28 September 2019

ಚುಟಕುಗಳು(ಉತ್ತಮ ಚುಟುಕುಗಳು ಎಂದು ಪುರಸ್ಕೃತ)

ಸಿಹಿಜೀವಿಯ ಹನಿಗಳು (ಮಡದಿ)

*೧*

*ಆಧುನಿಕ ಪತಿಗಳು*

ಮಡದಿ ಹತ್ತಿರವಿದ್ದರೆ
ನನಗದೇ ಕೋಟಿ ರೂಪಾಯಿ
ಎಂದರು ಕವಿಗಳು
ನಮ್ಮ ಪಾಡಿಗೆ ನಮ್ಮ ಬಿಟ್ಟರೆ
ನಮಗದೆ ಕೋಟಿಗಿಂತ ಹೆಚ್ಚು
ಎಂದರು ಆಧುನಿಕ ಪತಿಗಳು .


*೨*

*ಮುತ್ತು*

ಮಡದಿ ಇಷ್ಟಪಡುವಳೆಂದು
ಮೈಸೂರು ಮಲ್ಲಿಗೆ
ಮೈಸೂರ್ ಪಾಕ್ ತಂದು
ಕೇಳಿದನು ಕೊಡೆ ಮುತ್ತೊಂದನು
ಅವಳಂದಳು
ಕೊಡಿಸಬಾರದೆ ಮುತ್ತಿನ
ಸರವೊಂದನು.


*ಸಿ ಜಿ ವೆಂಕಟೇಶ್ವರ*

27 September 2019

ಪ್ರವಾಸ (ಹನಿ)

*ಪ್ರವಾಸ*

(ಇಂದು ವಿಶ್ವ ಪ್ರವಾಸ ದಿನ)

ಎಲ್ಲರಿಗೂ
ಮನೆಯಲಿ
ಪ್ರತಿದಿನ ಮಾಮೂಲಿ
ವಾಸ .
ಹೆಚ್ಚುಕಡಿಮೆಯಾದರೆ
ವನವಾಸ.
ದೇಶ ಸುತ್ತಲು
ಜ್ಞಾನ ಪಡೆಯಲು
ವರ್ಷಕ್ಕೊಮ್ಮೆ ಮಾಡಿ
ಪ್ರವಾಸ.

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*

ಚಾಲಕ (ಭಾವಗೀತೆ)

*ಚಾಲಕ*

ಕತ್ತಲ ಕೂಪದಿಂದ
ನಿನಗೆ ಬಿಡುಗಡೆ ಎಂದು?
ಬೆಳಕಿನೆಡೆ ಸಾಗಲು
ನೀನು ಅಡಿಇಡು ಇಂದು.

ನಿನ್ನಾತ್ಮ ದರ್ಶನಕೆ
ಪರರ ನೆರವೇಕೆ?
ನೆರಳಂತೆ ಕಾಯುವುದು
ಸತ್ಕಾರ್ಯ ಚಿಂತೆಯೇಕೆ?

ಜಗದ ಮೂಲೆಗಳಿಂದ
ಪಡೆ ನೀನು ಜ್ಞಾನ
ಜನ ಮೆಚ್ಚಿ ಹೊಗಳುವರು
ನೀನೆ ಮಹಾಜಾಣ.

ಭಕ್ತಿಯಲಿ ಭಜಿಸಿದರೆ
ಕಾಣುವುದು ಸ್ವರ್ಗ
ಮುಕ್ತಿಯ ಮೂಲ
ಅದುವೆ ಭಕ್ತಿಮಾರ್ಗ.

ಮೇಲು ಕೀಳೆನೆದೆ
ಮಾಡು ನಿನ್ನ ಕಾಯಕ
ನಿನ್ನ ಮೋಕ್ಷದ ಯಾತ್ರಗೆ
ನೀನಾಗುವೆ ಚಾಲಕ.

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*


25 September 2019

ಭವಿಷ್ಯದ ಆಹಾರ ಭದ್ರತೆ (ಲೇಖನ)

    ಲೇಖನ

ಭವಿಷ್ಯದ ಅಹಾರ ಭದ್ರತೆ

ಭಾರತ ಸರ್ಕಾರವು ಕರ್ನಾಟಕ ಸರ್ಕಾರಕ್ಕೆ ದ್ವಿದಳ ಉತ್ಪಾದನೆಯಲ್ಲಿ ಗಣನೀಯ ಸಾಧನೆ ಮಾಡಿರುವುದನ್ನು ಗುರ್ತಿಸಿ ಈ ವರ್ಷದ ಪ್ರಶಸ್ತಿಗೆ ಆಯ್ಕೆ ಮಾಡಿ ಪ್ರಶಸ್ತಿ ಪತ್ರ ದ ಜೊತೆಗೆ ಒಂದು ಕೋಟಿ ನಗದು ಬಹುಮಾನವನ್ನು ನೀಡಿ ಗೌರವಿಸಿದೆ.ಇದು ಕರ್ನಾಟಕದ ಪ್ರಜೆಗಳಾದ ನಾವು ಹೆಮ್ಮೆ ಪಡಬೇಕಾದ ಸಂಗತಿ .ಜೊತೆಯಲ್ಲಿ ಮುಂದಿನ ದಿನಗಳಲ್ಲಿ ವಿವಿದ ಕಾರಣದಿಂದ ಆಹಾರದ ಕೊರತೆಯನ್ನು ನೀಗಿಸಲು ,ಸುಸ್ಥಿರ ಅಹಾರ ಉತ್ಪಾದನೆ ಹೆಚ್ಚು ಒತ್ತು ನೀಡ ಬೇಕಾಗಿದೆ. ಈಗಾಗಲೇ ಮುಂದಿನ ದಿನಗಳನ್ನು ಗಮನದಲ್ಲಿಟ್ಟುಕೊಂಡು ವಿಶ್ವದ ಪ್ರಮುಖವಾದ ರಾಷ್ಟ್ರಗಳು ಬೇರೆ ದೇಶಗಳ ದೊಡ್ಡ ಅಹಾರ ಕಂಪನಿಗಳನ್ನು ದುಬಾರಿ ಹಣ ತೆತ್ತು ಖರೀದಿಸಿ ಭವಿಷ್ಯದ ಆಹಾರ ಭದ್ರತೆ ಮತ್ತು ಆಹಾರ ಕೊರತೆ ನೀಗಿಸಲು ಸನ್ನದ್ದವಾಗುತ್ತಿವೆ ಈ ವಿಚಾರದಲ್ಲಿ ಚೀನಾ ದೇಶವು ದುಬಾರಿಯಾದರೂ ಇತರೆ ದೇಶಗಳ ದೊಡ್ಡ ಕಂಪನಿಗಳನ್ನು ಲಕ್ಷಾಂತರ ಕೋಟಿ ನೀಡಿ ಖರೀದಿಸಿ ಆಹಾರದಲ್ಲಿ ವಿಶ್ವ ಮಟ್ಟದಲ್ಲಿ ಪಾರಮ್ಯ ಮೆರೆಯಲು ಸಜ್ಜಾಗುತ್ತಿದೆ. ಭಾರತ ಸರ್ಕಾರವು ಈ ನಿಟ್ಟಿನಲ್ಲಿ  ಯೋಚಿಸಿ,ಯೋಜಿಸಲು ಇದು ಸಕಾಲ .ಕೃಷಿ ಪ್ರಧಾನ ನಮ್ಮ ದೇಶದಲ್ಲಿ ಆಹಾರ ಉತ್ಪಾದನೆ. ಸಂಶೋದನೆಗಳ ಮಾಡಿ ಆಹಾರವನ್ನು ಉತ್ಪಾದಿಸಲು ವಿಪುಲವಾದ ಅವಕಾಶಗಳನ್ನು ಹೊಂದಿದೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಗಣನೀಯ ಪ್ರಮಾಣದ ಹೆಚ್ಚಳವಾಗಿದ್ದರೂ ಅತೀವೃಷ್ಟಿ ಅನವೃಷ್ಟಿ ಯಂತಹ ನೈಸರ್ಗಿಕ ವಿಕೋಪಗಳ ಸಂಧರ್ಭದಲ್ಲಿ ಮತ್ತು ಜಾಗತಿಕ ಅನಿಶ್ಚಿತತೆಗಳ ಎದುರಿಸಲು ಇತರೆ ದೇಶಗಳಂತೆ ನಾವೂ ಎಚ್ಚರಿಕೆಯಿಂದ ಹೆಜ್ಜೆ ಇಟ್ಟು ಮುಂದಿನ ಸವಾಲುಗಳಿಗೆ ಈಗಲೇ ಸಿದ್ದರಾಗುವುದು ಜಾಣ ನಡೆಯಲ್ಲವೆ ?


*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

*ಬಂಗಾರ (ಹನಿ)

*ಬಂಗಾರ*

ದೀರ್ಘ ಕಾಲ
ಮೌನವಾಗಿರುವ
ಹೆಂಡತಿಯ ಕಂಡು
ಕೌತುಕದಿಂದ
ಅವನು ಯಾಕೆ
ಮೌನ ?ಅಂದ.
ಮಾತು ಬೆಳ್ಳಿ
ಮೌನ ಬಂಗಾರವಂತೆ
ಅದರ ಬೆಲೆ
ಇಳಿದಿದೆಯಂತೆ.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

24 September 2019

ಸಂತಸದಿಂದಿರು (ಕವನ)

*ಸಂತಸದಿಂದಿರು*

ಆಸೆಗಳ ಕೂಪದಲಿ ಬಿದ್ದು
ವಿಲವಿಲನೆ ಒದ್ದಾಡದಿರು
ಅವನ ಭಜಿಸಿ ಸಂತಸದಿಂದಿರು.

ಹೆಂಡತಿ, ಮಕ್ಕಳು , ಬಂಧುಗಳೆಂಬ
ಅತಿಯಾದ ಮೋಹ ಬೇಡ
ದೇವನೊಲವ ಸವಿ ಮೂಢ.

ಜನನ ಮರಣ, ರೋಗಗಳ
ನೆನೆಯುತ  ಚಿಂತಿಸುವುದ ಬಿಡು
ಭಗವಂತನಲಿ ಮನಸಿಡು.

ಹೆಣ್ಣು ಹೊನ್ನು ಮಣ್ಣಿನಲಿ
ಮಾತ್ರ ಸಂತಸವಿಲ್ಲ
ಒಳಗಣ್ಣ ತೆರೆದರೆ ಸವಿಬೆಲ್ಲ

*ಸಿ ಜಿ‌ ವೆಂಕಟೇಶ್ವರ*

22 September 2019

ತಂಗಾಳಿ (ಬಹುಮಾನ ಪಡೆದ ಹನಿ)

*ತಂಗಾಳಿ*

ಸಕಲ ವಿಷಯಗಳಲಿ
ಪಥ್ಯವಿದ್ಧರೆ ದಾಂಪತ್ಯದಲಿ
ಬೀಸುವುದು ತಂಗಾಳಿ
ಇಲ್ಲದಿದ್ದರೆ ಖಂಡಿತ
ತಪ್ಪದು ಬಿರುಗಾಳಿ .

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*



19 September 2019

ಸಿಡಿಗುಂಡು (ಹನಿಗವನ)


*ಸಿಹಿಜೀವಿಯ ಹನಿ*

*ಸಿಡಿಗುಂಡು*

ಮದುವೆಗೆ ಮೊದಲು
ಅವನು
ಗಂಡು
ಸಿಡಿಗುಂಡು
ಬೆಂಕಿ ಚೆಂಡು.
ಈಗ
ಗಂಡ
ಸಿಡಿಯದ ಗುಂಡು
ಬೆಂಕಿಯಿರದ ಚೆಂಡು

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*

07 September 2019

ನ್ಯಾನೋ ಕಥೆ(ಹಾರೈಕೆ)ಪ್ರಥಮ ಬಹುಮಾನ ಕವಿ ಕಾವ್ಯ ದೀವಿಗೆ





ಸ್ಪರ್ಧೆಗೆ

*ನ್ಯಾನೋ ಕಥೆ*

ಆರೈಕೆ"

" ನನ್ನ ಮಗ ಅಮೇರಿಕಾದಲ್ಲಿ ದೊಡ್ಡ ಕಂಪನೀಲಿ ಕೆಲಸ ಮಾಡ್ತಾ ಇದ್ದಾನೆ,ನನ್ನ ಹೃದಯದ ಆಪರೇಷನ್ ಮಾಡಿಸಲು ಅಕೌಂಟ್ ಗೆ ಹತ್ತು ಲಕ್ಷ ಹಾಕಿದ್ದಾನೆ ,ನೋಡಿಕೊಳ್ಳಲು ಒಳ್ಳೆಯ ನರ್ಸ್ ನೇಮಕ ಮಾಡಿದ್ದಾನೆ,ನಾಳೇನೆ ಆಪರೇಷನ್, ಆಪರೇಷನ್ ಆದ ಮೇಲೆ ವೀಡಿಯೋ ಕಾಲ್ ಮಾಡಿ ನನ್ನ ಕ್ಷೇಮ ವಿಚಾರಿಸ್ತಾನಂತೆ " ಎಂದು  ತನ್ನ ಮಗನ ಕೆಲಸ ಹಣ ಅಂತಸ್ತಿನ ಬಗ್ಗೆ ಹೆಮ್ಮೆಯಿಂದ ಪಕ್ಕದ ಮನೆಯ ಸಾವಿತ್ರಮ್ಮನಿಗೆ ಹೇಳುತ್ತಲೇ ಇದ್ದರು  ಬಂಗಾರಮ್ಮ . " ಅಮ್ಮಾ ನಿಧಾನ, ಬಾ ಈ ಸೈಕಲ್ ಮೇಲೆ ಕೂತ್ಕೋ ಆಸ್ಪತ್ರೆಗೆ ಹೋಗೋಣ ,ಬೆಳಿಗ್ಗೆಯಿಂದ ನೆಗೆಡಿ ಕೆಮ್ಮು ಸುಸ್ತು ಅಂತಿದ್ದೆ ,ಲೇಟಾದ್ರೆ ಡಾಕ್ಟರ್ ಸಿಗಲ್ಲ ಎಂದು ಅಮ್ಮನನ್ನು ಸೈಕಲ್ ಮೇಲೆ ಕೂರಿಸಿಕೊಂಡ ಸುರೇಶ್ ಸೈಕಲ್ ತುಳಿಯುತ್ತಾ ಕಣ್ಮರೆಯಾಗುವವರೆಗೂ ನೋಡುತ್ತಲೇ ನಿಂತರು ಬಂಗಾರಮ್ಮ...

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

03 September 2019

ಗಜಲ್ ೫೮ (ನಾರಿಕೇಳ)

*ಗಜ್ಹಲ್೫೮*

ಕಲಿಯುಗದ ಕಲ್ಪವೃಕ್ಷವೆಂದು ಹೆಸರಾಗಿದೆ ನಾರಿಕೇಳ.
ನಾರಿಯರ ನೀಳ ಕೂದಲಿಗೆ ಕಾರಣವಾಗಿದೆ ನಾರಿಕೇಳ.

ಭಗವಂತನಿಗೆ ಅರ್ಪಿಸಲು ಕಾಯಿ ನೀಡುವೆ
ಔಷದಿಯ ಆಗರದ ಎಳನೀರು ನೀಡಿದೆ ನಾರಿಕೇಳ.

ಬಡವರ ಗುಡಿಸಲಿಗೆ ತೆಂಗಿನ ಚಾಪೆ ಆಧಾರ
ರೈತರ ಬೇಸಾಯಕೆ ಹಗ್ಗವ ಕರುಣಿಸಿದೆ ನಾರಿಕೇಳ.

ಸಾರಿಗೆ ಸಾರ ಕೊಡಲು ತೆಂಗಿನ ತುರಿ ಬೇಕು
ಸಾಮನ್ಯರ ಉರುವಲಿನ ಮೂಲವಾಗಿದೆ  ನಾರಿಕೇಳ.

ಸ್ವಚ್ಛ ಭಾರತ ಅಭಿಯಾನಕೆ ಪೊರಕೆ ನೀಡಿದೆ
ಸಿಹಿಜೀವಿಗಳಿಗೆ ಒಳಿತುಮಾಡುತಲಿದೆ ನಾರಿಕೇಳ

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*










02 September 2019

ನಾರಿಕೇಳ (ವಿಶ್ವ ತೆಂಗಿನ ಮರ ದಿನ ಪ್ರಯುಕ್ತ ಹನಿ)

*ನಾರಿಕೇಳ*

ಮನೆಗೆ ಸೂರು
ದೇವರ ನೈವೇದ್ಯ
ತಂಪು ಪಾನೀಯ
ಸಾರಿಗೆ ತುರಿ
ಸ್ವಚ್ಛತೆಗೆ ಪೊರಕೆ
ಕೂದಲಿಗೆ ತೈಲ
ಬೇಕಾದಾಗ ಹಗ್ಗ
ಜನರ ಉರುವಲು
ಕಲಿಯುಗ ಕಲ್ಪವೃಕ್ಷ
ಉಪಯೋಗ ಒಂದಲ್ಲ,
ಎರಡಲ್ಲ, ಹೇರಳ
ಅದುವೆ ನಾರಿಕೇಳ .

*ಸಿ.ಜಿ ವೆಂಕಟೇಶ್ವರ*

(ಇಂದು ವಿಶ್ವ ತೆಂಗಿನ ಮರದ ದಿನ

01 September 2019

ಸುಭಿಕ್ಷವ ನೀಡು

*ಗೌರಿ ಗಣೇಶ ಹಬ್ಬದ ಶುಭಾಶಯಗಳು*

*ಸುಭಿಕ್ಷವ ನೀಡು*

ಗಣನಾಯಕ ಬೆನಕನೆ
ನೀಡುವೆ ನಿನಗೆ ಕಡುಬನ್ನ
ಮೂಷಿಕವಾಹನ ಮೋದಕಹಸ್ತನೆ
ಕರಿಮುಖ ಕಾಯೋ ನಮ್ಮನ್ನ.

ಗೌರಿಯ ಪುತ್ರ ,ಮೊದಲವಂದಿಪ
ಸಂಕಷ್ಟಗಳ ನೀ ನೀಗು
ಸುಬ್ರಹ್ಮಣ್ಯ ಸೋದರ ಗಣಪನೆ
ನಮ್ಮಯ ಬಾಳಿಗೆ ಬೆಳಕಾಗು.

ಗೌರಿತನಯ ವಿಶ್ವ ವಂದ್ಯನೆ
ನಮ್ಮನೆಲ್ಲರ ಒಂದುಗೂಡಿಸು
ಎಕದಂತ ವಕ್ರತುಂಡನೆ
ವಿದ್ಯೆ ಬುದ್ದಿಯ ನೀಡಿ ಹರಸು

ಚಾಮರ ಕರ್ಣ ಶಿವಸುತನೆ
ಭಕ್ತಿಯಲಿ ಹಾಡುವೆ ಈ ಹಾಡು
ವಿಘ್ನವಿನಾಯಕ ಗಜಾನನ
ಧರೆಯಲೆಲ್ಲಾ ಸುಭಿಕ್ಷವ ನೀಡು

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*