30 March 2021

*ನಮ್ಮಯ ಕಂದ* ಶಿಶುಗೀತೆ


 



*ನಮ್ಮಯ ಕಂದ*


ನಮ್ಮಯ ಕಂದನ ಲೀಲೆಯ ನೋಡಲು

ಕಣ್ಣಿಗೆ ಹಬ್ಬವು 

ಕಣ್ಣನು ಮಿಟುಕುಸಿ ಆಡುವ ಆಟವ

ನೋಡಲು ಆನಂದವು.


ಗೊಂಬೆಗಳೊಂದಿಗೆ ಆಟವನಾಡುತ 

ಕಿಲ ಕಿಲ ನಗುವುದು

ಆಟದ ವಸ್ತುವು  ಕೈಜಾರಿದರೆ 

ರಚ್ಚೆ ಹಿಡಿಯುವುದು.


ಅಮ್ಮನು ತೋರುವ ಚಂದ್ರನ ನೋಡುತ 

ಕೈತುತ್ತು ತಿನ್ನುವುದು

ಆಗಸದ ಬಿಳಿಯ ಚೆಂಡನಿಡಿಯಲು

ಕೈಯ ಚಾಚುವುದು.


ತೊಟ್ಟಿಲು ಕಂಡರೆ ಕೈಯನು ತೋರುತ

ಆ ಕಡೆ ಓಡುವುದು

ಅಮ್ಮನ ಲಾಲಿಯ ಹಾಡನು ಕೇಳುತ

ನಿದ್ದೆಗೆ ಜಾರುವುದು.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

28 March 2021

ಗಜಲ್


 




*ಗಜಲ್*


ನೋವಿನಲ್ಲೂ ನಗುತಿರವ  ಜನಗಳ ಸಂತೈಸು

ನೊಂದು ಬೇಯುತಿರುವ ಮನಗಳ ಸಂತೈಸು


ಧರಣಿಯು ಕೇವಲ ಮಾನವರದು ಮಾತ್ರವಲ್ಲ

ಭುವಿಯಲಿರುವ ಎಲ್ಲಾ ಪ್ರಾಣಿಗಳ ಸಂತೈಸು


ರೆಕ್ಕೆ ಬಲಿತ ಪಕ್ಷಿಗಳು ಹಾರಾಡುವುದು ಸಹಜ 

ವೃದ್ಧಾಶ್ರಮದಲಿರುವ ಜನ್ಮದಾತರುಗಳ ಸಂತೈಸು


ಝಗಮಗಿಸುತಿವೆ ಉಳ್ಳವರ ಮಹಲುಗಳು

ಸೂರಿರದೆ ಕೊರುಗಿರುವ ಹಾಡಿಗಳ ಸಂತೈಸು 


ದುರ್ಜ‌ನರು ಅಟ್ಟಹಸಾದಿ ಮೆರೆಯುತಿಹರು

ಬೆಂದು ಬಳಲುತಿರುವ "ಸಿಹಿಜೀವಿ"ಗಳ ಸಂತೈಸು 


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ಹೋಳಿ ಹಾಡೋಣ (ಶಿಶುಗೀತೆ)


 *ಹೋಳಿ ಆಡೋಣ*


ಶಿಶುಗೀತೆ


ಸರ್ವರಿಗೂ ಹೋಳಿ ಹಬ್ಬದ ಶುಭಾಶಯಗಳು💐💐


ಬಾರೋ ಗೆಳೆಯ ಬಾರೋ ಗೆಳೆಯ

ಹೋಳಿ ಆಡೋಣ

ವಿಧ ವಿಧ ಬಣ್ಣವ ಎರಚುತ ನಾವು

ಹಬ್ಬವ ಮಾಡೋಣ


ಸರ್ವಕಾಲಕೂ ಉಲ್ಲಾಸವಾಗಿರಲೆಂದು 

ಕೆಂಪು ಬಣ್ಣ ಎರಚೋಣ

ಭುವಿಯಲಿ ಸಮೃದ್ಧಿ ನೆಲೆಸಲಿ ಎನುತಾ

ಹಸಿರನು ಹಚ್ಚೋಣ.


ಸಕಲರ ಜೀವನದಿ ಸಂಭ್ರಮ ಉಳಿಸಲು

ಹಳದಿಯ ಬಳಿಯೋಣ

ನೋವುಂಡವರಿಗೆ ಸಂತೋಷ ಹಂಚಲು

ಗುಲಾಬಿಯ ಹಚ್ಚೋಣ.


ದೀನ ದಲಿತರಿಗೆ ಸಂಪತ್ತು ನೀಡಲು

ನೇರಳೆ ಎರಚೋಣ

ನಕಾರ ಭಾವನೆ ತೊಲಗಿಸಲು

ನೀಲಿಯ ಹಚ್ಚೋಣ.


ಬಣ್ಣಗಳೇಳು ಇರಲಿ ಎಂದಿಗೂ 

ನಮ್ಮಯ ಜೀವನದಿ

ಬಣ್ಣ ಬಣ್ಣದಲಿ ಕಂಗೊಳಿಸುತಾ 

ಹರಿಯುತಿರಲಿ ಜೀವ ನದಿ.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

🔴🟠🟡🟢🔵

27 March 2021

ಆಟಗಳ ಆಡೋಣ .ಶಿಶುಗೀತೆ


 



*ಆಟಗಳ ಆಡೋಣ*


ಶಿಶುಗೀತೆ


ಭಾನುವಾರ ರಜೆಯು ನಮಗೆ

ಆಟವಾಡಲು ನಾವ್ ರೆಡಿ

ಒಂದು ದಿನ ಪೆನ್ನು ಪುಸ್ತಕ

ಪಾಠದ ಚಿಂತೆಯ ಬಿಡಿ.


ಮರವನತ್ತಿ ಇಳಿಯುತ ಮರಕೋತಿ

ಆಟವನು ಆಡೋಣ 

ವೃತ್ತದಿ ನಿಂತು ಹುಲಿ ಹಸು

ಆಟವಾಡುತ ಕುಣಿಯೋಣ.


ಸಾಲಾಗಿ ನಿಂತು ಕೆರೆ ದಡ 

ಆಟದಿ ನಲಿಯೋಣ 

ಗೋಲಿ,ಲಗೋರಿ,ಚಿನ್ನಿದಾಂಡು

ಎಲ್ಲಾ ಆಟಗಳ ಆಡೋಣ.


ಸಂಜೆಯಾಗುತ ಆಟದಿ ದಣಿದು 

ಮನೆಕಡೆ ಓಡೋಣ

ಕೈಯನು ತೊಳೆದು ಸಾಲಾಗಿಕುಳಿತು

ಅಮ್ಮನ ಕೈತುತ್ತು ತಿನ್ನೋಣ.


ಊಟದ ನಂತರ ನಾವು

ಅಮ್ಮನ ಮಡಿಲಲಿ ಮಲಗೋಣ

ಸೋಮವಾರ ಮತ್ತೆ ಸಿದ್ದವಾಗಿ

ಶಾಲೆ ಕಡೆ ನಡೆಯೋಣ.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


24 March 2021

ಅಕ್ಷಯ .ಹನಿಗವನ


 



ಅಕ್ಷಯ 


ಹನಿಗವನ


ದೀರ್ಘಕಾಲದ ಕೆಮ್ಮು

ಇದ್ದರೆ ಬರಬಹುದು

ರೋಗ ಕ್ಷಯ (T B)|

ಸಕಾಲಕ್ಕೆ ಚಿಕಿತ್ಸೆ

ಪಡೆದರೆ ನಮ್ಮ

ಅರೋಗ್ಯವಾಗುವುದು

ಅಕ್ಷಯ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


ನಮ್ಮನೆ ಕೂಸು .ಶಿಶುಗೀತೆ


 



*ನಮ್ಮನೆ ಕೂಸು*


ನಮ್ಮ ಮನೆಯಲೊಂದು ಪುಟ್ಟ

ಕೂಸು ಇರುವುದು

ಅಂಬೆಗಾಲನಿಟ್ಟು ನಡೆದು

ಮುದವ ನೀಡುವುದು.


ಕೈಯ ತಟ್ಟಿ ಕೇಕೆಹಾಕಿ

ನಕ್ಕು ನಲಿವುದು

ಬಾಲ ಭಾಷೆ ನುಡಿದು

ನಮಗೆ ಖುಷಿಯ ತರುವುದು.


ಸಿಕ್ಕಿದ್ದೆಲ್ಲವನ್ನು ಹಿಡಿದು

ಬಾಯಲಿಟ್ಟುಕೊಳುವುದು

ಗದರಿದಾಗ ನಗುತ ನಮ್ಮ

ಕೋಪ ಮರೆಸುವುದು.


ಹೊಟ್ಟೆ ಹಸಿಯೆ ಜೋರಾಗಿ

ಅಳುತಲಿರುವುದು 

ಅಮ್ಮ ಕಂಡರೆ ತಟ್ಟನೆ

ಅಳು ನಿಲ್ಲಿಸುವುದು.

ಹವಾಮಾನ . ಹನಿ

 ಹವಾಮಾನ?


ಕಷ್ಟ ಪಟ್ಟು ಕಂಡುಹಿಡಿಯಬಹುದು

ಇದೇ ರೀತಿಯಲ್ಲಿ 

ಇರುವುದು  ಮುಂದಿನ

ದಿನಗಳ ಹವಾಮಾನ|

ಯಾರಿಗೂ ಗೊತ್ತಾಗುವುದಿಲ್ಲ

ಯಾರಿಂದ ?ಯಾವಾಗ?

ಹೇಗೆ ಆಗುವುದು ಅವಮಾನ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


22 March 2021

ಕಾಯುತ್ತವೆ. ಹನಿ.


 




*ಕಾಯುತ್ತವೆ*


ನಾವೇ ಕಾಯಬೇಕು 

ಉಳಿಸಿಕೊಳ್ಳಲು ಗಳಿಸಿದ

ಸಂಪತ್ತು|

ನಮ್ಮನ್ನೇ ಕಾಯುತ್ತವೆ

ಸದ್ಗುಣಗಳು ನಮಗೆ ಬಂದಾಗ

ಆಪತ್ತು||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

21 March 2021

ಕವನ _ವನ . ಹನಿಗವನ


 



*ಕವನ-ವನ*


(ಇಂದು ವಿಶ್ವ ಕವನ ಮತ್ತು ವನ ದಿನ)


ನಮ್ಮ ಭಾವನೆಗಳಿಗೆ

ಅಕ್ಷರ ರೂಪ ಕೊಟ್ಟರೆ

ಅದು "ಕವನ"

ಉತ್ತಮ ಭಾವನೆಯಿಂದ

ಗಿಡ ಮರ ನೆಟ್ಟು 

ಬೆಳೆಸಿದರೆ ಮುಂದೊಂದು

ದಿನ ಅದೇ "ವನ"


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ವನಮಹೋತ್ಸವ (ಶಿಶುಗೀತೆ)


 



*ವನಮಹೋತ್ಸವ*


ಶಿಶುಗೀತೆ


ರಾಮ ರಹೀಮ ಬೇಗನೆಬಾರೋ

ಒಂದೊಂದು ಗಿಡವ ಹಾಕೋಣ

ಹಾಕಿದ ಗಿಡಗಳ ಮರಗಳನಾಗಿಸಿ

ವನಮಹೋತ್ಸವ ಆಚರಿಸೋಣ.


ಬೇವು ,ಹಲಸು, ತೇಗ ಹೊನ್ನೆ

ಗಂಧದ ಮರಗಳ ಬೆಳೆಸೋಣ 

ಕಾಡಿನ ಕಿಚ್ಚನು ತಡೆಯುತ 

ವನ ಸಂರಕ್ಷಣೆ ಮಾಡೋಣ.


ವನ್ಯಜೀವಿಗಳ ಕಾಡದೆ ನಾವು 

ಕಾಡಲೇ ಇರಲು ಬಿಡೋಣ

ನಾಡಲೂ ಕಾಡನು ಬೆಳಸಿ

ಪ್ರಕೃತಿಯನ್ನು ಉಳಿಸೋಣ.


ಕಾಡನು ಕಡಿಯುವ ಮನಗಳಿಗೆ

ಬುದ್ದಿಯ ಮಾತನು ಹೇಳೋಣ

ಕಾಡು ಇದ್ದರೆ ನಾಡು ಎನ್ನುತ 

ಪರಿಸರ ಗೀತೆಯ ಹಾಡೋಣ .


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

20 March 2021

ಬಣ್ಣಕೆ ಕಾರಣ ಯಾರಣ್ಣ? .ಶಿಶುಗೀತೆ


 

ಗುಬ್ಬಚ್ಚಿ .ಶಿಶುಗೀತೆ


 

*ಗುಬ್ಬಚ್ಚಿ* 


ಬಾರೋ ಬಾರೋ ಗುಬ್ಬಚ್ಚಿ
ಕೊಡುವೆ ನಿನಗೆ ಅಪ್ಪಚ್ಚಿ


ಕಾಳು‌ ಕಡಿಯನು ನೀಡುವೆನು
ಕುಡಿಯಲು‌ ನೀರು‌ ಇಡುವೆನುು.


ಪುರ್ರನೆ ಹಾರುವ ನಿನ ಚೆಂದ
ನೋಡಲು ನಮಗೆ ಆನಂದ.


ನಮ್ಮನೆ ಮುಂದೆ ಹಾರಾಡು
ನಮ್ಮಯ ಮನಕೆ ಮುದ ನೀಡು .


ಸಿಹಿಜೀವಿ

ಸಿ ಜಿ ವೆಂಕಟೇಶ್ವರ




19 March 2021

ವರ ? . ಹನಿಗವನ


 ವರ?*


ನಿದ್ರೆಯು ದೇವರು

ನಮಗೆ ನೀಡಿದ 

ಅದ್ಭುತವಾದ ವರ

ಅದು ಬಂದರೆ

ಎಲ್ಲವನ್ನೂ ಮರೆಸುತ್ತದೆ|

ಬಾರದಿದ್ದರೆ 

ಬೇಡದ್ದನ್ನೇ  ನೆನಪಿಸುತ್ತದೆ ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


ನಿದಿರೆ ( ಇಂದು ವಿಶ್ವ ನಿದಿರೆ ದಿನ)


 




*ನಿದಿರೆ*


ವೃಥಾ ಏಕೆ ಹಾಳು

ಮಾಡಿಕೊಳ್ಳುತಿರುವೆ

ನಿನ್ನ ಆರೋಗ್ಯವನ್ನು

ಸೇವಿಸುತ ಮದಿರೆ|

ಕಷ್ಟ ಪಟ್ಟು ದುಡಿದು

ಸ್ವಚ್ಛ ಮನಸ್ಸನ್ನು

ಹೊಂದಿದರೆ ರಾತ್ರಿಯಲ್ಲಿ

ಕಣ್ಮುಚ್ಚಿದರೆ ಸಾಕು

ಆವರಿಸುವುದು ನಿದಿರೆ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


18 March 2021

ಪುಟ್ಟನ ಚಿತ್ರ ಶಿಶುಗೀತೆ


 



*ಪುಟ್ಟನ ಚಿತ್ರ* 


ಶಿಶುಗೀತೆ


ನಮ್ಮ ಪುಟ್ಟ ದುಡ್ಡು ಕೊಟ್ಟು

ಚಿತ್ರದ ಪುಸ್ತಕ ಕೊಂಡನು

ಚಿತ್ರಗಳನ್ನು ನೋಡಿ

ಅವನು ಖುಷಿಯಪಟ್ಟನು.


ತಾನೂ ಕೂಡ ಚಿತ್ರ

ಬರೆಯಲು ಸಿದ್ದನಾದನು

ಪೇಪರ್ ಪೆನ್ಸಿಲ್ ಹಿಡಿದು

ಚಿತ್ರ ಬರೆಯಲು ಕುಳಿತನು.


ಬೆಟ್ಟ ಗುಡ್ಡ ,ಗಿಡ ಮರ

ಬಿಳಿಹಾಳೆಯಲಿ ಮೂಡಿದವು

ಪ್ರಾಣಿ ಪಕ್ಷಿ, ಚಿಟ್ಟೆಗಳು 

ಅಲ್ಲಲ್ಲಿ ಕಂಡು ಬಂದವು.


ಬಣ್ಣದ ಬ್ರಷ್ ಹಿಡಿದು

ಬಣ್ಣವನ್ನು ತುಂಬಿದ

ಬರೆದ ಚಿತ್ರವನ್ನು ಅವನು

ಅಮ್ಮನಿಗೆ ತೋರಿಸಿದ.


ಮಗನ ಚಿತ್ರ ನೋಡಿ

ಅಮ್ಮ ಖುಷಿಯ ಪಟ್ಟರು

ಹಣೆಗೆ ಮುತ್ತನಿಟ್ಟು

ಕೈಗೆ ಲಾಡು ಕೊಟ್ಟರು.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


17 March 2021

ಆಟವನಾಡೋಣ (ಶಿಶುಗೀತೆ)


 


*ಆಟವನಾಡೋಣ* ಶಿಶುಗೀತೆ √

ಬಾರೋ ಗೆಳೆಯ ಎಲ್ಲಾ
ಸೇರಿ ಆಟವನಾಡೋಣ
ಗೆಳೆಯರ ಜೊತೆಯಲಿ ಸೇರಿ
ಎಲ್ಲರೂ ನಕ್ಕು  ನಲಿಯೋಣ.

ಚಿನ್ನಿದಾಂಡು ಕೋಲನು
ಹಿಡಿದು ಆಟವನಾಡೋಣ
ಬುಗುರಿ ,ಗಿರಗಿಟ್ಲೆ ಆಟದಿ
ಮಜವನು ಮಾಡೋಣ.

ಮರಕೋತಿ ಆಟವನಾಡಲು
ಈಗಲೆ ಮರವನು ಏರೋಣ
ಅಳಿಗುಣಿ ಆಟಕೆ ಹುಣಸೆ
ಬೀಜಗಳನ್ನು ಸೇರಿಸೋಣ.

ಕುಂಟೋ ಬಿಲ್ಲೆಯ ಆಟವ
ಆಡುತ ಕೌಶಲ್ಯ ತೋರಣ
ಕಬ್ಬಡ್ಡಿ ,ಕೊಕೊ,ಆಡುತ
ನಾವು ಗಟ್ಟಿಗರಾಗೋಣ .

ಪಾಠದ ಜೊತೆಗೆ ಆಟವು
ಇರಲಿ ಎಂಬುದು ತಿಳಿಯೋಣ
ಆಟದ ಮಹತ್ವವನ್ನು ನಾವು
ಜಗತ್ತಿಗೆ ತಿಳಿಸೋಣ .

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ

16 March 2021

ರಜ .ಮಜ ( ಶಿಶುಗೀತೆ)


 


ಶಿಶುಗೀತೆ
*ರಜ  ಮಜ*

ನಾನು ರಜೆಯ ಕಳೆಯುವೆ
ರಜದಿ ಮಜವ ಮಾಡುವೆ

ಅಜ್ಜಿ ಮನಗೆ ಹೋಗುವೆ
ಸಜ್ಜೆ ಬೆಲ್ಲ ತಿನ್ನವೆ

ಗೆಳೆಯರೊಡನೆ ಅಡುವೆ
ಒಳ್ಳೆಯ ಆಟ ಕಲಿವೆ

ಜಾತ್ರೆ ಗೆ ನಾ ಹೋಗುವೆ
ತುತ್ತೂರಿ ಊದುವೆ

ಮತ್ತೆ ಶಾಲೆಗೆ ಹಿಂತಿರುಗುವೆ
ಕಲಿಕೆಯಲ್ಲಿ ತೊಡಗುವೆ

*ಸಿ.ಜಿ ವೆಂಕಟೇಶ್ವರ*

15 March 2021

ಚಿಟ್ಟೆಯಾಗುವಾಸೆ . ಶಿಶುಗೀತೆ

 

*ಚಿಟ್ಟೆಯಾಗುವಾಸೆ* 


ತೋಟದಿ ಕಂಡೆನು 

ವಿಧ ವಿಧ ಚಿಟ್ಟೆ

ಪಟ್ಟೆಯ ಚಿಟ್ಟೆಯ

ಕಂಡು ಕುಣಿದಾಡಿಬಿಟ್ಟೆ. 


ಒಂದೇ ಎರಡೇ ನೋಡು 

ನೂರಾರು ಬಣ್ಣ

ಈ ಪರಿ ಬಣ್ಣವ

ಬಳಿದವರಾರಣ್ಣ?


ರೆಕ್ಕೆಯ ಬಡಿಯುತ 

ಪಕ್ಕದಿ ನಲಿದವು

ನೋಡಲು ಕಣ್ಣಿಗೆ

ಏನೋ ಆನಂದವು.


ಲವಲವಿಕೆಯಲಿ 

ನಲಿವವು ಅನುದಿನದಿ

ಚಿಟ್ಟೆಯಾಗುವಾಸೆ 

ಮುಂದಿನ ಜನ್ಮದಿ.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


ಗಂಟು . ಹನಿ

 *ಗಂಟು*


ಮದುವೆಯಲ್ಲಿ ನಾನು

ನನ್ನವಳಿಗೆ ಹಾಕಿದ್ದೆ

ಮೂರು ಗಂಟು|

ಅದೇ ಸಿಟ್ಟಿಗೆ 

ಪ್ರತಿದಿನವೂ ಮುದ್ದೆಯಲಿ

ಮಾಡುತಿರುವಳು

ಹತ್ತಾರು ಗಂಟು||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

14 March 2021

ಋಣ ಹನಿ


 ಋಣ


ಆಡಂಬರ ತೋರುತ್ತಾ ಹೋಟೆಲ್  ಅನ್ನವನ್ನು ತಿನ್ನಲು ಬೇಕೇ 

ಬೇಕು ಹಣ|

ಜೋಪಡಿಯಾದರೂ ಪ್ರೀತಿಯಿಂದ

ಕೂಡಿದ  ಅಮ್ಮನ  ಕೈ ತುತ್ತು ತಿನ್ನಲು 

ಬೇಕು ಋಣ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


11 March 2021

ದಿನಾಂಕ ೧೧/೩/೨೧/ ರಂದು ಜನಮಿಡಿತ ಪತ್ರಿಕೆ


 

ಶಿವರಾತ್ರಿ ಹಬ್ಬದ ಶುಭಾಶಯಗಳು .


 



*ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು*


ಚುಟುಕು ೧


ಶಿವ


ಶುದ್ಧವಾದ ಮನದಿಂದ

ಶಿವನಾಮ ಜಪಿಸೋಣ|

ಬುದ್ದನಂತೆ ಜ್ಞಾನ ಪಡೆದು

ಆತ್ಮಜಾಗೃತಗೊಳಿಸಿಕೊಳ್ಳೋಣ|| 


ಚುಟುಕು ೨


ಶಿವರಾತ್ರಿ



ಶಿವರಾತ್ರಿ ಆಚರಿಸೋಣ

ಮಾಡುತ ಹರ ಭಜನೆ|

ಶುದ್ದವಾದ ಭಕ್ತಿಯೊಂದಿದ್ದರೆ

ಸಿಗುವದು ಅವನ ಕರುಣೆ ||



ಚುಟುಕು ೩



ಉಪವಾಸ


ಪಾತಕ ಮಾಡುವ ದುರ್ಜನರ

ಜೊತೆ ಬೇಡವೆ ಬೇಡ ಸಹವಾಸ|

ಹರನನು ಧ್ಯಾನಿಸಿ ಕರುಣೆ ಪಡೆಯಲು

ಮಾಡಬೇಕು ನೀ ಉಪವಾಸ ||



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

10 March 2021

ಸಾರ್ಥಕತೆ .ಹನಿ

 


*ಸಾರ್ಥಕತೆ*


ತಾವರೆಯು ಸೇರುವುದು

ಭಗವಂತನ ಪಾದವನ್ನು ಅದು ಹುಟ್ಟಿದರೂ ಕೆಸರಿನಲ್ಲಿ |

ಎತ್ತರದ ಬೆಟ್ಟದಲ್ಲಿದ್ದರೂ 

ಹುಟ್ಟಿದಲ್ಲೇ ಕೊಳೆಯುವುದು

ಪಾಪಾಸುಕಳ್ಳಿ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


08 March 2021

ಇಳೆ ಮಹಿಳೆ .ಹನಿ


 *ಇಳೆ_ಮಹಿಳೆ*


ತ್ಯಾಗ ,ಸಹನೆಗೆ 

ಮತ್ತೊಂದು ಹೆಸರೇ

ಇಳೆ|

ಭೂಮಿತಾಯಿಯ

ಪ್ರತಿರೂಪವೇ

ಮಹಿಳೆ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

05 March 2021

ರೂಪ ಮತ್ತು ಗುಣ .ಹನಿ


 *ರೂಪ ಮತ್ತು ಗುಣ*


ಮನುಷ್ಯನಲ್ಲಿರುವ  ರೂಪ ಮತ್ತು ರೂಪಾಯಿ ಶಾಶ್ವತವಲ್ಲ |

ಅವನ ಸಹಕಾರ, ಉಪಕಾರ

ಮುಂತಾದ ಗುಣಗಳನ್ನು

ಮರೆಯಲಾಗುವುದಿಲ್ಲ ||



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

 

04 March 2021

ಒಣಸಂತೆ. ಹನಿ

 *ಒಣಸಂತೆ*


ಸ್ಪಂದನೆಗಳೇ  ಇಲ್ಲದ

ಜಾಗದಲ್ಲಿ 

ಭಾವನೆಗಳ ವ್ಯಕ್ತಪಡಿಸಿದರೆ 

ಅದು ಒಣ ಸಂತೆ |

ಬಂಡೆಗಳ ಮೇಲೆ ನೀರು

ಸುರಿದಂತೆ ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

03 March 2021

ಬೆಳವಣಿಗೆ .

 ದಿಡೀರ್ ಬೆಳೆದು ನಿಲ್ಲಲಾಗುವುದಿಲ್ಲ

ಬೆಳೆಸುವವರು  ಬಹಳಿಲ್ಲ 

ಬೆಳೆವ ಚಿಗುರನ್ನೇ ಚಿವುಟುವರಲ್ಲ

ಬೆಳೆದು ನಿಂತಾಗ ನಿನ್ನ ಸಹಾಯ

ಬೇಡುತ ಬರುವರು ಎಲ್ಲಾ.

02 March 2021

ಗಾಳಿಪಟ .ಹನಿ

 


*ಗಾಳಿಪಟ*


ನಾವೆಂದೂ ಆಗಲಾರದು

ಬೇರೆಯವರು ನಿಯಂತ್ರಿಸುವ

ಗಾಳಿಪಟ|

ಆಟ ಸಾಕೆನಿಸಿದಾಗ

ಬರ್ರೆಂದು ಕೆಳಕ್ಕೆಳೆದು

ತೋರಿಸಿಬಿಡುವರು

ಪ್ರಪಾತ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

01 March 2021

ಜೀವನ .ಹನಿ

 





*ಜೀವನ*


ಯಾರಿಗೂ ಸಾದ್ಯವಿಲ್ಲ

ಜೀವನ ನಡೆಸಲು 

ಬರೆದಿಟ್ಟಂತೆ|

ಸನ್ಮಾರ್ಗದಿ ನಡೆದು 

ಸಾಧಿಸಿದರೆ ಜೀವಿಸಬಹುದು

ಬರೆದಿಡುವಂತೆ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ