31 December 2019

*(2020)ಟ್ವೆಂಟಿ- ಟ್ವೆಂಟಿ*(ಹನಿ)

*(2020)ಟ್ವೆಂಟಿ- ಟ್ವೆಂಟಿ*

ನನ್ನ ಅಭ್ಯಂತರವೇನೂ ಇಲ್ಲ
ನೀವು ಆಚರಿಸಲು
(2020)ಟ್ವೆಂಟಿ- ಟ್ವೆಂಟಿ
ಕೇಳುವುದೂ ಇಲ್ಲ
ನಾನು ನೀವು ಮಾಡಿದರೂ ಪಾರ್ಟಿ
ನನ್ನ ಆಶಯವಿಷ್ಟೇ  ಸಕಾಲದಿ
ನಿಮ್ಮ ಮನೆ ತಲುಪಿ
ಬೆಳಗ್ಗೆ ನಿಮ್ಮ ಮನೆಯಲಿ
ಕುಡಿದರಾಯ್ತು ಟೀ

*ಸಿ ಜಿ ವೆಂಕಟೇಶ್ವರ*

ಇಪ್ಪತ್ತು ಇಪ್ಪತ್ತು (ಹನಿ)

*ಇಪ್ಪತ್ತು ಇಪ್ಪತ್ತು*

ಈಗ ಒಂದು ತಿಂಗಳಿಂದ
ಎಲ್ಲರೂ ಹೇಳುವುದೊಂದೆ
ಬರ್ತಾ ಇದೆ ಇಪ್ಪತ್ತು ಇಪ್ಪತ್ತು
2020
ಇಂದು ಬೇಕಾಬಿಟ್ಟಿ ಕುಡಿದು
ತೂರಾಡಿದರೆ ತಪ್ಪಿದ್ದಲ್ಲ
ಆಪತ್ತು

*ಸಿ ಜಿ ವೆಂಕಟೇಶ್ವರ*

ಕ್ರಾಂತಿ ಶಾಂತಿಯಾಗಬೇಕಿದೆ (ಕವನ)


*ಕ್ರಾಂತಿ- ಶಾಂತಿಯಾಗಬೇಕಿದೆ*


ಅರಸನ ಬದಲಿಗೆ ಬಂದ
ರಾಜಕಾರಣಿಗಳು ಸ್ವಹಿತ
ಅರಸುವುದನ್ನು ತಪ್ಪಿಸಲು
ಜನತಾ ಸೇವೆಯೇ ಜನಾರ್ದನ
ಸೇವೆಯೆಂದು ಕಾಯಕ ಮಾಡಲು
ರಾಜಕೀಯ ಕ್ರಾಂತಿಯಾಗಬೇಕಿದೆ.

ಅಂಕಗಳೇ ಜೀವನವೆಂದು
ಅಂಕೆಯಿಲ್ಲದೆ ಬೆಳೆದು
ಸಂಸ್ಕಾರ ತಿಳಿಯದೆ
ಸಂಕಟಪಡುವ ಸಂಭಂಧಗಳ
ಗಾಳಿಗೆ ತೂರುವವರಿಗೆ
ಬುದ್ದಿ ನೀಡುವ
ಶಿಕ್ಷಣ ಕ್ರಾಂತಿಯಾಗಬೇಕಿದೆ.

ಗುಡಿ ಕೈಗಾರಿಕೆಗಳು
ನಾಶವಾಗಿ ಯಂತ್ರಗಳ
ಗುಲಾಮರಾಗಿ  ನಿರುದ್ಯೋಗ
ತಾಂಡವವಾಡುವ ದೃಶ್ಯಗಳನ್ನು
ತೊಲಗಿಸಿ ಪ್ರತಿ ಗೃಹದಲೂ
ಉತ್ಪಾದನೆ ಮಾಡುವ
ಕೈಗಾರಿಕಾ ಕ್ರಾಂತಿಯಾಗಬೇಕಿದೆ.

ಭ್ರಷ್ಟಾಚಾರ, ಸ್ವಜನಪಕ್ಷಪಾತ
ಇವುಗಳಿಂದ ಬೇಸತ್ತ ಜನರು
ಭ್ರಮನಿರಸನ ಹೊಂದಿರುವರು
ಪ್ರಜಾಸ್ನೇಹಿ ಆಡಳಿತ ನೀಡಲು
ಆಡಳಿತದಲ್ಲಿ ಕ್ರಾಂತಿಯಾಗಬೇಕಿದೆ.

ಹೊಸ ವರ್ಷವೆಂದು ಕರೆವ
ಈ ಕ್ಯಾಲೆಂಡರ್ ವರ್ಷದಲ್ಲಾದರೂ
ಸಕಲ ರಂಗದಿ ಕ್ರಾಂತಿಯಾಗಬೇಕಿದೆ
ವಿಶ್ವ ನಾಯಕರಿಗೆ ಒಳ್ಳೆಯ ಬುದ್ದಿ
ಬಂದು ಜಗತ್ ಶಾಂತಿಯಾಗಬೇಕಿದೆ.

*ಸಿ ಜಿ‌ ವೆಂಕಟೇಶ್ವರ*
ತುಮಕೂರು



ಸಂತಸದ ಸುದ್ದಿ (ಲೇಖನ)


ಸಂತಸದ ಸುದ್ದಿ(ಲೇಖನ)

ಭಾರತೀಯ ಅರಣ್ಯ ಸ್ಥಿತಿಗತಿ ವರದಿ 2019 ರ ಪ್ರಕಾರ ಕರ್ನಾಟಕದ ಅರಣ್ಯ1025 ಚದರ ಕಿಲೋಮೀಟರ್‌ ಹೆಚ್ಚಳ ಆಗಿರುವುದು ದಾಖಲಾಗಿದೆ. ಇದು ದೇಶದಲ್ಲೇ ಅತಿ ಹೆಚ್ಚು ದಾಖಲಾದ ಹೆಚ್ಚಳ ಎಂದು ಕರ್ನಾಟಕ ಪ್ರಥಮ ಸ್ಥಾನ ಪಡೆದಿರುವುದು ಕನ್ನಡಿಗರು ಸಂತಸ  ಪಡುವ ವಿಷಯವಾಗಿದೆ. ಅರಣ್ಯ ನಾಶದಿಂದ ಪರಿಸರದಲ್ಲಿ ಅಸಮತೋಲನವನ್ನು ಕಾಣುವ ಈ ದಿನಗಳಲ್ಲಿ ಇಂತಹ ಸುದ್ದಿ ಆಶಾದಾಯಕವಾಗಿ ಮುಂದಿನ ದಿನಗಳ ಬಗ್ಗೆ ಉತ್ತಮ ನಿರೀಕ್ಷೆ ಹೊಂದಬಹುದು .ಮದ್ಯ ಕರ್ನಾಟಕದ ತುಮಕೂರುಜಿಲ್ಲೆಯು 305 ಚದರ ಕಿಲೋಮೀಟರ್‌ ಹೆಚ್ಚಳ ಕಂಡಿರುವುದು ಗಮನಾರ್ಹವಾದ ಸಂಗತಿ ,ಇದೇ ವೇಳೆ ಮಲೆನಾಡಿನ ಶಿವಮೊಗ್ಗದ ಅರಣ್ಯ ಪ್ರದೇಶದಲ್ಲಿ ಇಳಿಕೆ ಕಂಡಿರುವುದು ಆತಂಕದ ವಿಷಯವಾಗಿದೆ. ಇದೇ ರೀತಿ ರಾಜ್ಯದ ಮತ್ತು ದೇಶದ ಅರಣ್ಯ ಪ್ರದೇಶ ‌ನಿಗದಿತ ಶೇಕಡಾ33 ಕ್ಕಿಂತ ಹೆಚ್ಚಾಗಿ ಪರಿಸರ ಸಮತೋಲನ ಉಂಟಾಗಲು ನಾವೆಲ್ಲರೂ ಕೈ ಜೋಡಿಸಬೇಕಿದೆ.
*ಸಿ ಜಿ ವೆಂಕಟೇಶ್ವರ*
ತುಮಕೂರು

29 December 2019

*ಮೂರು ಹನಿಗಳು*

*೧*

ಹೆಸರು ಹೇಳಲು,  ಕೇಳಲು
ಏನೋ ಒಂಥರಾ ಇಂಪು
ಅವರೇ ನಮ್ಮ ಕುವೆಂಪು

*೨*

ಕನ್ನಡ ಸಾಹಿತ್ಯದ ದೊಡ್ಡಪ್ಪ
ಇನ್ಯಾರು ಅಲ್ಲ ಅವರೇ
ಕೆ ವಿ ಪುಟ್ಟಪ್ಪ

*೩*

ಯಾರೋ ಕೇಳಿದರು
ನಿಮಗೆ ಬರೆಯಲು
ಸ್ಪೂರ್ತಿ ಯಾರು
ನಾಟಕ, ಹನಿಗವನ
ಲೇಖನ, ಕಾವ್ಯ
ಕಥೆ ಕವನಾನ
ಅದಕ್ಕೆ ಉತ್ತರಿಸಿದೆ
ದಿನವೂ ನಾನು
ಎದ್ದ ತಕ್ಷಣ ನೋಡುವೆ
ಕುವೆಂಪು ಪೋಟೋನಾ

*ಸಿ ಜಿ ವೆಂಕಟೇಶ್ವರ*
*ತುಮಕೂರು*

27 December 2019

ಅವನೇ ಶ್ರೀಮನ್ನಾರಾಯಣ (ಚಿತ್ರ ವಿಮರ್ಶೆ)



ಅವನೇ ಶ್ರೀಮನ್ನಾರಾಯಣ*

ಚಿತ್ರ ವಿಮರ್ಶೆ

ಅಮರಾವತಿ ಎಂಬ ಕೋಟೆಯ ವ್ಯಾಪ್ತಿಯಲ್ಲಿ
ನಾಟಕ ಮಾಡುವ ಜನರು ಲೂಟಿಕೋರರಾಗಿ ಲೂಟಿ ಮಾಡಿದ ಹಣವನ್ನು ತೆಗೆದುಕೊಂಡು ಹೋಗುವಾಗ ಅಬೀರರ ಕೈಗೆ ಸಿಕ್ಕು ಪ್ರಮುಖ ನಾಯಕರು ಕೊಲೆಯಾಗುತ್ತಾರೆ .ಅದರಲ್ಲಿ ಒಬ್ಬನನ್ನು ಖಳರು ಬ್ಯಾಂಡ್ ಊದುವ ಕೆಲಸ ಮಾಡಿಸುತ್ತಾ, ಲೂಟಿ ಹಣ ಶೋಧನೆಯಲ್ಲಿ ತೊಡಗಿರುತ್ತಾರೆ .ಉಳಿದ ನಾಟಕದ ಪಾತ್ರದಾರಿಗಳು ಭೂಗತರಾಗಿ ಶ್ರೀಮನ್ನಾರಾಯಣನ ಆಗಮನಕ್ಕೆ ಕಾಯುತ್ತಿರುತ್ತರೆ ಅವರಿಗೆ ನಾರಾಯಣ ಸಿಕ್ಕನೆ? ಆ ಲೂಟಿಯ ಹಣ ಪಡೆಯಲು ಖಳ ಅಣ್ಣ ತಮ್ಮಂದಿರು ಹೇಗೆ ಪ್ರಯತ್ನ ಮಾಡುವರು? ಇನ್ಸ್ಪೆಕ್ಟರ್ ರಕ್ಷಿತ್ ಶೆಟ್ಟಿ ಹೇಗೆ ಆ ಹಣ ಹುಡುಕುತ್ತಾರೆ. ಸಾನ್ವಿ ಶ್ರೀವಾತ್ಸವ್ ಹೇಗೆ ಇನ್ಸ್‌ಪೆಕ್ಟರ್ ಗೆ ವಿರುದ್ದವಾಗಿ ಕೊನೆಗೆ ಪ್ರೀತಿ ಮಾಡುತ್ತಾರಾ?  ಲೂಟಿಯ ಹಣ ಯಾರಿಗೆ ಸಿಗುತ್ತದೆ ಎಂಬುದನ್ನು ತಿಳಿಯಲು ನೀವು ಚಿತ್ರ ಮಂದಿರದಲ್ಲಿ ಶ್ರೀಮನ್ನಾರಾಯಣನ ದರ್ಶನ ಮಾಡಲೇಬೇಕು.

 ನಟ ನಿರ್ದೇಶಕ ರಕ್ಷಿತ್ ಶೆಟ್ಟಿಯವರು  ಮತ್ತು ನಿರ್ದೇಶಕ ಸಚಿನ್ ರವರು ಒಂದು ಉತ್ತಮ ವಿಭಿನ್ನವಾದ ಕನ್ನಡ ಸಿನಿಮಾ ನೀಡಿದ್ದಾರೆ ಚಿತ್ರ ನೋಡುತ್ತ ಕುಳಿತರೆ ಎಲ್ಲಿಯೂ ಬೋರ್ ಆಗುವುದಿಲ್ಲ, ಕ್ಷಣ ಕ್ಷಣಕ್ಕೆ ತಿರುವು ನೀಡುವ ,ಚಿತ್ರದ ಕೊನೆವರೆಗೂ ಚುರುಕಾದ ಸಂಭಾಷಣೆ ಗಮನಸೆಳೆಯುತ್ತವೆ. ಅಜನೀಶ್ ಲೋಕನಾಥ್ ರವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಚಿತ್ರದ ಪ್ಲಸ್ ಪಾಯಿಂಟ್. ಕ್ಯಾಮರಾ ಕೆಲಸ ಕಣ್ಣಿಗೆ ಹಬ್ಬದ ಅನುಭವ ನೀಡುತ್ತದೆ. ನಟನೆಯ ವಿಷಯಕ್ಕೆ ಬಂದರೆ ರಕ್ಷಿತ್ ಶೆಟ್ಟಿ ಚಿತ್ರವನ್ನು ಆವರಿಸಿಕೊಂಡಿದ್ದಾರೆ.ಅಚ್ಚುತಣ್ಣ ಆಗಿ ಅಚ್ಯತ್ ರವರ ಅಭಿನಯ ಎಂದಿನಂತೆ ಸೂಪರ್.   ಬಾಲಾಜಿ ಮನೋಹರ್ ಪ್ರಮೋದ್ ಶೆಟ್ಟಿರವರು  ಖಳ ಅಣ್ಣತಮಂದಿರಾಗಿ ಒಬ್ಬರಿಗಿಂತ ಒಬ್ಬರು ಉತ್ತಮ ಅಭಿನಯ ನೀಡಿದ್ದಾರೆ. ಹಿಂದಿನ ಚಿತ್ರದಲ್ಲಿ ಗ್ಲಾಮರ್ ಪಾತ್ರದಲ್ಲಿ ಮಿಂಚಿದ್ದ ಶಾನ್ವಿ ಶ್ರೀವಾಸ್ತವ್ ನನಗೂ ನಟಿಸಲು ಬರುವುದು ಎಂದು ಸಾಬೀತು ಪಡಿಸಿದ್ದಾರೆ. ಚಿಕ್ಕ ಪಾತ್ರವಾದರೂ ಭವಿಷ್ಯ ಹೇಳುವ ಯೋಗರಾಜ್ ಭಟ್ ಗಮನ ಸೆಳೆಯುತ್ತಾರೆ.ಸ್ವತಃ ಸಂಕಲನಕಾರರಾದ ಸಚಿನ್ ರವರು ಚಿತ್ರದ ಕೆಲ ಅನವಶ್ಯಕ ದೃಶ್ಯಗಳಿಗೆ ಕತ್ತರಿ ಹಾಕಬಹುದಿತ್ತು.ಒಟ್ಟಾರೆ ಅದ್ದೂರಿ ಮೇಕಿಂಗ್ ,ಸದಭಿರುಚಿಯ ಸಂಭಾಷಣೆ, ಉತ್ತಮ ಸಂಗೀತ, ವಿಭಿನ್ನವಾದ ಕಥೆ ,ಇರುವ ಈ ಚಿತ್ರವನ್ನು ಕನ್ನಡಿಗರಲ್ಲದೇ ಬೇರೆ ಭಾಷೆಯ ಪ್ರೇಕ್ಷಕರು ಇಷ್ಟಪಡದೇ ಇರರು.


*ಸಿ ಜಿ ವೆಂಕಟೇಶ್ವರ*
ತುಮಕೂರು

16 December 2019

ವಿಳಾಸ ತಿಳಿಸಿ (ಕವನ)

*ವಿಳಾಸ ತಿಳಿಸಿ*

ಇಂದು ಸ್ವತಂತ್ರ ,ಸಮಾನತೆ,ಮಾನವೀಯ ಮೌಲ್ಯಗಳು ಸಂಬಂಧಗಳು  ಭಾಗಶಃ ಸತ್ತಿವೆ
ಭಾವನೆಗಳು ಬತ್ತುತ್ತಿವೆ.
ನೀವನ್ನಬಹುದು ನನ್ನನ್ನು ನಿರಾಶಾವಾದಿ
ಯಾವುದೋ ಪಂಗಡ,ಯಾರ ಪರ
ಇನ್ಯಾರದೋ ವಿರೋಧಿ
ನಾನೂ ಆಶಾವಾದಿ
ಕೆಟ್ಟದರ ವಿರೋಧಿ

ಕೆಲವರು ಸ್ವಾತಂತ್ರ್ಯ ದಾಟಿ
ಮಾಡುತಿರುವರು ಸ್ವೇಚ್ಛಚಾರ
ಇನ್ನೂ ಕೆಲವರಿಗೆ ಸ್ವಾತಂತ್ರ್ಯದ
ಮಾತೆತ್ತಿದರೆ ಅಪಚಾರ
ಕೆಲವರಿಗಂತೂ ಸ್ವಾತಂತ್ರ್ಯ ಮಾರುದೂರ
ಸ್ವತಂತ್ರ ಭಾಗಶಃ ಸತ್ತಿದೆ.

ಮಹಲಿನ ಮೇಲೆ ಮಹಲನ್ನೇರಿ
ಜೀವಿಸುತಿಹರು ಧನಿಕರು
ಜೋಪಡಿಗೆ ಪರದಾಡಿ ತುತ್ತು
ಅನ್ನಕ್ಕೆ ಪರದಾಡುತಿಹರು ಬಡವರು
ಸಮಾನತೆ ಭಾಗಶಃ ಸತ್ತಿದೆ.

ದಾರಿಯಲಿ ಅಪಘಾತವಾದರೆ
ಸಹಾಯಮಾಡುವ ಬದಲು
ಚಿತ್ರ ತೆಗೆಯಲು ಹಾತೊರೆವರು
ಮಹಿಳೆ ಮಕ್ಕಳ ಮೇಲೆ
ವಿಕೃತಿ ಮೆರೆವರು
ಮಾನವೀಯತೆ ಮರೆಯುವರು
ಮಾನವೀಯತೆ ಭಾಗಶಃ ಸತ್ತಿದೆ.

ಹೇಳಲು ಮಾತ್ರ ಇಂದು
ವಿಶ್ವವೇ ಹಳ್ಳಿಯಾಗಿದೆ
ಪಕ್ಕದಲಿರುವ ನಮ್ಮವರೊಂದಿಗೆ
ಮಾತನಾಡಲು ಸಮಯ ಇಲ್ಲದಾಗಿದೆ
ವಸ್ತುಗಳನ್ನು ಪ್ರೀತಿಸಿ ಮನುಷ್ಯರ
ಬಳಸುವವರ ಸಂಖ್ಯೆ ಹೆಚ್ಚಾಗಿದೆ
ಸಂಬಂಧಗಳು ಭಾಗಶಃ ಸತ್ತಿವೆ.

ಜೀವನ ಮೌಲ್ಯಗಳು, ಸಂಸ್ಕಾರ,
ಮಾನವೀಯ ಮೌಲ್ಯಗಳು ಕ್ರಮೇಣ ಅವಸಾನಗೊಳ್ಳುವ ಈ ದಿನಗಳಲ್ಲಿ
ಅವುಗಳ ಬದುಕಿಸುವ *ಸಂಜೀವಿನಿ*
ಬೇಕಿದೆ ದಯವಿಟ್ಟು ವಿಳಾಸ ಗೊತ್ತಿದ್ದರೆ ತಿಳಿಸಿ

*ಸಿ ಜಿ ವೆಂಕಟೇಶ್ವರ*

15 December 2019

ನಾನೂ ಒಬ್ಬ ಕುಡುಕ (ಕವನ)


          *ನಾನೂ ಒಬ್ಬ ಕುಡುಕ*

ಹೌದು ನಾನೂ ಒಬ್ಬ ಕುಡುಕ
ದಿನವೂ ತಪ್ಪದೇ ಕುಡಿವ ಕುಡುಕ
ನಾಚಿಕೆ ಬಿಟ್ಟು ಹೇಳುತಿರುವೆ
ನಾನೂ ಕುಡುಕ.

ಬಹಳ ಸಲ ಬೆಳಿಗ್ಗೆ ಎದ್ದ ತಕ್ಷಣ
ಕುಡಿಯುವೆ.ಕುಡಿಯದಿದ್ದರೆ ಎನೋ  ಕಳೆದುಕೊಂಡಂತೆ, ಸ್ನೇಹಿತರು
ಸಿಕ್ಕರೆ ಮುಗಿಯಿತು
ಕುಡಿಯಲೇ ಬೇಕು.

ವೈದ್ಯರು ಕೆಲವೊಮ್ಮೆ
ಕಡಿಮೆ ಕುಡಿಯಿರಿ
ಎಂದರೂ ಅವರ ಮಾತು
ಲೆಕ್ಕಿಸದೇ ತುಸು ಹೆಚ್ಚೇ
ಕುಡಿವ ಕುಡುಕ ನಾನು.

ನಾನೂ ಕುಡಿವುದಲ್ಲದೇ
ನನಗೆ ಪರಿಚಿತರನು
ವಿವಿಧ ಸಂಶೋಧನೆಯ ನೆಪ
ಹೇಳಿ ಒಳಿತಾಗುವುದು
ಕುಡಿಯಿರಿ ಎಂದು
ಅವರನ್ನು ಕುಡುಕರನ್ನಾಗಿ
ಮಾಡುವ ಕುಡುಕ ನಾನು.

ಆ ಬ್ರಾಂಡ್ ಈ ಬ್ರಾಂಡ್
ಎಂದು ನೂರಾರು ಬ್ರಾಂಡ್
ಇದ್ದರೂ ಇಂತದೇ ಬ್ರಾಂಡ್
ಎಂದು ನಾನೇನೂ ಬ್ರಾಂಡ್
ಆದವನಲ್ಲ ಯಾವುದಾದರೂ ಸರಿ
ಕುಡಿಯಲೇ ಬೇಕು.

ಹೌದು ನಾನೂ ಕುಡುಕ
ದಿನವೂ *ಟೀ* ಕುಡಿವ
ಮಹಾನ್ ಕುಡುಕ.

(ಇಂದು ಅಂತರರಾಷ್ಟ್ರೀಯ ಟೀ ದಿನ)

*ಸಿ ಜಿ ವೆಂಕಟೇಶ್ವರ*

11 December 2019

ಮನದ ಪ್ರಶ್ನೆಗಳು (ಕವನ)

*ಮನದ ಪ್ರಶ್ನೆಗಳು*

ನಾ ಸಾಯ ನೀ ಸಾಯ ಮನೆ ಮಂದಿಯಲ್ಲಾ ಸಾಯ ಬೇಸಾಯ
ಸಾಲದಲಿ ಹುಟ್ಟಿ ಸಾಲದಿ ಬೆಳೆದು ಸಾಲದಲಿ  ಮರಣಿಸುವ ಚಿತ್ರಣಗಳು
ಆಳುವವರಿಗೆ ಸಾಲುತ್ತಿಲ್ಲವೆ? ಇನ್ನೆಷ್ಟು ಬಲಿ ಬೇಕು?

ಭರವಸೆಯ ಮಾತುಗಳು ಭರಪೂರ ಆಶ್ವಾಸನೆಗಳಿಗೆ ಬರವಿಲ್ಲ
ಒಳಗಿನ ನೋವ ನುಂಗಿ ಹೊರಗೆ ನಗುವ
ಕಣ್ಣಲಿ ರೈತಕಣ್ಣೀರು ಸುರಿಸುವ ರೈತನ  ಗೋಳು ಕೇಳುವವರು ಯಾರೂ ಇಲ್ಲವೆ?

ಮಳೆರಾಯನೊಡನೆ ಜೂಜಾಡಿ
ಇಳೆಯನೇ ನಂಬಿ ಕಾಯಕ ಮಾಡಿ
ದೇಹ ಕೃಶವಾದರೂ ಕೃಷಿಯ ಬಿಡದೇ
ದುಡಿದು ತಿನ್ನು ಎಂದು ಸಾರುವ
ಅನ್ನದಾತನು ಖುಷಿಯಾಗುವುದು ಯಾವಾಗ?

ರಾಜ್ಯಗಳುದಿಸಿ ರಾಜ್ಯಗಳಳಿದರೂ
ರಾಜರಿಗನ್ನವ ನೀಡುವ ಇವನು
ಕೋಟಿಜನರ ಜೀವದ ಒಡೆಯ
ಮೇಟಿ ವಿದ್ಯೆಬಲ್ಲ ವ್ಯವಸಾಯಗಾರನ ಬವಣೆ  ನೀಗುವುದು ಯಾವಾಗ?

*ಸಿ ಜಿ ವೆಂಕಟೇಶ್ವರ*