20 November 2019

ದಿಟ್ಟ ಹೆಜ್ಜೆ ( ಚಿತ್ರ ಕವನ)


*ದಿಟ್ಟ ಹೆಜ್ಜೆ*

ಇಟ್ಟಿಗೆಯ ಗೂಡಿನಲಿ ಕಾಯಕ ಮಾಡುತಿರುವೆ
ಎದೆಗೂಡಿನಲಿರುವ ನೋವ ಮರೆತಿರುವೆ
ಹಿಟ್ಟು ಸಂಪಾದಿಸಲು ದಿಟ್ಟ ಹೆಜ್ಜೆ ಇಟ್ಟಿರುವೆ
ಇಳಿವಯಸಿನಲೂ ಇಟ್ಟಿಗೆಯ ಹೊರತಿರುವೆ
ಸ್ವತಃ ದುಡಿದು ಹೊಟ್ಟೆ ಹೊರೆಯುತಿರುವೆ .

*ಸಿ ಜಿ ವೆಂಕಟೇಶ್ವರ*

ಗಜಲ್ ೬೦ (ಸಾಲುವುದಿಲ್ಲ)


*ಗಜಲ್*

ಭೂರಮೆಯ ಸೊಬಗು ನೋಡಲು ಕಣ್ಣುಗಳು ಸಾಲವುದಿಲ್ಲ
ಪ್ರಕೃತಿ ಸಿರಿಯ ಬಣ್ಣಿಸಲು ಪದಗಳು ಸಾಲುವುದಿಲ್ಲ.

ಪರಿಸರದಲಿದೆ ಸಂಗೀತ ಹಕ್ಕಿಗಳ ಕಲರವ ದುಂಬಿಗಳ ಝೇಂಕಾರ .
ಸಿಡಿಲು ಮಳೆ ಗುಡುಗಿನಲೂ ಸಾಮಗಾನ ಕೇಳಲು ಕಿವಿಗಳು ಸಾಲುವುದಿಲ್ಲ.


ತರುಲತೆಗಳು ಖಗಮೃಗಗಳು ಕಾನನದ ಸೊಬಗಿನ ಮೂಲ
ನದನದಿ ಝರಿ ತೊರೆಗಳ ಅಂದ ಹೊಗಳಲು ರೂಪಕಗಳು ಸಾಲುವುದಿಲ್ಲ

ಮಲ್ಲೆ ಮಲ್ಲಿಗೆ ಜಾಜಿ ಕೇದಗೆ ಸಂಪಿಗೆಯ ಸುವಾಸನೆ ಬಲು ಚೆಂದ
ವರ್ಷಕಾಲದ ಮಣ್ಣವಾಸನೆಯ ಕಂಪು ಹೊಗಳಲು ಕವನಗಳು ಸಾಲುವುದಿಲ್ಲ.

ಈ ಜಗವು ಆನಂದಮಯವಾಗಲು ಸಿಹಿಜೀವಿಗಳ ಕೊಡುಗೆ ಅಪಾರ
ಪರಿಸರವ  ಬಳಸಿ ಉಳಿಸಿ ಬೆಳೆಸಲು ಸಣ್ಣ ಪ್ರಯತ್ನಗಳು ಸಾಲುವುದಿಲ್ಲ.

*ಸಿ ಜಿ ವೆಂಕಟೇಶ್ವರ*

15 November 2019

ಗಜಲ್ ೫೯(ಕನಕದಾಸರು)

*ಗಜಲ್59*

*ಕನಕದಾಸರ  ಜಯಂತಿಯ‌ ಶುಭಾಶಯಗಳು*

ಧನಕನಕ ತೃಣಸಮಾನರೆಂದು ತೋರಿಸಿದವರು ಕನಕದಾಸರು.
ಕೊನೆತನಕ ಹರಿಚರಣ ಬಿಡಬೇಡವೆಂದು ಬೋಧಿಸಿದವರು ಕನಕದಾಸರು.


ಅಹಂ ನಿಂದ ಒಡೆಯುತ್ತಿವೆ ಮನೆ ಮನಗಳು .
ನಾನು ಹೋದರೆ ಸ್ವರ್ಗಸುಖವೆಂಬ ಸತ್ಯ  ದರ್ಶನ ಮಾಡಿಸಿದವರು ಕನಕದಾಸರು.

ಮಂದಿರ ಮಸೀದಿಗಳಲಿಮಾತ್ರ ಭಗವಂತನಿರುವ ಎಂಬ ಮೂಢರು
ನಿಷ್ಕಲ್ಮಷ  ನಿಜಭಕ್ತಿಯಿಂದ ಕೃಷ್ಣನ ದರ್ಶನ ಪಡೆದವರು ಕನಕದಾಸರು.

ಪಾಶ್ಚಿಮಾತ್ಯರ ಆಹಾರಪದ್ದತಿಯ ಅನುಕರಿಸಿ ಕಾಯ ರೋಗಗಳ ಗೂಡು.
ರಾಮಧಾನ್ಯದ ಮಹತ್ವವನು ಲೋಕಕೆ
ಎತ್ತಿತೋರಿದವರು ಕನಕದಾಸರು.


ಸಂಕಟ ಬಂದಾಗ ದೇವರ ನೆನವವರು ಎಲ್ಲೆಡೆ.
ಸದಾ ಹರಿಭಕ್ತರಾಗಿ ವೆಂಕಟೇಶ್ವರನ ಭಜಿಸಿದವರು ಕನಕದಾಸರು.

*ಸಿ.ಜಿ ವೆಂಕಟೇಶ್ವರ*

01 November 2019

ಎಂದೆಂದೂ (ಹನಿ)

*ಎಂದೆಂದೂ*

ಇಂದು ನವೆಂಬರ್ ಒಂದು
ಕನ್ನಡ ಬಳಸಿ ಬೆಳೆಸಿ ಉಳಿಸೋಣ
ಇಂದು ,ಮುಂದು ಎಂದೆಂದೂ.

ಕನ್ನಡ ರಾಜ್ಯೋತ್ಸವದ ಶುಭಾಶಯಗಳು💐💐

*ಸಿ ಜಿ ವೆಂಕಟೇಶ್ವರ*