11 May 2021

ಆ...ಬಾಕ್ಸ್ .ಕಥೆ

 

ಕಥೆ

*ಆ.... ಬಾಕ್ಸ್*

"ಓಂ ಭೂರ್ಭುವಃ ಸ್ವಃ
ತತ್ಸವಿತುರ್ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿಃ
ಧಿಯೋಯೋನಃ ಪ್ರಚೋದಯಾತ್"

ಎಂದು ಡೋರ್ ಕಾಲಿಂಗ್ ಬೆಲ್ ಸದ್ದು ಮಾಡಿತು, ಬಾಗಿಲ ತೆಗೆದು ನೋಡಿದೆ ,ಯಾರೂ ಇರಲಿಲ್ಲ, ಆದರೂ ನನಗೆ ಅಚ್ಚರಿ ಕಾದಿತ್ತು ,ಬಾಗಿಲ ಬಳಿ ಒಂದು ಪುಟ್ಟ ಬಾಕ್ಸ್, ಅದರ ಮೇಲೊಂದು ಪತ್ರ ಇತ್ತು.

ಮನೆಯ ಒಳಗಿಂದಲೇ ನಮ್ಮ ಮನೆಯವರು   "ಯಾರ್ರಿ ಅದು, " ಎಂದರು
"ಯಾರೂ ಇಲ್ಲ, "

"ಮತ್ತೆ ಯಾಕೆ ಅಲ್ಲೇ ಇದಿರಿ, ಬನ್ನಿ ಒಳಗೆ,"
ಎಂದು ಆದೇಶ ನೀಡಿದರು.
ಆದರೂ ನಾನು ಅಲ್ಲೇ ನಿಂತಿರುವುದನ್ನು ಕಂಡು ಸ್ಥಳ ಪರಿಶೀಲಿಸಲು ಬಾಗಿಲ ಬಳಿ ಬಂದೇ ಬಿಟ್ಟರು.
"ಇದೇನ್ರೀ ಬಾಕ್ಸ್ " ಅಚ್ಚರಿಭರಿತ ಕಣ್ಣುಗಳ ಅಗಲಿಸಿ ಕೇಳಿದರು

"ನಾನೂ ಅದನ್ನೇ ನೋಡುತ್ತಿರುವೆ ,ಇರು ನೋಡುವೆ ,ಏನಿರಬಹುದು"

"ರೀ  ,, ಮುಟ್ ಬೇಡಿ ಮೊನ್ನೆ ಡೆಲ್ಲಿ ನಲ್ಲಿ ಇಂತಹ ಬಾಕ್ಸ್ ನಲ್ಲೇ ಬಾಂಬ್ ಸಿಕ್ಕಿದ್ದು" ಎಂದು ಖಚಿತವಾಗಿ ಅದರಲ್ಲಿ ಬಾಂಬ್ ಕಂಡವರಂತೆ ಹೇಳಿದರು.

"ಅಮ್ಮ.. ತಾಯಿ ಈ ಹೆಂಗಸ್ರೇ ಇಂಗೆ ಎಲ್ಲಾದಕ್ಕೂ ಅನುಮಾನ ..ನೋಡು ಆ ಬಾಕ್ಸ್ ಮೇಲೆ ಲೆಟರ್ ಇದೆ, ಬಾಂಬ್ ಆಗಿದ್ರೆ ಲೆಟರ್ ಇರ್ತಿರ್ಲಿಲ್ಲ ಅಲ್ವ ಎಂದು ಪೂಟ್ ಲಾಯರ್ ತರ ವಾದ ಮಾಡಿದೆ "

"ಓಕೆ ,ಒಗೋ ಸಾನಿಟೈಸರ್ ಹಾಕ್ಕೊಳ್ಳಿ  , ಆ ಲೆಟರ್ ತೆಗೆದುಕೊಂಡು ಓದಿ, " ನನ್ನ ವಾದಕ್ಕೆ ಮನ್ನಣೆ ಕೊಟ್ಟ ಮಡದಿಯ ಮುಖ ನೋಡಿ ಸಾನಿಟೈಸರ್ ಹಾಕಿಕೊಂಡು ಲೆಟರ್ ಓಪನ್ ಮಾಡಿದೆ.

"ನಮಸ್ಕಾರ ಸರ್ ಮೊದಲಿಗೆ ನನ್ನನ್ನು ಕ್ಷಮಿಸಿ......

ಮೂರು ತಿಂಗಳ ಹಿಂದೆ, ರಾತ್ರಿ ಹಿಂದಿನಿಂದ ಬಂದು, ನಿಮಗೆ ಚಾಕು ತೋರಿಸಿ ನಿಮ್ಮ ಪರ್ಸ್ ,ಪಡೆದು ಹೋದವನು ನಾನು..." ಈ ಸಾಲು ಓದಿದಾಗ ನನಗೆ ಸಿಟ್ಟು ಬಂದು ,ದರೋಡೆ ಮಾಡಿದ್ದಲ್ಲದೇ ಪತ್ರ ಬೇರೆ ಬರೆದಿದ್ದಾನೆ, ಎಂದು ಹಲ್ಲುಕಡಿಯುತ್ತಾ ಪತ್ರ ಮುಂದೆ ಓದಿದೆ,
" ಅಂದು ನನ್ನ ಹೆಂಡತಿ ಕೊರೋನಾ ಪಾಸಿಟಿವ್ ಆಗಿ , ಸಾವು ನೋವಿನ ಡುವೆ ಹೋರಾಡುತ್ತಾ ಖಾಸಗಿ ಆಸ್ಪತ್ರೆಯ ಐ ಸಿ ಯು ಬೆಡ್ ಮೇಲಿದ್ದಳು, ಹೊರಗಡೆ ಬಂದ ಡಾಕ್ಟರ್ ಅರ್ಜೆಂಟಾಗಿ ಈ ಇಂಜೆಕ್ಷನ್ ತನ್ನಿ, ಲೇಟ್ ಮಾಡಬೇಡಿ , ಲೇಟ್ ಮಾಡಿದರೆ ಕಷ್ಟ ಎಂದರು , ನಾನು ಚೀಟಿಯನ್ನು ಹಿಡಿದು ಸರಸರನೆ ಮೆಡಿಕಲ್ ಸ್ಟೋರ್ ಕಡೆ ಹೊರಟೆ, ಚೀಟಿಯನ್ನು ಓದಿದ ಮೆಡಿಕಲ್ ಸ್ಟೊರ್ ನವರು‌ " ಓ... ಈ....ಇಂಜೆಕ್ಷನ್ ನಾಾ?   ಸ್ಟಾಕ್ ಇಲ್ಲ, ನಾಳೆ ಬರುತ್ತೆ... " ಎಂದರು , ದಿಕ್ಕು ತೋಚದೆ ಬೇರೆ ಮೆಡಿಕಲ್ ಶಾಪ್ ಗೆ ಹೋದೆ ಅಲ್ಲಿ ಕೂಡಾ ಅದೇ ಉತ್ತರ, ಈ ಮಧ್ಯ ಡಾಕ್ಟರ್ ಮಾತು, ನೆನಪಾಗಿ ಬೇಗ ಔಷಧಿ ಹೇಗೆ ತೆಗೆದುಕೊಂಡು ಹೋಗಲಿ ಎಂದು ಯೋಚಿಸುವಾಗ ಒಂದು ಧ್ವನಿ " ಆ....  ಇಂಜೆಕ್ಷನ್ ಬೇಕಾ? ಎಂದಿತು , ನಾನು ಹೌದು ಕೊಡಿ ಎಂದೆ.
" ಮೂವತ್ತು ಸಾವಿರ ಆಗುತ್ತೆ " ಎಂದ ಆ ವ್ಯಕ್ತಿ ಆಗಲಿ ಎಂದು ಪರ್ಸ್ ತೆಗೆದೆ ಇಪ್ಪತ್ತೈದು ಸಾವಿರ ಇತ್ತು, ಸಾರ್ ಇನ್ನೈದು ಸಾವಿರ ಈಗಿಲ್ಲ ,ನಿಮ್ಮ ಅಕೌಂಟ್ ನಂಬರ್ ಕೊಡಿ ಹಾಕುವೆ, ಈಗ ಇಷ್ಟ್  ದುಡ್ ತೊಗೊಂಡ್, ಪ್ಲೀಸ್  .... ಇಂಜೆಕ್ಷನ್ ಕೊಡಿ" ಅಂದೆ
"ನೋಡಿ ಸರ್ ಉದ್ರೆ ವ್ಯವಹಾರ ಇಲ್ಲ ,ಇರೋದು ಒಂದೇ ಇಂಜೆಕ್ಷನ್ ಇನ್ನು ಹತ್ ನಿಮಿಷ ಇಲ್ಲೇ ಇರ್ತೇನೆ ,ಹಣ ತನ್ನಿ" ಎಂದು ಕಡ್ಡಿ ಮುರಿದಂತೆ ಹೇಳಿದ , ಹತ್ತಿರದ ಏ ಟಿ ಎಮ್ ನಲ್ಲಿ ,ಔಟ್ ಆಪ್ ಸರ್ವಿಸ್ ಬೋರ್ಡ್ ಕಾಣಿಸಿತು, ಸಮಯ ಕಳೆಯುತ್ತಿತ್ತು, ಡಾಕ್ಟರ್ ಮಾತು ನೆನಪಾದವು , ಅಕೌಂಟ್ ನಲ್ಲಿ ಲಕ್ಷಾಂತರ ಹಣವಿದ್ದರೂ ಐದು ಸಾವಿರಕ್ಕೆ ಅಲೆಯಬೇಕಾಯಿತು, ಸ್ವಾಭಿಮಾನ ಬಿಟ್ಟು ಒಂದಿಬ್ಬರನ್ನು ಹಣ ಕೇಳಿದೆ  , ಅವರ ನೋಟದಿಂದಲೆ ಅವರು ನನ್ನ ಭಿಕ್ಷುಕ ಎಂದು ತೀರ್ಮಾನಿಸಿದ್ದು  ನನ್ನ ಗಮನಕ್ಕೆ ಬಂತು, ಕತ್ತಲು ದೀರ್ಘವಾಯಿತು, ನನಗೆ ದಾರಿ ತೋಚದೆ ಒಂದು ಕಲ್ಲುಹಾಸಿನ ಮೇಲೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದೆ, ...
ಆಗಲೇ ನೀವು ನನ್ನ ಮುಂದೆ ಹಾದು ಹೋದಿರಿ....
ತಕ್ಷಣ ಏನೋ ಹೊಳೆದವನಂತೆ ಎದ್ದು , ನಿಮ್ಮ ಹಿಂಬಾಲಿಸಿ ನಿಮ್ಮ ಬೆನ್ನಿಗೆ ಚೂರಿ ಹಿಡಿದು, ಪರ್ಸ್ ಪಡೆದು ಓಡಿದೆ, ನಂತರ ನೋಡಿದೆ , ಅದರಲ್ಲಿ 10690 ರೂ ಇತ್ತು , ಇಂಜೆಕ್ಷನ್ ‌ವ್ಯಕ್ತಿಯ ಬಳಿ ಬಂದು ಇಂಜೆಕ್ಷನ್ ಪಡೆದು ಆಸ್ಪತ್ರೆಯ ಕಡೆ ಓಡಿದೆ, ಡಾಕ್ಟರ್ ಇಂಜೆಕ್ಷನ್ ‌ನೀಡಿದರು, ಮೂರು ದಿನಗಳ ಬಳಿಕ ನನ್ನ ಹೆಂಡತಿಯನ್ನು ಡಿಸ್ಚಾರ್ಜ್ ಮಾಡಿದರು.
ಮನೆಗೆ ಬಂದಾಗ ನನಗೆ ಅಪರಾಧಿ ಮನೋಭಾವ ಕಾಡತೊಡಗಿತು, ನಿಮ್ಮ ಪರ್ಸ್ ನಲ್ಲಿ ನಿಮ್ಮ ವಿಳಾಸ ಇತ್ತು ,ನೇರವಾಗಿ ನಿಮ್ಮ ಮುಂದೆ ಬಂದು ಕ್ಷಮೆ ಕೇಳಲು ಬಹಳ ಸಲ ಪ್ರಯತ್ನ ಮಾಡಿದೆ ,ಧೈರ್ಯ ಸಾಲಲಿಲ್ಲ, ಈಗ ಧೈರ್ಯ ಮಾಡಿ ಈ ಪತ್ರ ಬರೆದಿರುವೆ ,
ಈ ಪತ್ರದೊಂದಿಗೆ ಇರುವ ಬಾಕ್ಸ್ ನಲ್ಲಿ 15000 ಹಣ ಇದೆ, ಜೊತೆಗೆ ,ಕೊರೊನ ಗೆ ಸಂಬಂದಿಸಿದ ಕೆಲ ಇಂಜೆಕ್ಷನ್‌ ಇವೆ , ಹಾಗೆ ಸ್ವಲ್ಪ ಆಕ್ಸಿಮೀಟರ್, ಮುಂತಾದ ಸಲಕರಣೆಗಳು ಇವೆ , ಈ ಕೊರೋನಾ ಎರಡನೇ ಅಲೆಯಲ್ಲಿ ,ನಿಮಗೆ ಪರಿಚಿತರಿಗೆ ಯಾರಿಗಾದರೂ ಅಗತ್ಯವಿರುವವರಿಗೆ ಉಚಿತವಾಗಿ ನೀಡಿದರೆ ನೀವು ನನ್ನ ಕ್ಷಮಿಸಿದಂತೆ"

ಇಂತಿ ನಿಮಗೆ ತೊಂದರೆ ನೀಡಿದವ.
......
ಎಂದು ಪತ್ರ ಓದುತ್ತಾ ಮೌನವಾಗಿ , ಬಾಕ್ಸ್ ಓಪನ್ ಮಾಡಿದೆ , ಹಣ, ಸಲಕರಣೆಗಳು ,ಔಷಧಿಗಳು ಕಂಡವು.....

ಬಾಕ್ಸ್ ಒಳಗೆ ತೆಗದುಕೊಳ್ಳಲು ರೆಡಿಯಾದಾಗ, ನಮ್ಮ ಮನೆಯ ಕಾಂಪೌಂಡ್ ಪಕ್ಕದ  ರಸ್ತೆಯಲ್ಲಿ ಒಂದು ಬಿಳಿ ಕಾರ್ ನಿಧಾನವಾಗಿ ಚಲಿಸಿದ್ದು ನನ್ನ ಗಮನಕ್ಕೆ ಬಂತು.......


ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು


No comments: