ದೀಪ..
ಹಣ ಅಂತಸ್ತು ನೋಡುತಾ
ಮಾಡದಿರು ಎಂದಿಗೂ ತರತಮ|
ದೀಪವ ನೋಡಿ ಕಲಿ ಅದು
ಓಡಿಸುವುದು ದೀನ ದಲಿತರ
ಮನೆ ಮನಗಳ ತಮ||
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಇರುವುದೇ ವರವು.
ನಾವು ಇಲ್ಲಿ ಸಂಪತ್ತನ್ನು ಹುಡುಕುತ್ತಿದ್ದರೆ ಅನೇಕರು ಆರೋಗ್ಯವನ್ನು ಹುಡುಕುತ್ತಿದ್ದಾರೆ.
ನಾವು ಇಲ್ಲಿ ಆರೋಗ್ಯವನ್ನು ಹುಡುಕುತ್ತಿದ್ದರೆ ಬಹುತೇಕರು ಮರಣ ಹೊಂದಿದ್ದಾರೆ.
ನಾವು ಅಧಿಕಾರವನ್ನು ಹುಡುಕುತ್ತಿದ್ದರೆ ಕೆಲವರು ಅದನ್ನು ಪಡೆದುಕೊಂಡು ಶಕ್ತಿಹೀನರಾಗಿದ್ದಾರೆ.
ನಾವು ಫ್ಯಾನ್ಸಿ ಕಾರನ್ನು ಕೊಂಡು ಓಡಿಸಲು ಬಯಸುತ್ತಿರುವಾಗ ಅಲ್ಲಾರೋ ಕಾರು ಅಪಘಾತದಲ್ಲಿ ಸಾಯುತ್ತಿದ್ದಾರೆ.
ನಾವು ಭೂಮಿಯಿಂದ ಮೇಲಕ್ಕೆ ಹೊಸ ಮಹಲುಗಳನ್ನು ಕಟ್ಟುವಾಗ ಕೆಲವರು ಭೂಮಿಯ ಕೆಳಗೆ ಹೊಸ ಸಮಾಧಿಯನ್ನು ಅಗೆಯುತ್ತಿದ್ದಾರೆ.
ನಾವು ಆಹಾರವನ್ನು ಕಸದ ಬುಟ್ಟಿಗೆ ಎಸೆದು ಪೋಲು ಮಾಡುವಾಗ ಬೇರೊಬ್ಬರು ತಿನ್ನಲು ಅಗಳು ಅನ್ನ ಹುಡುಕುತ್ತಿದ್ದಾರೆ.
ನಾವು ನಮ್ಮ ಸ್ಥಿತಿಯನ್ನು ಉತ್ತಮ ಪಡಿಸಲು ಭಗವಂತನನ್ನು ಕೇಳುವಾಗ ಬೇರೊಬ್ಬರು ನಮ್ಮ ಸ್ಥಿತಿಗೆ ಬರಲು ಪ್ರಾರ್ಥಿಸುತ್ತಿದ್ದಾರೆ.
ನಾವು ಹೆರಿಗೆಯ ಆಚರಣೆ ಮಾಡುವಾಗ ಅಲ್ಲಾರೋ ಮಸಣದಲ್ಲಿ ಕಣ್ಣೀರಿಡುತ್ತಿದ್ದಾರೆ.
ನಾವು ಸಹಜವಾಗಿ ಮೂತ್ರ ವಿಸರ್ಜಿಸುವಾಗ ಅಥವಾ ನೀರು ಕುಡಿಯುವಾಗ ಮತ್ತಾರೋ ಅದೇ ಉದ್ದೇಶಕ್ಕಾಗಿ ಪೈಪ್ ಬಳಸುತ್ತಿದ್ದಾರೆ.
ಇರುವುದೇ ವರವೆಂದು ಅರಿತು ಸಿಹಿಜೀವಿಗಳಾಗುವುದನ್ನು ಮರೆತು ಇಲ್ಲದಿರುವುದರ ಬಗ್ಗೆ ಕೊರಗಿ ಮರುಗುತ್ತಿದ್ದಾರೆ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
*ನೊಂದವರ ಪಾಲಿನ ದೇವರು
ನೂರುನ್ನೀಸಾ*
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮುಖ್ಯಸ್ಥರು|
ನ್ಯಾಯಯುತ ತೀರ್ಪು ನೀಡುವ
ಮೂಲಕ ನೊಂದವರ ಪಾಲಿಗೆ ಆಗಿದ್ದಾರೆ ದೇವರು||
ಇವರು ಹಸನ್ಮುಖಿ ಸರಳ ಸಜ್ಜನ ನ್ಯಾಯಾಧೀಶರು|
ಇವರ ಕಣ್ಣಲಿ ಎಲ್ಲರ ಸಮಾನರೆ
ಬೇಧ ಮಾಡುವುದಿಲ್ಲ ಅವರು||
ಕಾನೂನುಗಳು ನಲಿದಾಡುತ್ತವೆ ಇವರ ನಾಲಿಗೆಯ ಮೇಲೆ|
ಇವರಿಗೆ ಕೃತಜ್ಞತೆ ಸಲ್ಲಿಸುತ್ತಿಹರು ನೂರಾರು ಜನ ಬರೆದು ಓಲೆ||
ಇವರು ನಮ್ಮಯ ಹೆಮ್ಮೆಯ ನ್ಯಾಯಾಧೀಶರು ನೂರುನ್ನಿಸಾ|
ಇವರಿಗೆ ಚಪ್ಪಾಳೆ ತಟ್ಟಿ ಬಿಡಿ
ಸುಮ್ಮನೆ ಯಾಕೆ ಎಣಿಸುವೆ ಮೀನಾ ಮೇಷ||
ಸಿಹಿಜೀವಿ ವೆಂಕಟೇಶ್ವರ
ತುಮಕೂರು
ಮದ್ಯ ಪ್ರಿಯರ ಮನವಿ
ನಮಗೂ ಮರ್ಯಾದೆ ಕೊಡಿ
ಕುಡಿಯುಬಹದು ನಾವು
ಬ್ರಾಂದಿ ,ವಿಸ್ಕಿ ,ಬೀರು|
ಕುಡುಕರೆಂದು ಅವಮಾನಿಸಬೇಡಿ
ಗೌರವದಿ ಹೇಳಿ ಮದ್ಯಪ್ರಿಯರು||
ನಮ್ಮ ಘೋಷವಾಕ್ಯ ನಿತ್ಯ ದುಡಿ,
ಸ್ವಲ್ಪ ಕುಡಿ, ಸತ್ಯ ನುಡಿ|
ಬೈಯಬೇಡಿ ನಮ್ಮನ್ನು ಕುಡಿದಾಗ
ಸ್ವಲ್ಪ ಅಲ್ಲಾಡಬಹುದು ಬಾಡಿ ||
ನಮಗೋಸ್ಕಕರ ಸ್ಥಾಪಿಸಿ ಬಿಡಿ
ಮದ್ಯಪ್ರಿಯರ ಕಲ್ಯಾಣ ನಿಧಿ|
ಇರಲಿ ಒಂದು ಅಂಬುಲೆನ್ಸ್
ನಮಗಾಗಿ ಬಾರ್ ಬದಿ ||
ಸರ್ಕಾರದ ಆದಾಯದಲ್ಲಿ ನಮ್ಮದೂ ಪಾಲಿದೆ ಅದು ಹೆಮ್ಮೆ|
ನಮ್ಮ ಬೇಡಿಕೆಗಳನ್ನು ಪರಿಶೀಲಿಸಿ
ನಮ್ಮ ಕಡೆ ಕೃಪೆ ತೋರಿ ಒಮ್ಮೆ||
(ಮದ್ಯಪಾನ ಆರೋಗ್ಯಕ್ಕೆ ಹಾನಿಕರ)
ಸಿಹಿಜೀವಿ ವೆಂಕಟೇಶ್ವರ
ತುಮಕೂರು
*ಅಂಬೆ*
(ಬಿಲ್ಗವನ)
ಓಂ
ದೇವಿ
ನಮನ
ನಿನ್ನಡಿಗೆ
ಹರಸೆಮ್ಮನು
ಕರುಣದಿಂದಲಿ
ಭಜಿಸುವೆವು ನಿನ್ನ
ಸಹಸ್ರ ನಾಮದಿಂದಲಿ
ಮನ್ನಿಸೆಮ್ಮ ತಪ್ಪನು
ಸದ್ಬುದ್ದಿಯ ನೀಡು
ಒಳಿತು ಮಾಡಿಸು
ಸ್ವಾರ್ಥ ಬಿಡಿಸು
ಕೈಹಿಡಿದು
ಕಾಪಾಡು
ಅಂಬೆ
ನೀ
*ಸಿಹಿಜೀವಿ ವೆಂಕಟೇಶ್ವರ*
ತುಮಕೂರು
ಅಭಿಸಾರಿಕೆ..
ಲತಾಂಗಿ ಇವಳು ನೋಡಣ್ಣ
ಪೂರ್ಣ ಹುಣ್ಣಿಮೆಯ ಮೈಬಣ್ಣ
ಸೌಂದರ್ಯದಲಿ ಲಾವಣ್ಯವತಿ
ಮೃದು ಮನಸಿನ ಗುಣವತಿ.
ಮನ್ಮಥನ ಬಿಲ್ಲಿನ ಹುಬ್ಬುಗಳು
ದಾಳಿಂಬೆಯ ದಂತಪಂಕ್ತಿಗಳು
ಸಮುದ್ರದ ತೆರೆಯಂತಹ ಕೇಶರಾಶಿಗಳು
ವನರಾಜ ಸಿಂಹದ ನಡುವಿನವಳು.
ಹಾತೊರೆದೆನು ಅವಳ ಸಾಂಗತ್ಯಕೆ
ಬಳಿಸಾರುವಳೇ ನನ್ನ ಅಭಿಸಾರಿಕೆ
ರೂಪರಾಶಿಯಲಿ ಇವಳೇ ಮೇನಕೆ
ದಿನವೂ ಅವಳದೇ ಕನವರಿಕೆ
ಸನಿಹಕೆ ಬಂದು ನಿಂತಿಹಳು
ತೊಂಡೆ ಹಣ್ಣಿನ ತುಟಿಯವಳು
ಮಾದಕ ನಗೆಯನು ಬೀರಿಹಳು
ನನಗೀಗ ಅರಳು ಮರಳು.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529.
*ದಯಮಾಡಿಸು..*
ಅಕ್ಷರ ವಿಸ್ತಾರ ಕವನ..1 ರಿಂದ 16 ಅಕ್ಷರ..
16 ಸಾಲು...
ನೀ
ಬಾರೋ
ವರುಣ
ಕಾದಿಹೆವು
ಕಾತುರದಿಂದ
ನಿನ್ನಾಗಮನಕೆ
ತಡವೇಕೆ ಇನ್ನೂ ಬಾ
ಭುವಿಗೆ ಹರುಷವ ತಾ
ನಿನ್ನಾಗಮನವೇ ಹಬ್ಬವು
ನಿನ್ನಿಂದಲೇ ಉಳಿವುದೀ ಜಗ
ಹಿತಮಿತವಾಗಿ ದಯಮಾಡಿಸು
ಶತವಂದನೆಯ ಮಾಡುವೆನು ನಾನು
ಅತಿಮಾಡುತ ತೊಂದರೆಯ ಕೊಡದಿರು
ರೌದ್ರರೂಪ ತಾಳುತಲಿ ಹೆದರಿಸದಿರು
ನೀನೇ ನಮ್ಮಯ ದೈವವು ನೀನೇ ನಮ್ಮ ಜೀವವು
ಸಕಾಲಕೆ ನೀನು ಬಂದರೆ ಜೀವನ ಪಾವನವು.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು.
ಜೋಡಿಗಳು...
ನಾವಿಬ್ಬರೂ ಅಪೂರ್ವ ಗೆಳೆಯರು
ಒಬ್ಬರನ್ನೊಬ್ವರು ಅಗಲದವರು
ಜೊತೆಯಲ್ಲಿಯೇ ಪಯಣ
ಜೊತೆಯಲ್ಲಿಯೇ ನಿಲುಗಡೆಯು.
ಕಲ್ಲು ಮುಳ್ಳಿನ ಭಯವಿಲ್ಲದೇ
ಎಲ್ಲೆಡೆ ಸುತ್ತಿದ್ದೆವು
ಯಾವಾಗಲಾದರೊಮ್ಮೆ ಬೇರಾದಾಗ
ಸತ್ತು ಬದುಕಿದ ಭಾವ ಅನುಭವಿಸಿದ್ದೆವು.
ಕೆಲವರ ಮನೆಯೊಳಗೆಲ್ಲ ಓಡಾಡಿ ಬಂದೆವು
ಹಲವರ ಮನೆಯ ಹೊಸಿಲ ಹೊರಗಡೆಯೇ ನಿಂತಿದ್ದೆವು ಆಗಲೂ ಜೊತೆಯಾಗಿಯೇ ಇದ್ದೆವು.
ನಮಗೆ ನೋವಾದರೂ ನಮ್ಮ ಜೊತೆಗಿರುವವರ ಹಿತ ಕಾಪಾಡಿ
ಪರೋಪಕಾರಿಗಳಾದೆವು.
ನಮ್ಮನ್ನು ಕೀಳಾಗಿ ಕಂಡರೂ
ಪರರ ರಕ್ಷಣೆಗೆ ಮುಂದಾದೆವು.
ಇಂದೇಕೋ ಮನಕೆ ಬೇಸರವಾಗಿದೆ
ಜೋಡಿಯನಗಲಿದ ಜೋಡು ಎಲ್ಲಿದೆ?
ಯಾರು ಸಂತೈಸುವರು ನನ್ನನೀಗ
ನಾನೊಂದು ಅನಾಥ ಚಪ್ಪಲಿ .
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಹೃದಯವ ಮೀಟಿದವಳೆ ...
ಋತುಮಾನ ಸಂಪುಟದಿ ಹೊಸ ಕಾವ್ಯ ಬರೆದವಳೆ
ಅನುಕ್ಷಣವೂ ಮುದ್ದಿಸಿ ಹೃದಯವ ಮೀಟಿದವಳೆ
ನವಭಾವ ತುಂಬಿ ನನ ಮದಗೊಳಿಸಿದವಳೆ
ಕವಿಭಾವಗಳನು ಅರಳಿಸಿ ಕವಿತೆ ಸೃಷ್ಟಿಸಿದವಳೆ
ಚೈತ್ರದಲಿ ಪ್ರೀತಿಯ ಚಿಗುರಿಸಿ ಆಶಾಡದಲೂ ರಮಿಸಿದವಳೆ
ಮಾಘದ ಚಳಿಯಲಿ ಬಾಗಿ ಮುದ್ದಿಸಿ ಬಿಸಿಯಪ್ಪಿಗೆ ನೀಡಿದವಳೆ
ಹೀಗೆಯೇ ಸರ್ವ ಋತುಗಳಲೂ ನನ್ನೊಂದಿಗೆ ನೀನಿದ್ದರೆ ಸಾಕು
ಸ್ವರ್ಗವೆಂಬ ಲೋಕ ಅಲ್ಲಲ್ಲೋ ಇರುವುದಂತೆ ಅದೇಕೆ ಬೇಕು?
ಸಿಹಿಜೀವಿ
ಸಿ ಜಿ ವೆಂಕಟೇಶ್ವರ.
*ವಧು ಬೇಕಾಗಿದೆ...*
ನಾನು ವಯಸ್ಸಿಗೆ ಬಂದ ವರ
ಮದುವೆಯಾಗಲು ನನಗೊಂದು ವಧು ಬೇಕಾಗಿದೆ
ನಾನೇನೂ ಸಂತನಲ್ಲ ನನ್ನ ಸಂತಾನ ಅಭಿವೃದ್ಧಿಮಾಡಿಕೊಳ್ಳಲು ವಧು ಬೇಕಾಗಿದೆ.
ನೇಗಿಲ ಯೋಗಿ, ದೇಶದ ಬೆನ್ನೆಲುಬು
ಹೀಗೆ ಏನೋನೋ ಹೊಗಳಿ ಅಟ್ಟಕ್ಕೇರಿಸುವ ನೀವು ನನಗೆ ಹೆಣ್ಣು ಕೊಡುವಾಗ ಮಾತ್ರ ಹಿಂಜರಿಯದಿರಿ
ನನ್ನ ಸಂಸಾರದ ನೊಗಕ್ಕೆ ಹೆಗಲು ಕೊಡೋ ವಧು ಬೇಕಾಗಿದೆ.
ರಟ್ಟೆಯಲಿ ಶಕ್ತಿಇದೆ,ದುಡಿದುಣ್ಣೋ ಬುದ್ದಿ ಇದೆ
ಕೆಟ್ಟಗುಣಗಳೇನೂ ಇಲ್ಲ ಒಟ್ಟಾರೆ ರಾಣಿಯಂತೆ ನೋಡಿಕೊಳ್ಳುವೆ ದಯವಿಟ್ಟು ಕೊಟ್ಟು ಬಿಡಿ ನನಗೂ ವಧು ಬೇಕಾಗಿದೆ.
ನಗರದವರೇ ಬೇಕು, ನಗದವರೇಬೇಕು ಎಂಬ ಹಠವೇಕೆ ನಗು ನಗು ನಗುತಾ ಭೂತಾಯಿ ಸೇವೆ ಮಾಡುವ ನನಗೂ ಒಂದು ವಧು ಬೇಕಾಗಿದೆ.
ಸರಕಾರಿ ನೌಕರಿ ನಮಗಿಲ್ಲ ,ನಮ್ಮ ತರಕಾರಿ ಇಲ್ಲದಿರೆ ನಿಮ್ಮ ಅಡುಗೆ ರುಚಿಇಲ್ಲ ತಿಂಗಳ ಪಗಾರವಿಲ್ಲದಿದ್ದರೂ ತಿಂಗಳ ಬೆಳಕಿನಲ್ಲಿ ನನ್ನವಳ ಮುದ್ದಿಸಿ ಸಂಸಾರ ನಡೆಸಲು ನನಗೆ ವಧು ಬೇಕಾಗಿದೆ.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
*ನನ್ನ ಪುಟ್ಟ ದೇವತೆ*
ಇವಳು ನನ್ನ ಪುಟ್ಟ ದೇವತೆ
ಸದಾ ನಗುವ ಸಂತಸದ ವರತೆ
ಅವಳ ಕಂಡರೆ ನೋವು ಮಾಯ
ಅವಳಿದ್ದರೆ ಜಗ ಆನಂದಮಯ||
ಚಿನ್ನ ಬೇಡ ಅವಳೇ ಚಿನ್ನಮ್ಮ
ಪ್ರತಿರೂದಲಿ ಅವಳೇ ನನ್ನಮ್ಮ
ಬೆಳೆವ ಸಿರಿ ಮೊಳಕೆಯಲಿ
ನಲಿವಳು ಪರೋಪಕಾರದಲಿ ||
ಬಲು ಚೂಟಿ ಆಟ ಪಾಠದಲಿ
ಬೇಸರವಾದರೆ ಗಂಗೆ ನಯನದಲಿ
ಮನೆಯಲಿದ್ದರೆ ಸಾಕು ಅವಳು
ಹಗಲಾಗುವುದು ಇರುಳು ||
ಅವಳೇ ನಮ್ಮನೆಯ ದೀಪ
ನೀಗಿಸುವಳು ನಮ್ಮಯ ಶಾಪ
ನಮ್ಮ ಭವಿಷ್ಯದ ಭರವಸೆ ಅವಳು
ನಡೆಸುವಳು ಹಿಡಿದು ಬೆರಳು ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ.
ನಾವುಗಳೇ ಹಾಗೆ....
ನಾವುಗಳೇ ಹಾಗೇ
ಗೊತ್ತಾಗುವುದೇ ಇಲ್ಲ
ನಮಗೇನು ಇಷ್ಟ
ಅರ್ಥ ಮಾಡಿಕೊಳ್ಳಲು
ನಮಗೇ ಬಲು ಕಷ್ಟ
ವಯಸ್ಸಾದ ಹಿರಿಯರಿಗೆ
ಅನ್ನ ನೀಡಲು ಯೋಚಿಸುವರು ಈ ಜನ
ಅವರು ಸತ್ತಾಗ ತಿಥಿಯಂದು ಎಲ್ಲರನೂ ಕರೆದು ಹಾಕುವರು ಭರ್ಜರಿ ಬೋಜನ .
ಬದುಕಿದ್ದಾಗ ಕೆಲವರಿಗೆ ತೊಡಲು
ಸಿಗುವುದಿಲ್ಲ ಒಳ್ಳೆಯ ಬಟ್ಟೆ
ಹೆಣಕ್ಕೆ ಸಿಂಗಾರ ಮಾಡಲು
ತಂದೇ ತರುವರು ಹೊಸ ಬಟ್ಟೆ
ನಮಗೆ ಆರೋಗ್ಯ ಕೆಟ್ಟಾಗ
ಯಾರೂ ಬಂದು ಮೂಸುವುದಿಲ್ಲ
ಅಂತಿಮ ಯಾತ್ರೆಯಲ್ಲಿ ಶವಕ್ಕೆ
ಹಾಕಿದ ಸುಗಂಧ ಮಾಸುವುದಿಲ್ಲ .
ಬದುಕಿದ್ದಾಗ ಕಷ್ಟದಲ್ಲಿರುವವರ ಕಂಡು ಹಂಗಿಸಿ ನಗುವರು
ಅದೇ ವ್ಯಕ್ತಿ ಸತ್ತಾಗ ತೋರ್ಪಡಿಕೆಗೆ ಬಿಕ್ಕಿ ಬಿಕ್ಕಿ ಅಳುವರು .
ಬದುಕಿದ್ದಾಗ ಕನಿಷ್ಟ ಗೌರವ ಕೊಡದೆ
ಮಾಡುವರು ತಿರಸ್ಕಾರ
ಸತ್ತಾಗ ಭಯ ಭಕ್ತಿಯಿಂದ ಮಾಡುವರು ನಮಸ್ಕಾರ.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ.
ತುಮಕೂರು
9900925529
ನಮನ ನಿಮಗೆ ಹಿರೇಮಠದ ಶಿವಾನಂದ ಶಿವಾಚಾರ್ಯ
ಜನರಲಿ ಜನಾರ್ಧನನ ಕಂಡ
ಕಲ್ಪತರು ನಾಡಿನ ಯತಿವರ್ಯ.
ಮಹಿಳೆಯರಿಗೆ ರುದ್ರಾಧ್ಯಯನ ವೇದಾಧ್ಯಯನ ಮಾಡಿಸಿದ ಸ್ವಾಮೀಜಿ
ವಯೋವೃದ್ದರಿಗೆ ಕಾಶಿ.ಕೇದಾರ ದರ್ಶನ ಮಾಡಿಸಿದ ಗುರೂಜಿ.
ಜನರ ಧಾರ್ಮಿಕ ಮತ್ತು ನೈತಿಕ ಗುಣಗಳ ಬೆಳೆಸಿದಿರಿ
ವಿದೇಶಗಳಲ್ಲಿ ಭಾರತದ ಕೀರ್ತಿ ಪತಾಕೆಯನು ಹಾರಿಸಿದಿರಿ.
ಮತಕುಲ ತ್ಯಜಿಸಿರಿ ಮನುಕುಲ ಬೆಳೆಸಿರೆಂದ ದಾರ್ಶನಿಕ
ಸ್ವಾಮೀಜಿಗಳ ನಡೆ ನುಡಿ
ನಮಗೆಲ್ಲರಿಗೂ ಪ್ರೇರಕ.
'ಪಿತೃಭಕ್ತ'ರಾಗಿ, ಬರೀ 'ಪಿತ್ರಾರ್ಜಿತ'ದ ಭಕ್ತರಾಗಬೇಡಿ ಎಂದ ಧೀಮಂತ.
ಸಕಲರು ನಮಿಪೆವು ನಿಮ್ಮಯ ಚರಣಕೆ ಕರಗಳ ಜೋಡಿಸುತಾ.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529.
ಕವಿತೆ
ನೀನೆನ್ನ ಭಾಗ್ಯದೇವತೆ.
ಮನದಲಿರುವ
ನೋವು ನಲಿವುಗಳಿಗೆ
ಪದಗಳಾಗುವೆ.
ನೋಡಿದ ಒಳಿತು
ಕೆಡುಕುಗಳನು
ಚಿತ್ರಿಸಲು ನೆರವಾಗುವೆ.
ಸಮಾಜದ ಓರೆಕೋರೆಗಳ
ತಿಳಿದು ತಿಳಿಸಲು
ಮಾಧ್ಯಮವಾಗುವೆ .
ನೀನಿಲ್ಲದಿರೆ
ನನಗೇಕೋ ದುಗುಡ
ನೀ ನನ್ನಲೇ ಸದಾ
ನೆಲೆಸೆಂದು ಬಯಸುವೆ
ಸಿಹಿಜೀವಿ
ಸಿ ಜಿ ವೆಂಕಟೇಶ್ವರ.
ಅವಕಾಶವಾದಿಗಳು.
ಅವಕಾಶವಾದಿಗಳು ಸ್ವಾಮಿ
ನಾವು ಅವಕಾಶವಾದಿಗಳು .
ದೇಶದ ಭದ್ರತೆಯ ಬಗ್ಗೆ
ನೂರಾರು ಮಾತುಗಳು .
ಸೈನ್ಯಕ್ಕೆ ಸೇರಲು ಪಕ್ಕದ
ಮನೆಯ ಮಗನಿರಲಿ
ಎಂಬ ಅವಕಾಶವಾದಿಗಳು.
ಮಾತೃಭಾಷೆಯೇ ಮೇಲು
ಎಂದು ಬೀದಿಯಲಿ ಭಾಷಣ
ಬಿಗಿವ ಶೂರರು .ನಮ್ಮ ಮಕ್ಕಳು
ಮಾತ್ರ ಕಾನ್ವೆಂಟ್ ಕೂಸುಗಳಾಗಲಿ
ಎಂಬ ಅವಕಾಶವಾದಿಗಳು.
ನಾವು ಕಷ್ಟದಲಿದ್ದಾಗ ಇತರರ ಸಹಾಯ ಬೇಡುತಾ ,ನಮಗೆ
ಅನುಕೂಲತೆಯಿದ್ದಾಗ ಸಾವಕಾಶವಾಗಿ ಜಾಗ ಖಾಲಿ
ಮಾಡುವ ಅವಕಾಶವಾದಿಗಳು.
ಮತದಾನದ ವೇಳೆ ದುಡ್ಡಿಗೆ ,ಹೆಂಡಕ್ಕೆ
ಮತವ ಮಾರಿಕೊಂಡವರು .
ಭ್ರಷ್ಟ ರಾಜಕಾರಣಿಗಳು ಲೂಟಿ
ಹೊಡೆಯುವಾಗ ಅವರ ಬೆನ್ನ ಹಿಂದೆ
ಬೈಯುತಾ ಸಾಗುವ ಅವಕಾಶವಾದಿಗಳು.
ಅವಕಾಶವಾದಿಗಳು ಸ್ವಾಮಿ
ನಾವು ಅವಕಾಶವಾದಿಗಳು.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ.
ತುಮಕೂರು.
ದಿನ ಮೇಲೇರಿ ಬರುವ
ಮುನ್ನ ಎದ್ದೇಳೋಣ
ಘನ ಮಹಾ ಶಕ್ತಿಗೆ
ಶಿರಭಾಗಿ ನಮಿಸೋಣ
ತನುಮನವನ ಸ್ಚಚ್ಚ
ಮಾಡಿಕೊಳ್ಳೋಣ
ಮನಕೊಪ್ಪುವ ಸಮತೋಲನ
ಆಹಾರ ಸೇವಿಸೋಣ
ಧನವೊಂದೆ ಜೀವನವಲ್ಲ
ಎಂಬುದನರಿತು ಕಾಯಕಮಾಡೊಣ
ದನಕರುಗಳ ಬಗ್ಗೆ ಕರುಣೆಯಿಂದ
ನಡೆದುಕೊಳ್ಳೋಣ
ಜನಗಳೊಂದಿಗೆ ಸಮನ್ವಯದಿ
ಬೆರೆತು ಬಾಳೋಣ
ಈ ಮೇಲಿನಂತಿದ್ದರೆ ನಮ್ಮಯ
ದಿನಚರಿ ನಮ್ಮದಾಗುವುದು
ಪರಿಪೂರ್ಣ ಸಂತೃಪ್ತ ದಿನ
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
*ನಮ್ಮ ದಿನ*
ದಿನವೂ ನಾನು ಕೆಲಸ
ಮಾಡುತ್ತಲೇ ಇರುವೆನು
ಅದು, ಇದು ಎಂದೂ
ಯಾವುದೇ ಬೇಧವಿಲ್ಲದೇ
ಎಂದಿಗೂ ಕೆಲಸ
ಮಾಡುತ್ತಲೇ ಇರುವೆ.
ಇಂದು ಮಾತ್ರ ನಾನು
ಬೇಗ ಎದ್ದು ಹಾಲು ತರುವುದಿಲ್ಲ.
ಟೀ ಮಾಡುವುದಿಲ್ಲ ಅಷ್ಟೇ ಏಕೆ
ಅಡಿಗೆಯನೂ ಮಾಡುವುದಿಲ್ಲ.
ಪಾತ್ರೆಗಳನ್ನು ತೊಳೆಯುವುದಿಲ್ಲ
ಬಟ್ಟೆಗಳನ್ನು ಒಗೆಯುವುದಿಲ್ಲ.
ನೆಲವ ಒರೆಸುವುದಿಲ್ಲ ಒಟ್ಟಾರೆ
ಇಂದು ನಾನು ಬೇರೆ ಕೆಲಸಗಳನ್ನು
ಮಾಡುವುದೇ ಇಲ್ಲ.
ಹಾಗೇನಾದರೂ ಯಾರಾದರೂ
ಕೆಲಸವನ್ನು ಮಾಡಲೇಬೇಕು
ಎಂದು ಒತ್ತಾಯ ಮಾಡಿದರೆ
ನನ್ನವರು ನನ್ನ ಸಹಾಯಕ್ಕೆ
ಬರುವರು .ಏಕೆಂದರೆ ಇಂದು
ನಮ್ಮ ದಿನ !
ಅಂತರರಾಷ್ಟ್ರೀಯ ಪುರುಷರ ದಿನ!
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529
(ಮಗಳ ಹುಟ್ಟು ಹಬ್ಬದ ಪ್ರಯುಕ್ತ ಕವಿತೆ ಹುಟ್ಟು ಹಬ್ಬದ ಶುಭಾಶಯಗಳು ಶೋಭಿತ )
ಸಕಲ ಸದ್ಗುಣ "ಶೋಭಿತ"ಳು
ಅವಳೇ ನಮ್ಮನೆ ಮಗಳು.
ನೋವುಲೂ ನಕ್ಕು ನಲಿದವಳು
ನಮ್ಮ ಮನಕಾನಂದವ ತಂದಳು
ಬಂಗಾರದ ಗುಣದ ಚಿನ್ನಮ್ಮ
ಹೋಲಿಕೆಯಲ್ಲಿ ನಿಜ ನನ್ನಮ್ಮ
ನೀ ಜನಿಸಿದ್ದು ವಿಜಯದಶಮಿ
ಸರ್ವ ಗುಣಗಳಲೂ ನೀ ಭೂಮಿ
ಮತ್ತೆ ಮತ್ತೆ ಬರಲಿ ನಿನ್ನ ಹುಟ್ಟಿದಬ್ಬ
ಅಂದೇ ನಮಗೆಲ್ಲರಿಗೂ ಮಾಹಾ ಹಬ್ಬ
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
9900925529
ನೀ ಬಂದು ಮುತ್ತನಿಡು.
ಬೇಸರಿನ ಸಂಜೆಯಿದು
ಬೇಕೆನೆಗೆ ನಿನ್ನ ಜೊತೆ
ನೇಸರನು ನಡೆದನು
ಕೇಳೀಗ ನನ್ನ ಕಥೆ .
ತಂಗಾಳಿಯಿದ್ದರೂ ಕೂಡಾ
ಮೈಯಲ್ಲ ಏತಕೊ ಬಿಸಿ
ನೀ ಬಂದು ಮುತ್ತನಿಡು
ಖಾಯಿಲೆಯಾಗುವುದು ವಾಸಿ .
ದಿನಕರನು ತೆರೆಮರೆಗೆ ಸರಿದ
ಕತ್ತಲಾಗುತಿದೆ ಮನಕೆ
ಉಷೆಯಂತೆ ಬಂದು ಬಿಡು
ಬೆಳಕು ತೋರಲು ಪ್ರೇಮಕೆ .
ಸಿಹಿಜೀವಿ
ಸಿ ಜಿ ವೆಂಕಟೇಶ್ವರ