ಕರೋನ ಕಾಲದಲ್ಲಿ ನಮಗೇನು ಜವಾಬ್ದಾರಿ ಇಲ್ಲವೆ?
ಸ್ನೇಹಿತರೆ ಮೊದಲಿಗೆ ನಾನು ಒಂದು ವಿಷಯ ಸ್ಪಷ್ಟಪಡಿಸುವೆ ,ನಾನು ಯಾವುದೇ ಪಕ್ಷದ ಪರ ,ಅಥವಾ ಮತ್ತೊಂದು ಪಕ್ಷದ ವಿರೋಧಿ ಅಲ್ಲ, ನಾನು ಎಡವೂ ಅಲ್ಲ ಬಲವೂ ಅಲ್ಲ, ಯಾವುದೇ ಇಸಂಗಳ ಹಂಗು ನನಗಿಲ್ಲ, ಪ್ರಸ್ತುತ ನಮ್ಮ ಸುತ್ತ ನಡೆವ ಕೆಲ ವಿದ್ಯಮಾನಗಳನ್ನು ಕಂಡು ಬೇಸರದಿಂದಲೆ ನಾಲ್ಕು ಸಾಲು ಬರೆಯೋಣ ಎನಿಸಿತು.
ನಾವು ಜನರು ಈಗಿನ ಕೊರೋನ ಕಾಲದಲ್ಲಿ ಜನರ ಸಂಕಷ್ಟಕ್ಕೆ ಪ್ರಧಾನಿಗಳು, ಆಯಾ ರಾಜ್ಯದ ಸಿಎಂಗಳು, ಸಂಸದರು, ಶಾಸಕರು, ಕೌನ್ಸಿಲರ್ ಗಳು ,ಪಂಚಾಯಿತಿ ಮೆಂಬರ್ ಗಳು ಅಷ್ಟೇ ಏಕೆ ನಮಗಾಗದ ಪಕ್ಕದ ಮನೆಯವನೂ ಸಹ ಕಾರಣವೆಂದು ಬಾಯಿ ಬಡ್ಕೊಳ್ತಾ ಇದೀವಿ , ಇರಬಹುದು ಕೆಲವೊಮ್ಮೆ ನಿರ್ವಹಣೆಯಲ್ಲಿ ಸಣ್ಣ ಪುಟ್ಟ ದೋಷಗಳ ಪರಿಣಾಮವಾಗಿ ಆಳುವವರು ಮಾಡಿರುವ ಸಣ್ಣ ತಪ್ಪುಗಳು ಸಾಮಾನ್ಯ ಜನರಿಗೆ ದೊಡ್ಡ ತೊಂದರೆಗಳನ್ನೂ ನೀಡಿವೆ,
ಹಾಗಾದರೆ ಸಾಮಾನ್ಯ ಜನರಾದ ನಾವು ಈ ಸಂಕಷ್ಟದ ದಿನಗಳಲ್ಲಿ ಹೇಗೆ ವರ್ತಿಸುತ್ತಿದ್ದೇವೆ ಎಂದು ಅಂತರಾವಲೋಕನ ಮಾಡಿಕೊಂಡರೆ ನಾವು ಇತರರೆಡೆಗೆ ಒಂದು ಬೆರಳು ತೋರಿಸಿದರೆ ನಮ್ಮ ಕಡೆ ನಾಲ್ಕು ಬೆರಳು ತಿರುಗುತ್ತವೆ.
ಬೇರೆಯವರಿಗೆ ಸೇವೆ ,ಸಹಾಯ, ಮಾನವೀಯತೆಯ ಬಗ್ಗೆ ಪುಂಕಾನುಪುಂಕವಾಗಿ ಮಾತನಾಡುವ ನಾವು700-800 ರ ಬೆಲೆಯ ಆಕ್ಸಿಮೀಟರ್ ಅನ್ನು 3000 ದಿಂದ 11000 ತನಕ ಮಾರಿಕೊಂಡು ದುಡ್ಡು ಮಾಡುತ್ತಿದ್ದೇವೆ.ಆಮ್ಲಜನವನ್ನು ಬ್ಲಾಕ್ ಮಾರುಕಟ್ಟೆಯಲ್ಲಿ ಮಾರಾಟಮಾಡುವುದೂ ಅಲ್ಲದೇ ಎಷ್ಟೋ ಜನರು ಪೈರ್ ಎಕ್ಷ್ಟಿಂಗ್ವಿಷರ್ ( ಅಗ್ನಿ ನಂದಕ) ಗಳನ್ನೇ ಆಮ್ಲಜನಕ ಸಿಲಿಂಡರ್ ಎಂದು ಅಮಾಯಕರ ನಂಬಿಸಿ ಮಾರಾಟ ಮಾಡಿ ರೋಗಿಗಳ ಮತ್ತು ಸಂಬಂಧಿಕರ ಪ್ರಾಣಗಳ ಜೊತೆಗೆ ಚೆಲ್ಲಾಟ ಆಡುತ್ತಿದ್ದೇವೆ.
ಕರೋನ ವೈರಸ್ ತಡೆಯಲು ಹೆಚ್ಚು ವಿಟಮಿನ್ ಸಿ ತೆಗೆದುಕೊಳ್ಳಲು ವೈದ್ಯರು ಹೇಳಿದರೆ 20 ರೂಪಾಯಿ ಕೆ ಜಿ ನಿಂಬೆ ಹಣ್ಣನ್ನು 200 ಗೆ ರೂ ಗೆ ಮಾರಾಟ ಮಾಡಲು ಪ್ರಾರಂಭಿಸುತ್ತೇವೆ , 30-40 ರೂಪಾಯಿಗೆ ಮಾರಾಟ ಮಾಡುವ ಎಳನೀರನ್ನು₹ 100 ರೂಗೆ ಗೆ ಮಾರಾಟ ಮಾಡಲು ಪ್ರಾರಂಭಿಸುತ್ತೇವೆ ,
ಖಾಸಗೀ ಆಸ್ಪತ್ರೆಗಳ ಸುಲಿಗೆಯನ್ನು ಹೇಳಲು ಪದಗಳಿಲ್ಲ, ಚಿಕಿತ್ಸೆ ಫಲಕಾರಿಯಾಗದೇ ಮರಣ ಹೊಂದಿದ
ಮೃತ ದೇಹಗಳನ್ನು ರುದ್ರ ಭೂಮಿಗೆ ಸಾಗಿಸಲು 30000 ರಿಂದ 40000 ಕೇಳುತ್ತೇವೆ , ಹಣವಿಲ್ಲದಿದ್ದರೆ ತಾಳಿ ಮಾರಿಕೊಟ್ಟರೂ ತೆಗೆದುಕೊಳ್ಳುತ್ತೇವೆ. ಕರೋನ ನಿಯಂತ್ರಣ ಮಾಡಲು ಸರ್ಕಾರ ಸೂಚಿಸಿರುವ ನೀತಿನಿಯಮಗಳ ಗಾಳಿಗೆ ತೂರಿ, ಮಾಸ್ಕ್ ಹಾಕದೇ ,ಜಾತ್ರೆ ಹಬ್ಬಗಳ ಮಾಡುತ್ತಾ ಗುಂಪುಗೂಡುತ್ತೇವೆ
ಆದರೂ ನಮ್ಮದೇನೂ ತಪ್ಪು ಇಲ್ಲ,ಎಲ್ಲಾ ಮೇಲಿನವರು ಮಾಡುವ ತಪ್ಪು ಎಂದು ಬೊಬ್ಬೆ ಹೊಡೆಯುವವರ ನೋಡಿ ಏನು ಹೇಳಬೇಕೋ ತಿಳಿಯದಾಗಿದೆ.
ಹಾಗಾದರೆ ಒಳ್ಳೆಯ ಕಾರ್ಯ ಮಾಡುವವರು ನೊಂದವರಿಗೆ ಹೆಗಲು ಕೊಟ್ಟವರು ಇಲ್ಲವೇ.ಖಂಡಿತಾ ಇದ್ದಾರೆ ,ಅವರು ಎಲೆ ಮರೆ ಕಾಯಿಯಂತೆ ತಮಗಾದ ಸಹಾಯ ಮಾಡಿ ಮಾನವೀಯತೆ ಮೆರೆಯುತ್ತಿದ್ದಾರೆ, ಇವರು ಅನವಶ್ಯಕ ವಾಗಿ ಬೇರೆಯವರನ್ನು ತೆಗಳದೇ ತಮ್ಮ ಕೈಲಾದ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ, ಇಂತವರು ಇಂತಹ ಸಂಕಷ್ಟದ ಕಾಲದಲ್ಲಿ ಅಕ್ಷಯವಾಗಬೇಕಿದೆ.
ಹಾಗಾದರೆ ನಮ್ಮನ್ನು ಆಳುವವರದು ಮತ್ತು ಜನ ಪ್ರತಿನಿಧಿಗಳು ಏನೂ ಮಾಡೇ ಇಲ್ಲವೇ? ಏಕಿಲ್ಲ ಕೆಲ ಜನ ಪ್ರತಿನಿಧಿಗಳು ಹಗಲು ರಾತ್ರಿ ಸೋಂಕಿತರ ಸೇವೆಯಲ್ಲಿ ನಿರತರಾಗಿದ್ದಾರೆ, ಆದರೆ ಕೆಲ ಜನಪ್ರತಿನಿಧಿಗಳು ಜನರ ಸಮಸ್ಯೆಗಳಿಗೆ ಈಗ ಪ್ರಾಮಾಣಿಕವಾಗಿ ಸ್ಪಂದಿಸಬೇಕಿದೆ, ನೊಂದ ಮನಗಳಿಗೆ ಸಾಂತ್ವನ ಹೇಳ ಬೇಕಿದೆ. ಅದರ ಜೊತೆಗೆ ದೇಶದ ನೂರಾ ಮೂವತ್ತೈದು ಕೋಟಿ ಜನರು ಒಗ್ಗಟ್ಟಾಗಿ ಈ ಮಹಾಮಾರಿಯನ್ನು ಎದುರಿಸಬೇಕಿದೆ ,ಹಗಲಿರುಳು ಕೊರೋನಾ ವಾರಿಯರ್ ಗಳ ಶ್ರಮ ಪಡುವುದು ವ್ಯರ್ಥವಾಗದಂತೆ ನೋಡಿಕೊಳ್ಳಬೇಕಿದೆ. ಈ ಸಂಧರ್ಭದಲ್ಲಿ ಸ್ನೇಹಿತರೊಬ್ಬರು ಕಳಿಸಿದ ಸಂದೇಶ ನೆನಪಿಗೆ ಬರುತ್ತದೆ
" ನಾಲ್ಕು ಜನರಿರುವ ಚಿಕ್ಕ ಕುಟುಂಬ ವನ್ನು ನಿಭಾಯಿಸಲು ಪರದಾಡುವ ನಾವು 130 ಕ್ಕೂ ಅಧಿಕ ದೇಶಗಳಿಗೆ ಸಮನಾದ ಜನಸಂಖ್ಯೆ ಹೊಂದಿರುವ ಜನರನ್ನು ಹೇಗೆ ಸಂಭಾಳಿಸಬೇಕು ಎಂದು ಪುಕ್ಕಟೆ ಸಲಹೆ ಕೊಡಲು ಮುಂದಾಗುತ್ತೇವೆ, ನಮ್ಮ ಉಳಿತಾಯ ಖಾತೆಯ ಬ್ಯಾಲೆನ್ಸ್ ಸರಿಯಾಗಿ ಮೇಂಟೇನ್ ಮಾಡದೇ ಬ್ಯಾಂಕಿನಿಂದ ದಂಡ ಹಾಕಿಸಿಕೊಂಡ ನಾವು ರಾಜ್ಯ ಮತ್ತು ದೇಶಗಳ ಬಜೆಟ್ ನಲ್ಲಿ ಹುಳುಕು ಹುಡುಕುವ ಸಾಹಸಕ್ಕೆ ಕೈ ಹಾಕುತ್ತೇವೆ.
ಕಳೆದ ತಿಂಗಳ ಇ ಎಮ್ ಐ ಕಟ್ಟದ ನಾವು, ದೇಶದ ಜಿಡಿಪಿ, ತಲಾ ಆದಾಯ ಕರೆಂಟ್ ಅಕೌಂಟ್ ಡಿಫಿಷಿಟ್ ಎಂದು ಬಡಬಡಾಯಿಸುತ್ತೇವೆ.ಕೊರೋನ ತೊಲಗಿಸಲು ಸರ್ಕಾರಗಳು ನೀಡಿರುವ ಮಾರ್ಗ ಸೂಚಿಗಳನ್ನು ಗಾಳಿಗೆ ತೂರಿ, ಸಾಮಾಜಿಕ ಅಂತರ ಕಾಪಾಡದೇ,ಮಾಸ್ಕ್ ಧರಿಸದೇ ಓಡಾಡುವ ನಾವು ಭಾರತದಲ್ಲಿ ಕೊರೋನ ಹರಡಿದ್ದರ ಬಗ್ಗೆ ವ್ಯಂಗ್ಯ ಮಾಡಿ ಅದು ವಿದೇಶಿ ಮಾದ್ಯಮಗಳಲ್ಲಿ ದೊಡ್ಡ ಸುದ್ದಿಯಾದಾಗಲೂ ವಿಕೃತ ಆನಂದ ಪಡುತ್ತೇವೆ .ಹಾಗಾದರೆ ನಾವು ಸುಧಾರಿಸುವುದು ಯಾವಾಗ? ಬದಲಾಗುವುದು ಯಾವಾಗ? ಈ ಸಂಧರ್ಭದಲ್ಲಿ ಸ್ವಾಮಿ ವಿವೇಕಾನಂದರ ಒಂದು ಮಾತು ನೆನಪಾಗುತ್ತದೆ
" ನಿನ್ನನ್ನು ನೀ ಸುಧಾರಿಸಿಕೋ , ಜಗತ್ತಿನಲ್ಲಿ ಓರ್ವ ಮೂರ್ಖ ಕಡಿಮೆಯಾಗುತ್ತಾನೆ".
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
No comments:
Post a Comment