30 April 2018

ಬಳುಕುವ ಬಳ್ಳಿ (ಭಾವಗೀತೆ)

*ಬಳುಕುವ ಬಳ್ಳಿ*

ಶಿಲೆಗಳ ಸಂಗೀತದ ಹಿನ್ನೆಲೆಯಲ್ಲಿ
ಕಲಾದೇವತೆಯ ಸನ್ನಿದಿಯಲ್ಲಿ
ಕಮಲವಿರುವ ಕೊಳದ ಸನಿಹದಲ್ಲಿ
ನಿಂತಿರುವೆ ನಾನು ಬಳುಕುವ ಬಳ್ಳಿ

ಧರಿಸಿರುವೆ ರೇಶಿಮೆಯ ಸೀರೆ
ನಾಚಿ ನಿಂತಿರುವೆ ಕೋಮಲ ನೀರೆ
ಮೈಮೇಲಿನ ನಗವ ನೋಡು ಬಾರೆ
ನಾನಿದ್ದರೆ ಸೊಗಸೆಲ್ಲ ಈ ಧರೆ

ಮೈಮೇಲೆ ಹೊಳೆಯುತಿದೆ ನನ್ನ ನಗ
ಸೌಂದರ್ಯದಿ ಕಂಗೊಳಿಸುತಿದೆ ಮೊಗ
ನೋಡಲು ಬನ್ನಿ ನೀವೆಲ್ಲ ಬೇಗ
ನಾ ಹಚ್ಚಿದ ದೀಪಗಳು ಬೆಳಗಲಿ  ಜಗ

  *ಸಿ.ಜಿ.ವೆಂಕಟೇಶ್ವರ*
  *ಗೌರಿಬಿದನೂರು*

ಚೌ ಚೌಪದಿ (ಒಡತಿಯಾಗು)


*ಚೌ ಚೌ ಪದಿ*
ಬಂಜರಾಗಿದೆ ನನ್ನ ಹೃದಯ ನೀನಿಲ್ಲದೆ
ಬಾಗಿಲು ತೆರೆದು‌ ಕಾಯುತಿಹೆ
ಬೀದಿಯಲಿ ಹಾದಿಯ ನೋಡುತಿರುವೆ
ಒಡತಿಯಾಗು  ಬಾ ನನ್ನ ಬಾಡಿಗೆ ಮನೆಗೆ
*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

29 April 2018

ಗಜ಼ಲ್ ೩೮ (ಆಸೆ)

*ಗಜ಼ಲ್೩೮*

ಜಗದೆಲ್ಲ ಜೀವಿಗಳಿಗೆ ಅನ್ನದ ಕಣ ದೊರಕಲಿ  ಎಂಬ ಆಸೆ
ಸಕಲ ಜೀವಾತ್ಮರಿಗೆ ಆನಂದದ ಕ್ಷಣ ಲಬಿಸಲಿ ಎಂಬ ಅಸೆ

ದ್ವೇಷದ ಜ್ವಾಲೆಗೆ ಎಲ್ಲೆಡೆ  ನಲುಗುತಿವೆ ಮುಗ್ದ ಜೀವಗಳು
ಪ್ರೀತಿಯೆಲ್ಲೆಡೆ  ಹಬ್ಬಿ ಧರೆ  ಸುಂದರವಾಗಲಿ ಎಂಬ ಆಸೆ

ಉಳ್ಳವರ ಅಟ್ಟಹಾಸ ಎಲ್ಲೆ ಮೀರುತಿದೆ ಕೆಲವೆಡೆಗಳಲ್ಲಿ
ಮೇಲು ಕೀಳಿಲ್ಲದೇ  ಸರ್ವರಿಗೂ ಸಮಪಾಲು ಸಿಗಲಿ ಎಂಬ ಆಸೆ

ಅಜ್ಞಾನದ ಅಂದಕಾರದಲಿ ಕೆಲವರು ಮುಳುಗಿ ತೊಳಲುತಲಿರುವರು
ಜ್ಞಾನದ ಬೆಳಕ ಪಡೆದು ಎಲ್ಲರ ಜೀವನ ಕಂಗೊಳಿಸಲಿ ಎಂಬ ಆಸೆ

ಐಹಿಕ ಸುಖವೇ ಮೇಲೆಂದು ಮೌಡ್ಯದಿ ಕಳಿತಿಹರು ಮೂಢರು
ಸೀಜೀವಿಗೆ ಆತ್ಮಾನಂದ ಪಡೆದ ಮಾನವರು ಕಾಣಿಸಲಿ‌ ಎಂಬ ಆಸೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

28 April 2018

ಯಾಕೋ ಹಸಿವಿಲ್ಲ (ನ್ಯಾನೋ ಕಥೆ)

*ನ್ಯಾನೋ ಕಥೆ*

*ಯಾಕೋ ಹಸಿವಿಲ್ಲ*

" ಓ ಪಾಂಡುರಂಗ ಎಷ್ಟು ದಿನ ಆಯ್ತು ನಿನ್ನ ನೋಡಿ ಹೇಗಿದ್ದೀಯಾ? ಇವನು ನನ್ನ ಕ್ಲಾಸ್ ಮೇಟ್ ಕಣಮ್ಮ" ಎಂದು ಮಗಳಿಗೆ ಪರಿಚಯ ಮಾಡಿದ ರಮೇಶ್ "ನೀನು ಜನರಲ್ ಆದರೂ ನಿನಗೆ ಹೇಗೋ ಮೇಷ್ಟ್ರು ಕೆಲ್ಸ ಸಿಕ್ತು ನಮ್ಮದು ರಿಜರ್ವೇಶನ್ ಇದ್ದರೂ ಸರ್ಕಾರಿ ಕೆಲಸನೂ ಸಿಗದೇ,  ಹಳ್ಳೀಲಿ ಮಳೆ ಇಲ್ಲದೇ ಜೀವನ ಬಹಳ ಕಷ್ಟವಾಗಿದೆ" ಎಂದ ಪಾಂಡುರಂಗ ನ ಮಾತಿಗೆ ಅನುಕಂಪ ತೋರಿದ ರಮೇಶ್ "ಇವತ್ತು ನಮ್ಮ ಮನೆಯಲ್ಲಿ ಹಬ್ಬ ಮಾಡಿದ್ದೇವೆ, ಊಟ ಮಾಡು‌.?ಎಂದಾಗ ಸ್ನೇಹಿತ ಸಿಕ್ಕ ಸಂತಸದಲ್ಲಿ ಊಟಕ್ಕೆ ಒಪ್ಪಿ ಮನೆಯ ಹೊರಗೆ ಊಟಕ್ಕೆ ಕುಳಿತ, ಪ್ಲಾಸ್ಟಿಕ್ ಲೋಟ ದಲ್ಲಿ ಮನೆಯ ಯಜಮಾನಿ ನೀರು ತಂದು ಕೊಟ್ಟಾಗ ಪಾಂಡುರಂಗ ನಿಗೆ ಎಲ್ಲಾ ಅರ್ಥವಾಗಿ ನನಗೆ ಯಾಕೋ ಹಸಿವಿಲ್ಲ ಮತ್ತೊಮ್ಮೆ ಯಾವಾಗಲಾದರೂ ಊಟಮಾಡುವೆ ಎಂದು ಹೊರಟು ಹೋದ ...

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

26 April 2018

ಮಾನವೀಯತೆ?(ನ್ಯಾನೋ ಕಥೆ)

ನ್ಯಾನೋ ಕಥೆ

*ಮಾನವೀಯತೆ?*

ಖಾಸಗಿ ಬಸ್ಸಿನಲ್ಲಿ ವಿಪರೀತವಾದ ಜನಸಂದಣಿ ೩೦ ವರ್ಷದ ರಮೇಶ್ ಸೀಟಲ್ಲಿ ಕುಳಿತಿದ್ದ ಒಂದು ನಿಲ್ದಾಣದಲ್ಲಿ ಎಪ್ಪತ್ತು ವರ್ಷದ ಮುದುಕಿ ಮತ್ತು ಮಗು ಎತ್ತಿಕೊಂಡು ಒಬ್ಬ ಮಹಿಳೆ  ಬಸ್ಸನ್ನೇರಿದರು .ಯಾರಿಗೆ ಸೀಟು ಕೊಡಲಿ‌?  ಎಂಬ ಗೊಂದಲದಲ್ಲಿ ಸೀಟಿನಿಂದ ಎದ್ದ ಅಷ್ಟರಲ್ಲಿ ೧೮ ವರ್ಷದ ಯುವತಿ "ಥಾಂಕ್ ಯು" ಎಂದು ಸೀಟಿನಲ್ಲಿ ಕುಳಿತೇಬಿಟ್ಟಳು .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

25 April 2018

ಭವಿಷ್ಯ (ನ್ಯಾನೋ ಕಥೆ)


ನ್ಯಾನೋ ಕಥೆ

*ಭವಿಷ್ಯ*

ಸುತ್ತ ಹತ್ತು ಹಳ್ಳಿಗಳಿಗೆ ಅವರದೇ ಪೌರೋಹಿತ್ಯ.          ಸುಂದರಯ್ಯ ಅವರ ಮಾರ್ಗದರ್ಶನದಲ್ಲಿ ನೂರಾರು ಮದುವೆಗಳ ಮುಹೂರ್ತ ನಿಗದಿ ಮಾಡಿ "ನಿಮ್ಮ ಸಂಸಾರ ನೂರ್ಕಾಲ ಸುಖವಾಗಿ ಬಾಳಲಿದೆ ಎಂದಿದ್ದರು" ಕ್ಷುಲ್ಲಕ ಕಾರಣಕ್ಕೆ ಹೆಂಡತಿ ಮೇಲೆ ಮುನಿಸಿಕೊಂಡು ಮಗಳ ಮನೆಗೆ ಹೋಗಿ ವಾಸವಿದ್ದರು ."ಸ್ವಾಮಿ ಈ ವಯಸ್ಸಿನಲ್ಲಿ ನಾವು ನಿಮಗೆ ಬುದ್ದಿ ಹೇಳಬಾರದು ದಯವಿಟ್ಡು ಮನೆಗೆ ಬನ್ನಿ " ಎಂದು ೨೫ ವರ್ಷದ ಬಾಲಾಜಿ ೭೫ ವರ್ಷದ ಸುಂದರಯ್ಯಗೆ  ಹೇಳಿದ . "ಎಲ್ಲರ ಸಂಸಾರದ ಬಗ್ಗೆ  ಭವಿಷ್ಯ ನುಡಿವ ಹಲವು ಮದುವೆ ಮಾಡಿಸುವ  ಇವರ ಸಂಸಾರ ನಾವು ಸರಿಮಾಡಬೇಕಿದೆ " ಎಂದು ಬಾಲಜಿ ಜೊತೆ ಬಂದಿದ್ದ ನರೇಶ್ ಅಂದ ಮಾತು   ಎಲ್ಲರಿಗೂ ಕೇಳಿಸಿದರೂ ಯಾರೂ ಮಾತಾಡಲಿಲ್ಲ.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

24 April 2018

ನಾವೇ ಮೇಲು (ಹನಿಗವನ)


*ನಾವೇ ಮೇಲು*
ಈಗ ಆಟವೆಂದರೆ ಕಂಪ್ಯೂಟರ್ ಮೊಬೈಲು
ನಾವು ಕಲ್ಲಾದರೂ ಆಟದಿ ನಾವೇ ಮೇಲು
ಕಟ್ಟುವ ಬೆಳೆಸುವ ಕಾರ್ಯ ಮಾಡೋಣ
ಕಡಿಯುವ ಕೆಡಿಸುವ ಗುಣ ಬಿಡೋಣ
ಅಣ್ಣ ತಂಗಿಯರಿಗೆ ಹಾಡಲು ಸಮಯವಿದೆ ಇಲ್ಲಿ
ನಮ್ಮ ನೋಡಿ ಕಲಿಯಿರಿ ಈಗಲಾದರೂ ನೀವಿಲ್ಲಿ
*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

23 April 2018

ಚೌ ಚೌಪದಿ (ಬಾ ಗೆಳತಿ)

ಚೌ ಚೌಪದಿ

*ಸೀರೆ,ಸಂಕೋಲೆ,ಚಂದಿರ, ತೇರು*

*ಬಾಗೆಳತಿ*

ಚಂದಿರನ ಬೆಳಂದಿಗಳ ಬೆಳಕಲ್ಲಿ
ನಿನ್ನ ರೇಷಿಮೆ ಸೀರೆ ಮಿನುಗುತಿದೆ
ನಾಚಿಕೆಯ ಸಂಕೋಲೆಯ ತೊರೆದು
ನನ್ನದೆಯ ತೇರನೇರು ಬಾ ಗೆಳತಿ

*ಸಿ .ಜಿ.ವೆಂಕಟೇಶ್ವರ*
*ಗೌರಿಬಿದನೂರು*


21 April 2018

ಎರಡು ಶಾಯಿರಿಗಳು

*ಶಾಯಿರಿ ೧*

ನೀನಂದು ನನ್ನ ತೊರೆದಾಗ
ಜೋರು ಮಳೆಸುರಿದಿತ್ತು
ಮಳೆಗೆ  ನಾ‌‌ ಚಿರ ಋಣಿ
ನನ್ನ ಕಣ್ಣೀರ  ಮರೆಮಾಚಿತ್ತು

*ಶಾಯಿರಿ ೨*


ಮಳೆ ಬಿಲ್ಲು ನಿನ್ನ ಮುಂದೆ
ಏನೂ ಅಲ್ಲ ಗೆಳತಿ
ದಿನಕೊಂದು ಬಣ್ಣ ಬದಲಾಯಿಸಿ
ಮಾತಿನಲ್ಲೇ ಮೈಮರೆಸಿ
ಮೋಸ ಮಾಡುವ
ನಿನಗೆ ನೀನೇ ಸಾಟಿ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

20 April 2018

ಮತದಾನ ಮಾಡೋಣ(ಕವಿ ಬಳಗ ವಾಟ್ಸಪ್ ಗುಂಪಿನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಲೇಖನ)


ಲೇಖನ
ಎಲ್ಲ ವಿಷಯದಲ್ಲೂ
ಮುಂದುವರಿದಿರುವ
ನಾವುಮತದಾನದತ್ತವಿಷಯದಲ್ಲಿ ಮಾತ್ರ
ಹಿಂದುಳಿಯಲು ಕಾರಣವೇನು? ಪರಿಹಾರವೇನು?

ಬಹುತೇಕ ಟೆಕಿಗಳು ಮತ್ತು ನೌಕರರು ಮೇ ೧೨ ರ ಶನಿವಾರದಂದು ವೀಕೆಂಡ್ ಮಜಾ ಮಾಡಲು ಎಲ್ಲಿ ಹೋಗೋಣ ಎಂಬ ಯೋಜನೆ ಮಾಡುತ್ತಿರುತ್ತಾರೆ .ಕಾರಣ ಅವರಿಗೆ  ನಮ್ಮ ಸರ್ಕಾರ ಆಯ್ಕೆ ಮಾಡುವ ಮಹಾನ್ ಜವಾಬ್ದಾರಿ ಕೆಲಸಕ್ಕಿಂತ ಮೋಜು ಮಸ್ತಿ ಮಾಡಲು ಪ್ರಥಮ ಪ್ರಾಶಸ್ತ್ಯ. ಇದರ ಪರಿಣಾಮವಾಗಿ ಪ್ರಪಂಚದಲ್ಲೇ ದೊಡ್ಡ ಪ್ರಜಾಪ್ರಭುತ್ವ ದೇಶವಾದ ನಮ್ಮಲ್ಲಿ ಯಾವುದೇ ಚುನಾವಣೆಯಲ್ಲಿ ನೂರು ಪ್ರತಿಶತ ಮತದಾನ ಆಗಿರುವುದು ಅತಿ ವಿರಳ
ಈ ರೀತಿಯಾಗಲು ಕಾರಣಗಳೇನು?

೧ ಮತದಾರರ ಲ್ಲಿ ನಾನೊಬ್ಬ ಮತ ಹಾಕದಿದ್ದರೆ ಪ್ರಪಂಚ ಹಾಳಾಗಲ್ಲ ಎಂಬ ಉಡಾಪೆಯ ನಿರ್ಲಕ್ಷ್ಯ ಮನೋಭಾವ

೨ ಕಲುಷಿತ ರಾಜಕೀಯ ವಾತಾವರಣದಲ್ಲಿ ಎಲ್ಲಾ ಪಕತ ಎಲ್ಲಾ ನಾಯಕರು ಸರಿಯಿಲ್ಲ ಎಂಬ ಪೂರ್ವಾಗ್ರಹ ಪೀಡಿತ ಮನಸುಗಳು
೩ಪ್ರಸ್ತುತ ರಾಜಕೀಯ ವ್ಯವಸ್ಥೆಯ ಬಗ್ಗೆ ಬೇಸರ

೪ ಕೆಲ ಬಹುರಾಷ್ಟೀಯ ಕಂಪನಿಯ ನೌಕರರರಿಗೆ ರಜೆ ಕೊಡದೇ ಇರುವುದು

೫  ತಂತ್ರಜ್ಞಾನದ ಅರಿವಿರುವವರಿಗೆ ಆನ್ಲೈನ್ ಮತದಾನಕ್ಕೆ ಅವಕಾಶ ಇಲ್ಲದಿರುವುದು

ಪರಿಹಾರಗಳು

೧  ಪ್ರತಿಯೊಬ್ಬರೂ ಮತದಾನ ನಮ್ಮ ಕರ್ತವ್ಯವೆಂದು ತಿಳಿದು ಮತ ಚಲಾಯಿಸುವ ಮನೋಭಾವ ಬೆಳಿಸಿಕೊಳ್ಳಬೇಕು

೨ ಮತದಾನ ಖಡ್ಡಾಯ ಕಾನೂನು ಜಾರಿಗೆ ತರಬೇಕು ಮತದಾನ ಮಾಡದವರಿಗೆ ಸರ್ಕಾರಿ ಸೌಲಭ್ಯಗಳನ್ನು ನೀಡಬಾರದು

೩ ಅವಕಾಶ ಇರುವವರಿಗೆ ಆನ್ಲೈನ್ ಮತದಾನ ಮಾಡಲು ಅವಕಾಶ ನೀಡಬೇಕು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

18 April 2018

ಅವನು ಬೀಳಿಸಿದರೆ? (ಚಿತ್ರ ಕವನ)

ಚಿತ್ರಕವನ

*ಅವನು ಬೀಳಿಸಿದರೆ?*

ಜೀವನದ ತುತ್ತ ತುದಿಯಲ್ಲಿರುವೆ
ಬೀಳುವೆನೆಂದು ಭಾವಿಸಿದಿರಾ ?
ಬೀಳಲಾರೆ ಈಗಾಗಲೇ ಬಿದ್ದು ಬಿದ್ದು
ಎದ್ದಿದ್ದೇನೆ ನೀವು  ಬಲ್ಲಿರಾ ?

ಪ್ರಪಾತಗಳ ನೂರಾರು ಕಂಡಿರುವೆ
ಕಲ್ಲುಮುಳ್ಳುಗಳ ನೋವು ತಿಳಿದಿರುವೆ
ಸುಖದ ಸುಪ್ಪತ್ತಿಗೆ ಅನುಭವಿಸಿರುವೆ
ಈಗ ನಾನೇ ಬೀಳುವುದು ತರವೆ

ಗಿರಿಶಿಖರಗಳಂತಹ ಆಸೆಗಳಿದ್ದವು ಆಗ
ಪ್ರಕೃತಿ ಸೌಂದರ್ಯಕ್ಕೆ ಮಾರುಹೋದೆ ಈಗ
ಹಸುರಿನ ಬನಸಿರಿಯ ಸುಂದರ  ನೋಟ
ಕಣ್ಣುಗಳಿಗೆ  ಹಬ್ಬದ ರಸದೂಟ

ನಾನಗಿಯೆ ಬೀಳುವ ಪಾಪ ಮಾಡಲ್ಲ
ನರನು ಬೀಳಿಸಿದರೆ ಪುಟಿದೇಳುವೆನಲ್ಲ
ಬೀಳದೇ ಇರೆನು ಎಂಬ ಹುಂಬುತನವಿಲ್ಲ
ಅವನು ಬೀಳಿಸಿದರೆ ಉಳಿವ ಮಾತೇಇಲ್ಲ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*






16 April 2018

ನಂದಾದೀಪ (ಚೌ ಚೌಪದಿ)

*ಚೌ ಚೌ ಪದಿ*

*ನಂದಾದೀಪ*

ನೀರಿಗೆ ನೈದಿಲೆ ಶೃಂಗಾರ
ನೀನೆ ನನ್ನ ಸಂಗೀತ
ನಿನ್ನ ಪ್ರೀತಿಯು ಕ್ಷಿತಿಜದಂತೆ ಅನಂತ
ನನ್ನ ಬಾಳಿಗೆ ನೀನೆ ನಂದಾದೀಪ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

15 April 2018

ಪರಿಸರ ಉಳಿಸೋಣ (ಭಾವಗೀತೆ)

*ಪರಿಸರ ಉಳಿಸೋಣ*

ಮರಗಿಡಗಳ ಬೆಳೆಸೋಣ ನಾವು
ಪರಿಸರವನು ಉಳಿಸೋಣ |ಪ|

ನಾವು ಮಾಡಿದ ಮಲಿನತೊಳೆಯಲು
ನಮ್ಮ ಮುಂದಿನ ಪೀಳಿಗೆ ಉಳಿಸಲು
ಭಗ್ನಗೊಂಡ ಪ್ರಕೃತಿ ಬೆಳೆಸಲು
ಎಲ್ಲ ಜೀವಿಗಳಿಗೆ ಸಮಪಾಲು ನೀಡಲು|೧|

ನಿಲ್ಲಿಸಿ ಮರವ ಕಡಿವುದನಿಂದೆ
ಬೆಳೆಸಿ ಕಾಡನು ಬದುಕಲೆಂದೆ
ಪೋಲು ಮಾಡದಿರಿ ನೀರನ್ನು
ಉಳಿಸಿದ ನೀರು ಗಳಿಕೆಗೆ ಸಮಾನ|೨|

ಆಳಕೆ ಕೊರೆದರು ನೀರೆ ಇಲ್ಲ
ಮೇಳಕೆ ಹಕ್ಕಿಯ ಕಲರವ ಇಲ್ಲ
ಮೈಕಾಸುರನ ಹಾವಳಿ ನಿಂತಿಲ್ಲ
ಪ್ರಾಣಿ ಪಕ್ಷಿಗೆ ಉಳಿಗಾಲ ಇಲ್ಲ|೩|

ಉಸಿರಾಡೋ ಗಾಳಿ ಶುಧ್ದವೆ ಇಲ್ಲ
ವಾಹನ ಕಾರ್ಖಾನೆ ಬೆಳೆದಿವೆಯಲ್ಲ
ರೋಗಕೆ ವಾಯು ಕಾರಣವಾಯಿತಲ್ಲ
ಗಾಳಿಯ ಕೊಳ್ಳುವ ದಿನ‌ದೂರವಿಲ್ಲ|೪|

*ಸಿ.ಜಿ. ವೆಂಕಟೇಶ್ವರ*
*ಗೌರಿಬಿದನೂರು*

10 April 2018

ಚುಟುಕುಗಳು (ಅನ್ನ ,ಅಮರ ಆತ್ಮರು)

ಚುಟುಕುಗಳು

*೧*

*ಅನ್ನ*

ಹಸಿದಿಹ ಹೊಟ್ಟೆಗಳು ಸಾವಿರಾರು
ಕೆಲವರು ಅನ್ನವ ಪೋಲುಮಾಡುವರು
ನೀಡಿ ಉಳಿದ ಅನ್ನವ ಓ ಅಣ್ಣ
ಒಂದು ಹಿಡಿ ಅನ್ನ ಅಮೃತ ಸಮಾನ

*೨*

*ಅಮರ ಆತ್ಮರು*

ಕೊರಗದಿರೋಣ ಪಾಪಿಗಳೆಂದು
ಮರುಗದಿರೋಣ ಕೆಟ್ಟವರೆಂದು
ಏಕೆಂದರೆ  ಅಮರ ಅತ್ಮರು ನಾವು
ತಿಳಿಯಿರಿ  ಅಮೃತ ಪುತ್ರರು ನಾವು


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

09 April 2018

ಹೂಹಕ್ಕಿ ಬಂಧ ( ಹನಿಗವನ)


ಹನಿಗವನ

*ಹೂ ಹಕ್ಕಿ ಬಂಧ*

ಮಧುವನೀರುವೆನು ಪುಷ್ಪದಿಂದ
ರಸವನೀರುವೆನು ಕೊಕ್ಕಿನಿಂದ
ಹೂ ಹಕ್ಕಿ ಬಂಧಕೆ ಕೊನೆಯಿಲ್ಲ
ಪರೋಪಕಾರವ  ಮರೆಯಲ್ಲ
ಮನುಜ ನೀನೇಕೆ ಇದ ತಿಳಿದಿಲ್ಲ
ಮತ್ಸರದಿ ಉರಿಯುತಿರುವೆಯಲ್ಲ

 *ಸಿ.ಜಿ,ವೆಂಕಟೇಶ್ವರ*
*ಗೌರಿಬಿದನೂರು*

ಚೌ ಚೌ ಪದಿ

ಚೌ ಚೌ ಪದಿ

ಮನದ ತಿಳಿಗೊಳ ಕಲಕಿದ ನೀರೆ ನೀನು
ನನ್ನ ಕನಸಿನ    ಚಲುವ ಚಂದ್ರಿಕೆ ನೀನು
ನಿಯಮಗಳೇತಕೆ ನಿನ್ನ ವರ್ಣಿಸಲು?
ನಿನ್ನ ನೆನಪು ಜೀರುಂಡೆಯಂತೆ ಗುಯ್ ಗುಡುತಿದೆ

 *ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


08 April 2018

ಕಸ ಗುಡಿಸುವ ಹೆಂಗಸಿನ ಹಸರೇನು?( ಲೇಖನ)


*ಕಸ ಗುಡಿಸುವ ಹೆಂಗಸಿನ ಹಸರೇನು?*
ಇಂದು‌‌ ಸಮಾಜದಲ್ಲಿ ಜನರ ಹಣ ಆಸ್ತಿ ಪಾಸ್ತಿ ಅವರ ವೇಷಭೂಷಣಗಳನ್ನು ನೋಡಿ ಬೆಲೆ ಕೊಡುವವರ ಸಂಖ್ಯೆ ಜಾಸ್ತಿ ಅದಕ್ಕೆ ಒಂದು ಘಟನೆ ಉದಾಹರಣೆ ನೀಡುವುದಾದರೆ  ಒಮ್ಮೆ ಒಂದು ಪ್ರತಿಷ್ಟಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಒಂದು ಲಿಖಿತ ಕ್ವಿಜ್ ಆಯೋಜನೆ ಮಾಡಲಾಗಿರುತ್ತದೆ ಅದರಲ್ಲಿ ಕೇಳುವ ಎಲ್ಲಾ ಇಪ್ಪತ್ತು ಪ್ರಶ್ನೆಗಳನ್ನು ಸರಿಯಾಗಿ ಉತ್ತರಿಸುವ ವಿದ್ಯಾರ್ಥಿಗಳಿಗೆ  ಈ ಬಾರಿಯ ಅತ್ಯುತ್ತಮ ವಿದ್ಯಾರ್ಥಿ ಎಂದು ಘೋಷಣೆ ಮಾಡಲಾಗುತ್ತದೆ .ಎಲ್ಲಾ ವಿದ್ಯಾರ್ಥಿಗಳು ಬಹಳ ಕಾತರರಾಗಿ ನಿರೀಕ್ಷಿಸಲಾದ ಪರೀಕ್ಷೆ ಆರಂಭವಾಗಿ ಎಲ್ಲರೂ ಉತ್ತಮವಾಗಿ ಬರೆಯುತ್ತಿದ್ದರು ಕೊನೆಯ ಐದು ನಿಮಿಷದಲ್ಲಿ ಗುಸು ಗುಸು ಆರಂಭವಾಯಿತು " ಅದೇ ಆ ಕಪ್ಪು ಹೆಂಗಸು". ಎಂದು ಒಬ್ಬ ಎಂದರೆ "ಐವತ್ತು ವರ್ಷ ವಯಸ್ಸಿರಬಹುದು " ಎಂದ ಮತ್ತೊಬ್ಬ ವಿದ್ಯಾರ್ಥಿ" ಸರ್ ಕೊನೆ ಪ್ರಶ್ನೆ ಅಂಕ ಲೆಕ್ಕಕ್ಕೆ ಇದೆಯೇ? " ಎಂದು ಉಪನ್ಯಾಸಕರನ್ನು ಕೇಳಿದ ಹೌದು ಎಂದರು .ಕೊನೆ ಪ್ರಶ್ನೆ ಈಗಿತ್ತು " ನಿಮ್ಮ ಕೊಠಡಿಗಳನ್ನು ದಿನವೂ ಸ್ವಚಗೊಳಿಸುವ ಹೆಂಗಸಿನ ಹೆಸರೇನು?*" ಈ ಪ್ರಶ್ನೆ ಗೆ ಯಾರೂ ಸರಿಯಾಗಿ ಉತ್ತರ ನೀಡಲಿಲ್ಲ .
ನಮ್ಮ ಅಕ್ಕ ಪಕ್ಕದಲ್ಲಿ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಹಲವಾರು ಜನ ಕೆಲಸ ಮಾಡುತ್ತಾರೆ ಪ್ರತಿ ಕೆಲಸ ಅದರದೇ ಆದ ಘನತೆ ಹೊಂದಿರುತ್ತವೆ ನಮಗಾಗಿ ಯಾವುದೇ ಕೆಲಸ ಮಾಡುವ  ಅವರ ಹೆಸರು‌ ತಿಳಿದಿದ್ದರೆ ಒಳ್ಳೆಯ ದಲ್ಲವೆ  ಕನಿಷ್ಠ ಅವರ ಸೇವೆಗೆ ಒಂದು ಧನ್ಯವಾದ ಅರ್ಪಿಸಿ ಅವರಲ್ಲಿ ಕಾಣುವ ಆನಂದ ಗಮನಿಸಿ .


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಹಲ್ಲು ಸೆಟ್ (ಹನಿಗವನ)

ಹನಿಗವನ

*ಹಲ್ಲು ಸೆಟ್*

ಚಿಂತಿಸದಿರು ನಲ್ಲೆ
ಆತುರಪಡದಿರು ಹೀಗೆ
ಖಂಡಿತ ನಿನ್ನ ಮೊಗದಲಿ
ನಗು ತರಿಸುವೆನು
ಶೀಘ್ರದಲ್ಲೇ ಕೊಡಿಸುವೆನು
ನಿನಗೆ ಹಲ್ಲು ಸೆಟ್ಟನು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

06 April 2018

ಹನಿಗವನಗಳು (ಚಂಚಲ)


*೧*

*ಅಧಿಕಾರ*

ಇದು ಚುನಾವಣೆ ಕಾಲ
ಜಿಗಿತವೀರರಿಗೆ ಸಕಾಲ
ಮನವಾಗಿದೆ  ಚಂಚಲ
ಒಮ್ಮೆ ಬೇಕು ಕಮಲ
ಮತ್ತೊಮ್ಮೆ ಚೆಂದ ದಳ
ನೆಪಮಾತ್ರ  ಕರಕಮಲದಳ
ಇವರಿಗೆ ಹಣ ಅಧಿಕಾರ ಸಕಲ

*೨*

*ಮುಂದಿನ ಸಲ*

ಯಾರಿಗೆ ಮತ ಹಾಕಲಿ
ಯಾರನ್ನು ಆರಿಸಲಿ
ಮತದಾರನ ಮನವಾಗಿದೆ ಚಂಚಲ
ಸೇವೆ ಮಾಡುವವರು ಬೇಕಿಲ್ಲ
ಒಳ್ಳೆಯ ಪ್ರತಿನಿಧಿ  ಬೇಕಿಲ್ಲ
ಕೊಟ್ಟರೆ ಸಾಕು ಹಣ ತುಂಬಿದ ಕೈಚೀಲ
ಮತ ಮಾರಿಕೊಂಡು
ಬೈಯ್ದುಕೊಳ್ಳುವನು
ನೋಡಿಕೊಳ್ಳುವೆನು   ಮುಂದಿನ ಸಲ
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

05 April 2018

ಹನಿಗವನಗಳು (ಬಂಗಾರ)


*ಹನಿಗವನಗಳು*

*೧*

      *ಏರುಪೇರು*

ನನ್ನವಳು ಅಪ್ಬಟ
ಬಂಗಾರ ಅವಳ
ಪ್ರೀತಿ ಕೆಲವೊಮ್ಮೆ
ಅತಿಯಾಗಿರುತ್ತದೆ
ಕೆಲವೊಮ್ಮೆ ಕೋಪ
ತಾರಕ್ಕೇರುತ್ತಿರುತ್ತದೆ
ಕಾರಣ
ಬಂಗಾರದ ಬೆಲೆ ಯಾವಾಗಲೂ
ಏರುಪೇರಾಗುತ್ತಿರುತ್ತದೆ

*೨*

*ಮೆರೆದಾಡುತ್ತಿವೆ*

ಬಂಗಾರ ಬೆಳ್ಳಿ ವಜ್ರ
ಗಣಿಗಳಲ್ಲಿ ಖಾಲಿಯಾಗುತ್ತಿವೆ
ಹುಡುಕಲು ಹೊರಟರೆ
ಭಾರತೀಯ ನಾರಿಯರ
ಮೈಮೇಲೆ ಮೆರೆದಾಡುತ್ತಿವೆ


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

04 April 2018

ಹನಿಗವನಗಳು

ಹನಿಗವನಗಳು

*೧*

*ಗುರುತು*

ನನ್ನವಳು ಸನಿಹವಿದ್ದರೆ
ನನಗೆ ಆನೆ ಬಲ
ಇವಳ ಗುರುತು
ಹಿಡಿಯಲಾರೆ ನಿಂತರೆ
ಆನೆಯ ಎಡ ಬಲ

*೨*

*ಗಜ*

ಪ್ರಿಯೆ
ನೀ ಸನಿಹ ಇದ್ದರೆ
ಮರೆಯುವೆನು
ಜಗ
ಅಲ್ಲಲ್ಲ
ಗಜ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

03 April 2018

*ಬೆಕ್ಕು ಇರಬೇಕು?* (ಕವಿಬಳಗ ವಾಟ್ಸಪ್ ಗುಂಪಿನ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದ ಕಥೆ



*ಬೆಕ್ಕು ಇರಬೇಕು?* (ಕವಿಬಳಗ ವಾಟ್ಸಪ್ ಗುಂಪಿನ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದ ಕಥೆ)



"ಬೆಳಿಗ್ಗೆ ಉಪ್ಪಿಟ್ಟು ತಿಂದಿರೋದು ಈಗಲೂ ಹೊಟ್ಟೆ ಗುಡ ಗುಡ ಅನ್ತಾ ಇದೆ ಅದೇನು ಮನುಷ್ಯ ರು ತಿನ್ನೋ ತರ ಇತ್ತೆ ದನನೂ ತಿನ್ನತಿರಲಿಲ್ಲ " ಎಂದು ಪರಮೇಶಿ ಒಂದೇ ಸಮನೆ ಹೆಂಡತಿಯನ್ನು ಇಳಿಹೊತ್ತಿನಲ್ಲೂ ಏರುಭಾಷೆಯಲ್ಲಿ ಬೈಯುವದನ್ನು ಅರ್ದಕ್ಕೆ ತಡೆದ ಅರ್ದಾಂಗಿ "ಅದಕ್ಕೆ ಏನೋ ಎರಡು ತಟ್ಟೆ ಚೆನ್ನಾಗಿ ಕತ್ಕರಿಸಿದ್ದು" ಎಂದು ಖಾರವಾಗಿಯೇ ನುಡಿದಳು.

 ಇವರಿಬ್ಬರ ಸಂಭಾಷಣೆ ಕೇಳುತ್ತಾ ಕೆಲವೊಮ್ಮೆ ನಗುಬಂದರೂ ತಡೆದು ಕೆಲವೊಮ್ಮೆ ಬೇಸರವಾಗಿ ಮಗ ಸತೀಶ್ ಹೋಮ್ ವರ್ಕ್ ಮಾಡುವಲ್ಲಿ ತಲ್ಲೀನವಾಗಿದ್ದ
ಬರ ಬರ ಬಂದ ಸುಲೋಚನ ಗಂಡನ ಮುಂದೆ ಕಾಫಿಯ ಕಪ್ಪು ಕುಕ್ಕಿ ಹೊರಟು ಹೋದಳು ಕಾಪಿಯ ಒಂದು ಗುಕ್ಕು ಸೊರ್ ಎಂದು ಎಳೆಯುತ್ತಲೇ"ಅದೇನ್ ಎಮ್ಮೆ ಸೊರ್ ಸೊರ್ ಅಂದಂಗೆ ಕಾಪಿ ಕುಡಿಯೋದು ನೀನು ಕಾಪಿ ಕುಡಿಯೋದು  ಪಕ್ಷದ ಮನೆಗೆ ಕೇಳುತ್ತೆ" ಅಂದಿದ್ದೆ ತಡ "ಏ ಮುಚ್ಚೆ ಬಾಯಿ ತಲೆ ಎಲ್ಲಾ ಮಾತಾಡ್ತಾಳೆ ನೆಟ್ಟಗೆ ಕಾಪಿ ಮಾಡೋಕೆ ಬರಲ್ಲ ಕುಡುದ್ ನೋಡೆ ಕಾಪಿಯಾ" ಎಂದು ಪರಮೇಶ್ ರೇಗಿದ

ತನ್ನ ತಪ್ಪಿನ ಅರಿವಾದರೂ ಸಮರ್ಥಿಸುತ್ತಾ
"ಅಯ್ಯೋ ಪಕ್ಷದ ಮನೆ ತಿಮ್ಮಣ್ಣಗೆ ಮೂವತ್ತು  ವರ್ಷಕ್ಕೆ ಶುಗರ್ ಬಂದೈತಂತೆ ಅದಕ್ಕೆ ಸಕ್ಕರೆ ಕಡಿಮೆ ಹಾಕಿದ್ದೇನೆ" ಎಂದಳು "ಏ ಸಕ್ಕರೆನೇ ಹಾಕಿಲ್ಲ ವಾದ ಮಾಡ್ತಿಯಾ ಇದನ್ನೇ ಕಲಿಸಿರೋದು ನಿಮ್ಮ ಅಪ್ಪ ಅಮ್ಮ" ಎಂದ ತಕ್ಣಣ ಸುಲೋಚನ ಉಗ್ರ ರೂಪ ತಾಳಿ

"ನಮ್ಮ ಅಪ್ಪ ಅಮ್ಮ ನ ಬಗ್ಗೆ ಮಾತಾಡ್ಬೇಡಿ ಹೊಸದಾಗಿ ಮದುವೆ ಆಗಿ ಅಡುಗೆ ಮಾಡಿದಾಗ ಉಪ್ಪು ಇಲ್ಲದಿದ್ದರೂ ಒಹೋ ಸೂಪರ್ ಚಿನ್ನು ಎಂದು ಚಪ್ಪರಿಸ್ಕೊಂಡು ತಿಂದಿದ್ದರಿ. ಇಬ್ಬರಿಗೆ ಎರಡು ಲೋಟ ಸಾಂಬರ್ ಗೆ ಅರ್ದಲೋಟ ಖಾರ ಹಾಕಿದ್ದರೂ ಎಲ್ಲಾ ಕಡೆ ಉರಿ ಕಿತ್ತುಕೊಂಡು ಬಂದು ಕಣ್ಣಲ್ಲಿ ನೀರು ಬಂದರೂ ಬಂಗಾರ ಈ ಸಾರು ನಿನ್ನಷ್ಟೆ ಸಿಹಿ ಇದೆ ಎಂದು ಬಂಡಲ್ ಬಿಟ್ಟು  ತಿನ್ತಾ ಇದ್ರಿ ಈಗ ನನಗೆ ಅಡುಗೆ ಮಾಡ ಕ್ಕೆ ಬರಲ್ಲ ಅಂತೀರಾ" ಎಂದು ಹೇಳುತ್ತಲೆ "ಹೌದು ಕಣೇ ನಿನ್ನ ಪಾಕ ಪಾಂಡಿತ್ಯ ನನಗೆ ಗೊತ್ತಿಲ್ವೆ ?ಮದುವೆಯಾದ ಹೊಸದರಲ್ಲಿ ಉಪ್ಪಿಟ್ಟು ಮಾಡಲು ಹೋಗಿ ಅರ್ದ ಕೆ.ಜಿ ರವೆಗೆ ಕಾಲ್ ಕೆ.ಜಿ.ಉಪ್ಪು ಹಾಕಿ ಉಪ್ಪಿಟ್ಟು ಅಂದರೆ ಉಪ್ಪಿಂದ ಮಾಡೋದು ಅನ್ನೋ ನಿನ್ನ ಜನರಲ್ ನಾಲೆಡ್ಜ್ ನನಗೆ ಗೊತ್ತಿಲ್ಲವೆ" ಒಹೋ ಬಂದು ಬಿಟ್ಟಳು ಹೇಳೋಕೆ ಎಂದ
ಕೋಣೆಯಲ್ಲಿ ಇದೆಲ್ಲಾ ಕೇಳಿಸಿಕೊಂಡ ಪರಮೇಶಿ ತಾಯಿ "ಸಾಕು ಸುಮ್ಮನಿರಿ ಅಕ್ಕ ಪಕ್ಕದೋರು ಕೇಳಿಸಿಕೊಂಡರೆ ನಗಲ್ವೆ ಎಂದು ಪರಮೇಶಿ ಮುಂದಿದ್ದ ಆರಿದ ಕಾಫಿಗೆ ಸ್ವಲ್ಪ ಸಕ್ಕರೆ ಹಾಕಿ ಬಿಸಿ ಮಾಡಿ ಕೊಟ್ಟಳು ಸೊಸೆಗೂ ನೀಡಿದಳು ತಾನೂ ಕುಡಿದು ರೂಮ್ ಗೆ ಹೋದಳು .

"ಎನೇ ಅದು ಎಡ ಕೈಯಲ್ಲಿ ಕಪ್ಪನೆ ಕಲೆ" ಎಂದು ಸಂಜೆ ಏನೂ ಅಗಿಲ್ಲವೇನೋ ಎಂಬಂತೆ ರಾತ್ರಿ ಹತ್ತಕ್ಕೆ ಗಂಡ ಕೇಳಿದರೂ ಹೆಂಡತಿ ಮುಖ ತಿರುಗಿಸಿ ಸುಮ್ಮನಿದ್ದಳು ಅವನೆ ಹತ್ತಿರ ಹೋಗಿ ನೋಡಿದರೆ ಚಿಕ್ಕ ಸುಟ್ಟಗಾಯ ಕೂಡಲೆ ಆಯಿಂಟ್ಮೆಂಟ್ ಹಚ್ಚಲು ಕೈ ಸೋಕಿದಾಗ ಎಷ್ಟೋ ಬಾರಿ ಮುಟ್ಟಿದ್ದರೂ ಇಂದು ಸಹ ಪರಮೇಶಿಗೆ ಅದೇ ರೋಮಾಂಚಕಾರಿ ಅನುಭವ .
ಪಕ್ಕದ ಕೋಣೆಯಲ್ಲಿ ಮಲಗಿದ್ದ ಅಜ್ಜಿಗೆ ಮೊಮ್ಮಗ ಕೇಳಿದ "ಅಜ್ಜಿ ಅಪ್ಪನ ರೂಮಲ್ಲಿ ಏನದು ಶಬ್ದ"
"ಎ ಏನು ಇಲ್ಲ ಬೆಕ್ಕು ಇರಬೇಕು ಮಲ್ಕೋ" ಎಂದು ಅಜ್ಜಿ ಮಗುವನ್ನು ತಟ್ಟಿ ಮಲಗಿಸಿದಳು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಗಣಪ (ಹನಿಗವನ) ಕವಿಬಳಗ ವಾಟ್ಸಪ್ ಗುಂಪಿನ ಸ್ಪರ್ಧೆಯಲ್ಲಿ ನಾಲ್ಕನೆಯ ಬಹುಮಾನ ಲಭಿಸಿದ ಹನಿಗವನ


*ಗಣಪ*

ಮರದಲಿರುವ ಗಣಪನು
ಕಾಯುತಿಹನು ಮರವನು
ಮರಕಟುಕರ ತಡೆಯುವನು
ಪರಿಸರವನು ಉಳಿಸುವನು
ವಿಘ್ನವಿನಾಶಕನು   ಅವನು
ಈ ವೃಕ್ಷವನ್ನು  ರಕ್ಷಿಸುತಿಹನು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

02 April 2018

*ಗಜ಼ಲ್ ೩೭ (ನಿಲ್ಲಲ್ಲ)* ಕನ್ನಡ ಸಾಹಿತ್ಯ ಲೋಕ ವಾಟ್ಸಪ್ ಗುಂಪಿನ ಸ್ಪರ್ಧೆಯಲ್ಲಿ ಅತ್ಯುತ್ತಮ ಬಹುಮಾನ ಪುರಸ್ಕಾರ ಲಭಿಸಿದ ಗಜ಼ಲ್



*ಗಜ಼ಲ್ ೩೭*
ಯಾರೇ ತಡೆದರೂ ಸಾಗರದ ಅಪ್ಪಳಿಸುವ  ಅಲೆಗಳು ನಿಲ್ಲಲ್ಲ
ಸಮಯ ಓಡುತಿದೆ ಗಡಿಯಾರದ ಮುಳ್ಳುಗಳು ನಿಲ್ಲಲ್ಲ

ವರ್ತಮಾನದಿ ನಿಂತು ಗತದ ಸುವರ್ಣ ಯುಗ ಸ್ಮರಣೆ
ಮೊಗೆದಷ್ಟು ಉಕ್ಕುವ ಮಧುರ ಸವಿಗನಸುಗಳು  ನಿಲ್ಲಲ್ಲ

ಸಮುದ್ರ ದಂಡೆಯಲಿ ಅವಳ  ಸೌಂದರ್ಯದ ತೇರು
ಅವಳಧರದ ಮಧುಪಾನಪಾತ್ರೆಯ  ಅಮಲುಗಳು ನಿಲ್ಲಲ್ಲ

ಕೊಚ್ಚಿಹೊಯಿತು ಮರಳ ರಾಶಿಯ  ಒಲವಿನ ಮನೆ
ನಾರಿಕೇಳ ಕಲ್ಪವೃಕ್ಷದ ಕೆಳಗೆ ಕಳೆದ  ನೆನಪುಗಳು ನಿಲ್ಲಲ್ಲ

ಎಷ್ಟೋ ಸೂರ್ಯೋದಯ ಸೂರ್ಯಾಸ್ತ ಕಳೆದುಹೋದವು
ಸೀಜೀವಿಗೆ ಅವಳ   ಸಂಧಿಸುವ ಕನವರಿಕೆಗಳು ನಿಲ್ಲಲ್ಲ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಹನಿಗವನಗಳು *ಮೌನ*


*ಹನಿಗವನಗಳು*
*೧*
*ಪ್ರಶ್ನೆಗಳು*
ವಾರದಿಂದ ಮೌನವ್ರತ
ಆಚರಿಸುತ್ತಿದ್ದ  ನನ್ನವಳಿಗೆ
ಬಂಗಾರದ ಬೆಲೆ ಕಡಿಮೆ
ಆಯಿತಂತೆ ಎಂದೆ
ಎಲ್ಲಿ‌? ಯಾವಾಗ ?
ಯಾವ ಅಂಗಡಿ?
ಪ್ರಶ್ನೆಗಳ ಸರಮಾಲೆಯನ್ನೆ
ಹಾಕಿದಳು ನನ್ನ ಮುಂದೆ
*೨*
ಕಾಗೇಬಂಗಾರ
ಮಾತು ಬೆಳ್ಳಿ
ಮೌನ ಬಂಗಾರ
ಅತಿಮಾತು?
ಕಾಗೇಬಂಗಾರ
ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು

01 April 2018

*ನಡೆದಾಡುವ ದೇವರಿಗೆ ನುಡಿ ನಮನಗಳು*

*ನಡೆದಾಡುವ ದೇವರಿಗೆ ನುಡಿ  ನಮನಗಳು*

*೧*

ಇಂದು ಶಿವಕುಮಾರ ಸ್ವಾಮಿಗಳ
ನೂರಾ ಹನ್ನೊಂದನೇ ಜನ್ಮದಿನ
ನಾವೆಲ್ಲರೂ  ಅವರಂತೆ ಜೀವಿಸಲು
ಪ್ರಯತ್ನ ಮಾಡೋಣ ಅನುದಿನ

*೨*

ನಡೆದಾಡುವ ದೇವರಿಗೆ
ನೂರಾ ಹನ್ನೊಂದನೇ 
ಹುಟ್ಟು ಹಬ್ಬದ ಸಂಭ್ರಮ
ನಾವೆಲ್ಲರೂ ಪಾಲಿಸೋಣ
ಅವರ ನೀತಿ ನೇಮ

*ಸಿ.ಜಿ..ವೆಂಕಟೇಶ್ವರ*
*ಗೌರಿಬಿದನೂರು*

*ಉಕ್ಕಿನ ಮನುಷ್ಯ* (ಸರದಾರ್ ವಲ್ಲಭ ಬಾಯ್ ಪಟೇಲ್ ರವರಿಗೆ ನುಡಿನಮನ)

*ಉಕ್ಕಿನ ಮನುಷ್ಯ*
(ಸರದಾರ್ ವಲ್ಲಭ ಬಾಯ್ ಪಟೇಲ್ ರವರಿಗೆ ನುಡಿನಮನ)

ಇವರೇ ನಮ್ಮ ಉಕ್ಕಿನ ಮನುಷ್ಯ
ಬರೆದರು  ನವಭಾರತದ ಭವಿಷ್ಯ
ಸಾರಿದರು ಏಕತೆಯ ಮಂತ್ರ
ಪಾಲಿಸಿದರು ರಾಷ್ಟ್ರೀಯತೆ ತಂತ್ರ

ದೇಶದ ಮೊದಲ ಉಪಪ್ರಧಾನಿ
ಆಡಳಿತದಲ್ಲಿ ದೊಡ್ದ ದಣಿ
ಮಾಡಿದರು ದೇಶದ ಏಕೀಕರಣ
ಮಾಡಲಿಲ್ಲ ಕೀಳು ರಾಜಕಾರಣ

ಬಾರ್ಡೋಲಿ ಸತ್ಯಾಗ್ರಹ ರೂವಾರಿ
ಸ್ವಾತಂತ್ರ್ಯ ಕ್ಕೆ ಬಾರಸಿದರು ರಣಭೇರಿ
ಸರಳ ಸಜ್ಜನ ಶಿಸ್ತಿನ ಸಿಪಾಯಿ  ನೀವು
ನಿಮ್ಮ ಆದರ್ಶ ಪಾಲಿಸುವೆವು ನಾವು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*