31 August 2018

ಗಣಪತಿಗೆ ತುಳಸಿ ಅರ್ಪಣೆ ನಿಷಿದ್ಧ ಏಕೆ?*(ಸಂಗ್ರಹ ಲೇಖನ)



          *ಗಣಪತಿಗೆ ತುಳಸಿ ಅರ್ಪಣೆ ನಿಷಿದ್ಧ ಏಕೆ?*

ಬ್ರಹ್ಮ ವೈವರ್ತ ಪುರಾಣದಲ್ಲಿ ಹೀಗೊಂದು ಕಥೆಯಿದೆ. ತುಳಸಿಯು ಗಣಪತಿಯನ್ನು ನೋಡಿ ಬಹಳ ಮೋಹಿತಳಾಗುತ್ತಾಳೆ. ಆದರೆ ಗಣಪತಿಯು ಪರಮ ವೈರಾಗ್ಯ ಮೂರ್ತಿಯಾಗಿ ತಪಸ್ಸನ್ನು ಆಚರಿಸುತ್ತಿರುತ್ತಾನೆ. ಆಗ ತುಳಸಿಯು ಅವನನ್ನು ಒಲಿಸಿಕೊಳ್ಳಲು ಬಹಳ ಪ್ರಯತ್ನವನ್ನು ಪಡುತ್ತಾಳೆ. ಆದರೆ ಗಣಪತಿಯು ಇವಳ ಯಾವ ಚೇಷ್ಟೆಗೂ ಬಗ್ಗದೆ ಇದ್ದಾಗ ತುಳಸಿಯು ಕಾಮನ ಸಹಾಯವನ್ನು ಕೇಳುತ್ತಾಳೆ. ಆಗ ಕಾಮನೂ ಗಣಪತಿಯ ವೈರಾಗ್ಯವನ್ನು ಹಾಳು ಮಾಡಲು ಪರಿಪರಿಯಾಗಿ ಪ್ರಯತ್ನಿಸುತ್ತಾನೆ. ಆದರೆ ಗಣಪತಿಯು ಕಾಮನ ಯಾವುದೇ ಬಾಣಗಳಿಗೆ ಸೋಲುವುದಿಲ್ಲ. ಆಗ ಸೋತ ಕಾಮನು ತುಳಸಿಯಲ್ಲಿ ತನ್ನಿಂದ ಇನ್ನು ಸಾಧ್ಯವಿಲ್ಲ ಎಂದು ಹೇಳಿ ಹೋಗುತ್ತಾನೆ. ಹೀಗೆ ಗಣಪತಿಯು ಇಕ್ಷುಚಾಪನಾದ ಕಾಮನನ್ನು ಗೆಲಿದವನು. ಮುಂದೆ ಸಿಟ್ಟಾದ ತುಳಸಿ ಗಣಪತಿಗೆ ನೀನು ನಿನ್ನ ಸುಂದರ ರೂಪದಿಂದ ಅಹಂಕಾರ ಪಡುತ್ತಿದ್ದೀ. ಆದ್ದರಿಂದ ನಿನ್ನ ಸೌಂದರ್ಯಕ್ಕೆ ಕಾರಣವಾದ ಈ ದಂತಗಳಲ್ಲಿ ಒಂದು ದಂತವು ಮುಂದೆ ನಡೆಯುವ ಯುದ್ಧದಲ್ಲಿ ನಾಶವಾಗಲಿ ಎಂದು ಶಾಪವನ್ನು ಕೊಡುತ್ತಾಳೆ. ಆಗ ಸಿಟ್ಟಾದ ಗಣಪತಿಯು ನೀನು ವೃಕ್ಷವಾಗಿ ಹುಟ್ಟು ಎಂದು ಪ್ರತಿ ಶಾಪವನ್ನು ಕೊಡುತ್ತಾನೆ. ಆಗ ತುಳಸಿಯು ದುಃಖದಿಂದ ಗಣಪತಿಯನ್ನು ಕ್ಷಮೆ ಕೇಳಿ ನನಗೆ ಅನುಗ್ರಹ ಮಾಡಬೇಕು ಎಂದು ಪ್ರಾರ್ಥಿಸುತ್ತಾಳೆ. ಆಗ ಗಣಪತಿಯು ನೀನು ವೃಕ್ಷವಾಗಿ ಹುಟ್ಟಿದರೂ ವಿಷ್ಣುವಿಗೆ ಅತ್ಯಂತ ಪ್ರಿಯಳಾಗುತ್ತೀ. ಆದರೆ ನಾನು ಮಾತ್ರ ಎಂದೆಂದಿಗೂ ನಿನ್ನನ್ನು ಸ್ವೀಕರಿಸುವುದಿಲ್ಲ ಎಂದು ಹೇಳುತ್ತಾನೆ. ಆದ್ದರಿಂದ ಗಣಪತಿಗೆ ತುಳಸಿ ಹಾಕಬಾರದು ಎಂದು ಸಂಪ್ರದಾಯ ಬಂದಿದೆ. ವಾದಿರಾಜರೂ ತಮ್ಮ ಲಕ್ಷ್ಮೀಶೋಭಾನೆಯಲ್ಲಿ ಲಕ್ಷ್ಮಿಯು ಹಿಡಿದ ಹಾರದಲ್ಲಿ ತುಳಸಿಯು ಇರುವುದರಿಂದ ಇದು ಗಣಪತಿಗೆ ಯೋಗ್ಯವಲ್ಲ ಎಂದು ಯೋಚಿಸುತ್ತಾಳೆ ಎಂದು ಹೇಳಿದ್ದಾರೆ. (ಬಹಳ ಹಿಂದೆ ಇಲ್ಲಿ ಗಣಪತಿಗೆ ತುಳಸಿ ಯಾಕೆ ಹಾಕಬಾರದು ಎಂದು ಯಾರೋ ಒಬ್ಬರು ಪ್ರಶ್ನೆ ಕೇಳಿದ್ದರು. ಅದಕ್ಕೆ ಸೇರಿ ಈ ಲೇಖನ) ಅನೇಕ ಹಿರಿಯ ವಿದ್ವಾಂಸರ ಪ್ರಕಾರ ವಿಷ್ಣುವಿಗೆ ಅರ್ಪಿತವಾದ ಹರಿನಿರ್ಮಾಲ್ಯ ರೂಪವಾದ ತುಳಸಿಯನ್ನು ಗಣಪತಿಗೆ ಅರ್ಪಿಸಬಹುದು. ಆದರೆ ನೇರವಾಗಿ ಅರ್ಪಿಸಬಾರದು.

ಸಂಗ್ರಹ ಲೇಖನ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

29 August 2018

ಕರುಣಾಮೂರ್ತಿ (ಸುಧಾ ಮೂರ್ತಿ ರವರು ದಸರಾ ಉದ್ಘಾಟನೆ ಆಹ್ವಾನ ನೀಡಿದಾಗ ಬರೆದ ಕವನ)

           *ಕರುಣಾಮೂರ್ತಿ*

ಸರಳತೆಯ ವಿಳಾಸವೇ ಇವರು
ವಿರಳಾತಿವಿರಳ ಇಂತಹವರು
ಸದಾ ಹಸನ್ಮುಖಿ ತಾಯಿ
ಹೊಗಳೋಣ ಇವರ ಬಾಯಿತುಂಬ‌

ಕೋಟ್ಯಾಧಿಪ ನಾರಾಯಣ ಸ್ಬಾಮಿಯ ಮಡದಿ
ಧನಮದದಿಂದ ದೂರವುಳಿದ ನಾರಿ
ಬಾಹ್ಯ ಶ್ರೀಮಂತಿಕೆಗಿಂತ  ಆಂತರಿಕ ಶ್ರೀಮಂತ ಮಾತೆ
ಸಾಲದು ಕೊಂಡಾಡಿದರೆ ಎಷ್ಟು ಸಾರಿ

ದಾನ ಧರ್ಮದಲಿ ಎತ್ತಿದ ಕೈ
ಕಷ್ಟದಲಿರುವರ ಕಂಡರೆ
ಸಂಕಟ ಪಡುವರು ಸಂಗಡ ಇರುವರು
ಸಾಹಿತ್ಯ ಸೇವೆ ಮಾಡುತಿಹರು

ಕಷ್ಟದಲ್ಲಿರುವವರ ಕಂಡು ಮರುಗಿ
ಪ್ರೀತಿಯ ಸುಧೆ ಸುರಿಸುವವರು
ನೊಂದವರ ಪಾಲಿನ ಕರುಣಾಮೂರ್ತಿ
ಸರಳ ದಸರೆ ಉದ್ಘಾಟಿಸುವರು
ಇವರೇ ನಮ್ಮ ಸುಧಾ ಮೂರ್ತಿರವರು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*



27 August 2018

ಎಲ್ಲರೂ ಮುಖ್ಯ (ಕವನ)



                     
ಎಲ್ಲರೂ ಮುಖ್ಯ*

ಒಂದೂರಲಿ ಚಪ್ಪಲಿ
ಹೊಲಿಯುವ ರಂಗನಿದ್ದ
ಎಲ್ಲರ ಮನವ ಗೆದ್ದಿದ್ದ
ಅವನ ಕಾರ್ಯ ತತ್ಪರತೆ
ಚಪ್ಪಲಿ ಹೊಲೆಯವ ಶೈಲಿಗೆ
ಊರಿಗೆ ಊರೆ ಹೊಗಳಿತ್ತು

ಜನರ ಸೇವೆಯಲಿ ಕೆಲಸದೊತ್ತಡದಿ
ತನಗೆ ಚಪ್ಪಲಿ ಹೊಲಿದುಕೊಳ್ಳಲಿಲ್ಲ
ಬರಿಗಾಲಲಿ ತಿರುಗಿ ಕಾಲಲಿ
ಗಾಯವಾದರೂ ಅವನಿಗೆ  ಪರಿವಿಲ್ಲ
ಆದರೂ ಕಾಯಕ ಬಿಡಲಿಲ್ಲ
ಕಾರಣ ಕಾಯಕದಿ ಬದ್ದತೆ

ಕಾಲಗಾಯ ವೃಣವಾಗಿ ನಡೆಯದಾದ
ಊರಜನಕೆ ಚಪ್ಪಲಿ ಹೊಲೆಯದಾದ
ಕೆಲಸವಿಲ್ಲದೆ ಸಂಪಾದನೆಯಿಲ್ಲದೆ
ಹಸಿವಿನಿಂದ ತಾನೂ ಸತ್ತ
ಅವನ ಕುಟುಂಬವೂ ಹಿಂಬಾಲಿಸಿತು
ಚಪ್ಪಲಿಯಿಲ್ಲದೆ ನಡೆದಾಡಿ
ಗಾಯದ ಕಾಲುಗಳು ಎಲ್ಲೆಲ್ಲೂ
ಚಪ್ಪಲಿಹೊಲಿವಗೆ ಹುಡುಕಾಟ
ಚಪ್ಪಲಿ ಸಿಗದೇ ಪರದಾಟ

ಪರಹಿತ ಮುಖ್ಯವೆಂದು ದುಡಿದ
ರಂಗ ನಿಗೆ ಸ್ವಹಿತವೂ ಬೇಕಾಗಿತ್ತು
ತಿಳಿವ ಹೊತ್ತಿಗೆ ಹೊತ್ತು ಮಿಂಚಿತ್ತು
ಬದುಕಲಿ ಎಲ್ಲರು ಮುಖ್ಯ
ಬದುಕಲು‌ ಸರ್ವರ ಹಿತ ಮುಖ್ಯ
ನಾವೂ ಬೇಕು ನಾನೂ ಬೇಕು
ಎಲ್ಲರೂ ಬಾಳಿ ಬದುಕಬೇಕು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

20 August 2018

ಕರ್ಮ (ಕವನ) ಕವಿ ಸಾಹಿತಿಗಳ ಜೀವಾಳ ಗುಂಪಿನಲ್ಲಿ ನಡೆದ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದ ಕವನ

     
                   *ಕರ್ಮ*

ಅಳಿಯದಿರಿ ನನ್ನ
ಇಳೆಯ ಮಕ್ಕಳೆ
ಅಳಿಸಲಿಲ್ಲ ನಾನು ನಿಮ್ಮನು
ಬಾಳಿಸಿದೆನು ಸರ್ವರನು

ಅಳುತಿರುವಿರಿ ಈಗ
ಕೇಳಲಿಲ್ಲ ನನ್ನ ಮೊರೆ ಅಂದು
ಅನಭವಿಸುತಲಿರುವಿರಿ ಇಂದು
ಮೌನವಾಗಿ ಸಹಿಸಿದೆ
ನಿಮ್ಮಗಳ ಹುಚ್ಟಾಟ
ಉಪದ್ರವ ಉಡಾಪೆಗಳ
ನಾ ಕ್ಷಮಾಯಾಧರಿತ್ರಿ ನಿಜ
ಎಲ್ಲಿಯವರೆಗೆ ಸಹನೆ
ಮಿತಿ ಇಲ್ಲವೆ ನನ್ನ ಸಹನೆಗೆ ?

ಅಂತರ್ ಜಲಕೆ ನೀನಿರಬೇಕು
ಬಾರೋ ಮಳೆರಾಯ ಎಂದು
ಗೋಗರೆದಿರಿ ನಾ ಬಂದರೆ
ತೊಲಗು ನೀನೆಂದು ಹೇಳುವಿರಿ
ಕೆರೆ ನದಿಗಳ ಆಕ್ರಮಿಸಿ
ಬೆಟ್ಟ ಗುಡ್ಡಗಳ ಕೊರೆದು
ಸಮುದ್ರದ ತಟಗಳಲಿ ಮನೆಕಟ್ಟಿ
ಪ್ರವಾಹಕ್ಕೆ ನೀನೆ ಕಾರಣ ಎನ್ನುವುದು ತರವೆ?

ಪ್ರಕೃತಿಯ ದೂರುವುದ ನಿಲ್ಲಿಸಿ ಮನುಜರೆ
ವಿಕೃತಿಯನ್ಮು ತೊಡೆದು ಹಾಕಿ
ಪರಿಸರವಿರುವುದು ನಿಮ್ಮ ಆಸೆ ತೀರಿಸಲು
ದುರಾಸೆಗಳನಲ್ಲ
ಈಗಲಾದರೂ ಎಚ್ಚರ ಗೊಂಡು
ಜಾಗೃತರಾಗಿ ಬದುಕಿ
ಬದುಕಲು ಬಿಡಿ
ಮಾಡಿರಿ ಒಳ್ಳೆಯ ಕರ್ಮ
ಇಲ್ಲದಿದ್ದರೆ ನಿಮ್ಮ ಕರ್ಮ!?

*ಸಿ ಜಿ.ವೆಂಕಟೇಶ್ವರ*
*ಗೌರಿಬಿದನೂರು*

19 August 2018

*ಗಜ಼ಲ್43*

               *ಗಜ಼ಲ್*

ಸೂರ್ಯ ಚಂದ್ರರು ನಮಗೆ ಬೆಳಕು ನೀಡಿ ತೋರುವರು ಸಮತೆ
ಭೂದೇವಿ ಜಲದೇವತೆ ವಾಯುದೇವ ತೋರುವರು ಮಮತೆ

ಪ್ರಕೃತಿಯ ಮೇಲೆ ಮಾನವನ ವಿಕೃತಿ ದಬ್ಬಾಳಿಕೆ ನಿರಂತರ
ಮಾಡಿದ್ದುಣ್ಣೋ ಮಹರಾಯ ಎಂದು ಜಲ ಗಾಳಿ ಭೂಮಿ ತೋರುತಿದೆ ರೌದ್ರತೆ

ತಿಳಿದು ತಿಳಿಯದೆ ಮಾಡಿದ ಅಪರಾಧಗಳು ನೂರಾರು ಸಾವಿರಾರು
ಅಳಿದ ಜನ ಜಾನುವಾರು ನೋಡಿ ಹೇಳುವರೀಗ ರೂಢಿಸಿಕೊಳ್ಳೊಣ ಸರಳತೆ

ವಿಕೋಪ ಕ್ಕೆ ಮೊದಲು‌ ಜಾತಿ ಮತದ ಜಂಜಾಟ ಈಗ ಅನ್ನ ನೀರಿಗೆ ಹಾಹಾಕಾರ
ಕರ್ಮಟ ಸಂಪ್ರದಾಯವಾದಿಯೂ ಕೈಯ್ಯೋಡ್ಡಿ ಬೇಡಿ ಪ್ರತಿಪಾದಿಸುವ ಏಕತೆ

ಪಾಪ ಕಾರ್ಯ ಮಾಡಲು ಹಿಂಜರಿತವಿಲ್ಲ ಎಲ್ಲರೂ ಕೂಪಮಂಡೂಕಗಳು
ಸಂಕಟ ಬಂದಾಗ ವೆಂಟರಮಣ ಇದು ಹಿಂದಿನಿಂದಲೂ ಬಂದ ಕಥೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

17 August 2018

ಗಜ಼ಲ್42 (ಅಟಲ್ ಜಿ ರವರಿಗೆ ನುಡಿನಮನ)


ಗಜ಼ಲ್42 (ಅಟಲ್ ಜಿ ರವರಿಗೆ ನುಡಿನಮನ)

ಅಜಾತಶತ್ರುವಾಗಿ  ಭಾರತ ಭಾಗ್ಯವಿಧಾತನಾದ ಅಭಿವೃದ್ಧಿ ಯ ಚಾಲಕ ಅಟಲ್ ಜಿ
ದೊಡ್ಡಣ್ಣನಿಗೆ ಸಡ್ಡುಹೊಡೆದು ಬುದ್ದನ ನಗಿಸಿದ ನಾಯಕ ಅಟಲ್ ಜಿ

ಮುತ್ತಿನ ಹಾರ ಸ್ಪಟಿಕದ ಸಲಾಕೆಯ  ಚುಂಬಕ ಶಕ್ತಿಯ ಮಾತುಗಾರ
ಉತ್ತಮ ಸಂಸದೀಯ ಪಟು
ರಾಜ ಧರ್ಮ ಪಾಲಕ  ಅಟಲ್ ಜಿ

ಓಜಸ್ಸು ತೇಜಸ್ಸು ಸುಮನಸು  ಅವರಲ್ಲಿ ರಕ್ತಗತ
ಬಟ್ಟೆಗೆಟ್ಟ ಹಾದಿಗಳನು ಸರಿಪಡಿಸಿ ಗಟ್ಟಿ ನಿರ್ಧಾರ ಕೈಗೊಂಡ ಸುವರ್ಣ ಚತುಷ್ಪಥದ ಜನಕ ಅಟಲ್ ಜಿ

ವಿಶ್ವ ಸಂಸ್ಥೆಯಲಿ ರಾಷ್ಟ್ರ ಭಾಷೆ ರಾಷ್ಟ್ರದ ಘನತೆಯನ್ನು ಎತ್ತಿ ಹಿಡಿದ ಧೀರ
ಶಾಯರಿ ಕವಿತೆಗಳ ರಚಿಸಿ ಕವಿಮನಹೊಂದಿದ ಮುತ್ಸದ್ದಿ ಚಿಂತಕ  ಅಟಲ್ ಜಿ

ಸೀಜೀವಿಯಂತವರ  ಹೃದಯದಲಿ  ಶಾಶ್ವತವಾಗಿ ನೆಲೆಸಿದ ಅಮರ ಆತ್ಮ
ಜನನಿ ಜನ್ಮಭೂಮಿಯ ಋಣ ತೀರಿಸಲು ಶ್ರಮಿಸಿದ ಪ್ರೇರಕ ಅಟಲ್ ಜಿ


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

09 August 2018

ನಿನ್ನೇ ಧ್ಯಾನಿಸುವೆ (ಕವನ)

   
         
*ನಿನ್ನೇ ಧ್ಯಾನಿಸುವೆ*


ಸಂಗಾತಿ ನೀ ಜೊತೆಗಿರಲು
ಅನ್ಯರ ಸಂಗ  ಬೇಕಿಲ್ಲ
ಚಿನ್ನ ನೀನಿರೆ ಇನ್ನಾವ
ಸಿರಿ ಬೇಕು ನೀನೆ ನನಗೆಲ್ಲ

ನನ್ನ ಶ್ವಾಸವಿರುವವರೆಗೆ ನಿನ್ನ
ಬಿಡೆನು ವಿಶ್ವಾಸವಿಡು ನನ್ನ ಮೇಲೆ
ನೀ ಕಿರುನಗೆಯಲಿ‌ ನೋಡದಿರು
ನನಗೆ ಮತ್ತೇರುವುದು
ಅಮಲುಗಣ್ಣಿನಲ್ಲಿ ನೋಡದಿರು
ನಲ್ಲೆ ಇನ್ನಿಲ್ಲದ ಆಸೆಯುಕ್ಕುವುದುು


ಕಪಟತನವರಿಯೆನು ನಾನು
ಅಪ್ಪಟ ಪ್ರೇಮಿ ಪ್ರೀತಿಸುವೆ ಕೊನೆವರೆಗೆ
ನಿನ್ನೆ ನಾಳೆಗಳ ಚಿಂತೆ ನನಗಿಲ್ಲ
ಅಡಿಗಡಿಗೆ ನಿನ್ನೇ ಧ್ಯಾನಿಸುವೆ
ಕುಡಿನೋಟ ಬೀರು ಸಾಕು
ಆನಂದ ಸಾಗರದಿ ತೇಲುವೆ


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


07 August 2018

*ಗಜ್ಹಲ್41*(ಸುಮ)


                       *ಗಜ್ಹಲ್41*

ಪ್ರಕೃತಿಯ ಸೌಂದರ್ಯ ಅಡಗಿಸಿ ಕೊಂಡು ಸುಗಂಧ ಸೂಸುವುದು  ಸುಮ
ವಿಕೃತ ಮನಸ್ಸು ಗಳಿಗೆ ಉಚಿತ ಪಾಠ ಹೇಳುವುದು ಸುಮ

ವ್ರತ ಉಪವಾಸ ನಾನ ತಂತ್ರ ಅಡ್ಡ ದಾರಿಗಳು ಭಗವಂತನ ಕಾಣಲು
ಎಲ್ಲ ದೇವರ ಅಲಂಕರಿಸಿ ಹೆಮ್ಮೆಯಿಂದ
ನಗುವುದು ಸುಮ

ಎಲೆ ಕಾಯಿ ಹಣ್ಣು ಬೀಜವಾಗಲು ಮೂಲ ಹೂ
ಆದರೂ ಎಂದಿಗೂ ನಾನು ನನ್ನಿಂದ ಎಂದು ಬೀಗದು ಸುಮ

ಸಾವಿಗಂಜಿ ಯಾಯಾತಿಯಾಗಲು ಚಡಪಡಿಸುವರು ಜನ ಸುರಿಯುವರು ಧನ
ಒಂದೇ ದಿನ ಬಾಳಿದರೂ ಸೌಂದರ್ಯದಿ ಬಾಳಿ ಸಾರ್ಥಕ್ಯ ಪಡೆವುದು ಸುಮ

ಸ್ವಾರ್ಥದ ಸಂಕುಚಿತ ಭಾವನೆಯ ಜಗದಲಿ ಬಂದಿಯಾಗಿಹರು ಮಂದಿ
ಸೀಜೀವಿಯಂತೆ  ಪರಹಿತ ಬಯಸೆಂದು ಸಂದೇಶ ನೀಡುವುದು ಸುಮ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

06 August 2018

ಪ್ರಕೃತಿ ಶಾಲೆ( ಶಿಶುಗೀತೆ)

*ಪ್ರಕೃತಿ ಶಾಲೆ*(ಶಿಶುಗೀತೆ)

ಬ್ಯಾಗು  ಬೇಡ
ಪುಸ್ತಕ ಬೇಡ
ಆಡಲು  ಹೋಗುವೆವು

ಆಟವ ಅಡುತ
ಹಾಡನ್ನು ಹಾಡುತ
ನಕ್ಕು ನಲಿಯುವೆವು

ಕೈಚೀಲ ಬೇಡ
ಮಣ ಭಾರ ಬೇಡ
ನಮ್ಮ ಪ್ರತಿಭೆ ತೋರುವೆವು

ಅಂಕಗಳ ಗೊಡವೆ ನಮಗಿಲ್ಲ
ಒತ್ತಡ ನಮಗೆ ಬೇಕಿಲ್ಲ
ಮರಕೋತಿ ಆಟ ಆಡುವೆವು

ಚಿನ್ನಿ ದಾಂಡು
ಗೋಲಿ ಲಗೋರಿ
ಆಟವಾಡಿ ನಲಿಯುವೆವು

ಕಲಿಯಲು ಶಾಲೆಯೆ ಬೇಕಿಲ್ಲ
ಪ್ರಕೃತಿ ಶಾಲೆ ಮರೆಯಲ್ಲ
ಸಮಾಜದೊಂದಿಗೆ ಬೆಳೆಯುವೆವು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*




05 August 2018

ಮಗಳೆಂಬ ಅಮ್ಮ ( ಲೇಖನ)

             
ಮಳೆ ಹಾಡು
ನಾನು ಹುಟ್ಟು ಹಬ್ಬ ಆಚರಿಸುವ ಪದ್ಥತಿ ಪಾಲಿಸಿಲ್ಲ ಆದರೆ ನನ್ನ ಮಕ್ಕಳ ಹುಟ್ಟು ಹಬ್ಬವನ್ನು ವಿಜೃಂಭಣೆಯಿಂದ ಅಲ್ಲದಿದ್ದರೂ ಅವರಿಗೆ ಹುಟ್ಟು ಹಬ್ಬದಂದು ಹೊಸ ಬಟ್ಟೆಗಳನ್ನು ಕೊಡಿಸಿ ಅವರ ಸಂತೋಷ ಪಡಿಸುವುದನ್ನು ಮರೆಯುವುದಿಲ್ಲ .ಇಂತಹ ಹುಟ್ಟುಹಬ್ಬದ ದಿನ ಸಾಮಾನ್ಯವಾಗಿ ದೇವರ ದರ್ಶನ ಪಡೆಯಲು ದೇವಾಲಯಗಳಿಗೆ ಹೋಗುತ್ತೇವೆ .ಕಳೆದ ವರ್ಷ ನನ್ನ ದೊಡ್ಡ ಮಗಳ. ಹುಟ್ಟು ಹಬ್ಬದ ಸಮಯದಲ್ಲಿ ನಾನು ನನ್ನ ಹುಟ್ಟೂರಾದ ಹೊಳಲ್ಕೆರೆ ತಾಲೂಕಿನ ಚೌಡಗೊಂಡನಹಳ್ಳಿಯಲ್ಲಿ ಇದ್ದೇ ಯಥಾ ಪ್ರಕಾರ ಹುಟ್ಟು ಹಬ್ಬಕ್ಕೆ ತಂದಿದ್ದ ಹೊಸ ಉಡುಪು ಧರಿಸಿದ ನನ್ನ ಮಗಳು ಎಲ್ಲರೊಂದಿಗೆ ಸೆಲ್ಪಿ ತೆಗೆದುಕೊಂಡು ಅಪ್ಪ ದೇವಸ್ಥಾನ ಕ್ಕೆ ಹೋಗೋಣ ಎಂದಳು ಆಗ ಸಂಜೆ  ಮಬ್ಬುಗತ್ತಲು  ,ನಮ್ಮ ಹಳ್ಳಿಯಿಂದ ಏಳು ಕಿಲೊಮೀಟರ್ ದೂರವಿರುವ ಹೊರಕೆರೆದೇವರ ಪುರದ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯ ಕ್ಕೆ ಮೂವರು ಮಕ್ಕಳೊಂದಿಗೆ ಬೈಕ್ ನಲ್ಲಿ ಹೊರಟು‌ನಿಂತಾಗ ಅಮ್ಮ "  ಮೋಡ ಜೋರಾಗಿದೆ ನಮ್ಮ ಊರಿನ ಚೌಡಮ್ಮನ ಗುಡಿಗೆ ಹೋಗಿ ಬರ್ರಪ್ಪ ದೂರ ಬೇಡ ಅಂದರು " ನಾವು ಅವರ ಮಾತು ಕಿವಿಗೆ ಹಾಕಿಕೊಳ್ಳದೇ ಬೈಕ್ ಹತ್ತಿ ಹೊರಟೇ ಬಿಟ್ಟೆವು .ದೇವರ ದರ್ಶನ ಪಡೆದು ಹಿಂತಿರುಗುವಾಗ ಸಂಪೂರ್ಣ ಕತ್ತಲಾಗಿ ಮಾರ್ಗ ಮದ್ಯದಲ್ಲಿ ಮಳೆ ಆರಂಭವಾಗಿ ಮಳೆ ಹನಿಗಳು ನಮ್ಮ ಮೇಲೆ ಬಿದ್ದರೆ ಯಾರೋ ನಲ್ಲಿ ಹೊಡೆದಂತಾಗುತ್ತಿತ್ರು ಅಲ್ಲೇ ಎಲ್ಲಾದರೂ ನಿಲ್ಲಿಸೋಣವೆಂದರೆ ಒಂದೂ ಮನೆಯಿಲ್ಲ . ನನ್ನ ಮಗಳ ಹುಟ್ಡುಹಬ್ಬದ ಹೊಸ ಬಟ್ಟೆಯಾದಿಯಾಗಿ  ಎಲ್ಲರ ಬಟ್ಟೆಗಳು ಮಳೆಯಲ್ಲಿ ನೆನೆದು ಚಳಿಗೆ ನಡುಗಲಾರಂವಿಸಿದೆವು. ಸ್ವಲ್ಪ ದೂರ ಮಣ್ಣಿನ ರಸ್ತೆಯಲ್ಲಿ ನಾನು ನಿದಾನವಾಗಿ ಬೈಕ್ ಓಡಿ ಸುತ್ತಿದ್ದರೂ ಜಾರಿ ಎಲ್ಲರೂ ಬೈಕ್ ನಿಂದ ಬಿದ್ದೇಬಿಟ್ಟೆವು  ಕತ್ತಲಾಗಿದ್ದರಿಂದ ನನಗೆ ಗಾಬರಿಯಾಗಿ  ಶೋಭಿತ.,ವರ್ಷಿತ, ದೀಪಿಕ ನುಮಗೆ ಏನೂ ಆಗಿಲ್ಲ ತಾನೆ ಎಂದು ಕೇಳುವ ಮೊದಲೇ "  ಅಪ್ಪ ನಿನಗೇನೂ ಆಗಿಲ್ಲ ತಾನೆ " ಎಂದು ನನ್ನ ದೊಡ್ಡ ಮಗಳು  ಶೋಭಿತ ಬಂದು  ನನ್ನ ಮೈಕೈ ಮುಟ್ಟಿ ನೋಡಿದಳು ಮನೆಯಲ್ಲೂ ನನ್ನ ಕಣ್ಣಲ್ಲಿ ಒಂದೆರಡು ಹನಿ ಜಾರಿ ಬಿದ್ದದ್ದು  ನನ್ನ ಮಕ್ಕಳಿಗೆ ಕಾಣಲಿಲ್ಲ .ಆಗ ಅಮ್ಮ ನೆನಪಿಗೆ ಬಂದು ಮಗಳು ಅಮ್ಮ ಎಂದು ಯಾರೋ ಹೇಳಿದ್ದು ನೆನಪಾಯಿತು,. ಮಳೆಯಲ್ಲಿ ಮತ್ತೆ ಬೈಕ್ ಸ್ಟಾರ್ಟ್ ಮಾಡಿ ಸ್ವಲ್ಪ ದೂರ ಚಲಿಸಿದಾಗ ಇಳಿಜಾರಿನಲ್ಲಿ ಮತ್ತೆ ಬೈಕ್ ಸ್ಕಿಡ್ ಆಗಿ ನಾನು ಬ್ಯಾಲೆನ್ಸ್ ಮಾಡಿ ಬೈಕ್ ನಿಲ್ಲಿಸಿದೆ ನನ್ನ ಮಗಳು ಅಪ್ಪ ಈ ಇಲಿಜಾರಿನಲ್ಲಿ ನಾವು ಇಳಿದು‌ ನಡೆವೆವು ಎಂದು ಅವಳ ತಂಗಿಯರೊಂದಿಗೆ ಕತ್ತಲಲ್ಲಿ ಬೈಕ್ ನ ಬೆಳಕಿನಲ್ಲಿ ನಡೆದು ಮುಂದೆ ಸಾಗಿದಳು .ಕೊನೆಗೆ ರಾತ್ರಿ ಎಂಟುಗಂಟೆಗೆ ಮನೆ ಸೇರಿದಾಗ ಅಲ್ಲಿ ಕರೆಂಟ್ ಇರಲಿಲ್ಲ ಬೈಕ್ ಇಳಿದಾಗ ನನ್ನ ದೊಡ್ಡ ಮಗಳು ತನ್ನ ತಂಗಿಯರಿಗೆ ನಾವು ಜಾರಿ ಬಿದ್ದದ್ದನ್ನು ಯಾರಿಗೂ ಹೇಳಬೇಡಿ ಎಂದು ಎಂದು ಪಿಸುಮಾತಿನಲ್ಲಿ ಹೇಳಿದಳು.ಬೈಕ್ ಸದ್ದು ಕೇಳಿ ಅಮ್ಮ ಒಳಗಿನಿಂದ ಪ್ರೀತಿಯಿಂದ ಬೈಯಲು ಶುರುಮಾಡಿದರು ." ದೊಡ್ಡವರು ಏನಾದರೂ ಹೇಳಿದರೆ ಕೇಳಲ್ಲ ...... ಎಂದು ಪ್ರೀತಿಯಿಂದ ಬಯ್ಯತ್ತಲೇ ಇದ್ದರು ನಾವು ಮರುಮಾತನಾಡದೇ ಒಳಗೆ ಹೋಗಿ ಸಣ್ಣ ಪುಟ್ಟು ತರಚುಗಾಯಗಳನ್ನು ನೋಡಿಕೊಂಡೆವು .
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*