03 May 2021

ರಂಗಣ್ಣನ ಗುಡಿಸಲು .ಕಥೆ


ಕಥೆ

*ರಂಗಣ್ಣನ ಗುಡಿಸಲು*

ಲಾಂಗ್ ಡ್ರೈವ್ ನಿಂದ ಸುಸ್ತಾದಂತೆ ಕಂಡುಬಂದ ಗಗನ್ ಬೈಕ್ ನ್ನು ರಸ್ತೆಯ ಬದಿಗೆ ನಿಲ್ಲಿಸಿ, ಬ್ಯಾಗ್ ಗೆ ಕೈ ಹಾಕಿದ ,ಕುಡಿಯುವಭಾವುಕರಾದರುಯಾಗಿತ್ತು, ಬಾಯರಿಕೆ ಹೆಚ್ಚಾಗಿತ್ತು ,"ಎಂತ ದಡ್ಡ ನಾನು ಕರಜೀವನಹಳ್ಳಿ ಟೋಲ್ ಬಳಿ ಟೀ ಕುಡಿದೆ ,ಆಗ ಈ ಖಾಲಿಯಾದ ಬಾಟಲ್ ನೋಡಲಿಲ್ಲ, ಹಿರಿಯೂರು ಬೈಪಾಸ್ ನಲ್ಲೂ ನಿಲ್ಲಿಸಿ ಸುಧಾರಿಸಿ ಕೊಂಡೆ, ಆಗಲು ನೆನಪಾಗಲಿಲ್ಲ ಈಗ ಹರ್ತಿಕೋಟೆ ದಾಟಿ ಮುಂದೆ ಬಂದಾಗ ನೀರು ‌ನೋಡಿಕೊಂಡಿರುವೆ " ಎಂದು ತನ್ನನ್ನೆ ಬೈದುಕೊಂಡು ಅತ್ತ ಇತ್ತ ನೋಡಿದ
ಅನತಿ ದೂರದಲ್ಲಿ ಒಂದು ಗುಡಿಸಲು ಕಂಡಿತು ಅತ್ತ ನಡೆದ ದೂರದಿಂದಲೇ ಜೋರಾದ ಬೊಗಳುವ ನಾಯಿ ಇವನ ಸ್ವಾಗತಿಸಿತು.
"ಯಾರದು? "ಎಂದು ಮಧ್ಯ ವಯಸ್ಕ  ರಂಗಣ್ಣನವರು ಬರಿ ಮೈಯಲ್ಲೇ ಗುಡಿಸಲಿನಿಂದ  ಹೊರಬಂದು ನಾಯಿ ಕರೆದರು .

"ಅಣ್ಣ ನಾನು ಗಗನ್ ಅಂತ ನಮ್ದು ಸಿದ್ದಾಪುರ ನಾನು ಬೆಂಗಳೂರಿನಲ್ಲಿ ಕೆಲಸ ಮಾಡ್ತೀನಿ, ಇವತ್ತು ನಮ್ ಊರಲ್ಲಿ ಜಾತ್ರೆ , ಗೌರ್ಮೆಂಟ್ ಬಸ್ ಸ್ಟ್ರೈಕ್ ಅದಕ್ಕೆ ಬೆಂಗಳೂರಿನಿಂದ ಬೈಕಲ್ಲೇ ಬಂದೆ, ಬಾಯಾರಿಕೆ ಆಗಿತ್ತು, ಅದಕ್ಕೆ......"

" ಬಾರಪ್ಪ ತಗಾ ಕುಡಿ, ತಣ್ಣನ ಸ್ವಾರೆ ನೀರು" ಎಂದು ಒಂದು ಚೆಂಬು ನೀರು ಕೊಟ್ಟರು ರಂಗಣ್ಣನವರು.
ಮೊದಲೇ ಬಾಯರಿದ್ದರಿಂದ ಗಟ ಗಟನೆ ‌ನೀರು ಕುಡಿದ ಗಗನ್ "ಅಬ್ಬಾ ಈಗ ಇಡೀ ಬಾಡಿ ಕೂಲ್ ಆಯ್ತು ಅಣ್ಣ ತುಂಬಾ ಥ್ಯಾಂಕ್ಸ್" ಎಂದು ಅಲ್ಲೇ ಗುಡಿಸಲಿನ ಮುಂದಿರುವ ಹೊಂಗೆ ಮರದ ಕೆಳಗಿರುವ ಹಗ್ಗದ ಮಂಚದ ಮೇಲೆ ಕುಳಿತು,

"ಏನಣ್ಣ ಮನೆ ಇಲ್ಲಿ? ನಿಮ್ದು ಯಾವೂರು ?
ಊರಲ್ಲಿ ಮನೆ ಇಲ್ವಾ?" ಮೂರು ಪ್ರಶ್ನೆ ಒಟ್ಟಿಗೇ ಕೇಳಿ ಉತ್ತರಕ್ಕೆ ಕಾದ.

ದೀರ್ಘವಾಗಿ ಉಸಿರು ಬಿಟ್ಟು " ಅಯ್ಯೋ.. ಏನ್ ಹೇಳಾನಪ್ಪ ನಮ್ ಕಥೆನಾ , ನಮ್ದು ಯರಬಳ್ಳಿ ಊರಾಗೆ ಮನೆ ಇತ್ತು ,ಮಾರಮ್ಮನ ಗುಡಿಯ ಎಡಕ್ಕೆ ಎಂಟನೇ ಮನೆ ನಮ್ದು ,  ಆ ತಾಯಿ ದಯದಿಂದ  ಬ್ಯಸಾಯ ಮಾಡ್ಕೆಂಡು ಸೆಂದಾಕಿದ್ವಿ , ಮಳೆ ಬೆಳೆ ಸೆನ್ನಾಗಿ ಆಗ್ತಿತ್ತು ,ಒಳ್ಳೆಯ ಕಡ್ಲೇಕಾಯಿ ಬೆಳಿತಿದ್ವಿ, ಊರ ಸುತ್ತಮುತ್ತ ಮರ ಗಿಡ ಬೆಳೆದು ಎಲ್ಲಿ ನೋಡಿದ್ರೂ ಹಸುರೋ... ಹಸುರು.
ನಾನು ದಿನಾ ಉಂಡು, ನಮ್ ಮ್ಯಾಕೆ ಹೊಡ್ಕಂಡು ಮೇಸಾಕೆ ನಮ್ ಹೊಲ್ದ ಕಡೆ ಹೋಗ್ತಿದ್ದೆ, ಬ್ಯಾಡ ಅಂದ್ರೂ ನಮ್ ನಾಯಿ ಮಾಲಿಂಗ ನನ್ ಹಿಂದೆನೆ ಬರಾದು,ಇಗಾ ನೋಡು ಈಗಲೂ ಇಲ್ಲೆ ಐತೆ, ಒಟ್ನಲ್ಲಿ ನಾನು ನನ್ ಹೆಂಡ್ತಿ ನನ್ ಮಗ ಸುಖವಾಗಿದ್ವಿ ಕಣಪ್ಪ ....
ಈ ....ರೋಡ್ ನವರು ಬಂದಾಗಿಂದ ನಮ್ ಗ್ರಚಾರ ಸುರುವಾತು ನೋಡಪ್ಪ"

"ಯಾವ ರೋಡ್ ನವರು ಅಣ್ಣ "

"ನಮ್ಮ ಊರು ರೋಡ್ ಅಗಲ ಮಾಡಿದರಲ್ಲಪ್ಪ ಅದೇ ರೋಡ್‌ ನವರು ಬಂದು ಮಾರ್ಕ್ ಮಾಡಿ ನಮ್ಮ ಮನೆ ಜೊತೆಗೆ ರೋಡ್ ಪಕ್ಕದ ಎಲ್ಲಾ ಮನೆ ಹೊಡೆಯಾಕೆ ಸುರು ಮಾಡಿದ್ರು , ಹೂ... ಅಲ್ಪ ಸ್ವಲ್ಪ ದುಡ್ಡೂ ಕೊಟ್ರು, ಆದರೆ ನಮ್ ತಾತ ಮುತ್ತಾತ ಕಾಪಾಡಿದ ಮನೆನ , ನಮ್ ಮಕ್ಕಳು ಆಟ ಆಡಿದ ಮನೆನೆ ,ನಮ್ಮ ಸಂತೋಷನ ಅವ್ರು ಕಿತ್ಕಂಬಿಟ್ರು ಕಣಪ್ಪ, " ರಂಗಣ್ಣನವರು ಮಾತಲ್ಲಿ ಮೊದಲಿದ್ದ ಬಿರುಸು ಕಡಿಮೆಯಾಗಿ  ಭಾವುಕರಾದರು .

" ನನ್ ಹೆಂಡ್ತಿ ನನ್ ಮಗನ್ನೂ ದೂರಾ ಮಾಡಿದ್ದು ಇದೇ ರೋಡ್ ಕಣಪ್ಪ"

"ಏನಾಗಿತ್ತು ತಾತ ನಿಮ್ ಮನೇರಿಗೆ ಮತ್ತು, ಮಗಂಗೆ?"

ಅಯ್ಯೋ ಅದೆಂತಾದೋ ಸ್ವಾಸಕೋಸ  ಕ್ಯಾನ್ಸರ್ ಅಂತೆ ಕಣಪ್ಪ ಧೂಳು ಕುಡ್ದು ಕುಡ್ದು ಅದು ಬರುತ್ತೆ ಅಂತ ಡಾಕುಟ್ರು ಅಂದಿದ್ರು, ಆ ಧೂಳ್ನಿಂದ ನಮ್ಮೂರಾಗೆ ಸುಮಾರು ಜನ ಅದೆಂಥದೋ ಅಸ್ತಮಾ ರೋಗ ಬಂದು ಸತ್ತೋದ್ರು, ಈಗ್ಲೂ ಊರಾಕೋದ್ರೆ ಪ್ರತಿ ಮನೇಲೂ ನಿಮ್ಗೆ ಜನ ಕೆಮ್ಮ   ಸಬ್ದ ಕೇಳುತ್ತೆ,ಇದೆಲ್ಲಾ ಆಗಿದ್ದು ಆ ರೋಡ್ ನವರಿಂದ ಕಣಪ್ಪ.

ನಮ್ ಮನೆಗೆ ಸರ್ಕಾರದೋರು ಕೊಟ್ಟ, ಅರ್ದ ದುಡ್ ಆಸ್ಪತ್ರೆಗೆ ಇಕ್ಕಿದ್ವಿ, ಆದರೂ ಅವಳು ಬದುಕ್ಲಿಲ್ಲ, ಇನ್ನೂ ಮಗ ಪುಡಾರಿ ಹುಡುಗ್ರು ಜತೆ ಸೇರಿ ಎಲ್ಲಾ ಚಟ ಕಲ್ತ,ಇದ್ದ ಬದ್ದ ದುಡ್ ನೆಲ್ಲಾ ಹಾಳು ಮಾಡಿ , ಈಗೆಲ್ಲೋ ಬೆಂಗ್ಳೂರ್ ನಾಗೆ ವಾಚ್ಮನ್ ಕೆಲ್ಸ ಮಾಡ್ತಾನಂತೆ, ಯಾವಾಗಲೋ ತಿಂಗಳಿಗೋ ,ಎಳ್ಡು ತಿಂಗಳಿಗೋ ಬಂದು ನಾನು ಬದ್ಕಿದಿನೋ ಸತ್ತಿದಿನೋಅಂತ ನೋಡ್ಕೆಂಡು, ಮಕ ತೋರ್ಸಿ ಹೋಕ್ತಾನೆ ,
ಅವನಿಗೆ ಈಗ ಈ ನಾಕೆಕ್ರೆ ಜಮೀನ್ ಮೇಲೆ ಕಣ್ಣು ಕಣಪ್ಪ,"

" ನೀವು ಊರಲ್ಲೆ ಇರಬಹುದಾಗಿತ್ತಲ್ಲ ಸರ್ಕಾರದವರು ಕೊಟ್ಟ ದುಡ್ನಿಂದ ಅಲ್ಲೇ ಮನೆ ಕಟ್ಕೊಂಡು ಇರಬಹುದಿತ್ತು , ಇಲ್ಲಿಗ್ಯಾಕೆ ಬಂದು ಒಬ್ರೆ ಇದಿರಾ?" ಕೇಳಿದ  ಗಗನ್"

"ನನಿಗೆ ನ‌ನ್ ಮನೆ ಕೆಡವಿದ್ ಮ್ಯಾಲೆ ,ನನ್ ಮನೆ  ಜಾಗದಾಗೆ  ಟಾರ್ ರೋಡ್ ನೋಡಿದ್ರೆ ಸಂಕಟ ಆಗ್ತಿತ್ತು ಕಣಪ್ಪ , ಜೊತಿಗೆ ರಸ್ತೆ ಮಾಡೋ ಕಂಪ್ನಿನವರು  ನಮ್ಮ ಊರ್ ಪಕ್ಕನೇ ಜಲ್ಲಿ ಮಿಷನ್ ಇಟ್ಟರು, ಇದರಿಂದ  ಯಾವಾಗಲೂ ಢಂ.. ಢಂ....  ಸಬ್ದ .. ಊರತುಂಬಾ ಧೂಳು , ಇದ್ರಿಂದ
ಊರಾಗಿರೊ ಹಸರು ಗಿಡ ಎಲ್ಲಾ ಕೆಂಪ ಗಿಡ ಆದ್ವು,ಸುಮಾರು ಜನ‌ ಉಸ್ರು ಕಟ್ಟಿ ಸತ್ ಹೋದ್ರು, ಇದನ್ ನೋಡಿ ನನಿಗೆ ಭಯ ಆಗಿ ನಮ್ ಹೊಲ್ದಲ್ಲೆ ಗುಡುಸ್ಲು ಹಾಕ್ಕೆಂಡು ಒಳ್ಳೆ ಗಾಳಿ ಕುಡ್ಕಂಡು, ಇದ್ದದ್ರಲ್ಲೇ ನೆಮ್ದಿನಾಗಿ ಇದೀನಿ ಕಣಪ್ಪ , ಆದ್ರೆ ಯಾವಾಗಾದ್ರೂ ಊರಾಕೆ ಹೋದಾಗ ,ಕೆಡವಿದ ನನ್ ಮನೆ ಹತ್ರ ತಾರ್ ರೋಡಲ್ಲಿ ನಿಂತ್ರೆ ಈಗಲೂ ಅಳು ತಡೆಯಲಾಗಲ್ಲ , ಏನ್ ಮಾಡಾದು ಯಾವ್ದೂ ನಮ್ ಕೈಲಿಲ್ಲ "
ಎಂದು ಕೈ ಮೇಲೆ ಮಾಡಿದರು ರಂಗಣ್ಣ.
ಗಗನ್ ಒಂದು ನಿಮಿಷ ಏನೂ ಮಾತನಾಡಲಿಲ್ಲ  ,ಎದ್ದು ಬೈಕ್ ಬಳಿ ಬಂದು ತನ್ನ ತಂದೆಗೆ ಕೊಡಲು ತಂದಿದ್ದ ಸೇಬು ಮತ್ತು ಮೊಸಂಬಿ ಹಣ್ಣುಗಳ ಕವರ್ ಅನ್ನು ರಂಗಣ್ಣನವರಿಗೆ ಕೊಟ್ಟ ಮೊದಲು ಬೇಡವೆಂದರೂ ಗಗನ್ ಬಲವಂತ ಮಾಡಿದ್ದಕ್ಕಾಗಿ ತೆಗೆದುಕೊಂಡು ,
" ಆ ದೇವ್ರು ನಿನ್ನ ಸೆನ್ನಾಗಿ ಇಟ್ಟಿರ್ಲಪ್ಪಾ" ಎಂದು ಹರಸಿದರು
"ಬರ್ತಿನಿ ರಂಗಣ್ಣ ಥ್ಯಾಂಕ್ಸ್ ,ಯೋಚ್ನೆ ಮಾಡಬೇಡಿ ಎಲ್ಲಾ ಸರಿಯಾಗುತ್ತೆ "ಎಂದು ಭಾರವಾದ ಹೆಜ್ಜೆ ಹಾಕಿ ಬೈಕ್ ಕಡೆ ನಡೆದು ಇಗ್ನಿಷನ್ ತಿರುವಿದ  ಬೈಕ್ ಒಂದೇ ಕಿಕ್ಕಿಗೆ ಸ್ಟಾಟ್ ಆಗಲಿಲ್ಲ, ರಂಗಣ್ಣನ ಗುಡಿಸಲು ನೋಡುತ್ತ ಎಕ್ಸಿಲೇಟರ್ ರೈಸ್ ಮಾಡಿದ ಗಗನ್, ಬೆಂಗಳೂರಿನಿಂದ ನೂರು ನೂರಿಪ್ಪತ್ತು ಸ್ಪೀಡ್ ನಲ್ಲಿ ಬಂದವನ ಬೈಕ್ ಯಾಕೋ ಅಲ್ಲಿಂದ ಮುಂದಕ್ಕೆ ಮೂವತ್ತು ಕಿಲೋಮೀಟರ್ ದಾಟಲಿಲ್ಲ.......

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು 


4 comments:

minakesham said...

Sir ಕತೆ ಚೆನ್ನಾಗಿದೆ

C g VENKATESHWARA said...

ಧನ್ಯವಾದಗಳು🙏🙏

Unknown said...

ವಿಶ್ವ ಅಸ್ತಮ ದಿನದ ಅಂಗವಾಗಿ ತಾವು ಬರೆದ ಕಥೆ ಚನ್ನಾಗಿದೆ. ನಿಮ್ಮ ಕಥಾ ಕೃಷಿ ಮುಂದುವರೆಯಲಿ...

C g VENKATESHWARA said...

ನಿಮ್ಮ ಪ್ರೋತ್ಸಾಹದಾಯಕ ಪ್ರತಿಕ್ರಿಯೆಯಾಗಿ ಧನ್ಯವಾದಗಳು🙏🙏