ, ನಂತರ ಕೂಲಂಕಷವಾಗಿ ನೋಡಿದಾಗ ನಾಲ್ಕನೇ ಸಾಲಿನ ಐದನೇಯ ಹುಡುಗಿಯೇ ನಗ್ಮಾ! ಏನಾಶ್ಚರ್ಯ ಹೊಸ  ಯೂನಿಫಾರ್ಮ್ ನೊಂದಿಗೆ ನಾಡಗೀತೆಯನ್ನು ತಲೆ ಎತ್ತಿ ಹಾಡುತ್ತಿದ್ದಳು.

ತರಗತಿ ಮುಗಿದ ಬಳಿಕ ನಗ್ಮಾ ಳನ್ನು  ಕರೆದು "ಗುಡ್ ಗರ್ಲ್ ,ನೋಡು ಈಗ ಎಂತ ಚೆನ್ನಾಗಿ ಕಾಣುವೆ " ಎಂದೆ.
ನಿನ್ನೇ ಊರಿಂದ ನಮ್ಮಜ್ಜಿ ಬಂದಿತ್ತು ಸಾರ್ ತುಮ್ಕೂರಿಗೆ ಕರ್ಕೊಂಡ್ ಹೋಗಿ ಕೊಡಿಸ್ಕೆಂಡ್ ಬಂತು ಸಾರ್.." ಎಂದಳು.
ನಾನು ಸ್ಟಾಪ್ ರೂಂಗೆ ಹೋಗಿ  ನೀರು ಕುಡಿದು ಮುಂದಿನ ತರಗತಿಗೆ ಹೋಗಲು ಮೆಟ್ಟಿಲು ಹತ್ತುವಾಗ , ರಾತ್ರಿ ನೋಟ್ ಪುಸ್ತಕದಲ್ಲಿ ಬರೆದ ಸಾಲು ನೆನಪಾಯಿತು, ಅರೆ.. ಅದು ನಿಜವಾಯಿತು ಎಂದುಕೊಂಡೆ.

ಎಂದಿನಂತೆ ಅಂದು ರಾತ್ರಿ ಹಾಸಿಗೆಯ ಮೇಲೆ ಹೊಸ ಪುಸ್ತಕದಲ್ಲಿ ಏನು ಬರೆಯಬೇಕು ಎಂದು ಯೋಚಿಸುವಾಗ ನಮ್ಮ ಮನೆಯವರು ಬೆಳಿಗ್ಗೆ " ರೀ... ಒಂದು ವಾರದಿಂದ ನೀರು ಬಂದಿಲ್ಲ,ಎಷ್ಟು  ದಿನ ಅಂತ ಟ್ಯಾಂಕರ್  ಹಾಕಿಸಿಕೊಳ್ಳೋದು ? ಸಂಬಳ ಎಲ್ಲಾ  ಟ್ಯಾಂಕರ್ ಗೆ ಹೋಗಲಿ ಬಿಡಿ" ಎಂದು ಗುರ್ ಅಂದಿದ್ದಳು .

ಪೆನ್ನು ತೆಗೆದುಕೊಂಡು " ನಗರದ ನೀರಿನ ಸಮಸ್ಯೆ ಬಗೆಹರಿಯಲಿ" ಎಂದು ಬರೆದಿಟ್ಟು ಮಲಗಿದೆ .
ಮುಂಜಾನೆಯ ನಾಲ್ಕೂವರೆ ಗಂಟೆಯ  ಸವಿನಿದ್ದೆಯ ಸಮಯದಲ್ಲಿ ಹೊರಗೆ ಯಾರೋ ಗೇಟ್ ಬಡಿದರು ಕಣ್ಣು ಉಜ್ಜಿಕೊಂಡು ಹೊರಬಂದರೆ ಪಕ್ಕದ ಮನೆಯ ಚಂದ್ರು ರವರು
" ಏನ್ ಸಾರ್ ನೀರಿಲ್ಲ ಅಂತ ಇಷ್ಟು ದಿನ ಕಷ್ಟ ನೋಡಿನೂ ,ಸಂಪ್ ತುಂಬಿ ರೋಡಿಗೆ ಬಂದೈತೆ ನೀರು ಆಪ್ ಮಾಡಿ ಸಾ," ಎಂದು ಹೊರಟು ಹೋದರು "

"ಸಾರಿ ಸಾರ್ ನೋಡ್ಲಿಲ್ಲ ಎಂದು ಸಂಪ್ ನ  ನಲ್ಲಿ ಆಪ್ ಮಾಡಿ ,ಟ್ಯಾಕ್ ಗೆ ನೀರು ಬಿಡಲು ಮೋಟಾರ್ ಆನ್ ಮಾಡಿದೆ, ಈ ಸದ್ದು ಕೇಳಿ ಹೊರಗೆ ಬಂದ ನನ್ನವಳ ಮೊಗದಲ್ಲಿ ಮಂದಹಾಸ ," ರೀ ಇವತ್ ಎರಡು ದೋಸೆ ಜಾಸ್ತಿ ನಿಮಗೆ "ಎಂದು ನುಲಿದಳು.

ಅಂದು ಸಂಜೆ ಊರಿಂದ ಪೋನ್ ಮಾಡಿದ ಅಣ್ಣ ಯಾಕೋ ಬೇಸರದಿಂದಲೇ ಮಾತನಾಡಿದ ,ಏನು ಕಾರಣ ಎಂದು ಬಲವಂತ ಮಾಡಿದಾಗ , ಬೋರ್ ವೆಲ್ ನೀರು ಪೂರಾ ಬತ್ತಿ ಹೋಗಿ ಒಂದು ವಾರದಿಂದ ನೀರಿಲ್ಲದೇ, ಬಿಸಿಲು ಹೆಚ್ಚಾಗಿ ಫಸಲಿಗೆ ಬಂದ ಅಡಿಕೆ ಮರಗಳು ಒಣಗುತ್ತಿವೆ "ಎಂದು ನೊಂದು ನುಡಿದ.
ಅಂದು ಸಂಜೆ ಮನೆಯಲ್ಲಿ ನನಗೆ ಇಷ್ಟವಾದ  ಮಂಡಕ್ಕಿ ಉಸುಲಿ( ಪುರಿ) ಮಾಡಿ ,ಪಕೋಡ ಮಾಡಿದ್ದರೂ ಎರಡು ಪಕೋಡ ಸ್ವಲ್ಪ ಉಸುಲಿ ತಿಂದು ಎದ್ದುಬಿಟ್ಟಿದ್ದೆ, "ಇದ್ಯಾಕೆ ಇವತ್ತು ನಿಮ್ ಅಪ್ಪ ಇಷ್ಟು ಕಮ್ಮಿ ತಿಂದರು" ಎಂದು ಮಗಳ ಕೇಳಿದಳು ನನ್ನವಳು.

ರೈತರ ಕಷ್ಟಕ್ಕೆ ಕೊನೆಯೇ ಇಲ್ಲವೇ ಪಾಪ ಕಷ್ಟ ಜೀವಿಗಳು ಕಷ್ಟ ಪಟ್ಟರೂ ಸುಖವಿಲ್ಲ ಯಾವಾಗ ಈ ರೈತರ ಸಮಸ್ಯೆಗಳು ಬಗೆಹರಿಯುವುದು ಎಂದು ಚಿಂತಿಸುತ್ತಾ, ಪೆನ್ ತೆಗೆದುಕೊಂಡು ಹೊಸ ಪುಸ್ತಕದಲ್ಲಿ " ಈ ವರ್ಷ ಮಳೆ ಬೆಳೆ ಚೆನ್ನಾಗಿ ಆಗಲಿ" ಎಂದು ಬರೆದು ಮಲಗಿದೆ ,ನಿದ್ದೆ ಹತ್ತಲಿಲ್ಲ ,ಕಣ್ಣು ಮುಚ್ಚಿದರೆ  ಒಣಗಿದ  ಅಡಿಕೆ ಮರಗಳು ಬಂದು ನಿಂತವು.
ಬೆಳಿಗ್ಗೆ ಏಳು ಗಂಟೆ ,ಮಗಳು ತಂದು  ಕೊಟ್ಟ
ಟೀ ಕುಡಿಯುತ್ತಾ,  ಅಂದಿನ ನ್ಯೂಸ್ ಪೇಪರ್ ಓದುತ್ತಿರುವಾಗ, ಪೋನ್ ರಿಂಗಾಯಿತು,ನೋಡಿದೆ ಅಣ್ಣನದು
" ಒಳ್ಳೆ ಮಳೆ ಕಣಪ್ಪ, ಆ ತಿರುಪತಿ ತಿಮ್ಮಪ್ಪ ಕಣ್ ಬಿಟ್ಟ, ನಮ್ ತ್ವಾಟದ್ ಪಕ್ಕ ಇರೋ ಕೆರೆ ತುಂಬೈತೆ , ಇನ್ನೇನ್ ಮೋಸ ಇಲ್ಲ , ಒಳ್ಳೆ ಬೆಳೆ ಆಗುತ್ತೆ, ಅಬ್ಬಾಬ್ಬ.. ಅದೇನ್ ಮಳೆ ..ರಾತ್ರೆಲ್ಲಾ.... ಬಂತಪ್ಪ... " ಎಂದು ಸಂತೋಷದಿಂದ ಒಂದೇ ಸಮನೆ ಹೇಳಿದರು ಅಣ್ಣ.
ನಿನ್ನೆ ಸಂಜೆಯಿಂದ ಇದ್ದ ಬೇಸರ ಕಳೆದು
" ಏ ಇನ್ನೊಂದು ಕಪ್ ಟೀ ತೊಗೊಂಡ್ ಬಾ" ಎಂದೆ .

ಆ ಪುಸ್ತಕದ ಮಹಿಮೆ ಕಂಡು ಒಳಗೊಳಗೆ ಹೆಮ್ಮೆ, ಅಚ್ಚರಿ,ಸಂತೋಷವಾಯಿತು,  ಪೇಪರ್ ನಲ್ಲಿ ಕೊರೋನಾದ ವೈರಾಣುವಿನ ಉಲ್ಬಣದ ಸುದ್ದಿ, ಲಕ್ಷಾಂತರ ಸಾವು ನೋವಿನ ಸುದ್ದಿ ಓದಿದಾಗ ಬೇಸರಗೊಂಡು ,ಇಂದು ಸಂಜೆ ಆ ಪುಸ್ತಕದಲ್ಲಿ " ಕೊರೋನಾ ತೊಲಗಲಿ ಜಗತ್ತು  ಆರೋಗ್ಯವಾಗಿರಲಿ "ಎಂದು  ಬರೆಯಬೇಕು ಎಂದು ಬೆಳಿಗ್ಗೆ ಯೇ ನಿಶ್ಚಯ ಮಾಡಿಕೊಂಡು ಅಂದು ಶಾಲೆಯಲ್ಲಿ ಇನ್ನೂ ಲವಲವಿಕೆಯಿಂದ ಪಾಠ ಮಾಡಿದೆ.
ಸಂಜೆಯ  ವಾಕ್ ಮುಗಿಸಿ ದೊಡ್ಡ ಮಗಳಿಗೆ ಓದಿಕೊಡುವಾಗ ಚಿಕ್ಕ ಮಗಳು ತರಲೆ ಮಾಡುತ್ತಿದ್ದಳು," ಆಟ ಆಡು ಹೋಗು ಚಿನ್ನ" ಅಂದೆ "ಪೇಪರ್ ಬೋಟ್ ಆಟ  ಆಡಲಾ "ಅಂದಳು  ಹೂ... ಅಂದೆ

ಪ್ರತಿ ನಿಮಿಷಕ್ಕೊಂದು ಪೇಪರ್ ಬೋಟ್ ಮಾಡಿ " ಅಪ್ಪ.... ಹೇಗಿದೆ? ಕೇಳುತ್ತಿದ್ದಳು
" ವೆರಿ ಗುಡ್ ಸೂಪರ್ ಚಿನ್ನ " ಎನ್ನುತ್ತಿದ್ದೆ,
ಊಟದ ನಂತರ ಎಂದಿಗಿಂತಲೂ ಅಂದು ಬೇಗ ಹಾಸಿಗೆ ಮೇಲೆ ಹೋಗಿ ಪವಾಡದ ಪುಸ್ತಕದಲ್ಲಿ ಬರೆಯಲು ಹೊರಟೆ, ಹಾಳೆಗಳು ಖಾಲಿ! ಇದೇನು ಎಂದು ನೋಡಿದರೆ ಮುಂದಿನ ಖಾಲಿ‌ ಹಾಳೆಗಳನ್ನು ಯಾರೋ ಹರಿದಿದ್ದರು,
" ಅಯ್ಯೋ ಎಂತಹ ಕೆಲಸ ಆಯಿತು, ಈ ಕೊರೋನಾ ತೊಲಗುವ ಕುರಿತು ನನಗೆ ಮೊದಲೇ ಯಾಕೆ ಹೊಳೆಯಲಿಲ್ಲ, ಎಂದು ನನ್ನನ್ನು ನಾನೇ ಹಳಿದುಕೊಂಡೆ, ಆದರೂ ಈ ಹಾಳೆಗಳನ್ನು ಹರಿದವರಾರು ಎಂದು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾಗ ಓಡಿ ಬಂದ ಚಿಕ್ಕ ಮಗಳು " ಅಪ್ಪಾ... ಈ ಪೇಪರ್ ಬೋಟ್ ಎಂಗಿದೆ" ಎಂದು ಕಣ್ಣ ಮುಂದೆ ಹಿಡಿದಾಗ, ಆ ಹಾಳೆ ಪವಾಡದ ಪುಸ್ತಕದ್ದು ಎಂದು ನನಗೆ ತಿಳಿಯದೇ ಇರಲಿಲ್ಲ....

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು.

No comments: