31 October 2019

ವಾಲ್ಮೀಕಿ ಹನಿಗವನ

*ವಾಲ್ಮೀಕಿ*

ನಾನು‌ದುರ್ಬಲ
ನನ್ನಿಂದ ಆಗದು
ನನಗೇನೂ ಗೊತ್ತಿಲ್ಲ
ಎಂಬ ಕೀಳರಿಮೆ ಬಿಟ್ಟಾಕಿ.
ಶ್ರದ್ಧೆ, ಸ್ಪಷ್ಟವಾದ ಗುರಿ
 ಛಲ,ಮುಂತಾದ ಸದ್ಗುಣ
ರೂಢಿಸಿಕೊಂಡರೆ ನೀವೂ
ಆಗಬಹುದು ವಾಲ್ಮೀಕಿ.

*ವಾಲ್ಮೀಕಿ ಜಯಂತಿಯ ಶುಭಾಶಯಗಳು*

*ಸಿ ಜಿ ವೆಂಕಟೇಶ್ವರ*

ನಂದನ‌ವನ ಮಾಡೋಣ(ಕವನ)

*ನಂದನವನ ಮಾಡೋಣ*

ಭುವಿಯ ಒಡಲಿಗೆ ರಸಾಯನಿಕ
ಪದಾರ್ಥಗಳ ತುಂಬಿ
ಕಳಪೆ ಬೀಜ‌ಗೊಬ್ಬರ ನಂಬಿ
ಬಹುರಾಷ್ಟ್ರೀಯ ಕಂಪನಿಗಳ
ಜೇಬುಗಳ ತುಂಬಿ
ಭೂತಾಯಿಗೆ ನಂಜನಿಟ್ಟಿರುವೆವು.

ಜಲಮೂಲಗಳಿಗೆ ಕಾರ್ಖಾನೆಗಳ
ಮಲಿನ ನೀರನರಿಸಿ
ಶುದ್ದಜಲವ ಕುಲಗೆಡಿಸಿ
ಜಲಚರಗಳ ಕೊಲ್ಲಿಸಿ
ಗಾಂಗಾಮಾತೆಗೆ ದ್ರೋಹ ಮಾಡಿರುವೆವು

ಶುದ್ದಗಾಳಿಗೆ ಆ ಆಕ್ಸೈಡ್
ಈ ಆಕ್ಸೈಡ್ ಸೇರಿಸಿ
ವಾಯುಮಾಲಿನ್ಯವ ಏರಿಸಿ
ನಂಜುಕಾರಕಗಳ ಬಳಸಿ
ವಿಷಗಾಳಿಯ ಸೇವಿಸಿ
ಸಕಲಜೀವಿಗಳ ರೋಗಗ್ರಸ್ತ ಮಾಡಿಹೆವು.

ಮೂಲತಃ ಪ್ರಾಣಿಯಾದ ಮಾನವ
ವಿಷವುಂಡು ಆಗಿರುವ ದಾನವ
ತಾಯ ಎದೆಹಾಲು ಹಾಲಾಹಲ
ಎಲ್ಲೆಡೆಯೂ ಕೋಲಾಹಲ
ನಮ್ಮಳಿವಿಗೆ ನಾವೇ ತಪ್ಪೆಸಗುತಿಹೆವು.

ನೆಲ ಜಲ ಗಾಳಿ ಮನಗಳೆಲ್ಲ
ಮಲಿನವಾಗಿ ಒದ್ದಾಡುವಾಗ
ಆಶಾವಾದವೊಂದು ಗೋಚರಿಸುತಿಹುದು
ಭಗವಂತನ ಸಾಮೀಪ್ಯವಿದ್ಸರೆ
ಅಮೃತ ಸಿಗುವುದು.
ಒಳಿತು ಮಾಡಲು ಮನ ಸಿದ್ದವಾಗುವುದು
ಇಂದೇ ಭಗವಂತನ ನೆನೆದು
ಅಮೃತ ಪುತ್ರರಾಗೋಣ
ಜಗವ ನಂದನವನ
ಮಾಡೋಣ.

*ಸಿ ಜಿ ವೆಂಕಟೇಶ್ವರ*






ಕನ್ನಡ ರಾಜ್ಯೋತ್ಸವ ನಿತ್ಯೋತ್ಸವ ಆಗಲಿ


ಕನ್ನಡ ರಾಜ್ಯೋತ್ಸವ ನಿತ್ಯೋತ್ಸವವಾಗಲಿ
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು
ಎಂಬ ಕವಿವಾಣಿ ಸದಾ ನಮ್ಮ ಕಿವಿಯಲ್ಲಿ ಗುಯ್ ಗುಡುತ್ತದೆ. ನಮ್ಮ ನಾಡು ನುಡಿಯ ಬಗ್ಗೆ ಅವ್ಯಕ್ತ ಗೌರವ ಮೂಡುತ್ತದೆ ಆದರೆ ಈ ಸುಂದರ ನಾಡು ಕಟ್ಟಲು ಹಲವಾರು ಮಹನೀಯರ ಕೊಡುಗೆ ಅಡಗಿದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಇಂದಿನ ಶುಭ ಸಂದರ್ಭದಲ್ಲಿ ಅದರ ಬಗ್ಗೆ  ಮೆಲುಕು ಹಾಕೋಣ .
೧೯೮೭ ಆಗಸ್ಟ್ ೧೫ ರಂದು   ಬ್ರಿಟೀಷರ ದಾಸ್ಯ ಸಂಕೋಲೆಯಿಂದ . ಮುಕ್ತರಾದ  ನಮ್ಮ ದೇಶವು ೫೬೩ ಕ್ಕಿಂತ ಹೆಚ್ಚು ಸಂಸ್ಥಾನಗಳನ್ನು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ರವರು
ಒಗ್ಗೂಡಿಸಿದರು ನಂತರ ಭಾಷಾವಾರು ಪ್ರಾಂತಗಳ ವಿಂಗಡಣೆಗೆ ಬೇಡಿಕೆ ಬಂದು ಮೊದಲು ಆಂದ್ರಪ್ರದೇಶದ ರಚನೆಯಾಯಿತು. ಆಗ ಮೈಸೂರು ಭಾಗದ ಜನರಲ್ಲಿ  ಸಹ ಪ್ರತ್ಯೇಕವಾದ ರಾಜ್ಯದ ಬೇಡಿಕೆಯು ಚಿಗುರೊಡೆಯಿತು.
ಕನ್ನಡ ಮಾತನಾಡುವ ಜನರು ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮದ್ರಾಸ್ ಕರ್ನಾಟಕ ಹೀಗೆ ಹಲವು ಭಾಗಗಳಲ್ಲಿ ಹರಿದು ಹಂಚಿಹೋಗಿದ್ದರು.ಭಾಷೆಯವಿಚಾರದಲ್ಲಿ ಭಾವನಾತ್ಮಕವಾಗಿ ಒಂದಾಗಿದ್ದ ಕನ್ನಡದ ಮನಗಳು ಬೌಗೋಳಿಕವಾಗಿ ಒಂದು ನೆಲೆಗಾಗಿ ಹೋರಾಟವನ್ನು ಆರಂಬಿಸಿದರು .ಇದಕ್ಕೆ ಸಾಹಿತಿಗಳು ಬುದ್ಧಿಜೀವಿಗಳು ತಮ್ಮದೇ ಆದ ಕೊಡುಗೆ ನೀಡಿದರು .'ಹುಯಿಲಗೋಳ ನಾರಾಯಣರಾವ್ " ರವರು  ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂದು ಜನರನ್ನು ಪ್ರೇರೇಪಿಸಿದರೆ ಶಿವರಾಮ ಕಾರಂತ, ಕುವೆಂಪು, ಮುಂತಾದ ಕವಿಗಳು ಸಹ ಪ್ರತ್ಯೇಕ ರಾಜ್ಯದ ರಚನೆಗೆ ಬೆಂಬಲ ಸೂಚಿಸಿದರು. ಕಾರ್ನಾಡ್ ಸದಾಶಿವರಾವ್, ಡೆಪ್ಯುಟಿ ಚನ್ನಬಸಪ್ಪ, ಆರ್ ಆರ್ ದಿವಾಕರ್ ,ಎಸ್ ನಿಜಲಿಂಗಪ್ಪ, ಮುಂತಾದವರು ಹಲವಾರು ಹೋರಾಟಗಳನ್ನು ಸಂಘಟಿಸಿದರು.ಆಲೂರು ವೆಂಕಡರಾಯರು.,ಮುದವೀಡು ಕೃಷ್ಣ ರಾಯರು,ಬೆನಗಲ್ ಶಿವರಾಮ ರವರು,ಫ.ಗು ಹಳಕಟ್ಟಿ ರವರು,ಹೆಚ್ ವಿ ನಂಜುಂಡಯ್ಯ ರವರು,ಮುಂತಾದವರು ನಮ್ಮ ನಾಡ ಏಕೀಕರಣಕ್ಕೆ ಹೊರಟ ಮಾಡಿದರು.ಈ ದಿಸೆಯಲ್ಲಿ ಆಂದಿನ ವೃತ್ತ ಪತ್ರಿಕೆಗಳು ಮತ್ತು ನಿಯತಕಾಲಿಕ ಪತ್ರಿಕೆಗಳು ಜನರಲ್ಲಿ ಜಾಗೃತಿ ಮೂಡಿಸಿದವು.ಅವುಗಳಲ್ಲಿ ವಾಗ್ಭೂಷಣ,ಕರ್ಮವೀರ, ಕರ್ನಾಟಕ ವೃತ್ತ, ,ಸುಭೋದಿನಿ ಮುಂತಾದವು ಪ್ರಮುಖವಾದ ಪತ್ರಿಕೆಗಳು.
ಮೈಸೂರಿನ ವಿವಿದೆಡೆ ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆಯು ಹೆಚ್ಚುತ್ತಾ ಬಂದಾಗ ಅಂದಿನ  ಕೇಂದ್ರ ಸರ್ಕಾರವು ೧೯೪೮ ರಲ್ಲಿ ಧಾರ್ ಸಮಿತಿಯನ್ನು ನೇಮಕ ಮಾಡಿತು ರಾಜ್ಯಗಳ ಪುನರ್ ವಿಂಗಡಣೆ ಮಾಡಲು ವರದಿ ನೀಡಲು ಹೇಳಿತು.ನಂತರ ೨೯೪೯ ರಲ್ಲಿ ಜೆ .ವಿ. ಪಿ .ಸಮಿತಿ ನೇಮಕ ಮಾಡಿ ಇದರಲ್ಲಿ ಜವಹಾರಲಾಲ್ ನೆಹರೂ ,ವಲ್ಲಭಭಾಯಿ ಪಟೇಲ್ ಮತ್ತು ಪಿ ಸೀತಾರಾಮಯ್ಯ ಸದಸ್ಯರಾಗಿದ್ದರು .೧೯೫೪ ರಲ್ಲಿ  ರಾಜ್ಯ ಪುನರ್ ವಿಂಗಡಣಾ ಸಮಿತಿ ರಚಿಸಿ ಫಜಲ್ ಆಲಿ ರವರನ್ನು ಅಧ್ಯಕ್ಷರನ್ನಾಗಿ ಮಾಡಿ . ಕೆ ಎಂ ಫಣಿಕ್ಕರ್, ಮತ್ತು ಹೆಚ್ ಎನ್ ಕುಂಜ್ರು ರವರು ಸದಸ್ಯರಾಗಿ ಸರ್ಕಾರಕ್ಕೆ ವರದಿ ನೀಡಿದರು.
ಇವೆಲ್ಲದರ ಪರಿಣಾಮ ಕೇಂದ್ರ ಸರ್ಕಾರವು ರಾಜ್ಯ ಪುನರ್ ವಿಂಗಡಣಾ ಮಸೂದೆ ಪಾಸು ಮಾಡಿ ೧೯೫೬ ನವಂಬರ್ ೧ ರಂದು ವಿಶಾಲ ಮೈಸೂರು ರಾಜ್ಯ ಉದಯವಾಯಿತು. ಕೋಟ್ಯಂತರ ಕನ್ನಡಿಗರ ಕನಸು ನನಸಾಯಿತು
ಮಹಾಜನ್  ಆಯೋಗದ ಶಿಪಾರಸ್ ಪ್ರಾಕಾರ ಕರ್ನಾಟಕ ಮಹಾರಾಷ್ಟ್ರದಿಂದ ೨೬೦ ಸ್ಥಳಗಳನ್ನು ಪಡೆಯಿತು. ಬೇರೆ ರಾಜ್ಯದ ಕನ್ನಡ ಮಾತನಾಡುವ ಪ್ರದೇಶಗಳಾದ ಕಾಸರಗೋಡು,ಮಡಕಶಿರ,ಆದವಾನಿ ಬೆಳಗಾವಿ ಪ್ರದೇಶಗಳನ್ನು ಕರ್ನಾಟಕದಲ್ಲಿ ಸೇರಿಸಲು ಶಿಪಾರಸ್ಸು ಮಾಡಲಾಯಿತು.
. 1973 ರ ನವೆಂಬರ್ ೧ ರಂದು ಅಂದಿನ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಶ್ರೀ ದೇವರಾಜ ಅರಸ್ ರವರ ಕಾಲದಲ್ಲಿ ನಮ್ಮ ರಾಜ್ಯವನ್ನು "ಕರ್ನಾಟಕ" ಎಂದು ಮರುನಾಮಕರಣ ಮಾಡಲಾಯಿತು.
ಇಪ್ಪತ್ತೊಂದನೇ ಶತಮಾನದ ಬದಲಾದ ಕಾಲಘಟ್ಟದಲ್ಲಿ ಇಂದು ನಮ್ಮ ನಾಡು ನುಡಿ ಎರಡಕ್ಕೂ ಭಂಗ ಬರುತ್ತಿರುವ ಲಕ್ಷಣಗಳನ್ನು ಕಾಣಬಹುದು ,ಮಹನೀಯರು ಕಷ್ಟ ಪಟ್ಟು ಉಳಿಸಿ ಬೆಳೆಸಿದ ನಮ್ಮ ಕನ್ನಡ ಭಾಷೆ ಕ್ರಮೇಣ ಕಡಿಮೆಯಾಗಿ ಪರಭಾಷೆಗಳ ಹಾವಳಿ ಹೆಚ್ಚಾಗುತ್ತಿದೆ .ಗಡಿನಾಡಿನಲ್ಲಿ ಮತ್ತು ಬೆಂಗಳೂರಿನಂತಹ ನಗರಗಳಲ್ಲಿ ಕನ್ನಡ ಮಾತನಾಡುವ ಜನರ ಸಂಖ್ಯೆ ಕಡಿಮೆಯಾಗಿದೆ ಎಂಬುದು ಹಲವು ವರದಿಗಳಿಂದ ಸಾಬೀತಾಗಿದೆ.ಪ್ರಜ್ಞಾವಂತರಾದ ಕನ್ನಡಿಗರಾದ ನಾವು ನಮ್ಮ ಭಾಷೆಯನ್ನು ಉಳಿಸಲು ಮತ್ತು ಬೆಳೆಸಲು ಪಣ ತೊಡಬೇಕಿದೆ,
ಇನ್ನೂ ನಾಡಿನ ವಿಷಯಕ್ಕೆ ಬಂದರೆ ಹಿಂದಿನಿಂದಲೂ ಕಾಸರಗೋಡು,ಬೆಳಗಾವಿ ಮುಂತಾದ ಗಡಿಭಾಗದಲ್ಲಿ ನೆರೆ ರಾಜ್ಯಗಳ ತಕರಾರು ಒಂದೆಡೆ ಆದರೆ, ನಮ್ಮ ನಾಡಿನಲ್ಲೇ ಇರುವ ಕೆಲ ಸ್ವಾರ್ಥ ವ್ಯಕ್ತಿಗಳು ನಾಡು ವಿಭಜನೆ ಮಾಡುವ ಅವಿವೇಕದ ಆತುರದ ಹೇಳಿಕೆ ನೀಡಿ ನಮ್ಮ ನಾಡಿನ ಏಕೀಕರಣಕ್ಕೆ ಹೋರಾಡಿದ ಆತ್ಮಗಳಿಗೆ ಅವಮಾನ ಮಾಡುತ್ತಿದ್ದಾರೆ. ಇದು ನಿಲ್ಲಬೇಕು. ನಮ್ಮಲ್ಲಿ ಎಷ್ಟೇ ಭಿನ್ನಾಭಿಪ್ರಾಯಗಳು ಇದ್ದರೂ ನಾಡು ನುಡಿಯ ವಿಚಾರದಲ್ಲಿ ಅವು ಗೌಣವಾಗಿ ಏಕರಾಜ್ಯ,ಏಕಭಾಷೆ,ನಮ್ಮ ದ್ಯೇಯಮಂತ್ರವಾಗಬೇಕು..ಕನ್ನಡದ ಹಬ್ಬ ಒಂದು ದಿನಕ್ಕೆ ಮೀಸಲಾಗದೇ ನಿತ್ಯೋತ್ಸವವಾಗಿ ಮಾಡಬೇಕು.
ನಮ್ಮ ಮುಂದಿನ ಪೀಳಿಗೆಗೆ ನಮ್ಮ ನಾಡು ನುಡಿಯನ್ನು ಹಸ್ತಾಂತರ ಮಾಡುವ ದೃಡಸಂಕಲ್ಪವನ್ನು ಇಂದು ನಾವೆಲ್ಲರೂ ಮಾಡೋಣ ಮತ್ತು ನಾಡಿನ ಪ್ರಗತಿಗೆ ಕಂಕಣಬದ್ದರಾಗೋಣ.

ಜೈ ಕನ್ನಡಾಂಭೆ.

ಸಿ.ಜಿ ವೆಂಕಟೇಶ್ವರ
ತುಮಕೂರು

13 October 2019

ಎಲ್ಲಿ ಹೋದವು ಆ ದಿನಗಳು(ಕವನ)



*ಎಲ್ಲಿ ಹೋದವು ಆ ದಿನಗಳು*


ಎಲ್ಲಿ‌ಹೋದವು ಆ ದಿನಗಳು
ಎಲ್ಲಿ ನೋಡಿದರೂ ದಾವಂತದ ಯಾಂತ್ರಿಕ ಬದುಕಿನ ತೋರಿಕೆಗಳು

ಬೆಳ್ಳಿ ಚುಕ್ಕಿ ಬಂತು ಏಳೋ
ಕಂದ ಎಂದು ಎಬ್ಬಿಸಿ ನಿತ್ಯ ಕರ್ಮ ದೊಂದಿಗೆ ಕರ್ಮ ಆರಂಬಿಸಿ
ಗಂಗಾ ಯಮುನ ನದಿಗಳ ನೆನೆದು
ಸ್ನಾನವ ಮಾಡಿ  ಬ್ರಾಹ್ಮಿ  ಮುಹೂರ್ತದಿ ಜಪ ತಪ  ಪೂಜೆಗಳು ಅಂದು.

ಇಂದು

ನೇಸರ ನೆತ್ತಿಗೆ  ಬಂದರೂ
ಏಳು ಎಂದು ಹೇಳಲು ಹಿಂಜರಿವ ಪಾಲಕರು ಎದ್ದರೂ ಕರಾಗ್ರೆ ವಸತೇ...
ಬದಲಾಗಿ ಕರದಲಿ  ಜಂಗಮವಾಣಿ ಹಿಡಿದು ಮುಖ ತೊಳೆಯದೇ ಮುಖಪುಟಕೆ ಹಾತೊರೆವ ನವ
ಪೀಳಿಗೆಗಳು.

ಗೋಧೂಳಿ ಸಮಯದಿ ಮನೆ ಕಸವ
ತೆಗೆದು ದೀಪ ಮುಡಿಸಿ
ಕಾಯಕನಿರತ ಗೃಹಿಣಿಯರು
ಭಾಗವತ ರಾಮಾಯಣ ಕಥೆಗಳ
ಹೇಳುವ ಅಜ್ಜಿಗಳು ಕುತೂಹಲದಿಂದ ಕೇಳುವ ಮಕ್ಕಳು .ನೈತಿಕತೆ ಮೌಲ್ಯಗಳು ಬೆಳೆಯಲು ಪೂರಕ ಚಟುವಟಿಕೆಗಳು.

 ಇಂದಿನ ಬಹುತೇಕ ಡ್ಯಾಡಿ ಮಮ್ಮಿಗಳಿಗೆ
ಮೊಬೈಲೇ ಸ್ವರ್ಗ ಮಕ್ಕಳ ಕೈಗೂ
ಅದನ್ನಿತ್ತು ಬೆಳಕು ನೀಡುವ ಬದಲು
ಕತ್ತಲಾಗಿ ಮಾಡಿ
ಮೌಲ್ಯಗಳ ಸಾರುವ ಕಥೆಗಳ ಹೇಳುವ
ಅಜ್ಜ ಅಜ್ಜಿಯರನು ವೃದ್ದಾಶ್ರಮಕೆ ತಳ್ಳಿ
ಅದೇ ಪುಟ್ಟ ಗೌರಿನೋಡುತಾ ಗಟ್ಟಿ ಮೇಳ ಬಾರಿಸುತಾ  , ಮನೆಯೊಂದು ಮೂರುಬಾಗಿಲು ಮಾಡಲು ಸಜ್ಜಾಗಿರುವ ಆದರ್ಶ ಜನಗಳು.?

ಎಲ್ಲಿ‌ಹೋದವು ಆ ದಿನಗಳು?
ಎಲ್ಲಿ ನೋಡಿದರೂ ದಾವಂತದ ಯಾಂತ್ರಿಕ ಬದುಕಿನ ತೋರಿಕೆಗಳು .

*ಸಿ ಜಿ ವೆಂಕಟೇಶ್ವರ*

02 October 2019

ಅಹಿಂಸೆ ಪಾಲಿಸಿ (ನ್ಯಾನೋ ಕಥೆ,)



*ಅಹಿಂಸೆ ಪಾಲಿಸಿ*
(ನ್ಯಾನೋ ಕಥೆ)


"ಗಾಂಧೀಜಿಯವರ ತತ್ವ ಮತ್ತು ನೀತಿಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಬೇರೆಯವರಿಗೆ ತೊಂದರೆ ಕೊಡಬಾರದು " ಈಗೆ ಗೋವಿಂದಪ್ಪ ನವರು ಸುಮಾರು ಅರ್ಧಗಂಟೆಗಳ ಕಾಲ ಸುಡು ಬಿಸಿಲಿನಲ್ಲಿ ಕುಳಿತ  ಮಕ್ಕಳ ಮುಂದೆ ಭಾಷಣ ಮಾಡುತ್ತಿದ್ದಾಗ  ಕೊನೆ ಸಾಲಿನಲ್ಲಿದ್ದ ಸತೀಶ್ ಎಂಬ ಬಾಲಕ "ಸಾರ್ ಭಾಷಣ ನಿಲ್ಲಿಸಿ ಅಹಿಂಸಾ ನೀತಿ ಪಾಲಿಸಿ" ಎಂದದ್ದು ವೇದಿಕೆಯಲ್ಲಿರುವವರಿಗೆ ಕೇಳದೇ ಇರಲಿಲ್ಲ.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*