30 September 2023

ವಿಶ್ವ ಹೃದಯ ದಿನ....


 


ವಿಶ್ವ ಹೃದಯ ದಿನ ...

ಆಧುನಿಕ ಜೀವನಶೈಲಿ,ಆಹಾರ ಪದ್ದತಿ, ಅಶಿಸ್ತಿನ ಜೀವನ ,ಕೆಟ್ಟ ಚಟಗಳಿಗೆ ಬಲಿಯಾಗುವುದು ಇವೆಲ್ಲ ಕಾರಣದಿಂದಾಗಿ ಹೃದಯ ಸಂಬಂಧಿ ರೋಗಗಳು ಈಗೀಗ ಸಾಮಾನ್ಯವಾಗಿವೆ.ಇದಕ್ಕೆ ಅಪವಾದವೆಂಬಂತೆ ಯಾವುದೇ ಚಟಗಳು ಇಲ್ಲದಿದ್ದರೂ ಕೆಲವರಿಗೆ ಹೃದಯ ಸಂಬಂಧಿ ಕಾಯಿಲೆಗಳು ಸಾಮಾನ್ಯವಾಗಿ ಜನರು ಚಿಂತೆ ಮಾಡುವಂತಾಗಿದೆ.

ಹೃದಯದ ಬಗ್ಗೆ ಹೃದಯ ಸಂಬಂಧಿಸಿದ ರೋಗಗಳ ಬಗ್ಗೆ ಜಾಗೃತಿ ಮೂಡಿಸಲು

1991ರಿಂದ ಪ್ರತಿ ವರ್ಷದ ಸೆಪ್ಟೆಂಬರ್ ನಲ್ಲಿ ಕೊನೆಯ ಭಾನುವಾರ ವಿಶ್ವ ಹೃದಯ ದಿನವನ್ನು (World Heart Day) ವಿಶ್ವ ಹೃದಯ ಸಂಸ್ಥೆ (ವರ್ಲ್ಡ್ ಹಾರ್ಟ್ ಫೆಡರೇಷನ್ ) ಯು ಆಯೋಜಿಸುತ್ತಿತ್ತು. ಆದರೆ 2011 ರಿಂದ ವಿಶ್ವ ಹೃದಯ ದಿನವನ್ನು ಸೆಪ್ಟೆಂಬರ್ ಕೊನೆಯ ಭಾನುವಾರದ ಬದಲಾಗಿ 29 ಸೆಪ್ಟೆಂಬರ್ ರಂದು ಆಚರಿಸಲಾಗುತ್ತದೆ.


ವಿಶ್ವ ಹಾರ್ಟ್ ಫೆಡರೇಶನ್ ಸಂಸ್ಥೆಯು ಮುಖ್ಯ ಅಪಾಯಕಾರಿ ಅಂಶಗಳಾದ , ತಂಬಾಕು, ಅನಾರೋಗ್ಯಕರ ಆಹಾರ ಮತ್ತು ದೈಹಿಕ ಚಟುವಟಿಕೆ ಇಲ್ಲದಿರುವಿಕೆ ಗಳನ್ನು ನಿಯಂತ್ರಿಸುವುದರಿಂದ ಹೃದಯ ರೋಗ ಮತ್ತು ಹೃದಯಾಘಾತಗಳಿಂದ ಅಕಾಲಿಕ ಮರಣಗಳನ್ನು ಕನಿಷ್ಠ ಪ್ರತಿಶತ 80%ರಷ್ಟರ ಮಟ್ಟಿಗೆ ತಪ್ಪಿಸಬಹುದಾಗಿದೆ ಎಂದು ಪ್ರಚಾರ ಮಾಡುತ್ತದೆ. ಇಂತಹ ಸಾರ್ವಜನಿಕ ಭಾಷಣ, ಮತ್ತು ಪ್ರದರ್ಶನ , ನಡಿಗೆ ಮತ್ತು ಓಟ, ಸಂಗೀತ ಅಥವಾ ಕ್ರೀಡಾಕೂಟಗಳಂಥ ಚಟುವಟಿಕೆಗಳನ್ನು ವಿಶ್ವದಾದ್ಯಂತ ಏರ್ಪಡಿಸುತ್ತದೆ.


ವಿಶ್ವ ಹೃದಯ ಸಂಸ್ಥೆಯು (ವರ್ಲ್ಡ್ ಹಾರ್ಟ್ ಫೆಡರೇಷನ್ ) ಹೃದಯ ಕಾಯಿಲೆಗಳ ತಡೆಗಟ್ಟುವಿಕೆಗಾಗಿ ಮೀಸಲಾಗಿರುವ ಜಾಗತಿಕ ಸಂಸ್ಥೆಯಾಗಿದ್ದು ಮತ್ತು ಏಷ್ಯಾ ಫೆಸಿಫಿಕ್, ಯುರೋಪ್, ಪೂರ್ವ ಮೆಡಿಟರೇನಿಯನ್, ಅಮೆರಿಕಾ ಮತ್ತು ಆಫ್ರಿಕಾದ ಪ್ರದೇಶಗಳಲ್ಲಿರುವ ಸುಮಾರು 100 ದೇಶಗಳ ಹೃದಯ ಸಂಸ್ಥೆಗಳನ್ನು ನಿಯಂತ್ರಿಸುತ್ತಿದ್ದು ಸ್ವಿಜರ್ಲ್ಯಾಂಡ್ ನ ಜಿನೀವಾ ಮೂಲದ ಸರಕಾರೇತರ ಸಂಘಟನೆಯಾಗಿದೆ.
ನಮ್ಮ ಹೃದಯವನ್ನು ನಾವು ಜೋಪಾನವಾಗಿ ಕಾಪಾಡಿಕೊಳ್ಳೋಣ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು

29 September 2023

ಸ್ವಾಮಿನಾಥನ್..

 




ಸ್ವಾಮಿನಾಥನ್..


ಕೋಟ್ಯಂತರ ಭಾರತೀಯರ

ಹಸಿವು ನೀಗಿಸಿದ ಅನ್ನದಾತ |

ನಮ್ಮಲ್ಲೆರ ಕೃತಜ್ಞತಾ ಪೂರ್ವಕ

ನಮನಗಳು ನಿಮಗೆ ಸ್ವಾಮಿನಾಥ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು

ನಂದನವನ.

 

ನೀಲ್ಲದ ದಿನಗಳು ನೀರಸ

ಮರುಭೂಮಿಯ ಜೀವನ|

ನೀ ಬಳಿ ಸುಳಿದರೂ ಸಾಕು

ಅದೇ ನನ್ನ ನಂದನವನ||

26 September 2023

ಪರಿಸರಪ್ರಿಯ ಮತ್ತು ಆಸ್ತಿಕರ ಮೆಚ್ಚಿ‌ನ ಕ್ಷೇತ್ರ ಶ್ರೀ ಕುಕ್ಕೆ ಸುಬ್ರಹ್ಮಣ್ಯ

 



ಸರ್ಪ ಸಂಸ್ಕಾರದ ಕ್ಷೇತ್ರ ಶ್ರೀ ಕುಕ್ಕೆ ಸುಬ್ರಹ್ಮಣ್ಯ.


ಕರ್ನಾಟಕದ ಶ್ರೀಮಂತ ದೇಗುಲಗಳಲ್ಲಿ ಒಂದು ಕುಕ್ಕೆ  ಸುಬ್ರಹ್ಮಣ್ಯ ದೇವಾಲಯ. ಆಸ್ತಿಕರ ಪಾಲಿಗೆ ಕುಕ್ಕೆ ಎಂದೇ ಹೆಸರಾದ ಈ ದೇವಾಲಯ ಇರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. ನಾಗಾರಾಧನೆ, ಆಶ್ಲೇಷಬಲಿ ಪೂಜೆ, ಸರ್ಪಸಂಸ್ಕಾರಕ್ಕೆ  ಹೆಸರಾದ ಈ ಕ್ಷೇತ್ರದಲ್ಲಿ ಪ್ರತಿದಿನವೂ ಒಂದಿಲ್ಲೊಂದು ವಿಶೇಷ ಪೂಜೆಗಳು ನಡೆಯುತ್ತವೆ ಷಷ್ಠಿ ದಿನಗಳು ಮತ್ತು ಮಂಗಳವಾರಗಳ ದಿನ ಹೆಚ್ಚು ಭಕ್ತರು ಈ ಕ್ಷೇತ್ರಕ್ಕೆ ಭೇಟಿ ನೀಡುವರು. ನಾವು ಸಹ  ಧರ್ಮಸ್ಥಳದ ಸ್ವಾಮಿಯ ದರ್ಶನದ ನಂತರ ಕುಕ್ಕೆ ಗೆ ಹೋಗಿ ಸುಬ್ಬಯ್ಯನ ದರ್ಶನ ಪಡೆದೇ ಬರುವೆವು.

ರಮ್ಯ ಕಾಡಿನ ಮತ್ತು ಬೆಟ್ಟಗುಡ್ಡಗಳ ನಡುವೆ ಇರುವ ಈ ದೇವಾಲಯ ಪ್ರಕೃತಿ ಪ್ರಿಯರನ್ನು ಸಹ ಸೆಳೆಯುತ್ತದೆ. ಕುಮಾರ ಧಾರಾ ಮ

ನದಿಯ ಸ್ನಾನವೂ ಸಹ ಒಂದು ಸುಂದರ ಅನುಭೂತಿಯನ್ನು ನೀಡುತ್ತದೆ.

ಈ ದೇವಾಲಯದ ಬಗ್ಗೆ ಇರುವ ಒಂದು ಐತಿಹ್ಯ ಹೀಗಿದೆ.

ಹಿಂದೆ ಕಾಡು ಬೆಟ್ಟಗಳಿಂದ ಕೂಡಿದ 'ಪೊಸರ' ಎಂಬ ಸ್ಥಳದಲ್ಲಿ ಕುಕ್ಕ ಮತ್ತು ಲಿಂಗ ಎಂಬ ಸೋದರ ಮಲೆಕುಡಿಯರು ವಾಸವಾಗಿದ್ದರು. ಇವರು ಗೆಡ್ಧೆ ಗೆಣಸು ಸಂಗ್ರಹ ಮತ್ತು ಪ್ರಾಣಿ ಬೇಟೆಯಿಂದ ಜೀವನ ನಡೆಸುತ್ತಿದ್ದರು.ಬಿಲ್ಲು,ಬಾಣ ಪ್ರಯೋಗದಲ್ಲಿ ಪರಿಣಿತರಾದ ಇವರು ತಮ‍್ಮ ಪರಿವಾರದ ನಾಯಕರಾಗಿದ್ದರು. ಒಂದೊಮ್ಮೆ ಈ ಮಲೆಕುಡಿಯ ನಾಯಕರು ಬೇಟೆಯಾಡುವ ಸಲುವಾಗಿ ಪೂರ್ವಭಾಗದ ಮಲೆಗೆ ಹೋಗಿದ್ದರು. ಆಯಾಸ ಪರಿಹಾರಕ್ಕಾಗಿ ಕಲ್ಲಮೇಲೆ ಕುಳಿತಿರುವಾಗ ಸಂಜೆಯಾಗುತ್ತಿರುವ ಆ ಹೊತ್ತಿನಲ್ಲಿಕಾಡಿನ ಮಧ್ಯೆ ಭೀಕರ ಬೆಂಕಿಯ ಉರಿ ಆವರಿಸುತ್ತಿರುವುದು ಕಂಡಿತು. ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸುತ್ತಿರುವಾಗ ಇವರಿಗೊಂದು ಆರ್ತ ಧ್ವನಿ ಕೇಳಿಸಿತು. ಅತ್ತ ಕಡೆ ನೋಡಿದಾಗ ಒಂದು ಬಿದಿರಿನ ಹಿಂಡಿಲು ಉರಿಯುತ್ತಿರುವುದು ಗೋಚರಿಸಿತು. 'ಭಯ ಪಡಬೇಡಿ ನನ‍್ನನ್ನು ರಕ್ಷಿಸಿ ' ಎಂದು ಕೇಳಿ ಬರುತ‍್ತಿದ್ದ ಮನುಷ್ಯ ಸ್ವರದ ಕಡೆಗೆ ನೋಡಿದಾಗ ಉರಿಯುತ್ತಿರುವ ಬಿದಿರಿನ ಹಿಂಡಿನಲ್ಲಿ ಉರಿಯದೆ ಇದ್ದ ಒಂದು ಬಿದಿರಿನ ತುದಿಯಲ್ಲಿ ಸುರುಳಿಯಾಗಿ ಸುತ್ತಿ ಜೀವ ರಕ್ಷಣೆಗಾಗಿ ಒದ್ಧಾಡುವ ಸರ್ಪ ವೊಂದು ಗೋಚರಿಸಿತ್ತು. ಭಯ ಭೀತರಾದ ಕುಕ್ಕ-ಲಿಂಗರು ಅದನ್ನು ನೋಡಿದಾಗ  ಸರ್ಪ ಮನುಷ್ಯ ಸ್ವರದಲ್ಲಿ ಗಂಭೀರವಾಗಿ "ನೀವು ನನ್ನನ್ನು ರಕ್ಷಿಸಿದ್ದೇ  ಆದಲ್ಲಿ ಮುಂದೆ ನಿಮಗೆ ಒಳ್ಳೆಯದಾಗುವುದು" ಎಂದು ದಿವ್ಯವಾಣಿಯಲ್ಲಿ ಹೇಳಿತು. ಆಗ ಕುಲದೇವರಾದ ಲಿಂಗರೂಪಿ ಶಿವನ ಮೇಲೆ ಭಾರ ಹಾಕಿ ಕುಕ್ಕೆಲಿಂಗರು ತಮ್ಮ ಬೇಟೆಯ ಬಿಲ್ಲನ್ನು ಅದರ ಕಡೆಗೆ ನೀಡಿದರು. ಮಹಾಸರ್ಪವು ನೀಡಿದ ಬಿಲ್ಲಿಗೆ ಸುರುಳಿಯಾಗಿ ಸುತ್ತಿಕೊಂಡಿತು. ಸುತ್ತಿಕೊಂಡ ಹಾವು ನೀವು ಎಲ್ಲಿಯೂ ನೆಲಕ್ಕಿಡದೆ ಎತ್ತಿಕೊಂಡು ಪರ್ವತದ ತಪ್ಪಲಿಗೆ ಕೊಂಡೊಯ್ಯುವಂತೆ ಹೇಳಿತು . ಇಡಲೂ ಆಗದ ಎತ್ತಲೂ ಆಗದ ಮಹಾ ಗಾತ್ರದ ಸರ್ಪವನ್ನು ಕುಕ್ಕಲಿಂಗರು ತಮ್ಮ ಹೆಗಲಿನಲ್ಲಿಟ್ಟು ಕೊಂಡು ಇಳಿಜಾರಿನ ಪರ್ವತಗಳಲ್ಲಿ ಇಳಿದು ಬಂದರು. ಇಳಿಯುವಾಗ ಕಾಲು ಜಾರುವುದು ಸಹಜ ,ಹಾಗಾಗಿ ಆಧಾರಕ್ಕಾಗಿ 'ಕಾಡುಕುವೆ' ಎನ್ನುವ ಸಸ್ಯದ ದಂಡುಗಳನ್ನು ಊರಿಕೊಂಡು ಇಳಿದುಬರುತ್ತಾರೆ. ಬಿದಿರಿನ ಹಿಂಡಿಲಿನಿಂದ ಬಿಲ್ಲಿಗೆ ಸರ್ಪ ಸುತ್ತಿಕೊಂಡಾಗ ಆದ ಅಶರೀರವಾಣಿಯಂತೆ ಆಯಾಸಗೊಂಡ ಕುಕ್ಕ-ಲಿಂಗರು ಬೆಟ್ಟದ ತಪ್ಪಲಿಗೆ ಬಂದಾಗ ತಂಪಾದ ಸಮತಟ್ಟು ಸ್ಥಳ ಸಿಕ್ಕಿತ್ತು. ದೂರದ ಬೆಟ್ಟದಿಂದ ಇಳಿದು ಬಂದ ಇವರಿಗೆ ಆಯಾಸವೂ ಬಾಯರಿಕೆಯೂ ಆಗಿತ್ತು. ಈ ಸ್ಥಳದಲಿ ಕುಕ್ಕ-ಲಿಂಗರಿಗೆ ಏನೋ ವಿಶೇಷವಿದ್ದಂತೆ ಮನಸ್ಸಿನಲ್ಲಿ ಅನ್ನಿಸಿತ್ತು. ಹಿಂದೆ ಆಗಿರುವ ಅಶರೀರವಾಣಿಯಂತೆ ಕುಕ್ಕ ಹಾವನ್ನು ನೆಲದಲ್ಲಿ ಇಡಬಾರದೆನ್ನುವ ಕಾರಣಕ್ಕಾಗಿ ಎರಡು ಕೈಗಳಿಂದ ಬಿಲ್ಲನ್ನು ತಾನು ಹಿಡಿದು ನಿಂತು ತಮ್ಮ ಲಿಂಗನನ್ನು ನೀರು ತರಲು ಕಳುಹಿಸಿದ. ತಮ್ಮ ಲಿಂಗನು ಮಣ್ಣಿನ ಸಣ್ಣ ಕುಡಿಕೆ ಹಿಡಿದು ನೀರಿಗಾಗಿ ಹೊರಟಾಗ " ಇಲ್ಲಿಂದ ಮುಂದೆ ತೆಂಕಿಗೆ ಹೋಗು ಅಲ್ಲಿ ಅಮ್ರತ ಸುರಿವ ಬೈನೆ ಮರವಿದೆ, ನೀನು ಹತ್ತಿರ ಹೋದರೆ ಅದು ಬಾಗಿ ನಿನ್ನ ಗಡಿಗೆ ತುಂಬಿ ಬರುತ್ತದೆ. "  ಎಂದು ಧ್ವನಿ ಕೇಳಿ ಬಂತು. ಕೇಳಿ ಬಂದ ಧ್ವನಿಯಂತೆ ತೆಂಕಿಗೆ ಹೊರಟು ಹೋದಾಗ ಅಲ್ಲಿ ಬೈನೆ ಮರ ಬಿಟ್ಟರೆ ಬೇರೇನು ಲಿಂಗನಿಗೆ ಕಾಣಲಿಲ್ಲ.  ನೋಡುತ್ತಾ ನಿಂತ ಲಿಂಗನಿಗೆ ತಾನಾಗಿಯೇ ಬಾಗಿದ ಬೈನೆ ಮರ ಹಿಡಿದ ಗಡಿಗೆಗೆ ಹಾಲಿನಂತಹ ನೀರನ್ನು ಸುರಿದು ಹಿಂದಿನ ಸ್ಥಿತಿಗೆ ನಿಂತಿತು. ಇದರಿಂದ ಲಿಂಗನಿಗೆ ಇನ್ನಷ್ಟು ಭಯವಾಯಿತು. ಏನೇ ಆಗಲೀ ಇದೆಲ್ಲವನ್ನು ಅಣ್ಣ ಕುಕ್ಕೆಗೆ ತಿಳಿಸಬೇಕೆಂದು ಆತುರದಿಂದ ಹಿಂದಿರುಗಿ ಬರುತ್ತಿದ್ದಾಗ ಕಾಲು ಎಡವಿದ. ಗಡಿಗೆ ಕೈ ಜಾರಿತು, ಅದರಲ್ಲಿ ಅಮ್ರತದಂತಹ ನೀರು ಒಂದಷ್ಟುಚೆಲ್ಲಿತ್ತುಉಳಿದದ್ದು ಇಬ್ಬರಿಗೆ ಕುಡಿಯಲು ಸಾಲದೆಂದು ಹತ್ತಿರದಲ್ಲಿದ್ದ ನೀರನ್ನು ತುಂಬಿಸಿಕೊಂಡ. ಆಗ ಅದು ಶೇಂದಿಯಾಗಿ ಪರಿವರ್ತನೆಯಾಯಿತು.  ಲಿಂಗ ಗಡಿಗೆಯ ನೀರನ್ನು ಮೊದಲು ಕುಡಿದ. ಅವನು ಅಮಲಿನ ಮತ್ತಲ್ಲಿ ಅಣ್ಣ ಕುಕ್ಕನಿಗೆ ಕುಡಿಸುವ ಬದಲಿಗೆ ತಲೆಗೆ ಸುರಿದು ಬಿಟ್ಟ. ಆಗ ಹುತ್ತ ಅವನನ್ನು ಪೂರ್ಣವಾಗಿ ಮುಚ್ಚಿಬಿಟ್ಟಿತ್ತು. 'ಇನ್ನು ಮುಂದೆ ನೀನು ನಿನ್ನ ಪರಿವಾರದೊಂದಿಗೆ ನನ್ನನ್ನು ಆರಾಧಿಸಿಕೊಂಡು ಬಾ' ಎನ್ನುವ ಸ್ವರ ಕೇಳಿಬಂತು. ಆದರೆ ಪೂಜೆ , ಆರಾಧನೆ ಏನೂ ಅರಿಯದ ಲಿಂಗ ಹುತ್ತದ ಬಳಿಯೇ ಮಲಗಿದ ಅವನಿಗೆ"ನೀನು ಚಿಂತಿಸಬೇಡ ನನ್ನ ಸೇವೆಗಾಗೆ ಉತ್ತಮ ಬ್ರಾಹ್ಮಣ ಸಮುದಾಯವನ್ನು ನಿಯಮಿಸು" ಎಂಬ ಸ್ವರ ಕೇಳಿತು. ಪೂಜೆಗಾಗಿ ಬ್ರಾಹ್ಮಣನನ್ನು ಹುಡುಕುತ್ತಾ ಬಂದವನಿಗೆ ಒಂದು ಬ್ರಾಹ್ಮಣ ಕುಟುಂಬ ಸಿಕ್ಕಿತು. ರಾತ್ರಿ ಅಲ್ಲಿಯೇ ನಿದ್ದೆ ಹೋದ. ಆ ಮನೆಯ ಎಳೆಯ ಪ್ರಾಯದ ಮಗುವೊಂದನ್ನು ರಾತ್ರಿಯೇ ಹೊತ್ತುಕೊಂಡು ಕುಕ್ಕೆಗೆ ಬಂದ. ಬ್ರಾಹ್ಮಣ ವಿಧಿಗಳನ್ನು ನಡೆಸಲು ಕುಕ್ಕೆಯಲ್ಲಿ ಯಾರು ಇಲ್ಲದ ಕಾರಣ ತಾನೆ ಬ್ರಾಹ್ಮಣ ಮಾಣಿಗೆ ನೂಲನ್ನು ಹಾಕಿದ ಅಲ್ಲದೆ ತನ್ನ ಮಗಳನ್ನೆ ಮದುವೆ ಮಾಡಿದ. ಕುಕ್ಕ ಸರ್ಪಸಮೇತ ನೆಲೆಯಾದ ಸ್ಥಳವೇ ಆದಿಕುಕ್ಕೆ ಸುಬ್ರಾಯ ತಳವಾಯಿತು. ಮುಂದೆ ಕೊಕ್ಕಡದ ಯಡಪ್ಪಾಡಿತ್ತಾಯ ಕುಟುಂಬದಿಂದ ತಂದು ನೆಲೆಗೊಳಸಿದ. ಪುರೋಹಿತ ಮೂಲದಿಂದಲೇ ಪೂಜೆ ವಿಧಾನ ನಡೆದು ಬಂತು. ಅಲ್ಲದೆ ಕೊಕ್ಕಡದ ನುರಿತ್ತಾಯ ಕುಟುಂಬವೂ ಸಹಾಯಕವಾಗಿ ನೆಲೆಯಾಯಿತು.

ಇಂತಹ ದಿವ್ಯ ದೈವ ಸನ್ನಿಧಾನಕ್ಕೆ ನೀವು ಭೇಟಿ ನೀಡಿಲ್ಲ ಎಂದಾದರೆ ಒಮ್ಮೆ ಹೋಗಿ ಬನ್ನಿ. ಬೆಂಗಳೂರಿನಿಂದ ರೈಲು ಮತ್ತು ಬಸ್ ಗಳ ಸಂಪರ್ಕವಿರುವ ಈ ಸ್ಥಳ ಧರ್ಮಸ್ಥಳಕ್ಕೆ ಹತ್ತಿರವಿದೆ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529

25 September 2023

ಪ್ರೀತಿಗೆ ಪ್ರೀತಿಯೇ ಸಮ...

 


ಪ್ರೀತಿಗೆ ಪ್ರೀತಿಯೇ ಸಮ..

"ಪ್ರೀತಿ ಏಕೆ ಭೂಮಿ ಮೇಲಿದೆ? " ಎಂಬ ಪ್ರಶ್ನೆಗೆ ಹಾಡಿನಲ್ಲಿ "ಬೇರೆ ಎಲ್ಲೂ ಜಾಗವಿಲ್ಲದೇ..." ಎಂಬ ಉತ್ತರವನ್ನು ನಾವು ಕೇಳಿದ್ದೇವೆ. "ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ" ಎಂದು ಸಂಭ್ರಮಿಸುವ ಜೋಡಿಗಳನ್ನು ಕಂಡಿದ್ದೇವೆ. "ಪ್ರೀತ್ಸೇ ಪ್ರೀತ್ಸೇ.. ಕಣ್ಣು ಮುಚ್ಚಿ ನನ್ನ ಪ್ರೀತ್ಸೇ...." ಎಂದು ದುಂಬಾಲು ಬೀಳುವ   ಪಾಗಲ್ ಪ್ರೇಮಿಗಳಿಗೇನು ಕಡಿಮೆಯಿಲ್ಲ. ಪ್ರೀತಿ ಇಂದು ನಿನ್ನೆಯದಲ್ಲ ಅನಾದಿ ಕಾಲದಿಂದಲೂ ಅಜರಾಮರ.
'ಪ್ರೀತಿ' ಒಂದು ಸುಂದರ ಅನುಭವ, ಅದು ಕೇವಲ ಹದಿಹರೆಯದವರ ಬಾಹ್ಯ ಆಕರ್ಷಣೆಯ ತೋರ್ಪ ಡಿಕೆಯಷ್ಟೇ ಅಲ್ಲ. ಅದಕ್ಕೆ ನಾನಾ ರೂಪಗಳಿವೆ ಎಂದು ಫಿನ್ಸೆಂಡ್ನ ಅಲ್ಲೊ ವಿಶ್ವವಿದ್ಯಾಲಯದ ಹೊಸ ಅಧ್ಯಯನವೊಂದು ಹೇಳಿದೆ.
ಪ್ರೀತಿ ಯಾರಲ್ಲಿ ಯಾವಾಗ ಏಕೆ ಉಂಟಾಗುತ್ತದೆ ಎಂದು ಯಾರಿಗೂ ಗೊತ್ತಾಗುವುದಿಲ್ಲ.ಆದರೂ ಕೆಲವೊಮ್ಮೆ ಅವಳ ಕಣ್ಣೋಟಕ್ಕೆ, ಅವನ ಮೈಮಾಟಕ್ಕೆ   , ಅವನ ಉದಾರತೆಗೆ, ಅವಳ ಗುಣಕ್ಕೆ    ಪ್ರೀತಿ ಉದಯವಾಯಿತು ಎಂದು ಏನೋನೋ ಕಾರಣಗಳನ್ನು ಹೇಳಬಹುದಾದರೂ ನಿಶ್ಚಿತವಾದ ಕಾರಣ ಹೇಳಲು ಸಾದ್ಯವಿಲ್ಲ. ಆದರೂ

ಮಾನವನ ಶರೀರದಲ್ಲಿ ಹುಟ್ಟುವ ಪ್ರೀತಿಯ ವಿಭಿನ್ನ ರೂಪಗಳು ಹಾಗೂ ಅದರ ಭಾವೋತ್ಕಟತೆಯನ್ನು ವಿಶ್ವವಿ ದ್ಯಾಲಯದ ಸಂಶೋಧಕರು ಸಂಶೋಧನೆಯ ಮೂಲಕ  ದಾಖಲಿಸಿದ್ದಾರೆ. ಪ್ರೀತಿ ಅರಳುವ  ಬಗ್ಗೆ ನೂರಾರು ಜನರ ಸಮೀಕ್ಷೆ ನಡೆಸಿ ದತ್ತಾಂಶಗಳನ್ನು ಸಂಗ್ರಹಿಸಿದ್ದಾರೆ. ಪ್ರಣಯ, ಲೈಂಗಿಕ ಪ್ರೀತಿ, ಪೋಷಕರ ಪ್ರೀತಿ, ಸ್ನೇಹಿತರು, ಅಪರಿಚಿತರು, ನಿಸರ್ಗ, ದೇವರ ಮೇಲಿನ ಪ್ರೀತಿ ಸೇರಿದಂತೆ 27 ಬಗೆಯ ಪ್ರೀತಿ ಹುಟ್ಟುವ ಬಗೆಯನ್ನು ಸಂಶೋಧನಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಪ್ರೀತಿಗೆ ದುರ್ಬಲ ವ್ಯಕ್ತಿಯನ್ನು ಬಲಶಾಲಿಗೊಳಿಸುವ ಅಧಮ್ಯ ಶಕ್ತಿಯಿದೆ ಎಂದು ಸಂಶೋಧಕರು ಹೇಳಿದ್ದು, 'ಫಿಲಾಸಫಿಕಲ್ ಸೈಕಾಲಜಿ' ಜರ್ನಲ್ನಲ್ಲಿ ಈ ಸಂಶೋಧನಾ
ವರದಿ ಇತ್ತೀಚಿಗೆ ಪ್ರಕಟವಾಗಿದೆ.

ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದವರು ಪ್ರೀತಿಯ ವಿಭಿನ್ನ ರೂಪಗಳನ್ನು ಎಲ್ಲಿ ಅನುಭವಿಸಿದ್ದಾರೆ. ಜೊತೆಗೆ, ಆ ಪ್ರೀತಿಯು ದೈಹಿಕ ಮತ್ತು ಮಾನಸಿಕವಾಗಿ ಅವರಿಗೆ ಎಷ್ಟು ಉತ್ಕಟವಾಗಿ ಕಾಡಿದೆ ಎಂಬ ಬಗ್ಗೆ ಅವರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಮಾನವ ಶರೀರದಲ್ಲಿ ಉತ್ಕಟ ಪ್ರೀತಿ ಅನುಭವಕ್ಕೆ ಬರುವುದು ಯಾವಾಗ ಎಂಬುದನ್ನೂ ಸಂಶೋಧನೆಯಲ್ಲಿ ದಾಖಲಿಸಿದ್ದಾರೆ.

ಉನ್ನತ ಶಿಕ್ಷಣದ ಹಂತದಲ್ಲಿರುವಾಗ ಯುವತಿಯರಲ್ಲಿ ಪ್ರೀತಿಯ ತೀವ್ರತೆ ಹೆಚ್ಚಿರುತ್ತದೆ ಎಂದು ವರದಿ ಹೇಳಿದೆ. ನಿಕಟ ಸಂಬಂಧಗಳಲ್ಲಿ ಪ್ರೀತಿ ಸದೃಶವಾಗಿರುತ್ತದೆ. ಜೊತೆಗೆ, ಅದು ಗಾಢವಾಗಿ ಅನುಭವಕ್ಕೆ ಬರುವುದು ಗಮನಾರ್ಹ ಸಂಗತಿಯಾಗಿದ್ದು, ಅದಕ್ಕೆ ಅಚ್ಚರಿಪ ಡಬೇಕಿಲ್ಲ ಎಂದು ಈ ಅಧ್ಯಯನಕ್ಕೆ ಸಹಕರಿಸಿದ ದಾರ್ಶನಿಕ ಪಾರ್ಟಿಲಿ ರಿನ್ನೆ ಹೇಳಿದ್ದಾರೆ.

'ವ್ಯಕ್ತಿಗಳ ನಡುವಿನ ಪ್ರೀತಿಯನ್ನು ಲೈಂಗಿಕ, ಲೈಂಗಿಕೇತರ ಎಂದು ವಿಂಗಡಿಸಲಾಗಿದೆ. ಪರಸ್ಪರ ಹತ್ತಿರ ಇರುವ ಪ್ರೀತಿಯ ಪ್ರಕಾರಗಳಲ್ಲಿ  ಲೈಂಗಿಕ ಮತ್ತು ಪ್ರಣಯಅಯಾಮವನ್ನು ಹೊಂದಿರುತ್ತವೆ' ಎನ್ನುತ್ತಾರೆ ಪಾರ್ಟಿ ಲಿ ರಿನ್ನೆ. ಪ್ರೀತಿಯ ಆಳ ಅಗಲ ತಿಳಿಯಲು ಎಷ್ಟು ಸಂಶೋಧನೆಗಳಾದರೂ ಕಡಿಮೆಯೇ ಯಾಕೆಂದರೆ ಪ್ರೀತಿಗೆ ಪ್ರೀತಿಯೇ ಸಮ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
99009255

23 September 2023

ವಿಶ್ವ ಪರಂಪರೆಯ ತಾಣಗಳು ಹೊಯ್ಸಳರ ದೇವಾಲಯಗಳು....




 

ಹೊಯ್ಸಳ ದೇವಾಲಯಗಳ ವಾಸ್ತು ಶಿಲ್ಪ...

ಇತ್ತೀಚಿಗೆ ವಿಶ್ವ ಪಾರಂಪರಿಕತಾಣಗಳ  ಪಟ್ಟಿ ಬಿಡುಗಡೆಯಾದಾಗ ಕರ್ನಾಟಕದ ಹೆಮ್ಮೆಯ ಹೊಯ್ಸಳ ದೇವಾಲಯಗಳು ಸೇರ್ಪಡೆಯಾದ ಸುದ್ದಿ ತಿಳಿದು ನಾಡಿನಲ್ಲೆಡೆ ಸಂತಸ ಮನೆ ಮಾಡಿದೆ.
ಬಹುದಿನದ ನಮ್ಮ ಬೇಡಿಕೆ ಈಡೇರಿದೆ ನಮ್ಮ ಹೆಮ್ಮೆಯ ಈ ದೇವಾಲಯಗಳ ಶಿಲ್ಪಕಲೆಯ ಮೆರಗು ವಿಶ್ವದ ಗಮನಸೆಳೆದಿದೆ.ಇದಕ್ಕೆ ಕಾರಣ ಈ ದೇವಾಲಯಗಳ ಅಮೋಘ ವಾಸ್ತುಶಿಲ್ಪ.

ಕರ್ನಾಟಕವನ್ನು ಬಹುಕಾಲದವರೆವಿಗೆ ಆಳಿದವರಲ್ಲಿ ಹೊಯ್ಸಳರೂ ಪ್ರಮುಖರು. ಕದಂಬರು ಮತ್ತು ಚಾಲುಕ್ಯರಂತೆ ಇವರೂ ಸಹ ಕನ್ನಡನಾಡಿನಾದ್ಯಂತ ಅನೇಕ ದೇವಾಲಯಗಳನ್ನು ನಿರ್ಮಿಸಿದರು. ಕನ್ನಡನಾಡಿನಲ್ಲಿ ಸುಮಾರು 92 ದೇವಾಲಯಗಳನ್ನು ಹೊಯ್ಸಳರು ನಿರ್ಮಿಸಿದ್ದಾರೆ. ಇದರಲ್ಲಿ ಸುಮಾರು 40 ದೇವಾಲಯಗಳು ಹೊಯ್ಸಳರ ರಾಜಕೀಯ ಕಾರ್ಯಕ್ಷೇತ್ರವಾಗಿದ್ದ ಹಾಸನ ಜಿಲ್ಲೆಯಲ್ಲಿಯೇ ಇವೆ.ಅವುಗಳಲ್ಲಿ ಮುಖ್ಯವಾದುವು ಬೇಲೂರು ಮತ್ತು ಹಳೆಬೀಡುದೇವಾಲಯಗಳು. ದ್ರಾವಿಡ ಮತ್ತು ನಾಗರ ಶೈಲಿಯ ಮಿಶ್ರಣವನ್ನು ಹೊಯ್ಸಳ ವಾಸ್ತುಶೈಲಿಯಲ್ಲಿ ನಾವು ಕಾಣಬಹುದು. ಕೆಲವು ಪಾಶ್ಚಾತ್ಯ ಪಂಡಿತರು, ವಿದ್ವಾಂಸರು ಚಾಲುಕ್ಯರ ವಾಸ್ತುಶೈಲಿಗೆ ಕೊಟ್ಟ ಮಹತ್ವವನ್ನು ಹೊಯ್ಸಳ ಶೈಲಿಗೆ ಕೊಡದೆ ಚಾಲುಕ್ಯ ಸಂಸ್ಕೃತಿಯೊಳಗೆ ಇದನ್ನೂ ಸೇರಿಸಿ ಬದಿಗಿರಿಸಿದ್ದಾರೆ. ಆದರೆ, ಅನೇಕ ಭಾರತೀಯ ಮತ್ತು ಪಾಶ್ಚಾತ್ಯ ವಿದ್ವಾಂಸರು ಹೊಯ್ಸಳ ಶೈಲಿಯನ್ನು ಮರು ವಿಮರ್ಶಿಸಿ ಈ ಶೈಲಿಯ ಬೆರಗನ್ನು ಕಂಡು ವಿಸ್ಮಿತರಾಗಿದ್ದಾರೆ. ಹೊಯ್ಸಳ ದೇವಾಲಯಗಳಲ್ಲಿ ಕಂಡುಬರುವ ಅನೇಕಾನೇಕ ಸೂಕ್ಷ್ಮ ಕೆತ್ತನೆಗಳಿರುವ ವಿಗ್ರಹಗಳು, ಶಿಲಾಬಾಲಿಕೆಯರು ಮತ್ತು ರಾಮಾಯಣ , ಮಹಾಭಾರತದಂತಹ ಪುರಾಣ ಕತೆಗಳನ್ನು ಕಣ್ಣಿಗೆ ಕಟ್ಟುವಂತೆ ಕಲ್ಲಿನಲ್ಲಿ ಕಡೆದಿರುವುದನ್ನು ಕಂಡಾಗ ಹೊಯ್ಸಳ ವಾಸ್ತುಶೈಲಿಯನ್ನು ಪ್ರತ್ಯೇಕವಾಗಿಯೇ ನೋಡಬೇಕೆಂಬುದು ಮನದಟ್ಟಾಗುತ್ತದೆ.

ಹೊಯ್ಸಳ ದೇವಾಲಯ ವಿಶೇಷಗಳ...

ಹೊಯ್ಸಳ ದೇವಾಲಯಗಳ ತಲವಿನ್ಯಾಸವು ಸಾಮಾನ್ಯವಾಗಿ ಬಹುಕೋನಾಕೃತಿ ಅಥವಾ ನಕ್ಷತ್ರಾಕೃತಿಯಲ್ಲಿ ಇರುತ್ತದೆ. ಎತ್ತರವಾದ ಜಗತಿಯ ಮೇಲೆ ತಲವಿನ್ಯಾಸದ ಆಕಾರದಲ್ಲಿಯೆ ದೇವಾಲಯದ ಆಕಾರವು ರೂಪುಗೊಂಡಿರುತ್ತದೆ. ಜಗತಿಯು ವಿಶಾಲವಾಗಿದ್ದು ಸಲೀಸಾಗಿ ಓಡಾಡುವಷ್ಟು ಅನುಕೂಲಕರವಾಗಿರುತ್ತದೆ. ದೇವಾಲಯಕ್ಕೆ ಒಳಬರುವ ಮೊದಲು ಕೆಲವು ಮೆಟ್ಟಿಲುಗಳನ್ನು ಹತ್ತಿ ಪ್ರವೇಶಿಸಬೇಕಾಗುತ್ತದೆ. ಈ ರಚನೆಯು ಹೊಯ್ಸಳರ ಎಲ್ಲಾ ಆಲಯಗಳಲ್ಲೂ ಕಂಡುಬರುತ್ತದೆ. ಮೊದಲಿಗೆ ಸಿಗುವ ವಿಶಾಲವಾದ ಜಗತಿಯೇ ಪ್ರದಕ್ಷಿಣಾ ಪಥವೂ ಆಗಿರುತ್ತದೆ. ಚಾಲುಕ್ಯರ ದೇವಾಲಯಗಳಲ್ಲಿರುವಂತೆ ಗರ್ಭಗೃಹದ ಸುತ್ತಲಿನ ಸುತ್ತುಗಟ್ಟುವ ಹಾದಿಯು ಇಲ್ಲಿ ಕಾಣುವುದಿಲ್ಲ. ಹೊಯ್ಸಳರ ಎಲ್ಲಾ ದೇವಾಲಯಗಳೂ ಬಳಪದ ಕಲ್ಲಿನಿಂದಲೇ ನಿರ್ಮಾಣವಾಗಿರುತ್ತದೆ.

ಅಲಂಕಾರಿಕ ಗೋಡೆಗಳು..

ಹೊಯ್ಸಳರ ದೇವಾಲಯದ ಗೋಡೆಗಳ ರಚನೆಯು ಜಗತಿಯ ಒಟ್ಟು ಎತ್ತರದ ಎರಡಷ್ಟಿರುತ್ತದೆ. ಗೋಡೆಗಳ ಮೇಲಿನ ಅಲಂಕಾರವು ತಲಭಾಗದಿಂದ ಆರಂಭವಾಗಿ ಶಿಖರದಲ್ಲಿ ಕೊನೆಗೊಳ್ಳುತ್ತದೆ. ಮೊದಲಿಗೆ ದೇವಾಲಯಗಳ ಸುತ್ತಲೂ ಬಳಸಿ ಬರುವ ಅಲಂಕಾರ ಪಟ್ಟಿಕೆಗಳು ಈ ಗೋಡೆಗಳ ವಿಶಿಷ್ಟತೆ. ಜಗತಿಯ ಬುಡದಿಂದ ಸುಮಾರು ಐದು ಅಡಿಗಳಷ್ಟು ಎತ್ತರದವರೆಗೆ ಒಂದರ ಮೇಲೊಂದರಂತೆ ಪಟ್ಟಿಕೆಗಳು ಕಂಡುಬರುತ್ತದೆ. ಬುಡದಿಂದ ಮೊದಲನೆಯ ಪಟ್ಟಿಯಲ್ಲಿ ಆನೆಗಳ ಸಾಲು ಮತ್ತು ಎರಡನೆಯ ಪಟ್ಟಿಯಲ್ಲಿ ಕುದುರೆಗಳ ಮೇಲೆ ಏರಿ ಹೊರಟಿರುವ ರಾವುತರನ್ನು ನೋಡಬಹುದು. ದೇವಾಲಯದ ಸುತ್ತ ಮೆರವಣಿಗೆ ಹೊರಟಿರುವಂತೆ ಈ ಸಾಲುಗಳು ಕಂಡುಬರುತ್ತವೆ. ಮುಂದಿನ ಪಟ್ಟಿಯಲ್ಲಿ ಶಾರ್ದೂಲಗಳು, ಹಂಸಗಳು ಮತ್ತು ಬಳ್ಳಿಯ ರಚನೆಯು ಕಾಣಸಿಗುತ್ತದೆ. ಈ ಪಟ್ಟಿಗಳು ದೇವಾಲಯದ ಅಂದವನ್ನು ಹೆಚ್ಚಿಸುವಂತಿರುತ್ತದೆ. ಅಗಲದಲ್ಲಿ ಒಂದು ಅಡಿಗಿಂತಲೂ ಕಿರಿದಾಗಿರುವ ಈ ಪಟ್ಟಿಕೆಗಳಲ್ಲಿ ರಾಮಾಯಣ-ಮಹಾಭಾರತದ ಕತೆಗಳೂ ಸಹ ಕೆತ್ತಲ್ಪಟ್ಟಿವೆ. ನಮ್ಮ ಕಣ್ಣಿನ ಮಟ್ಟಕ್ಕೆ ಇವು ಬರುವುದರಿಂದ ಚಿಕ್ಕದಾಗಿದ್ದರೂ ಸ್ಪಷ್ಟವಾಗಿ ನೋಡಿದ ತಕ್ಷಣ ಶಿಲ್ಪಗಳ ಹಿಂದಿನ ಕತೆಯನ್ನು ಅರಿತುಕೊಳ್ಳಬಹುದು. ನಮ್ಮ ತಲೆಯ ಮೇಲಿನ ಅಥವಾ ನಮಗಿಂತಲೂ ಎತ್ತರದಲ್ಲಿರುವ ಗೋಡೆಯ ಸಾಲನ್ನು ದೊಡ್ಡ ವಿಗ್ರಹಗಳಿಂದ ಅಲಂಕಾರಿಸಲಾಗಿದೆ. ಪಟ್ಟಿಕೆಯ ಕೊಲೆಯ ಸಾಲಿನಲ್ಲಿ ಕಾಮಸೂತ್ರದ ವಿವಿಧ ಚಿತ್ರಗಳನ್ನು ತೋರಿಸಲಾಗಿದೆ ನೋಡುಗನ ಒಳತೋಟಿಯನ್ನು ಶಿಲ್ಪಿಗಳು ಅದೆಷ್ಟು ಚೆನ್ನಾಗಿ ಬಲ್ಲವರಾಗಿದ್ದರು ಎಂದು ಇಲ್ಲಿ ತಿಳಿಯಬಹುದು. ಪೂರ್ವ ಭಾಗದಲ್ಲಿ ಪಟ್ಟಿಕೆಗಳನ್ನು ಬಿಟ್ಟರೆ ದೊಡ್ಡ ವಿಗ್ರಹಗಳು ಕಂಡುಬರುವುದಿಲ್ಲ. ಗೋಡೆಗಳನ್ನು ರಚಿಸುವುದರ ಬದಲು ಆ ಸ್ಥಳದಲ್ಲಿ ದೊಡ್ದ ಕಿಟಕಿಗಳನ್ನು (ಜಾಲಂಧ್ರ) ನಿರ್ಮಿಸಲಾಗಿರುತ್ತದೆ. ಗಾಳಿ ಮತ್ತು ಬೆಳಕಿನ ವೈಜ್ಞಾನಿಕ ವ್ಯವಸ್ಥೆಗೆ ಇದೊಂದು ನಿದರ್ಶನ. ದೇವಾಲಯಗಳ ಪಶ್ಚಿಮದ ಭಾಗವು ವಿಗ್ರಹಗಳಿಂದ ಅಲಂಕೃತವಾಗಿ ಪೂರ್ಣ ಮುಚ್ಚಲ್ಪಟ್ಟಿರುತ್ತದೆ. ದೇವಾಲಯದ ನಕ್ಷತ್ರಾಕಾರದ ರಚನೆ ಮತ್ತು ಗೋಡೆಯ ಮೇಲಿನ ಅಲಂಕಾರವು ದೇವಾಲಯದ ಒಟ್ಟಂದವನ್ನು ಹೆಚ್ಚಿಸಿ ಶಿಲ್ಪ ಸೌಂದರ್ಯವನ್ನು ಎತ್ತಿ ತೋರಿಸಲು ಸಹಾಯಕವಾಗುತ್ತದೆ.

ಶಿಖರಗಳ ರಚನೆ....

ಹೊಯ್ಸಳರ ದೇವಾಲಯಗಳಲ್ಲಿ ಮುಂಭಾಗದ ಗೋಪುರಗಳ ರಚನೆಯು ಕಂಡುಬರುವುದಿಲ್ಲ. ಆದರೆ, ಶಿಖರಗಳನ್ನು ಅದ್ಭುತವೆನ್ನುವಷ್ಟು ಸುಂದರವಾಗಿ ನಿರ್ಮಿಸಲಾಗಿರುತ್ತದೆ. ದೇವಾಲಯದ ಮುಖ್ಯ ರಚನೆಯಿಂದ ತುಸು ಬೇರ್ಪಟ್ಟಂತೆ ಇವು ಕಾಣುತ್ತವೆ. ಸೋಮನಾಥಪುರ ದೇವಾಲಯದ ಶಿಖರವು ಇದಕ್ಕೆ ಅಪವಾದದಂತಿದೆ. ಅಡಿಯಿಂದ ಮುಡಿಯವರೆವಿಗೂ ಸಮಾನತೆಯು ಅಲ್ಲಿ ಕಾಣುತ್ತದೆ. ದ್ರಾವಿಡ ಶೈಲಿಯಂತೆ ಮೆಟ್ಟಿಲುಗಳ ಆಕಾರದಲ್ಲಿ ಶಿಖರವು ಬೆಳೆಯುತ್ತಾ ಹೋಗದೆ, ಆರಂಭದಲ್ಲಿ ಪಟ್ಟಿಕೆಗಳನ್ನು ಒಳಗೊಂಡು ನಡುವೆ ಸಣ್ಣ-ಸಣ್ಣ ಮಂಟಪಗಳನ್ನು ಸೇರಿಕೊಂಡು ಬೆಳೆಯುತ್ತಾ ಹೋಗುತ್ತದೆ. ತುದಿಯಲ್ಲಿ ಕೋನಾಕೃತಿಯ ರಚನೆಯ ಜೊತೆಗೆ ಕಲಶವು ಇರುತ್ತದೆ. ಕಲಶದ ಭಾಗವೇ ದೇವಾಲಯದ ಅಂತ್ಯ ಭಾಗ. ಶಿಖರಗಳಲ್ಲಿ ಬಳ್ಳಿಗಳ ರಚನೆಯು ಹೆಚ್ಚಾಗಿ ಕಂಡುಬರುತ್ತದೆ. ತುದಿಯ ಒಂದು ಬದಿಯಲ್ಲಿ ಹೊಯ್ಸಳ ಲಾಂಛನವು (ಹುಲಿಯನ್ನು ಕೊಲ್ಲುತ್ತಿರುವ ಸಳ) ಕಾಣಸಿಗುತ್ತದೆ. ನಾಗರ ಶೈಲಿಯಂತೆ ಅತಿ ಎತ್ತರಕ್ಕೆ ಶಿಖರವನ್ನು ಬೆಳೆಸುವ ಪ್ರವೃತ್ತಿಯೂ ಇಲ್ಲಿ ಕಂಡುಬರುವುದಿಲ್ಲ. ಕೆಲವು ಹಂತಗಳ ನಂತರ ಕೋನಾಕೃತಿಯಲ್ಲಿ ಕೊನೆಗೊಳ್ಳುತ್ತದೆ. ಶಿಖರವನ್ನು ಗರ್ಭಗುಡಿಯ ಮೇಲೆ ಸರಿಸಮವಾಗಿ ಕಟ್ಟಲಾಗಿರುತ್ತದೆ.

ಕಲಾತ್ಮಕ ಕಂಬಗಳು...

ದೇವಾಲಯದ ಆಧಾರವೇ ಕಂಬಗಳು. ಹೊಯ್ಸಳರು ಕಂಬಗಳನ್ನು ಕೇವಲ ಆಧಾರಕ್ಕಾಗಿ ಮಾತ್ರ ಬಳಸದೆ, ಅವುಗಳಲ್ಲೂ ಸುಂದರ ಕೆತ್ತನೆಯನ್ನು ತೋರಿಸಿದ್ದಾರೆ. ಕೆಲವು ಕಂಬಗಳು ಕನ್ನಡಿಯಷ್ಟು ಹೊಳಪಿನಿಂದ ಕೂಡಿದ್ದರೆ ಇನ್ನೂ ಕೆಲವು ಕುಸುರಿ ಕೆತ್ತನೆಯಿಂದ ಮನಸೂರೆಗೊಳ್ಳುತ್ತದೆ. ಕಂಬಗಳನ್ನು ಇಂಟರ್ ಲಾಕ್ ಮಾದರಿಯಲ್ಲಿ ಜೋಡಿಸಲಾಗಿದ್ದು ಕುಸಿದು ಬೀಳುವ ಪ್ರಮೇಯವೇ ಒದಗಿಬರುವುದಿಲ್ಲ. ಹಾಗೊಮ್ಮೆ ಕುಸಿದರೂ ಮತ್ತೆ ಸುಲಭವಾಗಿ ಜೋಡಿಸುವಂತೆ ಕಂಬಗಳನ್ನು ನಿರ್ಮಿಸಲಾಗಿದೆ. ಕಂಬಗಳು ಸಾಮಾನ್ಯವಾಗಿ ಐದು ಕಲ್ಲಿನಿಂದ ಮಾಡಲ್ಪಟ್ಟಿದ್ದು , ತಳಭಾಗದಿಂದ ಕ್ರಮವಾಗಿ ಪೀಠ, ಕಂಬ, ಕುಂಭ, ಕಟಿ ಮತ್ತು ಭಾರವಾಹಕ ಎಂದು ವಿಂಗಡಿಸಲಾಗಿದೆ. ಕಂಬಗಳ ದುಂಡನೆಯ ಆಕಾರವನ್ನು ಹೊಂದಿದ್ದು ಮಧ್ಯಭಾಗದಲ್ಲಿ ಚೂಪಾಗಿರುವಂತಹ ಚಕ್ರದ ಆಕೃತಿಯನ್ನು ಹೊಂದಿರುತ್ತದೆ. ಯಾವ ಯಂತ್ರದ ಸಹಾಯವೂ ಇಲ್ಲಲಿದ್ದ ಕಾಲದಲ್ಲಿ ಇವುಗಳು ನಿರ್ಮಾಣವಾಗಿರುವುದನ್ನು ಕಂಡಾಗ ವಿಸ್ಮಯವಾಗುತ್ತದೆ. ದೇವಾಲಯದ ವಿಸ್ತೀರ್ಣಕ್ಕನುಸಾರವಾಗಿ ಕಂಬಗಳ ಸಂಖ್ಯೆಯು ನಿಗದಿಯಾಗಿರುತ್ತದೆ. ಕಂಬಗಳ ಪಟ್ಟಿಗಳೂ ಸಹ ಕುಸುರಿ ಕೆತ್ತನೆಯಿಂದ ಅಲಂಕೃತವಾಗಿರುತ್ತದೆ.

ಸಾಮಾನ್ಯವಾಗಿ ಹೊಯ್ಸಳರ ದೇವಾಲಯಗಳನ್ನು ನಾಲ್ಕು ವಿಭಾಗಗಳನ್ನಾಗಿ ವಿಂಗಡಿಸಲಾಗುತ್ತದೆ.
ಗರ್ಭಗೃಹ, ಶುಕನಾಸಿ,ನವರಂಗ ಮತ್ತು ವಾಹನ ಮಂಟಪ

ಗರ್ಭಗೃಹದ ಆಯಾ ದೇವಾಲಯಕ್ಕೆ ಸಂಬಂಧಿಸಿದ ಮೂಲ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿರುತ್ತದೆ. ಇಲ್ಲಿ ಯಾವುದೇ ಕಿಟಕಿ ಅಥವಾ ವಾತಾಯನ ವ್ಯವಸ್ಥೆಯು ಇರುವುದಿಲ್ಲವೇ. ಗರ್ಭಗೃಹದಲ್ಲಿ ಘಂಟಾನದವನ್ನು ಮಾಡಿದರೆ ಅದು ಪ್ರತಿಧ್ವನಿತವಾಗುವಂತೆ ಕೋಣೆಯ ರಚನೆಯಿರುತ್ತದೆ. ಈ ಕೋಣೆಯಲ್ಲಿ ಯಾವುದೇ ರೀತಿಯ ಕೆತ್ತನೆಗಳಾಗಲೀ ಇತರ ವಿಗ್ರಹಗಳಾಗಲೀ ಇರುವುದಿಲ್ಲ. ಹೊಯ್ಸಳರ ಕೆಲವು ದೇವಾಲಯಗಳ ಗರ್ಭಗುಡಿಯಲ್ಲಿ ಮೂಲ ವಿಗ್ರಹದ ಹಿಂಭಾಗ ಮತ್ತು ಅಕ್ಕ-ಪಕ್ಕದಲ್ಲಿ ಸಣ್ಣ ಕೋಣೆಗಳ ರಚನೆಯು ಕಂಡುಬರುತ್ತದೆ. ಈ ಕೋಣೆಗಳನ್ನು ದೇವರ ಆಭರಣಗಳು ಮತ್ತು ನಗ-ನಾಣ್ಯಗಳನ್ನು ಇರಿಸಲು ಬಳಸುತ್ತಿದ್ದಿರಬಹುದೆಂದು ಸಂಶೋಧಕರು ಹೇಳುತ್ತಾರಾರ.

ಶುಕನಾಸಿಯು  ಗರ್ಭಗೃಹದ ಮುಂದಿನ ಭಾಗವಾಗಿದ್ದು ಇದನ್ನು ವಿಶೇಷ ಪ್ರಾರ್ಥನೆ ಸಲ್ಲಿಸಲು ಪೂಜಾ ಪರಿಕರಗಳನ್ನಿರಿಸಿಕೊಳ್ಳಲು ಬಳಸಲಾಗುತ್ತಿತ್ತೆಂದು ಹೇಳಲಾಗಿದೆ. ಇದೇ ಜಾಗದಲ್ಲಿ ಉತ್ಸವ ಮೂರ್ತಿಗಳನ್ನೂ ಇರಿಸಲಾಗುತ್ತದೆ. ಶುಕನಾಸಿಯ ಗೋಡೆಗಳಲ್ಲಿ ತುಂಬ ನಾಜೂಕಿನ ಕುಸುರಿ ಕೆಲಸವು ಕಂಡುಬರುತ್ತದೆ. ದ್ವಾರದ ಮೇಲೆ ಗಜಲಕ್ಷ್ಮಿಯ ವಿಗ್ರಹವಿದ್ದು ಅಕ್ಕ-ಪಕ್ಕದಲ್ಲಿ ನೆಲದವರೆವಿಗೂ ಏಳು ಪಟ್ಟಿಕೆಗಳನ್ನು ಉದ್ದವಾಗಿ ನಿರ್ಮಿಸಲಾಗಿರುತ್ತದೆ.  ಇವುಗಳನ್ನು ಸಪ್ತಶಾಖೆಗಳೆಂದು ಕರೆಯುತ್ತಾರೆ. ವಜ್ರ, ಪ್ರಾಣಿ, ಅಗ್ನಿ, ಕುಂಭ, ಪಕ್ಷಿ, ನರ ಶಾಕೆಗಳೆಂದು ವಿಂಗಡಿಸಲಾಗಿದೆ. ಇವುಗಳಲ್ಲಿನ ಕುಸುರಿ ಕೆಲಸವು ಮೈ ನವಿರೇಳಿಸುತ್ತದೆ.

ನವರಂಗವು ವೃತ್ತಾಕಾರವಾಗಿರುತ್ತದೆ. ಇದು ಶುಕನಾಸಿಯ ನಂತರದ ಭಾಗ. ನವರಂಗ ಮಂಟಪವನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬಳಸಲಾಗುತ್ತಿತ್ತೆಂದು ಶಾಸನಗಳಿಂದ ತಿಳಿದು ಬರುತ್ತದೆ. ಎಲ್ಲ ಬಗೆಯ  ರಂಗ ಪ್ರಕಾರಗಳಿಗೂ ನವರಂಗವು ವೇದಿಕೆಯಾಗಿರುತ್ತಿತ್ತು. ಭಾರತೀಯ ನೃತ್ಯ ಪ್ರಕಾರವು ಹೆಚ್ಚಾಗಿ ವೃತ್ತಾಕಾರವಾಗಿಯೇ ಆರಂಭವಾಗುವುದರಿಂದ ನವರಂಗವನ್ನೂ ಅದೇ ಮಾದರಿಯಲ್ಲಿ ಇರಿಸಿದ್ದಾರೆ ಎನ್ನಬಹುದು. ಮುಂಭಾಗಿಲಿಂದ ಬರುವ ಸೂರ್ಯನ ಕಿರಣವನ್ನು ಪ್ರತಿಫಲಿಸಲು ವೃತ್ತಾಕಾರದ ರಚನೆಯು ಹೆಚ್ಚು ಪ್ರಶಸ್ತ ವೆನ್ನುವುದು ಅವರಿಗೆ ತಿಳಿದಿತ್ತು ಎಂದು ನಿಸ್ಸಂದೇಹವಾಗಿ ಹೇಳಬಹುದು. ಚೌಕಾಕಾರದ ರಚನೆಯಲ್ಲಿ ಬೆಳಕು ಕೋನಗಳಲ್ಲಿ ಕೇಂದ್ರೀಕೃತವಾಗುವುದರಿಂದ ಹೆಚ್ಚು ಪ್ರತಿಫಲನಕ್ಕೆ ಅವಕಾಶವಾಗುವುದಿಲ್ಲ. ಈ ಮಂಟಪವನ್ನು ತುರ್ತು ಸಭೆಗಳನ್ನು ನೆಡೆಸಲೂ ಸಹ ಬಳಸುತ್ತಿದ್ದರೆಂದು ಹೇಳಲಾಗುತ್ತದೆ. ದಕ್ಷಿಣ ಭಾರತದ ದೇವಾಲಯಗಳಲ್ಲಿ ನೃತ್ಯಸೇವೆಯ ಸಂಪ್ರದಾಯವು ಇದ್ದಿದ್ದರಿಂದ ನೃತ್ಯ ಮಾಡುವುದಕ್ಕೇ ಇರುತ್ತಿದ್ದ ದೇವದಾಸಿಯರು ನವರಂಗದಲ್ಲಿ ನೃತ್ಯಸೇವೆಯನ್ನು ದೇವರಿಗೆ ಸಲ್ಲಿಸುತ್ತಿದ್ದರೆಂದು ಶಾಸನಗಳು ಹೇಳುತ್ತವೆ.

ವಾಹನ ಮಂಟಪವು ಪ್ರತಿಷ್ಠಾಪಿತವಾಗಿರುವ ದೇವರ ವಾಹನವನ್ನಿರಿಸಲು ಮಾಡಿರುವ ಸ್ಥಳ. ಆಯಾ ದೇವರಿಗೆ ಸಂಬಂಧಿಸಿದ ವಾಹನದ ಮೂರ್ತಿಗಳನ್ನು ಕಡೆದು ಕೂರಿಸಲಾಗಿರುತ್ತದೆ. ಶಿವನ ದೇವಾಲಯದಲ್ಲಿ ನಂದಿಯು, ವಿಷ್ಣುವಿಗೆ ಗರುಡನೂ, ದುರ್ಗಿಗೆ ಸಿಂಹವೂ ಈ ಮಂಟಪಗಳಲ್ಲಿ ಕಂಡು ಬರುತ್ತದೆ. ಈ ಮಂಟಪವು ದೇವಾಲಯದ ಜಗತಿಯ ಮೇಲಿದ್ದರೂ ಮೂಲ ದೇವಾಲಯದಿಂದ ಪ್ರತ್ಯೇಕವಾಗಿರುತ್ತದೆ. ಕೆಲವು ಗುಡಿಗಳಲ್ಲಿ ಮಂಟಪವು ಇಲ್ಲದೆ ಕೇವಲ ವಾಹನಗಳನ್ನು  ಇರಿಸಿರುವುದೂ ಉಂಟು.  

ಕೂಟಗಳು..

ಹೊಯ್ಸಳರ ದೇವಾಲಯಗಳನ್ನು ಕೂಟ ದೇವಾಲಯಗಳಾಗಿ ವಿಂಗಡಿಸಲಾಗಿದೆ. ಒಂದು ಜಗತಿಯ ಮೇಲೆ ಒಂದೇ ಮುಖ್ಯ ದೇವಾಲಯವಿದ್ದು ಒಂದೇ ಮುಖ್ಯ ಗರ್ಭಗುಡಿಯಿರುವುದನ್ನು ಏಕಕೂಟಎನ್ನಲಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಬೇಲೂರು ನಗರದಲ್ಲಿರುವ ಚೆನ್ನಕೇಶವ ದೇವಾಲಯ. ಒಂದೇ ಜಗತಿಯ ಮೇಲೆ ಎರಡು ಮುಖ್ಯ ಗರ್ಭಗುಡಿಗಳಿರುವುದಕ್ಕೆ ದ್ವಿಕೂಟ ಅಥವಾ ಜೋಡಿಗುಡಿ ಎನ್ನಲಾಗುತ್ತದೆ. ಇದಕ್ಕೆ ಒಳ್ಳೆಯ ಉದಾಹರಣೆ ಹಳೇಬೀಡು ಪಟ್ಟಣದಲ್ಲಿರುವ ಹೊಯ್ಸಳೇಶ್ವರ ದೇವಸ್ಥಾನ. ಮೂರು ಮುಖ್ಯ ಗರ್ಭಗುಡಿಗಳಿರುವ ದೇವಾಲವು ತ್ರಿಕೂಟ ಇದನ್ನು ನಾವು ಸೋಮನಾಥಪುರದಲ್ಲಿ ಕಾಣಬಹುದು. ನಾಲ್ಕು ಗರ್ಭಗುಡಿಯಿರುವ ಚತುಷ್ಕೂಟ ದೇವಾಲಯವು ಹಾಸನ ಜಿಲ್ಲೆಯ ದೊಡ್ಡಗದ್ದವಳ್ಳಿ ಯಲ್ಲಿದೆ. ಐದು ಗರ್ಭಗುಡಿಯಿರುವ ಪಂಚಕೂಟ ಆಲಯವನ್ನು ಮಂಡ್ಯ ಜಿಲ್ಲೆ ಯ ಕಿಕ್ಕೇರಿ ತಾಲ್ಲೂಕಿನ ಗೋವಿಂದನ ಹಳ್ಳಿ ಎಂಬಲ್ಲಿ ಕಾಣಬಹುದು. ಹೀಗೆ ಕೂಟಗಳನ್ನಾಗಿ ವಿಂಗಡಿಸಿಕೊಂಡು ತಮ್ಮದೇ ಶೈಲಿಯಲ್ಲಿ ಹೊಯ್ಸಳರು ಸುಮಾರು 92 ದೇವಾಲಯಗಳನ್ನು ಕರ್ನಾಟಕದಲ್ಲಿ ನಿರ್ಮಿಸಿದ್ದಾರೆ. 

ಹೀಗೆಯೇ ಹೊಯ್ಸಳರ ಆಲಯಗಳ ಒಳಛಾವಣಿಗಳನ್ನು ಭುವನೇಶ್ವರಿಗಳು ಎಂದು ಕರೆಯಲಾಗುತ್ತದೆ. ವಿಶೇಷವೆಂದರೆ ಇವೂಗಳನ್ನು ಸಹ ಸೂಕ್ಷ್ಮ ಕುಸುರಿ ಕೆತ್ತನೆಯಿಂದ ಅಲಂಕರಿಸಲಾಗಿದೆ. ಭುವನೇಶ್ವರಿಗಳಲ್ಲಿ ಸಾಮಾನ್ಯವಾಗಿ ಅಷ್ಟದಿಕ್ಪಾಲಕ ರನ್ನು ಅವರ ವಾಹನಗಳ ಜೊತೆಗೆ ತೋರಿಸಲಾಗಿರುತ್ತದೆ. ಈ ವಿಗ್ರಹಗಳನ್ನು ಮೊದಲು ಕೆಳಗೆ ಕೆತ್ತನೆ ಮಾಡಿಕೊಂಡು ನಂತರ ಮೇಲಕ್ಕೆ ಇಂಟರ್ ಲಾಕ್ ಮಾದರಿಯಲ್ಲಿ ಜೋಡಿಸಲಾಗಿದೆ. ಹೆಚ್ಚು ಸ್ಪಷ್ಟತೆ, ಹೆಚ್ಚು ಅಲಂಕಾರ ಮತ್ತು ಪೂರ್ಣ ಚಿತ್ರಣ ಹೊಯ್ಸಳರ ವಾಸ್ತುಶೈಲಿಯ ಪ್ರಮುಖ ಅಂಶ. ವಿಗ್ರಹಗಳನ್ನು ಕೆತ್ತುವುದಕ್ಕೆಂದೇ ದೋರದಮುದ್ರ ದಲ್ಲಿ ಶಿಲ್ಪಕಲಾ ವಿಶ್ವವಿದ್ಯಾಲಯವೇ ಇತ್ತೆಂದು ವಿದ್ವಾಂಸರು ಶಾಸನಗಳ ಆಧಾರದಲ್ಲಿ ಹೇಳುತ್ತಾರೆ. ವಿಗ್ರಹಗಳನ್ನು ಕೆತ್ತುವ ಮುನ್ನ ಅದರ ಕರಡು ತಯಾರಿಕೆ , ನಂತರ ದಪ್ಪ ಕೆತ್ತನೆ, ತದನಂತರ ವಿಗ್ರಹದ ಸೂಕ್ಷ್ಮ ಕೆತ್ತನೆಗಳನ್ನು ಪೂರೈಸುತ್ತಿದ್ದರೆಂದು ಹೊಯ್ಸಳರ ಅನೇಕ ದೇವಾಲಯಗಳಲ್ಲಿನ ಕೆತ್ತನೆಯ ಶೈಲಿಯಿಂದ ತಿಳಿದುಬರುತ್ತದೆ. ಭಾರತೀಯ ವಾಸ್ತುಶೈಲಿಯಲ್ಲಿ ಹೊಯ್ಸಳ ವಾಸ್ತುಶಿಲ್ಪವು ಅತ್ಯಂತ ಪ್ರಮುಖವಾದ ಸ್ಥಾನವನ್ನು ಪಡೆದುಕೊಂಡಿದೆ.
ಇಂತಹ ಹೊಯ್ಸಳ ಶಿಲ್ಪಕಲೆಯ ದೇವಾಲಯಗಳು ಈಗ ಪ್ರಪಂಚದ ಆಕರ್ಷಣೆಯ ಕೇಂದ್ರ ಬಿಂದುಗಳಾಗಿವೆ.ಈ ದೇವಾಲಯಗಳನ್ನು ನೋಡಲು ವಿಶ್ವದ ಜನರು ಕಾತರರಾಗಿ ಬಂದು ಕಣ್ತುಂಬಿಕೊಂಡಿದ್ದಾರೆ. ವಿಪರ್ಯಾಸವೆಂದರೆ ನಮ್ಮ ಕನ್ನಡಿಗರೇ ಬಹಳ ಜನ ಈ ದೇವಾಲಯಗಳನ್ನು ಸಂದರ್ಶಿಸಿಲ್ಲ. ನಮ್ಮ ಜೀವನದಲ್ಲಿ ಒಮ್ಮೆಯಾದರೂ ಈ ದೇವಾಲಯಗಳ ಶಿಲ್ಪಕಲೆಯನ್ನು ಕಣ್ತುಂಬಿಕೊಳ್ಳೊಣ. ನಮ್ಮ ಹೊಯ್ಸಳ ದೇವಾಲಯಗಳು ನಮ್ಮ ಹೆಮ್ಮೆ. 

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529




20 September 2023

ಹಾಯ್ಕುಗಳು...

 


ಹಾಯ್ಕುಗಳು 


ಪಾತಕರಿಂದ 

ಘಾತಕರಿಂದ ದೂರ

ಜೀವ ನೆಮ್ಮದಿ.


ಊಟಕ್ಕಿರಲಿ

ಘೃತ ಕ್ಷೀರ ಧದಿಯು 

ಆಯುರಾರೋಗ್ಯ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

14 September 2023

ಪ್ರಜಾಪ್ರಭುತ್ವ ದಿನ... ಸೆಪ್ಟಂಬರ್ 15:


 

ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಸೆಪ್ಟೆಂಬರ್ 15



ರಾಜಪ್ರಭುತ್ವ, ನಿರಂಕುಶ ಪ್ರಭುತ್ವ, ಪ್ರಜಾಪ್ರಭುತ್ವ ಹೀಗೆ 
ಪ್ರಪಂಚದಲ್ಲಿ ವಿವಿಧ ರೀತಿಯ ಸರ್ಕಾರಗಳು ಅಸ್ತಿತ್ವದಲ್ಲಿವೆ.ಈ ಎಲ್ಲಾ ಪ್ರಭುತ್ವಗಳಿಗೆ ಹೋಲಿಸಿದರೆ  ಪ್ರಜಾಪ್ರಭುತ್ವ ಉತ್ತಮ ಸರ್ಕಾರ ಪಧ್ಧತಿ ಎಂದು ಎಲ್ಲರೂ ಒಪ್ಪುತ್ತಾರೆ.
ವಿಶ್ವ ಸಂಸ್ಥೆಯ ಸಾಮನ್ಯ ಸಭೆಯು 2007 ರ ಸೆಪ್ಟೆಂಬರ್ 15 ರಂದು ಒಂದು ನಿರ್ಣಯ ಕೈಗೊಳ್ಳುವ ಮೂಲಕ ಪ್ರತಿವರ್ಷವೂ ವಿಶ್ವ ಪ್ರಜಾಪ್ರಭುತ್ವ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲಪಡಿಸುವವುದು ಈ ದಿನಾಚರಣೆಯ ಪ್ರಮುಖ ಉದ್ದೇಶಗಳಲ್ಲೊಂದು.

ಪ್ರಜಾಪ್ರಭುತ್ವದ ವಿಚಾರ ಇಂದು ನಿನ್ನೆಯದಲ್ಲ. ಪ್ರಜಾಪ್ರಭುತ್ವ ಎಂಬ ಪದವನ್ನು ಹಲವಾರು ಅರ್ಥಗಳಲ್ಲಿ ಬಳಸಲಾಗುತ್ತದೆ. ಹಾಗೂ ಪ್ರಜಾ ಪ್ರಭುತ್ವವನ್ನು ಅಬ್ರಹಾಂ ಲಿಂಕನ್ ರವರು ಹೇಳಿರುವಂತೆ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ರಚಿತವಾಗಿರುವ ಸರಕಾರವೇ ಪ್ರಜಾಪ್ರಭುತ್ವ.ಪುರಾತನ ಕಾಲದಲ್ಲಿ ಗ್ರೀಕ್ ನಗರ ರಾಜ್ಯವಾದ ಆತೆನ್ಸ್ನಲ್ಲಿ ಪ್ರತ್ಯಕ್ಷ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿತ್ತು.  ಅಲ್ಲದೆ ಪ್ರಾಚೀನ ಭಾರತದಲ್ಲಿದ್ದ ಗಣರಾಜ್ಯಗಳ ಬಗ್ಗೆ ಸಾಕಷ್ಟು ಸಂಶೋಧನೆಯಾಗಿದೆ. ಇತರ ಕೆಲವು ದೇಶಗಳಲ್ಲೂ ಇಂಥ ಪ್ರಜಾಪ್ರಭುತ್ವವಿದ್ದುದನ್ನು ಕಾಣಬಹುದಾಗಿದೆ.

ಪ್ರಜಾಪ್ರಭುತ್ವ ಸರ್ಕಾರದ ರಚನೆಯ ಪ್ರಶ್ನೆ ಮೊಟ್ಟಮೊದಲು ಉದ್ಭವವಾದದ್ದು 19ನೆಯ ಶತಮಾನದಲ್ಲಿ. 18ನೆಯ ಶತಮಾನದವರೆಗೆ ಇದರ ಪೂರ್ಣ ಪರಿಕಲ್ಪನೆಯಿರಲಿಲ್ಲ. ಸಾಮಾಜಿಕ ಜೀವನದಲ್ಲೂ ರಾಜಕೀಯ ಜೀವನದಲ್ಲೂ ಸಮಾನತೆಗಾಗಿ ಕಾರ್ಖಾನೆಗಳ ಮಾಲಿಕರಿಗೂ ಕಾರ್ಮಿಕರಿಗೂ ಘರ್ಷಣೆ ಮೊದಲಾಗಿ ಸಮಾನತೆಯನ್ನು ಪ್ರಜಾಪ್ರಭುತ್ವದ ತತ್ವವಾಗಿ ಪರಿಗಣಿಸಲಾದ್ದು 18ನೆಯ ಶತಮಾನದಿಂದ ಈಚೆಗೆ. ಆ ಕಾಲದಲ್ಲಿ ಪ್ರಜಾಪ್ರಭುತ್ವ ಪ್ರಚಲಿತವಾಗಿರಲಿಲ್ಲ. ಆಧುನಿಕ ಕಾಲದವರೆಗೆ ಪ್ರಚಲಿತವಾಗಿದ್ದ ಪ್ರಮುಖ ರಾಜ್ಯ ಪದ್ಧತಿ ಎಂದರೆ ಅರಸೊತ್ತಿಗೆ. ಆದರೆ ಇಂದಿನ ಪರಿಸ್ಥಿತಿಯೇ ಬೇರೆ. ಹದಿನಾರನೆಯ ಶತಮಾನದಿಂದೀಚೆಗೆ ಅರಸೊತ್ತಿಗೆ ಕ್ಷೀಣಿಸುತ್ತ ಬಂದಿದೆ. ಈಗ ಪ್ರಜಾಪ್ರಭುತ್ವದ ತತ್ವಗಳು, ಆದರ್ಶಗಳು ಆಳವಾಗಿ ಬೇರೂರಿಕೊಂಡಿವೆ. ಪ್ರಪಂಚದ ಕೆಲವು ಭಾಗಗಳನ್ನು ಬಿಟ್ಟರೆ ಎಲ್ಲೆಡೆಯಲ್ಲೂ ಸರ್ಕಾರಗಳನ್ನು ಪ್ರಜಾಪ್ರಭುತ್ವದ ಕೆಲವು ತತ್ವಗಳಿಗೆ ಅನುಕೂಲವಾಗಿ ರಚಿಸಲಾಗಿದೆ. ಅವುಗಳ ಸ್ವರೂಪದಲ್ಲಿ ಭಿನ್ನತೆಗಳಿದ್ದರೂ ಕೆಲವು ತತ್ವಗಳೂ ಆಚರಣೆಗಳೂ ವಿವಾದಾಸ್ಪದವಾಗಿದ್ದರೂ ಪ್ರಜಾಪ್ರಭುತ್ವ ಪದ್ಧತಿಗೆ ಬಹುತೇಕ ಎಲ್ಲರೂ ನಿಷ್ಠೆ ತೋರಿಸುತ್ತಿದ್ದಾರೆ.

ಪ್ರಜಾಪ್ರಭುತ್ವ ಅರಸೊತ್ತಿಗೆಯಂತೆ ನಿರಂಕುಶ ಪ್ರಭುತ್ವವಲ್ಲ, ಅಥವಾ ಶ್ರೀಮಂತ ವರ್ಗದ ರಾಜ್ಯವಲ್ಲ, ಇದು ಪ್ರಜೆಗಳ ರಾಜ್ಯ. ಲೋಕವಾಣಿಯೇ ದೇವವಾಣಿ ಎಂದು ಪ್ರತಿಪಾದಿಸುವ ಪದ್ಧತಿ ಇದು. ಇಂದಿನ ಪ್ರಜಾಪ್ರಭುತ್ವದಲ್ಲಿ ಆಳುವವರೂ ಆಳಲ್ಪಡುವವರೂ ಪ್ರಜೆಗಳೇ ಆಗಿರುವುದರಿಂದ ಹೆಚ್ಚು ಕಡಿಮೆ ಎಂಬ ತಾರತಮ್ಯವಿಲ್ಲ.

ಇಂದು ಜಾರಿಯಲ್ಲಿರುವ ಪ್ರಾತಿನಿಧಿಕ ಅಥವಾ ಪರೋಕ್ಷ ಪ್ರಜಾಪ್ರಭುತ್ವದಲ್ಲಿ ಒಬ್ಬ ವ್ಯಕ್ತಿಯೇ ಆಗಲಿ ಕೆಲವು ವ್ಯಕ್ತಿಗಳೇ ಆಗಲಿ ಸ್ವೇಚ್ಛೆಯಾಗಿ ಆಳಲು ಎಡೆಯಿಲ್ಲ. ಪ್ರಜೆಗಳ ಪ್ರತಿನಿಧಿಗಳು ಪ್ರಜೆಗಳ ಹತೋಟಿಯೊಳಗೆ ಇರಬೇಕಾಗುತ್ತದೆ. ಇಂಥ ಹತೋಟಿಗಳನ್ನು ಪರಿಣಾಮಕಾರಿಯಾಗಿಸಲು  ಸಂವಿಧಾನದಲ್ಲಿ ಮತ್ತು ಶಾಸನಗಳಲ್ಲಿ ಸೂಕ್ತ ನಿರ್ದೇಶನಗಳಿರುತ್ತವೆ.  ಸಂವಿಧಾನ ಹಾಗೂ ಕಾನೂನುಗಳ ಆಚೆಗೂ ಹಲವಾರು ಹತೋಟಿಗಳಿವೆ.




ಪ್ರಜೆಗಳು ಅದರಲ್ಲೂ ಮತದಾರರು ತಮ್ಮ ಪ್ರತಿನಿಧಿಗಳ ಮೇಲೆ ಪರಿಣಾಮಕಾರಿ ನಿಯಂತ್ರಣವನ್ನಿಟ್ಟುಕೊಳ್ಳಲು ಪ್ರಾತಿನಿಧಿಕ ಪ್ರಜಾಪ್ರಭುತ್ವ ಅನುವು ಮಾಡಿಕೊಡುತ್ತದೆ. ನಿಯಮಿತ ಕಾಲದಲ್ಲಿ ಚುನಾವಣೆಗಳು ನಡೆಯುತ್ತವೆ. ಪ್ರತಿನಿಧಿಗಳು ನಿಶ್ಚಿತ ಅವಧಿಯಲ್ಲಿ ಮಾತ್ರ ಅಧಿಕಾರದಲ್ಲಿರುತ್ತಾರೆ. ಇಂದಿನ ಪ್ರತಿನಿಧಿಗಳು ಚೆನ್ನಾಗಿ ಕಾರ್ಯ ಮಾಡದಿದ್ದರೆ, ತಮ್ಮ ಕ್ಷೇತ್ರಗಳ ಬಗ್ಗೆ ಉಪೇಕ್ಷೆ ತೋರಿದರೆ ಮುಂದಿನ ಚುನಾವಣೆಗಳಲ್ಲಿ ಅವರ ಬದಲಾಗಿ ಬೇರೆ ಅಭ್ಯರ್ಥಿಗಳನ್ನು ಆರಿಸಬಹುದಾಗಿದೆ. ಅಯೋಗ್ಯನೆನಿಸಿದ ಪ್ರತಿನಿಧಿಯನ್ನು ಅವಧಿ ಮುಗಿಯುವ ಮುಂಚೆಯೇ ಕರೆಯಿಸಿಕೊಳ್ಳುವ ಅಧಿಕಾರ ಕೆಲವು ದೇಶಗಳಲ್ಲಿ ಮತದಾರರಿಗೆ ಇರುತ್ತದೆ. ಜಾಗೃತ ಶಾಸಕರು ಕಾರ್ಯಾಂಗದ ವಿವಿಧ ಚಟುವಟಿಕೆಗಳನ್ನು ಗಮನವಿಟ್ಟು ನೋಡುತ್ತಿರುತ್ತಾರೆ. ಲೋಪದೋಷಗಳು ಕಂಡುಬಂದರೆ ಶಾಸನ ಸಭೆಗಳಲ್ಲಿ ಟೀಕೆ, ಟಿಪ್ಪಣೆ ಮಾಡುತ್ತಾರೆ ಸೂಚನೆಗಳನ್ನು ನೀಡುತ್ತಾರೆ. ಸರ್ಕಾರದ ಇಂಥ ಲೋಪದೋಷಗಳನ್ನು ಪತ್ರಿಕೆಗಳು ಪ್ರಕಟಿಸುವುದರಿಂದ ಅವು ಜನತೆಯ ಗಮನಕ್ಕೆ ಬರುವುದು ಸಹಜ.




ಮತ ಎಂಬುದು ಪ್ರಜೆಗಳ ಕೈಯಲ್ಲಿಯ ಒಂದು ಪ್ರಬಲ ಅಸ್ತ್ರ. ಅದನ್ನು ಜಾಣತನದಿಂದ ಪರಿಣಾಮಕಾರಿಯಾಗಿ ಉಪಯೋಗಿಸದಿದ್ದರೆ ಜನತಂತ್ರ ಸರಿಯಾಗಿ ನಡೆಯಲಾರದು. ಪ್ರಜೆಗಳು ರಾಜಕೀಯ ವಿಷಯಗಳ ಬಗ್ಗೆ ಅನಾಸಕ್ತಿ ತೋರುವುದರಿಂದ ಅವರಿಗೆ ಹಾನಿ. ತಮ್ಮ ರಾಜ್ಯದಲ್ಲಿ, ರಾಷ್ಟ್ರದಲ್ಲಿ ಪ್ರಪಂಚದಲ್ಲಿ ಏನು ನಡೆದಿದೆ ಎಂಬುವುದರ ಅರಿವು ಅವರಿಗಿರಬೇಕಾಗುತ್ತದೆ.

ಚಿರಂತನ ಜಾಗೃತಿಯೇ ಪ್ರಜಾಪ್ರಭುತ್ವದ ಬೆಲೆ. ತಮಗೆ ಹಕ್ಕುಗಳೊಂದಿಗೆ ಕರ್ತವ್ಯಗಳೂ ಇವೆ ಅನ್ನುವುದರ ಪ್ರಜ್ಞೆ ಪ್ರಜೆಗಳಿಗಿರಬೇಕು. ಪ್ರಜೆಗಳಲ್ಲಿ ರಾಜಕೀಯ ಪ್ರಜ್ಞೆ ಬೆಳೆಸಿ ಉಳಿಸಿಕೊಳ್ಳುವುದರಲ್ಲಿ ಸ್ವತಂತ್ರ ಹಾಗೂ ನಿರ್ಭೀತ ಪತ್ರಿಕೆಗಳ ಪಾತ್ರ ಹಿರಿಯದು. ರಾಜಕೀಯ ಪಕ್ಷಗಳು ಪತ್ರಿಕೆಗಳಂತೆ ಪ್ರಜಾಪ್ರಭುತ್ವದ ಜೀವಾಳವಾಗಿವೆ. ಅವು ಜನರ ಹಾಗೂ ಸರ್ಕಾರದ ನಡುವಣ ಸೇತುವೆಗಳು. ಚುನಾವಣೆಗೆ ಮುನ್ನ ನೀಡಿದ ಆಶ್ವಾಸನೆಗಳನ್ನು ಪೂರೈಸಲು ಪರಿಣಾಮಕಾರಿ ಕಾರ್ಯಕ್ರಮಗಳನ್ನು ಅನುಷ್ಠಾನದಲ್ಲಿ ತರುವ ಅತಿ ಮುಖ್ಯ ಕಾರ್ಯ ರಾಜಕೀಯ ಪಕ್ಷಗಳದ್ದಾಗಿದೆ. ಅಧಿಕಾರರೂಢ ಪಕ್ಷವಷ್ಟೇ ವಿರೋಧ ಪಕ್ಷವೂ ಪ್ರಜಾಪ್ರಭುತ್ವ ಪದ್ಧತಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಇಂದಿನ ಪ್ರಜಾಪ್ರಭುತ್ವವನ್ನು ಬಹುಮತದ ಸರ್ಕಾರವೆಂದು ಕರೆಯಲಾಗಿದೆ. ಬಹುಮತ ಗಳಿಸಿದ ಪಕ್ಷ ಸರ್ಕಾರ ರಚಿಸಿದರೂ ಅಲ್ಪಸಂಖ್ಯಾತರಿಗೆ ಹಾಗೂ ರಾಜಕೀಯ ವಿರೋಧಿಗಳಿಗೆ ತೊಂದರೆ, ಅನಾನುಕೂಲತೆಗಳು ಒದಗದಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯವಾಗಿರುತ್ತದೆ. ಪರಸ್ಪರ ತಿಳಿವಳಿಕೆ, ವಿಚಾರ ವಿನಿಮಯಗಳು ಪ್ರಜಾಪ್ರಭುತ್ವದ ಮುಖ್ಯ ಲಕ್ಷಣಗಳು.

ಭಾರತದಂತಹ ರಾಷ್ಟ್ರಗಳಲ್ಲಿ  ಪ್ರಜಾಪ್ರಭುತ್ವ ಒಂದು ಜೀವನ ವಿಧಾನವೇ ಆಗಿದೆ. ಆರ್ಥಿಕ ಸಾಮಾಜಿಕ ಸಮಾನತೆ ಹಾಗೂ ರಾಜಕೀಯ ಸ್ವಾತಂತ್ರ್ಯ ಒದಗಿಸಿಕೊಡಲು ಅದು ಹೋರಾಡುತ್ತದೆ. ನಾಗರಿಕರಲ್ಲಿ ಪರಸ್ಪರ ತಿಳಿವಳಿಕೆ, ವಿಚಾರ ವಿನಿಮಯ, ಸಹಕಾರ, ಸಹಾನುಭೂತಿ, ರಚನಾತ್ಮಕ ವಿಮರ್ಶೆ ಜೀವಂತ ಪ್ರಜಾಪ್ರಭುತ್ವದ ಲಕ್ಷಣಗಳಾಗಿರುತ್ತವೆ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529

ಇಂಜಿನಿಯರ್ ದಿನ....

 


ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ.

ಜಗತ್ತು ಕಂಡ ಶ್ರೇಷ್ಠ ಇಂಜಿನಿಯರ್, ದಕ್ಷ ಆಡಳಿತಗಾರ, ಭಾರತದ ಯೋಜನೆಯ ಪಿತಾಮಹ ಸರ್ ಎಂ ವಿಶ್ವೇಶ್ವರಯ್ಯ ಹೆಸರು ಕೇಳದವರಿಲ್ಲ.ಭಾರತಕ್ಕೆ ಅವರ ಅಸಾಧಾರಣ ಕೊಡುಗೆ ಸ್ಮರಿಸುತ್ತಾ ಅವರ ಹುಟ್ಟಿದ ದಿನವಾದ ಸೆಪ್ಟೆಂಬರ್15 ನ್ನು ಪ್ರತಿ ವರ್ಷ "ಇಂಜಿನಿಯರ್ ಗಳ ದಿನ" ಎಂದು ಆಚರಿಸುತ್ತಾ ಬಂದಿದ್ದೇವೆ.

ವಿಶ್ವೇಶ್ವರಯ್ಯನವರು ಜನಿಸಿದ್ದು ಸೆಪ್ಟೆಂಬರ್ 15,1860 ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಎಂಬಲ್ಲಿ. ವಿಶ್ವೇಶ್ವರಯ್ಯನವರ ತಂದೆ 'ಶ್ರೀನಿವಾಸ ಶಾಸ್ತ್ರಿ', ತಾಯಿ 'ವೆಂಕಟಲಕ್ಷ್ಮಮ್ಮ'. ಅವರ ಪೂರ್ವಜರು ಈಗಿನ ಆಂದ್ರಪ್ರದೇಶದ 'ಮೋಕ್ಷಗುಂಡಂ' ಎಂಬ ಸ್ಥಳದಿಂದ ವಲಸೆ ಬಂದು ಮುದ್ದೇನಹಳ್ಳಿಯಲ್ಲಿ ವಾಸವಾಗಿದ್ದ ಕಾರಣ ಅವರ ಹೆಸರಿನೊಡನೆ ಮೋಕ್ಷಗುಂಡಂ ಸೇರಿಕೊಂಡಿದೆ. ವಿಶ್ವೇಶ್ವರಯ್ಯ ನವರ ತಂದೆ ಸಂಸ್ಕೃತ ವಿದ್ವಾಂಸರು. ಧರ್ಮ ಶಾಸ್ತ್ರಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದರಲ್ಲದೆ ಆಯುರ್ವೇದ ತಜ್ಞರೂ ಆಗಿದ್ದರು. ಅವರು 15 ವರ್ಷದವರಿರುವಾಗಲೆ ತಂದೆಯು ನಿಧನರಾದರು. ವಿಶ್ವೇಶ್ವರಯ್ಯನವರ ಪ್ರಾಥಮಿಕ ಶಿಕ್ಷಣ ಚಿಕ್ಕಬಳ್ಳಾಪುರದಲ್ಲಿ ಮತ್ತು ಪ್ರೌಢ ಶಿಕ್ಷಣ ಬೆಂಗಳೂರಿನಲ್ಲಿ ನಡೆಯಿತು. 1881 ರಲ್ಲಿ ಮದ್ರಾಸು ವಿಶ್ವವಿದ್ಯಾಲಯದಿಂದ ಬಿ.ಎ ಪದವಿಯನ್ನು ಪಡೆದು ನಂತರ ಪುಣೆಯ ವಿಜ್ಞಾನ ಕಾಲೇಜಿನಿಂದ ಸಿವಿಲ್ ಎಂಜಿನಿಯರಿಂಗ್ ಪದವಿಯನ್ನು ಪಡೆದರು.
1884 ರಲ್ಲಿ  ಮುಂಬಯಿ ನಗರದಲ್ಲಿ ಲೋಕೋಪಯೋಗಿ ಇಲಾಖೆಯನ್ನು ಸೇರಿದರು. ಇದಾದ ಮೇಲೆ ಭಾರತೀಯ ನೀರಾವರಿ ಆಯೋಗದಿಂದ ಅವರಿಗೆ ಆಮಂತ್ರಣ ಬಂದಿತು. ಈ ಆಯೋಗವನು ಸೇರಿದ ನಂತರ ದಖನ್ ಪ್ರಸ್ತಭೂಮಿಯಲ್ಲೇ ಉತ್ತಮವಾದ ನೀರಾವರಿ ವ್ಯವಸ್ಥೆಯನ್ನು ವಿಶ್ವೇಶ್ವರಯ್ಯನವರು ಪರಿಚಯಿಸಿದರು. ಸರ್ ಎಂ. ವಿ. ಯವರು ಅರ್ಥರ್ ಕಾಟನ್ ರವರಿಂದ ಬಹಳಷ್ಟು ಪ್ರಭಾವಿತರಾಗಿದ್ದರು. ಕಾವೇರಿ ನದಿಗೆ ಅಣೆಕಟ್ಟು ಕಟ್ಟುವಲ್ಲಿ ಅವರು ತಿರುಚನಾಪಳ್ಳಿಯಲ್ಲಿ ಚೋಳ ರಾಜರಿಂದ ನಿರ್ಮಿಸಲ್ಪಟ್ಟ ಹಾಗೂ 18ನೇ ಶತಮಾನದ ಅರ್ಧದಲ್ಲಿ ಅರ್ಥರ್ ಕಾಟನ್ ರವರಿಂದ ಸಂಪೂರ್ಣವಾಗಿ ನವೀಕರಿಸಲ್ಪಟ್ಟ ಬೃಹತ್ ಅಣೆಕಟ್ಟಾದ ಗ್ರಾಂಡ್ ಅಣಿಕಟ್ ನ್ನು ನೋಡಿ ಪ್ರಭಾವಿತರಾಗಿದ್ದರು. ನಂತರ ಮಹಾರಾಜರಲ್ಲಿ ಇದನ್ನು ವರದಿ ಮಾಡಿದ್ದರು. ಅಣೆಕಟ್ಟುಗಳಲ್ಲಿ ಉಪಯೋಗಿಸಲಾಗುವ 'ಸ್ವಯಂಚಾಲಿತ ಫ್ಲಡ್ ಗೇಟ್ ವಿನ್ಯಾಸ' ವೂಂದನ್ನು ಕಂಡು ಹಿಡಿದು ಅದಕ್ಕಾಗಿ 'ಪೇಟೆಂಟ್' ಪಡೆದರು. ಮೊದಲ ಬಾರಿಗೆ 1903 ರಲ್ಲಿ ಈ ಫ್ಲಡ್ ಗೇಟ್ ಗಳು ಪುಣೆಯ 'ಖಡಕ್ವಾಸ್ಲಾ' ಅಣೆಕಟ್ಟಿನಲ್ಲಿ ಸ್ಥಾಪಿತವಾದವು. ಇಲ್ಲಿ ಅವು ಯಶಸ್ವಿಯಾದ ನಂತರ 'ಗ್ವಾಲಿಯರ್ ನ ಟಿಗ್ರಾ ಅಣೆಕಟ್ಟು' ಮತ್ತು ಕರ್ನಾಟಕದ 'ಕೃಷ್ಣರಾಜಸಾಗರ' ಅಣೆಕಟ್ಟುಗಳಲ್ಲಿ ಸಹ ಉಪಯೋಗಿತವಾದವು. ಈ ಗೇಟ್ ಗಳ ಉದ್ದೇಶ ಅಣೆಕಟ್ಟಿಗೆ ಹಾನಿ ಮಾಡದೆ ಗರಿಷ್ಠ ಮಟ್ಟದ ನೀರನ್ನು ಶೇಖರಿಸಿಡುವುದೇ ಆಗಿತ್ತು. ಕೃಷ್ಣರಾಜ ಸಾಗರವನ್ನು ಕಟ್ಟಿದಾಗ ಅದು ಆ ಕಾಲದಲ್ಲಿ ಭಾರತದ ಅತ್ಯಂತ ದೊಡ್ಡ ಅಣೆಕಟ್ಟು.
1908ರಲ್ಲಿ ಸ್ವಯಂ-ನಿವೃತ್ತಿ ಘೋಷಿಸಿದ ವಿಶ್ವೇಶ್ವರಯ್ಯನವರು ನಂತರ ಮೈಸೂರು ಸಂಸ್ಥಾನದ ದಿವಾನರಾಗಿ ಸೇವೆ ಸಲ್ಲಿಸಿದರು. ಮಹಾರಾಜ ಕೃಷ್ಣರಾಜ ಒಡೆಯರ್ ಅವರ ಜೊತೆ ಮೈಸೂರು ರಾಜ್ಯದ ಸರ್ವತೋಮುಖ ಬೆಳವಣಿಗೆಗೆ ಕೆಲಸ ಮಾಡಿದರು. 1917ರಲ್ಲಿ ಬೆಂಗಳೂರಿನಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸಿದರು. ಇದೇ ಕಾಲೇಜಿಗೆ ನಂತರ ಅವರ ಹೆಸರನ್ನೇ ಇಡಲಾಯಿತು.ಮೈಸೂರು ವಿಶ್ವವಿದ್ಯಾಲಯದ ಬೆಳವಣಿಗೆಗಾಗಿಯೂ ಶ್ರಮಿಸಿದರು.
ವಿಶ್ವೇಶ್ವರಯ್ಯನವರು ದಿವಾನರಾಗಿದ್ದಾಗ ಬ್ರಿಟೀಷ ಸರ್ಕಾರ ಅವರಿಗೆ "ಸರ್" ಪದವಿಯನ್ನು ನೀಡಿತು.

1955 ರಲ್ಲಿ ಭಾರತ ಸರ್ಕಾರದ ಅತ್ಯುಚ್ಚ ಗೌರವವಾದ ಭಾರತ ರತ್ನ ಲಭಿಸಿತು. ಸರ್. ಎಂ. ವಿಶ್ವೇಶ್ವರಯ್ಯನವರು ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗರು
ಕರ್ನಾಟಕದಲ್ಲಿ ಹೆಚ್ಚಿನ ಶಾಲಾ ಕಾಲೇಜುಗಳು, ಐ.ಟಿ.ಐ, ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಕಾಲೇಜುಗಳಿಗೆ ಇವರ ಹೆಸರಿಟ್ಟು ಗೌರವಿಸಲಾಗಿದೆ.

ನಾನು   ಗೌರಿಬಿದನೂರಿನಲ್ಲಿ ಪ್ರೌಢಶಾಲಾ ಶಿಕ್ಷಕನಾಗಿ ಕಾರ್ಯ ನಿರ್ವಹಿಸುವಾಗ ವಿಶ್ವೇಶ್ವರಯ್ಯ ರವರ ಹುಟ್ಟೂರಾದ ಮುದ್ದೇನಹಳ್ಳಿಗೆ ಮಕ್ಕಳನ್ನು ಪ್ರವಾಸ ಕರೆದುಕೊಂಡುಹೋಗಿದ್ದೆ.ಅಲ್ಲಿಯ ಅವರ ಮನೆಯು ವಸ್ತು ಸಂಗ್ರಾಹಾಲಯವಾಗಿ ಮಾರ್ಪಾಡಾಗಿದೆ.ಅಲ್ಲಿರುವ ಭಾರತ ರತ್ನ ಪದಕ ಮುಟ್ಟಿ ಪುಳಕಗೊಂಡಿದ್ದೆನು.
ಸರ್ ಎಂ ವಿಶ್ವೇಶ್ವರಯ್ಯ ರವರು ಮುಂದಿನ ಅನೇಕ ಪೀಳಿಗೆಗೆ ಮಾದರಿ ಮತ್ತು ಸ್ಪೂರ್ತಿದಾಯಕ ವ್ಯಕ್ತಿತ್ವ .

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529




11 September 2023

ವಿಭಿನ್ನವಾಗಿ ಯೋಚಿಸಿ...

 ವಿಭಿನ್ನವಾಗಿ ಯೋಚಿಸಿ....


ವಿಭಿನ್ನವಾಗಿ ಯೋಚಿಸಿ ಕಾರ್ಯಪ್ರವೃತ್ತರಾಗುವವರಿಗೆ ಎಂದಿಗೂ ಸೋಲಾಗುವುದಿಲ್ಲ ಎಂಬುದಕ್ಕೆ ದಿನಕ್ಕೊಂದು ಸ್ಟಾರ್ಟಪ್, ಯೂನಿಕಾರ್ನ್ ಕಂಪನಿಗಳು ಹುಟ್ಟಿ ಕೋಟಿಗಳ ಲೆಕ್ಕದಲ್ಲಿ ವ್ಯವಹಾರ ಮಾಡುತ್ತ ನೂರಾರು ಜನರಿಗೆ ಉದ್ಯೋಗವನ್ನು ನೀಡಿ ನವೋದ್ಯಮಿಗಳಿಗೆ ಲಾಭವನ್ನು ತಂದುಕೊಡುತ್ತಿವೆ. ಇದಕ್ಕೆ ಉದಾಹರಣೆಯಾಗಿ  ಅಮೇಜಾನ್ ,ಪ್ಲಿಪ್ ಕಾರ್ಟ್,  ಜೊಮ್ಯಾಟೊ, ರೆಡ್ ಬಸ್, ಇತ್ಯಾದಿ ನೂರಾರು ಹೇಳಬಹುದು. ಹೀಗೆ ವ್ಯವಹಾರದಲ್ಲಿ ಯಶಸ್ವಿಯಾಗಲು ಕೊಂಚ ವಿಭಿನ್ನವಾಗಿ ಆಲೋಚಿಸಿ ಧೈರ್ಯದಿಂದ ಮುನ್ನುಗ್ಗಿದವರೇ ಮುಂದೊಂದು ದಿನ ಯದ್ಯಮಿಗಳಾಗಿ ಹೊರಹೊಮ್ಮುತ್ತಾರೆ. 


ಬಹುಕಾಲದ ಹಿಂದೆ ಚೀನಾದಲ್ಲಿ ಒಬ್ಬ ಯಶಸ್ವೀ ಉದ್ಯಮಿ ಇದ್ದರು. ಅವರದ್ದು ಬಾಚಣಿಗೆ ಬ್ಯುಸಿನೆಸ್. ಅವರಿಗೆ ವಯಸ್ಸಾಗಿತ್ತು. 

ಇನ್ನೇನು ನಿವೃತ್ತಿ ಹತ್ತಿರವಾಗಿತ್ತು. 

ಅವರಿಗೆ ಮೂರು ಮಂದಿ ಗಂಡು ಮಕ್ಕಳಿದ್ದರು. ತನ್ನ ಉದ್ಯಮವನ್ನು ಸುರಕ್ಷಿತ ಕೈಗಳಲ್ಲಿ ಇಡಬೇಕು ಎಂಬ ಆಸೆಯಿಂದ ಅವರು ಮಕ್ಕಳಿಗೆ ಒಂದು ಸಣ್ಣ ಪರೀಕ್ಷೆಯನ್ನು ಒಡ್ಡಿದರು. 

"ನೀವು ಒಂದು ಬೌದ್ಧ ಆಶ್ರಮಕ್ಕೆ ಹೋಗಿ ಅಲ್ಲಿನ ಸನ್ಯಾಸಿಗಳಿಗೆ ಬಾಚಣಿಗೆ ಮಾರಿ ಬರಬೇಕು" ಎಂದರು ತಂದೆ. ಮೂರು ದಿನದ ಬಳಿಕ  ವರದಿ ನೀಡಬೇಕು ಎಂದರು.


ಮಕ್ಕಳಿಗೆ ಆಘಾತ. ಸನ್ಯಾಸಿಗಳಿಗೆ ತಲೆ ಕೂದಲೇ ಇರುವುದಿಲ್ಲ. ಅವರಿಗೆ ಬಾಚಣಿಗೆ ಯಾಕೆ? ಯಾಕಾದರೂ ಅವರು ತೆಗೆದುಕೊಂಡಾರು ಎಂದು ಯೋಚಿಸಿದರು. ಅಷ್ಟಾದರೂ ಅಪ್ಪನ ಮಾತು ಮೀರಲಾರದೆ ಆಶ್ರಮಕ್ಕೆ ತೆರಳಿದರು.ಮೂರು ದಿನಗಳ ಬಳಿಕ ಒಬ್ಬ ಮಗ ಬಂದ. "ನನಗೆ ಎರಡು ಬಾಚಣಿಗೆ ಮಾರಲು ಸಾಧ್ಯವಾಯಿತು ಅಪ್ಪ"ಅಂದ. ಅಪ್ಪ ಕುತೂಹಲದಿಂದ ಕೇಳಿದ" ಬಾಚಣಿಗೆ ತೆಗೆದುಕೊಳ್ಳುವಂತೆ ಹೇಗೆ ಅವರನ್ನು ಒಪ್ಪಿಸಿದೆ ಮಗನೇ?"ಮಗ ಹೇಳಿದ "ನಿಮಗೇನಾದರೂ ಬೆನ್ನು ತುರಿಸಿದರೆ ಆಗ ತುರಿಸಿಕೊಳ್ಳಲು ಅನುಕೂಲವಾಗುತ್ತದೆ" ಎಂದು 


ಅಷ್ಟು ಹೊತ್ತಿಗೆ ಎರಡನೇಯವನು ಬಂದ. ಅವನು 10 ಬಾಚಣಿಗೆ ಮಾರಿಬಂದಿದ್ದ.

ಅವನು ಹೇಳಿದ"ನೀವು ಈ ಬಾಚಣಿಗೆಗಳನ್ನು ಖರೀದಿ ಆಶ್ರಮದಲ್ಲಿ ಇಟ್ಟರೆ ಬರುವ ಪ್ರವಾಸಿಗರಿಗೆ ಅನುಕೂಲವಾದೀತು ಅಂದೆ. ಎಲ್ಲೋ ದೂರದಿಂದ ಬಂದಿರ್ತಾರೆ,  ಕೂದಲು ಕೆದರಿಕೊಂಡಿದ್ದರೆ ಇದರ ಮೂಲಕ ಬಾಚಿಕೊಳ್ಳಬಹುದು ಎಂದು ಅವರಿಗೆ ಹೇಳಿದೆ. ಒಮ್ಮೆ ನಿರಾಕರಿಸಿದರೂ ಕೊನೆಗೆ 10 ತೆಗೆದುಕೊಳ್ಳಲು ಒಪ್ಪಿದರು" ಅಂದ. 


ಅಷ್ಟು ಹೊತ್ತಿಗೆ ಮೂರನೇ ಮಗ ಬಂದ. "ಎಷ್ಟು ಬಾಚಣಿಗೆ ಮಾರಿದೆ ಮಗನೇ "ಅಂತ ಅಪ್ಪ ಕೇಳಿದ. "ಒಂದು ಸಾವಿರ ಬಾಚಣಿಗೆ ಸೇಲ್ ಆಯ್ತಪ್ಪ"ಅಂತ ಅವನು ಹೇಳುತ್ತಿದ್ದಂತೆಯೇ ಎಲ್ಲರಿಗೂ ಭಾರಿ ಅಚ್ಚರಿ!

ಇದು ಹೇಗೆ ಸಾಧ್ಯ ಎಂದು ಎಲ್ಲರೂ ಮುಖ ಮುಖ ನೋಡಿಕೊಂಡರು.

ಅಪ್ಪ ಕೇಳಿದರು"ಹೇಗಪ್ಪಾ ಇದು ಸಾಧ್ಯವಾಯಿತು, ಸ್ವಲ್ಪ ವಿವರಿಸಿ ಹೇಳು."


ಮಗ ವಿವರಿಸಿದ "ನಾನು ಆಶ್ರಮವಾಸಿ ಸನ್ಯಾಸಿಗಳ ಬಳಿಗೆ ಹೋಗಿ ಅವರಿಗೊಂದು ಐಡಿಯಾ ಕೊಟ್ಟೆ. ಅದೇನೆಂದರೆ, ಈ ಬಾಚಣಿಗೆಗಳಲ್ಲಿ ಬುದ್ಧನ ಸಂದೇಶವನ್ನು ಅಂಟಿಸಿದರೆ ಇಲ್ಲವೇ ಪ್ರಿಂಟ್ ಮಾಡಿದರೆ ಅದನ್ನು ಸಂದರ್ಶಕರು ಮತ್ತು ಭಕ್ತರಿಗೆ ಕಾಣಿಕೆಯಾಗಿ ಕೊಡಬಹುದು ಅಂದೆ. ಹಾಗೆ ಪಡೆದುಕೊಂಡವರು ಪ್ರತಿ ದಿನವೂ ತಲೆ ಬಾಚುವಾಗ ಬುದ್ಧನ ಬೋಧನೆಗಳನ್ನು ನೆನಪಿಸಿಕೊಳ್ಳಲು ಸಾಧ್ಯವಾದೀತು ಎಂದು ಹೇಳಿದೆ. 

ಅವರಿಗೆ ಹೌದೆನಿಸಿತು.  ಕೇವಲ ಎರಡು ರೂಪಾಯಿಯ ಬಾಚಣಿಗೆ ಮೂಲಕ ಬುದ್ಧನ ಸಂದೇಶವನ್ನು ಮನೆ ಮನೆಗೆ ತಲುಪಿಸಬಹುದು ಎಂಬ ಐಡಿಯಾವೇ ರೋಚಕವಾಗಿದೆ ಅಂದರು. ಒಂದು ಸಾವಿರ ಬಾಚಣಿಗೆಗೆ ಆರ್ಡರ್ ಮಾಡಿದರು."

ಮಗ ಮುಂದುವರಿಸಿದ "ಅಷ್ಟೇ ಅಲ್ಲ ಅಪ್ಪ.  ಬುದ್ಧನ ಸಂದೇಶಗಳನ್ನು ನಾವೇ ಮುದ್ರಿಸಿ ಕೊಡುವುದಾದರೆ ಬೇರೆ ಆಶ್ರಮಗಳ ಆರ್ಡರ್ ಕೂಡಾ ಪಡೆಯಲು ಸಹಾಯ ಮಾಡುವುದಾಗಿ ಅಲ್ಲಿನ ಸನ್ಯಾಸಿಗಳು ಹೇಳಿದರು." 

ಈ ಮೇಲಿನ ಕಥೆಯನ್ನು ಓದಿದಾಗ ಅಸಾಧ್ಯವಾದದು ಯಾವುದೂ ಇಲ್ಲ ಸ್ವಲ್ಪ ನಮ್ಮ ಮೆದುಳಿಗೆ ಕೆಲಸ ಕೊಡಬೇಕು .ಪ್ರಾಮಣಿಕ ಪ್ರಯತ್ನ ಮಾಡಬೇಕು. ಥಿಂಕ್ ಔಟ್ ಆಪ್ ದಿ ಬಾಕ್ಸ್ ಎಂದರೆ ಇದೇ ಅಲ್ಲವೇ..? ಬೋಳು ತಲೆಯವರಿಗೂ ಬಾಚಣಿಗೆ ಮಾರುವುದಾದರೆ  ಇನ್ನೂ ಎಂತಹ ಅವಕಾಶಗಳು ಇರಬಹುದು? ನನಗೆ ಉದ್ಯೋಗವಿಲ್ಲ ಎಂದು ತಲೆ ಮೇಲೆ ಕೈ ಹೊತ್ತು ಕೂರುವ ಬದಲು ವಿಭಿನ್ನವಾಗಿ ಆಲೋಚಿಸುವ ಮೂಲಕ ತಾನೇ ಉದ್ಯಮಿಯಾಗಿ ಬೆಳೆಬಹುದಲ್ಲವೆ...


ಸಿಹಿಜೀವಿ ವೆಂಕಟೇಶ್ವರ

ತುಮಕೂರು




07 September 2023

ಗೋಮುಖ ವ್ಯಾಘ್ರರು...

 


*ಗೋಮುಖ ವ್ಯಾಗ್ರರು*


ಕಲಿತವರೂ ಗಾಢಾಂಧಕಾರದಲಿಹರು

ತೋರಿಕೆಯ ಬುದ್ದಿವಂತರು ಇವರು

ಸುಳ್ಳೇ ಇವರ ಮನೆ ದೇವರು 

ತಮ್ಮಲ್ಲೇ ಕಚ್ಚಾಡುತ್ತಲೇ ಇರುವರು 

ಬಾಯಲ್ಲಿ ಮಾತ್ರ ಶುಭಕೋರುವರು

ದುಷ್ಟಗುಣದ  ಗೋಮುಖವ್ಯಾಘ್ರರು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು


01 September 2023

ಉದ್ಯೋಗ ಮತ್ತು ಆತ್ಮ ತೃಪ್ತಿ..

 


ಉದ್ಯೋಗ ಮತ್ತು ಆತ್ಮ ತೃಪ್ತಿ..

ಈಗ ಉದ್ಯೋಗಂ ಪುರುಷ ಲಕ್ಷಣ ಎಂಬ ಮಾತು ಬದಲಾಗಿ ಉದ್ಯೋಗ ಮಾನವ ಲಕ್ಷಣ, ರೋಬಾಟ್ ಲಕ್ಷಣ ಮುಂದುವರೆದು ಯಾಂಬು (ಯಾಂತ್ರಿಕ ಬುದ್ದಿ ಮತ್ತೆ) ಲಕ್ಷಣವಾಗಿದೆ.ಉದ್ಯೋಗ ಗಳಿಸಿದ ಕೂಡಲೆ ತಾನು ಮಾಡುವ
ಉದ್ಯೋಗ ಕ್ಷೇತ್ರದಲ್ಲಿ ನಿಂತ ನೀರಾಗಿರಲು ಯಾರೂ ಇಷ್ಟಪಡುವುದಿಲ್ಲ. ಆದರೆ ಕೆಲವೊಂದು ಕಾರಣಗಳಿಂದ ಹಲವು ವರ್ಷಗಳಿಂದ ಉದ್ಯೋಗದಲ್ಲಿ ಒಂದೇ ಸ್ಥಿತಿಯಲ್ಲಿ ಬಹುತೇಕರು ಇರುತ್ತಾರೆ. ಕರಿಯರ್ನಲ್ಲಿ ಪ್ರಗತಿಯಾಗದೆ ಇರುವುದಕ್ಕೆ ಹಲವು ಕಾರಣಗಳು ಇರಬಹುದು. ಕಂಪನಿಯ ಸ್ಥಿತಿ ಕಾರಣ ಇರಬಹುದು, ಕಂಪನಿಯೊಳಗಿನ ಪೈಪೋಟಿ ಕಾರಣ ಇರಬಹುದು. ಆದರೆ ಕರಿಯರ್ ಯಶಸ್ಸಿಗೆ ನಾವು ಕೂಡ ಕಾರಣ. ನಮ್ಮೊಳಗಿನ ಕೆಲವೊಂದು  ಮನೋಧೋರಣೆಗಳು, ತೊಂದರೆಗಳು ನಮ್ಮ ಯಶಸ್ಸಿಗೆ ಅಡ್ಡಿಯಾಗುತ್ತದೆ ಎಂಬುದು ನಮ್ಮ ಅರಿವಿಗೆ ಬರುವ ಮುನ್ನ ನಮ್ಮ ಕೆರಿಯರ್ ಗ್ರಾಪ್ ಏರದೇ ಕೆಲವೊಮ್ಮೆ ವಿರುದ್ಧ ದಿಕ್ಕಿನಲ್ಲಿ ಪಯಣಿಸಿದ ಉದಾಹರಣೆಗಳಿವೆ.

ಉತ್ತಮವಾದ ಹಾಗೂ ಪ್ರಗತಿಶೀಲ ಜೀವನ ನನ್ನದಾಗಬೇಕೆಂಬುದು ಪ್ರತಿಯೊಬ್ಬರ ಆಸೆ. ಹೀಗಾಗಿ ಮಹತ್ವಾಕಾಂಕ್ಷೆಯ ಹಂಬಲವಿರುವುದು ಮಾನವಸಹಜ ಗುಣ. ವೈಯಕ್ತಿಕವಾಗಿ ಹಾಗೂ ವೃತ್ತಿಪರವಾಗಿ ಇನ್ನಷ್ಟು ಬೆಳೆಯಬೇಕು ಎನ್ನುವುದು ಬಹುತೇಕರ ಆಸೆ. ನಮ್ಮನ್ನು ನಾವು ಸುಧಾರಿಸಿಕೊಳ್ಳುವ ಮೂಲಕ  ಚಿಕ್ಕ ಚಿಕ್ಕ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ  ನಿರೀಕ್ಷಿತ ಎತ್ತರಕ್ಕೆ ಬೆಳೆಯಲು ಸಾಧ್ಯವಿದೆ.

ಸ್ವಾಮಿ ವಿವೇಕಾನಂದರು ಹೇಳಿದಂತೆ ನಿನ್ನ ಮುಂದಿರುವ ಮತ್ತು ಹಿಂದಿರುವ ಶಕ್ತಿಗಿಂತ ನಿನ್ನೊಳಗಿನ ಶಕ್ತಿ ಅಧಿಕ ಆ ಶಕ್ತಿಯನ್ನು ಬಳಸಿಕೊಂಡು
ಸ್ವಯಂ ಬೆಳವಣಿಗೆಯ ಪಯಣ ಮುಂದುವರೆಸಬೇಕು.  ಹುಟ್ಟಿನಿಂದ ಚಟ್ಟದವರೆಗೆ  ಕಲಿಯುವುದು ಸಾಕಷ್ಟಿರುತ್ತದೆ.   ನಮ್ಮನ್ನು ನಾವು ಸುಧಾರಿಸುವ ಅವಕಾಶವೂ ಇರುತ್ತದೆ. ಆ ಅವಕಾಶ ಬಂದಾಗ ಸದುಪಯೋಗ ಪಡಿಸಿಕೊಳ್ಳಲು ಸದಾ ಕಾತರರಾಗಿರೋಣ.

ದೇಶ ಸುತ್ತು ಕೋಶ ಓದು ಎಂಬ ಮಾತಿನಂತೆ ಪುಸ್ತಕಗಳು ಬುದ್ಧಿಮತ್ತೆಯನ್ನು ಹೆಚ್ಚಿಸುವ ಮೂಲಗಳಾಗಿವೆ. ಹೆಚ್ಚೆಚ್ಚು ಪುಸ್ತಕಗಳನ್ನು ಓದಿದಂತೆಲ್ಲ ಹೆಚ್ಚು ಬುದ್ಧಿವಂತರಾಗುತ್ತೇವೆ  ನಮ್ಮನ್ನು ನಾವು ಜ್ಞಾನಸಮೃದ್ಧಗೊಳಿಸಿಕೊಳ್ಳಲು ಪುಸ್ತಕಗಳನ್ನು ಓದಲು  ಪ್ರಾರಂಭಿಸೋಣ. ಪ್ರಾರಂಭದಲ್ಲಿ ಪುಸ್ತಕ ಓದುವುದಕ್ಕೆ ಆಸಕ್ತಿ ಇರುವುದಿಲ್ಲ.ಓದಲು ಆರಂಭಿಸಿದೊಡನೇ ಬೋರ್ ಆಗಿ ಅದನ್ನು ಮುಚ್ಚಿಡಬೇಕೆನ್ನಿಸುತ್ತದೆ. ಆದರೂ ಪುಸ್ತಕ ಓದುವುದನ್ನು ನಿಲ್ಲಿಸಬೇಡಿ ಎಂದು ತಜ್ಞರು ಸಲಹೆ ನೀಡಿದ್ದಾರೆ. ಪುಸ್ತಕ ಓದುವ ಹವ್ಯಾಸ ಒಮ್ಮೆ ರುಚಿಸಿದರೆ ಅದರ ಮಜವೇ ಬೇರೆ ಕಳೆದ ವರ್ಷ ನನ್ನ ಕೆಲಸದ ಒತ್ತಡದ ನಡುವೆಯೂ ಐವತ್ತು ಕನ್ನಡ ಪುಸ್ತಕ ಓದಿರುವುದನ್ನು ನಾನು ಹೆಮ್ಮೆಯಿಂದ ಹೇಳುವೆ.

ಇದರ ಜೊತೆಗೆ ಬಹು ಭಾಷೆಯ ಕಲಿಕೆ ನಮ್ಮ ಕೆರಿಯರ್ ಬೆಳವಣಿಗೆಗೆ ಮತ್ತು ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾಗಿದೆ. ನಮ್ಮ ಮಾತೃಭಾಷೆ ಹಾಗೂ ಇಂಗ್ಲಿಷ್ ಗೊತ್ತಿದ್ದರೆ ಮಾತ್ರ ಸಾಕು ಎಂದುಕೊಳ್ಳಬೇಡಿ. ಹೇಗಾದರೂ ಸರಿ, ಬೇರೆ ಭಾಷೆಗಳನ್ನು ಕಲಿಯೋಣ. ಸಾಧ್ಯವಾದರೆ ಭಾಷಾ ಕೋರ್ಸ್ಗಳ ಮೂಲಕ, ಒಂದಾದರೂ ವಿದೇಶಿ ಭಾಷೆಯನ್ನು ಕಲಿಯುವುದು ಉತ್ತಮ. ಅನ್ಯ ಭಾಷೆಯನ್ನು ಕಲಿಯುವುದರಿಂದ ಹೊಸ ಕೌಶಲ ಬೆಳೆಸಿಕೊಂಡಂತಾಗುತ್ತದೆ ಜೊತೆಗೆ ಅಲ್ಲಿನ ಸಂಸ್ಕೃತಿಯ ಪರಿಚಯವೂ ಆಗುತ್ತದೆ. ಈ ನಿಟ್ಟಿನಲ್ಲಿ ಈ ವರ್ಷದಿಂದ ನಾನು ಸಂಸ್ಕೃತ ಭಾಷೆಯನ್ನು ಕಲಿಯಲು ಆರಂಭಿಸಿರುವೆ.

ಇಂದಿನ ಆಧುನಿಕ ಜಗದಲ್ಲಿ ಇಂದು ಟ್ರೆಂಡಿಂಗ್ ನಾಳೆ ಹಳತಾಗುತ್ತದೆ.ಅದಕ್ಕೆ ತಕ್ಕಂತೆ ನಾವೂ ಅಪ್ಡೇಟ್ ಆಗುತ್ತಲೇ ಇರಬೇಕು ಇಲ್ಲದಿದ್ದರೆ ಔಟ್ಡೇಟ್ ಆಗುವ ಸಂಭವಿರುತ್ತದೆ. ನಾವು ಸೇರಬಹುದಾದ ಹೊಸ ಕೋರ್ಸ್ ಏನಾದರೂ ಇದೆಯೇ ಎಂಬುದನ್ನು ಪರಿಶೀಲಿಸಿ. ಹೊಸ ಜ್ಞಾನ ಮತ್ತು ಕೌಶಲಗಳನ್ನು ಗಳಿಸಲು ಕೋರ್ಸ್ಗಳು ಉಪಯುಕ್ತ. ಇದಕ್ಕಾಗಿ ದೀರ್ಘಾವಧಿಯ ಸೆಮಿನಾರ್  ವರ್ಕ್ಷಾಪ್ಗಳ ಅಗತ್ಯವಿಲ್ಲ. ಆನ್ಲೈನ್ ತರಬೇತಿಯಾದರೂ ಆದೀತು.  ಒಂದೆರಡು ವರ್ಕ್ಷಾಪ್ಗಳಿಂದಲೇ ಹೊಸ ಒಳದೃಷ್ಟಿಕೋನವನ್ನು ಪಡೆಯಬಹುದು.

ಕೆಲಸದ ಪರಿಸರ ಮತ್ತು ಮನೆಯ ಪರಿಸರ ನಮ್ಮ ಉದ್ಯೋಗದ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ.ನಮ್ಮ ಸುತ್ತಮುತ್ತಲಿನ ಪರಿಸರವೂ ನಮಗೊಂದು ಒಳ್ಳೆಯ ಮೂಡ್ ತಂದುಕೊಡಬಲ್ಲದು. ನಾವು ವಾಸಿಸುವ  ಮತ್ತು ಕಚೇರಿಯಲ್ಲಿನ ಸ್ಥಳವು ಸ್ಪೂರ್ತಿದಾಯಕ ಪರಿಸರದಲ್ಲಿದ್ದರೆ ಅದುವೇ ನಮಗೆ ಪ್ರತಿದಿನವೂ ಪ್ರೇರಣೆ ನೀಡಬಲ್ಲದು.

ಉತ್ತಮ ಹವ್ಯಾಸಗಳು ನಮ್ಮ ಮಾನಸಿಕ ಆರೋಗ್ಯಕ್ಕೆ ಪೂರಕ.ಕೆಲವೊಮ್ಮೆ ಈ ಹವ್ಯಾಸಗಳು ನಮ್ಮ ವೃತ್ತಿ ಜೀವನದ ಬೆಳವಣಿಗೆಗೂ ಸಹಕಾರಿಯಾಗುತ್ತವೆ.
ನಮಗಿಷ್ಟವಾದ ಕೆಲವು ಹವ್ಯಾಸಗಳ ಜೊತೆಯಲ್ಲಿ. ಅದಲ್ಲದೇ ನಾವು ಕಲಿಯಬೇಕಿರುವ ಯಾವುದಾದರೂ ಆಟ ಇದೆಯೆ?. ಗಾಲ್ಫ್, ಚಾರಣ, ಬೆಟ್ಟ ಹತ್ತುವುದು, ಡ್ಯಾನ್ಸ್ ಇತ್ಯಾದಿಗಳಿಗೆ ಪ್ರಯತ್ನಿಸಿ ನೋಡಬಹುದು. ಏನಾದರೂ ಹೊಸತನ್ನು ಕಲಿಯುವುದರಿಂದ, ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕ ಯಾವುದಾದರೂ ವಿಭಿನ್ನ ದೃಷ್ಟಿಕೋನಗಳಿಗೆ ತೆರೆದುಕೊಳ್ಳಲು ಸಾಧ್ಯವಾಗುತ್ತದೆ.

ನಮ್ಮ ಕೆರಿಯರ್ ನಲ್ಲಿ ಮುಂದುವರೆಯಲು ಅನವಶ್ಯಕ ಹೆದರಿಕೆ ತ್ಯಜಿಸಬೇಕು.
ಹೆದರಿಕೆ ಎನ್ನುವುದು ಎಲ್ಲರಲ್ಲಿಯೂ ಇರುವಂಥಾದ್ದೇ. ಅನಿಶ್ಚಿತತೆಯ ಭೀತಿ, ಸಾರ್ವಜನಿಕವಾಗಿ ಮಾತನಾಡಲು ಅಂಜಿಕೆ, ರಿಸ್ಕ್ ತೆಗೆದುಕೊಳ್ಳುವಾಗಿನ ಗಾಬರಿ ಇವು ನಮ್ಮನ್ನು ನಾವಿರುವ ಸ್ಥಾನಕ್ಕೇ ಸೀಮಿತಗೊಳಿಸಿಬಿಡುತ್ತವೆ. ನಮ್ಮ ಬೆಳವಣಿಗೆಗೆ ಇವು ಅಡ್ಡಿಯಾಗಿಬಿಡುತ್ತವೆ. ಯಾವ ಕ್ಷೇತ್ರದಲ್ಲಿ ಬೆಳೆಯಬೇಕು ಎಂದುಕೊಳ್ಳುವಿರೋ ಅದರ ಮೇಲೆ ಹೆದರಿಕೆಯ ಛಾಯೆ ಬೀಳದಂತೆ ನೋಡಿಕೊಳ್ಳಬೇಕು.
ವಾಸ್ತವದಲ್ಲಿ ಜೀವಿಸುತ್ತಾ ಗತದಲ್ಲಿ ನಾವು ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಕಾಲಕಾಲಕ್ಕೆ ನಮ್ಮ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಂಡು ನಮ್ಮ ಕರ್ತವ್ಯ ನಿಭಾಹಿಸಿದರೆ ನಾವೊಬ್ಬ ಉತ್ತಮ ಕೆಲಸಗಾರರಾಗುವುದರಲ್ಲಿ ಸಂದೇಹವಿಲ್ಲ. ಒಟ್ಟಿನಲ್ಲಿ ಕೆಲಸ ಯಾವುದೇ ಇರಲಿ ಶ್ರದ್ಧೆಯಿಂದ ಬದ್ದತೆಯಿಂದ ಮಾಡಬೇಕು ಎಲ್ಲಕ್ಕಿಂತ ಮಿಗಿಲಾಗಿ ನಾವು ಮಾಡುವ ಕಾರ್ಯ ಆತ್ಮತೃಪ್ತಿ ನೀಡಬೇಕು.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529