06 May 2021

ನನ್ನಮ್ಮ .ಒಂದು ಉಚಿತ ಹೆರಿಗೆ ಆಸ್ಪತ್ರೆ .ಲೇಖನ




 


*ನನ್ನಮ್ಮ, ಒಂದು ಉಚಿತ ಹೆರಿಗೆ ಆಸ್ಪತ್ರೆ*

ಲೇಖನ

ಅದು ಎಂಭತ್ತರ ದಶಕ ಈಗಿನಂತೆ  ಆಗ  ಆಶಾ ಕಾರ್ಯಕರ್ತೆಯರು ,ನೂರಾಎಂಟು ಅಂಬುಲೆನ್ಸ್ ಇಂತಹವು ಏನೂ ಇರಲಿಲ್ಲ,
ಸಣ್ಣ ಜ್ವರವೇ ಇರಲಿ ದೊಡ್ಡ ಖಾಯಿಲೆಯೇ ಇರಲಿ ನಮ್ಮ ಊರಿನಿಂದ ಹೊರಕೆರೆದೇವಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಲೇಬೇಕಿತ್ತು , ವಾಹನಗಳಿಲ್ಲದ  ಆ ಕಾಲದಲ್ಲಿ ಏಳೆಂಟು  ಕಿಲೋಮೀಟರ್ ದೂರ ಎತ್ತಿನ ಗಾಡಿಯಲ್ಲಿ ಹೋಗಿ ಆಸ್ಪತ್ರೆ ತಲುಪಿದರೆ, ಅಲ್ಲಿ ಕೆಲವೊಮ್ಮೆ ಡಾಕ್ಟರ್ ಇರಲಿ, ಕಾಂಪೌಂಡರ್ ಕೂಡ ಇರುತ್ತಿರಲಿಲ್ಲ.

ಆದ್ದರಿಂದ ನಮ್ಮೂರ ಜನ ಮಕ್ಕಳಿಗೆ ಸಣ್ಣ ಪುಟ್ಟ ಜ್ವರ ಬಂದರೆ ಚಂದ್ರಯ್ಯನವರ ಅಂತ್ರ(ತಗಡಿನತಾಯಿತ) , ಅರಳಿಮರದ ತೊಗಟೆ ರಸ, ಗೋಣಿ ಮರದ ಮುಗುಲು, ಇವುಗಳ ಬಳಸಿ ತಮ್ಮ ರೋಗ ಗುಣಪಡಿಸಿಕೊಳ್ಳುತ್ತಿದ್ದರು, ಇದಕ್ಕಿಂತ ಸ್ವಲ್ಪ ಹೆಚ್ಚು ಆರೋಗ್ಯ ಸಮಸ್ಯೆಗಳು ಕಂಡು ಬಂದರೆ ಊರ ದೇವರುಗಳಾದ ಚೌಡಮ್ಮ, ಮತ್ತು ಪಾತಲಿಂಗೇಶ್ವರ ದೇವರ ಮೊರೆ ಹೋಗಿ ರೋಗಪರಿಹಾರ ಕಂಡುಕೊಂಡ ಉದಾಹರಣೆಗಳು ಸಾಕಷ್ಟು ಇವೆ.

ಇನ್ನೂ ಹೆರಿಗೆಯಂತಹ ಸಮಯದಲ್ಲಿ ನಮ್ಮ ತಾಯಿ ಶ್ರೀದೇವಮ್ಮ ಹೆರಿಗೆ ಮಾಡಿಸಲು ಸಹಾಯ ಮಾಡುತ್ತಿದ್ದರು, ಅದರ ಪರಿಣಾಮವಾಗಿ ಸುತ್ತ ಮುತ್ತ ಹಳ್ಳಿ ಜನರು ನಮ್ಮಮ್ಮನಿಗೆ" ಸೂಲಗಿತ್ತಿ ಸೀದೇವಮ್ಮ" ಎಂದೇ ಪರಿಚಿತವಾಗಿದ್ದರು
ಹಗಲಿನಲ್ಲಿ ಹೊಲದಲ್ಲಿ ಕೆಲಸ ಮಾಡಿ ದಣಿದು ಬಂದಿದ್ದರೂ  ಯಾರಾದರೂ ಹೆರಿಗೆ ಮಾಡಿಸಲು ಕರೆದರೆ ಇಗೋ ಬಂದೆ.... ಎಂದು ಹೊರಟೇ ಬಿಡುತ್ತಿದ್ದರು .
ಯಾವುದೇ ಶುಲ್ಕದ ಪ್ರತಿಫಲವಿಲ್ಲದೆ ಕೇವಲ ಆತ್ಮ ಸಂತೋಷ ಮತ್ತು ಸಹಾಯದ ರೂಪದಲ್ಲಿ ಈ ಕೆಲಸ ಮಾಡುತ್ತಿದ್ದ ನನ್ನಮ್ಮ ,ಅವರು ಬಲವಂತ .ಮಾಡಿದರೆ ಒಂದು ಬ್ಲೌಸ್ ಪೀಸ್ ಮತ್ತು ಮಡಿಲಕ್ಕಿ ಮಾತ್ರ ಪಡೆಯುತ್ತಿದ್ದರು , ಈ ರೀತಿಯಲ್ಲಿ ಆ ಕಾಲಕ್ಕೆ ಸುಮಾರು ನೂರೈವತ್ತು ಹೆರಿಗೆ ಮಾಡಿಸಿದ್ದರು.
ಅಮ್ಮನ ಕಷ್ಟ ನೋಡಿ ಬಹಳ ನೊಂದು ಕೊಳ್ಳುತ್ತಿದ್ದ ನಾನು ನಮ್ಮಮ್ಮನಿಗೆ ಬುದ್ದಿ ಇಲ್ಲ ಹಗಲೆಲ್ಲಾ ದುಡಿದು ಬಂದು ರಾತ್ರಿ ವೇಳೆಯಲ್ಲಿ ವಿಶ್ರಾಂತಿ ಪಡೆಯುವ ಬದಲು ಈಗೆ ನಿದ್ದೆಗೆಟ್ಟು ಹೆರಿಗೆ ಮಾಡಿಸಲು ಏಕೆ ಹೋಗಬೇಕು? ಎಂದುಕೊಳ್ಳುತ್ತಿದ್ದೆ .

ಒಂದು ರಾತ್ರಿ ಸುಮಾರು ಹನ್ನೆರಡು ಗಂಟೆ ಇರಬಹುದು ಮನೆಯ ಹೊರಗಿನಿಂದ " ಅಕ್ಕ ಸೀದೇವಕ್ಕ ..... ಅಕ್ಕ..... ಸೀದೇವಕ್ಕ.... ಎಂದು ನಾಲ್ಕೈದು ಬಾರಿ ಒಬ್ಬ ಗಂಡಸಿನ ಕೂಗುವ ಧ್ವನಿ ಕೇಳಿಸಿತು, ಹೊಲದಲ್ಲಿ ಕೆಲಸ ಮಾಡಿ ದಣಿದ ಅಮ್ಮ ಗಾಢವಾದ ನಿದ್ರೆಯಲ್ಲಿದ್ದರು, ನಾನೇ
"ಯಾರದು? ಏನು? " ಅಂದೆ
" ಅಪ್ಪಿ ನಾನು ಒದೋ ಮೂಡ್ಲಪ್ಪ ಕಣಪ್ಪ ,ನನ್ ಮಗಳಿಗೆ ಹೆರಿಗೆ ನೋವು  ನಿಮ್ ಅಮ್ಮನ್ನ ಕಳಿಸಪ್ಪ" ಗಾಬರಿಯ ಧ್ವನಿಯಲ್ಲಿ ಹೇಳಿದರು

" ಅಮ್ಮ ಇಲ್ಲ ಕಣಣ್ಣ ಊರಿಗೆ ಹೋತು"
ಎಂದು ಬಿಟ್ಟೆ ನಾನ .

" ಏ ಅದ್ಯಾಕಂಗ್ ಅಮ್ತಿಯಾ ,ಅಪ್ಪಿ ಸಾಯಿಂಕಾಲ‌ ಅಕ್ಕ ಹೊಲದ ಕಡೆಯಿಂದ ಬರುವಾಗ ನ‌ನ್ ಮಾತಾಡಿಸಿತ್ತು, ಎಬ್ಬುರಸಪ್ಪ, ಮಗಳು ಬಾಳ ಸುಸ್ತು ಆಗೆದಾಳೆ ಕಣಪ್ಪ" ಎಂದು ಅಳುವ ಧ್ವನಿ ಕೇಳಿ ಎಚ್ಚರವಾದ ,ಅಮ್ಮ ಬಾಗಿಲ ಅಗುಳಿ ತೆಗೆದು ಹೊರಬಂದು
" ಏನಣ್ಣ ಮೂಡ್ಲಣ್ಣ  " ಎಂದರು
" ನನ್ ಮಗ್ಳಿಗೆ ಹೆರಿಗೆ ನೋವು ಕಣಕ್ಕ, ನಿನ್ ಮಗ ಅಮ್ಮ ಊರಿಗೋತು ಅಂತಾನಲ್ಲಕ್ಕ ಬಾರಕ "ಎಂದು ಕಣ್ಣೀರಿಡಲು ಶುರುಮಾಡಿದರು .
" ಆತು ನಡಿಯಣ್ಣ ಹೋಗಾನ  ಅಪ್ಪಿ ಅಗುಣಿ ಹಾಕ್ಕೆಳಪ್ಪ " ಎಂದು ಹೇಳಿ  ಕತ್ತಲಲ್ಲಿ ಲಾಟೀನು ಹಿಡಿದು ಹೊರಟರು.

ಬೆಳಿಗ್ಗೆ ಮನೆಯ ಮುಂದಿನ ಕಸ ಹೊಡೆದು ಸಗಣಿಯ ಕದರು ಹಾಕಿ ಟೀ ಮಾಡಿಕೊಂಡು ಕುಡಿಯುವ ವೇಳೆ ಓದೋ ಮೂಡ್ಲಪ್ಪ ಮತ್ತೆ ಬಂದರು ,ಬರುವಾಗ ನಾಲ್ಕೈದು ತೆಂಗಿನ ಕಾಯಿ ಒಂದು ಬಾಳೆ ಗೊನೆ ,ತಂದು ಒಳಗಿಟ್ಟು ನಮ್ಮ ಅಮ್ಮನ ಕಾಲಿಗೆ ಬಿದ್ದು
" ಅಕ್ಕ ಇದು ನಿನ್ ಪಾದ ಅಲ್ಲಕ್ಕ ,ದೇವರ್ ಪಾದ ,ರಾತ್ರಿ ನೀನ್ ಬರಲಿಲ್ಲ ಅಂದಿದ್ರೆ, ನನ್ ಮಗಳು ಮತ್ತು ಮೊಮ್ಮಗಳು ದೇವರ ಪಾದ ಸೇರ್ತಿದ್ರು , ಆ ದೇವ್ರು ನಿಮ್ಮನ್ನ ಸೆನಾಗಿಟ್ಟಿರ್ಲಿ ಕಣಕ್ಕ, ಸಾಯಿಂಕಾಲ ನಮ್ಮೋಳು ಮಡ್ಲಕ್ಕಿ ತತ್ತಾಳೆ ಕಣಕ್ಕ, ನಾನು ಬತ್ತಿನಿ ಅಡಿಕೆ ಗಿಡಕ್ಕೆ ನೀರು ಬಿಡಬೇಕು ಎಂದು ಹೊರಟರು
" ಅಲ್ಲಾ ಕಣೋ ಮಗಾ, ರಾತ್ರಿ ಅವ್ರು ಕಷ್ಟ ಅಂತ ಬಂದ್ರೆ, ನಾನು ಊರಿಗೆ ಹೋಗಿದಿನಿ ಅಂತ ಸುಳ್ಳು ಹೇಳ್ತಾರೇನೋ" ಎಂದು ಪ್ರೀತಿಯಿಂದ ಗದರಿದರು ನನ್ನಮ್ಮ.

"ಇಲ್ಲ ಅಮ್ಮ ಅವರು ನಿನಗೆ ನಿದ್ದೆ ಮಾಡಾಕೆ ಬಿಡಲ್ಲ ,ಹಗಲು ರಾತ್ರಿ ನೀನು ಕಷ್ಟ ಪಾಡೊದಾ ನಾನು ನೋಡಕಾಗ್ದೆ ಅಂಗ್ ಅಂದೆ ಕಣಮ್ಮ" ಎಂದೆ

" ಯಾರಾದರೂ ಕಷ್ಟದಾಗೆ ಇದ್ದಾಗ  ನಮಗೆ ಆದ ಸಹಾಯ ಮಾಡಬೇಕು ಕಣಪ್ಪ , ಮನುಷ್ಯನ್ ಜನ್ಮ ಅಂತ ಹುಟ್ಟಿದ್ ಮೇಲೆ ನಾವು ನಾಕ್ ಜನಕ್ಕೆ ನಮ್ಮ ಕೈಲಾದ ಸಹಾಯಮಾಡ್ ಬೇಕು ಆಗ ಭಗವಂತ ಮೆಚ್ಚಾದು .ನೀನು ಅಷ್ಟೇ ಕಣಪ್ಪ ದೊಡ್ಡೋನಾದ್ ಮೇಲೆ ನಾಕ್ ಜನಕ್ಕೆ ಸಹಾಯ ಮಾಡ್ಬೇಕು" ಎಂದು  ಹೇಳಿದಾಗ ನಾಲ್ಕನೇ ಕ್ಲಾಸ್ ಪೇಲಾದ ನನ್ನಮ್ಮ ತತ್ವಜ್ಞಾನಿ, ವೇದಾಂತಿಯಂತೆ ಮಾತಾಡಿದ್ದು ಕಂಡು ನಾನು ನನ್ನ ಅಮ್ಮನ ಬಗ್ಗೆ ಹೆಮ್ಮೆ ಟ್ಟೆ.

ಮಾತೆತ್ತಿದರೆ ಸಿಜೇರಿಯನ್ ಮಾಡುವ , ಹೆರಿಗೆ ಮಾಡಿಸುವುದನ್ನೇ  ಹಣ  ಮಾಡುವ ದಂದೆಯಾಗಿ ಪರಿವರ್ತನೆ ಮಾಡಿಕೊಂಡು ಒಂದು ಹೆರಿಗೆಗೆ ಲಕ್ಷಾಂತರ ಹಣ ಪೀಕುವ ಆಸ್ಪತ್ರೆಗಳ ಕಂಡು, ಈ ಕೊರೋನ ಕಾಲದಲ್ಲಿ ಬೆಡ್, ಆಕ್ಸಿಜನ್, ವೆಂಟಿಲೇಟರ್ , ಮತ್ತು ಔಷಧಿಗಳನ್ನು ನೀಡಲು ಅಮಾನವೀಯವಾಗಿ  ಮೂರು ನಾಲ್ಕು ಪಟ್ಟು ಹಣ ವಸೂಲಿ ಮಡುವವರ ನೋಡಿದಾಗ ಅಂದು ನನ್ನಮ್ಮ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅವಳೇ ಮನೆ ಮನೆಗೆ ತರಳುವ ಮೂಲಕ  ಉಚಿತ ಹೆರಿಗೆ ಅಸ್ಪತ್ರೆಯಾಗಿ , ಮಾನವೀಯತೆಯಿಂದ  ನಿಸ್ವಾರ್ಥ ಸೇವೆ ಮಾಡಿದ ದಿನಗಳು ನೆನಪಾಗುತ್ತವೆ , ಅಮ್ಮನ ಬಗ್ಗೆ ಮತ್ತೂ ಗೌರವ ಹೆಚ್ಚತ್ತದೆ.
ನನ್ನ ಅಮ್ಮನ ನಿಸ್ವಾರ್ಥ ಸೇವೆಯಿಂದ ಪ್ರೇರಿತವಾಗಿ, ನಾನೂ ಸಹ ಅಮ್ಮನ ದಾರಿಯಲ್ಲೇ ಸಾಗುತ್ತಿರುವೆ,ಮುಂದಿನ ಒಳ್ಳೆಯ ಪೀಳಿಗೆಯ ರೂಪಿಸುವ ಉದ್ದೇಶದಿಂದ ಮಕ್ಕಳಿಗೆ ನಾಲ್ಕು ಅಕ್ಷರ ಕಲಿಸುವ, ಮತ್ತು ಉತ್ತಮ ಸಂಸ್ಕಾರ ನೀಡುವ ಪ್ರಯತ್ನ ಮಾಡುತ್ತಿರುವೆ . ನನ್ನ ದೇವತೆ ಈಗಲೂ ನಮ್ಮೊಂದಿಗೆ ಇರುವುದು ನನಗೆ ಹೆಮ್ಮೆ ,ಈ ದೇವತೆ ನೂರ್ಕಾಲ ಬಾಳಲಿ ಎಂದು ಆ ದೇವರ ಬೇಡುವೆನು.

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ಶಿಕ್ಷಕರು ತುಮಕೂರು

No comments: