30 September 2022

ಸಿಹಿಜೀವಿಯ ಹನಿ

 



☘️☘️🌻☘️☘️🌻☘️☘️


ಸಿಹಿಜೀವಿಯ ಹನಿ 


ಯಾವುದೇ ಪದಾರ್ಥಗಳಾಗಲಿ   

ನಮ್ಮ ಹೊಟ್ಟೆಯಲ್ಲಿ ಉಳಿಯುವುದಿಲ್ಲ ತಿಂದದ್ದು |

ನಮ್ಮ ಮನಸಿನಲ್ಲಿ 

ಅಚ್ಚಳಿಯದೆ  ಉಳಿದೇಬಿಡುತ್ತದೆ

ಮನನೋಯುವಂತೆ ಅಂದದ್ದು ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


          *ಶುಭೋದಯ ಸುಪ್ರಭಾತ ,*☘️☘️🌻☘️☘️🌻☘️☘️



.

25 September 2022

ವಂದೇ ಭಾರತಂ

 


ವಿಮರ್ಶೆ ೫೨
ವಂದೇ  ಭಾರತಂ 

ನನ್ನ ಪುಸ್ತಕಗಳನ್ನು ಪೋಸ್ಟ್ ಮಾಡಲು ಕ್ಯಾತ್ಸಂದ್ರ ಪೋಸ್ಟ್ ಆಫೀಸ್ ಗೆ ತೆರಳಿದಾಗ ಅಲ್ಲಿಯ ಪೋಸ್ಟ್ ಮಾಸ್ಟರ್ ರವರು " ಸರ್ ನಿಮ್ಮಂಗೆ ಒಬ್ರು ಪುಸ್ತಕ ಬರೀತಾರೆ ಅವರ ಹೆಸರು ರೇಣುಕಾರಾಧ್ಯ ಅಂತ ನಂಬರ್ ತಗೊಳಿ"  ಎಂದು ಕೊಟ್ಟರು .ಒಂದು ದಿನ  ಮಗಳನ್ನು ಶಾಲೆಗೆ ಬಿಡಲು ಬಸ್ ನಿಲ್ದಾಣದ ಬಳಿ ನಿಂತಿದ್ದಾಗ   ರೇಣುಕಾರಾಧ್ಯ ರವರು " ವಂದೇ ಭಾರತಂ " ಪುಸ್ತಕ ನೀಡಿ ಓದಲು ಹೇಳಿದರು.
ಮುನ್ನೂರಾ ನಲವತ್ತನಾಲ್ಕು  ಪುಟಗಳ ಪುಸ್ತಕವನ್ನು ಎರಡು ದಿನಗಳಲ್ಲಿ ಓದಿದೆ. ಪ್ರತಿಯೊಬ್ಬ ಭಾರತೀಯನು ಓದಲೇ ಬೇಕಾದ ಪುಸ್ತಕ ಇದು.ಇದರಲ್ಲಿ ದೇಶಭಕ್ತಿ ಉಕ್ಕಿಸುವ ಲೇಖನಗಳಿವೆ.ಮಕ್ಕಳಿಗೆ ಕಿವಿಮಾತುಗಳಿವೆ, ಹಿರಿಯರ ಆದರ್ಶಗಳ ನಿದರ್ಶನಗಳಿವೆ.ಭಾರತೀಯ ಸಂಸ್ಕೃತಿಯ ದರ್ಶನವಿದೆ. ಜವಾಬ್ದಾರಿಯುತ ನಾಗರಿಕನಾಗಲು ಮಾಡಬೇಕಾದ ಕರ್ತವ್ಯಗಳೇನು ಎಂದು ಎಚ್ಚರಿಸುವ ಅಂಶಗಳಿವೆ .

ಕರ್ನಾಟಕರತ್ನ, ಪದ್ಮಭೂಷಣ, ಮಹಾದಾಸೋಹಿ, ನಿರಂಜನಪ್ರಣವಸ್ವರೂಪಿ ಪರಮಪೂಜ್ಯ ಡಾ॥ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರಿಗೆ ಈ ಕೃತಿಯನ್ನು ಭಕ್ತಿ ಪೂರ್ವಕವಾಗಿ ಸಮರ್ಪಿಸಿದ ಲೇಖಕರು ಶ್ರೀಗಳೊಂದಿಗಿನ ಒಡನಾಟದ ಚಿತ್ರಣವನ್ನು ಓದುಗರೊಂದಿಗೆ ಇಲ್ಲಿಯ ಕೆಲ ಅಧ್ಯಾಯಗಳಲ್ಲಿ  ಹಂಚಿಕೊಂಡಿದ್ದಾರೆ.

ಶ್ರೀ ಎಸ್. ರೇಣುಕಾರಾಧ್ಯ ಅವರು ಈಗ ಎಪ್ಪತ್ತೈದರ ಹರೆಯದಲ್ಲಿದ್ದಾರೆ. ಇವರು ಪ್ರೌಢಶಾಲಾ ಶಿಕ್ಷಕರಾಗಿ ಸಹಸ್ರಾರು ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿದ್ದಾರೆ. ನಲವತ್ತು ವರ್ಷಗಳ ಕಾಲ ಶಿಕ್ಷಕರಾಗಿ ಮಕ್ಕಳಿಗೆ ಜ್ಞಾನವನ್ನು ಉಣಬಡಿಸಿದ್ದಾರೆ . ಬಡಕುಟುಂಬವೊಂದರಲ್ಲಿ ಜನಿಸಿ, ತಮ್ಮ ಇಚ್ಚಾಶಕ್ತಿಯಿಂದಲೂ ಸ್ವಸಾಮರ್ಥ್ಯದಿಂದಲೂ, ಪರಮಪೂಜ್ಯ ಸಿದ್ಧಗಂಗಾಶ್ರೀಗಳ ಆಶೀರ್ವಾದದಿಂದಲೂ ಹಂತಹಂತವಾಗಿ ಮೇಲೇರಿದ್ದಾರೆ! ಅವರು ಶಿಕ್ಷಕರಾಗಿ ಕೇವಲ ಬೋಧನೆಯಲ್ಲೇ ವಿರಮಿಸದೆ, ಸಹಸ್ರಾರು ಮಸ್ತಕಗಳನ್ನು ಓದಿ, ತಮ್ಮ ಅನುಭವವನ್ನು ವಿದ್ಯಾರ್ಥಿಗಳೊಡನೆ ಹಂಚಿಕೊಂಡಿದ್ದಾರೆ. ಸಾಹಿತ್ಯ, ತತ್ತ್ವಜ್ಞಾನ, ಸಮಾಜವಿಜ್ಞಾನ, ರಾಜಕೀಯಶಾಸ್ತ್ರ, ಮನಃಶಾಸ್ತ್ರ ಇವೇನು ಒಂದೇ ಎರಡೇ? ಹಲವು ಜ್ಞಾನಕ್ಷೇತ್ರಗಳ ಜ್ಞಾನಭಂಡಾರವನ್ನು ಶ್ರೀ ಎಸ್.ರೇಣುಕಾರಾಧ್ಯ ಅವರು ತಮ್ಮದನ್ನಾಗಿಸಿಕೊಂಡಿದ್ದಾರೆ. 'ವಂದೇಭಾರತಂ' ಎಂಬ ಈ ಕೃತಿಯನ್ನು ಓದಿದರೆ ನಿಮಗೆ ಅವರ ಬಗ್ಗೆ ಅಪಾರ ಗೌರವ ಉಂಟಾಗುವುದರಲ್ಲಿ ಸಂದೇಹವಿಲ್ಲ.

344 ಪುಟಗಳ ಈ ಪುಸ್ತಕದಲ್ಲಿ ಪುರಾಣ-ಸಂಸ್ಕೃತಿ-ಪರಂಪರೆ ಎಂಬ ಭಾಗದಲ್ಲಿ 11ಲೇಖನಗಳಿವೆ. ಇತಿಹಾಸ-ವ್ಯಕ್ತಿಚಿತ್ರ ಎಂಬ ಭಾಗದಲ್ಲಿ 7 ಲೇಖನಗಳಿವೆ. ವಚನಕಾರರು -ಸಿದ್ಧಗಂಗಾಶ್ರೀಗಳು ಎಂಬ ಭಾಗದಲ್ಲಿ 15 ಲೇಖನಗಳಿವೆ. ಶಿಕ್ಷಣ-ಸಂಸ್ಕೃತಿ ಎಂಬ ಭಾಗದಲ್ಲಿ 5 ಲೇಖನಗಳು, ರಾಷ್ಟ್ರಪ್ರೇಮ-ಅಸ್ಮಿತೆ ಎಂಬ ಭಾಗದಲ್ಲಿ 7 ಲೇಖನಗಳು ವ್ಯಕ್ತಿಚಿತ್ರದಲ್ಲಿ 6 ಲೇಖನಗಳು, ಆಶಯ-ಚಿಂತನೆ ಭಾಗದಲ್ಲಿ 14 ಲೇಖನಗಳು, ಲಘುಬರಹ  -ಚಿಂತನೆಯಲ್ಲಿ 8 ಲೇಖನಗಳಿದ್ದು ಒಟ್ಟು 75 ಲೇಖನಗಳಿರುವ ಈ ಪುಸ್ತಕ ಸರ್ವಜನ ಪ್ರಿಯ ಆಗುವುದಕ್ಕೆ ಎಲ್ಲ ಬಗೆಯ ಅರ್ಹತೆಯನ್ನೂ ಪಡೆದಿದೆ.

ನಾಡಿನ ವಿವಿಧ ಮಠ ಮಾನ್ಯಗಳ ಸ್ವಾಮೀಜಿಗಳು ಗುರು ಹಿರಿಯರು, ಲೇಖಕರ ಹಿತೈಷಿಗಳು ಪುಸ್ತಕದ ಬಗ್ಗೆ ತಮ್ಮ ಸದಭಿಪ್ರಾಯಗಳನ್ನು ದಾಖಲಿಸಿದ್ದಾರೆ.
ಪ್ರೊ . ಮಲ್ಲೇಪುರಂ ಜಿ ವೆಂಕಟೇಶ ರವರು ಈ ಪುಸ್ತಕಕ್ಕೆ ತಮ್ಮ ಮುನ್ನುಡಿ ಬರೆದು ಹಾರೈಸಿದ್ದಾರೆ. ಅವರ ಮಾತುಗಳನ್ನು ಉಲ್ಲೇಖಿಸಿ ಹೇಳುವುದಾದರೆ......

ಶ್ರೀ ಎಸ್. ರೇಣುಕಾರಾಧ್ಯರ ಚೊಚ್ಚಲಕೃತಿಯಲ್ಲಿ ಕನ್ನಡ ಗದ್ಯವು ಮಾತು ಮತ್ತು ಬರೆಹ ಎರಡರ ಸೂಕ್ಷ್ಮನೇಯ್ಗೆಯನ್ನು ಹೊಂದಿದೆ. ಈ ನೇಯ್ಗೆಯಲ್ಲಿ ಆರ್ದತೆ, ಸರಳತೆ, ಹಾಸ್ಯ ಮತ್ತು ಗಾಂಭೀರ್ಯತೆ ಮನೆಮಾಡಿಕೊಂಡಿವೆ. ಇವೆಲ್ಲವನ್ನು ಇಲ್ಲಿರುವ ಎಪ್ಪತ್ತೈದು ಲೇಖನಗಳಲ್ಲಿ ಸಹೃದಯ ಓದುಗರು ದಿಟಕ್ಕೂ ಕಾಣಬಹುದು. ಒಬ್ಬ ಪ್ರಬುದ್ಧ ಸಾಹಿತಿಯ ಬರೆಹಕ್ಕೆ ಸಮಾನಾಂತರವಾದ ಬರೆಹವನ್ನು ಶ್ರೀ ಎಸ್.ರೇಣುಕಾರಾಧ್ಯ ಅವರು ಹೊಂದಿದ್ದಾ ರೆಂಬುದೇ ನಾವು ಗಮನಿಸತಕ್ಕ ಸಂಗತಿ, ಇಲ್ಲಿಯ ಎಲ್ಲಾ ಲೇಖನಗಳು ಮುಖ್ಯವಾಗಿ ರಾಷ್ಟ್ರಚಿಂತನೆ, ರಾಷ್ಟ್ರಭಕ್ತಿ, ರಾಷ್ಟೋನ್ನತಿಯನ್ನೇ ಕೇಂದ್ರ ಮಾಡಿಕೊಂಡಿವೆ. ರೇಣುಕಾರಾಧ್ಯರು ವ್ಯಕ್ತಿಗಳನ್ನು ಕುರಿತು ಬರೆಯಲಿ, ಸನ್ನಿವೇಶವನ್ನು ಕುರಿತು ಬರೆಯಲಿ, ಯಾವುದೇ ವಸ್ತುಸಂಚಯವನ್ನು ಕುರಿತು ಬರೆಯಲಿ ಅವರು 'ರಾಷ್ಟ್ರ' ಚಿಂತನೆಯ ಮೂಲಕವೇ ತಮ್ಮ ಆಶಯವನ್ನು ವ್ಯಕ್ತಪಡಿಸುತ್ತಾರೆ. ನಾವು ಜಾತಿ, ಮತ, ವರ್ಗ ಮುಂತಾದ ಸಣ್ಣಸಣ್ಣ ಕಮರಿಯಲ್ಲಿ ಬಿದ್ದು ಹೊರಳಾಡುತ್ತಿದ್ದೇವೆ. ನಮಗೆ ದೇಶ ಮುಖ್ಯವಾಗುತ್ತಿಲ್ಲ. ಇಲ್ಲೆಲ್ಲಾ ಸ್ವಾರ್ಥಮಯತೆ ತುಂಬಿ ತುಳುಕಾಡುತ್ತಿದೆ. ಇಲ್ಲಿ ಸಮಷ್ಟಿ ಪ್ರಜ್ಞೆ ದೂರವಾಗಿ ವೃಷ್ಟಿ ನಿಲುವನ್ನು ನಾವು ಅಪ್ಪಿಕೊಂಡು ಬಿಟ್ಟಿದ್ದೇವೆ. ಇದು ಇಂದಿನ ದುಃಸ್ಥಿತಿ, ನಾವು ಸ್ವಾತಂತ್ರ್ಯ ಪಡೆದ ಮೇಲೆ, ನಮ್ಮ ಸಮಾಜ ಸಾಗಬೇಕಾಗಿದ್ದ ದಿಕ್ಕುದೆಸೆಗಳು ವಿಮುಖಗೊಂಡಿರುವುದಕ್ಕಾಗಿ ಸಾತ್ವಿಕ ಕ್ರೋಧವನ್ನು ಶ್ರೀಮಾನ್ ರೇಣುಕಾರಾಧ್ಯ ಅವರು ತಮ್ಮ ಲೇಖನಗಳಲ್ಲಿ ವ್ಯಕ್ತಪಡಿಸಿದ್ದಾರೆ.

ಇಲ್ಲಿಯ ಬರೆಹಗಳು ಪ್ರಾಚೀನ, ಮಧ್ಯಕಾಲೀನ, ಅರ್ವಾಚೀನ ಕಾಲಗಳಲ್ಲಿ ನಡೆದ ಸಂಗತಿಗಳನ್ನು ಮರು ರೂಪಿಸುತ್ತಿವೆ. ಇಲ್ಲಿ ವ್ಯಕ್ತಿ, ಕುಟುಂಬ, ಸಮುದಾಯ, ರಾಷ್ಟ್ರ,
ವಿಶ್ವದವರೆಗಿನ ವಿಚಾರಗಳು ಪರಿಕಲ್ಪಿತಗೊಂಡಿವೆ. ಪೂರ್ವ-ಪಶ್ಚಿಮದ ವ್ಯಕ್ತಿ, ವಸ್ತು ವಿಚಾರಗಳು ಬಂದು ಕೂಡಿಕೊಂಡಿವೆ. ಆದರೆ, ಭಾರತದ ಸಮಗ್ರ ಅಭಿವೃದ್ಧಿಯ ಬಗೆಗೆ ಅಪಾರವಾದ ತುಡಿತ-ಮಿಡಿತಗಳು ಪ್ರಧಾನ ಆಶಯಗಳಾಗಿರುವುದಂತೂ ನಿತ್ಯಸತ್ಯ ಶ್ರೀ ರೇಣುಕಾರಾಧ್ಯರು 'ಶ್ರೀಸಾಮಾನ್ಯನೆ ಭಗವನ್ ಮಾನ್ಯಂ' ಎಂಬ ತತ್ವೋಪಾಸನೆಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಈ ಮಾತು ಅವರ ಬರೆಹಗಳಿಗೂ ಅವುಗಳ ಹಿಂದಿರುವ ಆಶಯಗಳಿಗೂ ಅನ್ವಯವಾಗುತ್ತವೆ. ರೇಣುಕಾರಾಧ್ಯರು ವಿಫುಲವಾದ ಸಂಗತಿಗಳನ್ನು ನಮ್ಮ ಮುಂದೆ ಹರಡುತ್ತಾರೆ. ನಾವು ಎಷ್ಟು ಬೇಕಾದರೂ ಹೆಕ್ಕಿಕೊಳ್ಳಬಹುದು. ಅವುಗಳ ಮೂಲಕ 'ವಿಚಾರಕಲ್ಪ'ದ ಬೀಜ ಅಲ್ಲಿರುವುದನ್ನು ಕಾಣಬಹುದು. ಆರಾಧ್ಯರು ಶ್ರೀಕೃಷ್ಣ-ಸುಧಾಮರ ಬಗೆಗೆ ಬರೆದ ಲೇಖನದಲ್ಲಿ 'ಸ್ನೇಹ'ದ ಸಾಮಾಜಿಕ ತಂತುವನ್ನು ತಂದು ಲೇಖನದಲ್ಲಿ ಜೋಡಿಸುತ್ತಾರೆ. ನಮ್ಮ 'ರಾಷ್ಟ್ರಗೀತೆ” ಯಾರಿಗೆ ಗೊತ್ತಿಲ್ಲ! ಆ ಗೀತೆಯ ಇತಿಹಾಸವನ್ನು ಸರಳವಾಗಿ  ತಿಳಿಸುತ್ತಾರೆ. 'ಸಂವಿಧಾನ ರಚನೆಗೊಂಡ ಹಂತಹಂತದ ವಿವರಗಳು ಇಲ್ಲಿ ಸೊಗಸಾಗಿ ಮೂಡಿಬಂದಿವೆ. ಭಾರತದ ಸಂವಿಧಾನದ ಆಶಯ-ದೂರದೃಷ್ಟಿ-ಸಂಕಲ್ಪಗಳನ್ನು ವಿವರಗಳ ಸಮೇತ ಓದುಗರಿಗೆ ಆರಾಧ್ಯರು ಮನವರಿಕೆ ಮಾಡಿಕೊಡುತ್ತಾರೆ. ಈ ಅಂಶಗಳನ್ನು ಶಿಕ್ಷಕನಾಗಿ ನಾನೂ ತರಗತಿ ಕೋಣೆಗಳಲ್ಲಿ ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಪರಮಪೂಜ್ಯ ಶ್ರೀಶಿವಕುಮಾರಸ್ವಾಮಿಗಳ ವ್ಯಕ್ತಿತ್ವ, ಅವರ ದೃಷ್ಟಿ, ಸ್ವಭಾವ, ದಿನಚರಿ ಇವುಗಳನ್ನು ಒಳಗೊಂಡ ಏಳೆಂಟು ಲೇಖನಗಳು ಇಲ್ಲಿವೆ. ಒಂದೊಂದು ಲೇಖನಗಳಲ್ಲೂ ನಾವು ಅರಿತುಕೊಂಡು ಅನುಸರಿಸಬೇಕಾದ 'ಮಾರ್ಗದರ್ಶಿ' ಸೂತ್ರಗಳು ಇಲ್ಲಿವೆ. ಗಾಂಧೀಜಿ, ವಿವೇಕಾನಂದ, ರಮಣಮಹರ್ಷಿ, ಅರವಿಂದರು, ಮುಂತಾದ ಆಧುನಿಕ ವಿಭೂತಿಪುರುಷರ ಸಂಕಥನಗಳು ನಮ್ಮನ್ನು ಎಚ್ಚರಿಸುತ್ತವೆ. ಪ್ರಾಚೀನ ಸಂಸ್ಕೃತ ಸಾಹಿತ್ಯದ ವಾಲ್ಮೀಕಿ, ವ್ಯಾಸ, ಕಾಳಿದಾಸ ಮುಂತಾದ ಕವಿಗಳನ್ನ ಕುರಿತಾದ ಲೇಖನಗಳಲ್ಲಿ ನಮ್ಮ ಸಂಸ್ಕಾರ-ಸಂಸ್ಕೃತಿಯನ್ನು ಪುನಃ ರೂಪಿಸಿಕೊಳ್ಳಬೇಕಾದ ಕಡೆ ಲೇಖಕರು ಬೊಟ್ಟುಮಾಡಿ ತೋರಿಸುತ್ತಾರೆ. ಅಲ್ಲಿಂದಾಚೆಗೆ ಉಪನಿಷತ್ ಕಾಲಕ್ಕೆ ಹೋಗಿ ಯಾಜ್ಞವಲ್ಕ ಮುಂತಾದ ಋಷಿಗಳ ತತ್ತ್ವಮಸಿ, ಅಹಂಬ್ರಹ್ಮಾಸ್ಮಿ ಎಂಬ ಋಷಿಚಿಂತನೆಗಳನ್ನು ಇಂದಿನ ಕಾಲಕ್ಕೆ ಅನ್ವಯಿಸಿ ಮಾತನಾಡುತ್ತಾರೆ. ಮೆಕಾಲೆ ಮಹಾಶಯ ಇಂಗ್ಲಿಷ್ ಭಾಷೆಯನ್ನು ನಮ್ಮ ದೇಶದಲ್ಲಿ ಬಿತ್ತುವ ಮೂಲಕ, ಸಹಸ್ರಾರು ಪಾರಂಪರಿಕ ಗುರುಕುಲಗಳು ನಾಶವಾಗಿ, ತನ್ಮೂಲಕ ಸಂಸ್ಕೃತ ಶಿಕ್ಷಣ ನಾಶವಾಗಿದ್ದಕ್ಕೆ ಲೇಖಕರು ಅಪಾರವಾಗಿ ನೊಂದುಕೊಳ್ಳುತ್ತಾರೆ. 

ಈ ಪುಸ್ತಕದ ಪ್ರತಿ ಪುಟವೂ ಮೌಲ್ಯಯುತ ಪ್ರತಿ ಅಧ್ಯಾಯದ ಕೊನೆಯಲ್ಲಿ ಉಳಿವ ಜಾಗದಲ್ಲಿ ಜಗದ ಉದಾತ್ತ ಚಿಂತಕರ ನುಡಿ ಮತ್ತುಗಳನ್ನು ಮುದ್ರಿಸಿದ್ದಾರೆ .ಓದುಗರಿಗೆ ಅವು ಬೋನಸ್!  ಇಂತಹ ಅಮೂಲ್ಯ ಕೃತಿ ಮೌಲ್ಯಗಳ ಅಧಃಪತನದ  ಇಂದಿನ ಸಮಾಜಕ್ಕೆ ಪಂಜು ಇದ್ದಂತೆ ಆ ಪಂಜನಿಡಿದು ಸಾಧ್ಯವಾದಷ್ಟು ನಮ್ಮ ದಾರಿಯಲ್ಲಿ ಬೆಳಕು ಪಡೆದು ಇತರರಿಗೂ ಬೆಳಕು ನೀಡಲು ಈ ಪುಸ್ತಕವನ್ನು ಎಲ್ಲರೂ ಕೊಂಡು ಓದೋಣ.ನಮ್ಮ ದೇಶದ ಸಂಸ್ಕೃತಿಯನ್ನು ಎತ್ತಿ ಹಿಡಿಯೋಣ .ಉತ್ತಮ ನಾಗರೀಕರಾಗೋಣ.

ಪುಸ್ತಕದ ಹೆಸರು: ವಂದೇ ಭಾರತಂ
ಲೇಖಕರು: ಎಸ್ ರೇಣುಕಾರಾಧ್ಯ.
ಪ್ರಕಾಶನ : ದಾಸೇನ ಹಳ್ಳಿ ಎಸ್ ರೇಣುಕಾರಾಧ್ಯ. ತುಮಕೂರು
ಬೆಲೆ: 330.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529


ವಿ ವಿ ಸಾಗರದ ಕೋಡಿ


 


ಪ್ರವಾಸ ೨ 

ವಿ ವಿ ಸಾಗರದ  ಕೋಡಿ.


ನನ್ನಣ್ಣ ಪದೇ ಪದೇ ಫೋನ್ ಮಾಡಿ ಮಾರಿಕಣಿವೆ ನೋಡಲು ಯಾವಾಗ ಬರ್ತಿರಾ? ಎನ್ನುತ್ತಿದ್ದ  ನನಗೆ ಹೋಗಲು ಆಸೆಯಿದ್ದರೂ ಮಕ್ಕಳ ಶಾಲೆ, ಪರೀಕ್ಷೆ, ಲ್ಯಾಬ್ ಹೀಗೆ ಪದೇ ಪದೇ ಮುಂದೂಡಿ ಕೊನೆಗೆ ನಾನೊಬ್ಬನೇ ಶನಿವಾರದ ಶಾಲೆಯ ಅವಧಿಯ ನಂತರ ಕಾರಿನ ಸ್ಟೇರಿಂಗ್ ಹಿಡಿದು ತುಮಕೂರಿನಿಂದ  ಹೈವೆಯಲ್ಲಿ ದುರ್ಗದ ಕಡೆ ಪಯಣ ಆರಂಭಿಸಿಯೇಬಿಟ್ಟೆ .ಮಾರ್ಗ ಮಧ್ಯ ಅಣ್ಣ ಕರೆ ಮಾಡಿ ತಾನು ಮಾರಿಕಣಿವೆಯ ಬಳಿ ಬಂದಿರುವುದಾಗಿ ತಿಳಿಸಿದ. ಹಿರಿಯೂರಿನಲ್ಲಿ ಕಾರ್ ನಿಲ್ಲಿಸಿ ವಿಶ್ರಾಂತಿ ಪಡೆದು ಟೀ ಕುಡಿದು ನಾನು ಮೊದಲು ಶಿಕ್ಷಕನಾಗಿ ಕೆಲಸ ಮಾಡಿದ ಹುಚ್ಚವ್ಬನ ಹಳ್ಳಿಯ ಶಾಲೆಯ ನೋಡಿ.ಹಳೆಯ ನೆನಪುಗಳ ಮೆಲುಕು ಹಾಕುತ್ತಾ  ಮಾಯಸಂದ್ರ ,ಬೀರೇನಹಳ್ಳಿ ,ಭರಂಗಿರಿ ದಾಟಿ ಮಾರಿಕಣಿವೆಗೆ ಸೇರಿದಾಗ ಬಾಲ್ಯದಲ್ಲಿ ನೋಡಿದ ಜಾತ್ರೆಯ ಜನದ ನೆನಪಾಯಿತು. ವಾಹನಗಳ ಸ್ಲೋ ಮೂವಿಂಗ್ ಟ್ರಾಪಿಕ್ ನಲ್ಲಿ ಕಣಿವೆ ಮಾರಮ್ಮನ ದೇವಾಲಯ ಸೇರಿದ್ದು ಹರಸಾಹಸ ಮಾಡಿದಂತಾಗಿತ್ತು. 

ಅಣ್ಣ ಅತ್ತಿಗೆಯ ಜೊತೆಗೂಡಿ ಕಣಿವೆ ಮಾರಮ್ಮನ ದರ್ಶನ ಪಡೆದು ಬೆಟ್ಟದ ಮೇಲೇರಿದಾಗ ಹೊಟ್ಟೆ ತಾಳ ಹಾಕುತ್ತಿತ್ತು . ಅಮ್ಮ ಕಟ್ಟಿಕೊಟ್ಟಿದ್ದ  ನನ್ನ ಫೇವರಿಟ್ ಅನ್ನ ಮೊಸರ ಬುತ್ತಿಯ ಜೊತೆಯಲ್ಲಿ ಅಣ್ಣ ಆಗ ತಾನೆ ತಂದ ಬಿಸಿ ಬೋಂಡಾದ ಜೊತೆಯಲ್ಲಿ 89 ವರ್ಷಗಳ ನಂತರ ಸಂಪೂರ್ಣವಾಗಿ ತುಂಬಿದ ವಿ ವಿ ಸಾಗರದ ನೀರು ನೋಡುತ್ತಾ  ತಿನ್ನಲು ಶುರು ಮಾಡಿದೆವು .ಸ್ವರ್ಗ ಮೂರೇ ಗೇಣು! 


 1933ರ ಬಳಿಕ  ಮಾರಿ ಕಣಿವೆ ಡ್ಯಾಂ ಕೋಡಿ ಬಿದ್ದಿದ್ದು, ಅಂದು ಶನಿವಾರ ರಜೆ ದಿನವಾಗಿದ್ದರಿಂದ ಡ್ಯಾಂ ನೋಡಲು ಜನಸಾಗರವೇ ಹರಿದು ಬಂದಿತ್ತು.

ಬೆಳಗ್ಗೆಯಿಂದಲೇ ಪ್ರವಾಸಿಗರು ಜಲಾಶಯದ ಕಡೆ ಮುಖ ಮಾಡಿದ್ದು, ಜಲಾಶಯ, ಮಾರಿ ಕಣಿವೆ ಮಾರಮ್ಮ ದೇವಸ್ಥಾನ, ಪಾರ್ಕ್, ಪ್ರವಾಸಿ ಮಂದಿರ, ಕೋಡಿ ಬಿದ್ದಿರುವ ಜಾಗ ಹಾಗೂ ಹಾರನ ಕಣಿವೆ ರಂಗನಾಥ ಸ್ವಾಮಿ ದೇವಸ್ಥಾನ ಸೇರಿದಂತೆ ಡ್ಯಾಂ ಸುತ್ತ ಮುತ್ತಲಿನ ಪ್ರದೇಶದಲ್ಲಿ ಪ್ರವಾಸಿಗರೇ ತುಂಬಿ ತುಳುಕುತ್ತಿದ್ದರು.


ಪ್ರವಾಸಿಗರು ದೂರದ ಊರುಗಳಿಂದ ಜಲಾಶಯ ನೋಡಲು ಬಂದಿದ್ದರು. ಕುಟುಂಬದ ಸದಸ್ಯರು ಮತ್ತು ಮಕ್ಕಳು, ಸ್ನೇಹಿತರು, ಪ್ರೇಮಿಗಳು ಸೇರಿದಂತೆ ಮತ್ತಿತರರು ಜಲಾಶಯಕ್ಕೆ ಆಗಮಿಸಿದ್ದರು. ಅಂದಾಜು 10 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಜಲಾಶಯ ನೋಡಲು ಬಂದಿದ್ದರು. ಆಟೋ, ಕಾರು, ಬೈಕ್, ಬಸ್, ಇನ್ನಿತರ ವಾಹನಗಳಲ್ಲಿ  ಚಿತ್ರದುರ್ಗ, ಬೆಂಗಳೂರು, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ಚಿಕ್ಕಮಗಳೂರು, ತುಮಕೂರು ಸೇರಿದಂತೆ ಮತ್ತಿತರರ ಜಿಲ್ಲೆಗಳಿಂದ ಪ್ರವಾಸಿಗರು ಆಗಮಿಸಿದ್ದರು.

ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರಿಂದ ಜಲಾಶಯದ ಸರ್ಕಲ್‌ನಿಂದ, ಮಾರಿಕಣಿವೆ ಗ್ರಾಮ, ಕೋಡಿ ಬೀಳುವ ಜಾಗ ಹಾಗೂ ಹೊಸದುರ್ಗ ರಸ್ತೆ ಸೇರಿದಂತೆ ಸುಮಾರು 3 ಕಿಲೋ ಮೀಟರ್ ದೂರದವರೆಗೂ ಟ್ರಾಫಿಕ್ ಜಾಮ್ ಜಾಮ್ ಉಂಟಾಗಿತ್ತು.   ಸಿಂಗಲ್ ರಸ್ತೆ ಹಾಗೂ ಚಿಕ್ಕ ರಸ್ತೆ ಇರುವುದರಿಂದ ಗಂಟೆ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು. ಜಲಾಶಯದ ನೀರು ಕೋಡಿ ಹೋಗುವ ಜಾಗದ ನೀರಿನಲ್ಲಿ ಪ್ರವಾಸಿಗರು ನೆನೆದು ಮಿಂದೆದ್ದರು. ಕೆಲವರು ಕೈಕಾಲು ಮುಖ ತೊಳೆದರೆ, ಇನ್ನು ಕೆಲವರು ಸ್ನಾನವನ್ನೇ ಮಾಡಿದರು. ಇನ್ನು ಕೆಲವರು ಸೆಲ್ಫೀ, ಫೋಟೋ, ವೀಡಿಯೋ ತೆಗೆಯುವುದರಲ್ಲಿ ನಿರತರಾಗಿದ್ದರು. ಸಾಮಾನ್ಯವಾಗಿ ಮೊದಲು ಯಾವುದಾದರೂ ಪ್ರವಾಸಿ ಸ್ಥಳಗಳನ್ನು ನೋಡುವಾಗ ನಾನು ಪೋಟೊ ತೆಗೆಯಲು ಹೋದರೆ " ಅದೇನ್ ಪೋಟೋ ಹುಚ್ ನಿನಿಗೆ ,ಬಾರಪ್ಪ ಸಾಕು" ಎನ್ನುತ್ತಿದ್ದ ನನ್ನಣ್ಣ " ಇಗ ಇಲ್ಲೊಂದು ಪೋಟಾ ಹೊಡ್ಕ, ಇಗ ಇಲ್ಲಿ ತೆಗಿ, ಬಾರೆ ಮಂಗಳ " ಎಂದು ಅತ್ತಿಗೆಯ ಜೊತೆಗೆ ಪೋಸ್ ಕೊಟ್ಟು ನಗುತ್ತಾ ನಿಂತು ಬಿಡುತ್ತಿದ್ದ ಸಾಲದ್ದಕ್ಕೆ " ಎಲ್ಲಿ ತೋರ್ಸು  ಎಂಗ್ ಬಂದೈತೆ ಪೋಟಾ? " ಎಂದು ಚೆಕ್ ಮಾಡುತ್ತಿದ್ದ. 


ಡ್ಯಾಂ ಮೇಲೆ ಪೋಲಿಸ್ ಕಾವಲಿತ್ತು ಯಾರನ್ನೂ ಬಿಡುತ್ತಿರಲಿಲ್ಲ ದೂರದಿಂದಲೇ ಫೋಟೋ ತೆಗೆದುಕೊಂಡು ಬರುವಾಗ ಯಾರೋ ಡ್ಯಾಂ ಬಗ್ಗೆ  ಮಾತನಾಡು‌ವುದು ಕಿವಿಯ ಮೇಲೆ ಬಿತ್ತು ಆಗ ನಾನು ಓದಿದ ವಿಷಯ ನೆನಪಾಯಿತು.


ಚಿಕ್ಕಮಗಳೂರು ಜಿಲ್ಲೆಯ ಬಾಬು ಬುಡನ್ ಗಿರಿ ಕಂದಕಗಳಲ್ಲಿ ಜನಿಸುವ ವೇದಾ ಎಂಬ ನದಿ ಕಡೂರಿನ ಬಳಿ ಅವತಿ ನದಿಯನ್ನು ಸೇರುತ್ತದೆ. ಅವು ಮುಂದೆ 'ವೇದಾವತಿ' ನದಿಯಾಗಿ ಹರಿಯುತ್ತದೆ. ಚಿತ್ರದುರ್ಗದ ಹಿರಿಯೂರು ತಾಲೂಕಿನ ವಾಣಿ ವಿಲಾಸಪುರದ ಬಳಿ ಎರಡು ಗುಡ್ಡಗಳ ಮಧ್ಯೆ ನಿರ್ಮಿಸಿರುವ ಜಲಾಶಯವೇ ಮಾರಿಕಣಿವೆ ಡ್ಯಾಂ.

ಇನ್ನೂ ವಾಣಿ ವಿಲಾಸ ಸಾಗರವನ್ನು ಆರ್ಕಿಟೆಕ್ಚರಲ್ ಮಾಸ್ಟರ್ ಪೀಸ್ ಎಂದು ಗುರುತಿಸಲಾಗಿದೆ. ಈ ಅಣೆಕಟ್ಟನ್ನು 1897ರಲ್ಲಿ ಮೈಸೂರು ಮಹಾ ರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತಾಯಿ ಕೆಂಪರಾಜಮ್ಮಣಿ ಆದೇಶದ ಮೇರೆಗೆ 'ತಾರಾ ಚಾಂದ್ ದಲಾಲ್' ಎಂಬ ಇಂಜಿನಿಯರ್ ನೇತೃತ್ವದ ತಂಡವು ನಿರ್ಮಿಸಿತ್ತು. ಆಗಿನ ಮೈಸೂರು ದಿವಾನರಾಗಿದ್ದ ಶೇಷಾದ್ರಿ ಅಯ್ಯರ್ ಅವರ ಮುಂದಾಳತ್ವದಲ್ಲಿ ನಿರ್ಮಿಸಿ 1907ರಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿದ್ದರು. ಅಲ್ಲದೇ ಕೆಆರ್‌ಎಸ್ ಅಣೆಕಟ್ಟು ನಿರ್ಮಾಣಕ್ಕೆ ವಾಣಿ ವಿಲಾಸ ಸಾಗರದ ನೀಲಿನಕ್ಷೆಯೇ ಮೂಲ ಎಂದು ಹೇಳಲಾಗುತ್ತದೆ.

89 ವರ್ಷಗಳ ಬಳಿಕ ಬಹುತೇಕ ಭರ್ತಿಯಾದ ವಾಣಿ ವಿಲಾಸ ಸಾಗರ ಜಲಾಶಯ ಕೋಡಿ ಬಿದ್ದಿರುವುದು ಜನತೆಯಲ್ಲಿ ಅತೀವ ಸಂತಸ ಉಂಟುಮಾಡಿದೆ.


ನೀವು ಈ ಕೌತುಕ ಕಣ್ತುಂಬಿಕೊಳ್ಳಲು 

ಜಲಾಶಯ ದೃಶ್ಯ ಸವಿಯಲು ಒಮ್ಮೆ ಭೇಟಿ ನೀಡಿ.

ಹೊಸಬರಿಗೆ  ಈ ಜಲಾಶಯ ತಲುಪಲು ಮಾರ್ಗ ಹೀಗಿದೆ 

 ಹಿರಿಯೂರು ನಗರದಿಂದ ಹೊಸದುರ್ಗ ರಸ್ತೆ ಮಾರ್ಗವಾಗಿ, 21 ಕಿಲೋ ಮೀಟರ್ ದೂರದ ಎಡಭಾಗಕ್ಕೆ ಬಂದರೆ ಜಲಾಶಯವನ್ನು ತಲುಪಬಹುದು. ಬೆಂಗಳೂರು, ತುಮಕೂರಿನಿಂದ ಹಿರಿಯೂರು ನಗರದ ಮೂಲಕ ಜಲಾಶಯವನ್ನು ಪ್ರವೇಶಿಸಬಹುದು. ಹುಬ್ಬಳ್ಳಿ, ದಾವಣಗೆರೆಯಿಂದ ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಬಲಭಾಗದ ವಾಣಿ ವಿಲಾಸಪುರ ಕ್ರಾಸ್ ಮೂಲಕ ಬಂದು ಡ್ಯಾಂ ವೀಕ್ಷಿಸಬಹುದಾಗಿದೆ. 


ನಾವು ಡ್ಯಾಂ ನೋಡಿದ ಬಳಿಕ ಕೋಡಿ ಬಿದ್ದ ಸ್ಥಳಕ್ಕೆ ಹೊರಟೆವು ಅಲ್ಲಿಯೂ ಜನಜಂಗುಳಿ ,ಆಗ ತಾನೆ ಶುರುವಾದ ತುಂತುರು ಮಳೆ ,ಹಸಿರೊದ್ದ ಗುಡ್ಡ ಇವು ಮಲೆನಾಡ ದೃಶ್ಯಗಳನ್ನು ನೆನಪು ಮಾಡಿದವು. ನಂತರ ಹಾರನ ಕಣಿವೆ ರಂಗನಾಥಸ್ವಾಮಿಯ  ದರ್ಶನ ಪಡೆದು ದೇವಾಲಯದ ಹಿಂಭಾಗಕ್ಕೆ ಬಂದು ನೋಡಿದಾಗ ವಾಣಿ ವಿಲಾಸ "ಸಾಗರ " ನಿಜವಾಗಿಯೂ ಅನ್ವರ್ಥವಾಗಿ ಬಯಲು ಸೀಮೆಯಲ್ಲಿ ಸಾಗರ ನೋಡಿದ ಅನುಭವವಾಯಿತು.  ನಿಧಾನವಾಗಿ ಸೂರ್ಯ ದೇವ ಸಾಗರದಲ್ಲಿ ಲೀನವಾದ .ಮಳೆಯ ಮಧ್ಯದಲ್ಲೇ ಬೇವಿನಹಳ್ಳಿಯ ಕಡೆ ಹೊರಟೆವು . ಬೇವಿನಹಳ್ಳಿಗೆ ಸಂಪರ್ಕ ರಸ್ತೆ  ನೀರಿನಿಂದ  ಮುಳುಗಡೆಯಾದ ಪರಿಣಾಮವಾಗಿ ಕಾಡಿನ ದಾರಿಯಲ್ಲಿ ಕಾರ್ ಚಲಾಯಿಸುವ ಸಾಹಸ ಮಾಡುತ್ತಾ ಹೊರಟೆ. ಕಾರ್ ನ ಕೆಳ ಭಾಗಕ್ಕೆ ಕಡ್ಡಿಗಳು ಪಟ ಪಟ ಬಡಿಯುವಾಗ ಕೆಲವೊಮ್ಮೆ ಆತಂಕವಾಗುತ್ತಿತ್ತು.  ಏಳು ಕಿಲೋಮೀಟರ್ ಕ್ರಮಿಸಲು ಅರ್ಧ ಗಂಟೆಯಾಗಿತ್ತು. ಅಂತೂ ಬೇವಿನಳ್ಳಮ್ಮನ ಗುಡ್ಡ ಏರಿ ತಾಯಿಯ ದರ್ಶನ ಪಡೆದಾಗ ರಾತ್ರಿ ಏಳು ಗಂಟೆ ! ಅಲ್ಲಿಂದ ವಿ ವಿ ಸಾಗರದ ಅದ್ಭುತವಾದ ದೃಶ್ಯಗಳನ್ನು ನೋಡುವ ನಮ್ಮ ಆಸೆ ಈಡೇರಲಿಲ್ಲ. ಅದೇ ದುರ್ಗಮ ದಾರಿಯಲ್ಲಿ ಹಿಂತಿರುಗಿ ಮಾಡದಕೆರೆಯ ಮಾರ್ಗವಾಗಿ ಚೌಡಗೊಂಡನಹಳ್ಳಿಯ ನಮ್ಮ   ಮನೆ ತಲುಪಿದಾಗ ರಾತ್ರಿ  ಎಂಟೂವರೆ.ಅಮ್ಮ ಬಿಸಿ ಬಿಸಿ ಮುದ್ದೆ ಮಾಡಿಕೊಟ್ಟರು ಹೊಟ್ಟೆ ತುಂಬಾ ಮುದ್ದೆ ಉಂಡು ನಾನು ಮಲಗಲು ಸಿದ್ದನಾದೆ ನನ್ನಣ್ಣ ಮೊಬೈಲ್ ನಲ್ಲಿ ಇದ್ದ ಮಾರಿಕಣಿವೆಯ ಫೋಟೋಗಳನ್ನು ಮತ್ತೊಮ್ಮೆ ನೋಡಿ ಖುಷಿಪಡುತ್ತಿದ್ದ.



ಸಿಹಿಜೀವಿ

ಸಿ ಜಿ ವೆಂಕಟೇಶ್ವರ.

24 September 2022

ಜಿ ಎಸ್ ಬಸವರಾಜು

 



ನಾನು ಕಂಡ ಸಂಸದ ಜಿ ಎಸ್ ಬಸವರಾಜ್.


ಸರಳ ಸಜ್ಜನ ರಾಜಕಾರಣಿಗಳು ಇತ್ತೀಚಿನ ದಿನಗಳಲ್ಲಿ ಕಾಣಸಿಗುವುದೇ ಅಪರೂಪ. ನಮ್ಮ ಮಧ್ಯ ಇರುವ ಜಿ ಎಸ್ ಬಸವರಾಜು ರವರು ಇದಕ್ಕೆ ಅಪವಾದ .  ಪಂಚಗೆಲುವುಗಳನ್ನು ಪಡೆದು ಲೋಕಸಭೆಗೆ ಆಯ್ಕೆಯಾದ ಬಸವರಾಜು ರವರು ಪ್ರಸ್ತುತ ಲೋಕಸಭಾ ಸದಸ್ಯರೂ ಕೂಡಾ ಹೌದು. ಅವರ ನೇರ ಮತ್ತು ದಿಟ್ಟ ಮಾತುಗಳು ನನಗೆ ಬಹಳ ಇಷ್ಟ . ಸಮಾರಂಭಗಳಲ್ಲಿ ಆಡಂಬರದ ಪದಗಳ ಬಳಕೆ ಮಾಡದೆ ಸಾಮಾನ್ಯ ಜನರಿಗೆ ಅರ್ಥವಾಗುವ ಅವರ ಮಾತುಗಳು  ಹಳ್ಳಿಯ ಜನರಿಗೆ ಅಚ್ಚುಮೆಚ್ಚು ಎಂದೇ ಹೇಳಬೇಕು. ಅವರ ಮನೆಯ ಮುಂದೆ ಪ್ರತಿದಿನ ಮುಂಜಾನೆ ಕಂಡು ಬರುವ ಜನರ ಗುಂಪು,ಹಾಗೂ ಆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ರೀತಿಯು ಜನರ ಮನ ಗೆದ್ದಿದೆ. 


"ನನ್ನ ಮಗಳಿಗೆ ಕೇಂದ್ರೀಯ ವಿದ್ಯಾಲಯದಲ್ಲಿ ಪ್ರವೇಶ ಬೇಕಾಗಿತ್ತು. ಬಸವರಾಜಣ್ಣ ಅವರ ಬಳಿ ಹೋಗಿ ಎಂ .ಪಿ ಕೋಟಾ ಅಡಿಯಲ್ಲಿ ಸೀಟು ಕೊಡಿಸಲು ಕೇಳಿದಾಗ ತಕ್ಷಣವೇ ಪತ್ರ ಕೊಟ್ಟರು.ನನ್ನ ಮಗಳೀಗ  ಕೆ ವಿ ನಲ್ಲಿ ಮೂರನ ತರಗತಿಯಲ್ಲಿ ಓದುತ್ತಿದ್ದಾಳೆ. ನಾನು ಯಾವಾಗಲೂ ಬಸವರಾಜಣ್ಣ ನವರಿಗೆ ಚಿರ ಋಣಿಯಾಗಿರುವೆ "  ಎಂದು ತಮಗೆ ಒಳಿತು ಮಾಡಿದ ಜಿ ಎಸ್ ಬಿ ರವರ ಬಗ್ಗೆ  ತುಮಕೂರು ನಗರದ ಗೋಕುಲ ಬಡಾವಣೆಯ ನಿವಾಸಿಗಳಾದ ಮುನಿ ಬಸವರಾಜು ರವರ ಮಾತುಗಳನ್ನು ಕೇಳಿದಾಗ  ಜಿ ಎಸ್ ಬಿ ರವರ ಬಗ್ಗೆ ಗೌರವ ಬರದೇ ಇರದು. 

ಗಂಗಸಂದ್ರ ಸಿದ್ದಪ್ಪ ಬಸವರಾಜ್ ರವರು ಜಿ ಎಸ್ ಬಿ ಆಗಿ ಬೆಳೆದದ್ದೇ ಒಂದು ರೋಚಕ ಕಥೆ.ಸ್ವಾತಂತ್ರ್ಯಕ್ಕೆ ಪೂರ್ವದಲ್ಲಿ ಅಂದರೆ  1941ರಲ್ಲಿ ಜನಿಸಿದ ಅವರು 1960 ರಲ್ಲಿ  ಪಿ ಎಲ್ ಡಿ ಬ್ಯಾಂಕ್ ಸದಸ್ಯರಾಗಿ   ರಾಜಕೀಯ ಪಾದಾರ್ಪಣೆ ಮಾಡಿದರು .ಎ.ಪಿ ಎಂ ಸಿ ಅಧ್ಯಕ್ಷರಾದಾಗ ರಾಜಕೀಯ ಪಕ್ಷಗಳು ಅವರ ಸೇವೆಯನ್ನು ಗಮನಿಸಿದವು. ಜನರ ಮನಗೆಲ್ಲುತ್ತಾ ಲೋಕ ಸಭಾ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿರುವುದು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಿಡಿದ ಕನ್ನಡಿ ಎಂದೇ ಹೇಳಬಹುದು. 

  2019 ರಲ್ಲಿ ತುಮಕೂರು ಲೋಕಸಭಾ  ಕ್ಷೇತ್ರದಿಂದ ಚುನಾಯಿತರಾಗಿದ್ದಾರೆ. ಅವರು ತಮ್ಮ ರಾಜಕೀಯ ಜೀವನವನ್ನು ಕಾಂಗ್ರೆಸ್ನೊಂದಿಗೆ ಪ್ರಾರಂಭಿಸಿದರು ಮತ್ತು ಈಗ ಭಾರತೀಯ ಜನತಾ ಪಕ್ಷದ ಸದಸ್ಯರಾಗಿದ್ದಾರೆ . ಅವರು 2019 ರ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸುಮಾರು 15,000 ಮತಗಳ ಅಂತರದಿಂದ ಮಾಜಿ ಪ್ರಧಾನಿ ಶ್ರೀ ಎಚ್ ಡಿ  ದೇವೇಗೌಡರನ್ನು ಸೋಲಿಸಿದರು . ಅವರು ತುಮಕೂರಿನಿಂದ ಐದು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ, 1984, 1989 ಮತ್ತು 1999 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯರಾಗಿ, ಮತ್ತು 2009 ಮತ್ತು 2019 ರಲ್ಲಿ ಬಿಜೆಪಿ ಸದಸ್ಯರಾಗಿ. ಆಯ್ಕೆಯಾಗಿ ಈಗಲೂ ಜನಸೇವೆಯಲ್ಲಿ ತೊಡಗಿದ್ದಾರೆ.   


ಸಿದ್ದರಬೆಟ್ಟದ ಶ್ರೀರಂಭಾಪುರಿ ಶಾಖಾಮಠದ ಶ್ರೀವೀರಭದ್ರ ಶಿವಾಚಾರ್ಯಸ್ವಾಮೀಜಿಗಳು ಜಿ ಎಸ್ ಬಿ  ರವರ ಸಾಧನೆಗಳ ಬಗ್ಗೆ ಮುಕ್ತ ಕಂಟದಿಂದ ಹೀಗೆ ಶ್ಲಾಘಿಸುತ್ತಾರೆ. "ತುಮಕೂರು ಜಿಲ್ಲೆಯಲ್ಲಿ ಯಾವುದೇ ನದಿಗಳು ಇಲ್ಲದಿದ್ದರೂ ನೀರಾವರಿ ಯೋಜನೆಗಳು ಚಾಲ್ತಿಯಲ್ಲಿದ್ದರೆ ಅದಕ್ಕೆ ಜಿ.ಎಸ್.ಬಸವರಾಜು ಕಾರಣ.ಇಂದಿನ ಎತ್ತಿನಹೊಳೆ ಯೋಜನೆಯ ಹಿಂದೆ ಜಿ.ಎಸ್.ಬಸವರಾಜು ಅವರ ಪಾತ್ರ ಮಹತ್ವದ್ದಾಗಿದೆ.ಧಾರ್ಮಿಕವಾಗಿ,ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಲವಾರು ಮಹತ್ವದ ಕಾರ್ಯಗಳನ್ನು ಜಿ.ಎಸ್.ಬಸವರಾಜು ಮಾಡಿದ್ದು, ಇವರ ಈ ಸೇವೆಯನ್ನು ಪರಿಗಣಿಸಿಯೇ ಶ್ರೀರಂಭಾಪುರಿ ಕ್ಷೇತ್ರ ಮಾನ್ಯರಿಗೆ ಶ್ರೀರೇಣುಕಾ ಚಾರ್ಯ ಪ್ರಶಸ್ತಿ ನೀಡಿ ಗೌರವಿಸಿದೆ".


ಜನಪರ ಕಾಳಜಿಯ ಜಿ ಎಸ್ ಬಿ  ರವರು ಇನ್ನೂ ಹೆಚ್ಚಿನ ಜನಸೇವೆ ಮಾಡಲು ದೇವರು ಅವರಿಗೆ ಆಯುರಾರೋಗ್ಯ ಭಾಗ್ಯ ಕರುಣಿಸಲಿ ಎಂದು ಮನದುಂಬಿ ಹಾರೈಸುವೆ.



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

9900925529.

23 September 2022

ನಿನ್ನದೇ ಕನವರಿಕೆ

 #ಕನಸಲು_ನಿನ್ನದೆ_ಕನವರಿಕೆ 


ನನ್ನ ಪ್ರೀತಿಯ ಆಳ ತಿಳಿಸಲು

ಇನ್ನೇನು ಸಬೂತು ಕೊಟ್ಟು

ಮಾಡಲಿ ಮನವರಿಕೆ |

ಹಗಲಿನಲ್ಲೂ, ಇರುಳಿನಲ್ಲೂ 

ಕನಸಿನಲ್ಲೂ ನಿನ್ನದೆ ಕನವರಿಕೆ ||


#ಸಿಹಿಜೀವಿಯ_ಹನಿ 

21 September 2022

ಅಮಾಯಕ

 ಎಲ್ಲೋ ಒಂದೇ ಕೂದ್ಲ ಸಿಕ್ಕೈತಿ

ಅಂಗಿ ಸ್ವಲ್ಪು ಲಿಪ್ಸ್ಟಿಕ್ ಹತ್ತೈತಿ

ಅಷ್ಟಕ್ಕ ಅನುಮಾನ ಪಡ್ತಿ ಯಾಕ |

ಇನ್ನೊಮ್ಮೆ ಇಂಗಾಗಲ್ಲ 

ನಂಬು ನಾ ಅಮಾಯಕ ||



ತಡೆಯುವವರಾರು?


 

20 September 2022

ತೇಜಸ್ವಿ ಕಪ್ಪೆ ಲೋಕ .




 


ತೇಜಸ್ವಿ ಕಪ್ಪೆಲೋಕ 


ಚಿಂತಕ ಲೇಖಕ, ಮಾದರಿ ಕೃಷಿಕ, ಪ್ರಕಾಶಕ, ಫೋಟೋಗ್ರಾಫರ್, ಕಾಡಿನ ಜೀವಿಗಳ ಹಿತಚಿಂತಕ , ಪರಿಸರ ಕಾಳಜಿಯ ವ್ಯಕ್ತಿ ಹೀಗೆ ಹೇಳುತ್ತಾ ಹೋದರೆ ವಿಶೇಷಣಗಳ  ಪಟ್ಟಿ ಬೆಳೆಯುತ್ತದೆ  ಇಷ್ಟು ಹೇಳಿದ ಮೇಲೆ ಯಾರೆಂದು ನಮಲ್ಲರ ಮನದಲ್ಲಿ ಮೂಡುವ ಹೆಸರೇ ತೇಜಸ್ವಿ!ಹೌದು ಈಗಲೂ ತೇಜಸ್ವಿ ಎಲ್ಲ ವಯೋಮಾನದ ನೆಚ್ಚಿನ ವ್ಯಕ್ತಿ. ನನಗೂ ತೇಜಸ್ವಿ ಎಂದರೆ ಗೌರವ, ಪ್ರೀತಿ .ಇದು ಇನ್ನೂ ಹೆಚ್ಚಾದ ಪರಿಯನ್ನು ಹೇಳುವ ಪ್ರಯತ್ನವೇ ಈ ಲೇಖನ. 


ಮೊನ್ನೆ ಭಾನುವಾರ ಕಲಾವಿದ ಮಿತ್ರರಾದ ಕೋಟೆ ಕುಮಾರ್ ರವರ ಜೊತೆಯಲ್ಲಿ ಮೊದಲ ಬಾರಿಗೆ  ಕರ್ನಾಟಕ ಚಿತ್ರ ಕಲಾ ಪರಿಷತ್ ಗೆ ಭೇಟಿ ನೀಡಿದ್ದೆ .ಮರ ಗಿಡಗಳ ನಡುವೆ ಸುಂದರವಾದ ಕಲೆ ಮತ್ತು ವಾಸ್ತುಶಿಲ್ಪದೊಂದಿಗೆ ನಿಂತಿರುವ ಪರಿಷತ್ ನೋಡಿ ನಿಜಕ್ಕೂ ಸಂತಸವಾಯಿತು.ಹಾಗೆ ಕಣ್ಣು ಹಾಯಿಸಿದಾಗ ಒಂದು ದೊಡ್ಡ ಬ್ಯಾನರ್ ನನ್ನ ಗಮನ ಸೆಳೆಯಿತು "ತೇಜಸ್ವಿ ಕಪ್ಪೆ ಲೋಕ " ಹೆಸರೇ ಆಕರ್ಷಕ ಮತ್ತು ಕುತೂಹಲ ಮೂಡಿಸತು .ಪರಿಷತ್ ನ ಒಳ ಹೊಕ್ಕಾಗ ಅಲ್ಲಿ ಕಪ್ಪೆಗಳ ಲೋಕ ಅನಾವರಣಗೊಂಡಿತು .ತೇಜಸ್ವಿಯವರ ಪರಿಸರದ ಪ್ರೇಮ ಮತ್ತು ಕಾಳಜಿಯಿಂದ ಪ್ರೇರಿತವಾದ ಯುವಕರ ಪಡೆ ಹಾಗೂ ಸಾರ್ವಜನಿಕರು ಅವರ ನೆನಪಿನಲ್ಲಿ ಆಯೋಜಿಸುವ ಅರ್ಥಪೂರ್ಣವಾದ ಕಾರ್ಯಕ್ರಮಗಳಲ್ಲಿ "ತೇಜಸ್ವಿ ಕಪ್ಪೆಲೋಕ ೧೦" ಸಹ ಒಂದು. ಜೈವಿಕ ವೈವಿಧ್ಯತೆಯ ಕುರಿತಾದ ಪೋಟೋಗ್ರಪಿ ಮಾಡುವ ಸಹೃದಯರ ಮತ್ತು ಸಮಾನ ಮನಸ್ಕರ ಕಪ್ಪೆಗಳ  ಛಾಯಾಚಿತ್ರಗಳನ್ನು ಒಂದೆಡೆ ಪ್ರದರ್ಶನ ಮಾಡಿರುವ ತಾಣವೇ ತೇಜಸ್ವಿ ಕಪ್ಪೆಲೋಕ ೧೦ . ಪ್ರದರ್ಶನದ ಹಾಲ್ ಪ್ರವೇಶಕ್ಕೆ ಮುನ್ನ ನಮ್ಮನ್ನು ಒಂದು ದೊಡ್ದ ಕಪ್ಪೆ ಸ್ವಾಗತಿಸುತ್ತದೆ.ಅದು ಅಡಿಕೆ ಪಟ್ಟೆಯಲ್ಲಿ ಮಾಡಿದ ಪರಿಸರ ಪ್ರಿಯ ಕಪ್ಪೆಯ ಕಲಾಕೃತಿ ಅದರ  ಮುಂದೆ ಒಂದು ಪಟ ತೆಗೆದುಕೊಂಡು ಪ್ರದರ್ಶನದ ಹಾಲ್ ಒಳಗೆ ಕಾಲಿಡುತ್ತಲೇ ನಮ್ಮನ್ನು ನಗು ಮೊಗದಿಂದ ಸ್ವಾಗತಿಸಿದವರು ಕುಣಿಗಲ್ ಪ್ರಸಾದ್ .ನಗುತ್ತಲೇ ನಮ್ಮ ನಗಿಸುತ್ತಲೇ ವಿವಿಧ ಪ್ರಕಾರಗಳ  ಕಪ್ಪೆಗಳು ಮಾನವರಿಗೆ ಹೇಗೆ ಸಹಕಾರಿ ,ಅವುಗಳ ಸಂರಕ್ಷಣೆ ಮಾಡುವ ರೀತಿಯನ್ನು ಮನಮುಟ್ಟುವಂತೆ ವಿವರಿಸಿದರು .

ಕುಣಿಗಲ್ ಪ್ರಸಾದ್ ರವರ ಮಾತಿನಂತೆ  ಜಗತ್ತಿನಲ್ಲಿ

ಸುಮಾರು 7300 ಕ್ಕೂ ಹೆಚ್ಚಿನ ಕಪ್ಪೆಗಳ ವಿಧಗಳಿವೆ. 

ಎಲ್ಲಾ ಕಪ್ಪೆಗಳು ಸುಲಭವಾಗಿ ಗುರುತಿಸಬಹುದಾದರೂ, ದೊಡ್ಡ ಗಾತ್ರದ  ಮತ್ತು ರಚನಾತ್ಮಕ ಮಾರ್ಪಾಡುಗಳ ಅಧಾರದ ಮೇಲೆ ಅವುಗಳ ವಿಧಗಳನ್ನು ತಿಳಿಯಬಹುದು. ಅನೇಕ ಕಪ್ಪೆಗಳು ಚಿಕ್ಕ ಪ್ರಾಣಿಗಳು; ಬಹುಶಃ ಚಿಕ್ಕದು ಬ್ರೆಜಿಲಿಯನ್ ಆಗಿದೆಸೈಲೋಫ್ರಿನ್ ಡಿಡಾಕ್ಟಿಲಾ ವಯಸ್ಕ ಕಪ್ಪೆ 9.8 ಮಿಮೀ (0.4 ಇಂಚು) ಅಥವಾ ಕಡಿಮೆ ದೇಹದ ಉದ್ದ ಇರುತ್ತದೆ . ಪಶ್ಚಿಮ ಆಫ್ರಿಕಾದಗೋಲಿಯಾತ್ ಕಪ್ಪೆ , ಕಾನ್ರಾವಾ ಗೋಲಿಯಾತ್ , ಸುಮಾರು 300 ಮಿಮೀ (12 ಇಂಚುಗಳು) ದೇಹದ ಉದ್ದವನ್ನು ಹೊಂದಿದೆ.  ಅನೇಕ ಕಪ್ಪೆಗಳು ಮತ್ತು ನೆಲಗಪ್ಪೆಗಳು ನಯವಾದ ತೇವವಾದ  ಚರ್ಮವನ್ನು ಹೊಂದಿವೆ.    ಬುಫೊ ಕುಲದ ನೆಲಗಪ್ಪೆಗಳು "ವಾರ್ಟಿ" ಉಭಯಚರಗಳೆಂದು ಪರಿಚಿತವಾಗಿವೆ, ಚರ್ಮದಲ್ಲಿ ಹೆಚ್ಚು ಗ್ರಂಥಿಗಳಾಗಿರುತ್ತವೆ  ಮತ್ತು ಟ್ಯೂಬರ್ಕಲ್ಸ್  ಗಳಿಂದ (ಸಣ್ಣ, ಸುತ್ತಿನ ಗಂಟುಗಳು) ಮುಚ್ಚಿರುತ್ತದೆ. ಅನೇಕ ಇತರ ಕುಟುಂಬಗಳ ಕಪ್ಪೆಗಳು ಒರಟಾದ  ಚರ್ಮವನ್ನು ಹೊಂದಿರುತ್ತವೆ. 

ಇನ್ನೂ ಕೆಲ ವಿಶೇಷವಾದ ಕಪ್ಪೆಗಳ ಬಗ್ಗೆ ನೋಡುವುದಾದರೆ 

 ಮಲಯನ್ ಎಲೆ ಕಪ್ಪೆಯ ( ಮೆಗೋಫ್ರಿಸ್ ನಸುತಾ ) ತಲೆಬುರುಡೆಯು ಅರಣ್ಯದ ನೆಲದ ಮೇಲೆ ಎಲೆಯ ಕಸದ ಆಕಾರ ಮತ್ತು ವಿನ್ಯಾಸವನ್ನು ಅನುಕರಿಸಲು ವಿಕಸನಗೊಂಡಿದೆ. ಬ್ಯಾಂಡೆಡ್ ಕೊಂಬಿನ ಮರದ ಕಪ್ಪೆಯ ತಲೆಯು ( ಹೆಮಿಫ್ರಾಕ್ಟಸ್ ಫ್ಯಾಸಿಯಾಟಸ್ ) ಅದರ ಕಣ್ಣುಗಳ ಮೇಲೆ ಮತ್ತು ಅದರ ತಲೆಬುರುಡೆಯ ಹಿಂಭಾಗದಲ್ಲಿ ಗಟ್ಟಿಯಾದ ಎಲುಬಿನ  ಕೊಂಬಿನಂತಹ ರಚನೆಗಳೊಂದಿಗೆ ತ್ರಿಕೋನವಾಗಿದೆ. ಅಂತೆಯೇ, ಸಲಿಕೆ-ತಲೆಯ ಮರದ ಕಪ್ಪೆ ( ಟ್ರಿಪ್ರಿಯನ್ ಸ್ಪಾಟುಲಾಟಸ್ ) ವಿಶಾಲವಾದ ತಲೆಬುರುಡೆಯನ್ನು ಹೊಂದಿದ್ದು ಅದು ತನ್ನ ದೇಹದ ಉಳಿದ ಭಾಗವನ್ನು ದಾಳಿಯಿಂದ ರಕ್ಷಿಸುತ್ತದೆ, ಆದರೆ ಡಿಸ್ಕ್ ಕಪ್ಪೆಗಳು ( ಸಿನಾಪ್ಟುರಾನಸ್ ) ಬಿಲಕ್ಕೆ  ಸಹಾಯ ಮಾಡುವ ಮೊನಚಾದ ಮೂತಿಗಳನ್ನು ಅಭಿವೃದ್ಧಿಪಡಿಸಿಕೊಂಡಿವೆ  .ಹೀಗೆ ಕಪ್ಪೆಗಳ ವರ್ಣಚಿತ್ರಗಳನ್ನು ತೋರಿಸುತ್ತಾ ನಮಗೆ ವಿವರಣೆ ನೀಡುವ ನಡುವೆಯೇ ಅಗ ತಾನೆ ಹುಟ್ಟಿದ ಕಪ್ಪೆಯಿಂದ ನಾಗರಾಜನ ಬಾಯಿ ಸೇರುವ ಕಪ್ಪೆಗಳ ವಿವಿಧ ಭಂಗಿಯ ಕಪ್ಪೆಗಳು ನಮ್ಮ ಕಣ್ ತುಂಬಿಕೊಂಡಿದ್ದವು.ಈ ನಡುವೆ ನಮ್ಮ ಜೊತೆಗೂಡಿದವರು ಮಾಜಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಡಾ.ನಲ್ಲೂರು ಪ್ರಸಾದ್ ರವರು ಹಾಗೂ ಚಲನಚಿತ್ರ ಹಾಸ್ಯ ನಟರಾದ ಎಂ ಎನ್ ಸುರೇಶ್ ರವರು .ಅವರೊಂದಿಗೆ ಕಪ್ಪೆಗಳ ಚಿತ್ರಗಳನ್ನು ನೋಡುತ್ತಾ ಕಪ್ಪೆ ಲೋಕದಲ್ಲಿ ವಿಹರಿಸುತ್ತಾ ಸಾಗುವಾಗ  ಸಮಯ ಸರಿದದ್ದೇ ಗೊತ್ತಾಗಲಿಲ್ಲ. ಕಪ್ಪೆಗಳ ಬಗ್ಗೆ ಉತ್ತಮ ಮಾಹಿತಿ ನೀಡಿದ ಪ್ರಸಾದ್ ರವರಿಗೆ ನಮನ ಸಲ್ಲಿಸಿ .ಪರಿಷತ್ ನ ಮತ್ತೊಂದು ಗ್ಯಾಲರಿಯಲ್ಲಿ ತಮಿಳುನಾಡು ಮೂಲದ ಕಲಾವಿದರ ಛಾಯಾಚಿತ್ರ ಮತ್ತು ಕಲಾಕೃತಿಗಳ ಪ್ರದರ್ಶನ ವೀಕ್ಷಿಸಿ ಪರಿಷತ್ ನ ಕಾಮತ್ ಕ್ಯಾಂಟೀನ್ ನಲ್ಲಿ ಟೀ ಕುಡಿಯುವಾಗ ಮರದ ಪಕ್ಕದಲ್ಲಿ ಒಂದು ಕಪ್ಪೆ ಜಿಗಿದದ್ದು ಕಣ್ಣಿಗೆ ಬಿತ್ತು .ತಕ್ಷಣವೇ ಪ್ರಸಾದ್ ರವರ ಮಾತುಗಳು ನೆನಪಾಗಿ ಇದು ಯಾವ ರೀತಿಯ ಕಪ್ಪೆ ಎಂದು ಯೋಚಿಸುತ್ತಿರುವಾಗಲೆ ಆ ಕಪ್ಪೆ ಜಿಗಿದು ಮಾಯವಾಯಿತು.



ಸಿಹಿಜೀವಿ

ಸಿ ಜಿ ವೆಂಕಟೇಶ್ವರ.



19 September 2022

ಕರುಣೆ

 ಕರುಣೆ 


ಪ್ರತಿಯೊಬ್ಬರ ಹೃದಯದಲ್ಲಿ

ಇದ್ದೇ ಇರುತ್ತವೆ ಹೃತ್ಕರ್ಣ ಮತ್ತು

ಹೃತ್ಕುಕ್ಷಿಗಳೆಂಬ  ಕೋಣೆ |

ಕೆಲವರ ಹೃದಯದಲ್ಲಿ 

ಮಾತ್ರ ನೆಲೆಸಿರುತ್ತವೆ 

ಮನುಷ್ಯತ್ವ  ಮತ್ತು  ಕರುಣೆ ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ 

ತುಮಕೂರು

ಆಧುನಿಕ ಬದುಕು

 #ಆಧುನಿಕಬದುಕು 


ಎದುರಿಗಿರುವ ತಂದೆತಾಯಿಗಳ,

ಬಂಧುಬಳಗದ  ಪ್ರೀತಿ ಅರಿಯದೆ 

ಬೆದಕುವರು ಸಾಮಾಜಿಕ ಮಾಧ್ಯಮಗಳಲ್ಲಿ ಎಷ್ಟಿದೆ ಲೈಕು |

ವಾಸ್ತವಕ್ಕಿಂತ ಮರೀಚಿಕೆಯ 

ಹಿಂದೆ ಓಡತಲಿರುವರು 

ಇದೇ ಆಧುನಿಕ  ಬದುಕು ||


#ಸಿಹಿಜೀವಿಯ_ಹನಿ 


18 September 2022

ಸದಾ ಸುಖಿ

 #ನಿತ್ಯಸುಖಿ 


ನೀ ನನ್ನೊಂದಿಗಿದ್ದರೆ

ಸಾಕು ಸಖಿ |

ಇನ್ನೇನು ಬೇಕು

ನಾ ಸದಾ ಸುಖಿ ||


#ಸಿಹಿಜೀವಿಯ_ಹನಿ 

15 September 2022

ಬರಬಾರದೇನು

 


#ಇಂದಾದರು_ನೀ_ಬರಬಾರದೇನು 



ಎಂದಿನಂತೆ ಜಾತಕ ಪಕ್ಷಿಯಾಗಿ

ನೀ ಹೇಳಿದ ಮರದ ಕೆಳೆಗೆ ನಿಂದೆನು |

ಅದೇಕೆ ಹಾಗೆ ಸತಾಯಿಸುತಿರುವೆ

ಇಂದಾದರೂ ನೀ ಬರಬಾರದೇನು 



#ಸಿಹಿಜೀವಿಯ_ಹನಿ 


ಅಡುಗೆ ಪ್ರಭಾವ

 #ನಾನು_ಮಾಡಿದ_ಅಡುಗೆ_ಪ್ರಭಾವ 


ನಾದಿನಿ ನುಲಿದಳು

ಇಂದು ನೀವ್ಯಾಕೋ

ಚೆಂದ ಕಾಣ್ತೀರಾ ಬಾವಾ |

ನನ್ನವಳಿಗೆ ಅರ್ಥವಾಯಿತು

ಅದು ನಾನು ಮಾಡಿದ

ಅಡುಗೆ ಪ್ರಭಾವ ||



#ಸಿಹಿಜೀವಿಯ_ಹನಿ 


14 September 2022

ಮಿಡಿತ

 #ನನ್ನೆದೆಯ_ಮಿಡಿತ 


ಅವಳು ನನ್ನ

ಕಣ್ಣ ಮುಂದೆ 

ಸುಳಿದಾಡಿದರೆ 

ಎನೋ ಹಿತ |

ಅವಳೇ ಸದಾ

ನನ್ನದೆಯ ಮಿಡಿತ ||


#ಸಿಹಿಜೀವಿಯ_ಹನಿ 

ಸಿಂಹ ಧ್ವನಿ ೧೪/೨೨


 

13 September 2022

ಹಾರನ ಕಣಿವೆ ಜಾತ್ರೆ ಮತ್ತು ಮಾರಿಕಣಿವೆ

 


ಆತ್ಮಕಥೆ ೩೭ .


ಹಾರನ ಕಣಿವೆ ಜಾತ್ರೆ ಮತ್ತು ಮಾರಿಕಣಿವೆ .


ನಮ್ಮದು ವಾಲಾಜಿ ಕುಟುಂಬ ನಾವು ಮೊದಲಿನಿಂದಲೂ ಮಾರ್ನಾಮಿ ಹಬ್ಬವನ್ನು ಬಹಳ ಶ್ರದ್ಧೆಯಿಂದ ಭಕ್ತಿಯಿಂದ ಆಚರಿಸಿಕೊಂಡು ಬರುತ್ತಿದ್ದೇವೆ .ನಾನು ಚಿಕ್ಕವನಿದ್ದಾಗ ಕೊಟಗೇಣೇರ ಮನೆ ಎಂದು ಇಂದಿಗೂ ಪರಿಚಿತವಾಗಿರುವ ಉಪ್ಪರಿಗೇನಹಳ್ಳಿಯ ನಮ್ಮ ಬಂಧುಗಳಾಗ ಜುಂಜಪ್ಪ ರವರ ಮನೆಯಲ್ಲಿ ಆಚರಿಸುತ್ತಿದ್ದೆವು . ನಮ್ಮ ಪೂಜೆ ವಿಧಿ ವಿಧಾನಗಳು ,ಹಿರಿಯರ ಪೂಜೆ ಮಾಡುವುದು .ಮೂಡ್ಲ ಮಣೇವು ಕಟ್ಟೋದು ದಾಸಯ್ಯನ ಗೋವಿಂದ ಮುಂತಾದವುಗಳು ಮುಗಿದು ಹಾ... ಈಗ ಎಲ್ಲರೂ ಊಟ ಮಾಡಿ ಎನ್ನುವಾಗ ಸಮಯ ರಾತ್ರಿ ಬರೋಬ್ವರಿ ಹನ್ನೆರಡು ಗಂಟೆಯ  ಮೇಲಾಗಿರುತ್ತಿತ್ತು .ಹಿರಿಯರಿಗೆ ಎಡೆ ಇಟ್ಟ ಮೇಲೆ ಕೆಲ ಹಿರಿಯರು  ಆ ಸಮಯದಲ್ಲೇ  ಊಟ. ಮಾಡುತ್ತಿದ್ದರು .ನಾವು ಚಿಕ್ಕ ಮಕ್ಕಳು ನಿದ್ರಾ ದೇವಿಯ ವಶದಿಂದ ಹೊರಬರಲು ಇಷ್ಟವಿಲ್ಲ ಎಂದು ಗೊತ್ತಾದ ಮೇಲೆ ದೊಡ್ಡವರು ನಮ್ಮನ್ನು ಎಬ್ಬಿಸುವ ಪ್ರಯತ್ನ ಮಾಡುತ್ತಿರಲಿಲ್ಲ. ಬೆಳಿಗ್ಗೆ ಎದ್ದ ಮೇಲೆ ಹಾಳು ಹೊಟ್ಟೆಗೆ  ಉಗ್ಗಿ ತಿನ್ನುವ ಕಾಯಕ ಶುರುಮಾಡಿಬಿಡುತ್ತಿದ್ಧೆವು . ಗೋದಿ ರವೆ ಬೆಲ್ಲ ಹಾಕಿ ಮಾಡಿದ ಉಗ್ಗಿ ರಾತ್ರಿ ದ್ರವರೂಪದಲ್ಲಿ ಇದ್ದರೂ ಬೆಳಿಗ್ಗೆ ಅದು ಕೇಕ್ ರೀತಿಯಲ್ಲಿ ಗಟ್ಟಿಯಾಗಿರುತ್ತಿತ್ತು.ಹೊಟ್ಟೆ ಚೆನ್ನಾಗಿ ಹಸಿದಿದ್ದರಿಂದ ನಾವೆಲ್ಲರೂ ಗಬಗಬನೆ ತಿಂದು ಇನ್ನಷ್ಟು ಬೇಕು ಎಂದು ದೊಡ್ಡ ಪಾತ್ರೆಯ ಕಡೆಗೆ ನೋಡುತ್ತಿದ್ದೆವು. ತಂಪಾಗಿದ್ದರೂ ಸಿಹಿಯಾದ   ಆ ಉಗ್ಗಿಯ ಸವಿ ಸವಿದವರಿಗೇ ಗೊತ್ತು.

ಮಾರ್ನಾಮಿ ಹಬ್ಬ ನನಗೆ ಬಹಳ ಅಚ್ಚುಮೆಚ್ಚು ಅದಕ್ಕೆ ಮತ್ತೊಂದು ಕಾರಣ  ಹಬ್ಬದ ಮರುದಿನ ಹಾರ್ನ ಕಣಿವೆ ರಂಗಪ್ಪನ ಅಂಬು!  

ನಮ್ಮ ಭಾಗದಲ್ಲಿ ಚಿತ್ರಳ್ಳಿ ಅಂಬು ಮತ್ತು ಹಾರನಕಣಿವೆ ಅಂಬುಗಳು ಬಹು ಪ್ರಸಿಧ್ಧ . ಮಹಾನವಮಿಯಲ್ಲಿ ನಡೆವ   ಈ ಎರಡು ಅಂಬುಗಳಿಗೆ ಪ್ರತಿ ಮನೆಯಿಂದ ಓರ್ವ ಸದಸ್ಯ ಹಾಜರಾಗಿ ಸ್ವಾಮಿಗಳಿಗೆ ಹಣ್ಣು ಕಾಯಿ ಮಾಡಿಸಿಕೊಂಡು ತೀರ್ಥ ತಂದು ಹೊಲ ಮನೆಗಳಿಗೆ ಹಾಕಿದರೇನೇ ಜೀವನ ಎಂಬ ಪದ್ದತಿ ಈಗಲೂ ಜಾರಿಯಲ್ಲಿದೆ. ಚರ್ಮ ವ್ಯಾಧಿಯ ನಿವಾರಣೆ ಗೆ ಚಿತ್ರಳ್ಳಿ ಚಿತ್ರಲಿಂಗೇಶ್ವರನ ಮೊರೆ ಹೋಗುವ ಭಕ್ತರು ಹೊಲ ಮನೆಗಳಲ್ಲಿ ಕಂಡು ಬರುವ ಹಾವು ಚೇಳು ಮುಂತಾದವುಗಳಿಂದ ರಕ್ಷಿಸು ಎಂದು ಹಾರನ ಕಣಿವೆ ರಂಗಪ್ಪನ ಬೇಡುವರು.

ಆಗ ರಸ್ತೆಗಳು ಮತ್ತು ಬಸ್ ಸೌಕರ್ಯ ಬಹಳ ಕಡಿಮೆ ಇತ್ತು ಜನ ಕೊಟಗೇಣಿ ಮತ್ತು ಉಪ್ಪರಿಗೇನಹಳ್ಳಿಯ ಕಡೆಯಿಂದ ಕಾಲ್ನಡಿಗೆಯಲ್ಲಿ ಆರನಕಣಿವೆ ಜಾತ್ರೆಗೆ ಹೋಗಿಬರುತ್ತಿದ್ದರು .ನಾನು ಒಂಭತ್ತನೆಯ ತರಗತಿಯಲ್ಲಿ ಓದುವಾಗ ಅಮ್ಮನನ್ನು ಒಪ್ಪಿಸಿ ನಾನೂ ಹಾರನಕಣಿವೆಜಾತ್ರೆಗೆ ಕಾಲ್ನಡಿಗೆಯಲ್ಲಿ ಹೋಗಲು ತೀರ್ಮಾನಿಸಿದ್ದೆ. ಮಾಡದಕೆರೆ ಮತ್ತು ಹಿರಿಯೂರು ಮಾರ್ಗದಲ್ಲಿ ಬಸ್ ಮೂಲಕ ಸಂಚರಿಸುವ ರಸ್ತೆ ಮಾರ್ಗವಿದ್ದರೂ ಅದು ಮೂವತ್ತು ಕಿಲೋಮೀಟರ್ ಗೂ ಹೆಚ್ಚು ದೂರ ಅದರ ಬದಲಿಗೆ ಕೆರೆಯಾಗಳ ಹಳ್ಳಿಯ ಪಕ್ಕದ ಕಾಡ ಹಾದಿಯಗುಂಟ ನಡೆದು ಹಾರನ ಕಣಿವೆ ಸೇರಲು ಸುಮಾರು ಹದಿನೈದು ಕಿಲೋಮೀಟರ್ ಆಗುತ್ತಿತ್ತು.

ಮಾರ್ನಾಮಿ ಹಬ್ಬದ ನಂತರದ ದಿನ ಅಡಿಕೆ ಪಟ್ಟಿಯಲ್ಲಿ ಅಮ್ಮ ಮಾಡಿಕೊಟ್ಟ ಬುತ್ತಿ ಅನ್ನ ಮೊಸರು ಕಟ್ಟಿಕೊಂಡು ಗೆಳೆಯರು ಹಿರಿಯರ ಜೊತೆಗೂಡಿ ಬೆಳಗಿನ ಜಾವ ಐದು ಗಂಟೆಗೆ ಕಾಡ ಹಾದಿಯಲ್ಲಿ ಪಯಣ ಆರಂಬಿಸಿಯೇ ಬಿಟ್ಟೆವು .ಆರಂಭದಲ್ಲಿ ಬಹಳ ಜೋರಾಗಿ ಓಡುತ್ತಾ ಕಿರುಚುತ್ತಾ ಸಾಗಿದ ನಾವು ಐದಾರು ಕಿಲೋಮೀಟರ್ ದಾರಿ ಕ್ರಮಿಸಿದಾಗ ಚಪ್ಪಲಿಗಳಿಲ್ಲದ ದೂರ ನಡೆಯದ ನಮ್ಮ ಕಾಲುಗಳು ಮಾತಾಡುತ್ತಿದ್ದವು.ಅಲ್ಲಲ್ಲಿ ವಿಶ್ರಾಂತಿ ತೆಗೆದುಕೊಂಡು ಅಲ್ಲೇ ಕಾಣುವ ಕೆರೆ ಕಟ್ಟೆಯ ನೀರು ಕುಡಿದು ನಡೆಯಲು ಶುರು ಮಾಡಿದೆವು .ಮಾದಿಹಳ್ಳಿಯ ನಮ್ಮ ಸಂಬಂಧಿಯವರ ಮನೆಯಲ್ಲಿ ಟೀ ಕುಡಿದು ಸುಮಾರು ಹತ್ತು ಗಂಟೆಗೆ ಹಾರನ ಕಣಿವೆ ಜನಸಾಗರಕ್ಕೆ ಸೇರಿದೆವು .ಮೊದಲ ಬಾರಿಗೆ ಕಂಡ ಜಾತ್ರೆಯ ವೈಭವ ನೋಡುವಾಗ ಅಷ್ಟು ದೂರ ನಡೆದಾಗ ಇದ್ದ ಕಾಲು ನೋವು ಮಾಯವಾಗಿತ್ತು .  "ಜಾತ್ರೆಯಲ್ಲಿ ನಿನ್ನ ಗೆಣೆಕಾರರ ಕೈ ಹಿಡಿದುಕೊಂಡು ಸಾಗು ಇಲ್ಲವಾದರೆ ಕಳೆದು ಹೋಗುತ್ತೀಯಾ " ಎಂದು ಅಮ್ಮ ಎಚ್ಚರಿಕೆ ನೀಡಿದ್ದು  ನೆನಪಾಗಿ ನನ್ನ ಗೆಳೆಯರ ಕೈಹಿಡಿದೇ  ಜಾತ್ರೆಯಲ್ಲಿ ಸುತ್ತಾಡಿದೆ .ಮೊದಲಿಗೆ ದೂರದಿಂದಲೇ ಅಂಬು ನೋಡುವ ಪ್ರಯತ್ನ ಮಾಡಿದೆ  ಬರೀ ಜನರ ಕೂಗು ಮಾತ್ರ ಕೇಳಿಸಿತು ಏನೂ ಕಾಣಲಿಲ್ಲ  ಯಾರೋ ಹೇಳಿದರು ಬನ್ನಿ ಮರಕ್ಕೆ ದೇವರು ಮೂರು ಬಾಣ ಬಿಟ್ಟಿತು ಅದೇ ಅಂಬು ಎಂದು. ನಾವು ಮನೆಯಿಂದ ತಂದ ಕಾಯಿ ಮತ್ತು ಹಣ್ಣು ಕೊಟ್ಟು ದೇವಾಲಯದ ಹೊರಗಡೆ ಪೂಜೆ ಮಾಡಿಸಿಕೊಂಡು ತಗಡಿನ ಚೇಳು ಉಳ ಎಂಬ ಬೊಂಬೆಗಳನ್ನು ಖರೀದಿಸಿ ಸ್ವಾಮಿಗೆ ಹಾಕಿದೆವು .ಹಾಗೆ ಮಾಡುವುದರಿಂದ ನಮ್ಮ ಮನೆ ಮತ್ತು ಹೊಲದಲ್ಲಿ ಹಾವು ಚೇಳುಗಳ ತೊಂದರೆ ಬರದು ಎಂಬ ನಂಬಿಕೆ. ಅಂಬಿನ ನಂತರ ಹಾಗೆ ಮುಂದೆ ಸಾಗಿದಾಗ ಪ್ರತಿಯೊಂದು ತಂಗಟೆ ಗಿಡದ ಕೆಳಗೆ ಬಾಳೆ ಹಣ್ಣು ಸಕ್ಕರೆ ಕಲೆಸಿ ದೇವರಿಗೆ ನೈವೇದ್ಯ ಮಾಡುವ ಭಕ್ತರ ಸಾಲು ನೋಡಿದಾಗ ಹೊಸ ಸಂಪ್ರದಾಯ ಗೋಚರವಾಯಿತು. ಎಲ್ಲರೂ ಕರೆದು ನಮಗೆ ಸಕ್ಕರೆ ಬಾಳೆಹಣ್ಣು ನೀಡಿದರು. ನಾಲ್ಕೈದು ಕಡೆ ತಿನ್ನುವಷ್ಟರಲ್ಲಿ  ಹೊಟ್ಟೆ ತುಂಬಿ ಆಕಡೆ ಹೋಗಲಿಲ್ಲ. ಹಾಗೆ ಜಾತ್ರೆಯ ಕಡೆಗೆ ಹೆಜ್ಜೆ ಹಾಕುವಾಗ ವಿವಿಧ ಪ್ರಸಂಗಗಳು ನನ್ನ ಮನ ಸೆಳೆದವು .ತಮ್ಮ ಕೈ ಕೊಯ್ದುಕೊಂಡು ಭಿಕ್ಷೆ ಬೇಡುವ ಮೊಂಡರು ಒಂದೆಡೆಯಾದರೆ , ತಮ್ಮ ಮೈ ಮೇಲೆ ತಾವೇ ಚಾಟಿ ಬೀಸಿಕೊಂಡು ರಕ್ತ ಬರುವ ಹಾಗೆ ಹೊಡೆದುಕೊಂಡ ಹಣ ಕೇಳುವವರು ಮತ್ತೊಂದು ಕಡೆ.ಅಲ್ಲೊಂದು ವೃತ್ತಾಕಾರದ ಗುಂಪಿನ ಕಡೆ ಸಾಗಿ ನೋಡಿದರೆ ಅಲ್ಲಿ ಹಾವಾಡಿಗ ಹಾವಾಡಿಸುತ್ತಿದ್ದ. ಅಮ್ಮ ಕೊಟ್ಟ ಹತ್ತು ರೂಪಾಯಿ ಯಲ್ಲಿ ಮೊದಲಿಗೆ ಐವತ್ತು ಪೈಸೆ ಕೊಟ್ಟು ಒಂದು ಐಸ್ ಕ್ಯಾಂಡಿ ತಿಂದೆ .ಹಾಗೆ ನಡೆದು ಜಾತ್ರೆಯ ಆಟಿಕೆ ಅಂಗಡಿ ನೋಡುತ್ತಾ ಒಂದು ರೂಪಾಯಿ ಕೊಟ್ಟು ನನಗೆ ಇಷ್ಟವಾದ ಒಂದು ಕೊಳಲು ಕೊಂಡೆ . ಬಿಸಿಲಿನ ಧಗೆ ನಿಧಾನವಾಗಿ ಶುರುವಾಯಿತು .ಅಲ್ಲೇ ಶೀಶೆಯಲ್ಲಿ ಇಟ್ಟ ಬಣ್ಣ ಬಣ್ಣದ ಶರಭತ್ತು ನೋಡಿದೆ .ಇಪ್ಪತ್ತೈದು ಪೈಸೆ ಕೊಟ್ಟು ಬಣ್ಣದ ಶರಭತ್ತು ಕುಡಿದೆ. ಒಂದೂವರೆಗೆ ಗೆಳೆಯರೆಲ್ಲ ಊಟ ಮಾಡಲು ಕೆರೆಯಂಗಳಕ್ಕೆ   ಕರೆದುಕೊಂಡು ಹೋದರು ನಾವು ಮನೆಯಿಂದ ತಂದ ಬುತ್ತಿ ಅನ್ನವನ್ನು ತಿಂದು ಅಲ್ಲೇ ಕೆರೆಯ ನೀರು ಕುಡಿದು ಮತ್ತೆ ಜಾತ್ರೆಯ ಕಡೆ ಹೊರೆಟೆವು ಈಗ ನಿಧಾನವಾಗಿ ಕಾಲು ನೋಯಲು ಆರಂಭವಾದವು . ನನ್ನ ಗೆಳೆಯರು ಮಾರಿಕಣಿವೆ ಡ್ಯಾಂ ನೋಡೋಣ ಎಂದು ಸಿದ್ದರಾದರು .ನನ್ನ ಕಾಲಿನ ನೋವಿನ ಬಗ್ಗೆ ಹೇಳಿದಾಗ ಬಲವಂತ ಮಾಡಿ ಮತ್ತೆ ಎರಡು ಕಿಲೋಮೀಟರ್  ನಡೆಸಿಕೊಂಡು ಹೊರಟರು. ದೂರದಿಂದಲೇ ಡ್ಯಾಂ ಕಂಡಿತ್ತು .ಹತ್ತಿರ ಹೋದಂತೆಲ್ಲ ಅದರ ಗಾತ್ರ ಮತ್ತು ನೀರು ನೋಡಿ ಬಹಳ ಖುಷಿಯಾಯಿತು. ಡ್ಯಾಂ ನ ಕೆಳಭಾಗದಲ್ಲಿ ನಿಂತು ಡ್ಯಾಂ ನ ಮೇಲ್ಭಾಗಕ್ಕೆ ಕಲ್ಲು ಹೊಡೆಯುವ  ಸ್ಪರ್ಧೆ ನಮ್ಮಲ್ಲಿ ಶುರುವಾಯಿತು. ಕೆಲವರು ಕಾಲು ಭಾಗದಷ್ಟು ದೂರಕ್ಕೆ ಕೆಲವರು ಅರ್ಧ ಭಾಗಕ್ಕೆ ಮಾತ್ರ ಕಲ್ಲು ಎಸೆದರು ಯಾರೂ ಡ್ಯಾಂ ನ ಸಮವಾಗಿ ಕಲ್ಲು ಎಸೆಯಲೇ ಇಲ್ಲ. ಮೊನ್ನೆ ಎಂಬತ್ತೆಂಟು ವರ್ಷಗಳ ನಂತರ ಕೋಡಿ ಬಿದ್ದ ಮಾರಿಕಣಿವೆ ಕೆರೆ ನೋಡಲು ಕುಟುಂಬ ಸಮೇತ ಕಾರಿನಲ್ಲಿ ಮಾರಿಕಣಿವೆಗೆ ಹೋದಾಗ ಬಾಲ್ಯದ ಎಲ್ಲಾ ನೆನಪುಗಳು ಡ್ಯಾಂ ನ  ಅಲೆಗಳಂತೆ ಮನದಲ್ಲಿ ಅಪ್ಪಳಿಸಿದವು ಆ ಅಲೆಗಳು ಇನ್ನೂ ನಿಂತಿಲ್ಲ....


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಟೈಪ್ ರೈಟರ್

 ಒಂದು ಕಾಲದಲ್ಲಿ ಟೈಪ್ ರೈಟಿಂಗ್ ಗೊತ್ತಿದ್ದರೆ ಮಾತ್ರ ಸರ್ಕಾರಿ ಕೆಲಸ ಮತ್ತು ಕಛೇರಿಗಳಲ್ಲಿ ಕೆಲಸ ಸಿಗುತ್ತಿತ್ತು .ಇಂದು ಅದರ ಸ್ಥಾನವನ್ನು ಕಂಪ್ಯೂಟರ್ ಕಬಳಿಸಿದೆ. ಟೈಪ್ ರೈಟಿಂಗ ಮಾಡುವಾಗ ಬರುವ ಟಕ್ ಟಕ್ ಸದ್ದು ರಿದಮೆಟಿಕ್ ಆಗಿ ಬರುವುದನ್ನು ಕೇಳುವುದೇ ಒಂದು ಮಜಾ .ಅದರಲ್ಲೂ ಟೈಪ್ ಮಾಡಿದ ಒಂದು ಸಾಲಿನ ನಂತರ ಸೋಯ್ ಎಂದು ಅದರ ಹಿಡಿಯನ್ನು ಹಿಂದಕ್ಕೆ ಎಳೆಯುವಾಗ ಟೈಪ್ ಮಾಡುವವರ ಸ್ಕಿಲ್ ಕಂಡ ಅವರ ಬಗ್ಗೆ ಹೆಮ್ಮೆ ಎನಿಸುತ್ತಿತ್ತು. ನಾನಂತೂ ಬಾಲ್ಯದಲ್ಲಿ ಟೈಪಿಂಗ್ ಮೆಷಿನ್ ಮುಂದೆ ಕುಳಿತುಕೊಂಡು ಗಂಟೆಗಟ್ಟಲೇ ಬಿಟ್ಟ ಕಣ್ಣು ಬಿಟ್ಟುಕೊಂಡು ಬಾಯಿ ತರೆದುಕೊಂಡು ನೋಡುತ್ತಲೇ ನಿಂತು ಬಿಡುತ್ತಿದ್ದೆ.

ಈ ಟೈಪ್ ರೈಟಿಂಗ್ ಎಷ್ಟೋ ಕುಟುಂಬಕ್ಕೇ ಅಧಾರವಾಗಿತ್ತು.ನಾನು ಗೌರಿಬಿದನೂರಿನಲ್ಲಿ ಕೆಲಸ ಮಾಡುವಾಗ ನನ್ನ ವಿದ್ಯಾರ್ಥಿನಿಯ ಪೋಷಕರಾಗಿ ಪರಿಚಿತರಾದ ಪುಷ್ಪಾ ರವರು ಕೋರ್ಟ್ ಮುಂದೆ ಟೈಪಿಂಗ್ ಮಾಡುತ್ತಾ ದುಡಿದು ತನ್ನ ಇಬ್ಬರು ಮಕ್ಕಳಿಗೆ ಇಂಜಿನಿಯರಿಂಗ ಶಿಕ್ಷಣ ಕೊಡಿಸಿ ಈಗ ಇಬ್ಬರೂ ಮಕ್ಕಳು ಉತ್ತಮ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ.  ಇದನ್ನು ಗಮನಿಸಿದ ನಾನು ಮನದಲ್ಲೇ ಪುಷ್ಪಾ ರವರಿಗೆ ಮತ್ತು ಅವರ ಟೈಪ್ ರೈಟರ್ ಮೆಷಿನ್  ಗೆ ಹಾಟ್ಸಪ್ ಹೇಳುತ್ತೇನೆ 


ಸಿಹಿಜೀವಿ 

12 September 2022

ಸುಸ್ತು

 

*ಸುಸ್ತು*

ಕಂಡು ಹಿಡಿದಿರುವರಂತೆ
ಹೆಂಡತಿಯೆಂಬ ಮೂಲವಸ್ತು |
ಅದರ ಗುಣಲಕ್ಷಣಗಳನ್ನು
ಅರ್ಥಮಾಡಿಕೊಳ್ಳವಲ್ಲಿ
ಎಲ್ಲಾ ಗಂಡಂದಿರು ಸುಸ್ತು ||

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ

ಹೊಲಕ್ಕೆ ಹೋಗೋಣ .


 #ಹೊಲಕ್ಕೆ_ಹೋಗೋಣ 


ಹೊಲಕ್ಕೆ ಹೋಗೋಣ

ನಮ್ಮ ತೋಟಕ್ಕೆ ಹೋಗೋಣ

ಭೂತಾಯಿಗೆ ನಮಿಸೋಣ 

ನಮ್ಮ ಬೆಳೆ ಕಂಡು ನಲಿಯೋಣ 


#ಸಿಹಿಜೀವಿಯ_ಹನಿ 

07 September 2022

ಸಾಕ್ಷರ ಭಾರತ ಜಾಗೃತ ಭಾರತ

 

ಸಾಕ್ಷರ ಭಾರತ ಜಾಗೃತ ಭಾರತ

"ನನಗೆ  ಯಾವುದಾದರೂ ಮಂತ್ರದಂಡ ದೊರೆತರೆ
ಅದರಿಂದ ಪ್ರಪಂಚದ ಜನರೆಲ್ಲಾ ಸಾಕ್ಷರತೆ ಪಡೆಯಲಿ ಎಂದು ಮಂತ್ರಿಸುತ್ತಿದ್ದೆ"

ಅಂಬೇಡ್ಕರ್ ರವರು ಹೇಳಿದಂತೆ ಶಿಕ್ಷಣ ,ಸಂಘಟನೆ ಮತ್ತು ಹೋರಾಟ ನಮ್ಮ ಜೀವನವನ್ನು ಮುನ್ನಡೆಸುವ ಚಾಲಕ ಶಕ್ತಿಗಳು.
ಸರ್ವಜ್ಞ ರವರ ಪ್ರಕಾರ "ವಿದ್ಯೆ ಉಳ್ಳವನ ಮುಖವು ಮುದ್ದು ಬರುವಂತಿಕ್ಕು  ವಿದ್ಯೆ ಇಲ್ಲದವನ ಮುಖವು ಹಾಳೂರು ಹದ್ದಿನಂತಿಕ್ಕು ಸರ್ವಜ್ಞ" ಎಂದು ವಿದ್ಯೆಯ ಮಹತ್ವದ ಕುರಿತು ಹೇಳಿದ್ದಾರೆ.
ಶಿಕ್ಷಣ ಮಾನವನಿಗೆ ಒಡವೆಯಿದ್ದಂತೆ ಜೀವನಕ್ಕೆ ದೀವಿಗೆ ಇದ್ದಂತೆ.

ಯಾವುದೇ ದೇಶದ ಪ್ರಗತಿಯಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸೂಚ್ಯಂಕದಲ್ಲಿ ಸಹ ಶಿಕ್ಷಣಕ್ಕೆ ಅಗ್ರ ಸ್ಥಾನವಿದೆ.
ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ಸಾಕ್ಷರತೆಯು ಅಭಿವೃದ್ಧಿಯ ಬೆನ್ನೆಲುಬಾಗಿದೆ.  ಇದು ಜೀವನದ ಗುಣಮಟ್ಟ, ಅರಿವು ಮತ್ತು ಜನರ ಕೌಶಲ್ಯಗಳನ್ನು ಹೆಚ್ಚಿಸುತ್ತದೆ.

ಸಾಕ್ಷರತೆ ಎಂದರೆ "ಪರಿಣಾಮಕಾರಿಯಾಗಿ ಸಂವಹನ ಮಾಡಲು ಮಾಹಿತಿಯನ್ನು ಓದುವ, ಬರೆಯುವ ಮತ್ತು ಗ್ರಹಿಸುವ ಸಾಮರ್ಥ್ಯ.  ವೃತ್ತಪತ್ರಿಕೆಯನ್ನು ಓದುವುದರಿಂದ ಹಿಡಿದು ರಸ್ತೆ ಚಿಹ್ನೆಗಳನ್ನು ಅರ್ಥಮಾಡಿಕೊಳ್ಳುವವರೆಗೆ ಸಾಕ್ಷರತೆಯು ನಮ್ಮ ಸುತ್ತಮುತ್ತಲಿನ ವಿಷಯಗಳ ತಿಳಿಯಲು  ಸಹಾಯ ಮಾಡುವ ಏಕೈಕ ಸಾಧನವಾಗಿದೆ". 

ವಿಶ್ವ ಸಂಸ್ಥೆಯ ಅಂಗಸಂಸ್ಥೆಯಾದ
ಯುನೆಸ್ಕೋ ಸಾಕ್ಷರತೆಯನ್ನು ಹೀಗೆ ವ್ಯಾಖ್ಯಾನಿಸಿದೆ "ವಿಭಿನ್ನ ಸನ್ನಿವೇಶಗಳಿಗೆ ಸಂಬಂಧಿಸಿದ ಮುದ್ರಿತ ಮತ್ತು ಲಿಖಿತ ವಸ್ತುಗಳನ್ನು ಬಳಸಿಕೊಂಡು ಗುರುತಿಸುವ, ಅರ್ಥಮಾಡಿಕೊಳ್ಳುವ, ಅರ್ಥೈಸುವ, ಸೃಷ್ಟಿಸುವ, ಸಂವಹನ ಮಾಡುವ ಮತ್ತು ಲೆಕ್ಕಾಚಾರ ಮಾಡುವ ಸಾಮರ್ಥ್ಯ".

ಒಂದು ಕಾಲದಲ್ಲಿ  ಸಾಕ್ಷರತೆಯು " ಓಬಲೆ"   ಅಂದರೆ ಓದು, ಬರಹ, ಲೆಕ್ಕಾಚಾರದ ಆಧಾರದ ಮೇಲೆ ನಿರ್ಧಾರ ಆಗುತ್ತಿತ್ತು ಈಗ " ಓಬಲೆಕಂಕೃ" ಆಗಿದೆ ಅಂದರೆ ಓದು ಬರಹ ಲೆಕ್ಕಾಚಾರದ ಜೊತೆಯಲ್ಲಿ " ಕಂಪ್ಯೂಟರ್ ಜ್ಞಾನ, ಕೃತಕ ಬುದ್ಧಿಮತ್ತೆ " ಪರಿಚಯ ಕೂಡಾ ಅಗತ್ಯ ಇದರ ಪರಿಚಯ ಇಲ್ಲದವರು ಪರೋಕ್ಷವಾಗಿ ಅನಕ್ಷರಸ್ಥರೇ. ಈ ರೀತಿಯಲ್ಲಿ ಸಾಕ್ಷರತೆಯ ಅರ್ಥ ಕಾಲ ಕಾಲಕ್ಕೆ ಬದಲಾಗುತ್ತದೆ . ನಾವು ಅಪ್ಡೇಟ್ ಆಗುತ್ತಾ ಸಾಕ್ಷರರಾಗಿಯೇ ಉಳಿಯಬೇಕು.

2011 ರ ಜನಗಣತಿಯ ಪ್ರಕಾರ, ಏಳು ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮತ್ತು ಓದುವ ಮತ್ತು ಬರೆಯುವ ಸಾಮರ್ಥ್ಯವನ್ನು ಹೊಂದಿರುವ ಯಾವುದೇ ವ್ಯಕ್ತಿಯನ್ನು ಸಾಕ್ಷರ ಎಂದು ಪರಿಗಣಿಸಲಾಗುತ್ತದೆ.  ಭಾರತದಲ್ಲಿ ಸರಾಸರಿ ಸಾಕ್ಷರತೆಯ ಪ್ರಮಾಣ 74.04%ರಷ್ಟಿದೆ.  ಕೇರಳವು ಭಾರತದಲ್ಲಿ 93.91%ನಷ್ಟು ಸಾಕ್ಷರತೆಯನ್ನು ಹೊಂದಿದ್ದರೆ, ಬಿಹಾರವು ಭಾರತದಲ್ಲಿ 63.82%ನಷ್ಟು ಕಡಿಮೆ ಸಾಕ್ಷರತೆಯ
ಭಾರತದಲ್ಲಿ ಗೃಹ ವ್ಯವಹಾರಗಳ ಸಚಿವಾಲಯವು ಪ್ರತಿ 10 ವರ್ಷಗಳಿಗೊಮ್ಮೆ ಜನಗಣತಿಯನ್ನು ನಡೆಸುತ್ತದೆ. 

2011 ರ ಜನಗಣತಿ ಭಾರತದಲ್ಲಿ 15 ನೇ ಅಧಿಕೃತ ಸಮೀಕ್ಷೆಯಾಗಿದೆ.
ಕೋವಿಡ್ ಕಾರಣದಿಂದ 2021 ರಲ್ಲಿ ನಡೆಯಬೇಕಾದ 16ನೇ   ಜನಗಣತಿ ಸಾದ್ಯವಾಗಿಲ್ಲ  1947 ರಲ್ಲಿ ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಅಂತ್ಯದ ನಂತರ, ಭಾರತದ ಸಾಕ್ಷರತೆಯ ಪ್ರಮಾಣವು 12%ರಷ್ಟಿತ್ತು.  ಅಂದಿನಿಂದ, ದೇಶವು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಜಾಗತಿಕವಾಗಿ ಮುಂದುವರಿದಿದೆ ಆದರೆ ಇನ್ನೂ ಬಹಳಷ್ಟು ಅಭಿವೃದ್ಧಿ ಕಾಣಬೇಕಿದೆ.

ಶೇಕಡಾ 12 ಇದ್ದ ಸಾಕ್ಷರತೆ ಇಂದು ಶೇಕಡಾ 74 ತಲುಪಿರುವುದರ ಹಿಂದೆ ನಮ್ಮ ಸಂವಿಧಾನ ಮತ್ತು ಸರ್ಕಾರಗಳ ಪಾತ್ರ ಉಲ್ಲೇಖಾರ್ಹ.
ಭಾರತದ ಸಂವಿಧಾನವು ಎಲ್ಲರಿಗೂ ಶಿಕ್ಷಣದ ಮಹತ್ವವನ್ನು ಗುರುತಿಸಿದೆ.  ಆದ್ದರಿಂದ, ಇದು ದೇಶದಲ್ಲಿ ಶೈಕ್ಷಣಿಕ ಹಕ್ಕುಗಳ ಸರಿಯಾದ ಮತ್ತು ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಹಲವಾರು ನಿಬಂಧನೆಗಳನ್ನು ವಿಧಿಸುತ್ತದೆ.

ಭಾರತೀಯ ಸಂವಿಧಾನದ  30 ನೇ ವಿಧಿಯು ಎಲ್ಲಾ ಅಲ್ಪಸಂಖ್ಯಾತರಿಗೂ ತಮ್ಮ ಆಯ್ಕೆಯ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಹಕ್ಕನ್ನು ನೀಡುತ್ತದೆ.
ಭಾರತದ ಸಂವಿಧಾನ 41, 45 ಮತ್ತು 46 ನೇ ವಿಧಿಗಳು ಮತ್ತು ರಾಜ್ಯ ನೀತಿಯ ನಿರ್ದೇಶನ ತತ್ವಗಳು ಎಲ್ಲಾ ನಾಗರಿಕರು ಉಚಿತ ಶಿಕ್ಷಣ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯಕ್ಕೆ ಸೂಚನೆ ನೀಡುತ್ತದೆ.
ಸಮಾನತೆಯ ಮೂಲಭೂತ ಹಕ್ಕು ಕಾನೂನಿನ ದೃಷ್ಟಿಯಲ್ಲಿ ಯಾರನ್ನೂ ಸ್ಥಾನಮಾನ, ಜಾತಿ, ಲಿಂಗ, ವರ್ಗ ಅಥವಾ ಪಂಥದ ಆಧಾರದ ಮೇಲೆ ತಾರತಮ್ಯ ಮಾಡಲಾಗುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ.  ಶಿಕ್ಷಣಕ್ಕೆ ಸಂಬಂಧಿಸಿದ ಅವಕಾಶಗಳು ಸೇರಿದಂತೆ ದೇಶದ ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸುತ್ತದೆ.
ನಮ್ಮ ಸಂವಿಧಾನದ ಪರಿಚ್ಛೇದ 21 (A) ಅನ್ನು 6-14 ವರ್ಷ ವಯಸ್ಸಿನ ಎಲ್ಲ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ನೀಡಲು ತಿದ್ದುಪಡಿ ಮಾಡಲಾಗಿದೆ. ಭಾರತೀಯ ಸಂವಿಧಾನದ 15, 17 ಮತ್ತು 46 ನೇ ವಿಧಿಗಳು ಸಮಾಜದ ದುರ್ಬಲ ವರ್ಗಗಳ ಶೈಕ್ಷಣಿಕ ಹಿತಾಸಕ್ತಿಗಳನ್ನು ಕಾಪಾಡುತ್ತದೆ.

ಸಂವಿಧಾನದ ಬಲದ ಜೊತೆಗೆ ಸರ್ಕಾರದ ಕೆಲ ನೀತಿ ನಿಯಮಗಳ ಅನುಷ್ಠಾನ ಸಹ ಸಾಕ್ಷರತೆ ಹೆಚ್ಚಾಗಲು ಕಾರಣವಾದವು.
ಅವುಗಳಲ್ಲಿ ಕೆಲವು ಉಲ್ಲೇಖ ಮಾಡುವುದಾದರೆ
ವಿದ್ಯಾರ್ಥಿಗಳು ಮತ್ತು ವಯಸ್ಕರನ್ನು ಅಧ್ಯಯನ ಮಾಡಲು ಪ್ರೋತ್ಸಾಹಿಸುವ ಸಲುವಾಗಿ ಸರ್ಕಾರವು ವಿವಿಧ ವಿದ್ಯಾರ್ಥಿವೇತನ ಪರೀಕ್ಷೆಗಳನ್ನು ನಡೆಸುತ್ತದೆ ಮತ್ತು ಶಾಲಾ ಸಮವಸ್ತ್ರ, ಪಠ್ಯಪುಸ್ತಕಗಳು ಮತ್ತು ಲೇಖನ ಸಾಮಗ್ರಿಗಳನ್ನು ಒದಗಿಸುತ್ತಿದೆ.
ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ, ಹಾಜರಾತಿ ಮತ್ತು ಉಳಿಸಿಕೊಳ್ಳುವಿಕೆಯನ್ನು ಸುಧಾರಿಸಲು ವಿದ್ಯಾರ್ಥಿಗಳಿಗೆ ಉಚಿತ ಆಹಾರ ಧಾನ್ಯವನ್ನು ಒದಗಿಸಲು ಸರ್ಕಾರವು 1995 ರಲ್ಲಿ ಮಧ್ಯಾಹ್ನದ ಊಟದ ಯೋಜನೆಯನ್ನು ಆರಂಭಿಸಿದೆ.
ಶಾಲಾ ಪರಿಣಾಮಕಾರಿತ್ವವನ್ನು ಸುಧಾರಿಸುವ ವಿಶಾಲ ಗುರಿಯೊಂದಿಗೆ ಸರ್ಕಾರವು  ಸರ್ವ ಶಿಕ್ಷಾ ಅಭಿಯಾನ್ , ಸಮಗ್ರ ಶಿಕ್ಷಾ ಕಾರ್ಯಕ್ರಮವನ್ನು ಆರಂಭಿಸಿತು.  ಇದನ್ನು ಶಾಲಾ ಶಿಕ್ಷಣ ಮತ್ತು ಸಮಾನ ಕಲಿಕೆಯ ಫಲಿತಾಂಶಗಳಿಗೆ ಸಮಾನ ಅವಕಾಶಗಳ ಆಧಾರದ ಮೇಲೆ ಜಾರಿಗೊಳಿಸಿದೆ.
ಶಿಕ್ಷಣದ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಅಭಿಯಾನಗಳನ್ನು ಆರಂಭಿಸಲಾಯಿತು.  ಅವರು ತಮ್ಮ ಮಕ್ಕಳನ್ನು ಶಾಲೆಗೆ ಹಾಜರಾಗಲು ಅಥವಾ ಕಳುಹಿಸಲು ಪ್ರೋತ್ಸಾಹಿಸಲಾಗಿದೆ.ಈಗ 2021 ಇಸವಿಯಲ್ಲಿ ಹೊಸ ಶಿಕ್ಷಣ ನೀತಿಯು ಜಾರಿ ಮಾಡುವ ಮೂಲಕ  ಉತ್ತಮ ಶಿಕ್ಷಣ ನೀಡಲು ಸರ್ಕಾರಗಳು ಪಣ ತೊಟ್ಟಿವೆ.

ಇಷ್ಟೆಲ್ಲಾ ಪ್ರಯತ್ನಗಳ ನಡುವೆ
ವಿಶ್ವದ 287 ಮಿಲಿಯನ್ ಅನಕ್ಷರಸ್ಥ ವಯಸ್ಕರಲ್ಲಿ ಭಾರತವು ಅತಿದೊಡ್ಡ ಜನಸಂಖ್ಯೆ ಹೊಂದಿದೆ.  ಇದು ಜಾಗತಿಕ ಒಟ್ಟು ಮೊತ್ತದ 37%. ಎಂಬುದು ಬೇಸರದ ಸಂಗತಿ
ಭಾರತದಲ್ಲಿ ಅನಕ್ಷರತೆಯು ದೇಶದಲ್ಲಿ ಸಾಮಾಜಿಕ ಮತ್ತು ಆರ್ಥಿಕ ವಿಭಜನೆಯ ಸಂಕೀರ್ಣ ಜಾಲದಿಂದಾಗಿ.  ಆರ್ಥಿಕ ಅಸಮಾನತೆಗಳು, ಲಿಂಗ ತಾರತಮ್ಯ, ಜಾತಿ ತಾರತಮ್ಯ ಮತ್ತು ತಾಂತ್ರಿಕ ಅಡೆತಡೆಗಳು ಭಾರತದಲ್ಲಿ ಅನಕ್ಷರತೆಗೆ ಕಾರಣವಾಗುತ್ತವೆ.  ಭಾರತವು ಅನಕ್ಷರಸ್ಥ ವಯಸ್ಕರಲ್ಲಿ ಅತಿದೊಡ್ಡ ಜನಸಂಖ್ಯೆಯನ್ನು ಹೊಂದಿದೆ, ಇದು ಭಾರತದ ಅನಕ್ಷರತೆಯ ಕೆಟ್ಟ ವೃತ್ತಕ್ಕೆ ಮತ್ತಷ್ಟು ಕೊಡುಗೆ ನೀಡುತ್ತದೆ.
ಅನಕ್ಷರತೆಯು ವ್ಯಕ್ತಿಯ ಜೀವನದ ಎಲ್ಲಾ ಕ್ಷೇತ್ರಗಳ ಮೇಲೆ ಪರಿಣಾಮ ಬೀರುತ್ತದೆ.  ಅನಕ್ಷರಸ್ಥ ವ್ಯಕ್ತಿಯು ಓದಲು ಮತ್ತು ಬರೆಯಲು ಸಾಧ್ಯವಿಲ್ಲ, ಮತ್ತು ಅದರ ಪರಿಣಾಮವಾಗಿ ಕೌಶಲ್ಯದ  ಕೆಲಸಕ್ಕೆ ಸೇರಲು  ಸಾಧ್ಯವಿಲ್ಲ .ತಿಳುವಳಿಕೆಯ ಕೊರತೆಯು ಅವರ ಮತ್ತು ಅವರ ಸಮುದಾಯದ ಮೇಲೆ ಪರಿಣಾಮ ಬೀರುತ್ತದೆ.  ಮುಂದೆ, ಅನಕ್ಷರಸ್ಥ ಪೋಷಕರ ಮಕ್ಕಳು ವಿದ್ಯಾವಂತ ಪೋಷಕರ ಮಕ್ಕಳಷ್ಟೇ ಶಿಕ್ಷಣವನ್ನು ಪಡೆಯುವುದಿಲ್ಲ.  ಅವರು ಒಂದೇ ಶಾಲೆಗೆ ಹೋದರೂ, ಅನಕ್ಷರಸ್ಥ ಪೋಷಕರ ಮಕ್ಕಳಿಗೆ ಶಿಕ್ಷಣ ಪಡೆದ ಪೋಷಕರು ತಮ್ಮ ಮಕ್ಕಳಿಗೆ ನೀಡುವ ರೀತಿಯ ಅರಿವು ಇರುವುದಿಲ್ಲ ಆದ್ದರಿಂದ, ಅನಕ್ಷರತೆಯು ಭಾರತದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ಮೇಲೆ ಪರಿಣಾಮ ಬೀರುವ ವಿಷವರ್ತುಲವಾಗುತ್ತದೆ.ಆದ್ದರಿಂದ
ಇಪ್ಪತ್ತೊಂದನೇ ಶತಮಾನದ ಈ ಪರ್ವ ಕಾಲದಲ್ಲಿ ಸಂವಿಧಾನದ ಆಶಯದಂತೆ ಸರ್ಕಾರಗಳು ಶಿಕ್ಷಣಕ್ಕೆ ಇನ್ನೂ ಒತ್ತು ನೀಡಬೇಕಿದೆ ಮುಂದುವರಿದ ದೇಶಗಳಂತೆ ಶಿಕ್ಷಣ ಕ್ಷೇತ್ರಕ್ಕೆ ಜಿ ಡಿ ಪಿ ಯ ಶೇಕಡಾ ಹತ್ತಕ್ಕೂ ಹೆಚ್ಚು ಹೂಡಿಕೆ ಮಾಡಿ ಶಿಕ್ಷಣ ಮತ್ತು ಗುಣಮಟ್ಟದ ಶಿಕ್ಷಣವನ್ನು ನೀಡಲು ಪ್ರಮಾಣಿಕ ಪ್ರಯತ್ನ ಮಾಡಬೇಕು .ಇದಕ್ಕೆ ಸಮುದಾಯ, ಶಿಕ್ಷಕರು ,ಮತ್ತು ಸಾರ್ವಜನಿಕರು ಹೆಗಲು ಕೊಟ್ಟು ನಿಲ್ಲಬೇಕಿದೆ.ಆಗ ಮಾತ್ರ ಸಾಕ್ಷರ ಭಾರತ ಜಾಗೃತ ಭಾರತವಾಗಿ ಮಾರ್ಪಾಡಾಗಿ ತನ್ಮೂಲಕ ಅಭಿವೃದ್ಧಿಯ ಪಥದೆಡೆಗೆ ಸಾಗುವುದು.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಸಮಾಜ ವಿಜ್ಞಾನ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ. ಕ್ಯಾತ್ಸಂದ್ರ
ತುಮಕೂರು
9900925529


06 September 2022

ಮೊರೆಯ ಆಲಿಸು

 ಮೊರೆಯ ಆಲಿಸು 


ಹೇ ದೇವಾದಿದೇವ  

ನಮ್ಮ ಮೊರೆಯ ಆಲಿಸು|

ಅತಿವೃಷ್ಟಿಯ ನಿಲ್ಲಿಸಿ

ಅಮೂಲ್ಯ ಜೀವಗಳ ಉಳಿಸು ||



ಸಿಹಿಜೀವಿ 


ನಮ್ಮ ಎಮ್ಮೆ ನಮ್ಮ ಹೆಮ್ಮೆ


 ನಾನಾಗ ಎಂಟನೇ ತರಗತಿಯಲ್ಲಿ ಓದುತ್ತಿದ್ದೆ.

ನಮ್ಮಮ್ಮ ಗ್ರಾಮೀಣ ಬ್ಯಾಂಕ್ ನಲ್ಲಿ ಸಾಲ ಮಾಡಿ ಒಂದು ಕರೆಯುವ ಎಮ್ಮೆ ತಂದಿದ್ದರು.  ಹಾವೇರಿ ಕಡೆಯಿಂದ ತಂದ  ಮುರಾ ತಳಿಯ ಎಮ್ಮೆ ಅಂದು ನಮ್ಮ ಊರಿನ ಪ್ರಮುಖ ಆಕರ್ಷಣೆಯಾಗಿತ್ತು. ಅದೇ ಮೊದಲ ಬಾರಿಗೆ ಅಂತಹ ಎಮ್ಮೆ ನೋಡಿದ ನಮ್ಮೂರ  ಜನರು ಎಮ್ಮೆಯ ಬಣ್ಣ, ಮೈಕಟ್ಟು, ಕೆಚ್ಚಲು, ಕೊಂಬು ಹೀಗೆ ಅದರ ವಿಶೇಷಣಗಳನ್ನು ವರ್ಣಿಸುವಾಗ ನನಗೆ ಹೆಮ್ಮೆ!  ಅದಕ್ಕೆ ಆಗಾಗ ಹೇಳುತ್ತಲೇ ಇದ್ದೆ ನಮ್ಮನೆಯ ಎಮ್ಮೆ ನಮ್ಮ ಹೆಮ್ಮೆ! 

ಯಾವ ಮಟ್ಟಿಗೆ ನಮ್ಮ ಎಮ್ಮೆಯ ಪ್ರಖ್ಯಾತಿ ಹೆಚ್ಚಾಯಿತೆಂದರೆ ಉಪ್ಪರಿಗೇನಹಳ್ಳಿ ,ಕೆರೆಯಾಗಳ ಹಳ್ಳಿ ಮುಂತಾದ ಹಳ್ಳಿಗಳ ಜನ ಬಂದು ನಮ್ಮ ಎಮ್ಮೆಯ ದರ್ಶನ ಪಡೆದು ಮೆಚ್ಚುಗೆ ಸೂಚಿಸಿ ಹೋಗುತ್ತಿದ್ದರು.ಇದರ ಪರಿಣಾಮ ಎಮ್ಮೆಗೆ ಕಣ್ಣಾಸರ ಆಗಿ ಒಂದೇ ಸಮನೆ ಭೇದಿ ಶುರುವಾಯಿತು. ಅಮ್ಮ ಒಂದು ಒಣಗಿದ  ತೆಂಗಿನ ಚಿಪ್ಪನ್ನು ಕೊರಳಿಗೆ ಕಟ್ಟಿ ,ಒಂದನ್ನು ಅದರ ತಲೆಗೆ ನೇವಳಿಸಿ ಮೂರು ಹಾದಿ ಕೂಡೋ ಜಾಗದಲ್ಲಿ ಸುಟ್ಟರು. ಅದು ಸುಡುವಾಗ ಕಟಿ ಕಟಿ  ಸದ್ದು ಕೇಳಿ" ನೋಡು ಎಮ್ಮೆಗೆ ಶ್ಯಾನೆ ಕಣ್ಣಸರ ಅಗೈತೆ" ಎಂದರು. 


ಕೂಲಿಯ ಕೆಲಸದ ಜೊತೆಯಲ್ಲಿ ಅಮ್ಮ ಎಮ್ಮೆಯನ್ನು ಸಂಬಾಳಿಸಬೇಕಿತ್ತು .ರಜೆ ಇದ್ದಾಗ ನಾನೂ ಎಮ್ಮೆಯ ಮೇಯಿಸಲು ಹೋಗುತ್ತಿದ್ದೆ. ಇದರ ಜೊತೆಗೆ ನನಗೆ ಎಮ್ಮೆ ಬಂದಾಗಿನಿಂದ ಹೆಚ್ಚುವರಿ ಕೆಲಸ ಶುರುವಾಯಿತು. ಬೆಳಿಗ್ಗೆ ಬೇಗ ಎದ್ದು ಸಗಣಿ ಬಾಸಿ ಕಸ ಹೊಡೆದು ಓದಲು ಕೂರಬೇಕಿತ್ತು. ಹುಲ್ಲುಗಾಲದಲ್ಲಿ ಹುಲ್ಲು ತರಲು ನಮ್ಮ. ಮನೆಯ ಮುಂದಿನ ಕಂಚಮಾಮ, ನಾಗತ್ತೆ ಮುಂತಾದವರ ಕೂಡಿಕೊಂಡು ರಾತ್ರಿ ನಾಲ್ಕುವರೆ ಐದು ಗಂಟೆಗೆ ಎದ್ದು ಕುಡುಗೋಲು ಹಗ್ಗ ತೆಗೆದುಕೊಂಡು ಸುಮಾರು ಐದು ಕಿಲೋಮೀಟರ್ ನಡೆದು ಹುಲ್ಲು ತರುತ್ತಿದ್ದೆವು . ಕೆಲವೊಮ್ಮೆ ಹೊಲದ ಮಾಲಿಕರ ಬೈಗುಳ ಸಹ ಕೇಳಿದ್ದಿದೆ. ಹೊಂಬಾಳೆ ಹುಲ್ಲು, ಗಂಟಿಗನ ಹಲಬು ಮುಂತಾದ ಹುಲ್ಲು ಕಿತ್ತು ದೇವರ ಅಲಂಕಾರದಂತೆ ಹೊರೆ ಕಟ್ಟಿ ತಲೆ ಮೇಲೆ ಹೊತ್ತು ನಡೆದು ಮನೆ ಸೇರುತ್ತಿದ್ದೆವು. ಮೊದ ಮೊದಲು ನಮ್ಮ  ಎಮ್ಮೆಯ ಹಾಲಿಗೆ ಬಹಳ ಡಿಮಾಂಡ್ ಇತ್ತು ಒಂದು ವಾರದ ನಂತರ ಗೊತ್ತಾಯಿತು ಹಾಲಿನ ಬಾಕಿ ಹಣ ಕೇಳಿದಾಗ ಅದೇ ಜನ ಕುರಿ ಹಟ್ಟಿಯ ಕಡೆ ಮುಖ ಮಾಡಿದ್ದರು .ಅದಕ್ಕೆ ಅಮ್ಮ ಒಂದು ಉಪಾಯ ಮಾಡಿ ಉಪ್ಪರಿಗೇನಹಳ್ಳಿಯ ರುದ್ರಣ್ಣನವರ ಹೋಟೆಲ್ ಗೆ ನಮ್ಮ ಹಾಲು ಮಾರಲು ತೀರ್ಮಾನ ಮಾಡಿ ಪ್ರತಿದಿನ ಬೆಳಿಗ್ಗೆ ನಾನೇ ಹಾಲು ಕರೆದು ಹೋಟೆಲ್ ಗೆ ಕೊಡುವ ಹೊಸ ಜವಾಬ್ದಾರಿ ವಹಿಸಿದರು. ಬೆಳಿಗ್ಗೆ ಎದ್ದು  ಸ್ಟೀಲ್  ಚೊಂಬಿನಲ್ಲಿ  ಹಾಲು  ಕರೆದು ಅದೇ ಒಂದು ಲೀಟರ್  ಸ್ಟೀಲ್ ಚೊಂಬನ್ನು ಹಿಡಿದು  ಉಪ್ಪರಿಗೇನಹಳ್ಳಿಯ ಹೋಟೆಲ್ ಗೆ ಹೋಗಿ ಹಾಲು ಹಾಕಿ ಹಣ  ಪಡೆದು ಮನೆಗೆ ಬಂದು ಊಟ ಮಾಡಿ ಮತ್ತೆ ಮತ್ತೆ ಪುಸ್ತಕ ಜೋಡಿಸಿಕೊಂಡು ಪುನಃ ಗೆಳೆಯರ ಜೊತೆಯಲ್ಲಿ ಉಪ್ಪರಿಗೇನಹಳ್ಳಿಯ ಹಾದಿ ಹಿಡಿಯುತ್ತಿದ್ದೆ.ನನ್ನ ಜೊತೆಗೆ ರಾಗಿ ಮುದ್ದೆ ಮತ್ತು ಸಾರಿನ ಸ್ಟೀಲ್ ಕ್ಯಾರಿಯರ್ ಕೂಡಾ ಇರುತ್ತಿತ್ತು! ಇಂದು ಪತ್ರಿಕೆಯಲ್ಲಿ ಹಾಲು ಉತ್ಪಾದನೆಯಲ್ಲಿ ಭಾರತ ನಂಬರ್ ಒನ್ ಎಂಬ ಸುದ್ದಿ ಓದಿದಾಗ ನಾನು ಕೂಡಾ ಒಂದು ಕಾಲದಲ್ಲಿ ಹಾಲು ಉತ್ಪಾದಕ ಮತ್ತು ಸರಬರಾಜದಾರ ಎಂಬುದನ್ನು ನೆನೆದು ಎಮ್ಮೆ ಅಲ್ಲಲ್ಲ ಹೆಮ್ಮೆ ಆಯಿತು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


05 September 2022

ಶಿವಾನಂದಪ್ಪ ಮಾಸ್ಟರ್


 



#ಶಿವಾನಂದಪ್ಪ ಮಾಸ್ಟರ್ 


ಪ್ರಾಥಮಿಕ ಶಾಲೆಯಲ್ಲಿ ತಿಪ್ಪೇಶಪ್ಪ ಗುರುಗಳು ನನ್ನ ಮೇಲೆ ಹೆಚ್ಚು ಪ್ರಭಾವ ಬೀರಿದರು .ನನ್ನ ಶಿಕ್ಷಣ ಮತ್ತು ಕಲೆಗಳಿಗೆ ಪ್ರೋತ್ಸಾಹ ನೀಡಿದರು.ಅವರ ಬಗ್ಗೆ ಈಗಾಗಲೇ ಹಲವಾರು ಬಾರಿ ಮಾತನಾಡಿದ್ದೇನೆ. ಪ್ರೌಢಶಾಲೆಯಲ್ಲಿ ಉಪ್ಪೇರಿಗೇನ ಹಳ್ಳಿಯಲ್ಲಿ ಓದುವಾಗ ಶಿವಾನಂದಪ್ಪ ಮಾಸ್ಟರ್ ನನಗೆ ಮೆಚ್ಚಿನ ಶಿಕ್ಷಕರಾಗಿದ್ದರು.ಅವರು ನಮಗೆ ಸಮಾಜ ವಿಜ್ಞಾನ ಪಾಠವನ್ನು ಮಾಡುತ್ತಿದ್ದರು. (ನಾನೂ ಈಗ ಸಮಾಜ ವಿಜ್ಞಾನ ಶಿಕ್ಷಕ ಎನಿಸಿಕೊಳ್ಳಲು ಹೆಮ್ಮೆ ಇದೆ) ತರಗತಿಯ ಒಳಗೆ ಬಂದೊಡನೆ ನಮ್ಮ ನಮಸ್ಕಾರ ಸ್ವೀಕರಿಸಿ ಒಂದು ನಗೆ ಬೀರಿ ಪುಸ್ತಕ ತೆಗೆದುಕೊಂಡು ಬ್ಲಾಕ್ ಬೋರ್ಡ್ ನ ಮೂಲೆಯಲ್ಲಿ ಚಿಕ್ಕದಾಗಿ ಅವರಿಗೆ ಗೊತ್ತಾಗುವ ಹಾಗೆ ಏನೋ ಬರೆದುಕೊಳ್ಳುತ್ತಿದ್ದರು. ನಂತರ ಪುಸ್ತಕ ಮುಚ್ಚಿಟ್ಟು ಪಾಠ ಶುರುಮಾಡಿದರೆ  ಗಂಗರು ,ಕದಂಬರು, ರಾಷ್ಟ್ರಕೂಟ ಅರಸರು ನಮ್ಮ ತರಗತಿಯಲ್ಲಿ ಬಂದು ಬಿಡುತ್ತಿದ್ದರು. ಅಭಿನಯದ ಮೂಲಕ ಮಾಡುವ ಅವರ ಬೋಧನೆ ನೋಡುವಾಗ ಸಿನಿಮಾ ನೋಡಿದಂತೆ ಭಾಸವಾಗುತ್ತಿತ್ತು.  ಆದರೆ ಅವರ  ಪಾಠದ ಮಧ್ಯ ಯಾರಾದರೂ ಮಾತನಾಡಿದರೆ ಅಷ್ಟೇ ಅವರ ದೂರ್ವಾಸ ಮುನಿಯ ರೂಪ ಪ್ರಕಟವಾಗಿಬಿಡುತ್ತಿತ್ತು. ಅವರ ಪೀರಿಯಡ್ ನ ನಲವತ್ತು  ನಿಮಿಷ ಹೇಗೆ ಕಳೆಯಿತು ಎಂಬುದೇ ಗೊತ್ತಾಗುತ್ತಿರಲಿಲ್ಲ .   ಮುಂದಿನ ತರಗತಿಯ ಶಿಕ್ಷಕರು ಬಂದು ಒಮ್ಮೆ ಬಾಗಿಲಲ್ಲಿ ಇಣುಕಿದಾಗ ಅವರ ನೋಡಿ ನಗುತ್ತಾ ಅಂದಿನ ಪಾಠ ಮುಗಿಸುತ್ತಿದ್ದರು. ಅವರು ಪಾಠ ಮಾಡುವಾಗ ಮುಖ್ಯಾಂಶಗಳನ್ನು ರಫ್ ನೋಟ್ ನಲ್ಲಿ ಗುರುತು  ಹಾಕಿಕೊಳ್ಳಲು ಸೂಚನೆ ನೀಡುತ್ತಿದ್ದರು. ಅದರ ಆಧಾರದ ಮೇಲೆ ಪ್ರಶ್ನೆಗಳನ್ನು ನೀಡಿ ಮನೆಯಲ್ಲಿ ಬರೆಯಲು ಹೇಳುತ್ತಿದ್ದರು .ನಾವು ಬರೆದ   ಉತ್ತರ

ಗಳನ್ನು ತಿದ್ದುವಾಗ ನಮ್ಮ ಉತ್ತರದ ಆಧಾರದ ಮೇಲೆ ಅವರು ಫೀಡ್ ಬ್ಯಾಕ್ ಬರೆಯುತ್ತಿದ್ದರು. ಉತ್ತರ ಸಾದಾರಣವಾಗಿದ್ದರೆ "ಸೀನ್ " ಎಂದು , ಪರವಾಗಿಲ್ಲ ಎನಿಸಿದರೆ "ನೋಡಿದೆ" ಎಂದು, ಇನ್ನೂ ಸ್ವಲ್ಪ ಚೆನ್ನಾಗಿದ್ದರೆ "ಪರಿಶೀಲಿಸಿದೆ" ಎಂದು  , ತಪ್ಪು ಇಲ್ಲದೆ ಉತ್ತಮ ಬರವಣಿಗೆ ಮತ್ತು ಉತ್ತರ ಇದ್ದರೆ "ಅತ್ಯುತ್ತಮ" ಎಂದು ಬರೆದು ಸಹಿ ಹಾಕುತ್ತಿದ್ದರು. ನನ್ನ ಪುಸ್ತಕದಲ್ಲಿ ಪರಿಶೀಲಿಸಿದೆ ಮತ್ತು ಅತ್ಯುತ್ತಮ ಎಂಬ ಅವರ ಬರಹ ಹೆಚ್ಚು ಇದ್ದದ್ದು ನನಗೆ ಹೆಮ್ಮೆ ನನ್ನ ಸಹಪಾಠಿಗಳ ಹೊಟ್ಟೆ ಉರಿಗೂ ಕಾರಣವಾಗಿತ್ತು. ಅಂದು ಹೈಸ್ಕೂಲಿನಲ್ಲೇ  ಶಿಕ್ಷಕರ ಮಾರ್ಗದರ್ಶನದಲ್ಲಿ ನಾವೇ ನೋಟ್ಸ್ ತಯಾರಿಸಿ ಓದಿದ್ದು ನಮಗೆ ಹೆಮ್ಮೆ ಇದೆ .ಪ್ರಸ್ತುತ ಮಕ್ಕಳಿಗೆ ನಾವೇ ನೋಟ್ಸ್ ಮಾಡಿ ನೀಡಿ ಓದಲು ಹೇಳಿದರೆ ನಾವೇ ಓದಿ ಪರೀಕ್ಷೆ ಬರೆಯುವುದೊಂದು ಬಾಕಿ ಇದೆ. ನಾನು ಹತ್ತನೇ ತರಗತಿಗೆ ಯರಬಳ್ಳಿಗೆ ಓದಲು ನನ್ನ ಅಮ್ಮ ತೀರ್ಮಾನ ತೆಗೆದುಕೊಂಡು ಟಿ ಸಿ ಪಡೆಯಲು ಹೋದಾಗ ಇವನು ಚೆನಾಗಿ ಓದ್ತಾನೆ ಇಂತ ಒಳ್ಳೆಯ ಹುಡಗನ್ ಟಿ ಸಿ ನಾವ್ ಕೊಡಲ್ಲ ಕಣಮ್ಮ ಎಂದು ಅವರು ಹೇಳಿದ ಮಾತು ಕೇಳಿ ನನ್ನ ಅಮ್ಮನ ಕಣ್ಣಲ್ಲಿ ನೀರು ಜಿನುಗಿತ್ತು. ಇಂದು ಶಿಕ್ಷಕರ ದಿನ ಶಿಕ್ಷಕನಾಗಿ ನಮ್ಮ ಶಿವಾನಂದಪ್ಪ ಮಾಸ್ಟರ್ ನೆನಪಾದರು .  ನೀವೀಗ ಎಲ್ಲಿದ್ದೀರೋ ಗೊತ್ತಿಲ್ಲ ಸರ್.  ಹ್ಯಾಪಿ  ಟೀಚರ್ಸ್ ಡೇ ಸರ್ .


ಸಿಹಿಜೀವಿ 

ಸಿ ಜಿ ವೆಂಕಟೇಶ್ವರ

ತನಗ ೪

 

 ಗುರು 

ದಾರಿ ತೋರುವ ಗುರು

ತಮವ ಕಳೆಯುವ 

ಬ್ರಹ್ಮ ವಿಷ್ಣು ಶಿವರು

ವಿದ್ಯಾದಾತರು ಗುರು


ಸಿಹಿ ಜೀವಿ 








02 September 2022

ನಾವೆ

 


#ನಾವೆ 


ಅತಿಯಾದ ಮಳೆ 

ಅತಿಯಾದ ತಾಪಮಾನ

ಮುಳುಗುತಿದೆ ಬಾಳ ನಾವೆ |

ಇದಕೆ ಕಾರಣ ಪ್ರಕೃತಿಯಾ?

ಅವರ ? ಇವರ? 

ಬೇರಾರೂ ಅಲ್ಲ ನಾವೆ ||


#ಸಿಹಿಜೀವಿಯ_ಹನಿ 

ನೀನೇ ಪ್ರಪಂಚ


 


#ನೀನೇಪ್ರಪಂಚ


ಸದಾ ನಿನ್ನದೇ ಚಿತ್ರ

ಬಿಡಿಸುತಿದೆ ನನ್ನ ಮನದ ಕುಂಚ |

ಇನ್ನೇನು ಪುರಾವೆ ಬೇಕು?

ಹೇಳಲು ನೀನೇ ನನ್ನ ಪ್ರಪಂಚ ||


#ಸಿಹಿಜೀವಿಯ_ಹನಿ 

01 September 2022

ತನಗ

 


ತನಗ ೨


ಬರೀ ಅನ್ನ  ವರ್ಜಿಸಿ 

ಸಿರಿ ಧಾನ್ಯ ಸೇವಿಸಿ

ಪೌಷ್ಟಿಕತೆ ಗಳಿಸಿ 

ಅರೋಗ್ಯವ ಅರ್ಜಿಸಿ


ಸಿಹಿಜೀವಿ 

ಸಿ ಜಿ ವೆಂಕಟೇಶ್ವರ