31 March 2020

ಸಿಹಿಜೀವಿಯ ಹನಿಗಳು


*ಸಿಹಿಜೀವಿಯ ಹನಿಗಳು*

*ಅಂತರ*
ಹಿಂದೆ ಮಾಹಾರಾಜರ ಆಸ್ಥಾನದಲ್ಲಿ
ಮಂತ್ರಿಗಳು ಆಸೀನರಾಗತ್ತಿದ್ದರು ದೂರ ದೂರ
ಇಂದು ಕರೋನ‌ ಪರಿಣಾಮವಾಗಿ ಎಲ್ಲರೂ ದೂರ ಪಾಲಿಸಲು  ಸಾಮಾಜಿಕ ಅಂತರ.
*ಐಸೋಲೇಷನ್* (I SOUL ATION)
ಕರೋನ ರೋಗ ಹರಡದಂತೆ
ಮಾಡಬೇಕು ಐಸೋಲೇಷನ್
ಆತ್ಮಸಾಕ್ಷಾತ್ಕಾರಕ್ಕೆ  ಮಾಡಬೇಕು
ಸಾಧನೆ ಮತ್ತು ಮೆಡಿಟೇಷನ್.
*

*ವರ*
ಅಂದು ಎಲ್ಲರಿಗೂ ಆಸೆಯಿತ್ತು
ಸಿಗಬೇಕು ವಿದೇಶದಲ್ಲಿ ನೆಲೆಸಿರುವ ವರ
ಇಂದು ವಿದೇಶದಲ್ಲಿ ನಲೆಸಿದವಗೆ
ವಧು ಬೇಕೆಂದರೆ ಹೆತ್ತವರು ಹೇಳುವರು ಇರಲಿ ಸಾಮಾಜಿಕ ಅಂತರ
*ಸಿ ಜಿ‌ ವೆಂಕಟೇಶ್ವರ*
*ತುಮಕೂರು*
9900925529
venkatesh.c.g9@gmail
Com

ಶಾಲೆಗೆ ಹೋಗಿದ್ದೆ (ಶಿಶುಗೀತೆ)

*ಶಾಲೆಗೆ ಹೋಗಿದ್ದೆ*
(ಶಿಶು ಗೀತೆ)

ಎಲ್ಲಿಗೆ ಹೋಗಿದ್ದೆ ನನ ಕಂದ
ಎಲ್ಲಾ ಹುಡುಕಿದೆ  ನನ ಕಂದ.

ನಮ್ಮ  ಶಾಲೆಗೆ ಹೋಗಿದ್ದೆ ನನ್ನಮ್ಮ
ಅಟವ ಪಾಠವ ಕಲಿತೆನು ನನ್ನಮ್ಮ.

ಯಾವ ಶಾಲೆಗೆ ಹೋಗಿದ್ದೆ ನೀನು
ಯಾವ ಪಾಠವ  ಕಲಿತೆ ನೀನು

ಸರ್ಕಾರಿ ಶಾಲೆಗೆ ಹೋಗಿದ್ದೆ ನಾನು
ಕನ್ನಡ ಪಾಠವ ಕಲಿತೆನು ನಾನು.

ಯಾವ ಆಟ ಆಡಿದೆ  ನೀನು
ಯಾರ ಜೊತೆಗೆ ನಲಿದೆ ನೀನು.

ಚೆಂಡಿನ‌ ಆಟ ಆಡಿದೆ ನಾನು
ಗೆಳೆಯರ ಕೂಡಿ ನಲಿದೆ ನಾನು.

*ಸಿ‌ ಜಿ ವೆಂಕಟೇಶ್ವರ*
*ತುಮಕೂರು*

ಪ್ರಜಾ ಪ್ರಗತಿ ಡಿಜಿಟಲ್‌ ಕಲಿಕೆಗೆ ಸಮಾಜ ವಿಜ್ಞಾನ ಬ್ಲಾಗ್

ಡಿಜಿಟಲ್‌ ಕಲಿಕೆಗೆ ಸಮಾಜ ವಿಜ್ಞಾನ ಬ್ಲಾಗ್

ಪ್ರಜಾಪ್ರಗತಿ ಕರೋನ ರಜೆಯಲ್ಲಿSSLC ಪೋಷಕರ ಪಾತ್ರ

ಕರೋನ ರಜೆಯಲ್ಲಿSSLC ಪೋಷಕರ ಪಾತ್ರ

ವಿಜಯ ಕರ್ನಾಟಕ ( ಯುಗಾದಿ ಸಂಭ್ರಮ)


ವಿಶ್ವ ವಾಣಿ (ಕರೋನ ಕಳವಳ ಪೋಷಕರ ಪಾತ್ರ)


ಶಾಂತಿ (ಹನಿ ಹನಿ ಇಬ್ಬನಿ ಬಳಗದಿಂದ ಉತ್ತಮ ನ್ಯಾನೋ ಕಥೆ ಎಂಬ ಪುರಸ್ಕಾರ ಪಡೆದ ಕಥೆ


*ಶಾಂತಿ*

(ನ್ಯಾನೋ ಕಥೆ)

"ಮಗ ಎಂ. ಬಿ .ಬಿ.ಎಸ್. ಮುಗಿಸಿ ಒಳ್ಳೆಯ ಅಂಕದೊಂದಿಗೆ ಪಾಸಾಗಿದ್ದಾನೆ ನನ್ನ ಇಚ್ಚೆಯಂತೆ ಎಂ ಡಿ ಸೀಟ್ ಸಿಗುವುದೋ ಇಲ್ಲವೋ ಎಂಬ ಚಿಂತೆ, ಬೇಸರ, ಮಗಳು ಇಂಜಿನಿಯರ್ ಮುಗಿಸಿ ಕೆಲಸಕ್ಕೆ ಹೋಗುತಿಹಳು,ಅವಳಿಗೆ ನನ್ನಿಚ್ಚೆಯ ವರ ಸಿಗುವನೆ? ಎಂಬ‌  ಚಿಂತೆ.ಹದಿನೈದು ಕೋಟಿ ಆಸ್ತಿಯಿದ್ದರೂ ಮನಸ್ಸಿಗೆ ಶಾಂತಿಯಿಲ್ಲ ನೆಮ್ಮದಿಯಿಲ್ಲ ಮನಃಶಾಂತಿ ಪಡೆಯುವುದು ಹೇಗೆ? ಪರಿಹಾರ ಸೂಚಿಸಿ ಸ್ವಾಮಿ."
ಮುಗುಳ್ನಕ್ಕು ಸ್ವಾಮೀಜಿಯವರು ಹೇಳಿದರು.
"ಭಕ್ತ, ನಿನಗೆ ಶಾಂತಿಯಿಂದ ಇರಬೇಕೆಂದು
ಇಚ್ಛೆ ಇದೆಯೇ? ಹಾಗಾದರೆ ನಿನ್ನ ಇಚ್ಛೆಗಳನ್ನು
ಶಾಂತಗೊಳಿಸು".

*ಸಿ ಜಿ ವೆಂಕಟೇಶ್ವರ*
*ತುಮಕೂರು*

30 March 2020

ವಿಮರ್ಶೆ


ಲಾಕ್ ಡೌನ್ ನ ಸದುಪಯೋಗ

ಕರೋನ ಪ್ರಯುಕ್ತ ಲಾಕ್ ಡೌನ್‌‌ ಇರುವ ಈ ಸಂಧರ್ಭದಲ್ಲಿ ನಾನು ನನ್ನ ಸಮಯವನ್ನು ಸದುಪಯೋಗ ಮಾಡಿಕೊಳ್ಳುವ ಮೂಲಕ ಲಾಕ್ ಡೌನ್ ನನಗೆ ವರವಾಗಿದೆ ಎಂದು ಭಾವಿಸಿರುವೆ.
ಈ ಮೊದಲು ತಂದಿಟ್ಟು ಓದಲಾಗದ ಪುಸ್ತಕಗಳನ್ನು ಓದಲು ಆರಂಬಿಸಿ "ಸ್ವಾಮಿಜಗದಾತ್ಮಾನಂದಜಿ" ಅವರ ಬರೆದ "ಬದುಕಲು ಕಲಿಯಿರಿ" ಪುಸ್ತಕ ಓದಿ ಮುಗಿಸಿ ಈಗ  ರಿಚರ್ಡ್ ಕಾರ್ಲಸನ್ ಬರೆದಿರುವ "ಎಷ್ಟೊಂದು ಸೊಗಸು ಈ ಬದುಕು ಎಂಬ ಪುಸ್ತಕ ಓದುತ್ತಿದ್ದೇನೆ".ನಾನು ವೃತ್ತಿಯಲ್ಲಿ ಶಿಕ್ಷಕನಾಗಿದ್ದು , ಜೊತೆಗೆ  ಕವಿಯೂ ಆಗಿದ್ದು ಹಾಗೂ ಹವ್ಯಾಸಿ  ಬ್ಲಾಗರ್ ಆಗಿರುವುದರಿಂದ ನನ್ನ ಬ್ಲಾಗ್ ನಲ್ಲಿ  ಕವನ, ನ್ಯಾನೋ ಕಥೆ,ಶೈಕ್ಷಣಿಕ ಲೇಖನ, ಗಜ಼ಲ್, ಶಿಶುಗೀತೆ,ಹನಿಗವನ,ಮುಂತಾದ ಸಾಹಿತ್ಯದ ರಚನೆ ಮಾಡಲು ನನಗೆ ಈ ಕಾಲ ಬಹಳ ಅನುಕೂಲವಾಯಿತು.ಲಾಕ್ ಡೌನ್ ನ ಈವರೆಗಿನ ಐದು ದಿನದಲ್ಲಿ ದಿನಕ್ಕೆ ಸರಾಸರಿ ಎರಡು ಸಾಹಿತ್ಯದ ರಚನೆ ಮಾಡಿರುವುದು, ಮತ್ತು ಇದಕ್ಕೆ ಪ್ರಪಂಚಾದ್ಯಂತ ಇರುವ ಓದುಗರು ಓದಿ ಆಸ್ವಾದಿಸಿ ಮೆಚ್ಚುಗೆ ಸೂಚಿಸಿರುವುದು  ಬಹಳ ಸಂತಸ ನೀಡಿದೆ.ನೀವು ಲಾಕ್ ಡೌನ್ ಸಮಯದಲ್ಲಿ ನನ್ನ ಬ್ಲಾಗ್ ಗೆ ಭೇಟಿ ನೀಡಿ ನನ್ನ ಬರಹಗಳನ್ನು ಓದಬಹುದು.
ಬ್ಲಾಗ್ ವಿಳಾಸ sridevitanya.blogspot. com
ವಂದನೆಗಳೊಂದಿಗೆ
ಸಿ ಜಿ ವೆಂಕಟೇಶ್ವರ
ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ
ಕ್ಯಾತಸಂದ್ರ
ತುಮಕೂರು
9900925529

29 March 2020

ಇಳಿಜಾರು (ನ್ಯಾನೋ ಕಥೆ)

ಇಳಿಜಾರು
ನ್ಯಾನೋ ಕಥೆ

"ನಮ್ಮ ಮಗ ಬರುತ್ತಾನೆ ನಿನ್ನೆ ಪೋನ್ ಮಾಡಿದ್ದ ನೀನೇನೂ ಚಿಂತೆ ಮಾಡಬೇಡ ಈಗ ಏನಾದರೂ ತಿನ್ನಲಿಕ್ಕೆ ತರೋಣ ಎಂದು ಹೋಟೆಲ್ಗೆ ಹೋಗಿದ್ದೆ .ಅದೇನೋ ರೋಗ ಅಂತ ಹೋಟೆಲ್ ಬಂದ್ ಆಗಿದೆ.ಅಲ್ಲೇ ಮೂಲೆ ಅಂಗಡೀಲಿ ಒಂದು ಬ್ರೆಡ್ ತಂದಿದೀನಿ‌ ತಗೋ ತಿನ್ನು " ಎಂದು  ಪಾರ್ಕ್ ನಲ್ಲಿ ಮಲಗಿದ್ದ ಇಳಿವಯಸ್ಸಿನ ತನ್ನ ಹೆಂಡತಿಗೆ ಬ್ರೆಡ್ ಕೊಟ್ಟು ತಿನ್ನು ಎಂದು ಹೇಳಿದರು ಶಿವಪ್ಪ. ಏಯ್ ಪಾರ್ಕ್ನಲ್ಲಿ ಯಾರು ಅದು ಮನೆಗೆ‌ಹೋಗಿ ಡಿಸಿ ಆರ್ಡರ್ ಇಲ್ಲಿ ಯಾರೂ ಇರಬಾರದು ಎಂಬ ಪೋಲಿಸರ ದ್ವನಿ ಕೇಳಿ ಬಾಯಲ್ಲಿ ಇಡಬೇಕು ಎಂದು ಹಿಡಿದ ಬ್ರೆಡ್ ಹಾಗೆ ಕೈಯಲ್ಲಿ ಹಿಡಿದುಕೊಂಡು ‌ಹೊರ ಬಂದ ದಂಪತಿಗಳು ಮನೆಯಿರದ ನಾವೀಗ‌ ಎಲ್ಲಿ  ಎಲ್ಲಿಗೆ ಹೋಗಬೇಕೆಂದು ದಿಕ್ಕು ಕಾಣದೇ ರಸ್ತೆಯಲ್ಲಿ ನಿಂತರು.ಅತ್ತ ಅಪ್ಪ ಅಮ್ಮನನ್ನು ನೋಡಲು ಅವರಿಗೊಂದು ಸೂರು ಕಟ್ಟಲು‌ ಕೂಡಿಟ್ಟ ಹಣದೊಂದಿಗೆ ಊರು ಸೇರಲು ಬಸ್ ನಿಲ್ದಾಣಕ್ಕೆ ಬಂದರೆ ಬಸ್ಸಿಲ್ಲ .ಯಾವುದೋ ಟೆಂಪೋ ಏರಿ ಸ್ವಲ್ಪ ದೂರ ಬಂದಾಗ ಪೊಲೀಸ್ ತಡೆದು‌ ಟೆಂಪೋದಿಂದ ಇಳಿಸಿ ,ಕರೋನ ಪ್ರಯುಕ್ತ ‌ಯಾವುದೇ ವೆಹಿಕಲ್ ಮುಂದಕ್ಕೆ  ಬಿಡಲ್ಲ ಮಾಸ್ಕ್ ಹಾಕು ಎಂದು ಲಾಟಿ ಎತ್ತಿದ್ದ ನೋಡಿ ಭಯದಿಂದ ಓಡಿದನು.ಕೊನೆಗೆ ಯಾವುದೇ ವಾಹನ ಇಲ್ಲ ಎಂದು ಖಚಿತವಾಗಿ ಅಪ್ಪ ಅಮ್ಮನ ನೋಡುವ ಕಾತರದಿಂದ ನಾಲ್ಕು ನೂರು ಕಿಲೋಮೀಟರ್ ದಾರಿಯನ್ನು ನಡೆದೆ ಸವೆಸಲು ತೀರ್ಮಾನಿಸಿ ಹೆಜ್ಜೆ ಹಾಕಿದ....ರಸ್ತೆಯ ಇಳಿಜಾರಿನಲ್ಲಿ ಮಾಯವಾದ

*ಸಿ ಜಿ ವೆಂಕಟೇಶ್ವರ*
*ತುಮಕೂರು*

ತೊಲಗಿಸು ಕರೋನ ಬೇಗ(ಶಿಶುಗೀತೆ)


*ತೊಲಗಿಸು ಕರೋನ ಬೇಗ*

(ಶಿಶುಗೀತೆ)

ಹೊರಗೆ ಹೋಗದಿರು‌‌ ಕಂದ
ಅಲ್ಲಿದೆ ಮಾರಿ ಕರೋನ
ಮನೆಯೇ ದೇಗುಲ ನಮಗೆ
ಹೊರಗೆ ಹೋಗದಿರೋಣ.

ಮನೆಯಲಿ ಆಡುತ ಪಾಡುತ
ಅಜ್ಜಿ ಕತೆಯನು ಕೇಳೋಣ
ಅಮ್ಮನು ಮಾಡಿದ ರುಚಿರುಚಿ
ತಿಂಡಿಯ ಚಪ್ಪರಿಸಿ ತಿನ್ನೋಣ.

ಚಿತ್ರವ ಬಿಡಿಸು  ಹಾಡು
ಬೆಳೆಯಲಿ ನಿನ್ನ ಹವ್ಯಾಸ
ಸಹಾಯ ಮಾಡು ಅಮ್ಮನಿಗೆ
ಕಳೆಯಲಿ ಅವರ ಆಯಾಸ

ಸ್ವಚ್ಛತೆ ಇರಲಿ ಮನೆಯಲ್ಲಿ
ಸುಳಿಯದು ಯಾವುದೆ ರೋಗ
ದೇವರ ಬೇಡುವ  ‌ನಾವು
ತೊಲಗಿಸು ಕರೋನ ಬೇಗ

*ಸಿ ಜಿ‌ ವೆಂಕಟೇಶ್ವರ*
*ತುಮಕೂರು*




27 March 2020

ಕಲಿಕೆಗೆ ಹೊಸ ದಿಕ್ಕು ತೋರುವ ದೀಕ್ಷಾ ಆಪ್


ಕಲಿಕೆಗೆ ಹೊಸ  ದಿಕ್ಕು ತೋರುವ ದೀಕ್ಷಾ ಆಪ್


"ಸ್ವದೇಶೇ ಪೂಜ್ಯತೇ ರಾಜಾ ವಿದ್ವಾನ್ ಸರ್ವತ್ರ ಪೂಜ್ಯತೇ" "knowledge is power" "ನಹಿ ಜ್ಞಾನೇನ ಸದೃಶಂ " "ವಿದ್ಯಾ ವಿಹೀನಾಂ ಪಶುಃ" ಮುಂತಾದ ನುಡಿಮುತ್ತುಗಳು ಜ್ಞಾನದ ಮಹತ್ವ ತಿಳಿಸುತ್ತವೆ  ಹಿಂದಿನ ಕಾಲದ ಶಿಕ್ಷಕರು  ವಿದ್ಯಾರ್ಥಿಗಳಿಗೆ  ವಿದ್ಯೆಯನ್ನು ಕಲಿಸಲು ಮರಳಿನ ಮೇಲೆ ಬರೆಯುತ್ತಿದ್ದರು ಕ್ರಮೇಣ ಸ್ಲೇಟ್ ಬಳಪ ,ಪೆನ್ ಪೆನ್ಸಿಲ್ ಪುಸ್ತಕಗಳನ್ನು ಬಳಸಿ ವಿದ್ಯೆಯನ್ನು ಕಲಿಸುತ್ತಿದ್ದರು ಕ್ರಮೇಣ ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆ ಆದಂತೆ ಕಲಿಸುವ ಕಲಿಯುವ ಪ್ರಕ್ರಿಯೆಯು ಡಿಜಿಟಲ್ ಆಗಿ‌ ಕಲಿಕೆ ಹೆಚ್ಚು ಆಸಕ್ತಿದಾಯಕ ಮತ್ತು ಮನರಂಜನೀಯವಾಗಿದೆ. ಈಗೆ ದೇಶದ ಎಲ್ಲಾ ಶಿಕ್ಷಕರು, ಮಕ್ಕಳು ಮತ್ತು ಪೋಷಕರ ಪಾಲಿಗೆ ಉಚಿತವಾಗಿ ಡಿಜಿಟಲ್‌ ಶಿಕ್ಷಣ ನೀಡುವ ಆಪ್ ಎಂದರೆ ದೀಕ್ಷ (DIKSHA)
DIKSHA ಎಂದರೆ DIGITAL INITIATION FOR KNOWLEDGE SHARING ಎಂದರ್ಥ ಅಂದರೆ ಡಿಜಿಟಲ್ ರೂಪದಲ್ಲಿ ಜ್ಞಾನವನ್ನು ಎಲ್ಲಾ ಕಡೆ ಹಂಚುವ ಒಂದು ಉಪಕ್ರಮ.


'ನಮ್ಮ ಶಿಕ್ಷಕರು ನಮ್ಮ ನಾಯಕರು '  ಎಂಬ ಅಡಿಬರಹದಲ್ಲಿ ಮೂಡಿಬಂದಿರುವ   ಈ ಆಪ್ ಕಲಿಯಲು ಮತ್ತು ಕಲಿಸಲು ಬಹುಪಯೋಗಿ.  ಈ ಉಪಕ್ರಮವನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್‌ಆರ್‌ಡಿ) ಬೆಂಬಲಿಸುತ್ತದೆ ಮತ್ತು ಭಾರತದಲ್ಲಿ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ (ಎನ್‌ಸಿಟಿಇ) ನೇತೃತ್ವದಲ್ಲಿದೆ.ದೀಕ್ಷಾ ಭಾರತದ ರಾಷ್ಟ್ರೀಯ ಡಿಜಿಟಲ್ ಮೂಲಸೌಕರ್ಯವಾಗಿದೆ.

 ಇದು  ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ನಿಗದಿತ ಶಾಲಾ ಪಠ್ಯಕ್ರಮಕ್ಕೆ ಸಂಬಂಧಿಸಿದ ಕಲಿಕಾ ಸಾಮಗ್ರಿಗಳನ್ನು ಮಕ್ಕಳು ಬಳಸುವ ಕ್ರಮಕ್ಕೆ ಪೂರಕವಾಗಿ ಬಳಸಬಹುದು.  ತರಗತಿಯ  ಶಿಕ್ಷಕರಿಗೆ ಪಾಠ ಯೋಜನೆಗಳು, ವರ್ಕ್‌ಶೀಟ್‌ಗಳು ಮತ್ತು ಚಟುವಟಿಕೆಗಳಂತಹ ಸಾಧನಗಳನ್ನು ಕ್ರಮಬದ್ಧವಾಗಿ ಬಳಸಲು ಸಹಕಾರಿ. ವಿದ್ಯಾರ್ಥಿಗಳು ವಿವಿಧ ವಿಷಯಗಳ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು, ಪಾಠಗಳನ್ನು ಕಲಿಯಲು, ಮತ್ತು ದೃಕ್-ಶ್ರವಣ  ಅಭ್ಯಾಸ ಚಟುವಟಿಕೆಗಳನ್ನು ಮಾಡುವ ಮೂಲಕ ಚೆನ್ನಾಗಿ ಕಲಿಯಲು ಉಪಯುಕ್ತವಾದ ಮಾದ್ಯಮ. ಪಾಲಕರು ತರಗತಿಯ ಚಟುವಟಿಕೆಗಳನ್ನು ಗಮನಿಸಿ ಅವರ ಮಕ್ಕಳಿಗೆ ಬರುವ ಅನುಮಾನಗಳನ್ನು ಪರಿಹರಿಸಲು ಈ ಆಪ್ ಮಾರ್ಗದರ್ಶನ ನೀಡುತ್ತದೆ.

  ದೀಕ್ಷಾ ಅಪ್ಲಿಕೇಶನ್ ಮುಖ್ಯಾಂಶಗಳು

 ಭಾರತದ ವಿವಿಯ ಭಾಗದ  ಶಿಕ್ಷಕರು ಒಂದರಿಂದ ಹತ್ತನೇ ತರಗತಿಯ  ವಿವಿಧ ಪಠ್ಯಕ್ರಮದ ವಿವಿಧ ಮಾಧ್ಯಮ ಬಹುತೇಕ ಎಲ್ಲಾ ವಿಷಯಗಳ ಸಿದ್ದ ಸಂಪನ್ಮೂಲಗಳನ್ನು ಉಚಿತವಾಗಿ ನೀಡುವ ಒಂದು ತಾಣವೆ ದೀಕ್ಷಾ.
 ಪಠ್ಯಪುಸ್ತಕಗಳಿಂದ ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡಿ ಮತ್ತು ವಿಷಯಕ್ಕೆ ಸಂಬಂಧಿಸಿದ ಹೆಚ್ಚುವರಿ ಕಲಿಕಾ ವಸ್ತುಗಳನ್ನು ಹುಡುಕಿ
 ಇಂಟರ್ನೆಟ್ ಸಂಪರ್ಕವಿಲ್ಲದಿದ್ದರೂ ವಿಷಯವನ್ನು ಆಫ್‌ಲೈನ್‌ನಲ್ಲಿ ಸಂಗ್ರಹಿಸಿ ಮತ್ತು ಹಂಚಿಕೊಳ್ಳಲು ಇದು ಬಹು ಉಪಯುಕ್ತ.ಶಾಲಾ ತರಗತಿಯಲ್ಲಿ ಕಲಿಸಿದ ವಿಷಯಗಳಿಗೆ ಸಂಬಂಧಿಸಿದ ಪಾಠಗಳು ಮತ್ತು ವರ್ಕ್‌ಶೀಟ್‌ಗಳನ್ನು ಮಕ್ಕಳು ಹುಡುಕಿ ಸ್ವಯಂ ಕಲಿಕೆ ಮತ್ತು ಸ್ವಯಂ ಮೌಲ್ಯಮಾಪನವನ್ನು ಮಾಡಿಕೊಳ್ಳಲು ಈ ಆಪ್ ಸಹಾಯಕವಾಗುತ್ತದೆ.ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಅಥವಾ ಮರಾಠಿ ಹಾಗೂ ಇತರೆ ಪ್ರಾದೇಶಿಕ ಭಾಷೆಗಳಲ್ಲಿ ಅಪ್ಲಿಕೇಶನ್ ಲಬ್ಯವಿರುವುದರಿಂದ ಗ್ರಾಮೀಣ ನಗರ ಎಂಬ ಬೇಧವಿಲ್ಲದೆ ಎಲ್ಲರಿಗೆ ಎಲ್ಲೆಡೆ ಶಿಕ್ಷಣ ಎಂಬ ಧ್ಯೇಯವನ್ನು ಈ ಆಪ್ ಹೊಂದಿದೆ.ದೇಶದ ವಿವಿಧ ಭಾಗಗಳ ವಿವಿಧ ವಿಷಯಗಳ ತಜ್ಞ ಶಿಕ್ಷಕರು ರಚಿಸಿರುವ ಈ ಕಂಟೆಂಟ್   ಪಠ್ಯಕ್ಕೆ ಸಂಬಂದಿಸಿದಂತೆ ವೀಡಿಯೊಗಳು , ಪಠ್ಯ ಪುಸ್ತಕಗಳು, ಪಿಡಿಎಫ್ ಗಳು ಮುಂತಾದ ಸಂಪನ್ಮೂಲಗಳನ್ನು ಹೊಂದಿವೆ .

 ಶಿಕ್ಷಕರಿಗೆ ಅನುಕೂಲಗಳು

 ಈ ಆಪ್ ಸಹಾಯದಿಂದ ಶಿಕ್ಷಕರು ತರಗತಿಯನ್ನು ಆಸಕ್ತಿದಾಯಕವಾಗಿಸಲು ಸಂವಾದಾತ್ಮಕ ಮತ್ತು ಆಕರ್ಷಕವಾಗಿ ಬೋಧಿಸುವ ವಸ್ತುಗಳನ್ನು ಹುಡುಕಿ
 ಕ್ಲಿಷ್ಟಕರವಾದ ಪರಿಕಲ್ಪನೆಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಲು ಇತರ ಶಿಕ್ಷಕರೊಂದಿಗೆ ಉತ್ತಮ ಅಭ್ಯಾಸಗಳನ್ನು ನೋಡಿ ಮತ್ತು ಹಂಚಿಕೊಳ್ಳಲು ಈ ಆಪ್ ವರದಾನವಾಗಿದೆ.
ಅವರ ವೃತ್ತಿಪರ ಅಭಿವೃದ್ಧಿಯನ್ನು ಹೆಚ್ಚಿಸಲು ಈ ಆಪ್ ಅನೇಕ ಆನ್ಲೈನ್ ಕೋರ್ಸ್ ಪರಿಚಯ ಮಾಡಿದೆ. ಆನ್ಲೈನ್  ಕೋರ್ಸ್‌ಗಳಿಗೆ ಸೇರಿ ಕೋರ್ಸ್ ಪೂರ್ಣಗೊಂಡ ನಂತರ ಬ್ಯಾಡ್ಜ್‌ಗಳು ಮತ್ತು ಪ್ರಮಾಣಪತ್ರಗಳನ್ನು ಪಡೆಯಬಹುದು.

 ಶಿಕ್ಷಕರು ಮಕ್ಕಳಿಗೆ ಕಲಿಸಿದ ವಿಷಯದ ಬಗ್ಗೆ  ವಿದ್ಯಾರ್ಥಿಗಳ ತಿಳುವಳಿಕೆಯನ್ನು ಪರೀಕ್ಷಿಸಲು ಡಿಜಿಟಲ್ ಮೌಲ್ಯಮಾಪನಗಳನ್ನು ನಡೆಸಲು ಇದು ಉಪಯುಕ್ತವಾದ ಆಪ್ ಆಗಿದೆ.

 ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಅನುಕೂಲಗಳು

ಈ ಆಪ್ ನಲ್ಲಿ ಎಲ್ಲಾ ಪಠ್ಯ ಪುಸ್ತಕಗಳು ಲಭ್ಯವಿದ್ದು ವಿದ್ಯಾರ್ಥಿಗಳು ಮತ್ತು ಪೋಷಕರು ಬೇಕಾದ ಪಠ್ಯ ಪುಸ್ತಕಗಳನ್ನು ಒಮ್ಮೆ ಡೌನ್‌ಲೋಡ್ ಮಾಡಿಕೊಂಡು ಆಪ್ಲೈನ್ ನಲ್ಲಿ  ಬಳಸಬಹುದು.

 ತರಗತಿಯಲ್ಲಿ ಕಲಿತ  ಪಾಠಗಳನ್ನು ಸುಲಭವಾಗಿ ಮತ್ತೊಮ್ಮೆ ಮನನ ಮಾಡಿಕೊಂಡು, ಕಲಿಯಬಹುದು. ಪಠ್ಯಪುಸ್ತಕದಲ್ಲಿ ಇರುವ  ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು.

ಪೋಷಕರು ತಮ್ಮ ಮಕ್ಕಳು  ತರಗತಿಯಲ್ಲಿ ಕಲಿತ ಪಾಠಗಳನ್ನು ತಿಳಿಯಲು  ಕಷ್ಟಕರವಾದ ವಿಷಯಗಳ ಬಗ್ಗೆ ಮಾಹಿತಿ ಹುಡುಕಿ ಸಮಸ್ಯೆಗಳನ್ನು ಪರಿಹರಿಸಲು ,ಅಭ್ಯಾಸ ಮಾಡಿಸಲು, ಮತ್ತು ಉತ್ತರ ಸರಿಯಾಗಿದೆಯೆ ಅಥವಾ ಇಲ್ಲವೇ ಎಂಬುದರ ಕುರಿತು ತಕ್ಷಣದ ಪ್ರತಿಕ್ರಿಯೆಯನ್ನು ಪಡೆಯಲು ಮನರಂಜನೆಯ ಮೂಲಕ ಮಕ್ಕಳ ಕಲಿಕೆಯನ್ನು ದೃಢಪಡಿಸಲು ಪೋಷಕರು ಈ ಆಪ್ ಬಳಸಬಹುದು.

ದೀಕ್ಷಾ ಆಪ್ ಬಳಸುವುದು ಹೇಗೆ?

ಪ್ಲೇ ಸ್ಟೋರ್ ಮತ್ತು ಐ ಒ ಎಸ್ ನಲ್ಲಿ  ದಿಕ್ಷಾ ಆಪ್ ಅನ್ನು ‌ಡೌನ್ಲಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಿಕೊಂಡ ನಂತರ ಶಿಕ್ಷಕರು ಅಥವಾ ವಿದ್ಯಾರ್ಥಿಯಾಗಿ ರಿಜಿಸ್ಟರ್ ಮಾಡಿಕೊಳ್ಳುವ ಆಯ್ಕೆ ಲಭ್ಯವಾಗುತ್ತವೆ ನಮಗೆ ಬೇಕಾದ ಆಯ್ಕೆ ಮಾಡಿಕೊಂಡು ಮುಂದುವರೆದರೆ ನಮ್ಮ ಪಠ್ಯ ಆಯ್ಕೆ ಗೆ ಅವಕಾಶ ನೀಡುತ್ತದೆ ಇದರಲ್ಲಿ ಕೇಂದ್ರ, ರಾಜ್ಯ ಈಗೆ ವಿವಿಧ ಪಠ್ಯಕ್ರಮದ ಆಯ್ಕೆಯಲ್ಲಿ ನಮಗೆ ಬೇಕಾ ಪಠ್ಯ ಆಯ್ಕೆ ಮಾಡಿಕೊಳ್ಳಲು ಅವಕಾಶ ಇದೆ .ನಂತರ ಯಾವ ತರಗತಿಯ ವಿಷಯ ಬೇಕು ಎಂದು ಆಯ್ಕೆ ಮಾಡಿಕೊಳ್ಳಬೇಕು ನಂತರ ನಮಗೆ ವಿವಿಧ ಈ ಕಂಟೆಂಟ್ ಲಭ್ಯವಾಗತ್ತದೆ ಮುಂದುವರೆದು ಅದರಲ್ಲಿ ತರಗತಿವಾರು ವಿಷಯವಾರು ಕಂಟೆಂಟ್ ನಾಲ್ಕು ವಿಧದಲ್ಲಿ ಲಭ್ಯವಿವೆ ಮೊದಲನೆಯದು ಪಠ್ಯ ಪುಸ್ತಕ ಎರಡನೆಯದು ಪಾಠಕ್ಕೆ ಸಂಬಂಧಿಸಿದ ವೀಡಿಯೋಗಳು, ಮೂರನೆಯದಾಗಿ ಡಾಕ್ಯುಮೆಂಟ್, ನಾಲ್ಕನೇಯ ಮತ್ತು ಮೌಲ್ಯಮಾಪನವನ್ನು ಮಾಡಲು ಬಹು ಉಪಯುಕ್ತ ಇಂಟರಾಕ್ಟೀವ್ ಪ್ರಶ್ನೆ ಉತ್ತರ ವಿವಿಧ ಮಾದರಿ ಲಭ್ಯ ಅದರಲ್ಲಿ ಬಹು ಆಯ್ಕೆ ಪ್ರಶ್ನೆ, ಒಂದು ಅಂಕ,ಮತ್ತು ಸರಳ ಉತ್ತರವಿರುವ  ಪ್ರಶ್ನೆ ಮತ್ತು ಉತ್ತರ ಮಾದರಿ ಲಭ್ಯ ಇವು ಕೆ ಬಿ‌ಸಿ ಮಾದರಿಯಲ್ಲಿ ಕಲಿಯುವವರ ಆಸಕ್ತಿ ಹೆಚ್ಚು ಮಾಡಿ ಕಲಿಕೆ ಮನರಂಜನಾದಾಯಕಾವಾಗಲು ಸಹಕಾರಿ. ಆದ್ದರಿಂದ ಕೆಲ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಕೆಲ ಸ್ಪರ್ಧಾರ್ಥಿಗಳು ಸಹ ಈ ಆಪ್ ಹೆಚ್ಚು ಬಳಸಿಕೊಂಡು ಉತ್ತಮ ಅಂಕ ಗಳಿಸಿದ ಉದಾಹರಣೆ ಇವೆ.

ಪೂರ್ವ ಸಿದ್ದತಾ ರಜೆ ಮತ್ತು ದೀಕ್ಷಾ

ವಿವಿಧ ರಾಜ್ಯಗಳು ಮಕ್ಕಳಿಗೆ‌ ವಾರ್ಷಿಕ ಪರೀಕ್ಷೆಯ ಮೊದಲು ಓದಲು ಪೂರ್ವ ಸಿದ್ದತಾ ರಜೆ (study holiday)  ನೀಡುವರು ಇಂತಹ ಸಂದರ್ಭಗಳಲ್ಲಿ ಓದಿದ ವಿಷಯಗಳ ಪುನರ್ಮನನ ಮಾಡಿಕೊಳ್ಳಲು ಮತ್ತು ಸ್ವ ಮೌಲ್ಯ ಮಾಪನ  ಮಾಡಿಕೊಳ್ಳಲು ಈ ಆಪ್ ಬಹು ಉಪಯೋಗಕಾರಿಯಾಗಿದೆ.

 ಈ‌ ಕಂಟೆಂಟ್

ಈ  ಆಪ್‌ ನಲ್ಲಿ ಮುಖ್ಯವಾಗಿ ನಮಗೆ ಈ ಕಂಟೆಂಟ್ ಲಭ್ಯವಿದ್ದು ಇದಕ್ಕೆ ಅಧಿಕಾರಿಗಳು ,ತಜ್ಞ ಶಿಕ್ಷಕರು, ಮತ್ತು ತಂತ್ರಜ್ಞರ ಅಪಾರ ಶ್ರಮದ ಹಿನ್ನೆಲೆ ಇದೆ. ಈಗಾಗಲೇ ಬಹುತೇಕ ರಾಜ್ಯಗಳ ಶಿಕ್ಷಣ ಸಂಶೋಧನಾ ನಿರ್ದೇಶನಾಲಯಗಳು ಈ ಆಪ್ ಅಭಿವೃದ್ಧಿ ಪಡಿಸಿ ಬಳಕೆಗೆ ಬಿಟ್ಟಿವೆ .ನಮ್ಮ ರಾಜ್ಯವು ಈ ವಿಚಾರದಲ್ಲಿ ಮುಂದಡಿ ಇಟ್ಟಿದೆ .ನಮ್ಮ ಡಿ ಎಸ್ ಇ ಆರ್ ,ಟಿ ,ನಿರ್ದೇಶಕರು. ಈ ಕಂಟೆಂಟ್ ಮುಖ್ಯಸ್ಥರು ಮತ್ತು ವಿವಿಧ ವಿಷಯ ಸಂಪನ್ಮೂಲ ಶಿಕ್ಷಕರು ಈ ಕಂಟೆಂಟ್ ಸಿದ್ದಪಡಿಸಿ ಅದನ್ನು ಈಗಾಗಲೇ ಆನ್ ಲೈನ್ ನಲ್ಲಿ ಲಭ್ಯವಿರುವಂತೆ ಮಾಡಿರುವರು ಈ ತಂಡದಲ್ಲಿ ನಾನು ಒಬ್ಬ ಸದಸ್ಯನಾಗಿ ಇಪ್ಪತ್ತಕ್ಕೂ ‌ಹೆಚ್ಚು ಸಮಾಜ ವಿಜ್ಞಾನದ ಸಂಪನ್ಮೂಲಗಳನ್ನು ಸೃಷ್ಟಿ ಮಡಿರುವೆ  ಎಂದು ಹೇಳಲು‌ ಹೆಮ್ಮೆ ಅನಿಸುತ್ತದೆ. ಸಂಪೂರ್ಣವಾಗಿ ಉಚಿತವಾಗಿ ಸಿಗುವ ಈ ಅಮೂಲ್ಯವಾದ ಸಂಪನ್ಮೂಲಗಳನ್ನು   ಸಮರ್ಪಕವಾಗಿ ಬಳಕೆ ಮಾಡಿ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಎಲ್ಲಾ ತರಗತಿಯ ಶಿಕ್ಷಕರ, ಮಕ್ಕಳ ಮತ್ತು ಪೋಷಕರ ಮನಃಪೂರ್ವಕವಾದ ಸಹಕಾರ ಅಗತ್ಯ.

ಸಿ ಜಿ ವೆಂಕಟೇಶ್ವರ
ತುಮಕೂರು

ಬೊಂಬೆಗಳು ನಾವು ( ವಿಶ್ವ ರಂಗ ಭೂಮಿ ದಿನದ ಕವನ)

*ಬೊಂಬೆಗಳು ನಾವು*

(ಇಂದು ವಿಶ್ವ ರಂಗಭೂಮಿ ದಿನ)

ಜಗದ ರಂಗಭೂಮಿಯ
ಬೊಂಬೆಗಳು ನಾವು
ರಂಗನಾಡಿಸಿದಂತೆ
ಆಡುವ ಸೂತ್ರದ
ಬೊಂಬೆಗಳು ನಾವು.

ನವರಸವ ತೋರಿ
ನವನವೀನದಿ ನಟಿಸಿ
ನಮಗರಿಯದೆ
ನಮ್ಮವರ ತೊರೆದು
ನಾಮದ ಒಡೆಯನ
ಸೇರುವ ಬೊಂಬೆಗಳು ನಾವು.

ಅತಿಯಾಸೆ ಪಡುತ
ಮಿತಿಮೀರಿ ಮೆರೆದು
ಸತಿಸುತರ ನಂಬಿ
ಅತಿಪಾಪ ಮಾಡಿ
ಪತಿತ ಪಾವನನು
ಸ್ತುತಿಸುವ ಬೊಂಬೆಗಳು ನಾವು.

ನಾನಾ ವೇಷದ
ನಾನಾ ಭಾಷೆಯ
ನಾನಾ ಭಾವದ
ನಟನೆಯ ಮಾಡಿ
ನಾನತ್ವವ ತೊರೆದು
ನಾನೂ ನೀನು
ಅವನಲಿ‌ ಲೀನವಾಗುವ
ಬೊಂಬೆಗಳು ನಾವು.

*ಸಿ ಜಿ ವೆಂಕಟೇಶ್ವರ*
*ತುಮಕೂರು*




25 March 2020

ಯುಗಾದಿV/s ಕರೋನ

*ಯುಗಾದಿv/sಕರೋನ (ಹನಿಗಳು)*

           *೧*
*ಯಡುದಾರ*

ಪ್ರತೀ ವರ್ಷಯುಗಾದಿ ಹಬ್ಬಕ್ಕೆ
ಹೊಸ ಬಟ್ಟೆಗಳನ್ನು ತೊಟ್ಟು
ವರ್ಣಿಸಲಸದಳ ಸಡಗರ
ಈ ವರ್ಷ ಕರೋನ ಪ್ರಭಾವ
ಬಟ್ಟೆ ಅಂಗಡಿಗೆ ಬೀಗ
ಕೊಳ್ಳಲಾಗಿಲ್ಲ ಒಂದು ಉಡುದಾರ.

         *೨*

*ಕರೋನ*

ಬಾಲ್ಯದಲ್ಲಿ ಉಗಾದಿ ಹಬ್ಬಕ್ಕೆ
ಬಟ್ಟೆ ತಂದರೂ ಸಮಯಕ್ಕೆ
ಕೊಡದೆ ಹಾಕಲಾಗುತ್ತಿರಲಿಲ್ಲ
ಹೊಸ ಬಟ್ಟೆಗಳನ್ನು ಕಾರಣ
ಟೈಲರ್ ರಾಮಣ್ಣ
ಈ ವರ್ಷವೂ ಹೊಸ ಬಟ್ಟೆ
ಇಲ್ಲದೇ ಉಗಾದಿ ನಡೆದಿದೆ
ಕಾರಣ ಕರೋನ

*ಸಿ ಜಿ ವೆಂಕಟೇಶ್ವರ*
*ತುಮಕೂರು*

ಒಳಿತಾಗಲಿ ಸರ್ವತ್ರ (ಉಗಾದಿ ಹಬ್ಬದ ಶುಭಾಶಯಗಳು)

*ಒಳಿತಾಗಲಿ ಸರ್ವತ್ರ*

*ಉಗಾದಿ ಹಬ್ಬದ ಶುಭಾಶಯಗಳು*

ಬಂದಿದೆ ನವ ಸಂವತ್ಸರ ಶಾರ್ವರಿ
ಕರೋನ ಇದ್ದರೂ ಬೇಡ ವರಿ
ನಮ್ಮಾಚರಣೆಗಳು ಇದ್ದರೆ ಸರಿ
ಕಾಪಾಡುವನು ನಮ್ಮ ಶ್ರೀಹರಿ.

ಉಳಿಯಲೇ ಬೇಕು ಆಲಯದಿ
ಅಳಿಸಲೇ ಬೇಕು ಮಹಾವ್ಯಾಧಿ
ಆರೋಗ್ಯವಾಗಲಿ ನಮ್ಮ ನಿಧಿ
ಅಳಿಯಲಿ ರೋಗ ಈ  ಜಗದಿ.

ಮುಂಜಾಗ್ರತೆಯನು ಪಾಲಿಸೋಣ
ಮಾಹಾಮಾರಿಯ‌ ತೊಲಗಿಸೋಣ
ನಾವು ಬದುಕಿ ಇತರರ ಬದುಕಿಸೋಣ
ಸರ್ವರ ಸುಖವನು ಕೋರೋಣ .

ಸ್ವಚ್ಚತೆಯಾಗಲಿ ಮಹಾಮಂತ್ರ
ಪಠಿಸೋಣ ಮೃತ್ಯುಂಜಯಮಂತ್ರ
ಸಾಮಾಜಿಕ ಅಂತರ ಸರಿ ಸೂತ್ರ
ಶೀಘ್ರದಿ ಒಳಿತಾಗಲಿ ಸರ್ವತ್ರ .

*ಸಿ ಜಿ‌ ವೆಂಕಟೇಶ್ವರ*




23 March 2020

ಗಜ಼ಲ್ ೬೧(ಬಾ ಇನಿಯ)

ಗಜ಼ಲ್ ೬೧

ತಲೆಬಾಗಿಲಲಿ ತಲೆಬಾಗಿ ನಿಂತಿಹೆನು ತಣಿಸಲು ಬಾ ಇನಿಯ
ನಗದೊಡನೆ ಮಿನುಗುತ ನಿಂತಿರುವೆ ನಗಿಸಲು ಬಾ ಇನಿಯ.

ವಡ್ಯಾಣ ಬಿಗಿಯಾಗುತಿದೆ ನಿನ್ನ ಲೀಲೆಗಳ  ನೆನದು
ಬಂಡಿಯಿಂದಿಳಿದು ವಿರಹ ವೇದನೆ ಬಿಡಿಸಲು ಬಾ ಇನಿಯ.

ರಂಗಿನ ಸೀರೆಯುಟ್ಟು ರಂಗವಲ್ಲಿ ಹಾಕಿರುವೆನು
ರಂಗಮಂಚದಿ ರಂಗಿನಾಟದಿ  ರಂಗೇರಿಸಲು ಬಾ ಇನಿಯ.

ಕಂಠೀಹಾರವೇಕೋ ನಿಲ್ಲುತ್ತಿಲ್ಲ ಏದುಸಿರು ಬಿಡುತಿಹೆ
ಬಿರಿದೆದೆಯ ಭಾರವನು  ಇಳಿಸಲು ಬಾ ಇನಿಯ.

ದುಂಡು ಮಲ್ಲಿಗೆ ಚಂದನದ ಸೌಗಂಧವಿದೆ ನನ್ನಲಿ
*ಸಿಹಿಜೀವಿ* ಯಾಗಿ ಚೆಂದುಟಿ ಚುಂಬಿಸಲು ಬಾ ಇನಿಯ.

*ಸಿ ಜಿ ವೆಂಕಟೇಶ್ವರ*
*ತುಮಕೂರು*

ಮಾ(ದಾ)ನವ .


*ಮಾ(ದಾ)ನವ*

ನಾನು ಮಾನವ
ಕೆಲಗುಣಗಳಲಿ
ನಿಜಕ್ಕೂ ದಾನವ
ನನಗೆ ಸರಿಸಾಟಿಯುಂಟೆ
ಈ ಜಗದಿ, ಆರು ಸಮರು ಎನಗೆ
ನಾನೇ ಶ್ರೇಷ್ಠ ಈ ಜಗದಿ
ನನಗೆ ನಾನೇ ಸಮ
ಮಿಕ್ಕ ಜೀವಿಗಳು ತೃಣಕ್ಕೆ ಸಮ

ಜಗದೆತ್ತರದ ಬೆಟ್ಟ ಹತ್ತಿರುವೆ
ಚಂದಿರನ ಮೇಲೆ ಪಾದ ಇಟ್ಟಿರುವೆ
ಇಂದ್ರನ ಮೀರಿಸಿದ ವೈಭವ ಪಡೆದಿರುವೆ
ಮಂಗಳನ ಮುಟ್ಟಿ ಬಂದಿರುವೆ
ಸೂರ್ಯನ ಹಿಡಿಯಲು ಪ್ರಯತ್ನಿಸುತ್ತಿರುವೆ.
ನಾನು ಕಂಡುಹಿಡಿದಿರುವುದು
ಒಂದೇ ಎರಡೇ ನನ್ನನೇ ಹೋಲುವ
ನರ ,ಇತರೆ ಪ್ರಾಣಿ ,ರೋಬಾಟ್,
ನನ್ನ ಸಾಧನೆ ಅಲ್ಲವೇ ಬೊಂಬಾಟ್
ಸಿದ್ದನಾಗಿದ್ದೇನೆ ಆಡಲು ಬಾಂಬಿನಾಟ.

ಏನಿದ್ದರೇನು ಬಂತು
ನನ್ನ ಸೊಕ್ಕನಿಳಿಸಿದೆ
ಒಂದು ಸೂಕ್ಷ್ಮ ಜೀವಿ
ಪಾರಾಗುವ ಪರಿಯೆಂತು
ತಿಳಿಯುತ್ತಿಲ್ಲ.
ಆದರೂ ನಾನೇ ಹೆಚ್ಚೆಂಬ ಧಿಮಾಕು
ಕಡಿಮೆಯಾಗುತ್ತಿಲ್ಲ
ಏಕೆಂದರೆ ನಾನು
ಮಾ (ದಾ)ನವ.

*ಸಿ ಜಿ ವೆಂಕಟೇಶ್ವರ*
*ತುಮಕೂರು*

20 March 2020

ಸಂತಸದ ದಿನ(ಹನಿ)


ಸಂತಸದ ದಿನ*
ಇದ್ದರೂ ಕರೋನ,
ಧೈರ್ಯವಾಗಿರೋಣ.
ಜಾಗೃತ ರಾಗಿರೋಣ.
ಕರೋನ ಓಡಿಸೋಣ. ಸಂತಸವಾಗಿರೋಣ.
ಇಂದು ಸಂತಸದ ದಿನ.    
(ಇಂದು ವಿಶ್ವ ಸಂತಸದ ದಿನ )

*ಸಿ ಜಿ ವೆಂಕಟೇಶ್ವರ*
*ತುಮಕೂರು*

19 March 2020

ಮಡಿ(ಹನಿ)

*ಮಡಿ*

ಗಾಂಧೀಜಿಯವರು
ಅಂದು ಸ್ವಾತಂತ್ರ್ಯ
ಪಡೆಯಲು ಗುಡುಗಿದರು
*"ಮಾಡು ಇಲ್ಲವೇ ಮಡಿ"*
ಇಂದು ಕರೋನದಿಂದ
ಪಾರಾಗಲು ಪದೇ ಪದೇ
ಕೈತೊಳೆದು ಶುದ್ದವಾಗಿ
ಇರಬೇಕು ಮಡಿ .
ಆದ್ದರಿಂದ ಈಗ ಹೇಳಬೇಕು
*"ಮಡಿ ಇಲ್ಲವೇ ಮಡಿ"*

*ಸಿ ಜಿ ವೆಂಕಟೇಶ್ವರ*
*ತುಮಕೂರು*

17 March 2020

ಕರೋನ ರಜೆಯಲ್ಲಿ ಎಸ್ ಎಸ್ ಎಲ್ ಸಿ ಪೋಷಕರ ಪಾತ್ರ

ಕರೋನ ರಜೆಯಲಿ ಎಸ್‌ ಎಸ್ ಎಲ್ ಸಿ   ಪೋಷಕರ ಪಾತ್ರ

"ಕರೋನ  ಬಿಟ್ಟು ಎಲ್ಲಾ ಪರೀಕ್ಷೆ ರದ್ದು " ." ನಮ್ಮ ಕಾಲದಲ್ಲಿ ನಾವು ಎಲ್ಲಾ ದೇವರಿಗೆ ಪೂಜೆ ಮಾಡಿದರೂ ಪರೀಕ್ಷೆ ನಿಲ್ಲಲಿಲ್ಲ ಇಂದಿನ ಮಕ್ಕಳು ದೇವರಿಗೆ ಕೈ ಮುಗಿಯುವುದೇ ಇಲ್ಲ ಆದರೂ ಪರೀಕ್ಷೆಯಿಲ್ಲದೇ ಎಲ್ಲರೂ ಪಾಸ್ " ಇಂತಯ ಜೋಕ್ ಗಳು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರೂ ನನಗೇಕೋ ನಗು ಬರಲಿಲ್ಲ. ನನಗೇ ಅಲ್ಲ ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಕಾಳಜಿ ಇರುವ ಯಾವ ಶಿಕ್ಷಕರಿಗೂ ಇಂತಹ ಜೋಕ್ ನಿಂದ  ನಗು ಬರುವುದಿಲ್ಲ.
ಕೊರೋನೋ ಭೀತಿಯಿಂದ ಅದನ್ನು ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳನ್ನು ನಾವು ಸ್ವಾಗತಿಸಲೇಬೇಕು.ಇದರ ಪರಿಣಾಮವಾಗಿ ರಾಜ್ಯಾದ್ಯಂತ ಆರನೇಯ ತರಗತಿಯವರೆಗಿನ ಮಕ್ಕಳಿಗೆ ಪರೀಕ್ಷೆ ಇಲ್ಲದೇ ಅವರ ಈ ವರ್ಷದ ಹಿಂದಿನ ಘಟಕ ಪರೀಕ್ಷೆ ಸಂಕಲನಾತ್ಮಕ ಪರೀಕ್ಷೆ  ಪಾಸು ಮಾಡುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ.ಇತ್ತೀಚಿನ ಅದೇಶದ ಪ್ರಕಾರ ಏಳು.ಎಂಟು ಮತ್ತು ಒಂಭತ್ತನೆಯ ತರಗತಿಯ ಪರೀಕ್ಷೆಗಳನ್ನು ಮಾರ್ಚ್ ತಿಂಗಳ ಮೂವತ್ತೊಂದನೇ ತಾರೀಖಿನ ವರೆಗೆ ಸ್ಟಡಿ ಹಾಲಿಡೆ ನೀಡಿದ್ದಾರೆ.ಇದರ ಜೊತೆಗೆ ಹತ್ತನೆಯ ತರಗತಿಯ ವಿದ್ಯಾರ್ಥಿಗಳಿಗೆ ಸ್ಟಡಿ ಹಾಲಿಡೆ ನೀಡಿರುವುದು ಮಕ್ಕಳ ಆರೋಗ್ಯ ದೃಷ್ಟಿಯಿಂದ ಮತ್ತು ರೋಗ ಹರಡುವುದನ್ನು ತಡೆಗಟ್ಟಲು ಸ್ವಾಗತಾರ್ಹ.ಆದರೆ ಇದು ಹತ್ತನೇ ತರಗತಿಯ ಫಲಿತಾಂಶದ ಮೇಲೆ ಪ್ರಭಾವ ಬೀರಬಹುದು. ನಮ್ಮ ಶಾಲೆಯ ಕೆಲ  ಸಹೋದ್ಯೋಗಿಗಳು ಮಕ್ಕಳಿಗೆ ಸ್ಡಡಿಹಾಲಿಡೆ ಬಿಡಲು ಮನಸ್ಸಿಲ್ಲ ಅದರಲ್ಲೂ ಹತ್ತನೆಯ ತರಗತಿ ಮಕ್ಕಳಿಗೆ ಸ್ಟಡಿ ಹಾಲಿಡೆ ಮೂಲಕ  ಮನೆಯಲ್ಲಿ ಕುಳಿತುಕೊಂಡು ಓದಲು ಕಳಿಸಲು ನಮಗೆ ಇಷ್ಟವಿಲ್ಲ ಆದರೂ ಸರ್ಕಾರದ ನಿಯಮ ಮಕ್ಕಳ ಆರೋಗ್ಯ ದೃಷ್ಟಿಯಿಂದ, ಮತ್ತು ರೋಗವು ಹರಡದಂತೆ  ಜಾಗೃತಿ ಮೂಡಿಸಲು ಒಲ್ಲದ ಮನಸ್ಸಿನಿಂದ ನಮ್ಮ ಮಕ್ಕಳು ಶಾಲೆಯಿಂದ ಮನೆಗೆ ಕಳಿಸಲು ನಾವು ಒಪ್ಪಿಕೊಂಡು ಮಕ್ಕಳನ್ನು ಮನೆಗೆ ಕಳಿಸಲಾಗಿದೆ.ಆದರೆ ಮಕ್ಕಳು ನಿಜಕ್ಕೂ ಮನೆಯಲ್ಲಿ ಓದುವರೆ? ಇದು ನಮ್ಮನ್ನು ಕಾಡುವ ಪ್ರಶ್ನೆ.
ನಗರ ,ಪಟ್ಟಣ ಹಳ್ಳಿಗಳು ಎಂಬ ಭೇದವಿಲ್ಲದೆ ಇಂದು ಮಕ್ಕಳು ಮನೆಯಲ್ಲಿ ಕುಳಿತು ಸ್ವಂತವಾಗಿ ಓದುವ ಮಕ್ಕಳ ಸಂಖ್ಯೆ ತೀರಾ ವಿರಳ ಅದರಲ್ಲೂ ಇಂದಿನ ಆಧುನಿಕತೆಯ ನಗರಗಳಲ್ಲಿ ಮೊಬೈಲ್ ಟಿವಿ ಮುಂತಾದವುಗಳಿಗೆ ಮನಸೋತ ವಿದ್ಯಾರ್ಥಿಗಳು ಮನೆಯಲ್ಲಿ ಕುಳಿತು ಓದುವ ಬಗ್ಗೆ ಸಂದೇಹವಿದೆ.
ಶಾಲೆಗಳಲ್ಲಿ ಶಿಕ್ಷಕರ ಓದಲೇಬೇಕು ಎಂಬ ಒತ್ತಾಸೆಗೆ,ಸ್ನೇಹಿತರ ನೋಡಿ ಪ್ರೇರಣೆ, ಕಲಿಯುವ ವಾತಾವರಣ ಇವುಗಳ ಪ್ರಭಾವದಿಂದಾಗಿ ಕಲಿಕೆ ನಡೆಯುತ್ತಿತ್ತು. ಅದರಲ್ಲೂ ಕ್ರಿಕೆಟ್ ಪರಿಭಾಷೆಯಲ್ಲಿ ಹೇಳುವುದಾದರೆ ಕೊನೆಯ ಓವರ್‌ಗಳಲ್ಲಿ ಇಂತಿಷ್ಟು ಕಡಿಮೆ ಬಾಲ್ಗಳಲ್ಲಿ ಗೆಲ್ಲಲು ನಿಗದಿಪಡಿಸಿದ ರನ್ ಹೊಡೆಯಲು ತಂಡಗಳು ಶ್ರಮ ಪಡುವಂತೆ .ನಮ್ಮ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಇದು ಒಂದು ರೀತಿಯಲ್ಲಿ ಸ್ಲಾಗ್ ಓವರ್ ಇದ್ದ ಹಾಗೆ ಇಂತಹ ಸಮಯದಲ್ಲಿ ಅವರಿಗೆ ಮೈದಾನದಲ್ಲಿ ಸಹ ಆಟಗಾರ ಇಲ್ಲವೇ ನಾಯಕ ಸರಿಯಾದ ಸಲಹೆ ನೀಡಿ ಪೋರ್ ಸಿಕ್ಸ್ ಹೊಡೆದು ಗೆಲ್ಲುವ ಹುಮ್ಮಸ್ಸು ತುಂಬಬೇಕು. ಆದರೆ ಇಂತಹ ಸಮಯದಲ್ಲಿ ಸಲಹೆ ನೀಡಲು ಇರುವ ನಾಯಕ, ಅಂದರೆ ಶಿಕ್ಷಕರ ಮಾರ್ಗದರ್ಶನ  ಈಗ ನಮ್ಮ ಮಕ್ಕಳಿಗೆ ಲಭ್ಯವಿಲ್ಲ .ಈಗ ಈ ಸ್ಥಾನವನ್ನು ಮನೆಯಲ್ಲಿ ಪೋಷಕರು ಮತ್ತು ಸಮುದಾಯ ತೆಗೆದುಕೊಳ್ಳುವ ಮೂಲಕ ನಮ್ಮ ಮಕ್ಕಳು ಎಸ್ ಎಸ್ ಎಲ್ ಸಿ ಕಪ್ ಗೆಲ್ಲಲು ಸಹಕರಿಸಬೇಕಿದೆ

ಹಾಗಾದರೆ ಪೋಷಕರೇನು ಮಾಡಬೇಕು.

 1 ಸಮಯಕ್ಕೆ ಸರಿಯಾಗಿ ಮಕ್ಕಳಿಗೆ  ಪೌಷ್ಟಿಕ ಆಹಾರ ನೀಡಿ.                            2. ಓದಲು ಶಾಂತವಾದ ವಾತಾವರಣ ಕಲ್ಪಿಸಿ ಕೊಡಿ                                         3ಎಲ್ಲಾ ಭಾವನೆಗಳನ್ನು ಹಂಚಿಕೊಳ‍್ಳಲು ನಾನಿದ್ದೇನೆಂದು ಭರವಸೆ ಕೊಡಿ.                4 ಓದಿದ ಮನಸಿಗೆ ವಿರಾಮ ನಿದ್ರೆ ಅವಶ್ಕಕ ಅದಕ್ಕೆ ಅವಕಾಶ ಮಾಡಿಕೊಡಿ. 
5 ಎಲ್ಲಾ ಸಮಯದಲ್ಲಿ ಓದು ಓದು ಎಂದು “ಕಿರಿ ಕಿರಿ “ಮಾಡದಿರಿ                   6ಮತ್ತೆ ಮತ್ತೆ “ಪರೀಕ್ಷೆ ಹತ್ತಿರ ಬರುತ್ತಿದೆ “ಎಂದು ಭಯಪಡಿಸಬೇಡಿ .                   7 ಮಕ್ಕಳು ಪ್ರತಿನಿತ್ಯ ಇಷ್ಟಪಟ್ಟು ಓದುವಂತೆಪ್ರೇರೇಪಿಸಿ .     
8 ಹಬ್ಬ. ಜಾತ್ರೆ ,ಮದುವೆ ಮುಂತಾದ ಸಮಾರಂಭಗಳಿಗೆ ಮಕ್ಕಳನ್ನು ‌ಕರೆದುಕೊಂಡು ಹೋಗಬೇಡಿ.
9 ಸ್ವಚ್ಚತೆಯ ಬಗ್ಗೆ ಹೆಚ್ಚು ಗಮನ ಕೊಡಿ
10 ಮಕ್ಕಳಿಗೆ ಮೊಬೈಲ್ ಹೆಚ್ಚು ನೀಡದಿರಿ
11 ನೀವೂ ಟಿ ವಿ ನೋಡದಿರಿ ಮಕ್ಕಳಿಗೆ ಟಿ ವಿ ತೋರಿಸದಿರಿ
12 ವೇಳಾಪಟ್ಟಿಯ ಪ್ರಕಾರ ಮಕ್ಕಳು ಓದಲು ಪ್ರೇರೇಪಿಸಿ.
13 ಹಳೆಯ ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ನಿಗದಿತ ಸಮಯದಲ್ಲಿ ಬಿಡಿಸಲು‌ ಹೇಳಿ ಸಾದ್ಯವಾದರೆ ನೀವು ಕೊಠಡಿ ಮೇಲ್ವಿಚಾರಕರಂತೆ ಅವರ ಜೊತೆ ಕುಳಿತಿರಿ.
14 ಮನೆಯಲ್ಲಿ ಜೋರಾಗಿ ಸಂಗೀತ ಉಪಕರಣಗಳ ಬಳಕೆ ಕಡಿಮೆ ಮಾಡಿ.
15 ಪರೀಕ್ಷೆ ಹತ್ತಿರ ಸಮೀಪಿಸಿದಂತೆ ಮಕ್ಕಳಿಗೆ ಧೈರ್ಯದಿಂದ ಪರೀಕ್ಷೆ ಎದುರಿಸಲು ಯೋಗ ಧ್ಯಾನ ಪ್ರಾಣಾಯಾಮ ಮಾಡಲು ಸಲಹೆ ನೀಡಿ.

ಇದುವರೆಗೆ ಶಿಕ್ಷಕರು ಬೆಳಿಗ್ಗೆ ವಿಶೇಷ ತರಗತಿ ,ಸಂಜೆ ಗುಂಪು ಅದ್ಯಯನ, ದತ್ತು ಯೋಜನೆ, ಪೋಷಕರ ಭೇಟಿ ,ಗುರು ಬಂದ ಗುರುವಾರ, ರಾತ್ರಿ ಶಾಲೆ, ಬೆಳಗಿನ ಜಾವ ವಿದ್ಯಾರ್ಥಿಗಳಿಗೆ ಕರೆ ಮಾಡುವ, ರಸಪ್ರಶ್ನೆ ಕಾರ್ಯಕ್ರಮ, ಹೀಗೆ  ನೂರೊಂದು ಕಾರ್ಯಕ್ರಮ ಹಾಕಿಕೊಂಡು ಮಕ್ಕಳ ಪ್ರಗತಿಗೆ ಶಿಕ್ಷಕರು ಶ್ರಮ ಪಟ್ಟಿದ್ದರೂ ಈ ಪರ್ವ ಕಾಲದಲ್ಲಿ ಕೊರೊನೋ ರಜೆಯ ನೆಪದಲ್ಲಿ ಅದು ನಿರರ್ಥಕವಾಗದಿರಲಿ .
ಒಟ್ಟಾರೆ ಶಾಲೆಯಲ್ಲಿ ಶಿಕ್ಷಕರು ಮಾಡುವ ಕೆಲ ಕೆಲಸಗಳನ್ನು ಪಾಲಕರು ತಮ್ಮ ಮನೆಗಳಲ್ಲಿ ಮಾಡಿ ಮಕ್ಕಳು ಸರಿಯಾದ ರೀತಿಯಲ್ಲಿ ‌ವ್ಯಾಸಾಂಗ ಮಾಡಲು ಸಲಹೆ ‌ಸೂಚನೆಗಳನ್ನು ನೀಡಬೇಕಿದೆ.ಮತ್ತು ನಮ್ಮ ಮಕ್ಕಳ ಫಲಿತಾಂಶ ಉತ್ತಮ ಪಡಿಸಲು ಪೋಷಕರು ಮತ್ತು ಸಮುದಾಯ ನಮ್ಮ ಬೆನ್ನಿಗಿದೆ ಎಂದು ಸಾಬೀತು ಪಡಿಸಲು ಇದು ಸೂಕ್ತ ಕಾಲ.

ಸಿ ಜಿ‌ ವೆಂಕಟೇಶ್ವರ
ತುಮಕೂರು


15 March 2020

ನಮ್ಮ ‌ರೈತ

*ನಮ್ಮ ರೈತ*

 ಕಾಲಕೆ ಮಳೆಯು ಬಂದರೆ
ರೈತರ ಬಾಳಲಿ ಪನ್ನೀರು
ಸಕಾಲವಿಲ್ಲದೆ ಅಕಾಲ ಸುರಿದರೆ
ತಪ್ಪದು ಎಂದಿಗೂ ಕಣ್ಣೀರು.

ಬೆನ್ನೆಲುಬಾದ ರೈತನ ಬಾಳಿಗೆ
ಕೋಟಲೆಗಳು ನೂರಾರು
ಬೇಸರಗೊಂಡು ಕಾಯಕ ನಿಲ್ಲಿಸೆ
ಜಗಕೆ ಅನ್ನವ ನೀಡುವರಾರು?

ದಲ್ಲಾಳಿಗಳ ದಳ್ಳುರಿಯಲ್ಲಿ
ಬೆಂದಿಹ ನಮ್ಮಯ ಅನ್ನದಾತ
ಬೆಳೆದ ಬೆಳೆಗೆ ಬೆಲೆಯಿಲ್ಲ
ಬಾಳುವುದೇಗೆ ನಮ್ಮ ರೈತ.

ಸಾಲದಿ ಹುಟ್ಟಿ ಸಾಲದಿ ಬೆಳೆದ
ಒಕ್ಕಲ ಮಕ್ಕಳ ಕಥೆ ನೋಡಿ
ಗೌರವದಿಂದ ಬಾಳಲು ಅವನಿಗೆ
ಅವಕಾಶಗಳನ್ನು ನೀಡಿ.

*ಸಿ.ಜಿ ವೆಂಕಟೇಶ್ವರ*




14 March 2020

ಬಾ ಗೆಳೆಯ

*ಬಾ ಗೆಳೆಯ*

ರಜೆಯು ಬಂದಿದೆ
ಮಜವನು ಮಾಡುವ
ಈಗಲೆ ಬಾರೋ ಓ ಗೆಳೆಯ.

ಪರೀಕ್ಷೆ ಇಲ್ಲದೆ
ಪಾಸು ಆದೆವು
ಸಂಭ್ರಮ ಪಡುವ ಬಾ ಗೆಳೆಯ

ಪೆನ್ನು ಪುಸ್ತಕ
ಎತ್ತಿ ಇಟ್ಟು
ಆಟವ ಆಡೋಣ ಬಾ ಗೆಳೆಯ

ಚಿನ್ನಿ ದಾಂಡು
ಚೆಂಡು ದಾಂಡು
ಹಿಡಿದು ಆಡೋಣ ಬಾ ಗೆಳೆಯ.

ಹಗ್ಗದ ರೈಲು
ಕಟ್ಟಿಗೆ ಬಸ್ಸು
ಏರಿ ಸಾಗೋಣ ಬಾ ಗೆಳೆಯ.

ಆಟದ ನೆನಪಲಿ
ಶಾಲೆಗೆ ಪುನಃ
ನಲಿಯುತಾ ಹೋಗೋಣ ಬಾ ಗೆಳೆಯ.

*ಸಿ ಜಿ ವೆಂಕಟೇಶ್ವರ*
*ತುಮಕೂರು*



ಎಲ್ಲಿರುವೆ ಮಳೆರಾಯ

*ಎಲ್ಲಿರುವೆ ಮಳೆರಾಯ*
ಕವನ

ಎಲ್ಲಿರುವೆ ಮಳೆರಾಯ
ಬಂದು ಬಿಡು ಮನೆಕಾಯ

ಜನ ಜಾನುವಾರುಗಳು
ಬಳಲಿ ಬೆಂಡಾಗಿಹರು
ತೊಳಲಾಟದಲಿ ನೀನು
ಬರಲೆಂದು‌ ಕಾದಿಹರು.

ಭೂತಾಯಿ ಬಿರಿದಿಹಳು
ನಿನ್ನಾಗಮನಕೆ ಕಾದಿಹಳು
ಎಂದು ಬರುವೆ ಎಂದು
ಇಂದೇ ನಮಗೆ ಹೇಳು.

ನೀನು‌ ಇಲ್ಲದೆ ನಮಗೆ
ಬಾಳುವೆಯೆ ಇಲ್ಲ
ಬರದೆ ಸತಾಯಿಸುವುದು
ನಿನಗೆ ತರವಲ್ಲ.

ನೀನು ಬಾರದಿರೆ ಭುವಿಗೆ
ಬದುಕು ಭಾರವಾಗುವುದು.
ನೀ ಬಂದರೆ ಧರೆಗೆ
ಬರವೆ ಬಾರದು.

*ಸಿ ಜಿ‌ ವೆಂಕಟೇಶ್ವರ*
ತುಮಕೂರು


08 March 2020

ಮಾರುತಿ - ಮೂರುತಿ(ಕವನ)

ಮಾರುತಿ- ಮೂರುತಿ (ಕವನ)

ನಾನು ಕೋತಿ
ನಾನು ಮಾರುತಿ
ಕಡಿಮೆಯೇನಿಲ್ಲ
ನನ್ನ ಕೀರುತಿ
ಪೂಜಿಸುವರು ನನ್ನ
ಮೂರುತಿ.

ಚೇಷ್ಟೆಗೆ ಮಾಡುವೆನು ಆಗಾಗ
ಕೆಡುಕಿಗೆ ನನ್ನಲಿಲ್ಲ ಜಾಗ
ನಾನು ಜಗದ ಅವಿಭಾಜ್ಯ ಭಾಗ
ನಾನಿರಲು ವನವು ಸೊಗ
ನನ್ನ ನೋಡುವುದೇ ನಿಮಗೆ ಸೋಜಿಗ.

ಕಟ್ಟಿಹರು ಊರಿಗೊಂದು
ಸುಂದರ ಗುಡಿ
ನನ್ನ ಕಂಡರೆ
ಕಿರುಚುವರು ಹೊಡಿ ಬಡಿ
ನಾಡು ಬೇಡವೆಂದು
ಕಾಡಿಗೋಡಿದರೆ
ಹಚ್ಚುವಿರಿ ಬೆಂಕಿಯ ಕಿಡಿ
ದಯವಿಟ್ಟು ನನ್ನ ಪಾಡಿಗೆ
ನನ್ನ ಬಿಡಿ.

ಸಿ.ಜಿ ವೆಂಕಟೇಶ್ವರ


ಸಂವಿಧಾನ ಸಾರ್ವಭೌಮ (ಕವನ)

ಸಂವಿಧಾನವೇ ಸಾರ್ವಭೌಮ

ಬದುಕಲು ಬೇಕೊಂದು ಸುವಿಧಾನ
ನಮ್ಮ ಆಡಳಿತಕೆ ಬೇಕು ಸಂವಿಧಾನ
ಪೂರ್ವಪೀಠಿಕೆ ಬಹು ಗುಣಗಳ ಗಣಿ
ಶೋಷಿತರ ಪಾಲಿನ ಪರಶು ಮಣಿ.

ಆಡಳಿತ ನಡೆಸಲು ಮಾರ್ಗದರ್ಶಕ
ಸರ್ವರ ಹಕ್ಕುಗಳ ಮಹಾರಕ್ಷಕ
ಎತ್ತಿಹಿಡಿವುದು ನಮ್ಮ ಕಾಯಕ
ಇದನು ಪಾಲಿಸಿದರೆ ಸಿಗುವುದುನಾಕ.

ಸಮಾನತೆ ಜಾತ್ಯಾತೀತ‌ ತತ್ವವಿದೆ ಪ್ರಜಾಪ್ರಭುತ್ವದ ಸತ್ವವಿದೆ
ಸಮಾಜವಾದದ ಪ್ರತಿಪಾದನೆಯಿದೆ
ಸಾರ್ವತ್ರಿಕ ಚುನಾವಣೆಗಳ ಹಬ್ಬವಿದೆ.

ತೊಲಗಲಿ ಜನರಲಿ ತಮ
ಬೇಡ ಎಂದಿಗೂ ತರತಮ
ನಾವೂ ನೀವು ಎಲ್ಲರೂ ಸಮ
ಸಂವಿಧಾನವೇ‌ ಸಾರ್ವಭೌಮ.

*ಸಿ ಜಿ‌ ವೆಂಕಟೇಶ್ವರ*





ಡಿಜಿಟಲ್ ಕಲಿಕೆ (ಶೈಕ್ಷಣಿಕ ಲೇಖನ)

ಡಿಜಿಟಲ್ ಕಲಿಕೆಗೆ ಸಮಾಜ ವಿಜ್ಞಾನ  ಬ್ಲಾಗ್

ಒಂದು ಕಾಲದಲ್ಲಿ ಸಮಾಜ-ವಿಜ್ಞಾನ ಎಂದರೆ ಕನ್ನಡಕ್ಕಿಂತ ಸುಲಭವಾದ ವಿಷಯ ಎಂದು ಸಾಮಾನ್ಯ ಜನರು ತಿಳಿದಿದ್ದರು . ಹಿಂದೆ ಸಮಾಜ ಪರಿಚಯ ಅಥವಾ ಸಮಾಜಶಾಸ್ತ್ರ ಎಂಬ ಹೆಸರಿನ ಪುಸ್ತಕದೊಂದಿಗೆ ಮಕ್ಕಳಿಗೆ ಕಲಿಕೆ ಆಗುತ್ತಿತ್ತು .ಆದರೆ ಪ್ರಸ್ತುತ ಸಮಾಜ ವಿಜ್ಞಾನದಲ್ಲಿ ಇತಿಹಾಸ ,ರಾಜ್ಯಶಾಸ್ತ್ರ, ಸಮಾಜಶಾಸ್ತ್ರ ,ಅರ್ಥಶಾಸ್ತ್ರ ,ವ್ಯವಹಾರ ಅಧ್ಯಯನ ಎಂಬ ಆರು ವಿಭಾಗಗಳಿವೆ ಹಾಗಾಗಿ ಮೊದಲಿನಂತೆ ಸಮಾಜವಿಜ್ಞಾನ ವಿಷಯ ಬಹಳ  ಸುಲಭ ಎಂದು ಹೇಳಲು ಬರುವುದಿಲ್ಲ. ಹಾಗೂ ಅತಿ ಕಠಿಣ ವಿಷಯವೂ ಅಲ್ಲ ಕ್ರಮಬದ್ಧವಾಗಿ ಕಲಿತು ಓದಿ ಅರ್ಥಮಾಡಿಕೊಂಡರೆ ಸಮಾಜವಿಜ್ಞಾನ ಕಬ್ಬಿಣದ ಕಡಲೆಯಲ್ಲ. ಇತ್ತೀಚಿನ ವರ್ಷಗಳಲ್ಲಿ ಸಮಾಜವಿಜ್ಞಾನದ ಕಲಿಸುವ ಮತ್ತು ಕಲಿಯುವ ಪ್ರಕ್ರಿಯೆಯಲ್ಲಿ ಹಲವಾರು ಬದಲಾವಣೆಗಳು ಕಂಡಿವೆ ಅದರಲ್ಲಿ ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಸಹಾಯದ ಕಲಿಕೆ ,ಡಿಜಿಟಲ್ ಲರ್ನಿಂಗ್, ಮುಂತಾದವು ಶಾಲೆಗಳಲ್ಲಿ ಕಾಣಬಹುದು. ಇದಕ್ಕೆ ಸಹಾಯಕವಾಗಿ ಸಮಾನ ಮನಸ್ಕರ ಗುಂಪು ಸಮಾಜ ವಿಜ್ಞಾನವನ್ನು ಸುಲಭವಾಗಿ ಕಲಿಸಲು ಮಾಡಿದ ಪ್ರಯತ್ನವೇ ಸಮಾಜ ವಿಜ್ಞಾನ ಬ್ಲಾಗ್ .
ದಾವಣಗೆರೆ ಜಿಲ್ಲೆಯ ಶಿಕ್ಷಕರಾದ ಕೆ ಎಸ್ ರಾಮಚಂದ್ರ ಅವರ ಮಾರ್ಗದರ್ಶನದಲ್ಲಿ ಆರಂಭವಾದ ಡಿಜಿಟಲ್ ಗ್ರೂಪ್ ಸೋಶಿಯಲ್ ಸೈನ್ಸ್ ಡಿಜಿಟಲ್ ಗ್ರೂಪ್ ಡಾಟ್ ಬ್ಲಾಗ್ ಸ್ಪಾಟ್ (social science digital group. blogspot.com)  ಸಮಾಜ ವಿಜ್ಞಾನ ಬ್ಲಾಗ್ ಸಿದ್ಧಪಡಿಸಿದೆ.
ನುರಿತ ಕಂಪ್ಯೂಟರ್ ಇಂಜಿನಿಯರ್ಗಳು ಮಾಡಬಹುದಾದ ಕಾರ್ಯವನ್ನು ಸಮಾನಮನಸ್ಕ ಸಮಾಜವಿಜ್ಞಾನ ಶಿಕ್ಷಕರ ಒಂದುಗೂಡಿ ರಚಿಸಿದ ಸಂಪನ್ಮೂಲ ಬ್ಲಾಗ್ ಇಂದು  ರಾಜ್ಯಾದ್ಯಂತ ಅಷ್ಟೇ ಏಕೆ ದೇಶಾದ್ಯಂತ ಸಂಪನ್ಮೂಲವನ್ನು ಹಂಚುವ ಒಂದು ಮಹತ್ವದ ಸಂಪನ್ಮೂಲ ತಾಣವಾಗಿದೆ. ಬ್ಲಾಗ್ ಆರಂಭವಾಗಿ ಕೆಲವೇ ವರ್ಷಗಳಾದರೂ 2600000 ವೀಕ್ಷಕರು ಈ ಬ್ಲಾಗ್ ವೀಕ್ಷಣೆ ಮಾಡಿರುವುದು ಇದರ ಜನಪ್ರಿಯತೆಯನ್ನು ಎತ್ತಿತೋರಿಸುತ್ತದೆ.

 ಬ್ಲಾಗ್ ನಲ್ಲಿ ಏನಿದೆ

ಈ ಬ್ಲಾಗ್ ನಲ್ಲಿ 8 9 ಮತ್ತು 10ನೇ ತರಗತಿಯ ಸಮಾಜ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಬಹುತೇಕ ಸಂಪನ್ಮೂಲಗಳು ಲಭ್ಯವಿರುತ್ತವೆ. ಪ್ರತಿಯೊಂದು ಪಾಠಗಳಿಗೆ ಪಿಪಿಟಿಗಳು ನೋಟ್ಸ್ ಗಳು, ಮುಖ್ಯಾಂಶಗಳು ವಿಡಿಯೋ ಪಾಠಗಳು, ಆಡಿಯೋ ಪಾಠಗಳು ,ರಸಪ್ರಶ್ನೆಗಳು, ಪ್ರಶ್ನೆಪತ್ರಿಕೆಗಳು ಮಾದರಿ ಉತ್ತರಗಳು, ಕ್ರಿಯಾಯೋಜನೆಗಳು, ಶಿಕ್ಷಕರಿಗೆ ಅಗತ್ಯ ದಾಖಲೆಗಳು ,ಶಿಕ್ಷಕರಿಗೆ ಬೇಕಾದ ಸಾಫ್ಟ್ವೇರ್ ಗಳು ,ಸಮಾಜ ವಿಜ್ಞಾನ ಲ್ಯಾಬ್ ಮಾಡುವ ಬಗೆ ಮತ್ತು ಸಮಾಜ ವಿಜ್ಞಾನ ಲ್ಯಾಬ್ ಗಳ ನಿರ್ವಹಣೆ ಮುಂತಾದ ಅಂಶಗಳು ನಮಗೆ ಒಂದೇ ಕ್ಲಿಕ್ ನಲ್ಲಿ ಲಭ್ಯವಾಗುತ್ತವೆ.

ಬ್ಲಾಗ್ ರಚನಾ ತಂಡ

ಶ್ರೀ ರಾಮಚಂದ್ರಪ್ಪ ಕಡೂರು ‌  ಶಿಕ್ಷಕರು ಇವರ ನೇತೃತ್ವದಲ್ಲಿ
ಯುವ ಉತ್ಸಾಹಿ ಸಮಾಜ ವಿಜ್ಞಾನ ಶಿಕ್ಷಕರು ಒಂದೆಡೆ ಸೇರಿ ಮೊದಲು ವಾಟ್ಸಪ್ , ಟೆಲಿಗ್ರಾಂ ಮತ್ತು ಇತರ ಜಾಲತಾಣಗಳಲ್ಲಿ ಡಿಜಿಟಲ್ ಸಂಪನ್ಮೂಲಗಳ ಸೃಷ್ಟಿ ಮತ್ತು ಹಂಚಿಕೊಳ್ಳುವ ಕಾರ್ಯ ಆರಂಭ ಮಾಡಿದರು. ನಂತರ ಸಂಪನ್ಮೂಲವನ್ನು ಶಾಶ್ವತವಾಗಿ ಒಂದೆಡೆ ಸಿಗುವಂತೆ ಮಾಡಲು ಮತ್ತು ಹೆಚ್ಚಿನ ಮಕ್ಕಳು ಮತ್ತು ಶಿಕ್ಷಕರಿಗೆ ಅನುಕೂಲವಾಗಲು ಒಂದು ಬ್ಲಾಗ್ ನಿರ್ಮಾಣ ಮಾಡಲು ತೀರ್ಮಾನಿಸಿದ ತಂಡವು ಕೆಲಸ ಆರಂಭ  ಮಾಡಿ ರಜಾದಿನಗಳಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಲ್ಯಾಪ್‌ಟಾಪ್ ಖರೀದಿಸಿ ನಿಸ್ವಾರ್ಥವಾಗಿ ಕಾರ್ಯ ಕೈಗೊಂಡ ಪರಿಣಾಮ ಇಂದು ರಾಜ್ಯಾದ್ಯಂತ ಸಮಾಜವಿಜ್ಞಾನ ಶಿಕ್ಷಕರ ಮನಗೆದ್ದಿದೆ
ಈ ಕಾರ್ಯಕ್ಕೆ ಸಂತೋಷ್ ಕುಮಾರ್ .ಸಿ. ವಸಂತ ಶಾಗೋಟಿ, ನಾಗು ಶಹಾಬಾದ್ ,ವೀರೇಶ್ ಅರಕೇರಿ, ಪ್ರಶಾಂತ್ ಕಡೂರು ,ಮಹಾದೇವಪ್ಪ ಕುಂದರಗಿ, ಪ್ರದೀಪ್ ಎಸ್ ಎಂ ,ರಮೇಶ್ ಹುನಗುಂದ, ರಮೇಶ್ ಎಂ,ಕಾಂತೇಶ ಭೀಮಸೇನ್ ಜೋಲಾಪುರೆ, ಶರಣಬಸಪ್ಪ ಗುಡುರು, ಮಲ್ಲಿಕಾರ್ಜುನಸ್ವಾಮಿ ಟಿ ಎಮ್ . ದಾನಮ್ಮ ಜಳಕಿ, ಪ್ರಹಲ್ಲಾದ್ ಪತ್ತಾರ್ ,ಶ್ರೀನಿವಾಸ್ ಕೆಜಿ, ರಾಜೇಶ್, ಶಿಲ್ಪ ,ಮಂಜುನಾಥ್ ,ಕೊಟ್ರೇಶಿ, ರಾಮಚಂದ್ರಪ್ಪ,ಎಚ್ ಮುಂತಾದ ಸಮಾಜವಿಜ್ಞಾನ ಶಿಕ್ಷಕರ ಕೊಡುಗೆಯನ್ನು ನಾವಿಂದು ಸ್ಮರಿಸಬೇಕಿದೆ.

ಸಂಪನ್ಮೂಲಗಳ ಹಂಚಿಕೆ

ಡಿಜಿಟಲ್ ಸಂಪನ್ಮೂಲಗಳನ್ನು ರಾಜ್ಯದ ಎಲ್ಲಾ ಕಡೆ ಉಚಿತವಾಗಿ ಹಂಚಿಕೆ ಮಾಡಲು ಮತ್ತು ಕಾಲಕಾಲಕ್ಕೆ ಈ ನ ಅಪ್ಡೇಟ್  ಮಾಡಲು, ಶಿಕ್ಷಕರಿಗೆ ಮಾಹಿತಿಯನ್ನು ಹಂಚಿಕೊಳ್ಳಲು ರಾಜ್ಯ ಮಟ್ಟದ ವಾಟ್ಸಪ್ ಗುಂಪು ಮಾಡಿ,ಪ್ರತಿ ಜಿಲ್ಲೆಗೆ ಎಸ್. ಎಸ್‌. ಎಸ್‌. ಟಿ‌ .ಎಪ್ (SS STF) ಎಂಬ ವಾಟ್ಸಪ್ ಗುಂಪುಗಳನ್ನು ರಚಿಸಿದ್ದು ಕ್ರಿಯಾಶೀಲ ಸಮಾಜ ವಿಜ್ಞಾನ ಶಿಕ್ಷಕರನ್ನು ಅಡ್ಮಿನ್ ಮಾಡಿ ಡಿಜಿಟಲ್‌ ಸಂಪನ್ಮೂಲಗಳನ್ನು ಸಕಾಲದಲ್ಲಿ ತಲುಪಲು ಕ್ರಮ ವಹಿಸಲಾಗಿದೆ.

ಸ್ಮಾರ್ಟ್ ಆದ ಸಮಾಜವಿಜ್ಞಾನ ತರಗತಿಗಳು

ಸಮಾಜ ವಿಜ್ಞಾನ ಸಂಪನ್ಮೂಲಗಳು ಡಿಜಿಟಲ್ ತಂಡದಿಂದ ಸಿದ್ದಪಡಿಸಿದ  ಸಂಪನ್ಮೂಲಗಳಿಂದ ಪ್ರೇರೇಪಿತವಾದ  ರಾಜ್ಯದ ಬಹುತೇಕ ಶಾಲೆಗಳ ಸಮಾಜ ವಿಜ್ಞಾನ ಶಿಕ್ಷಕರು ಕೆಲವೆಡೆ ತಮ್ಮ ಸ್ವಂತ ಖರ್ಚಿನಲ್ಲಿ ಸ್ವಯಂಪ್ರೇರಣೆಯಿಂದ ಸ್ಮಾರ್ಟ್ ಕ್ಲಾಸ್ ಆರಂಭ ಮಾಡಿ ಮಕ್ಕಳಿಗೆ ಗುಣಮಟ್ಟದ ಕಲಿಕೆ ನೀಡಲು ಮುಂದಾಗಿದ್ದಾರೆ.ಕೆಲ ಶಾಲೆಗಳಲ್ಲಿ  S.D
M C  ಮತ್ತು ಸಂಘ ಸಂಸ್ಥೆಗಳ  ಸಹಕಾರದಿಂದ ಡಿಜಿಟಲ್ ತರಗತಿಗಳನ್ನು ಆರಂಭಿಸಲಾಗಿದೆ. ಇದು ಅಧಿಕಾರಿಗಳ ಗ್ರಾಮಸ್ಥರ ,ಸಮುದಾಯದಮತ್ತು ಮಕ್ಕಳ ಮೆಚ್ಚುಗೆಗೆ ಪಾತ್ರವಾಗಿದೆ.

ಸ್ಪರ್ಧಾತ್ಮಕ ಪರೀಕ್ಷೆಗೆ ಮಾರ್ಗದರ್ಶಿ

ಈ ಬ್ಲಾಗ್ ಕೇವಲ ಮಕ್ಕಳ ಶಿಕ್ಷಕರ ಬೋಧನೆ ಮತ್ತು ಕಲಿಕೆಗೆ ಮಾತ್ರ ಪೂರಕವಾಗಿರದೆ ರಾಜ್ಯದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಿರುವ ಸ್ಪರ್ಧಾರ್ಥಿಗಳಿಗೆ ಇದರಲ್ಲಿರುವ ಸಂಪನ್ಮೂಲಗಳು ಬಹಳ ಉಪಯುಕ್ತ ಮಾಹಿತಿಯನ್ನು ನೀಡುತ್ತಿವೆ.ಎಂದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಲ್ಗೊಂಡ ಸ್ಪರ್ಧಾರ್ಥಿಗಳು ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಹೀಗೆ ಸ್ವಯಂಪ್ರೇರಣೆಯಿಂದ ತಂತ್ರಜ್ಞಾನವನ್ನು ಕಲಿತು ಒಂದು ಬ್ಲಾಗ್ ಮಾಡಿ ರಾಜ್ಯದ ಎಲ್ಲಾ ಶಾಲಾ ಶಿಕ್ಷಕರಿಗೆ ಉಚಿತವಾಗಿ ಸಂಪನ್ಮೂಲಗಳನ್ನು ರಚಿಸಿ ಉಚಿತವಾಗಿ ನೀಡುತ್ತಿರುವ ಈ ಡಿಜಿಟಲ್ ಗುಂಪಿನ ಕಾರ್ಯ ನಿಜಕ್ಕೂ ಅಭಿನಂದನಾರ್ಹವಾಗಿರುವುದು. ಇದೇ ರೀತಿ ಶಿಕ್ಷಕರು ಇಂತಹ ತಂತ್ರಜ್ಞಾನವನ್ನು ಶಾಲಾ ಕೊಠಡಿಗಳಲ್ಲಿ ಬಳಕೆ ಮಾಡಿಕೊಂಡು ಬೋಧನೆ ಮತ್ತು ಕಲಿಕೆ ಪ್ರಕ್ರಿಯೆಯಲ್ಲಿ  ತೊಡಗಿಕೊಂಡಿದ್ದೆ ಆದರೆ ಮಕ್ಕಳು ಸಂತಸದಾಯಕ ಕಲಿಕೆಯಲ್ಲಿ ತೊಡಗಿನಮ್ಮ ರಾಜ್ಯದಶಿಕ್ಷಣದಗುಣಮಟ್ಟ
ಉತ್ತಮ ಆಗುವುದರಲ್ಲಿ ಸಂಶಯವಿಲ್ಲ.
ಸಮಾಜ ವಿಜ್ಞಾನ ಡಿಜಿಟಲ್ ಬ್ಲಾಗ್ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ
Social science digital group.blogspot. com 

ಸಿ.ಜಿ.ವೆಂಕಟೇಶ್ವರ.
ಸಮಾಜ ವಿಜ್ಞಾನ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ
ಕ್ಯಾತಸಂದ್ರ
ತುಮಕೂರು
9900925529

07 March 2020

ಶಿಕ್ಷಕ ಮಿತ್ರ ಶಿಕ್ಷಕ ಸ್ನೇಹಿಯಾಗಿರಲಿ (ಲೇಖನ)


ಶಿಕ್ಷಕ ಮಿತ್ರ ಶಿಕ್ಷಕ‌ಸ್ನೇಹಿ ಆಗಿರಲಿ


ಮುಖ್ಯಮಂತ್ರಿಗಳಾದ ಬಿ .ಎಸ್ ಯಡಿಯೂರಪ್ಪ ರವರು‌ ಮಂಡಿಸಿರುವ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ,ಶೇಕಡಾ11 ರಷ್ಟು ಮತ್ತು ಮಕ್ಕಳಿಗೆ ನೀಡಲು ಉದ್ದೇಶಿಸಿರುವ ಇತರೆ ಸವಲತ್ತುಗಳನ್ನು ಸೇರಿ ಶೇಕಡಾ15% ಹಣ ಅಂದರೆ  36000 ಕೋಟಿ ಅನುದಾನವನ್ನು ಮೀಸಲಿಟ್ಡಿರುವುದು ಸ್ವಾಗತಾರ್ಹ. ಈಗಲಾದರೂ ಶಿಕ್ಷಣ ಅತಿ ಆದ್ಯತಾ ವಲಯ ಎಂದು ಪರಿಗಣಿಸಲಾಗಿದೆ. ಇದರ ಜೊತೆಗೆ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಶಾಸಕರು ಮೂರು ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡಲು ಬಜೆಟ್ ನಲ್ಲಿ ಪ್ರಸ್ತಾಪವನ್ನು ಮಾಡಿದ್ದಾರೆ.ಎಲ್ಲಾ ಶಾಸಕರು ಇದನ್ನು ಅನುಷ್ಠಾನಗೊಳಿಸಬೇಕಿದೆ. ಜೊತೆಗೆ ವಿವಿಧ ಕಾರ್ಯಕ್ರಮಗಳನ್ನು ಬರೀ  ಘೋಷಣೆ ಮಾಡಿದರೆ ಸಾಲದು ಅವುಗಳ ಸಮರ್ಪಕವಾದ ಅನುಷ್ಠಾನ ಅಷ್ಟೇ ಮುಖ್ಯ. ಇದರ ಜೊತೆಗೆ ಜಿಲ್ಲೆಯ ಉತ್ತಮ ಸಾಧನೆ ತೋರಿದ ಪರಿಶಿಷ್ಟ ಜಾತಿ ಮತ್ತು ಪಂಗಡದ ಎಸ್ ಎಸ್‌ ಎಲ್ ಸಿ ಮಕ್ಕಳಿಗೆ ಒಂದು ಲಕ್ಷ ಬಹುಮಾನವನ್ನು ಘೋಷಣೆ ಮಾಡಿದೆ .ಇದು ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ವಿಸ್ತಾರಿಸಬೇಕಿದೆ.ಶಿಕ್ಷಕರಿಗೆ ಶಿಕ್ಷಕ ಮಿತ್ರ ಆಪ್ ಮಾಡುವ ಪ್ರಸ್ತಾಪವನ್ನು ಮಾಡಲಾಗಿದೆ .ಇದು ಹತ್ತರಲ್ಲಿ ಇನ್ನೊಂದು ಎನ್ನುವಂತಾಗದಿರಲಿ.ಏಕೆಂದರೆ ಈಗಿರುವ ಕೆಲ ಶಿಕ್ಷಣ ಸಂಬಂದಿತ ಸಾಫ್ಟವೇರ್ ಮತ್ತು ವೆಬ್‌ಸೈಟ್ ಗಳಾದ S T S ,TDS ಮುಂತಾದವುಗಳು ಪದೇ ಪದೇ ಸರ್ವರ್ ಸಮಸ್ಯೆ  ಮತ್ತು ತಾಂತ್ರಿಕ ಸಮಸ್ಯೆ ಎದುರಿಸುವುದನ್ನು ನಾವು ಕಾಣಬಹುದು. ಆದ್ದರಿಂದ ಈಗ ಬಿಡುಗಡೆ ಮಾಡಲು ಉದ್ದೇಶಿಸಿರುವ ಶಿಕ್ಷಕ ಮಿತ್ರ ಆಪ್ ವಿಳಂಬವಾದರೂ ಸುಸಜ್ಜಿತವಾದ ದೋಷರಹಿತವಾದ ಮತ್ತು ಶಿಕ್ಷಕಸ್ನೇಹಿಯಾಗಿರಲಿ ಎಂದು ಆಶಿಸೋಣ .
ಸಿ ಜಿ ವೆಂಕಟೇಶ್ವರ
ತುಮಕೂರು

01 March 2020

ಸ್ಯಾಲರಿ(ಹನಿ)

*ಸ್ಯಾಲರಿ*

ಒಂದು ದಿನ ಅಧಿಕವಾದರೂ
ಮುಗಿದೇ ಹೋಯಿತು
ಫೆಬ್ರವರಿ
ಆದರೂ ಒಂದೇ ವರಿ
ಇನ್ನೂ ಆಗಲಿಲ್ಲ ಸ್ಯಾಲರಿ

*ಸಿ ಜಿ ವೆಂಕಟೇಶ್ವರ*