21 May 2021

ಲಕ್ಷ್ಮಿ ಪೋಟೊ. ಲೇಖನ


 


*ಲಕ್ಷ್ಮೀ ಪೋಟೋ*

ನಾನು ಗೌರಿಬಿದನೂರಿನ ಎಸ್ .ಎಸ್ ಇ. ಎ . ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ,ಒಬ್ಬ ಪೋಷಕರು ಸ್ಟಾಪ್ ರೂಮ್ ಹತ್ತಿರ ಬಂದು ಸಂಕೋಚದಿಂದ  ಹೊರಗೇ ನಿಂತಿದ್ದರು, ನಾನು ಒಳಗಡೆ ಬನ್ನಿ ,ಎಂದೆ ಮಾಸಲು ಅಂಗಿ ಅಲ್ಲಲ್ಲಿ ತೂತು ಬಿದ್ದ ಪ್ಯಾಂಟ್ ಧರಿಸಿದ್ದರು ,ತಲೆಗೂದಲು ನೋಡಿದರೆ ಎಣ್ಣೆ ಕಂಡು ಬಹು ದಿನಗಳಾಗಿರಬಹುದು ಎಂದು ಅರ್ಥವಾಗುತ್ತಿತ್ತು, ಎರಡೂ  ಕೈಗಳನ್ನು ಎದೆಯಭಾಗಕ್ಕೆ ಗಟ್ಟಿಯಾಗಿ ತಬ್ಬಿ ಹಿಡಿದುಕೊಂಡಿದ್ದರು, ನಾನು ಕರೆದದ್ದಕ್ಕೆ ಅಲ್ಲಲ್ಲಿ ಕಿತ್ತು ಹೋಗಿ ಒಂದೆರಡು ಬಾರಿ ಹೊಲಿಗೆ ಹಾಕಿದ್ದ ಹವಾಯ್ ಚಪ್ಪಲಿಗಳನ್ನು ಹೊರಗೆ ಬಿಟ್ಟು ಕೊಠಡಿ ಒಳಗೆ ಬರಲು ಸಿದ್ದರಾದರು,
" ಚಪ್ಪಲಿ ಹಾಕಿಕೊಂಡು ಬನ್ನಿ ಪರವಾಗಿಲ್ಲ " ಎಂದೆ ‌
ಬ್ಯಾಡ ಸಾ, ಅಲ್ಲೇ ಇರಲಿ ಎಂದು ಒಳಗೆ ಬಂದು ಮತ್ತೆ ವಿಧೇಯ ವಿದ್ಯಾರ್ಥಿಯಂತೆ ನಿಂತರು,
"ನಾನೇ ಮತ್ತೆ ಕೇಳಿದೆ ಯಾರು ಬೇಕು ? ಏನಾಗಬೇಕಿತ್ತು ? "
"ಅದೇ ಸಾ, ನಮ್ ಅತಾವುಲ್ಲ ಅವನ ಬಗ್ಗೆ ಕೇಳ್ ಬೇಕಿತ್ತು, " ಎಂದರು
" ಯಾವ್ ಅತಾವುಲ್ಲ, ಯಾವ ಸೆಕ್ಷನ್ ಯಾವ ಮೀಡಿಯಂ? ಮತ್ತೆ ಪ್ರಶ್ನೆ ಹಾಕಿದೆ.

" ಒಂಭತ್ತನೆಯ ಕ್ಲಾಸು ಸಾ, " ಅಂದರು
ಆಗ ನನಗೆ ಅರ್ಥವಾಯಿತು ನಿಧಾನ ಕಲಿಕೆಯ ಅತಾವುಲ್ಲ ನಿಗೆ ಕಳೆದ ದಿನ ಅವರ ತಂದೆ ಕರೆದುಕೊಂಡು ಬರಲು ಹೇಳಿದ್ದು ,
" ಏನ್ ಸಾಹೇಬ್ರೇ ನಿಮ್ ಹುಡುಗ,ಅಷ್ಟು ಚೆನ್ನಾಗಿ ಓದ್ತಾ ಇಲ್ಲ ಮನೇನಲ್ಲಿ ಸ್ವಲ್ಪ ಗಮನ ಕೊಡಿ " ಎಂದೆ
" ನಮಿಗೆ ಓದು ಬರಲ್ಲ ಸಾ, ನಾನು ನಮ್ ಮನೆಯವರು ಕೂಲಿ ಮಾಡಾಕೆ ಹೋಗ್ತೀವಿ , ನೀವೇ ಏನಾನಾ ಮಾಡಿ ಸಾ, ಇವನ್ ಒಬ್ನೇ ಮಗ ಚೆಂದಾಕೆ ಓದ್ಲಿ ಅಂತ ನನ್ ಆಸೆ ಸಾ," ಮುಗ್ದತೆಯಿಂದ ಕೈಜೋಡಿಸಿ ಹೇಳಿದರು.
ಮುಂದೆ ನನಗೆ ಏನು ಹೇಳಬೇಕು ಎಂದು ತೋಚದೇ ಒಂದು ಸಹಿ ಮಾಡಿಸಿಕೊಂಡು ಸರಿ ಹೋಗಿ ಬನ್ನಿ ಎಂದೆ ,ಕೊಠಡಿಯ ಹೊರಗೆ ಹೋಗಿ ಚಪ್ಪಲಿ ಹಾಕಿಕೊಂಡು ಮತ್ತೊಮ್ಮೆ ಎರಡೂ ಕೈ ಎತ್ತಿ ಮುಗಿದು ಹೊರಟರು.

ಆ ತರಗತಿಯ ಇತರ ಮಕ್ಕಳಿಗೆ ಹೋಲಿಸಿದರೆ ಅತಾವುಲ್ಲ ಅಂತಹ ತರಲೇ ವಿದ್ಯಾರ್ಥಿ ಆಗಿರಲಿಲ್ಲ, ಆದರೆ ಓದುವುದು ಬರೆಯುವುದರಲ್ಲಿ ಹಿಂದು, ಇದೇ ಕಾರಣದಿಂದಾಗಿ
ಒಂದೆರಡು ಬಾರಿ ಏಟು ಕೊಟ್ಟದ್ದೂ ಇದೆ
ಪಾಪ ಅವನಿಗೆ ವಿದ್ಯೆ ತಲೆಗೆ ಹತ್ತಲೇ ಇಲ್ಲ  ಅವನ ಕಲಿಕೆ ಸುಧಾರಿಸಲು ನಾನೂ  ವಿವಿಧ ತಂತ್ರಗಳನ್ನು ಬಳಸಿದರೂ ಪ್ರಯೋಜನ ಆಗಲಿಲ್ಲ,

ಈ ಮಧ್ಯೆ ರಸ್ತೆಯಲ್ಲಿ, ಬಸ್ಟ್ಯಾಂಡ್ ನಲ್ಲಿ ಎಲ್ಲಿ ಸಿಕ್ಕರೂ ಅತಾವುಲ್ಲ ನ ತಂದೆ ಎಷ್ಟೇ ಜನರಿದ್ದರೂ ಚಪ್ಪಲಿ ಬಿಟ್ಟು ಕೈಮುಗಿದು" "ಈಗ ಎಂಗೆ ಓದ್ತಾನೆ ಸಾಮಿ ನನ್ ಮಗ" ಎಂದು ಧೈನ್ಯತೆಯಿಂದ ಕೇಳುತ್ತಿದ್ದರು.

ವಾರ್ಷಿಕ ಪರೀಕ್ಷೆ ಮುಗಿದು ಮೂರು ದಿನ ವಾಗಿತ್ತು  , ಬೆಳಿಗ್ಗೆ ಒಂಭತ್ತು ಗಂಟೆಯ ಸಮಯ ಯಾರೋ ಮನೆಯ ಬಾಗಿಲು ಬಡಿದ ಸದ್ದಾಯಿತು,ಬಾಗಿಲು ತೆರೆದು ನೋಡಿದರೆ ಅದೇ ವಿಧೇಯತೆಯಿಂದ ನಿಂತಿದ್ದರು ಸಾಹೇಬರು, ಕೈಯಲ್ಲಿ ಏನೋ ಹಿಡಿದಿದ್ದರು,
" ಏನ್ ಸಾಹೆಬ್ರೆ ,ಯಾಕೆ ಬಂದಿದ್ದು "ಎಂದೆ
" ಏನೂ ಅಂದ್ಕಾ ಬ್ಯಾಡಿ ಸಾ, ಇದನ್ ತಕಳಿ, " ಮೆಲು ದನಿಯಲ್ಲಿ ಹೇಳಿದರು
" ಏನು ಇದು, ಇದೆಲ್ಲಾ ‌ಬೇಡ,ಮನೆಗೆ ಹೋಗಿ " ಎನ್ನುತ್ತಿರುವಾಗಲೇ ಬಲವಂತವಾಗಿ ಅದನ್ನು ನನ್ನ ಕೈಯಲ್ಲಿ ಇಟ್ಟರು , ನನ್ನ ಕೈಗೆ ಬಂದಾಗ ಅದು ಏನೆಂದು ಸ್ಪಷ್ಟವಾಗಿತ್ತು ಇಂದೂವರೆ ಬೈ ಎರಡು ಅಡಿಯ ಲಕ್ಷ್ಮಿ ಪೋಟೋ!
ಆಗ ನನಗೆ ಧರ್ಮ ಸಂಕಟ ಶುರುವಾಯಿತು, ಈ ಪೋಟೋ ಪಡೆಯಲೇ ಅಥವಾ ಹಿಂದಕ್ಕೆ ಕೊಡಲೆ , ನಮ್ಮ ಸಂಭಾಷಣೆ ಕೇಳಿದ ನಮ್ಮ ಮನೆಯವರು ಹೊರಬಂದು
"ಶುಕ್ರವಾರ ಅಣ್ಣ ಮನೆಗೆ ಪೋಟೋ ತಂದ್ ಕೊಟ್ಟಿದ್ದಾರೆ ಇಸ್ಕೊಳ್ಲಿ" ಎಂದು ನನ್ನ   ಕೈಯಿಂದ ಪೋಟೋ ತೆಗೆದುಕೊಂಡು ಒಳಗೆ ಹೋಗೇ ಬಿಟ್ಟರು.
ಮತ್ತೊಮ್ಮೆ ನನಗೆ ಕೈಮುಗಿದು ಬತ್ತಿನಿ ಸಾ, ನಮ್ ಹುಡ್ಗನ್ನ ನೋಡಿಕೊಳ್ಳಿ ಅಂದರು.

ಆಗ ನನಗೆ ಅರ್ಥವಾಯಿತು ಮಕ್ಕಳ ಆ ವರ್ಷದ ರಿಸಲ್ಟ್ ಮುಂದಿನ ಸೋಮವಾರ ಪ್ರಕಟಮಾಡಬೇಕೆಂಬುದು!

ಸರ್ಕಾರದ ಶಿಕ್ಷಣ ನೀತಿಯ ಪ್ರಕಾರ ಒಂದರಿಂದ   ಒಂಬತ್ತನೆಯ ತರಗತಿಯ ಮಕ್ಕಳನ್ನು ಫೇಲ್ ಮಾಡುವಂತಿರಲಿಲ್ಲ ಹಾಗಾಗಿ ಅತಾವುಲ್ಲ ಸಹ ಪಾಸಾಗಿದ್ದ,
ಅವರ ತಂದೆ ನಾನೇ ಪಾಸು ಮಾಡಿಸಿದೆ ಎಂದುಕೊಂಡರು.

ಹತ್ತನೇ ತರಗತಿಯಲ್ಲಿ ಅವನ ಕಲಿಕೆ ಅದೇ ರೀತಿಯಲ್ಲಿ ಮಂದಗತಿಯಲ್ಲಿ ಸಾಗಿತ್ತು ,ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಅವರ ತಂದೆ ಕೈಮುಗಿದು ಅದೇ ಮಾತು
"ನನ್ ಮಗನ್ನ ನೋಡ್ಕಳಿ ಸಾ"
"ಈ ವರ್ಷ ನಾವೇನೂ ಮಾಡಾಕಾಗಲ್ಲ ಸಾಹೇಬ್ರೆ ಪಬ್ಲಿಕ್ ಪರೀಕ್ಷೆ "ಎಂದೆ
ಅದರೂ ನಾನೇ ಅವರ ಮಗನನ್ನು ಪಾಸು ಮಾಡಿಸುವೆ ಎಂಬ ಅದಮ್ಯ ವಿಶ್ವಾಸ ಅವರಿಗೆ .
ಹತ್ತನೇ ತರಗತಿಯ ಫಲಿತಾಂಶದ ದಿನ ಶಾಲೆಯ ಹತ್ತಿರ ತಂದೆ ಮಗ ಇಬ್ಬರೂ ಬಂದರು ಮಗ  ಎಲ್ಲಾ ವಿಷಯಗಳಲ್ಲಿ ಪೇಲ್ ಆಗಿರುವುದನ್ನು ತಿಳಿದು ತಂದೆ   ಅಲ್ಲೇ ಗಳಗಳನೆ ಅತ್ತು ಬಿಟ್ಟರು,ಅವರ ಮಗ ನಿರ್ಭಾಹುಕನಾಗಿ ನಿಂತಿದ್ದನು.
ಇಂದು ಬೆಳಿಗ್ಗೆ ದೇವರ ಕೋಣೆಯಲ್ಲಿ ಪೂಜೆ ಮಾಡುವಾಗ ಅವರು ಕೊಟ್ಟ ಲಕ್ಷ್ಮಿ ಪೋಟೋ ನೋಡಿ ಯಾಕೋ ಮತ್ತೊಮ್ಮೆ ಅತಾವುಲ್ಲ ಮತ್ತು ಅವರ ತಂದೆ ನೆನಪಾದರು.....

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು

No comments: