29 September 2018

ಗಜಲ್47(ಭಗತ್ ಸಿಂಗ್)

                  *ಗಜಲ್*

ದೇಶಭಕ್ತರಾದ  ಭಗತ್ ಸಿಂಗ್ ಹೆಸರು ಕೇಳಿದರೇನೋ ಪುಳಕ
ಇನ್ ಕ್ವಿಲಾಬ್ ಜಿಂದಾಬಾದ್  ಎಂದವನ ನೆನೆದರೇನೋ ಪುಳಕ

ಮದುವೆ ಮಕ್ಕಳಾದರೆ ಮಾತ್ರ ಜೀವನವೆಂದರು
ಬಾಲ್ಯವಿವಾಹ ಧಿಕ್ಕರಿಸಿದ ಧೀರನ ಸ್ಮರಿಸಿದರೇನೋ ಪುಳಕ

ಬದುಕಲು ನೂರಾರು ವೇಷ ಬಣ್ಣ ಹಚ್ಚದೇ ನಟನೆ
ಬಾಲ್ಯದಿ ರಾಣಾಪ್ರತಾಪ್ ಚಂದ್ರ ಗುಪ್ತರ ಪಾತ್ರ ಅಭಿನಯ ಸವಿದರೇನೋ ಪುಳಕ

ಅನವಶ್ಯಕ ರಕ್ತದೋಕುಳಿ‌ಹರಿಯುತಿದೆ ಪ್ರತಿದಿನ
ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಮಣ್ಣನು ಪೂಜಿಸಿದವನ ಭಜಿಸಿದರೇನೋ ಪುಳಕ

ಗೊತ್ತು ಗುರಿಯಿಲ್ಲ ಇಂದಿನ ಯುವ ಪೀಳಿಗೆಗೆ
ಚಿಂತನೆಯ ಕೊಲ್ಲಲಾಗದು ಸ್ಪೂರ್ತಿ ಹೊಸಕಲಾಗದೆಂದು ಕರೆನೀಡಿದವನ ನೋಡಿದರೇನೋ ಪುಳಕ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

27 September 2018

ಪ್ರೀತಿಸೋಣ (ಕವನ) ಸ್ನೇಹ ಸಂಗಮ ಬಳಗದ ಸ್ಪರ್ಧೆಯಲ್ಲಿ ಅತ್ಯುತ್ತಮ ಕವನ ಎಂದು ಪುರಸ್ಕೃತ ಕವನ


              *ಪ್ರೀತಿಸೋಣ*

ನಮ್ಮ ಸುತ್ತಮುತ್ತಲಿರುವರುವರು
ನಮಗೆ ಪರಿಚಿತರಾಗಿಲ್ಲ
ನೆರೆಯಲ್ಲಿರುವವರ ಹೊರೆಯಂತೆ ಕಾಣುವೆವು
ಹಗೆ ಸಾದಿಸುವೆವು ಯಾವುದೋ ಊರಿನ ಯಾರನ್ನೋ ಮುಖಪುಟದಲ್ಲಿ
ಬಲವಂತದಿ ಪ್ರೆಂಡ್ ರಿಕ್ವೆಸ್ಟ್ ಕಳಿಸಿ ಅವರ ಮುಖ ಹೇಗಿದ್ದರೂ ಲೈಕ್ ಒತ್ತಿದ್ದೇ ಒತ್ತಿದ್ದು .


ನಮ್ಮ ಬಂಧುಗಳ ಕಷ್ಟಗಳಿಗೆ ಸ್ಪಂದಿಸಲಿಲ್ಲ
ಸಾವು ತಿಥಿಗಳಿಗೆ ಹೋಗಲೇಇಲ್ಲ
ಟಿ ವಿ ಧಾರಾವಾಹಿಗಳಲಿ ಬರುವ ಪುಟ್ಟ ಗೌರಿ
ರಾಧಾ ಳ ಸಂಕಟಕ್ಕೆ ಮರುಗಿ ಕಣ್ಣೀರಿನ
ಕೋಡಿ ಹರಿಸುವರು ಸಾಲದೆಂಬಂತೆ
ಮತ್ತೊಮ್ಮೆ ವೂಟ್ ನಲ್ಲಿ ನೋಡಿ
ಅವರ ನಾಟಕದ ಕಷ್ಟಕ್ಕೆ ಅತ್ತಿದ್ದೇ ಅತ್ತಿದ್ದು

ಮನೆಯಲಿ‌ಗಂಟು ಕಟ್ಟಿಕೊಂಡ ಮುಖ
ಮಕ್ಕಳು‌ ಬಂದು‌ ನಗಿಸಿದರೂ ಅರಳೆಣ್ಣೆ
ಕುಡಿದವರ ಹಾಗೆ ನಗಲು ಚೌಕಾಸಿ ಮಾಡಿ
ಕೋಣೆಗೆ ಹೋಗಿ ಯೂಟ್ಯೂಬ್ ನಲ್ಲಿ
ಸ್ಟಾಂಡ್ಅಪ್ ಕಾಮಿಡಿ ಎಪಿಸೋಡ್
ನೋಡಿ ನಕ್ಕುದ್ದೇ ನಕ್ಕಿದ್ದು

ದೇವರಂತಹ ಅಪ್ಪ ಅಮ್ಮಂದಿರ ಪೂಜೆಯಿಲ್ಲ
ಇನ್ನೆಲ್ಲೋ ಇರುವ ದೇವರ ಕಾಣುವ ಹಂಬಲ
ಬ್ರಹ್ಮಾಂಡ ಬೃಹತ್‌ ಬ್ರಹ್ಮಾಂಡದ ಲ್ಲಿ  ದೇವರ
ಕಾಣಲು ಟಿ ವಿ ಯೂಟೂಬ್ ಪೇಸ್ ಬುಕ್
ಗಳಲಿ ಹುಡುಕಿದ್ದೇ ಹುಡುಕಿದ್ದು

ಈ ಸಾಮಾಜಿಕ ಮಾದ್ಯಮಗಳಿಗೆ
ನಾವು ದಾಸರಾಗಿದ್ದು ಸಾಕು
ಇನ್ನಾದರೂ ಮನುಷ್ಯರನ್ನು  ಪ್ರೀತಿಸೋಣ
ಸಾಮಾಜಿಕ ಮಾಧ್ಯಮಗಳನ್ನು
ವಿವೇಚನೆಯಿಂದ ಬಳಸೋಣ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

26 September 2018

*ಮಗು ಅಳುವ ಸದ್ದು(ನ್ಯಾನೋ ಕಥೆ)

                     *ನ್ಯಾನೋ ಕಥೆ*

*ಮಗು ಅಳುವ ಸದ್ದು*

ವಾರ ,ತಿಂಗಳು, ವರ್ಷಗಟ್ಟಲೆ ಆಸ್ಪತ್ರೆಗಳಿಗೆ ಅಲೆದ ದಂಪತಿಗಳು ,ವಿವಿಧ ದೇವರುಗಳಿಗೆ ಹರಕೆ ಹೊತ್ತರು ,15 ವರ್ಷಗಳಾದರೂ ಮಕ್ಕಳಾಗಲಿಲ್ಲ ."ಇವಳು ಬಂಜೆ ಬಿಡು " "ಇವರಿಗೆಲ್ಲಿ ಮಕ್ಕಳಾಗುತ್ತವೆ " ಎಂಬ ಚುಚ್ಚು ನುಡಿಗಳ ಕೇಳಿದರೂ  ದಂಪತಿಗಳು ಭರವಸೆ ಕಳೆದುಕೊಳ್ಳಲಿಲ್ಲ .ಕಳೆದ ರಾತ್ರಿ ಆ ದಂಪತಿಗಳ ಮನೆಯಲ್ಲಿ ಮಗು ಅಳುವ ಸದ್ದು ಕೇಳಿತು .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

22 September 2018

ಯಾವಾಗ?(ಹನಿಗವನ)

                        *ಯಾವಾಗ?*

ದಿನ ದಿನ ಬರುವ
ದಿನಕರನು
ದಿನದಲಿ ಧರೆ ಬೆಳಗಿ
ಚಂದಿರಗೆ ಸಾಲ ನೀಡಿ
ಇರುಳಲಿ ಬೆಳಗುವನು
ತಮವ ಓಡಿಸುವನು
ಅಂದಕಾರದಲಿರುವ
ನಾವು ಬೆಳಗುವುದು
ಯಾವಾಗ?

*ಸಿ ಜಿ.ವೆಂಕಟೇಶ್ವರ
*ಗೌರಿಬಿದನೂರು*

21 September 2018

ಮೌನವಾಗಿರೋಣ (ಕವನ)

             *ಮೌನವಾಗಿರೋಣ*

ಅತಿಯಾಗಿ ಬಾಯಿಬಿಟ್ಟರೆ
ಮೀನು ಬದುಕಲಾರದು
ಮಿತಿ ಮೀರಿ  ಮಾತನಾಡಿದರೆ
ತೊಂದರೆಗಳು  ತಪ್ದದು

ನಾಲಿಗೆಯ ಹರಿ ಬಿಟ್ಟರೆ
ಹರಿ ಹರರು  ಮುನಿವರು
ಯೋಚಿಸದೆ ಮಾತನಾಡಿದರೆ
ಕಷ್ಟಗಳು ಸಾವಿರಾರು

ಮಾತು ಮಾತಿಗೆ ‌ಜಗಳವೇಕೆ
ಮಾತಿನಲಿ ಹಿತವಿರಲಿ
ಮಾತಿನಲಿ ಮಧುರವಿರಲಿ
ಮಾತುಗಳು ಮೃದುವಾಗಿರಲಿ

ಮಾತು ಮನ ನೋಯಿಸದಿರಲಿ
ಮಾತುಗಳ ತುಪ್ಪದಂತೆ ಬಳಸೋಣ
ಮಾತುಮನೆ ಮುರಿಯದಿರಲಿ
ಕೆಟ್ಟ ಮಾತಿಗಿಂತ ಮೌನವಾಗಿರೋಣ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


20 September 2018

ಸಮರಸ(ಕವನ)

                      *ಸಮರಸ*
   

                          ನೀ
                         ಹೀಗೆ
                      ಮೌನವ
                      ತಾಳಿದರೆ
                    ನಾ ಸಹಿಸೆನು
                 ಒಮ್ಮೆ ನಕ್ಕುಬಿಡು

                            ನಾ
                         ಅಂದು
                        ಮುನಿದು
                     ಮಾತನಾಡಲಿಲ್ಲ
                 ಅದನು ಮರೆತು ಬಿಡು
               ಒಮ್ಮೆ ಮಾತನಾಡಿ ಬಿಡು

                             ನೀ
                          ನಾನು
                         ಎನ್ನದೇ
                      ಅಹಂ ಬಿಟ್ಟು
                    ಮಾತನಾಡೋಣ
               ಸಮರಸದಿ  ಬಾಳೋಣ

                     *ಸಿ ಜಿ*
                *ವೆಂಕಟೇಶ್ವರ*
             *ಗೌರಿಬಿದನೂರು*
           

ಕ್ಷಮಿಸಿ ಬಿಡು (ಕವನ)

             *ಕ್ಷಮಿಸಿ ಬಿಡು*

ಬರೆವೆನೊಂದು ಓಲೆ ಅಮ್ಮ
ಅರಿಯದೆ ತಪ್ಪೆಸಗಿದರೆ
ಹೊಟ್ಟೆಯೋಳಗಾಕಿ ಕೊಳ್ಳಮ್ಮ
ಅಕ್ಕರೆಯಲಿ ನಮ್ಮ ಪೊರೆಯಮ್ಮ

ಸುಂದರವಾದ ಪ್ರಕೃತಿ ಗೆ
ಕೊಡಲಿ ಹಾಕಿ ವಿಕೃತಿ ಮೆರೆದಿಹವು
ನದಿ ನದಗಳ  ಮಲಿನಗೊಳಿಸಿ
ತೊಂದರೆ ಅನುಭವಿಸುತಿಹೆವು

ಜಾತಿ ಮತಧರ್ಮದ ಹೆಸರಲಿ
ಕಚ್ಚಾಡಿ ಸಾಯುತಿಹೆವು
ಕ್ಷಮಿಸಿ ಬಿಡು ನಮ್ಮನ್ನು
ನಮಿಪೆವು ತೊರೆದು ಹಮ್ಮನ್ನು

ಭರತನ ಪೊರೆದ  ಭಾರತಿಯೆ
ನಾರಿಯರ  ಗೌರವಿಸದೆ
ಬಾರಿ ಅವಮಾನ ಮಾಡುತಿಹೆವು
ಕ್ಷಮಿಸಿ ಬಿಡು ನಮ್ಮನ್ನು


*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*


19 September 2018

ಪ್ರಕೃತಿ ನ್ಯಾಯಾಲಯ (ಕವನ)

                *ಪ್ರಕೃತಿ ನ್ಯಾಯಾಲಯ*

ಬೀದಿಯಲಿದ್ದವನು
ಬಿಡಿಗಾಸು ಕಾಣದವನು
ಒಮ್ಮಿದೊಮ್ಮೆಲೆ ರಾಜಕಾರಣ
ಉದ್ಯಮ ಸೇರಿದನು

ಉದ್ಯಮಕ್ಕೆ ಬೇಕಾದ
ಅಕ್ರಮ ಅನ್ಯಾಯ ಅನೈತಿಕತೆ
ಭ್ರಷ್ಟಾಚಾರಗಳನ್ನು ಬೇಗನೆ
ಕರಗತಮಾಡಿಕೊಂಡನು

ಸಾವಿರ ಲಕ್ಷ ಗಳೆಲ್ಲಾ  ಅಲಕ್ಷ್ಯ
ಕೋಟಿಗಳ ಲೆಕ್ಕಾಚಾರ
ನೂರಾರು ಎಕರೆಗಳಷ್ಟು
ಜಮೀನು ಖರೀದಿಸಿದ್ದಾಯ್ತು
ಅಕ್ರಮಗಳ ಬೆನ್ನಟ್ಟಿ ಬಂದ
ನ್ಯಾಯಾಲಯದ ಜಾಮೀನು
ಪಡೆದಾಯ್ತು

ಪ್ರಕೃತಿಯ ವಿಕೋಪಕ್ಕೆ ಬಂಗಲೆ
ನೂರಾರು ಎಕರೆ ಜಮೀನು
ಕೊಚ್ಚಿ ಹೋಗಿತ್ತು ಭಯ ಆವರಿಸಿತ್ತು
ಸರಿ ತಪ್ಪುಗಳ ಮಾಡಿದ ಅಕ್ರಮಗಳ
ನೆನಪಾಗಿತ್ತು ಆದರೆ ಕಾಲ ಮಿಂಚಿತ್ತು
ಪ್ರಕೃತಿ ನ್ಯಾಯಾಲಯದಲ್ಲಿ ಜಾಮೀನು
ಸಿಗಲೇ ಇಲ್ಲ

ಎರಡು ದಿನ ಅನ್ನ ಆಹಾರವಿಲ್ಲದೆ
ಬಳಲಿದವನು ಮೂರನೇ ದಿನ
ಸಾಮಾನ್ಯ ನಿರಾಶ್ರಿತರ ಜೊತೆಗೆ
ತಟ್ಟೆ ಹಿಡಿದು ಕೈಯೊಡ್ಡಿದ್ದ


*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

15 September 2018

ಗಜ಼ಲ್46(ವಿದ್ಯೆಯೆ?)



                 *ಗಜ಼ಲ್46*

ತರಗತಿ‌ ಕೋಣೆ ಶಾಲೆಗಳು ಬದಲಾದರೆ ಅದು ವಿದ್ಯೆಯೆ
ಅಂಕದ ಆಟದಿ ಅಂಕಿ ಸಂಖ್ಯೆಗಳು   ಮೇಲಾದರೆ ಅದು ವಿದ್ಯೆಯೆ

ಎಲ್ಲೆಡೆ ಮೇಲೇಳುತಿಹವು ನಾಯಿಕೊಡೆಗಳು ಅರಿವಿನ ಹೆಸರಲಿ
ಪದವಿ ಪದಕ ಬಿರುದುಗಳನು  ಪಡೆದರೆ ಅದು ವಿದ್ಯೆಯೆ


ಸಂಸ್ಕಾರ ಸಂಸ್ಕೃತಿ ಮೌಲ್ಯಗಳು ಯಾರಿಗೂ ಬೇಕಿಲ್ಲ
ದಿವಿನಾದ ಬಟ್ಟೆ ಟೈ ಬೆಲ್ಟ್ ಶಾಲಾವಾಹನಗಳಿದ್ದರೆ ಅದು ವಿದ್ಯೆಯೆ

ಮಾತೃ ಪಿತೃ ಗುರುದೇವೋಭವ ಕೇವಲ ಹೇಳಲು ಕೇಳಲು
ವಯಸ್ಸಾದ ಅಪ್ಪ ಅಮ್ಮಂದಿರ ವೃದ್ದಾಶ್ರಮಕೆ ಸೇರಿಸಿದರೆ ಅದು ವಿದ್ದೆಯೆ

ಹಿಂದೊಮ್ಮೆ ಅನ್ನ ವೈದ್ಯೂಪಚಾರ ವಿದ್ಯೆ ಮಾರಾಟಕ್ಕಿರಲಿಲ್ಲ
ಲಕ್ಷ ಕೋಟಿ ಕೊಟ್ಟು ವಾಮಮಾರ್ಗದಿ ಪದವಿ ಪಡೆದರೆ ಅದು ವಿದ್ಯೆಯೆ

*ಸಿ. ಜಿ ವೆಂಕಟೇಶ್ವರ*
*ಗೌರಿಬಿದನೂರು*



14 September 2018

ಹೈದರಾಬಾದ್ ಪ್ರವಾಸದ ನೆನಪು (ಲೇಖನ)

         

                 
ಏಕಾಂಗಿ ಪ್ರವಾಸ
2001 ನೇ ಇಸವಿ ನನ್ನ ಜೀವನದಲ್ಲಿ ಪ್ರಮುಖವಾದ ವರ್ಷ ಮದುವೆಯಾಗಿ ಆರು ತಿಂಗಳ ನಂತರ ಏಕಾಂಗಿಯಾಗಿ ಒಂದು ಪ್ರವಾಸ ಕೈಗೊಳ್ಳಲು  ಮನಸಾಗಿ ಆಂದ್ರಪ್ರದೇಶದ ಹೈದರಾಬಾದ್ ಕಡೆ ಪ್ರವಾಸ ಹೊರಟೆ
ಮನೆಯವರ ವಿರೋಧದ ನಡುವೆಯೇ ಬಸ್ ಹತ್ತಿ‌ ಕುಳಿತು ರಾತ್ರಿಯೆಲ್ಲಾ ಪ್ರಯಾಣದ ಬಳಿಕ ಹೈದರಾಬಾದ್ ತಲುಪಿದಾಗ ಮೊದಲಿಗೆ ನಾನು ಬೇರೆ ಜಾಗಕ್ಕೆ ಬಂದ ಅನುಭವ ಎಲ್ಲಿ ನೋಡಿದರೂ ತೆಲುಗು ಹಿಂದಿ ಭಾಷೆ ಕನ್ನಡ ಕಣ್ಮರೆಯಾಗಿ ಒಂದು ರೀತಿಯಲ್ಲಿ ನಾನು‌ಪರಕೀಯ ಆಗಿದ್ದೆ.
ಅಂತೂ ಹರುಕು ಮುರುಕು ಹಿಂದಿ ಮತ್ತು ಇಂಗ್ಲಿಷ್ ಮಾತನಾಡಿ ಸಿಟಿ‌ಬಸ್ ಹಿಡಿದು ಗೋಲ್ಕೊಂಡ ಪೊರ್ಟ್, ಅದಿಲ್ ಷಾಯಿ ಸಮಾದಿಗಳನ್ನು ನೋಡಿ‌ಅಲ್ಲಿನ ವಾಸ್ತುಶಿಲ್ಲ ಮತ್ತು ಕಲೆಯನ್ನು ಆಸ್ವಾದಿಸಿದೆನು ನನ್ನ ಸ್ನೇಹಿತ ಅಂಜಿನಪ್ಪ ನನಗೆ ಉಡುಗೊರೆಯಾಗಿ ಕೊಟ್ಟ ಕೊಡಾಕ್ ಕೆ 10 ರೋಲ್ ಕ್ಯಾಮರಾ ದಲ್ಲಿ ಅಲ್ಲಿನ ವಿವಿಧ ಚಿತ್ರಗಳನ್ನೂ ಸೆರೆಹಿಡಿದೆನು  .ಆ ವೇಳೆಗಾಗಲೇ ಹೊಟ್ಟೆ ಚುರುಗುಟ್ಟುವುದು‌ ತಿಳಿದು ಹೈದರಾಬಾದ್ ದಂ ಬಿರಿಯಾನಿ‌ ತಿಂದು .ಸಾಲಾರ್ ಜಂಗ್ ಮ್ಯೂಸಿಯಂ ಕಡೆ ಪ್ರಯಾಣ ಬೆಳೆಸಿದೆ  ಹೊರಗೆ .ಬಿಸಿಲಿನ ಧಗೆಯಿದ್ದರೂ ವಸ್ತು ಸಂಗ್ರಹಾಲಯದಲ್ಲಿ ತಂಪಾದ ವಾತಾವರಣದಲ್ಲಿ ಕಣ್ಣಿಗೂ  ಮನಸಿಗೂ ತಂಪಾಗುವ ಪುರಾತನ ಕಾಲದ ವಸ್ತುಗಳು .ವರ್ಣ ಚಿತ್ರ ಗಳು ಒಂದಕ್ಕೊಂದು ವಿಭಿನ್ನ ಪ್ರಪಂಚದಲ್ಲಿ ತೇಲಾಡಿಸಿದವು ಅದರಲ್ಲೂ ನನ್ನನು ಕಾಡಿದ ರಚನೆ ಎಂದರೆ "ಮುಸುಕುದಾರಿ ಮಹಿಳೆ  " ಅಮೃತ ಶಿಲೆಯ ಕೆತ್ತನೆ ಒಂದು ಹೆಣ್ಣು ತನ್ನ ಮೈಮೇಲೆ ತೆಳುವಾದ ಬಟ್ಟೆ ಹಾಕಿಕೊಂಡಿರುವಂತೆ ಕೆತ್ತನೆ ಮಾಡಿರುವುದು ನಿಜಕ್ಕೂ ಸುಂದರ ಮತ್ತು ಸೂಕ್ಷ ಕೆತ್ತನೆ .
ಅಂದು ಸಂಜೆಯಾಗುತ್ತಲೇ ನನಗೆ ತಿಳಿಯದ ಊರಿನಲ್ಲಿ ಎಲ್ಲಿ ತಂಗಬೇಕು ಎಂಬ  ಆತಂಕ ಉಂಟಾಯಿತು. ಲಾಡ್ಜ್ ಗಳಲ್ಲಿ ಎಂದೂ ಮಲಗಿದವನಲ್ಲ ಭಯದಿಂದಲೇ ಬಸ್ ಸ್ಟ್ಯಾಂಡ್ ನ ಡಾರ್ಮೆಂಟರಿಯಲ್ಲಿ ಉಳಿದುಕೊಂಡೆ ಹಗಲೆಲ್ಲಾ ಸುತ್ತಾಡಿ ಧಣಿದದ್ದರಿಂದ ಬೆಳಗಾಗಿದ್ದೇ ಗೊತ್ತಾಗಲಿಲ್ಲ .
ಎದ್ದು  ಪ್ರೆಶ್ಅಪ್ ಆಗಿ ತಿಂಡಿ ತಿಂದು ಸಿಟಿ ಬಸ್ ಹಿಡಿದು ಬಿರ್ಲಾ ಮಂದಿರಕ್ಕೆ ಹೋಗಿ ಶ್ರೀ ವೆಂಕಟೇಶ್ವರ ನ ದರ್ಶನ ಪಡೆದು ಅಲ್ಲೇ ಹತ್ತಿರವಿದ್ದ ಹುಸೇನ್ ಸಾಗರ್ ಲೇಕ್ ನೋಡಿ ಪೋಟೋ ಕ್ಲಿಕ್ ಮಾಡಿಕೊಂಡು .ಅಲ್ಲಿಂದ ರಾಮೋಜಿ ಫಿಲ್ಮ್ ಸಿಟಿಗೆ ಹೋದೆ
ಆ ಪಿಲ್ಮ್ ಸಿಟಿ ಒಳಗೆ ಹೋದ ನನಗೆ ಹೊಸ ಜಗತ್ತಿನಲ್ಲಿ ತೇಲಾಡಿದ ಅನುಭವ ಏನಿದೆ ಏನಿಲ್ಲ ಒಳ ಹೋಗುವಾಗ ಆ ಪ್ರದೇಶದಲ್ಲಿ ಆಗಿನ ಕಾಲಕ್ಕೆ 450 ದುಬಾರಿ ಪ್ರವೇಶ ಶುಲ್ಕ ಎನಿಸಿದರೂ  ಒಳಹೋದಂತೆ ಕೊಟ್ಟ ಹಣಕ್ಕೆ ಪೈಸಾವಸೂಲ್ ಸ್ಥಳ ಎಂದು ಮನದಲ್ಲಿ ಸಂತಸಗೊಂಡೆ .ಜಯಪುರದ ಹವಾ ಮಹಲ್ ನಿಂದ ಹಿಡಿದು ಕೃತಕ ಹಳ್ಳಿ, ಕೃತಕ ರೈಲ್ವೆ ನಿಲ್ದಾಣ, ಉದ್ಯಾನವನಗಳು ಅಲ್ಲಲ್ಲಿ ನಡೆಯುವ ವಿವಿಧ ಭಾಷೆಯ   ಪಿಲ್ಮ್ ಶೂಟಿಂಗ್ ರಿಯಲ್ ಸ್ಸಂಟ್ ಶೋ .ಒಂದಾ ಎರಡಾ ನಾನು ನನ್ನ ನೆ ಮರೆತು ಸಂತೋಷ ಅನುಭವಿಸುವಾಗ ಅವರ ಬಸ್ಸುಗಳು ನನ್ನ ಪುನಃ ಮುಖ್ಯ ದ್ವಾರದ ಕಡೆ ಕರೆದುಕೊಂಡು ಬಂದರು ಒಲ್ಲದ ಮನಸ್ಸಿನಿಂದ ರಾಮೋಜಿಗೆ ವಿದಾಯ ಹೇಳಿ ಸಿ‌ ಯು ಎಂದು ಬಂದೆ ಅದ್ಯಾವ ಗಳಿಗೆಯಲ್ಲಿ ಸಿ ಯು ಅಂದೆನೋ ದೇವರು ತಥಾಸ್ತು ಅಂದಿರಬೇಕು  ಅದರಂತೆ ರಾಮೋಜಿ ಪಿಲ್ಮ್ ಸಿಟಿ  ನೋಡಲು ಕುಟುಂಬ ,ಸ್ನೇಹಿತರು, ಶಾಲಾಮಕ್ಕಳ ಜೊತೆ  ನಾಲ್ಕು ಬಾರಿ ಹೋಗಿದ್ದೇನೆ ಆದರೆ ಮೊದಲ‌ ಸಲದ ಅನುಭವ ಅದ್ಬುತ ಎಷ್ಟು ಸಾರಿ ನೋಡಿದರೂ ಬೇಸರವಾಗದ ವಿಶ್ವ ಮಟ್ಟದ ಮನರಂಜನಾ ಪಾರ್ಕ್ ಮಾಡಿರುವ ರಾಮೋಜಿ ರಾವ್ ಬಗ್ಗೆ ಮನದಲ್ಲಿ ಗೌರವ ಭಾವನೆ ಮೂಡದಿರದು .
ಹೈದರಾಬಾದ್ ಬಿಟ್ಟು ಮಂತ್ರಾಲಯದ ಕಡೆಗೆ ಪ್ರಯಾಣ ಬೆಳೆಸಿ ಅಲ್ಲಿ ರಾತ್ರಿ ತಂಗಿ  ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು .ಬಸ್ಸಿನಲ್ಲಿ ಕುಳಿತು ಫಿಲಿಪ್ಸ್ ವಾಕ್ ಮನ್ ನಲ್ಲಿ ಪವನ್ ಕಲ್ಯಾಣ್ ಅಭಿನಯದ ಖುಷಿ ತೆಲುಗು ಚಿತ್ರದ ಹಾಡುಗಳನ್ನು ಪದೇ ಪದೇ ಕೇಳುತ್ತಾ  ಮನೆ ತಲುಪಿದೆ. ಮೊಬೈಲ್ ಇಲ್ಲದ ಆ ದಿನಗಳಲ್ಲಿ ಮೂರು ದಿನ ಮನೆಯವರ ಸಂಪರ್ಕ ಇರಲಿಲ್ಲ,  ನಾನು ಮನೆಗೆ ಬಂದಾಗ ಮನೆಯವರೆಲ್ಲರೂ ನಿಟ್ಟುಸಿರು ಬಿಟ್ಟು ಅಂತೂ ಮನೆಗೆ ಬಂದನೆಲ್ಲ ಎಂದು ಸಂತಸಪಟ್ಟರು .
"ಅಮ್ಮ ಮುಂದಿನ ವರ್ಷ ಒಬ್ಬನೆ ತಮಿಳುನಾಡಿಗೆ ಏಕಾಂಗಿ ಪ್ರವಾಸ ಮಾಡುವೆ" ಎಂದಾಗ " ಇವೆಲ್ಲ ಹುಚ್ಚಾಟ ಬೇಡ ಸುಮ್ನಿರಪ್ಪ " ಎಂಬ ಮಾತೃ ವಾಕ್ಯ ಪರಿಪಾಲಕನಾಗಿ ಇಂದಿಗೂ ಏಕಾಂಗಿ ಪ್ರವಾಸ ಮಾಡಿಲ್ಲ .ಅಮ್ಮ ಮತ್ತು ಮನೆಯವರು ಅನುಮತಿಸಿದರೆ ನಾಳೆಯೇ ಏಕಾಂಗಿ ಪ್ರವಾಸಕ್ಕೆ ಸಿದ್ದ.
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

13 September 2018

ವಿನಾಯಕ ನಮ್ಮ ಕಾಪಾಡು( ಕವನ) ನನ್ನ ಬ್ಲಾಗ್ ನ 400 ನೇ ಪೋಸ್ಟ್ ಓದಿ ಪ್ರೋತ್ಸಾಹ ನೀಡುತ್ತಿರುವ ಎಲ್ಲರಿಗೂ ಗಣೇಶ ಹಬ್ಬದ ಶುಭಾಶಯಗಳು


                           

                *ವಿನಾಯಕ ನಮ್ಮ ಕಾಪಾಡು*

*ವಿ* ಘ್ನ ವಿನಾಯಕ ಕಾಪಾಡು ನಮ್ಮನು
*ವಿ* ನಯದಿ ಬಾಗುವೆವು  ನಮ್ಮನರಸು
*ವಿ* ಧ ವಿಧ ಪೂಜೆ ಮಾಡುವೆವು
*ವಿ* ಜಯವ ನೀಡುತ  ರಕ್ಷಿಸು


*ನಾ* ನಾ ಹೆಸರಿನ ದೇವನು ನೀನು
*ನಾ* ಮವ ಭಜಿಸುವೆವು  ಕಾಪಾಡು
*ನಾ* ವಿಕ ನಾಗು ನಮ್ಮ ಬಾಳಿಗೆ
*ನಾ* ಡಿಗೆ ಒಳಿತು ನೀ ಮಾಡು


*ಯ* ತಿಗಳ ಪ್ರೀತಿಯ ಸ್ವಾಮಿಯೆ
*ಯ* ಶಸ್ಸನ್ನು ನೀಡಿ ಹಾರೈಸು
*ಯ* ಜಮಾನ ನಮಗೆ ನೀನಾಗು
*ಯ* ತ್ನ ಮಾಡುವೆವು ಆಶೀರ್ವದಿಸು


*ಕ* ವಿಜನ ವಂದಿತ  ಗಜವದನ
*ಕ* ಷ್ಟಗಳನ್ನು ನೀ ದೂಡು
*ಕ* ತ್ತಲು ನೀಗಿ ಬೆಳಕನು ನೀಡಿ
*ಕ* ರಿಮುಖ ನಮ್ಮನು  ಕಾಪಾಡು

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

*ಸರ್ವರಿಗೂ  ಗಣೇಶ ಚತುರ್ಥಿಯ ಶುಭಾಶಯಗಳು🙏🙏🙏*

12 September 2018

ಗಜ಼ಲ್45 (ಯಾರಿಗೂ ಬೇಕಿಲ್ಲ)

             *ಗಜ಼ಲ್45*


ಪರಹಿತ ಚಿಂತನೆ ಮಾಡುವುದು  ಯಾರಿಗೂ ಬೇಕಿಲ್ಲ
ಆತ್ಮಸಾಕ್ಷಾತ್ಕಾರವೆಂಬ ವಿಸ್ಮಯ ಕಾಣುವುದು ಯಾರಿಗೂ ಬೇಕಿಲ್ಲ

ಕತ್ತಲಲಿ ನಮ್ಮ ನೆರಳು‌ ಕೂಡ ಕಾಣದು ಗಾಡಂಧಕಾರದಲಿರುವರು
ಬೆಳಕ ಕಾಣುವ ದಾರಿ ಹುಡುಕುವುದು   ಯಾರಿಗೂ ಬೇಕಿಲ್ಲ

ಅರಿಷಡ್ವರ್ಗದ ಬಂಧನದಲಿಹೆವು  ನಾವು
ಜ್ಞಾನ. ಕರ್ಮ ಭಕ್ತಿ ಮಾರ್ಗದಿ ನಡೆಯುವುದು  ಯಾರಿಗೂ ಬೇಕಿಲ್ಲ

ಸಾಲ ಮಾಡಿಯಾದರೂ ತುಪ್ಪ ತಿನ್ನಲು ಸಿದ್ದ
ಹಿಂದೆ ಮಾಡಿದ ಕರ್ಮಗಳ ಲೆಕ್ಕಹಾಕುವುದು  ಯಾರಿಗೂ ಬೇಕಿಲ್ಲ

ಪರರು ಅಧಮರು ಅನೀತಿವಂತರು ಕೆಟ್ಟವರು
ತನ್ನ ತಟ್ಟೆಯಲಿ ಸತ್ತು‌ ಬಿದ್ದಿಹ ಹೆಗ್ಗಣ ಎತ್ತಿಹಾಕುವುದು ಯಾರಿಗೂ ಬೇಕಿಲ್ಲ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

10 September 2018

ಬಂದ್ ಮಾಡಿ (ಕವನ)



        *ಬಂದ್ ಮಾಡಿ*

ಮಾತೆತ್ತಿದರೆ ಬಂದ್ ಎಂದು
ಬೊಬ್ಬೆ ಹೊಡೆವ ಬಂದಾಸುರರೆ
ಬಂದ್ ನಿಂದ ಬನ್ನಪಡುವ
ನಮ್ಮ ಬಂಧುಗಳ ಪಾಡು
ನೋಡಿರುವಿರಾ ?

ದಿನಗೂಲಿ ಮಾಡಿ ತುತ್ತಿನ  ಚೀಲ
ತುಂಬಿಸಿಕೊಳ್ಳುವ ಸಾವಿರಾರು
ಬಾಂಧವರಿಗೆ ಅನ್ನ ನೀಡುವವರಾರು?

ಭವ್ಯ ಭಾರತದ ಭಾವಿ
ಪ್ರಜೆಗಳು ಕಲಿಯಲು ನಿಮಿಷವೂ
ಅಮೂಲ್ಯವಾದ ಸಂಪತ್ತು
ವಾರಕ್ಕೊಮ್ಮೆ ತಿಂಗಳಿಗೊಮ್ಮೆ
ಶಾಲಾಕಾಲೇಜು ಮುಚ್ಚಿದರೆ
ಮಾನವ ಸಂಪನ್ಮೂಲಕ್ಕಾದ
ನಷ್ಟ ತುಂಬಿ ಕೊಡುವಿರಾ ?

ಸಣ್ಣಪುಟ್ಟ ವ್ಯಾಪಾರ ಮಾಡಿ
ಹೊಟ್ಟೆ ಹೊರೆವ ಅಂದಂದಿನ
ಸಂಪಾದನೆಯಿಂದ ಜೀವನ
ಇಲ್ಲಿದಿರೆ ತಣ್ಣೀರು ಬಟ್ಟೆ ಗತಿ
ಇವರಿಗೆ ಭದ್ರತೆ ನೀಡುವವರಾರು ?

ದಿಕ್ಕಾರವಿರಲಿ ನಿಮ್ಮ ಬಂದ್ ಗಳಿಗೆ

ಬಂದ್ ಮಾಡುಬೇಕಿರುವುದು
ನಗರ ರಾಜ್ಯ ದೇಶಗಳನಲ್ಲ
ಸಾವಿನ ಮನೆಯಲಿ ಗಳ ಇರಿವ
ಗೋಸುಂಬೆ ಮನಗಳನು ಬಂದ್ ಮಾಡಿ
ಸ್ವಾರ್ಥಕಾಗಿ ಅಮಾಯಕರ ಎತ್ತಿ ಕಟ್ಟಿ
ತಮ್ಮ ಬೇಳೆ ಬೇಯಿಸಿಕೊಳ್ಳವ
ರಾಜಕಾರಣಿಗಳನ್ನು ಬಂದ್ ಮಾಡಿ
ಜಾತಿ‌ಧರ್ಮದ ಹೆಸರಲಿ ವಿಷಬೀಜ
ಬಿತ್ತುವ ದುಷ್ಟ ಯೋಚನೆಗಳ ಬಂದ್ ಮಾಡಿ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*




07 September 2018

ಹುಷಾರು (ಹನಿಗವನ)

                  *ಹುಷಾರು*


ಇಂದು
ಹೆಚ್ಚು ಕೆಲಸ ಮಾಡಬೇಡಿ
ಭಾರ ಎತ್ತ ಬೇಡಿ
ಮನಸಿಗೆ ಬೇಜಾರ ಮಾಡಿಕೋಬೇಡಿ
ಬೇಕಾದ್ದನ್ನು ತಿನ್ನಿ
ನಿಮ್ಮ ಬಯಕೆಗಳ
ಈಡೇರಿಸಿಕೊಳ್ಳಿ
ಸಾದ್ಯವಾದರೆ ವೈದ್ಯ ರಿಂದ
ಪರೀಕ್ಷಿಸಿಕೊಳ್ಳಿ
ಹುಷಾರು
ಏಕೆಂದರೆ ಇಂದು
ಒಂಭತ್ತನೆಯ ತಿಂಗಳ
ಒಂಭತ್ತನೆಯ ದಿನ



*ತೊಂಬತ್ತು*

ಇಂದು ದಿನಾಂಕ ಒಂಭತ್ತು
ತಿಂಗಳೂ ಒಂಭತ್ತು
ಭಾನುವಾರದ ರಜಾನೂ ಇತ್ತು
ಸಂಬಳಾನು ಇವತ್ತೇ ಆಗಿತ್ತು
ನೀನಿರಬೇಕಿತ್ತು
ಹಾಕಬಹುದಿತ್ತು
ಮೂವತ್ತು
ಅರವತ್ತು
ತೊಂಬತ್ತು

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

ನನಗೇಕೆ ಈ ಶಿಕ್ಷೆ (ಕವನ)

          *ನನಗೇಕೆ ಈ ಶಿಕ್ಷೆ?*

ಒಂಟಿಯಾಗಿರುವವದು ಬೋರೆಂದು
ತುಂಟ ಚಟಪಡಿಸುತ್ತಿದ್ದನು
ಜಂಟಿಯಾಗಲು ಹಾತೊರೆಯುತ್ತಿದ್ದನು

ತುಂಟನೊಮ್ಮೆ ತುಂಟಿಯ ಕಂಡನು
ತುಂಟ ನಗೆಯ ಬೀರಿ ನೋಡಿದ
ತುಂಟಿ ಹಿಂದ ಓಡಾಡಿದ
ತಂಟೆ ತರಲೆ ಬಿಟ್ಟು ಸಭ್ಯನಾದ
ತುಂಟಿಯ ಮನ ಕರಗಿ
ಒಲ್ಲದ ಮನಸ್ಸಿನಿಂದ ಒಲವು
ತೋರಿದಳು
ಮದುವೆಯಾಗಲು ನಿರ್ಧಾರ ಮಾಡಿದರು.

ಅಂದು ಸುಪ್ರೀಂಕೋರ್ಟ್ ತೀರ್ಪನ್ನು
ತುಂಟಿ ಓದಿ ಜಿಗಿದಾಡಿ ಸಂತಸಗೊಂಡು
ತುಂಟನಿಗೆ ಕರೆಮಾಡಿ ಈಗಂದಳು
ನನಗೆ(gay) ಅವಳು ಬೇಕು
ಅವಳಿಗೆ(gay) ನಾನು ಬೇಕು
ನಮ್ಮಿಬ್ಬರಿಗೇ ಮದುವೆ ಸೂಕ್ತ
ಎಂದು ಪೋನ್ ಕುಕ್ಕಿದಳು
ತುಂಟ ಅರ್ಥವಾಗದೇ ನಾನು ಮಾಡಿದ
ತಪ್ಪೇನು? ನನಗೇ(gay)ಕೆ ಈ ಶಿಕ್ಷೆ? ಎಂದು
ಪರಿತಪಿಸುತ್ತಿದ್ದಾನೆ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

06 September 2018

ನಾವು ಮಂಗಗಳು (ಕವನ)



            *ನಾವು ಮಂಗಗಳು*

ಮಹಿಳೆಯರ  ಗೌರವಿಸಬೇಕು
ಇಳೆಯ ಜೀವಿಗಳ ಕಾಪಾಡಬೇಕು
ಮಂಗನಂತೆ ಆಡಬಾರದು ಎಂದು
ಗೊತ್ತಿದ್ದರೂ ರಾಕ್ಷಸರಂತೆ ಅಡುವ ನಾವು
ಮಂಗಗಳು ಸಾರ್ ನಾವು ಮಂಗಗಳು

ಸನ್ಮಾರ್ಗದಿ ನಡೆಯಬೇಕು
ಅಡ್ಡದಾರಿ ಹಿಡಿಯಬಾರದು
ಎಂದು ತಿಳಿದಿದ್ದರೂ ವಾಮ ಮಾರ್ಗದಿ
ಅನ್ಯಾಯ ಅಕ್ರಮದಿ ನಿರತರಾಗಿರುವೆವು
ಮಂಗಗಳು ಸಾರ್ ನಾವು ಮಂಗಗಳು

ಪರಿಸರವಿರುವುದು ನಮಗಾಗಿ
ಸಂಪನ್ಮೂಲಗಳನ್ನು ಮಿತವಾಗಿ
ಬಳಸಬೇಕೆಂದು ತಿಳಿದಿದ್ದರೂ
ಪರಿಸರ ಮಾಲಿನ್ಯ ಮಾಡಿ
ಕುಣಿದಾಡುತಿರುವ ನಾವು
ಮಂಗಗಳು ಸಾರ್ ನಾವು ಮಂಗಗಳು

ನಾನು ನನ್ನಿಂದ ಎಂದವರು
ನಾಮಾವಶೇಷವಾದರೂ
ನಾನೆಂಬ ಅಹಂ ಅಳಿಯಲಿಲ್ಲ
ನಾನು ಎಲ್ಲರಿಗಾಗಿ ಎಲ್ಲರೂ ನನಗಾಗಿ
ಎಂಬುದು ಅರ್ಥವಾಗಲಿಲ್ಲ
ಮಂಗಗಳು ಸಾರ್ ನಾವು ಮಂಗಗಳು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

05 September 2018

ಅಂದು‌..ಇಂದು..ಮುಂದೆ (ಕವನ ಶಿಕ್ಷಕರ ದಿನಾಚರಣೆಯ ಶುಭಾಶಯಗಳು)



             *ಅಂದು‌ ಇಂದು‌ ಮುಂದೆ*

*ಅಂದು*

ಗುರು ಬ್ರಹ್ಹ ವಿಷ್ಣು ಮಹೇಶ್ವರ
ಗುರುಕುಲದಿ ಕಲಿಸುವ ದೈವಾಂಶ ಸಂಭೂತ
ಬರೀ ಕಲಿಕೆಯೊಂದನ್ನು ಮಾಡಲು
ಪಣತೊಟ್ಟ ಗುರುವರ್ಯ
ನೈತಿಕ, ಮೌಲಿಕ ಜೀವನ ಮಾನವೀಯತೆಯ ವಿಕಸನಕ್ಕೆ ಶಿಕ್ಷಣ
ಗುರು ಕೇಂದ್ರಿತ ಗುರಿಇದ್ದ ಶಿಕ್ಷಣ
ಮೌಲ್ಯ ಯುತ ಗುರು, ಕಲಿಕಾರ್ಥಿಗಳು
ಸಮಾಜ ಸದೃಢ


*ಇಂದು*

ಗುರುವೇನ್ ಮಹಾ ಎಂಬ
ಕಲಿಕಾರ್ಥಿಗಳು
ಊಟಬಡಿಸುವ ಕಾಯಕದಿಂದಿಡಿದು
ಜನ ದನ ಎಣಿಸುವ ಸಕಲ ಕಾರ್ಯ
ಮಾಡಿ ಸಮಯವಿದ್ದರೆ ಕಲಿಸಿ
ನಲಿಸುವ ಟೀಚರ್
ಅಂಕಗಳ ಹಿಂದೆ ಬಿದ್ದು‌ ಅಂಕೆ
ತಪ್ಪಿದ ಮೌಲ್ಯಗಳು
ತಪ್ಪಿದರೆ ತಿದ್ದಲು ಶಿಕ್ಷೆ ಕೊಡಲು
ಕಾನೂನು ಹೇಳುತಿದೆ ಶಿಕ್ಷಕರು ದುರುಗುಟ್ಡಿ‌
ನೋಡಿದರೂ ತಪ್ಪು
ತಿದ್ದುವರಾರು ದಾರಿ ತಪ್ಪಿದ
ಭಾವಿ ಭಾರತದ ಪ್ರಜೆಗಳ


*ಮುಂದೆ*

ಗುರುವೇನ್ ಬ್ರಹ್ಮ ಅಲ್ಲ
ನೆಟ್ ಗೂಗಲ್, ಯೂಟ್ಯೂಬ್
ಆರ್ಟಿಪಿಷಿಯಲ್  ಇಂಟಲಿಜೆನ್ಸ್ ಇದೆಯಲ್ಲ
ಯಂತ್ರಗಳಿಂದ ಕಲಿತು
ಯಾಂತ್ರಿಕ ಜೀವನ ನಡೆಸಿ
ಯಂತ್ರಗಳ ಗುಲಾಮರಾಗಿ
ನಾವು ಸುಸಂಸ್ಕೃತ, ಆಧುನಿಕ ಅಭಿವೃದ್ಧಿ ಹೊಂದಿದ ದೇಶದ ಸತ್ ಪ್ರಜೆಗಳೆಂದು
ಕೊಚ್ಚಿಕೊಳ್ಳುವೆವು

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

04 September 2018

ಗಜ಼ಲ್44(ಮರೆಯಲಿ ಹೇಗೆ)


              *ಗಜ಼ಲ್*

ದಿಕ್ಕುಗಳನ್ನೇ ಅಂಬರ ಮಾಡಿಕೊಂಡ ದಿಟ್ಟ ಮುನಿಯ  ಹೇಗೆ ಮರೆಯಲಿ
ಮುನಿಯದೇ ಮಾದರಿಯಾದ ಯತಿವರ್ಯರ ವಾಗ್ಜರಿಯ  ಹೇಗೆ ಮರೆಯಲಿ

ಕಹಿ ಗುಳಿಗೆಯಲಿ ಸಿಹಿಯಾದ ಲೋಕ ಜ್ಞಾನ ಬೋಧನೆ
ಸಾವಿಗಂಜುವ ಜನರ ನಡುವೆ ಸಾವ ಸ್ವೀಕರಿಸಿದ ಸಲ್ಲೇಖನ ವ್ರತಧಾರಿಯ ಹೇಗೆ ಮರೆಯಲಿ

ಬಟ್ಟೆಗಳನ್ನು ಹಾಕಿಕೊಂಡು ಬೆತ್ತಲಾದವರು ನಾವುಗಳು
ಬಟ್ಟೆಯ ಧರಿಸದೇ ನಮಗೆಲ್ಲ ಬಟ್ಟೆಯ ತೋರಿದ ಬೆಳಕ ಕಿಡಿಯ  ಹೇಗೆ ಮರೆಯಲಿ

ದೇಹಕ್ಕೆ ವಯಸ್ಸುಗುವುದು ಸಹಜ‌ ಮನಸ್ಸು ಆತ್ಮಕ್ಕಲ್ಲ
ತರುಣರಾಗೇ ಮರಣವನು‌ ಮೆಟ್ಟಿದ  ಮುನಿಯ  ಹೇಗೆ ಮರೆಯಲಿ

ಸಾಗರದಷ್ಟು ಆಸೆ ಆಕಾಂಕ್ಷೆಗಳ ಭಾರಕೆ ಹಗುರಾಗುತ್ತಿಲ್ಲ ಮನ
ಸೀಜೀವಿಯಂತವರ ಮೇಲೆ ಪ್ರಭಾವ ಬೀರಿದ ಯತಿಯ  ಹೇಗೆ ಮರೆಯಲಿ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*