30 December 2018

ಭಾರತದ ನಡಿಗೆ ಸ್ವಚ್ಚತೆಯ ಕಡೆಗೆ (ಲೇಖನ)

  *ಭಾರತದ ನಡಿಗೆ*
*ಸ್ವಚ್ಛತೆಯ ಕಡೆಗೆ*

ಮಾಲಿನ್ಯದ ವಿರುದ್ಧ ಪದವಾದ ಸ್ವಚ್ಚತೆಯು ಇಂದು ‌ಎಲ್ಲಾ ಕಡೆ ಹೆಚ್ಚು ಚರ್ಚಿತವಾಗುತ್ತಿರುವ ವಿಷಯ.
ನಮ್ಮ ಸುತ್ತ ಮುತ್ತ ಇರುವ ಮನೆ ಪರಿಸರ ಸ್ವಚ್ಛ ಮಾಡುವುದು ನಮ್ಮ ಆದ್ಯತೆ ಆಗಿರಬೇಕು .ಹಾಗೆ ನೋಡಿದರೆ ಇಂದು ಮಾತ್ರ ಸ್ವಚ್ಚತಾ ಪರಿಕಲ್ಪನೆ ಇಲ್ಲ ಹಿಂದಿನಿಂದಲೂ ನಮ್ಮ ಪೂರ್ವಿಕರು ಸ್ವಚ್ಛಗೊಳಿಸುವ ಕಾಯಕ ಮಾಡಿದರು ಗಾಂಧೀಜಿಯವರು ಸಹ ಸ್ವಚ್ಛತೆ ಆಂದೋಲನದ ಮೂಲಕ ಸ್ವಚ್ಚತಾ ಅಭಿಯಾನ ಆರಂಬಿಸಿದರು.
ಪ್ರಸ್ತುತ ಪ್ರಾಧಾನಿಗಳಾದ ನರೇಂದ್ರ ಮೋದಿಯವರು ಸ್ವಚ್ಛ ಭಾರತ ಅಭಿಯಾನ ಆರಂಭಿಸಿ ದೇಶವಾಸಿಗಳಲ್ಲಿ ನೈರ್ಮಲ್ಯದ ಮಹತ್ವ ಸಾರಿ ಜನಜಾಗೃತಿ ಮೂಲಕ ಕಾರ್ಯ ಮಾಡಿದ್ದಾರೆ.
ಕೇವಲ ಭೌತಿಕ ಸ್ವಚ್ಛಗೊಳಿಸುವ ಕಾರ್ಯ ಆದರೆ ಸಾಲದು ಮಾನಸಿಕ ಸ್ವಚ್ಛಗೊಳಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗುತ್ತದೆ. ಆದುನಿಕ ಜೀವನದಲ್ಲಿ ನಾವು ದ್ವೇಷ ,ಅಸೂಯೆ, ಹಿಂಸೆ ,ಕ್ರೌರ್ಯ, ಅನೈತಿಕತೆ ,ಯುದ್ಧ, ಸ್ವಾರ್ಥ ಇವುಗಳು ತಾಂಡವ ಆಡುತ್ತಿವೆ .ಈ ಎಲ್ಲಾ ಪ್ರಕ್ರಿಯೆ ಗಳು ನಮ್ಮ ಮನದಲ್ಲಿ ಸುಳಿದು ಅವು ಮನುಕುಲದ ನಾಶಕ್ಕೆ ಕಾರಣವಾಗುತ್ತದೆ ಆದ್ದರಿಂದ ಆಗಾಗ ಇಂತಹ ಮಾನಸಿಕ ಮಾಲಿನ್ಯ ಕಾರಕಗಳನ್ನು  ನಮ್ಮ ಮನಸ್ಸಿನಲ್ಲಿ ಬಂದಾಗ ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಲಗಬೇಕಿದೆ .ಆಗ ಮಾತ್ರ ಸಂಪುರ್ಣವಾದ ಸ್ವಚ್ಛಗೊಳಿಸುವ ಕಾರ್ಯ ಆಗಿ ಜಗತ್ತಿನಲ್ಲಿ ನೈರ್ಮಲ್ಯದ ವಾತಾವರಣ ಉಂಟಾಗಿ ಎಲ್ಲೆಡೆಯೂ ನಂದನವನವೇ ಕಾಣುವುದು .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

29 December 2018

ನಮನ ( ರಸ ಋಷಿಗೆ ನುಡಿ ನಮನ)

           

*ನಮನ*

ಜಗದ ಕವಿ ಯುಗದ ಕವಿ
ನಿಮಗೆ ನಮನ
ಜನಮಾನಸದಿ ನೆಲಸಿದ
ಅಕ್ಷರ ಮಾಂತ್ರಿಕರೆ
ನಿಮಗೆ ನಮನ

ಪ್ರಕೃತಿಯ ಆರಾಧಿಸಿ
ವಿಕೃತಿಯ ವಿರೋಧಿಸಿ
ಸಮಬಾಳು ಸಮಪಾಲು
ಬೋಧಿಸಿದ ರಸ ಋಷಿಯೆ
ನಿಮಗೆ ನಮನ

ನೇಗಿಲ ಯೋಗಿಗೆ ನಮಿಸಿ
ವಿವೇಕಾನಂದರ ಭಜಿಸಿ
ಕೊಳಲನಾದವ ಸುರಿಸಿ
ಪಕ್ಷಿಕಾಶಿಯ ತೋರಿದ
ರಾಷ್ಟ್ರ ಕವಿಯೇ ನಿಮಗೆ ನಮನ

ಮಲೆಗಳಲಿ ಮದುಮಗಳ ತೋರಿಸಿ
ರಾಮಯಣದ ದರ್ಶನ ಮಾಡಿಸಿದ
ಕನ್ನಡಮ್ಮನ ಹೆಮ್ಮೆಯ ಕುವರ
ನಿಮಗೆ ನಮನ

ಕವಿಯಾಗಿ ,ಗುರುವಾಗಿ,ಪರಿಸರ
ಪ್ರಿಯಯೋಗಿಯಾಗಿ
ದಕ್ಷ ಆಡಳಿತ ಗಾರನಾಗಿ
ಜ್ಞಾನ ಪೀಠವ ಏರಿದರೂ
ವಿಶ್ವಮಾನವ ಸಂದೇಶ ನೀಡಿದ
ಅನಿಕೇತನ ಶಕ್ತಿಯೇ
ನಿಮಗೆ ನಮನ

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*

17 December 2018

ಕಪ್ಪು ಬಿಳುಪು ( ಕವನ )

*ಕಪ್ಪು-ಬಿಳುಪು*

ಹೊರಗಿನ ಲೋಕಕೆ
ನನ್ನ ಬದುಕು ಬಣ್ಣದ್ದು
ಒಳಗೆ ಕಪ್ಪು ಬಿಳುಪು
ಯಾರಿಗೆ ಹೇಳಲಿ
ಹೊಳೆವ ನನ್ನ ಮೈಮಾಟ
ನೋಡಲು ಕಾತರ ಅವರಿಗೆ
ನನ್ನ ಕಣ್ಣಲ್ಲಿ ಕಣ್ಣಿಟ್ಟು
ನೋಡುವವರಾರು ಇಲ್ಲ .
ಮನದಲಿರುವ ದುಗುಡಗಳು
ನೂರಾರು ತೋರಲಾಗುತ್ತಿಲ್ಲ
ವೇದನೆಯ ಬಚ್ಚಿಡಲೂ
ಆಗುತ್ತಿಲ್ಲ
ಮನದ ದುಗುಡ ಹೇಳಲು
ಹನಿಯೊಂದು ಬಂದಿದೆಯಲ್ಲ
ಅದು ಯಾರಿಗೂ ಕಾಣುತ್ತಿಲ್ಲ .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

04 December 2018

ಪಾಡೇನು(ಹನಿಗವನ)

               *ಪಾಡೇನು*

ಕರ್ನಾಟಕದ ನಂತರ
ಗುಜರಾತ್‌ ನಲ್ಲೂ
ಪೊಲೀಸ್ ನೇಮಕಾತಿ
ಪ್ರಶ್ನೆ ಪತ್ರಿಕೆ ಲೀಕ್ ಆಗಿ
ಪರೀಕ್ಷೆ ಮುಂದಕ್ಕೆ
ಹೋಗಿದೆಯಂತೆ
ಗೊತ್ತೇನು ?
ಭದ್ರತೆ ಕೊಡುವ
ಪೋಲಿಸರ ಪತ್ರಿಕೆಯೇ
ಲೀಕಾದರೆ ಬೇರೆ
ಪತ್ರಿಕೆಗಳ ಪಾಡೇನು ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಅವಕಾಶ ಕೊಡಿ (ಚುಟುಕು)

               *ಅವಕಾಶ ಕೊಡಿ*

ಅಬಲರು ನಾವಲ್ಲ ಭಿಕ್ಷುಕರು ಅಲ್ಲವೇ ಅಲ್ಲ
ಚೇತನವಿರುವ ವಿಶೇಷ ಚೇತನರು ನಾವು
ಕರುಣೆ ತೋರಿ ಕಂಬನಿ ಮಿಡಿಯುವುದು ಬೇಡ
ಅವಕಾಶ ಕೊಟ್ಟ ಪ್ರೋತ್ಸಾಹಿಸಿ ನೋಡಿ ನೀವು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

03 December 2018

ಪ್ರೋತ್ಸಾಹಿಸಿ ( ವಿಶ್ವ ವಿಕಲಚೇತನ ದಿನಾಚರಣೆಯ ಪ್ರಯುಕ್ತ)

                  *ಪ್ರೋತ್ಸಾಹಿಸಿ*
(ವಿಶ್ವ ವಿಕಲಚೇತನ ದಿನಾಚರಣೆಯ ಪ್ರಯುಕ್ತ)

ಬೈಯದಿರಿ ನೊಯಿಸದಿರಿ
ದಿವ್ಯಾಂಗರ ಮನಗಳ
ಬಯಸಿ ಯಾರೂ
ವಿಕಲಚೇತನರಾಗಲ್ಲ
ಎಲ್ಲರಲೂ ಚೇತನವಿದೆ.

ಎಲ್ಲಾ ಇರುವವರು
ಇಲ್ಲದವರ ಜಾಗದಿ
ನಿಂತು ಯೋಚಿಸಿ .
ಮುತ್ತು ರತ್ನ ಬೇಡ
ವಜ್ರ ಹವಳ ಬೇಡ
ಕರುಣೆ ಅನುಕಂಪ
ಅವರಿಗೆ ಬೇಡವೆ ಬೇಡ.

ಎಲ್ಲರಂತೆ ಬಾಳಲು
ಅವಕಾಶಗಳ ನೀಡಿ
ಅವರನು ಪ್ರೋತ್ಸಾಹಿಸಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ದಾರಿದೀಪ (ಚುಟುಕು)

           *ದಾರಿದೀಪ*

ದಾರಿಗಳು ನೂರಾರು ಬದುಕಿ ಬಾಳಲು
ಸಾವಿರ ದಾರಿಗಳಿವೆ ಇಂದು ಹಾಳಾಗಲು
ಅಡ್ಡ ದಾರಿಯ ಪಯಣ ಕೊನೆಗೊಳ್ಳಲಿ
ನಿನ್ನ ಬದುಕು ಇತರರಿಗೆ ದಾರಿದೀಪವಾಗಲಿ

*ಸಿ ಜಿ.ವೆಂಕಟೇಶ್ವರ*
*ಗೌರಿಬಿದನೂರು*


25 November 2018

ಕಲಿಯುಗ ಕರ್ಣ ( ನುಡಿನಮನ)

                      *ಕಲಿಯುಗ ಕರ್ಣ*(ನುಡಿನಮನ)

ಚಿತ್ರರಂಗದ ಹೆಮ್ಮೆಯ
ಮೈಸೂರ್ ಜಾಣ
ಅಭಿಮಾನಿಗಳ ಪಾಲಿನ
ಪ್ರೀತಿಯ ಜಲೀಲ
ಕೋಟಿ ಜನರ ಪಾಲಿಗೆ
ಮಂಡ್ಯದ ಗಂಡು
ದುಷ್ಟರ ಪಾಲಿಗೆ
ರೆಬೆಲ್ ಸ್ಟಾರ್
ಪಡ್ಡೆಗಳ ಪ್ರೀತಿಯ
ಕನ್ವರ್ ಲಾಲ್
ನಟನೆಯಲಿ ಎಂದೂ
ಮರೆಯದ  ದಿಗ್ಗಜ
ಕೊಡಗೈದಾನಿಯಾದ
ಕಲಿಯುಗ ಕರ್ಣ
ಕನ್ನಡ ಕಲಾವಿದರಿಗೆ
ನಮಗೆಲ್ಲ ಅಣ್ಣ
ಅಮರ್ ನಾಥ್  ಹೆಸರಿನಂತೆ
ಅಮರನಾದೆ
ದೇಹದಿಂದ ನಿನ್ನ ಪ್ರಾಣ
ಹೋದರೂ ನಮ್ಮ ಹೃದಯದಲಿ
ಶಾಶ್ವತವಾಗಿ ನೆಲೆಸಿರುವೆ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

24 November 2018

ಗಜ಼ಲ್51(ಬದಲಾಗಿದ್ದೇನೆ)

          *ಗಜ಼ಲ್ 51*

ನಲವತ್ತು ದಾಟಿದ ಮೇಲೆ ನಿಜವಾಗಿ ಬದುಕಲು‌  ಬದಲಾಗಿದ್ದೇನೆ
ಗತಕಾಲದ ಮೆನಪುಗಳ ಮೊಗೆದು  ಸವಿಯಲು   ಬದಲಾಗಿದ್ದೇನೆ

ತಪ್ಪು ಮಾಡದವರಾರಿಲ್ಲ ಪರಿಪೂರ್ಣರು ಹುಟ್ಟಿಲ್ಲ
ವ್ಯಕ್ತಿ ,ವಸ್ತುಗಳು  ಹೇಗಿದ್ದರೂ ಹಾಗೆಯೇ  ಸ್ವೀಕರಿಸಲು‌  ಬದಲಾಗಿದ್ದೇನೆ

ನಡೆಯುವುದ ತಡೆಯುವ ನಿಯಂತ್ರಣ ಶಕ್ತಿ ನಾನಲ್ಲ
ನಿನ್ನೆ ನಾಳೆಗಳ ಚಿಂತಿಸದೇ   ವರ್ತಮಾನದಿ ಜೀವಿಸಲು  ಬದಲಾಗಿದ್ದೇನೆ

ಕುರುಡು ಕಾಂಚಾಣ ಕುಣಿದು ಅಮ್ಮ ಅಪ್ಪ ಬಂಧು ಬಳಗ ದೂರಮಾಡಿದೆ
ಸಂಬಂಧ ಗಳೊಂದಿಗೆ ರಾಜಿಯಾಗಿ ಸಂಭ್ರಮಿಸಲು ಬದಲಾಗಿದ್ದೇನೆ

ಸೂರ್ಯ, ಚಂದಿರ,ಗಾಳಿ ,ಭುವಿ ನಿರಂತರ ಕಾಯಕ ನಿರತ
ಸೀಜೀವಿಯನು ಇತರರು ಪ್ರಶಂಸೆ ಮಾಡಬೇಕು ಎಂಬುದನು ತೊರೆಯಲು ಬದಲಾಗಿದ್ದೇನೆ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

23 November 2018

ಮಾತಾಪಿತರಾಗೋಣ (ಹನಿಗವನ)

*ಮಾತಾಪಿತರಾಗೋಣ*

ಓ ನನ್ನ ಒಲವ ನಲ್ಲೆ
ವಿರಸವನು ನೀಗೋಣ
ಸರಸದಲಿ ಸಂಭ್ರಮಿಸೋಣ
ವರುಷದೊಳಗೊಂದು
ವರ ಪಡೆದು ಮುದ್ದಾದ
ಕಂದನಿಗೆ ಮಾತಾಪಿತರಾಗೋಣ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

21 November 2018

ಮರೆಯಲಾರೆ (ಕವನ)

              *ಮರೆಯಲಾರೆ*

ಸವಿಯಾದ ನೆನಪು ಮರೆಯಲಾರೆ
ಕವಿಯಾಗಿ ಅವುಗಳ ವರ್ಣಿಸಲಾರೆ

ಅಕ್ಷರ ಕಾಗುಣಿತ ತಪ್ಪಿ ಬ್ಯಾ ಬ್ಯಾ
ಅಂದಾಗ ಬೆತ್ತದಿ ಬಾರಿಸಿ
ಬಾಸುಂಡೆ ಬರುವಂತೆ ಬಾರಿಸಿ
ಜೀವನ ಪಾಠ  ಕಲಿಸಿದ
ಭಗವಂತನಂತಹ ಗುರುವ ಮರೆಯಲಾರೆ

ಬುಗುರಿ ಚಿನ್ನಿದಾಂಟು ಕುಂಟೊಬಿಲ್ಲೆ
ಆಟಗಳಲ್ಲಿ ನಲಿದಾಡಿ
ಬೇಲಿ ಸಾಲಲಿ‌ ಸುತ್ತಿ
ಕಾರೆ ತೊಂಡೆ ಹಣ್ಣುಗಳ ಸವಿವಾಗ
ಜೊತೆಗಿದ್ದ  ಬಾಲ್ಯದ ಗೆಳೆಯರ ಮರೆಯಲಾರೆ

ಅಪ್ಪನಿಲ್ಲದಿದ್ದರೂ ಒಪ್ಪವಾಗಿ ಬೆಳೆಸಿ
ಹೆತ್ತು ಹೊತ್ತು ಸಾಕಿ ಸಲಹಿ
ಹೊತ್ತಿಗೆ ತುತ್ತು ಅನ್ನ ನೀಡಿ
ಹೊತ್ತಗೆ  ಹಿಡಿಯುವಂತೆ ಮಾಡಿ
ಅತಿ‌ಮುದ್ದಾಗಿ ಬೆಳೆಸಿದ ಅಮ್ಮನ ಮರೆಯಲಾರೆ

ಮರಳಿನಲಿ ಗೂಡನ್ನು ಕಟ್ಟಿ
ಕೈ ಕೈ ಹಿಡಿದು ನೆಡೆದಾಡಿ
ನಿನ್ನನೇ ಮದುವೆಯಾಗುವೆನೆಂದು
ಅಪ್ಪ ಅಮ್ಮನ ಆಟವನಾಡಿದ
ಮೊದಲ ಒಲವನು ಮರೆಯಲಾರೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

12 November 2018

ಹೊಸ ಜಗವ ಕಟ್ಟೋಣ ( ಕವನ)

*ಹೊಸ ಜಗ ಕಟ್ಟೋಣ*

 ದೀಪದ ಹಬ್ಬದಿ  ಮೆರೆಯುವುದಿಲ್ಲ
ಪರಿಸರ ಕಾಳಜಿ ಮರೆಯುವುದಿಲ್ಲ

ಪಟಾಕಿ ಚಟಾಕಿ ಹೊಡೆಯುವುದಿಲ್ಲ
ಸಿಹಿ ಹಂಚುವುದು ಮರೆಯುವುದಿಲ್ಲ
ಭೂಚಕ್ರಗಳನು ಹಚ್ಚವುದಿಲ್ಲ
ಚಕ್ರಪಾಣಿಯ ಸ್ಮರಣೆ ಮರೆಯುವುದಿಲ್ಲ

ಬಿರುಸು   ಬಾಣಗಳ ಬಳಸುವುದಿಲ್ಲ
ದಿರಿಸು ಧರಿಸಿ ಮಿಂಚುವೆವವು ಎಲ್ಲ
ಆಕಾಶಬುಟ್ಡಿ ಕಟ್ಟಲು ಮರೆಯಲ್ಲ
ಮಾಲಿನ್ಯವನು ನಾವು ಮಾಡುವುದಿಲ್ಲ

ಬೊಗಸೆಯಲಿ ದೀಪದಳ ಬೆಳಗಿಸುವೆವು
ದೀಪದಿಂದಲಿ ದೀಪಗಳ  ಹಚ್ಚುವೆವು
ಕತ್ತೋಲೋಡಿಸಿ ಬೆಳಕು ಮೂಡಿಸುವೆವು
ಹೊಸ ಜಗವ ಕಟ್ಡಲು ಪಣತೊಡುವೆವು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

08 November 2018

*ವರ ಬರ*

           *ವರ ಬರ*

ವಿಜ್ಞಾನ ತಂತ್ರಜ್ಞಾನ
ಜಾಗತೀಕರಣ ಆಧುನೀಕರಣ
ಮನುಕುಲಕ್ಕೆ ಕೆಲವೊಮ್ಮೆ
ವರವಾಗಿದೆ
ಜೊತೆಗೆ ಪ್ರೀತಿ ವಿಶ್ವಾಸ
ಆಚಾರ,ವಿಚಾರ ಸಂಸ್ಕೃತಿ
ಮಾನವೀಯತೆಯ ಬರ ತಂದಿದೆ 

ಮಹಾಬಲಿ (ಕವನ)

                     *ಮಹಾಬಲಿ*

ಪರಿಸರ ಮಾಲಿನ್ಯ
ದುರಾಸೆಗಿಡಿದ ಕನ್ನಡಿ
ಸುಸ್ಥಿರ ಅಭಿವೃದ್ಧಿಯ ಕಡೆಗಣಿಸಿ
ಅಸ್ಥಿರ ಗೊಳಿಸಿರುವೆವು ಭುವಿಯ
ವ್ಯಗ್ರಗೊಂಡಳು  ಭೂಮಾತೆ

ಅತಿವೃಷ್ಟಿ ಅನಾವೃಷ್ಡಿ  ಬರ
ಉಬ್ಬರ ಜಾಗತಿಕ ತಾಪಮಾನ
ಎಲ್‌ ನೀನೋ  ಲಾ  ನೀನೋ
ಏನೇನೋ
ಚಂಡಿಯಂತಹ ಚಂಡಮಾರುತ
ಜ್ಬಾಲೆಯುಗುಳುವ ಜ್ವಾಲಾಮುಖಿ
ಬಾಯಿತೆಗೆವ ಭೂಕಂಪ
ಪ್ರಕೃತಿ ಕ್ರಮೇಣ ಸಣ್ಣ ಪುಟ್ಟ
ಬಲಿ ಪಡೆದು ಎಚ್ಚರಿಕೆ ನೀಡಿಯಾಯಿತು
ಬುದ್ದಿ ಕಲಿತಿಲ್ಲ ನಾವು
ಮುಂದುವರೆಸಿದ್ದೇವೆ ಅದೇ ದುರ್ವರ್ತನೆ
ಮಹಾಬಲಿ ಗಾಗಿ ಕಾದಿದ್ದಾಳೆ
ಪ್ರಕೃತಿ ಮಾತೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


06 November 2018

ಕನಸ ದೀಪಾವಳಿ ( ಹನಿಗವನ)

              *ಕನಸ ದೀಪಾವಳಿ*

ಒಂದು ದಿನ ಮೊದಲೇ
ಆರಂಭವಾಗಿದೆ ದೀಪಾವಳಿ
ನಮ್ಮ ಗೃಹದಲಿ
ಓದಲು ಹೋದ ನನ್ನ
ಕನಸು ಹಿಂದಿರುಗಿದಳು
ಇಂದು ಮನೆಗೆ
ಆನೆ ಪಟಾಕಿಯಂತೆ ಚಟಪಟ
ಮಾತನಾಡುತ್ತಾ ಬಾಯಲಿ
ನಗುವೆಂಬ ಸುರ್ ಸರ್ ಬತ್ತಿಯ
ಬೆಳಕು ನೀಡುತ  ಮೊಗದಲಿ
ಗಲ್ ಗಲ್ ಎಂದು ಸದ್ದುಮಾಡಿ
ನಡೆದಾಡುತ್ತಿದ್ದಾಳೆ ಮನೆಯಲಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ದಿನವೂ ದೀಪಾವಳಿ (ಹನಿಗವನ)

            *ದಿನವೂ ದೀಪಾವಳಿ*

ಬೆಳಕ ನೀಡಿ ಬೆಳಕ ಪಡೆವ
ಸೂರ್ಯ ತಾರೆ ಚಂದ್ರರಿಂದ
ಮಾಲಿನರಹಿತ  ಪರಿಸರ ಸ್ನೇಹಿ
ದೀಪಗಳ  ಹಬ್ಬ ನಿರಂತರ .

ಬಾನಿನ ದಿನಕರ ಚುಕ್ಕಿ ಗಳಿಂದ
ಸ್ಪೂರ್ತಿ ಪಡೆದು ನಾವೂ ಸಹ
ಅಜ್ಞಾನ ಓಡಿಸಿ ತಮವ ನೀಗಿ
ದೀಪದಿಂದ ದೀಪಗಳ ಹಚ್ಚಿ
ದಿನವೂ ದೀಪಾವಳಿ ಆಚರಿಸೋಣ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

01 November 2018

ಕನ್ನಡ ಓರಾಟಗಾರ (ನ್ಯಾನೋ ಕಥೆ)

                *ನ್ಯಾನೋ ಕಥೆ*

*ಕನ್ನಡ ಓರಾಟಗಾರ*

"ನಮ್ಮ ನಾಡು ನಮ್ಮ ನುಡಿಯ ಬಗ್ಗೆ ನಾವು ಅಭಿಮಾನ ಪಡದಿದ್ದರೆ ಮತ್ಯಾರು ಬರುವರು? ನಮ್ಮ ಭಾಷೆ ಉಳಿಸಲು ಕನ್ನಡ ಪತ್ರಿಕೆಗಳನ್ನು, ಪುಸ್ತಕಗಳನ್ನು ಕೊಂಡು ಓದಬೇಕು.ಕನ್ನಡ ಶಾಲೆಗಳ ಬಲಪಡಿಸಬೇಕು" ಎಂದು ಸಮಾರಂಭದಲ್ಲಿ ಭಾಷಣ ಮಾಡಿದ ರಮೇಶನು  ಸನ್ಮಾನ ಸ್ವೀಕರಿಸಿ ಮನೆಗೆ ಬಂದ
"ಅಪ್ಪ ಇಲ್ಲಿದ್ದ ಟೈಮ್ಸ್ ಆಪ್ ಇಂಡಿಯಾ ಪೇಪರ್ ನೋಡಿದೆಯಾ?  " ಎಂದು ಮಗಳು ಕೇಳುವ  ಹೊತ್ತಿಗೆ  ಮಗ "ನಾಳೆ ನಮ್ಮ ಕಾನ್ವೆಂಟ್ ನಲ್ಲಿ ಪೇರೆಂಟ್ಸ್ ಮೀಟಿಂಗ್ ಇದೆ ನೀನು ಮಮ್ಮಿ ಬರಬೇಕಂತೆ " ಅಂದ .

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

ಗಂಧದ ಬೀಡು( ಕವನ)

                    *ಗಂಧದ ಬೀಡು*

ಕನ್ನಡ ನಾಡು ನಮ್ಮ ಚಿನ್ನದ ಬೀಡು
ಕನ್ನಡ ನಾಡು ನಮ್ಮ ಗಂಧದ ನಾಡು |ಪ|

ಹಕ್ಕ ಬುಕ್ಕರಾಳಿದ ನಾಡಿದು
ಒಡೆಯರು ಗೌಡರು ಕಟ್ಟಿದ ಬೀಡಿದು
ಕದಂಬ ಹೋಯ್ಸಳರಾಳಿದ ನಾಡಿದು
ಚೆನ್ನಮ್ಮ ಓಬವ್ವರ ಕಂಡ ನೆಲವಿದು     
                                |ಕನ್ನಡ  ನಾಡು |                                                                                                         

ಬೇಲೂರು ಹಳೇಬೀಡು ಕೆತ್ತನೆ ಸೊಬಗು
ಬಾದಾಮಿ ಐಹೊಳೆ ಹಂಪಿಯ ವೈಭವ
ಶಿಲ್ಪಕಲೆಯ ತವರೂರು ನಮ್ಮದು
ಲಲಿತ ಕಲೆಗಳ ಸುಂದರ ತಾಣವು
                         |ಕನ್ನಡ ನಾಡು|

ಪಂಪ ರನ್ನ ಜನ್ನರ ನೆಲೆಯಿದು
ಅಷ್ಟ ಜ್ಞಾನ ಪೀಠಿಗಳ ನೆಲೆಯಿದು
ನವ್ಯ ನವೋದಯ ಕವಿಗಳ ಧರೆಯಿದು
ಜೇನಿನ ಸವಿ ನುಡಿ ನಮ್ಮಯ ನುಡಿಯು
                       |ಕನ್ನಡ ನಾಡು|

ಕನ್ನಡವನ್ನು ಎಲ್ಲರು ಕಲಿಯುವ
ನಮ್ಮಯ ನುಡಿಯ ಎಲ್ಲರಿಗೆ ಕಲಿಸುವ
ಕಲಿತು ಕಲಿಸುತಾ ಕನ್ನಡ ಬೆಳೆಸುವ
ನಮ್ಮ ನಾಡಿನ ಕೀರ್ತಿಯ ಬೆಳಗುವ
                        |ಕನ್ನಡ ನಾಡು|

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*



31 October 2018

ಪರಿಹಾರ (ನ್ಯಾನೋ ಕಥೆ)

             
*ನ್ಯಾನೋ ಕಥೆ*
*ಪರಿಹಾರ*
"ನಾನು ಆ ಬೀದಿಯಲಿ ಹುಡುಕಿದೆ ಸಿಗಲಿಲ್ಲ ನಿನಗೇನಾದರೂ ಸಿಕ್ಕನೆ? " ಗಂಡ ಕೇಳಿದಾಗ  ಹೆಂಡತಿಯ  ದುಃಖದ ಕಟ್ಟೆಯೊಡೆದು ಅಳಲು ಆರಂಬಿಸಿದಳು .
ನಾನು ಶಾಲೆಗೆ ಹೋಗುವುದಿಲ್ಲ ಎಂದು ವಾರದಿಂದ ಹಠ ಹಿಡಿದ ಎರಡನೇ ತರಗತಿ ಓದುವ ವಿವೇಕ್  ಬಲವಂತಕ್ಕೆ ಶಾಲೆಗೆ ಹೋದವನು ಮನೆಗೆ ಬಂದಿರಲಿಲ್ಲ .ಬೈಕ್ನಲ್ಲಿ  ಬಂದ ಪಕ್ಕದ ಮನೆಯ ರಮೇಶ್  ನಿಮ್ಮ ಮಗ ಬಸ್ ಸ್ಟಾಂಡ್ನಲ್ಲಿ ನಿಂತಿದ್ದ ಎಂದು ಕರೆದುಕೊಂಡು ಬಂದಾಗ ದಂಪತಿಗಳಿಬ್ಬರು ಮಗನನ್ನು ತಬ್ಬಿ ಗದ್ಗದಿತರಾದರು .ಜೋಯಿಸರ ಸಲಹೆಯ ಮೇರೆಗೆ ತಾಯಿ ಏನೋ ಶಾಂತಿ ಮಾಡಿದರು. ತಂದೆ ಹಿರಿಯರ ಕರೆಸಿ ಮಗನಿಗೆ ಆಪ್ತಸಮಾಲೋಚನೆ ಮಾಡಿಸಿದರು .ಮೂರು ದಿನದ ನಂತರ ಮಗ "ಅಮ್ಮ ಬೇಗ ರೆಡಿ ಮಾಡು ನಾನು ಶಾಲೆಗೆ ಹೋಗಬೇಕು" ಅಂದ .!
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

30 October 2018

ಪರಿವರ್ತನೆ (ನ್ಯಾನೋ ಕಥೆ)

                  *ನ್ಯಾನೋ ಕಥೆ*

*ಪರಿವರ್ತನೆ*

ಅಲ್ಸರ್ ಮತ್ತು ಗ್ಯಾಸ್ಟ್ರಸೈಟಸ್  ನಿಂದ ಎರಡು ತಿಂಗಳು ಚಿಕಿತ್ಸೆ ಪಡೆದ ಶಕುಂತಲಮ್ಮ ಸಂಪೂರ್ಣವಾಗಿ ಗುಣಮುಖವಾಗಿ  ಆಸ್ಪತ್ರೆಯಿಂದ ಮನೆಗೆಬಂದರು .ಬೆಳಗ್ಗೆ ಹತ್ತು ಗಂಟೆಗೆ ಮಗಳು " ಅಮ್ಮಾ ಪೂಜೆಗೆ ಎಲ್ಲಾ ಸಿದ್ದ ಮಾಡಿರುವೆ" ಎಂದಳು " ಟಿಫನ್ ಕೊಡು ಮೊದಲು ಹೊಟ್ಟೆ ಪೂಜೆ ಆಮೇಲೆ ದೇವರ ಪೂಜೆ" ಎಂಬ ಅಮ್ಮನ ಮಾತು ಕೇಳಿ ಮಗಳು   ಬಿಟ್ಟ ಕಣ್ಣು ಬಿಟ್ಟು ಬಾಯಿತೆರೆದುಕೊಂಡು ಅಮ್ಮನನ್ನೇ ನೋಡುತ್ತಾ ನಿಂತಳು .

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

ಉಳಿತಾಯ ದಿನ(ಹನಿಗವನ)

           

*ಉಳಿತಾಯ ದಿನ*ಹನಿಗವನ

ಮದುವೆಯಾದ ಹೊಸತರಲ್ಲಿ
ಅನುರಾಗ ಅರಳಿ
ಪ್ರೀತಿಯ ಜೇನಿನಲಿ ತೇಲಿಸುತ್ತಿದ್ದಿರಿ
ಈಗ ಅನುರಾಗವಿಲ್ಲ
ಮುತ್ತಿನ ಮಾತಿಲ್ಲ
ಮುತ್ತಂತೂ ಇಲ್ಲವೇ ಇಲ್ಲ
ಈಗೇಕೆ ಕಂಜ್ಯೂಸುತನ
ನಿನಗೆ ಗೊತ್ತಿಲ್ಲವೆ ಪ್ರಿಯೆ ?
ಇಂದು ವಿಶ್ವ ಉಳಿತಾಯ ದಿನ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಪುಸ್ತಕ ವಿಮರ್ಶೆ (ಕಾಲಚಕ್ರ ಕಥಾ ಸಂಕಲನ)

             *ನಾ ಓದಿದ ಪುಸ್ತಕ*

*ಕಾಲಚಕ್ರ*

ಕಥಾ ಸಂಕಲನ
ಲೇಖಕರು : ನಾಗರಾಜ್ ಜಿ‌ ನಾಗಸಂದ್ರ
ಪ್ರಕಾಶನ : ವರ್ಷಾ ಪ್ರಕಾಶನ

ಹನ್ನೆರಡು ವಿಭಿನ್ನವಾದ ಕಥಾವಸ್ತುವನ್ನು ಒಳಗೊಂಡಿರುವ ಈ ಪುಸ್ತಕದಲ್ಲಿ ಒಂದಕ್ಕೊಂದು ಉತ್ತಮ ಕಥೆಗಳು ಇವೆ .ಒಂದೇ ಸಿಟ್ಟಿಂಗ್ನಲ್ಲಿ‌ ಓದಿ ಮುಗಿಸಿದ ಈ ಪುಸ್ತಕ ನನ್ನ ಬಹುವಾಗಿ ಕಾಡಿತು .

ಮಹಿಳೆಯರು ಉನ್ನತ ಹುದ್ದೆಯನ್ನು ಅಲಂಕರಿಸಿದರೂ ಅವರ ಶೋಷಣೆಯು ನಿಂತಿಲ್ಲ ಎಂದು ಮೊದಲ ಕಥೆಯಾದ
*ಪರಿವರ್ತನೆ* ಯಲ್ಲಿ ಮನೋಜ್ಞವಾಗಿ ಚಿತ್ರಿಸಿದ್ದಾರೆ ತಹಶಿಲ್ದಾರರಂತಹ ಉನ್ನತ ಹುದ್ದೆಯಲ್ಲಿದ್ದರೂ ಮನೆಯಲ್ಲಿ ಗಂಡನ‌ ಕಿರುಕುಳಕ್ಕೆ ಬೇಸತ್ತು ಅಡ್ಡದಾರಿ ಹಿಡಿದು ಪುನಃ ಪರಿವರ್ತನೆ ಹೊಂದುವ ರೀತಿಯನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.

ನನಗೆ ವೈಯಕ್ತಿಕವಾಗಿ ಬಹಳ ಇಷ್ಟವಾದ ಕಥೆ *ಮಾರುತ* ಇದರಲ್ಲಿ ರೈತನ ಹಾಡು ಪಾಡುಗಳನ್ನು ವಿವರವಾಗಿ ಬಿಡಿಸಿಹೇಳಿದ್ದಾರೆ
ಈ ಕಥೆಯಲ್ಲಿ ಸುಭೀಕ್ಷವಾಗಿರುವ ರೈತನ ಚಿತ್ರಣದ ಜೊತೆಗೆ ಪ್ರಸ್ತುತ ಇರುವ ಅಂತರ್ಜಲ ಕುಸಿತ ರೈತರಸಾಲ ,ರೈತರ ಆತ್ಮಹತ್ಯೆ ಬಗ್ಗೆ ಬೆಳಕು ಚೆಲ್ಲಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.

*ಕಾಲಚಕ್ರ* ಕಥೆಯಲ್ಲಿ ಹಣದ ಹಿಂದೆ ಬಿದ್ದು ದುಡ್ಡೇ ಸರ್ವಸ್ವ ಎಂದು ಜೀವನವನ್ನೇ ಹಾಳುಮಾಡಿಕೊಳ್ಳುವ ಯುವಕನ ಕಥೆ ಮೂಲಕ ಯುವ ಜನಾಂಗವನ್ನು ಕವಿ ಎಚ್ಚರಿಸಿದ್ದಾರೆ.

ಸಾಹಿತಿಯಾದವನು ತಾಳ್ಮೆಯಿಂದ ಇರಬೇಕು ಕೇವಲ ಹಾರ ತುರಾಯಿ ಪ್ರಶಸ್ತಿಯ ಹಿಂದೆ ಓಡಬಾರದು ಅವು ನಮ್ಮನ್ನು ಹುಡುಕಿಕೊಂಡ ಬರುವವುಎಂದು *ಗುರಿಮುಟ್ಟದ ಹಾದಿ*ಯಲ್ಲಿ ಮನೋಜ್ಞವಾಗಿ ಚಿತ್ರಿಸಿದ್ದಾರೆ.
ಸಮಾಜವಾದಿ ತತ್ವ ರೂಢಿಸಿಕೊಂಡು ಬದಲಾವಣೆಗಳನ್ನು ತರಲು ಹೋಗಿ ತನ್ನ ಕುಟುಂಬವನ್ನೇ ತೊಂದರೆಗೆ ಒಡ್ಡುವ *ಗಾಳಿ ಗೋಪುರ*ಕಥಾ  ಚಿತ್ರಣ ಓದುಗರ ಕಣ್ಣಲ್ಲಿ ನೀರು ತರಿಸುತ್ತದೆ .
ಈಗೆ ಎಲ್ಲಾ ಕಥೆಗಳು ವಿಭಿನ್ನವಾದ ನಿರೂಪಣೆ ಮತ್ತು ಕಥಾವಸ್ತುವಿನಿಂದ ನಮ್ಮ ಮನ ಸೆಳೆಯುತ್ತವೆ.
ಈ ಕಥಾ ಸಂಕಲನ ಓದಿ ಮುಗಿಸಿದಾಗ ಒಂದು ಒಳ್ಳೆಯ ಪುಸ್ತಕ ಓದಿದ ಅನುಭವ ನಿಮಗಾಗುವುದು ಗ್ಯಾರಂಟಿ .

*ಸಿ ಜಿ.ವೆಂಕಟೇಶ್ವರ*
*ಗೌರಿಬಿದನೂರು*

29 October 2018

*ನ್ಯಾನೋ ಕಥೆ* *ಚಳಿಯಲ್ಲೂ ಬೆವರು*

             
*ನ್ಯಾನೋ ಕಥೆ*
*ಚಳಿಯಲ್ಲೂ ಬೆವರು*
"ಈ ಸರ್ಕಾರದವರು ಇಪ್ಪತ್ನಾಲ್ಕು ಗಂಟೆ ಕರೆಂಟ್ ಕೊಡ್ತೀವಿ ಅಂತಾರೆ ಹಗಲೊತ್ತು ಸಿಂಗಲ್ ಫೇಸ್ ಕೊಟ್ಟು ರಾತ್ರಿ ತ್ರೀಪೇಸ್ ಕೊಡ್ತಾರೆ ಈ ಚಳೀಲಿ ನಾನು ತೋಟಕ್ಕೆ ನೀರು ಕಟ್ಟಬೇಕು ಎಲ್ಲಾ ನನ್ನ ಕರ್ಮ" ಎಂದು ಗೊಣಗುತ್ತ ರಾಮಪ್ಪ ನೀರು ಕಟ್ಟುವಾಗ " ಹೌದು ಕಣಪ್ಪ ನಾನು ಈಗ ನನ್ನ ತೋಟದ ಮೋಟರ್ ಸ್ಟಾರ್ಟ್ ಮಾಡಿ ಬಂದೆ ನಮ್ಮ ಸರ್ಕಾರದಾಗೆ ಇಂಗ್ ಇರ್ಲಿಲ್ಲ ಬಿಡು" ಎಂದು ಬೀಮಪ್ಪ  ಹೇಳಿದಾಗ ನಿಮ್ಮದ್ಯಾವ ಸರ್ಕಾರ?  ಓ  ನಿಮ್ಮ ಪಾರ್ಟಿ ಬೇರೆ ಎಂದು ರಾಮಪ್ಪ ಮಾತು ಮುಂದುವರೆಸುತ್ತಾ ನೀರು ಕಟ್ಟುವ ಕಾರ್ಯ ಮುಂದುವರೆಸಿದ ಮತ್ತೆ ೧೨ .೩೦ ಕ್ಕೆ  ಕರೆಂಟ್ ಹೋಯ್ತು ಸರಿ ನಾನು ಇಲ್ಲೆ ಮಲಗಿ ಬೆಳಗ್ಗೆ ಊರಿಗೆ ಹೋಗುವೆ ಎಂದು ರಾಮಪ್ಪ ಮಲಗಲು ಅಣಿಯಾದ ಭೀಮಪ್ಪ ನನಗೆ
ಹೊಲದಲ್ಲಿ ಮಲಗಲು ತುಂಬಾ ಇಷ್ಟ ಎಂದು ಅಲ್ಲೇ ಮಲಗಿದ.
ರಾಮಪ್ಪ ತೋಟದಿಂದ  ಮುಂಜಾನೆ ಬೇಗ ಎದ್ದು ಊರಿನ ಸಮೀಪ ನಡೆದುಬರುತ್ತಿರುವಾಗ ಭೀಮಪ್ಪ ಕುರಿಮರಿಯೊಂದಿಗೆ ಎದುರಾದಾಗ "ಏನು ಇಷ್ಟು ಬೇಗ ತೋಟದಿಂದ ಬಂದು ಮತ್ತೆ ತೋಟಕ್ಕೆ ಹಿಂತಿರುಗುತ್ತಿರುವೆಯಾ?! ಎಂದಾಗ "ರಾತ್ತಿ ನನಗೆ ತಲೆನೋವಿದ್ದದ್ದರಿಂದ ತೋಟಕ್ಕೆ ಬಂದಿರಲಿಲ್ಲ" ಎಂದಾಗ ರಾಮಪ್ಪ ಬೆಳಗಿನ ಚಳಿ ಯಲ್ಲೂ ಬೆವರಲಾರಂಬಿಸಿದನು .!
*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

27 October 2018

ಬೆಳಕಿನೆಡೆಗೆ ಸಾಗೋಣ (ಕವನ)

                       ಬೆಳಕಿನೆಡೆಗೆ ಸಾಗೋಣ

ಬುದ್ದ ಬಸವಾದಿ ಮಹಾಪುರಷರು
ಕಾಲ ಕಾಲಕ್ಕೆ ಪಂಜನಿಡಿದು
ಬೆಳಕ ನೀಡಲು ಧರೆಯಲಿ
ಅವತರಿಸುತ್ತಲೇ ಇದ್ದಾರೆ
ಆದರೂ ಕತ್ತಲಲಿರುವವರು
ಹೆಚ್ಚಾಗುತ್ತಲೇ ಇದ್ದಾರೆ .

ಕಾರಣ ಹುಡಕಹೊರಟರೆ
ಅವರಿಡಿದಿರುವ ಪಂಜುಗಳಿಂದ
ನಾವು  ಬೆಳಗಿಸಿಕೊಳ್ಳದಿರುವುದು
ನಮ್ಮ ಅಲ್ಪ ಬೆಳಕಿನ ಪಂಜಿಗೆ
ಉತ್ತಮ ತೈಲ‌ಹಾಕದಿರುವುದು
ಅಲ್ಪ ಸ್ವಲ್ಪ ಉರಿವ ಪಂಜುಗಳ
ಆರಿಸಲು ಯತ್ನಮಾಡುತಿರುವುದು
ಇನ್ನೆಲ್ಲಿಯ ಬೆಳಕು ಬರೀ‌ಕೊಳಕು

ಕತ್ತಲಲಿದ್ದುದು ಸಾಕು ಬನ್ನಿ
ಬರಲಿರುವ ಬುದ್ದ ಬಸವರ
ಕಾಯುವುದು ಬೇಡ
ಪಂಜಿನಿಂದ ಪಂಜುಗಳ
ಪ್ರಜ್ವಲಿಸೋಣ ಜಗವನೆಲ್ಲ
ಜಗಮಗಿಸೋಣ
ತಮವ ಹೊಡೆದೋಡಿಸೋಣ
ಎಲ್ಲರೂ ಬುದ್ದ ಬಸವರಾಗೋಣ
ಕತ್ತಲಿನಿಂದ ಬೆಳಕಿನೆಡೆಗೆ  ಸಾಗೋಣ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

26 October 2018

ಗಜ಼ಲ್ 50(ಅಮ್ಮನ ಅಳಲು) ಈ ಗಜ಼ಲ್ ನನ್ನ ಅಮ್ಮನಿಗೆ ಮತ್ತು ನನ್ನ ಗಜ಼ಲ್ ಗುರುಗಳಾದ ಡಾ. ಗೋವಿಂದ ಹೆಗಡೆ ರವರಿಗೆ ಸಮರ್ಪಣೆ ಮಾಡುವೆ .ಮತ್ತೊಂದು ಸಂತಸದ ಸುದ್ದಿ ನನ್ನ ಬ್ಲಾಗ್ ಒದುಗರ ಸಂಖ್ಯೆ 27000 ದಾಟಿದೆ ನನ್ನ ಎಲ್ಲಾ ಬ್ಲಾಗ್ ಓದುಗರಿಗೆ ಅನಂತ ಧನ್ಯವಾದಗಳು🙏🙏


                    *ಗಜ಼ಲ್50*

ಮುತ್ತು  ಕೊಟ್ಟವಳು ಬಂದಾಗ ತುತ್ತುಕೊಟ್ಟವಳ ಮರೆಯುತಿಹರು
ದುಷ್ಟ ಬುದ್ದಿಯಿಂದ   ಬಟ್ಟೆಗಳನ್ನು ಹಾಕಿಯೂ  ಬೆತ್ತಲಾಗಿಹರು

ಹೊಟ್ಟೆ ಬಟ್ಟೆ ಕಟ್ಟಿ ತುತ್ತು ತುತ್ತಿಗೂ ತತ್ವಾರದಿ ಅನ್ನ ನೀಡಿದೆ
ರೆಕ್ಕೆ ಬಲಿತ ಮೇಲೆ ಹಾರಿ ನನ್ನ ಹೊರ ತಳ್ಳಲು ಸಿದ್ದರಾಗಿಹರು

ಮಕ್ಕಳಿಗೆ ದುಡಿಯಲು ಗಾಣದೆತ್ತಾದೆ ರಕ್ಷಿಸಲು ಕರಡಿಯಾದೆ
ನಾನು ವಯಸ್ಸಾದ  ಮೃಗವೆಂದು ತಿಳಿದು ನನ್ನ  ಮಾರಾಟ ಮಾಡುತಿಹರು

ಮಾತೃದೇವೋಭವ, ಮೊದಲ ಶಿಕ್ಷಕಿ, ಕ್ಷಮಯಾಧರಿತ್ರಿ ಎಂದರು
ಪೀಡೆ ,ಕಾಲಕಸ ,ದಂಡ ಗುಣವಿಶೇಷಣಗಳ ನೀಡುತಿಹರು

ಯಯಾತಿಗಳು ಯಾರೂ ಇಲ್ಲ ಕೋಲಿಡಿಯುವುದು ತಪ್ಪಲ್ಲ
ದೋಸೆ ತಿರುವಿ ಹಾಕಲು ಹೆಚ್ಚು ಕಾಲ ಬೇಕೆಂದು ತಿಳಿದಿಹರು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಕಾಯಕವೇ ಕೈಲಾಸ (ಕವನ)ಕವಿ ಸಾಹಿತಿಗಳ ಜೀವಾಳ ಗುಂಪಿನ ರಾಜ್ಯ ಮಟ್ಟದ ಚಿತ್ರ ಕವನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಕವನ


                         *ಕಾಯಕವೇ ಕೈಲಾಸ*

ಇಳಿ ವಯಸ್ಸಿನಲ್ಲೂ
ಇಳೆಗೆ ನಾ ಭಾರವಲ್ಲ
ಭಾರ ಹೊರುವ ಶಕ್ತಿ
ದೇವರು ನೀಡಿರುವನಲ್ಲ

ಜೀವನವೆಂಬ ಸೈಕಲ್
ಬಹಳ ತುಳಿದಿರುವೆ
ಕಾಯಕವೆ ಕೈಲಾಸ
ತತ್ಬ ಪಾಲಿಸುತಿರುವೆ

ಬಸ್ಸಿಗಿಂತ ಹಿರಿದು ಸೈಕಲ್
ಯಂತ್ರದ ಹಂಗು ಬೇಕಿಲ್ಲ
ಸ್ವಾಭಿಮಾನವ ಮರೆಯಲ್ಲ
ಮೈಯಲ್ಲಿ ಶಕ್ತಿ ಇದೆಯಲ್ಲ

ಚಳಿ ಮಳೆಯ ಹಂಗಿಲ್ಲ
ಕೆಲಸ ಮಾಡಿ ಮುಗಿಸುವೆ
ನನ್ನ ಮತ್ತು ಅವಲಂಬಿತರ
ತುತ್ತಿನ ಚೀಲ ತುಂಬಿಸುವೆ

*ಸಿ .ಜಿ ವೆಂಕಟೇಶ್ವರ*
*ಗೌರಿಬಿದನೂರು*

25 October 2018

ಉದಯಕುಮಾರ್ (ಕವನ)

                   *ಉದಯ ಕುಮಾರ*

ಹುಟ್ಟುವಾಗ ತಣ್ಣನೆಯ ಗುಣ
ಮೇಲೇರಿದಂತೆ ಬೆಳಗುವ
ಹೊತ್ತಿಳಿದಂತೆ ತಣ್ಣಗಾಗುವ
ಇದು ದೈನಂದಿನ ಕಾಯಕ
ನಮ್ಮ ಬಾನಿನ ನೇಸರನಿಗೆ
ಭುವಿಯಲೊಂದು ರವಿ
ಸೂರ್ಯನಂತೆ ಪ್ರತಿದಿನ
ಕಾಯಕನಿರತರಾಗಿರುವ  ನನ್ನ
ಗೆಳೆಯ ಉದಯಕುಮಾರ

ಧಣಿವರಿಯದ ಕಾಯಕ
ತೋಟದಲಿ ಮಾದರಿ ಕೃಷಿಕ
ವಿಕಲಚೇನರಿಗೆ ಪ್ರೇರಕ
ವ್ಯಾಪಾರದಲಿ ಶ್ರೇಷ್ಠ ವಣಿಕ
ವಯೋವೃದ್ದ  ಹೆತ್ತವರ ರಕ್ಷಕ
ಗೆಳೆಯರ ಪಾಲಿಗೆ  ಆಪ್ತರಕ್ಷಕ
ಮಕ್ಕಳ ಉತ್ತಮ ಪಾಲಕ
ದಾನ ಧರ್ಮದ ಪ್ರವರ್ತಕ
ಸದಾ ತರುಣ ನಮ್ಮ ಕುಮಾರ
ಇವರೇ ನಮ್ಮ ಉದಯಕುಮಾರ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

22 October 2018

ಗಜ಼ಲ್49( ಬಾರೆ )ಹನಿ ಹನಿ ಇಬ್ಬನಿ ಬಳಗದ ಸ್ಪರ್ಧೆಯಲ್ಲಿ ಉತ್ತಮ ಗಜ಼ಲ್ ಎಂದು ಪುರಸ್ಕೃತ ಗಜ಼ಲ್


ಜಗ                    *ಗಜ಼ಲ್*

ಹುಚ್ಚನಂತೆ ನಾನು ಕಾಯತಿರುವ ತಾಣಕ್ಕಾದರೂ ಬಾರೆ
ಇಚ್ಚೆಯಲಿ  ನೀನೇ  ಹೇಳಿದ ಜಾಗಕ್ಕಾದರೂ ಬಾರೆ

ನೀನಿರುವೆಡೆ ಜಗ ಮಗ ಬೆಳಕು ನಕ್ಷತ್ರಗಳ ಹೊಳಪು
ಕತ್ತಲಾಗಿಹ  ಹೃದಯದ ದೀಪ ಹಚ್ಚಲಾದರೂ ಬಾರೆ

ದಿನ ಕಳೆದು  ದಿನಪ ಹೋಗಿ ಚಂದಮ ಬಂದ
ತಿಂಗಳ ಬೆಳಕಲ್ಲದರೂ ವರ್ಷದ ಜೊತೆಗಾದರೂ ಬಾರೆ

ಸಾಗರದ ತಟದಲ್ಲಿ ಸಾಗರ ದಷ್ಟು ಆಸೆ ಹೊತ್ತ ನಿರೀಕ್ಷೆ
ದಾರಿ ಕಾಯುತಿಹೆ ಏಕಾಂತದಿ ಈ ಕಾಂತನ ಮುದ್ದಿಸಲಾದರೂ  ಬಾರೆ

ಸೀಜೀವಿಯ ನೋಡದೆ ನೀ  ನಿಲ್ಲುವಳಲ್ಲ ಒಲವಿನ ನಲ್ಲೆ
ನಿನ್ನ ನೋಡದೆ ನಾ  ಹೇಗಿರಲಿ ಒಮ್ಮೆ ಸಂದಿಸಲಾದರೂ  ಬಾರೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

19 October 2018

ಕಲಿಕೆ (ಕವನ)

                *ಕಲಿಕೆ*

ಎಸ್ ಎಸ್ ಎಲ್ ಸಿ‌ ಯಲ್ಲಿ
ತನ್ನ ಮಗ ಪಾಸಾಗಿದ್ದ
ಪಕ್ಕದ ಮನೆಯ ಹುಡುಗಿ
ತೊಂಬತ್ತು ತಗೆದುಕೊಂಡಾಗ
ಇವನಪ್ಪ ಮತ್ಸರದಿ ಬೈದು
ನೀನ್ಯಾವಾಗ ತೊಂಬತ್ತು
ತೆಗೆದುಕೊಳ್ಳುವುದು ಎಂದಿದ್ದ

ಪಿ ಯು ಸಿ ಯಲ್ಲಿಯೂ
ಮಗ ಉತ್ತಮ ಅಂಕಗಳೊಂದಿಗೆ
ತೇರ್ಗಡೆಯಾದ ಅಪ್ಪನದು
ಅದೇ ರಾಗ ನೀನ್ಯಾವಾಗ
ತೊಂಬತ್ತು ತೆಗೆದುಕೊಳ್ಳುವುದು

ದೊಡ್ಡವನಾದ ಮೇಲೆ ಮಗ
ತೂರಾಡುತ್ತಾ ಮನೆಗೆ ಬಂದ
ದಿಗಿಲುಗೊಂಡ ಅಪ್ಪ
ಏನು ಬಂತೋ ರೋಗ
ಎಂದು  ಬೈದರು ಮಗ
ಉತ್ತರಿಸಿದ ಈಗೀಗ ತೊಂಬತ್ತು
ತೆಗೆದುಕೊಳ್ಳಲು ಕಲಿತಿದ್ದೇನೆ


*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*

18 October 2018

ಆಯುಧಪೂಜಾ ಆನಂದ(ಕವನ)

                   *ಆಯುಧ ಪೂಜಾ ಆನಂದ*

ಬಾಲ್ಯದ ಆ ದಿನದಿ
ಹಳೆ ಸೈಕಲ್ ಟೈರ್ಗೆ
ಹೂ ಹಾಕಿ ಹರಿಷಣ
ಕುಂಕುಮು ಹಚ್ಚಿ
ಅದರ ಸೌಂದರ್ಯ ನಾ ಮೆಚ್ಚಿ
ಕೈಯಲೊಂದು ಕೋಲಿಡಿದು
ಟೈರ್ ತಳ್ಳತ್ತಾ ಗೆಳೆಯರೊಂದಿಗೆ
ಓಡುತ್ತಿದ್ದರೆ ಅದರ ಆನಂದ
ವರ್ಣಿಸಲಸದಳ

ನಮ್ಮನೆಗೂ ಸೈಕಲ್ ಬಂತು
ಆಯುಧ ಪೂಜೆಗೆ ಅಮ್ಮನ ಕಾಡಿ
ಬೇಡಿ ಹಣ ಪಡೆದು ಬಲೂನು
ಹೂ ಗಳಿಂದ ಸಿಂಗರಿಸಿ
ಕ್ಯಾರಿಯರ್ ಹಿಂದೆ ಡಬ್ಬ
ಅದಕ್ಕೊಂದು ತೂತು ಮಾಡಿ
ಹಬ್ ಗೆ ಕಟ್ಟಿ ಬರ್ ಎಂದು
ಸದ್ದು ಮಾಡಿ ಮುನ್ನೆಡೆದಾಗ
ಏನೋ  ಆನಂದ ಮನದಲ್ಲಿ

ಇಂದು ಬೈಕಿದೆ ಕಾರಿದೆ
ಹೂ ಹಣ್ಣಿಗೆ ಹಣವಿದೆ
ಅಲಂಕಾರ ಜೋರಿದೆ
ಆದರೂ ಬಾಲ್ಯದ ಆ
ಸೈಕಲ್ ಟೈರ್‌ ನೀಡಿದ
ಆನಂದ ಈ ಬೈಕ್ ಕಾರ್
ನೀಡುತ್ತಿಲ್ಲ

*ಸಿ ಜಿ ವೆಂಕಟೇಶ್ವರ*

ದಸರಾ (ಹನಿಗವನ)

                       *ದಸರಾ*

ದಶ ದುರ್ಗುಣಗಳಾದ
ಕಾಮ,ಕ್ರೋಧ,ಮೋಹ,
ಲೋಭ,ಮದ,ಮತ್ಸರ,
ಸ್ವಾರ್ಥ,ಅನ್ಯಾಯ,
ಅಮಾನವೀಯತೆ,
ಅಹಂಕಾರ...ಗಳ
ಹೊಡೆದೋಡಿಸೋಣ
ದಸರಾ ಹಬ್ಬ ಆಚರಿಸೋಣ
ಉತ್ತಮ ಗುಣಗಳ ಗಳಿಸಲು
ಮುನ್ನುಡಿ ಬರೆಯೋಣ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

17 October 2018

ಮದರಂಗಿ (ಹನಿಗವನ)

              *ಮದರಂಗಿ*

ಏನಿದು ಕನಕಾಂಗಿ
ಕೈ ಕಾಲಿಗೆ ಮದರಂಗಿ
ಕಾಲಿಗೆ ಕಟ್ಟುತಿರುವೆ
ಹೊಳೆಯುವ ಕಾಲ್ಗೆಜ್ಜೆ
ಸೆಳೆಯುವೆ ಇಟ್ಟು ಹೆಜ್ಜೆ
ಮುಖ ಕೆಂಪಾಗಿರಬಹುದು
ನೆನೆದು ಬರುವ   ಇನಿಯನ
ಅದ ಪ್ರತಿಫಲಿಸುತಿದೆ ನಿನ್ನ
ಕಾಲಿನ ರಂಗಾದ ಬಣ್ಣ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*


15 October 2018

ಕನವರಿಕೆ ( ಕವನ)

                  *ಕನವರಿಕೆ*

ನನ್ನಲಿ ನಾನಿಲ್ಲ
ನನಗೇನಾಗಿದೆ ತಿಳಿದಿಲ್ಲ
ಚಿಗರೆಯಂತೆ  ಜಿಗಿದಿದ್ದೆ
ಬುಗರಿಯಂತೆ ತಿರುಗಿದ್ದೆ
ಈಗೇಕೋ ಹಾಗಿಲ್ಲ
ಏಕೆಂದು ತಿಳಿಯುತಿಲ್ಲ

ನನ ಗೆಳತಿಗೂ ಈಗೆ
ಆಗಿತ್ತಂತೆ ಊಟ
ಸೇರಿರಲಿಲ್ಲವಂತೆ
ಅವಳಿನಿಯನ ಸೇರಿದಾಗ
ಎಲ್ಲಾ ಸರಿಯಾಯಿತಂತೆ

ಮೊನ್ನೆ ಜಾತ್ರೆಯಲಿ
ಆ ಸುಂದರಾಂಗನ ಕಂಡೆ
ಅವನ ನೋಟಕೆ ಬೆರಗಾದೆ
ಈಗವನ ಕಾಣದೆ ಸೊರಗಿದೆ
ಮುಂದಿನ ಜಾತ್ರೆಗೆ ಅವನು
ಬರುವನೆ ಅವನ ಮನೆಯಲಿ
ನಾ ನೀರು ತರುವೆನೆ?

*ಸಿ ಜಿ.ವೆಂಕಟೇಶ್ವರ*
*ಗೌರಿಬಿದನೂರು*

14 October 2018

*ಕಾರಂತಜ್ಜ*(ಕವನ)

              *ಕಾರಂತಜ್ಜ*

*ಡಾ* ರ್ವಿನ್ ಸಿದ್ದಾಂತವ ನಂಬಿ
ಕ್ರಮೇಣ ಓದಿ ಬರೆದು
ವೈಜ್ಞಾನಿಕ ಚಿಂತನೆಯ ರೂಪಿಸಿದ
ಸಂತನೇ ಕಾರಂತಜ್ಜ

*ಶಿ* ಲೆಯೊಂದು ಯಾವ ಆಕಾರ
ಬೇಕಾದರೂ ಪಡೆಯಬಹುದೆಂದು
ತೋರಿದ ,ಹುಚ್ಚುಮನಸಿನ ಹತ್ತು
ಮುಖ ತೋರಿದ ಕವಿ ನಟ ಚಿಂತಕ ದಾರ್ಶನಿಕ
ನಿರ್ದೇಶಕ .ಯಕ್ಷಗಾನ ತಜ್ಞರೇ ಕಾರಂತಜ್ಜ

*ವ* ನ ಸಿರಿಯೊಂದಿಗೆ ಬಾಲರ
ಬೆಳವಣಿಗೆಗೆ ಬಾಲವನ
ಸ್ಥಾಪನೆ ಮಾಡಿದ ಎಲ್ಲವಬಲ್ಲ
ನಡೆದಾಡುವ ವಿಶ್ವ ಕೋಶವೆ ಕಾರಂತಜ್ಜ

*ರಾ* ಜಕೀಯದಲ್ಲಿ ಒಂದು ಕೈ ನೋಡಿ
ಚುನಾವಣೆ ಸೋತರೂ ಜನರ
ಮನಗೆದ್ದ ಸಾರಸ್ವತ ಲೋಕದ ನಕ್ಷತ್ರ
ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರೇ ಕಾರಂತಜ್ಜ

*ಮ* ರಳಿ ಮಣ್ಣಿಗೆ ಮೂಕಜ್ಜಿಯ ಕನಸುಗಳು
ಚೋಮನದುಡಿಯ ಕತೃ
ನಾನೂರಕ್ಕಿಂತ ಹೆಚ್ಚು ಕೃತಿಗಳ
ರಚಿಸಿ ತನ್ನ ಕೋಟಾವನ್ನೂ ಮೀರಿ
ಕನ್ನಡ ಪುಸ್ತಕ ಬರೆದ ಕೋಟಾದ
ಹೆಮ್ಮೆಯ ಪುತ್ರರೆ  ಕಾರಂತಜ್ಜ

*ಕಾ* ಡಿನ ರಕ್ಷಣೆ ಮಹತ್ವ ಸಾರಿದ
ನಾಡಿನ ಸಂಸ್ಕೃತಿಗೆ ದಾರಿ ತೋರಿದ
ನಟನೆ ನಿರ್ದೇಶನ ನಿರ್ಮಾಣ ದ
ಅನುಭವ ತೋರಿದ
ಸಕಲಕಲಾವಲ್ಲಭರೇ ಕಾರಂತಜ್ಜ

*ರಂ* ಜಿಸುತ ಜನರನು
ಚಿತ್ರ ನಾಟಕ ಯಕ್ಷಗಾನ ದಿ
ಭಂಜಿಸುತ  ಮೂಢನಂಬಿಕೆಗಳ
ಅಂಜದೆ ಮುನ್ನೆಡೆದವರೆ ಕಾರಂತಜ್ಜ

*ತ* ಮವ ಹೊಡೆದೋಡಿಸಲು
ಶಿಕ್ಷಣದ ಮಹತ್ವ ಸಾರಿದ
ವಿಜ್ಞಾನ ಮತ್ತು ಮಾನವೀಯತೆಗೆ
ಸಮಾನ ಒತ್ತು ನೀಡಿದವರೆ ಕಾರಂತಜ್ಜ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

13 October 2018

*ಸದ್ಗುಣಗಳ ನೀಡು*(ಕವನ)

            *ಸದ್ಗುಣಗಳ ನೀಡು*

ದಿಗಿಲಾಗುತ್ತಿದೆ ನನಗೆ
ಹಗೆಯ ಜನರ ನೋಡಿ
ದಿಗಿಲಾಗುತ್ತಿದೆ ಮತ್ಸರದ
ಜನರ ತಾತ್ಸಾರ ನೋಡಿ

ದಿಗಿಲಾಗುತ್ತಿದೆ  ನನಗೆ
ತಿಳಿದು‌ ತಪ್ಪೆಸಗುವರ ನೋಡಿ
ದಿಗಿಲಾಗುವುದು ದುಷ್ಟರ
ಅಟ್ಟಹಾಸದ ನಗು ನೋಡಿ

ದಿಗಿಲಾಗುತ್ತಿದೆ ನನಗೆ
ಪರಿಸರ ಕೆಡಿಸುವರ ನೋಡಿ
ದಿಗಿಲಾಗುವುದು ದುರಹಂಕಾರಿಗಳು
ಮೆರೆಯುವ ಪರಿ ನೋಡಿ

ದಿಗಿಲಾಗುತ್ತಿದೆ ನನಗೆ
ಸಹನೆಯಿಲ್ಲದೆ ಎಗರಾಡುವರ ನೋಡಿ
ದಿಗಿಲಾಗುವುದು ಭವ ಬಂಧನದಿ
ಸಿಲುಕಿ ತೊಳಲಾಡುವರ ನೋಡಿ

ಸರ್ವಶಕ್ತ ಚಾಮುಂಡೇಶ್ವರಿ ತಾಯಿ
ನನ್ನ ಮನದ ದಿಗಿಲ ಓಡಿಸು
ಸರ್ವರ ಏಳಿಗೆ ಮಾಡು
ಸಕಲರಲಿ ಸದ್ಗುಣಗಳ ನೀಡು

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*

07 October 2018

*ಅಂಬಿ ನಿಂಗೆ ವಯಸ್ಸಾಯ್ತೋ* ಚಿತ್ರ ವಿಮರ್ಶೆ

                   
*ಅಂಬಿ ನಿಂಗೆ ವಯಸ್ಸಾಯ್ತೋ*

ಚಿತ್ರ ವಿಮರ್ಶೆ

ಈ ವಾರ ನಾನು ನೋಡಿದ ಕನ್ನಡ ಚಲನಚಿತ್ರ *ಅಂಬಿ ನಿಂಗ್ ವಯಸ್ಸಯ್ತೋ* ಬಹಳ ದಿನಗಳ ನಂತರ ಕುಟುಂಬ ಸಮೇತ ಕುಳಿತುಕೊಂಡು ನೋಡಬಹುದಾದ ಚಿತ್ರ ಬಂದಿದೆ ಅದಕ್ಕೆ ನಿರ್ದೇಶಕರಾದ ಗುರುದತ್ ಗಾಣಿಗ ಅವರಿಗೊಂದು ನಮನ ಸಲ್ಲಿಸಲೇ ಬೇಕು .
ನಟಿಸುವುದರ ಜೊತೆಗೆ ಚಿತ್ರಕಥೆ ಬರೆದಿರುವ ಕಿಚ್ಚಸುದೀಪ್ ರವರ ಚಿತ್ರಕಥೆಯಲ್ಲಿ ಚಿತ್ರ ಚಕಚಕನೆ ಸಾಗುವುದು .
ಚಿತ್ರದ ಆರಂಭದಿಂದಲೂ ಭಾವನಾತ್ಮಕ ಅಂಶಗಳು ನಮ್ಮನ್ನು ಹಿಡಿದಿಡುವ ತಾಕತ್ ಇದೆ
ಪೈಟ್ ಮಾಸ್ಟರ್ ಆಗಿ  ಸೇವೆ ಸಲ್ಲಿಸಿದ ಅಂಬಿ ತನ್ನ ಇಳಿವಯಸ್ಸಿನಲ್ಲಿ ತನ್ನ ಮಗ ಸೊಸೆ ಮೊಮ್ಮಕ್ಕಳಜೊತೆ ಸುಖವಾಗಿರಲು ಹಾತೊರೆವ ಜೀವ ಆದರೆ ಮಗ ಸೊಸೆಯ ಅನಾದರ ಈ ಮದ್ಯ ಅಂಬಿ ಸಮಾಜ ಸೇವೆಯಿಂದ ಮಗ ಪೋಲೀಸ್ ಠಾಣೆ ಮೆಟ್ಟಿಲೇರಿ ಮಾತಿನ ಚಕಮಕಿಯಾಗಿ ಅಂಬಿ ಮನೆ ಬಿಟ್ಟು ಹೋಗುತ್ತಾರೆ .ಮುಂದೇನಾಗುವುದು ಎಂದು ಚಿತ್ರಮಂದಿರದಲ್ಲೇ ನೋಡಬೇಕು.
ಸಾಮಾನ್ಯವಾಗಿ ಇಳಿವಯಸ್ಸಿನಲ್ಲಿ ಮನೆಯವರ ಅನಾದರ ,ಅಲಕ್ಷ್ಯ,ಮುಂತಾದವುಗಳನ್ನು ಕಂಡು ಕುಗ್ಗಿ ಹೋಗುವ ಹಿರಿಯರ ಮದ್ಯ ಅಂಬಿ ನಮಗರ ವಿಶಿಷ್ಠವಾಗಿ ಕಾಣುತ್ತಾರೆ, ಆ ವಯಸ್ಸಿನಲ್ಲಿ ನಮ್ಮ ಹವ್ಯಾಸ ಕಳೆದುಕೊಂಡ ದನ್ನು ಹುಡುಕುವ ಇರದುದರ ಬಗ್ಗೆ ಚಿಂತಿಸದೇ ಬದುಕುವ ಪರಿಯನ್ನು ನಮ್ಮೆಲ್ಲ ಹಿರಿ ಜೀವಗಳು ಮೈಗೂಡಿಸಿಕೊಳ್ಳಬೇಕಿದೆ .ಜೊತೆಗೆ ತಮ್ಮ ವಯಸ್ಸಾದ ತಂದೆ ತಾಯಿ ಗಳನ್ನು ಕಳೆದುಕೊಂಡ ನಂತರ ಪರಿತಪಿಸುವ ಗುಣಗಳನ್ನು ಎಲ್ಲರೂ ಪಾಲಿಸಿದರೆ ಜಗತ್ತು ಸುಂದರವಾಗುವುದು
ರಾಕ್ ಲೈನ್ ವೆಂಕಟೇಶ್ ಪೋಲಿಸ್ ಅಧಿಕಾರಿಯಾಗಿ ,ದಿಲೀಪ್ ಮಗನಾಗಿ, ನಿಹಾಲ್ ಮೊಮ್ಮಗನಾಗಿ ಸುದೀಪ್ ಜ್ಯೂನಿಯರ್ ಅಂಬಿಯಾಗಿ,ಶೃತಿ ಹರಿಹರನ್ ಜ್ಯೂನಿಯರ್ ಅಂಬಿ ಜೋಡಿಯಾಗಿ ಸುಹಾಸಿನಿ ಸೀನಿಯರ್ ಅಂಬಿ ಜೋಡಿಯಾಗಿ ಎಲ್ಲರೂ ಪೈಪೋಟಿ ಗೆ ಬಿದ್ದವರಂತೆ ನಟಿಸಿದ್ದಾರೆ.
ಅರ್ಜನ್ ಜನ್ಯ ಸಂಗೀತ ಸೂಪರ್
ಡಾ.ನಾಗೇಂದ್ರ ಪ್ರಸಾದ್ ರವರ ರಚನೆ ಯ "ಮಾತಾಡೋ ತಾರೆಯ ಕಂಡ ಹಾಗೆ ಬೆಳದಿಂಗಳು ಕೈಗೆ ಸಿಕ್ಕ ಹಾಗೆ" ಸುಮದುರ ಹಾಡು ಜಸ್ಟಿನ್ ರೂಬೆನ್
ಕ್ಯಾಮರಾ ಕೈಚಳಕ ನೋಡಿಯೇ ಸವಿಯಬೇಕು .
ದೀಪು ಎಸ್ ಕುಮಾರ್ ಸಂಕಲನ ಸೂಪರ್‌ ರವಿವರ್ಮ ಮತ್ತು ಥ್ರಿಲ್ಲರ್ ಮಂಜು ಸಾಹಸ ರೆಬಲ್ ಸ್ಟಾರ್ ಗೆ ಹೇಳಿಮಾಡಿಸಿದಂತಿದೆ 
ತಮಿಳಿನ ಪವರ್ ಪಾಂಡಿ ರೀಮೇಕ್ ಆದರೂ ಕನ್ನಡದ ಚಿತ್ರದಂತೆ ಕಟ್ಟಿಕೊಟ್ಟ ನಿರ್ದೇಶಕರಿಗೊಂದು ನಮನ .
ಈ ಚಿತ್ರ ನೀವು ನೀಡದಿದ್ದರೆ ಖಂಡಿತ ನಿಮಗೆ ಲಾಸ್
ನಮಸ್ಕಾರ
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

05 October 2018

ಗಜ಼ಲ್48(ಯೌವನ)

                      *ಗಜ಼ಲ್48*

ಕೆಲವರಿಗೆ  ದೇಶವೇ ಕಾಣದು ಬರಲು  ಈ ಯೌವನ
ಹಲವರಿಗೆ ನೆಲವೇ ಕಾಣದು ಬಲಿಯಲು ಈ ಯೌವನ

ಮೈಯೆಲ್ಲಾ ಕಣ್ಣಾಗಿ ತನ್ಮಯವಾಗಿರಬೇಕು  ಕಾರ್ಯದಿ
ಅಡ್ಡದಾರಿ ಹಿಡಿಸುವುದು ಮೈಮರೆಯಲು  ಈ ಯೌವನ

ಚಿತ್ತ ಚಾಂಚಲ್ಯ ಮೊಂಡು ಭಂಡ ವಿತಂಡವಾದ
ಬಾಳೆಲ್ಲ ಗೋಳು ಅಮಲೇರಿರಲು   ಈ ಯೌವನ

ಸುಕರ್ಮ ಸುವಾರ್ತೆಗಳೆಡೆಗೆ ಸಾಗದು ಮನ
ಮೂಗಿನ ನೇರಕ್ಕಿರುವುದು ಚಿಂತನೆ ಜೊತೆಗಿರಲು ಈ ಯೌವನ

ನೆನೆದುದ ಸಾಧಿಸುವ ಅಗಣಿತ ಶಕ್ತಿಯ ಆಗರ
ಭುವಿಯೇ ಸ್ವರ್ಗ ಸದುಪಯೋಗವಾಗಲು   ಈ ಯೌವನ


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


ಕೇಳಿಲ್ಲ (ಹನಿಗವನ)

          *ಕೇಳಿಲ್ಲ*

ನನಗೆ ಬುದ್ದಿ ಬಂದಾಗಿನಿಂದ
ಗಮನಿಸುತ್ತಲೇ ಇರುವೆ
ಮಾಮ ಪ್ರತಿದಿನ ಅಮ್ಮನ
ನೋಡಲು ರಾತ್ರಿಯೇ ಬರುವನು
ಅದು ಅಪ್ಪನಿಲ್ಲದಾಗ ಬರುವನು
ಯಾಕೆ ಹೀಗೆಂದು ಮೂವರನು
ಕೇಳಬೇಕಿನಿಸಿದರೂ ಕೇಳಿಲ್ಲ
ಏಕೆಂದರೆ ಚಂದಮಾಮನೆಂದರೆ
ನನಗೆ ಅಚ್ಚು ಮೆಚ್ಚು
ಸೂರ್ಯಪ್ಪ ಎಂದರೆ ಎಲ್ಲಿಲ್ಲದ ಗೌರವ
ಭೂತಾಯಿಯೆಂದರೆ ನನ್ನ ಜೀವ

 *ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

02 October 2018

ಪರೋಪಕಾರಿಗಳಾಗೋಣ (ಪತ್ರಿಕಾ ಲೇಖನ)

               ಪರೋಪಕಾರಿಗಳಾಗೋಣ

"ಕರ್ನಾಟಕ ಉತ್ತಮ ಪರೋಪಕಾರಿ ಹಾಗೂ ವೈದ್ಯ ವೃತ್ತಿಪರ ಮಸೂದೆಗೆ" ರಾಷ್ಟ್ರಪತಿಗಳು ಅಂಕಿತ ಹಾಕಿ ಕಾನೂನಾಗಿರುವುದು ಸಂತಸದ ವಿಷಯ .ಇಂತಹ ಕಾನೂನು ಇಡೀ ದೇಶದಲ್ಲಿ ಮೊದಲು ನಮ್ಮ ರಾಜ್ಯದಲ್ಲಿ ಜಾರಿಯಾಗುತ್ತಿರುವ ಈ ಸಂಧರ್ಭದಲ್ಲಿ ಕರ್ನಾಟಕದವನಾಗಿ ನನಗೆ ಬಹಳ ಹೆಮ್ಮೆಯಿದೆ . ಇದನ್ನು ಕೇಂದ್ರ ಮತ್ತು ಇತರೆ ರಾಜ್ಯಗಳು ಜಾರಿಗೊಳಿಸುವ ಅಗತ್ಯವಿದೆ. ಅಪಘಾತದಲ್ಲಿ ಗಾಯಗೊಂಡರೆ  ಮೊದಲ ಒಂದು ಗಂಟೆ ಗೋಲ್ಡನ್ ಅವಧಿ ಈ ಸಂದರ್ಭಗಳಲ್ಲಿ ಬಹುತೇಕರು ಆಸ್ಪತ್ರೆಗೆ ಸಾಗಿಸಲು ಮುಂದಾದರೂ ನಂತರದ ಕಾನೂನಿನ ಭಯ ಮತ್ತು ಕೋರ್ಟ್ ಗೆ ಅಲೆಯಬೇಕಾಗ ಬಹುದು ಎಂಬ ಭಯದಿಂದ ಸಹಾಯವನ್ನು ಮಾಡಲು ಹಿಂಜರಿಯುತ್ತಿದ್ದರು  ಇದರಿಂದ ಅಮೂಲ್ಯ ಜೀವಗಳು ಬಲಿಯಾಗುತ್ತಿದ್ದವು .ಪ್ರಸ್ತುತ "ಪರೋಪಕಾರಿ ಕಾಯ್ದೆ" ಪ್ರಕಾರ ಪೊಲೀಸ್ ಮತ್ತು ಕೋರ್ಟ್ ನ ಅನಗತ್ಯ ಕಿರಿಕಿರಿ ಇರುವುದಿಲ್ಲ. ಇದರ ಬದಲಾಗಿ ಸೂಕ್ತ ಬಹುಮಾನ ಸಿಗಲಿದೆ .
ಈಗ ಅಪಘಾತದಲ್ಲಿ ಗಾಯಗೊಂಡ ವರ ರಕ್ಷಿಸಲು  ಕಾನೂನು ಇದೆ ಇದರ ಜೊತೆಗೆ ಅಪಘಾತದಲ್ಲಿ ತೊಂದರೆ ಗೀಡಾದವರ ವಿಡಿಯೋ ಪೋಟೋ ತೆಗೆಯುವ ಅಮಾನವೀಯ ಚಟುವಟಿಕೆಗಳನ್ನು ಬಿಟ್ಟು ಮಾನವೀಯತೆಯ ತೋರಿ ಅಮೂಲ್ಯವಾದ ಜೀವಗಳನ್ನು ಉಳಿಸೋಣ

ಸಿ.ಜಿ ವೆಂಕಟೇಶ್ವರ
ಗೌರಿಬಿದನೂರು

01 October 2018

ಮದುವೆಯಾಗಿದೆ (ಕವನ)

                  *ಮದುವೆಯಾಗಿದೆ*

ಅವನಿಗೆ  ಇಪ್ಪತ್ತೊಂದು ತುಂಬಿದೆ
ನಕ್ಷತ್ರಗಳನ್ನು ಮಾತಾಡಿಸಬಲ್ಲ
ಚಂದ್ರನ ಕೈಯಲ್ಲಿ ಹಿಡಿಯಬಲ್ಲ
ಆತ್ಮವಿಶ್ವಾಸ ಉಕ್ಕಿ ಹರಿದಿದೆ

ಅವನಿರುವ ಜಾಗದಲ್ಲಿ
ಜಗವೇ ಮೆಚ್ಚವ ಕಾರ್ಯ
ಮಾಡುವ ಹುಮ್ಮಸ್ಸು
ಗುಂಡೇಟಿಗೂ ಗುಂಡಿಗೆ
ಒಡ್ಡುವ ಕೆಚ್ಚೆದೆಯ ಕಲಿ

ಸಮಯದ ಪರಿವೆಯಿಲ್ಲದೆ
ಹಗಲಿರುಳೆನ್ನದೇ ದುಡಿವನು
ಎಲ್ಲರಿಗೂ ಮಾದರಿ ಇವನು
ಜಗವನೆ ಬದಲಿಸುವ ತಾಕತ್ತಿದೆ

ಅವನು ಈಗೀಗ ಏಕೋ
ಹರಳೆಣ್ಣೆ ಕುಡಿದಂತೆ ಮುಖ
ಎಲ್ಲದಕ್ಕೂ ಹೌದೆಂಬ ಕೋಲೆ ಬಸವ
ಟಿ ವಿ ರಿಮೋಟ್ನಲ್ಲಿ ಚಾನೆಲ್
ಬದಲಾಯಿಸಲೂ ಆಗುತ್ತಿಲ್ಲ
ಕಾರಣ ಅವನಿಗೆ ಮದುವೆಯಾಗಿದೆ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*



29 September 2018

ಗಜಲ್47(ಭಗತ್ ಸಿಂಗ್)

                  *ಗಜಲ್*

ದೇಶಭಕ್ತರಾದ  ಭಗತ್ ಸಿಂಗ್ ಹೆಸರು ಕೇಳಿದರೇನೋ ಪುಳಕ
ಇನ್ ಕ್ವಿಲಾಬ್ ಜಿಂದಾಬಾದ್  ಎಂದವನ ನೆನೆದರೇನೋ ಪುಳಕ

ಮದುವೆ ಮಕ್ಕಳಾದರೆ ಮಾತ್ರ ಜೀವನವೆಂದರು
ಬಾಲ್ಯವಿವಾಹ ಧಿಕ್ಕರಿಸಿದ ಧೀರನ ಸ್ಮರಿಸಿದರೇನೋ ಪುಳಕ

ಬದುಕಲು ನೂರಾರು ವೇಷ ಬಣ್ಣ ಹಚ್ಚದೇ ನಟನೆ
ಬಾಲ್ಯದಿ ರಾಣಾಪ್ರತಾಪ್ ಚಂದ್ರ ಗುಪ್ತರ ಪಾತ್ರ ಅಭಿನಯ ಸವಿದರೇನೋ ಪುಳಕ

ಅನವಶ್ಯಕ ರಕ್ತದೋಕುಳಿ‌ಹರಿಯುತಿದೆ ಪ್ರತಿದಿನ
ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಮಣ್ಣನು ಪೂಜಿಸಿದವನ ಭಜಿಸಿದರೇನೋ ಪುಳಕ

ಗೊತ್ತು ಗುರಿಯಿಲ್ಲ ಇಂದಿನ ಯುವ ಪೀಳಿಗೆಗೆ
ಚಿಂತನೆಯ ಕೊಲ್ಲಲಾಗದು ಸ್ಪೂರ್ತಿ ಹೊಸಕಲಾಗದೆಂದು ಕರೆನೀಡಿದವನ ನೋಡಿದರೇನೋ ಪುಳಕ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

27 September 2018

ಪ್ರೀತಿಸೋಣ (ಕವನ) ಸ್ನೇಹ ಸಂಗಮ ಬಳಗದ ಸ್ಪರ್ಧೆಯಲ್ಲಿ ಅತ್ಯುತ್ತಮ ಕವನ ಎಂದು ಪುರಸ್ಕೃತ ಕವನ


              *ಪ್ರೀತಿಸೋಣ*

ನಮ್ಮ ಸುತ್ತಮುತ್ತಲಿರುವರುವರು
ನಮಗೆ ಪರಿಚಿತರಾಗಿಲ್ಲ
ನೆರೆಯಲ್ಲಿರುವವರ ಹೊರೆಯಂತೆ ಕಾಣುವೆವು
ಹಗೆ ಸಾದಿಸುವೆವು ಯಾವುದೋ ಊರಿನ ಯಾರನ್ನೋ ಮುಖಪುಟದಲ್ಲಿ
ಬಲವಂತದಿ ಪ್ರೆಂಡ್ ರಿಕ್ವೆಸ್ಟ್ ಕಳಿಸಿ ಅವರ ಮುಖ ಹೇಗಿದ್ದರೂ ಲೈಕ್ ಒತ್ತಿದ್ದೇ ಒತ್ತಿದ್ದು .


ನಮ್ಮ ಬಂಧುಗಳ ಕಷ್ಟಗಳಿಗೆ ಸ್ಪಂದಿಸಲಿಲ್ಲ
ಸಾವು ತಿಥಿಗಳಿಗೆ ಹೋಗಲೇಇಲ್ಲ
ಟಿ ವಿ ಧಾರಾವಾಹಿಗಳಲಿ ಬರುವ ಪುಟ್ಟ ಗೌರಿ
ರಾಧಾ ಳ ಸಂಕಟಕ್ಕೆ ಮರುಗಿ ಕಣ್ಣೀರಿನ
ಕೋಡಿ ಹರಿಸುವರು ಸಾಲದೆಂಬಂತೆ
ಮತ್ತೊಮ್ಮೆ ವೂಟ್ ನಲ್ಲಿ ನೋಡಿ
ಅವರ ನಾಟಕದ ಕಷ್ಟಕ್ಕೆ ಅತ್ತಿದ್ದೇ ಅತ್ತಿದ್ದು

ಮನೆಯಲಿ‌ಗಂಟು ಕಟ್ಟಿಕೊಂಡ ಮುಖ
ಮಕ್ಕಳು‌ ಬಂದು‌ ನಗಿಸಿದರೂ ಅರಳೆಣ್ಣೆ
ಕುಡಿದವರ ಹಾಗೆ ನಗಲು ಚೌಕಾಸಿ ಮಾಡಿ
ಕೋಣೆಗೆ ಹೋಗಿ ಯೂಟ್ಯೂಬ್ ನಲ್ಲಿ
ಸ್ಟಾಂಡ್ಅಪ್ ಕಾಮಿಡಿ ಎಪಿಸೋಡ್
ನೋಡಿ ನಕ್ಕುದ್ದೇ ನಕ್ಕಿದ್ದು

ದೇವರಂತಹ ಅಪ್ಪ ಅಮ್ಮಂದಿರ ಪೂಜೆಯಿಲ್ಲ
ಇನ್ನೆಲ್ಲೋ ಇರುವ ದೇವರ ಕಾಣುವ ಹಂಬಲ
ಬ್ರಹ್ಮಾಂಡ ಬೃಹತ್‌ ಬ್ರಹ್ಮಾಂಡದ ಲ್ಲಿ  ದೇವರ
ಕಾಣಲು ಟಿ ವಿ ಯೂಟೂಬ್ ಪೇಸ್ ಬುಕ್
ಗಳಲಿ ಹುಡುಕಿದ್ದೇ ಹುಡುಕಿದ್ದು

ಈ ಸಾಮಾಜಿಕ ಮಾದ್ಯಮಗಳಿಗೆ
ನಾವು ದಾಸರಾಗಿದ್ದು ಸಾಕು
ಇನ್ನಾದರೂ ಮನುಷ್ಯರನ್ನು  ಪ್ರೀತಿಸೋಣ
ಸಾಮಾಜಿಕ ಮಾಧ್ಯಮಗಳನ್ನು
ವಿವೇಚನೆಯಿಂದ ಬಳಸೋಣ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

26 September 2018

*ಮಗು ಅಳುವ ಸದ್ದು(ನ್ಯಾನೋ ಕಥೆ)

                     *ನ್ಯಾನೋ ಕಥೆ*

*ಮಗು ಅಳುವ ಸದ್ದು*

ವಾರ ,ತಿಂಗಳು, ವರ್ಷಗಟ್ಟಲೆ ಆಸ್ಪತ್ರೆಗಳಿಗೆ ಅಲೆದ ದಂಪತಿಗಳು ,ವಿವಿಧ ದೇವರುಗಳಿಗೆ ಹರಕೆ ಹೊತ್ತರು ,15 ವರ್ಷಗಳಾದರೂ ಮಕ್ಕಳಾಗಲಿಲ್ಲ ."ಇವಳು ಬಂಜೆ ಬಿಡು " "ಇವರಿಗೆಲ್ಲಿ ಮಕ್ಕಳಾಗುತ್ತವೆ " ಎಂಬ ಚುಚ್ಚು ನುಡಿಗಳ ಕೇಳಿದರೂ  ದಂಪತಿಗಳು ಭರವಸೆ ಕಳೆದುಕೊಳ್ಳಲಿಲ್ಲ .ಕಳೆದ ರಾತ್ರಿ ಆ ದಂಪತಿಗಳ ಮನೆಯಲ್ಲಿ ಮಗು ಅಳುವ ಸದ್ದು ಕೇಳಿತು .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

22 September 2018

ಯಾವಾಗ?(ಹನಿಗವನ)

                        *ಯಾವಾಗ?*

ದಿನ ದಿನ ಬರುವ
ದಿನಕರನು
ದಿನದಲಿ ಧರೆ ಬೆಳಗಿ
ಚಂದಿರಗೆ ಸಾಲ ನೀಡಿ
ಇರುಳಲಿ ಬೆಳಗುವನು
ತಮವ ಓಡಿಸುವನು
ಅಂದಕಾರದಲಿರುವ
ನಾವು ಬೆಳಗುವುದು
ಯಾವಾಗ?

*ಸಿ ಜಿ.ವೆಂಕಟೇಶ್ವರ
*ಗೌರಿಬಿದನೂರು*

21 September 2018

ಮೌನವಾಗಿರೋಣ (ಕವನ)

             *ಮೌನವಾಗಿರೋಣ*

ಅತಿಯಾಗಿ ಬಾಯಿಬಿಟ್ಟರೆ
ಮೀನು ಬದುಕಲಾರದು
ಮಿತಿ ಮೀರಿ  ಮಾತನಾಡಿದರೆ
ತೊಂದರೆಗಳು  ತಪ್ದದು

ನಾಲಿಗೆಯ ಹರಿ ಬಿಟ್ಟರೆ
ಹರಿ ಹರರು  ಮುನಿವರು
ಯೋಚಿಸದೆ ಮಾತನಾಡಿದರೆ
ಕಷ್ಟಗಳು ಸಾವಿರಾರು

ಮಾತು ಮಾತಿಗೆ ‌ಜಗಳವೇಕೆ
ಮಾತಿನಲಿ ಹಿತವಿರಲಿ
ಮಾತಿನಲಿ ಮಧುರವಿರಲಿ
ಮಾತುಗಳು ಮೃದುವಾಗಿರಲಿ

ಮಾತು ಮನ ನೋಯಿಸದಿರಲಿ
ಮಾತುಗಳ ತುಪ್ಪದಂತೆ ಬಳಸೋಣ
ಮಾತುಮನೆ ಮುರಿಯದಿರಲಿ
ಕೆಟ್ಟ ಮಾತಿಗಿಂತ ಮೌನವಾಗಿರೋಣ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


20 September 2018

ಸಮರಸ(ಕವನ)

                      *ಸಮರಸ*
   

                          ನೀ
                         ಹೀಗೆ
                      ಮೌನವ
                      ತಾಳಿದರೆ
                    ನಾ ಸಹಿಸೆನು
                 ಒಮ್ಮೆ ನಕ್ಕುಬಿಡು

                            ನಾ
                         ಅಂದು
                        ಮುನಿದು
                     ಮಾತನಾಡಲಿಲ್ಲ
                 ಅದನು ಮರೆತು ಬಿಡು
               ಒಮ್ಮೆ ಮಾತನಾಡಿ ಬಿಡು

                             ನೀ
                          ನಾನು
                         ಎನ್ನದೇ
                      ಅಹಂ ಬಿಟ್ಟು
                    ಮಾತನಾಡೋಣ
               ಸಮರಸದಿ  ಬಾಳೋಣ

                     *ಸಿ ಜಿ*
                *ವೆಂಕಟೇಶ್ವರ*
             *ಗೌರಿಬಿದನೂರು*
           

ಕ್ಷಮಿಸಿ ಬಿಡು (ಕವನ)

             *ಕ್ಷಮಿಸಿ ಬಿಡು*

ಬರೆವೆನೊಂದು ಓಲೆ ಅಮ್ಮ
ಅರಿಯದೆ ತಪ್ಪೆಸಗಿದರೆ
ಹೊಟ್ಟೆಯೋಳಗಾಕಿ ಕೊಳ್ಳಮ್ಮ
ಅಕ್ಕರೆಯಲಿ ನಮ್ಮ ಪೊರೆಯಮ್ಮ

ಸುಂದರವಾದ ಪ್ರಕೃತಿ ಗೆ
ಕೊಡಲಿ ಹಾಕಿ ವಿಕೃತಿ ಮೆರೆದಿಹವು
ನದಿ ನದಗಳ  ಮಲಿನಗೊಳಿಸಿ
ತೊಂದರೆ ಅನುಭವಿಸುತಿಹೆವು

ಜಾತಿ ಮತಧರ್ಮದ ಹೆಸರಲಿ
ಕಚ್ಚಾಡಿ ಸಾಯುತಿಹೆವು
ಕ್ಷಮಿಸಿ ಬಿಡು ನಮ್ಮನ್ನು
ನಮಿಪೆವು ತೊರೆದು ಹಮ್ಮನ್ನು

ಭರತನ ಪೊರೆದ  ಭಾರತಿಯೆ
ನಾರಿಯರ  ಗೌರವಿಸದೆ
ಬಾರಿ ಅವಮಾನ ಮಾಡುತಿಹೆವು
ಕ್ಷಮಿಸಿ ಬಿಡು ನಮ್ಮನ್ನು


*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*