13 May 2021

ಆದರ್ಶ ರೈತ .ಕಥೆ


 


ಕಥೆ

ಆದರ್ಶ ರೈತ

ಆರು ತಿಂಗಳಿಗೋ ಮೂರು ತಿಂಗಳಿಗೋ ಒಂದೋ ಎರಡೋ ಕಾರು ಬಂದರೆ ,ಆ ಕಾರಿನ ಹಿಂದೆ ದೂಳಿನ ಜೊತೆಗೆ ಓ .... ಎಂದು ಸಂತಸದಿ ಕೇಕೇ...ಹಾಕಿ ಓಡುತ್ತಿದ್ದರು ಆ ಹಳ್ಳಿಯ ಮಕ್ಕಳು.

ಅಂದು ಸೋಮವಾರ ಕೆಂಪು ಬಣ್ಣದ ಕಾರೊಂದು ಹಳ್ಳಿಗೆ  ಆಗಮಿಸಿತು ,ಕಾರಿನ ಸದ್ದಿಗಿಂತ ಊರ ಹುಡುಗರ ದ್ದಿನಿಂದಲೇ ಊರವರಿಗೆ ಅರ್ಥವಾಯಿತು ,ಊರಿಗೆ ಯಾವುದೋ ಕಾರು ಬಂದಿದೆ ಎಂದು.

"ಇಲ್ಲಿ ಸತೀಶ್ ಅವರ ಮನೆ ಎಲ್ಲಿ? "
ಕಪ್ಪನೆಯ ಕನ್ನಡಧಾರಿ ಕಾರಿನಿಂದ ಇಳಿದು , ಮುಖಕ್ಕೆ ಮುತ್ತುತ್ತಿದ್ದ  ಕೆಂಧೂಳನ್ನು  ಎಡಗೈಯಿಂದ ಬೀಸಿಕೊಳ್ಳುತ್ತಾ ಕೇಳಿದರು.

"ಯಾವ ಸತೀಸಾ? ಸ್ವಾಮಿ .
ಭೂದೇವಮ್ಮನ ಮಗ ಸತೀಸಾನಾ?..
ವಡ್ಡರ ಸತೀಸಾನ? ಮ್ಯಾಗಳ್ ಮನೆ ಸತೀಸನಾ?" ಹಲ್ಕಿರಿಯುತ್ತಾ , ಎಲೆ ಅಡಿಕೆಯಿಂದ ಕೆಂಪಾದ ಹಲ್ಲುಗಳ ದರ್ಶನ  ಮಾಡಿಸುತ್ತಾ  ಪ್ರಶ್ನೆ ಹಾಕಿದ ವ್ಯಕ್ತಿಗೇ ಮರುಪ್ರಶ್ನೆ ಹಾಕಿದ ಆನಂದ.

" ಅದೇ ರೀ ನಿಮ್ ಊರಾಗೆ ರೇಷ್ಮೆ ಬೆಳೆ ಇದೆಯಲ್ಲ ಆ ಸತೀಶ್ "

"ಓ... ಅಂಗನ್ನಿ , ನಮ್ ಭೂದೇವಮ್ಮನ ಮಗ ಸತೀಸ ನಾ? ಬರ್ರೀ... ಇಲ್ಲೇ ನಮ್ಮೂರ್  ಇಸ್ಕೂಲ್ ಹಿಂದಿನ ಮನೆ  , " ಎಂದು ಆ ವ್ಯಕ್ತಿಗಳನ್ನು ಭೂದೇವಮ್ಮನ ಮನೆ ಕಡೆ ಕರೆದುಕೊಂಡು ಹೋದ .

ಕೆಲವೊಮ್ಮೆ ಆ ಊರಿಗೆ ಕಾರು, ಜೀಪು ಬಂದರೆ ಜನರು ಭಯಭೀತರಾಗುತ್ತಿದ್ದರು ಕಾರಣ ಪಿ ಎಲ್ಡಿ ಬ್ಯಾಂಕ್ ನವರು ಸಾಲ ವಸೂಲಿ ಮಾಡಲು ಬಂದು, ಕೆಲವೊಮ್ಮೆ ಸಾಲ ಪಡೆದವರ ಮನೆಯಲ್ಲಿ ಇರುವ ಪಾತ್ರೆ ,ಪಗಡ, ಸಾಮಾನುಗಳನ್ನು ಜಪ್ತೀ ಮಾಡಿಕೊಂಡು ಹೊರಡುತ್ತಿದ್ದರು, ಬಹುತೇಕ ರೈತಾಪಿ ಜನರ ಊರಲ್ಲಿ, ಕೆಲವರು ಸಾಲ ಮಾಡಿ ತೀರಿಸಲು ಆಗದಿದ್ದಾಗ ,ಯಾವುದೇ ಕಾರು ಜೀಪು ಬಂದರೆ ಅದು ಸಾಲ ವಸೂಲಿ ಮಾಡುವ ಜೀಪು, ಎಂದು ಎದೆಯಲ್ಲಿ ಅಕ್ಕಿ ಕುಟ್ಟಿದ ಅನುಭವ, ಮೊದಲ ಸಾಲ ತೀರಿಸದೇ ನೊಂದ ರೈತಾಪಿ ಮಕ್ಕಳು, ಈ ಬ್ಯಾಂಕ್ ನವರು ಮನೆ ಬಳಿ ಬಂದು ರಾಧ್ದಾಂತ ಮಾಡಿ, ಇದ್ದ ಬದ್ದ ಸಾಮಾನುಗಳನ್ನು ಜಪ್ತೀ ಮಾಡಿದಾಗ ಎಷ್ಟೋ ರೈತರು ಅವಮಾನ ತಾಳದೇ ನೇಣಿಗೆ ಶರಣಾದ ಉದಾಹರಣೆ ಗಳೂ ಉಂಟು.  

ಕನ್ನಡಕ ದಾರಿ ವ್ಯಕ್ತಿ ಯ ಜೊತೆಯಲ್ಲಿ ನಾಲ್ಕೈದು ವ್ಯಕ್ತಿಗಳು ತಮ್ಮ ಮನೆ ಕಡೆ ಬರುವುದ ನೋಡಿ , ಭೂದೇವಮ್ಮನಿಗೆ ಜೀವ ಹೋದಂತಾಯಿತು, ಮನದಲ್ಲೇ ಮಗನನ್ನು ಶಪಿಸಲು ಆರಂಭಿಸಿದರು ,

"ಬ್ಯಾಡ ಕಣಪ್ಪ ನಮಗೆ ನೀರಾವರಿ ಸವಾಸ, ಬರೇ ಬೆದ್ಲೇ ಸಾಕು, ಏನೋ ಭಗವಂತ ಎಲ್ಡೊರ್ಸ ಸೆನಾಗಿ ಬೆಳೆ ಕೊಟ್ಟದಾನೆ, ಅಂದ್ರೆ ಕೇಳ್ದಂಗೆ ,ನಿಗಿರ್ಕೆಂಡ್ ಪಿ ಎಲ್ಡಿ ಬ್ಯಾಂಕ್ ನಾಗೆ ಸಾಲ ಮಾಡಿ ಬೋರ್ ಕೊರ್ಸಿ ಅದೆಂತದೋ ರೇಷ್ಮೆ ಹಾಕಿದ , ಈಗ ನೋಡು ಸಾಲ ಕೇಳಾಕೆ ಬರ್ತದಾರೆ, ಸಿಕ್ ವಯಸ್ಸಲ್ಲೇ  ಗಂಡುನ್ ಕಳ್ಕಂಡ್ರು, ಕೂಲಿ ನಾಲಿ ಮಾಡಿ ,ಹೊಟ್ಟೆ ಬಟ್ಟೇ ಕಟ್ಟಿ , ಮಕ್ಕಳನ್ ದೊಡ್ಡೋರ್ ಮಾಡಿ, ಎಲ್ಲಾರ್ತಾವ ಸೈ ಅನಿಸ್ಕೆಂಡಿದ್ದೆ , ಈಗ   ಈಸ್ ದಿನ ಕಾಪಾಡ್ಕೆಂಡು ಬಂದ ಮಾನ ಮಾರ್ಯಾದೆ ಹರಾಜಾಗೋ ಅಂಗಾತಲ್ಲಪ್ಪ ,ಮೂಡ್ಲಗಿರಿ ತಿಮ್ಮಪ್ಪ ,ಈಗ ನಾನೇನು ಮಾಡ್ಲಿ? ಎಂದು ಬೇಸರದಿ ನಿಂತರು ಭೂದೇವಮ್ಮ.

" ಸತೀಶ್ ಅವರ ಮನೆ ಇದೇ ಏನಮ್ಮ,"

" ಹೂಂ ..ಕಣ್ಸಾಮಿ, ನಾನು ಅವ್ರ ಅಮ್ಮ, ಸತೀಸಾ ತೋಟುಕ್ ಹೋಗಿದಾನೆ ಯಾಕ್ ಸಾಮಿ"

"ಹತ್ರಿ ಕಾರು, ನೀವೂ ತೋಟಕ್ಕೆ ಹೋಗೋಣ " ಅಂದರು ಅಧಿಕಾರಿ

ಮತ್ತೆ ಭಯಭೀತರಾದ ಭೂದೇವಮ್ಮ, ಸಂಗೇನಹಳ್ಳಿಯಲ್ಲಿ ಸಾಲ ಕಟ್ಟಲು ತಕರಾರು ಮಾಡಿ ಗಲಾಟೆ ಮಾಡಿದ  ಸಂಗಪ್ಪನನ್ನು ಕಾರಲ್ಲಿ ಕೂರಿಸಿಕೊಂಡು ಪೋಲೀಸ್ ಸ್ಟೇಷನ್ ಗೆ ಕರೆದುಕೊಂಡು ಹೋಗಿದ್ದ ವಿಷಯವನ್ನು ಮುಂದಿನ ಮನೆ  ನಾಗಮ್ಮ ಹೋದ ವಾರ ಹೇಳಿದ್ದು ನೆನೆದು
ಮತ್ತೂ ಭಯವಾಯಿತು.

"ಯಾಕೆ ಸಾಮಿ, ನಾನು ಕಾರು ಗೀರು ಹತ್ತಲ್ಲ, " ಎಂದು ಅಳುಕುತ್ತಲೇ ಹೇಳಿದರು .

"ಅದೇನ್ ಇಸ್ಯ ,ಹೇಳ್ರೀ ಸಾರ್, ಪಾಪ ಆ ಹೆಣ್ಣೆಂಗ್ಸು ಭಯ ಬೀಳ್ತೈತೆ , ನೀವು ನೋಡಿದ್ರೆ ಕಾರ್ ಹತ್ತು ಅಮ್ತೀರಾ, ಯಾಕೆ , ಏನು ಎತ್ತ, " ಎಂದು ಕುರಿ ಹಟ್ಟಿಯ ಕಡೆ ಕುರಿಮರಿಗಳಿಗೆ ಮೇವು ಹಾಕಲು ಹೊರಟ ಲಿಂಗಣ್ಣ ಮೇವು ಆ ಕಡೆದು ಎಸೆದು ಭೂದೇವಮ್ಮನ ಮನೆಯ ಕಡೆ ಬಂದು ನಿಂತು ಕೇಳಿದ.
ಭೂದೇವಮ್ಮನಿಗೆ ಸ್ವಲ್ಪ ಧೈರ್ಯ ಬಂತು.

"ಯಜಮಾನ್ರೇ ನಾವು ಬಬ್ಬೂರು ಕೃಷಿ ಸಂಶೋಧನಾ ಕೇಂದ್ರದಿಂದ ಬಂದಿದಿವಿ, ನಿಮ್ ಊರ ಸತೀಶ್ ಅವ್ರಿಗೆ , ಈ ವರ್ಷದಲ್ಲಿ ಬೆಳೆದ ರೇಷ್ಮೆ ಬೆಳೆಗೆ ಜಿಲ್ಲಾ ಅತ್ಯುತ್ತಮ ಕೃಷಿಕ ಎಂಬ ಬಹುಮಾನ ಬಂದಿದೆ ಮತ್ತು ರಾಜ್ಯ ಮಟ್ಟದ ಬಹುಮಾನಕ್ಕೆ ಇವರ ಹೆಸರನ್ನು ಶಿಪಾರಸ್ಸು ಮಾಡಿದ್ದೇವೆ " ಎಂದಾಗ ಬಾಳ ಒಳ್ಳೆ ಸುದ್ದಿ ಸಾರ್ ,ಎಂದು ಲಿಂಗಣ್ಣ ಹೇಳುವಾಗಲೇ  ಭೂದೇವಮ್ಮನಿಗೆ ಹೋದ ಜೀವ ಬಂದಂತಾಗಿ  ಮನೆಯ ದೇವರ ಕೋಣೆಗೆ ಹೋಗಿ " ತಿರುಪತಿ ತಿಮ್ಮಪ್ಪ ನೀನು ದೊಡ್ಡಾನು ಕಣಪ್ಪ" ಎಂದು ಕೈಮುಗಿದು ,ಮನೆಯ ಹೊರಗೆ ಬಂದರು.
"ಈಗ ಬರ್ತೀರಲ್ಲ ಬನ್ನಿ ನಿಮ್ಮ ತೋಟ ತೋರ್ಸಿ ಅಮ್ಮ‌...
ಇನ್ನೂ ಒಂದ್ ಸೀಟ್ ಖಾಲಿ ಇದೆ ನೀವೂ ಬರಬಹುದು" ಎಂದು ಲಿಂಗಣ್ಣನಿಗೆ ಆ ಅಧಿಕಾರಿ  ಹೇಳಿದ್ದೆ ತಡ
"ಲೇ ಪಾತಲಿಂಗ.... ನಮ್ ಕುರಿಯಟ್ಟಿತಾಕೋಗಿ ಆ ಸೊಪ್ಪು ಮರಿಗೆ ಹಾಕಲೆ" ಎಂದು  ತನ್ನ ಮಗನಿಗೆ ಹೇಳಿ ಕಾರು ಹತ್ತಿಯೇ ಬಿಟ್ಟ.
ಕೆಂಧೂಳಿನೊಂದಿಗೆ ಕಾರು ಚಲಿಸಿದಾಗ ಮತ್ತೆ ಮಕ್ಕಳು ಓ... ಎಂದು ಕಾರಿನ ಹಿಂದೆ ಓಡಿದರು.

ಮನೆಯಿಂದ ಎರಡು ಕಿಲೋಮೀಟರ್ ದೂರ ಇರುವ ತೋಟದ ಕಡೆ ಕಾರು ಚಲಿಸಿತು ಕಲ್ಲು ಮಣ್ಣಿನ ರಸ್ತೆಯಲ್ಲಿ , ಕಾರಿನಲ್ಲಿ ಕುಳಿತವರು ತಾವೆ ತಾವಾಗಿ ಮೈ ಕುಣಿಸುತ್ತಿರುವರೋ ಎಂಬಂತೆ ಕಾರ್ ಇವರನ್ನು ಕುಣಿಸುತ್ತಿತ್ತು ,ತೋಟ ಬರುವವರೆಗೂ ಲಿಂಗಣ್ಣ  ಅಧಿಕಾರಿಗಳಿಗೆ ಸತೀಶನ ಸದ್ದುಣಗಳ ಬಗ್ಗೆ  ವರ್ಣನೆ ಮಾಡುತ್ತಲೇ ಇದ್ದರು, ಭೂದೇವಮ್ಮ ಒಳಗೊಳಗೇ ಹೆಮ್ಮೆ ಪಡುತ್ತಿದ್ದರು.

ಸಲಿಕೆ ಹಿಡಿದು  ರೇಷ್ಮೆ ತೋಟಕ್ಕೆ ನೀರು ಹರಿಸುತ್ತಿದ್ದ ಸತೀಶ್ , ತನ್ನ ಹೊಲದ ಕಡೆ ಕಾರು ಬರುತ್ತಿರುವುದನ್ನು
ದೂರದಿಂದಲೇ ನೋಡಿದ, ಅಚ್ಚರಿ ಮತ್ತು ಕುತೂಹಲದಿಂದ ರಸ್ತೆಯ ಕಡೆಗೆ ಬಂದ, ಕಾರು ತನ್ನ ತೋಟದ ಬಳಿ ನಿಂತಿತು ,ಕಾರಿನಿಂದ ಪ್ಯಾಂಟ್ ಶರ್ಟ್ ಧಾರಿಗಳು ಇಳಿದರು, ಅವರ ಜೊತೆ ತನ್ನ ತಾಯಿ ಭೂದೇವಮ್ಮ, ಮತ್ತು ಲಿಂಗಣ್ಣ ಇಳಿದದ್ದು ನೋಡಿ ಗಾಬರಿಯಿಂದ ಕಾರಿನ ಕಡೆಗೆ ನಡೆದ.

" ಕಂಗ್ರಾಜುಲೇಶನ್ಸ್ ಸತೀಶ್  ..." ಎಂದು ಕನ್ನಡಕಧಾರಿ ವ್ಯಕ್ತಿ ಸತೀಶನ ಕೈ ಕುಲುಕಿದ  , ಸತೀಶನಿಗೆ ಮತ್ತೂ ಗೊಂದಲವಾಗಿ ,ಅಮ್ಮ ,ಅಮ್ಮ ಲಿಂಗಣ್ಣ ನ ಕಡೆ ನೋಡಿದ

"ಏ .. ನಿನಿಗೆ ಪ್ರಶಸ್ತಿ ಬಂದೈತಂತಪ್ಪ,..
ಇಡೀ ಜಿಲ್ಲೆಗೆ ನೀನು ರೇಷ್ಮೆ ಸೆನಾಗಿ ಬೆಳ್ದದಿಯಾ ಅಮ್ತ , ನಿನಗೆ ಪ್ರಶಸ್ತಿ ಕೊಡ್ತಾರಂತೆ " ಲಿಂಗಣ್ಣ ಜೋರು ಧ್ವನಿಯಲ್ಲಿ ಹೇಳಿದ.

"ತ್ಯಾಂಕ್ಯೂ ಸರ್ ಬನ್ನಿ, ತೆಂಗಿನ ಮರ ಇನ್ನೂ ಎಳನೀರು ಬಿಟ್ಟಿಲ್ಲ ,  ಕುಡಿಯೋದಿಕ್ಕೆ ನೀರ್ ಕೊಡ್ಲಾ..ಸರ್..? ಕೇಳಿದ ಸತೀಶ.

"ಬೇಡ ಬನ್ನಿ ನಾವೇ ನಿಮಗೆ ,ಪ್ರಶಸ್ತಿ ಪತ್ರ, ಹಾರ, ಚೆಕ್, ಕೊಡ್ತೀವಿ, ಏ .. ರಮೇಶ, ಆ ಬ್ಯಾನರ್, ಪ್ರಶಸ್ತಿ ಅವನ್ನೆಲ್ಲ ತೊಗೊಂಬಾ..." ಎಂದು ಕೂಗಿದರು ಬಬ್ಬೂರು ಕೃಷಿ ಸಂಶೋಧನಾ ಸಂಸ್ಥೆಯ ರಾಧಾಕೃಷ್ಣನ್ ಕರ್ಜಗಿ ರವರು

"ಜಿಲ್ಲಾ ಮಟ್ಟದ ಆದರ್ಶ ರೈತ ಪ್ರಶಸ್ತಿ ವಿತರಣಾ ಸಮಾರಂಭ " ಎಂಬ ಬ್ಯಾನರ್ ಹಿಡಿದು ಇಬ್ಬರು ನಿಂತರು , ಕಾರು ನೋಡಿ ಅಕ್ಕಪಕ್ಕದ ತೋಟದ ರೈತರು ಸೇರಿ ನಲವತ್ತಕ್ಕೂ ಹೆಚ್ಚು ಜನ ಸೇರಿದ್ದರು,

"ಬಾಪ್ಪ ಸತೀಶ್ ಈ ಬ್ಯಾನರ್ ಮುಂದೆ ನಿಲ್ಲು ಪ್ರಶಸ್ತಿ ಕೊಡುತ್ತೇವೆ" ಎಂದರು ಕರ್ಜಗಿ ರವರು.

"ಸಾರ್ ನಾನು ಏನೇ ಮಾಡಿದ್ದರೂ ಅದಕ್ಕೆ ಸ್ಪೂರ್ತಿ, ಮತ್ತು ಕಾರಣ ನನ್ನ ಅಮ್ಮ ದಯವಿಟ್ಟು ನೀವು ಏನೇ ಕೊಟ್ಟರೂ ನನ್ನ ಅಮ್ಮನಿಗೆ ಕೊಡಿ ಸಾರ್" ಎಂದನು ಸತೀಶ.

"ಇದು ತಾಯಿ ಬಗ್ಗೆ ,ಪ್ರೀತಿ ಮತ್ತು ಗೌರವ ತೋರ್ಸೋ ರೀತಿ, ವೆರಿ ಗುಡ್ ನಿ‌ನ್ನಂತಹ ಮಕ್ಕಳು ಇರಬೇಕು ಕಣಪ್ಪ, ಆಯ್ತು ನಿಮ್ಮ ಅಮ್ಮನೂ ಬರ್ತಾರೆ ನೀನು ಬಾ" ಎಂದು ಬಲವಂತ ಪಡಿಸಿದ್ದಕ್ಕೆ
ಸತೀಶ ಅಮ್ಮನಜೊತೆ ಪ್ರಶಸ್ತಿ ಸ್ವೀಕಾರ ಮಾಡಿದ .

ಒಂದು ಪ್ರಶಸ್ತಿ ಪತ್ರ, ಗಂಧದ ಹಾರ, ಹಣ್ಣಿನ ಬುಟ್ಟಿ, ಮತ್ತು ಹತ್ತು ಸಾವಿರದ ಚೆಕ್ ನೀಡಿದರು,
"ನೋಡು ಸತೀಶ್ ಈ ಹಣವನ್ನು ಒಳ್ಳೆಯ ಕಾರ್ಯಕ್ಕೆ ಬಳಸಿಕೋ, ನಿನ್ನ ಹೆಸರನ್ನು ರಾಜ್ಯ ಮಟ್ಟಕ್ಕೆ ಕಳಿಸಿರುವೆ ,ನಿನಗೆ ಅದೃಷ್ಟ ಇದ್ದರೆ ಇದೇ ತರಹದ ಪ್ರಶಸ್ತಿಯನ್ನು ನೀಡಿ  ರಾಜ್ಯದ ಮುಖ್ಯ ಮಂತ್ರಿಯವರು ನಿನ್ನ ಸನ್ಮಾನ ಮಾಡ್ತಾರೆ, ಒಳ್ಳೆದಾಗಲಿ, ರೇಷ್ಮೆಯಲ್ಲಿ ಇನ್ನೂ ಹೆಚ್ಚಿನ ಇಳುವರಿ ಪಡೆದು ಎಲ್ಲಾ ರೈತರಿಗೆ ಮಾದರಿಯಾಗು " ಎನ್ನುತ್ತಲೇ ಅಲ್ಲಿದ್ದವರು ಚಪ್ಪಾಳೆ ತಟ್ಟಿದರು.
ರೇಷ್ಮೆ ತೋಟ ಮತ್ತು ಪ್ರಶಸ್ತಿ ಪಡೆದ ಫೋಟೋಗಳನ್ನು ತೆಗೆಯಲಾಯಿತು ,
"ಸತೀಶ್ ನಿನಗೂ ಒಂದು ಪೋಟೋ ಕಳಿಸುತ್ತೇವೆ "ಎಂದರು ಕರ್ಜಗಿ ಸಾಹೇಬರು,

"ನಾನೂ ಬಿದ್ದಿದಿನಾ ಸಾ...." ಎಂದು ಕೇಳಿದ ಲಿಂಗಣ್ಣ

"ಹೂನಪ್ಪ ಬಿದ್ದಿದಿಯಾ ,ಈಗ...ಎತ್ತಬೇಕು " ಎಂದರು ಸಾಹೇಬರು
ಎಲ್ಲರೂ ಗೊಳ್ ಎಂದು ನಕ್ಕರು .

ಕಾರು ಊರ ಕಡೆ ಚಲಿಸಿತು. ಜನರು ಕಾರನ್ನು ಹಿಂಬಾಲಿಸಿದರು .
ಅಮ್ಮ. ಮಗನ ಕಣ್ಣುಗಳಲ್ಲಿ ಸಂತೋಷ ತುಂಬಿತುಳುಕುತ್ತಿತ್ತು.

ಒಂದು ವಾರದ ಬಳಿಕ ಬಬ್ಬೂರಿನಿಂದ ಪ್ರಶಸ್ತಿ ಪೋಟೋ ಬಂದಿತ್ತು, ಅಂದೇ ಹೊಳಲ್ಕೆರೆ ಗೆ ಕೆಲಸವಿದೆ ಎಂದು ಹೋದ ಸತೀಶ ಸಂಜೆ ಬಂದ,

"ಅಮ್ಮ ತಗೋ ನಿನಗೆ ನನ್ನ ಕಡೆಯಿಂದ ಒಂದು ಗಿಪ್ಟ್ ,ತೆಗೆದು ನೋಡು " ಎಂದನು

ಭೂದೇವಮ್ಮ ಕವರ್ ತೆಗೆದು ನೋಡಿದರು.
ಬಂಗಾರದ ಸರ!!!

ಇದೇನಪ್ಪ ಇದೆನ್ಯಾಕೆ ತಂದೆ, ಅದ್ರ ಬದ್ಲು ,ಪಿ. ಎಲ್ಡಿ ಬ್ಯಾಂಕ್ ಸಾಲ ತೀರಿಸ್ ಬೋದಾಗಿತ್ತು," ಎಂದರು ಭೂದೇವಮ್ಮ

"ಅಮ್ಮಾ ನಾಲ್ಕು ತಿಂಗಳು ಹಿಂದೆನೇ ಸಾಲ ತೀರಿದೆ , ನೀನೇನು ಯೋಚನೆ ಮಾಡಬೇಡ " ಸತೀಶ ಹೆಮ್ಮೆಯಿಂದ ಹೇಳಿದ

ಭೂದೇವಮ್ಮ
ಕೈಯಲ್ಲಿರುವ ಬಂಗಾರದ ಸರವನ್ನು ಒಮ್ಮೆ, ಸತೀಶನ ಪ್ರಶಸ್ತಿ ಪೋಟೋವನ್ನು ಒಮ್ಮೆ, ಹಾರ ಹಾಕಿರುವ ಶ್ರೀನಿವಾಸಯ್ಯನವರ ಪೋಟೋವನ್ನು ಒಮ್ಮೆ ನೋಡುತ್ತಾ.....
"ಈಗ ನಿಮ್ ಅಪ್ಪ ...ಇರ್ಬೇಕಿತ್ತು ಕಣಪ್ಪ..."ಎಂದಾಗ ಕಣ್ಣಿಂದ ನಾಲ್ಕು ಹನಿಗಳು ಉದುರಿದವು.

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು

No comments: