28 February 2022

ಅಂತರಂಗ


*ಅಂತರಂಗ*


ಹೀಗೀಗ ಹೆಚ್ಚಾಗುತ್ತಿದೆ ಅಂತರ ,

ಎಲ್ಲೋ ಒಂದೆಡೆ ಅನುಮಾನ.

ಪ್ರೀತಿಸುವನೇನು ನನ್ನನೇ

ನನ್ನ ಇನಿಯ ರಂಗ |

ತಾಳ್ಮೆಯಿಂದ ಕಾಯುವೆನು 

ಎಂದಾದರೂ ಅರಿತೇನು

ಅವನ ಅಂತರಂಗ ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

 

ಜನಮಿಡಿತ


 

ಹಾಸನ ವಾಣಿ. ೨೭/೨/೨೨


 

26 February 2022

ಜನಮಿಡಿತ . ೨೬/೨/೨೨


 

ಅವಸಾನ .ಹನಿಗವನ


 

ಸಿಹಿಜೀವಿಯ ಹನಿಗಳು.

ಅವಸಾನ

ಶುರುವಾಗಿದೆ ಯದ್ದ ಎರಡು
ರಾಷ್ಟ್ರಗಳ ನಡುವೆ
ಹಾರಾಡುತ್ತಿವೆ ಕ್ಷಿಪಣಿ, ವಿಮಾನ |
ಹೀಗೇ ಪರಸ್ಪರ ಕಚ್ಚಾಡಿ
ಬಡಿದಾಡಿಕೊಂಡರೆ ತಪ್ಪಿದ್ದಲ್ಲ
ಜೀವಕುಲದ ಅವಸಾನ||

ಶೀರ್ಷಿಕೆಯಿರದ ಪುಟ.

ನನಗಾಸೆಯಿತ್ತು ಬರೆಯುವೆ
ನೀನು ನನ್ನ ಬಾಳಲಿ
ಸುಂದರ ಮುಖಪುಟ|
ಹುಸಿಯಾಯಿತು ನನ್ನ
ನಿರೀಕ್ಷೆ  ಬಿಟ್ಟು ಹೋದೆ
ಶೀರ್ಷಿಕೆಯಿರದ ಪುಟ||


*ಅಕಾಲಿಕ ಮಳೆ*

ಬಹುದಿನದ ನಂತರ ಸಂಧಿಸಿದನು
ನನ್ನ ನಲ್ಲ ,ಅಂದುಕೊಂಡಿದ್ದೆ
ನೋಟವೊಂದೇ ಸಾಕು
ಬೇರೇನೂ ಬೇಕಿಲ್ಲ
ನಿರೀಕ್ಷೆಗೂ ಮೀರಿ ಸನಿಹ ಬಂದನಲ್ಲ
ಆಕಾಶ ತಬ್ಬಿದಂತೆ ಇಳೆ|
ಮೈದಾನವೆಲ್ಲಾ ತೋಯ್ದಿತ್ತು
ಹೇಗೆ ಬಣ್ಣಿಸಲಿ ಅದನು
ಅದು ಅಕಾಲಿಕ ಮಳೆ ||

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ.
ತುಮಕೂರು
9900925529

25 February 2022

ಅಕಾಲಿಕ ಮಳೆ .ಹನಿ


 


*ಅಕಾಲಿಕ ಮಳೆ*


ಬಹುದಿನದ ನಂತರ ಸಂಧಿಸಿದನು 

ನನ್ನ ನಲ್ಲ ,ಅಂದುಕೊಂಡಿದ್ದೆ 

ನೋಟವೊಂದೇ ಸಾಕು 

ಬೇರೇನೂ ಬೇಕಿಲ್ಲ 

ನಿರೀಕ್ಷೆಗೂ ಮೀರಿ ಸನಿಹ ಬಂದನಲ್ಲ

ಆಕಾಶ ತಬ್ಬಿದಂತೆ ಇಳೆ|

ಮೈದಾನವೆಲ್ಲಾ ತೋಯ್ದಿತ್ತು

ಹೇಗೆ ಬಣ್ಣಿಸಲಿ ಅದನು 

ಅದು ಅಕಾಲಿಕ ಮಳೆ ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ.


24 February 2022

ಇತರೆ ಭಾಷೆಗಳನ್ನೂ ಕಲಿಯೋಣ.


 


ಮಾನವನ ಮೆದುಳು ಹೆಚ್ಚು ಭಾಷೆಗಳನ್ನು ಕಲಿಯಲು ಶಕ್ತಿ ಇದೆ ಎಂದು ಸಂಶೋಧನೆಗಳಿಂದ ದೃಢಪಟ್ಟಿದೆ .ಹೆರಾಲ್ಡ್ ಸೃಜ್ ಎಂಬುವವರು ನಾಲ್ಕು ನೂರಕ್ಕೂ ಹೆಚ್ಚು ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದರು ಎಂಬುದೇ ಇದಕ್ಕೆ ಸಾಕ್ಷಿ. ನಮ್ಮ ಮಾತೃಭಾಷೆ ಜೊತೆಗೆ ನಾವೂ ಕೂಡಾ ಇತರೆ ಭಾಷೆಗಳ ಕಲಿಯೋಣ . ಇತರ ಭಾಷೆಗಳನ್ನು ಕಲಿಯುವ ಅನುಕೂಲಗಳಲ್ಲಿ ನಮ್ಮ ಸಂವಹನ ಉತ್ತಮವಾಗುತ್ತದೆ,ನಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಲು ಸಹಕಾರಿ, ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ವ್ಯಕ್ತಿತ್ವ ನಮಗರಿವಿಲ್ಲದೇ ಉತ್ತಮಗೊಳ್ಳುತ್ತದೆ.ಹಾಗಾದರೆ ತಡವೇಕೆ ಎರಡು ಸಾವಿರದ ಇಪ್ಪತ್ತೆರಡರ ಈ   ವರ್ಷದಲ್ಲಿ ಕನಿಷ್ಟ ಎರಡು ಹೊಸ ಭಾಷೆ ಕಲಿಯೋಣ.


ಸಿಹಿಜೀವಿ

ಸಿ. ಜಿ ವೆಂಕಟೇಶ್ವರ

23 February 2022

ಯಾರು ಸರಿ .


 


ಯಾರು  ಸರಿ 


ಕೂಗುತ ಬಂದನು ಬೀದಿಯ ಬದಿಯಲಿ ಪ್ಲಾಸ್ಟಿಕ್ ಮಾರುವ

ಮಾಮಣ್ಣ|

ಬ್ರಷ್ಷು, ಬಾಕ್ಸು, ತಟ್ಟೇ ಲೋಟ

ಎಲ್ಲಾ ಪ್ಲಾಸ್ಟಿಕ್ ಕೊಳ್ಳಿರಿ ಎನ್ನತ್ತಾ

ಕೂಗಿದನು ಕೇಳಣ್ಣ||


ಪುಟ್ಟನ ಅಮ್ಮ ಸರಸರ ನಡೆದಳು

ಪ್ಲಾಸ್ಟಿಕ್ ತೇರಿನ ಸನಿಹಕ್ಕೆ|

ಬಾಲಂಗೋಚಿಯ ತರದಲಿ ಅವನೂ

ಓಡಿದ ಪ್ಲಾಸ್ಟಿಕ್ ಗುಡ್ಡದ ಪಕ್ಕಕ್ಕೆ ||


ಪುಟ್ಟನು ಕೇಳಿದ ಅಮ್ಮನಿಗೆ 

ಪ್ಲಾಸ್ಟಿಕ್ ಬೇಡ ಎಂದರು ನಮ್ಮ

ಮಿಸ್ಸು ಯಾಕೆ ಕೊಳ್ಳುವೆ ಪ್ಲಾಸ್ಟಿಕ್ಕು |

ಅಮ್ಮ ನುಲಿಯುತ ನುಡಿದಳು 

ಕಮ್ಮಿ ಬೆಲೆಗೆ ವಸ್ತುಗಳು ಸಿಕ್ಕರೆ

ಸುಮ್ಮನೆ ಕೊಳ್ಳುಬೇಕು ಅದೇ ಲಾಜಿಕ್ಕು ||


ಪುಟ್ಟ ಮತ್ತೆ ಹೇಳಿದನು 

ಅಮ್ಮಾ ಪ್ಲಾಸ್ಟಿಕ್ ಬೇಡ ಪರಿಸರ ವನ್ನು ಉಳಿಸೋಣ| 

ಅಮ್ಮ ಗದರಿದಳು  ಕಡಿಮೆ ದುಡ್ಡಿನಲ್ಲಿ 

ಸಿಕ್ಕ ವಸ್ತುಗಳ ಬಳಸಿ ಹಣವ ಉಳಿಸೋಣ||


ಪುಟ್ಟನ ಮನದಲಿ ಅನುಮಾನ  ಮೂಡುತ ಹಿಡಿದನು ಮನೆಯ ದಾರಿ|

ಶಾಲೆಯ ಮಿಸ್ಸು, ಅಮ್ಮ 

ಇವರಲಿ  ಯಾರು  ಸರಿ??


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.

ಸಿಂಹ ಧ್ವನಿ ೨೩/೨/೨೨


 

ನಿಲುವುಗನ್ನಡಿ.

*ನಿಲುವುಗನ್ನಡಿ*



ನಮ್ಮ ಮನೆಯಲ್ಲಿ

ನೋಡಿಕೊಳ್ಳುವುದಿಲ್ಲ

ನನ್ನ ಬಿಂಬವನ್ನು,

ಕಾಣದಂತೆ ಎತ್ತಿಟ್ಟಿರುವೆ 

ನಮ್ಮ ಮನೆಯ ಕನ್ನಡಿ|

ಕಾರಣವಿಷ್ಟೇ ಈಗೀಗ 

ನೋಡುತ್ತಲೇ ಇರುವೆ ನಿನ್ನ

ಕಣ್ಣುಗಳ ,ಅವುಗಳೇ ನಿಲುವುಗನ್ನಡಿ||



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

 

22 February 2022

ಹಾಲು ಕುಡಿಪ್ಪನ ಕಾಳೇ ಹಬ್ಬ.


 



ಹಾಲು ಕುಡಿದಪ್ಪನ ಕಾಳೇ ಹಬ್ಬ  . ಆತ್ಮ ಕಥೆ ೨೮


ನಾನು ಚಿಕ್ಕವನಿದ್ದಾಗ ಆಗಾಗ ಕೊಟಗೇಣಿಯಿಂದ ಮಾವನವರ ಊರಾದ ಯರಬಳ್ಳಿಗೆ ಬರುತ್ತಿದ್ದೆ. ಒಮ್ಮೆ ಹೀಗೆ ಬಂದಾಗ ನಮ್ಮ ಲಕ್ಷ್ಮಜ್ಜಿ ನನ್ನನ್ನು  ಯರಬಳ್ಳಿಯ ಗೊಲ್ಲರ ಹಟ್ಟಿಗೆ ಕಾಳೇ ಹಬ್ಬದ ಉತ್ಸವಕ್ಕೆ  ಕರೆದುಕೊಂಡು ಹೋಗಿದ್ದರು .ರಾತ್ರಿಯ ಊಟದ ನಂತರ ಲಾಟೀನಿನ ಬೆಳಕಿನಲ್ಲಿ ಸುಮಾರು ಒಂದೂವರೆ ಕಿಲೋಮೀಟರ್ ದಾರಿಯಲ್ಲಿ ಊರವರೆಲ್ಲ ಸೇರಿ  ಗುಂಪು ಗುಂಪಾಗಿ ನಡೆದುಕೊಂಡು ಗೊಲ್ಲರ ಹಟ್ಟಿಯ ಕಡೆ  ಪಯಣ ಬೆಳೆಸಿದೆವು .

ನಾನು ಮಾರ್ಗ ಮಧ್ಯದಲ್ಲಿ ಅಜ್ಜಿಗೆ  ಪ್ರಶ್ನೆ ಹಾಕಿದೆ. ಅಜ್ಜಿ ಈ ಗೊಲ್ಲರ ದೇವರಿಗೆ ಹಾಲುಗುಡದಪ್ಪ ಎಂದು ಯಾಕೆ ಕರೀತಾರೆ ಅಂದೆ. ಅದಕ್ಕೆ ಅಜ್ಜಿ ಒಂದು ಕಥೆ ಹೇಳುತ್ತಾ ನಡೆದರು.


ಹಿಮಾಲಯ ತಪ್ಪಲಿನ ದಟ್ಟಡವಿಯಲ್ಲಿ ಅಡಿವೆಣ್ಣ ಮತ್ತು ಗಿಡಿವಣ್ಣ ಎಂಬ ಮುಗ್ದರಿಬ್ಬರು ದನಗಳನ್ನು ಮೇಯಿಸುತ್ತಿರುವಾಗ ಅದೇ ಮಾರ್ಗದಲ್ಲಿ ಹಿಮಾಲಯಕ್ಕೆ ಹೊರಟಿದ್ದ ಸನ್ಯಾಸಿಗಳು ಕಣ್ಣಿಗೆ ಬೀಳುತ್ತಾರೆ.ನೀವೆಲ್ಲಿಗೆ ಹೋಗುವಿರಿ ಎಂದಾಗ  ತಾವು ದೇವರನ್ನು ಕಾಣಲು ಹೋಗುತ್ತೇವೆ ಎಂದು ಗೋಪಾಲಕರ ಪ್ರಶ್ನೆಗೆ ಉತ್ತರಿಸಿದರು. ಸ್ವಾಮಿ ಮರಳಿ ಬರುವಾಗ ನಮಗೂ ಒಂದು ದೇವರನ್ನು ತನ್ನಿ ಎಂದು ಕೋರಿಕೆ ಇಡುತ್ತಾರೆ. ಹಿಮಾಲಯದಿಂದ ಸನ್ಯಾಸಿಗಳು ಮರಳಿ ಅದೇ ದಾರಿಯಲಿ ಬರುವಾಗ ಅದೇ ಹುಡುಗರು ಕಣ್ಣಿಗೆ ಬೀಳುತ್ತಾರೆ. ಅಯ್ಯೋ ದೇವರನ್ನು ತರಲು ಮರೆತಿದ್ದೇವೆ. ದನಗಾಹಿಗಳಿಗೆ ಏನೆಂದು ಉತ್ತರಿಸಲಿ ಎಂಬ ಚಿಂತೆಯಲ್ಲಿರುವಾಗಲೆ ಮಕ್ಕಳು ಸ್ವಾಮಿ ದೇವರನ್ನು ಕೊಡಿ ಎಂದು ಕೇಳುತ್ತಾರೆ .ಆಗ ಸನ್ಯಾಸಿಗಳು ದಾರಿಯಲ್ಲಿ ಬಿದ್ದಿದ್ದ ಕುರಿ ಪಿಚ್ಚಿಗೆ ಕಲ್ಲಿನ ಚೂರುಗಳನ್ನು ಒಂದು ಬಟ್ಟೆಯಲ್ಲಿ ಕಟ್ಟಿ ತೆಗೆದುಕೊಳ್ಳಿ ಇದೇ ನಿಮ್ಮ ದೇವರು ಎಂದು ಸಣ್ಣ ಗಂಟನ್ನು ಕೊಟ್ಟು ಹೊಗುತ್ತಾರೆ. ಗೋಪಾಲಕರು ಗಂಟನ್ನು ತಿಪ್ಪೆಯ ಮೆಲಿಟ್ಟು ಪ್ರತಿ ನಿತ್ಯ ಕರೆದ ಹಾಲನ್ನು ಗಂಟು ದೇವರಿಗೆ ನೈವೇದ್ಯ ಮಾಡುತ್ತಿದ್ದರು. ಮನೆಯವರು ಹಾಲನ್ನು ಏಕೆ ತಂದಿಲ್ಲ ಎಂದು ಪ್ರಶ್ನಿಸಿದರೆ ದಿನಕ್ಕೊಂದು ಸುಳ್ಳು ಹೇಳುತ್ತಿದ್ದರು. ಸಂಶಯ ಬಂದ ಪೋಷಕರು  ಒಂದು ದಿನ ದನಗಳ ಗೂಡಿನ ಹತ್ತಿರ ಬರುತ್ತಾರೆ. ಮಕ್ಕಳು ತಿಪ್ಪೆಯ ಮೇಲೆ ಹಾಲು ಸುರಿಯುವುದನ್ನು ನೋಡಿ ಅದರಲ್ಲಿ ಏನಿದೆ ನೋಡಬೇಕೆಂದು ತಿಪ್ಪೆಯನ್ನು ಬಗೆಯುತ್ತಾರೆ. ಅದರಿಂದ ಸರ್ಪ ವೊಂದು  ಹೊರಬಂದು ಓಡಾಡಲಾರಂಭಿಸುತ್ತದೆ.ಅದನ್ನು ನೋಡಿದ ಗೋಪಾಲಕರು  ನಮ್ಮ ದೇವರು ಓಡುತ್ತಿದೆ ಎಂದು ಹೆಗಲಮೇಲಿದ್ದ ಕರಿಕಂಬಳಿಯನ್ನು ಸರ್ಪದ ಮೇಲೆ ಹಾಕಿ ಬಿಗಿಯಾಗಿ ಕಟ್ಟುತ್ತಾರೆ .ಅದನ್ನೆ ದೇವರು ಎಂದು ತಿಳಿದ ಮುಗ್ಧ ಗೋಪಾಲಕರು ಅಡವಿಯಲ್ಲಿ ಸಿಕ್ಕಿದ ಮುತ್ತುಗದ ಎಲೆಗಳನ್ನು ತಂದು ಗುಡಿ ಕಟ್ಟಿ ಪೂಜೆ ಆರಂಭಿಸುತ್ತಾರೆ. ಒಮ್ಮೆ ಆ ಹುಡುಗರ ಕನಸಲ್ಲಿ ಬಂದು ನಾನು ಇಲ್ಲಿರಲಾರೆ ದಕ್ಷಿಣದಲ್ಲಿರುವ ಯರಬಳ್ಳಿ ಹೋಗಿ ನೆಲೆಸುತ್ತೇನೆ .ಎಂದು ಹೇಳಿ ಮಾಯ ವಾಗುತ್ತದೆ. ಅಂದಿನಿಂದ ಸ್ವಾಮಿ ಇಲ್ಲೆ ನೆಲೆ ನಿಂತಿದ್ದಾನೆ .


ಎಂದು ಅಜ್ಜಿ ಸ್ವಾಮಿಯ ಕಥೆ ಹೇಳಿ ಮುಗಿಸಿದಾಗ ಗೊಲ್ಲರಹಟ್ಟಿ ತಲುಪಿದ್ದೆವು. ಉರುಮೆಯ ಶಬ್ದ ಜೋರಾಗಿತ್ತು . ನಮ್ಮನ್ನು ದೇವಾಲಯದ ಒಳಗೆ ಬಿಡಲಿಲ್ಲ ಕಳ್ಳೆ ಹಾಕಿರುವ ಕಾಂಪೌಂಡ್ ಹೊರಗೆ ನಿಂತು  ಒಳಗೆ ಇರುವ ಮುತ್ತುಗದ ದೇವಾಲಯಕ್ಕೆ ಕೈಮುಗಿದೆವು.ಕೇವಲ ಗೊಲ್ಲರಿಗೆ ಮಾತ್ರ ದೇವಾಲಯಗಳ ಒಳಗೆ ಪ್ರವೇಶವಿತ್ತು. ಸ್ವಾಮಿಯ ಹೆಸರಲ್ಲಿ ಕೊಬ್ಬರಿ ಸುಡುವ ಹರಕೆ ತೀರಿಸಿದೆವು .ಕಡ್ಲೇಮಿಠಾಯ್ ಕೊಂಡು ತಿಂದೆವು .ಮತ್ತೊಮ್ಮೆ ಕೈಮುಗಿದು ಬೇಸಿದ ಕಾಳಿನ ಪ್ರಸಾದ ತಿಂದು ಮನೆಯ ಕಡೆ ಹೊರೆಟೆವು. ಮನೆಗೆ ಬರುವಾಗ ಅಜ್ಜಿ ಸ್ವಾಮಿಯ ಬಗ್ಗೆ ಇತರೆ ಮಾಹಿತಿ ನೀಡಿದರು. ಸ್ವಾಮಿಗೆ ಹುರುಳಿಕಾಳು, ಕೋಳಿ ನಿಷಿದ್ದ. ಯಾರಾದರೂ ಹುರುಳಿಕಾಳು ,ಕೋಳಿ ತಿಂದು ಹಟ್ಟಿ ಪ್ರವೇಶ ಮಾಡಿದರೆ ಅವರಿಗೆ ಕಷ್ಟ ತಪ್ಪಿದ್ದಲ್ಲ . ವರ್ಷಕ್ಕೊಮ್ಮೆ ಸ್ವಾಮಿ ಹೊಳೆಗೆ ಹೋಗುವಾಗ ಕರೆಂಟ್ ಲೈನ್ ಕೆಳಗೆ ಹೋಗುವುದಿಲ್ಲ. ಕರೆಂಟ್ ಲೈನ್ ಕಟ್ ಮಾಡಿದರೆ ಮುಂದೆ ಸಾಗುತ್ತದೆ.ಇದು ಈಗಲೂ ಮುಂದುವರೆದಿದೆ.ಸ್ವಾಮಿಗೆ 

ತುಪ್ಪದ ದೀಪವನ್ನೆ ಹಚ್ಚಬೇಕು. ದೇವರ ಪೂಜಾರಿ ಬಹಳ ಕಟ್ಟುನಿಟ್ಟಾಗಿ ಇರಬೇಕು ಅವರು ಒರತೆ ನೀರನ್ನೆ ಕುಡಿಯಬೇಕು. ಸ್ನಾನ ಕ್ಕೂ ಮತ್ತು  ಅಭಿಷೇಕ ಮಾಡಲು ಮೀಸಲು ನೀರು  ಬಳಸಬೇಕು . ಪೂಜಾರಪ್ಪ ಬರಿಗಾಲಲ್ಲೇ ನಡೆಯಬೇಕು. 

ಎಂದು ಅಜ್ಜಿ ಹೇಳುತ್ತಾ ನಾನೂ ಹೂಂಗುಡುತ್ತಾ ಕೆರೆ ಏರಿ ದಾಟಿ ಊರ ತಲುಪಿದೆವು. ಅದೇ ಧ್ಯಾನದಲ್ಲಿ ಹೋಗಿ ಮಲಗಿದ ನನಗೆ ರಾತ್ರಿ ಕನಸಲ್ಲೂ ಹಾವಿನ ರೂಪದಲ್ಲಿ ಹಾಲುಕುಡಿದಪ್ಪನ ದರ್ಶನವಾಗಿತ್ತು. ಬೆಚ್ಚಿ ಬಿದ್ದು ಎದ್ದು ನೋಡಿದಾಗ ಸೂರ್ಯ ರಂಗಪ್ಪನ ಪೌಳಿ ದಾಟಿ ಮೇಲೆ ಬಂದಿದ್ದ.


ಸಿಹಿಜೀವಿ.

ಸಿ ಜಿ ವೆಂಕಟೇಶ್ವರ



  

ಶೀರ್ಷಿಕೆಯಿರದ ಪುಟ.

 


ಶೀರ್ಷಿಕೆಯಿರದ ಪುಟ. 


ನನಗಾಸೆಯಿತ್ತು ಬರೆಯುವೆ

ನೀನು ನನ್ನ ಬಾಳಲಿ 

ಸುಂದರ ಮುಖಪುಟ|

ಹುಸಿಯಾಯಿತು ನನ್ನ

ನಿರೀಕ್ಷೆ  ಬಿಟ್ಟು ಹೋದೆ 

ಶೀರ್ಷಿಕೆಯಿರದ ಪುಟ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.


20 February 2022

ನಾವು ಪ್ರಾಣಿಗಳಾಗಬೇಕು.


 


ನಾವು ಪ್ರಾಣಿಗಳಾಗಬೇಕು .


ಒಂದು ಕಾಲದಲ್ಲಿ ಸರ್ಕಸ್ ನಲ್ಲಿ

ಪ್ರಾಣಿಗಳ ಬಳಕೆ ಸಾಮಾನ್ಯವಾಗಿತ್ತು.|

ಸರ್ಕಸ್ ನಲ್ಲಿ ಪ್ರಾಣಿಗಳ ನಿಷೇಧಿಸಲಾಗಿದೆ.

ಈಗೀಗ ನಾವೇ  ಮನೆಯಲ್ಲಿ

ಮತ್ತು ಹೊರಗಡೆ  ಸರ್ಕಸ್ ಮಾಡುತ್ತಿದ್ದೇವೆ 

ಆಗಾಗ್ಗೆ ಅನಿಸುವುದುಂಟು ನಾವೇ ಪ್ರಾಣಿಗಳಾಗಬೇಕಿತ್ತು.||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.

ಎರಡು ಹಾಯ್ಕುಗಳು


 ಹಾಯ್ಕು ೧


ಸಾಗುತಿರಲಿ

ಏಳುಬೀಳು ಇದ್ದರೂ 

ಬಾಳ ಪಯಣ


ಹಾಯ್ಕು ೨


ಚಿಂತಿಸದಿರು 

ಪಯಣಿಗನಾಗಿರು 

ಗುರಿಮುಟ್ಟವೆ 


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

19 February 2022

ಉದಕದೊಳಗಿನ ಕಿಚ್ಚು . ಭಾಗ ೧೯


 ಹೆದ್ದಾರಿ ೧೯

ದಲಿತರ ಗುಡಿ ಪ್ರವೇಶ

" ಪ್ರತಿ ವರ್ಸದಂತೆ  ಈ ವರ್ಸ ಅಮ್ಮನ್ ಜಾತ್ರೆ ಮಾಡೋಕೆ ನಾವೆಲ್ಲ ಇವತ್ತು ಗುಡಿ ಹತ್ರ ಸೇರೆದಿವಿ" ಎನ್ನತ್ತಾ ಚೂಪಾದ ಪರಕೆ ಕಡ್ಡಿಯಿಂದ ಎಡಭಾಗ ದವಡೆಯ ಹಲ್ಲಿನಲ್ಲಿ ಸಿಕ್ಕಿಹಾಕಿಕೊಂಡಿರುವ ಅಡಿಕೆ ಮತ್ತು ಹೊಗೆಸೊಪ್ಪು ತೆಗೆಯಲು ದವಡೆ ಭಾಗಕ್ಕೆ ಚುಚ್ಚುತ್ತಿದ್ದರು ಗುಡಿ ಗೌಡರು.
"ಏ ಬಿಸಾಕ ಮಾರಾಯ ಯಾವಾಗಲೂ ಆ ಕಡ್ಡಿ ಇಕ್ಕೆಂಡು  ಏನ್ ದೊಗಿತಿಯಾ" ಎಂದ ಸಿದ್ದಮಲ್ಲನಾಯ್ಕ.
" ಅಯ್ಯೋ ನೀನಂತುನುನು ,ನಿನ್ಗೇನು ಬಾದೆ ?ನನ್ ಕಡ್ಡಿ ನನ್ ಹಲ್ಲು " ಗುಡಿ ಗೌಡರು ಎದಿರೇಟು ನೀಡಿದರು.
" ಏ ಬರೆ ಕೆಲ್ಸಕ್ಕೆ ಬರದಿರೋ ಮಾತಾಡ್ತಿರಾ? ಇಲ್ಲ ಜಾತ್ರೆ ಬಗ್ಗೆ ಮಾತಾಡ್ತಿರೊ? ,ನಮ್ಗೇನು ಬ್ಯಾರೆ ವಗುತ್ನ ಇಲ್ವಾ?, ನಾವು ಬತ್ತೀವಿ ಅದೇನ್ ಮಾತಡ್ಕೆಳ್ಲಿ ,ಹಲ್ಲು ಮೂಗು, ಕಿವಿ ,ಕಡ್ಡಿ ,ಹಾಳು ಮೂಳು" ಎಂದು ಟವಲ್ ಕೊಡವಿಕೊಂಡು ಎದ್ದನು ಬಸವರಾಜ.
" ಏ ಕುತ್ಕಳಲೆ  ಹೋಗಾನ ,ಗೌಡ್ರೆ ಜಾತ್ರೆ ಬಗ್ಗೆ  ಸುರು ಮಾಡಿ " ಅಂದ ಮಡಿವಾಳ ಶಿವಣ್ಣ.
" ಪ್ರತಿ ಸಲ ಮಾಡ್ದಂಗೆ ಈ ವರ್ಸನೂ ಹದಿನೈದ್ ದಿನದ ಸಾರು ಹಾಕಿ ಅಮ್ಮನ ಜಾತ್ರೆ ಮಾಡಾನಾ ಏನ್ರಪ್ಪಾ ಎಲ್ಲರಿಗೂ ಒಪ್ಪಿಗೇನಾ"
" ಗೌಡ್ರೆ ಪ್ರತಿ ಸಲ ಜಾತ್ರೆನೆ ಬೇರೆ  , ಈ ಸಲದ ಜಾತ್ರೆನೆ ಬೇರೆ  , ಈ ಸಲ ಕೆಲವು ಬದ್ಲಾವಣೆ ಆಗ್ಬೇಕು." ಗುಡಿಯಿಂದ ಮಾರು ದೂರದಲ್ಲಿ ಕುಂತ ಕೆಳಗಿನ ಕೇರಿಯ ಯುವಕ ಕೃಷ್ಣ ಜೋರಾಗಿ ಎಲ್ಲರಿಗೂ ಕೇಳುವಂತೆ ಹೇಳಿದ .
" ಅದೇನ್ ಬದ್ಲಾವಣೆನಪ್ಪ ನೀನಂತುನುನು  ,ಹೇಳು ಆದರೆ ಮಾಡಾನಾ" .
" ಈ ವರ್ಸದಿಂದ ನಮ್ಮ ಜನ ಮಾರಮ್ಮನ ಗುಡಿ ಒಳಗೆ ಬಂದು ಪೂಜೆ ಮಾಡಾಕೆ ಅವಕಾಶ ಕೊಡ್ಬೇಕು, ಜೊತೆಗೆ ಈ ವರ್ಸದಿಂದ ನಮ್ಮ ಜನಾನೇ ಮಾರಮ್ಮನ ಪೂಜೆ ಮಾಡಬೇಕು" .
ಕೃಷ್ಣನ ಮಾತು ಕೇಳಿ ನೆರೆದ ಜನ  ತಮ್ಮಲ್ಲೆ ಗೊನ ,ಗೊನ,ಗುಸು ಗುಸು ಸದ್ದು ಮಾಡಲು ಶುರು ಮಾಡಿದರು.
" ಏನ್ ಅಂತ ಮಾತಾಡ್ತಿಯಲಾ , ನಾವೆಲ್ಲಾದ್ರೂ ಅಮ್ಮನ ಗುಡಿ ಒಳಕೆ ಹೋದ್ರೆ  , ಸುಟ್ ಭಸ್ಮ ಆಗ್ತಿವಿ ಸುಮ್ಕೆ ಬಿದ್ದಿರು" .
ಲೈಟಾಗಿ ಹೆಂಡದ ನಶೆ ಇದ್ದರೂ, ಸ್ವಲ್ಪ ತೊದಲುವ ಧ್ವನಿಯಲ್ಲಿ ಮಗನನ್ನು ಗದರಿಸಿದರು ಮಾರಪ್ಪ.
" ನೀನಾದ್ರೂ ಹೇಳಲ ಮಾರ ನಿನ್ ಮಗ ಏನ್ ಇಂಗ ಮಾತಾಡ್ತಾನೆ ನಿನ್ನಂಗೆ ಅವನೇನು ಕುಡಿದಿಲ್ಲ ತಾನೆ?"
ಗೌಡರು ಪ್ರಶ್ನೆ ಮಾಡಿದರು.

" ಗೌಡರೆ ನಮ್ ಜಾತಿ ಅಂದರೆ ಬರೀ ಕುಡಿಯೋರು, ಮಾಂಸ  ತಿನ್ನೋರು ಅಂತ ನಿಮ್ಮಂತೋರು ಅಂದ್ಕಡಿದಾರೆ,ಬರ್ರಿ ತೋಪಿನ ಅಂಗಡಿ ಹತ್ರ ಹೋಗಾನ ನಿಮ್ಮೋರು ಎಷ್ಟ್ ಜನ ಐದಾರೆ ಅಂತ ತೋರಿಸ್ತೀನಿ, ಗೌಡ್ರೆ ನಿಮ್ ಬಗ್ಗೆ ನನಗೆ ಗೌರವ ಇದೆ  ,ಆದರೆ ಈ ಸತಿಯಿಂದ ಬದಲಾವಣೆ ಆಗಲೇಬೇಕು" ಪಟ್ಟು ಹಿಡಿದ ಕೃಷ್ಣ.

"ಏನಲ ಬದ್ಲಾವಣೆ ನಿಮ್ ಜಾತಿ ನೆಳ್ಳು ಬೀಳಿಸ್ಕೊಳ್ಳತಿರಲಿಲ್ಲ ನಮ್ಮ ತಾತ ಮುತ್ತಾತ ,ಏನೋ ನಾವು ನಿಮ್ಮನ್ನು ಗುಡಿ ಹತ್ರ ಬಿಟ್ಕಂಡಿದಿವಿ ಅದೇ ನಿಮ್ ಪುಣ್ಯ , ಇನ್ನೂ ಏನಾ ಬದ್ಲಾವಣೆ ಬೇಕಂತೆ ,ಸಾಕ್ ಸುಮ್ಮನೆ ಕುಕ್ಕುರ್ಸಲೆ  , ನಮ್ ಹಿರೀಕರು ಹೇಳ್ತಿದ್ರು ಈ ಜಾತಿ ಎಲ್ಲಿ ಇಡ್ಬೇಕೋ ಅಲ್ಲಿಡ್ಬೇಕಂತ ನಾವೆ ಸ್ವಲ್ಪ ಲೂಸ್ ಬಿಟ್ವಿ , ಈಗ ಈ ತರ ಮಾತಾಡಂಗಾಗಿದಿರಾ".  ದರ್ಪದಿಂದ ನುಡಿದ ಕೆ ಎಚ್ ರಂಗಸ್ವಾಮಿ.

" ರಂಗಣ್ಣ ಜಾತಿ ಬಗ್ಗೆ ಮಾತಾಡ್ಬೇಡ ನಮಗೂ ಸ್ವಲ್ಪ ತಿಳುವಳಿಕೆ ಐತೆ ಹಿಂದಿನ ಕಾಲದಲ್ಲಿ ಅಂದರೆ ಈ ಗುಡಿ ಕಟ್ಟಿ ನೂರಾರು ವರ್ಸ ಆಗಿರ್ಬೋದು. ಆ ಕಾಲದಲ್ಲಿ ನಮ್ ಜನ ನಿಮ್ ಜನ ಎಲ್ಲಾ ಒಂದಾಗಿ ಸೇರಿ  ಗುಡಿಕಟ್ಟಿ ಎಲ್ಲಾ ಒಂದಾಗಿ ಸೇರಿ ಜಾತ್ರೆ, ಹಬ್ಬ ಮಾಡ್ತಾ ಇದ್ದರಂತೆ ಎಲ್ಲೋ ಮಧ್ಯದಲ್ಲಿ ಈ ತರ ಜಾತಿ ಭೇದ ಸುರು ಆದಂಗೆ ಕಾಣುತ್ತೆ. ಅದಕ್ಕೆ ಇನ್ ಮೇಲೆ ನಾವು ನೀವು ಅಮ್ಮನ ಪೂಜೆ ಮಾಡಾನ ನಮ್ ಜಾತಿ ಬಗ್ಗೆ  ಕೀಳಾಗಿ ಯಾರೂ ಮಾತಾಡೋದು ಬ್ಯಾಡ" ಎಂದು ನುಡಿದ ಕೃಷ್ಣನ ಗೆಳೆಯ ಮಹಂತೇಶ.

" ಜಾತಿ ಬಗ್ಗೆನೇ ಕೆಟ್ಟದಾಗಿ ಮಾತಾಡ್ತಿನಿ , ಏನ್ಲಾ ಕಡಿತಿಯೇನಲೆ ? ಬಾರ್ಲ" ಟವಲ್ ಕೊಡವಿಕೊಂಡು ,ತೋಳೇರಿಸಿಕೊಂಡು ಮಹಾಂತೇಶನ ಕಡೆ ಹೊರಟ ರಂಗಸ್ವಾಮಿ.
ಕೆಲವರು ರಂಗಸ್ವಾಮಿಯನ್ನು ತಡೆದು ಕೂರಿಸಿದರು.

ಅವರ ಕಡೆ , ಇವರ ಕಡೆ , ಏರು ಧ್ವನಿಯಲ್ಲಿ ಯಾರು ಏನು ಮಾತನಾಡುವರು ಎಂದು ಗೊತ್ತಾಗದೆ , ಗದ್ದಲ ಏರ್ಪಟ್ಟಿತು. ಇದೇ ಮೊದಲ ಬಾರಿಗೆ ಜಾತ್ರೆ ಬಗ್ಗೆ ಮಾತನಾಡಲು ಕಲೆತಾಗ ಆದ ಇಂತಹ ಗದ್ದಲವನ್ನು ದೂರದಿಂದ ನೋಡುವ ಮಹಿಳೆಯರು , ಎಂದೂ ಇಂಗಾಗಿರ್ಲಿಲ್ಲ  , ಊರ್ಗೆ ಏನೋ ಕೇಡ್ಗಾಲ ಬಂದೈತೆ  ,ಇವು ಇಂಗೆ ಹೊಡ್ದಾಡ್ಕೆಂಡು ಜಾತ್ರೆ ಮಾಡಿದ್ರೆ ಅಮ್ಮ ರಾಂಗ್ ಆಗಿ ಏನ್ ಮಾಡ್ತಾಳೋ ? ಎಂದು ಅವರವರೆ ಮಾತಾಡಿಕೊಳ್ಳುತ್ತಿದ್ದರು.
ಕೃಷ್ಣ ಮತ್ತು ಮಹಾಂತೇಶನ ಜೊತೆಗೆ ಹಟ್ಟಿಯ ಇನ್ನೂ ಐದಾರು ಹುಡುಗರು ಜೋರಾಗಿ ಮಾತನಾಡುವುದನ್ನು ಕಂಡ ರಂಗಸ್ವಾಮಿ
"ಹೊ....ಹೊ.... ಈ ನನ್ ಮಕ್ಕಳು ಜಾತ್ರೆ ಕೆಡಿಸ್ಬೇಕು ಅಂತಲೇ ಪ್ಲಾನ್ ಮಾಡ್ಕಂಡು ಬಂದು ಇಂಗಾಡ್ತಾರೆ , ಯಾವ ವರ್ಸ ಇಲ್ದಿದ್ದು ಈ ವರ್ಸನೆ ತರ್ಲೆ ಯಾಕೆ?  ಜಾತ್ರೆ ಆಗ್ದಿದ್ದರೂ ಸೈ ಈ ನನ್ ಮಕ್ಕಳ ಕಡ್ದು ಜೈಲಿಗ್ ಹೋಗ್ತೀನಿ ಏನ್ ಕೊಬ್ಬು ಇವರಿಗೆ ," ಎಂದು ಮತ್ತೆ ತೋಳೇರಿಸಿ ಹೊರಟ ರಂಗಸ್ವಾಮಿ.

" ಏ ಕುತ್ಕಳ ರಂಗ , ಏನ್ ಜಗಳ ಆಡಾಕೆ ಕಾಯ್ತಾ ಇರ್ತಿಯಾ, ಸುಮ್ನಿರು ನೀನಂತುನುನು " ಗದರಿದರು ಗೌಡರು.
"ಅಲ್ಲ ಗೌಡರೆ ಆ ನನ್ ಮಕ್ಳ ದಿಮಾಕ......"
" ಸಾಕು ಸುಮ್ನಿರೋ" ಮತ್ತೆ ಗದರಿದರು.
ಗುಡಿಯ ಒಳಗೆ ಅಕ್ಕ ಪಕ್ಕ ಮುಂದೆ ನಿಶ್ಯಬ್ದ ವಾತಾವರಣದಲ್ಲಿ ಗೌಡರೆ ಶುರುಮಾಡಿದರು.
" ಅಲ್ಲಪ್ಪ ಕೃಷ್ಣ , ಇಷ್ಟ್ ದಿವಸ ಇಲ್ಲದ ಈ ಆಸೆ ಈಗ್ಯಾಕೆ ?,ಅದು ನಿಮ್ ಬೇಡಿಕೆ ನಿಮ್ಗೆ ಸರಿ ಅನ್ಸುತ್ತಾ?  ಗುಡಿ ಒಳಕ್ಕೆ ಬಿಟ್ಕಂಡರೆ ಮೈಲಿಗೆ ಆಗಲ್ವ ? ನಾವೆಲ್ಲ ಗುಡಿಗೆ ಎಂಗ್ ಬರಾಕಾಗುತ್ತೆ?  ಅದೂ ಅಲ್ದೇ ಪೂಜಾರಿಕೆ ಬ್ಯಾರೆ ಬೇಕು ಅಂತ ಕೇಳ್ತಿರಲ್ಲಪ್ಪ  ,ಇದೆಲ್ಲ ಆಗಲ್ಲ ಸುಮ್ಮನಿದ್ದು ಬಿಡಿ"
" ನೆಟ್ಟಗೆ ಗಂಟೆ ಇಡ್ಕಳ್ಳಕೆ ಬರುತ್ತೇನೋ ಕೇಳ್ರಿ , ಮೂಳೆ ಕಡಿಯಾದ್ ಬಿಟ್ ಪೂಜೆ ಮಾಡ್ತಾರಂತೆ ,ಸ್ನಾನ ಮಾಡಿ ಏಸ್   ದಿನ  ಆತೋ " ಮತ್ತೆ ಹಂಗಿಸಿದ ರಂಗಸ್ವಾಮಿ.

" ಏ ನೆಟ್ಟಗ್ ಮಾತಾಡು, ನೀನು ಪೂಜೆ ಮಾಡಾದ ನಾನು ಕಂಡಿದಿನಿ" ಮಹಾಂತೇಶ ಏಕವಚನದಲ್ಲೇ ಬೈಯ್ದ.
" ಗೌಡ ,ಸಾವ್ಕಾರ ಅಂತ ಕರೆಯೋ ನನ್ ಮಕ್ಕಳು ಇವತ್ತು ಏಕವಚನದಲ್ಲಿ ಮಾತಾಡ್ತೀರ ಹುಟ್ಟಿಲ್ಲ ಅನ್ನಿಸ್ಬಿಡ್ತೀನಿ" 
ಜೋರಾಗಿ ಹೋಗಿ ಮಹಂತೇಶನ ತಳ್ಳಿದ ,ತಳ್ಳಿದ ರಭಸಕ್ಕೆ ಮಹಂತೇಶನ ತಲೆ ಪೌಳಿಯ ಕಲ್ಲಿಗೆ ಬಿದ್ದು ರಕ್ತ ಚಿಮ್ಮಿತು.
ಮೇಲ್ವರ್ಗದ ಮತ್ತು ಕೆಳವರ್ಗದ ಬಿಸಿರಕ್ತದ ಯುವಕರು ಕೈ ಕೈ ಮಿಲಾಯಿಸಿದರು.ಹಿರಿಯರು ಸಮಾಧಾನ ಮಾಡಿದರು .
ಕೆಲವರು ಮಹಾಂತೇಶನ ಆಸ್ಪತ್ರೆಗೆ ಕರೆದುಕೊಂಡು ಹೋದರು .
" ಎಲ್ಲಾ ಮನೆಗ್ ನಡೀರಪ್ಪ ಯಾವ ಮಾತುಕತೆ ಬೇಡ ,ಏನೂ ಬೇಡ ,ಸುಮ್ಮನೆ ಯಾಕೆ ಗಲಾಟೆ ಇವತ್ತು ಯಾಕೋ ಟೈಮ್ ಸರಿಯಿಲ್ಲ ಇನ್ನೊಂದು ‌ದಿನ ಸೇರನ ನಡೀರಪ್ಪ " ಎಂದು ಟವಲ್ ಕೊಡವಿಕೊಂಡು ಹೆಗಲ ಮೇಲೆ ಹಾಕಿಕೊಂಡು ಮನೆಯ ಕಡೆ ಹೊರಟರು
ಗುಡಿಗೌಡ್ರು.

***************************

ಮಾರಮ್ಮನ ತೋಪಿನ ಮೇಲಿನಿಂದ ರವಿರಾಯ ನಿಧಾನವಾಗಿ ಕೆಂಬಣ್ಣ ಸೂಸಿ ಮೇಲೇರುತ್ತಿದ್ದ , ತಮ್ಮ ತಿಪ್ಪೆಗಳ ಕಡೆಗೆ ಸಗಣಿ ಹೊತ್ತ ಹುಡುಗರು ಹೊರಟಿದ್ದರು,ಜೈರಾಂ ಬಸ್ ಗೆ ಹಾಲು ಮೊಸರು ಮಾರಲು ಹೊರಟ ಗೊಲ್ಲರ ಹೆಣ್ಣುಮಕ್ಕಳು ಮಾರಮ್ಮನ ಗುಡಿ ಮುಂದೆ ನಿಂತಲ್ಲೆ ಚಪ್ಪಲಿ ಬಿಟ್ಟು , ಕೈಮುಗಿದು , ಬಸ್ ನಿಲ್ದಾಣದ ಕಡೆ ಹೊರಡುತ್ತಿದ್ದರು.ಜೈರಾಂ ಬಸ್ ದೊಡ್ಡ ಸೇತುವೆ ದಾಟಿ ಹೋದ ನಂತರ ಐಮಂಗಳದ ಕಡೆಯಿಂದ ಪೊಲೀಸ್ ಜೀಪ್ ಬಂದು ಮಾರಮ್ಮನ ಗುಡಿಯ ಮುಂದೆ ನಿಂತಿತು !
ದಪ್ಪನೆಯ ಮೀಸೆಯ, ದಪ್ಪ ಹೊಟ್ಟೆಯ ,ಕಪ್ಪನೆಯ ಪೊಲೀಸಪ್ಪ ಜೀಪಿನ ಮುಂದಿನ ಸೀಟಿನಲ್ಲೆ ಕುಳಿತಿದ್ದರು.ಜೀಪಿನ‌ ಹಿಂದಿನ ಸೀಟಿನಿಂದ ನಾಲ್ಕು ಜನ ಪೊಲೀಸರು ಲಾಟಿಯೊಂದಿಗೆ ಇಳಿದರು . ಮುಂದೆ ಜೀಪಲ್ಲೇ ಕುಳಿತ   ಪೊಲೀಸ್ ಜೊತೆಗೆ ನಾಲ್ವರು ‌ಏನೋ ಮಾತನಾಡುತ್ತಾ ಒಂದು ಬಿಳಿ ಕಾಗದ ತೋರಿಸಿ ಏನೇನೋ  ಮಾತಾಡಿಕೊಂಡರು ,ದೂರದಿಂದ ಇದನ್ನು ಗಮನಿಸಿದ ನಾಲ್ಕೈದು ಜನ ಇದು ರಾತ್ರಿ ನಡೆದ ಘಟನೆಗೆ ಸಂಭಂದಿಸಿರೋ ಹಾಗಿದೆ , ಎಂದು ಮುಂದಾಲೋಚನೆ ಮಾಡುತ್ತಾ ಹತ್ತಿರ ಹೋಗಲು ಭಯ ಪಟ್ಟು ಸುಮ್ಮನೆ ದೂರದಿಂದ ನೋಡುತ್ತಾ ನಿಂತರು, ಕೆಳಗಿನ ಮನೆ ನರೇಶ ಓಡಿ ಹೋಗಿ, ಗುಡಿ ಗೌಡರಿಗೆ ಸುದ್ದಿ ಮುಟ್ಟಿಸಿದ.
" ಏ ಪಟಾಪಟಿ ನಿಕ್ಕರ್..... ನೀನೇ ಬಾ .. ಎಂದರು ಒಬ್ಬ ಪೊಲೀಸ್.
"ನಾನಾ ಸ್ವಾಮಿ" ಅಚ್ಚರಿ ಮತ್ತು ಭಯದಿಂದ ಕೇಳಿದ ಪಾತಲಿಂಗಪ್ಪ.
" ಊಂಕಣಯ್ಯ ನೀನೇ ಬಾ  "
ಹತ್ತಿರ ಬಂದು ಎರಡೂ ಕೈಗಳನ್ನು ಎದೆಯ ಮೇಲೆ ತಂದು ಒಂದರ ಮೇಲೋಂದು ಕೈಯನ್ನು ಬಿಗಿಯಾಗಿ ಹಿಡಿದು ,ಭಯದಿಂದ ನಡುಗತ್ತಾ ನಿಂತ ಪಾತಲಿಂಗಪ್ಪ ನ ನೋಡಿ
" ಅದ್ಯಾಕೆ ಅಂಗ್ ನಡುಗ್ತಿಯ, ಸಾಹೇಬರು ಕರೀತಾರೆ ನೋಡು ಅದೇನ್ ಕೇಳು" ಗತ್ತಿನಿಂದ ಗದರಿತು ಪೊಲೀಸ್ ಧ್ವನಿ.
" ಏಯ್.. ಇಲ್ಲಿ ರಂಗಸ್ವಾಮಿ  ಮನೆ ಎಲ್ಲಿ ಬರುತ್ತೆ?
"  ಮೀಸೆಯ ಪೊಲೀಸ್ ಕೇಳಿದರು.
" ಯಾವ್ ರಂಗಸ್ವಾಮಿ ? ಸ್ವಾಮಿ, ನಮ್ಮೂರ್ ತುಂಬಾ ರಂಗಸ್ವಾಮಿಗಳೆ , ನಮ್ಮ ಹಟ್ಟಿ ತುಂಬಾ ಎಲ್ಲಾ ‌ಮಾರಮ್ಮ ,ರಂಗಮ್ಮ ಗಳೆ ,"
" ಏ ತಲೆ ಹರಟೆ ಮಾಡ್ತಿಯಾ ಬೋ... ಮಗನೆ ಒದ್ದು ಒಳಗೆ ಹಾಕಿ ಏರೋಪ್ಲೇನ್ ಹತ್ತಿಸ್ಬಿಡ್ತೀನಿ ಹುಷಾರ್"
" ಅಲ್ಲಾ ಸ್ವಾಮಿ ,ನಮ್ಮ ಊರಲ್ಲಿ ಬಾಳ ಜನ ರಂಗಸ್ವಾಮಿಗಳು ಇದಾರೆ ಅದ್ಕೆ ಅಂಗಂದೆ ಬುದ್ದಿ, ಮ್ಯಾಗಳ ಮನೆ ರಂಗಸ್ವಾಮಿ, ಓದೋ ರಂಗಸ್ವಾಮಿ, ಗುಂಡ್ರಂಗಪ್ಪರ ರಂಗಸ್ವಾಮಿ, ಛೇರ್ಮನ್ ರಂಗಸ್ವಾಮಿ  ಗುಡಿಗೌಡ್ರು ರಂಗಸ್ವಾಮಿ,ಅಗ , ಅವ್ರೇ ಬಂದ್ರು ನೋಡ್ರಿ " .
ಎಂದು ದೂರ ನಿಂತ .
" ಸ್ವಾಮಿ ನಮಸ್ಕಾರ ನಾನು ಈ ಊರಿನ ಗುಡಿಗೌಡ ರಂಗಸ್ವಾಮಿ ಏನ್ ವಿಷ್ಯ ಸ್ವಾಮಿ ಬಂದಿದ್ದು "
ಜೀಪಿನಿಂದ ಇಳಿದ ಇನ್ಸ್ಪೆಕ್ಟರ್ ಜಬಿಉಲ್ಲಾ .
" ಏನಿಲ್ಲಾ ಗೌಡರೆ ನಿನ್ನೆ ರಾತ್ರಿ ನಿಮ್ ಊರಿನಿಂದ ಒಂದ್ ಕಂಪ್ಲೇಂಟ್ ಬಂದಿದೆ . ಆರು ಜನರ ಮೇಲೆ  ಅಟ್ರಾಸಿಟಿ, ೩೦೭ ಅಟೆಂಪ್ಟ್ ಟು ಮರ್ಡರ್ ಕೇಸ್ ಹಾಕಿದಾರೆ.  
ಅವರನ್ನು ಕರ್ಕೊಂಡು ಹೋಗಾಕ್ ಬಂದಿದಿವಿ" ಎಂದು ಆರು ಜನರ ಲಿಸ್ಟ್ ಗೌಡರ ಕೈಗೆ ಕೊಟ್ಟರು .
ನಿರೀಕ್ಷಿತ ಎಂದು ಗೌಡರು ಆ ಲಿಸ್ಟ್ ಕಡೆ ಕಣ್ಣಾಡಿಸಿದಾಗ ಮೊದಲ ಹೆಸರೆ ಕೆ .ಹೆಚ್. ರಂಗಸ್ವಾಮಿ. ನಂತರ. ನರೇಶ. ಓಂಕಾರ, ಕುಮಾರ ,ಅಚ್ಚರಿ ಎಂಬಂತೆ ನಿನ್ನೆ  ಗಲಾಟೆ 
ಆದಾಗ ಅಲ್ಲಿಲ್ಲದಿದ್ದರೂ  ಬಿಳಿಯಪ್ಪನ ಹೆಸರು ಸೇರಿಸಿದ್ದರು .ಗೌಡರಿಗೆ ಈಗ ಅರ್ಥವಾಯಿತು ಕಳೆದ ವರ್ಷ ಗುರುಸಿದ್ದನಿಗೆ ಬಾಸುಂಡೆ ಬರುವಂತೆ ಹೊಡೆದಾಗ ಕೆಲವರು ಇದನ್ನು ವಿರೋಧಿಸಿ ಕಂಪ್ಲೇಂಟ್ ಕೊಡ್ತೀವಿ ಅಂದಿದ್ದರು ಆದರೆ ಗೌಡರು ಸಮಾಧಾನ ಮಾಡಿದ್ದರು.
" ಏನ್ ಗೌಡ್ರೆ ನೀವೆ ಇವರೆಲ್ಲರನ್ನು ಕರೆಸ್ತಿರಾ ಅಥವಾ ನಾವೇ ಅವರ ಮನೇಗ್ ಹೋಗಿ ಅರೆಸ್ಟ್ ಮಾಡ್ಲ"
" ಏ ಬ್ಯಾಡ ಸಾ , ನಾನೇ ಕರೆಸ್ತೀನಿ ,ಏ ಪಾತಲಿಂಗ ಪಾಕ್ಷಪ್ಪರ ಅಂಗಡಿತಾಕೆ ಹೋಗಿ ,ಕುರ್ಚಿ ಇಸ್ಕಾಂಬಾ ,ನಾನ್ ಹೇಳ್ದೆ ಅಂತ ಹೇಳು , ಏ ರಮೇಶ ಬ್ರಮ್ಮಿ ಹೋಟೆಲ್ ಗೆ ಹೋಗಿ ಸಾಹೇಬ್ರಿಗೆ ಕುಡಿಯಾಕ್ ಏನಾರಾ ತಂದು ಕೊಡು, ಏ ಗೋಪಾಲ ಈ ಚೀಟಿಯಾಗಿರೋರ್ನ ಕರ್ಕಂಬಾ " ಎಂದು ಹೆಸರು ಓದಿದರು ಗೌಡ್ರು.
" ಅದೆಲ್ಲ ಏನೂ ಬ್ಯಾಡ ಗೌಡ್ರೆ ,ಅವರನ್ನು ಕರೆಸಿ ನಾವು ಹೊರಡ್ತೀವಿ"
" ಅಂಗಂದ್ರೆ ಎಂಗೆ ಸಾ, ಕುತ್ಕಳಿ "ಎಂದು ಪಾತಲಿಂಗಪ್ಪ ತಂದ ಕುರ್ಚಿಯನ್ನು ತಾವೆ ಹಾಕಿ, ಮಾರಮ್ಮನ ಬೇವಿನ ಮರದ ಕೆಳಗೆ ಕುಳಿತುಕೊಳ್ಳಲು ಅಧಿಕಾರಿಗಳನ್ನು ವಿನಂತಿಸಿಕೊಂಡರು.
ಅದೂ ಇದೂ ಮಾತಾನಾಡುವ ವೇಳೆಗೆ ವಿಷಯ ತಿಳಿದು ಮತ್ತೆ ಮಾರಮ್ಮನ ಗುಡಿ ಮುಂದೆ ಜನ ಜಮಾವಣೆ ಆಗಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಯಿತು. ಪೊಲೀಸರಲ್ಲಿ ಒಬ್ಬ ಬಂದು , ಜನರನ್ನು ಸರಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಗೋಪಾಲನ ಜೊತೆ ಕೆ ಹೆಚ್ ರಂಗಸ್ವಾಮಿ ಸೇರಿ ನಾಲ್ಕು ಜನ ಬಂದರು
" ಸ್ವಾಮಿ ಇನ್ನೊಬ್ಬ ಬರ್ಬೇಕು ಬತ್ತಾನೆ ,ತಮ್ಮಲ್ಲಿ ಒಂದು ಮಾತು, ಇದುವರೆಗು ಅಮ್ಮನ ಕೃಪೆಯಿಂದ ನಮ್ಮೂರಿಂದ ಯಾರನ್ನು ಪೋಲಿಸರು ಕರ್ಕೊಂಡು ಹೋಗಿ ಟೇಶನ್ಗೆ ಹಾಕಿಲ್ಲ "
ಮಧ್ಯದಲ್ಲೇ ಬಾಯಿ‌ ಹಾಕಿದ ಇನ್ಸ್ಪೆಕ್ಟರ್
" ಈಗ್ಲೂ ನಾವೇನು ನಾವಾಗೆ ಬಂದು ನಿಮ್ಮನ್ನು ಸ್ಟೇಷನ್ ಗೆ ಕರೀತಿಲ್ಲ ,ನಿಮ್ ಊರ್ನೊರೆ ಕಂಪ್ಲೇಂಟ್ ಕೊಟ್ಟರು ಬಂದಿದಿವೆ , ಈಗಲೂ ಅವರು ಕಂಪ್ಲೇಂಟ್ ವಾಪಾಸ್ ತಗಂಡ್ರೆ ನಾವು ಹೊರ್ಡತೀವಿ"
"ಆಗಲಿ‌ ಸ್ವಾಮಿ ಅವರ್ನ ಕರೆಸಿ ಮಾತಾಡ್ತಿವಿ"
 " ಬೇಗ ಆಗ್ಬೇಕು ನಮ್ಗೆ ಬ್ಯಾರೆ ಕೆಲ್ಸ ಇದೆ " ಎಂದರು ಇನ್ಸ್ಪೆಕ್ಟರ್

 ಗೌಡರ ಸೂಚನೆ ಮೇರೆಗೆ  ಪಾತಲಿಂಗಪ್ಪ ಹೋಗಿ  ಕೃಷ್ಣ ಮತ್ತು ಮಹಾಂತೇಶನನ್ನು ಕರೆದುಕೊಂಡು  ಗುಡಿಯ ಬಳಿ ಬಂದರು .

" ಏನ್ರಪ್ಪಾ ಊರು ಅಂದ್ರೆ ಒಂದ್ ಮಾತ್ ಬರುತ್ತೆ ಒಂದ್ ಮಾತ್ ಹೋಗುತ್ತೆ ಅಷ್ಟಕ್ಕೇ ಟೇಶನ್ ಗೆ ಹೋಗೋದೆ ? ಕಂಪ್ಲೇಂಟ್ ವಾಪಸ್ ತಗಾಳ್ರಿ , ಸಾಹೇಬ್ರು ಹೋದಮ್ಯಲೆ ನಾವ್ ಕೂತು ಮಾತಾಡಾನಾ"
"ಮಾತಾಡಾಕೇನು ಇಲ್ಲ ಗೌಡರೆ ,ನಮ್ಮ ಮೇಲೆ ಕೈ ಮಾಡಿರೋರಿಗೆ ಶಿಕ್ಷೆ ಆಗಬೇಕು ,ಗುಡಿ ಒಳಕೆ ನಾವು ಬರ್ಬೇಕು , ಅಮ್ಮನಿಗೆ   ನಾವೇ ಪೂಜೆ ಮಾಡಬೇಕು ,
ಇದೆಲ್ಲ ಆಗುತ್ತಾ?

"ಅಲ್ಲಪಾ ನಿಮಗೂ ಹಟ್ಟಿಲಿ ಒಂದು ಮಾರಮ್ಮನ ಗುಡಿ ಕಟ್ಟಿಸಿದಿವಿ, ಅಲ್ಲಿ ನೀವೆ ಪೂಜಾರ್ರು ಆದರೂ...."

"ಆದರೂ ಯಾಕೆ ... ಈ ಗುಡಿಗೆ ಯಾಕ್ ನಾವ್ ಬರ್ಬಾರ್ದು ,ಬಾಬಾಸಾಹೇಬ್ ಅಂಬೇಡ್ಕರ್ ರವರು ನೂರಾರು ವರ್ಷದ ಹಿಂದೆ ಮಹದ್ ಮತ್ತು ಕಲರಾಂ ಚಳುವಳಿಯ ಮೂಲಕ ಅಸ್ಪೃಶ್ಯತೆಯ ವಿರುದ್ದ ಹೋರಾಟ ಮಾಡಿದ್ದಾರೆ. ನಮ್ಮ ಜನಾಂಗದ ಮೇಲೆ ನೀವು ಮಾಡೋ ಅನ್ಯಾಯ ತಡೆಯೋಕೆ ನಮ್ಮ ಸಂವಿಧಾನದಲ್ಲಿ  ಶೋಷಣೆಯ ವಿರುದ್ಧದ ಹಕ್ಕು ನೀಡಿದ್ದಾರೆ,  ಆದರೆ ನೀವು ನಮಗೆ ಅನ್ಯಾಯ ಮಾಡ್ತಾನೆ ಇದಿರಾ. ನೀವು ಇನ್ನೂ ನಮ್ಮನ್ನ ಎಷ್ಟು ದಿನ ಹೊರಗಿಡ್ತಿರಿ?
ನಾವು ಮನುಷ್ಯರೆ, ನೀವೂ ಮನುಷ್ಯರೆ ಅದ್ಯಾಕೆ ಇಂಗೆ ಭೇದಭಾವ ಮಾಡ್ತಿರಾ? ನಮ್ಮ ಹಕ್ಕು ಕೇಳಿದರೆ ಜಾತಿ ಹಿಡ್ದು ಬೈತೀರಾ, ಅದಕ್ಕೆ ಕೆಲವರಿಗೆ ಶಿಕ್ಷೆ ಆಗಲಿ ಆಗ ಗೊತ್ತಾಗುತ್ತದೆ ".

 ಸುಧೀರ್ಘವಾಗಿ ಆತ್ಮವಿಶ್ವಾಸದಿಂದ ಮಾತನಾಡಿದ ಕೃಷ್ಣ.
ಅದಕ್ಕೆ ಹೇಳೋದು ಶಿಕ್ಷಣ ಮನುಷ್ಯರ ಆತ್ಮವಿಶ್ವಾಸ ಹೆಚ್ಚಿಸುತ್ತದೆ, ಸಂಘಟನೆ ಮಾಡುತ್ತದೆ ,ಮತ್ತು ಬೆಳಕು ನೀಡುತ್ತದೆ.
ಕೃಷ್ಣನ ಮಾತು ಕೇಳಿದ ಹಟ್ಟಿ ಜನರೆಲ್ಲಾ "ಹೌದು ನಮ್ಮ ಕೃಷ್ಣ ಹೇಳಿದ್ದು ಸರಿ 
ನಮ್ಮ ಹಕ್ಕು ನಮಗೆ ಬೇಕು " ಎಂದು ಗಟ್ಟಿಯಾದ ಧ್ವನಿಯಲ್ಲಿ ಕೂಗಿದರು .
ಇದನ್ನು ಸವರ್ಣಿಯರು ನಿರೀಕ್ಷೆ ಮಾಡಿರಲಿಲ್ಲ .

ಪೊಲೀಸರು ಎಲ್ಲರನ್ನೂ ಸುಮ್ಮನಿರಿಸಿದರು ಈ ಮಧ್ಯೆ ಗೌಡರು ಮತ್ತು ಛೇರ್ಮನ್ ರಂಗಸ್ವಾಮಿ ಏನೋ ಮಾತಾಡಿಕೊಂಡರು.
" ನೋಡ್ರಪ ನಾವು ಅಮ್ಮನಿಗೆ ಎದುರೋ ಜನ ,ನೀವು ಅಮ್ಮನ ಗುಡಿ ಒಳಗೆ ಬಂದ್ರೆ ನಿಮಗೆ ತೊಂದರೆ ಅಂತ ತಿಳ್ಕಂಡು ನಿಮ್ಮನ್ನು ಬಿಟ್ಟಿರಲಿಲ್ಲ ‌ ,ಈಗ ನೀವೆ ಇಷ್ಟ ಪಟ್ಟು ಬತ್ತೀವಿ ಅಂತೀರಾ ಬರ್ರಿ. ಆದರೆ ಪೂಜೆ ಇಷ್ಯದಾಗೆ ಈಗಲೆ ತೀರ್ಮಾನ ತಕಾಳಾದ್ ಬ್ಯಾಡ ,ಮುಂದೆ ಯಾವಾಗಾದ್ರೂ ನಾವೆ ಕುತ್ಕಂಡು ಮಾತಾಡಾನಾ ,  ಏನ್ರಪ?  ಏನಂತಿರಿ?"
ಕೆಲ ಸವರ್ಣಿಯರು ಇದಕ್ಕೆ ವಿರೋಧ ಮಾಡಲು ಹೊರಟರು ಅವರ ಅಕ್ಕಪಕ್ಕಗಳಲ್ಲಿ ಇದ್ದವರು ಪೊಲೀಸ್ ಇರುವುದು ಮತ್ತು ಸಮಸ್ಯೆ ಬಗ್ಗೆ ತಿಳಿಹೇಳಿ ಸುಮ್ಮನಿರಿಸಿದರು .

"ಆಗಲಿ ನಾವು ಕಂಪ್ಲೇಂಟ್ ವಾಪಸ್ ತಗೋತಿವಿ ಆದರೆ ಇವತ್ತೇ ನಾವು ಗುಡಿ ಒಳಗೆ ಬರ್ತಿವಿ" ಪಟ್ಟು ಹಿಡಿದ ಕೃಷ್ಣ
ವಿಧಿಯಿಲ್ಲದೆ ಒಪ್ಪಿದರು ಗೌಡರು .
"ಸಾರ್ ನಾನು ಕಂಪ್ಲೇಂಟ್ ವಾಪಾಸ್ ಪಡೀತಿನಿ " ಎಂದ ಕೃಷ್ಣ
"ಓಕೆ ಮತ್ತೆ ಸಣ್ಣ ಪುಟ್ಟದ್ದಕೆಲ್ಲ ಸ್ಟೇಷನ್ ಕಡೆ ಬರ್ಬೇಡಿ ಜಗಳ ಆಡ್ಬೇಡಿ ಶಾಂತಿ ಸುವ್ಯವಸ್ಥೆ ಕಾಪಾಡಿ ,ಎಂದು ಟೀ ಲೋಟ ಕೆಳಗಿಟ್ಟು ಬರ್ತೀವ್ರಿ ಗೌಡರೆ, ತೆಗಿಯಪ್ಪ ಗಾಡಿ" ಎಂದು ಜೀಪ್ ಹತ್ತಿದರು ಇನ್ಸ್ಪೆಕ್ಟರ್.

ಜೀಪ್ ಇಂಜಿನ್ ಬಿಸಿಯಾಗಿ ಬುರು....ಬುರು.... ಎಂದು ಐಮಂಗಲ ಕಡೆ ಮುಖಮಾಡಿದರೆ , ಹಟ್ಟಿಯವರು ಮಾರಮ್ಮನ ಗುಡಿಯ  ಒಳಗೆ ಪ್ರವೇಶ ಮಾಡುವಾಗ ಸವರ್ಣಿಯರು ಬುರು...ಬುರು... ಎನ್ನುತ್ತಾ ಮುಖ ಗಂಟಿಕ್ಕಿಕೊಂಡು ನೋಡುತ್ತಾ, ನಿಂತರು.


*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
9900925529.







ಪ್ರತಿನಿಧಿ. ೧೯/೨/೨೨


 

ಸಿಂಹ ಧ್ಬನಿ ೧೯/೨/೨೨


 

ಪ್ರಜಾಪ್ರಗತಿ ೧೯/೨/೨೨


 

18 February 2022

ಗಾಚಾರ ಬಿಡಿಸಿ ಬಿಡ್ತೀನಿ ..


 


ಗಾಚಾರ ಬಿಡಿಸಿಬಿಡ್ತೀನಿ...



ಇಪ್ಪತ್ತೆರಡು ವರ್ಷಗಳ ನನ್ನ ಶಿಕ್ಷಕ ವೃತ್ತಿಯಲ್ಲಿ ಹಲವಾರು ಸಹೋದ್ಯೋಗಿಗಳು ನನಗೆ ಸಲಹೆ ಮಾರ್ಗದರ್ಶನ ಸಹಕಾರ ನೀಡಿರುವರು ಅವರೆಲ್ಲರನ್ನೂ ನೆನಯುತ್ತಾ ಅವರಿಗೆ ಧನ್ಯವಾದಗಳನ್ನು ಹೇಳುತ್ತಾ ಅವರೊಂದಿಗೆ ಇದ್ದ ಸಮಯದಲ್ಲಿ ಅವರ ಹಾವಭಾವ, ಭಾಷೆ ಮುಂತಾದವುಗಳು ಇತರರಿಗಿಂತ ಭಿನ್ನವಾಗಿ ಎಲ್ಲರನ್ನೂ ಸೆಳೆಯುತ್ತಿದ್ದವು .ಅವು ಈಗಲೂ ನನ್ನ ಕಣ್ಣ ಮುಂದೆ ಬರುತ್ತವೆ . ಅಂತಹ ಕೆಲ ಸಹೋದ್ಯೋಗಿ ಮಿತ್ರರ ಕುರಿತಾದ ಕೆಲ ಮಾತುಗಳು. 

ಹಿರಿಯರಾದ ಕೆಂಚವೀರ್ ಸರ್ ರವರು ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ಈಗ  ನಿವೃತ್ತಿ ಹೊಂದಿದ್ದಾರೆ. ಅವರು ಶಾಲೆಯಲ್ಲಿ ಮಕ್ಕಳ ಮುಂದೆ ಪದೇ ಪದೇ" ಗಾಚಾರ ಬಿಡಿಸಿಬಿಡ್ತೀನಿ ನೋಡು" ಎಂದು ಬೈಯುತ್ತಿದ್ದರು. ಶಾಲೆಯ ಬೆಳಗಿನ ಪ್ರಾರ್ಥನೆಯ ಸಮಯದಲ್ಲಿ ಮಕ್ಕಳ ಮುಂದೆ  ಆ ಶಿಕ್ಷಕರು ಗಾಚಾರ.... ಅಂದ ತಕ್ಷಣ " ಬಿಡಿಸಿಬಿಡ್ತೀನಿ......ಎಂದು ಮಕ್ಕಳು ಮೆಲುದನಿಯಲ್ಲಿ ಹೇಳುವ ಪರಿಪಾಠ ವಾಗಿತ್ತು. ಇದು ಕೆಲವೊಮ್ಮೆ ಅವರಿಗೂ ಕೇಳಿ ಇನ್ನೂ ಜೋರಾಗಿ ಗಾಚಾರ ....... ಎಂದು ಮೈಕ್ ನಲ್ಲಿ ಬೈಯಲು ಶುರುಮಾಡುತ್ತಿದ್ದರು.ಇದನ್ನು ಕೇಳಿ ಮಕ್ಕಳು ಮುಸಿ ಮುಸಿ ನಗುತ್ತಿದ್ದರು .ಶಿಕ್ಷಕರೂ ನಗು ತಡೆಯದೇ ನಕ್ಕುಬಿಡುತ್ತಿದ್ದೆವು .ನಮ್ಮ ಕಡೆಗೆ ತಿರುಗಿದ ಅವರು " ಏನ್ ಸಾರ್ ನೀವು ನಗ್ತೀರಾ?" ಎಂದು ರೇಗಿ ಏಕ್ ಸಾತ್.... ರಾಷ್ಟ್ರಗೀತ್ ಶುರೂಕಾರ್.... ಎನ್ನುವ ಬದಲು...

ಏಕ್ ಸಾತ್ ಗಾಚಾರ.... ಎಂದರು. ಮತ್ತೆ ಎಲ್ಲರೂ ಗೊಳ್ ಎಂದು ನಕ್ಕರು. ಅವರೂ ನಗುತ್ತಾ ತಲೆ ಕೆರೆದುಕೊಂಡು ಏಕ್ ಸಾತ್ ರಾಷ್ಟ್ರಗೀತ್ ಶುರುಕಾರ್ .....ಎಂದರು.

ಇಂತಹ ಸವಿನೆನಪುಗಳ ನೀಡಿದ ಕೆಂಚವೀರ್ ಸರ್ ಬಹಳ ಒಳ್ಳೆಯ ಶಿಕ್ಷಕರು. ಸ್ವಲ್ಪ ಕೋಪ ಬಿಟ್ಟರೆ ಮಕ್ಕಳ ಬಗ್ಗೆ ಅಪಾರ ಕಾಳಜಿಯ ಶಿಕ್ಷಕರು.

ಅವರ ನಿವೃತ್ತಿ ಜೀವನ ಸುಖಕರವಾಗಿರಲಿ. ಕೆಂಚವೀರ್ ಸರ್ ನಿಮ್ಮ ಜೊತೆಯಲ್ಲಿ ಸಹೋದ್ಯೋಗಿಯಾಗಿ ಕೆಲಸ ಮಾಡಿದ್ದು ಬಹಳ ಖುಷಿ ನೀಡಿದೆ.ನಿಮಗೆ ಶುಭವಾಗಲಿ



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

17 February 2022

ಪ್ರಶಂಸಿಸೋಣ.


 

ಪ್ರಶಂಸಿಸೋಣ.

ಪ್ರಶಂಸೆ ಮತ್ತು ಶಿಕ್ಷೆ ಶಿಕ್ಷಣದ ಅವಿಭಾಜ್ಯ ಅಂಗಗಳು .ಇದು ಕೇವಲ ಮಕ್ಕಳಿಗೆ ಮಾತ್ರ ಸೀಮಿತವಾದ ಸಂಕುಚಿತವಾದ ಅರ್ಥದಲ್ಲಿದೆ ಎಂದು ಭಾವಿಸಬೇಕಿಲ್ಲ. ಎಲ್ಲಾ ಕಾಲಕ್ಕೂ ಎಲ್ಲಾ ವಯೋಮಾನದವರೂ ಅಪೇಕ್ಷಿಸುವ ಪ್ರಶಂಸೆ ಪ್ರತಿಯೊಬ್ಬರ ಜೀವನದಲ್ಲಿ ಮಹತ್ವದ ಸ್ಥಾನ ವಹಿಸುತ್ತದೆ. ಪುಟ್ಟ ಪ್ರಶಂಸೆ ಮುಂದೊಂದು ದಿನ ದೊಡ್ಡ ಆಟಗಾರನ ಹುಟ್ಟಿಗೆ ಕಾರಣವಾಗಬಹುದು, ಕವಿಯ ಉದಯವಾಗಬಹುದು, ನಟನು ಬೆಳಕಿಗೆ ಬರಬಹುದು. ಹಾಗಾಗಿ ಸೂಕ್ತ ಸಂದರ್ಭದಲ್ಲಿ ಸಣ್ಣದೊಂದು ಪ್ರಶಂಸೆ ಕೊಟ್ಟರೆ ನಾವು ಕಳೆದುಕೊಳ್ಳುವುದೇನೂ ಇಲ್ಲ ಬದಲಿಗೆ ನಮ್ಮೆದುರಿಗೆ ಇರುವವರ ಮುಖಚಹರೆಯಲ್ಲಿ ಕಾಣುವ ಆನಂದದ ಗೆರೆಗಳು ಸ್ಪಷ್ಟವಾಗಿ ಗೋಚರಿಸಿ ನಾವೂ ನಮಗರಿವಿಲ್ಲದೇ  ಸಂತೋಷಪಡುತ್ತೇವೆ. 
ನನಗೆ ಒಮ್ಮೆ ಒಂದು ಪೋನ್ ಬಂತು ಆ ಕಡೆಯಿಂದ " ಸಾರ್ ನಾನು ನಿಮ್ಮ ಸ್ಟೂಡೆಂಟ್ ಸರ್. ನಾನೀಗ ಗೌರ್ಮೆಂಟ್ ಡಿಗ್ರಿ ಕಾಲೇಜ್ ನಲ್ಲಿ ಪ್ರೊಫೆಸರ್ ಆಗಿ ಕೆಲ್ಸ ಮಾಡ್ತಾ ಇದಿನಿ. ಅದಕ್ಕೆ ಕಾರಣ ನೀವು ಅಂದು ಕೊಟ್ಟ ಪ್ರೋತ್ಸಾಹವೇ ಕಾರಣ ಸರ್. ನಾನು ಟೆಂಥ್ ನಲ್ಲಿ ಇದ್ದಾಗ ನನಗೆ ಸೋಷಿಯಲ್ ಸೈನ್ಸ್ ಸೆಮಿನಾರ್ ಮಾಡಲು ಅವಕಾಶ ಕೊಟ್ರಿ .ನಾನು ಸೆಮಿನಾರ್ ಮಾಡಿದ ಮೇಲೆ ನನ್ನ ಬೆನ್ನು ತಟ್ಟಿ ವೆರಿ ಗುಡ್ ಅಂದಿರಿ .ಜೊತೆಗೆ ನನ್ನ ಗೆಳೆಯರಿಗೆ ಚಪ್ಪಾಳೆ ತಟ್ಟಲು ಹೇಳಿದಿರಿ. ಅಂದು ನಾನು ಟೀಚರ್ ಆಗಲು ನಿರ್ಧಾರ ಮಾಡಿದೆ ಸರ್ " ಎಂದು ಒಂದೇ ಸಮನೆ ಸಂತಸದಿಂದ ಹೇಳುತ್ತಿದ್ದ .ನನಗೂ ಬಹಳ ಖುಷಿಯಾಗಿ ಪೋನ್ ನಲ್ಲೇ ಅವನನ್ನು ಹರಸಿದೆ.

ಈ ರೀತಿಯಲ್ಲಿ ನೀಡಿದ ಸಣ್ಣ ಪ್ರಶಂಸೆಗಳು ಮತ್ತೊಬ್ಬರ ಜೀವನದಲ್ಲಿ ಮಹತ್ತರವಾದ ಬದಲಾವಣೆಗಳನ್ನು ತರಬಹುದು.

ಈ ವರ್ಷ ಎಂಟನೆ ತರಗತಿ ಓದುವ ವಿದ್ಯಾರ್ಥಿಗಳಿಗೆ ಒಂದು ಶಾಲಾ ಗೋಡೆ ಪತ್ರಿಕೆ ಮಾಡಿ ಎಂದು ಮಾರ್ಗದರ್ಶನ ಮಾಡಿದೆ.ಮಕ್ಕಳೇ ಒಂದು ಡ್ರಾಯಿಂಗ್ ಶೀಟ್ ತಂದು ಬಾರ್ಡರ್ ಹಾಕಿ ವಿವಿಧ ಸುದ್ದಿಗಳ ಪತ್ರಿಕೆ ಸಿದ್ಧಪಡಿಸಿದರು ಅದಕ್ಕೆ ಸಣ್ಣ ಪ್ರಶಂಸೆ ನೀಡಿದೆ. ನಮ್ಮ ಶಾಲೆಯ ಮುಖ್ಯ ಶಿಕ್ಷಕಿ ರವರು ಮತ್ತು ಶಿಕ್ಷಕರೂ ಸಹ ಪ್ರೋತ್ಸಾಹ ನೀಡಿದರು   ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದಾಗ ಮೆಚ್ಚುಗೆ ಸೂಚಿಸಿ  ಕೆಲ ತಪ್ಪುಗಳನ್ನು ತಿದ್ದಿಕೊಳ್ಳಲು ಸಲಹೆ ನೀಡಿದರು. ಈಗ ಪ್ರತಿ ಸೋಮವಾರ ನಮ್ಮ ಶಾಲೆಯಲ್ಲಿ ಒಂದು ಸುಂದರ ಗೋಡೆ ಪತ್ರಿಕೆ ಸಿದ್ದವಾಗುತ್ತದೆ .ಅದರಲ್ಲಿ ನಮ್ಮ ಮಕ್ಕಳ ಕವನ, ಕಥೆ ,ಡ್ರಾಯಿಂಗ್ ಇತ್ಯಾದಿ ಪ್ರಕಟವಾಗುತ್ತವೆ. ಇದರಿಂದ ಉತ್ತೇಜಿತರಾದ ನಮ್ಮ ಮಕ್ಕಳು ರಾಜ್ಯ ಮಟ್ಟದ ಪತ್ರಿಕೆಗಳಿಗೆ ತಮ್ಮ ಕಥೆ ಕವನ ಕಳಿಸಿದರು .ಅವು ಪತ್ರಿಕೆಗಳಲ್ಲಿ ಪ್ರಕಟವೂ ಆಗಿವೆ .ಆಗ ಆ ಮಕ್ಕಳ ಕಣ್ಣಲ್ಲಿ ಕಂಡ ಆನಂದವನ್ನು ನಾನು ನೋಡಿ ಪುಳಕಿತನಾಗಿದ್ದೇನೆ.

ಹೀಗೆ ಒಂದೊಂದು ಸಣ್ಣ ಪ್ರಶಂಸೆ, ಮತ್ತು ಸರಿಯಾದ ಮಾರ್ಗದರ್ಶನ ವ್ಯಕ್ತಿತ್ವ ರೂಪಿಸಬಹುದು. ಇನ್ನೇಕೆ ತಡ ಯಾರಾದರೂ ಚಿಕ್ಕದಾದ   ಉತ್ತಮ ಕೆಲಸ ಮಾಡಿದರೆ ಒಂದು ಪ್ರಶಂಸೆ ನೀಡೋಣ. ಹೀಗೆ ಮಾಡುವುದರಿಂದ  ಅಷ್ಟಕ್ಕೂ ನಾವೇನೂ ಕಳೆದುಕೊಳ್ಳುವುದಿಲ್ಲವಲ್ಲ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ.
ತುಮಕೂರು.


16 February 2022

ಮಂಗಳ .೧೬/೨/೨೨


 

ಸಿಂಹ ದ್ವನಿ ೧೬/೨/೨೨


 

ದೇವರು ಕೊಟ್ಟ ಗಿಪ್ಟ್. ಕತೆ


 



ದೇವರು ಕೊಟ್ಟ ಗಿಪ್ಟ್.


ಈ ವರ್ಷದ ಹುಟ್ಟು ಹಬ್ಬದ ಮರುದಿನವೇ ಮುಂದಿನ ಹುಟ್ಟು ಹಬ್ಬಕ್ಕೆ ಕೌಂಟ್ ಡೌನ್ ಮಾಡುತ್ತಾ , ಪದೇ ಪದೇ ಅಪ್ಪ ಅಮ್ಮ ಮತ್ತು ತಂಗಿಗೆ ನನ್ನ ಹುಟ್ಟು ಹಬ್ಬ ಇಷ್ಟು ದಿನ ಉಳಿದಿದೆ ಎಂದು ಮುಂಬರುವ ಹಬ್ಬಕ್ಕೆ ದಿನವೂ ತಯಾರುಗುತ್ತಿದ್ದ ತರಲೇ ಸುಬ್ಬ! 

ಹೆಸರು ಸುಬ್ರಮಣ್ಯ ಆದರೂ ಅವನ ತರಲೆಗಳಿಂದ ಮನೆಯಲ್ಲಿ ತರಲೇ ಸುಬ್ಬನೆಂಬ ಹೆಸರು ಖಾಯಂ ಆಗಿತ್ತು. 

ಓದು ಬರೆಹದಲ್ಲಿ ಆರಕ್ಕೇರದ ಮೂರಕ್ಕಿಳಿಯದ ಸುಬ್ಬ .ಮನೆಬಿಟ್ಟು ಎಲ್ಲೂ ಹೋಗುತ್ತಿರಲಿಲ್ಲ .ಅಷ್ಟರ ಮಟ್ಟಿಗೆ ಅನ್ಯರಿಗೆ ನಿರುಪದ್ರವಿ ಆದರೆ ಮನೆಯಲ್ಲಿ ಮಿತಿಮೀರಿದ ತರಲೆ.


ಅಂತೂ ಅವನು ಕಾತುರದಿಂದ ಕಾಯುವ ದಿನ ಸಮೀಪಿಸಿತ್ತು . ಆ ನಗರದ ಬಹುದೊಡ್ಡ ಬಟ್ಟೆ ಮಳಿಗೆಗೆ ಕರೆದುಕೊಂಡು ಹೋಗಿ ತಂದೆ ಉತ್ತಮ ಬ್ರ್ಯಾಂಡ್ ನ ಬಟ್ಟೆಗಳನ್ನು ಕೊಡಿಸಿದರು. ಕೇಕ್ ಪ್ಯಾಲೇಸ್ ನಲ್ಲಿ ವೆನಿಲಾ ಐಸ್ ಕೇಕ್ ಆರ್ಡರ್ ಮಾಡಿ ಬಂದರು. ಅಮ್ಮ ನಾಳಿ‌ನ ಹುಟ್ಟು ಹಬ್ಬದ ಸಂಭ್ರಮಕ್ಕೆ ಸುಬ್ಬನ ಮೆಚ್ಚಿನ ಸಬ್ಬಕ್ಕಿ ಪಾಯಸ ಮಾಡಲು ತಯಾರಿ ಮಾಡಿಕೊಂಡರು.

ಬೆಳಿಗ್ಗೆ ಬೇಗನೆ ಎದ್ದು ಮಗನಿಗೆ ವಿಶ್ ಮಾಡಿದ ಅಮ್ಮ .ಯಾಕೋ ತಲೆನೋವು ಎಂದು ಅಮೃತಾಂಜನ್ ಸವರಿಕೊಂಡರು. ಆದರೂ ತಲೆನೋವು ಕಡಿಮೆಯಾಗದೇ ಕೋಣೆಗೆ ಹೋಗಿ ಸ್ವಲ್ಪ ಕಾಲ ಮಲಗಿದರು .ನೋವು ಹೆಚ್ಚಾಗತೊಡಗಿತು. ಆಸ್ಪತ್ರೆಗೆ ಹೋಗೋಣ ಎಂದರು ಡ್ಯೂಟಿಗೆ  ಹೊರಟಿದ್ದ ಗಂಡ ರಜೆ ಹಾಕಿ  ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಿದ್ಧರಾದರು ನಾನೂ ಆಸ್ಪತ್ರೆಗೆ ಬರುವೆ ಎಂದು ಮಗ ಹೇಳಿದಾಗ ಬೇಡ ಶಾಲೆಗೆ ಹೋಗು ಎಂದು ಹೇಳಿ ಆಸ್ಪತ್ರೆ ಕಡೆ ಹೊರಟರು. ಆಸ್ಪತ್ರೆಯಲ್ಲಿ ಅದೂ ಇದೂ ಟೆಸ್ಟ್ ಗಳು ಆದ ಬಳಿಕ ಅಮ್ಮನಿಗೆ ಅನೀಮಿಯಾ ಎಂದು ತಿಳಿದು ಅಡ್ಮಿಟ್ ಮಾಡಿದರು. ಸಂಜೆ ಮಗ ಆಸ್ಪತ್ರೆಗೆ ಬಂದ. ನಾನು ಇವತ್ತು ನಿನಗೆ  ಸಬ್ಬಕ್ಕಿ ಪಾಯಸ ಮಾಡ್ಬೇಕು, ನೀನು ಕೇಕ್ ಕಟ್ ಮಾಡೋದ ನೋಡ್ಬೇಕು ಅಂದ್ಕೊಂಡೆ ,ಈಗ ಈ ಆಸ್ಪತ್ರೆಯ ಬೆಡ್ ಮೇಲಿದೇನೆ, ಈ ವರ್ಷ ನಿನಗೆ ಏನೂ ಗಿಪ್ಟ್ ಕೊಡೋಕೆ ಆಗ್ತಾ ಇಲ್ಲ. ಎನೋ ಮಾಡೋದು? ಎಂದು ಬೇಸರದಿ ಅಮ್ಮ ಅಂದಾಗ " ಅಮ್ಮಾ ಅದನ್ನೆಲ್ಲಾ ತಲೆ ಕೆಡಿಸ್ಕೊ ಬೇಡ  ಇದುವರೆಗೆ ಪ್ರತಿವರ್ಷ ನಾನು ಹುಟ್ಟಿದ ದಿನಾನಾ ಗ್ರಾಂಡ್ ಆಗಿ ಆಚರಣೆ  ಮಾಡಿದಿರ, ನನಗೆ ಈಗ ಏನೂ ಬೇಡ ನೀನೆ ನನಗೆ ದೇವರು ಕೊಟ್ಟ ದೊಡ್ಡ ಗಿಪ್ಟ್ .ಸುಮ್ನೆ ರೆಸ್ಟ್ ತಗೋಳಮ್ಮ.ಆಯಾಸ ಆಗತ್ತೆ ಜಾಸ್ತಿ ಮಾತಾಡ್ಬೇಡ.ಎಂದ ಮಗನ ನೋಡಿ ಅವಳ ಕಣ್ಣಿಂದ ನಾಲ್ಕು ಹನಿಗಳು ಉದುರಿದವು....


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.

ತುಮಕೂರು


12 February 2022

ಕನಸಿನೂರಿನ ಸಾಹುಕಾರ .


 



ಕನಸಿನೂರಿನ ಸಾಹುಕಾರ 



ಪ್ರತಿ ರಾತ್ರಿ ಕಾಡುವನು 

ಕಣ್ಣು ಮುಚ್ಚಿದರೆ 

ಅವನದೇ ಹಾಜರಿ.

ಅವನಿದ್ದರೆ ಮನದಲೇನೋ 

ಪುಳಕ ,ಅವ್ಯಕ್ತ ಸಡಗರ|

ನಲ್ಲ,  ಸಾಮಾನ್ಯದವನಲ್ಲ 

 ಕನಸಿನೂರಿನ ಸಾಹುಕಾರ ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ 

ತುಮಕೂರು


ಉದಕದೊಳಗಿನ ಕಿಚ್ಚು. ಭಾಗ ೧೮.

 



ತಿಪ್ಪೇರುದ್ರಸ್ವಾಮಿ ಬಸ್ ಹತ್ತಿದ ಮುಕುಂದಯ್ಯನಿಗೆ ಇಂದು ಏನೋ ಸಾಧನೆ ಮಾಡಿದ ಸಂತಸ .ಅಳಿಯನಿಗೆ ಒಳ್ಳೆಯ ಕಾಲೇಜು ಸೇರಿಸಿರುವೆ ,ಇವನು ಚೆನ್ನಾಗಿ ಓದಿ ಡಾಕ್ಟರ್, ಇಲ್ಲವೇ  ಇಂಜಿನಿಯರ್, ಇಲ್ಲ ಬಿಎಸ್ಸಿ ಒದಿ ಒಳ್ಳೆಯ ಕೆಲಸ ತಗಂಡೇ  ತಗಂತಾನೆ ಮುಂದೆ ಅವರಮ್ಮನ್ನ ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂದು ಮನದಲ್ಲಿ ಸಂತಸ ಪಡುತ್ತಾ ಕನಸ ಕಾಣುತ್ತಿದ್ದರು.

ಸತೀಶನಿಗೆ ಮಾತ್ರ ಮನಸ್ಸು ಸರಿಯಿರಲಿಲ್ಲ ,ಬಸ್ ನಿಲ್ದಾಣದ ಬಳಿ ಯಾರೊ ಹೇಳಿದ ಮಾತು ಇನ್ನೂ ಅವನ ಕಿವಿಯಲ್ಲಿ ಗುಯ್ ಗುಡುತ್ತಿತ್ತು. ಬೇಡವೆಂದರೂ ಏನೇನೂ ಕೆಟ್ಟ ಯೋಚನೆಗಳು ಬರತೊಡಗಿದವು. ಮತ್ತೊಮ್ಮೆ ದೇವರಲ್ಲಿ ಬೇಡಿದ ದೇವರೆ ಆ ಹುಡುಗಿ ನನ್ನ ಸುಜಾತ ಆಗಿರದಿರಲಿ! ಇಂದು ಈ ಬಸ್ ಯಾಕೆ ಇಷ್ಟು ನಿಧಾನವಾಗಿ ಹೋಗುತ್ತಿದೆ ,ಪ್ರೇಮಿಗಳ ಸಮಾಗಮಕ್ಕೆ  ಸಮಯ ನಿಧಾನವಾಗಿ ಚಲಿಸುವುದಂತೆ,ಅಥವಾ ದೀರ್ಘವಾಗಿ ಕಾಣುವುದಂತೆ, ಸಾವಾದ ಮನೆಗೆ ಅಥವಾ ಅಪಘಾತವಾದ ಸ್ಥಳ ನೋಡಲು ಹೊರಟರೆ ದಾರಿ ಬೇಗ ಸಾಗದಂತೆ .ಇಂದು ಅದೇಕೋ ನಿಜ ಎನಿಸತೊಡಗಿದೆ. ಹರ್ತಿಕೊಟೆ ಬಳಿ ಅಪಘಾತ ಆಗಿದೆ ಅಂದರು.ಈ  ಬಸ್ ಗೆ ಪವಾಡಪುರುಷ ತಿಪ್ಪೇರುದ್ರಸ್ವಾಮಿ ಎಂದು ಹೆಸರಿಟ್ಟಿದ್ದಾರೆ. ಇದು ನೋಡಿದರೆ ಒಳ್ಳೆಯ ಜಟಕಾ ಬಂಡಿ ಹೋದ ಹಾಗೆ ಹೋಗುತ್ತಿದೆ . ಮ್ಯಾಕಲೂರಹಳ್ಲಿ ಗೇಟ್ ದಾಟೋದಕ್ಕೆ ಇಷ್ಟು ಹೊತ್ತು ಬೇಕೆ? ಇನ್ನೂ ನೂರಾಮೂರುಗೇಟ್ ,ಬಾಲೇನಹಳ್ಳಿ ಗೇಟ್ ,ಚನ್ನಮ್ಮನಹಳ್ಳಿ ಗೇಟ್ ದಾಟಿ ಎರಡು ಕಿಲೋಮೀಟರ್ ದಾಟಿದರೆ ಸಿಗೋದು ಹರ್ತಿಕೋಟೆ .ಅಲ್ಲಿ ಯಾರಾದರೂ ಮಾಹಿತಿ ಹೇಳಬಹುದು, ದೇವರೆ ಅವಳಿಗೆ ಏನೂ ಅಗದಿರಲಿ,

.ಮತ್ತೆ ಮನದಲೆ ಅಂದುಕೊಂಡ ಸತೀಶ .

ಅಂತೂ ಬಸ್ ಹರ್ತಿಕೋಟೆಯ ಬಳಿ ಬಂದಿತು ಸತೀಶನ ಹೃದಯ ಬಡಿತ ಜೋರಾಯಿತು .ಬಸ್ ಎಡಗಡೆಯ ರಸ್ತೆಯ ಭಾಗದಲ್ಲಿ  ಒಂದು ಪಲ್ಟಿ ಹೊಡೆದಿದೆ ಎಂದು ಹೇಳಿದ ನೆನಪು "ಹರ್ತಿಕೊಟೆ...  ಹರ್ತಿಕೊಟೆ .... ಬಸ್ ಕ್ಲೀನರ್ ,ಮತ್ತು ಕಂಡಕ್ಟರ್ ವಿಭಿನ್ನವಾದ ಧ್ವನಿಯಲ್ಲಿ ಕೂಗಿ ಯಾರ್ ಇಳಿಯಾದ್ ಬರ್ರಿ .. "ಎಂದರು .

ಸತೀಶ ಸೀಟಿಂದ ಎದ್ದು ಇಳಿಯಲು ಹೊರಟ  "ಏ ಇದಿನ್ನ ಹರ್ತಿಕೊಟೆ ಕಣಲೆ ಕುತ್ಕ ಇನ್ನೂ ಯರಬಳ್ಳಿ ಬಂದಿಲ್ಲ ಇಂಗೆ ಪರ್ಪಾಟಾದರೆ ದಿನ ಕಾಲೇಜಿಗೆ ಎಂಗ್ ಓಡಾಡ್ತಿಯೋ? "

ವ್ಯಂಗ್ಯವಾಗಿ ಬೈಯ್ದರು ಮುಕುಂದಯ್ಯ .ಎರಡು ಮೂರು ಸೀಟಿನ ಜನರು ನಕ್ಕರು. ಬೇಸರದಿಂದ ಸೀಟಿನಲ್ಲಿ ಕುಳಿತ ಸತೀಶ. ಬಸ್ ಕಪಿಲೆ ಹಟ್ಟಿ ದಾಟಿ ,ಕಳವಿಭಾಗಿ ಗೇಟ್ ಆದಮೇಲೆ ದೊಡ್ಸೇತುವೆ ದಾಟುತ್ತಿದ್ದಂತೆ ಆ ಯರಬಳ್ಳಿ......ಬರ್ರಿ.....ಯರಬಳ್ಳಿ..,. ಎಂದು ರಾಗವಾಗಿ ಕೂಗಿದ ಕಂಡಕ್ಟರ್ .

ಬಸ್ ಇಳಿದ ತಕ್ಷಣ ಮತ್ತೆ ಅದೇ ಚಿಂತೆ ಅವಳ ಮನೆಗೆ ಹೋಗಿ ವಿಷಯ ತಿಳಿಯೆಲೆ? ಬ್ಯಾಡ ಮೊನ್ನೆ ಅವರ ಮನೆ ಹತ್ರ ಹೋದಾಗ "ಇಂಗೆಲ್ಲ ಪದೇ ಪದೇ ಮನೆ ಹತ್ರ ಬರ್ ಬಾರ್ದಪ್ಪ ಚೆನ್ನಾಗಿರಲ್ಲ" ಎಂದು ನಯವಾಗೆ ಬೈದಿದ್ದರು  ಸುಜಾತಳ ಅಮ್ಮ.ಮತ್ತೆ ಹೇಗೆ ವಿಷಯ ತಿಳಿಯೋದು ಎಂದು ತಲೆ ತಗ್ಗಿಸಿ ಮಾವನ ಹಿಂದೆ ನಡೆಯುವಾಗ 

" ಮುಕುಂದಣ್ಣ ಹಿರಿಯೂರಿಗೆ ಹೋಗಿದ್ರಾ?" ಹೆಣ್ಣು ಧ್ವನಿ ಕೇಳಿತು. ಮುಂದೆ ನೋಡಿದ ತನ್ನ ಕಣ್ಣ ತಾನೆ ನಂಬಲಿಲ್ಲ ಅದೇ ಸುಜಾತ! ಇದು ಕನಸಲ್ಲ ಎಂದು ತನ್ನನ್ನು ಜಿಗುಟಿಕೊಂಡು ಖಾತ್ರಿ ಮಾಡಿಕೊಂಡ

" ಊಂ ಕಣಮ್ಮ ಇವನ್ನ ಕಾಲೇಜಿಗೆ ಸೇರಿಸಿ ಬಂದೆ" 

" ನೀನ್ ಎಲ್ಲಿ ಸೇರಿದೆಮ್ಮ ಕಾಲೇಜಿಗೆ "

" ನಾಳೆ ನಾವು ಹಿರಿಯೂರಿಗೆ ಹೋಗ್ತಿವಿ ಅಣ್ಣ ,ಇವತ್ತು ನಾವು ಕಾಲೇಜ್ ಸೇರಾಕೆ ಬರ್ಬೇಕಾಗಿತ್ತು ನಮ್ಮಪ್ಪಗೆ ಚಳ್ಳಕೆರೆಲೇನೋ ಮೀಟಿಂಗ್ ಇತ್ತಂತೆ ಹೋದ್ರು . ಅದಕ್ಕೆ ಇವತ್ತು ಬರಲಿಲ್ಲ" ಸತೀಶನ ಮುಖ ನೋಡಿ ಹೇಳಿದಳು .

"ಸರಿ ಅಣ್ಣ ಅಂಗಡಿಗೆ ಟೀ ಪುಡಿ ತರಬೇಕು ಬತ್ತಿನಿ" ಎಂದು ಹೊರಟಳು.

ಮುಂದೆ ಹೋಗಿ ಹಿಂತಿರುಗಿ ನೋಡಿ ನಕ್ಕಳು , ಸತೀಶನೂ ಹಿಂತಿರುಗಿ ನೋಡಿದ ,ಸತೀಶ ನಗಲಿಲ್ಲ ,ಅವನಿನ್ನು ಶಾಕ್ ನಿಂದ ಹೊರಬಂದಿರಲಿಲ್ಲ ,ಸುಜಾತಾ ಕೈಯನ್ನು ಅಲ್ಲಾಡಿಸುತ್ತಾ ಹುಬ್ಬು ಮೇಲೇರಿಸಿ ಏನು? ಯಾಕೆ? ಎಂದು ಸನ್ನೆ ಮಾಡಿದಳು . ಅಷ್ಟರಲ್ಲಿ ಮುಕುಂದಯ್ಯ 

" ಯಾಕಲ ಹಿಂದಕ್ ಸರ್ಕಂಡೆ ಬಾರೋ ಮನೆ ಹತ್ರ ಬಂತು .ಅಜ್ಜಿಗೆ  ನೀನೆ ಮೊದ್ಲು ಹೇಳು ಕಾಲೇಜ್ ಸೇರ್ದೆ ಅಂತ ಖುಷಿಯಾಗುತ್ತೆ ಅಜ್ಜಿ " ಎಂದರು .

ಪ್ರತಿದಿನ ಬೆಳಿಗ್ಗೆ ಜೈರಾಂ ಬಸ್ಗೆ ಹೋಗಿ ಮಧ್ಯಾಹ್ನ ಎಸ್ .ಆರ್. ಇ 

.ಬಸ್ ಗೆ ಹಿಂತಿರುಗಿ ಬರುವುದು ಬಂದು  ಹೋಮ್ ವರ್ಕ್ ಮಾಡಿ, ಸಂಜೆ ಹೊತ್ತಿಗೆ ರೊಪ್ಪಕ್ಕೆ ಹೋಗಿ ಒಬ್ಬನೆ ಹುಲ್ಲು ತರುತ್ತಿದ್ದ ಆಗ ಗುರುಸಿದ್ದನ ನೆನಪಾಯಿತು. ಅವನಿದ್ದಿದ್ದರೆ ನನಗೆ ಸಹಾಯವಾಗುತ್ತಿತ್ತು ಎಂದುಕೊಂಡ ಸಂಜೆ ಹಾಲು ಕರೆಯಲು ಮುರಾರಿಗೆ ಸಹಾಯ ಮಾಡಿ   ,ಓದಿಕೊಳ್ಳಲು ಕುಳಿತರೆ ರಾತ್ರಿ ಏಳುವರೆ ಆಗಿರುತ್ತಿತ್ತು.


ಮೊದಲೆಡರಡು ದಿನ ಕಾಲೇಜ್ ಗೆ ಸುಜಾತ ಬಸ್ ಗೆ ಬರಲಿಲ್ಲ ಸೋಮವಾರ ಅಪ್ಪನ ಜೊತೆ ಬಂದು ಬಸ್ ಹತ್ತಿದಳು ಅಪ್ಪ ಬಸ್ ಹತ್ತಿಸಿ ಜೋಪಾನ ಎಂದು ಹೊರಟರು. ಇಂದೇಕೋ ಬಸ್ ಬೇಗ ಹಿರಿಯೂರಿಗೆ ಬಂದಂತಾಯಿತು ಸತೀಶನಿಗೆ .ಸರ್ಕಾರಿ ಆಸ್ಪತ್ರೆ ನಿಲ್ದಾಣದಲ್ಲಿ ಬಸ್ ನಿಂತಾಗ ಇಬ್ಬರೂ ಬಸ್ ಇಳಿದು ಮಾತನಾಡುತ್ತಾ ನಡೆದು ಸತೀಶ ಕಾಲೇಜು ಕಡೆ ತಿರುಗಿ "ಯಾಕೆ ಅಲ್ಲೆ ನಿಂತೆ ಬಾ ಒಳಗೆ "ಅಂದ .

" ನಂದು ಈ ಕಾಲೇಜ್ ಅಲ್ಲ ಅಗೋ ನೋಡು ಅದು ಎಂದು ಸ್ವಲ್ಪ ದೂರದಲ್ಲಿ ಇರುವ ಗಿರೀಶ ಕಾಲೇಜಿನ ಕಡೆ ತೋರಿಸಿದಳು" ಮತ್ತೊಂದು ಶಾಕ್ ನಿಂದ ಸತೀಶ

"ಅಯ್ಯೋ ಮೊದಲೆ ಗೊತ್ತಾಗಿದ್ದರೆ ನಾನು ಅಲ್ಲಿಗೆ ಸೇರುತ್ತಿದ್ದೆ." ಅಂದ 

"ಸತು ಅದು ಬರೀ ಹುಡಿಗೀರ ಕಾಲೇಜು ನೀನೇನ್ ಹುಡುಗೀನ ನಕ್ಕಳು .ಇವನು ನಗಲಿಲ್ಲ .

"ಮಧ್ಯಾಹ್ನ  ಎಸ್ ಆರ್ ಇ ಬಸ್ ಹತ್ತರ ಬತ್ತಿನಿ" ಅಂದು ಹೊರಟೇ ಹೋದಳು.


ಎಂತಾ ಕೆಲ್ಸ  ಆತಪ್ಪ ನಾನೇನೋ ಇಬ್ಬರೂ ಒಂದೆ ಕಾಲೇಜು ಸೇರ್ತಿವಿ ಅಂತ ಅಂದ್ಕೊಂಡ್ರೆ ಇವಳು ಅದ್ಯಾವುದೋ ಗಿರೀಶ ಕಾಲೇಜ್ ಸೇರ್ಬಿಟ್ಟಿದ್ದಾಳೆ ಇದೆಲ್ಲಾ ಅವರ್ಪಂದೆ ಕಿತಾಪತಿ ಎಂದು ಬೈಯ್ದುಕೊಳ್ಳುತ್ತಾ ಕಾಲೇಜು ಕಾಪೌಂಡ್ ದಾಟಿ ಒಳ ಹೋದಾಗ ಕಾಲೇಜ್ ಅಂಗಳದಲ್ಲಿ ಯಾರೂ ಇರಲಿಲ್ಲ ಅಯ್ಯೋ ಲೇಟ್ ಆಯ್ತು ಆಗಲೆ ಲೆಕ್ಚರ್ ಕ್ಲಾಸ್ ತೆಗಂಡದಾರೆ ಎಂದು ಜೋರಾಗಿ ಓಡಿದ.

" ಮೇ ಐ ಕಮ್ ಇನ್ ಸರ್"

"ವೈ ಆರ್ ಯು ಲೇಟ್ "

"ಸಾರ್ ನಮ್ಮೂರಿಂದ ಬರೋ ಬಸ್ ಲೇಟಾಯ್ತು ಸರ್" ಕನ್ನಡದಲ್ಲೇ ಹೇಳಿದ 

" ಪ್ರಂ ಟುಮಾರೋ ಆನ್ವರ್ಡ್ಸ ಯು ಮಸ್ಟ್ ಕಮ್ ಇನ್ಟೈಂ ಅಂಡರ್ಸ್ಟ್ಯಾಂಡ್ " ಗುಡುಗಿದರು ಲೆಕ್ಚರ್ .

ಒಕೆ ಸರ್ ಎಂದು ಬಂದು ಕೊನೆ ಬೆಂಚಲ್ಲಿ ಮಾತ್ರ ಜಾಗವಿದ್ದದರಿಂದ ಅಲ್ಲೇ ಕುಳಿತುಕೊಂಡ.

" ತೀಟಾಸ್ ಆರ್ ವೆರಿ ಇಂಪಾರ್ಟೆಂಟ್ ಇನ್ ಮ್ಯಾತಮ್ಯಾಟಿಕ್ಸ್ ಕಾಸ್ತೀಟಾ, ಸಿಕ್ಯಾನ್ ತೀಟಾ,................ಹೀಗೆ ಏನೇನೊ ಬರಿ ಇಂಗ್ಲೀಷ್ ನಲ್ಲಿ ಹೇಳುತ್ತಾ ಇದ್ದರು ಲೆಕ್ಚರ್ ಈ ಪದ ಯಾವುದನ್ನೂ ಸತೀಶ ಇದುವರೆಗೂ ಕೇಳೇ ಇಲ್ಲ ,  ಲೆಕ್ಚರರ್ ಇಂಗ್ಲೀಷ್ನಲ್ಲಿ ಪಾಠ ಮುಂದುವರೆಸಿ ಮಧ್ಯ ಮಧ್ಯ ಏನೇನೊ ಪ್ರಶ್ನೆ ಕೇಳುತ್ತಿದ್ದರು. ಮುಂದೆ ಕುಂತಿರೋ ಹುಡುಗಿಯರು ಪಟ ಪಟ ಇಂಗ್ಲೀಷ್ ನಲ್ಲೇ ಉತ್ತರ ಹೇಳುತ್ತಿದ್ದರು .ಅವರು ಗುಡ್ ಎನ್ನುತ್ತಿದ್ದರು.ಅವರು ಏನಾದರೂ ನನ್ನ  ಪ್ರಶ್ನೆ ಕೇಳಿದರೆ ಏನಪ್ಪ ಗತಿ ಮರ್ಯಾದೆ ಹೋಗೋದು ಗ್ಯಾರಂಟಿ ಎಂದುಕೊಂಡು  ದೇವರೆ ನನ್ನ ಪ್ರಶ್ನೆ ಕೇಳದಿರಲಿ ಆ ಲೆಕ್ಚರರ್ ಎಂದು ಮನದಲ್ಲೇ ಬೇಡಿದ .

ಅಂತೂ ಮ್ಯಾತ್ಸ್ ಪೀರಿಯಡ್ ಮುಗಿತು.

ಬಯಾಲಜಿ ಮೇಡಂ ಬಂದರು ಅವರೂ ಇಂಗ್ಲೀಷ್ ನಲ್ಲೇ ಪಾಠ ಶುರುಮಾಡಿದರು.ಸೆಂಟ್ ಆನ್ಸ್ , ಅಸಂಪ್ಷನ್ ಶಾಲೆಯಲ್ಲಿ ಓದಿದ ಹುಡುಗ, ಹುಡುಗಿಯರಂತೆ ಮೇಡಂ ಹೇಳೋಕು ಮುಂಚೆನೇ ಏನೇನೋ ಇಂಗ್ಲೀಷ್ನಲ್ಲಿ ಹೇಳುತ್ತಿದ್ದರು. ಮೇಡಂ ವೆರಿಗುಡ್ ಎಂದು ಮುಂದಿನ ಪಾಯಿಂಟ್ ಗೆ ಹೋಗುತ್ತಿದ್ದರು. ಈ ಪಿರಿಯಡ್ ಮುಗಿದರೂ ಸತೀಶನ ತಲೆಯಲ್ಲಿ ಒಂದೇ ಒಂದು ಪದ ಹೋಗಲಿಲ್ಲ.

ಕನ್ನಡ ಭಾಷೆಯ ಪಿರಿಯಡ್ ಬಿಟ್ಟು ಉಳಿದೆಲ್ಲ ವಿಷಯಗಳಲ್ಲಿ ಪಾಠ ಕೇಳುವಾಗ ಸತೀಶನಿಗೆ ನಾನಾವುದೋ ಬೇರೆ ರಾಜ್ಯ ಅಲ್ಲಲ್ಲ ಬೇರೆ ದೇಶಕ್ಕೆ ಬಂದ ಅನುಭವ ಆಗುತ್ತಿತ್ತು. 

"ಯರಬಳ್ಳಿಯಲ್ಲಿ ಎಲ್ಲರೂ ಬಂದು  ನನ್ನ ಮಾತನಾಡಿಸುತ್ತಿದ್ದರು, ನೋಟ್ಸ್ ಕೇಳುತ್ತಿದ್ದರು, ಡೌಟ್ ಕೇಳ್ತಿದ್ದರು ,ಎಲ್ಲಾ ಮೇಷ್ಟ್ರು ನನ್ನ ಎಷ್ಟು ಚೆನ್ನಾಗಿ ಮಾತಾಡುಸ್ತಿದ್ರು ,ಇಲ್ಲಿಗೆ ಬಂದು ಒಂದ್ ವಾರ ಆದ್ರೂ ಯಾರೂ ಪರಿಚಯ ಇಲ್ಲ ,ನಾನು ಇಲ್ಲಿ ಕಾಲೇಜಿಗೆ ಸೇರಲೇ ಬಾರದಾಗಿತ್ತು ನಮ್ಮ ಜಯರಾಮ  ಮಾವನ ಮಗ ಶಂಕರಣ್ಣ ಹೇಳಿದ್ದು ಈಗ ನೆನಪಿಗೆ ಬಂತು .

" ನೀನು ಕನ್ನಡ ಮೀಡಿಯಂ ನಲ್ಲಿ ಓದಿರೋದು ನಿನಗೆ ಸೈನ್ಸ್ ಕಷ್ಟ ಆಗುತ್ತೆ ಬ್ಯಾಡ  ಸುಮ್ಮನೆ ಯಾಕೆ ಆರ್ಟ್ಸ್ ತಗಂಡು ಓದು "ಎಂದು ಸಲಹೆ ನೀಡಿದರು  ಆದರೆ ಮುಕುಂದಯ್ಯ ಮಾವ ನನ್ ಏನು ಕೇಳಲೇ ಇಲ್ಲ ಅವರೆ ಮನಸ್ಸಲ್ಲಿ ಡಾಕ್ಟರ್ ಇಂಜಿನಿಯರ್ ,ಏನೇನೋ ಯೋಚನೆ ಮಾಡಿ ನನ್ ತಂದು ಇಲ್ಲಿ ಸೇರಿಸಿದರು .

ನಾನು ಹೇಗೆ ಓದಲಿ ಎಂದು ಯೋಚಿಸುತ್ತಿರುವಾಗಲೆ ಲಾಂಗ್ ಬೆಲ್ ಆಯ್ತು 

ಬಸ್ ನಿಲ್ದಾಣದ ಹತ್ತಿರ ಬಂದ ಸುಜಾತ ನಿಂತಿದ್ದಳು. ಅವಳ ಮುಖದಲ್ಲೂ ನಗುವಿಲ್ಲ .ಸತೀಶನೆ ಹತ್ತಿರ ಹೋಗಿ "ಯಾಕೆ ಡಲ್ ಆಗಿದಿಯಾ?" ಕೇಳಿದ.

" ಅವರ್ ಪಾಠ ಮಾಡೋದು ನನಗೇನು ಅರ್ಥ ಆಗ್ತಿಲ್ಲ " ಅಳಲು ಶುರುಮಾಡಿದಳು.

" ಹೇ ಅಂಗೆಲ್ಲ ಅಳಬೇಡ ಕಂಟ್ರೋಲ್ ಮಾಡ್ಕೊ ,ಯಾರಾದರೂ ನೋಡಿದರೆ ನಾನೇ ಏನಾದರೂ ಮಾಡಿದೆ ಅಂತ ತಪ್ಪು ತಿಳ್ಕೊತಾರೆ ." ಸಮಾಧಾನ ಮಾಡಿದ ಸತೀಶ.

ಬಸ್ ನಲ್ಲಿ ಇಬ್ಬರಿಗೂ ಸೀಟು ಸಿಗದೆ ನಿಂತಿದ್ದರು ಇನ್ನೂ ಅಳು ಮೋರೆ ಹಾಕಿ ನಿಂತಿದ್ದಳು ಸುಜಾತ .ಆ ಕಡೆ ಈ ಕಡೆ ನೋಡಿ ಅವರ ಊರವರು ಯಾರೂ ಇಲ್ಲ ಎಂದು ಖಚಿತಪಡಿಸಿಕೊಂಡು ಮೆಲ್ಲಗೆ 

" ನನಗೂ ನಮ್ಮ ಕಾಲೇಜಿನಲ್ಲಿ ಮಾಡೋ ಪಾಠ ಒಂಚೂರು ಅರ್ಥ ಆಗಲ್ಲ, ನಾವು ಸೈನ್ಸ್ ತಗಾಬಾರ್ದಾಗಿತ್ತು" ಅಂದ

" ನನಗೆ ಸೈನ್ಸ್ ಬ್ಯಾಡ ಅಂದೆ ನಮ್ಮಪ್ಪ ತಂದು ಸೇರಿಸಿಬಿಟ್ರು"

" ನೀನಾದ್ರೂ ನಿನಗೆ ಬ್ಯಾಡ ಅಂದೆ ನನಗೆ ಮಾತಾಡಾಕೆ ಅವಕಾಶ ಕೊಡ್ದೆ ನಮ್ಮಾವ ಕರ್ಕೊಂಡು ಬಂದು ಸೇರಿಸಿಬಿಟ್ರು ಏನ್ ಮಾಡೋದು ಕಷ್ಟ ಪಟ್ಟು ಓದೋಣ ಸಮಾಧಾನ ಮಾಡ್ಕೊ" ಎಂದ 

ಬಾಲೇನಹಳ್ಳಿ ಗೇಟ್ನಲ್ಲಿ ಎರಡು ಸೀಟು ಖಾಲಿಯಾದವು ಇಬ್ಬರೂ ಕುಳಿತರು.ಇನ್ನೂ ಬಿಕ್ಕುತ್ತಿದ್ದ ಸುಜಾತ ಸತೀಶನ ತೋಳೊಗೊರಗಿ  ಮಲಗೇ ಬಿಟ್ಟಳು .

ಯರಬಳ್ಳಿ ಬಂದಾಗ ಸತೀಶ ಅವಳನ್ನು ಎಬ್ಬಿಸಿ ಬಸ್ ಇಳಿದು , ಮೊದಲು ಸುಜಾತ ಅವರ ಮನೆ ಕಡೆ ನಡೆದಳು ಸ್ವಲ್ಪ ಹೊತ್ತಾದ ಬಳಿಕ ಸತೀಶ ನಡೆದ.


****************************

ಎರಡು ಮೂರು ತಿಂಗಳಾದ್ದರಿಂದ ಹಿರಿಯೂರಿನ ಬಹುತೇಕ ರಸ್ತೆಗಳು ಗಲ್ಲಿಗಳು ಪರಿಚಯವಾದವು ಸತೀಶನಿಗೆ.

ಸುಜಾತಳಿಗೆ ಕಾಲೇಜು ಬರು ಬರುತ್ತಾ ಬೋರ್ ಆಗತೊಡಗಿತು.

ಎರಡು ಮೂರು ಬಾರಿ ಕಾಲೇಜ್ ಗೆ ಚಕ್ಕರ್ ಹೊಡೆದ ಜೋಡಿಯು  ಕಡ್ಲೇಕಾಯಿ ಮಂಡಿ ಪಾರ್ಕ್ ನಲ್ಲಿ ಗಂಟೆ ಗಟ್ಟಲೆ ಹರಟೆ ಹೊಡೆದು ಮಧ್ಯಾಹ್ನದ ಬಸ್ ಗೆ ಸರಿಯಾಗಿ ಬಸ್ ನಿಲ್ದಾಣ ತಲುಪಿ ಮನೆಗೆ ತಲುಪುತ್ತಿದ್ದರು.


ಇದೇ ತರಹ ಕಾಲೇಜು ತಪ್ಪಿಸಿ ಪಾರ್ಕ್ ನಲ್ಲಿ ಕೂರುವ ಆಟ ಕಡ್ಲೇಕಾಯಿ ಮಂಡಿ ಪಾರ್ಕ್ ನಿಂದ ವಾಣಿ ಕಾಲೇಜು ತೋಪಿನ ವರೆಗೆ ಮುಂದುವರೆಯಿತು .

"ಸತೀಶನ ಬಳಿ ಮೈಗೆ ಮೈತಾಗಿಸಿ ಕುಳಿತಾಗ ವಯಸ್ಸಿಗೆ ಬಂದ ಹದಿಹರೆಯದ ಹುಡುಗ ಹುಡುಗಿಯರ ದೇಹ ಮನದಲ್ಲಾಗುವ ಬದಲಾವಣೆ ಇವರಿಬ್ಬರಲ್ಲೂ ಆಗುತ್ತಿತ್ತು.ಸುಜಾತ ಸ್ವಲ್ಪ ಹೆಚ್ಚಾಗಿ ಪ್ರತಿಕ್ರಿಯೆ ತೋರುತ್ತಾ, ಸತೀಶನ ಬಳಿ ಬಂದರೂ ಸತೀಶ ಬಹಳ ಸಂಯಮದ ವರ್ತನೆ ತೋರುತ್ತಿದ್ದ, ಕೆಲವೊಮ್ಮೆ ಅವನ ಈ ವರ್ತನೆ ಸುಜಾತಳಿಗೆ ಬೇಸರ ಆದರೂ ನನ್ನ ಹುಡುಗ ಒಳ್ಳೆಯವನು ಎಂದು ಮನದಲ್ಲೇ ಸಂತಸಪಡುತ್ತಿದ್ದಳು.

" ಸತೀಶ್ ನಾವು ಹೀಗೆ ಕಾಲೇಜ್ಗೆ ಹೋಗ್ದೇ ಟೈಮ್ ವೇಸ್ಟ್ ಮಾಡ್ತಾ ಇದ್ದರೆ ಪಾಸಾಗೋದೇಗೆ ?"

" ಓ ನಿನಗೆ ಪಾಸಾಗೋ ಆಸೆ ಇದಿಯಾ? ಇದುವರೆಗೆ ಪಾಠ ಏನೂ ತಲೆಗೆ ಹೋಗಿಲ್ಲ ಜೊತೆಗೆ ಈ ತರ ಸುತ್ತುತಾ ಇದಿವಿ   

ನಾನಂತೂ ಪೇಲ್ ಆಗೋನೆ ,ನೀನಾದ್ರೂ ಓದಿ ಪಾಸಾಗು "

" ನಾನೇನು ರ್ಯಾಂಕ್  ಬರೋ ಹಾಗೆ ಓದ್ತಾ ಇದಿನಾ?" ನಗುತ್ತಾ ಸತೀಶನ ಬಳಿ ಬಂದು ಅವನ ಮುಂದಲೆಯ ಕೂದಲಲ್ಲಿ ಕೈಯಾಡಿಸಿ ನಗುತ್ತಾ ಕೇಳಿದಳು.

" ನಾವು ಹೀಗೆ ಓಡಾಡೋದು ನಮ್ ಮಾವ ,ನಿಮ್ಮಪ್ಪ ಅಥವಾ ಬೇರೆ ಯಾರಿಗಾದ್ರೂ ಗೊತ್ತಾದ್ರೆ " ಮೂರ್ನಾಲ್ಕು ತಿಂಗಳು ಇಲ್ಲದ ಅಳುಕು ಕಾಣಿಸಿತು ಸತೀಶನಿಗೆ.

" ಗೊತ್ತಾಗ್ಲಿ ಬಿಡು ,ಒಳ್ಳೆದೇ ಆಗುತ್ತೆ ಮದುವೆ ಮಾಡ್ಸಿ ಅನ್ನೋಣ "

"ಅಯ್ಯೋ ನಿನ್ನ ,ಅದೇನ್ ಧೈರ್ಯನೆ ನಿನಗೆ,

ಸರಿ ಮದುವೆ ಮಾಡ್ತಾರೆ ಅಂದ್ಕೊಳ್ಳೊಣ ಜೀವನ ಮಾಡೋದ್ ಹೇಗೆ "

" ನನಗೆ ನಿನ್ನ ಬಗ್ಗೆ ಅಭಿಮಾನ ಇದೆ ,ನಂಬಿಕೆ ಇದೆ , ನೀನ್ ದುಡಿದು ನನ್ ಸಾಕ್ತಿಯಾ ಅಂತ ಮನಸು ಹೇಳ್ತೈತೆ"

" ಅಮ್ಮಣ್ಣಿ ನಿನ್ ಅಭಿಮಾನ ,ನಂಬಿಕೆ,ಮನಸು, ಇವೆಲ್ಲ ಹೊಟ್ಟೆ ತುಂಬ್ಸಲ್ಲ ಭಾಷಣ ಮಾಡಾಕೆ ಚೆನಾಗಿರುತ್ತೆ ಅಷ್ಟೇ "

"ಅದೆಲ್ಲ ನನಗ್ ಗೊತ್ತಿಲ್ಲ ನಾನಂತೂ ಡಿಸೈಡ್ ಮಾಡಿದಿನಿ ,ಅವತ್ತು ಒಂದು ವರ್ಷದ ಕೆಳಗೆ ಶಾಂತಮೂರ್ತಿ ಸರ್ ನಮ್ಮಿಬ್ಬ್ರೂನ ಕರ್ಸಿ ಬುದ್ದಿ ಹೇಳ್ದಾಗ ಒಂದು ವರ್ಷ ಆದ್ಮ್ಯಾಲೂ ನಿಮಗೆ ಪ್ರೀತಿ ಇದ್ದರೆ ಅದು ನಿಜ ಪ್ರೀತಿ ಅಂತ ನೆನಪಿದೆಯಾ ನಿನಗೆ ? ಈಗಲೂ ನಾವು ಪ್ರೀತಿ ಮಾಡ್ತಾ ಇದಿವಿ ಇದು ನಿಜ ಪ್ರೀತಿ ನಾವು ಮದುವೆ ಆಗೇ ಆಗ್ತಿವಿ" ಆತ್ಮವಿಶ್ವಾಸದಿಂದ ಮಾತನಾಡುತ್ತಾ ಇದ್ದಳು ಸುಜಾತ .

ಅವಳ ತೊಡೆಯ ಮೇಲೆ ತಲೆ ಇಟ್ಟು ಮಲಗಿದ ಸತೀಶ ಅವಳ ಕಣ್ಣುಗಳನ್ನೇ ದಿಟ್ಟಿಸಿ ನೋಡುತ್ತಾ "ನನ್ನ ಮೇಲೆ ನಿನಗೆ ಅದೆಷ್ಟು ಪ್ರೀತಿ ನಿನಗೆ ಒಂದು ವೇಳೆ ನಿಮ್ಮಪ್ಪ ನಮ್  ಪ್ರೀತಿ ಒಪ್ಪದಿದ್ದರೆ? " ಪ್ರಶ್ನಿಸಿದ ಅದೇ ವೇಳೆಗೆ ವಾಣಿ ಕಾಲೇಜಿನ ಬೆಲ್ ಹೊಡೆಯಿತು.

" ನಮ್ಮಪ್ಪ ಒಪ್ಪದಿದ್ದರೆ ಓಡಿ ಬರುವೆ ಮದುವೆ ಮಾಡಿಕೊಳ್ಳೋಣ" ಸ್ಪಷ್ಟವಾಗಿ 

ಧೈರ್ಯದಿಂದ ಹೇಳೆಬಿಟ್ಟಳು ಸುಜಾತ .

ಇವರಿಬ್ಬರ ಸಂಭಾಷಣೆ ಆಲಿಸುತ್ತಾ ,ಇವರ ಸುತ್ತಲೇ ಓಡಾಡುವ ಒಬ್ಬ ಇವರಿಗಿಂತ ಮೂರ್ನಾಲ್ಕು ವರ್ಷ ದೊಡ್ಡ ಹುಡುಗನನ್ನು ಗಮನಿಸಿದ ಸತೀಶ "ಯಾರಿವನು ಅವಾಗಿನಿಂದ ನಮ್ಮ ಮಾತು ಕೇಳ್ತಾ ,ನಮ್ಮನ್ನೆ ನೋಡ್ತಾ ಓಡಾಡ್ತಾನೆ , ಅವ್ನೇನಾದ್ರೂ ನಿಮ್ ಕಡೆನವ್ನೇನೋ ನೋಡಮ್ಮ". ಕಿಚಾಯಿಸಿದ ಸತೀಶ.

"ನಾನು ಅವನ್ ನ ಇವತ್ತೇ ನೋಡ್ತಿರೋದು . ಬಹುಶಃ ಅವರ್ಯಾರೋ ನಿನಗೆ ಹೆಣ್ ಕೊಡೊ ಮಾವನ ಕಡೇರು ಇರಬೇಕು ನೋಡು" ತಿರುಗೇಟು ನೀಡಿದಳು ಸುಜಾತ , ಯಾರು ಕೇಳೇ ಬಿಡೋಣ ಎಂದು ಎದ್ದು ಆ ವ್ಯಕ್ತಿ ಕಡೆ ಹೊರಟ ಸತೀಶ ,ದೊಡ್ಡ ಹೆಜ್ಜೆ ಹಾಕಿ ಜೋರಾಗಿ ನಡೆದು ಮಾಯವಾಗಿಬಿಟ್ಟ ಅವನು.

" ನಮ್ ಹೀರೋ ಎದ್ದರೆ ಯಾರೂ ನಿಲ್ಲಲ್ಲ" ಎಂದು ಅವನ ಹತ್ತಿರ ಹೋಗಿ ಅವನ ಎದೆಯಲ್ಲಿ ಮುಖವಿಟ್ಟು ತಬ್ಬಿಕೊಂಡಳು ಸುಜಾತ .

ಟೈಂ ಆಯ್ತು ನಡಿ ಬಸ್ ಸ್ಟ್ಯಾಂಡ್ ಗೆ ಹೋಗಾನ ಲೇಟ್ ಆದರೆ ಎಸ್. ಆರ್. ಇ. ಬಸ್ ಮಿಸ್ ಆಗುತ್ತದೆ. ಆಗ ನಿಮ್ಮಪ್ಪ ಯಾಕೆ ಲೇಟ್ ಅಂತ ಕ್ಲಾಸ್ ತೊಗೊತಾರೆ.

ಅದ್ ಸರಿ ಯಾರು ಅವನು?"  ಸತೀಶ ಮತ್ತೆ ಪ್ರಶ್ನೆ ಕೇಳಿದ.

 ಇಬ್ಬರೂ ಒಬ್ಬರಿಗೊಬ್ಬರು ಕೈಹಿಡಿದುಕೊಂಡು ಟಿ. ಬಿ .ಸರ್ಕಲ್ ಕಡೆ ಹೆಜ್ಜೆ ಹಾಕಿದರು. 


**************************

" ಅಜ್ಜಿ ದಿನಾ ಓಡಾಡೋದು ಕಷ್ಟ ಆಗುತ್ತೆ ,ಓದಾಕೆ ಟೈಂ ಸಿಗಲ್ಲ ಅಲ್ಲೇ ಹಿರಿಯೂರಲ್ಲಿ ರೂಂ ಮಾಡಿಕೊಂಡು ಓದುವೆ " ಎಂದು ಮೊದಲು ಸರಸ್ವತಜ್ಜಿ ಹತ್ತಿರ ಮನವಿ ಇಟ್ಟ ಸತೀಶ.

" ಅದೇನು ದಸರ ರಜಾ ವರಗೆ  ಓಡಾಡಿದೆ ಈಗ್ಯಾಕೆ ರೂಮು? ಪ್ರಶ್ನಿಸಿದರು ಮುಕುಂದಯ್ಯ.

"ಓದಾದು ಬಾಳ ಇರುತ್ತೆ ಮಾವ ,ಅದಕ್ಕೆ ...ಎಂದು ತಲೆ ಕೆರೆದುಕೊಂಡ." ಆತು ಎಲ್ಲಿ ರೂಂ ಮಾಡ್ತಿಯಾ? ಏನಾದರೂ ಗೊತ್ತ? '" 

ಕೇಳಿದರು ಮುಕುಂದಯ್ಯ.

ನಮ್ಮ ಊರಿನ ಸೆಕೆಂಡ್ ಇಯರ್ ನರಹರಿ ಈ ವರ್ಷ ಸೆಕೆಂಡ್ ಇಯರ್ ಪಿ ಯುಸಿ ಅವರ್ ರೂಮಲ್ಲಿ ಇಬ್ಬರೆ ಇರಾದು ನಾನೂ ಅವರ್ ಜೊತೆ ಇರ್ತಿನಿ" 

" ಒಹೋ  ಮೊದ್ಲೆ ಎಲ್ಲಾ ಪ್ಲಾನ್ ಮಾಡಿದ್ದಂಗಿದಿಯಾ ,ಅವನ್ ಸರಿ ಇಲ್ಲ ನರಹರಿ ಹುಷಾರು , ಸರಿ ಶುಕ್ರವಾರ ನೆಲವಳಿ ದುಡ್ ಬರಲಿ , ಭಾನುವಾರ ರೂಂಗೆ ಹೋಗುವಂತೆ" ಎಂದರು ಮುಕುಂದಯ್ಯ.


ಅಲ್ಲಿಗೆ ಸತೀಶನ ಜೀವನದ ಮತ್ತೊಂದು ಕರಾಳ ಅದ್ಯಾಯಕ್ಕೆ ಮುನ್ನುಡಿ  ಬರೆದಂತಾಯ್ತು.


"ಮೊದಲು ದಿನವೂ ನನ್ನ ಕಾಣಲು ಹಾತೊರೆಯುತ್ತಿದ್ದೆ ಈ ವಾರದಿಂದ ಒಮ್ಮೆಯೂ ಸಿಗಲಿಲ್ಲ " ಎಂದು ಮುನಿಸಿಕೊಂಡು ಕಡ್ಲೇಕಾಯ್ ಮಂಡಿ ಪಾರ್ಕ್ ನಲ್ಲಿ ಸ್ವಲ್ಪ ದೂರದಲ್ಲಿ ಅಳುಕಿನಿಂದಲೆ  ಕುಳಿತ ಸತೀಶನ ಬಳಿ ಬಂದವಳಿಗೆ ಸಿಗರೇಟಿನ ವಾಸನೆ  ಮೂಗಿಗೆ ಬಡಿಯಿತು ಸಿಟ್ಟಾಗಿ" ಇದೇನ್ ಸತೀಶ್ ಹಿರಿಯೂರಲ್ಲಿ ರೂಂ ಮಾಡಿದ್ದು ಇದಕ್ಕೆನಾ?  ಬರೀ ಸಿಗರೇಟಾ ಅಥವಾ ಬೇರೆ? "ಬೇಸರವಾಗಿ ದೂರದಲ್ಲಿ ಕುಳಿತಳು ,ನಾನು ಏನೋನೋ ಕನಸು ಕಂಡಿದ್ದೆ ನನ್ನ ಸ್ನೇಹಿತೆಯರಿಗೆ ನನ್ನ ಸತೀಶ  ಅಪರಂಜಿ , ಈಗ ನೋಡಿದರೆ ನಿನ್ನಲ್ಲಿ ಇಂತಹ ಬದಲಾವಣೆ ಕಂಡು ಬೇಸರವಾಗುತ್ತಿದೆ ಅಳಲುಶುರು ಮಾಡಿದಳು ಸುಜಾತ .

ಅವಳ ಹತ್ತಿರ ಹೋಗಿ ಸಮಾಧಾನ ಮಾಡಿ 

" ಕ್ಷಮಿಸು ಇನ್ನೆಂದೂ ಸಿಗರೇಟ್ ಸೇದೋಲ್ಲ " ಎಂದ ಸತೀಶ.

ಇದು ಬಹು ದೊಡ್ಡ ಸುಳ್ಳು ನಾನು ಈಗಾಗಲೇ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿರುವೆ ಎಂದು ಅವನ ಅಂತರಾತ್ಮ ಹೇಳುತ್ತಿತ್ತು.


ಸಾಮಾನ್ಯವಾಗಿ ಬೇರೆಯವರ ಮನೆಯಲ್ಲಿ ಬೆಳೆಯುವ ಮಕ್ಕಳಿಗೆ ಒಂದು ರೀತಿಯ ಅಭದ್ರತೆ ,ಕೀಳರಿಮೆ ,ಪರತಂತ್ರ ಮನೋಭಾವ ಕಾಡುವವುದು. ಬೇರೆಯವರು ಎಷ್ಟೇ ಹತ್ತಿರದ ಸಂಬಂಧಿಗಳಾಗಿರಲಿ, ಎಷ್ಟೇ ಚೆನ್ನಾಗಿ ನೋಡಿಕೊಳ್ಳಲಿ ,ಎಲ್ಲೋ ಒಂದು ಕಡೆ ಸ್ವಂತ ಅಮ್ಮ ,ಅಪ್ಪ ,ಅಣ್ಣನ ಕಡೆ ಮನ ಹಾತೊರೆಯುವುದು.


ಸತೀಶನಿಗೆ ಅವನ ಮಾವಂದಿರು, ಅಜ್ಜಿ ತಿಮ್ಮಕ್ಕ, ಎಲ್ಲರೂ ಚೆನ್ನಾಗಿ ನೋಡಿಕೊಂಡರೂ ಅವನಿಗೆ ಅಷ್ಟು ಸ್ವತಂತ್ರವಿರಲಿಲ್ಲ ,ಇದು ಕೀಳರಿಮೆಗೆ ದಾರಿಯಾಯಿತು, ಹಿರಿಯೂರಿನಲ್ಲಿ ರೂಂ ಮಾಡಿದ ಮೇಲೆ ನರಹರಿಯಂತಹ ಕೆಟ್ಟ ಹುಡುಗನ ಜೊತೆಯಲ್ಲಿ ಇರುವಾಗ ಸಹವಾಸದಿಂದ ಸನ್ಯಾಸಿ ಕೆಡದಿರಲು ಸಾದ್ಯವೆ? 

ಆ ಪೀಸು ಈ ಫೀಸು ಎಂದು ಮುಕುಂದಯ್ಯ ರವರಿಂದ ಹಣ ಪಡೆದು 

ಅದ್ಯಾವುದೋ "ಮೈಸೂರು ಮಲ್ಲಿಗೆ" "ಭಟ್ಕಳ ಮಲ್ಲಿಗೆ" ಎಂಬ ನೋಡಬಾರದ ದೇವರ ಚಿತ್ರ ನೋಡಲು ಟಿ ವಿ ,ವಿ ಸಿ ಪಿ ಬಾಡಿಗೆ ತಂದು ರಾತ್ರಿ ನಿದ್ದೆಗೆಟ್ಟು ಓದುವ ಬದಲಿಗೆ ಅಶ್ಲೀಲ ಚಿತ್ರ ನೋಡುತ್ತ ಮದ್ಯ ಸೇವಿಸುತ್ತಾ ಕಾಲ ಕಳೆದು ,ಹಗಲೆಲ್ಲ ಮಲಗಿ ಕಾಲ ಕಳೆವುದು ದಿನಚರಿಯಾಯಿತು.

ಶಾಸ್ತ್ರಕ್ಕೆ ಪರೀಕ್ಷೆ ಬರೆದು ಮೊದಲ ವರ್ಷ ಎಲ್ಲಾ ವಿಷಯಗಳಲ್ಲಿ ಪೇಲಾದರೂ ಮನೆಯಲ್ಲಿ ಪಾಸಾಗಿರುವೆ ಎಂದು ಹೇಳಿದ್ದ. ಸುಜಾತಳಿಗೆ ಹೆಚ್ಚು ಸಿಗದೆ ತನ್ನದೇ ಲೋಕದಲ್ಲಿ  ಮುಳುಗಿದ್ದ. ಇದರಿಂದಾಗಿ ಸುಜಾತಳಿಗೆ ಅವನ ಮೇಲೆ ಪ್ರೀತಿ ಕಡಿಮೆಯಾಗಿರಲಿಲ್ಲ. ಬದಲಿಗೆ ಸಿಕ್ಕ ಸಮಯದಲ್ಲಿ ಓದಿ ಅಂತೂ ಮೊದಲ ಪಿ ಯು ಸಿ ಜಸ್ಟ್ ಪಾಸಾಗಿದ್ದಳು.

"ಹುಡುಗೀರು ಎಂಗೋ ಪಾಸ್ ಆಗ್ಬಿಡ್ತಾರೆ ಹುಡುಗ್ರೆ ಪೇಲಾಗೋದು ಎಂದು ನಶೆಯಲ್ಲಿ ಮಾತನಾಡಿದ  ನರಹರಿ ಮಾತು ಸತೀಶನಿಗೆ ನೆನಪಾಯಿತು.


ಬೇಸಿಗೆ ರಜೆಗೆ ಯರಬಳ್ಳಿಗೆ ಬಂದ ಸತೀಶನ ವರ್ತನೆಯಲ್ಲಿ ಬದಲಾವಣೆ ಗುರ್ತಿಸಿದ ಮುಕುಂದಯ್ಯ, ಒಮ್ಮೆ ಮಾರಮ್ಮನ ಗುಡಿಯ ಕಡೆಯಿಂದ ನರಹರಿ ಜೊತೆಯಲ್ಲಿ ತೂರಾಡುತ್ತ ಬರುವುದ ಕಂಡು ನೋಡಿದಾಗ ಕುಡಿದಿರುವುದು ಗಮನಕ್ಕೆ ಬಂದು ಮನೆ ಒಳಗೆ ಕರೆದುಕೊಂಡು ಹೋಗಿ ಬಾರುಕೋಲು ಸೇವೆ ಮಾಡಿದಾಗ 

" ಇನ್ನೆಂದೂ ಕುಡಿಯಲ್ಲ ಬಿಡು ಮಾವ,ತಪ್ಪಾತು ಬಿಡು ಮಾವ " ಎಂದು ಅರಚುವ ಸದ್ದು ಕೇಳಿ

"ಬಿಡೋ ಆಳಾಗ್ ಹೋಗ್ಲಿ ,ಇವನ್ ಹಿರಿಯೂರಿಗೆ ಕಳ್ಸಿದ್ದೆ ತಪ್ಪಾತು, ಏನೋ ಸೆಂದಾಗಿ ಓದ್ಲಿ ಅಂತ ಕಳ್ಸಿದರೆ ಊದೆದನೆ ಎಂದು ಕಣ್ಣೀರಿಟ್ಟರು ಹಿರಿಜೀವ.


"ನೀನೇನ್ ಓದಾದು ಬ್ಯಾಡ ದನ ಕಾಯಿ ನಾಳೆಯಿಂದ ಎಂಗೂ ಗುರುಸಿದ್ದ ಸಂಬಳ ಬಿಟ್ಟದಾನೆ ಬಿಸ್ಲಲ್ಲಿ ಹೋದರೆ ಗೊತ್ತಾಗುತ್ತೆ " ಗುಡುಗಿದರು ಮುಕುಂದಯ್ಯ.

ಅಂದಿನಿಂದ ಸತೀಶನ ಮೇಲೆ ಒಂದು ಕಣ್ಣಿಟ್ಟಿದ್ದ ದೊಡ್ಡಪ್ಪಗಳ ಕುಟುಂಬ ಅವನನ್ನು ಒಬ್ಬನನ್ನೆ ಎಲ್ಲಿಗೂ ಕಳಿಸುತ್ತಿರಲಿಲ್ಲ, ಸುಜಾತಳ ನೋಡದೆ, ಚಟಗಳ ಬಿಡಲಾರದೆ ಚಡಪಡಿಸತೊಡಗಿದ ,ಹೊಲ, ಮನೆ ಕೆಲಸ ಮಾಡುತ್ತ ಕೆಂಪಗಿದ್ದವನು ಕಪ್ಪಾದ,ತಿಂದುಂಡು ಗುಂಡಗಿದ್ದವನು ಬಡಕಲಾದ .


"ಪಾಪ ಇದೊಂದ್ ವರ್ಸ ಓದ್ಲಿ ಬಿಡೋ ಅಲ್ಲೇ ಎನೋ ಬದ್ಲಾಗ್ತಾನೆ " ಅಜ್ಜಿ ಮತ್ತೆ ಶಿಫಾರಸು ಮಾಡಿದರು.

ಸತೀಶನ ನಡವಳಿಕೆಯಲ್ಲಿ ಸ್ವಲ್ಪ ಬದಲಾವಣೆ ಕಂಡ ಮುಕುಂದಯ್ಯ " ಆತು ಆ ನನ್ ಮಗ ನರಹರಿ ಸೇರ್ಬಾರದು.ರೂಂ ಗೀಂ ಬ್ಯಾಡ ದಿನ ಇಲ್ಲಿಂದ ಒಡಾಡು ಮತ್ತೇನಾದ್ರು ಆಟ ಆಡಿದ್ರೆ ಗೊತ್ತಲ್ಲ ಬಾರಿ ಕೋಲು " ಎಂದರು


ಅಂತೂ ಹಿರಿಯೂರಿನ ಕಾಲೇಜಿಗೆ ಹೋಗಲು ಅವಕಾಶವನ್ನು ನೀಡಿದ್ದಕ್ಕಾಗಿ ಮನದಲ್ಲೇ ಸಂತೋಷಪಡುತ್ತಾ ನಾಳೆಯಿಂದ ಸುಜಾತಳ ನೋಡಬಹುದು ಎಂದು ಅಂದು ಕೊಂಡವನ ಸಂತಸ ಬಹಳ ದಿನ ಉಳಿಯಲಿಲ್ಲ, ಒಂದು ವಾರದಿಂದ ಏಳು ಗಂಟೆ  ಜೈರಾಂ ಬಸ್ ಗೆ ಅವಳು ಹತ್ತಲಿಲ್ಲ .ಗಿರೀಶ ಕಾಲೇಜಿನ ಮುಂದೆ ದಿನವೂ ಕಾದರೂ ಅವಳ ಸುಳಿವಿಲ್ಲ 

ಸತೀಶ ಬಹಳ ಬೇಸರದಿಂದ ತನ್ನಲ್ಲೇ ಪ್ರಶ್ನೆ ಮಾಡಿಕೊಂಡ 

"ಎಲ್ಲಿ ಹೋದಳು ಸುಜಾತ?"


ಮುಂದುವರೆಯುವುದು....




ಸಿ ಜಿ ವೆಂಕಟೇಶ್ವರ






11 February 2022

ಬೆವರ ಅಮಲು .


 ನಾ ಬರಲೊಲ್ಲೆ ನಿನ್ನ ಸನಿಹ

ಕಾರಣ ಅತೀ ಸುಲಭ 

ಆಕರ್ಷಿಸುವುದು ನನ್ನನು 

ನಿನ್ನ ಬೆವರ ಘಮಲು |

ಅನುಮಾನ ನನಗೆ 

ತಬ್ಬಿಬಿಡುವೆನೇನೋ 

ಏರಿ ಬೆವರ ಅಮಲು ||



ಸಿಹಿಜೀವಿ 

ಸಿ ಜಿ ವೆಂಕಟೇಶ್ವರ 

10 February 2022

ಮಮ್ಮಿ ಅಲ್ಲ ಅಮ್ಮ.


 ಮಮ್ಮಿ ಅಲ್ಲ ಅಮ್ಮ

ಅಂದು ಅಮಾವಾಸೆ. "ಇವತ್ತು ಹುಷಾರು. ನಿಂಬೇ ಹಣ್ಣು ಕೊಯ್ದು ಹೊಸಲ ಮೇಲೆ ಇಡು "ಎಂದು ಸೊಸೆಗೆ ಕೆಂಚಮ್ಮ ಬೆಳಿಗ್ಗೆಯೇ ಎಚ್ಚರಿಕೆ ನೀಡಿದ್ದರು. ಮಗನಿಗೆ ಸಂಜೆ ಕತ್ತಲಾಗುವುದರೊಳಗೆ ಮನೆಗೆ ಸೇರಿಕೊಳ್ಳಬೇಕು ಎಂದು ವಾರ್ನಿಂಗ್ ನೀಡಿದ್ದರು. ಇದನ್ನು ಕೇಳಿಸಿಕೊಂಡು ಪುಟ್ಟ ಬಾಲಕಿ " ಯಾಕಜ್ಜಿ ಇವತ್ತು ಏನಾದರೂ ವಿಶೇಷನಾ? ಎಂದು ಕೇಳಿದಳು.
" ವಿಶೇಷ ಅಲ್ಲಮ್ಮ ... ನಾವು ಯಾಮಾರಿದ್ರೆ ನಾಶ.ಯಮನ ಬಳಿ ಸೀದಾ ಪ್ರವೇಶ"  ಎಂದು ಒಗಟಾಗಿ ಹೇಳಿದ್ದ ಕೇಳಿ ಆ ಮಗೂಗೆ ಇ‌ನ್ನೂ ಗೊಂದಲವಾಯಿತು.

ಅಜ್ಜಿ ಮುಂದುವರೆದು" ಹೋದ ವರ್ಷ ಇದೇ ಅಮಾವಾಸೆ ದಿನ  ನಮ್ ಊರಿನ ಶೆಟ್ರು ಮನೆನಾಗೆ ಘಲ್ ..ಘಲ್ .. ಎಂದು ಗೆಜ್ಜೆ ಕಟ್ಟಿಕೊಂಡು ಬಂದ ಒಂದು ದೆವ್ವ ಅವರ ಮಗನನ್ನು ಕೊಂದು ಹಾಕಿತಂತೆ .ಅದಕ್ಕೆ ಈ ಅಮಾಸೆ ಡೇಂಜರ್...ಹುಷಾರಾಗಿರಬೇಕು" ಎಂದಾಗ ಆ ಬಾಲಕಿಗೆ ಭಯ ಆವರಿಸಿತು.


ಅದೇ ಗುಂಗಲ್ಲಿ ಅಂದು ಆ ಬಾಲಕಿಗೆ ಹಗಲೆಲ್ಲಾ ಗೆಜ್ಜೆ ಸದ್ದೇ ಕೇಳುದಂತಾಗುತ್ತಿತ್ತು.‌ಸಂಜೆಯಾಗುತ್ತಲೇ  ಅಜ್ಜಿಯ ಅಣತಿಯಂತೆ ಮಗ ಬೇಗನೇ ಮನೆಗೆ ಬಂದ.‌ಸೊಸೆ ನಿಂಬೇಹಣ್ಣು ಕೊಯ್ದು ಮನೆಯ ಬಾಗಿಲ ಬಳಿ ಇಟ್ಟು ಪೂಜೆ ಮಾಡಿದಳು.


ಊಟದ ನಂತರ ಎಂದಿಗಿಂತ ಮೊದಲೇ ಪುಟ್ಟ ಬಾಲಕಿ ಮಲಗಲು ಕೋಣೆಯ ಬಳಿ ತೆರಳಿ ಅಪ್ಪನ ಪಕ್ಕದಲ್ಲಿ ಬೆಡ್ ಶೀಟ್ ಒದ್ದುಕೊಂಡು ಮಲಗಿದಳು.ಭಯದಲ್ಲಿ ಎಷ್ಟೊತ್ತಾದರೂ ನಿದ್ದೆತ್ತಲಿಲ್ಲ.ಬೆಳಿಗ್ಗೆ ಅಜ್ಜಿ ಹೇಳಿದ ಮಾತುಗಳು ನೆನಪಾದವು. ಕ್ರಮೇಣ ಘಲ್ ....ಘಲ್...ಸದ್ದು ಕೇಳಲಾರಂಭಿಸಿತು. ಭಯದಿಂದ ಅಪ್ಪಾ.... ದೆವ್ವ... ದೆವ್ಚ...ಎಂದು ಭಯದಿಂದ ಕೂಗಿದಳು.


" ಅಲ್ಲ ಕಣೇ... ಈ ಕಾಲ್ಚೈನು ಬೇಡ ...ಬಹಳ ಸೌಂಡು ಮಾಡುತ್ತೆ ಅಂತ ಹೇಳ್ದೇ ಇವತ್ತೇ ಆ ಚೈನ್ ಹಾಕ್ಕಂಡಿದಿಯಾ.ನೋಡು ಪಾಪ ಆ ಮಗ ನೀನೇ ದೆವ್ವ ಅಂತ ಹೆದರ್ಕಂಡಿದೆ" ಎಂದ ಪತಿರಾಯ.


"ರೀ ನಿಮಗೆ ಯಾವಾಗಲೂ ನಮ್ ಅಪ್ಪ ಕೊಡ್ಸಿರೋ ಚೈನ್ ಮ್ಯಾಲೇ ಕಣ್ಣು ಎಂದು ಬೆಡ್ ಶೀಟ್ ಕೊಡವಿದಳು".


ಮಗಳು ಬೆಡ್ ಶೀಟ್ ನಿಧಾನವಾಗಿ ಸರಿಸಿ ನೋಡಿ ಅಮ್ಮಾ ಎಂದು ಖಾತ್ರಿ ಮಾಡಿಕೊಂಡು ಕಣ್ಣು ಮುಚ್ಚಿ ನಿದ್ದೆಗೆ ಜಾರಿದಳು.


ಸಿಹಿಜೀವಿ


ಸಿ ಜಿ ವೆಂಕಟೇಶ್ವರ


ತುಮಕೂರು


9900925529.

09 February 2022

"ರಂಗಸಿರಿ ಕಥಾ ಐಸಿರಿ " ಪುಸ್ತಕ ವಿಮರ್ಶೆ.


 

"ರಂಗಸಿರಿ ಕಥಾ ಐಸಿರಿ " ಪುಸ್ತಕ ವಿಮರ್ಶೆ.

"ರಂಗಸಿರಿ ಕಥಾ ಐಸಿರಿ " ಒಂದು ವಿಭಿನ್ನವಾದ ನಾಟಕ ಪ್ರದರ್ಶನಗಳ ವಿಮರ್ಶಾ ಕೃತಿಯಾಗಿ ಗಮನಸೆಳೆಯುತ್ತದೆ. ಇದರ ಕೃತಿಕಾರರಾದ ಗೊರೂರು ಅನಂತರಾಜು ರವರು ನಿಜವಾಗಿಯೂ ಅಭಿನಂದನಾರ್ಹರು.

ಕಳೆದ ಮೂರು ವರ್ಷಗಳಿಂದ ನಾನು ಗಮನಿಸಿದ ಹಾಗೆ ಶ್ರೀ ಗೊರೂರು ಅನಂತರಾಜು ರವರು ಕನ್ನಡದ ಬಹುತೇಕ ಪತ್ರಿಕೆಯಲ್ಲಿ ಬರಹ ಲೋಕದಲ್ಲಿ ವೈವಿಧ್ಯಮಯ ಬರವಣಿಗೆಯ ಮೂಲಕ ಗುರ್ತಿಸಿಕೊಂಡವರು.  ಸರಳ ಸಜ್ಜನಿಕೆಯ ಹೆಚ್ಚಿನದೇನನ್ನೂ ನಿರೀಕ್ಷಿಸದ  ಬರಹದ ಜೊತೆಯಲ್ಲಿ   ಕಲೆ, ರಂಗಭೂಮಿ, ಸಾಂಸ್ಕೃತಿಕ ಚಟುವಟಿಕೆಗಳ ಸಂಘಟಿಸಿದ ಬಹುಮುಖ ಪ್ರತಿಭೆ.ಓದಿನ ದಿನಗಳಲ್ಲೇ ಸಾಹಿತ್ಯ ಓದುವ ಹವ್ಯಾಸ ರೂಢಿಸಿಕೊಂಡು, ಸಾಹಿತಿಗಳು ಮತ್ತು ಕಲಾವಿದರುಗಳ ಬಗ್ಗೆ ಪ್ರೀತಿ ಅಭಿಮಾನ ಬೆಳೆಸಿಕೊಂಡು, ಹಾಗೂ ಓರ್ವ ಸಾಹಿತಿಯಾಗಿ ಸಮಾಜದಲ್ಲಿ ಗುರ್ತಿಸಿಕೊಳ್ಳಬೇಕೆಂಬ ಹಂಬಲ ಹೊಂದಿ: ಈ ದಿಶೆಯಲ್ಲಿ ಒಂದೊಂದೇ ಮೆಟ್ಟಿಲನ್ನು ಏರುತ್ತಾ ಬೆಳೆಯುತ್ತಾ ಬಂದವರು.
ಹಲವಾರು ಸಂಘಟನೆಯ ಚಟುವಟಿಕೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಸಾಹಿತ್ಯ ಸಾಂಸ್ಕೃತಿಕ, ಸಮಾಜ ಸೇವೆಯಲ್ಲಿ ತಮ್ಮದೇ ಆದ ಪಾತ್ರ ನಿರ್ವಹಿಸಿದ್ದಾರೆ. ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ, ತಾಲ್ಲೂಕು ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಊರಿನಲ್ಲಿ ಕನ್ನಡ ಕಲಾಸಾಹಿತ್ಯ ವೇದಿಕೆ ಸಂಸ್ಥೆ ಸ್ಥಾಪಿಸಿ ನಾಟಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸಿ ನಡೆಸಿಕೊಟ್ಟಿದ್ದಾರೆ: ಭಾರತ ಜ್ಞಾನ ವಿಜ್ಞಾನ ಸಮಿತಿಯಲ್ಲಿ ಜನಾರೋಗ್ಯ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆನಂತರ ಸಾಕ್ಷರತಾ ಆಂದೋಲನ ಜಾಥಾದಲ್ಲಿ ತೊಡಗಿಸಿ ಕೊಂಡಿದ್ದಾರೆ.

ಸ್ವತಃ ಕಲಾವಿದರಾದ ಅನಂತರಾಜುರವರು ತಾವು ನೋಡಿದ ನಾಟಕಗಳನ್ನು ವಿಮರ್ಶೆ ಮಾಡಿದ ಪರಿ ಅನನ್ಯ. "ರಂಗಸಿರಿ ಕಥಾ ಐಸಿರಿ" ಕೃತಿಯಲ್ಲಿ ನಾಟಕಗಳ ಕಥೆಗಳನ್ನು ಸಂಕ್ಷಿಪ್ತವಾಗಿ ಹೇಳುವ ಮೂಲಕ ವಿಮರ್ಶೆ ಮಾಡಿರುವ ರೀತಿ ನನಗೆ ಬಹಳ ಮೆಚ್ಚುಗೆಯಾಯಿತು.ನಾನು ಕೂಡಾ ಹವ್ಯಾಸಿ ರಂಗಭೂಮಿಯ ಕಲಾವಿದನಾಗಿರುವುದರಿಂದ ನಾನು ನೋಡಿದ ಕೆಲ ನಾಟಕಗಳ ವಿಮರ್ಶೆ ಓದುವಾಗ ನಾಟಕಗಳು ಪುನಃ ನನ್ನ ಸ್ಮೃತಿ ಪಠಲದಲ್ಲಿ ಹಾದು ಹೋದವು .
ನಾನು ನೋಡದ ನಾಟಕಗಳು ನನ್ನ  ಕಣ್ಮುಂದೆ ನಡೆಯುತ್ತಿವೆಯೇನೋ ಎಂಬಂತೆ ಕಥೆಯ ಮೂಲಕ ವಿಮರ್ಶೆ ಮಾಡಿರುವ ರೀತಿ ಚೆನ್ನಾಗಿದೆ. 

'ರಂಗಸಿರಿ ಕಥಾ ಐಸಿರಿ' ಕೃತಿ ರಂಗಪ್ರಯೋಗಗಳ ವಿಮರ್ಶೆಗಳ ಸಂಕಲನವಾಗಿದೆ. ಲೇಖಕರು ಹಾಸನದಲ್ಲಿ ನೋಡಿದ ನಾಟಕಗಳ ವಿಮರ್ಶೆ ಇವಾಗಿವೆ. ಪ್ರಸಿದ್ಧ ಕತೆಗಾರರು ಮತ್ತು ಕಾದಂಬರಿಕಾರರ ಕತೆ ,ಕಾದಂಬರಿಗಳು ರಂಗರೂಪಾಂತರಗೊಂಡು ಸೃಜನಶೀಲ ನಿರ್ದೇಶಕರ ಮೂಲಕ ರಂಗದ ಮೇಲೆ ಯಶಸ್ವಿ ಪ್ರಯೋಗಗೊಂಡಿರುವ ನಾಟಕ ವಿಮರ್ಶೆಯಾಗಿರುವುದು ವಿಶೇಷವಾಗಿದೆ. 

ಕೃತಿಯಲ್ಲಿ ವಿಮರ್ಶೆಗೆ ಒಳಪಡಿಸಿದ ನಾಟಕಗಳಲ್ಲಿ ಪ್ರಮುಖವಾದವುಗಳು
ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಕಥೆ ಆಧಾರಿತ ನಾಲ್ಕು ನಾಟಕಗಳು, ಕರ್ವಾಲೊ, ಅಣ್ಣನ ನೆನಪು ಕಿರಗೂರಿನ ಗಯ್ಯಾಳಿಗಳು, ಕೃಷ್ಣಗೌಡನ ಆನೆ,
ಡಾ. ಶಿವರಾಮ ಕಾರಂತರ ಕಾದಂಬರಿ ಆಧಾರಿತ ನಾಟಕ ಮೂಕಜ್ಜಿಯ ಕನಸುಗಳು, ಪಿ. ಲಂಕೇಶ್ರವರ ಕಥೆ ಆಧಾರಿತ ನಿವೃತ್ತರು,
ಡಾ. ಚಂದ್ರಶೇಖರ್ ಪಾಟೀಲ್ ರವರ ಕೊಡುಗೆಗಳು,ರಾಜಶೇಖರ್ ಮಠಪತಿ ರವರ ಗಾಂಧಿಯ ಅಂತಿಮ ದಿನಗಳು, ಚಂದ್ರಕಾಂತ ಕುಸನೂರು-ದಿಂಡಿ,
ಮಂಜುನಾಥ ಬೆಳಕೆರೆ ನನ್ನೊಳು ನೀ ನಿನ್ನೊಳು ನಾ,ವಿವೇಕ ಶಾನಭಾಗ್ ರವರ ಕಥೆಯಾಧಾರಿತ-ಕಂತು,
ಶರದ ಉಪಾಧೆ (ಮರಾಠಿ)-ರಾಶಿಚಕ್ರ, ಕೇದಾರಶಿಂದ-ಸಹಿರೀ ಸಹಿ,
ಸಚಿನ ಮೋಟೆ - ಒಂದ ಆಟ ಭಟ್ಟರದು, ಅಗ್ರಹಾರ ಕೃಷ್ಣಮೂರ್ತಿ - ದಾರಶುಕೊ ,ಸಾಣೇಹಳ್ಳಿ ಶ್ರೀ ಪಂಡಿತಾರಾದ್ಯ ಶಿವಾಚಾರ ಮಹಸ್ವಾಮಿ ರವರ ಯುಗಾಚಾರ್ಯ,
ದು.ಸರಸ್ವತಿ-ಬದುಕು ಬಯಲು ಎ. ರೇವತಿ (ತಮಿಳು) ಆತ್ಮಕಥೆ ,
ಯಶವಂತ್ ಮನೋಹರ್ ರ ಮಾಯಿ, ಡಾ|| ಚಂದ್ರಶೇಖರ್ ಕಂಬಾರ  ರವರ ಶಿವರಾತ್ರಿ,
ಬಸವಣ್ಣನವರ ವಚನಗಳನ್ನಾಧರಿಸಿದ ಕೂಡಲ ಸಂಗಮ,ನಂಜುಂಡ ಮೈಮ್ ರವರ  ವಿಕೇಂದ್ರೀಕರಣ,ಎನ್. ಎಸ್. ರಾವ್ ರವರ ವಿಷ ಜ್ವಾಲೆ , ತೋರಣಗಲ್ ರಾಜರಾವ್ ರವರ ಸುಭದ್ರ ಕಲ್ಯಾಣ,
ಬೆಳ್ಳಾವೆ ನರಹರಿಶಾಸ್ತ್ರಿ ರವರ  ಶ್ರೀಕೃಷ್ಣಗಾರುಡಿ,
ಕಂಗಲ್ ಹನುಮತ ರಾಯ ಅವರ ರಕ್ತರಾತ್ರಿ,ಬೆಳ್ಳಾವೆ ನರಹರಿ ಶಾಸ್ತ್ರಿ ರವರ ಸಂಪೂರ್ಣ ರಾಮಾಯಣ 3 ಪ್ರಯೋಗಗಳು,
ಪುಟ್ಟಸ್ವಾಮಯ್ಯ ರವರ ಕುರುಕ್ಷೇತ್ರದ  ಪ್ರಯೋಗಗಳು, ಹೊಂಡರಬಾಳು ಎಸ್. ಲಿಂಗರಾಜೇ ಅರಸ್ ರವರ ದಕ್ಷಯಜ್ಞ,ದೇವಿ ಮಹಾತ್ಮ  ನಿರ್ದೇಶನ ಎ. ಸಿ. ರಾಜು,
ರಾಜಕವಿ ಪಂಡಿತ ತಿರುಮಲೆ ಶ್ರೀನಿವಾಸ ಅಯ್ಯಂಗಾರ್ ರವರ
ಭಕ್ತ ಪ್ರಹ್ಲಾದ 2 ಪ್ರಯೋಗಗಳು , ಶ್ರೀಕೃಷ್ಣ ತುಲಾಭಾರ, ಸತಿ ಸಾವಿತ್ರಿ ಸೀತಾಲಕ್ಷ್ಮೀ ಸತ್ಯಮೂರ್ತಿ,
ಎಚ್. ಬಿ. ರಮೇಶ್ ರವರ ನಾಟ್ಯ ರಾಣಿ ಶಾಂತಲಾ, ರಾಜ ಸತ್ಯವ್ರತ - ನಿರ್ದೇಶನ ಸೀಗೆನಾಡು ಪಾಲಾಕಾಚಾರ್,ಅಂತಿಗೊನೆ : ಗ್ರೀಕ್ಮೂಲ ಸಾಫೋಕ್ಲೀಸ್ ಕನ್ನಡಕ್ಕೆ
ಪಿ. ಲಂಕೇಶ್, ಚಂದ್ರಮಂಡಲ - ಪ್ರಾಸಾದ್ ರಕಿತ್, ಲೀಲಾಂತ್ಯ - ಎನ್. ಸುದರ್ಶನ,ಬುಗುರಿ - ಮೊಗಳ್ಳಿ ಗಣೇಶ್,ಊರುಕೇರಿ - ಡಾ|| ಸಿದ್ಧಲಿಂಗಯ್ಯ,ಲಂಕೇಶ್ವರ - ಡಾ|| ಮಳಲಿ ವಸಂತಕುಮಾರ್

ಈ ಮೇಲಿನ ಎಲ್ಲಾ ನಾಟಕಗಳ ಸಂಕ್ಷಿಪ್ತವಾದ ವಿವರಣೆಯ ನೀಡುವ ಮೂಲಕ ಉತ್ತಮವಾದ ವಿಮರ್ಶೆ ಮಾಡಿದ್ದಾರೆ ಗೊರೂರು ಅನಂತರಾಜು ರವರು. ಅವರು ಕನ್ನಡ  ಸಾರಸ್ವತ ಲೋಕಕ್ಕೆ ಇನ್ನೂ ಹೆಚ್ಚಿನ ಕೃತಿಗಳನ್ನು ನೀಡಲಿ ಎಂದು ಹಾರೈಸುತ್ತೇನೆ .
ಪುಸ್ತಕದ ಹೆಸರು:  "ರಂಗಸಿರಿ ಕಥಾ ಐಸಿರಿ "
ಲೇಖಕರು: ಗೊರೂರು ಅನಂತರಾಜು
ಪ್ರಕಾಶನ: ಗೊರೂರು ಅನಂತರಾಜು
ಬೆಲೆ: ೧೪೦.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529


08 February 2022

ಸಮರಸದಿ ಬಾಳೋಣ .


 


*ಸಮರಸದಿ ಬಾಳೋಣ*


ಬಟ್ಟೆಗೆಟ್ಟು ಬಟ್ಟೆಗಳ ಬಗ್ಗೆ

ಜಟ್ಟಿಗಳಂತೆ ಕಿತ್ತಾಡಿ 

ಬಟಾಬಯಲಾಗಬೇಡಿ|

ರಟ್ಟೆಯಲಿರುವ ಶಕ್ತಿ ಬಳಸಿ

ಕಟ್ಟೋಣ ಭಾವೈಕ್ಯತೆಯ ನಾಡನು

ಬಾಳೋಣ ಸಮರಸದಿ ಕೂಡಿ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ.

*ಇಂದಿನ ಜನಮಿಡಿತ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ*೮/೨/೨೨


 

07 February 2022

ತಿರುಕನ ದರ್ಶನ .


 


ತಿರುಕನ ದರ್ಶನ ಮಾಡಿಸಿದ ಶಾಂತಮ್ಮ.


ಅವರು ಶಾಂತಮ್ಮ .ಸುಮಾರು ಐವತ್ತು ವರ್ಷ ವಯಸ್ಸಿನ ,ಕೂದಲು ಬೆಳ್ಳಗಿರುವ ,ಸಾಧಾರಣ ಮೈಕಟ್ಟಿನ , ಮಹಿಳೆ. ಮುಂದಿನ ನಾಲ್ಕೈದು ಹಲ್ಲುಗಳು ಉದುರಿದ್ದರೂ ಸ್ಪಷ್ಟವಾಗಿ ಮಾತನಾಡುತ್ತಿದ್ದರು .ಅದರೆ ನಮ್ಮ ಕೊಟಗೇಣಿಯ ಜನರಿಗೆ ಅವರ ಮಾತು ಸರಿಯಾಗಿ ಅರ್ಥವಾಗದೇ ಬಾಯಿ ತೆರೆದುಕೊಂಡು ಅವರನ್ನೆ ನೋಡುತ್ತಿದ್ದರು. ಕಾರಣ ಅವರು ಉತ್ತರ ಕರ್ನಾಟಕದ ಕನ್ನಡ ಮಾತನಾಡುತ್ತಿದ್ದರು . 

ನಾನು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುವಾಗ ನಮ್ಮ ಊರಿಗೆ ಅಂಗನವಾಡಿ ಸಹಾಯಕಿಯಾಗಿ ಬಂದ ನಂತರ ಗೊತ್ತಾಗಿದ್ದು ಅವರದು ಒಂಟಿ ಜೀವನ ಎಂದು! ಇರಲು ಬಾಡಿಗೆ ಮನೆಯ ಹುಡುಕಾಟ ನಡೆಸಿದಾಗ ನಮ್ಮ ಊರಿನ ಪಾರ್ಥಲಿಂಗೇಶ್ವರ ಯುವಕ ಸಂಘದ ಮನೆಯಲ್ಲಿ ಇರುವಂತೆ ಊರವರು ಹೇಳಿದರು . ಅದರಂತೆಯೇ ಶಾಂತಮ್ಮ ಸಂಘದ ಮನೆಯಲ್ಲಿ ವಾಸ ಆರಂಭಿಸಿದರು. ಹೊಸ ಜಾಗ ,ಹೊಸ ಮನೆಯಲ್ಲಿ ಇರಲು ಸ್ವಲ್ಪ ಭಯಗೊಂಡವರಂತೆ ಕಂಡ ಶಾಂತಮ್ಮ ನಮ್ಮ ಅಮ್ಮನ ಬಳಿ ಬಂದು " ನಿಮ್ ವೆಂಕಟೇಶ್ ಸಂಜೀ ಹೊತ್ತು ನನ್ನ ಸಂಗಡ ಮಲ್ಗಾಕ ಕಳುಸು, ಅವಂಗೆ ನಾ ಬೇಕಾದರೆ ಒದಾದು ಬರ್ಯಾದು ಹೇಳ್ಕೊಡ್ತೇನೆ" ಎಂದಾಗ ಅಮ್ಮ ಒಪ್ಪಿದರು. ನನ್ನ ಜೊತೆಗೆ ನನಗಿಂತ ಐದಾರು ವರ್ಷ ಹಿರಿಯರಾದ ಗೊಲ್ಲರ ಹಟ್ಟಿಯ  ಗಾಯತ್ರಕ್ಕ ಸಹ  ಜೊತೆಯಾದರು. ಶಾಂತಮ್ಮನವರ ಸಂಘದ ಮನೆಯಲ್ಲಿ ರಾತ್ರಿಯ ವೇಳೆಯಲ್ಲಿ ಓದಿ, ಬರೆದುಕೊಂಡು ಅಲ್ಲೇ ಮಲಗಿ ಬೆಳಿಗ್ಗೆ ಎದ್ದು ನಮ್ಮ ಮನೆಗೆ ಹೋಗುತ್ತಿದ್ದೆವು. ಕ್ರಮೇಣವಾಗಿ ನಾನು ಮತ್ತು ಗಾಯತ್ರಕ್ಕ ಇಬ್ಬರೂ ಶಾಂತಮ್ಮನವರ ಸಾಕು ಮಕ್ಕಳು ಎಂದು ಊರವರೇ ಪಟ್ಟ ಕಟ್ಟಿದರು. ಕೆಲವೊಮ್ಮೆ ಶಾಂತಮ್ಮ ರಾತ್ರಿ ವೇಳೆ ನಮಗೆ ಪಕೋಡ, ಬೋಂಡಾ, ರೊಟ್ಟಿ, ಚಕ್ಕುಲಿ ಮಾಡಿಕೊಡುತ್ತಿದ್ದರು ಆ ರುಚಿಯಾದ ತಿಂಡಿ ತಿನಿಸು ತಿಂದ ಕೆಲ ದಿನ ಓದು ಬರಹ ಸೊನ್ನೆಯಾಗಿದ್ದೂ ಉಂಟು...


ಶಾಂತಮ್ಮ ನಮ್ಮ ಊರಿಂದ ಎಲ್ಲೇ ಹೊರಟರೂ ನಾನು ಮತ್ತು ಗಾಯಕ್ಕ ಖಾಯಂ ಆಗಿ ಅವರ ಜೊತೆಗೆ ಹೋಗಲೇಬೇಕೆಂಬ ಅಲಿಖಿತ ನಿಯಮ ಜಾರಿಯಲ್ಲಿತ್ತು ಇದನ್ನು ಮನಗಂಡು ಭಾನುವಾರ ಮತ್ತು ರಜಾದಿನಗಳಲ್ಲಿ ದುರ್ಗ ,ಹೊಳಲ್ಕೆರೆ, ಹೊರಕೆರೆದೇವರಪುರ ಹೀಗೆ ನಮ್ಮ ಪಯಣ ಸಾಗುತ್ತಿತ್ತು.

ಮೊದಲ ಬಾರಿಗೆ ನಮಗೆ ಹೊಳಲ್ಕೆರೆ ಬಳಿಯಿರುವ ಅರೇಹಳ್ಳಿಗೆ ಕರೆದುಕೊಂಡು ಹೋಗಿ ರೈಲಿನ ದರ್ಶನ ಮಾಡಿಸಿದ್ದರು. ರಾಮಗಿರಿ ಬೆಟ್ಟ ಹತ್ತಿಸಿದ್ದರು. ಟೆಂಟ್ ನಲ್ಲಿ ಡ್ಯಾನ್ಸ್ ರಾಜಾ ಡ್ಯಾನ್ಸ್ ಸಿ‌ನಿಮಾ ತೋರಿಸಿದ್ದರು. ಒಮ್ಮೆ ಮಲ್ಲಾಡಿಹಳ್ಳಿಯ ಆಶ್ರಮಕ್ಕೆ ಕರೆದುಕೊಂಡು ಹೋಗಿ ಆಶ್ರಮದಲ್ಲಿ ತಿರುಕ ಎಂದೇ ಖ್ಯಾತರಾದ ಯೋಗ ಗುರುಗಳಾದ ರಾಘವೇಂದ್ರ ಸ್ವಾಮೀಜಿಗಳ ದರ್ಶನ ಮಾಡಿಸಿದ್ದರು. ಶಾಂತಮ್ಮನವರ ಒತ್ತಾಯದ ಮೇರೆಗೆ  ಸ್ವಾಮೀಜಿಯವರು ನೆಲಮಹಡಿಯ ಅವರ ಧ್ಯಾನದ ಕೋಣೆಗೆ ಕರೆದುಕೊಂಡು ಹೋಗಿ ಆ ಕೋಣೆಯ ದರ್ಶನ ಮಾಡಿಸಿದ್ದರು. ಆಗ ನಮಗೆ ಸ್ವಾಮೀಜಿಯವರ ಬಗ್ಗೆ  ಅಷ್ಟಾಗಿ ತಿಳಿದಿರಲಿಲ್ಲ. ಕ್ರಮೇಣವಾಗಿ ನಾವು ಬೆಳೆದಂತೆ ಪತ್ರಿಕೆಯಲ್ಲಿ, ಟೀವಿಗಳಲ್ಲಿ ಅವರ ವಿಷಯ ಮತ್ತು ಸೇವಾಮನೋಭಾವ  ತಿಳಿದು .ಅವರ ದರ್ಶನ ಭಾಗ್ಯ ಪಡೆದ ನಾವೆಷ್ಟು ಪುನೀತರು ಎಂದು ಅರ್ಥವಾಯಿತು .ಈಗ ಶಾಂತಮ್ಮ ನವರೂ ನಮ್ಮೊಂದಿಗಿಲ್ಲ ಪೂಜ್ಯ ಸ್ವಾಮೀಜಿಯವರು ಸಹ .ಆದರೆ ಅವರಿಬ್ಬರೂ ನನ್ನ ಜೀವನದಲ್ಲಿ ಪ್ರಮುಖಪಾತ್ರ ವಹಿಸಿದ ಪ್ರಾತಃ ಸ್ಮರಣೀಯರು. ಅವರ  ನೆನೆದರೆ ಮನದಲೇನೋ ಗೌರವ, ಸಮಾಧಾನ ಭಾವ ಉಂಟಾಗುತ್ತದೆ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು.

05 February 2022

ಉದಕದೊಳಗಿನ ಕಿಚ್ಚು .ಭಾಗ ೧೭


 


ಹೆದ್ದಾರಿ ಭಾಗ ೧೭

೧೫/೫/೨೦೨೦

ಸತೀಶನ ಕಾಲೇಜು ಶಿಕ್ಷಣ


ನಲವತ್ತು ವರ್ಷವಾದರೂ ಮುಖದಲ್ಲಿ ಕಾಂತಿ ಕುಗ್ಗಿರಲಿಲ್ಲ ,ಕೆಂಪಗೆ ತೊಂಡೆ ಹಣ್ಣಿನಂತಹ ಬಣ್ಣದ, ಗುಂಡು ಗುಂಡು ಮುಖ, ಅರು ಅಡಿ ಎತ್ತರದ ಆಜಾನುಬಾಹು, ನಲವತ್ತರಲ್ಲೂ ಇಪ್ಪತ್ತರ ಯುವಕನಂತೆ ಕಾಣುವ ಇವರನ್ನು ನೋಡುವ ಮಹಿಳೆಯರು ಮತ್ತೊಮ್ಮೆ ತಿರುಗಿ ನೋಡಲು ಮರೆಯುತ್ತಿರಲಿಲ್ಲ,ಇಸ್ತ್ರಿ ಮಾಡಿದ ಬಿಳಿ ಮರಸೈಜ್  ಪಂಚೆ,ಬಿಳಿ ಅಂಗಿ ತೊಟ್ಟು ಕಾಲಿನಲ್ಲಿ ಆನೆಗಳಿದ್ದರೂ ಆ ಕಡೆ ಈ ಕಡೆ ಕಾಲು ಹೊರಳಿಸಿ ನಡೆಯುವದೂ ಒಂದು ರೀತಿ ವಿಭಿನ್ನವಾಗಿತ್ತು ,ಆ ಊರಿನ ಪಡ್ಡೆ ಹುಡುಗರು ಅದನ್ನೇ ಸ್ಟೈಲ್ ಎನ್ನುತ್ತಿದ್ದರು . ಸೂರ್ಯ ನೆತ್ತಿಯ ಮೇಲಿಂದ ಪಶ್ಚಿಮದ ಕಡೆ ತಿರುಗಿ ಎರಡು ಗಂಟೆಯಾಗಿ ಸೂರ್ಯನ ಪ್ರಖರತೆ ಕಡಿಮೆಯಾಗುತ್ತಾ ಬಂದರೂ ಮುಕುಂದಯ್ಯ ಉಟ್ಟ ಉಡುಪಿನ ಹೊಳಪು ,ಅವರ ಮುಖದಲ್ಲಿ ಸಂತಸದ ಕಾಂತಿ ಕಡಿಮೆಯಾಗಿರಲಿಲ್ಲ .ಅಳಿಯ ಇಡೀ ತಾಲೂಕಿಗೆ ಅತಿಹೆಚ್ಚಿನ ಅಂಕ ಗಳಿಸಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಾಸಾಗಿದ್ದು ಇನ್ನೂ ಎದೆಯುಬ್ಬಿಸಿ ಊರಮುಂದೆ ನಡೆಯುತ್ತಿದ್ದರು ಮುಕುಂದಯ್ಯ.


ಏನಣ್ಣ ನಿಮ್ ಅಳಿಯ ಒಳ್ಳೆ ‌ನಂಬರ್ ತಗ್ದು ಪಾಸಾಗವ್ನೆ? ಬಾಳ ಸಂತೋಸ ಪಾಪ ತಂದೆ ಇಲ್ದಿರೋ ಮಗುನ ನೀವು ಸೆನ್ನಾಗಿ ಓದಿಸಿದಿರಿ ಕಣಣ್ಣ ಅಕ್ಕನ ಕ್ರಿಯಾ ಇಡಿದ್ರಿ ಮಾರಮ್ಮ ನಿಮ್ಮನ್ನು ಕಾಪಾಡ್ತಾಳೆ ಬಿಡಣ್ಣ " ಈಗೆ ಅಳಿಯನ ಬಗ್ಗೆ ,ತನ್ನ ಬಗ್ಗೆ ಮೂಡಲಪ್ಪ ಹೊಗಳುವುದಕ್ಕೆ ಮನದಲ್ಲೇ ಸಂತಸ ಪಟ್ಟರೂ

" ಅಯ್ಯೋ ನಮ್ಮದೇನಿದೆ ಅದರಲ್ಲಿ ಡೊಡ್ಡಸ್ತಿಕೆ ? ಅವ್ನು ಸೆನಾಗಿ ಓದಿದ ನಾವು ಸ್ವಲ್ಪ ಸಪೋರ್ಟ್ ಮಾಡಿದ್ವಿ ಅಷ್ಟೇ  ಬಾ ಟೀ ಕುಡಿ " ಎಂದು ಬ್ರಮ್ಮಿ ಹೋಟೆಲ್ ಕಡೆ ಇಬ್ಬರೂ ಹೊರಟರು.

" ಬ್ರಮ್ಮಿ ಎರಡು ಟೀ ಕೊಡಪ್ಪ"

"ಆತಣ್ಣ ಏನಣ್ಣ ನಿಮ್ ಹುಡ್ಗ ಚೆನಗ್ ನಂಬರ್ ತಕ್ಕಂಡದನಂತೆ ಮದ್ಯಾನ್ದಿಂದ ನಮ್ ಹೋಟಲ್ನಲ್ಲಿ ಅದೇ ಮಾತು"

" ಊಂಕಣ ಇಡೀ ತಾಲೂಕಿಗೆ ಫಸ್ಟ್ ಬಂದವ್ನೆ  ನಾಡಿದ್ದು ಬಿ ಇ ಓ ಕರಿಸಿ ಸನ್ಮಾನ ಮಾಡ್ತಾರಂತೆ "ಎಂದು ಬೀಗಿದರು ಮುಕುಂದಯ್ಯ .

"ಏ ಮುಕುಂದ ಎಲ್ಲಲೆ ಸ್ವೀಟ್ " ಗೆಳೆಯ ರಾಮಣ್ಣ ಕೇಳಿದ

" ಬಾರಲೆ ಟೀ ಕುಡಿ ಬ್ರಮ್ಮಿ ಇವನಿಗೂ ಟೀ ಕೊಡಪ್ಪ " 

" ಬರೀ ಟೀನಲ್ಲೆ ಮುಗುಸ್ತಿಯಾ ಮಗನೆ"

" ಮತ್ತೇನು ನಮ್ಮೂರಲ್ಲಿ ಬೇಕರಿ ಐತೇನಲ ಹಿರಿಯೂರಿಗೆ ಹೋದಾಗ ಕೊಡುಸ್ತಿನಿ ಈಗ ಬೇಕಾದರೆ ತಿಂಡಿ ತಿಂದು ಮುಚ್ಕೆಂಡು ಟೀ ಕುಡಿ"

"ಅದ್ಯಂಗ್  ಮುಚ್ಕೊಂಡು ಟೀ ಕುಡಿಯಾಕ್ ಆಗುತ್ತಲೆ" 

ಸ್ನೇಹಿತರ ಆತ್ಮಿಯ ಮಾತು ಕೇಳಿ "ನೀವಿಬ್ಬರೂ ಹೋಟೆಲ್ಗೆ ಬಂದರೆ ಬೇಜಾರನೆ ಇರಲ್ಲ ಕಣಣ್ಣ" ಅಂದ ಬ್ರಮ್ಮಿ

"ಆತೇಳಪ್ಪ ಮಾಡಾ ಕೆಲ್ಸ ಬಿಟ್ಟು ನಾಳೆಯಿಂದ ಇಲ್ಲೇ ಕತುಕಮ್ತೀವಿ"

ಹೊಟೆಲ್ ಒಳಗಿರುವ ಇತರೆ ಗಿರಾಕಿಗಳು ನಕ್ಕರು.

"ಹುಡುಗ ಚೆನಾಗ್ ಓದಂಗವ್ನೆ ನಮ್ಮೂರು ಕಾಲೇಜ್ ಬ್ಯಾಡ ಇಲ್ಲಿ ಬರೀ ಆರ್ಟ್ಸ್, ಕಾಮರ್ಸ್ ಮಾತ್ರ ಇರೋದು ,ಆರ್ಟ್ಸ್ ಓದಿ ನಮ್ಮಂಗೆ ನೇಗ್ಲು ಹಿಡಿಯಾದ್ ಬ್ಯಾಡ, ಅವ್ನ ಹಿರಿಯೂರು ಜ್ಯೂನಿಯರ್ ಕಾಲೇಜಿಗೆ ಸೇರಿಸಿ ಸೈನ್ಸ್ ಕೊಡುಸು " ಟೀ ಕುಡಿಯುತ್ತಾ ಸ್ನೇಹಿತನಿಗೆ ಸಲಹೆ ನೀಡಿದರು ರಾಮಣ್ಣ

" ನಾನು ಅಂಗೆ ಅಂದ್ಕಂಡಿದಿನಿ,ಸೈನ್ಸ್ ಓದಿಸಿ ಡಾಕ್ಟೋ ,ಇಂಜಿನಿಯರೊ ಓದ್ಸಣಾ 

ಕೊನೆ ಪಕ್ಸ ಬಿಎಸ್ಸಿ ಎಜಿ ನಾದರೂ ಮಾಡ್ಸಣ "

"ಆತು ಅಂಗೆ ಮಾಡು ನಮ್ಮನು ಎಸ್ಸೆಸ್ಸೆಲ್ಸಿ ನೆ ಪಾಸ್ ಮಾಡ್ಲಿಲ್ಲ  ಕಳ್ ನನ್ ಮಗ ನಾನು ಅವನ್ ಇಂಜಿನಿಯರ್ ಓದ್ಲಿ ಅಂತ ಆಸೆ ಇತ್ತು"

" ಅವನು ನಿನ್ ಮಗ ಅಲ್ವೇನಲ ,ನೀನು ಎಸ್ಸೆಸ್ಸೆಲ್ಸಿ ನಾಕು ಸತಿ ಡುಂಕಿ ಹೊಡಿಲಿಲ್ವೆ."

" ಸುಮ್ಕಿರಲೆ ನಿಮ್ಮಜ್ಜಿ  ,ಮಾರ್ಯಾದೆ ಕಳಿಬ್ಯಾಡ ,ಎಮ್ಮೆ ಹಾಲ್ಕರಿಬೇಕು ನಾ ಬತ್ತಿನಿ ಸೋಮವಾರ ಹಿರಿಯೂರಿಗೆ ಕರ್ಕೊಂಡು ಹೋಗಿ ಸ್ವೀಟ್ ಕೊಡಿಸ್ಬೇಕು ಮರಿಬ್ಯಾಡಲೆ" ಎನ್ನುತ್ತಾ ಮನೆ ಕಡೆ ಹೊರಟರು ರಾಮಣ್ಣ.


ಹೀಗೆ ಅಂದು ಹೋಟೆಲ್ಗೆ  ಬಂದವರಿಗೆಲ್ಲ ಅವರಿಗೆ ಗೊತ್ತಿಲ್ಲದಿದ್ರೂ ಸತೀಶನ ರಿಸಲ್ಟ್ ಅನ್ನು ಬ್ರಮ್ಮಿ ಜ್ಞಾಪಿಸಿ ಅವರಿಗೆ ತಿಂಡಿ ಟೀ ಕೊಡುತ್ತಿದ್ದ ,ಇದಕ್ಕೆ ಸಿದ್ದರಾಗೆ ಜೇಬಿನಲ್ಲಿ ದುಡ್ಡು ತಂದಿದ್ದರು ಮುಕುಂದಯ್ಯ. ಸಂಜೆ ಬುಡ್ಡಿ ಹಚ್ಚುವ ವೇಳೆಗೆ 

"ಎಷ್ಟಾತಪ್ಪ ಬಿಲ್ಲು " ಕೇಳಿದರು ಮುಕುಂದಯ್ಯ

" ಅಣ್ಣ ಮುನ್ನೂರಾ ಅರವತ್ತೆರಡು" ಅಂದ ಬ್ರಮ್ಮಿ 

ಮುನ್ನೂರ ಅರವತ್ತೈದು ರುಪಾಯಿ ಕೊಟ್ಟು, ಚಿಲ್ಲರೆ ನೀನೆ ಇಟ್ಕ ಅಂದು ಮನೆ ಕಡೆ ಹೊರಟರು ಮುಕುಂದಯ್ಯ .

"ಏನ್ ಬ್ರಮ್ಮಿ ಬಾಳ ಖುಷಿಯಿಂದ ಇದಿಯಾ ಲಾಟರಿ ಹೊಡಿತಾ" ಆಗ ತಾನೆ ಬಂದ ಗಿರೀಶ ಕೇಳಿದ 


"ಈ ವಾರವೆಲ್ಲ ಮುನ್ನೂರು ರುಪಾಯಿ ವ್ಯಾಪಾರ ಆಗಿರ್ಲಿಲ್ಲ ಇವತ್ತೊಂದೆ ದಿನ ಇಷ್ಟು ವ್ಯಾಪಾರ ಆತು ಚೆನ್ನಾಗ್ ನಂಬರ್ ಬಂದು   ಆ ಹುಡ್ಗನ್  ಮುಂದಿನ ವಿದ್ಯಾಭ್ಯಾಸ ಚೆನ್ನಾಗಿರಲಿ" ಎಂದು ಹರಸಿದ ಬ್ರಮ್ಮಿ, ಬಹುಶಃ ಆಗ ಅಶ್ವಿನಿ ದೇವತೆಗಳು ತಥಾಸ್ತು ಅನ್ನಲಿಲ್ಲ ಅನಿಸುತ್ತದೆ.

" ಹೋ ಎಸ್ಸೆಸ್ಸೆಲ್ಸಿ ಪಾಸ್ ಆಗಿಬಿಟ್ರೆ ಹೀರೊ ಆಗಲ್ಲ ಮುಂದೆ ಇರಾದು, ಪಿ ಯು ಸಿ ನಲ್ಲ ಡುಂಕಿ ಹೊಡೆದ್ ಬಿಟ್ರೆ" ಎಂದು ಇನ್ನೂ ಮಾತು ಮುಗಿಸಿರಲಿಲ್ಲ ಬಾಗಿಲ ಬಳಿ ಹಲ್ಲಿ ಲೊಚ್ ಲೊಚ್ ಎಂದು ಲೊಚಗುಟ್ಟಿತು.

ಇದರಿಂದ ಬೇಸರಗೊಂಡಂತೆ ಕಂಡ ಬ್ರಮ್ಮಿ " ಹುಂ ಏನ್ ಕೊಡಾನಪ್ಪ"

" ಒಂದ್ ಪ್ಲೇಟ್ ಕಾರ ಮಂಡಕ್ಕಿ ಟೀ" ಕೊಡು

"ಹಳೆ ಬಾಕಿ ಕೊಡಲಿಲ್ಲ ನೀವು" ಮುಖ ಗಂಟಿಕ್ಕಿ  ಕೇಳಿದ ಬ್ರಮ್ಮಿ

" ಏ ನಾನೇನ್ ಓಡೋಗಲ್ಲ ಇರಾ ಮಾರಾಯ ಕಡ್ಲೇ ಕಾಯಿ ಮಾರಿಲ್ಲ ಮುಂದ್ಲು ವಾರ ಕೊಡ್ತಿನಿ"ಗಿರೀಶ ಹೇಳಿದ

"ಈ ಮೂರ್ತಿಂಗಳು ಬರೀ ಇದೇ ಹೇಳ್ತಿಯಲ್ಲ ನಾವ್ ಎಂಗ ಹೋಟೆಲ್ ನಡೆಸ್ಯಾದು ನೀನೆ ಹೇಳಪ್ಪ"

"ಆತು ಬಿಡಪ್ಪ ನಾಳೆ ಕೊಡ್ತಿನಿ ಟೀ ಕೊಡು" ಎತ್ತರದ ಧ್ವನಿಯಲ್ಲಿ ಕೇಳಿದ ಗಿರೀಶ

ಅವನು ಟೀ ಕುಡಿದು ಸಂಜೆಗತ್ತಲಲ್ಲಿ ಮಾಯವಾದರೂ ಬ್ರಮ್ಮಿ ಏನೋನೋ ಗೊನಗುತ್ತಾ ಟೀ ಲೋಟ ತೊಳೆಯಲು ಶುರುಮಾಡಿದ.


 ಸತೀಶನನ್ನು ಹಿರಿಯೂರಿನ ಪದವಿ ಪೂರ್ವ ಕಾಲೇಜಿಗೆ ಸೇರಿಸಲು ತೀರ್ಮಾನ ಮಾಡಿರುವುದಾಗಿ ಅಮ್ಮನಿಗೆ ವರದಿ ಒಪ್ಪಿಸಿದರು ಮುಕುಂದಯ್ಯ.

" ಏನೋ ಓದಾ ಇಸ್ಯಾದಾಗ ನಂಗೇನು ಗೊತ್ತಾಗಲ್ಲ ಒಟ್ನಲ್ಲಿ ಈ ಹುಡುಗ ಸೆಂದಾಗಿ ಓದಿ ಕೆಲ್ಸ ಕ್ಕೆ ಸೇರಿ ಅವರಮ್ಮನ್ ಸೆನ್ನಾಗಿ ನೋಡ್ಕಂಡ್ರೆ ಅಷ್ಟೇ ಸಾಕು.ಪಾಪ...ಅವ್ಳು ಪಡೋ ಕಷ್ಟ ನೋಡಾಕಾಗಲ್ಲ" ಎಂದರು ಸರಸ್ವತಜ್ಜಿ

"ನಾಳೆ ಬುಧವಾರ ದಿನ ಚೆನ್ನಾಗೈತಂತೆ ಆಯತಾರಪ್ಪ ಹೇಳೆದಾರೆ ನಾಳೆ ಹೋಗಿ ಇವ್ನ ಕಾಲೇಜ್ ಗೆ ಸೇರಿಸ್ಬತ್ತಿನಿ"

"ಅತು ಅಂಗೆ ಮಾಡಪ್ಪ" . ಕುಟ್ನಿ ಪಕ್ಕದಲ್ಲಿ ಇಟ್ಟು ಮಲಗಲು ಹಾಸಿಗೆಗೆ ಹೋದರು ಸರಸ್ವತಜ್ಜಿ.


ಮೊದಲ ಬಾರಿಗೆ ತನಗಾಗೆ ಹೊಲಿಸಿದ  ನೀಲಿ ಬಣ್ಣದ ಪ್ಯಾಂಟ್ ಧರಿಸಿ ಸ್ವಲ್ಪ ಉದ್ದವಾದರೂ ಕೆಳಗೆ ಮಡಿಚಿಕೊಂಡ ,ಈ ಮೊದಲು ಪ್ಯಾಂಟ್ ಧರಿಸಿದ್ದರೂ ಅದು ಮುರಾರಿಯ ಹಳೆ ಪ್ಯಾಂಟ್ ಅದನ್ನು ಹಾಕಿಕೊಂಡರೆ ಗೆಳೆಯರು" ಏನಪ್ಪ ಮಾವನ್ ಪ್ಯಾಂಟ್ ಹಾಕ್ಕೊಂಡಾ ,ನಾಳೆ ಮಾವನ್ ಪಂಚೆ ಉಟ್ಕಂಡ್ ಬರಬ್ಯಾಡೊ" ಎಂದು ಹಂಗಿಸುತ್ತಿದ್ದರು.ಅವರಿಗೆಲ್ಲ ಒಂದು ಸಾರಿ ನನ್ನ ಹೊಸ ಪ್ಯಾಂಟ್ ತೋರಿಸಿ ಬರಬೇಕು ಎನಿಸಿತು ,ಬ್ಯಾಡ  ಮಾವ ಬೆಳಿಗ್ಗೆ ಏಳು ಗಂಟೆಗೆ ಜೈರಾಂ ಬಸ್ ಗೆ ಹೋಗ್ಬೇಕು ಅಂದಿದಾರೆ ಈಗಾಗಲೇ ಆರುಕಾಲು, ಇನ್ನೂ ಮೊಸರನ್ನ ತಿಂದು ಹೊರಡಬೇಕು ಎಂದು ಕನ್ನಡಿ ಮುಂದೆ ನಿಂತ .ನಾನು ಸ್ವಲ್ಪ ಉದ್ದ ಹಾಗಿದಿನಾ? ಅವನೆ ಪ್ರಶ್ನೆ ಹಾಕಿಕೊಂಡ ,ಏ ಎರಡು ತಿಂಗಳಿಗೆ ಉದ್ದ ಆಗ್ತಾರಾ? ನನಗೆ  ಎಸ್ಸೆಸ್ಸೆಲ್ಸಿ ಚೆನ್ನಾಗಿ ನಂಬರ್ ಬಂದಿದ್ದ ಕ್ಕೆ ನನಗೇನಾದರೂ ಜಂಭ ಬಂತ? ಏ ಎಂತದು ಇಲ್ಲ ಇದೆಲ್ಲಾ ಯಾಕೆ ನನಗೆ ಇವತ್ತು ಇಂಗೆ ತಲೆಗೆ ಬರೊತ್ತೋ ಎಂದು ದೇವರ ಮನೆಗೆ ಹೋಗಿ ಹಣೆಗೆ ತಿರುಪತಿಯಿಂದ ತಂದ  ವೆಂಕಟರಮಣಸ್ವಾಮಿಯ ಬಿಳಿ  ನಾಮ ತೇದು ಹಣೆಗೆ ಹಚ್ಚಿಕೊಂಡು ಅದರ ಮೇಲೆ 

ಮಾರಮ್ಮನ ಗುಡಿಯಿಂದ ತಂದ ಅರಿಶಿಣ ಭಂಡಾರ ಹಚ್ಚಿಕೊಂಡು ಹೊರಬಂದ.

" ಅನ್ನ ಮೊಸರು ತಟ್ಟೆಗೆ ಹಾಕಿದಿನಿ ಬಾರೊ ಸತೀಶ ತಿನ್ನು" ತಿಮ್ಮಕ್ಕ ಕೂಗಿದರು

ಬೆಳಿಗ್ಗೆ ಬೆಳಿಗ್ಗೆ ಅನ್ನ ಮೊಸರು ತಿನ್ನಲು ಮನಸಿಲ್ಲದಿದ್ದರೂ ತಿನ್ನಲೇಬೇಕು .ಸದ್ಯ ಇವನ ಪುಣ್ಯ ಬಿಸಿ ಅನ್ನ ಮೊಸರು ಸಿಗುತ್ತಿದೆ.   ಕೆಲವೊಮ್ಮೆ  ಬೆಳಿಗ್ಗೆ ಮುಕುಂದಯ್ಯ ಮತ್ತು ಇತರರು ಯಾವುದಾದರೂ ಊರಿಗೆ ಹೋಗಬೇಕಾದರೆ ,ಬಿಳಿಯಪ್ಪ ಬೆಳಿಗ್ಗೆ ಬೇಸಾಯಕ್ಕೆ ಹೊರಟರೆ ರಾತ್ರಿ ಉಳಿದ ಮುದ್ದೆಯನ್ನು ಮೊಸರಲ್ಲಿ ಹಾಕಿ ಅದನ್ನು ಕಿವುಚಿಕೊಂಡು ತಿಂದು ಹೋಗುತ್ತಿದ್ದರು .ಅವರಿಗೆ ಅನ್ನದ ಬಗ್ಗೆ ಅಷ್ಟು ಗೌರವ ಒಮ್ಮೆ ಸತೀಶ ಸಾರು ಚೆನ್ನಾಗಿಲ್ಲ ಎಂದು  ತಟ್ಟೆಯಲ್ಲಿ ಸ್ವಲ್ಪ ಮುದ್ದೆ ಬಿಟ್ಟು  ಅದನ್ನು ಕಲ್ಲ ಮುಸುರೆ ಬಾನಿಗೆ ಹಾಕುವುದ ನೋಡಿದ ಮುಕುಂದಯ್ಯ

" ಏನಪ್ಪ ಸಾವ್ಕಾರ ಮುದ್ದೆ ಅಂಗ್ ಬಿಸಾಕ್ತಿಯಲ್ಲ ಅನ್ನದ ಬೆಲೆ ಗೊತ್ತೇನೊ ನಿಂಗೆ ಒಂದ್ ಸೇರು ರಾಗಿ ಬೆಳಿಯಾಕ್ ನಾವು ಎಷ್ಟ್ ಕಷ್ಟ ಪಡ್ತಿವಿ ಗೊತ್ತೇನಪ್ಪ ?ಇವತ್ತೂ ನಮ್ಮೂರು ಹಟ್ಯಾಗೆ ಎಷ್ಟೋ ಜನ ಒಂದತ್ತು ಊಟ ಇಲ್ದೆ ಬರೀ ನೀರ್ಕುಡ್ದು ಮಕ್ಕಂತಾರೆ ಗೊತ್ತ ನಿನಗೆ? ಅಷ್ಟೇ ಯಾಕೆ ನಮ್ಮಕ್ಕ ಅಂದರೆ ನಿಮ್ಮಮ್ಮ ಒಂದು ತುತ್ತುಗೋಸ್ಕರ ಎಷ್ಟು ಕಷ್ಟ ಪಡ್ತಾಳೆ ಗೊತ್ತೇನಪ್ಪ ನಿನಗೆ? ನೀನು ಇಂಗೆ ತಿನ್ನಾ ಅನ್ನ ಪೋಲು ಮಾಡಿದ್ರೆ ಮುಂದೆ ನಿನಗ್ ಒಂದು ತುತ್ತು ಅನ್ನ ಸಿಗಲ್ಲ, ಮೈಮೇಲೆ ಪ್ರಜ್ಞೆ ಇರಲಿ" ಈಗೆ ಸುದೀರ್ಘವಾದ ತಿಳುವಳಿಕೆ ಹೇಳಿದರು.

ಅಂದಿನಿಂದ ಸತೀಶ ಊಟ ಮಾಡಿದ ತಟ್ಟೆ ತೊಳೆಯಲು ತಿಮ್ಮಕ್ಕನಿಗೆ ಬಹಳ ಸುಲಭವಾಗಿತ್ತು.

"ಇನ್ನೊಂದು ಸ್ವಲ್ಪ ಅನ್ನ ಹಾಕನೇನಾ? ಅನ್ನ ಬೆಣ್ಣೆ ತಿನ್ನು ಸೆನ್ನಗಿರುತ್ತೆ". ಎಂದು ಬಡಿಸಿದರು ತಿಮ್ಮಕ್ಕ.

 ಊಟ ಮಾಡಿ ಕೈತೊಳೆದುಕೊಂಡು ವಲ್ಲೀಬಟ್ಟೆಯಲ್ಲಿ ಕೈ ಕರೆಸಿಕೊಂಡು ಮತ್ತೊಮ್ಮೆ ದೇವರಿಗೆ ಕೈಮುಗಿದು ಅಜ್ಜಿ ಕಾಲಿಗೆ ಬಿದ್ದಾಗ

" ಸೆನ್ನಾಗಿ ಓದಪ್ಪ ಆ ದೇವಿ ನಿನಿಗೆ ಒಳ್ಳೆದು ಮಾಡಲಿ ಎಂದು ಬೊಚ್ಚು ಬಾಯಲ್ಲಿ ಆಶೀರ್ವದಿಸಿದಾಗ ಎಲೆಅಡಿಕೆಯ ಹನಿಗಳು ಅಜ್ಜಿಯ ಬಾಯಿಂದ ಮೊಮ್ಮಗನ ಮೇಲೆ ತೀರ್ಥದಂತೆ ಬಿದ್ದವು.

ಮಾವನ ಜೊತೆ ಮನೆಯಿಂದ ಬಸ್ಟಾಂಡ್ ಗೆ ಬೀದಿಯಲ್ಲಿ ನಡೆಯುವಾಗ ಏನೊ ಖುಷಿ , ಮಾವ ಮುಕುಂದಯ್ಯ ಸಹ ಹೆಮ್ಮೆಯಿಂದ ಅಳಿಯನ ಕರೆದುಕೊಂಡು ಬೀದಿಯಲ್ಲಿ ಹೋಗುವಾಗ ಕೆಲವರು ಸಂತಸಪಟ್ಟರೆ ಕೆಲವರು ಇಳಗೊಳಗೆ ಉರಿದುಕೊಳ್ಳುತ್ತಿದ್ದರು.


ಹಿರಿಯೂರಿಗೆ ಮೂರ್ನಾಲ್ಕು ಬಾರಿ ಮಾವಂದಿರ ಜೊತೆ ಹೋಗಿ ಬಂದಿದ್ದ ಸತೀಶ ಈ ಬಾರಿ ಹೋಗುತ್ತಿರುವುದೂ ಮಾವನ ಜೊತೆಗಾದರೂ ಮನದಲ್ಲೇ ಒಂದು ಸಂತಸ, ಒಂದು ಕಾತರ, ಒಂದು ರೀತಿಯ ಅವ್ಯಕ್ತ ಭಯ ,ಕಾಲೇಜು ಯಾವ ರೀತಿಯಲ್ಲಿ ಇರಬಹುದು, ಸ್ನೇಹಿತರು ಎಂತವರು ಸಿಗುವರೋ? ಎಂತಹವರು ಇದ್ದರೇನು? ಸದ್ಯ ನನಗೆ ಬೇಕಾದವರು ಒಬ್ಬರು ಇರ್ತಾರಲ್ಲ?! ಅಷ್ಟೇ ಸಾಕು. ಎಂದು ಯೋಚಿಸುತ್ತಾ ಬಸ್ಸಿನಲ್ಲಿ ನಿಂತಿದ್ದ. ಬಸ್ ತುಂಬಾ ಹಾಲು ಮೊಸರು ಮಾರಲು ಯರಬಳ್ಳಿಯ ಗೊಲ್ಲರಹಟ್ಟಿಯಿಂದ ಜೈರಾಂ ಬಸ್ಸಿಗೆ ಬರುತ್ತಿದ್ದರು. ಅವರಿಂದಾಗಿ ಇಡೀ ಬಸ್ ನಲ್ಲಿ ಹಾಲು ಮೊಸರಿನ ವಾಸನೆ ,ಶನಿವಾರ ಆದರೆ ಕುರಿಮಾರ್ಕೆಟ್ ಇರುವ ಕಾರಣ ಬಸ್ನಲ್ಲಿ ಕುರಿಗಳ್ಯಾರೊ ಮನುಷ್ಯರ್ಯಾರೋ ಎಂದು ಹುಡುಕುವುದು ಕಷ್ಟವಾಗುತ್ತದೆ . ಬಸ್ ಒಳಗೆ ನಿಲ್ಲಲು  ಜಾಗ ಸಾಲದೆ ಬಸ್ ಮೇಲೆ ಹತ್ತಿ ಪ್ರಯಾಣ ಮಾಡುವದು ಅಲ್ಲಿಯ ಜನರಿಗೆ ಮಾಮೂಲಾಗಿದೆ.

ಅಂದು ಬುಧವಾರವಾದ್ದರಿಂದ ಅಂತ ರಷ್ ಇರಲಿಲ್ಲ 

" ನೀನು ಭೂದೇವಮ್ಮನ ಮಗ ಅಲ್ವೇನಪ್ಪ ನಿಂದು ಸೆನ್ನಾಗಿ ನಂಬರ್ ಬಂದೈತಂತೆ ನಮ್ಮ ಹಟ್ಟೀಲಿ ಜನ ಮಾತಡ್ತಿದ್ದರು ಕಣಪ್ಪ ನಿಮ್ಮವ್ವ ನಾನು ಚಿಕ್ಕವ್ರಾಗಿದ್ದಾಗ ಜೊತೆಗೆ ಆಡ್ತಿದ್ವಿ, ನಿಮ್ಮವ್ವ ಬಾಳ ಒಳ್ಳೇಳು ಕಣಪ್ಪ ,ಪಾಪ ನಿಮ್ಮಪ್ಪ ಸಿಕ್ಕ ವಯಸ್ಗೆ ಸತ್ತು ಹೋಗಿಬಿಟ್ರು, ಏನೋ ನಿಮ್ ಮಾವರು ಓದಸ್ತಾರೆ ಸೆನ್ನಾಗಿ ಓದಿ ನಿಮ್ಮವ್ವನ ಸಾಕಪ್ಪ" ಎಂದರು ಗೊಲ್ಲರ ಹಾಲು ಮಾರುವ ಹೆಂಗಸು ಎಲ್ಲೋ ನೋಡಿದ ನೆನಪು  ಸತೀಶನಿಗೆ ನೆನಪಾಗಲಿಲ್ಲ

"ಆತು ಕಣಕ " ಅಂದು ಸುಮ್ಮನಾದ.


ಬಸ್ ಹರ್ತಿಕೋಟೆ ದಾಟಿ ನಮೂಜಿ ದಿನ್ನೆ ಹತ್ತುವಾಗ ವರ್ರೋ.... ವರ್ರೋ... ಎನ್ನುತ್ತಾ ತಗ್ಗು ಇದ್ದಾಗ ನಾ ಇಂಗೆ  ಜೋರಾಗಿ ಹೋಗೋದ್ ಅಂತ ,ಹರ್ತಿಕೋಟೆ ದಾಟಿ ಚನ್ನಮ್ಮನಹಳ್ಳಿ ಗೇಟ್ ನಲ್ಲಿ ಬಸ್ ನಿಂತಿತು. ಉದ್ದನೆಯ ಲೇಖಕ್ ನೋಟ್ಬುಕ್ ಹಿಡಿದು ಲಂಗ ದಾವಣಿ ಹಾಕಿದ ಒಂದು ಹುಡುಗಿ  ಬಸ್ ಹತ್ತಿ ಒಳಗೆ ಹೆಚ್ಚು ರಷ್ ಇದ್ದದರಿಂದ ಅಲ್ಲೆ ಮೆಟ್ಟಿಲ ಬಳಿ ಒಂದು ಕೈಯಲ್ಲಿ ನೋಟ್ ಬುಕ್ ಒಂದು ಕೈಯಲ್ಲಿ ಕಂಬಿಹಿಡಿದು ನಿಂತಳು.ಸತೀಶ ಅಕಸ್ಮಾತ್ ಆಗಿ   ಅವಳ ನೋಡಿದಾಗ ಇದ್ದಕ್ಕಿದ್ದಂತೆ ಸುಜಾತಳ ನೆನಪಾಯಿತು.


ಮೊನ್ನೆ  ಮ್ಯಾಗಳ ಮನೆ   ಸೇದೋ ಬಾವಿಯ ಹತ್ತಿರ ನೀರು ಸೇದೋವಾಗ ಸಿಕ್ಕಿದ್ದ ಅವಳು  ಬೇಕಂತಲೆ ರಾಟೆಯಿಂದ ಹಗ್ಗ ಕೆಳಗೆ ಜಾರಿಸಿ  ಇದನ್ನು ಹಾಕ್ಕೊಡು ಬಾರ ಸತೀಶ ಎಂದು ಮಾತಿಗೆಳೆದು  ನಾನು ಹಿರಿಯೂರು ಕಾಲೇಜ್ ಗೆ ಸೇರುವೆ ಎಂದಿದ್ದಳು ಆಗಿನಿಂದ ಅವನಲ್ಲಿ ಏನೋ ಸಂತೋಷ ಅಂತೂ ನಮ್ ಹುಡ್ಗಿ ಹಿರಿಯೂರು ಕಾಲೇಜ್ ಸೇರ್ತಾಳೆ ನಮ್ಮ ಮಾವನು ಸಹ ಅಲ್ಲಿಗೆ ಸೇರಿಸ್ತಾರೆ ಸ್ವರ್ಗಕ್ಕೆ ಮೂರೇ ಗೇಣು ಎಂದು ನೀರು ತಂದು ಮನೆಗೆ ಇಟ್ಟು ರೇಡಿಯೋದಲ್ಲಿ "ಯೋಗಾ....ಯೋಗಾ....ಯೋಗ ಯೋಗ ....ನಾನು ನೀನು ಸೇರೊ ಯೋಗ ..ಈಗ..." ಹಾಡು ಬರುತ್ತಿತ್ತು ಅದರ ಸೌಂಡ್ ನಾಬ್ ಎಷ್ಟಿದೆಯೋ ಅಷ್ಟು ಸೌಂಡ್ ಕೊಟ್ಟು ಕುಣಿಯಲಾರಂಬಿಸಿದ ಅಡಿಗೆ ಮನೆಯಿಂದ ಬಂದು ಸೌಂಡ್ ‌ಕಡಿಮೆ ಮಾಡಿ "ಕಿವಿ ಏನಾಗ್ ಬೇಕು ಕಿರ್ರೋ ಅನ್ನುತ್ತೆ ಏನಾಗೈತೆ ನಿನಿಗೆ"ಎಂದರು ತಿಮ್ಮಕ್ಕ

" ಏ ಏನೂ ಇಲ್ಲ ಕಣಕ್ಕ ಸುಮ್ಮನೆ " ಅಂದಿದ್ದ ಸತೀಶ 


" ಏ ಹುಡುಗ ಮುಂದಕ್ ಜರ್ಗೋ ಇಲ್ಲಿ ಹೆಣ್ಮಕ್ಕಳು ಬಸ್ ಬಾಗ್ಲಲ್ಲಿ ಅದಾರೆ"

ಎಂದು ಕಂಡಕ್ಟರ್ ಕೂಗಿದಾಗ ವಾಸ್ತವಕ್ಕೆ ಬಂದ ಸತೀಶ 

" ಸುಜಾತ ನಿನ್ನೆ ನೀರ್ ಸೇದಾಕೆ ಬರ್ಲಿಲ್ಲ ಏನಾದರೂ ನಿನ್ನೆ ಕಾಲೇಜಿಗೆ ಸೇರಿ ಬಿಟ್ಟಳಾ ? ಅಥವಾ  ಅವಳು ಇವತ್ತೆ ಬತ್ತಾಳೋ ? ಅವಳು ಬರದಿದ್ದರೆ? ಯಾಕ ಬರಲ್ಲ ಬಂದೆ ಬತ್ತಾಳೆ ,ಅವಳು ಸೈನ್ಸ್ ಓದಾದು ಅಂದಿದ್ಲು ಯರಬಳ್ಳಿನಾಗೆ ಎಲೈತೆ ಸೈನ್ಸ್?  ಎಂದು ತಾನೆ ಅಂದುಕೊಂಡ .

ಬಸ್ ಬಾಲೇನಳ್ಳಿ ಬಿಟ್ಟು ,ನೂರಾಮೂರು ಗೇಟ್ ಬಳಿ ಜನರಿದ್ದರೂ ರಷ್ ಇರುವ ಕಾರಣ ಬಸ್ ನಿಲ್ಲಿಸದೇ ಕರೆಂಟ್ ಆಪೀಸ್ ದಾಟಿ ಹಿರಿಯೂರಿನ ಕಡೆ ಹೊರಟಿತು.


ಅಂತೂ ಹದಿನೇಳು ಕಿಲೋಮೀಟರ್ ದಾರಿಯನ್ನು ಬರೋಬ್ಬರಿ ಒಂದು ಗಂಟೆಯ ಕಾಲ ಸವೆಸಿ ಟಿ ಬಿ ಸರ್ಕಲ್ ,ತಾಲೂಕ್ ಆಪೀಸ್ ದಾಟಿ ಹಿರಿಯೂರು ತಲುಪಿದಾಗ ಎಂಟು ಗಂಟೆಯಾಗಿತ್ತು.

ಕಣಿವೆ ಮಾರಮ್ಮನ ಗುಡಿ ಬಸ್ಟಾಂಡ್ ಹತ್ತಿರ ಬಹುತೇಕ ಹಾಲು ಮಾರುವವರು ಬಸ್ ಇಳಿದರು ಸತೀಶನು ಇಳಿಯಲು ಸಿದ್ದನಾದ ಬಸ್ಸಿನ ಹಿಂಭಾಗದಲ್ಲಿ ಇದ್ದ ಮುಕುಂದಯ್ಯ ಬೇಡ ಎಂಬಂತೆ ಸನ್ನೆ ಮಾಡಿದರು. 

ತಾಲೂಕು ಆಸ್ಪತ್ರೆ ಸ್ಟಾಪ್ ಬಳಿ ಇಳಿದು ದಕ್ಷಿಣ ದಿಕ್ಕಿನ ಕಡೆ  ನೂರು ಹೆಜ್ಜೆ ನಡೆದ ಮಾವ ಅಳಿಯಂದಿರನ್ನು" ಸರ್ಕಾರಿ ಪದವಿ ಪೂರ್ವ ಕಾಲೇಜು  ಹಿರಿಯೂರು"ಎಂಬ ಬೋರ್ಡ್ ಸ್ವಾಗತಿಸಿತು.


ಕಾಲೇಜು ಮುಂದೆ ಕಾಲೇಜು ಸೇರಲು ಅರ್ಜಿ ಪಡೆಯಲು ಒಂದು ಕ್ಯೂ ,ಅಡ್ಮಿಷನ್ ಆಗಲು ಮತ್ತೊಂದು ಕ್ಯೂ ಇತ್ತು ಮುಕುಂದಯ್ಯ ಕ್ಯೂ ನಲ್ಲಿ ನಿಂತು ಅರ್ಜಿ ಪಡೆದು ತುಂಬಿ  ,

ಪೀಸ್ ಕಟ್ಟಿ ಅಡ್ಮಿಷನ್ ಮಾಡಿಸಿ, ಮುಕುಂದಯ್ಯ ನಾಳೆಯಿಂದ ಕಾಲೇಜಿಗೆ ಕಳಿಸುವೆ ಎಂದು ಪ್ರಾಂಶುಪಾಲರಿಗೆ ಹೇಳಿ ಸತೀಶನನ್ನು ಕರೆದುಕೊಂಡು ಕಾಲೇಜಿನಿಂದ ಹೊರಬಂದು ಕೈಯಲ್ಲಿ ಕಟ್ಟಿದ್ದ ಹೆಚ್ಚೆಮ್ಟಿ ಗಡಿಯಾರ ನೋಡಿದಾಗ ಮದ್ಯಾಹ್ನ ಒಂದೂವರೆಯಾಗಿತ್ತು, ಆಗಲೆ ಮುಕುಂದಯ್ಯನಿಗೆ ಆಯ್ತಾರಪ್ಪ ಹೇಳಿದ ಮಾತು ನೆನಪಾಗಿದ್ದು. " ಹನ್ನೆರಡು ಗಂಟೆ ಒಳಗೆ ಕಾಲೇಜಿಗೆ ಸೇರುಸ್ಬೇಕು. ಹನ್ನೆರಡು ಗಂಟೆ ಮೇಲೆ ರಾಹು ಕಾಲ ಶುರುವಾಗುತ್ತೆ" 

"ಈಗ ನಾನು ಕಾಲೇಜಿಗೆ ಸೇರಿಸಿದ್ದು ಯಾವ ಕಾಲ ?" ಎಂದು ತಮಗೆ ಪ್ರಶ್ನೆ ಕೇಳಿಕೊಂಡರು ಮುಕುಂದಯ್ಯ.

ಬೆಳಿಗ್ಗೆ ಮೊಸರನ್ನ ತಿಂದಿದ್ದು ಬಸ್ಸಿನ ಕುಲುಕಾಟ , ಕಾಲೇಜ ಬಳಿ ಕ್ಯೂ ನಲ್ಲಿ ನಿಂತಾಗ ಯಾವಾಗ ಕರಗಿತೋ ತಿಳಿಯಲಿಲ್ಲ .

" ಬಾರೋ ಇಲ್ಲೇ ರಾಘವೇಂದ್ರ ಹೋಟೆಲ್ ನಲ್ಲಿ ಮಸಾಲೆ ದೋಸೆ ತಿಂದ್ ಹೋಗಾನ " ಎಂದು ಮುಕುಂದಯ್ಯ ಹೇಳುತ್ತಲೆ ಸತೀಶನಿಗೆ ನಾನು ಬಯಸಿದ್ದು ಮಸಾಲೆ ದೋಸೆ ಮಾವ ಹೇಳಿದ್ದು ಮಸಾಲೆ ದೋಸೆ ಎಂಬಂತೆ ಹಿರಿಹಿರಿ ಹಿಗ್ಗಿದ ,ಮೊದಲೆ ದೋಸೆ ಎಂದರೆ ಅವನಿಗೆ ಬಹಳ ಇಷ್ಟ ಅದರಲ್ಲೂ ಮಸಾಲೆ ದೋಸೆ ಎಂದರೆ ಇನ್ನೂ ಇಷ್ಟ, ಒಂದು ಬಾರಿ ಚಿಕ್ಕವನಿದ್ದಾಗ ಅಮ್ಮನ‌ ಜೊತೆ ಹೊಳಲ್ಕೆರೆ ಯಲ್ಲಿ ಗಣೇಶ ಹೋಟೆಲ್ ನಲ್ಲಿ ತಿಂದಿದ್ದ,ರುಚಿ ಚೆನ್ನಾಗಿದ್ದರಿಂದ ಮತ್ತೊಂದು ದೋಸೆ ಕೊಡಿಸು ಎಂದು ಅಮ್ಮನಿಗೆ  ದುಂಬಾಲು ಬಿದ್ದಿದ್ದ, ಬಸ್ಚಾರ್ಜಿಗೆ ಮಾತ್ರ ದುಡ್ ಸರಿಯಾಗಿದೆ ಇನ್ನೊಂದು ಸಲ ಕೊಡಿಸ್ತೀನಿ ಬಾ ಎಂದು ಅಮ್ಮ ಸಮಾಧಾನ ಮಾಡಿ ಊರಿಗೆ ಕರೆದುಕೊಂಡು ಹೋಗಿದ್ದು ಸತೀಶನಿಗೆ ನೆನಪಾಯಿತು.


ಇವೆಲ್ಲಕ್ಕಿಂತ ಮಿಗಿಲಾಗಿ ಹಿರಿಯೂರಿನ ದೋಸೆ ತಿನ್ನುವ ಆಸೆ ಹೆಚ್ಚಾಗಲು ಕಾರಣ ಮಹೇಶ್.

ಶಾಲೆಯಲ್ಲಿ ಸಮಯ ಸಿಕ್ಕಾಗಲೆಲ್ಲ " ಲೇ ನಾನು ನಮ್ಮಪ್ಪನ ಜೊತೆ ಹಿರಿಯೂರಿಗೆ ಹೋಗಿದ್ದೆ ,ರಾಘವೇಂದ್ರ ಹೋಟೆಲ್ ನಲ್ಲ ಮಸಾಲೆ ದೋಸೆ ತಿಂದೆ, ಎಂಗಿತ್ತು ಗೊತ್ತಾ ಇಷ್ಟುದ್ದ ಎಂದು ಮಾರು ತೋರಿಸುತ್ತಿದ್ದ, ಇದು ಎಷ್ಟು ಅತಿಯಾಯಿತು ಎಂದರೆ  ಹಿರಿಯೂರು,ಮಸಾಲೆ ಎಂದು ಮಹೇಶ್ ಮಾತನಾಡಲು ಶುರು ಮಾಡಿದರೆ ಎಲ್ಲರೂ ಅವನಿಂದ ಓಡುತ್ತಿದ್ದರು. ಅಂದೇ ಸತೀಶನಿಗೆ ನಾನೆ ಒಂದು ದಿನ ಹಿರಿಯೂರಿನ ರಾಘವೇಂದ್ರ ಹೋಟೆಲ್ ನಲ್ಲಿ ಮಸಾಲೆ ದೋಸೆ ತಿನ್ನಬೇಕು ಅಂತ.


ಸತೀಶನ ಬಹುದಿನಗಳ ಆಸೆ ಇಂದು ನೆರವೇರಿತು ಎರಡು ದೊಡ್ಡ ಪ್ಲೇಟ್ಗಳಲ್ಲಿ ದೋಸೆ ತಂದ ಸಪ್ಲೈಯರ್ ಮುಕುಂದಯ್ಯ ಮತ ಸತೀಶನ ಮುಂದೆ ಇಟ್ಟು ಹೋದ ,ಆಗ ಸತೀಶ ಮಹೇಶ್ ಅಷ್ಟೇನೂ ಸುಳ್ಳು ಹೇಳಲಿಲ್ಲ ಈ ದೋಸೆ ಒಂದು ಮಾರಿಗಿಂತ ಸ್ವಲ್ಪ ಕಡಿಮೆ ಎಂದುಕೊಳ್ಳುತ್ತಾ ತಿಂದು ಮುಗಿಸಿದ 

" ಇನ್ನೊಂದು ಬೇಕೇನೊ ದೋಸೆ " ಎಂದರು ಮುಕುಂದಯ್ಯ.

"ಉಹುಂ ಬೇಡ ಎಂದ ಸತೀಶ

" ಎರಡು ಟೀ ಕೊಡಪ್ಪ " 

ಟೀ ಕುಡಿದು ಎರಡೂವರೆಗೆ ಯರಬಳ್ಳಿಗೆ ಹಿಂತಿರುಗಲು ಬಸ್ ನಿಲ್ದಾಣಕ್ಕೆ ಬಂದಾಗ 

ಜನರು ಗುಂಪಾಗಿ ಏನೋ ಮಾತನಾಡುತ್ತಿದ್ದರು.ಏನೆಂದು ಮುಕುಂದಯ್ಯ ವಿಚಾರಿಸಿದಾಗ ಚಳ್ಳಕೆರೆ ಕಡೆಯಿಂದ ಹಿರಿಯೂರು ಕಡೆ ಬರುವ ರೆಡಿ ಬಸ್ ಹರ್ತಿಕೋಟೆ ಬಳಿ ಆಕ್ಸಿಡೆಂಟ್ ಆಗಿದೆಯಂತೆ ಯಾರೋ ಒಬ್ಬರು ಸ್ಪಾಟ್ನಲ್ಲಿ ಸತ್ತರಂತೆ  ಒಂದು ಹುಡುಗಿಗೆ ಗಾಯ ಆಗೈತಂತೆ ಆ ಹುಡುಗಿ ಕೈಯಲ್ಲಿ ನೋಟ್ ಬುಕ್ ಇತ್ತಂತೆ ಎಂದು ಹೇಳಿದ್ದನ್ನು ಸತೀಶನೂ ಕೇಳಿಸಿಕೊಂಡು ಗಾಬರಿಯಾಗಿ ಅಲ್ಲೇ ನಿಲ್ದಾಣದ ಬಳಿ ಇರುವ ಕಣಿವೆ ಮಾರಮ್ಮನ ದೇವಸ್ಥಾನಕ್ಕೆ ಹೋಗಿ " ದೇವರೇ ಆ ಹುಡುಗಿ ಸುಜಾತ ಅಗಿರದಿರಲಿ " ಎಂದು ಮನದಲ್ಲೇ ಬೇಡಿಕೊಂಡ

" ಬಸ್ ಬಂತು ಬಾರಲೆ ಕೈ ಮುಗಿದದ್ ಸಾಕು" ಎಂದರು  ಮುಕುಂದಯ್ಯ


ಮುಂದುವರೆಯುವುದು


ಸಿ ಜಿ ವೆಂಕಟೇಶ್ವರ.




ಎನಗಿಂತ ಕಿರಿಯರಿಲ್ಲ.


 


ಎನಗಿಂತ ಕಿರಿಯರಿಲ್ಲ. 


ಕಾರ್ಯಕ್ರಮ ಆಯೋಜಕರಿಗೆ ಎರಡು ಪತ್ರಗಳು ಬಂದವು. ಮೊದಲನೇ ಪತ್ರದಲ್ಲಿ " ನಾನು ಐದು ಪುಸ್ತಕಗಳನ್ನು ಬರೆದು ಪ್ರಕಟಿಸಿರುವೆ. ಬಹುತೇಕ ಕಡೆ ನನಗೆ  ಕಾರ್ಯಕ್ರಮದ ಅಧ್ಯಕ್ಷತೆ ನೀಡಿ ಗೌರವಿಸಿದ್ದಾರೆ .ನೀವು ನನಗೆ ಮುಖ್ಯ ಅತಿಥಿಗಳ ಸ್ಥಾನ ನೀಡಿ ನನಗೆ ಅವಮಾನ ಮಾಡಿರುವಿರಿ. ನಾನು ನಿಮ್ಮ ಕಾರ್ಯಕ್ರಮಕ್ಕೆ ಬರುವುದಿಲ್ಲ." ಎಂದು ಆಕ್ರೋಶದ ಮಾತುಗಳನ್ನು ಓದಿ ಮತ್ತೊಂದು ಪತ್ರ ಕೈಗೆತ್ತಿಕೊಂಡರು

 " ನಮಸ್ಕಾರ... ನಿಮ್ಮ ಅಭಿಮಾನಕ್ಕೆ ಶರಣು .ನನ್ನನ್ನು ನಿಮ್ಮ ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸುವಂತೆ ಕೋರಿದ್ದೀರಿ .ದಯವಿಟ್ಟು ಕ್ಷಮಿಸಿ ನಾನು ಕಾರ್ಯಕ್ರಮಕ್ಕೆ ಸಾಮಾನ್ಯ ಪ್ರೇಕ್ಷಕನಾಗಿ ಬರುವೆ . ಅಧ್ಯಕ್ಷತೆಯನ್ನು ಬೇರೆಯವರಿಗೆ ನೀಡಿ" ಈ ಪತ್ರ ಓದಿದ ಕಾರ್ಯಕ್ರಮ ಆಯೋಜಕರಿಗೆ ಅಚ್ಚರಿಯ ಜೊತೆಗೆ ಆ ಹಿರಿಯರ ಬಗ್ಗೆ ಇರುವ   ಗೌರವ ಇನ್ನೂ ಹೆಚ್ಚಾಯಿತು. ಅವರು ಮನದಲ್ಲೇ ಅಂದುಕೊಂಡರು " ಇನ್ನೂರಕ್ಕೂ ಹೆಚ್ಚು ಪುಸ್ತಕಗಳ ಬರೆದಿರುವ ತೊಂಭತ್ತು ದಾಟಿದ ಇಂತಹ ವ್ಯಕ್ತಿಗಳು ಈ ಪರಿ ಜ್ಞಾನವಂತರಾದರೂ ಕಿಂಚಿತ್ತೂ ಅಹಂಕಾರ ಇರದಿರುವುದಕ್ಕೆ ಎನಗಿಂತ ಕಿರಿಯರಿಲ್ಲ ಎಂಬ ಭಾವವೇ ಕಾರಣ ".


ಎನಗಿಂತ ಕಿರಿಯರಿಲ್ಲ ಎಂಬ ಭಾವವು ನಮ್ಮಲ್ಲಿ ಮೂಡಿದರೆ ನಮ್ಮ ಅಹಂ ಕಡಿಮೆಯಾಗಿ ವಿಧೇಯತೆ ಬೆಳೆಯುತ್ತದೆ .ಅದರ ಜೊತೆಯಲ್ಲಿ ನಮ್ಮ ವ್ಯಕ್ತಿತ್ವ ಶೋಭಿಸುವುದು. 

ಸರ್ವರನೂ ಗೌರವಿಸುತಾ ಸರ್ವರೊಳಗೊಂದು ಒಳ್ಳೆಯ ಗುಣ ಪಡೆದು, ಪರಮಾತ್ಮನ ಚರಣದಲಿ ನಿಶ್ಕಲ್ಮಶ ಮನದಿಂದ ಶರಣಾಗಿ ,ನಮ್ಮ ಪಾಲಿನ ಕರ್ತವ್ಯವನ್ನು ನಿರ್ವಂಚನೆಯಿಂದ ಮಾಡಿದರೆ ನೆಮ್ಮದಿಯ ಬದುಕು ನಮ್ಮದಾಗುವುದರಲ್ಲಿ ಸಂದೇಹವಿಲ್ಲ.


ನನಗೇನು ತಿಳಿದಿಲ್ಲ

ನಾನೇನು ದೊಡ್ಡವನಲ್ಲ

ನನ್ನ ಸಂಪಾದನೆಯೇನು ಹೆಚ್ಚಿಲ್ಲ

ಭಗವಂತನ ಅಂಶ ನನ್ನೆದುರಿಗಿರುವವರೆಲ್ಲ.

ಎನಗಿಂತ ಕಿರಿಯರು ಇಲ್ಲವೇ ಇಲ್ಲ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ



04 February 2022

ಪ್ರಿಯತಮೆ .


 


ಪ್ರಿಯತಮೆ.


ಅಂದು ನಾ ಕೇಳಿದಾಗಲೆಲ್ಲಾ

ಸಿಹಿಮುತ್ತನಿಡುತ್ತಿದ್ದಳು ಪ್ರಿಯತಮೆ|

ಮದುವೆಯ ನಂತರ ಮುತ್ತ ಕೇಳಿದರೆ

ಸಿಟ್ಟಾಗಿ ಬೈಯುತ್ತಾ ಕೇಳುವಳು  ಮಾಡಲೇನು ಇಲ್ಲವೆ ಕ್ಯಾಮೆ?  ||


ಸಿಹಿಜೀವಿ.


03 February 2022

ಸಾಹಿತ್ಯಾಭಿಮಾನಿ ದೇವರುಗಳು. ಲೇಖನ


 


ಪಾಶ್ಚಾತ್ಯ ಕವಿ ಬಹರೇಸ್ ರವರು ನೂರಾರು ಮೌಲಿಕ ಪುಸ್ತಕಗಳನ್ನು ಬರೆದಿದ್ದರು ಅವುಗಳು ಪ್ರಕಟವೂ ಆದವು . ಪ್ರಕಾಶಕರಿಂದ ಬಂದ ಮಾಹಿತಿಯನ್ನು ಕೇಳಿದ  ಕವಿಗೆ ಅಚ್ಚರಿಯುಂಟಾಯಿತು. ಅವರ ಪುಸ್ತಕಗಳನ್ನು ಕೊಂಡು ಓದಿದವರು ಕೇವಲ ಇಪ್ಪತ್ತೇಳು ! ಇದರಿಂದ ಕೊಂಚ ವಿಚಲಿತರಾದ ಕವಿಯು ತಕ್ಷಣ ಆ ಪ್ರಕಾಶಕರಿಂದ ಎಲ್ಲಾ ಇಪ್ಪತ್ತೇಳು ಓದುಗರ ವಿಳಾಸ ಪಡೆದು ಪ್ರತಿಯೋರ್ವ ಸಾಹಿತ್ಯಾಭಿಮಾನಿಗಳನ್ನು ಭೇಟಿ ಮಾಡಿ ವೈಯಕ್ತಿಕವಾಗಿ ಧನ್ಯವಾದಗಳನ್ನು ಸಲ್ಲಿಸಿ ಬಂದರು. ಮುಂದೆ ಕವಿಯ ಪುಸ್ತಕಗಳು ನೂರಾರು ಮುದ್ರಣ ಕಂಡು ಲಕ್ಷಾಂತರ ಪ್ರತಿಗಳು ಮಾರಾಟವಾಗುತ್ತಿವೆ.

ಸಾಹಿತ್ಯ ಕೃತಿಗಳು ಬರೆಯುವವರೆಗೆ ತಮ್ಮದು ನಂತರ ಓದುಗರದು ಎಂಬುದು ಅಷ್ಟೇ ಸತ್ಯ. ಲೇಖಕರು ಜನಸಾಮಾನ್ಯರ ಕಷ್ಟ ಸುಖಗಳ ಕುರಿತಾಗಿ ಬರೆದರೆ ಖಂಡಿತವಾಗಿಯೂ ಅದಕ್ಕೆ ಓದುಗರು ಇದ್ದೇ ಇರುವರು. ಇದು ಲೇಖಕರ ಮತ್ತು ಓದುಗರ ಮಧ್ಯ ಅವ್ಯಕ್ತ ಬಂಧ ಏರ್ಪಡಲು ಕಾರಣವಾಗುತ್ತದೆ.

ನಾನೇನು ಮಹಾನ್ ಸಾಹಿತಿ ಅಥವಾ ಲೇಖಕ ಎಂಬ ಭ್ರಮೆಯಿಲ್ಲ. ನಾನು ನನಗೆ ತೋಚಿದ್ದನ್ನು ಗೀಚುವ ಪ್ರಕ್ರೀಯೆ ಜಾರಿಯಲ್ಲಿದೆ. ನಾನು ಗೀಚಿದ ಕೆಲ ಸಾಲುಗಳನ್ನು ಬಹಳ ಖುಷಿಯಿಂದ ಓದಿ ಪ್ರೋತ್ಸಾಹದಾಯಕ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ ಸಹೃದಯ ಓದುಗರು.  ಕೇವಲ ಬೆರಳೆಣಿಕೆಯಷ್ಟು ಪುಸ್ತಕ ಪ್ರಕಟವಾಗಿವೆ.  ನನ್ನ ಕೃತಿಗಳನ್ನು ಕೊಂಡು ಓದುತ್ತಿರುವ ಓದುಗ ಪ್ರಭುಗಳು ನಿಜಕ್ಕೂ ಸಾಹಿತ್ಯಾಭಿಮಾನಿಗಳು . ಅವರಿಗೆ ನನ್ನ ಕಡೆಯಿಂದ  ಕೃತಜ್ಞತೆಯ ಮಾತುಗಳ ಹೇಳುವ ಹೊರತು ಮತ್ತೇನು ಹೇಳಲಿ?

ನಾನು ಬರೆದ ಬರಹಗಳನ್ನು ಓದಿ ಸೂಕ್ತವಾದ ತಿದ್ದುಪಡಿ ನೀಡಿ ಸಲಹೆಗಳನ್ನು ನೀಡುತ್ತಾ ಈಗಲೂ ನಾನು ಬರೆದ ಬರೆಹಗಳನ್ನು ಓದಿ ಪ್ರೋತ್ಸಾಹ ಮಾಡುವ ಕನ್ನಡ ಬಾಷಾ ಶಿಕ್ಷಕರು ಹಾಗೂ ಉಪಪ್ರಾಂಶುಪಾಲರಾದ ಇಸಾಫುಲ್ಲರವರಿಗೆ ಧನ್ಯವಾದಗಳನ್ನು ಹೇಳಲೇಬೇಕು.
ಅಂತರಾಷ್ಟ್ರೀಯ ಮಟ್ಟದ ಛಾಯಾಗ್ರಾಹಕರಾದ ತಿಪ್ಪೇಸ್ವಾಮಣ್ಣ ರವರು ಮುಖಪುಟದಲ್ಲಿ ನನ್ನ ಬರೆಹಗಳನ್ನು ಓದಿ ಪ್ರೋತ್ಸಾಹ ನೀಡುತ್ತಿದ್ದಾರೆ ಅವರಿಗೆ ಧನ್ಯವಾದಗಳನ್ನು ಹೇಳದೇ ಹೇಗಿರಲಿ.
ಗೌರಿಬಿದನೂರಿನ ಎಸ್ಸೆಲ್ಲೆನ್ ಪೋಟೋ ಸ್ಟುಡಿಯೋದ ಮಾಲಿಕರು ಸಹೃದಯರಾದ ವಿಜಯಪ್ಪ ರವರು ನನ್ನ ಬರೆಹಗಳನ್ನು ಓದಿ ಪ್ರತಿ ದಿನ ಪ್ರತಿಕ್ರಿಯೆ ನೀಡೇ ನೀಡುವರು ನನ್ನ ಕವಿತೆಗಳು ಮತ್ತು ಸಾಹಿತ್ಯದ ಬಗ್ಗೆ ಅವರಿಗಿರುವ ಪ್ರೀತಿಗೆ ನನ್ನ ಕಡೆಯಿಂದ ನಮನಗಳು.
ಶಾಲೆಗೆ ಓದಿ ಕಲಿತದ್ದು ಕಡಿಮೆ ಜೀವನದಲ್ಲಿ ಕಲಿತದ್ದು ಹೆಚ್ಚು ಗಂಡನ ಹೂವಿನ ವ್ಯಾಪಾರದಲ್ಲಿ ನೆರವಾಗುವ ಸದ್ಗೃಹಿಣಿ ಅರುಣಾ ಗಂಗಾಧರ್  ರವರು ನನ್ನ ಬ್ಲಾಗ್ ಮತ್ತು ಅಂಕಣಗಳ ಖಾಯಂ ಓದುಗರು ಅವರ ಮುಕ್ತ ಅಭಿಪ್ರಾಯಗಳು ಪ್ರಭುದ್ದತೆಯಿಂದ ಕೂಡಿರುತ್ತವೆ.

ಆಗಮಿಕರು ಅನ್ನಪೂರ್ಣೇಶ್ವರಿ ದೇವಿಯ ಉಪಾಸಕರಾದ ಚಂದನ್ ಶರ್ಮ ರವರು ನನ್ನ ಗಜಲ್ ಮತ್ತು ಲೇಖನದ ಅಭಿಮಾನಿಗಳು ಅವರಿಗೆ ಇಷ್ಟವಾದ ಗಜಲ್ ಮತ್ತು ಲೇಖನಗಳ ಬಗ್ಗೆ ಕರೆ ಮಾಡಿ ಮೆಚ್ಚುಗೆ ಸೂಚಿಸುವರು.
ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಣ ಶಿಕ್ಷಕರು ಹಾಗೂ ಆತ್ಮೀಯರಾದ ಸದಾಶಿವರೆಡ್ಡಿ ಸರ್ ರವರಂತೂ ನನ್ನ ಎಲ್ಲಾ ಪುಸ್ತಕಗಳನ್ನು ಕೊಂಡು ಓದುತ್ತಾ ಆ ಪುಸ್ತಕಗಳ ಬಗ್ಗೆ ನಾಲ್ಕು ಸಾಲಿನ  ಅಭಿಪ್ರಾಯಗಳನ್ನು  ಬರೆದು ಹಂಚಿಕೊಳ್ಳುತ್ತಾರೆ. ಅವರಿಗೆ ನಮನಗಳು.ಸಮಾಜ ಸೇವಕರಾದ ಬಿ. ಎನ್ .  ಶ್ರೀನಿವಾಸ್ ರವರು ನನ್ನ ರಚನೆಯ ಖಾಯಂ ಓದುಗರು ಹಾಗೂ ನನ್ನ ಪುಸ್ತಕಗಳ ಪ್ರಕಟಿಸಲು ಧನಸಹಾಯ ಮಾಡಿರುವ ಸಹೃದಯರು ಅವರ ಸಾಹಿತ್ಯ ಪ್ರೀತಿಗೆ ಶರಣು.
ನನ್ನ ಗೆಳೆಯ ಜಬೀಉಲ್ಲಾ ವೃತ್ತಿಯಲ್ಲಿ ಪೋಲಿಸ್ ಆದರೂ ಸಾಹಿತ್ಯಾಭಿಮಾನಿ. ಉಚಿತವಾಗಿ ಅಥವಾ  ಡಿಸ್ಕೌಂಟದ ನನ್ನ ಎಲ್ಲಾ ಪುಸ್ತಕಗಳನ್ನು ಮುಖ ಬೆಲೆಗಿಂತ ಹೆಚ್ಚು ಹಣ ಕೊಟ್ಟು ಓದಿ ಪ್ರೋತ್ಸಾಹ ನೀಡುತ್ತಲೇ ಇದ್ದಾನೆ.
ಇವರ ಜೊತೆಗೆ  ಗೌರೀಶ್ ವೀರಣ್ಣ,ಭಾನುಪ್ರಕಾಶ ಮಣಿವಾಲ ರವರು. ಕವಿಗಳು ಮತ್ತು ಲೇಖಕರಾದ ಜಿ ವೆಂಕಟೇಶ ರವರು, ಶಿಕ್ಷಕರಾದ ನರಸಿಂಹಮೂರ್ತಿ  ರವರು. ಉಪನ್ಯಾಸಕರಾದ ಸಿ ಎನ್ ಶಂಕರ ರೆಡ್ಡಿ ರವರು. ವರ್ತಕರಾದ ನವೀನ್ ರವರು, ವಿಕಲಚೇತನ ಉದ್ಯಮಿಯಾದ ಉದಯಕುಮಾರ್ ರವರು, ನನ್ನ  ವಿದ್ಯಾರ್ಥಿಗಳಾದ ಮಂಜುಳ, ಫಣೀಂದ್ರ, ವಿಶ್ವನಾಥ್,  ವೈಶಾಲಿ , ಸ್ವಾತಿ.  ಶಿಕ್ಷಕರಾದ ಸುರೇಶ್ ರವರು.ಶಿಕ್ಷಕರಾದ ಸಪ್ತಗಿರಿ ರವರು ಸಿಎಮ್ ಸಿ ಎ ದ ಮರುಳಪ್ಪ ರವರು,
ವಿದ್ಯಾಧರ ದುರ್ಗೇಕರ್ ರವರು, ನಿಖಿಲ್ ರವರು , ಸಂಘಟಕರಾದ
ಸಿದ್ದು ಮೂರ್ತಿ ರವರು . ಕವಿಗಳಾದ  ರವಿಕುಮಾರ್ ರವರು ,ಮುರಾರ್ಜಿ ಶಾಲೆಯ  ಪ್ರಾಂಶುಪಾಲರಾದ ಲೋಕೇಶ್ ರವರು .ಈವಿ ಕಂಪನಿಯ ಮಾಲಿಕರು ಮತ್ತು ಲೇಖಕರಾದ ಕಾಂತರಾಜು ರವರು .....
ಇನ್ನೂ ಪಟ್ಟಿ ಮುಂದುವರೆಯುತ್ತದೆ... ಕೆಲ ಹೆಸರುಗಳು ಸೇರುತ್ತವೆ... ರಾಜ್ಯಮಟ್ಟದ ಆಧಿಕಾರಿಗಳಾದ  ಟಿ‌ ಎಲ್ ಎಸ್ ಪ್ರೇಮ ರವರು ಮತ್ತು ಆತ್ಮೀಯ ಗೆಳೆಯ ಶಾಂತಕುಮಾರ್...ರವರು

ಹೀಗೆ ನನ್ನ ಬರೆಹಗಳನ್ನು ಓದುತ್ತಾ ಪ್ರೋತ್ಸಾಹ ಮಾಡುವ ಸಾಹಿತ್ಯಾಭಿಮಾನಿ ಸಹೃದಯರಿಗೆ ನನ್ನ ಮನದುಂಬಿದ ನಮನಗಳು .

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು.


01 February 2022

ಅವಕಾಶವಾದಿಗಳು .ಕವನ



ಅವಕಾಶವಾದಿಗಳು.


ಅವಕಾಶವಾದಿಗಳು ಸ್ವಾಮಿ

ನಾವು ಅವಕಾಶವಾದಿಗಳು .


ದೇಶದ ಭದ್ರತೆಯ ಬಗ್ಗೆ 

ನೂರಾರು ಮಾತುಗಳು .

ಸೈನ್ಯಕ್ಕೆ ಸೇರಲು ಪಕ್ಕದ

ಮನೆಯ ಮಗನಿರಲಿ 

ಎಂಬ ಅವಕಾಶವಾದಿಗಳು.


ಮಾತೃಭಾಷೆಯೇ ಮೇಲು

ಎಂದು ಬೀದಿಯಲಿ ಭಾಷಣ 

ಬಿಗಿವ ಶೂರರು .ನಮ್ಮ ಮಕ್ಕಳು

ಮಾತ್ರ ಕಾನ್ವೆಂಟ್ ಕೂಸುಗಳಾಗಲಿ

ಎಂಬ ಅವಕಾಶವಾದಿಗಳು.


ನಾವು ಕಷ್ಟದಲಿದ್ದಾಗ ಇತರರ  ಸಹಾಯ ಬೇಡುತಾ ,ನಮಗೆ 

ಅನುಕೂಲತೆಯಿದ್ದಾಗ ಸಾವಕಾಶವಾಗಿ ಜಾಗ ಖಾಲಿ 

ಮಾಡುವ ಅವಕಾಶವಾದಿಗಳು.


ಮತದಾನದ ವೇಳೆ ದುಡ್ಡಿಗೆ ,ಹೆಂಡಕ್ಕೆ

ಮತವ ಮಾರಿಕೊಂಡವರು .

ಭ್ರಷ್ಟ ರಾಜಕಾರಣಿಗಳು ಲೂಟಿ

ಹೊಡೆಯುವಾಗ ಅವರ ಬೆನ್ನ ಹಿಂದೆ

ಬೈಯುತಾ ಸಾಗುವ ಅವಕಾಶವಾದಿಗಳು.


ಅವಕಾಶವಾದಿಗಳು ಸ್ವಾಮಿ

ನಾವು ಅವಕಾಶವಾದಿಗಳು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.

ತುಮಕೂರು.

 

*ಇಂದಿನ ಸಿಂಹ ಧ್ವನಿ ಪತ್ರಿಕೆಯಲ್ಲಿ ಪ್ರಕಟವಾದ ಎಂ. ವಿ .ಶಂಕರಾನಂದ ರವರ ಕೃತಿ ವಿಮರ್ಶೆ*೧/೨/೨೨