10 May 2024

ಮರೆಯಲಾಗದ ಎಲಿಪೆಂಟಾ ಬೀಚ್ ನ ಪ್ಯಾರಾ ಸೈಲಿಂಗ್

 



ಅಂಡಮಾನ್11


ಮರೆಯಲಾಗದ ಎಲಿಪೆಂಟಾ ಬೀಚ್  ನ ಪ್ಯಾರಾ ಸೈಲಿಂಗ್ 


ನನ್ನ ಜೀವನದಲ್ಲಿ ಮೊದಲ ಬಾರಿಗೆ ಪ್ಯಾರಾ ಸೈಲಿಂಗ್ ಮಾಡಿದ ಅನುಭವ ನನಗೆ  ಬಹಳ ಮುದ ನೀಡಿತು.ಅದರ ಜೊತೆಯಲ್ಲಿ ಜೆಟ್ ಸ್ಕಿ, ಬನಾನಾ  ರೈಡ್ ,ಸ್ನಾರ್ಕಲಿಂಗ್ ಮುಂತಾದ ಜಲ ಕ್ರೀಡೆಗಳಲ್ಲಿ ಮೈಮರೆತ ದಿನವೆಂದರೆ  ಅಂಡಮಾನ್ ನ ಎಲಿಫೆಂಟಾ ಬೀಚ್ ಗೆ ಬೇಟಿ ನೀಡಿದ ದಿನ.

ಸ್ವರಾಜ್ ದ್ವೀಪ್ ನಿಂದ ಜೆಟ್ಟಿಯಲ್ಲಿ  ಸಾವಿರ ರೂಗಳ ಟಿಕೆಟ್ ಪಡೆದು ಬೋಟ್ ಮೂಲಕ ಸುಮಾರು ಇಪ್ಪತ್ತು ನಿಮಿಷಗಳ ಮತ್ತೊಂದು ಸೀ ಜರ್ನಿಗೆ ನಾವು ಸಾಕ್ಷಿಯಾದೆವು.ಎಂದಿನಂತೆ ಸಮುದ್ರದ ಸೌಂದರ್ಯ ನಮ್ಮನ್ನು ಮೂಕವಾಗಿಸಿದರೂ ಕ್ಯಾಮರಾಗಳು ಮಾತ್ರ  ಪಟ ಪಟ   ಸದ್ದು ಮಾಡುತ್ತಾ ದೃಶ್ಯಗಳ ಸೆರೆಹಿಡಿಯುವಲ್ಲಿ ಬ್ಯುಸಿಯಾಗಿದ್ದವು.


ಹ್ಯಾವ್ಲಾಕ್ ದ್ವೀಪದಲ್ಲಿರುವ ಎಲಿಫೆಂಟಾ ಬೀಚ್ ಅಂಡಮಾನ್ ದ್ವೀಪಗಳಲ್ಲಿನ ಅತ್ಯಂತ ವಿಶಿಷ್ಟವಾದ ಕಡಲತೀರಗಳಲ್ಲಿ ಒಂದಾಗಿದೆ. ಇದು ನೀರಿನ ಚಟುವಟಿಕೆಗೆ ಹೆಸರುವಾಸಿಯಾದ ಬೆರಗುಗೊಳಿಸುವ ಬೀಚ್ ಆಗಿದೆ. ಎಲಿಫೆಂಟಾ  ಬೀಚ್ ಅಂಡಮಾನ್ ದ್ವೀಪಸಮೂಹದಲ್ಲಿ ಅತಿ ಹೆಚ್ಚು ಭೇಟಿ ನೀಡುವ ಬೀಚ್ ಆಗಿದೆ. ಒಂದಾನೊಂದು ಕಾಲದಲ್ಲಿ ಈ ದ್ವೀಪದಲ್ಲಿ ಆನೆಗಳು ಇದ್ದವಂತೆ  ಅವುಗಳು ಕಡಲತೀರದ ತೀರದಲ್ಲಿ ತಿರುಗಾಡುತ್ತಿದ್ದವಂತೆ  ಆದ್ದರಿಂದ ಈ    ಕಡಲತೀರಕ್ಕೆ ಅದರ ಹೆಸರು ಬಂದಿದೆ. ಆದರೆ ನಾವು ಹೋದಾಗ ಅಲ್ಲಿ ಒಂದೂ ಆನೆ ಕಂಡುಬರಲಿಲ್ಲ.ಅದರ ಬದಲಾಗಿ ಮಳೆರಾಯ ನಮ್ಮನ್ನು ಸ್ವಾಗತಿಸಿದ! ಮುರ್ನಾಲ್ಕು ದಿನ ಬಿಸಿಯಿಂದ ಬಸವಳಿದ ನಾವು ವರ್ಷಾಧಾರೆಗೆ ಸಂತಸ ವ್ಯಕ್ತಪಡಿಸುತ್ತಾ ಸಮುದ್ರದ ಆಟಗಳನ್ನು ಆಡಲು ಇದು ಪೂರ್ವ ಸಿದ್ದತೆ ಎಂದು ಭಾವಿಸಿ ಎಂಜಾಯ್ ಮಾಡಿದೆವು. ವರುಣದೇವ ಕೃಪೆ ಮಾಡಿದ ಪರಿಣಾಮ ಮೊದಲು ನಮ್ಮೆಲ್ಲಾ ಸಹ ಪ್ರವಾಸಿಗರು ಬೋಟ್ ಕಂಪನಿಯವರು ನೀಡಿದ ಕಾಂಪ್ಲಿಮೆಂಟರಿ  ಸ್ನಾರ್ಕಲಿಂಗ್ ಮಾಡಲು ಸಿದ್ದರಾಗಿದ್ದೆವು.ಸ್ನಾರ್ಕಲಿಂಗ್ ಎಂದರೆ ನಮ್ಮ ಮುಖದ ಭಾಗಕ್ಕೆ ಹೆಲ್ಮೆಟ್ ರೀತಿಯಲ್ಲಿ ಕಾಣುವ ಟ್ರಾನ್ಸ್ಪರೆಂಟ್  ಸಾಧನ ಅಳವಡಿಸಿ ನುರಿತ ಮುಳುಗುಕಾರರು ನಮ್ಮನ್ನು ಸಮುದ್ರದ ಒಳಭಾಗ ತೋರಿಸುವ ಒಂದು ಜಲ ಕ್ರೀಡೆ. ಇದು  ಎಲ್ಲಾ ವಯೋಮಾನದವರು ಮಾಡಬಹುದಾದ ಜಲ ಕ್ರೀಡಾ ಚಟುವಟಿಕೆ. ನಾನೂ ಕೂಡಾ ಸ್ನಾರ್ಕಲಿಂಗ್ ಮಾಡಿದೆ ಸಾಗರದ ಆಳದ ಜಲಜೀವಿಗಳ ದರ್ಶನವಾಯಿತು  ಆದರೆ ಈ ಮೊದಲೇ ಸೀ ವಾಕಿಂಗ್ ಮಾಡಿದ ನನಗೆ ಇದೇನು ಅಷ್ಟು ಖುಷಿ ನೀಡಲಿಲ್ಲ.


ಮತ್ತೆ ಸಮುದ್ರದ ದಂಡೆಗೆ ಬಂದಾಗ ಒಣಗಿದ ದೊಡ್ಡದಾದ ಮರಗಳ ದಿಮ್ಮಿಗಳು ಕಂಡು ಅಚ್ಚರಿಯಿಂದ ವಿಚಾರಿಸಿದಾಗ 

 ಇವುಗಳು 2004 ರಲ್ಲಿ ದ್ವೀಪಕ್ಕೆ ಅಪ್ಪಳಿಸಿದ ಸುನಾಮಿಯ  ಅಲೆಗಳ ಹೊಡೆತಕ್ಕೆ ಸಿಲುಕಿ ಧರೆಗುರುಳಿದ ಮರದ  ಅವಶೇಷಗಳಾಗಿವೆ ಎಂಬ ಮಾಹಿತಿ ಲಭ್ಯವಾಯಿತು.

ಮತ್ತೆ ಹಸಿರು ನೀರಿನೆಡೆಗೆ ಹೊರಟ ನಾನು ವಿವಿಧ ಜಲ ಸಾಹಸ ಕ್ರೀಡೆಯಲ್ಲಿ ಭಾಗವಹಿಸಲು ಸಿದ್ದನಾದೆ.ಚಲನಚಿತ್ರಗಳಲ್ಲಿ ಹೀರೋಗಳು ನೀರಿನ ಮೇಲೆ ಬೈಕ್ ಓಡಿಸುವ ಸಾಹಸ ನೋಡಿ ವಾವ್ .. ಎಂದಿದ್ದ ನಾನು ಅಂದು ಜೆಟ್ ಸ್ಕಿ ಯಲ್ಲಿ ವ್ರೂಂ ವ್ರೂಂ ಎಂದು ಎಕ್ಸಿಲೇಟರ್ ನೀಡಲು ಸಿದ್ದನಾಗಿದ್ದೆ.ಆದರೆ ನನ್ನ ಆಸೆಯನ್ನು ನಮ್ಮ ಜಲ ಮಾರ್ಗದರ್ಶಕ ಪೂರಾ ಈಡೇರಿಸದಿದ್ದರೂ ಕೊನೆಯಲ್ಲಿ ಒಂದು ರೌಂಡ್ ನನ್ನ ಕೈಗೆ ಕೊಟ್ಟಾಗ ಮೊದಲು ಸೈಕಲ್ ಹೊಡೆದ, ಮೊದಲ ಬಾರಿಗೆ ಬೈಕ್ ಹೊಡೆದ, ಮೊದಲ ಬಾರಿಗೆ ಕಾರ್ ಚಲಾಯಿಸಿದ ಆನಂದ ಅನುಭವಿಸಿದೆ.ನನ್ನ ಈ ಸಾಹಸವನ್ನು ದಡದಿಂದ  ಜಲ ಆಟದ ನಿರ್ವಾಹಕರು  ಪೋಟೋ ಮತ್ತು ವೀಡಿಯೋ ಮೂಲಕ ಸೆರೆಹಿಡಿದಿದ್ದರು.ಈಗಲೂ ಆಗಾಗ್ಗೆ ಆ ವೀಡಿಯೋ ಮತ್ತು ಪೋಟೋ ನೋಡಿ ಪುಳಕಿತಗೊಳ್ಳುತ್ತೇನೆ.


ಜೆಟ್ ಸ್ಕಿ ಗುಂಗಿನಿಂದ ಹೊರಬಂದು ಸಮುದ್ರದ ಇನ್ನಿತರ ಕ್ರೀಡೆಗಳಾದ 90 ಡಿಗ್ರಿ ಕಪಲ್ ಡ್ರೈವ್, ಬನಾನ ರೈಡ್, ಆಕ್ಟೋಪಸ್ ರೈಡ್ , ಹೀಗೆ ಜಲ ಕ್ರೀಡೆಯಲ್ಲಿ ಮಗ್ನನಾಗಿ ಬಿಟ್ಟಿದ್ದೆ.

ಸಾಗರದ ಮೇಲಿನ ಆಗಸದಲ್ಲಿ ತೇಲುವ ಪ್ಯಾರಾಚ್ಯೂಟ್ ನೋಡಿ ನಾನೂ ಪ್ಯಾರಾ ಸೈಲಿಂಗ್ ಮಾಡಲು ಸಿದ್ದನಾದೆ. ಬೆಲೆ ಕೇಳಿ ಮೊದಲು ಸ್ವಲ್ಪ ಹಿಂಜರಿದರೂ ಮತ್ತೆ ಮನಸ್ಸು ಮಾಡಿ ಪ್ಯಾರಾಗ್ಲೈಡಿಂಗ್ ಮಾಡಲು ಹೊರಟೆ. ನನ್ನ ಸಹಪ್ರವಾಸಿಗರು ಕೆಲವರು ಈ ಕ್ರೀಡೆಯಲ್ಲಿ ಭಾಗವಹಿಸಲು ಆಸೆ ವ್ಯಕ್ತಪಡಿಸಿ ದುಬಾರಿ ಹಣ ತೆರಲು ಅಂದರೆ ಮೂರೂವರೆ ಸಾವಿರ ರೂಪಾಯಿ ಪಾವತಿಸಲು ಸಿದ್ದವಿದ್ದರೂ ಅವರ ವಯಸ್ಸು ಮತ್ತು ಆರೋಗ್ಯದ ಕಾರಣ ಹೇಳಿ ಅನುಮತಿ ನಿರಾಕರಿಸಿದರು. ನೀವೂ ಸಹ ಇಂತಹ ಸಾಹಸ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಆಸೆಯಿದ್ದರೆ ನಿಮ್ಮ ವಯಸ್ಸು  ಐವತ್ತರ ಒಳಗಿದ್ದಾಗಲೇ  ಮಾಡಿ ಬಿಡಿ.


ಪ್ಯಾರಾಸೈಲಿಂಗ್ ಅನ್ನು ಪ್ಯಾರಾಸೆಂಡಿಂಗ್, ಪ್ಯಾರಾಸ್ಕಿಯಿಂಗ್ ಅಥವಾ ಪ್ಯಾರಾಕೈಟಿಂಗ್ ಎಂದೂ ಕರೆಯುತ್ತಾರೆ. ಇದು ಜಲಮನರಂಜನಾ  ಚಟುವಟಿಕೆಯಾಗಿದ್ದು ಪ್ಯಾರಾಸೈಲ್ ವಿಂಗ್ ಎಂದು ಕರೆಯಲ್ಪಡುವ ಧುಮುಕುಕೊಡೆಯನ್ನು ಹೋಲುವ ವಿಶೇಷವಾಗಿ ವಿನ್ಯಾಸಗೊಳಿಸಿದ ಮೇಲಾವರಣ ರೆಕ್ಕೆಗೆ ಲಗತ್ತಿಸಿ ಯಂತ್ರ ಚಾಲಿತವಾದ  ದೋಣಿಯ  ಹಿಂದೆ ವ್ಯಕ್ತಿಯನ್ನು ಎಳೆಯಲಾಗುತ್ತದೆ . 

ಮೊದಲು ನಾನು ಅವರ ದೋಣಿ ಏರಿ ಸಮುದ್ರ ತೀರದಿಂದ ಎರಡು ಕಿಲೋಮೀಟರ್ ಆಳ ಸಮುದ್ರದ ಕಡೆ ಹೊರಟೆ. ಅಲ್ಲಿ ಪ್ಯಾರಾ ಸೈಲಿಂಗ್ ತಂಡ ನನಗಾಗಿ ಕಾದಿತ್ತು. ವಿಶೇಷವಾದ ವಿನ್ಯಾಸದ ದೊಡ್ಡ ಕೊಡೆಗೆ ಕೆಳಗಿನಿಂದ ನನ್ನ ಬಂಧಿಸಿ ನಿಧಾನವಾಗಿ ದೋಣಿ ಚಲಿಸಲು ಆರಂಭಿಸಿದರು. ನಾನು ದೋಣಿಯಿಂದ ಬೇರ್ಪಟ್ಟು ಕ್ರಮೇಣವಾಗಿ ನೀರಿನ ಮೇಲಿನ ಆಗಸದ ಕಡೆ  ಮೇಲಕ್ಕೆ ಮೇಲಕ್ಕೆ ಚಲಿಸುತ್ತಿದ್ದೆ.ಕೆಳಗಿನ ಹಸಿರಾದ ಸಾಗರ ,ದೂರದಲ್ಲಿ ಕಾಣುವ ಸ್ವರಾಜ್ ದ್ವೀಪ, ಅನತಿದೂರದಲ್ಲಿ  ಅತಿ ಚಿಕ್ಕದಾಗಿ ಕಾಣುವ ಜನರು ಕಂಡು ಬಹಳ ಸಂತಸ ಪಟ್ಟೆ. ಯಂತ್ರಚಾಲಿತ ದೋಣಿ ಸಾಗುತ್ತಲೇ ಇತ್ತು ನಾನು ಮೇಲೇರುತ್ತಲೇ ಇದ್ದೆ. ಅಂದು ನಾನು ಗರಿಷ್ಟ ಮುನ್ನೂರಾ ಅರವತ್ತು ಅಡಿ ಎತ್ತರದಲ್ಲಿ ಹಾರಾಡಿದ್ದೆ! ಹತ್ತು ನಿಮಿಷಗಳ ಹಾರಾಟದ ನಂತರ ಕ್ರಮೇಣವಾಗಿ ನಾನು   ಆಗಸದ  ಕಡೆಯಿಂದ ಇಳಿಯಲು ಆರಂಬಿಸಿದ್ದೆ.ಏರಿದವನು ಇಳಿಯಲೇ ಬೇಕಲ್ಲವೇ? 

ಮತ್ತೆ ದೋಣಿಗೆ ಇಳಿದು ಅಲ್ಲಿಂದ ಇನ್ನೊಂದು ದೋಣಿಯೇರಿ ತೀರ ಸೇರಿದೆ.ನನಗಾಗಿ ನನ್ನ ಸಹ ಪ್ರವಾಸಿಗರು ಕಾಯುತ್ತಿದ್ದರು. ಅವರ ಜೊತೆಗೂಡಿ ಮತ್ತೊಂದು ದೋಣಿಯೇರಿ  ಮತ್ತೆ ಮೂವತ್ತು ಕಿಲೋಮೀಟರ್ ಪಯಣ ಬೆಳೆಸಿ ಹ್ಯಾವ್ ಲಾಕ್ ದ್ವೀಪದ ನಮ್ಮ ರೆಸಾರ್ಟ್ ತಲುಪಿದೆವು. ಜಲ ಸಾಹಸಕ್ರೀಡೆಗಳಲ್ಲಿ ತೊಡಗಿದ ಪರಿಣಾಮವಾಗಿ ಹೊಟ್ಟೆ ತಾಳ ಹಾಕುವಾಗ ಪುಷ್ಕಳ ಭೋಜನ ನಮ್ಮ ಸ್ವಾಗತಿಸಿತು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು


ಹ್ಯಾವ್ಲಾಕ್ ಐಲ್ಯಾಂಡ್ ನ ಕಾಲಾಪತ್ತರ್ ಬೀಚ್

 

ಅಂಡಮಾನ್ ೧೦ 


ಹ್ಯಾವ್ಲಾಕ್ ಐಲ್ಯಾಂಡ್ ನ  ಕಾಲಾಪತ್ತರ್ ಬೀಚ್


ಪೋರ್ಟ್ ಬ್ಲೇರ್ ನಿಂದ ಎಪ್ಪತ್ತು ಕಿಲೋಮೀಟರ್ ದೂರದ ಹ್ಯಾವ್ ಲಾಕ್ ದ್ವೀಪ ಅಥವಾ ಸ್ವರಾಜ್ ದ್ವೀಪದ ಕಡೆಗೆ ನಮ್ಮ ಪ್ರವಾಸ ಮುಂದುವರೆಯಿತು. ಆ ಪ್ರವಾಸದಲ್ಲಿ ಸಾವಿರಾರು ಕಿಲೋಮೀಟರ್ ವಿಮಾನಯಾನ ಮಾಡಿದ ನಾವು ಎಪ್ಪತ್ತು ಕಿಲೋಮೀಟರ್ ಸಾಗರಯಾನ ಕ್ಕೆ ಸಿದ್ದರಾಗಿದ್ದೆವು.ಆ ಕ್ರೂಸ್ ಪ್ರಯಾಣ ನನ್ನ ಜೀವನದ ಮೊದಲ ಕ್ರೂಸ್ ಪ್ರಯಾಣವಾಗಿತ್ತು.ಪ್ರಯಾಣ ಆರಂಭಕ್ಕೆ ಮೊದಲು ವಿಮಾನದಲ್ಲಿ ಗಗನ ಸಖಿಯರು ಹೇಳುವಂತೆ ಕೆಲ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಪೋರ್ಟ್ ಬ್ಲೇರ್ ನಿಂದ ಕ್ರೂಸ್ ನ ವಿಶಿಷ್ಠವಾದ ಅನುಭವದ ಸಾಗರ ಯಾನದ ನಂತರ ನಾವು ಹ್ಯಾವ್ ಲಾಕ್ ದ್ವೀಪದ ತಲುಪಿದೆವು ವಿಮಾನ ಯಾನದಂತೆ ಇಲ್ಲಿಯೂ ನಮ್ಮ ಲಗೇಜ್ ಗಳನ್ನು ನಮ್ಮ ಬಳಿ ಇಟ್ಟು ಕೊಳ್ಳಲು ಅವಕಾಶವಿರಲಿಲ್ಲ. ಕ್ರೂಸ್ ನಿಂದ ಇಳಿದು ನಮ್ಮ ಲಗೇಜ್ ತೆಗೆದುಕೊಂಡು ಜೆಟ್ಟಿಯಿಂದ ನಮಗಾಗಿ ಕಾಯುತ್ತಿದ್ದ ಎರಡು ವಾಹನಗಳನ್ನು ಏರಿ ಕಾಲಾ ಪತ್ತರ್ ಬೀಚ್ ಕಡೆಗೆ ಪ್ರಯಾಣ ಬೆಳೆಸಿದೆವು.ಕಾಲಾ ಪತ್ತರ್ ಗ್ರಾಮದ ಆಚೆಗೆ ಭತ್ತದ ಗದ್ದೆಗಳು ಮತ್ತು ಬಾಳೆ ತೋಟಗಳ ಸುಂದರವಾದ ದೃಶ್ಯಾವಳಿ ಗೋಚರಿಸುತ್ತದೆ. ಈ ಭೂದೃಶ್ಯವು ದ್ವೀಪಗಳಲ್ಲಿನ ಪ್ರವಾಸಿಗರ ಗದ್ದಲದ ಜೀವನದಿಂದ ವಿಭಿನ್ನವಾದ ಚಿತ್ರವನ್ನು ಚಿತ್ರಿಸುತ್ತವೆ.

ದ್ವೀಪವಾಸಿಗಳ ಶಾಂತ ಜೀವನವನ್ನು ಪ್ರದರ್ಶಿಸುತ್ತದೆ. ಕಾಲಾ ಪತ್ತರ್ ಬೀಚ್‌ಗೆ ಹೋಗುವ ರಸ್ತೆಯ ವಿಶಾಲವಾಗಿದೆ ವಾಹನಗಳ ದಟ್ಟಣೆಯೂ ಅಂದು ಹೆಚ್ಚಿರಲಿಲ್ಲ. ಅತಿ ಕಡಿಮೆ ಅವದಿಯ ಪಯಣದ ನಂತರ ನಾವು ಕಾಲಾ ಪತ್ತರ್ ಬೀಚ್ ತಲುಪಿದೆವು.


ಕಲಾಪತ್ತರ್ ಬೀಚ್ ಹ್ಯಾವ್ಲಾಕ್ ದ್ವೀಪದ ಪ್ರಮುಖವಾದ ದ್ವೀಪಗಳಲ್ಲೊಂದು. ನಾವು ಅಲ್ಲಿಗೆ ತಲುಪಿದಾಗ ಸಂಜೆಯಾದ್ದರಿಂದ ಸಂಜೆಯ ಸಮುದ್ರ ತೀರದ ನಡಿಗೆ ನಮ್ಮ ಮನಕ್ಕೆ ಮುದ ನೀಡಿತು.ಸೂರ್ಯನು ನಿಧಾನವಾಗಿ ಕಡಲ ಅಡಿಯನ್ನು ಸೇರಲು ಹೊರಟನು. ಆಗ ನೀರಿನ ಹೋಳಿಯ ಬಣ್ಣವು ಸಾಗರಕ್ಕೆ ‌ಮತ್ತಷ್ಟು  ಕಳೆ ನೀಡಿತು.ನಾವು ನಡೆಯುವಾಗ ಅಲ್ಲಲ್ಲಿ ಕಪ್ಪು ಬಣ್ಣದ ಕಲ್ಲುಗಳು ನಮ್ಮನ್ನು ಸ್ವಾಗತಿಸಿದವು.ಆ ಕಲ್ಲುಗಳ ನೆನಪಿಗಾಗಿಯೇ ಈ ದ್ವೀಪಕ್ಕೆ ಕಾಲಾ ಪತ್ತರ್ ಬೀಚ್ ಅಂದರೆ ಕಪ್ಪು ಕಲ್ಲಿನ ತೀರ ಎಂಬ ಹೆಸರು ಬಂದಿದೆ.


ನಾವು ಆ ಬೀಚ್ ಗೆ   ಹೋದಾಗ ಸಮುದ್ರ ಶಾಂತವಾಗಿತ್ತು.ಅಲೆಗಳು ಹೆಚ್ಚಾಗಿರಲಿಲ್ಲ.ಆದರೆ ಕೆಲ ಮಳೆಗಾಲದ ತಿಂಗಳು , ಹಾಗೂ ವಿಕೋಪದ ಸಮಯದಲ್ಲಿ ದೈತ್ಯ ಅಲೆಗಳು ಬಂದು ಪ್ರವಾಸಿಗಳನ್ನು ಹೊತ್ತೊಯ್ದ ಉದಾಹರಣೆ ಇವೆ ಎಂಬ ಸ್ಥಳೀಯರ ಮಾತು ಕೇಳಿ ಭಯವಾಯಿತು.


ಕಡಲತೀರದಲ್ಲಿ ಪ್ರೇಮಿಗಳು ರೊಮ್ಯಾಂಟಿಕ್ ಆಗಿ  ಲಾಂಗ್ ವಾಕ್ ಮಾಡಲು, ಕುಟುಂಬದ ಜೊತೆಯಲ್ಲಿ ಬದಲಾಗುವ ಸಮುದ್ರದ ಬಣ್ಣಗಳ ಹಿನ್ನೆಲೆಯಲ್ಲಿ ಗ್ರೂಪ್ ಪೋಟೋ ತೆಗೆಸಿಕೊಳ್ಳಲು, ರೇಷ್ಮೆಯ ಮರಳಿನ ಮೇಲೆ ಮೃದುವಾಗಿ ನಡೆಯಲು,  ಸೂರ್ಯಾಸ್ತದ ಮತ್ತು ಸೂರ್ಯೋದಯ ದ ಸೌಂದರ್ಯವನ್ನು ಕಣ್ತುಂಬಿಸಿಕೊಂಡು ರಿಪ್ರೆಶ್ ಆಗಲು ನೀವು ಒಮ್ಮೆ ಸ್ವರಾಜ್ ದೀಪದ ಕಾಲಾ ಪತ್ತರ್ ಬೀಚ್ ಗೆ ಹೋಗಿ ಬನ್ನಿ...


ಸಿಹಿಜೀವಿ ವೆಂಕಟೇಶ್ವರ

ತುಮಕೂರು

  

ನಾರ್ಥ್ ಬೇ ಐಲ್ಯಾಂಡ್ ನಲ್ಲಿ ಸೀ ವಾಕಿಂಗ್

 


ಅಂಡಮಾನ್ ೯

ನಾರ್ಥ್ ಬೇ ಐಲ್ಯಾಂಡ್ ನಲ್ಲಿ  ಸೀ ವಾಕಿಂಗ್ 


ಭಾರತದ ಒಂದೊಂದು ಕರೆನ್ಸಿ ನೋಟಿನ ಹಿಂದೆ ನಮ್ಮ ದೇಶದ ಸಂಸ್ಕೃತಿ ಪರಂಪರೆಯನ್ನು ಸಾರುವ ಮಹತ್ವದ ಚಿತ್ರಗಳನ್ನು ಮುದ್ರಿಸಿರುವರು.ಇಪ್ಪತ್ತು ರೂಪಾಯಿಯ  ನೋಟಿನ ಹಿಂದೆ ಅಂಡಮಾನ್ ನ ನಾರ್ಥ್ ಬೇ ದ್ವೀಪದ ಚಿತ್ರ ಪ್ರಿಂಟ್ ಆಗಿದೆ.ಅಂತಹ ನೀರಿನ ಮೇಲಿನ ಸ್ವರ್ಗಕ್ಕೆ ಭೇಟಿ ನೀಡಲು ಅವಕಾಶ ಸಿಕ್ಕಿದ್ದು ನಮ್ಮ ಪುಣ್ಯ.

ಪೋರ್ಟ್ ಬ್ಲೇರ್ ನ ಅಂಡಮಾನ್   ವಾಟರ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ತಲುಪಿದ ನಾವು ಅಲ್ಲಿ ಒಂದು ಗುಂಪು ಪೋಟೋ ಹಾಗೂ ಸೆಲ್ಪಿಗಳನ್ನು   ತೆಗೆದುಕೊಂಡು ಮುಂದೆ ಸಾಗಿದಾಗ ಒಂದು ಸ್ಮಾರಕ ಕಣ್ಣಿಗೆ ಬಿತ್ತು. ಹತ್ತಿರ ಹೋಗಿ ನೋಡಿದಾಗ ಸುನಾಮಿ ಮೆಮೋರಿಯಲ್ ಎಂಬ ಬೋರ್ಡ್ ಕಣ್ಣಿಗೆ ಬಿತ್ತು. ಸುನಾಮಿಯ ಪ್ರಾಕೃತಿಕ ಹೊಡೆತಕ್ಕೆ ತತ್ತರಿಸಿ ಪ್ರಾಣ ತೆತ್ತವರ ನೆನಪಿಗಾಗಿ ಆ ಸ್ಮಾರಕ ನಿರ್ಮಿಸಲಾಗಿದೆ. ಅಲ್ಲಿ ಒಂದು ಕ್ಷಣ ನಿಂತು ಅಗಲಿದ ಆತ್ಮಗಳಿಗೆ ನಮನ ಸಲ್ಲಿಸಿ ಮುಂದೆ ಸಾಗಿದೆವು.


ಪೋರ್ಟ್ ಬ್ಲೇರ್ ನಿಂದ  ಜೆಟ್ಟಿ ಮೂಲಕ ನಾರ್ತ್ ಬೇ ದ್ವೀಪ ತಲುಪಬೇಕು. ಮಹೇಶ್ವರಿ ಎಂಬ ಜೆಟ್ಟಿ ಏರಿ ನಾರ್ಥ್ ಬೇ ಕಡೆಗೆ ಜಲಪಯಣ ಆರಂಬಿಸಿದೆವು.

ಆ ಜರ್ನಿಯೇ ಒಂದು ರೋಮಾಂಚನಕಾರಿ ಅನುಭವ ಸುತ್ತಲೂ ನೀರು ಅಲ್ಲಲ್ಲಿ ದೂರದಲ್ಲಿ ಕಾಣುವ ದ್ವೀಪಗಳು ಅದಕ್ಕೆ ಪೂರಕವಾಗಿ ನಮ್ಮ ಗೈಡ್ ಹಿನ್ನೆಲೆಯಲ್ಲಿ ಆ ಪ್ರದೇಶದ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದರು.  ನಮ್ಮ ಜೆಟ್ಟಿ ಸಾಗುತ್ತಿರುವಾಗ "ದೋಣಿ ಸಾಗಲಿ ಮುಂದೆ ಹೋಗಲಿ ..ದೂರ ತೀರವ ಸೇರಲಿ.."  ಎಂಬ ಹಾಡು ನೆನಪಾಗಿ ನಾರ್ತ್ ಬೇ ಐಲ್ಯಾಂಡ್ ಸೇರಲು ನನ್ನ ಮನ ಹಾತೊರೆಯುತ್ತಿತ್ತು.

ನಮ್ಮ ಜೆಟ್ಟಿ ನಾರ್ತ್ ಬೇ ದ್ವೀಪ ತಲುಪಿದಾಗ ಅಲ್ಲಿ ನಮಗೆ ಒಂದೂವರೆ ಗಂಟೆ ಸಮಯವಿದೆ ಎಂಬುದನ್ನು ನೆನೆಪಿಸಿ ಆ ದ್ವೀಪದ ಸೌಂದರ್ಯ ಸವಿಯಲು ನಮ್ಮ ಗೈಡ್ ಹೇಳಿದರು. 

 ಸಮಯ ಒಂದು ಗಂಟೆಯಾದ್ದರಿಂದ ಒಂದು ಗುಡಿಸಲ ಕೆಳಗೆ ಕುಳಿತು ಉಪಾಹಾರ ಸೇವಿಸಿದೆವು.

ನಾರ್ತ್ ಬೇ ಐಲ್ಯಾಂಡ್ 

ಅಂಡಮಾನ್   ಸುಂದರ ದ್ವೀಪಗಳಲ್ಲಿ ಒಂದಾಗಿದೆ.  ಹವಳದ ಬಂಡೆಗಳು ಮತ್ತು ಹರ್ಷದಾಯಕ ಸಾಹಸ ಚಟುವಟಿಕೆಗಳಾದ  

ಸ್ಕೂಬಾ ಡೈವಿಂಗ್, ಸ್ನಾರ್ಕೆಲಿಂಗ್, ಸಮುದ್ರ ವಾಕಿಂಗ್ ಮತ್ತು ಗಾಜಿನ ದೋಣಿ ಸವಾರಿಯಂತಹ ಚಟುವಟಿಕೆಗಳು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತವೆ. ಅಂಡಮಾನ್ ನ   ನೀಲ್ ಐಲ್ಯಾಂಡ್ ಮತ್ತು ಹ್ಯಾವ್‌ಲಾಕ್‌ ನಲ್ಲಿ  ಇಂತಹ ಸಮುದ್ರ ಆಟಗಳಿಗೆ ಅವಕಾಶವಿದೆ.

  


 ಈ  ದ್ವೀಪದಲ್ಲಿ ಸ್ನಾರ್ಕ್ಲಿಂಗ್ ಮತ್ತು ಸ್ಕೂಬಾ ಡೈವಿಂಗ್ ಆಪರೇಟರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರು ವಿವಿಧ ಸಮುದ್ರ ಆಟಗಳ ವಿವರ ಮತ್ತು ಬೆಲೆಯನ್ನು ನಮಗೆ ಅರ್ಥ ಮಾಡಿಸುತ್ತಾರೆ.  ನಮ್ಮ ಪ್ರವಾಸದ ಗುಂಪಿನ ಬಹುತೇಕ ಸಹಪಾಠಿಗಳು   ಸ್ನಾರ್ಕ್ಲಿಂಗ್ ಮಾಡಲು ತೆರಳಿದರು. ಆದರೆ  ನಾನು ಸೀ ವಾಕ್ ಮಾಡಲು ತೀರ್ಮಾನಿಸಿ ಸಮುದ್ರದ ಸಾಹಸಕ್ಕೆ ಸಿದ್ದನಾದೆ.  ಮೂರು ಸಾವಿರ ಶುಲ್ಕ ನೀಡಿ ಸುಮಾರು ಎರಡು ಕಿಲೋಮೀಟರ್ ಸಮುದ್ರದಲ್ಲಿ ದೋಣಿಯ ಮೂಲಕ ಹೋಗಿ ಅಲ್ಲಿ ಸೀ ವಾಕಿಂಗ್ ಗೆ ಮೀಸಲಾದ ಸ್ಥಳವನ್ನು ತಲುಪಿದೆ. ಅಲ್ಲಿ ಸುಮಾರು ಹದಿನೈದು ನಿಮಿಷಗಳ ಕಾಲ  ಸೀ ವಾಕಿಂಗ್ ಗೆ ತರಬೇತಿ ನೀಡಿದರು. ಸಮುದ್ರದ ಆಳದಲ್ಲಿ ನಾವು ಸನ್ನೆಯ ಮೂಲಕ ಸಂಭಾಷಣೆ ಮಾಡುವುದನ್ನು ಹೇಳುತ್ತಾರೆ.ಪಾರದರ್ಶಕ ಮುಂಬಾಗವನ್ನು ಹೊಂದಿರುವ ಹೆಲ್ಮೆಟ್ ಮಾದರಿಯ ಬ್ರೀಟರ್ ನ್ನು ನನ್ನ ತಲೆಯ ಮೇಲೆ ಅಳವಡಿಸಿ ಅದಕ್ಕೆ ಆಕ್ಸಿಜನ್ ಸಂಪರ್ಕ ನೀಡಿ ನನ್ನ ಜೊತೆಯಲ್ಲಿ ಒಬ್ಬ ನುರಿತ ಮುಳುಗುಗಾರರು ಬಂದರು ಆಗ ನಮ್ಮ ಸಮುದ್ರದಾಳದ ಪಯಣ ಆರಂಭವಾಯಿತು. ನ್ಯಾಷನಲ್ ಜಿಯಾಗ್ರಾಫಿಕ್ ಚಾನೆಲ್ ನಲ್ಲಿ ನಾನು ನೋಡಿದ ಚಿತ್ರಣವು   ನನ್ನ ಅನುಭವ ಆಗುತ್ತಿರುವುದಕ್ಕೆ ಥ್ರಿಲ್  ಆಗಿದ್ದೆ.


ಮೊದಲು ಏಣಿಯ ಸಹಾಯದಿಂದ ನಿಧಾನವಾಗಿ ನೀರಿಗಿಳಿದೆ ನನ್ನ ಪಕ್ಕದಲ್ಲೇ ನನ್ನೊಂದಿಗೆ ತಜ್ಞ ಮುಳುಗುಗಾರ ನೀರಿನ ಆಳಕ್ಕೆ ಇಳಿಯುತ್ತಿದ್ದ ಸನ್ನೆಯ ಮೂಲಕ ಸಂವಹನ ಮಾಡುತ್ತಿದ್ದ ಸುಮಾರು ಇಪ್ಪತ್ತು ಅಡಿ ಆಳಕ್ಕೆ ಇಳಿದಾಗ ನನ್ನ ಕಿವಿಯಲ್ಲಿ ಏನೋ ತುಂಬಿದಂತೆ ಭಾರವಾದಂತಾಯಿತು ನನ್ನ ಜೊತೆಗಾರನಿಗೆ ಸನ್ನೆಯ ಮೂಲಕ ಆತಂಕದಿಂದ ಹೇಳಿದೆ.

ಆತ ಸನ್ನೆಯ ಮೂಲಕವೇ ಮೂಗು ಹಿಡಿದುಕೊಂಡು ಬಾಯಲ್ಲಿ ಉಸಿರಾಡಲು ಪ್ರಯತ್ನ ಮಾಡಿ ಉಸಿರು ಹೊರ ಹಾಕಲು ಪ್ರಯತ್ನ ಮಾಡಿ ಎಂದು ಸನ್ನೆ ಮಾಡಿದ ಅದರಂತೆ ಮಾಡಿದೆ ಕಿವಿ ಪ್ರೀಯಾಯಿತು.ಮತ್ತೂ ಆಳಕ್ಕೆ ಇಳಿದೆವು.ಅಲ್ಲಿ ನೀರ ಜೀವ ವೈವಿಧ್ಯತೆ ಅನಾವರಣವಾಯಿತು ಬಣ್ಣ ಬಣ್ಣದ ಮೀನುಗಳು ಹವಳ, ಮತ್ತು ಇತರ ಮೀನುಗಳು ನಮ್ಮ ಕೈ ಮೈ ಮುಟ್ಟಿ ಸಾಗುತ್ತಿದ್ದವು. ಈ ಮಧ್ಯ ನಮ್ಮ ಮುಂದೆ ಬಂದ ಮತ್ತೊಬ್ಬ ಮುಳುಗುಕಾರ ನಮ್ಮ ಪೋಟೋ ಮತ್ತು ವೀಡಿಯೋ ಚಿತ್ರಿಸಿಕೊಂಡು ಹೋದ.

ಆಗ ನಾವು ಸಮುದ್ರದ ತಳಭಾಗ ತಲುಪಿ ನಿಜವಾದ ಸೀ ವಾಕ್ ಮಾಡಿದೆವು.ನಾನು ನೋಡಿರದ. ವೈವಿಧ್ಯಮಯ ಜಲಚರರಾಶಿಯನ್ನು ಅಲ್ಲಿ ಕಂಡೆ. ಹವಳದ ವಿವಿಧ ರೂಪಗಳು ನನ್ನ ಕಣ್ಣಿಗೆ ಹಬ್ಬವನ್ನು ಉಂಟು ಮಾಡಿದವು.ನನಗೆ ಇನ್ನೂ ಸಂತೋಷದ ಅಚ್ಚರಿಯ ಘಟನೆ ಆಗ ಜರುಗಿತು. ನನ್ನ ಸಹಮುಳುಗುಗಾರ ಕೈಯಲ್ಲಿ ಏನೋ ತಂದು ನನ್ನ ಕೈಗೆ ಕೊಟ್ಟು ನಿಧಾನವಾಗಿ ಬಿಡಲು ಸನ್ನೆ ಮಾಡಿದ.ಅದು ಮಣ್ಣಿನಂತಹ ವಸ್ತು ನಾನು ಕೈಯಲ್ಲಿ ಬಿಗಿಯಾಗಿ ಹಿಡಿದು ನಿಧಾನವಾಗಿ ಸ್ವಲ್ಪ ಸ್ವಲ್ಪ ಕೈಯಿಂದ ಹೊರ ಬಿಡುವಾಗ ಬಣ್ಣ ಬಣ್ಣದ ಮೀನುಗಳು ಜೀವಿಗಳು ಬಂದು ನನ್ನ ಕೈಗೆ "ಮುತ್ತಿ"ಗೆ ಹಾಕಿದವು.


ಸಾಗರದಾಳದಲ್ಲಿ ನನ್ನ ಕೈಗಳಿಗೆ 

ಜಲಚರ ಪ್ರಾಣಿಗಳು ಹಾಕಿದವು ಮುತ್ತಿಗೆ|

ನನ್ನ ಕೈಗಳು ರೋಮಾಂಚನಗೊಂಡವು 

ಜಲಚರಗಳ ಸವಿ ಮುತ್ತಿಗೆ||



ಈ ವಿದ್ಯಮಾನ ಕಂಡು ಒಮ್ಮೆ ಖುಷಿ ಮತ್ತೊಮ್ಮೆ ಭಯ ಒಟ್ಟಿಗೆ ಆಯಿತು. ನನ್ನ ಆತಂಕ ಕಂಡ ಅವನು ಕೈಸನ್ನೆಯ ಮೂಲಕ ಧೈರ್ಯ ತುಂಬಿದ.ಸುಮಾರು ಮೂವತ್ತು ನಿಮಿಷಗಳ ಸೀ ವಾಕ್ ನ ಅದ್ಭುತ ಅನುಭವ ಪಡೆದ ನನಗೆ ಮೇಲ್ಮುಖವಾಗಿ ಚಲಿಸಲು ಅವನು ಸನ್ನೆ ಮಾಡಿದ ಒಲ್ಲದ ಮನಸ್ಸಿನಿಂದ ನಿಧಾನವಾಗಿ ಮೇಲ್ಮುಖ ಚಲನೆ ಮಾಡಿದೆವು. ನೀರಿನಿಂದ ಮೇಲೆ ಬಂದು ಬಟ್ಟೆಗಳನ್ನು ಬದಲಾಯಿಸಿಕೊಂಡು ನನ್ನ ಪೋನ್ ಗೆ ಸೀ ವಾಕಿಂಗ್ ನ ಪೋಟೋ ಮತ್ತು ವೀಡಿಯೋಗಳನ್ನು ಹಾಕಿಸಿಕೊಂಡು ಮತ್ತೆ ದೋಣಿಯೇರಿ ನಮ್ಮ ಸಹಪ್ರವಾಸಿಗರನ್ನು ಸೇರಿಕೊಂಡೆ.ಅವರೆಲ್ಲರೂ ಒಮ್ಮೆಗೇ ಕುತೂಹಲದಿಂದ  ಕೇಳಿದರು ಹೇಗಿತ್ತು ಸೀ ವಾಕ್? ನಾನು ಒಂದೇ ಮಾತಲ್ಲಿ ಹೇಳಿದೆ ವರ್ಣಿಸಲಸದಳ! 

ಅದಕ್ಕೆ ಪೂರಕವಾಗಿ ಪೋಟೋ ಮತ್ತು ವೀಡಿಯೋ ತೋರಿಸಿದೆ.ಅವರು ಬಹಳ ಖುಷಿಪಟ್ಟರು.


ಇತ್ತೀಚಿಗೆ ನಮ್ಮ ಮಾನ್ಯ  ಪ್ರಾಧಾನಿಗಳು ಗುಜರಾತ್ ನಲ್ಲಿ ಸ್ಕೂಬಾ ಡೈವಿಂಗ್ ಮಾಡಿದ ದೃಶ್ಯಗಳನ್ನು ನೋಡಿದ ನನಗೆ ನನ್ನ ಅಂಡಮಾನ್ ನ ನಾರ್ಥ್ ಬೇ ಯ ಸೀ ವಾಕಿಂಗ್ ನೆನಪಾಗಿ ಮತ್ತೊಮ್ಮೆ ರೋಮಾಂಚಿತನಾದೆ ನೀವು ಇಂತಹ ಅನುಭವ ಪಡೆಯಲು ಅಂಡಮಾನ್ ನ ನಾರ್ಥ್ ಬೇ ದ್ವೀಪಕ್ಕೆ ಒಮ್ಮೆ ಭೇಟಿ ಕೊಡಬಹುದು.


ಸಿಹಿಜೀವಿ ವೆಂಕಟೇಶ್ವರ

ಶಿಕ್ಷಕರು

ತುಮಕೂರು

9900925529

08 May 2024

ಎರಡು ಹಾಯ್ಕುಗಳು


*ಹಾಯ್ಕುಗಳು*



೧ ನಿರೂಪ


ನಿರೂಪದಿಂದ

ಬದಲಾಗದು ಜಗ

ಜಾರಿಯು ಮುಖ್ಯ.


೨ ನಿರೋಧ


ಮನಸ್ಸು ಮಾಡು

ನಿರೋಧ ಮೆಟ್ಟಿನಿಲ್ಲು 

ಗುರಿ ಮುಟ್ಟುವೆ.



*ಸಿಹಿಜೀವಿ ವೆಂಕಟೇಶ್ವರ*

ತುಮಕೂರು

06 May 2024

ಹಂಚಿ ತಿನ್ನೋಣ...ಹನಿಗವನ

 ಸ್ಪರ್ದೆಗೆ 


*ಹಂಚಿ ತಿನ್ನೋಣ*.


ಬಹುಜನರಿಗಿಲ್ಲ ಅಶನ ವಸನ

ಹಲವರಿಗೆ ದಿನವೂ ನಿರಶನ|

ನಡೆಸೋಣ ನಾವು ಸಹಜೀವನ 

ಹಂಚಿ ತಿನ್ನುವುದ ಕಲಿಯೋಣ||


*ಸಿಹಿಜೀವಿ ವೆಂಕಟೇಶ್ವರ*

ತುಮಕೂರು

04 May 2024

ನಮ್ಮುಳಿವಿಗಾಗಿ ಬೆಳೆಸೋಣ ಮರ ಗಿಡ.


 


ನಮ್ಮುಳಿವಿಗಾಗಿ ಬೆಳೆಸೋಣ ಮರ ಗಿಡ.


ಮೊನ್ನೆ ಸಾಮಾಜಿಕ ಜಾಲತಾಣದಲ್ಲಿ ಒಂದು ಚಿತ್ರ ನನ್ನ ಗಮನ ಸೆಳೆಯಿತು. ಬಹುಶಃ ನೀವೂ ಅದನ್ನು ಗಮನಿಸಿರಬಹುದು. ಆ ಚಿತ್ರದಲ್ಲಿ  ರಸ್ತೆಗಳಲ್ಲಿ ಬೀದಿ ದೀಪಗಳ ಕಂಬಗಳ ಮೇಲೆ ಬೀದಿ ದೀಪದ ಜೊತೆಯಲ್ಲಿ ದೊಡ್ಡ ಫ್ಯಾನ್ ಅಳವಡಿಸಲಾಗಿತ್ತು.ಆ  ಚಿತ್ರದ ಅಡಿಬರಹ ಹೀಗಿತ್ತು.  ಮರಗಳ ಕಡಿದ  ತಪ್ಪಿಗೆ  ಇನ್ನೂ ಕೆಲವೇ ದಿನಗಳಲ್ಲಿ ಈ ಪರಿಸ್ಥಿತಿ ಬರುತ್ತದೆ ಎಚ್ಚರ!


ಕೃತಕವಾಗಿ ಭುವಿಯನು  ತಂಪುಮಾಡಲು ಸಾಧ್ಯವೇನು?|

ಎಲ್ಲಿ ತರುವಿರಿ ಈ ಧರೆಗೆ 

ದೊಡ್ಡದಾದ  ಫ್ಯಾನು?||


ಹೌದಲ್ಲವಾ ಇದ್ದ ಬದ್ದ ಮರಗಿಡ ಕಡಿದು ರಸ್ತೆ, ರೈಲು, ಕಟ್ಟಡ ಕಟ್ಟಲು ನಾವು ಮಾರಣ ಹೋಮ ಮಾಡಿದ ಮರಗಳ ಸಂಖ್ಯೆಗೆ ಲೆಕ್ಕವೇ ಇಲ್ಲ.ಅದರ ಪರಿಣಾಮ ಈಗ ಅನುಭವಿಸುತ್ತಿದ್ದೇವೆ.


ಕೆಲ ದೇಶಗಳಲ್ಲಿ ಪರಿಸರ

ಸಮತೋಲನದಲ್ಲಿದೆ ಕಾರಣ

ಅಲ್ಲಿ ಸಾಕಷ್ಟು ಕಾಡಿದೆ|

ನಮ್ಮ ದೇಶದಲ್ಲಿ ಮರ ಗಿಡ

ಕಡಿದ ಪರಿಣಾಮವಾಗಿ 

ಬಿಸಿಗಾಳಿ ನಮ್ಮ ಕಾಡಿದೆ||


ಈ ಬಿರು ಬೇಸಿಗೆಯ  ಇಂದಿನ ದಿನಗಳಲ್ಲಿ ಕೂಲರ್‌ಗಳು, ಫ್ಯಾನ್‌ಗಳು ಇತ್ಯಾದಿಗಳ ಸಹಾಯದಿಂದ ಜನರು ತಮ್ಮ ಜೀವನವನ್ನು ಕಳೆಯುತ್ತಿದ್ದೇವೆ.  ಇದು ನಾವೇ ಮಾಡಿದ  ತಪ್ಪಿಗೆ ಪ್ರಾಯಶ್ಚಿತ್ತ.  ಇನ್ನೂ ಬರುವ ಸಮಯವು ತುಂಬಾ ಭಯಾನಕವಾಗಿರುತ್ತದೆ.  ಇದು ಊಹಿಸಲು ಅಸಾಧ್ಯವಾಗಿದೆ. ಆದ್ದರಿಂದ ಮುಂಬರುವ ಮಳೆಗಾಲದಲ್ಲಿ ನಾವೆಲ್ಲರೂ ನಮ್ಮ ಸುತ್ತಮುತ್ತ 2 ಸಸಿಗಳನ್ನು  ನೆಡೋಣ ಬರೀ ಸಸಿ ನೆಟ್ಟರೆ ಸಾಲದು ಅದು ಮರವಾಗುವವರೆಗೆ ನಮ್ಮ ಮಕ್ಕಳಂತೆ ಹಾರೈಕೆ ಮಾಡಬೇಕಿದೆ.


ಮರಗಿಡ ಕಡಿದು

ಕಟುಕರಾಗದೆ

ಪರಿಸರ ಉಳಿಸಲು

ಕಟಿಬದ್ದರಾದರೆ

ಭುವಿಯೆ ಸ್ವರ್ಗವು

ನೋಡು ಶ್ರೀದೇವಿತನಯ.





  ಇಂದು  ಭಾರತದ ಜನಸಂಖ್ಯೆಗೆ ಅನುಗುಣವಾಗಿ ಸುಮಾರು 400 ರಿಂದ 500 ಕೋಟಿ ಮರಗಳ ಅಗತ್ಯವಿದೆ. ಪರಿಸರ ತಜ್ಞರ ಪ್ರಕಾರ ನಮ್ಮ ದೇಶದಲ್ಲಿ ಶೇಕಡಾ 3೦ ರಷ್ಟಾದರೂ ಕಾಡಿರಬೇಕು.ಆದರೆ ಅದು ಪ್ರಸ್ತುತ ಇಪ್ಪತ್ತರ ಆಸುಪಾಸಿನಲ್ಲಿದೆ ಅದರ ಪರಿಣಾಮ ಅತಿಯಾದ ಬಿಸಿಲು ಅಕಾಲಿಕ ಮಳೆ ಋತುವಿನಲ್ಲಿ ಏರುಪೇರು. ತಂತ್ರಜ್ಞಾನದ ಬಳಕೆಯಿಂದ ಸಂಪತ್ತಿನ ವಿವೇಚನಾರಹಿತ ಬಳಕೆಯಿಂದ   ಬದುಕನ್ನು ಹುಡುಕುತ್ತಾ ನಾವು ಸಾವಿಗೆ ಎಷ್ಟು ಹತ್ತಿರ ಬಂದಿದ್ದೇವೆ?  ಪರಿಸ್ಥಿತಿ ಹೀಗೆ ಮುಂದುವರೆದರೆ   45 °C ನಿಂದ 50 °C ತಾಪಮಾನ ಸಾಮಾನ್ಯವಾಗುತ್ತದೆ.ಮುಂದೆ ಇದು 55 °C ನಿಂದ 60 °C ಗೆ ಏರಲು  ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಮಾನವರು 56 ರಿಂದ 57 °C ನಲ್ಲಿ ಬದುಕುವುದಿಲ್ಲ. ಆದ್ದರಿಂದ ಇದನ್ನು ಅರ್ಥಮಾಡಿಕೊಳ್ಳೋಣ  ಮತ್ತು ಈಗಿನಿಂದ ಸಸ್ಯಗಳನ್ನು ನೆಡಲು ಪ್ರಾರಂಭಿಸೋಣ. 


ಸಮಯ ಕಳೆದದ್ದು ಸಾಕು

ಬೇಗ ಬಾರ|

ನಮ್ಮುಳಿವಿಗಾಗಿ ಬೆಳೆಸೋಣ

ಗಿಡ ಮರ||


ಸಿಹಿಜೀವಿ ವೆಂಕಟೇಶ್ವರ

ಶಿಕ್ಷಕರು ಹಾಗೂ ಸಾಹಿತಿಗಳು

ತುಮಕೂರು

9900925529