30 March 2023

SSLC ಮಕ್ಕಳ ಪರೀಕ್ಷೆಗೆ ಆಲ್ ದ ಬೆಸ್ಟ್ ....

 


ಎಸ್ ಎಸ್ ಎಲ್ ಸಿ ಮಕ್ಕಳ ‌ಪರೀಕ್ಷೆಗೆ
ಆಲ್ ದ ಬೆಸ್ಟ್

ಎಲ್ಲಾ ವಿದ್ಯಾರ್ಥಿಗಳ ಜೀವನದಲ್ಲಿ ಎಸ್ ಎಸ್ ಎಲ್ ಸಿ ಒಂದು ಪ್ರಮುಖ ಘಟ್ಟ ಮನೆಯಲ್ಲಿ ಎಸ್ ಎಸ್ ಎಲ್ ಸಿ ಮಕ್ಕಳಿದ್ದರೆ ವರ್ಷದ ಆರಂಭದಿಂದ ಮಕ್ಕಳು ಮತ್ತು ಪೋಷಕರಲ್ಲಿ ಒಂದು ರೀತಿಯ ಅವ್ಯಕ್ತ ಆತಂಕ ಮನೆ ಮಾಡಿರುತ್ತದೆ ಇದು


ಅಪೇಕ್ಷಿತ ಅಲ್ಲದಿದ್ದರೂ ಅನಿವಾರ್ಯ ಎಂಬಂತಾಗಿ ಬಿಟ್ಟಿದೆ ಕ್ರಮಬದ್ಧವಾಗಿ ಅದ್ಯಯನ ಮಾಡಿದರೆ ಈ ಪರೀಕ್ಷೆಯಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ.  ಈ ವರ್ಷದ ಹತ್ತನೇ ತರಗತಿಯ ಪರೀಕ್ಷೆ   ಮಾರ್ಚ್ 31 ರಿಂದ ಆರಂಭವಾಗಲಿದೆ.
  ಎಸ್ ಎಸ್ ಎಲ್ ಸಿ‌ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆ ಎದುರಿಸಲು ಸಿದ್ದ ಆಗಬೇಕು ಈ ದಿಸೆಯಲ್ಲಿ.  ಪಾಲಕರ ಮತ್ತು ವಿದ್ಯಾರ್ಥಿಗಳ ಜವಾಭ‍್ದಾರಿ ಮತ್ತು ಪಾತ್ರ ಮಹತ್ತರವಾದುದು.  ಈ ಕೆಳಕಂಡ ಕ್ರಮಗಳನ್ನು ಅಳವಡಿಸಿಕೊಂಡರೆ ಎಸ್ ಎಸ್ ಎಲ್‌ಸಿ ಪರೀಕ್ಷೆಯಲ್ಲಿ ಸುಲಭವಾಗಿ ಯಶಸ್ಸು ಗಳಿಸಬಹುದು.

 ವಿದ್ಯಾರ್ಥಿಗಳೇನುಮಾಡಬೇಕು?

 1  ಪ್ರತಿದಿನವೂ ಸಂತೋಷದಿಂದಿರಿ     2  ಅವಸರ ಮತ್ತು ಆತುರದ ನಿರ್ಧಾರಗಳಿಂದ ನೀವು ಕಲಿತದ್ದು ಮರೆತು ಹೋಗಬಹುದು ಆದ್ದರಿಂಧ ಯಾವಾಗಲೂ ಶಾಂತತೆಯನ್ನು ಕಾಪಾಡಿಕೊಳ‍್ಳಿ.              
3  ಪ್ರತಿ ದಿನ ಯೋಗ ಧ‍್ಯಾನ,ಪ್ರಾರ್ಥನೆಮಾಡಿ ಏಕಾಗ್ರತೆಯನ್ನು ಸಾಧಿಸಬಹುದು.    
4 ಮನೆಯವರು ಸಿನಿಮಾ ಮಾರ್ಕೇಟ್ ,ಜಾತ್ರೆಗಳಿಗೆ ಹೋದರೆ ನೀವು ಅವರನ್ನು ಹಿಂಬಾಲಿಸಬೇಡಿ      

5 ರಿಲ್ಯಾಕ್ಸ್ ಬೇಕೆಂದು ಹೆಚ್ಚು ಹೊತ್ತು ಹೊರಗೆ ಸುತ್ತ ಬೇಡಿ                       

  6 ಎಲ್ಲೇ ಹೋದರೂ ಸಮಯದ ಅರಿವಿರಲಿ

7 ನಿಮ್ಮ ಸಹನೆ ಪರೀಕ್ಷೆಯಾಗುವುದು ಪರೀಕ್ಷೆಯಕಾಲದಲ್ಲಿ ಅದಕ್ಕೆ ತಾಳ‍್ಮೆಯಿಂದಿರಿ 

  8 ವಿದ್ಯಾರ್ಥಿಗಳೆ ನಿಮ್ಮ ಭವಿಷ್ಯ ಹಾಳು ಮಾಡಿಕೊಳ‍್ಳದಿರಿ      

                              
ಪಾಲಕರು ಮಾಡಬೇಕಾದುದು   


 1 ಸಮಯಕ್ಕೆ ಸರಿಯಾಗಿ ಮಕ್ಕಳಿಗೆ  ಪೌಷ್ಟಿಕ ಆಹಾರ ನೀಡಿ.                     

  2. ಓದಲು ಶಾಂತವಾದ ವಾತಾವರಣ ಕಲ್ಪಿಸಿ ಕೊಡಿ                  

 3ಎಲ್ಲಾ ಭಾವನೆಗಳನ್ನು ಹಂಚಿಕೊಳ‍್ಳಲು ನಾನಿದ್ದೇನೆಂದು ಭರವಸೆ ಕೊಡಿ.                
4 ಓದಿದ ಮನಸಿಗೆ ವಿರಾಮ ನಿದ್ರೆ ಅವಶ್ಕಕ ಅದಕ್ಕೆ ಅವಕಾಶ ಮಾಡಿಕೊಡಿ.  
5 ಎಲ್ಲಾ ಸಮಯದಲ್ಲಿ ಓದು ಓದು ಎಂದು “ಕಿರಿ ಕಿರಿ “ಮಾಡದಿರಿ           

   6ಮತ್ತೆ ಮತ್ತೆ “ಪರೀಕ್ಷೆ ಹತ್ತಿರ ಬರುತ್ತಿದೆ “ಎಂದು ಭಯಪಡಿಸಬೇಡಿ .                
7 ಮಕ್ಕಳು ಪ್ರತಿನಿತ್ಯ ಇಷ್ಟಪಟ್ಟು ಓದುವಂತೆಪ್ರೇರೇಪಿಸಿ .      


 ಪರೀಕ್ಷೆಯ ಹಿಂದಿನ ದಿನದ  ಸಿದ್ದತೆ

 1 ತುಂಬಾನಿದ್ದೆಗೆಟ್ಟು ಓದಬೇಡಿ ಮೆದುಳು ವಿಪರೀತ ದಣಿದರೆ ನೆನಪಿನ ಶಕ್ತಿ ಕುಂಟಿತವಾಗುತ್ತದೆ                     

   2 ಕಡ್ಡಾಯವಾಗಿ ಆರು ಗಂಟೆ ನಿದ್ರೆ ಮಾಡಿ.                                 3ಪೆನ್ನು .ಪೆನ್ಸಿಲ್.ಇರೇಸರ್.ಜಾಮಿಟ್ರಿ ಬಾಕ್ಸ್,ಇತ್ಯಾದಿ ಲೇಖನ ಸಾಮಗ್ರಿಗಳನ್ನು ಜೋಡಿಸಿಟ್ಟುಕೊಳ‍್ಳಿ,ಜೊತೆಗೆ ಹಾಲ್ ಟಿಕೆಟ್,ಗುರುತಿನ ಚೀಟಿ ಇರಲಿ            4 ಮತ್ತೊಮ್ಮೆ ವೇಳಾಪಟ್ಟಿ ಪರೀಕ್ಷಿಸಿ .       
5 ನಾಳೆ ನಾನು ಪರೀಕ್ಷೆ ಖಂಡಿತವಾಗಿ ಚೆನ್ನಾಗಿ ಬರೆಯುತ್ತೇನೆಂದು ಸಂಕಲ್ಪ ಮಾಡಿಕೊಂಡು ಮಲಗಿ.                    
6ಬೇಗಮಲಗಿಬೇಗಏಳಿ.                                                                                                            ಪರೀಕ್ಷೆಯದಿನ

1 ಬೆಳಿಗ್ಗೆ ಬೇಗ ಎದ್ದು ನಿತ್ಯಕರ್ಮ ಮುಗಿಸಿ  ಹತ್ತು ನಿಮಿಷ ಧ್ಯಾನ ಮಾಡಿ ನಾನು ಪರೀಕ್ಷೆಯಲ್ಲಿ ಉತ್ತಮವಾಗಿ ಉತ್ತರಿಸಬಲ್ಲೆ ಎಂದು ಸಂಕಲ್ಪ ಮಾಡಿ
2 ಹಿಂದಿನ  ದಿನ ಹೊಂದಿಸಿಟ್ಟುಕೊಂಡಿದ್ದ ಲೇಖನಸಾಮಗ್ರಿಗಳನ್ನು ನೋಡಿಕೊಳ‍್ಳಿ.               
3‌ ಬೆಳಿಗ್ಗೆ ತಿಂಡಿ ತಿನ್ನುವುದನ್ನು ಮರೆಯಬೇಡಿನಿಮ್ಮ ಜೊತೆಗೆ ಪರೀಕ್ಷೆಗೆ ನೀರಿನ ಬಾಟಲ್ ತೆಗೆದುಕೊಂಡುಹೋಗಿ                  
4 ಮನೆ ಬಿಡುವ ಹೊತ್ತಿನಲ್ಲಿ ಓದುತ್ತಾ ಕುಳಿತುಕೊಳ‍್ಳಬೇಡಿ ಒಂದು ಗಂಟೆ ಮುಂಚಿತವಾಗಿ ನಿಲ್ಲಿಸಿ ಮೆದುಳು ವಿಶ್ರಾಂತ ಸ್ತಿತಿಯಲ್ಲಿರಬೇಕು.    
5 ಪರೀಕ್ಷಾ ಕೇಂದ್ರಕ್ಕೆ ಅರ್ದ ಗಂಟೆ ಮೊದಲೇ ತಲುಪಿ ನಿಮ್ಮ ರಿಜಿಸ್ಟರ್ ನಂಬರ್ ,ಕೊಠಡಿ ಆಸನ ವ್ಯವಸ್ಥೆ ನೋಡಿಕೊಳ‍್ಳಿ.        
6 ಪರೀಕ್ಷಾ ಕೇಂದ್ರದ ಬಳಿನಿಮ್ಮ ಸ್ನೇಹಿತರ ಜೊತೆ ಅಂದಿನ ವಿಷಯದ ಬಗ್ಗೆ ಚರ್ಚೆ ಬೇಡ.           

ಪರೀಕ್ಷಾ  ಕೊಠಡಿಯಲ್ಲಿ    

1 .15 ನಿಮಿಷ ಮೊದಲೇ ಪರೀಕ್ಷಾ ಕೊಠಡಿಯಲ್ಲಿ ಕುಳಿತುಕೊಳ‍್ಳಿ.           

   2. ಕೆಲ ಕಾಲ ಧೀರ್ಘ ಉಸಿರೆಳೆದು ಕೊಂಡು ಶಾಂತವಾಗಿ ಕುಳಿತುಕೊಳ್ಳಿ.                          
3ಪ್ರಶ‍್ನೆ ಪತ್ರಿಕೆ ಮತ್ತು  ಉತ್ತರ ಪತ್ರಿಕೆ ಪಡೆದ ಬಳಿಕ ಎಲ್ಲಾ ಪುಟಗಳು ಮುದ್ರಿತವಾಗಿವೆಯೇ ಎಂದು ಪರೀಕ್ಷಿಸಿಕೊಳ‍್ಳಿ.                               

 4ಪ್ರಶ್ನೆ ಪತ್ರಿಕೆಯನ್ನು ತಾಳ‍್ಮೆಯಿಂದ ಸಂಪೂರ್ಣವಾಗಿ ಒಮ್ಮೆ ಓದಿ ಅರ್ಥೈಸಿಕೊಳ‍್ಳಿ.              5 ಪರೀಕ್ಷೆ ಕೊಠಡಿಯಲ್ಲಿ ಯಾರೊಂದಿಗೂ ಮಾತನಾಡಬೇಡಿ.   

  6 ಬಹುಆಯ್ಕೆ ಪ್ರಶ್ನೆಗಳಿಗೆ ಉತ್ತರಿಸುವಾಗ ಎಚ್ಚರವಾಗಿರಿ          
7 ಉತ್ತರಗಳನ್ನು ನೇರವಾಗಿ , ಮತ್ತು  ಸ್ಪಷ್ಟವಾಗಿ ಬರೆಯಿರಿ                
8 ಮುಖ್ಯವಾದ  ಅಂಶಗಳಿಗೆ ಅಂಡರ್ ಲೈನ್ ಮಾಡಿ.                   

   9 ಚಿತ್ರಗಳು.ಭೂಪಟಗಳು .ಮತ್ತು ರೇಖಾಚಿತ್ರಗಳನ್ನು ಸ್ಪಷ್ಟವಾಗಿ ಬರೆದು ಭಾಗಗಳನ್ನು ಗುರ್ತಿಸಿ.            

          10 ಹೆಚ್ಚಿನ  ಉತ್ತರ ಹಾಳೆಗಳನ್ನು ತೆಗೆದುಕೊಂಡಿದ್ದರೆ ಅವುಗಳಿಗೆ ನಿಮ್ಮ ರಿಜಿಸ್ಟರ್ ನಂಬರ್ ಸರಿಯಾಗಿ ನಮೂದಿಸಿ ಸರಿಯಾಗಿ ಕಟ್ಟಿ  ಕೊನೆಯ 15 ನಿಮಿಷದಲ್ಲಿ ಬರೆದಿರುವ ಎಲ್ಲಾ ಪ್ರಶ್ನೆಗಳು ಮತ್ತು ಅಂಶಗಳನ್ನು ಮತ್ತೊಮ್ಮೆ ಪರಿಶೀಲಿಸಿ ಕೊನೆಯಲ್ಲಿ ಕೊಠಡಿ ಮೇಲ್ವಿಚಾರಕರಿಗೆ ನೀಡಿ.      

                                                                     ನಿಮಗೆ ಶುಭವಾಗಲಿ                                                                               ನಿಮಗೆಲ್ಲಾ ಯಶಸ್ಸು ದೊರೆಯಲಿ                                                                                    ಸಿ.ಜಿ.ವೆಂಕಟೇಶ್ವರ.ಶಿಕ್ಷಕರು .                 


ಸರ್ಕಾರಿ ಪ್ರೌಢಶಾಲೆ  ಕ್ಯಾತ್ಸಂದ್ರ

ತುಮಕೂರು.
9900925529

ಆನ್ಲೈನ್ ಪೀಳಿಗೆ...

 

ಆನ್ಲೈನ್ ಪೀಳಿಗೆ...


ನಮ್ಮದು ಆನ್ಲೈನ್ ಪೀಳಿಗೆ

ಮೊಬೈಲೇ ನಮಗೆ ಹೋಳಿಗೆ

‌ನೆಟ್ ಒಂದು ಸಾಕು ನಮ್ಮ ಬಾಳಿಗೆ

ಯಾರಿಗೆ ಬೇಕು ಏಳಿಗೆ 

ಅಪ್ಪ ಬೈತಾರೆ ಆಗಾಗ್ಗೆ 

ಬಿಟ್ ಬಿಡು ಮೊಬೈಲ್ ಅತ್ಲಾಗೆ

ನಾವ್ ಕೇಳ್ತೀವಾ ? ಎತ್ತು ಏರಿಗೆ,ಕೋಣ ನೀರಿಗೆ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.

29 March 2023

ಒಳನಾಡಿನ ಒಡನಾಟ... ಪ್ರವಾಸ ಕಥನದ ವಿಮರ್ಶೆ.

 


ಒಳನಾಡಿನ ಒಡನಾಟ..
ಪ್ರವಾಸ ಕಥನ

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ 
ಸಿದ್ದಗಂಗಯ್ಯ ಹೊಲತಾಳ್ ರವರ ಕೃತಿಗಳಾದ ಸಿಂಗಾರಿ ಮತ್ತು  ಸುವರ್ಣಮುಖಿ ಓದಿದ್ದೆನು.
ಇವರ ಹೊಸ ಕೃತಿಯಾದ "ಒಳನಾಡಿನ ಒಡನಾಟ " ಪುಸ್ತಕ ಒದಿದೆ.ಪ್ರವಾಸದ ಬಗ್ಗೆ  ಮೊದಲಿನಿಂದಲೂ ಆಸಕ್ತಿ ಇರುವ ನನಗೆ ಈ ಕೃತಿ ಬಹಳ ಇಷ್ಟವಾಯಿತು.

ಡಾ. ಸಿದ್ಧಗಂಗಯ್ಯ ಹೊಲತಾಳರು
ಹುಟ್ಟಿದ್ದು 1954ರಲ್ಲಿ.ತುಮಕೂರಿಗೆ 25 ಕಿ.ಮೀ. ದೂರದಲ್ಲಿರುವ ಸಿದ್ಧರಬೆಟ್ಟದ ದಕ್ಷಿಣ ತಪ್ಪಲಿನಲ್ಲಿರುವ ಹೊಲತಾಳಿನಲ್ಲಿ ವಿದ್ಯಾಭ್ಯಾಸ ಕುರಂಕೋಟೆಯಲ್ಲಿ ಪ್ರಾಥಮಿಕ ಶಾಲೆ ಸಿದ್ಧಗಂಗೆಯಲ್ಲಿ ಹೈಸ್ಕೂಲ್, ಪಿಯುಸಿ  ತುಮಕೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು. ಮೈಸೂರಿನ ಸೋಮಾನಿ ಇನ್ಸ್ಟಿಟ್ಯೂಟ್ ಆಫ್ ಎಜುಕೇಷನ್ನಲ್ಲಿ ಬಿ.ಇಡಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಎಂ.ಎ,ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಡಿ.ಲಿಟ್, ಪದವಿ ಪಡೆದ ಇವರು
ಮೈಸೂರಿನ ಸರಸ್ವತಿಪುರಂನ ಜೆಎಸ್ಎಸ್ ಬಾಲಕಿಯರ ಹೈಸ್ಕೂಲ್ ನಲ್ಲಿ ಅಧ್ಯಾಪಕರಾಗಿ, ಚಿಕ್ಕಮಗಳೂರು ಜಿಲ್ಲೆಯ ಆಸಂದಿಯ ಹೈಸ್ಕೂಲ್ ನಲ್ಲಿ ಅಧ್ಯಾಪಕರಾಗಿ,  ತಿಪಟೂರಿನ ಕಲ್ಪತರು ವಿದ್ಯಾಸಂಸ್ಥೆಯ ಪದವಿ ಕಾಲೇಜುಗಳಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ತುಮಕೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ಅತಿಥಿ ಪ್ರಾಧ್ಯಾಪಕರಾಗಿ ಮತ್ತು  ಮುಖ್ಯಸ್ಥರಾಗಿ , ಕಲ್ಪತರು ಸಂಶೋಧನಾ ಅಭಿವೃದ್ಧಿ ಮತ್ತು ಕೈಗಾರಿಕಾ ಸಲಹಾ ಕೇಂದ್ರದಲ್ಲಿ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದ ಇವರು ನಾಡಿನ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾ ದಾನಗೈದಿದ್ದಾರೆ.

ಇವರು ಸಾಹಿತ್ಯ ಕ್ಷೇತ್ರದಲ್ಲೂ ಉತ್ತಮ ಕೃತಿಗಳನ್ನು ನಮಗೆ ನೀಡಿದ್ದಾರೆ. ಅವುಗಳೆಂದರೆ ..
'ಕಾವ್ಯ ಸಂವಹನ': ಕಾದಂಬರಿ 'ತಿರುವು: ಆಕಾಶವಾಣಿ ಮಾತು 'ಕಿರಣ'; ಅನುವಾದ “The Song of Silence' 'A Handful of Water; ವೋ ಅಲ್ಬರ್ಟ್', 'ಕಾವ್ಯಾಭ್ಯಾಸ : ವಿದ್ಯಾರ್ಥಿಗಳಿಗಾಗಿ *The Use of English", "English for Communication', 'ಸ್ವಾತಂತ್ರ್ಯ ಹೋರಾಟದ ಮಹಾಚೇತನಗಳು', "The Great Spirits of Freedom Struggle. ' '. "Essential Writing Skill: ಪರಿಸರದೆಡೆಗೆ', 'ಹೊಳತಾಳ ಹಾದಿ' 'ವೈವಿಧ್ಯ' ಇತ್ಯಾದಿ. ಸಂಪಾದನೆ: ಜೀವನ ಚರಿತ್ರೆ ಮಾಲೆ (50), ಕಾಂಕ್ರೀಟ್ ಕಾಡಿನ ದಿನಚರಿ, ಕನ್ನಡದ ಮೂಲಕ ಇಂಗ್ಲಿಷ್ ಕಲಿಕೆ ಮಾಲೆ' (10), 'ಸುವರ್ಣಮುಖಿ', 'ಸಿಂಗಾರಿ', ಒಳನಾಡಿನ ಒಡನಾಟ,

ಸುವರ್ಣ ಮುಖಿ ಮತ್ತು ಸಿಂಗಾರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.ಪ್ರಸ್ತುತ  ಒಳನಾಡಿನ ಒಡನಾಟ ಕೃತಿಗೆ  ತುಮಕೂರು ಜಿಲ್ಲಾ ಸಾಹಿತ್ಯ ಪರಿಷತ್ ನ  ದೇವಪ್ರಕಾಶ್ ದತ್ತಿ ಪ್ರಶಸ್ತಿ ಲಭಿಸಿದೆ.

308 ಪುಟಗಳ ಈ ಬೃಹತ್ ಪುಸ್ತಕ ಮೂರು ಭಾಗಗಳಲ್ಲಿ ನೂರು ಅಧ್ಯಾಯಗಳಲ್ಲಿ ನಮ್ಮನ್ನು ಒಳನಾಡಿನ ಸಾಮಾಜೋ,ಆರ್ಥಿಕ, ಶೈಕ್ಷಣಿಕ, ಪರಿಸರ ಕಾಳಜಿಯ ಅಧ್ಯಯನ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಪೂರಕವಾದ ಬಣ್ಣದ ಚಿತ್ರಗಳು ಮನಮೋಹಕವಾಗಿವೆ.

2022 ರ ಜೂನ್ ಜುಲೈ ತಿಂಗಳ ಎಡಬಿಡದೆ ಧಾರಾಕಾರವಾಗಿ ಸುರಿದ  ಮಳೆ ,ಮೈಕೊರೆವ ಚಳಿ ಬಯಲು ಸೀಮೆಯನ್ನು ಅಕ್ಷರಶಃ ಕಾಶ್ಮೀರದ ವಾತಾವರಣವಿರುವಂತೆ ಮಾಡಿತ್ತು.ಅಂತಹ ಸಂಧರ್ಭದಲ್ಲಿ ನಾವು ಬೆಚ್ಚಗಿನ ಮನೆಯಲ್ಲಿ ಬಿಸಿಯಾದ ಊಟ ತಿಂದು ಬೆಚ್ಚಗೆ  ಮನೆಯಲ್ಲಿ ಮುದುರಿಕೊಂಡು ಮಲಗಲು ಇಚ್ಛಿಸಿದರೆ ಎಪ್ಪತ್ತರ ಹಾಸುಪಾಸಿನ ಚಿರಯುವಕ ಹೊಲತಾಳರು ಚಳಿ,ಮಳೆ, ಗಾಳಿ ಲೆಕ್ಕಿಸದೇ ಒಳನಾಡಿನೊಂದಿಗೆ  ಒಡನಾಡಲು ಹೊರಟೇಬಿಟ್ಟರು.ಅವರನ್ನು ಬೆರಗುಗಣಗಣ್ಣಿನಿಂದ ನೋಡುತ್ತಿದ್ದೆ.ತಮ್ಮ ಪ್ರವಾಸದ ಅನುಭವವನ್ನು ಈ ಪುಸ್ತಕ ಪ್ರಕಟವಾಗುವ ಮೊದಲೇ  ಹೈಲೈಟ್ಸ್ ಮೂಲಕ ನಮಗೆ ಹೇಳಿದ್ದರು .
ಪ್ರವಾಸ ಪ್ರಿಯನಾದ ನಾನು ಈ ವರ್ಷ ಕ್ಯಾತ್ಸಂದ್ರ ಟು ಕ್ಯಾತನಮಕ್ಕಿ ಎಂಬ ಪುಸ್ತಕ ಪ್ರಕಟ ಮಾಡಿರುವೆ.ಹೊಲತಾಳರ ಪ್ರವಾಸ ಕಥನ ಶೈಲಿ ನನಗೆ ಹಿಡಿಸಿತು ಅವರ ಹಾಗೆ ನಾನೂ ಕೂಡಾ ಒಂದು  ಸಮಗ್ರ ಪ್ರವಾಸ ಕಥನ ಬರೆಯಲು ಮನಸ್ಸು ಮಾಡಿರುವೆ.

ಡಾ.ಸಿದ್ಧಗಂಗಯ್ಯ ಹೊಲತಾಳರು
ಕರ್ನಾಟಕದ ಹಲವು ಜಿಲ್ಲೆಗಳ  ಒಳಹೊಕ್ಕು ಒಡನಾಟವಾಡಿ ಬರೆದ ಈ  ವಿಶಿಷ್ಟ ಕೃತಿಯಲ್ಲಿ  ನಾಡಿನ ನೆಲ-ಹೊಲ-ಜಲ-ಕೃಷಿ ಖುಷಿ ವಿಚಾರಗಳನ್ನೂ, ಸಹೃದಯರನ್ನು ಸಂಧಿಸಿ ನಡೆಸಿದ ಮುಕ್ತ ಮಾತುಕತೆಗಳನ್ನು ಇಲ್ಲಿ ದಾಖಲಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದಾರೆ.
ಇವರ ಒಳನಾಡಿನ ಪ್ರವಾಸ ಮೊದಲಿಗೆ ಯರಬಳ್ಳಿಯ ಸಾಹಸಿ ರೈತ ಮಹಿಳೆ ಅರುಣ ಅವರ ಭೇಟಿಯೊಂದಿಗೆ ಆರಂಭವಾಗುತ್ತದೆ.  ಇವರೊಂದಿಗೆ ಜಿಂಗಾಡೆ ನಾಗೇಂದ್ರ, ಸ್ಟೀಲ್ ಪಾತ್ರೆ ಅಂಗಡಿ ಬಸವರಾಜು ಸಹ ಇರುತ್ತಾರೆ. ಇವರ ಪ್ರವಾಸ ಓಮಿನಿ ಕಾರ್ನಲ್ಲಿ ಆರಂಭವಾಗುತ್ತದೆ. ಬೆಟ್ಟಗುಡ್ಡಗಳ ನಡುವಿನ ಯರಬಳ್ಳಿಯ ಅರುಣ ಅವರ ತೋಟಕ್ಕೆ ಭೇಟಿ ನೀಡುತ್ತಾರೆ. 4 ಎಕರೆ ಭೂಮಿಯಲ್ಲಿನ ತರಕಾರಿ, ಹಣ್ಣು, ಮೆಣಸು, ಏಲಕ್ಕಿ, ಅರಿಶಿನ, ಪಪ್ಪಾಯಿ, ಕೋಕೊ, ಬಾಳೆಯೊಂದಿಗೆ ಹಸು, ಕುರಿ, ಕೋಳಿ ಸಾಕಾಣಿಕೆ ಕಂಡು ಸೋಜಿಗಪಡುತ್ತಾರೆ. ಅಡಿಕೆ, ತೆಂಗು, ಸೀಬೆ, ಮಾವು, ಕಿತ್ತಳೆ, ನಿಂಬೆ, ಅಂಜೂರ, ಎಳ್ಳಿ ಮುಂತಾದ ಬೆಳೆಯನ್ನು ಅಲ್ಲಿ ಕಾಣುತ್ತಾರೆ. ಜೇನು ಸಾಕಾಣಿಕೆ ವಿಧಾನ ಕಂಡು ಬೆರಗಾಗುತ್ತಾರೆ. ವಾರ್ಷಿಕ ಆದಾಯ ಎಂಟತ್ತು ಲಕ್ಷಕ್ಕೂ ಅಧಿಕ ಎಂದು ತಿಳಿದು ಬೀಗುತ್ತಾರೆ. ರಾಸಾಯನಿಕ ಗೊಬ್ಬರ ಬಳಸದೆ ಬೆಳೆದ ರೀತಿ ನೀತಿ ಅರಿಯುತ್ತಾರೆ. ತಂದೆಯಿಲ್ಲದ ಅರುಣ ತಾಯಿಯನ್ನು ಪೋಷಿಸುತ್ತಾ, ಸೋದರಿಯರಿಬ್ಬರಿಗೂ ವಿವಾಹ ಮಾಡಿ, ತಾನು ವಿವಾಹವಾಗದೆ ಇರುವ ಆಕೆಯ ಕೃಷಿಕಾಯಕ ಕಂಡು ಮೂಕರಾಗುತ್ತಾರೆ. ಆಕೆಯ ಸಾಧನೆ ಕಂಡು ಮನದಲ್ಲೇ ಧನ್ಯತಾ ಭಾವ ವ್ಯಕ್ತಪಡಿಸುತ್ತಾರೆ. ನಮ್ಮ ನಾಡಿನ ಹೆಣ್ಣು ಮಕ್ಕಳು ಹೀಗಾಗಬಾರದೆ' ಎಂದು  ಅನಿಸದೇ ಇರದು. 

ಎರಡನೆ ಭೇಟಿ ಸೀಗೇನಹಳ್ಳಿಯ ಎಸ್.ಕೆ. ಸಿದ್ಧಪ್ಪ ಅವರ ಹಲಸು ಬೆಳೆವ ತೋಟಕ್ಕೆ ನೀಡುತ್ತಾರೆ. ವಾರ್ಷಿಕ ಆದಾಯ 10 ಲಕ್ಷ ರೂ. ಎಂದು ತಿಳಿದು ಬರುವ ಸಂಗತಿ ನಮಗೆ  ಕೌತುಕ ಮೂಡಿಸುತ್ತದೆ. ಅವರ 25 ಎಕರೆಯ ಮಾವಿನ ತೋಟ ನೋಡಿ, ಅದರ ಆದಾಯ ಕೇಳಿ ಬೆರಗಾಗುತ್ತಾರೆ. ಮುಂದುವರೆದು ಅಮ್ಮನಘಟ್ಟದ ಮಿಯಾವಾಕಿ ಕಾಡಿಗೆ ಭೇಟಿ ನೀಡಿ, ಅಲ್ಲಿನ ನೈಸರ್ಗಿಕ ಬೇಸಾಯ ಕುರಿತು ಅಪೂರ್ವ ಮಾಹಿತಿಗಳನ್ನು ಕಲೆ ಹಾಕುತ್ತಾರೆ. ಮುಂದೆ ಬುಕ್ಕಾಪಟ್ಟಣದ ಶ್ರೀಗಂಧದ ಬೆಳೆಯ ಮಾಹಿತಿ ಸಂಗ್ರಹಿಸುತ್ತಾರೆ. ಜಲಸಂವರ್ಧನೆ ಬಗ್ಗೆ ಸಂವಾದ ಮಾಡಿ ಹೊಸ ಹೊಸ ಮಾಹಿತಿ ನೀಡುತ್ತಾರೆ. ಡಾ. ವೀಣಾ ಅವರು ಶ್ರೀಗಂಧದ ಬಗ್ಗೆ ಅದ್ಭುತ ಮಾಹಿತಿ ನೀಡುತ್ತಾರೆ. ಅಡಿಗಡಿಗೂ ಓದುಗರಲ್ಲಿ ಕೌತುಕ ಹುಟ್ಟಿಸುವಂತಿದೆ.

ಲೇಖಕರು ತಮ್ಮ ಪ್ರವಾಸ ಕಾಲದಲ್ಲಿ ಹಲವು ಶಾಲಾ ಕಾಲೇಜುಗಳನ್ನೂ, ಸಂಘಸಂಸ್ಥೆಗಳನ್ನೂ, ಸಮಾಜ ಸೇವಕರನ್ನು, ರೈತಾಪಿ ವರ್ಗವನ್ನು, ಬರಹಗಾರರನ್ನು ಭೇಟಿ ಮಾಡಿದ್ದಾರೆ. ಚಿಕ್ಕನಾಯಕನಹಳ್ಳಿಯ ಎಂ.ವಿ. ನಾಗರಾಜರಾವ್, ತಿಮ್ಮನಹಳ್ಳಿ ವೇಣುಗೋಪಾಲ್, ಜೆ.ಸಿ. ಪುರದ ಶಿವನಂಜಯ್ಯ ಬಾಳೆಕಾಯಿ, ಬಿದುರೆಗುಡಿ ವಿಜ್ಞಾನ ಕೇಂದ್ರ, ವನಶ್ರೀಯ: ಡಾ. ಜಿ.ಎನ್.ಎಸ್. ರೆಡ್ಡಿ, ಸಂತೆಶಿವರದ ಕೃಷಿಕ ಬಸವರಾಜು, ಲಕ್ಕಿಹಳ್ಳಿ ಬೈಫ್ ಕ್ಯಾಂಪಸ್ನ ಪ್ರಕಾಶ್, ನೀರುಗುಂದದ ಜಯಣ್ಣ, ಸಾಣೆಹಳ್ಳಿ ಶ್ರೀಗಳು, ಗಿರಿಯಾಪುರದ ರೈತ ಕಾಶೀನಾಥ್, ಕುಮಾರ ಚಲ್ಯ, ಬಿ.ಆರ್. ಪ್ರಾಜೆಕ್ಟ್ನ ದಾಳೇಗೌಡ, ಗೋಪಾಳದ ಚಂದ್ರೇಗೌಡ, ಕಾಸರಗೋಡಿನ ಕುಳಮರ್ವ, ಕೆ. ರಾಧಾಕೃಷ್ಣ ಉಳಿಯತ್ತಡ್ಕ, ಸ್ವಾಮಿ ಆನಂದ್, ಎ.ಪಿ. ಚಂದ್ರಶೇಖರ, ಟಿ.ಎಸ್. ಲೋಹಿತಾಶ, ಶ್ರೀ ಶಿವಾಚಾರ್ಯ ಸ್ವಾಮೀಜಿ ಹೀಗೆ ಹಲವಾರು ಪ್ರಮುಖರನ್ನು ಸಂಧಿಸಿ ಅಮೂಲ್ಯವಾದ ಮಾಹಿತಿ ಸಂಗ್ರಹಿಸಿದ್ದಾರೆ.

ಲೇಖಕರು ಸಾಧಕ ವ್ಯಕ್ತಿಗಳನ್ನಲ್ಲದೆ, ಅಮ್ಮನಘಟ್ಟದ ಮಿಯಾವಾಕಿ ಕಾಡು, ಡಾ. ಎಸ್.ಎಲ್ ಭೈರಪ್ಪನವರು ನಿರ್ಮಿಸಿರುವ ವಾಚನಾಲಯ, ಕಂಚಾಘಟ್ಟದ ತೋಟದ ಮನೆ, ಗರ್ಜೆ ಈಶ್ವರಪ್ಪನ ಎರೆಹುಳು ತೋಟ, ಮಂಡಿಮನೆ ಫಾರಂ, ಶಾಂತಿನಗರಗುಡ್ಡ, ಸಿಂಗನಮನೆ, ಪೊಸಡಿ ಗುಂಪೆ, ಮೈಸೂರು ಮುಂತಾದ ಪ್ರದೇಶ, ಊರುಗಳಿಗೆ ಭೇಟಿ ನೀಡಿ ಅತ್ಯಮೂಲ್ಯವಾದ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಇವರು ಸಂಗ್ರಹಿಸಿದ ವಿಚಾರ ಓದುಗರನ್ನು ಬೆರಗುಗೊಳಿಸುತ್ತದೆ. ಗ್ರಾಮೀಣ ವ್ಯಕ್ತಿಗಳ ಶಕ್ತಿ ಕಂಡು ಓದುಗರು ಮನಸೋಲುವುದು ಖಂಡಿತ, ಸರಳವಾದ ನಿರೂಪಣೆ, ಆಕರ್ಷಕ ಬರೆಹ, ಸಂಗ್ರಹಿಸಿರುವ ಸಂಪತ್ತು ಮನಸೂರೆಗೊಳ್ಳುತ್ತದೆ.

ಹೊಲತಾಳರು ಮೈಸೂರು, ನಂಜನಗೂಡು, ವಿಧುರಾಶ್ವತ್ಥ, ತೊಂಡೆಕೆರೆ, ಚನಗ ನಿಜಗಲ್, ದೇವರಾಯನದುರ್ಗ, ಕಬಿನಿ ಡ್ಯಾಂ, ಕಳಲವಾಡಿ ಇಂದ್ರಪ್ರಸ್ಥ ಹೀಗೆ ಒಳನಾಡಿನ ಒಡನಾಟದಲ್ಲಿ ಸುಮಾರು 100 ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಅಲ್ಲಿನ ಹಿರಿಮೆ ಗರಿಮೆಗಳನ್ನು ಸಾರ ಸಂಗ್ರಹವಾಗಿ ನೀಡಿದ್ದಾರೆ. ಧ್ವನ್ಯಾಲೋಕ ಕಂಡು ಇವರ ಮನ ಹಿಗ್ಗಿನ ಬುಗ್ಗೆಯಾದರೆ, ಕಾಸರಗೋಡಿನ ಪರಿಸರ ಕಂಡು ಮನಸೋತು ಹೋಗುತ್ತಾರೆ. ಹೊಲ, ಗದ್ದೆ, ತೋಟ, ವನ, ಬನ, ಜಲಸಿರಿ, ಊರು, ಕೇರಿ, ನಗರ, ಮನೆ ಮಠಗಳು, ಕೆರೆ ಕಟ್ಟೆ ಕಾಲುವೆಗಳು ಕಣಟ್ಟಿ ನಿಲ್ಲುತ್ತವೆ. ಕವಿಗಳ ಕವಿತೆಗಳು ಆಪ್ಯಾಯಮಾನವಾಗಿವೆ. ಇತಿಹಾಸದ ಗತವೈಭವಗಳು ಮನದಲ್ಲಿ ಮನೆ ಮಾಡುತ್ತವೆ.

ಈ ಪುಸ್ತಕಕ್ಕೆ ನಮ್ಮ ನಾಡಿನ ಹೆಸರಾಂತ ಸಾಹಿತಿಗಳಾದ ವಿದ್ಯಾವಾಚಸ್ಪತಿ ಡಾ. ಕವಿತಾ ಕೃಷ್ಣರವರು ಮುನ್ನುಡಿ ಬರೆದಿದ್ದು ಪುಸ್ತಕದ ಸಮಗ್ರ ನೋಟ ನೀಡಿದೆ.
ಕವಿ ವಿಮರ್ಶಕರಾದ ಡಾ.ಕೆ ಪಿ ನಟರಾಜ್ ರವರು,ಜಾನಪದ ತಜ್ಞರಾದ ಡಾ, ಬಸವರಾಜ ನೆಲ್ಲಿಸರ ರವರು ಪುಸ್ತಸುರಿಬ್ಗೆ ತಕದ ಬಗಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ಧಾರೆ.
ನಿಮಗೂ ಒಳನಾಡಿನೊಂದಿಗೆ ಒಡನಾಟವಾಡಬೇಕು ಎನಿಸಿದರೆ  ಆರೆಂಜ್ ಬುಕ್ಸ್  ನ ಪ್ರಕಾಶಕರನ್ನು ಸಂಪರ್ಕಿಸಿ 400 ರೂಪಾಯಿಗಳನ್ನು ಕೊಟ್ಟು ಖರೀದಿಸಿ ಓದಬಹುದು.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು.

24 March 2023

ಪ್ರಮೇಯ, ಇದು ಅಳಿದವರ ಕಥೆಯಲ್ಲ ಅಳೆದವರ ಕಥೆ.

 


ಪ್ರಮೇಯ.ಇದು ಅಳಿದವರ ಕಥೆಯಲ್ಲ ಅಳೆದವರ ಕಥೆ

ಹೈಸ್ಕೂಲ್ ನಲ್ಲಿ ಓದುವಾಗಿನಿಂದ ಗಣಿತವೆಂದರೆ   ಅಷ್ಷಕಷ್ಟೆ ಅದರಲ್ಲೂ ಪ್ರಮೇಯ ತಲೆಗೆ ಹತ್ತುವುದು ಕೊಂಚ ನಿಧಾನವಾಗುತ್ತಿತ್ತು .ಮೊನ್ನೆ ಗಜಾನನ ಶರ್ಮ ಅವರ ಪ್ರಮೇಯ ಕಾದಂಬರಿ ಓದಲು ಕೈಗೆತ್ತಿಕೊಂಡಾಗ ಮುಖಪುಟ ನೋಡಿದಾಗ  ಅದರ ಮೇಲಿನ ತ್ರಿಕೋನ ,ರೇಖೆಗಳು ರೇಖಾಗಣಿತ ಜ್ಞಾಪಿಸಿದವು. ಪುಸ್ತಕ ಓದಲು ಹಿಂದೇಟು ಹಾಕಿದೆ.  ಅದರ ಹಿನ್ನೆಲೆ ಯಲ್ಲಿರುವ  ಭಾರತದ ಭೂಪಟವು ಇತಿಹಾಸದ ಬಗ್ಗೆ ಆಸಕ್ತಿ ಇರುವ ನನಗೆ ತುಸು  ಸಮಾಧಾನ ತಂದಿತು . ಧೈರ್ಯ ಮಾಡಿ  ಪುಸ್ತಕ ಓದಲು ಶುರು ಮಾಡಿಯೇ ಬಿಟ್ಟೆ. ಪುಸ್ತಕ ಓದುತ್ತಾ ಇದು ಆಳಿದವರ ಕಥೆಯಲ್ಲ ಅಳೆದವರ ಕಥೆ ಎಂಬುದು ಮನವರಿಕೆಯಾಯಿತು .ಮಾಪನ ಕಾರ್ಯದ ಮಹತ್ವ ಅದಕ್ಕೆ ಬಂದೊದಗುವ ಅಡಚಣೆಗಳು ,ಮಾಪಕರ ಬದ್ಧತೆ ಮುಂತಾದವುಗಳನ್ನು ಈ ಕಾದಂಬರಿಯಲ್ಲಿ ಬಹಳ ಸೊಗಸಾಗಿ ಚಿತ್ರಿಸಿದ್ದಾರೆ ಕಾದಂಬರಿಕಾರರಾದ ಗಜಾನನ ಶರ್ಮ ರವರು .
ಈಗಿನ ಮುಂದುವರಿದ ತಂತ್ರಜ್ಞಾನದ ಸಹಾಯದಿಂದ ನ್ಯಾನೋ ಮೀಟರ್ ನ್ನು ಸಹ ಅಕ್ಯುರೇಟ್ ಆಗಿ ಅಳೆದುಕೊಡಬಹುದು .ಹದಿನೆಂಟು ಮತ್ತು ಹತ್ತೊಂಬತ್ತನೆಯ ಶತಮಾನದಲ್ಲಿ ಅಳೆಯುವವರು ಗುಡ್ಡ,ಕಾಡುಗಳನ್ನು ಅಲೆಯುತ್ತಾ ಪರ್ವತಗಳನ್ನು ಏರಿ ಇಳಿದು ಮಾಪನ ಮಾಡಿದ ಕಥೆ ಓದುವುದೇ ರೋಚಕ.
ಈ ಕಾದಂಬರಿ ಬರೆಯುವ ಮುನ್ನ ಕಾದಂಬರಿಕಾರರು ತಮ್ಮ ಕುಟುಂಬದ ಸಮೇತ ಟ್ರಿಗ್ನಾಮೆಟ್ರಿಕ್ ಸರ್ವೆ ನಡೆದ ಸ್ಥಳಗಳಲ್ಲಿ ಓಡಾಡಿ ಬಂದುದು ಅವರ ಅನುಭವ ಜನ್ಯ ಬರಹವು ಹೆಚ್ಚು ಆಪ್ತವಾಗಿ ಕಾಣುತ್ತದೆ

ಈ ಪುಸ್ತಕಕ್ಕೆ ಬೆನ್ನುಡಿ ಬರೆದಿರುವ ಜೋಗಿರವರ ಅಭಿಪ್ರಾಯಗಳು ಪುಸ್ತಕ ಓದುತ್ತಿದ್ದಾಗ ಮತ್ತೆ ಮತ್ತೆ ನೆನಪಾಗುತ್ತವೆ ಅವರು ಹೇಳಿದಂತೆ
"ಭಾರತದ ಮಹಾಮಾಪನದ ಕತೆಯನ್ನು ಹೇಳುತ್ತಲೇ, ಭಾರತೀಯ ಮನಸ್ಸು, ದೈವಿಕತೆ, ಅಧ್ಯಾತ್ಮವನ್ನು ಹೇಳುವ ಕಾದಂಬರಿ ಪ್ರಮೇಯ, ಇದರ ಹರಹು ಮತ್ತು ಆಳ ನನ್ನನ್ನು ಅಚ್ಚರಿಗೊಳಿಸಿದೆ. ಇದು ಹಿಮಾಲಯವನ್ನು ಅಳೆದ ಕತೆ, ಅಳೆದವರ ಕತೆ, ಅಳೆದು ಉಳಿದವರ ಕತೆ, ವೈಜ್ಞಾನಿಕ ಜಗತ್ತು ಭಾರತದ ಮಹಾಮಾಪನವನ್ನು ಗ್ರೇಟ್    ಟ್ರಿಗ್ನೋಮೆಟ್ರಿಕ್  ಸರ್ವೆ ಎಂದು ಕರೆಯಿತು. ಆ ಯೋಜನೆಯನ್ನು ಮುನ್ನಡೆಸಿದ ಕರ್ನಲ್ ಲ್ಯಾಂಬ್ಟನ್, ಜಾರ್ಜ್ ಎವರೆಸ್ಟ್, ಆಂಡ್ರೂ, ವಾ, ಥಾಮಸ್ ಜಾರ್ಜ್ ಮಾಂಟ್ಗೋಮರಿ ಮತ್ತು ನೈನ್ ಸಿಂಗರ ಕಷ್ಟಸುಖದ ಕತೆಯನ್ನು ಹೇಳುತ್ತಲೇ ಭಾರತದ ಕತೆಯನ್ನೂ ಗಜಾನನ ಶರ್ಮರು ಹೇಳುತ್ತಾರೆ.  

ಇಂಥದ್ದೊಂದು ವಸ್ತುವನ್ನು ಆಧರಿಸಿದ ಮೊದಲ ಭಾರತೀಯ ಕಾದಂಬರಿ ಇದು. ಚರಿತ್ರೆ ಮತ್ತು ಕಲ್ಪನೆ ಎರಡನ್ನೂ ಹದವಾಗಿ ಬೆರೆಸುತ್ತಾ, ಚಾರಿತ್ರಿಕ ವಿವರಗಳಿಗೆ ಅಪಚಾರ ಆಗದಂತೆ, ಕಲಾನುಭವಕ್ಕೆ ಕುಂದಾಗದಂತೆ ಈ ಕತೆಯನ್ನು ಗಜಾನನ ಶರ್ಮರವರು  ನಿರೂಪಿಸಿದ್ದಾರೆ. ಸಣ್ಣ ವಿವರ, ಸ್ಪಷ್ಟ ಮಾಹಿತಿ, ಸಮರ್ಪಕ ಕ್ಷೇತ್ರಾಧ್ಯಯನ,  ಮತ್ತು ಸರಳ ಭಾಷೆಯಿಂದ ಗಮನಸೆಳೆಯುವ  ಕಾದಂಬರಿ ಇದು.

ಗಜಾನನ ಶರ್ಮರವರೆ  ಹೇಳಿರುವಂತೆ ಇದು  ಶೂನ್ಯದಿಂದ ಆರಂಭವಾಗಿ ಅನಂತದೆಡೆಗೆ ಅಳೆಯುವ ಒಂದು ಮಾನ, ಸಾಂತದಿಂದ ಅನಂತಕ್ಕೆ ಸಾಗುವಾಗು ನಡೆಯುವ ಘಟನೆಗಳಾಗಿದ್ದರೆ ಅಷ್ಟೇನೂ ಮಹತ್ವವಿರುತ್ತಿರಲಿಲ್ಲ.ಆದರೆ  ನಾವು ದಿನನಿತ್ಯ ನಮ್ಮ ದೇಶದ ಭೂಭಾಗವನ್ನು ವಿವರಿಸುತ್ತಾ ಹಿಮಾಲಯದಿಂದ ಆರಂಭಿಸಿ ದಕ್ಷಿಣದ ಸಾಗರದ ತನಕ ಇರುವ ಭೂಮಿ ಭಾರತ.' ಎಂದು ಸಹಜವಾಗಿ ಹೇಳಿಬಿಡುತ್ತೇವೆ. ಇಂತಹದ್ದೊಂದು ಕಾದಂಬರಿ ಓದುವವರೆಗೆ ಹೆಚ್ಚಿನವರಿಗೆ ಈ ಸರ್ವೆ ಎಂದರೆ ಏನು ಎನ್ನುವುದರ ಅರ್ಥ ತಿಳಿದಿರುವುದಿಲ್ಲ.ಈ ಕಾದಂಬರಿಯನ್ನು ಓದುತ್ತಾ ನಾವು ಮಾಂಟ್ಗೋಮರಿ,ಲ್ಯಾಂಬ್ಟನ್, ನೈನ್ಸಿಂಗ್ ರವರ ಜೊತೆ ಸರ್ವೆ ಮಾಡಿದ ಅನುಭವವಾಗುತ್ತದೆ.

ಡಾ. ಗಜಾನನ ಶರ್ಮರವರು  . ಈ ಕೃತಿಗಾಗಿ  ಹನ್ನೆರಡು ಸಾವಿರ ಅಡಿಗೂ ಎತ್ತರದ ಕಾಶ್ಮೀರದ ಹಿಮ ಪರ್ವತದ ಸುತ್ತಲೂ ಕುಟುಂಬ ಸಮೇತ ಒಡಾಡಿ ಅಧ್ಯಯನ ಮಾಡಿ ಬಂದಿದ್ದಾರೆ. ಒಂದು ಮಹಾ ಅಭಿಯಾನವನ್ನು ಕಾದಂಬರಿಯಾಗಿ ರೂಪಿಸಿ ಅದಕ್ಕೆ ಸಾಹಿತ್ಯದ  ಜೊತೆಗೆ ರಮ್ಯತೆಯನ್ನು  ಸೇರಿಸಿ ಒಂದು ಸುಂದರ ಕೃತಿಯನ್ನು ನೀಡಿದ್ದಾರೆ.

ಈ ಕಾದಂಬರಿಯಲ್ಲಿ ನನ್ನ ಬಹುವಾಗಿ ಕಾಡಿದ ಪ್ರಸಂಗವೆಂದರೆ ಅದು ಹರ್ಮುಖ ಅವರೋಹಣದ ನಂತರ ನಡೆದ ಕೆಲ ಘಟನೆಗಳು.
  ಹರಮುಖ ಪರ್ವತವನ್ನು ಹತ್ತಿ ಅದನ್ನು ಅಪವಿತ್ರಗೊಳಿಸಿದ ಎನ್ನುವ ಸವಾಲನ್ನು ಮಾಂಟ್ಗೋಮರಿ   ಎದುರಿಸುವ ಘಟನೆ ಸಾಮಾನ್ಯವಾದುದಲ್ಲ. ಇದು ಕಾದಂಬರಿಯುದ್ದಕ್ಕೂ ಪ್ರತಿಧ್ವನಿಸುತ್ತಾ  ಟಿಬೆಟ್ ನ ಸರ್ವೆಯ ಹೊತ್ತಿನಲ್ಲಿ ಮಹಾಸವಾಲಾಗಿ ಪರಿಣಮಿಸುತ್ತದೆ. ಕಾಡಿನೊಂದಿಗೆ  ಜೀವನ ಸಾಗಿಸುತ್ತಿರುವ ಗಂಗಾಚರಣ ಧಾರ್ಮಿಕವಾಗಿ ತುಂಬಾ ಶ್ರದ್ಧಾವಂತರು. ಆದರೆ ಅವರಿಗೆ ತನ್ನ ಹಿರಿಯರು ಗೌರವಿಸುತ್ತಿರುವ ಹರಮುಖ ಶಿಖರವನ್ನು ಅಪವಿತ್ರಗೊಳಿಸಿದ ಮಾಂಟ್ಗೋಮರಿಯ  ಕುರಿತು ಬೇಸರವಿದ್ದರೂ, ಗಾಯಾಳುವಾದ ಅವನಿಗೆ  ಚಿಕಿತ್ಸೆ ನೀಡುವುದು ವೈದ್ಯನಾದವನ ಕರ್ತವ್ಯವೆನ್ನುವ ಮೂಲಕ ಮಾನವೀಯ ಮೌಲ್ಯಗಳ ಎತ್ತಿಹಿಡಿದ್ದು ನನಗೆ ಬಹಳ ಇಷ್ಟವಾಯಿತು. ಇದು ಕ್ರಮೇಣ ವಿಭಿನ್ನ ಆಲೋಚನೆ ಇಬ್ಬರನ್ನೂ ಪರಸ್ಪರ ಅರ್ಥಮಾಡಿಕೊಂಡು 
ಅವರ ಮೊಮ್ಮಗ ಕಾಶೀನಾಥನು   ಬಿಳಿಯರು ನಮ್ಮ ದೇಶವನ್ನು ಕೊಳ್ಳೆಹೊಡೆಯಲು ಬಂದಿದ್ದಾರೆ
ಎನ್ನುವ ಮೂಲಕ ಆಕ್ರೋಶ ವ್ಯಕ್ತಪಡಿಸಿ ಜೈಲುಪಾಲಾಗುವನು ಮಾಂಟ್ಗೋಮರಿಯ ಸಹಾಯದಿಂದ ಜೈಲಿನಿಂದ ಬಿಡುಗಡೆಯಾದರೂ   1857 ಪ್ರಥಮ ಸ್ವಾತಂತ್ರ್ಯ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಬ್ರಿಟಿಷರ ಕೊಂದ ತನ್ನ ವಂಶದ ಕುಡಿ ಮಾಡಿದ ತಪ್ಪಿಗಾಗಿ ಆತ್ಮಹತ್ಯೆ ಮಾಡಿಕೊಂಡ ಗಂಗಾಚರಣರ ಪತ್ರ ಓದುವಾಗ ನಮ್ಮ ಕಣ್ಣಲ್ಲಿ ನಾಲ್ಕು ಹನಿಗಳು ಜಿನುಗುತ್ತವೆ. 

ಆರಂಭದಲ್ಲಿ ಭಾರತೀಯರ ಕೆಲಸದ ಬಗ್ಗೆ ಅಸಡ್ಡೆ ಮತ್ತು ಮೂದಲಿಕೆ ಮಾತನಾಡುತ್ತಿದ್ದ ಬ್ರಿಟೀಷರು
ನೈನ್ ಸಿಂಗ್ ನಂತಹ   ಭಾರತೀಯ ಕೂಲಿಯಾಳುಗಳ ಬದ್ಧತೆ ಮತ್ತು  ಮೋಜಣಿಕಾರ್ಯದಲ್ಲಿ ಮಾಡಿದ ಅದ್ಭುತ ಕಾರ್ಯಗಳನ್ನು ಅಧಿಕಾರಿಗಳು ಕೊಂಡಾಡಿದ್ದಾರೆ.  ವೇಷ ಬದಲಿಸಿಕೊಂಡು ಇಡೀ ಟಿಬೆಟ್ಟನ್ನೇ ನಾಲ್ಕು ಬಾರಿ ಓಡಾಡಿ  ಅಳತೆ ಮಾಡುತ್ತ, ಕಾಲಿಗೆ ಸರಪಳಿಯನ್ನು ಕಟ್ಟಿಕೊಂಡು ಅಳೆಯುವ ಅವನ ಸಾಹಸಕಾರ್ಯ ನಮ್ಮನ್ನು ಮೂಕನನ್ನಾಗಿಸುತ್ತದೆ. ಈ ಕಬ್ಬಿಣದ ಸರಪಳಿ ಎಷ್ಟೇ ನೋವು ಕೊಟ್ಟರೂ ಅದು ನಮ್ಮವರೇ ಮಾಡುವ ಅವಮಾನದ ನೋವನ್ನು ಸರಿಗಟ್ಟಲಾರದು ಎನ್ನುವ ನೈನ್ ಸಿಂಗನ ಮಾತು ಮನಸ್ಸಿನಲ್ಲಿ ಮಡುಗಟ್ಟಿ ನಿಂತುಬಿಡುತ್ತವೆ. ಇನ್ನೇನು ಟಿಬೆಟ್ ನಲ್ಲಿ ಸಿಕ್ಕುಬಿದ್ದು ನಂತರ ತಪ್ಪಿಸಿಕೊಂಡರೂ ಆತ ತನ್ನ ಕರ್ತವ್ಯದಲ್ಲಿ ಹಿಂದೆ ಬೀಳದೇ ಮತ್ತೆ ಮತ್ತೆ ಹಿಮಾಲಾಯದ ಭಾಗದಲ್ಲಿ ಓಡಾಡಿ ಟಿಬೆಟ್ ನ  ಸಾಂಗ್ಪೊ ನದಿಯೇ ಬ್ರಹ್ಮಪುತ್ರಾ ನದಿಯೆಂದು ಕಂಡು ಹಿಡಿಯುತ್ತಾನೆ. ಆತನಿಗೆ ತನ್ನ ಸಾಧನೆಗಳಿಗೆ ಪ್ರಚಾರ ಸಿಗಬೇಕೆನ್ನುವ ಆಸೆಯಿಲ್ಲ ಇಂತಹ ಸಾಧನೆಗೆ ಸಾತ್ ನೀಡಿದ ನೈನ್ ಸಿಂಗನ ಸಾಧನೆಯನ್ನು ಬೆಳಕಿಗೆ ತರಲು ಮಾಟ್ಗೋಮರಿ ಯು    ಲಂಡನ್ನಿನ ಜಿಯಾಗ್ರಫಿಕಲ್ ಸೊಸೈಟಿಯ ಜರ್ನಲ್ಲಿನಲ್ಲಿ 'ಪೋರ್ಟ್ ಆಫ್ ಎ ರೂಟ್ ಸರ್ವೆ ಮೇಡ್ ಬೈ ಪಂಡಿತ್' ಎನ್ನುವ ಲೇಖನದಲ್ಲಿ ನೈನ್ ಸಿಂಗನ ಸಾಧನೆಯನ್ನು ಹೊಗಳಿ ಅವನ  ಸಿಗಬೇಕಾದ ಮನ್ನಣೆ ಸಿಗುವಂತೆ ನೋಡಿ ಕೊಳ್ಳುತ್ತಾನೆ. ಅಂತಹ ಬ್ರಿಟಿಷ್ ಅಧಿಕಾರಿಗಳ ಬಗ್ಗೆ ಮನದಲ್ಲೇ ಗೌರವ ಮೂಡುತ್ತದೆ.

   ಒಂದು ವಿಶಿಷ್ಠವಾದ  ವಸ್ತುವನ್ನು ಉತ್ತಮ ಮಾಹಿತಿಯೊಡನೆ  ಸುಂದರ ನಿರೂಪಣೆ  ಮಾಡುತ್ತಾ   ನಮ್ಮ ಮನ ಗೆಲ್ಲುವಲ್ಲಿ "ಪ್ರಮೇಯ" ಯಶಸ್ವಿಯಾಗಿದೆ ಎನ್ನಬಹುದು.
ನೀವೂ ಪ್ರಮೇಯ ಓದಬೇಕೆಂದುಕೊಂಡರೆ ಅಂಕಿತಾ ಪ್ರಕಾಶನ ಸಂಪರ್ಕಿಸಿ 395 ರೂಪಾಯಿಗಳನ್ನು ನೀಡಿ ಕೊಂಡು ಕಾದಂಬರಿ ಓದಬಹುದು.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು


ಕರುನಾಡ ಜನಜಾಗೃತಿ ವಿಚಾರ ವೇದಿಕೆಯ ಜನಪರ ಕಾರ್ಯಗಳು.

 





ಕರುನಾಡ ಜನಜಾಗೃತಿ ವಿಚಾರ ವೇದಿಕೆಯ ಜನಪರ ಕಾರ್ಯಗಳು.

"ಒಳ್ಳೆಯವರ ಮೌನ ಕೆಟ್ಟವರ ಅಟ್ಟಹಾಸಕ್ಕೆ ದಾರಿಯಾಗುತ್ತದೆ. ಒಳ್ಳೆಯ ಕೆಲಸ ಮಾಡುವವರ ಬಗ್ಗೆ ನಾಲ್ಕು ಜನರಿಗೆ ತಿಳಿಸದಿದ್ದರೆ ಕೆಟ್ಟ ಕೆಲಸಗಳು ವಿಜೃಂಭಿಸುತ್ತವೆ" ಎಂಬ ಹಿರಿಯರ ಮಾತಿನಂತೆ  ಸಮಾಜದಲ್ಲಿ ಇಂದು ಮೌಲ್ಯಗಳ ಅದಃಪತನ ಹೊಂದಿ ದುಷ್ಟ ಶಕ್ತಿಗಳ ಮೇಲುಗೈಯಾಗಿದೆ ಎಂದು ಕೆಲವರು ಅಲವತ್ತುಕೊಂಡರೂ ಅಲ್ಲಲ್ಲಿ ಸತ್ಕಾರ್ಯ ಮಾಡಿ ಸಮಾಜಮುಖಿ ಕಾರ್ಯಗಳನ್ನು ಮಾಡಿ ಎಲೆಮರೆಯ ಕಾಯಿಯಂತೆ ಪ್ರಚಾರ  ಬಯಸದೆ ತಮ್ಮ ಕಾಯಕದಲ್ಲಿ ನಿರತವಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ಇಂತಹ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಜನರಿಗೆ ಪರಿಸರ, ನಾಡು ನುಡಿ,ಸಂಸ್ಕೃತಿಗಳ ಬಗ್ಗೆ ಜಾಗೃತಿಯನ್ನು ಮೂಡಿಸುವ ಕಾರ್ಯದಲ್ಲಿ ನಿರತವಾಗಿರುವ ಕರುನಾಡ ಜನಜಾಗೃತಿ ವಿಚಾರ ವೇದಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲೇಬೇಕಿದೆ.

ವೇದಿಕೆಯ ಅದ್ಯಕ್ಷರಾದ ಬಿ ಟಿ  ಶ್ರೀಸಚ್ಚಿದಾನಂದ ರವರ ನೇತೃತ್ವದಲ್ಲಿ ಹಲವಾರು ಕಾರ್ಯಗಳನ್ನು ಹಮ್ಮಿಕೊಂಡಿದ್ದಾರೆ.  ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸುವುದರಿಂದ ಹಿಡಿದು ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಶಿಭಿರಗಳು , ಶಾಲೆಗಳಲ್ಲಿ ಮಕ್ಕಳಿಗೆ ಗ್ರಂಥಾಲಯ ಸ್ಥಾಪಿಸಿ ಉಚಿತವಾಗಿ ಪುಸ್ತಕಗಳನ್ನು ವಿತರಿಸುವ ತನಕ ತಮ್ಮ ಸೇವಾ ಕಾರ್ಯಗಳನ್ನು ಮುಂದುವರೆಸಿದ್ದಾರೆ.
ಇದಕ್ಕೆ ವಿನಯ್ ರಂತಹ ಸಾಪ್ಟ್ ವೇರ್  ಇಂಜಿನಿಯರ್ ಗಳು ಹಾಗೂ ಸಮಾನ ಮನಸ್ಕ ತಂಡ ಬೆನ್ನೆಲುಬಾಗಿ ನಿಂತಿದೆ.  

ಗ್ರಾಮೀಣ ಭಾಗದಲ್ಲಿ ಯುವಕರಿಗೆ ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಹಲವಾರು ಶಿಬಿರಗಳನ್ನು ಆಯೋಜಿಸಿರುವ ಈ ವೇದಿಕೆ ಇತ್ತಿಚೆಗೆ  ರೈತರಿಗೆ ಕೇರ್ ಪೇಟೆ ತಾಲೂಕು ಬೀರವಳ್ಳಿಯಲ್ಲಿ  ಸ್ವಾವಲಂಬಿ ಉದ್ಯೋಗದ ಅರಿವು ಮೂಡಿಸಲು  ಕೋಳಿ ಸಾಕಾಣಿಕೆ ತರಬೇತಿ ಕಾರ್ಯಕ್ರಮ ಆಯೋಜಿಸಿತ್ತು.

ನಮ್ಮ ಭವ್ಯ  ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸಲು ವೇದಿಕೆಯು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. 
ಜಿ ಬಸವನಹಳ್ಳಿ ಗ್ರಾಮದ ಶ್ರೀ ಗಂಗಾಧರೇಶ್ವರ ದೇವಸ್ಥಾನವು ಚೋಳರ ಕಾಲದ ದೇವಸ್ಥಾನವಾಗಿದ್ದು ದೇವಸ್ಥಾನ ಗೋಪುರವು  ಶಿತಲಗೊಂಡಿತ್ತು  ವೇದಿಕೆಯ ಅದ್ಯಕ್ಷರಾದ  ಶ್ರೀ ಸಚ್ಚಿದಾನಂದ ರವರು  ಸ್ವಂತ ಹಣದಿಂದ ಬೆಟ್ಟಕ್ಕೆ ರಸ್ತೆ ಮಾಡಿಸಿದರು ಮತ್ತು ಶಾಸಕರ ನಿಧಿ ಮತ್ತು ಗ್ರಾಮಸ್ಥರ ಭಕ್ತಾದಿಗಳ ನಿಧಿಗಳಿಂದ ದೇವಸ್ಥಾನ  ಜೀರ್ಣೋದ್ಧಾರ ಕಾರ್ಯಗಳನ್ನು  ಪೂರ್ಣಗೊಳಿಸಿ   ಅದ್ದೂರಿಯಾಗಿ ಮಹಾಶಿವರಾತ್ರಿ ದಿನದಂದು ನಡೆದ  ಜಾತ್ರೆಯ  ಸಂದರ್ಭದಲ್ಲಿ ಶಾಸಕರ ಸಮ್ಮುಖದಲ್ಲಿ ಲೋಕಾರ್ಪಣೆಗೊಂಡಿತು.
ಈ ಸಂಧರ್ಭದಲ್ಲಿ ಗ್ರಾಮಸ್ಥರು ಭಕ್ತಾದಿಗಳು ವೇದಿಕೆಯ ರಾಜ್ಯಾಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಸನ್ಮಾನಿಸಿದರು.

ಇದೇ ರೀತಿಯಲ್ಲಿ ಕರುನಾಡ ಜನ ಜಾಗೃತಿ ವಿಚಾರ ವೇದಿಕೆಯು ಹಲವಾರು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದೆ. ಇಂತಹ ಕೆಲಸಗಳಿಗೆ ಸಮುದಾಯದ ಸಹಕಾರ ಮತ್ತು ಬೆಂಬಲ ಅಗತ್ಯವಿದೆ. ಇದು ವೇದಿಕೆಯು ಇನ್ನೂ ಹೆಚ್ಚಿನ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಹಕಾರಿಯಾಗುತ್ತದೆ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ


23 March 2023

ನಲಿ

 ಸ್ಪರ್ಧೆಗೆ


*ನಲಿ*


ಎಲ್ಲರೂ ಮುಖ್ಯರು ಜಗದಲಿ 

ಅಸೂಯೆ ಬಿಟ್ಟು ಬಾಳುವುದ ಕಲಿ

ಸರ್ವರೊಳಗೊಂದು  ಸದ್ಗುಣವ ಕಲಿ

ಪ್ರೀತಿ, ಸ್ನೇಹಗಳ  ಹಂಚುತಾ ನಲಿ.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

22 March 2023

ಶೋಭಕೃತ ಸಂವತ್ಸರ



ಶೋಭಕೃತ ಸಂವತ್ಸರ


ಬಂದಿದೆ ಹೊಸ ವರುಷ

ಶೋಭಕೃತ ಸಂವತ್ಸರ

ಈ ವರ್ಷದಲಿ ಎಲ್ಲರೂ

ಕೂಡಿ ಬಾಳೋಣ

ತ್ಯಜಿಸುತ ಮತ್ಸರ 


ಸಿಹಿಜೀವಿ


ಅರೆಯೂರಿನ ವೈದ್ಯನಾಥೇಶ್ವರ

 




ಅರೆಯೂರು ವೈದ್ಯನಾಥೇಶ್ವರ ಸನ್ನಿಧಿ..

"ನನಗೆ ವೈರಸ್ ಖಾಯಿಲೆಯಾಗಿ ಕೈ ಕಾಲುಗಳು ಸ್ವಾಧೀನವಿಲ್ಲದೆ ನಡೆದಾಡಲು ಆಗುತ್ತಿರಲಿಲ್ಲ. ಪರಿಣತ ತಜ್ಞ ವೈದ್ಯರಿಗೆ ತೋರಿಸಿ ಔಷಧೋಪಚಾರ ಪಡೆದರೂ ಸಹ ಗುಣಕಾಣಲಿಲ್ಲ. ನನ್ನ ಪರವಾಗಿ ನನ್ನ ಸ್ನೇಹಿತರಾದ ಮೈದಾಳದ ಶ್ರೀ ಪುಟ್ಟರೇವಯ್ಯನವರು ಶ್ರೀ  ಸ್ವಾಮಿಗೆ ಪೂಜೆ ಮಾಡಿಸಿ ಪ್ರಾರ್ಥಿಸಿಕೊಂಡಿದ್ದರಿಂದ ನನಗೆ ಗುಣವಾಗಿದೆ". ಇವು ಕುಣಿಗಲ್ ನ
ವಿ. ಕೃಷ್ಣ ಮೂರ್ತಿರವರ ಕೃತಜ್ಞತಾಪೂರ್ವಕ ಮಾತುಗಳು . 

"ನನಗೆ ಮೂತ್ರಕೋಶದ ಖಾಯಿಲೆಯಾಗಿ ಮೂತ್ರದ ಜೊತೆಯಲ್ಲಿ ರಕ್ತ ಹೋಗುತ್ತಿತ್ತು. ಬಹಳ ನೋವು ಆಗುತ್ತಿತ್ತು. ತಜ್ಞ ವೈದ್ಯರಿಂದ ಔಷಧೋಪಚಾರ ಮಾಡಿಸಿಕೊಂಡರೂ ಸಹ ವಾಸಿಯಾಗಲಿಲ್ಲ. ಆದರೆ  ಸ್ವಾಮಿಯ ದೇವಸ್ಥಾನಕ್ಕೆ ಪೂಜೆ ಮಾಡಿಸಿ ಅಭಿಷೇಕ ಮಾಡಿಸುವುದಾಗಿ ಹರಕೆ ಮಾಡಿಕೊಂಡು ಆಗಾಗ್ಗೆ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿ ಖಾಯಿಲೆ ವಾಸಿ ಮಾಡುವಂತೆ ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ ನನ್ನ ಖಾಯಿಲೆ ಶೇ.75 ಭಾಗ ವಾಸಿಯಾಗಿದೆ. ಪೂರ್ಣ ವಾಸಿಯಾಗುತ್ತದೆ ಎಂಬ ನಂಬಿಕೆ ನನಗಿದೆ" ದೇವರ ಮಹಿಮೆಯ ಕುರಿತು ಹೆಗ್ಗೆರೆಯ  ಪುಟ್ಟ ಹನುಮಯ್ಯನವರು ಹೇಳಿದ ಮಾತುಗಳು.

ಈಗ ನಿಮಗೂ ಕುತೂಹಲವಾಗಿದೆ! ಯಾವುದು ಈ ಪವಾಡದ ದೇವರು ಎಂಬ ಪ್ರಶ್ನೆ ನಿಮ್ಮಲ್ಲಿ ಬಂದಿದೆ.
ಹೌದು ತುಮಕೂರು ತಾಲ್ಲೂಕಿನ ಭವರೋಗ ವೈದ್ಯ, ಸರ್ವ ವ್ಯಾಧಿ ನಿವಾರಕ ಶ್ರೀ ವೈದ್ಯನಾಥೇಶ್ವರನೇ ಆ ದೈವ ! ಅರೆಯೂರಿನ ಈ ದೈವ ನಮ್ಮ ನಾಡು ಅಷ್ಟೇ ಅಲ್ಲ ಹೊರರಾಜ್ಯದ ಭಕ್ತರನ್ನು ಸಹ ಕಾಪಾಡುತ್ತಿದ್ದಾರೆ.

ನನ್ನ ಸಹೋದ್ಯೋಗಿ ಮಿತ್ರರು ಆಗಾಗ್ಗೆ ಈ ದೇವಾಲಯ ಮತ್ತು ಸ್ವಾಮಿಯ ಬಗ್ಗೆ ಹೇಳಿದ್ದರು .ಭೇಟಿ ನೀಡಲು ಆಗಿರಲಿಲ್ಲ .ಈ ಭಾನುವಾರ ಆತ್ಮೀಯರಾದ ಶಂಕರಾನಂದ ರವರ ಜೊತೆಯಲ್ಲಿ ಬೈಕ್ ಏರಿ ಅರೆಯೂರಿನ ಕಡೆ ಪಯಣ ಆರಂಭಿಸಿಯೇಬಿಟ್ಟೆವು. ಹೊನ್ನಾವರ ಹೈವೆಯ ಮೂಲಕ ಸಂಚರಿಸಿ ಮಲ್ಲಸಂದ್ರದಿಂದ ಎಡಭಾಗಕ್ಕೆ ತಿರುವು ಪಡೆದು ಪಯಣ ಮುಂದುವರೆಸಿದ ನಮಗೆ ಅರೆಮಲೆನಾಡಿನ ಪರಿಸರ ಮನಸೆಳೆಯಿತು ಅಡಿಕೆ ತೆಂಗು ತೋಟಗಳು ಹೊಂಬಾಳೆಯಿಂದ ಕಂಗೊಳಿಸುತ್ತಿದ್ದವು.ಆ ಹೊಂಬಾಳೆಯಿಂದ ಬರುವ ಸುವಾಸನೆ ಸವಿಯುವುದೇ ಒಂದು ಆನಂದ! ಅರ್ಧ ಗಂಟೆಯ ಬೈಕ್ ಸವಾರಿಯ ನಂತರ ಕೆರೆ ಏರಿಯ ಮೇಲೆ ಒಂದು ದೊಡ್ಡ ಗೋಪುರ ನಮಗೆ ಗೋಚರವಾಯಿತು . ಆ ಕಡೆ ತೆರಳಿದೆವು ಅದೇ ಅರೆಯೂರಿನ ಶ್ರೀ ವೈದ್ಯನಾಥೇಶ್ವರ ಸನ್ನಿಧಿ.
ತುಮಕೂರಿಗೆ ಬಂದು ಮೂರು ವರ್ಷ ಕಳೆದರೂ ನಗರದಿಂದ ಕೇವಲ ಹದಿನೆಂಟು ಕಿಲೋಮೀಟರ್ ದೂರದಲ್ಲಿರುವ ಇಂತಹ ಪವಿತ್ರ ಪುಣ್ಯಕ್ಷೇತ್ರ ನೋಡಿರಲಿಲ್ಲವಲ್ಲ ಎಂಬ ಭಾವನೆ ಕಾಡಿತು .
ಸ್ವಾಮಿಯ ದರ್ಶನ ಪಡೆದು ಕೃತಾರ್ಥರಾದ ನಾವು ಆ ಸನ್ನಿಧಿಯ ಬಗ್ಗೆ ಅಲ್ಲಿರುವ ಹಿರಿಯರನ್ನು ಮಾತನಾಡಿಸಿದಾಗ ಆಶ್ಚರ್ಯಕರ ಸಂಗತಿಗಳು ನಮಗೆ ತಿಳಿದವು.

ವೈದ್ಯನಾಥೇಶ್ವರಸ್ವಾಮಿ ದೇವಸ್ಥಾನವಿರುವ ಪ್ರದೇಶವು ಒಂದು ತಪೋಭೂಮಿಯಾಗಿದೆ. ಅರೆಯೂರಿನಲ್ಲಿರುವ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನ ಮತ್ತು ಶ್ರೀ ಹಾಲು ಮಲ್ಲೇಶ್ವರ ಸ್ವಾಮಿ ದೇವಸ್ಥಾನಗಳು ಸುಮಾರು ಒಂದು ಸಾವಿರ ವರ್ಷಗಳಿಗಿಂತಲೂ ಹಿಂದಿನವುಗಳು. ಆದರೆ ಈ ದೇವಸ್ಥಾನಗಳಿಗೆ ಸಂಬಂಧಿಸಿದಂತೆ ನಮಗೆ ಯಾವುದೇ ಶಿಲಾಶಾಸನವಾಗಲಿ, ಅಥವಾ ಅಧಿಕೃತ ಆಧಾರಿತ ಗ್ರಂಥಗಳಾಗಲಿ  ದೊರೆತಿರುವುದಿಲ್ಲ. ಆದರೆ ಅಂದಿನಿಂದ ಇಂದಿನವರೆವಿಗೂ ಮೌಖಿಕವಾಗಿ ಜನರ ಬಾಯಿಂದ ಬಾಯಿಗೆ ಬಂದು ಪ್ರಚಾರದಲ್ಲಿರುವ ಮಾಹಿತಿಗಳ ಪ್ರಕಾರ ಈ ದೇವಸ್ಥಾನಗಳು ಇರುವ ಪ್ರದೇಶವು ಮೊದಲು ದಟ್ಟವಾದ ಅರಣ್ಯ ಪ್ರದೇಶವಾಗಿತ್ತಂತೆ. ಇಲ್ಲಿ ಕಾಡು ಗೊಲ್ಲರು ಅಲ್ಲಲ್ಲಿ ವಾಸ ಮಾಡಿಕೊಂಡು ಇದ್ದರಂತೆ. ಹಿಮಾಲಯ ಪರ್ವತದ ಕಡೆಯಿಂದ ಶ್ರೀ ದಧೀಚಿ ಮಹರ್ಷಿ ಹಾಗೂ ಇತರ ಋಷಿಗಳು ಬಂದು ಇಲ್ಲಿ ಆಶ್ರಮ ಮಾಡಿಕೊಂಡು, ತಪಸ್ಸು ಮಾಡಿಕೊಂಡು ಇದ್ದರಂತೆ, ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನದಲ್ಲಿರುವ ಜ್ಯೋತಿರ್ಲಿಂಗುವನ್ನು ಪ್ರತಿಷ್ಠಾಪಿಸಿ ಒಂದಂಕಣದ ಚಿಕ್ಕದಾದ ಗರ್ಭಗುಡಿಯನ್ನು ಮಾತ್ರ ಕಟ್ಟಿದ್ದರಂತೆ. ಚೋಳ ರಾಜರ ಕಾಲದಲ್ಲಿ ದೇವಸ್ಥಾನವನ್ನು ವಿಸ್ತರಿಸಿ ಕಟ್ಟಿಸಿದರಂತೆ. ಶ್ರೀ ಹಾಲು ಮಲ್ಲೇಶ್ವರ ಸ್ವಾಮಿ ದೇವಸ್ಥಾನವಿರುವ ಕಡೆ ಒಂದು ದಿವ್ಯ ಔಷಧಿ ಮರ ಬೆಳೆದಿತ್ತಂತೆ. ಋಷಿಗಳ ಆಶ್ರಮಕ್ಕೆ ಬರುವ ರೋಗಿಗಳಿಗೆ ಋಷಿಗಳು ದಿವ್ಯ ಔಷಧದ ಮರದ ಎಲೆಗಳಿಂದ ಆಯುರ್ವೇದ ಔಷಧಿ ತಯಾರಿಸಿಕೊಟ್ಟು ಅವರ ಖಾಯಿಲೆಗಳನ್ನು ವಾಸಿ ಮಾಡುತ್ತಿದ್ದರಂತೆ.

ಭಕ್ತರು ಇಲ್ಲಿಗೆ ಬಂದು ದೇವರಿಗೆ ಪೂಜೆ-ಅಭಿಷೇಕ ಮಾಡಿಸಿ, ದೇವರಲ್ಲಿ "ನನ್ನ ಖಾಯಿಲೆ ವಾಸಿಯಾಗುತ್ತದೆಯೇ? ನನ್ನ ಇಷ್ಟಾರ್ಥಗಳು ಈಡೇರುತ್ತವೆಯೇ?" ಎಂಬ ಪ್ರಶ್ನೆಗಳನ್ನು ಮನಸ್ಸಿನಲ್ಲೇ ಕೇಳಿಕೊಂಡು ಅರ್ಚಕರಿಗೆ ದೇವರ ಮೇಲಣ ಪ್ರಸಾದ ಕೊಡುವಂತೆ ವಿನಂತಿಸಿದರೆ ಅರ್ಚಕರು ಭಕ್ತಿಯಿಂದ ಲಿಂಗುವಿನ ಮೇಲೆ ಇಟ್ಟಿರುವ ಬಿಡಿ ಹೂವುಗಳನ್ನು ಮೂರು ಬೆರಳಿನಲ್ಲಿ ಪ್ರಸಾದ ರೂಪದಲ್ಲಿ ತಂದುಕೊಡುತ್ತಾರೆ.
ಆಗ ನಮಗೆ ಪ್ರಸಾದವಾಗಿ ಬಂದ ಹೂವುಗಳು "ಬೆಸಸಂಖ್ಯೆ"ಯಲ್ಲಿ (Odd numbers) ಅಂದರೆ 1, 3, 5, 7, 9, .. ರಂತೆ ಇದ್ದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂದು ಅರ್ಥ. ಅದೇ "ಸಮಸಂಖ್ಯೆ"ಯಲ್ಲಿ (Even Numbers) ಅಂದರೆ 2, 4, 6, 8, .. ರಂತೆ ಹೂವುಗಳು ಬಂದರೆ ಖಾಯಿಲೆ ವಾಸಿಯಾಗುವುದಿಲ್ಲ ಅಥವಾ ಕಾರ್ಯ ಆಗುವುದಿಲ್ಲ.
ಆದರೂ ಬಿಡದೆ ಭಕ್ತರು ದೃಢಭಕ್ತಿಯಿಂದ ಆಗಾಗ್ಗೆ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿ ದೇವರಿಗೆ ಅಭಿಷೇಕ ಮಾಡಿಸುತ್ತಿದ್ದರೆ 5-6 ತಿಂಗಳಲ್ಲಿ ಶುಭ ಸೂಚನೆ ಕಂಡು ಬಂದು ದೇವರ ಅನುಗ್ರಹ ಆಗುತ್ತದೆ.

ವೈದ್ಯನಾಥೇಶ್ವರ ದರ್ಶನ ಪಡೆದು ಸನಿಹದಲ್ಲೇ ಇರುವ ಹಾಲು ಮಲ್ಲೇಶ್ವರ ದೇವಾಲಯಕ್ಕೆ ತರಳಿ ದೇವರ ಆಶೀರ್ವಾದ ಪಡೆದೆವು .ಅಲ್ಲಿ ಅರ್ಚಕರು ಕೆಲ ಮಾಹಿತಿಗಳನ್ನು ನೀಡಿದರು.
ದೇವಾಲಯದ ಜಾಗದಲ್ಲಿ ಒಂದು ದೈವಸರ್ಪ ವಾಸಿಸುತ್ತಿದ್ದು ಅದು ಶ್ರೀ ಕ್ಷೇತ್ರವನ್ನು ಕಾಯುತ್ತಿರುತ್ತದೆ ಎಂದು ಹೇಳಲಾಗುತ್ತಿದೆ. ಈ ಸರ್ಪವು ಶ್ರೀ ಹಾಲು ಮಲ್ಲೇಶ್ವರಸ್ವಾಮಿ ದೇವಸ್ಥಾನದಿಂದ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನಕ್ಕೆ ರಾತ್ರಿ ವೇಳೆಯಲ್ಲಿ ಕೆರೆಯ ನೀರಿನ ಮೇಲೆ ಈಜಾಡಿಕೊಂಡು ಬಂದು ಸ್ವಲ್ಪ ಕಾಲ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇದ್ದು ಹೋಗುತ್ತದೆ. ಹೀಗೆ ಬರುವುದನ್ನು ಅರೆಯೂರಿನ ಅನೇಕ ಜನ ನೋಡಿರುತ್ತಾರೆ.  ಒಮ್ಮೊಮ್ಮೆ ಅದು ಜ್ಯೋತಿರ್ಲಿಂಗದ  ಸುತ್ತಲೂ ಸುತ್ತಿಕೊಂಡು ಹೆಡೆ ಬಿಚ್ಚಿ ದೊಡ್ಡದಾಗಿ ಕಾಣುತ್ತಿರುತ್ತದಂತೆ. ಮಿಕ್ಕ ಸಮಯದಲ್ಲಿ ಈ ಸರ್ಪವು ಸಾಮಾನ್ಯ ಸಣ್ಣ ಹಾವಿನಂತೆ ಕಾಣುತ್ತದೆಯಂತೆ.
ಶ್ರೀ ವೈದ್ಯನಾಥೇಶ್ವರ ಸ್ವಾಮಿಯ ಪೂಜೆ ಮಾಡುವ ಅರ್ಚಕರು ದೇವಾಲಯಕ್ಕೆ ಬರುವಾಗ ಅವರಿಗೇ ಗೊತ್ತಿಲ್ಲದೆ ಏನಾದರೂ ಅಂಟು ಮುಂಟು  ಮೈಲಿಗೆ ಉಂಟಾದರೇ ಈ ಸರ್ಪವು ಅವರಿಗೆ ಗೋಚರಿಸಿ ದೇವಸ್ಥಾನದ ಬಾಗಿಲು ತೆಗೆಯದಂತೆ ದೇವಸ್ಥಾನದ ಒಳಗಡೆಯಿಂದ ಸರ್ಪವು ಬಾಗಿಲಿಗೆ ಅಡ್ಡಲಾಗಿ ಮಲಗಿರುತ್ತದೆ. ಇದು ಅರ್ಚಕರಿಗೆ ಸರ್ಪವು ಕೊಡುವ ಎಚ್ಚರಿಕೆ. ಆಗ ಅರ್ಚಕರು ಮತ್ತೆ ಸ್ನಾನ ಮಾಡಿಕೊಂಡು ಮಡಿಯಿಂದ ಮತ್ತೆ ನೈವೇದ್ಯವನ್ನು  ಮಾಡಿಕೊಂಡು ಬಂದು ತಪ್ಪಾಯಿತೆಂದು ಬಾಗಿಲಿನ ಹೊರಗಡೆ ಕರ್ಪೂರ ಹಚ್ಚಿ ಕ್ಷಮೆಯಾಚಿಸಿ ಬಾಗಿಲು ತೆರೆದರೆ ಸರ್ಪ ಹೊರಟು ಹೋಗುತ್ತದೆ.  

1986 ನೇ ಇಸವಿಯಲ್ಲಿ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರದ ಕೆಲಸ ನಡೆಯುತ್ತಿದ್ದಾಗ ನಡೆದ ಘಟನೆಯನ್ನು ನೋಡಿದರೆ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವರೇ ತನ್ನ ಸೇವಾಕಾರ್ಯಗಳನ್ನು ಭಕ್ತರಿಂದ ಮಾಡಿಸಿಕೊಳ್ಳುತ್ತಿರುತ್ತಾನೆಂದು ಹೇಳಬಹುದು. ಅದು ಹೇಗೆಂದರೆ ಸಿದ್ದಪ್ಪನಪಾಳ್ಯದ ಭಕ್ತ ಶ್ರೀ ಗುರುಬಸಪ್ಪನವರು ತಮ್ಮ ಸ್ವಇಚ್ಛೆಯಿಂದ ದೇವಸ್ಥಾನದ ಜೀರ್ಣೋದ್ಧಾರದ ಕೆಲಸವನ್ನು ಮಾಡಿಸುತ್ತಿದ್ದರು. ಇವರಿಗೆ ಕರಡಗೆರೆಯ ಶ್ರೀ ಎಸ್.ವಿ. ಶಂಕರಪ್ಪನವರು   ಸಹಕಾರ ಹಾಗೂ ಸಹಾಯ ನೀಡುತ್ತಿದ್ದರು. ಒಂದು ಸಾರಿ ಶ್ರೀ ಗುರುಬಸಪ್ಪನವರಿಗೂ ಅರೆಯೂರಿನ ಗ್ರಾಮಸ್ಥರಿಗೂ ಭಿನ್ನಾಭಿಪ್ರಾಯಗಳು ಬಂದು ಶ್ರೀ ಗುರುಬಸಪ್ಪನವರು ತಾನು ಮಾಡಿಸುತ್ತಿದ್ದ ದೇವಸ್ಥಾನದ ಜೀರ್ಣೋದ್ಧಾರದ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ, ತಾನು ನಾಳೆಯಿಂದ ಕೆಲಸವನ್ನು ಮಾಡಿಸುವುದಕ್ಕೆ ದೇವಸ್ಥಾನಕ್ಕೆ ಬರುವುದಿಲ್ಲವೆಂದು ಹೇಳಿ ಹೊರಟುಹೋದರು.
ಬೆಳಗ್ಗೆ ಅರ್ಚಕರು ದೇವಸ್ಥಾನಕ್ಕೆ ಪೂಜೆ ಮಾಡುವುದಕ್ಕೆ ಬಂದು ನೋಡಿದಾಗ ಒಂದು ಸರ್ಪವು ದೇವಸ್ಥಾನದ ಬಾಗಿಲಿಗೆ ಅಡ್ಡಲಾಗಿ ತೆಕ್ಕೆ ಹಾಕಿಕೊಂಡು ಮಲಗಿದೆ. ಅರ್ಚಕರು ಊರಿನವರಿಗೆ ಈ ವಿಚಾರವನ್ನು ತಿಳಿಸಲಾಗಿ ಊರಿನವರು ಸಹ ಬಂದು ನೋಡಿದರು. ಗಲಾಟೆ ಮಾಡಿದರೂ ಸಹ ಸರ್ಪವು ಹೋಗುವ ಲಕ್ಷಣಗಳು ಕಾಣಲಿಲ್ಲವಾದ್ದರಿಂದ ಕೆಲವರು ಒಂದು ಹಿತ್ತಾಳೆ ಬೋಗಣಿಯಲ್ಲಿ ಹಾಲನ್ನು ತಂದಿಟ್ಟರು ಸರ್ಪವು ಹೆಡೆ ಎತ್ತಿ ನೋಡಿ ಹಾಲನ್ನು ಕುಡಿದು ಹಾಗೆಯೇ ಮಲಗಿತು. ಹೀಗೆ ಮೂರು ದಿವಸ ಸರ್ಪವು ಮುಷ್ಕರ ಮಾಡಿದಂತೆ ಮಲಗಿರುವುದನ್ನು ನೋಡಿದ ಶ್ರೀ ಗುರುಬಸಪ್ಪನವರು ತಾನು ಜೀರ್ಣೋದ್ಧಾರ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ ಹೋದುದರಿಂದ ಸರ್ಪವು ಈ ರೀತಿ ಬಂದು ಮಲಗಿರಬಹುದೆಂದು ಯೋಚಿಸಿ, ದೇವರಿಗೆ ಪೂಜೆ ಮಾಡಿಸಿ, ಕೆಲಸವನ್ನು  ಪೂರ್ಣಗೊಳಿಸುತ್ತೇನೆಂದು ಮಂಗಳಾರತಿಯನ್ನು ತೆಗೆದುಕೊಂಡ ತಕ್ಷಣ ಸರ್ಪವು ಚಲಿಸಿದಂತೆ ಕಾಣಿಸಿತು. ಆದರೆ ನೂರಾರು ಜನರು ನೋಡುತ್ತಿದ್ದರೂ ಸಹ ಯಾರೊಬ್ಬರ ಕಣ್ಣಿಗೂ ಕಾಣಿಸದಂತೆ ಮಾಯವಾಯಿತಂತೆ.

ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನವಿರುವ ಜಾಗದಲ್ಲಿ ಸಾವಿರಾರು ವರ್ಷಗಳ ಹಿಂದೆ ವಾಸಿಸುತ್ತಿದ್ದ ಋಷಿಗಳ ತಪೋತರಂಗಗಳ ಪ್ರಭಾವ ಈಗಲೂ ಇರಬಹುದಾದ ಸಾಧ್ಯತೆ ಇದ್ದು ಋಷಿ ಮುನಿಗಳು ಈಗಲೂ ಇಲ್ಲಿ ಸೂಕ್ಷ್ಮ ಶರೀರಧಾರಿಗಳಾಗಿ ವಾಸಿಸುತ್ತಿದ್ದಾರೆ ಎಂಬ ಪ್ರತೀತಿಯಿದೆ. ಅದರಲ್ಲೂ ಮುಖ್ಯವಾಗಿ ಇಲ್ಲಿರುವ ಜ್ಯೋತಿರ್ಲಿಂಗದಲ್ಲಿನ ವಿಶ್ವಸ್ಥ ದಿವ್ಯ ಶಕ್ತಿಯ (Cosmic Divine Power) ಹೆಚ್ಚಿನ ಪ್ರಭಾವವಿದೆ. ಋಷಿ ಮುನಿಗಳ ತಪೋತರಂಗಗಳ ಹಾಗು ಜ್ಯೋತಿರ್ಲಿಂಗದಲ್ಲಿನ ವಿಶ್ವಸ್ಥ ದಿವ್ಯ ಶಕ್ತಿಯ ಪ್ರಭಾವಗಳಿಂದ ರೋಗಾಣುಗಳು ನಾಶವಾಗಿ ಖಾಯಿಲೆಗಳು ವಾಸಿಯಾಗುತ್ತವೆ ಎಂದು ಜ್ಞಾನಿಗಳು ಹೇಳುತ್ತಾರೆ. 

ಹಿಂದಿನ ಕಾಲದಲ್ಲಿ ಈ ಗ್ರಾಮದಲ್ಲಿ ಖಾಯಿಲೆಯಾದವರನ್ನು ಕರೆತಂದು ಈ ದೇವಸ್ಥಾನದ ಪ್ರಾಂಗಣದಲ್ಲಿ ಹತ್ತಾರು ದಿವಸ ವಾಸವಾಗಿದ್ದು ತಮ್ಮ ಖಾಯಿಲೆಗಳನ್ನು ವಾಸಿ ಮಾಡಿಕೊಂಡು ಹೋಗುತ್ತಿದ್ದರು ಎಂದು ಸ್ಥಳಿಯರು ಹೇಳುತ್ತಾರೆ.

ದೇವಾಲಯದ ದರ್ಶನ ಪಡೆದು  ಸ್ಥಳ ಮಹಾತ್ಮೆ ತಿಳಿದು ನಿತ್ಯ ಅನ್ನ ದಾಸೋಹ ಭವನದಲ್ಲಿ ಪ್ರಸಾದ ಸ್ವೀಕರಿಸಿದೆವು .ಉತ್ತಮ ಗುಣಮಟ್ಟದ ಪ್ರಸಾದ  ಮತ್ತು ಸ್ವಚ್ಚತೆಯ ವಾತಾವರಣ ಗಮನ ಸೆಳೆಯಿತು.

ಅರೆಯೂರಿನ ವೈದ್ಯನಾಥೇಶ್ವರ ದೇವಾಲಯ ಸಂಕೀರ್ಣ ದರ್ಶನದ ನಂತರ ಮನಸ್ಸಿಗೆ ನೆಮ್ಮದಿ ಉಂಟಾಗಿ  ಮನೆಯ ಕಡೆ ಹೊರಟ ನಾವು ಮತ್ತೊಮ್ಮೆ ನಮ್ಮ ಕುಟುಂಬದ ಜೊತೆಯಲ್ಲಿ ಸ್ವಾಮಿಯ ಸನ್ನಿಧಿಗೆ ಬರಲು ತೀರ್ಮಾನಿಸಿದೆವು.ನೀವೂ ಒಮ್ಮೆ ಈ ವೈದ್ಯನಾಥೇಶ್ವರ ಸನ್ನಿಧಿಗೆ ಭೇಟಿ ನೀಡಲು ಬಯಸಿದರೆ ತುಮಕೂರಿನಿಂದ ಗಂಟೆಗೊಮ್ಮೆ ರಾಜ್ಯ ರಸ್ತೆ ಸಾರಿಗೆ ಬಸ್ ವ್ಯವಸ್ಥೆ ಇದೆ. ಸ್ವಂತ ವಾಹನದಲ್ಲಿ ಪ್ರಯಾಣಿಸುವವರು  ತುಮಕೂರಿನಿಂದ ಹೊನ್ನಾವರ ಹೈವೆಯಲ್ಲಿ ಪ್ರಯಾಣಿಸಿ   ಮಲ್ಲಸಂದ್ರ ಗ್ರಾಮದಲ್ಲಿ ಎಡಕ್ಕೆ ಚಲಿಸಿದರೆ ಅರೆಯೂರಿನ ವೈದ್ಯನಾಥೇಶ್ವರ ಸನ್ನಿಧಿ ತಲುಪಬಹುದು.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು


21 March 2023

ಹೂ ಮುತ್ತು..

 


ಹೂ ಮುತ್ತು 


ನನ್ನವಳು ಪ್ರೀತಿಸಲು

ಕೇಳುವುದಿಲ್ಲ ಹೊತ್ತು ಗೊತ್ತು |

ನಾ ಕಂಡಾಗಲೆಲ್ಲ ಅವಳು

ಕೇಳುವುದೊಂದೆ 

ನೀಡಿಬಿಡು ಹಣೆಗೊಂದು ಹೂ ಮುತ್ತು ||


ಕಾನ‌ನ

 



ಕಾನನ 


ಜೀವಿಗಳ ಒಳಿತಿಗಾಗಿ

ನಮ್ಮ ಉಳಿವಿಗಾಗಿ 

ನಿಲ್ಲಿಸಬೇಕಿದೆ ಮರಗಳ ಹನನ|

ಎಲ್ಲರೂ ಒಂದೊಂದು

ಗಿಡವ ನೆಡುತ ,ಉಳಿಸಿ

ಬೆಳೆಸಬೇಕಿದೆ ಕಾನನ ||


(ಇಂದು ವಿಶ್ವ ಅರಣ್ಯ ದಿನ )

ಸಿಹಿಜೀವಿ

ಸಿ ಜಿ ವೆಂಕಟೇಶ್ವರ





ಮಾರ್ಚ್ 21.

 


ಮಾರ್ಚ್ 21 ರ ವಿಶೇಷ.

ಖಗೋಳವೆಂದರೆ ವಿಸ್ಮಯ! ತಿಳಿದಷ್ಟೂ ಕುತೂಹಲಕಾರಿ ಪ್ರತಿದಿನವೂ ಒಂದೊಂದು ವಿಶೇಷವಾದ ಸಂಗತಿಗಳು ಖಗೋಳದಲ್ಲಿ ಸಂಭವಿಸುತ್ತಾ ನಮ್ಮನ್ನು ಸೆಳೆಯುತ್ತವೆ.
ಅಂತಹ ವಿಶೇಷ ವಿದ್ಯಮಾನಗಳಲ್ಲಿ ಒಂದು ವಸಂತ ವಿಷುವ (ವಿಷುವತ್ ಸಂಕ್ರಾಂತಿ) ಪ್ರತಿ ವರ್ಷ ಭೂಮಿ- ಸೂರ್ಯನ ಬಂಧನದಿಂದ ಸಂಭವಿಸುವ ಈ ವಿದ್ಯಮಾನ ಮಾ.21 ರಂದು ಸಂಭವಿಸಲಿದೆ.
ವಿಷುವತ್ ಸಂಕ್ರಾಂತಿಯು ಒಂದು ವಿಶೇಷ ಖಗೋಳ ವಿದ್ಯಮಾನವಾಗಿದ್ದು, ಈ ದಿನ ಭೂಮಿಯ ಮೇಲೆ ಹಗಲು ಹಾಗೂ ರಾತ್ರಿ ಅವಧಿ ಸಮನಾಗಿರುತ್ತದೆ. ವರ್ಷಕ್ಕೆ ಎರಡು ಬಾರಿ, ಮಾರ್ಚ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಈ ವಿದ್ಯಮಾನ ಸಂಭವಿಸುತ್ತದೆ. ವಿಷುವತ್ ಸಂಕ್ರಾಂತಿಯಂದು ಸೂರ್ಯನು ನಿಖರವಾಗಿ
ಪೂರ್ವ ದಿಕ್ಕಿನಲ್ಲಿ ಉದಯಿಸಿ ಪಶ್ಚಿಮ ದಿಕ್ಕಿನಲ್ಲಿ ಅಸ್ತವಾಗುತ್ತಾನೆ ಮತ್ತು ಈ ದಿನ ಸೂರ್ಯನ ಬೆಳಕು ಭೂಮಿಯ ಸಮಭಾಜಕ ವೃತ್ತದ ಮೇಲೆ ನೇರವಾಗಿ ಬೀಳುತ್ತದೆ. ವಸಂತ ವಿಷುವತ್ ಸಂಕ್ರಾಂತಿಯ ದಿನದಂದು ಸೂರ್ಯನು ಉತ್ತರ ದಿಕ್ಕಿನಿಂದ ದಕ್ಷಿಣ ದಿಕ್ಕಿನೆಡೆಗೆ ಚಲಿಸಲು ಪ್ರಾರಂಭಿಸುವುದರಿಂದ ಉತ್ತರ ಗೋಳಾರ್ಧದಲ್ಲಿ ವಸಂತ ಋತು ಆರಂಭವಾಗುತ್ತದೆ.
ಖಗೋಳ ಸಮಭಾಜಕ (ವಿಷುವವೃತ್ತ), ಕ್ರಾಂತಿ ವೃತ್ತವು
ಎರಡು ಬಿಂದುಗಳಲ್ಲಿ ಛೇದಿಸುತ್ತದೆ. ಈ ಬಿಂದುಗಳೇ ವಿಷುವದ್ವಂದುಗಳು.
ಸೂರ್ಯನು ಈ ಬಿಂದುವನ್ನು ಸಂಕ್ರಮಿಸಿ, ಪ್ರತಿ ದಿನ ಆಕಾಶದಲ್ಲಿ ಉತ್ತರದ ಕಡೆ ಚಲಿಸುವುದು ನೋಡಬಹುದು (ಉತ್ತರ ಅಯನ).
ವಿಶ್ವಾದ್ಯಂತ ವಿಷುವತ್ ಸಂಕ್ರಾಂತಿಯನ್ನು ಮಾರ್ಚ್ ಈಕ್ವಿನಾಕ್ಸ್ ಎಂದು ಕರೆಯುತ್ತಾರೆ.
ಭೂಗೋಳಾರ್ಧದ ಮೇಲ್ಬಾಗದವರು ಈ ದಿನವನ್ನು ವರ್ನಲ್ ಈಕ್ವಿನಾಕ್ಸ್ ಎಂದು ಕೂಡಾ ಕರೆಯುತ್ತಾರೆ .

ಸಿ ಜಿ ವೆಂಕಟೇಶ್ವರ
ತುಮಕೂರು

20 March 2023

ಮೊಳೆಯಲಿ ಸದ್ಭಾವನೆ

 


*ಮೊಳೆಯಲಿ ಸದ್ಭಾವನೆ*


ಅಹರ್ನಿಶಿ ಭಜಿಸುವೆನು ದೇವ

ನೀಗು ಜಗದ ಜೀವಿಗಳ ನೋವ

ಅಳಿಯಲಿ ಎಲ್ಲೆಡೆ ದುರ್ಭಾವನೆ 

ಮೊಳೆಯಲಿ ಸರ್ವರಲಿ ಸದ್ಭಾವನೆ 


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು


19 March 2023

ತಾಳಿದವನು ಬಾಳಿಯಾನು...

 


ತಾಳಿದವನು ಬಾಳಿಯಾನು 


ಮದುವೆಯಾಗಲು ಹಾತೊರೆಯುವವನು

ಯೋಚಿಸುವುದೊಂದೆ

ತಾಳಿಕಟ್ಟಿದವನು ಬಾಳಿಯಾನು |

ಮದುವೆಯಾದವನು ಸಲಹೆ

ಕೊಡುವುದೊಂದೆ

ತಾಳಿದವನು ಬಾಳಿಯಾನು||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

17 March 2023

ಸ್ನೇಹ ಸಮ್ಮಿಲನ

 



*ಸ್ನೇಹ ಸಮ್ಮಿಲನ*


ಬೇಡವೆಂದರೂ ನೆನಪಾಗುತ್ತದೆ

ಬಾಲ್ಯದಿ ಗೆಳಯರೊಡಗೂಡಿ

ಆಡಿ ಹಾಡಿ ನಲಿದ ದಿನ |

ಹಾತೊರೆಯುತ್ತಿದೆ ಮನ 

ಎಂದು ಆಗುವುದೋ

ಸ್ನೇಹ ಸಮ್ಮಿಲನ ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

14 March 2023

ಕಾಡತಾವ ನೆನೆಪು...

 ನಿರಾಭರಣ ಸುಂದರಿಯಾದರೂ

ಕಡಿಮೆಯೇನಲ್ಲ ನಿ‌ನ್ನ

ವಯ್ಯಾರ ಒನಪು|

ಬ್ಯಾಡವೆಂದರೂ ಬಂದು

ಬಂದು ಕಾಡತಾವ ನೆನೆಪು||


ಸಿಹಿಜೀವಿ 


ಮದ್ಯ ಪ್ರದೇಶ

 ಮದ್ಯ ಪ್ರದೇಶ 


ಬಾರ್ ಗಳ ಮುಚ್ಚಲು 

ಹೊಸ ಆದೇಶ ಮಾಡಿದೆ ಮಧ್ಯ ಪ್ರದೇಶ |

ಮನೆ  ಮಾತ್ರ ಕುಡಿಯುವ ತಾಣ

ಅದುವೇ ಮದ್ಯ ಪ್ರದೇಶ ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


(ಮಧ್ಯ ಪ್ರದೇಶ ರಾಜ್ಯದಲ್ಲಿ ಬಾರ್ ಮುಚ್ಚಿ ,ಮದ್ಯ ಸೇವಿಸುವವರು  ಮನೆ ಗೆ ಮದ್ಯ ಕೊಂಡೊಯ್ಯಲು ಮಾಡಿದ ಆದೇಶ) 


09 March 2023

ಅಪ್ಸರೆ.

 ಅಪ್ಸರೆ 


ಆಸೆ ಪಟ್ಟೆನು ಮಾತನಾಡಿಸಲು

ಗಗನದ ತಾರೆ|

ಕನಸಲಿ ಬಂದು ಮುತ್ತನಿಟ್ಟಳು 

ದೇವಲೋಕದ ಅಪ್ಸರೆ ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಎರಡು ಹಾಯ್ಕುಗಳು




ಅರಿಕೆಯೊಂದೆ

ಭಗವಂತ ಕಾಪಾಡು

ಈ ಭುವಿಯನು 



ಹಾರಾಟವೇಕೆ?

ಹರಿಯೇ ಸರ್ವಶಕ್ತ 

ಅರಿವಿರಲಿ





ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು


05 March 2023

ನಗುವೆಂಬ ಆಭರಣ.


 


ನಗುವೇ ಆಭರಣ 


ಕಳೆದುಕೊಂಡರೆ ಅತಿಯಾಗಿ

ಚಿಂತಿಸಬೇಡ ಅಂತಸ್ತು, ಹಣ |

ಕಳೆದುಕೊಳ್ಳಲೇಬೇಡ ಮುಖದ

ಮೇಲಿನ ನಗುವೆಂಬ ಆಭರಣ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

02 March 2023

ಸುದಿನ

 


ಸುದಿನ 


ಪ್ರಾರ್ಥಿಸಬೇಕು ಅವನ ಪ್ರತಿದಿನ 

ನಾವಾಗಬೇಕು ದೇವರ ಅಧೀನ

ಅರ್ಪಿಸಿ ಕಾರ್ಯ ಮಾಡು ತನು ಮನ 

ಬಂದೇ ಬರುವುದು ನಿನಗೆ ಸುದಿನ .


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


01 March 2023

ಹಾಯ್ಕುಗಳು

 



ಎರಡು ಹಾಯ್ಕುಗಳು.




ಅಣಿಯಾಗಿರು

ಸತ್ಕಾರ್ಯವೆಸಗಲು

ಜನ್ಮ‌ಸಾರ್ಥಕ 



ಬಾಳು ,ಬಾಳಿಸು 

ಅತಿಯಾಸೆಯ ಬಿಡು 

ಬಾಳು ಹಸನು 


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು