ಸಮಾಜಿಕ ಜಾಲತಾಣಗಳು .
ಮಕ್ಕಳ ಪ್ರಬಂಧ
ಸಾಮಾಜಿಕ ಜಾಲತಾಣಗಳು
ಒಂದು ಕಾಲದಲ್ಲಿ ಹೊಗೆಸೊಪ್ಪು ಇಲ್ಲದ ಮನೆಗಳಿರಲಿಲ್ಲ ಇಂದು ವಾಟ್ಸಪ್ ಇಲ್ಲದ ಪೋನ್ ಗಳು ಇಲ್ಲ ಎನ್ನುವಂತಾಗಿದೆ, ಮೊಬೈಲ್ ಪೋನ್ ಇಲ್ಲದ ಜೀವನ ಊಹಿಸಿಕೊಳ್ಳಲು ಸಾದ್ಯವಿಲ್ಲ ಅಷ್ಟರಮಟ್ಟಿಗೆ ನಾವು ಮೊಬೈಲ್ ಪೋನ್ ಮತ್ತು ಸಾಮಾಜಿಕ ಜಾಲತಾಣಗಳ ದಾಸರಾಗಿದ್ದೇವೆ ಎಂದರೆ ತಪ್ಪಾಗಲಾರದು.
ಫೇಸ್‌ಬುಕ್, ವಾಟ್ಸಪ್, ಟ್ವಿಟರ್, ಕೂ, ಯೂಟೂಬ್, ಶೇರ್ ಚಾಟ್, ಇನ್ಸ್ಟಾಗ್ರಾಮ್ ಹೀಗೆ ಪಟ್ಟಿ ಮಾಡುತ್ತಾ ನಿಂತರೆ ಹನುಮಂತನ ಬಾಲದಂತೆ ಬೆಳೆಯುತ್ತದೆ.
ಈ ಸಾಮಾಜಿಕ ಜಾಲತಾಣಗಳ ಸದುಪಯೋಗ ಮಾಡಿಕೊಂಡರೆ ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸೂಕ್ತ ವೇದಿಕೆಯು ಲಭ್ಯವಾಗುವುದು, ಅಂಗೈಯಲ್ಲಿ ನಮಗೆ ಉತ್ತಮ ಮನರಂಜನೆ ದೊರೆಯುತ್ತದೆ, ಬೇಕಾದ ವಿಷಯಗಳ ಸಂಗ್ರಹಿಸಿ ನಮ್ಮ ಜ್ಞಾನ ವೃದ್ಧಿ ಆಗಲು ಖಂಡಿತವಾಗಿಯೂ ಸಾಮಾಜಿಕ ಜಾಲತಾಣಗಳು ವರದಾನವಾಗಿವೆ, ಇನ್ನೂ ಮುಂದುವರೆದು ಎಷ್ಟೋ ಜನರು ಪೇಸ್ ಬುಕ್, ವಾಟ್ಸಪ್, ಯೂಟೂಬ್ ಜಾಲತಾಣಗಳ ಸಹಾಯದಿಂದ ತಮ್ಮ ಆರ್ಥಿಕ ಪರಿಸ್ಥಿತಿ ಉತ್ತಮ ಪಡಿಸಿಕೊಂಡ ಉದಾಹರಣೆಗಳು ಇವೆ, ಕೋವಿಡ್ ನಂತಹ ಸಮಯದಲ್ಲಿ ಈ ಜಾಲತಾಣಗಳು ನಮಗೆ ಸಂಪರ್ಕ ಸೇತುವೆಯಾದವು.
ಪ್ರಪಂಚದ ಜನಸಂಖ್ಯೆಯ ಶೇಕಡಾ48 ಜನ ಈ ಜಾಲತಾಣಗಳನ್ನು ಬಳಸುತ್ತಾರೆ ಎಂದರೆ ಇವುಗಳ ಮಹತ್ವ ನಾವು ಅರಿಯಲೇ ಬೇಕು.
ತಂತ್ರಜ್ಞಾನದ ಕ್ರಾಂತಿಯ ಫಲವಾಗಿ ,
ಇಂಟರ್ನೆಟ್ ಎಲ್ಲೆಡೆಯೂ ಕಡಿಮೆ ಬೆಲೆಗೆ ಲಬ್ಯವಾದಾಗಿನಿಂದ ಸಾಮಾಜಿಕ ಜಾಲಗಳ ಭರಾಟೆ ಆರಂಭವಾಯಿತು, ಇಂದು ಬಹುತೇಕ ಯುವಕ ಯುವತಿಯರಿಗೆ ಸಾಮಾಜಿಕ ಜಾಲತಾಣವೇ ಸರ್ವಸ್ವ ಎನ್ನುವಂತಾಗಿದೆ, ಪ್ರತಿನಿಮಷಕ್ಕೊಮ್ಮೆ ಜಾಲ ತಾಣ ವೀಕ್ಷಣೆ ಮಾಡುವುದು ಸ್ಟೇಟಸ್ ಅಪ್ಡೇಟ್ ಮಾಡುವುದು, ಎಷ್ಟು ಲೈಕ್ ಬಂದಿವೆ ಎಂದು ನೋಡುವುದು ಕಡಿಮೆ ಲೈಕ್ ಅಥವಾ ವೀಕ್ಷಣೆ ಇದ್ದರೆ ಅದಕ್ಕೆ ಬೇಸರ ಪಟ್ಟುಕೊಂಡು ಖಿನ್ನತೆಯಿಂದ ಮಾನಸಿಕ ಆರೋಗ್ಯ ಹಾಳುಮಾಡಿಕೊಂಡು ಅದು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಹಲವಾರು ನಿದರ್ಶನಗಳು ನಮ್ಮ ಕಣ್ಣ ಮುಂದಿವೆ.
ಇತ್ತೀಚಿನ ಅಂಕಿಅಂಶಗಳ ಪ್ರಕಾರ ಸರಾಸರಿ ಓರ್ವ ವ್ಯಕ್ತಿಯು ಪ್ರತಿದಿನ ಎರಡೂವರೆ ಗಂಟೆ ಸಾಮಾಜಿಕ ಜಾಲತಾಣಗಳ ಬಳಕೆ ಮಾಡುವನು,ಅಂದರೆ ತಿಂಗಳಲ್ಲಿ ಎಪ್ಪತ್ತೈದು ಗಂಟೆ ಅಥವಾ ಮೂರು ದಿನ ಅದರಲ್ಲೇ ಕಾಲ ಕಳೆದರೆ ವರ್ಷದ ಲೆಕ್ಕವೇನು? ಅನವಶ್ಯಕ ಕಾಲ ಹರಣದ ಫಲವಾಗಿ ಅದು ದೇಶದ ಅರ್ಥವ್ಯವಸ್ಥೆಯ ಮೇಲೆ ಪರಿಣಾಮ ಬೀರದೇ ಇರಲಾರದು ಈ ವಿಷಯದ ಬಗ್ಗೆ ಗಮನಹರಿಸಲೇಬೇಕು.
ಇನ್ನೂ ಸಾಮಾಜಿಕ ಜಾಲತಾಣಗಳ ದುರ್ಬಳಕೆ ಮಾಡಿಕೊಂಡು ಮಹಿಳೆಯರ ಮತ್ತು ಯುವತಿಯರಿಗೆ ಕಿರುಕುಳ ನೀಡುವ ಸಕ್ರಿಯ ಜಾಲದ ಬಗ್ಗೆ , ಪೋಟೋ ಗಳನ್ನು ತಿರುಚಿ, ಅಶ್ಲೀಲಗೊಳಿಸಿ ಬ್ಲಾಕ್ ಮೇಲ್ ಮಾಡುವ ಖದೀಮರಿಗೆ ಈ ಜಾಲತಾಣಗಳು ಹುಲಾಸಾದ ಹುಲ್ಲುಗಾವಲಾಗಿವೆ.
ಜಾಲತಾಣಗಳು ಆರ್ಥಿಕ ವ್ಯವಹಾರಗಳನ್ನು ಪ್ರೋತ್ಸಾಹ ಮಾಡುವುದರಿಂದ ಆರ್ಥಿಕ ಅಪರಾಧಗಳು ಹೆಚ್ಚಾಗಿ ಅಮಾಯಕರು ,ಯಾವುದೋ ಲಿಂಕ್ ಒತ್ತುವ ಮೂಲಕ, ಅಪರಿಚಿತ ವೆಬ್ಸೈಟ್ ಕ್ಲಿಕ್ ಮಾಡುವ ಮೂಲಕ ಮೋಸ ಹೋದ ಲಕ್ಷಾಂತರ ನಿದರ್ಶನಗಳು ನಮ್ಮ ಮುಂದಿವೆ.
ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು, ಕೋಮುಸಾಮರಸ್ಯ ಹಾಳುಮಾಡುವಿಕೆಯಲ್ಲಿ ಕೆಲವೊಮ್ಮೆ ಸಾಮಾಜಿಕ ಜಾಲತಾಣಗಳು ಕುಖ್ಯಾತಿಯನ್ನು ಪಡೆದಿವೆ ಈ ದಿಸೆಯಲ್ಲಿ ಸರ್ಕಾರಗಳಿಂದ ಇತ್ತೀಚಿಗೆ ಸಾಮಾಜಿಕ ಜಾಲತಾಣಗಳ ಮೇಲೆ ಕೆಲ ನಿರ್ಬಂಧಗಳು ಹೇರಿಕೆಯಾಗಿವೆ .
ಸಾಮಾಜಿಕ ಜಾಲತಾಣಗಳು ಈಗ ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿವೆ ಆದ್ದರಿಂದ ಅವುಗಳ ಬಳಕೆಯನ್ನು ನಾವು ಸಂಪೂರ್ಣವಾಗಿ ತ್ಯಜಿಸಲು ಆಗುವುದೇ ಇಲ್ಲ ಎಂಬ ಸ್ಥಿತಿಗೆ ನಾವು ತಲುಪಿರುವೆವು, ಆದ್ದರಿಂದ ಕೆಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ನಾವು ಅವುಗಳ ದುಷ್ಪರಿಣಾಮ ಕಡಿಮೆ ಮಾಡಬಹುದು, ಮತ್ತು ಸಾಮಾಜಿಕ ಜಾಲತಾಣಗಳ ದುರ್ಬಳಕೆ ತಡೆಯಬಹುದು.
ಹಾಗಾದರೆ ನಾವೇನು ಮಾಡಬೇಕು?
ಸಮಯ ಅಮೂಲ್ಯವಾದದ್ದು ಯಾವಾಗಲೂ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿರದೆ ಒಂದು ನಿಗದಿತ ಟೈಮ್ ಸೆಟ್ ಮಾಡಬಹುದು, ಅದಕ್ಕೆ ಕೆಲ ಆಪ್ ಗಳ ನೆರವನ್ನು ಪಡೆಯಬಹುದು.
ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ಮುತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರ ಪ್ರೆಂಡ್ ರಿಕ್ವೆಸ್ಟ್ ಗಳನ ಕಣ್ಣು ಮುಚ್ಚಿ ಅಕ್ಸೆಪ್ಟ್ ಮಾಡಬಾರದು.
ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಹಿರಿಯರು ಸಾಮಾಜಿಕ ಜಾಲತಾಣಗಳ ಸಂಪುರ್ಣವಾದ ಮಾಹಿತಿ ನೀಡಿ, ಮಾರ್ಗದರ್ಶನ ನೀಡಬೇಕು. ಸಾಮಾಜಿಕ ಜಾಲತಾಣಗಳ ದುರ್ಬಳಕೆ ಆಗದಂತೆ ಅವರ ಮೇಲೆ ಒಂದು ಕಣ್ಣಿಟ್ಟಿರಬೇಕು.
ಸಾಮಾಜಿಕ ಜಾಲತಾಣಗಳ ವ್ಯಸನಕ್ಕೆ ಬಲಿಯಾಗಿ ಕುಟುಂಬದ ಸಂಬಂಧಗಳನ್ನು ಬಲಿ ಕೊಡದೆ ಕುಟುಂಬದಲ್ಲಿ ಸಂತಸದಿಂದ ಬಾಳುವುದನ್ನು ಕಲಿಯಬೇಕು
ನಮ್ಮ ಪಾಸ್ವರ್ಡ್ ಗಳು ಮತ್ತು ವೈಯಕ್ತಿಕ ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು.
ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪೂರಕವಾಗುವ ಹವ್ಯಾಸಗಳನ್ನು ಬೆಳೆಸಿಕೊಂಡು ನಮ್ಮ ಕ್ರಿಯಾಶೀಲ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು.
ಯೋಗ,ಧ್ಯಾನದ ಮೂಲಕ ಮರ್ಕಟ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಂಡು ,ಸ್ವಯಂ ಶಿಸ್ತು ಬೆಳೆಸಿಕೊಳ್ಳಬೇಕು.
ನಾವು ಸಾಮಾಜಿಕ ಜಾಲತಾಣಗಳಿಗೆ ದಾಸರಾಗದೆ ಅವುಗಳನ್ನು ವಿವೇಚನೆಯಿಂದ ಬಳಸೋಣ ,ನಾವುಗಳು ಯಜಮಾನನ ರೀತಿಯಲ್ಲಿ ತಂತ್ರಜ್ಞಾನದ ಭಾಗಗಳಾದ ಮತ್ತು ಸಾಮಾಜಿಕ ಮಾದ್ಯಮಗಳು ಮತ್ತು ಜಾಲತಾಣಗಳನ್ನು ಬಳಸಿಕೊಂಡರೆ ಅವುಗಳು ನಮ್ಮ ಮೇಲೆ ಸವಾರಿ ಮಾಡುವುದನ್ನು ನಾವು ತಡೆಯಬಹುದು.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
No comments:
Post a Comment