27 June 2023

ಹಾಯ್ಕು..

 



ಹಾಯ್ಕು


ಮನದರಸಿ

ಬದುಕಿನ ಸ್ಪೂರ್ತಿ ನೀ

ನನ್ನುಸಿರು ನೀ 


ಸಿಹಿಜೀವಿ 

25 June 2023

ಹಾತೊರೆದೆ ಸಾಂಗತ್ಯಕೆ...

 




ಹಾತೊರೆದೆನು ಅವಳ ಸಾಂಗತ್ಯಕೆ
ಬಳಿಸಾರುವಳೇ ನನ್ನ ಅಭಿಸಾರಿಕೆ 
ರೂಪರಾಶಿಯಲಿ ಇವಳೇ  ಮೇನಕೆ 
ದಿನವೂ ಅವಳದೇ ಕನವರಿಕೆ 


24 June 2023

ಚಿಂತೆ...ಹಾಯ್ಕುಗಳು..

 



ಹಾಯ್ಕುಗಳು 



ಚಿಂತೆಯೇತಕೆ 

ಚಿನ್ಮಯನಿರುವನು

ಅವನ ನಂಬು..



ಬೇರೇನೂ ಇಲ್ಲ 

ಒಂದೇ ಸೊನ್ನೆ ವ್ಯತ್ಯಾಸ 

ಚಿಂತೆಯೇ ಚಿತೆ



ಚಿಂತೆಯ ಬಿಡು

ಚಿಂತನೆಯ ಮಾಡು

ಚಿರ ಸಂತಸ 


ಸಿಹಿಜೀವಿ

ಸಿ ಜಿ ವೆಂಕಟೇಶ್ವರ 

ತುಮಕೂರು


20 June 2023

ಸೂತ್ರಧಾರಿ

 


ಸೂತ್ರಧಾರಿ...


ಎನೇ ಬಡಬಡಾಯಿಸಿದರೂ

ನಿನ್ನ ಇಚ್ಚೆಯಿರದೆ ತೃಣವೂ 

ಚಲಿಸದು ಎನ್ನಪ್ಪ ಹರಿ |

ಈಗೀಗ ನನಗೆ ಅರಿವಾಗಿದೆ

ನೀ ಸೂತ್ರಧಾರಿ ನಾ ಪಾತ್ರಧಾರಿ|


ಸಿಹಿಜೀವಿ 

19 June 2023

ಅರ್ಥ...

 


ಅರ್ಥ...


ಜೀವಿಸಲು ಬರೀ ಹಣವೇ ಬೇಕಿಲ್ಲ

ಇರಲಿ ಗುಣದೊಂದಿಗೆ ಅರ್ಥ |

ಆಗ ನಮ್ಮ ಬದುಕಿಗೆ 

ಬರುವುದು ಒಂದು ಹೊಸ ಅರ್ಥ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

15 June 2023

ಹಾಯ್ಕುಗಳು..

 


ಹಾಯ್ಕುಗಳು 



ಓಣಿಯಲೆಲ್ಲ

ನಿನದೆ ಮಾತು ಈಗ

ನೀ ಕೆಂಪು ಬಸ್ಸು 



ಸಿಂಹ ಒಬ್ಬಂಟಿ

ಹಂದಿಗಳಾಗಮನ 

ಓಳಿಯೊಳಗೆ.



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು


13 June 2023

ಕಾಡಿನಲ್ಲಿ ರಕ್ತದಾನ


 


ಕಾಡಿನಲ್ಲಿ‌ ರಕ್ತದಾನ..


 ಈ ವರ್ಷದ  ಬೇಸಿಗೆ ರಜೆಯಲ್ಲಿ ದಗೆಯಿಂದ ರಕ್ಷಿಕೊಳ್ಳಲು  ಮಲೆನಾಡಿನ ಕಡೆ  ಗೆಳೆಯರ ಜೊತೆಯಲ್ಲಿ ಕಿರು ಪ್ರವಾಸ ಹೋಗಿದ್ದೆ .ಚಿಕ್ಕಮಗಳೂರಿನಿಂದ ಹದಿನಾಲ್ಕು ಕಿಲೋಮೀಟರ್ ದೂರದಲ್ಲಿರುವ ಝರಿ ಇಕೋ ಸ್ಟೇ ನ ಸೌಂದರ್ಯಕ್ಕೆ ಮಾರುಹೋದ ನಾವು ಆ ಜಲಪಾತದ ಸೊಬಗನ್ನು ಕಣ್ತುಂಬಿಸಿಕೊಂಡು ,ಜಲಪಾತದಲ್ಲಿ ಮಕ್ಕಳಂತೆ ಆಟವಾಡಿ ವಿಶ್ರಾಂತಿ ತೆಗೆದುಕೊಂಡೆವು. 

  ಸಂಜೆಯ ಸೂರ್ಯಾಸ್ತದ ಸಮಯದಲ್ಲಿ  ಮುಖ ತೊಳೆದುಕೊಂಡು ಅಲ್ಲೆ ಸ್ವಾಭಾವಿಕವಾಗಿ ನಿರ್ಮಾಣವಾಗಿರುವ ಕಲ್ಲುಹಾಸಿನ ಮೇಲೆ ಕುಳಿತು    ಕಾಡಿನ ಪರಿಸರದಲ್ಲಿ ಸಹಜೀವನ ಮಾಡುವ ಹಿರಿಯ ಜೀವದ ಜೊತೆಯಲ್ಲಿ ಕುಳಿತು ಕಾಡು,ಪರಿಸರ ,ಮಾನವನ,ಅತಿಯಾಸೆ ,ಪ್ಲಾಸ್ಟಿಕ್ ಬಳಕೆ, ನೆಮ್ಮದಿ ರಹಿತ ಜೀವನ, ಜೀವನದ ಉದ್ದೇಶ ಹೀಗೆ ತರಾವರಿ ವಿಷಯಗಳ ಬಗ್ಗೆ ಆ ಹಿರಿಯ ಜೀವ ಕಾಳಜಿಯಿಂದ ಮಾತನಾಡುತ್ತಾ ಹೋದರು .ನಾವು ಕೇಳುತ್ತಾ ಹೌದಲ್ಲವೇ? ಮಾನವನ ವಅತಿಯಾಸೆಯಿಂದ ಕಾಡು ಪ್ರಕೃತಿಯನ್ನು ಹೇಗೆ ನಾಶ ಮಾಡಿದ್ದೇವೆ.ಇದರ ಪರಿಣಾಮವಾಗಿ ಪ್ರಕೃತಿ ಮುನಿದರೆ ಅದಕ್ಕೂ ಪ್ರಕೃತಿಯನ್ನೇ ನಿಂದಿಸುವೆವು ಎಂದು ಮನದಲ್ಲೇ ಅಂದುಕೊಂಡೆ. 


ಮಾತು ಮುಂದುವರಿದಿತ್ತು ಆ ಹಿರಿಯಜೀವ ಬೆಳಿಗ್ಗೆ ಇಲ್ಲೇ ಇರುವ ಶಿವಲಿಂಗ ಪೂಜಿಸುವಾಗ ಜಿಗಣಿ ಕಚ್ಚಿತು ನವೆಯಾಗುತ್ತಿದೆ ಎಂದು ಕಾಲನ್ನು ಕೆರದುಕೊಂಡು ಮಾತು ಮುಂದುವರಿಸಿದರು .ನಾವೆಲ್ಲರೂ ಇಲ್ಲಿ ಜಿಗಣಿ ಇವೆಯಾ? ಎಂದು ಒಂಒಂದೆದೇ ಧ್ವನಿಯಲ್ಲಿ ಕೇನಕಳಿದೆವು್ಕರು. ಆಸಕ್ತಿಕರವಾದ ಅವರ ಮಾತುಗಳ ಬಿಟ್ಟು ನಮಗರಿವಿಲ್ಲದೇ ನಮ್ಮ ಕೈಗಳು ನಮ್ಮ ದೇಹವನ್ನು ಸವರಿಕೊಳ್ಳಲಾರಂಭಿಸಿದರು ನನ್ನ ಸಹಪಾಠಿಗಳು ನಮಗೆ ಯಾವುದೇ ಜಿಗಣಿ ಕಚ್ಚಿಲ್ಲ ಎಂದು ಖಾತ್ರಿ ಪಡಿಸಿಕೊಂಡು ಕಾಲು ಮೇಲಕ್ಕೆತ್ತಿ ಕೂತು ಹಿರಿಯರ ಮಾತಿಗೆ ಕಿವಿಯಾದರು ನನ್ನ ಕೈ ಎಡಗಾಲು ಸ್ಪರ್ಷಿಸಿ ತಪಾಸಣೆ ಮಾಡುವಾಗ ಎಡಗಾಲಿನ ಇಮ್ಮಡಿ ಮೇಲೆ ಕಡಲೆ ಕಾಳು ಗಾತ್ರದ ವಸ್ತು ತಡಕಿತು ಕಾಲು ಬೇಳಕಿಗಿಡಿದು ನೋಡಿದೆ.ಆ ಹಿರಿಯರು ನೋಡಿ  ನಗುತ್ತಾ...ಅಹಾ...ರಕ್ತದಾನ ಮಾಡಿರುವಿರಿ ಬಿಡಿ ಎಂದು ನಕ್ಕರು. ನನಗೆ ಏನೂ ಅರ್ಥವಾಗದೇ ಅವರನ್ನು ಮತ್ತು ಸ್ನೇಹಿತರನ್ನು ನೋಡಿದೆ.ಅದೇ ಜಿಗಣಿ ಈಗಾಗಲೇ ಅದು ನಿಮ್ಮ ರಕ್ತ ಹೀರಲು ಆರಂಭಿಸಿದೆ ನಿಧಾನವಾಗಿ ಕೀಳಿ ಎಂದು ಅವರೇ ಕಿತ್ತು ಬಿಸಾಡಿದರು. ಅದರ ಹಿಂದೆ ರಕ್ತವೂ ಸುರಿಯುತ್ತಿತ್ತು. ನಲವತ್ತೆಂಟು ವರ್ಷದಲ್ಲಿ ನಾಡಿನಲ್ಲಿ ಎರಡು ಬಾರಿ ರಕ್ತದಾನ ಮಾಡಿದ ನನಗೆ ಕಾಡಿನಲ್ಲಿ ಜಿಗಣಿಗೆ ರಕ್ತದಾನ ಮಾಡಿದ್ದು ಮೊದಲ ಸಲ ! ಭಯ ಆತಂಕದಿಂದ ಇದ್ದ ನನ್ನ ಮೊಗ ನೋಡಿ ಆ ಹಿರಿಯರೆ ಸಮಾಧಾನ ಮಾಡುತ್ತಾ ಏನೂ ತೊಂದರೆಯಿಲ್ಲ ಸ್ವಲ್ಪ ಕಾಲ ರಕ್ತ ಸುರಿದು ನಿಲ್ಲುತ್ತದೆ.

ಎಂದು ಜಿಗಣೆಯ ಬಗ್ಗೆ ವಿವರವಾಗಿ ಹೇಳಿದರು.

 ಇದೇ ಜಿಗಣೆ ಔಷಧವಾಗಿ ಹಲವಾರು ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಹೊಂದಿದೆ. ಇತ್ತೀಚೆಗೆ ಇದು ಲೀಚ್ ಥೆರಪಿ ಎಂದು  ಖ್ಯಾತವಾಗುತ್ತಿದೆ. ಜಿಗಣೆಯ ಸಹಾಯದಿಂದ ಕಾಯಿಲೆ ಇರುವ ಜಾಗದಿಂದ ದೋಷಪೂರಿತ ರಕ್ತವನ್ನು ಹೊರ ತೆಗೆಯುವರು  ಇದನ್ನು ಜಲೌಕಾವಚರಣ ಎಂದು ಆಯುರ್ವೇದದಲ್ಲಿ ಕರೆಯಲಾಗುತ್ತದೆ. ದೇಹವನ್ನು ಶುದ್ಧೀಕರಿಸುವ ವಿಧಾನ ಇದು. ಅಂದ ಹಾಗೆ ಈ ಚಿಕಿತ್ಸೆಗೆ ಎಲ್ಲಾ ಬಗೆಯ ಜಿಗಣೆಗಳು ಬರುವುದಿಲ್ಲ. ಅದರಲ್ಲಿ ಕೂಡ ವಿಷ ಹಾಗೂ ವಿಷ ರಹಿತ ಎನ್ನುವ ವಿಧವಿದೆ. ವಿಷಭರಿತ ಜಿಗಣೆಗಳು ಕಚ್ಚಿದ ಜಾಗದಲ್ಲಿ ತುರಿಕೆ ಹಾಗೂ ಇತರೇ ಅಡ್ಡ ಪರಿಣಾಮಗಳಾಗುವ ಸಾಧ್ಯತೆ ಇದೆ. ಎಂದಾಗ ನನಗೆ ಕಚ್ಚಿದ ಜಿಗಣೆ ಯಾವುದಿರಬಹುದು ಎಂದು ಮತ್ತೂ ಆತಂಕವಾಯಿತು. 

ಹಿರಿಯರು ಮಾಹಿತಿ ಹೇಳುತ್ತಾ ಹೋದರು.

 ಒಮ್ಮೆ 5ರಿಂದ 30 ಎಂಎಲ್ ರಕ್ತವನ್ನು ಹೀರುವ ಸಾಮಾರ್ಥ್ಯ ಇದಕ್ಕೆ ಇರುತ್ತದೆ. ಕಾಯಿಲೆ ಇರುವ ಜಾಗದಿಂದ ದೂಷಿತ ರಕ್ತ ಹೀರುವುದರಿಂದ ತಕ್ಷ ಣವೇ ಗಾಯ ಹಾಗೂ ಊತವಿರುವ ಸ್ಥಾನಗಳಲ್ಲಿ ನೋವು ಕಡಿಮೆ ಆಗುತ್ತದೆ. ಜಿಗಣೆಯು ಮೊದಲು ಕಚ್ಚಿದಾಗ ಲಾವಾರಸವನ್ನು ದೇಹದಲ್ಲಿ ಬಿಡುಗಡೆ ಮಾಡುತ್ತದೆ. ಇದರಲ್ಲಿ ಹಿರುಡಿನ್ ಎಂಬ ಪ್ರೋಟಿನ್ ಇರುತ್ತದೆ. ಇದರಿಂದ ಹೀರಿಕೊಳ್ಳುವ ರಕ್ತ ಹೆಪ್ಪು ಗಟ್ಟುವುದಿಲ್ಲ. ಅಲ್ಲಲ್ಲಿ ನಿಂತಿರುವ ಕೆಟ್ಟ ರಕ್ತವನ್ನು ಹೀರಿಕೊಂಡು ರಕ್ತ ಸಂಚಾರ ವೃದ್ಧಿಸಿ ಗಾಯವನ್ನು ಶೀಘ್ರವಾಗಿ ವಾಸಿ ಮಾಡುತ್ತದೆ.

 ಚರ್ಮ ಹಾಗೂ ರಕ್ತ ವಿಕಾರಗಳಲ್ಲಿ ಇದು ಪರಿಣಮಕಾರಿ. ಇಸುಬು, ಸೋರಿಯಾಸಿಸ್, ಮೊಡವೆ, ವೇರಿಕೋಸ್, ಅಲ್ಸರ್, ಮಧುಮೇಹದ ಗಾಯ, ಸಂಧಿನೋವು ಸೇರಿದಂತೆ ಇತರ ರೋಗಗಳಲ್ಲಿ ಜಿಗಣಿ ಚಿಕಿತ್ಸೆ ಫಲಕಾರಿಯಾಗಿದೆ ಎಂದರು...


ಅವರ ಮಾತು ಕೇಳಿ ಸ್ವಲ್ಪ ಸಮಾಧಾನದಿಂದ ಕಾಲು ನೋಡಿಕೊಂಡೆ ಇನ್ನೂ ರಕ್ತ ಸುರಿಯುತ್ತಿತ್ತು...ನನ್ನ ಆತಂಕದ ಮುಖ ನೋಡಿದ ಹಿರಿಯರು ಲೀಚ್ ತೆರಪಿ ಹೆದರಬೇಡಿ ಎಂದು ಮತ್ತೊಮ್ಮೆ ಧೈರ್ಯ ಹೇಳಿದರು...


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು



07 June 2023

ಹಾಯ್ಕುಗಳು.

 




ಆಶಕ್ತರಲ್ಲ

ವಿಶೇಷಚೇತನರು 

ಪ್ರೊತ್ಸಾಹ ನೀಡಿ.



ಶಿಕ್ಷಣದಿಂದ

ಸಶಕ್ತರಾಗಬೇಕು 

ಬದುಕು ಚಿನ್ನ 


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು




06 June 2023

ನೆನಪುಗಳ ಮಾತು(ಪುಸ್ತಕ ವಿಮರ್ಶೆ)


ನೆನಪುಗಳ ಮಾತು..ನೀವೂ  ಕೇಳಿ ಮತ್ತು ಓದಿ..


ವಿಶ್ವ ಪುಸ್ತಕ ದಿನದಂದು ಬೆಂಗಳೂರಿನ ಬಿ ಬಿ ಸಿ ನಲ್ಲಿ ನನ್ನ "ಕ್ಯಾತ್ಸಂದ್ರ ಟು ಕ್ಯಾತನಮಕ್ಕಿ" ಕೃತಿ ಬಿಡುಗಡೆಯಾಯಿತು.ಅಂದೇ ಶಶಿಕಾಂತ್ ಬಿಲ್ಲಾಪುರ ರವರ "ನೆನಪುಗಳ ಮಾತು " ಕಾದಂಬರಿ ಬಿಡುಗಡೆಯಾಯಿತು. ಮೊದಲ ಭೇಟಿಯಲ್ಲಿ ಶಶಿಕಾಂತ್ ಹಾಗೂ ಅವರ ಜೊತೆಯಲ್ಲಿ ಅವರ ಸ್ನೇಹ ಬಳಗ ನನ್ನ ಬಹುಕಾಲದ ಗೆಳೆತನವೇನೋ ಎಂಬಂತೆ ಬೆರೆತೆವು .  

ಪುಷ್ಪ ಸರ್ಜಾಪುರ,ಸುನಿತಾ ಸರ್ಜಾಪುರ,ಚಂದ್ರಶೇಖರ ಸರ್ಜಾಪುರ ,ಸಾಕರಾಜು ತಾವರೆಕರೆ..

ಶ್ರೀನಿವಾಸ್ ಸಂಪಂಗೆರೆ,ಸಂತೋಷ  ರವರು ತಮಿಳುನಾಡು...  ಇವರ  ಭೇಟಿಯಾಗಿ ಎಷ್ಟೋ ವರ್ಷಗಳ ಪರಿಚಯವೇನೋ ಎಂಬಂತೆ ಮಾತನಾಡಿಸಿದರು.  ಇವರು ನನ್ನ ಹತ್ತಕ್ಕೂ ಹೆಚ್ಚು ಕೃತಿಗಳ ಖರೀದಿಸಿದರು. ಇದೇ ಪುಸ್ತಕ ಬಂಧ.


ಬಿಡುವಿರದ ಕಾರ್ಯದೊತ್ತಡದ ನಡುವೆ ಮೊನ್ನೆ 

ಶಶಿಕಾಂತ್ ಬಿಲ್ಲಾಪುರ ರವರ ಕಾದಂಬರಿ  ಓದಿದೆ .ನಿಜಕ್ಕೂ ಮೊದಲ ಪುಸ್ತಕದಲ್ಲೇ ಭರವಸೆ ಮೂಡಿಸುವ ಲೇಖಕರು ಓದುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇವರ ಕೃತಿಯು  ಒಂದು ಸುಮಧುರ ಭಾವನೆಗಳ ಹೊತ್ತಿಗೆ. ಒಬ್ಬ ಯುವ ಪ್ರೇಮಿಯ ಮೊದಲ ಪ್ರೇಮದ ಪಯಣದಲ್ಲಿ ಯುವಕನ ಮನಸ್ಸಿನಲ್ಲಿ ಉಂಟಾಗುವ ಗೊಂದಲಗಳು, ಮಧುರ ಭಾವನೆಗಳು, ಮೊದಲ ಪ್ರೇಮದ ಕನಸುಗಳನ್ನು ತಮ್ಮ ಉತ್ತಮ ಬರಹದಿಂದ ರಸವತ್ತಾಗಿ ವರ್ಣಿಸಿದ್ದಾರೆ. 

ಈ ಕಾದಂಬರಿಯ ಕಥಾನಾಯಕ ತನ್ನ ಪ್ರೀತಿಯನ್ನು ಪ್ರೇಯಸಿಯ ಎದುರು ವ್ಯಕ್ತಪಡಿಸಲು ಪಡುವ ಮಾನಸಿಕ ತೊಳಲಾಟ, ಮುಜುಗರ, ಎದುರಾದ ಸಮಸ್ಯೆಗಳ ಆಗರ, ಎಲ್ಲವನ್ನು ಅಪ್ಪಿಕೊಂಡ ಎದೆಗಾರಿಕೆ ಓದುಗರ ಮನಸ್ಸನ್ನು ತಣಿಸುತ್ತವೆ. ಹೊಸತನದ ಪ್ರೇಮ ಕಥೆಯೊಂದು ಶುರುವಾಗಿ ಅರಳಿ ಹೂವಾದಾಗ ದುತ್ತನೆ ಎದುರಾಗುವ ಸಮಸ್ಯೆಗಳು ಹೇಗೆ ಪ್ರೀತಿಯ ಪಯಣದಲ್ಲಿ ಅಡಚಣೆಯಾಗಿ ನಿಲ್ಲುತ್ತವೆ ಎಂಬುದನ್ನು ತುಂಬ ಪ್ರಬುದ್ಧತೆಯಿಂದ ಇಲ್ಲಿ ತೆರೆದಿಡಲಾಗಿದೆ. ಎಲ್ಲೂ ಅತಿರೇಕವಿಲ್ಲದೆ, ಎಲ್ಲಾ ಅಪರೂಪವಾಗಿದೆ. 

ಪ್ರೀತಿಸಿದ ನಂತರದ ಅವಸ್ಥೆ, ಪಡುವ ವೇದನೆ, ಏಳು-ಬೀಳುಗಳ ಅಂತರಾಳವನ್ನು ಬಿಂಬಿಸಿದ ರೀತಿ ಮನೋಜ್ಞವಾಗಿದೆ. ಪ್ರತಿಯೊಬ್ಬ ಪ್ರೇಮಿಯು ಇಲ್ಲಿ ಕಥೆಯಾಗಿದ್ದಾನೆ, ಕಥೆಗೆ ಕೊಡುಗೆಯಾಗಿದ್ದಾನೆ.

ಎಂಬ ಲೀಲಾ ಸೋಂಪುರ ರವರ ಅಭಿಪ್ರಾಯ ದಿಟವಾಗಿದೆ.


ಲೇಖಕರೇ ಹೇಳಿಕೊಂಡಂತೆ 

ಜೀವನವೆಂಬುದು ಸಾಗರದಂತೆ ಆಳ, ಅದರಲ್ಲಿ ಜೀವಿಸಬೇಕಾದರೆ ಪ್ರತಿಯೊಂದು ಜೀವಿಯೂ ಈಜಲೇಬೇಕು. ಅದು ಅನಿವಾರ್ಯ. ಅಂತಹ ಜೀವನದಲ್ಲಿ, ಜೀವಿಗಳಲ್ಲಿ ತಮ್ಮದೇ ಆದ ಕಷ್ಟ, ಸುಖ, ನೋವು-ನಲಿವುಗಳ ಪಳಿಯುಳಿಕೆಗಳಿವೆ. ಅವುಗಳದ್ದೇ ಆದ ಅಸ್ತಿತ್ವವಿದೆ, ಅಪಾರತೆಯಿದೆ.

ಅಂತಹ ಜೀವಗಳ, ಜೀವನದ ಕಥೆಗಳು ಕೇವಲ ಅನುಭವಿಸಿದವನಿಗೆ ಅಪಾರತೆಯನ್ನು ಉಂಟುಮಾಡಿದರೆ, ಅನುಭವಿಸಿದವನು ಅದನ್ನು ವರ್ಣಿಸಿದಾಗ ಕೇಳುವವನಿಗೆ ಅಲಸ್ಯವನ್ನು ಉಂಟುಮಾಡುವುದು ಸಹಜ, ಸ್ವಾಭಾವಿಕ. ಏಕೆಂದರೆ, ಜೀವಿಗಳಲ್ಲಿ ಮನುಷ್ಯ ಬುದ್ಧಿವಂತ, ಕಷ್ಟದ ಪ್ರಮಾಣ ಅಳೆಯುವಷ್ಟು ಧೀಮಂತ. ಹೇಳುವವನು ವರ್ಣಿಸಿದ ನೋವು ಕೇಳುವವನಿಗೆ ಸಣ್ಣ ಪ್ರಮಾಣದ್ದಾಗಿದ್ದರೆ ಅಲಸ್ಯ ಅಥವಾ ಅಲ್ಪವಾಗಿ ಕಾಣಬಹುದು. ಆ ಪ್ರಮಾಣ ಹೆಚ್ಚಾಗಿದ್ದು ಅದು ಕೇಳುಗನಿಗೆ ಹೊಸತಾಗಿದ್ದರೆ ಅದು ಆಶ್ಚರ್ಯ, ಅದ್ಭುತ ಅಥವಾ ದೊಡ್ಡದಾಗಿ ಕಾಣಬಹುದು.   ಜೀವನದಲ್ಲಿ ತಮ್ಮದೇ ಆದ ನೋವು-ನಲಿವುಗಳ, ಕಷ್ಟ-ಸುಖಗಳ, ಪ್ರೀತಿ-ದ್ವೇಷಗಳ ಕಥೆಗಳಿವೆ. ಅಂತಹ ಕಥೆಯೊಂದನ್ನು ಹಂಚಿಕೊಳ್ಳಬೇಕು. ಆ ಅನುಭವಗಳನ್ನು ಅರ್ಪಿಸಬೇಕು. ಇದೇನು ಅನುಭವಕ್ಕೆ ಮೀರಿದ್ದಲ್ಲ. ಅನುಭವಕ್ಕೆ ಸ್ವಲ್ಪ ದೂರವಿರಬಹುದು, ಅನುಭವಕ್ಕೆ ಅಂತರವಿರಬಹುದು. 

ಹೌದು ಈ ಕಾದಂಬರಿ ಓದಿದಾಗ  ಇದು ಲೇಖಕರ ಅನುಭವ ಕಥನವಿಬಹುದೇ? ಇವರ ಕಥನದ ಕೆಲ ಪಾತ್ರಗಳು ಅಂದು ನಾನು  ಬಿಬಿಸಿ ಯಲ್ಲಿ ಭೇಟಿ ಮಾಡಿದ ಸ್ನೇಹಿತರು ಇರಬಹುದಾ ? ಎಂಬ ಅನುಮಾನ ಕಾಡಿತು. ಅವರು ಮುಖತಃ ಸಿಕ್ಕಾಗ ಅವರನ್ನೇ ಕೇಳುವೆ .ಒಟ್ಟಾರೆ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿರುವ ಶಶಿಕಾಂತ್ ರವರು ಕನ್ನಡ ಸಾಹಿತ್ಯ ಲೋಕದಲ್ಲಿ ಇನ್ನೂ ಹೆಚ್ಚಿನ ಕೃತಿ ರಚಿಸಲಿ ಹೆಚ್ಚು ಓದುಗರ ಸೆಳೆಯಲಿ ಎಂದು ಹಾರೈಸುವೆ.

ನಿಮಗೂ "ನೆನಪುಗಳ ಮಾತು "  ಕೇಳುವ ಆಸೆಯಾದರೆ  9980623234 ಸಂಖ್ಯೆಗೆ ಕರೆ ಮಾಡಿ  ಉಷಾ ಪ್ರಕಾಶನ ಸಂಪರ್ಕಿಸಿ 140₹ ಕೊಟ್ಟು ಖರೀದಿಸಿ ಓದಬಹುದು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು


 

05 June 2023

ವಿಷ್ಣು ಸಹಸ್ರ ನಾಮ ಯಾಕೆ?

 



*ವಿಷ್ಣು ಸಹಸ್ರನಾಮವೇ ಯಾಕೆ?*


*ಒಬ್ಬೊಬ್ಬ ದೇವತೆಯ ಉಪಾಸನೆ ಮಾಡಿದರೆ ಒಂದೊಂದು ಫಲ. ಬೃಹಸ್ಪತಿ ಆರಾಧನೆಯಿಂದ ಬ್ರಹ್ಮವರ್ಚಸ್ಸು, ಇಂದ್ರನ ಆರಾಧನೆಯಿಂದ ಇಂದ್ರಿಯ ಪಾಟವ, ದಕ್ಷಪ್ರಜಾಪತಿಗಳ ಆರಾಧನೆಯಿಂದ ಪ್ರಜಾಸಂಪತ್ತು, ಸತ್ಸಂತಾನ, ಮಹಾಲಕ್ಷ್ಮೀ ಉಪಾಸನೆಯಿಂದ ಐಶ್ವರ್ಯ, ಅಗ್ನಿಯಿಂದ ತೇಜಸ್ಸು, ವಸುಗಳಿಂದ ಸಂಪತ್ತು, ಅದಿತಿಯಿಂದ ಅನ್ನಾಹಾರ, ದೇವತೆಗಳಿಂದ ಸ್ವರ್ಗಪ್ರಾಪ್ತಿ, ವಿಶ್ವೇದೇವತೆಗಳಿಂದ ಭೂಸಂಪತ್ತು, ಅಶ್ವಿನಿದೇವತೆಗಳಿಂದ ಆಯುರ್ವೃದ್ಧಿ, ಗಂಧರ್ವರಿಂದ ಸ್ಪುರದ್ರೂಪ, ಸೌಂದರ್ಯ, ಊರ್ವಶಿಯಿಂದ ಸ್ತ್ರೀವಿಹಾರ, ಯಜ್ಞದಿಂದ ಕೀರ್ತಿ, ಈಶ್ವರನಿಂದ ವಿದ್ಯೆ ಹಾಗೂ ಒಳ್ಳೆಮನೋಭಾವ, ಗೌರೀಪೂಜೆಯಿಂದ ಅನ್ಯೋನ್ಯತೆ, ಸುಖದಾಂಪತ್ಯ, ಪಿತೃಗಳಿಂದ ಸಂತತಿ ವೃದ್ಧಿ ಹೀಗೆ ಒಬ್ಬೊಬ್ಬ ದೇವತೆಯಿಂದ ಒಂದೊಂದು ಸಿದ್ಧಿಯಾದರೆ, ವಿಷ್ಣುಸಹಸ್ರನಾಮ ಪಾರಾಯಣದ ಮೂಲಕ ಮಹಾವಿಷ್ಣುವಿನ ಉಪಾಸನೆ ಮಾಡಿದರೆ ಈ ಎಲ್ಲ ಸಿದ್ಧಿಗಳೂ ಒಟ್ಟಿಗೆ ಸುಲಭವಾಗಿ ಲಭಿಸುವುದು.*


*ಪಾರಾಯಣ ಎಂದರೆ…*


ವಿಷ್ಣುಸಹಸ್ರನಾಮ ಪಾರಾಯಣ ಮಾಡುವವರು ಅದರಲ್ಲೇ ಪರಾಯಣರಾಗಿ ಪಾರಾಯಣ ಮಾಡಬೇಕು. ಪರಾಯಣ ಎಂದರೆ ಪರಮಾತ್ಮನಲ್ಲಿ ಮುಳುಗಿರಬೇಕು. 


ಅವನೇ ಮತಿ, ಅವನೇ ಗತಿ, ಪರಮಾನಂದ ಸ್ಥಿತಿ ಎಂಬ ಅನುಭವ ಬರಬೇಕು. ಸಾಮೂಹಿಕ ಪಾರಾಯಣ ಆಗುವಾಗ ಸಹಸ್ರನಾಮದಲ್ಲಿನ ನಾಮಮಂತ್ರ ತರಂಗಗಳು ಸುತ್ತಲಿನ ವಾತಾವರಣವನ್ನು ಶುದ್ಧಿಗೊಳಿಸುತ್ತ ಹೃದಯದಲ್ಲಿ ದೈವಿಕ ಆನಂದದ ಅನುಭವ ತರುತ್ತವೆ. ಮನಸ್ಸಿಗೆ ಶಾಂತಿ, ನೆಮ್ಮದಿ, ಆನಂದ ದೊರಕುತ್ತದೆ. 


ಹಬ್ಬ, ವ್ರತ, ಉತ್ಸವಗಳಲ್ಲಿ ವಿಶೇಷವಾಗಿ ಪಾರಾಯಣ ಮಾಡಲಾಗುತ್ತದೆ. ಭೀಷ್ಮ ಏಕಾದಶಿ, ವೈಕುಂಠ ಏಕಾದಶಿ, ಪ್ರಥಮ ಏಕಾದಶಿ ದಿನಗಳು ಪಾರಾಯಣಕ್ಕೆ ಪ್ರಶಸ್ತವಾದ ದಿನಗಳು. 


ಪಾರಾಯಣ ಮಾಡುವಾಗ ಪೂರ್ವ ಅಥವಾ ಉತ್ತರಾಭಿಮುಖವಾಗಿ ಮಾಡಬೇಕು. ಸಾಮೂಹಿಕ ಅಥವಾ ಕುಟುಂಬದವರೆಲ್ಲ ಒಟ್ಟಿಗೆ ಕುಳಿತು ಪಾರಾಯಣ ಮಾಡಿದರೆ ಹೆಚ್ಚಿನ ಅನುಗ್ರಹವಿರುತ್ತದೆ. ಆತ್ಮಸುಖ, ಯೋಗಕ್ಷೇಮ, ಭಾಗ್ಯಸೌಭಾಗ್ಯ, ಧೈರ್ಯ, ಆತ್ಮಸ್ಥೈರ್ಯ, ಸ್ಮರಣಶಕ್ತಿ, ಸ್ಪುರಣಶಕ್ತಿ, ಮೇಧಾಶಕ್ತಿ ಹಾಗೂ ಕೀರ್ತಿಗಳನ್ನು ತಂದುಕೊಡುತ್ತದೆ.


ಸಾಡೇಸಾತ್- ಶನಿಕಾಟ-ವಿಷ್ಣುಸಹಸ್ರನಾಮದವರಿಗೆ ಇರುವುದಿಲ್ಲ. ಎಲ್ಲ ತಾಪತ್ರಯ ಪರಿಹಾರಕ, ಇಷ್ಟಪ್ರದ, ಅನಿಷ್ಟ ನಿವಾರಕ ಪವಿತ್ರ ಸಹಸ್ರನಾಮವೆಂದೇ ಇದು ವಿಶಿಷ್ಟವಾಗಿದೆ.


*ಸ್ವರ ತರಂಗಗಳ ಪ್ರಭಾವ*


ಬೃಹತೀಸಹಸ್ರ ಶಾಸ್ತ್ರಗ್ರಂಥವು ಋಗ್ವೇದದ ಒಂದುಸಾವಿರ ಋಕ್ಗಳ ಒಂದು ಸುಂದರಹಾರ. ಬೃಹತೀ ಛಂದಸ್ಸಿನಲ್ಲಿ ಪ್ರತಿಸ್ತೋತ್ರದಲ್ಲಿಯೂ ಮೂವತ್ತಾರು ಸ್ವರಾಕ್ಷರ ಹಾಗೂ ಮೂವತ್ತಾರು ವ್ಯಂಜನಾಕ್ಷರ ಇರುತ್ತದೆ. ಎಂದರೆ ಪ್ರತಿಸ್ತೋತ್ರದಲ್ಲಿ 72 ಅಕ್ಷರಗಳು. 


ಒಂದುಸಾವಿರ ಸ್ತೋತ್ರಗಳಲ್ಲಿ 72 ಸಾವಿರ ಅಕ್ಷರಗಳು. ಬೃಹತೀ ಸಹಸ್ರದ ವ್ಯಾಖ್ಯೇಯವೇ ವಿಷ್ಣುಸಹಸ್ರನಾಮ ಸ್ತೋತ್ರ. ವಿಷ್ಣುಸಹಸ್ರನಾಮ 72 ಸಾವಿರ ನಾಡಿಗಳನ್ನು ಸಂಸ್ಕಾರ ಮಾಡಿ ನಾಡೀಶುದ್ಧಿ, ದೇಹಶುದ್ಧಿ, ಮನಶುದ್ಧಿ ಮಾಡುತ್ತದೆ.


*ಸಂವಿಧಾನ*


ಈ ಮಹಾಮಂತ್ರದ ದೈವ ಮಹಾವಿಷ್ಣು, ಇದನ್ನು ನೀಡಿದ ಋಷಿ ವೇದವ್ಯಾಸರು, ಇದರ ಛಂದಸ್ಸು ಅನುಷ್ಟುಪ್, ಈ ಮಂತ್ರದ ಬೀಜಭಾಗ ಅಮೃತಾಂಶೂದ್ಭವೋ ಭಾನುಃ ಸ್ತೋತ್ರ, ಈ ಮಂತ್ರದ ಮಹಾಶಕ್ತಿ ದೇವಕೀನಂದನಃ ಸ್ರಷ್ಟಾ ಸ್ತೋತ್ರ. ಇದರ ಪರಮಮಂತ್ರ ಉದ್ಭವಃ ಕ್ಷೋಭಣೋ ದೇವಃ ಸ್ತೋತ್ರ, ಈ ಮಂತ್ರದ ಅನಾವರಣ ಭಾಗ ಶಂಖಭೃತ್ ನಂದಕೀ ಚಕ್ರೀ ಸ್ತೋತ್ರ. ಈ ಮಂತ್ರದ ಅಸ್ತ್ರಭಾಗ ಶಾಂಗಧನ್ವಾ ಗದಾಧರಃ ಸ್ತೋತ್ರ, ಈ ಮಂತ್ರದ ಜಾಗೃತಿಭಾಗ ರಥಾಂಗಪಾಣಿಃ ಅಕ್ಷೋಭ್ಯ ಇದರ ಕವಚ ಭಾಗ ತ್ರಿಸಾಮಾಸಾಮಗಸಾಮ. ಇಡೀ ಮಂತ್ರದ ಮೂಲಪ್ರೇರಣೆ ಆನಂದಂ ಪರಬ್ರಹ್ಮ.


ಈ ಮಂತ್ರದ ಪಹರೆ ಋತುಃ ಸುದರ್ಶನಃ ಕಾಲ ಸ್ತೋತ್ರ. ವಿಷ್ಣುವೇ ಜಗದೊಡೆಯ ಎಂಬುವುದೇ ಧ್ಯಾನ. ಇದರ ಪಠಣ, ಜಪ, ಪಾರಾಯಣವು ವಿಷ್ಣು ಪ್ರೇರಣೆಯಿಂದಾಗಿದ್ದು, ಅದರಿಂದ ವಿಷ್ಣುಪ್ರೀತನಾಗಲಿ, ಎಂಬ ಭಾವನೆಯೇ ಇದರ ಪ್ರಯೋಜನ.


*ಸಕಲ ಪುರುಷಾರ್ಥ ಸಿದ್ಧಿ*


ಶರಪಂಜರದ ಮೇಲೆ ಮಲಗಿದ್ದ ಭೀಷ್ಮರನ್ನು ಧರ್ಮರಾಜ ಕೇಳುತ್ತಾನೆ, ಇಡೀ ಜಗತ್ತಿನ ದೈವ ಯಾವುದು? 


ಯಾರ ಸ್ತುತಿ, ಕೀರ್ತನೆ, ಅರ್ಚನೆಯಿಂದ ಶ್ರೇಯಸ್ಸಾಗುತ್ತದೆ? ಸಮಸ್ತ ಧರ್ಮಗಳಲ್ಲಿ ಶ್ರೇಷ್ಠ ಧರ್ಮ ಯಾವುದು? ಯಾರ ಜಪ ಮಾಡುವುದರಿಂದ ಸಂಸಾರಚಕ್ರದ ಬಂಧನದಿಂದ, ಜನನ-ಮರಣಗಳ ಚಕ್ರದಿಂದ ಮುಕ್ತರಾಗಬಹುದು? ಈ ಎಲ್ಲ ಪ್ರಶ್ನೆಗಳಿಗೂ ಭೀಷ್ಮಾಚಾರ್ಯರು ಒಂದೇ ಉತ್ತರ ಹೇಳುತ್ತಾರೆ ಜಗತ್ಪ್ರಭುವೂ, ದೇವದೇವನೂ, ಅನಂತನೂ, ಪುರುಷೋತ್ತಮನೂ ಆದ ಮಹಾವಿಷ್ಣುವನ್ನು ವಿಷ್ಣುಸಹಸ್ರನಾಮದ ಮೂಲಕ ಸ್ತುತಿ ಮಾಡುವ ಎಲ್ಲರೂ ಸರ್ವದುಃಖಗಳಿಂದ ಪಾರಾಗುತ್ತಾರೆ. ಅಷ್ಟೇ ಅಲ್ಲ, ಅಂತಹವರು ನಿರಂತರವಾಗಿ ಪ್ರಗತಿಯ, ಅಭ್ಯುದಯದ, ಯಶಸ್ಸಿನ ಹಾದಿಯಲ್ಲಿ ಇರುತ್ತಾರೆ. 


ಮಂತ್ರದ್ರಷ್ಟ್ರಾರರಾದ ಋಷಿಮುನಿಗಳಿಂದ ಪರಿಪರಿಯಾಗಿ ಸ್ತುತಿಸಲ್ಪಟ್ಟ ಈ ವಿಷ್ಣುಸಹಸ್ರನಾಮದ ಪಾರಾಯಣದಿಂದ ಎಲ್ಲ ಪುರುಷಾರ್ಥಗಳೂ ಸಿದ್ಧಿಯಾಗುತ್ತವೆ.


*ಜಪಗಳಲ್ಲಿ ಸರ್ವಶ್ರೇಷ್ಠ*


ವಿಷ್ಣುಸಹಸ್ರನಾಮದಲ್ಲಿ ‘ಧರ್ಮರಾಜ ಕಿಂ ಜಪನ್ ಮುಚ್ಯತೇ ಜಂತುಃ ಜನ್ಮ ಸಂಸಾರಬಂಧನಾತ್’ ಎಂದು ಕೇಳಿದ ಪ್ರಶ್ನೆಗೆ ಜಪಗಳಲ್ಲಿ ವಿಷ್ಣುಸಹಸ್ರನಾಮ ಜಪಶ್ರೇಷ್ಠ ಎಂದು ಭೀಷ್ಮರು ಉತ್ತರಿಸಿದ್ದಾರೆ. ವಿಷ್ಣುಸಹಸ್ರನಾಮ ಪಾರಾಯಣ ಮಾಡುವಾಗ ನಾಮಮಂತ್ರ ತರಂಗಗಳು ಪರಿಸರ ಶುದ್ಧಿಮಾಡಿ, ಅಪೂರ್ವ ಸನ್ನಿಧಾನ ನಿರ್ಮಾಣ ಮಾಡುತ್ತವೆ.


*ಹನ್ನೊಂದರ ಮಹತ್ವ*


ಧರ್ಮ, ಭಕ್ತಿ, ಜ್ಞಾನ, ಪ್ರಜ್ಞೆ, ಮೇಧಾಶಕ್ತಿ, ಧೃತಿ, ಸ್ಥಿತಿ, ಬಲ, ಶ್ರವಣ, ಮನನ, ಶೀಲ, ವಿನಯ, ವಿದ್ಯೆ, ನೆಮ್ಮದಿ, ಮನಶ್ಶಾಂತಿ ಇವಿಷ್ಟು ವಿಷ್ಣುಸಹಸ್ರನಾಮದ ಚಕ್ರದಿಂದ ಎಂದರೆ ಹನ್ನೊಂದು ದಿನ ಪ್ರತಿದಿನ 11 ಬಾರಿ ಪಾರಾಯಣ ಮಾಡುವುದರಿಂದ ಲಭ್ಯವಾಗುತ್ತವೆ. ಹನ್ನೊಂದು ಚಕ್ರ ಮುಗಿಸಿದವರಿಗೆ ಪುನರ್ಜನ್ಮ ಇಲ್ಲ. ವಿಷ್ಣುಸಹಸ್ರನಾಮ ಇದು, ಪವಿತ್ರಕ್ಕೆ ಪವಿತ್ರ, ಮಂಗಳಕ್ಕೆ ಮಂಗಳ, ಇದನ್ನು ಪಾರಾಯಣ ಮಾಡುವವರ ಮನೆ, ಮನ ಪಾವನವಾಗುತ್ತದೆ.


*ವಿಷ್ಣು ಸಹಸ್ರನಾಮ ಚಕ್ರ*


ಯಾರು ವಿಷ್ಣುಸಹಸ್ರನಾಮ ಹೇಳುವರೋ, ಕೇಳುವರೋ ಅಂತಹವರಿಗೆ ಇಹದಲ್ಲಿ, ಪರದಲ್ಲಿ ಎಂದಿಗೂ ಅಶುಭ, ಅಮಂಗಳವೆನ್ನುವುದೇ ಇಲ್ಲ. 


ಇದರ ಪಾರಾಯಣದಿಂದ ಯಶಸ್ಸು, ಶ್ರೇಯಸ್ಸು, ಲಭ್ಯ. ಎಲ್ಲ ತಾಪತ್ರಯ, ಭಯಗಳೂ ನಿವಾರಣೆಯಾಗುತ್ತವೆ. ಆರೋಗ್ಯ, ಕಾಂತಿ, ಬಲ, ಸೌಂದರ್ಯ, ಹೆಚ್ಚುತ್ತದೆ. ಅಂತಃಕರಣ ಶುದ್ಧವಾಗುತ್ತದೆ. 


ಶ್ರದ್ಧೆ ಭಕ್ತಿಯಿಂದ ವಿಷ್ಣು ಸಹಸ್ರನಾಮಚಕ್ರ ಪೂರೈಸಿದವರು ಸುಖ, ಕ್ಷಮೆ, ಸಂಪತ್ತು, ಧೈರ್ಯ, ಸ್ಮೃತಿ, ಕೀರ್ತಿಗಳನ್ನು ಹೊಂದುತ್ತಾರೆ. 


ಶೀಘ್ರದಲ್ಲಿ ಎಲ್ಲ ನೋವು, ಸಂಕಟಗಳಿಂದ ಪಾರಾಗುತ್ತಾರೆ. ಶಾಂತಿ, ಸಮಾಧಾನ, ಧ್ಯಾನ, ನೆಮ್ಮದಿ, ದಯೆ, ತ್ಯಾಗ ಪ್ರೇಮ ಅವರಿಗೆ ಲಭಿಸುತ್ತವೆ. ವಿಷ್ಣುಸಹಸ್ರನಾಮ ಸರ್ವಶಾಸ್ತ್ರಗಳ ಸಾರ, ಸಾರೋದ್ಧಾರ. ಒಂದೊಂದು ನಾಮಕ್ಕೂ ನೂರು ನೂರು ಅರ್ಥಗಳು. 


*ಭಗವಂತನ ಸಾವಿರ ರೂಪಗಳ* *ಸಾವಿರನಾಮಗಳೇ ವಿಷ್ಣುಸಹಸ್ರನಾಮ. ಅದು ಬೃಹತೀಸಹಸ್ರದ ಸಾರ.*


(ಸಂಗ್ರಹ.ಕೃಪೆ ಪೇಸ್ ಬುಕ್)

04 June 2023

ಪ್ರತಿದಿನವೂ ಪರಿಸರ ದಿನಾಚರಣೆಯಾಗಲಿ....

 


ಪ್ರತಿದಿನವೂ ಪರಿಸರ ದಿನಾಚರಣೆಯಾಗಲಿ...

ಮತ್ತೊಮ್ಮೆ ಜೂನ್ ಬಂದಿದೆ.ಈ ತಿಂಗಳ ಐದು ವಿಶ್ವ ಪರಿಸರ ದಿನವೆಂದು ನೆನೆದು ಅಲ್ಲಲ್ಲಿ ಒಂದೊಂದು ಗಿಡನೆಟ್ಟು ಪೋಟೋ ಗೆ ಪೋಸ್ ಕೊಟ್ಟು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದರೆ ಆ ವರ್ಷದ ಪರಿಸರ ದಿನ ಮುಗಿದಂತೆ ಉಳಿದಂತೆ ವರ್ಷಪೂರ್ತಿ ಪರಿಸರಕ್ಕೆ ಹಾನಿ ಮಾಡುವ ಕಾಯಕ ಮುಂದುವರೆಸುತ್ತಾ ಅತಿ ವೃಷ್ಟಿ ,ಅನವೃಷ್ಟಿ, ಉಷ್ಣಾಂಶ ಹಚ್ಚೆಳಕ್ಕೆ ನಾವೇ ಕಾರಣರಾದರೂ ಪ್ರಕೃತಿ ಮಾತೆ ಬೈಯ್ಯುತಾ ಮುಂದಿನ ವರ್ಷ ಜೂನ್ ಐದಕ್ಕೆ ಕಳೆದ ವರ್ಷ ನೆಟ್ಟ ಒಣಗಿದ ಗಿಡ ತೆಗೆದು ಹೊಸ ಗಿಡ ನೆಡುತ್ತೇವೆ?  

ವಿಶ್ವ  ಪರಿಸರ ದಿನಾಚರಣೆಯ 50ನೇ ವರ್ಷಾಚರಣೆಯಲ್ಲಿದ್ದೇವೆ. ಆದರೂ ಪರಿಸರ ಮಾಲಿನ್ಯದ  ಸವಾಲುಗಳು  ನಮ್ಮನ್ನು ಕಾಡುತ್ತಲೇ ಇವೆ.  ಪರಿಸರ ಸಮಸ್ಯೆಗಳಿಗೆ ಪ್ರತಿಕ್ರಿಯೆಯನ್ನು ಸಂಘಟಿಸಲು 1972ರಲ್ಲಿ ಆರಂಭ ಗೊಂಡ ವಿಶ್ವಸಂಸ್ಥೆಯ ಅಂಗಸಂಸ್ಥೆ ಸಂಯುಕ್ತ ರಾಷ್ಟ್ರಗಳ ಪರಿಸರ ಕಾರ್ಯಕ್ರಮ (ಯುನೈಟೆಡ್ ನೇಷನ್ಸ್ ಎನ್ವಿರಾನ್ವೆಂಟ್ ಪ್ರೋಗ್ರಾಂ) ನಿಂದ ನೆದರ್ಲ್ಯಾಂಡ್ ಸಹಯೋಗದೊಂದಿಗೆ ಕೋಟ್ ಡಿ. ಐವರಿ ದೇಶ ಆತಿಥ್ಯ ವಹಿಸಿದೆ. ಈ ವರ್ಷದ ಥೀಮ್ ಸಲ್ಯೂಷನ್ ಟು ಪ್ಲಾಸ್ಟಿಕ್ ಪೊಲ್ಯೂಷನ್, ಯು ಎನ್ ಇ ಪಿ ವರದಿಯಂತೆ ಪ್ರತೀ ವರ್ಷವೂ ವಿಶ್ವದಾದ್ಯಂತ ಸುಮಾರು 430 ಮಿಲಿಯನ್ ಟನ್ ನಷ್ಟು ಏಕ ಬಳಕೆಯ ಪ್ಲಾಸ್ಟಿಕ್ ಉತ್ಪಾದನೆಯಾಗುತ್ತಿದೆ ಹಾಗೂ 2000 ಟ್ರಕ್ನಷ್ಟು ಪ್ಲಾಸ್ಟಿಕ್ನ್ನು ಪ್ರಪಂಚದಾದ್ಯಂತ ಕೆರೆ ನದಿ ಸಮುದ್ರಗಳಿಗೆ ಎಸೆಯಲಾಗುತ್ತಿದೆ.

ಪ್ಲಾಸ್ಟಿಕ್ ವಿಲೇವಾರಿ ಒಂದು ಜಾಗತಿಕ ಸಮಸ್ಯೆಯಾಗಿ ಬೆಳೆದು ನಿಂತಿದೆ, ಈ ಸಮಸ್ಯೆ ಜೈವಿಕ ಪ್ರಕ್ರಿಯೆಗಳನ್ನು ಬದಲಾಯಿಸುವ, ಆವಾಸ ಸ್ಥಾನಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಹವಾಮಾನ ವೈಪರೀತ್ಯಗಳಂತಹ ತೀವ್ರತರ ಸಮಸ್ಯೆಗಳಿಗೆ   ಎಡೆ ಮಾಡಿಕೊಡುತ್ತಿದೆ. ಈ ಪರಿಣಾಮಗಳು ನೇರವಾಗಿ ಜನಸಾಮಾನ್ಯನ ಸಾಮಾಜಿಕ ಸ್ವಾಸ್ಥ್ಯ, ಆಹಾರೋತ್ಪಾದನೆ, ಜೀವನ ಶೈಲಿಯ ಮೇಲೆ ಪರಿಣಾಮ ಬೀರುತ್ತಿದೆ.

ತೀವ್ರವಾಗಿ ಹೆಚ್ಚಳವಾಗುತ್ತಿರುವ ಪ್ಲಾಸ್ಟಿಕ್ ಮತ್ತು ಅದರ ಪರಿಣಾಮಗಳನ್ನು ಕಡಿಮೆ ಮಾಡಲೇಬೇಕಿರುವ ಅಗತ್ಯ ಉಂಟಾಗಿದ್ದು, ಯುಎನ್ಇಪಿಯು ಈ ಕುರಿತಂತೆ ಟರ್ನಿಂಗ್ ಆಫ್ ದ ಟ್ಯಾಪ್ ಎಂಬ ವರದಿಯನ್ನು ಸಿದ್ಧಪಡಿಸಿದ್ದು, ಮಾರುಕಟ್ಟೆ ರೂಪಾಂತರದ ಮೂಲಕ ಪ್ಲಾಸ್ಟಿಕ್ ನಿಯಂತ್ರಣ ಕುರಿತಂತೆ ಕ್ರಮವನ್ನು ರೂಪಿಸಿದೆ. ಇದು ಪರಿಸರ, ಆರ್ಥಿಕತೆ ಎರಡನ್ನೂ ಗಮನದಲ್ಲಿರಿಸಿಕೊಂಡು ಸಿದ್ಧಪಡಿಸಿದ ವರದಿ. ವರದಿಯ ಪ್ರಕಾರ ರಿಯೂಸ್, ರಿಸೈಕಲ್, ರಿ ಓರಿಯೆಂಟ್ ಹಾಗೂ ಡೈವರ್ಸಿಫೈ ಎಂಬ ಅಂಶಗಳಿಂದ ಪ್ಲಾಸ್ಟಿಕ್ ನಿರ್ವಹಣೆಗೆ ಮಾರ್ಗ ಸೂಚಿಯಾಗಿದೆ. 

ಹವಾಮಾನ ಬದಲಾವಣೆ ಹಾಗೂ ಜಾಗತಿಕ ತಾಪಮಾನದ ಏರಿಕೆಯಲ್ಲಿಯೂ  ಪ್ಲಾಸ್ಟಿಕ್ನ ಪಾರಮ್ಯ ಮರೆಯಲಾಗದು. ಪ್ಲಾಸ್ಟಿಕ್ನ ತಯಾರಿಕೆಯಿಂದ ಹಿಡಿದು ವಿಲೇವಾರಿವರೆಗೂ ಇಂಗಾಲದ ತೀವ್ರತೆ ಇರುವ  ಚಟುವಟಿಕೆಗಳಾಗಿದ್ದು, ಜಾಗತಿಕವಾಗಿ ಪ್ಲಾಸ್ಟಿಕ್ ಉದ್ಯಮದ ತ್ವರಿತವಾದ ಹೆಚ್ಚಳದಿಂದಾಗಿ ಹಸಿರುಮನೆ ಅನಿಲಗಳ ಉತ್ಪಾದನೆಯೂ ಹೆಚ್ಚಾಗಿದೆ. ಇದು ಹವಾಮಾನ ಬದಲಾವಣೆಗೆ ಕಾರಣವಾಗುತ್ತಿದೆ. ಮನುಷ್ಯ ಬದುಕಬಲ್ಲ ಗರಿಷ್ಠ ತಾಪಮಾನವು 35 ಡಿಗ್ರಿ ಸೆಂಟಿಗ್ರೇಡ್ ಆಗಿದ್ದು, ಈ ವರ್ಷರ ಬೇಸಿಗೆಯಲ್ಲಿ ಭ ಭಾರತದ ಹಲವೆಡೆ  ಉಷ್ಣತೆಯು  ಪ್ರಮಾಣವು 45ಡಿಗ್ರಿ ದಾಟಿ
ಹೆಚ್ಚಿನ ತಾಪಮಾನವುಂಟಾಗಿ  ಬದುಕು  ಅಸಹನೀಯವಾಗಿರುವುದು ನಮ್ಮ ಕಣ್ಣ ಮುಂದಿದೆ.ಮುಂದಿನ ದಿನಗಳಲ್ಲಿ ಈ ಉಷ್ಣತೆ ಏರುವುದಿಲ್ಲ ಎಂಬುದಕ್ಕೆ ಖಾತ್ರಿ ಇಲ್ಲ.

ಜೀವ ವೈವಿಧ್ಯತೆಯ ಮೇಲೆಯೂ  ಪ್ಲಾಸ್ಟಿಕ್ನ ಪರಿಣಾಮ ಘನಘೋರ.
ಜೀವಿ ಪರಿಸರ ವ್ಯವಸ್ಥೆಯಲ್ಲಿ ಹೆಚ್ಚಿನ ಬಳಕೆಯಿಂದಾಗಿ ಪ್ಲಾಸ್ಟಿಕ್ ನಿರಂತರವಾಗಿ ಉಳಿದು ಹೋಗಿದೆ. ನೀರಿನ ಆಕರಗಳಿಗೆ ಪ್ಲಾಸಿಕ್
ತ್ಯಾಜ್ಯ, ಪ್ಲಾಸ್ಟಿಕ್ ಉತ್ಪಾದನೆಯಿಂದ ಬಿಡುಗಡೆಯಾಗುವ ರಾಸಾಯನಿಕಗಳು ಜೀವ ವೈವಿಧ್ಯತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಸಾಗರ ಪರಿಸರ ವ್ಯವಸ್ಥೆಯಲ್ಲಿ ಪ್ಲಾಸ್ಟಿಕ್ ಮಾಲಿನ್ಯ ಶೇ.10ರಷ್ಟು ಹೆಚ್ಚುತ್ತಲೇ ಇದ್ದು, ಸಾಗರ ಪರಿಸರ ವ್ಯವಸ್ಥೆಯಲ್ಲಿ ಶೇ. 86ರಷ್ಟು ಸರಿಸೃಪಗಳು, ಶೇ.44ರಷ್ಟು ಜಲಪಕ್ಷಿಗಳು, ಶೇ.43ರಷ್ಟು ಸಸ್ತನಿಗಳು ಅಪಾಯದಂಚಿಗೆ ತಲುಪಿದ್ದು, ಸುಮಾರು 800 ವಿವಿಧ ಜಾತಿಯ ಸಾಗರ ಜೀವ ವೈವಿಧ್ಯವು ಅಪಾಯದಂಚಿಗೆ ಸೇರಿವೆ. ಹೀಗೆಯೆ ಪ್ರಾಣಿ ಪಕ್ಷಿಗಳ ಆವಾಸ ಸ್ಥಾನ ನಾಶಕ್ಕೆ ಹಾಗು ಪರಿಸರ ವ್ಯವಸ್ಥೆಯ ಆಹಾರ ಸರಪಳಿಯಲ್ಲಿ ಪ್ಲಾಸ್ಟಿಕ್ ಸೇರಿಹೋಗಿರುವುದು ಅಪಾಯಕಾರಿ ಕರೆಗಂಟೆಯಾಗಿದೆ.

ಮಾನವನ ಆರೋಗ್ಯದ ಮೇಲೆ ಪ್ಲಾಸ್ಟಿಕ್ ದುಷ್ಪರಿಣಾಮಗಳು ಹಲವಾರು ಸಂಶೋಧನೆಗಳಿಂದ ಋಜುವಾತಾಗಿದೆ.
ಉಸಿರಾಟದಿಂದಲೋ, ಆಹಾರ ಸೇವನೆಯಿಂದಲೋ, ಸ್ಪರ್ಶದಿಂದಲೋ ಪ್ರತಿನಿತ್ಯ ಹಲವಾರು ರಾಸಾಯನಿಕಗಳ, ಮೈಕ್ರೋಪ್ಲಾಸ್ಟಿಕ್ನ ಸಂಪರ್ಕಕ್ಕೆ ಬರುತ್ತೇವೆ, ಡಬ್ಬ ಡಬ್ಲ್ಯುಎಫ್ನ ವರದಿಯೊಂದರಂತೆ ವಾರವೊಂದಕ್ಕೆ ಮನುಷ್ಯನು  ತನಗರಿವಿಲ್ಲದೇ  ಸುಮಾರು 5 ಗ್ರಾಂ ನಷ್ಟು ಪ್ಲಾಸ್ಟಿಕ್ ಅನ್ನು  ಸೇವಿಸುತ್ತಿದ್ದಾನೆ. ಇದು ಮನುಷ್ಯನಲ್ಲಿ, ಅನೇಕ ರೋಗಗಳಿಗೆ, ಶಾಶ್ವತ ನ್ಯೂನತೆಗಳಿಗೆ, ಮಕ್ಕಳಲ್ಲಿ ಶಿಶುಮರಣಕ್ಕೆ ಕಾರಣ ವಾಗುತ್ತಿರುವುದು ಸಂಶೋಧನೆಗಳಿಂದ ಬೆಳಕಿಗೆ ಬಂದಿದೆ. ಹಾಗೂ ಪ್ಲಾಸ್ಟಿಕ್ನಿಂದ ಕ್ಯಾನ್ಸರ್, ಹಾರ್ಮೋನುಗಳ ಚಟುವಟಿಕೆಗಳಲ್ಲಿ ಬದಲಾವಣೆಗಳಾಗಿರುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಪ್ಲಾಸ್ಟಿಕ್ ಆಹಾರ ಸರಪಳಿಯಲ್ಲಿ ಉಳಿದು ಹೋಗಿರುವುದು ಅಪಾಯಕಾರಿ ಬೆಳವಣಿಗೆ ಹೀಗೆ, ಜೀವಿ ಪರಿಸರ ಪ್ಲಾಸ್ಟಿಕ್ ಉಳಿದುಹೋಗಿದ್ದು, ಪ್ಲಾಸ್ಟಿಕ್ ನಿಯಂತ್ರಣ ಮತ್ತು ಪ್ಲಾಸ್ಟಿಕ್ನ ಅಪಾಯಗಳ ನಿರ್ಮೂಲನೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕಿದೆ.

ಪ್ಲಾಸ್ಟಿಕ್ನಿಂದ ಮಾತ್ರವಲ್ಲದೇ, ಮಾನವನ ವಿವಿಧ ಅಭಿವೃದ್ಧಿ ಚಟುವಟಿಕೆಗಳಿಂದ ಮೂಲಭೂತ ಅಂಶಗಳಾದ ಗಾಳಿ, ನೀರು, ಶಬ್ದ, ಮಣ್ಣು ಮಲಿನವಾಗುತ್ತಿವೆ, ಕೇವಲ ಆರ್ಥಿಕ ಅಭಿವೃದ್ಧಿಯಷ್ಟೇ ಅಲ್ಲದೆ ಪರಿಸರ ಸಂರಕ್ಷಣಾ ದೃಷ್ಟಿಕೋನ ಎಲ್ಲ ಅಭಿವೃದ್ಧಿಕಾರ್ಯಗಳ ಆರಂಭಕ್ಕೂ ಮೊದಲ ಆದ್ಯತೆಯಾಗಬೇಕು.

ಕಳೆದ ವರ್ಷ ಕೇಂದ್ರ ಸರ್ಕಾರ ಏಕಬಳಕೆಯ ಪ್ಲಾಸ್ಟಿಕ್ ನಿಷೇಧ ಮಾಡಿ ಆದೇಶ ಹೊರಡಿಸಿದೆ. ಪೂರ್ಣವಾಗಿ ಜಾರಿಯಾಗದಿದ್ದರೂ ತಕ್ಕಮಟ್ಟಿಗೆ ಈ ಪ್ಲಾಸ್ಟಿಕ್ ನಿಷೇಧ ದಾರಿಯಾಗುತ್ತಿದೆ. ಹಣ್ಣು ,ದಿನಸಿ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಚೀಲಗಳ ಬದಲಿಗೆ ಪೇಪರ್, ಮತ್ತು ಬಟ್ಟೆ ಚೀಲ ಬಳಕೆ ಹೆಚ್ಚಾಗಿದೆ. ಇದು ಸಕಾರಾತ್ಮಕ ಬದಲಾವಣೆಯ   ಸೂಚಕ  . ಇತ್ತೀಚಿಗಭೆ   ತಿರುಮಲಕ್ಕೆ ಭೇಟಿ ನೀಡಿದಾಗ ಅಲ್ಲಿ ಎಲ್ಲಾ ಮಾರಾಟ ಮಳಿಗೆಗಳಲ್ಲಿ ಪ್ಲಾಸ್ಟಿಕ್  ನೀರಿನ ಬಾಟಲ್ ಬದಲಿಗೆ ಗಾಜಿನ ನೀರಿನ ಬಾಟಲ್ ಮಾರುವುದು ಕಂಡು ಖುಷಿಯಾಯಿತು.ಮತ್ತೊಂದು ಉದಾಹರಣೆಯಾಗಿ ಕಳೆದ ವಾರ ಚಿಕ್ಕಮಗಳೂರಿನ ಝರಿ ಇಕೋ ಸ್ಟೇ ನಲ್ಲಿ ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ವಾತಾವರಣ ಕಂಡು ಖುಷಿಯಾಯಿತು.
ಪ್ಲಾಸ್ಟಿಕ್ ಮುಕ್ತ ಜಗವ ಕಾಣಲು ಮತ್ತು
ಪರಿಸರ ಸಂರಕ್ಷಣೆಯಲ್ಲಿ ಸರ್ಕಾರಗಳು ಯಾವುದೇ ಕಠಿಣ ಕಾನೂನು ಜಾರಿಗೊಳಿಸಿದರೂ   ವೈಯಕ್ತಿಕ ಮತ್ತು ಸಮುದಾಯದ ಪಾತ್ರ ಹಿರಿದು ನಮ್ಮ ಜವಾಬ್ದಾರಿ ಅರಿತು ನಾವು ನಮ್ಮ ಪರಿಸರ ಸಂರಕ್ಷಣೆಗೆ ಪಣ ತೊಡಬೇಕಿದೆ.ತನ್ಮೂಲಕ ಸುಸ್ಥಿರ ಅಭಿವೃದ್ಧಿಗೆ ಪಣ ತೊಡಬೇಕಿದೆ.ಅದಕ್ಕೆ ಪ್ರತಿದಿನವೂ ಪರಿಸರದಿನಾಚರಣೆ ಆಚರಿಸುವ ಮನಸ್ಥಿತಿಯನ್ನು ನಾವು ಹೊಂದಬೇಕಿದೆ.ಏಕೆಂದರೆ ಇರುವುದೊಂದೇ ಭೂಮಿ ಇದರ ಅವಶ್ಯಕತೆ ನಮಗಿದೆ .ನಮ್ಮ ಅವಶ್ಯಕತೆ ಭೂಮಿಗಿಲ್ಲ. ಈ ಭುವಿಯನ್ನು ಉಳಿಸುವ ಜವಾಬ್ದಾರಿ ನಮ್ಮದೆ ಅಲ್ಲವೇ? 

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಶಿಕ್ಷಕರು
ತುಮಕೂರು

01 June 2023

ಆಶಾದಾಯಕ ಜಿ ಡಿ ಪಿ ಬೆಳವಣಿಗೆ.

 


ಆಶಾದಾಯಕ ಆರ್ಥಿಕ ಪ್ರಗತಿ.


ನೆರೆಯ ಶ್ರೀಲಂಕಾ, ಮತ್ತು ಪಾಕಿಸ್ತಾನ ದೇಶಗಳಲ್ಲಿ ಹಣದುಬ್ಬರ ಮಿತಿಮೀರಿ ಆ ದೇಶಗಳ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ‌

ವಿಶ್ವದ ಬಹುತೇಕ ದೇಶಗಳು ಆರ್ಥಿಕ ಹಿಂಜರಿತದ ಭೀತಿಯಿಂದ ಬಳಲುತ್ತಾ , ಜಗತ್ತಿನ ಕೆಲ ದೈತ್ಯ ಕಂಪನಿಗಳು ಉದ್ಯೋಗ ಕಡಿತ ಮಾಡುವ ಈ ದಿನಗಳಲ್ಲಿ ಭಾರತದ ಜಿ ಡಿ ಪಿ ಏರಿಕೆಯ ಗತಿ ದಾಖಲಿಸಿರುವುದು ಭಾರತದ ಮತ್ತು ಜಗತ್ತಿನ ಪಾಲಿಗೆ ಇದು ಆಶಾದಾಯಕ ಸಂಗತಿಯಾಗಿದೆ.

ಭಾರತದ ಅರ್ಥವ್ಯವಸ್ಥೆಯು ಜನವರಿ ಮಾರ್ಚ್ ತ್ರೈಮಾಸಿಕದಲ್ಲಿ ಶೇಕಡ 6.1ರಷ್ಟು ಬೆಳವಣಿಗೆ ಕಂಡಿದೆ. ಇದರಿಂದಾಗಿ ದೇಶದ ಅರ್ಥವ್ಯವಸ್ಥೆಯು  2022-23ನೆಯ ಹಣಕಾಸು ವರ್ಷದಲ್ಲಿ ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆಯು ಶೇ 7.2ರಷ್ಟು ಅದಂತಾಗಿದೆ. ತನ್ಮೂಲಕ ಜಗತ್ತಿನಲ್ಲಿ ಅತಿ ಹೆಚ್ಚು ಜಿ ಡಿ ಪಿ ಇರುವ ದೇಶವಾಗಿದೆ ಹೊರಹೊಮ್ಮಿದೆ.ಇದೇ ವೇಳೆಯಲ್ಲಿ ಬಲಿಷ್ಠ ಆರ್ಥಿಕತೆ ಎಂದೇ ಹೆಸರಾದ ಅಮೆರಿಕ4%, ಚೀನಾ 3%. ಜಿಡಿಪಿ ಬೆಳವಣಿಗೆ ದಾಖಲಿಸಿ ಮೂರನೆ ಸ್ಥಾನಕ್ಕೆ ಕುಸಿದಿದೆ.

ಕೋವಿಡ್ ನಂತರ ಹಲವಾರು ಜಾಗತಿಕ ಸವಾಲುಗಳ ನಡುವೆಯೂ 

2021-22ರಲ್ಲಿ ದೇಶದ ಜಿಡಿಪಿ ಶೇ 9.1ರಷ್ಟು ಬೆಳವಣಿಗೆ ಸಾಧಿಸಿತ್ತು. 

ಕೃಷಿ, ತಯಾರಿಕೆ, ಗಣಿಗಾರಿಕೆ, ಹಾಗೂ  ನಿರ್ಮಾಣ ವಲಯಗಳಲ್ಲಿನ ಉತ್ತಮ ಬೆಳವಣಿಗೆಯು ಒಟ್ಟು ಬೆಳವಣಿಗೆಯು ನಿರೀಕ್ಷೆಗೆ ಮೀರಿದ ಮಟ್ಟವನ್ನು ತಲುಪುವಲ್ಲಿ ಕೊಡುಗೆ ನೀಡಿವೆ.


ಈ ಪ್ರಮಾಣದ ಬೆಳವಣಿಗೆಯ ಪರಿಣಾಮವಾಗಿ ದೇಶದ ವ್ಯವಸ್ಥೆಯ ಗಾತ್ರವು 3.3 ಟ್ರಿಲಿಯನ್ ಅಮೆರಿಕನ್ ಡಾಲರ್ ಆಗಿದೆ. ಅಲ್ಲದೆ, ಇದು ಮುಂದಿನ ಕೆಲವು ವರ್ಷಗಳಲ್ಲಿ ಅರ್ಥ ವ್ಯವಸ್ಥೆಯ ಗಾತ್ರವನ್ನು 5 ಟ್ರಿಲಿಯನ್ ಡಾಲರ್‌ಗೆ ಬೆಳೆಸುವುದಕ್ಕೆ ಭೂಮಿಕೆ ಸಜ್ಜುಮಾಡಿ ಕೊಟ್ಟಂತೆ ಆಗಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 ದೇಶದ ಅರ್ಥ ವ್ಯವಸ್ಥೆಯು ಮಾರ್ಚ್ ತ್ರೈಮಾಸಿಕದಿಂದ ವೇಗವಾಗಿ ಬೆಳವಣಿಗೆ ಮುಖ್ಯ ಅರ್ಥ ಕಾಣುತ್ತಿದೆ ಎಂಬುದನ್ನು ಜಿಡಿಪಿ ಅಂಕಿ- ಅಂಶಗಳು ಹೇಳುತ್ತಿವೆ ಎಂದು ತಜ್ಞರು. ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ .

ಕಚ್ಚಾವಸ್ತುಗಳ ಬೆಲೆ ಕಡಿಮೆ ಆಗುತ್ತಿರುವ ಈ ದಿನಗಳಲ್ಲಿ ಕಚ್ಚಾ ತೈಲದ ಬೆಲೆ ತಗ್ಗಿದೆ. ಇದು ಸಹ ಆರ್ಥಿಕ   ಚೇತರಿಕೆಗೆ ಕಾರಣವಾಗಿದೆ.

ಜಿಡಿಪಿಯ ಬೆಳವಣಿಗೆಯ ಜೊತೆಯಲ್ಲಿ ಕೆಲ ಸವಾಲುಗಳನ್ನು ಸಹ ನಾವು ಗಮನದಲ್ಲಿಟ್ಟುಕೊಂಡು ಮುನ್ನಡೆಯಬೇಕಿದೆ.  ಹಣದುಬ್ಬರ ನಿಯಂತ್ರಣಕ್ಕೆ ಬರಬೇಕಿದೆ. ಜಿಡಿಪಿಗೆ ಸೇವಾ ವಲಯದಷ್ಟೇ ಕೊಡುಗೆ ಸಲ್ಲಿಸಲು ಕೃಷಿ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಲು ರೈತರ ಆದಾಯವನ್ನು ದ್ಬಿಗುಣಗೊಳಿಸಲು ಕ್ರಮಕೈಗೊಂಡರೆ ಹಾಗೂ ಎಲ್ಲಾ ಮೂರು ವಲಯಗಳ ಆರ್ಥಿಕ ಚಟುವಟಿಕೆಗಳನ್ನು ಇನ್ನೂ ಉತ್ತೇಜನ ನೀಡುವ ಉಪಕ್ರಮಗಳನ್ನು ಜಾರಿಗೆ ತಂದದ್ದೇ ಆದರೆ ಭಾರತವು 5 ಟ್ರಿಲಿಯನ್ ಆರ್ಥಿಕತೆ ಹೊಂದಿದೆ ದೇಶವಾಗಿ ಅಭಿವೃದ್ಧಿ ಹೊಂದುವುದರಲ್ಲಿ ಸಂದೇಹವಿಲ್ಲ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಶಿಕ್ಷಕರು

ತುಮಕೂರು

 

ಸ್ಯಾರಿಗೆ ಸಂಸ್ಥೆ.

 


*ಸ್ಯಾರಿಗೆ ಸಂಸ್ಥೆ*


ಮಹಿಳೆಯರಿಗೆ ಉಚಿತವಾಗಿ

ಪ್ರಯಾಣ ಕೈಗೊಳ್ಳಲು 

ಸಿದ್ದತೆ ನಡೆಸಿದೆ  ರಾಜ್ಯ ಸಾರಿಗೆ ಸಂಸ್ಥೆ|

ಪುರುಷರು ಕೈ ಕೈ ಹಿಸುಕಿಕೊಂಡು

ಹೆಸರು ಬದಲಾವಣೆ ಮಾಡಿದ್ದಾರೆ

ಕರ್ನಾಟಕ ಸ್ಯಾರಿಗೆ ಸಂಸ್ಥೆ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು