31 March 2024

ಹತ್ತನೇ ತರಗತಿ ಜಸ್ಟ್ ಪಾಸ್, ಇಂದು ಡಿ ಸಿ.

 


ಹತ್ತನೇ ತರಗತಿ ಜಸ್ಟ್ ಪಾಸ್, ಇಂದು ಡಿ ಸಿ.



ಹತ್ತನೇ ತರಗತಿ ಮತ್ತು ಪಿ ಯು ಸಿ ಗಳಲ್ಲಿ ಮಕ್ಕಳಿಗೆ ಪಾಠ ಮಾಡುವಾಗ ಚೆನ್ನಾಗಿ ಓದುವ ಮಕ್ಕಳನ್ನು ಹುರಿದುಂಬಿಸುವ ಶಿಕ್ಷಕರು ಕಡಿಮೆ ಅಂಕಗಳನ್ನು ಗಳಿಸುವ ಮಕ್ಕಳನ್ನು ಕೆಲ ಶಿಕ್ಷಕರು ಅಷ್ಟೇ ಬಿಡು ನಿನ್ನ ಹಣೆಬರಹ ಎಂದು ಷರಾ ಬರೆದಬಿಡುವರು.ಆದರೆ ಇಲ್ಲೊಬ್ಬ ಸಾಧಕ ಹತ್ತನೆಯ ತಎರಗತಿಯಲ್ಲಿ ದಿದ್ದಾರಇಂಗ್ಲಿಷ್, ಗಣಿತ, ವಿಜ್ಞಾನ ವಿಷಯಗಳಲ್ಲಿ ಕೇವಲ 35 ಅಂಕಗಳಿಸಿ ಪಾಸಾದವರು ಈಗ ಭಾರತದ ಅತ್ಯುನ್ನತ ಪರೀಕ್ಷೆಯಾದ ನಾಗರೀಕ ಸೇವಾ ಪರೀಕ್ಷೆ ಪಾಸ ಮಾಡಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರೇ ಶ್ರೀ 

ತುಷಾರ್ ಸುಮೇರಾ 


ಅವರ ಜೀವನ ಕಥೆ ಅನೇಕರಿಗೆ ಸ್ಫೂರ್ತಿದಾಯಕವಾಗಿದೆ. ಇವರು 2012ರ ಬ್ಯಾಚ್ನ ಐಎಎಸ್ ಅಧಿಕಾರಿ. ಪ್ರಸ್ತುತ ಗುಜರಾತ್ನ ಭರೂಚ್ನ ಕಲೆಕ್ಟರ್ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ವರ್ಷ ಅವರ 10 ನೇ ತರಗತಿಯ ಅಂಕಪಟ್ಟಿ ಬಹಳ ವೈರಲ್ ಆಗಿತ್ತು. ತುಷಾರ್ ಸುಮೇರಾ ಇಂಗ್ಲಿಷ್, ಗಣಿತ ಮತ್ತು ವಿಜ್ಞಾನದಲ್ಲಿ ಕೇವಲ ಉತ್ತೀರ್ಣ ಅಂಕಗಳನ್ನಷ್ಟೇ ಗಳಿಸಿದ್ದರು. ಆದರೆ ವಿಶ್ವದ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್ಸಿ ಯನ್ನು ಪಾಸ್ ಮಾಡಿ ಯಶಸ್ವಿಯಾಗಿದ್ದಾರೆ.

 ಕಳೆದ ವರ್ಷ ತುಷಾರ್ ಸುಮೇರಾ ಅವರ 10 ನೇ ತರಗತಿಯ ಅಂಕಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿತ್ತು.  ಅದರಲ್ಲಿ ಅವರು ಇಂಗ್ಲಿಷ್ನಲ್ಲಿ 35, ಗಣಿತದಲ್ಲಿ 36 ಮತ್ತು ವಿಜ್ಞಾನದಲ್ಲಿ ಕೇವಲ 38 ಅಂಕಗಳನ್ನು ಗಳಿಸಿದ್ದಾರೆ.  

ಆರಂಭದಲ್ಲಿ ಸರಾಸರಿಗಿಂತ ಕಡಿಮೆ ವಿದ್ಯಾರ್ಥಿಯಾಗಿದ್ದರೂ, ಅವರು UPSC ಉತ್ತೀರ್ಣರಾಗಿರುವುದು ದೊಡ್ಡ ಸಾಧನೆಯಾಗಿದೆ.   100ರಲ್ಲಿ ಇಂಗ್ಲಿಷ್ನಲ್ಲಿ 35 ಮತ್ತು ಗಣಿತದಲ್ಲಿ 36 ಅಂಕಗಳನ್ನು ಪಡೆದಾಗ ಇಡೀ ಊರ ಜನರು ಮತ್ತು  ಶಾಲೆಯಲ್ಲಿ ಶಿಕ್ಷಕರು ಎಂದಿನಂತೆ ಸಿದ್ದ ಮಾದರಿಯ ಬೈಗುಳ ಸುರಿಸಿ ನೀನು ಭವಿಷ್ಯದಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ತೀರ್ಮಾನಕ್ಕೆ ಬಂದಿದ್ದರು.  

ತುಷಾರ್ ಸುಮೇರಾ ಅವರು ಕಲಾ ಪದವಿ ಪಡೆದ ನಂತರ ಶಿಕ್ಷಕರಾಗಿ ಕೆಲಸ ಮಾಡಿದರು. ಅವರು 2012 ರಲ್ಲಿ UPSC ಬರೆದು ಪಾಸ್ ಆದರು.

ಅದೇ ಊರ ಜನ ಇವರನ್ನು ಕರೆದು ಸನ್ಮಾನ ಮಾಡಿದರು. ಅವರ ಸ್ವಯಂ ಅಧ್ಯಯನ, ಸತತ ಪ್ರಯತ್ನದಿಂದಲೇ ಯಶಸ್ಸು ಪಡೆದು ಇತರರಿಗೆ ಸ್ಪೂರ್ತಿಯಾಗಿದ್ದಾರೆ. ಕಡಿಮೆ ಅಂಕ ಪಡೆದಾಗ ದುಡುಕಿನ ನಿರ್ಧಾರ ತೆಗೆದುಕೊಳ್ಳುವ ವಿದ್ಯಾರ್ಥಿಗಳು, ಯಾವುದೋ ಕಾರಣದಿಂದಾಗಿ ಮಕ್ಕಳು ಚೆನ್ನಾಗಿ ಓದದೇ ಇರುವಾಗ ಅನವಶ್ಯಕ ಟೀಕೆ ಮಾಡಿ ನಿಷ್ಪ್ರಯೋಜಕ ಎಂಬ ಬಿರುದು ನೀಡುವ ಪಾಲಕರು ತುಷಾರ್ ರವರ ಜೀವನದ ಯಶೋಗಾಥೆಯನ್ನು ಒಮ್ಮೆ ಓದಲೇಬೇಕು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529


ಕಲ್ಮುರುಡೇಶ್ವರನ ಬಿಲ್ವ ವನ




 


ಕಲ್ಮುರುಡೇಶ್ವರನ ಬಿಲ್ವ ವನ  


ಚಿಕ್ಕಮಗಳೂರಿನ ನಿಸರ್ಗದ ಒಡಲಲ್ಲಿ ಪ್ರಾಕೃತಿಕ ಸೌಂದರ್ಯವನ್ನು ಸವಿಯಲು ಹೊರಟ ನಮ್ಮ ಸಮಾನ ಮನಸ್ಕ ತಂಡ ಮೊದಲು ಭೇಟಿ ನೀಡಿದ್ದು ಕಡೂರು ತಾಲೂಕಿನ ಸಖರಾಯಪಟ್ಟಣದ " ಕಲ್ಮುರುಡೇಶ್ವರ ದೇವಾಲಯ " ಕ್ಕೆ  ದೇವಾಲಯದ ಶಿಲ್ಪಕಲೆ ವಿಶೇಷವಾಗಿ ನಮ್ಮ ಕಣ್ಮನ ಸೆಳೆಯುತ್ತದೆ. ದೇವರ ಆಶೀರ್ವಾದ ಪಡೆದು ಹೊರಬಂದ ನಮಗೆ ಮತ್ತೊಂದು ಅಚ್ಚರಿ ಕಾದಿತ್ತು! ದೇವಳದ ಸುತ್ತಲೂ ಎತ್ತ ನೋಡಿದಡತ್ತ ಬಿಲ್ವ ಪತ್ರೆ ಮರಗಳು.ಒಂದಲ್ಲ ಎರಡಲ್ಲ ನೂರಲ್ಲ  ಹತ್ತತ್ತರ ಸಾವಿರ ಬಿಲ್ವ ಮರಗಳು ಅಲ್ಲಿ ಕಾಣಸಿಗುತ್ತವೆ ಎಂದು ಸ್ಥಳೀಯರು ಮಾಹಿತಿಯನ್ನು ನೀಡಿದರು.

ಈ   ಬಿಲ್ವಪತ್ರೆ ಮರಗಳನ್ನ ಯಾರೊಬ್ಬರು ನೆಟ್ಟಿಲ್ಲ, ಬೆಳೆಸಿಲ್ಲ. ಈ ಬಿಲ್ವಪತ್ರೆಯ ಪಾರ್ಕ್ ಶಿವನ ತವರೆಂಬುದು ಭಕ್ತರ ನಂಬಿಕೆ. ಈ 

ಬಿಲ್ವಪತ್ರೆಯ ವನ ಹುಟ್ಟಿರೋದಕ್ಕೆ ಒಬ್ಬೊಬ್ಬರು ಒಂದೊಂದು ಕಥೆ ಹೇಳುತ್ತಾರೆ. ಸುಮಾರು 800 ವರ್ಷಗಳ ಹಿಂದೆ ಸನ್ಯಾಸಿಯೊಬ್ಬರು ಇಲ್ಲಿನ ಮಠದ ಬಳಿ ತಪಸ್ಸಿಗೆ ಕುಳಿತ್ತಿದ್ದರಂತೆ   ಆಗ ಪ್ರಶಾಂತತೆಗಾಗಿ ತನ್ನ ಕೊರಳಲ್ಲಿದ್ದ ರುದ್ರಾಕ್ಷಿ ಸರವನ್ನ ಋಷಿ ಮುನಿಗಳು ಚಿಮ್ಮಿದರಂತೆ, ಇದರಿಂದ ಬಿದ್ದ ರುದ್ರಾಕ್ಷಿಗಳಿಂದಲೇ ಸಾವಿರಾರು ಬಿಲ್ವಪತ್ರೆಯ ಮರಗಳು ಬೆಳೆದು ನಿಂತು, ಬಿಲ್ವವನ ನಿರ್ಮಾಣವಾಯಿತೆಂಬುದು ಸ್ಥಳಿಯ ನಂಬಿಕೆ. ಇನ್ನೂ ಹಲವರು ವೀರಶೈವ ಧರ್ಮದ ಗುರುಗಳಾದ ಮರುಳಸಿದ್ದರು ಇಲ್ಲಿ ಐಕ್ಯರಾಗಿರುವುದರಿಂದ ಕಲ್ಮರಡಿ ಮಠದ ಸುತ್ತಲೂ ಬಿಲ್ವಮರಗಳು ಬೆಳೆದು ನಿಂತಿವೆ ಎಂದು ನಂಬಿಕೊಂಡಿದ್ದಾರೆ. ಹತ್ತಾರು ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿರೋ ಇಲ್ಲಿನ ಬಿಲ್ವಮರಗಳನ್ನ ಯಾರೂ ಎಣಿಸಬಾರದಂತೆ. ಹಿರಿಯರ ಪ್ರಕಾರದ ಇಲ್ಲಿನ ಮರಗಳನ್ನ ಯಾರೂ ನೆಟ್ಟು ಬೆಳೆಸಿದ್ದಲ್ಲವಂತೆ. ಜೊತೆಗೆ ಇಲ್ಲಿರೊ ಮರಗಳಿಗೆ ಯಾರೂ ಗೊಬ್ಬರ, ನೀರನ್ನ ಹಾಕಿ ಪೋಷಣೆ ಮಾಡುತ್ತಿಲ್ಲ. ಆದರೂ ಕೂಡ ಇಲ್ಲಿ ಬಿಲ್ವ ಮರಗಳು ಬೃಹದಾಕಾರವಾಗಿ ಬೆಳೆದು ನಿಂತಿವೆ. 

  ಕಲ್ಮರಡಿ ಮಠದಲ್ಲಿ ದೈವಿ ಶಕ್ತಿಯಿಂದ ಬಿಲ್ವಮರಗಳು ಹುಟ್ಟಿಕೊಂಡಿವೆ ಎಂಬುದು ಭಕ್ತರ ನಂಬಿಕೆ. ಆದ್ರೆ, ಮಣ್ಣಿನಲ್ಲಿ ಹೆಚ್ಚು ಗಂಧಕದ ಅಂಶವಿರುವಲ್ಲಿ ಈ ಅಪರೂಪದ ಮರಗಳು ಹುಟ್ಟಿ ಬೆಳೆಯುತ್ತವೆ ಅನ್ನೋದು ವೈಜ್ಞಾನಿಕ ಕಾರಣ. ಆದ್ರೆ, ಈ ಮರಗಳನ್ನ ಜನಸಾಮಾನ್ಯರು ನೆಟ್ಟಿ ಬೆಳೆಸೋದು ಅಸಾಧ್ಯ. ಈ ಮರದಡಿಯಲ್ಲಿ ವಿಹರಿಸಿದರೆ ಆರೋಗ್ಯ ವೃದ್ಧಿಯಾಗುತ್ತಂತೆ. ನಾವು ಸಹ ಕೆಲ ಕಾಲ ಆ ವನದಲ್ಲಿ ವಿಹರಿಸಿದೆವು.  ಸುತ್ತಮುತ್ತಲಿನ ಜನರು ಮತ್ತು ಭಕ್ತರು ತಮ್ಮ ವಿಶ್ರಾಂತಿ ಸಮಯದಲ್ಲೆಲ್ಲಾ ಇಲ್ಲಿಗೆ ಬಂದು ವಿಹರಿಸುತ್ತಾರೆ. ಕಲ್ಮುರುಡೇಶ್ವರ ಸ್ವಾಮಿ ಭಕ್ತರ ಇಷ್ಟಾರ್ಥಗಳನ್ನೆಲ್ಲಾ ಈಡೇರಿಸುತ್ತಾನೆ ಎಂಬ ನಂಬಿಕೆ. ಅದಕ್ಕಾಗಿಯೇ ದೂರದೂರಿಂದಲೂ ಭಕ್ತರ ದಂಡೇ ಹರಿದುಬರುತ್ತಿದೆ. ಶಿವಪೂಜೆಗೆ ಬಿಲ್ವಪತ್ರೆ ಶ್ರೇಷ್ಠವಾಗಿರೋದ್ರಿಂದ ಶಿವರಾತ್ರಿಯಂದು ಭಕ್ತರು ಬಿಲ್ವಪತ್ರೆಯ ಮರವೇರಿ ಪತ್ರೆಯನ್ನ ಕೊಯ್ದು ದೇವರಿಗೆ ಸಮರ್ಪಿಸಿ ಧನ್ಯತಾ ಭಾವ ವ್ಯಕ್ತಪಡಿಸುತ್ತಾರೆ.

ಪ್ರಮುಖ ಆಧ್ಯಾತ್ಮಿಕ ಕೇಂದ್ರವಾಗಿರೋ ಕಲ್ಮರಡಿ ಮಠಕ್ಕೆ ಕೇವಲ ಚಿಕ್ಕಮಗಳೂರಿನ ಭಕ್ತರಷ್ಟೆ ಇಲ್ಲ. ರಾಜ್ಯದ ಮೂಲೆ-ಮೂಲೆಗಳಿಂದಲೂ ಭಕ್ತರ ಮಾಹಾಪುರವೇ ಹರಿದು ಬರುತ್ತಿದೆ. ಸಖರಾಯಪಟ್ಟಣ ಸುತ್ತಮುತ್ತಲಿನ ಗ್ರಾಮಸ್ಥರು ಯಾವುದೇ ಕೆಲಸ ಮಾಡಬೇಕಾದರೂ ಕಲ್ಮುರುಡೇಶ್ವರ ಪ್ರಸಾದ ಪಡೆದು, ಅನುಮತಿ ಕೇಳಿಯೇ ಮುಂದಿನ ಹೆಜ್ಜೆ ಇಡುವುದು. ಇನ್ನು ಕ್ಷೇತ್ರದಲ್ಲಿ ಮರುಳಸಿದ್ದೇಶ್ವರನೂ ಐಕ್ಯವಾಗಿರೋದ್ರಿಂದ ಕ್ಷೇತ್ರದಲ್ಲಿ ತ್ರಿಕಾಲ ಪೂಜೆ, ಕಾರ್ತಿಕಾ ಮಾಸದಲ್ಲಿ ಪಲ್ಲಕ್ಕಿ ಉತ್ಸವ ಅದ್ಧೂರಿಯಾಗಿ ನಡೆಯುತ್ತವೆ. ಇಲ್ಲಿನ ಕಲ್ಮುರುಡೇಶ್ವರನಿಗೆ ಭಕ್ತರು ಬಿಲ್ವಪತ್ರೆಯನ್ನ ಸಮರ್ಪಿಸಿ  ನಿತ್ಯವೂ  ಬಿಲ್ವಪತ್ರೆಯಿಂದಲೇ ಅಭಿಷೇಕ ಮಾಡುವರು.


ಅಲ್ಲದೇ ಬಿಲ್ವಪತ್ರೆಯನ್ನೇ ಭಕ್ತರಿಗೆ ಪ್ರಸಾದದ ರೂಪದಲ್ಲಿ ನೀಡ್ತಿರೋದು ಇಲ್ಲಿನ ಮತ್ತೊಂದು ವಿಶೇಷ. ಬಿಲ್ವವನದಲ್ಲಿರೋ ಪತ್ರೆಯನ್ನ ಕೊಯ್ದು ಇತರರಿಗೆ ದಾನ ಮಾಡಿದ್ರೆ ಒಳಿತಾಗುತ್ತೆಂಬುದು ಭಕ್ತರ ನಂಬಿಕೆ. ಅದಕ್ಕಾಗಿಯೇ ಚಿಕ್ಕಮಗಳೂರು, ಕಡೂರು ಸೇರಿದಂತೆ ಸುತ್ತಮುತ್ತಲಿನ ಜನ ವಾರಕ್ಕೊಮ್ಮೆ ಬಂದು ಪತ್ರೆ ಕೊಯ್ದು ದೇವಾಲಯ ಹಾಗೂ ನೆರೆಹೊರೆಯವರಿಗೆ ದಾನ ಮಾಡುತ್ತಾರೆ. ಶಿವರಾತ್ರಿಯ ದಿನದಂದು ಇಲ್ಲಿಗೆ ಬರೋ ಭಕ್ತರು ಬಿಲ್ವವನದಲ್ಲಿಯೇ ರಾತ್ರಿಯೆಲ್ಲಾ ಜಾಗರಣೆ ಮಾಡುತ್ತಾರೆ. ನೈಸರ್ಗಿಕವಾಗಿ ಬೆಳೆದಿರೋ ಬಿಲ್ವಪತ್ರೆ ವನ ವರ್ಷ ಕಳೆದಂತೆ ಸಮೃದ್ಧಿಯಾಗ್ತಿದೆ. ಬೇರೆಡೆ ಪಾಲನೆ-ಪೋಷಣೆ ಮಾಡಿದ್ರು ಬೆಳೆಯದ ಬಿಲ್ವಪತ್ರೆ ಮರಗಳು ಈ ನೆಲದಲ್ಲಿ ಸಾವಿರಾರು ಬೆಳೆದು ನಿಂತಿರೋದು ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿದೆ.

ದೈವಿಕ ಮತ್ತು ಪ್ರಾಕೃತಿಕ ಶಿಲ್ಪಕಲಾ ಮಹತ್ವದ ಈ ತಾಣಕ್ಕೆ ನೀವು ಒಮ್ಮೆ ಭೇಟಿ ಕೊಡಿ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529





ಅತ್ತಿಗೆ, ನಾದಿನಿಯರು ಡಿಚ್ಚಿ ಹೊಡೆಯುವ ವಿಶಿಷ್ಟ ಆಚರಣೆ!


ಅತ್ತಿಗೆ, ನಾದಿನಿಯರು ಡಿಚ್ಚಿ ಹೊಡೆಯುವ ವಿಶಿಷ್ಟ ಆಚರಣೆ!



ಹಿರಿಯೂರು ತಾಲೂಕಿನ ಐಮಂಗಲ ಹೋಬಳಿ ಸಿ.ಎನ್. ಮಾಳಿಗೆ ಗ್ರಾಮದ ಅಹೋಬಲ ನರಸಿಂಹ ಸ್ವಾಮಿಯ ಕಾರ್ತೀಕ ಮಹೋತ್ಸವದ ಜಾತ್ರೆಯಲ್ಲಿ ಅತ್ತಿಗೆ, ನಾದಿನಿ ಯರು ಡಿಚ್ಚಿಹೊಡೆದುಕೊಳ್ಳುವ ವಿಶಿಷ್ಟ ಆಚರಣೆಯೊಂದು ಪ್ರತಿವರ್ಷವೂ ನಡೆಯುತ್ತದೆ.


ದೇವಸ್ಥಾನದ ಒಂದು ಬದಿ ಅತ್ತಿಗೆಯರು ಮತ್ತು ಇನ್ನೊಂದು ಬದಿ ನಾದಿನಿಯರು ನಿಂತು ಓಡಿ ಬಂದು ಡಿಚ್ಚಿ ಹೊಡೆದುಕೊಳ್ಳುವ ಸಂಪ್ರದಾಯ ಪ್ರತಿ ವರ್ಷದಂತೆ ಈ ವರ್ಷ ನಡೆಯಿತು. ಬುಡಕಟ್ಟು ಮೂಲ ನೆಲೆಯಿಂದಲೇ ಬಂದಿರುವ ದೈವಭಕ್ತಿ ನಂಬಿಕೆಯಲ್ಲಿ ಅತ್ತಿಗೆ ನಾದಿನಿಯ ಭಾಂದವ್ಯದ ಪ್ರತೀಕವಾಗಿ ಈ ಆಚರಣೆ. ರೂಢಿಗತವಾಗಿ ಬಂದಿದೆ.


ವಿವಾಹವಾಗಿ ಬೇರೆ ಊರಿಗೆ ಹೋಗಿರುವ ನಾದಿನಿ ಯರನ್ನು ಊರಿನ ಹೆಬ್ಬಾಗಿಲ ಬಳಿ ಮೆರವಣಿಗೆ ಮೂಲಕ ಕರೆ ತರುತ್ತಾರೆ. ಪರಸ್ಪರ ಎದುರುಗೊಂಡ ಅತ್ತಿಗೆ, ನಾದಿನಿ ಯರು ದೇವರಸಮ್ಮುಖದಲ್ಲಿ ಪ್ರೀತಿಯ ಅಪ್ಪುಗೆಯೊಂದಿಗೆ ಮೂರುಬಾರಿ ತಲೆಯಲ್ಲಿ ಪರಸ್ಪರ ಡಿಚ್ಚಿಹೊಡೆದುಕೊಳ್ಳುವ

ಮೂಲಕ ತವರು ಮನೆ ಪ್ರೀತಿ ಗಟ್ಟಿಗೊಳಿಸಿಕೊಳ್ಳುತ್ತಾರೆ.


ಮಹಿಳೆಯರಮಧ್ಯೆ ಬರುವ ಸಣ್ಣಪುಟ್ಟಭಿನ್ನಾಭಿಪ್ರಾಯ ಮರೆತು ಒಂದಾಗಿ ಬಾಳುವ ರೂಪಕವಾಗಿ ಈ ಆಚರಣೆ ನಡೆದು ಬಂದಿದೆ. ಸಾವಿರಾರು ಭಕ್ತರ ಸಮ್ಮುಖದಲ್ಲಿ ಈ ಸಂಪ್ರದಾಯ ನಡೆಯುತ್ತದೆ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು.

ಹಾಯ್ಕುಗಳು

  ಅಪ್ರಕಟಿತ

*ಹಾಯ್ಕುಗಳು*



ದಾನವನಾಗಿ

ದರ್ಪವ ತೋರದಿರು

ದಾನವ ಮಾಡು 



 ಉನ್ನತ ದರ್ಜೆ 

ಹಣದಿಂದ ಬರಲ್ಲ 

ವ್ಯಕ್ತಿತ್ವದಿಂದ 


*ಸಿಹಿಜೀವಿ ವೆಂಕಟೇಶ್ವರ*

ತುಮಕೂರು

ಮಾನವೀಯ ಗುಣಗಳ ಒರತೆ


ಮಾನವೀಯ ಗುಣಗಳ ಒರತೆ 


"ಕಾಲ ಕೆಟ್ಟೋಯ್ತು, ಮಾನವೀಯತೆಗೆ ಬೆಲೆ ಇಲ್ಲ. ಎಲ್ಲಾ ಸ್ವಾರ್ಥಿಗಳು.ಮೌಲ್ಯಗಳು ಅದಃಪತನ ಹೊಂದಿವೆ" ಹೀಗೆ ನಾವು ಆಗಾಗ್ಗೆ ಮಾತನಾಡಿಕೊಳ್ಳುತ್ತೇವೆ.ಯಾವುದೋ ಘಟನೆ, ಅಥವಾ ವ್ಯಕ್ತಿಗಳ ಅಧಾರದ ಮೇಲೆ ಸಾರಾಸಗಟಾಗಿ ಇಡೀ ಸಮಾಜವನ್ನು ಮೌಲ್ಯಮಾಪನ ಮಾಡುವಲ್ಲಿ ನಾವು ನಿಸ್ಸೀಮರಾಗಿದ್ದೇವೆ.ನಾವಂದುಕೊಂಡಂತೆ ಸಮಾಜದಲ್ಲಿ ಎಲ್ಲರೂ ಕೆಟ್ಟವರಲ್ಲ ಒಳ್ಳೆಯವರು ಇಲ್ಲದೇ ಇಲ್ಲ.ಸುಮ್ಮನೆ ನಿಮ್ಮ ಬೈಕ್ ಸ್ಟ್ಯಾಂಡ್ ತೆಗೆಯದೆ ಬೈಕ್ ಓಡಿಸಿ   ನೋಡಿ ಹತ್ತಾರು ಕೈಗಳು ನಿಮ್ಮ ಬಗ್ಗೆ ಕಾಳಜಿ ವ್ಯಕ್ತಪಡಿಸಿ ಬೈಕ್ ಸ್ಟಾಂಡ್ ತೆಗೆಯಲು ಹೇಳುತ್ತಾರೆ. ಮಾನವೀಯತೆಯ ಒರತೆ ಕಡಿಮೆಯಗಿರಬಹುದು ಆದರೆ  ನಮ್ಮಲ್ಲಿ ಈಗಲೂ ಹರಿಯುತ್ತಿದೆ.ಇದಕ್ಕೆ ಪೂಕವಾಗಿ ನಾನಿರುವ ಒಂದು ಗುಂಪಿನಲ್ಲಿ ಸಹೃದಯರೊಬ್ಬರು ಒಂದು ಸಂದೇಶ ಮುನ್ನಾಯಿಸಿದ್ದರು ಅದು ಹೀಗಿದೆ.


ಮನೆಗೆ ಹೊರಟಿದ್ದೆ ಎಲೆಕ್ರ್ಟಿಕ್ ಕಂಬಕ್ಕೆ ಯಾರೋ ಒಂದು ಬೋರ್ಡ್ ನೇತು ಹಾಕಿದ್ದರು. ಅದರಲ್ಲಿ ಏನು ಬರೆದಿರಬಹುದು ಎಂದು ಕುತೂಹಲ ಉಂಟಾಯಿತು ಹತ್ತಿರ ಹೋಗಿ ನೋಡಿದರೆ ಅದರಲ್ಲಿ ಬರೆದಿತ್ತು

ಈ ರಸ್ತೆಯಲ್ಲೆಲ್ಲೊ ಐವತ್ತು ರುಪಾಯಿಯನ್ನು ಕಳೆದುಕೊಂಡಿದ್ದೇನೆ ನಿಮಗೆ ಯಾರಿಗಾದರೂ ಸಿಕ್ಕರೆ, ಈ ವಿಳಾಸದಲ್ಲಿರುವ ನನಗೆ ತಲುಪಿಸಿ. ನನ್ನ ಕಣ್ಣಿನ ದೃಷ್ಟಿ ತುಸು ಮಂಜಾಗಿದೆ ದಯವಿಟ್ಟು ಸಹಾಯ ಮಾಡಿ.


ನಾನು ಆವಿಳಾಸವನ್ನು ಗಮನಿಸಿದೆ. ಅಲ್ಲಿರುವ ವ್ಯಕ್ತಿಯನ್ನು ನೋಡಬೇಕು ಎಂದು ಬಲವಾಗಿ ಅನಿಸಿತು. ಆ ವಿಳಾಸದ ಬಳಿ ಹೋದಾಗ ಗುಡಿಸಲಿನಂತ ಮನೆಯ ಮುಂದೆ ಮುದುಕಿಯೊಬ್ಬಳು ಕುಳಿತಿದ್ದಳು. ಆಕೆ ಬಸವಳಿದಿದ್ದಳು ನಾನು ಬರುತ್ತಿರುವ ಸದ್ದನ್ನು ಕೇಳಿ ಯಾರು? ಎಂದಳು ನಾನು ಅಜ್ಜಿ ,ಈ ದಾರಿಯಲ್ಲಿ ಬರುವಾಗ ಐವತ್ತು ರೂಪಾಯಿ ಸಿಕ್ಕಿತು. ಕರೆಂಟ್ ಕಂಬದ ಮೇಲೆ ಬರೆದ ಬೋರ್ಡ್ ನೋಡಿದೆ. ನಿಮಗೆ ಕೊಟ್ಟು ಹೋಗೋಣ ಎಂದು ಬಂದೆ ಅಂದೆ.


ನನ್ನ ಮಾತು ಕೇಳಿ ಅವಳ ಕಣ್ಣು ತೇವವಾದವು. ಈಗಾಗಲೆ 40-50 ಮಂದಿ ಬಂದು ದಾರಿಯಲ್ಲಿ ತಮಗೆ ಐವತ್ತು ರೂಪಾಯಿ ಸಿಕ್ಕಿತೆಂದು ಕೊಟ್ಟು ಹೋಗಿದ್ದಾರೆ. ಆಷ್ಟಕ್ಕೂ ಆ ಕರೆಂಟ್ ಕಂಬದ ಮೇಲೆ ನಾನು ಬೋರ್ಡ್ ನೇತು ಹಾಕಿಲ್ಲ ನನಗೆ ಓದಲು ಬರೆಯಲು ಬರುವುದಿಲ್ಲ, ಎಂದಳು . ಪರವಾಗಿಲ್ಲ ಐವತ್ತು ರುಪಾಯಿ ಇಟ್ಟುಕೊಳ್ಳಿ ಎಂದೆ.


ನೀವು ಇಲ್ಲಿಂದ ಹೋಗುವಾಗ ಆ ಕಂಬದ ಮೇಲೆ ಬರೆದ  ಬೋರ್ಡ್ ತೆಗೆದುಹಾಕಿ ಎಂದು ನನ್ನನ್ನು ವಿನಂತಿಸಿದಳು. ಸೋಜಿಗವೆಂದರೆ ತನ್ನನ್ನು ನೋಡಲು ಬಂದವರಿಗೆಲ್ಲ  ಬೋರ್ಡ್ ಅನ್ನು ತೆಗೆದು ಹಾಕುವಂತೆ ಹೇಳುತ್ತಿದ್ದಳು. ಆದರೆ ಯಾರೂ ಹಾಗೆ ಮಾಡಿರಲಿಲ್ಲ.

ನಾನು ವಾಪಸ್ ಬರುವಾಗ ಯೋಚಿಸಲಾರಂಬಿಸಿದೆ, ಕರೆಂಟ್ ಕಂಬದ ಮೇಲೆ ಯಾರು ಈ ಬೋರ್ಡ್ ತಗುಲಿ ಹಾಕಿರಬಹುದು? ತನ್ನನ್ನು ನೋಡಲು ಬಂದವರಿಗೆಲ್ಲ ಅದನ್ನು ತೆಗೆದು ಹಾಕಿ ಎಂದು ಹೇಳಿದರೂ ಯಾರೂ ತೆಗೆದು ಹಾಕಲಿಲ್ಲ?

ಯಾರೋ ಒಬ್ಬನಿಗೆ ಆ ಮುದುಕಿಗೆ ಸಹಾಯ ಮಾಡಬೇಕೇಂದು ಅನಿಸಿರಬೇಕು, ಆತ  ಬೋರ್ಡ್ ಅನ್ನು ಹಾಕಿರಬೇಕು.

ಒಬ್ಬರಿಗೆ ಸಹಾಯ ಮಾಡಬೇಕು ಅನಿಸಿದರೆ ಎಷ್ಟೋಂದು ದಾರಿಗಳಿವೆಯಲ್ಲ.


ಅಷ್ಟೊತ್ತಿಗೆ ಯಾರೋ ಕರೆದಂತಾಯಿತು. "ಸಾರ್ ಈ ಅಡ್ರೆಸ್ ನಲ್ಲಿರುವ ವ್ಯಕ್ತಿಯನ್ನು ಬೇಟಿ ಮಾಡುವುದು ಹೇಗೆ? ಅಲ್ಲಿಗೆ ಹೋಗುವುದು ಹೇಗೆ? ನನಗೆ ದಾರಿಯಲ್ಲಿ ಐವತ್ತು ರೂಪಾಯಿ ಸಿಕ್ಕಿತು ಅವರಿಗೆ ತಲುಪಿಸಬೇಕಾಗಿದೆ" ಎಂದು ದಾರಿಹೋಕನೊಬ್ಬ ಹೇಳಿದ 


ನಾನು ಗದ್ಗದಿತನಾದೆ...


ಕೆಟ್ಟತನವನ್ನೇ ವಿಜೃಂಬಿಸುವ ಅಹಿಂಸೆಯನ್ನು ದಿನಗಟ್ಟಲೇ ವೈಭವೀಕರಿಸುವ ಮಾಧ್ಯಮಗಳು ಬರೀ ಮಚ್ಚು ಕೊಚ್ಚು ಮಾತ್ರವೇ ಸಿನಿಮಾ ಎಂದು ರೀಲು ಸುತ್ತುವವರು ಇಂತಹ ಮಾನವೀಯ ಸಂಬಂಧಗಳು ಮೌಲ್ಯಗಳನ್ನು ಎತ್ತಿ ತೋರಿಸುವ ಮೂಲಕ ಪ್ರೀತಿ, ಕರುಣೆ, ಮಾನವೀಯತೆಯ ಒರತೆಗಳ ಹೆಚ್ಚಿಸುವ  ಕೆಲಸ ಮಾಡಬೇಕಿರುವುದು ಇಂದಿನ ತುರ್ತು ಅಗತ್ಯವಾಗಿದೆ.    


ಸಿಹಿಜೀವಿ ವೆಂಕಟೇಶ್ವರ

ತುಮಕೂರು

ಶಿಕ್ಷಕರು

9900925529

ಆಕಾರ-ಅಹಂಕಾರ .ಹನಿಗವನ

 *ಆಕಾರ- ಅಹಂಕಾರ*


ಎಂತಹ ಕಗ್ಗಲ್ಲಾದರೂ

ತಿದ್ದಿ ತೀಡಿದರೆ ಆಗುವುದು

ವಿಗ್ರಹದ ಆಕಾರ|

ಏನೇ ತಿದ್ದಿ ತೀಡಿದರೂ

ನಾಶದತ್ತ ಸಾಗುವರು

ಸೇರಿದರೆ ಅಹಂಕಾರ||


*ಸಿಹಿಜೀವಿ ವೆಂಕಟೇಶ್ವರ*

27 March 2024

ಯಶಸ್ಸಿನ ಶಿಖರ ಏರೋಣ.

 


ಯಶಸ್ಸಿನ ಶಿಖರ ಏರೋಣ.


ಜೀವನದಲ್ಲಿ ಏನಾದರೂ ಸಾಧಿಸಬೇಕಾದರೆ ನಮಗೊಂದು ಸ್ಪಷ್ಟವಾದ ಗುರಿಯಿರಬೇಕು.ಜೊತೆಗೆ ಮಾರ್ಗದರ್ಶನ ಮಾಡಲು ಗುರುವಿರಬೇಕು.  "ಮಾರ್ನೇ ತೋ ಹಾತಿ ಮಾರೋ ಲೂಟ್ನೇ ತೊ ಭಂಡಾರ್ ಲೂಟೋ " ಎಂಬಂತೆ   ಚಿಕ್ಕ ಗುರಿಯನ್ನು ಹೊಂದದೆ ದೊಡ್ಡ ಗುರಿಯನ್ನು ಇಟ್ಟುಕೊಂಡು ಆ ಕಡೆ ಸಾಗಬೇಕು.

 ನಮ್ಮ ಗುರಿಯೆಡೆಗೆ ಸಾಗುವಾಗ ನಮಗೆ ಕೆಲ ಅಡೆತಡೆಗಳು ಬರುವುದು ಸಹಜ ಅವುಗಳ ಮೆಟ್ಟಿ ಮುಂದೆ ಸಾಗಬೇಕು. ಅದರಂತೆ ಅಲ್ಲಲ್ಲಿ ನಮಗೆ ಯಶಸ್ಸು ಕೂಡಾ ಸಿಗುತ್ತವೆ ಆ ಯಶಸ್ಸು ನಮ್ಮ ತಲೆಗೇರಬಾರದು.ಆ ಯಶಸ್ಸಿಗೆ ಸಂತಸಪಟ್ಟು ಮುಂದೆ ಸಾಗಬೇಕು. ಏಕೆಂದರೆ ಯಶಸ್ಸಿಗೆ ಪುಲ್ ಸ್ಟಾಪ್ ಇಲ್ಲ ಬರೀ ಕಾಮಾಗಳು ಮಾತ್ರ ಇರುತ್ತವೆ. ನಮ್ಮ ಯಶಸ್ಸಿನ ಪಯಣ ನಿರಂತರವಾಗಿರಬೇಕು.


 ಕಂಫರ್ಟ್ ಜೋನ್ ನಿಂದ ಹೊರಬಂದು ರಿಸ್ಕ್ ತೆಗೆದುಕೊಂಡ ಮಹನಿಯರು ಜೀವನದಲ್ಲಿ ಉನ್ನತವಾದದ್ದನ್ನು ಸಾಧಿಸಿದ್ದಾರೆ. ಈ ನಿಟ್ಟಿನಲ್ಲಿ ನಾವು ಯೋಚಿಸಬಹುದು ಫಾರ್ಚೂನ್ ಪೇವರ್ಸ್ ದ ಬ್ರೇವ್ ಎಂಬಂತೆ ಒಳ್ಳೆಯ ಕೆಲಸ ಮಾಡಲು ಕ್ಯಾಲ್ಕುಲೇಟೆಡ್ ರಿಸ್ಕ್ ತೆಗೆದುಕೊಂಡು ಯಶಸ್ಸು ಪಡೆಯಲು ಪ್ರಯತ್ನ ಮಾಡಬಹುದು.


 ಯಶಸ್ಸಿನೆಡೆಗಿನ ನಮ್ಮ ಪಯಣದಲ್ಲಿ ಆಗಾಗ್ಗೆ ನಮ್ಮನ್ನು ಎದೆಗುಂದಿಸುವ ಟೀಕೆಗಳು ಎದುರಾಗಬಹುದು ಅವುಗಳ ಬಗ್ಗೆ ಅಷ್ಟು ತಲೆಕೆಡಿಸಿಕೊಳ್ಳದೇ ನಮ್ಮ ಕರ್ತವ್ಯಗಳಿಂದ ಅವರಿಗೆ ಉತ್ತರ ನೀಡಬೇಕು.ಉನ್ನತ ಸಾಧನೆಯ ಹಾದಿಯಲ್ಲಿ  ಕಲ್ಲು ಮುಳ್ಳುಗಳ ದಾಟಿದ ಮೇಲೆ ಯಶಸ್ಸಿನ ಶಿಖರ ಖಂಡಿತವಾಗಿಯೂ ಸಿಕ್ಕೇ ಸಿಗುತ್ತದೆ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

ಶಿಕ್ಷಣದಲ್ಲಿ ರಂಗಕಲೆ ಇಂದಿನ ಅಗತ್ಯ


  

ಶಿಕ್ಷಣದಲ್ಲಿ ರಂಗಕಲೆ ಇಂದಿನ ಅಗತ್ಯ


ವಿದ್ಯಾರ್ಥಿಗೆ ಕೇವಲ ಪರಿಕಲ್ಪನೆಯ ಬಗ್ಗೆ ತಿಳಿಸುವುದು ಸಾಕಾಗುವುದಿಲ್ಲ. ಉತ್ತಮ ಶಿಕ್ಷಕರು ವಿದ್ಯಾರ್ಥಿಯಲ್ಲಿ ವಿಮರ್ಶಾತ್ಮಕ ಚಿಂತನೆಯ ಸಾಮರ್ಥ್ಯವನ್ನು ಮತ್ತು ಮೌಲ್ಯ ಶಿಕ್ಷಣವನ್ನು ಪ್ರೇರೇಪಿಸಬೇಕು  ಅದಕ್ಕೆ ರಂಗಕಲೆಯು ಉಪಯುಕ್ತ ಎಂದು ಮಹಾನ್ ತತ್ವಜ್ಞಾನಿ ಪ್ಲೇಟೋ ತಾನು ಅಕಾಡೆಮಿಯನ್ನು ಆರಂಭಿಸಿದ ಕಾಲದಲ್ಲೇ ಹೇಳಿದ್ದರು.

ನಾಟಕಗಳನ್ನು  ಬೋಧನಾ ಸಾಧನವಾಗಿ ಬಳಸುವ ಮೂಲಕ ವಿದ್ಯಾರ್ಥಿಗಳು ಬೌದ್ಧಿಕವಾಗಿ, ದೈಹಿಕವಾಗಿ, ಸಾಮಾಜಿಕವಾಗಿ ಅಥವಾ ಭಾವನಾತ್ಮಕವಾಗಿ ಎಲ್ಲ ರೀತಿಯಲ್ಲೂ ಬೆಳವಣಿಗೆಗೆ ಹಾಗೂ   ಸಮಗ್ರ ಕಲಿಕೆಗೆ ಕಾರಣವಾಗುತ್ತದೆ.

ಇದರ ಜೊತೆಯಲ್ಲಿ  ಜೀವನ ಕೌಶಲ್ಯಗಳು, ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳು, ನಾಯಕತ್ವ, ಸಹಕಾರ ಮತ್ತು ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ನೀಡುತ್ತದೆ. 


 'ನಾಟಕ' ಪದವು ವಾಸ್ತವವಾಗಿ ಗ್ರೀಕ್ ಪದ 'ಡ್ರಾಮಾ'ಅಥವಾ'ಡ್ರಾವೋ' ನಿಂದ ತೆಗೆದುಕೊಳ್ಳಲಾಗಿದೆ, ಇದು 'ನಾನು ಮಾಡುತ್ತೇನೆ' ಅಥವಾ ಕ್ರಿಯೆಯನ್ನು ಸೂಚಿಸುತ್ತದೆ. ಹೀಗಾಗಿ, ನಾಟಕೀಯ, ರೇಡಿಯೋ, ಟಿವಿ ಅಥವಾ ಕಾಲ್ಪನಿಕ ಕಥೆಯ ನೇರ ಪ್ರದರ್ಶನಗಳ ಮೂಲಕ ನಟನೆ ಅಥವಾ ಪ್ರದರ್ಶನ ಕ್ರಿಯೆಯು ನಾಟಕದಲ್ಲಿ ಬರುತ್ತದೆ.


ಶಿಕ್ಷಣದಲ್ಲಿ ರಂಗಕಲೆಯ ಮಹತ್ವ


ಬರೀ ಸ್ಪೂನ್ ಫೀಡ್ ಮಾಡಿದ ಮಾಹಿತಿ ಮತ್ತು ವಿದ್ಯಾರ್ಥಿಗಳು ಉರುಹೊಡೆದು ಹಾಕುವುದು ಸಮಾಜಕ್ಕೆ ಹಾನಿಕಾರಕ. ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಸ್ಮಾರ್ಟ್ ಕಲಿಕೆ, ವಿಮರ್ಶಾತ್ಮಕ ಚಿಂತನೆ ಮತ್ತು ತಾರ್ಕಿಕ ಚಿಂತನೆಯ  ಉತ್ತೇಜಿಸಲು , ನಾಟಕ ಮತ್ತು ಕಲೆಗಳು ಶಿಕ್ಷಣ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ನಿಯಂತ್ರಿತ ವಾತಾವರಣದಲ್ಲಿ, ಒಂದು ಐತಿಹಾಸಿಕ ದೃಶ್ಯವನ್ನು ಪುನರಾವರ್ತಿಸಲು ವಿದ್ಯಾರ್ಥಿಗಳ ಗುಂಪನ್ನು ಕೇಳಿದರೆ, ವಿದ್ಯಾರ್ಥಿಗಳು ಇತಿಹಾಸದಿಂದ ಹೆಸರುಗಳು ಮತ್ತು ದಿನಾಂಕಗಳ ಗುಂಪನ್ನು ಸಂಗ್ರಹಿಸದೆಯೇ ನೆನಪಿಟ್ಟುಕೊಳ್ಳಲು ಮತ್ತು ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ. ಪರಿಣಾಮಕಾರಿ ಕಲಿಕೆಯನ್ನು ಉತ್ತೇಜಿಸಲು ಪ್ರಪಂಚದಾದ್ಯಂತದ ಅನೇಕ ಸಂಸ್ಥೆಗಳಲ್ಲಿ ಶಿಕ್ಷಣ ದಲ್ಲಿ ನಾಟಕ ಮತ್ತು ಕಲೆಗಳನ್ನು ಪಠ್ಯಕ್ರಮದ ಭಾಗವಾಗಿ ಅಳವಡಿಸಲಾಗಿದೆ.   ರೋಲ್-ಪ್ಲೇ ಮೂಲಕ  ವಿದ್ಯಾರ್ಥಿಗಳು ಪರಸ್ಪರ ಮತ್ತು ಗುಂಪು ಸಂವಹನ, ಮತ್ತು ಸಾರ್ವಜನಿಕ ಮಾತನಾಡುವ ಕೌಶಲ್ಯಗಳನ್ನು ಕಲಿಯುತ್ತಾರೆ ಮತ್ತು ಅವರಲ್ಲಿ ಪರಿಶೋಧನೆಯ ಕೌಶಲ್ಯವನ್ನು ಬೆಳೆಸಲು ಈ ವಿಧಾನವು ಸಹಾಯ ಮಾಡುತ್ತದೆ.


ಶಿಕ್ಷಣ ದಲ್ಲಿ ನಾಟಕ ಮತ್ತು ಕಲೆಗಳ ಪ್ರಾಮುಖ್ಯತೆಗೆ ಪ್ರಮುಖ ಕಾರಣಗಳು ಇಲ್ಲಿವೆ


ಸ್ವಯಂ ಅಭಿವ್ಯಕ್ತಿಯನ್ನು ಕಲಿಸುತ್ತದೆ


  ಮಕ್ಕಳು ಶಿಕ್ಷಣ ದಲ್ಲಿ ನಾಟಕ ಮತ್ತು ಕಲೆಗಳ ಬಳಕೆಯ ಮೂಲಕ ಮತ್ತು ಸೃಜನಶೀಲ ಅಭಿವ್ಯಕ್ತಿಯ ಮೂಲಕ ಸ್ವಯಂ ಅಭಿವ್ಯಕ್ತಿಯ ಪ್ರಾಮುಖ್ಯತೆಯ ಬಗ್ಗೆ ಕಲಿಯುತ್ತಾರೆ. ಅವರ ಗ್ರಹಿಕೆ ಮತ್ತು ವಿಶ್ವ ದೃಷ್ಟಿಕೋನವು ವಿಶಾಲವಾಗಿದೆ‌. ಇದು ಜೀವನದಲ್ಲಿ ಭವಿಷ್ಯದಲ್ಲಿ

 ಸಮಸ್ಯೆಗಳನ್ನು ಎದುರಿಸುವ ಕೌಶಲ್ಯಕ್ಕೆ ಅವರನ್ನು ಸಜ್ಜುಗೊಳಿಸುತ್ತದೆ.


ಲೈಪ್ ಸ್ಕಿಲ್ ಟ್ರೈನಿಂಗ್


ಇದು ಟೀಮ್ ವರ್ಕ್, ಸಹಾನುಭೂತಿ, ಸಹಕಾರ ಮತ್ತು ಸಹಯೋಗದಂತಹ ವಿವಿಧ ಜೀವನ ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತದೆ.


ರಚನಾತ್ಮಕ ಟೀಕೆಗಳನ್ನು ಕಲಿಯುತ್ತಾರೆ

 

 ಮಕ್ಕಳು ಉತ್ತಮ ವ್ಯಕ್ತಿಗಳಾಗಲು ಸಹಾಯ ಮಾಡುವ ರೀತಿಯಲ್ಲಿ ರಚನಾತ್ಮಕ ಟೀಕೆ ಮತ್ತು ಪ್ರತಿಕ್ರಿಯೆಯನ್ನು ಸ್ವೀಕರಿಸುವ ಬಗ್ಗೆ ಕಲಿಯುತ್ತಾರೆ.


ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ


 ಶಿಕ್ಷಣ ದಲ್ಲಿ ನಾಟಕ ಮತ್ತು ಕಲೆಯ ಬಳಕೆಯು ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನವನ್ನು ವೇಗಗೊಳಿಸುತ್ತದೆ.



ಸಮಸ್ಯೆ ಪರಿಹರಿಸುವ ಕೌಶಲ ಬೆಳೆಸುತ್ತದೆ.


  ಸೃಜನಾತ್ಮಕ ಕಲಾ ಪ್ರಕಾರಗಳ ಮೂಲಕ ವಿದ್ಯಾರ್ಥಿಗಳು ಗುಂಪಿನಲ್ಲಿ ಕಲಿಯುವಾಗ ಪ್ರತಿ ಸನ್ನಿವೇಶದಲ್ಲಿ ಸಮಸ್ಯೆ ಪರಿಹರಿಸುವ ಮೌಲ್ಯದ ಬಗ್ಗೆ ಕಲಿಯುತ್ತಾರೆ.ತಂಡವಾಗಿ ಕೆಲಸ ಮಾಡುತ್ತಾ   ಸಮಸ್ಯೆ ಪರಿಹರಿಸುವಲ್ಲಿ ಅತ್ಯುತ್ತಮರಾಗುತ್ತಾರೆ.


ನಾಯಕತ್ವ ಗುಣ ಬೆಳೆಯುತ್ತದೆ.


 ಶಿಕ್ಷಣದಲ್ಲಿ ನಾಟಕ ಮತ್ತು ಕಲೆಯನ್ನು ಬಳಸುವುದು ವಿದ್ಯಾರ್ಥಿಗಳಿಗೆ ನಾಯಕನ ಟೋಪಿಯನ್ನು ಧರಿಸಲು ಮತ್ತು ನಾಯಕತ್ವ ಮತ್ತು ಟೀಮ್‌ವರ್ಕ್‌ಗೆ ಸಂಬಂಧಿಸಿದ ಕೇಂದ್ರ ಕೌಶಲ್ಯಗಳನ್ನು ಅಳವಡಿಸಿಕೊಳ್ಳಲು ಕಲಿಸುತ್ತದೆ.


ಹೀಗೆ ರಂಗಕಲೆಯು ಮಕ್ಕಳಿಗೆ ಬಹುಆಯಾಮದ ಉಪಯುಕ್ತತೆ ಒದಗಿಸುತ್ತದೆ ಅದರಲ್ಲೂ ಜೀವನದ ಕೌಶಲಗಳನ್ನು ಕಲಿಯಲು ಹಾಗೂ  ವೈಯಕ್ತಿಕವಾಗಿ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಅಂಶಗಳನ್ನು ರಂಗಕಲೆ ಕಲಿಸುತ್ತದೆ. ಆದ್ದರಿಂದ ಶಿಕ್ಷಣದಲ್ಲಿ ರಂಗಕಲೆಯನ್ನು ಅಳವಡಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ. 


ಸಿಹಿಜೀವಿ ವೆಂಕಟೇಶ್ವರ

ತುಮಕೂರು




19 March 2024

ಟಿಕೆಟ್

 


ಟಿಕೆಟ್ 


ಚುನಾವಣೆಗೆ ಟಿಕಟ್ ಕೊಟ್ಟರೆ

ನಾನು ನಮ್ಮ ಪಕ್ಷದ ತತ್ವ ಸಿದ್ದಾಂತಕ್ಕೆ ಸದಾ ಬದ್ದ|

ಟಿಕೆಟ್ ಕೈ ತಪ್ಪಿದರೆ ಮುಗಿಯಿತು ಶೀಘ್ರವಾಗಿ ಮತ್ತೊಂದು

ಪಕ್ಷದ ಕದ ತಟ್ಟಲು ಸಿದ್ದ|


ಸಿಹಿಜೀವಿ ವೆಂಕಟೇಶ್ವರ

ತುಮಕೂರು

18 March 2024

ಪ್ರಜಾಪ್ರಭುತ್ವ ಹೋಳಿ

 


ಪ್ರಜಾಪ್ರಭುತ್ವ ಹೋಳಿ 


ಈಗ ಎಲ್ಲೆಡೆ ಬಿಸಿಲ ಜೊತೆಗೆ ಬೀಸುತ್ತಿದೆ ಚುನಾವಣಾ ಗಾಳಿ

ಆಮಿಷ ನೀಡಿ  ಪಕ್ಷಗಳಿಂದ ಮತದಾರರ ಮೇಲೆ ದಾಳಿ

ಮನಸ್ಸಾಕ್ಷಿಗೆ ಮನಸೋತು 

ಮತದಾನ ಮಾಡಲು ಎದ್ದೇಳಿ 

ಎಲ್ಲರೂ ಸೇರಿ ಆಡೋಣ ಬನ್ನಿ

ಭಾರತದ ಪ್ರಜಾಪ್ರಭುತ್ವ ಹೋಳಿ 


ಸಿಹಿಜೀವಿ ವೆಂಕಟೇಶ್ವರ

ತುಮಕೂರು




16 March 2024

ಮೆದುಳಿನ ಮೂಲ ಕರುಳು! (ಪುಸ್ತಕ ವಿಮರ್ಶೆ)


 



 ಮೆದುಳಿನ ಮೂಲ ಕರುಳು..


ಆತ್ಮೀಯರಾದ ಗುಬ್ಬಚ್ಚಿ ಸತೀಶ್ ರವರ ಗುಬ್ಬಚ್ಚಿ ಪುಸ್ತಕ ಉದ್ಘಾಟನೆಗೆ ಅತಿಥಿಯಾಗಿ ಹೋದಾಗ ಖರೀದಿಸಿದ ಡಾ ಕೆ ಎನ್ ಗಣೇಶಯ್ಯ ರವರ ಹೊಕ್ಕಳ ಮೆದುಳು ಕಥಾಂಬರಿ ಓದಿದಾಗ ಹೌದು ಇದು ಕಥೆಯೂ ಅಲ್ಲ ಕಾದಂಬರಿಯೂ ಅಲ್ಲ ಅವೆರಡರ ಮಧ್ಯದ ಒಂದು ಪ್ರಕಾರ ಎಂದು ಲೇಖಕರ ಮಾತಿನಲ್ಲಿ ಗಣೇಶಯ್ಯ ರವರು ಹೇಳಿದ್ದು ಸತ್ಯ ಎನಿಸಿತು.


ಕಳೆದ ಭಾನುವಾರ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಅವರ ಅಂಕಣದಲ್ಲಿ ಬೆಂಕಿಯ ಆವಿಷ್ಕಾರ ನಮ್ಮ ಮೆದುಳಿನ ವಿಕಾಸಕ್ಕೆ ಹೇಗೆ ನಾಂದಿಯಾಯಿತು ಎಂಬುದನ್ನು ವೈಜ್ಞಾನಿಕವಾಗಿ ವಿವರಣೆ ನೀಡಿದ ಅಂಕಣ ಓದಿದ ನನಗೆ ಈ ಹೊಕ್ಕಳ ಮೆದುಳು ಪುಸ್ತಕದ ಬಗ್ಗೆ ಕುತೂಹಲ ಹೆಚ್ಚಾಗಿ ಓದಿದೆ.


ಇಲ್ಲಿಯೂ ಗಣೇಶಯ್ಯ ರವರ ಕಾದಂಬರಿ ಶೈಲಿ ಪೂರಕ ಮಾಹಿತಿಗೆ ಅಡಿಟಿಪ್ಪಣಿಗಳು ಗಮನ ಸೆಳೆಯುತ್ತವೆ ಎಂದಿನಂತೆ ವಿಷಯದ ಆಯ್ಕೆಯಲ್ಲಿ ಈ ಬಾರಿಯೂ ಅವರು ಹೊಸತೊಂದು ಪ್ರಚಲಿತ ವೈಜ್ಞಾನಿಕ ಮತ್ತು ಜೀವಶಾಸ್ತ್ರದ ವಿಷಯ ತೆಗೆದುಕೊಂಡು ಬಹಳ ಚೆಂದವಾಗಿ ನಿರೂಪಿಸಿದ್ದಾರೆ.


ನ್ಯೂಯಾರ್ಕ್‌ನಲ್ಲಿ ಆಯೋಜಿಸಿದ್ದ 'ವಿಜ್ಞಾನ, ಧರ್ಮ ಮತ್ತು ಆಧ್ಯಾತ್ಮಿಕತೆ' ಎಂಬ ಅಂತಾರಾಷ್ಟ್ರೀಯ ಕಮ್ಮಟದಲ್ಲಿ ಭಾಗವಹಿಸಿಲು ಆಹ್ವಾನಿತಗೊಂಡಿದ್ದ ಭಾರತದ ಧರ್ಮಗುರುಗಳು ಅಚ್ಚರಿಯ ವಿದ್ಯಮಾನವೊಂದಕ್ಕೆ ಸಾಕ್ಷಿಯಾಗುತ್ತಾರೆ. ಅಲ್ಲಿನ ಮಾನಸಿಕ ಆಸ್ಪತ್ರೆಯಲ್ಲಿ ನಡೆದ ದುರಂತವೊಂದಕ್ಕೆ ಇಂದಿನ ನ್ಯಾಯಪದ್ಧತಿಯ ಆವರಣದಲ್ಲಿ ಸೂಕ್ತ ಮತ್ತು ಸಿದ್ಧ ಪರಿಹಾರ ಸಿಗದ ಕಾರಣ, ವಿಜ್ಞಾನಿಗಳ, ನ್ಯಾಯಪಾಲಕರ ಮತ್ತು ಧರ್ಮಗುರುಗಳ ನಡುವೆ ಒಂದು ಜಾಗತಿಕ ಚರ್ಚೆಯನ್ನು ಏರ್ಪಡಿಸಲಾಗಿರುತ್ತದೆ. ಮಾನಸಿಕ ಸ್ಥಿತಿಯಲ್ಲಾಗುವ ಪಲ್ಲಟಗಳ ಬಗ್ಗೆ ನಡೆದ ಈ ಚರ್ಚೆಯಲ್ಲಿ ಎದುರಾಗುವ ಅಂಶಗಳು ಕುತೂಹಲಕಾರಿ ಹಾಗೂ ಹೊಸ ಹೊಳವುಗಳನ್ನು ನೀಡುತ್ತವೆ.

ಆ ಚರ್ಚೆ ಕೆಲವೊಮ್ಮೆ ನಾನು ನಾನಾ ಅಥವಾ ನಾವಾ ಎಂಬ ಅನುಮಾನ ಮೂಡಿಸಿ ಕೊನೆಗೆ ನಮ್ಮ ದೇಹ ಕೇವಲ ನಾನಲ್ಲ ನಾವು ಎಂಬ ತೀರ್ಮಾನಕ್ಕೆ ಬರಲಾಯಿತು.ಈಗ ನಿಮ್ಮಲ್ಲಿ ಸ್ವಲ್ಪ ಗೊಂದಲ ಉಂಟಾಗಬಹುದು ಅದಕ್ಕೆ ನೀವು ಪುಸ್ತಕ ಓದಿಯೇ ಪರಿಹಾರ ಕಂಡುಕೊಳ್ಳಬೇಕು.


ಕೊಲೆ ಮಾಡಿದ ವೈಸರ್ ಈ ಕೊಲೆ ನಾನೊಬ್ಬನೇ ಮಾಡಿಲ್ಲ ಬೇರೆಯವರು ಸೇರಿ ಮಾಡಿದೆವು ಎಂದು ಜಡ್ಜ್ ಮುಂದೆ  ದೃಢವಾಗಿ ಹೇಳಿದಾಗ ಅದರಂತೆ  ತನಿಖೆ ಕೈಗೊಂಡಾಗ ಹೊರಬಂದ ಸತ್ಯಗಳು ನಮ್ಮನ್ನು ಬೆಚ್ಚಿಬೀಳಿಸುತ್ತವೆ. ಬ್ಯಾಕರ್ ನ ಸ್ವಾರ್ಥ ಮತ್ತು ಫಾರ್ಮ ಕಂಪನಿಗಳ ಅನೈತಿಕ ಮತ್ತು ಲಾಭಕೊರತನದ ಆಸೆಯ ಬಗ್ಗೆ ಕಾದಂಬರಿಕಾರರು ಬಹಳ ಚೆನ್ನಾಗಿ ನಿರೂಪಿಸಿದ್ದಾರೆ.

ನಮ್ಮ ಕರುಳಿಗೂ ಮೆದುಳಿಗೂ ಅವಿನಾಭಾವ ಸಂಬಂದವಿದೆ ಎಂಬುದನ್ನು ಗಟ್ ಬ್ರೈನ್ ಆಕ್ಸಿಸ್ ನಲ್ಲಿ ಜೀವ ವಿಜ್ಞಾನಿಗಳು ವಿವರಿಸಿದ್ದಾರೆ. ಕರುಳು ಮತ್ತು ಮೆದುಳಿನ ನಡುವೆ ಇರುವ ಸಂಬಂಧದಿಂದಾಗಿ ಮಾನವನ ಅದೆಷ್ಟು ಜೀವನ ಕ್ರಮಗಳು ಮತ್ತು ವರ್ತನೆಗಳು ಈ ಸೂಕ್ಷ್ಮಾಣುಗಳಿಂದ ನಿಗ್ರಹಿಸಲ್ಪಟ್ಟಿವೆ ಎನ್ನುವ ಬಗ್ಗೆ ದಿನನಿತ್ಯವೂ ಹೊಸ ಹೊಸ ಅನ್ವೇಷಣೆಗಳು ಹೊರಬೀಳುತ್ತಿರುವ ಹಿನ್ನೆಲೆಯಲ್ಲಿ ಈ ಕಥಾಂಬರಿ ನಮಗೆ ಹೊಸ ಜ್ಞಾನ ನೀಡುತ್ತದೆ.


ಮೂಲತಃ ವೈಸರ್ ಒಳ್ಳೆಯವನಾದರೂ ಅವನ ದೇಹದಲ್ಲಿ ಅವನಿಗೆ ಗೊತ್ತಾಗದಂತೆ ಕ್ರೂರ ಮನಸ್ಸಿನ ವ್ಯಕ್ತಿಯಾದ ಕಾರ್ಲೋಸ್ ನ ಕರುಳಿನ ಜೀವ ಕೋಶಗಳನ್ನು ಕಲ್ಚರ್ ಮಾಡಿ  ಅವನ ದೇಹ  ಸೇರುವಂತೆ ಮಾಡಿದಾಗ ಉಂಟಾಗುವ ಬೆಳವಣಿಗೆಯಲ್ಲಿ ವೈಸರ್ ನು   ಬ್ಯಾಕರ್ ಸಾವಿಗೆ ಕಾರಣನಾಗಿದ್ದು ಹೊರಗಿನಿಂದ ಬಂದ ಜೀವಕೋಶಗಳಿಂದ! ಆಗ ಶಿಕ್ಷೆ ಯಾರಿಗೆ ಕೊಡಬೇಕು? ವೈಸರ್ಗೊ? ಅಥವಾ ಅನಾಹುತಕಾರಿ ಜೀವಕೋಶಕ್ಕೋ? 

ಈ ಗೊಂದಲದ ಹಿನ್ನೆಲೆಯಲ್ಲಿ ನಡೆದ ಚರ್ಚೆಯಲ್ಲಿ ನಮ್ಮನ್ನು ಚಿಂತನೆಗೀಡು ಮಾಡುವ ಅಂಶಗಳು ಬಯಲಿಗೆ ಬರುತ್ತವೆ. 

ಇಂತಹ ವೈಜ್ಞಾನಿಕ ಸಂಶೋಧನೆ ಮತ್ತು   ಎ ಐ ಬಳಕೆಯ ಸಮಾಜದಲ್ಲಿ ನಮ್ಮ ಇಂದಿನ ಎಲ್ಲ ನ್ಯಾಯಾಂಗ ನಿಯಮಗಳು ಮತ್ತು ಕಾನೂನುಗಳು

ಮಾನವನನ್ನು ಪ್ರಕೃತಿಯಿಂದ ಬೇರ್ಪಡಿಸಿ, ಹೊರಗೆಳೆದು ಆತನೊಬ್ಬ ವಿಶೇಷ ಜೀವಿ

ಎಂಬ ಕಲ್ಪನೆಯಲ್ಲಿ ರೂಪುಗೊಂಡಿವೆ ಎನ್ನುವುದು ವಿದಿತ. ಆ ಕಾರಣದಿಂದಾಗಿಯೇ

ನಮ್ಮ ನ್ಯಾಯನಿಯಮಗಳಲ್ಲಿ ಕಾನೂನುಗಳಲ್ಲಿ  ಹಲವು ವೈರುಧ್ಯಗಳು ನುಸುಳಿವೆ  ನಮ್ಮನ್ನು ಪ್ರಕೃತಿಯಿಂದ ಬೇರ್ಪಡಿಸಿಕೊಳ್ಳದೆಯೇ, ನಾವೆಲ್ಲರೂ ಅದರ ಭಾಗವಷ್ಟೆ ಎಂಬ ಚಿಂತನೆಯ ಆವರಣದಲ್ಲಿ ನಮ್ಮ ಕಾನೂನು ವ್ಯವಸ್ಥೆಯನ್ನು

ರೂಪಿಸಲು ಕಾಲ ಬಂದಿದೆ 

ವ್ಯವಸ್ಥೆಯನ್ನು, ನಿಯಮಗಳನ್ನು ವಿವಿಧ ದೃಷ್ಟಿಕೋನದಲ್ಲಿ ನೋಡುವುದರಿಂದ  ಈ ಕಾಲಕ್ಕೆ ತಕ್ಕಂತೆ 

ಕಾನೂನುಗಳನ್ನು ರಚಿಸುವ ಅವಶ್ಯಕತೆಗಳು ಮತ್ತು ಸಾಧ್ಯತೆಗಳು ಹುಟ್ಟಿಕೊಳ್ಳುತ್ತವೆ.

ಪರಿಸರದತ್ತ ನಮ್ಮ ದೃಷ್ಟಿ ಬದಲಾಗುತ್ತಿರುವ ಈ ಪರ್ವಕಾಲದಲ್ಲಿ ಅಂತಹ ಚಿಂತನೆಗಳ ಅವಶ್ಯಕತೆ ಹೆಚ್ಚಿದೆ. ಮಾನವನನ್ನು ಪ್ರಕೃತಿಯ ತುಟ್ಟತುದಿಯಲ್ಲಿಟ್ಟು, ಅವನಿಗೆಂದೇ ಪಕೃತಿ, ಅವನಿಂದಲೇ ಪ್ರಕೃತಿ ಎಂಬ ಭಾವವೂ ಬದಲಾಗಬೇಕು. 


ಕಥಾಂಬರಿಯು ಸುಖಾಂತವಾಗಿ ವೈಜರ್ ನಿರಪರಾಧಿ ಎಂದು ತೀರ್ಪು ಕೊಟ್ಟಾಗ ಕ್ಯಾಥರೀನ್ ಮತ್ತು ವೈಜರ್ ನಡುವಿನ ಸಂಭಾಷಣೆ ನಮ್ಮನ್ನು ವಿವಿಧ ಆಯಾಮಗಳಲ್ಲಿ ಚಿಂತನೆ ಒಡ್ಡುತ್ತದೆ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529

ಪರೋಪಕಾರಾರ್ಥಂ ಇದಂ ಶರೀರಂ"(ಮಾನವರಾಗೋಣ)

 


ಪರೋಪಕಾರಾರ್ಥಂ ಇದಂ ಶರೀರಂ"


ನಾನು ಗೌರಿಬಿದನೂರಿನಲ್ಲಿ  ಕೆಲಸ ಮಾಡುವಾಗ ತೆಲುಗು ‌ಪಿಲ್ಮ್ ಗಳನ್ನು ಫಸ್ಟ್ ಡೇ ಫಸ್ವ್ ಶೋ ನೋಡುವ ಅಭ್ಯಾಸವಿತ್ತು. ಆಗ ನೋಡಿದ ಕೆಲವು ಚಿತ್ರಗಳಲ್ಲಿ ಮೆಗಾ ಸ್ಟರ್ ಚಿರಂಜೀವಿ ಅಭಿನಯದ ಟ್ಯಾಗೋರ್ ಚಿತ್ರ ನನಗೆ ಬಹಳ ಮೆಚ್ಚುಗೆಯಾಗಿತ್ತು ಅದಕ್ಕೆ ಕಾರಣ ಆ ಚಿತ್ರದ ಸಂದೇಶ! 

" ಯಾರಿಂದಲಾದರೂ ನೀನು  ಸಹಾಯ ಪಡೆದರೆ , ನೀನು ಮೂವರಿಗೆ  ಸಹಾಯ ಮಾಡು.ಪ್ರತಿಯಾಗಿ ಏನನ್ನೂ ಅಪೇಕ್ಷಿಸದೇ ಸಹಾಯ ಪಡೆದವರು  ಮತ್ತೆ ಮೂವರಿಗೆ ಸಹಾಯ ಮಾಡಲಿ" 

ಇದೇ ರೀತಿಯ ಸಂದೇಶ ಹೊತ್ತ ಒಂದು ಲೇಖನವನ್ನು ಮುಖ ಪುಟದಲ್ಲಿ ಓದಿದೆ...


ಕಾರು ನಿಂತಿತು,ಅದರಿಂದ ತರುಣಿಯೊಬ್ಬಳು ಕೆಳಗಿಳಿದಳು.ಟೈರ್ ಪಂಕ್ಚರ್ ಆಗಿತ್ತು.ಸ್ಟೆಪ್ನಿ ಇದ್ದರೂ ಅವಳಿಗೆ ಟೈಯರ್ ಚೇಂಜ್ ಮಾಡಲು ಬರುತ್ತಿರಲಿಲ್ಲ.

ರಸ್ತೆಯ ಬದಿಗೆ ನಿಂತು ಸಹಾಯಕ್ಕಾಗಿ ಯಾರನ್ನಾದರೂ ಹುಡುಕುತ್ತಿದ್ದಳು  ಯಾರೂ ನಿಲ್ಲುತ್ತಿಲ್ಲ. ಕೈಯಲ್ಲಿನ ವಾಚ್ ನೋಡಿಕೊಂಡಳು ಸಂಜೆ ಆರು ದಾಟಿದೆ.  ನಿಧಾನವಾಗಿ  ಕತ್ತಲಾಗುತ್ತಿದೆ.ಮನದಲ್ಲಿ ಆತಂಕ.ತಾನಿರುವುದು ಒಬ್ಬಳೇ.  ಬೇರೆ ಯಾರೂ ಇಲ್ಲ.ಇನ್ನೂ ಕತ್ತಲಾದರೆ???!!


ಸಮೀಪದಲ್ಲಿ ಯಾವುದೇ ಮನೆಗಳಿಲ್ಲ.ಸೆಲ್ ಕಾರ್ಯನಿರ್ವಹಿಸುತ್ತಿಲ್ಲ .ಆಗಲೇ ಸುಮಾರು ಒಂದು ಗಂಟೆ ಕಳೆದಿತ್ತು.ಭಯವಾಗಲು ಶುರುವಾಯಿತು. ಚಳಿಯೂ ಹೆಚ್ಚುತ್ತಿತ್ತು.


ಹಾದು ಹೋಗುತ್ತಿದ್ದ ಬೈಕೊಂದು ಮುಂದೆ ಹೋಗಿ  ಹಿಂತಿರುಗಿ ಬಂತು.ಒಬ್ಬ ವ್ಯಕ್ತಿ ಬೈಕ್ ಸ್ಟ್ಯಾಂಡ್ ಹಾಕಿ ಆಕೆಯ ಬಳಿ ಬಂದ.ಆಕೆಗೆ ಸಹಜವಾಗಿಯೇ ಭಯವಾಯಿತು.ಯಾರು?  ಅವನು ಯಾಕೆ ಬರುತ್ತಿದ್ದಾನೆ?


ಅವನು ನಗುತ್ತಾ ಹತ್ತಿರ ಬಂದನು.ಟೈರ್ನಲ್ಲಿ ಗಾಳಿ ಇಲ್ಲದಿರುವುದನ್ನು ನೋಡಿದ. ಅವಳು ಭಯಪಡುತ್ತಿದ್ದಾಳೆಂದು ಅವನಿಗೆ ಅರಿವಾಯಿತು.

"ಭಯ ಬೇಡ,ನಿಮಗೆ ಸಹಾಯ ಮಾಡಲು ಬಂದಿದ್ದೇನೆ.ತುಂಬಾ ಚಳಿಯಿದೆ.ನೀವು ಕಾರಿನಲ್ಲಿ ಕುಳಿತುಕೊಳ್ಳಿ.ನಾನು ಸ್ಟೆಪ್ನಿಯನ್ನು ಬದಲಾಯಿಸುತ್ತೇನೆ"ಎಂದು ಅವನು ಹೇಳಿದ.ಅವಳು ಹೆದರುತ್ತಲೇ ಇದ್ದಳು.


"ನನ್ನ ಹೆಸರು ಮಹೇಶ್.ನಾನು ಇಲ್ಲಿಯೇ ಸಮೀಪದ ಮೆಕ್ಯಾನಿಕ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದೇನೆ   ಎಂದನು.ಅವನು ಡಿಕ್ಕಿಯನ್ನು ತೆರೆದು ಅಗತ್ಯ ಸಾಮಾನುಗಳನ್ನು ತೆಗೆದುಕೊಂಡು ಕಾರಿನ ಕೆಳಗೆ ತೂರಿಕೊಂಡು ಜಾಕ್ ಎತ್ತಿ  ಟೈರ್ ಬದಲಿಸುವ ಕಾಯಕ ಆರಂಭಿಸಿದ.  ಡಾಂಬರು ರಸ್ತೆಯಲ್ಲಿ ಕೈಗಳು ತರಚಿಕೊಳ್ಳುತ್ತಿದ್ದವು.ಆದರೂ ಕಷ್ಟಪಟ್ಟು ಟೈರ್ ಬದಲಾಯಿಸಿದ.ಸಾಮಾನುಗಳನ್ನು ಮತ್ತೆ ಕಾರಿಗೆ ಹಾಕಿದ.ಅವಳು ಪರ್ಸ್ ತೆಗೆದು ಹಣ ಕೊಡಲು ಹೋಗುತ್ತಿದ್ದಂತೆ ಅವನು ಬೇಡ ಎಂದ.  


ಆಗ ಅವಳು ನೀವು ಇದನ್ನು ನಿರಾಕರಿಸಬೇಡಿ. ನೀವು ಈ ಸಹಾಯವನ್ನು ಮಾಡಿರದಿದ್ದರೆ....

"ನನ್ನ ಪರಿಸ್ಥಿತಿಯನ್ನು ನೆನೆದರೆ.ನನಗೇ ಭಯವಾಗುತ್ತಿದೆ" ಎಂದಳು 

ಆಗ ಅವನು ನಾನು ಕಷ್ಟದಲ್ಲಿದ್ದಾಗ ಯಾರೋ ನನಗೆ ಸಹಾಯ ಮಾಡಿದರು ಅಷ್ಟಕ್ಕೂ

ನೀವು ಸಹಾಯ ಮಾಡಲು ಬಯಸಿದರೆ ಯಾರಾದರೂ ತೊಂದರೆಯಲ್ಲಿದ್ದಾರೆ ಎಂದು ನಿಮಗೆ ತಿಳಿದರೆ ನನ್ನ ಹೆಸರಲ್ಲಿ ಅವರಿಗೆ ಸಹಾಯ ಮಾಡಿಬಿಡಿ" ಎನ್ನುತ್ತಲೇ ನಿಲ್ಲದೆ ಹೊರಟೇ ಬಿಟ್ಟನು.


ಮನಸ್ಸಿನಲ್ಲಿ ಅವನಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ ಕಾರನ್ನು ಓಡಿಸ ತೊಡಗಿದಳು.ಆಗ ಹಸಿವಾಗ ತೊಡಗಿತು.ಅಲ್ಲದೆ ಅವಳು ಇನ್ನೂ ಬಹಳ ದೂರ ಸಾಗಬೇಕಾಗಿತ್ತು.ಹಸಿವು ಮತ್ತು ಚಳಿ ಅವಳನ್ನು ರಸ್ತೆ ಬದಿಯ ಹೋಟೆಲ್‌ಗೆ ಹೋಗುವಂತೆ ಮಾಡಿತು. ಅದೊಂದು ಚಿಕ್ಕ ಹೋಟೆಲ್.ಗರ್ಭಿಣಿ ಮಹಿಳೆ ಗ್ರಾಹಕರ ಟೇಬಲ್ಗಳಿಗೆ ಸೇವೆ ಸಲ್ಲಿಸುತ್ತಿದ್ದಾಳೆ.  ಅವಳನ್ನು ನೋಡುತ್ತಿದ್ದರೆ ತುಂಬು ಗರ್ಭಿಣಿ ಅನ್ನಿಸಿತು. ಪ್ರಸವದ  ದಿನಗಳು ಸಮೀಪಿಸುತ್ತಿರುವಂತೆ ತೋರುತ್ತಿತ್ತು ಭಾರವಾಗಿ ನಡೆಯುವುದು,

ಎಲ್ಲಾ ಟೇಬಲ್ಗಳಿಗೆ ಹೋಗುವುದು,ಬೇಕಾದ ಆರ್ಡರ್ ತೆಗೆದುಕೊಳ್ಳುವುದು,ಬಡಿಸುವುದು,ಬಿಲ್ ತೆಗೆದುಕೊಳ್ಳುವುದು,ಚಿಲ್ಲರೆ ವಾಪಾಸ್ ಕೊಡುವುದು ಹೀಗೆ ಎಲ್ಲವನ್ನೂ ಒಬ್ಬಳೇ ಮಾಡುತ್ತಿದ್ದಳು.

ಆದರೂ ಅವಳ ಮುಖದಲ್ಲಿ ಮಾಸದ ನಗು!!


ಅವಳು ಈ ತರುಣಿಯ ಮೇಜಿನ ಬಳಿ ಬಂದಳು.  ನಗುತ್ತಾ "ನಿನಗೆ ಏನು ಬೇಕು?ಎಂದು ಕೇಳಿದಳು.

ಅಷ್ಟು ಕಷ್ಟಪಡುತ್ತಿದ್ದರೂ ಆಕೆಯ ಮುಖದಲ್ಲಿ ಮರೆಯಾಗದ ನಗು ಹೇಗಿದೆ?ಎಂದು ತರುಣಿ ಮನದಲ್ಲಿ ಆಶ್ಚರ್ಯಪಡುತ್ತಾ  ಆರ್ಡರ್ ಮಾಡಿದಳು.ಆಹಾರ ಬಂತು,ಊಟ ಮುಗಿಸಿ ಅವಳಿಗೆ 2000 ರೂಪಾಯಿಯ ನೋಟು ಕೊಟ್ಟಳು.

ಹೋಟೆಲ್ನಾಕೆ ಚಿಲ್ಲರೆ ತರಲು ಕೌಂಟರ್ನೆಡೆಗೆ ಹೋದಳು.ಹಿಂತಿರುಗಿ ಬಂದಾಗ ತರುಣಿ ಕಾಣಲಿಲ್ಲ. ಅವಳು ಕುಳಿತಿದ್ದ ಮೇಜಿನ ಮೇಲಿದ್ದ ನೀರಿನ ಲೋಟದ ಕೆಳಗೆ ಒಂದು ಕಾಗದ ಮತ್ತು ನಾಲ್ಕು 2000 ನೋಟುಗಳು ಕಾಣಿಸಿದವು.

ಹೋಟೆಲ್ನವಳಿಗೆ ಆ ಕಾಗದ ಓದಿ ಅಳು ತಡೆಯಲಾಗಲಿಲ್ಲ.

ಅದರಲ್ಲಿ ಬರೆದಿತ್ತು 

"ನಿಮ್ಮ ನಗುತ್ತಿರುವ ಮುಖವು ನೀವು ಬಳಲುತ್ತಿಲ್ಲ ಎಂದು ತೋರುತ್ತಿದೆಯಾದರೂ ತುಂಬು ಗರ್ಭಿಣಿಯಾದ ನೀವು ಇಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಿರುವೆರೆಂದರೆ ನಿಮಗೆ ಖಂಡಿತಾ ಹಣದ ಅವಶ್ಯಕತೆ ಇರುವಂತಿದೆ.ನನಗೆ ಈಗಷ್ಟೇ ಒಬ್ಬ ಮಹನೀಯ ಸಹಾಯ ಮಾಡಿದ್ದಾನೆ.

ನಾನು ನಿಮಗೆ ಸಹಾಯ ಮಾಡುತ್ತಿದ್ದೇನೆ.ಅದೇ ರೀತಿಯಲ್ಲಿ ನೀವೂ ಇತರರಿಗೆ ಸಹಾಯ ಮಾಡಿ." ಎಂದು ಬರೆದಿತ್ತು.


ಹೋಟೆಲ್ ಮುಚ್ಚಿ ಮನೆಗೆ ಬಂದಳು.ಅಷ್ಟರಲ್ಲೇ ಕೆಲಸಕ್ಕೆ ಹೋಗಿದ್ದ ಅವಳ ಗಂಡ ಮನೆಗೆ ಬಂದು ದಣಿವಾರಿಸಿಕೊಳ್ಳಲು ಮಂಚದಲ್ಲಿ ಮಲಗಿದ್ದ. ಅವನ ಕೈಗಳು ತರಚಿಕೊಂಡು ರಕ್ತದ ಕಲೆಗಳಿಂದ ಕೂಡಿದ್ದವು.ಅವಳ ಗಂಡ ಬೇರೆ ಯಾರೂ ಆಗಿರದೆ ಆ ಯುವತಿಗೆ ಟೈರ್ ಬಲಾಯಿಸಿ ಕೊಟ್ಟಿದ್ದ ಅದೇ ಮೆಕ್ಯಾನಿಕ್ ಆಗಿದ್ದ!


ಇವಳು ಅವನ ಪಕ್ಕದಲ್ಲಿ ಹಾಸಿಗೆಯ ಮೇಲೆ ಕೂಡುತ್ತಾ,ತನ್ನ ಪ್ರಸವವಾದರೆ ದುಡ್ಡನ್ನು ಹೊಂದಿಸುವುದು ಹೇಗೆ ಎಂದು ನಾವು ಚಿಂತಿತರಾಗಿದ್ದೆವಲ್ಲವೇ? ಇನ್ನು ಆ ಆತಂಕ ಬೇಡ!  ದೇವರು ನಮಗೆ ಸಹಾಯ ಮಾಡಿದನು ಎನ್ನುತ್ತಾ ನಡೆದುದೆಲ್ಲವನ್ನೂ ಶಾಂತವಾಗಿ ಹೇಳಿದಳು, ಅವನ ಕಣ್ಣಂಚಿನಲ್ಲಿ ಎರಡು ಹನಿ ಜಾರಿದವು...


ಅಗತ್ಯವಿರುವಾಗ ನಾವು ಇತರರಿಗೆ ಸಹಾಯ ಮಾಡುವ ಗುಣ ನಮ್ಮ ಭಾರತೀಯರಲ್ಲಿ ರಕ್ತಗತವಾಗಿ ಬಂದಿದೆ."ಪರೋಪಕಾರಾರ್ಥಂ ಇದಂ ಶರೀರಂ" ಎಂಬಂತೆ ನಾವು 

ನಿಜವಾಗಿಯೂ ಸಹಾಯಕ್ಕೆ ಅರ್ಹರಾಗಿರುವವರಿಗೆ ಸಹಾಯ ಮಾಡೋಣ. ಈ ಪ್ರಪಂಚ ಸಮಾಜ ಸರಿಯಿಲ್ಲ ಎಂಬ ಸಿನಿಕತನ ಬಿಟ್ಟು ಇನ್ನ ಒಳ್ಳೆಯತನವಿದೆ ಎಂದು ಸಾಬೀತುಮಾಡೋಣ.



ಸಿಹಿಜೀವಿ ವೆಂಕಟೇಶ್ವರ

ತುಮಕೂರು

14 March 2024

ಚಿತ್ರ ವಿಮರ್ಶೆ೨ ಪೈಟರ್ ..

 

ಚಿತ್ರ ವಿಮರ್ಶೆ೨

ಪೈಟರ್ ..


ರಿಲೀಸ್ ಆದ ಮೊದಲ ದಿನ 

ಮಿಶ್ರ ಪ್ರತಿಕ್ರಿಯೆಯನ್ನು ಪಡೆದ ಪೈಟರ್ ಚಲನಚಿತ್ರವನ್ನು ಐನಾಕ್ಸ್ 3 d ಚಿತ್ರಮಂದಿರದಲ್ಲಿ ನೋಡಿದೆ. 

ರಿತಿಕ್ ರೋಷನ್ ದೀಪಿಕಾ ಪಡುಕೋಣೆ ಮತ್ತು ಅನಿಲ್ ಕಪೂರ್ ರವರು ತಮ್ಮ ಅಭಿನಯದ ಮೂಲಕ ಗಮನ ಸೆಳೆಯುತ್ತಾರೆ. ಎರಡು ಗಂಟೆ 46 ನಿಮಿಷಗಳ ವೈಮಾನಿಕ ಯುದ್ಧದ ಕಥೆ ಮತ್ತು ಪ್ರಸ್ತುತ ಪಡಿಸಿದ ರೀತಿಯಲ್ಲಿ ಎಲ್ಲೂ ಬೋರ್ ಹೊಡೆಯುವುದಿಲ್ಲ.


ಕೋನಿಫೆರಸ್ ಮರಗಳಿಂದ ಕೂಡಿದ ಹಿಮಾಲಯದ ಹಿಮದಿಂದ ಆವೃತವಾದ ಪರ್ವತಗಳ ದೃಶ್ಯಗಳು ತ್ರಿಡಿ ನಲ್ಲಿ ಮುದ ನೀಡುತ್ತವೆ ಸಿದ್ಧಾರ್ಥ್ ಆನಂದ್ ಅವರ ನಿರ್ದೇಶನ ಮತ್ತು ಕಥೆ ಹೇಳುವಿಕೆಯು ಗಮನ ಸೆಳೆಯುತ್ತದೆ. 

ಕೆಲ ತಾಂತ್ರಿಕ ಅಂಶಗಳನ್ನು

 IAF ಅನುಭವಿಗಳು   ನೀಡಿದ ಸಲಹೆಯನ್ನು ಆಲಿಸಿದ್ದಾರೆ.

ಇಡೀ ಕಥೆಯು ಹೃತಿಕ್ ರೋಷನ್ ಅವರ ಪ್ಯಾಟಿ, ಗುಂಗ್-ಹೋ ಫೈಟರ್ ಪೈಲಟ್ ಮತ್ತು ಧ್ರುವ್ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ ಅನ್ನು ಹಾರಿಸುವ ಸುಂದರ ದೀಪಿಕಾ ಪಡುಕೋಣೆ ಅವರ  ಸುತ್ತ ಸುತ್ತುತ್ತದೆ.

 ಪುಲ್ವಾಮಾ ದಾಳಿಯ ನಂತರ ಕಾಶ್ಮೀರ ಕಣಿವೆಯಲ್ಲಿ ವಿಶೇಷವಾಗಿ ಆಯ್ಕೆಯಾದ ವಾಯು ಯೋಧರ ತಂಡದಲ್ಲಿ.

ಅನಿಲ್ ಕಪೂರ್ ಲೀಡಿಂಗ್ ಆಫಿಸರ್ ಆಗಿ ಶತ್ರು ದೇಶದ ವಿಧ್ವಂಸಕ ಕೃತ್ಯಗಳನ್ನು ಹೇಗೆ ಎದುರಿಸುತ್ತಾರೆ ಎಂಬುದನ್ನು ತೆರೆಯ ಮೇಲೆ ನೋಡಿಯೇ ಆನಂದಿಸಬೇಕು.

 

ಚಿತ್ರದ ಸಂಭಾಷಣೆಗಳು ಕೆಲವೆಡೆ ಕಚಗುಳಿಯಿಡುವ   ಹಾಸ್ಯದಿಂದ ಕೂಡಿದ್ದು  ನಗುವನ್ನು ತರುತ್ತದೆ.ಕೆಲವು ಭಾವುಕ ಸನ್ನಿವೇಶಗಳಲ್ಲಿ ಕಣ್ಣಲ್ಲಿ ನೀರು ಜಿನುಗುತ್ತವೆ.

ಚಿತ್ರದಲ್ಲಿ ಯುದ್ಧದಲ್ಲಿ ವಿಮಾನಗಳನ್ನು ತೋರಿಸಲು ಉತ್ತಮ ಪ್ರಯತ್ನದೊಂದಿಗೆ  ಫೋಟೋಗ್ರಫಿಯ ಕಣ್ಣಿಗೆ ಔತಣ ನೀಡುತ್ತದೆ.

ಒಟ್ಟಾರೆ ಪೈಟರ್  ಎಲ್ಲಾ ವಯೋಮಾನದವರು ನೋಡಬೇಕಾದ ಚಿತ್ರವೆಂದರೆ ತಪ್ಪಾಗಲಾರದು. ಈ ಚಿತ್ರ ನೋಡಿ ಬಂದ ಮೇಲೆ   ಸೈನ್ಯದ ಬಗ್ಗೆ ಮತ್ತು ದೇಶದ ಬಗ್ಗೆ ಅಭಿಮಾನ ಇಮ್ಮಡಿಯಾಗುವುದರಲ್ಲಿ ಸಂದೇಹವಿಲ್ಲ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು


ಶೂನ್ಯ ತಾರತಮ್ಯ ದಿನ

 


ಶೂನ್ಯ ತಾರತಮ್ಯ ದಿನ 


ಭಾರತೀಯ ಸಮಾಜದಲ್ಲಿ ಮತ್ತು ವಿಶ್ವದ ಎಲ್ಲಾ ದೇಶಗಳಲ್ಲಿ ಸಮ ಸಮಾಜ ನಿರ್ಮಾಣದಲ್ಲಿ ಹಲವು ಮಹಾನ್ ಪುರುಷರು ಪ್ರಯತ್ನ ಮಾಡಿದರೂ ಇಂದಿಗೂ ಅಲ್ಲಲ್ಲಿ ತಾರತಮ್ಯ ಇಣುಕಿ ನಮ್ಮನ್ನು ಅಣಕಿಸುತ್ತಿರುವುದು ವಿಪರ್ಯಾಸ.

ತಾರತಮ್ಯ ನಿವಾರಣೆ ದೃಷ್ಟಿಯಿಂದ  ವಿಶ್ವಸಂಸ್ಥೆ  ಮತ್ತು ಇತರ ಅಂತರರಾಷ್ಟ್ರೀಯ ಸಂಸ್ಥೆಗಳು ಪ್ರತಿ ವರ್ಷ ಮಾರ್ಚ್ 1 ರಂದು 

ಶೂನ್ಯ ತಾರತಮ್ಯ ದಿನವಾಗಿ ಆಚರಿಸಲಾಗುತ್ತದೆ.

  ವಿಶ್ವ ಸಂಸ್ಥೆಯ   ಎಲ್ಲಾ ಸದಸ್ಯ ರಾಷ್ಟ್ರಗಳಲ್ಲಿ ಕಾನೂನಿನ ಮುಂದೆ ಮತ್ತು ಆಚರಣೆಯಲ್ಲಿ ಸಮಾನತೆಯನ್ನು ಉತ್ತೇಜಿಸುವ ಗುರಿಯನ್ನು ಈ ದಿನ ಹೊಂದಿದೆ . ಈ ದಿನವನ್ನು ಮೊದಲ ಬಾರಿಗೆ ಮಾರ್ಚ್ 1, 2014 ರಂದು ಆಚರಿಸಲಾಯಿತು ಮತ್ತು UNAIDS ಕಾರ್ಯನಿರ್ವಾಹಕ ನಿರ್ದೇಶಕ ಮೈಕೆಲ್ ಸಿಡಿಬೆ ಅವರು ಆ ವರ್ಷದ ಫೆಬ್ರವರಿ 27 ರಂದು ಬೀಜಿಂಗ್‌ನಲ್ಲಿ ಪ್ರಮುಖ ಕಾರ್ಯಕ್ರಮದೊಂದಿಗೆ ಪ್ರಾರಂಭಿಸಿದರು .



ಎಚ್‌ಐವಿ ಅಥವಾ ಏಡ್ಸ್‌ನೊಂದಿಗೆ ಜೀವಿಸುವ ಜನರ ವಿರುದ್ಧ ತಾರತಮ್ಯವನ್ನು ಎದುರಿಸುವ ಯುಎನ್‌ಎಐಡಿಎಸ್‌ನಂತಹ ಸಂಸ್ಥೆಗಳಿಂದ ಈ ದಿನವನ್ನು ವಿಶೇಷವಾಗಿ ಗುರುತಿಸಲಾಗಿದೆ. 


ಭಾರತವು ತಾರತಮ್ಯ ವಿರೋಧಿ ಧೋರಣೆಯನ್ನು ಕಾನೂನು ಮತ್ತು ನೈತಿಕ ನೆಲೆಗಟ್ಟಿನಲ್ಲಿ ಜಾರಿಗೊಳಿಸಿದೆ. ಅದರಲ್ಲಿ ಪ್ರಮುಖವಾದ ಅಂಶಗಳೆಂದರೆ 

ಭಾರತದ ಸಂವಿಧಾನದ 14, 15, 16, 17 ಮತ್ತು 18

ಸಮಾನ ಸಂಭಾವನೆ ಕಾಯಿದೆ, 1976 ರ ಪುರುಷರು ಮತ್ತು ಮಹಿಳೆಯರಿಗೆ ಸಮಾನ ಕೆಲಸಕ್ಕೆ ಸಮಾನ ವೇತನವನ್ನು ಖಾತರಿಪಡಿಸುತ್ತದೆ.

ಭಾರತೀಯ ದಂಡ ಸಂಹಿತೆ , 1860 (ವಿಭಾಗ 153 ಎ) - ಜನಾಂಗ, ಜಾತಿ, ಲಿಂಗ, ಜನ್ಮ ಸ್ಥಳ, ಧರ್ಮ, ಲಿಂಗ ಗುರುತು, ಲೈಂಗಿಕ ದೃಷ್ಟಿಕೋನ ಅಥವಾ ಯಾವುದೇ ಇತರ ವರ್ಗದ ಆಧಾರದ ಮೇಲೆ ಜನರ ವಿರುದ್ಧ ತಾರತಮ್ಯ ಅಥವಾ ಹಿಂಸೆಯನ್ನು ಉತ್ತೇಜಿಸುವ ಭಾಷೆಯ ಬಳಕೆಯನ್ನು ಅಪರಾಧ ಮಾಡುತ್ತದೆ. 

ಮಾನಸಿಕ ಆರೋಗ್ಯ ಕಾಯಿದೆ, 2017 - ಜನಾಂಗ, ಜಾತಿ, ಧರ್ಮ, ಹುಟ್ಟಿದ ಸ್ಥಳ, ಲಿಂಗ, ಲಿಂಗ ಗುರುತು, ಲೈಂಗಿಕ ದೃಷ್ಟಿಕೋನ, ಅಂಗವೈಕಲ್ಯ ಅಥವಾ ಯಾವುದೇ ಇತರ ವರ್ಗದ ಆಧಾರದ ಮೇಲೆ ಜನರಿಗೆ ಮಾನಸಿಕ ಆರೋಗ್ಯ ಸೌಲಭ್ಯಗಳು ಅಥವಾ ಸೇವೆಗಳನ್ನು ಪ್ರವೇಶಿಸಲು ನಿರಾಕರಣೆ ಅಥವಾ ನಿರಾಕರಣೆ ನಿಷೇಧಿಸುತ್ತದೆ. 

ಹಿಂದೂ ಉತ್ತರಾಧಿಕಾರ ಕಾಯಿದೆ, 1956   ಆಸ್ತಿಯನ್ನು ಹೊಂದಿದ್ದ ಮಹಿಳೆಯರ "ಸೀಮಿತ ಮಾಲೀಕ" ಸ್ಥಿತಿಯನ್ನು ರದ್ದುಗೊಳಿಸಲಾಯಿತು, 2004 ರಲ್ಲಿ ತಿದ್ದುಪಡಿ ಮಾಡಲಾಗಿದ್ದು, ಪುತ್ರಿಯರಿಗೆ ಪುತ್ರರೊಂದಿಗೆ ಸಮಾನ ಉತ್ತರಾಧಿಕಾರದ ಹಕ್ಕುಗಳನ್ನು ನೀಡಲಾಯಿತು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯಗಳ ತಡೆ) ಕಾಯಿದೆ, 1989 ಇದು  ನಿರ್ದಿಷ್ಟವಾಗಿ ಜಾತಿಯ ಆಧಾರದ ಮೇಲೆ ಎಲ್ಲಾ ರೀತಿಯ ತಾರತಮ್ಯ ಮತ್ತು ದ್ವೇಷದ ಅಪರಾಧಗಳನ್ನು  ಕುರಿತು ಚರ್ಚಿಸುತ್ತದೆ.


ವಿಕಲಾಂಗ ವ್ಯಕ್ತಿಗಳ ಹಕ್ಕುಗಳ ಕಾಯಿದೆ, 2016 - ನಿರ್ದಿಷ್ಟವಾಗಿ ದೈಹಿಕ, ಮಾನಸಿಕ ವಿಕಲಾಂಗ ವ್ಯಕ್ತಿಗಳ ವಿರುದ್ಧ ತಾರತಮ್ಯ ಮತ್ತು ಹಿಂಸೆಯನ್ನು ನಿಷೇಧಿಸುತ್ತದೆ. 

ಇದರ ಜೊತೆಯಲ್ಲಿ ಕಾಲಕಾಲಕ್ಕೆ  ತಾರತಮ್ಯ ನಿವಾರಣೆಗೆ ಹಲವಾರು ಕ್ರಮಗಳನ್ನು ಸರ್ಕಾರ ಜಾರಿಗೆ ತಂದಿದೆ ಆದರೆ ಸಮರ್ಪಕವಾಗಿ ಅವುಗಳ ಅನುಷ್ಠಾನದ ಅಗತ್ಯವಿದೆ. ಇದಕ್ಕೆ ಜನರ ಮತ್ತು ಸಮುದಾಯದ ಸಕಾರಾತ್ಮಕ ಸ್ಪಂದನೆಯೂ ಅಪೇಕ್ಷಣೀಯ.


ಸಿಹಿಜೀವಿ ವೆಂಕಟೇಶ್ವರ

ದವಸ...ಹನಿ

 



ದವಸ 


ಪ್ರೀತಿಯಿಂದ ನುಡಿದನವನು

ಪ್ರಿಯೆ ನನಗಿಷ್ಟದ ತಿಂಡಿ

ತಿನಿಸುಗಳನ್ನು ಮಾಡಿ ಬಿಡು

ಈ ದಿವಸ|

ನಗುತ್ತಲೇ ಉತ್ತರಿಸಿದಳವಳು

ಇನಿಯ ಈಗಲೆ ತಂದು

ಬಿಡು ದವಸ|


ಸಿಹಿಜೀವಿ ವೆಂಕಟೇಶ್ವರ

ತುಮಕೂರು

ಬಾಳೆ ಗರಿ ಸಾಹಿತ್ಯ!


 


ಶಾಲೆಯ ಅಂಗಳ ೧


ಬಾಳೆಗರಿ ಸಾಹಿತ್ಯ...

ಹತ್ತನೇ ತರಗತಿಯ ಪರೀಕ್ಷೆಗೆ ಹದಿನೈದು ದಿನ ಬಾಕಿ ಎಂದು ಮಕ್ಕಳಿಗೆ ಮನವರಿಕೆ ಮಾಡಿಕೊಡುತ್ತಾ ಮೇಡಂ ರವರು ಕಲಿತ ಕಲಿಕಾಂಶಗಳ  ಪುನರಾವರ್ತನೆ ಮಾಡುತ್ತಾ ಮಕ್ಕಳಿಗೆ  ಮಾರ್ಗದರ್ಶನ ಮಾಡುತ್ತಿದ್ದರು. 

ಒಳಗೆ ಬೇಸಿಗೆಯ ಬಿಸಿಲ ಝಳ ವೆಂದು ಕೈತೋಟದ ತಂಪನೆಯ ವಾತಾವರಣದಲ್ಲಿ ಕೆಲ ವಿದ್ಯಾರ್ಥಿಗಳಿಗೆ ಓದಲು ಅವಕಾಶ ನೀಡಲಾಗಿತ್ತು.ಓರ್ವ ಬಾಲಕಿ ಬಾಳೆ ಗಿಡದ ಎಲೆಯನ್ನು ತೆಗೆದುಕೊಂಡು ಅದರಲ್ಲಿ ಕೆಲ ಸಾಲುಗಳನ್ನು ಬರೆಯುತ್ತಿದ್ದಳು.ಇದನ್ನು ಗಮನಿಸಿದ ಶಿಕ್ಷಕಿ ಓಲೆ ಗರಿಯಂತೆ ಬಾಳೆ ಗರಿಯಲ್ಲಿ ಬರೆಯುವೆ ಏಕೆ ಎಂದು ನೋಡಿದಾಗ ಆ ಬಾಳೆಗರಿಯಲ್ಲಿ ಬರೆದ ಪದಗಳು ಶಾಲಾ ಪಠ್ಯಕ್ಕೆ ಸಂಬಂಧಿಸಿರಲಿಲ್ಲ.ಯಾವುದೋ ಕವನದಂತೆ ಭಾಸವಾಯಿತು.ಈಗ ಕವನ ಬರೆಯುವ ಸಮಯವಲ್ಲ ಓದಿನ ಕಡೆ ಗಮನ ಇರಲಿ ಎಂದು ಬುದ್ದಿ ಹೇಳಿ ಬಾಳೆ ಗರಿಯನ್ನ ಸಹೋದ್ಯೋಗಿಗಳಿಗೆ ತೋರಿಸದರು.ಓರ್ವ ಸಹೋದ್ಯೋಗಿ ಈ ಪದಗಳನ್ನು ಎಲ್ಲೋ ನೋಡಿದ ಕೇಳಿದ ಹಾಗಿದೆಯಲ್ಲ ಎಂದು ಚೆಕ್ ಮಾಡಿದಾಗ ಅದು ಇತ್ತೀಚಿಗೆ ಬಿಡುಗಡೆಯಾದ  ಶಿವರಾಜ್ ಕುಮಾರ್ ರವರ ವೇದ ಚಿತ್ರದ ಗೀತೆ! ಮತ್ತೆ ಆ ಬಾಲಕಿ ಕರೆದು ವಿಚಾರಿಸಲಾಗಿ ಸುಮಾರು ಇನ್ನೂರು ಪುಟಗಳ ಪುಸ್ತಕದಲ್ಲಿ ಬರೀ ಸಿನಿಮಾ ಗೀತೆಗಳನ್ನು ಬರೆದಿದದ್ದು ಗಮನಕ್ಕೆ ಬಂತು.ಕುತೂಹಲಕ್ಕೆ ಎಲ್ಲಾ ವಿಷಯಗಳ ನೋಟ್ಸ ಕೇಳಿದರೆ ಎರಡು ವಿಷಯಗಳ ನೋಟ್ಸ್ ಕಂಪ್ಲೀಟ್ ಆಗಿರಲಿಲ್ಲ.ಯಾಕೆ ಹೀಗೆ ಮಾಡಿದೆ ಓದುವ ಬರೆಯುವ ಕಾಲದಲ್ಲಿ ಪರೀಕ್ಷೆ ಹತ್ತಿರವಿರುವ ಈ ಸಮಯದಲ್ಲಿ ಸಿನಿಮಾ ಗೀತೆ ಬರೆಯುತ್ತಿರುವೆ ಎಂದು ಕೇಳಿದರೆ ಅದಕ್ಕೆ ಸ್ಪೂರ್ತಿ ತಮ್ಮ ಪಕ್ಕದ ಮ‌ನೆಯ ಅಕ್ಕ!  ಅವಳು ಪಿ ಯು ಓದುತ್ತಿದ್ದು ಈಗಾಗಲೇ ಎರಡು ಇನ್ನೂರು ಪೇಜ್ ಪುಸ್ತಕದಲ್ಲಿ ಸಿನಿಮಾ ಹಾಡು ಬರೆದಿದ್ದಾರೆ ನಾನು ಮೂರು ಬರೆಯಲು ತೀರ್ಮಾನಕ್ಕೆ ಬಂದು ಹೀಗೆ ಮಾಡಿದೆ ಅಂದಳು ಮೇಡಂ ರವರು ಸಮಾಧಾನದಿಂದ ಆ ಬಾಲಕಿಗೆ ಕೌನ್ಸಿಲಿಂಗ್ ಮಾಡಿ ಹಾಡು ಮನರಂಜನೆ ತಪ್ಪಲ್ಲ ಆದರೆ ಪರೀಕ್ಷ ಸಮಯದಲ್ಲಿ ಅವು ಗೌಣವಾಗಿ ಓದಿನ ಕಡೆ ಗಮನ ಹರಿಸು ಎಂದು ಹೇಳಿ ಕಳಿಸಿದರು. 

ವಿದ್ಯಾರ್ಥಿಗಳೆ ನಿಮ್ಮ ಸಹ ಪಠ್ಯ ಚಟುವಟಿಕೆಗಳು ಖಂಡಿತವಾಗಿಯೂ ಬೇಕು. ಹಾಡು ಸಂಗೀತ ಕೆಲವೊಮ್ಮೆ ಓದಿನ ಒತ್ತಡ ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಅವು ನಿಮ್ಮ ಸರ್ವತೋಮುಖ ಬೆಳವಣಿಗೆಗೆ ಪೂರಕ ಆದರೆ  ಪರೀಕ್ಷಾ  ಕಾಲದಲ್ಲ  ಮಿತಿಯಲ್ಲಿದ್ದರೆ ಒಳಿತಲ್ಲವೇ? 

12 March 2024

ನೊಂದವರ ಪಾಲಿನ ದೇವರು ನೂರುನ್ನೀಸಾ*

 


*ನೊಂದವರ ಪಾಲಿನ ದೇವರು

ನೂರುನ್ನೀಸಾ*


ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮುಖ್ಯಸ್ಥರು| 

ನ್ಯಾಯಯುತ ತೀರ್ಪು ನೀಡುವ

ಮೂಲಕ ನೊಂದವರ ಪಾಲಿಗೆ ಆಗಿದ್ದಾರೆ ದೇವರು||


ಇವರು ಹಸನ್ಮುಖಿ ಸರಳ ಸಜ್ಜನ ನ್ಯಾಯಾಧೀಶರು|

ಇವರ ಕಣ್ಣಲಿ ಎಲ್ಲರ ಸಮಾನರೆ

ಬೇಧ ಮಾಡುವುದಿಲ್ಲ ಅವರು||


ಕಾನೂನುಗಳು ನಲಿದಾಡುತ್ತವೆ ಇವರ ನಾಲಿಗೆಯ ಮೇಲೆ|

 ಇವರಿಗೆ   ಕೃತಜ್ಞತೆ ಸಲ್ಲಿಸುತ್ತಿಹರು ನೂರಾರು ಜನ ಬರೆದು ಓಲೆ||


ಇವರು ನಮ್ಮಯ ಹೆಮ್ಮೆಯ ನ್ಯಾಯಾಧೀಶರು ನೂರುನ್ನಿಸಾ|

ಇವರಿಗೆ ಚಪ್ಪಾಳೆ ತಟ್ಟಿ ಬಿಡಿ

ಸುಮ್ಮನೆ ಯಾಕೆ ಎಣಿಸುವೆ ಮೀನಾ ಮೇಷ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು




10 March 2024

ರಾಮಭದ್ರಾಚಾರ್ಯರು!





ರಾಮಭದ್ರಾಚಾರ್ಯರು! 

ತನಗೆ ಕಣ್ಣು ಕಾಣದಿದ್ದರೂಕೊಟ್ಯಂತರ ಅದ ಬೆಳಕ ನೀಡಿದ, ಸಾವಿರಾರು ವಿಶೇಷ ಚೇತನರ ಬಾಳಿಗೆ ಆಶಾಕಿರಣವಾದವರು ಈಗ ಭಾರತ ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಪುರಸ್ಕಾರವಾದ ಜ್ಞಾನಪೀಠ ಪ್ರಶಸ್ತಿ ಪಡೆದು ತಮ್ಮ ವಿದ್ವತ್ ಸಾಬೀತುಪಡಿಸಿದ್ದಾರೆ. ಇವರು ವಿಶೇಷ ಚೇತನ  ಬಹುಮುಖ ಪ್ರತಿಭೆ   ಭಾರತೀಯ ಹಿಂದೂ ಆಧ್ಯಾತ್ಮಿಕ ನಾಯಕ, ಶಿಕ್ಷಣತಜ್ಞ, ಸಂಸ್ಕೃತ ವಿದ್ವಾಂಸ, ಬಹುಭಾಷಾ ಕವಿ, ಲೇಖಕ, ಪಠ್ಯ ವ್ಯಾಖ್ಯಾನಕಾರ, ತತ್ವಜ್ಞಾನಿ, ಸಂಯೋಜಕ, ಗಾಯಕ, ನಾಟಕಕಾರ ಮತ್ತು ಕಥಾ ಕಲಾವಿದ ಹೀಗೆ ಪಟ್ಟಿ ಬೆಳೆಯುತ್ತ ಸಾಗುತ್ತದೆ ಅವರೇ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾಮಭದ್ರಾಚಾರ್ಯರು!


 ರಾಮಭದ್ರಾಚಾರ್ಯರು ಪ್ರಸ್ತುತ ಚಿತ್ರಕೂಟ ತುಳಸಿ ಪೀಠದ ಸಂಸ್ಥಾಪಕರು ಮತ್ತು ಮುಖ್ಯಸ್ಥರಾಗಿದ್ದು ನಾಲ್ಕು ವಿಧದ ವಿಶೇಷಚೇತನ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್ಗಳನ್ನು ಒದಗಿಸುವ ಚಿತ್ರಕೂಟದಲ್ಲಿರುವ ಜಗದ್ಗುರು ರಾಮಭದ್ರಾಚಾರ್ಯ ಅಂಗವಿಕಲ ವಿಶ್ವವಿದ್ಯಾಲಯದ ಸಂಸ್ಥಾಪಕರು ಮತ್ತು ಆಜೀವ ಕುಲಪತಿಯಾಗಿದ್ದಾರೆ. ಎರಡು ತಿಂಗಳ ವಯಸ್ಸಿನಿಂದ ಕುರುಡರಾಗಿದ್ದ ಇವರು ಹದಿನೇಳನೆ  ವರ್ಷಗಳ ವಯಸ್ಸಿನವರೆಗೆ ಯಾವುದೇ ಔಪಚಾರಿಕ ಶಿಕ್ಷಣವನ್ನು ಪಡೆಯಲಿಲ್ಲ. ನಂತರ ಛಲದಿಂಧ ವಿದ್ಯಾಭ್ಯಾಸ ಪಡೆದು ಪವಾಡ ಮಾಡಿ ತೋರಿಸಿದ್ದಾರೆ.ಈಗ ಅವರು ೨೨ ಭಾಷೆಗಳನ್ನು ಮಾತನಾಡಬಲ್ಲರು  ಮತ್ತು ಸಂಸ್ಕೃತ, ಹಿಂದಿ, ಅವಧಿ, ಮೈಥಿಲಿ ಮತ್ತು ಹಲವಾರು ಇತರ ಭಾಷೆಗಳಲ್ಲಿ ಕವಿ ಮತ್ತು ಬರಹಗಾರರಾಗಿದ್ದಾರೆ ಅವರು ೨೪೦ ಕ್ಕೂ ಹೆಚ್ಚು ಪುಸ್ತಕಗಳು ಮತ್ತು ೫೦ ಪ್ರಬಂಧಗಳು ನಾಲ್ಕು ಮಹಾಕಾವ್ಯಗಳನ್ನು ರಚಿಸಿರುವರು. ತುಳಸಿದಾಸರ ರಾಮಚರಿತಮಾನಸ್ ಮತ್ತು ಹನುಮಾನ್ ಚಾಲೀಸಾದ ಹಿಂದಿ ವ್ಯಾಖ್ಯಾನಗಳು  ಪದ್ಯದಲ್ಲಿ ಸಂಸ್ಕೃತ ವ್ಯಾಖ್ಯಾನ ಅಷ್ಟಾಧ್ಯಾಯಿ ಮತ್ತು ಪ್ರಸ್ಥಾನತ್ರಯೀ ಗ್ರಂಥಗಳ ಸಂಸ್ಕೃತ ವ್ಯಾಖ್ಯಾನಗಳು. ಸಂಸ್ಕೃತ ವ್ಯಾಕರಣ, ನ್ಯಾಯ ಮತ್ತು ವೇದಾಂತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಪಾರÀ ಜ್ಞಾ£ ಹೊಂದಿದ್ದಾರೆ ಮತ್ತು ರಾಮಚರಿತಮಾನಸ್‌ನ ವಿಮರ್ಶಾತ್ಮಕ ಆವೃತ್ತಿಯ ಸಂಪಾದಕರಾಗಿದ್ದಾರೆ.  ಅವರು ರಾಮಾಯಣ ಮತ್ತು ಭಾಗವತಕ್ಕೆ ಕಥಾ ಕಲಾವಿದರಾಗಿದ್ದಾರೆ. ಅವರ ಕಥಾ ಕಾರ್ಯಕ್ರಮಗಳು ಭಾರತ ಮತ್ತು ಇತರ ದೇಶಗಳ ವಿವಿಧ ನಗರಗಳಲ್ಲಿ ಈಗಲೂ ನಡೆಯುತ್ತವೆ.  ಶುಭ ಟಿವಿ, ಸಂಸ್ಕಾರ್ ಟಿವಿ ಮತ್ತು ಸನಾತನ ಟಿವಿಯಂತಹ ದೂರದರ್ಶನ ಚಾನೆಲ್‌ಗಳಲ್ಲಿ ಇವರ ಅಧ್ಯಾತ್ಮಿಕ ಕಾರ್ಯಕ್ರಮಗಳು  ಪ್ರಸಾರವಾಗುತ್ತವೆ.ಜಗದ್ಗುರು ರಾಮಭದ್ರಾಚಾರ್ಯರು ಪಂಡಿತ್ ಶ್ರೀ ರಾಜ್‌ದೇವ್ ಮಿಶ್ರಾ ಮತ್ತು ಶ್ರೀಮತಿ ಶಚಿದೇವಿ ಮಿಶ್ರಾ ದಂಪತಿಗಳಿಗೆ ಭಾರತದ ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯ ಶಾಂಡಿಖುರ್ದ್ ಗ್ರಾಮದಲ್ಲಿ ವಸಿಷ್ಠ ಗೋತ್ರದ ಸರಯುಪರೀನ್ ಬ್ರಾಹ್ಮಣ ಕುಟುಂಬದಲ್ಲಿ ಮಕರ ಸಂಕ್ರಾಂತಿ ದಿನ ೧೪ ಜನವರಿ ೧೯೫೦ ರಂದು ಜನಿಸಿದರು. ಅವರ ಬಾಲ್ಯದ ಹೆಸರು ಗಿರಿಧರ್  ಎರಡು ತಿಂಗಳ ವಯಸ್ಸಿನಲ್ಲಿದ್ದಾಗ ಅವನ ಕಣ್ಣುಗಳು ಟ್ರಾಕೋಮಾದಿಂದ ಸೋಂಕಿಗೆ ಒಳಗಾದವು. ಗ್ರಾಮದಲ್ಲಿ ಚಿಕಿತ್ಸೆಗಾಗಿ ಯಾವುದೇ ಸುಧಾರಿತ ಸೌಲಭ್ಯಗಳು ಇರಲಿಲ್ಲ, ಆದ್ದರಿಂದ ಅವರನ್ನು ಹತ್ತಿರದ ಹಳ್ಳಿಯ ವಯಸ್ಸಾದ ಮಹಿಳೆಯ ಬಳಿಗೆ ಕರೆದೊಯ್ದರು. ಅವರು ಗಿರಿಧರ್‌ನ ಕಣ್ಣುಗಳಿಗೆ ಮೈರೋಬಾಲನ್‌ನ ಪೇಸ್ಟ್ ಅನ್ನು ಹಚ್ಚಿದಳು, ಆಗ ಅವನ ಕಣ್ಣುಗಳಲ್ಲಿ  ರಕ್ತಸ್ರಾವವಾಗಿ ದೃಷ್ಟಿ ಕಳೆದುಹೋಯಿತು.  ಆಯುರ್ವೇದ,ಹೋಮಿಯೋಪತಿ, ಅಲೋಪತಿ, ಹೀಗೆ ಎಲ್ಲಾ ಚಿಕಿತ್ಸೆ ಮಾಡಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.


ಅನೌಪಚಾರಿಕವಾಗಿ  ಅವರ ಅಜ್ಜನಿಂದ ಪ್ರಾರಂಭಿಕ ಶಿಕ್ಷಣವು ಪಡೆದರು.  ಮಧ್ಯಾಹ್ನದ ಸಮಯದಲ್ಲಿ, ಅವರ ಅಜ್ಜ ಅವರಿಗೆ ಹಿಂದೂ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದ ವಿವಿಧ ಕಂತುಗಳನ್ನು ಮತ್ತು ವಿಶ್ರಂಸಾಗರ, ಸುಖಸಾಗರ, ಪ್ರೇಮಸಾಗರ ಮತ್ತು ಬ್ರಜ್ವಿಲಾಸ್ ಮುಂತಾದ ಭಕ್ತಿ ಕೃತಿಗಳನ್ನು ವಿವರಿಸುತ್ತಿದ್ದರು. ಮೂರು ವರ್ಷದವನಿದ್ದಾಗ, ಗಿರಿಧರ್ ತನ್ನ ಮೊದಲ ಕವನವನ್ನು ಅವದಿ ಭಾಷೆಯಲ್ಲಿ  ರಚಿಸಿದರು ಮತ್ತು ಅದನ್ನು ತನ್ನ ಅಜ್ಜನಿಗೆ ಹೇಳಿದರು.ಐದನೇ ವಯಸ್ಸಿನಲ್ಲಿ ಗಿರಿಧರ್  ತಮ್ಮ ನೆರೆಹೊರೆಯವರಾದ ಪಂಡಿತ್ ಮುರಳೀಧರ್ ಮಿಶ್ರಾ ಅವರ ಸಹಾಯದಿಂದ ೧೫ ದಿನಗಳಲ್ಲಿ ಸುಮಾರು ೭೦೦ ಶ್ಲೋಕಗಳನ್ನು ಒಳಗೊಂಡಿರುವ ಸಂಪೂರ್ಣ ಭಗವದ್ಗೀತೆಯನ್ನು ಕಂಠಪಾಠ ಮಾಡಿದರು. ೧೯೫೫ರ ಜನ್ಮಾಷ್ಟಮಿ ದಿನದಂದು ಅವರು ಸಂಪೂರ್ಣ ಭಗವದ್ಗೀತೆಯನ್ನು ಪಠಿಸಿದರು. ಏಳು ವರ್ಷದವನಿದ್ದಾಗ, ಅವರು ೬೦ ದಿನಗಳಲ್ಲಿ ೧೦,೯೦೦ ಶ್ಲೋಕಗಳನ್ನು ಒಳಗೊಂಡ ತುಳಸೀದಾಸರ ಸಂಪೂರ್ಣ ರಾಮಚರಿತಮಾನಗಳನ್ನು ಕಂಠಪಾಠ ಮಾಡಿದರು, ೧೯೫೭ರ ರಾಮ ನವಮಿಯ ದಿನದಂದು ಉಪವಾಸವಿದ್ದು ಇಡೀ ಮಹಾಕಾವ್ಯವನ್ನು ಪಠಿಸಿದರು. ನಂತರ ಗಿರಿಧರ್ ಅವರು ವೇದಗಳು, ಉಪನಿಷತ್ತುಗಳು, ಸಂಸ್ಕೃತ ವ್ಯಾಕರಣದ ಕೃತಿಗಳು, ಭಾಗವತ ಪುರಾಣ, ತುಳಸಿದಾಸರ ಎಲ್ಲಾ ಕೃತಿಗಳು ಮತ್ತು ಸಂಸ್ಕೃತ ಮತ್ತು ಭಾರತೀಯ ಸಾಹಿತ್ಯದಲ್ಲಿನ ಇತರ ಕೃತಿಗಳನ್ನು ಕಂಠಪಾಠ ಮಾಡಿದರು.ಮದುವೆಯ ಪಾರ್ಟಿಯ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಗಿರಿಧರ್ ನನ್ನು  ಜೊತೆಯಲ್ಲಿ ಅಶುಭವೆಂದು ಕರೆದುಕೊಂಡುಹೋಗಲಿಲ್ಲ. ಅದೇ ವ್ಯಕ್ತಿ ಇಂದು  ಮದುವೆಯಲ್ಲಿ ಪ್ರಧಾನ ಅತಿಥಿ! ಕಲ್ಯಾಣ ಸಮಾರಂಭಗಳಲ್ಲಿ ದೊಡ್ಡದನ್ನು ಉದ್ಘಾಟಿಸುವ ವಿ ಐ ಪಿ   ಹುಲ್ಲನ್ನು ವಜ್ರವಾಗಿಯೂ  ವಜ್ರವನ್ನು ಹುಲ್ಲುಕಡ್ಡಿಯಾಗಿಯೂ ಪರಿವರ್ತಿಸುವ ದೇವರ ಕೃಪೆಯೇ ಇದಕ್ಕೆಲ್ಲ ಕಾರಣ.


ಗಿರಿಧರ್ ಹದಿನೇಳನೇ ವಯಸ್ಸಿನವರೆಗೆ ಯಾವುದೇ ಔಪಚಾರಿಕ ಶಿಕ್ಷಣವನ್ನು ಪಡೆಯಲಿಲ್ಲ. ೧೯೬೭ ರಂದು ಗಿರಿಧರ್ ಸಂಸ್ಕೃತ ವ್ಯಾಕರಣ, ಹಿಂದಿ, ಇಂಗ್ಲಿಷ್, ಗಣಿತ, ಇತಿಹಾಸ ಮತ್ತು ಭೂಗೋಳವನ್ನು ಅಧ್ಯಯನ ಮಾಡಲು ಜೌನ್‌ಪುರ್‌ನ ಹತ್ತಿರದ ಸುಜಂಗAಜ್ ಗ್ರಾಮದ ಆದರ್ಶ ಗೌರಿಶಂಕರ್ ಸಂಸ್ಕೃತ ಕಾಲೇಜಿಗೆ ಸೇರಿದರು. ಅವರ ಆತ್ಮಚರಿತ್ರೆಯಲ್ಲಿ ಅವರು ಈ ದಿನವನ್ನು ತಮ್ಮ ಜೀವನದ "ಗೋಲ್ಡನ್ ಜರ್ನಿ" ಪ್ರಾರಂಭವಾದ ದಿನವೆಂದು ಹೇಳಬಹುದು. ಕೇವಲ ಒಮ್ಮೆ ಕೇಳುವ ಮೂಲಕ ವಿಷಯವನ್ನು ನೆನಪಿಟ್ಟುಕೊಳ್ಳುವ ಸಾಮರ್ಥ್ಯದೊಂದಿಗೆ, ಗಿರಿಧರ್ ಅಧ್ಯಯನ ಮಾಡಲು ಬ್ರೈಲ್ ಅಥವಾ ಇತರ ಸಾಧನಗಳನ್ನು ಬಳಸಲಿಲ್ಲ.  ಮೂರು ತಿಂಗಳಲ್ಲಿ, ಅವರು ವರದರಾಜರ ಸಂಪೂರ್ಣ ಲಘುಸಿದ್ಧಾಂತಕೌಮುದಿಯನ್ನು ಕಂಠಪಾಠ ಮಾಡಿದರು ಮತ್ತು ಕರಗತ ಮಾಡಿಕೊಂಡರು.  ಅವರು ನಾಲ್ಕು ವರ್ಷಗಳ ಕಾಲ ತಮ್ಮ ತರಗತಿಯಲ್ಲಿ ಅಗ್ರಸ್ಥಾನದಲ್ಲಿದ್ದರು ಮತ್ತು ಹೈಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಸಂಸ್ಕೃತದಲ್ಲಿ ಪ್ರಥಮ ದರ್ಜೆ ಮತ್ತು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದರು.೧೯೭೧ರಲ್ಲಿ ಗಿರಿಧರ್ ವ್ಯಾಕರಣದಲ್ಲಿ ಉನ್ನತ ವ್ಯಾಸಂಗಕ್ಕಾಗಿ ವಾರಣಾಸಿಯ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಸೇರಿಕೊಂಡರು.   ೧೯೭೪ರಲ್ಲಿ ಶಾಸ್ತ್ರಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿಯ ಅಂತಿಮ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದರು ಮತ್ತು ನಂತರ ಅದೇ ಸಂಸ್ಥೆಯಲ್ಲಿ ಆಚಾರ್ಯ ಪದವಿಗೆ ಸೇರಿಕೊಂಡರು.  ತಮ್ಮ ಸ್ನಾತಕೋತ್ತರ ಪದವಿಯನ್ನು ಮುಂದುವರಿಸುವಾಗ, ಅವರು ಅಖಿಲ ಭಾರತ ಸಂಸ್ಕೃತ ಸಮ್ಮೇಳನದಲ್ಲಿ ವಿವಿಧ ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಲು ನವದೆಹಲಿಗೆ ಭೇಟಿ ನೀಡಿದರು. ಅಲ್ಲಿ ಅವರು ಎಂಟು ಚಿನ್ನದ ಪದಕಗಳಲ್ಲಿ ವ್ಯಾಕರಣ, ಸಾಂಖ್ಯ, ನ್ಯಾಯ, ವೇದಾಂತ, ಮತ್ತು ಸಂಸ್ಕೃತ ಅಂತಕ್ಷರಿಯಲ್ಲಿ. ಐದು ಪದಕಗಳನ್ನು ಗೆದ್ದರು.  ೧೯೭೬ ರಲ್ಲಿ ಗಿರಿಧರ್ ಅವರು ವ್ಯಾಕರಣದಲ್ಲಿ ಅಂತಿಮ ಆಚಾರ್ಯ ಪರೀಕ್ಷೆಗಳಲ್ಲಿ ಅಗ್ರಸ್ಥಾನ ಪಡೆದರು, ಏಳು ಚಿನ್ನದ ಪದಕಗಳನ್ನು ಮತ್ತು ಕುಲಪತಿಗಳ ಚಿನ್ನದ ಪದಕವನ್ನು ಗೆದ್ದರು.  ಅಪರೂಪದ ಸಾಧನೆಯಲ್ಲಿ, ಅವರು ವ್ಯಾಕರಣದಲ್ಲಿ ಸ್ನಾತಕೋತ್ತರ ಪದವಿಗೆ ಮಾತ್ರ ದಾಖಲಾಗಿದ್ದರೂ ಅವರನ್ನು ೩೦ ಏಪ್ರಿಲ್ ೧೯೭೬ ರಂದು ವಿಶ್ವವಿದ್ಯಾಲಯದಲ್ಲಿ ಕಲಿಸುವ ಎಲ್ಲಾ ವಿಷಯಗಳ ಆಚಾರ್ಯ ಎಂದು ಘೋಷಿಸಲಾಯಿತು.ತಮ್ಮ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ ನಂತರ ಗಿರಿಧರ್ ಅವರು ಅದೇ ಸಂಸ್ಥೆಯಲ್ಲಿ ಡಾಕ್ಟರೇಟ್ ವಿದ್ಯಾವಾರಿಧಿ ಪದವಿಗಾಗಿ ಪಂಡಿತ್ ರಾಮಪ್ರಸಾದ್ ತ್ರಿಪಾಠಿ ಅವರ ಅಡಿಯಲ್ಲಿ ಸೇರಿಕೊಂಡರು.  ಅವರು ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್ ನಿಂದ ಸಂಶೋಧನಾ ಫೆಲೋಶಿಪ್ ಪಡೆದರು. ೯ ಮೇ ೧೯೯೭ ರಂದು ಗಿರಿಧರ್ ಅವರಿಗೆ ಸಂಪೂರ್ಣಾನAದ ಸಂಸ್ಕೃತ ವಿಶ್ವವಿದ್ಯಾಲಯವು ಪೋಸ್ಟ್ ಡಾಕ್ಟರೇಟ್ ವಾಚಸ್ಪತಿ ಪದವಿಯನ್ನು ಅವರ ೨೦೦೦ ಪುಟಗಳ ಸಂಸ್ಕೃತ ಪ್ರಬಂಧಕ್ಕಾಗಿ ನೀಡಲಾಯಿತು ಗಿರಿಧರ್ ಅವರು ೧೯ ನವೆಂಬರ್ ೧೯೮೩ರ ಕಾರ್ತಿಕ ಹುಣ್ಣಿಮೆಯ ದಿನದಂದು ಶ್ರೀ ರಾಮಚರಂದಾಸ್ ಮಹಾರಾಜ್ ಫಲಹರಿ ಅವರಿಂದ ರಮಾನಂದ ಸಂಪ್ರದಾಯದಲ್ಲಿ ವೈರಾಗಿ ದೀಕ್ಷೆ ಅಥವಾ ವಿರಕ್ತ ದೀಕ್ಷೆಯನ್ನು ಪಡೆದರು. ಅವರು ಅಂದಿನಿಂದ  ರಾಮಭದ್ರದಾಸ್ ಅಥವಾ ರಾಮಭದ್ರಾಚಾರ್ಯರು ಎಂದು ಕರೆಯಲಾಗುತ್ತದೆ ೧೯೮೭ ರಲ್ಲಿ ರಾಮಭದ್ರದಾಸ್ ಚಿತ್ರಕೂಟದಲ್ಲಿ ತುಳಸಿ ಪೀಠ ಎಂಬ ಧಾರ್ಮಿಕ ಮತ್ತು ಸಾಮಾಜಿಕ ಸೇವಾ ಸಂಸ್ಥೆಯನ್ನು ಸ್ಥಾಪಿಸಿದರು, ಶ್ರೀಚಿತ್ರಕೂಟತುಲಸೀಪಿತಾಧೀಶ್ವರ ಎಂಬ ಬಿರುದನ್ನು ಅವರಿಗೆ ಸಾಧುಗಳು ಮತ್ತು ಬುದ್ಧಿಜೀವಿಗಳು ದಯಪಾಲಿಸಿದರು.೩ ಫೆಬ್ರವರಿ ೧೯೮೯ ರಂದು, ಅಲಹಾಬಾದ್‌ನಲ್ಲಿ ನಡೆದ ಕುಂಭಮೇಳದಲ್ಲಿ ನೇಮಕವನ್ನು ಮೂವರ ಮಹಂತರು ಸರ್ವಾನುಮತದಿಂದ ಬೆಂಬಲಿಸಿದರು. ಅಖಾರಾಗಳು, ನಾಲ್ಕು ಉಪ ಸಂಪ್ರದಾಯಗಳು  ರಮಾನಂದ ಸಂಪ್ರದಾಯದ ಖಲ್ಸಾಗಳು ಮತ್ತು ಸಂತರು. ೧ ಆಗಸ್ಟ್ ೧೯೯೫ ರಂದು ಅವರು ದಿಗಂಬರ ಅಖಾಡದಿಂದ ಅಯೋಧ್ಯೆಯಲ್ಲಿ ಜಗದ್ಗುರು ರಮಾನಂದಾಚಾರ್ಯರಾಗಿ ಶಾಸ್ತ್ರೋಕ್ತವಾಗಿ ನೇಮಿಸಿದರು ಅಂದಿನಿಂದ  ಅವರನ್ನು ಜಗದ್ಗುರು ರಮಾನಂದಾಚಾರ್ಯ ಸ್ವಾಮಿ ರಾಮಭದ್ರಾಚಾರ್ಯ ಎಂದು ಕರೆಯಲಾಗುತ್ತಿದೆ.ರಾಮಭದ್ರಾಚಾರ್ಯರು ಬಹುಭಾಷಾ ಪಾರಂಗತರಾಗಿದ್ದಾರೆ.೧೪ ಭಾಷೆಗಳಲ್ಲಿ ಪಂಡಿತರಾಗಿದ್ದಾರೆ ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಸಂಸ್ಕೃತ, ಹಿಂದಿ, ಇಂಗ್ಲಿಷ್, ಫ್ರೆಂಚ್, ಭೋಜ್‌ಪುರಿ, ಮೈಥಿಲಿ, ಒರಿಯಾ, ಗುಜರಾತಿ, ಪಂಜಾಬಿ, ಮರಾಠಿ, ಮಾಗಧಿ, ಅವಧಿ,ಸ್ವತಃ ವಿಶೇಷ ಚೇತನರಾದ ರಾನ ಭದ್ರಾಚಾರ್ಯರು ೧೯೯೬ ರಲ್ಲಿ ರಾಮಭದ್ರಾಚಾರ್ಯರು ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಅಂಧರಿಗಾಗಿ ತುಳಸಿ ಶಾಲೆಯನ್ನು ಸ್ಥಾಪಿಸಿದರು. ಹಾಗೂ ಅಂಗವಿಕಲರ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದರು, ಇದು ವಿಕಲಾಂಗರಿಗಾಗಿಯೇ ವಿಶ್ವದಲ್ಲೇ ಮೊದಲ ವಿಶ್ವವಿದ್ಯಾನಿಲಯವಾಗಿದೆ. ಉತ್ತರ ಪ್ರದೇಶ ಸರ್ಕಾರದ ಸುಗ್ರೀವಾಜ್ಞೆಯಿಂದ ವಿಶ್ವವಿದ್ಯಾನಿಲಯವನ್ನು ರಚಿಸಲಾಯಿತು, ನಂತರ ಇದನ್ನು ಉತ್ತರ ಪ್ರದೇಶ ಶಾಸಕಾಂಗವು ಉತ್ತರ ಪ್ರದೇಶ ರಾಜ್ಯ ಕಾಯಿದೆ  ಎಂದು ಅಂಗೀಕರಿಸಿತು.  ಈ ಕಾಯಿದೆಯು ಸ್ವಾಮಿ ರಾಮಭದ್ರಾಚಾರ್ಯರನ್ನು ವಿಶ್ವವಿದ್ಯಾನಿಲಯದ ಆಜೀವ ಕುಲಪತಿಯಾಗಿ ನೇಮಿಸಿತು. ವಿಶ್ವವಿದ್ಯಾನಿಲಯವು ಸಂಸ್ಕೃತ, ಹಿಂದಿ, ಇಂಗ್ಲಿಷ್, ಸಮಾಜಶಾಸ್ತ್ರ, ಮನೋವಿಜ್ಞಾನ, ಸಂಗೀತ,  ಮತ್ತು ಚಿತ್ರಕಲೆ, ಲಲಿತಕಲೆಗಳು, ವಿಶೇಷ ಶಿಕ್ಷಣ, ಶಿಕ್ಷಣ, ಇತಿಹಾಸ, ಸಂಸ್ಕೃತಿ ಮತ್ತು ಪುರಾತತ್ವ, ಕಂಪ್ಯೂಟರ್ ಮತ್ತು ಮಾಹಿತಿ ಸೇರಿದಂತೆ ವಿವಿಧ ವಿಷಯಗಳಲ್ಲಿ ಪದವಿ, ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿಗಳನ್ನು ನೀಡುತ್ತದೆ.ರಾಮಭದ್ರಾಚಾರ್ಯರು ಮಧ್ಯಪ್ರದೇಶದ ಸತ್ನಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಜಗದ್ಗುರು ರಾಮಭದ್ರಾಚಾರ್ಯ ವಿಕ್ಲಾಂಗ್ ಸೇವಾ ಸಂಘ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಗ್ರಾಮೀಣ ಭಾರತದಲ್ಲಿ ಸಮುದಾಯ ಜಾಗೃತಿ ಮತ್ತು ಮಕ್ಕಳ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಾರಂಭಿಸುವುದು ಇದರ ಗುರಿಯಾಗಿದೆ. ಜಗದ್ಗುರು ರಾಮಭದ್ರಾಚಾರ್ಯ ವಿಕಲಚೇತನ ವಿಶ್ವವಿದ್ಯಾನಿಲಯದ ಶಿಕ್ಷಣ ಕಾರ್ಯಕ್ರಮಗಳಿಗೆ ಪೂರಕವಾಗಿ ಅಂಗವಿಕಲ ಮಕ್ಕಳಿಗೆ ಉತ್ತಮ ಶಿಕ್ಷಣ ಪಡೆಯಲು ಸಹಾಯ ಮಾಡುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ. ಸಹಾಯವನ್ನು ಸಾಮಾನ್ಯವಾಗಿ ಸೌಲಭ್ಯಗಳ ರೂಪದಲ್ಲಿ ನೀಡಲಾಗುತ್ತದೆ, ಇದು ಶಿಕ್ಷಣಕ್ಕೆ ಸುಲಭ ಪ್ರವೇಶವನ್ನು ಸಕ್ರಿಯಗೊಳಿಸುತ್ತದೆ. ಇದರ ಜೊತೆಗೆ  ರಾಮಭದ್ರಾಚಾರ್ಯ ಅವರು ಗುಜರಾತ್‌ನಲ್ಲಿ ನೂರು ಹಾಸಿಗೆಗಳ ಆಸ್ಪತ್ರೆಯನ್ನೂ ನಡೆಸುತ್ತಿದ್ದಾರೆ. ಇವರ ಎಲ್ಲಾ ಕೃತಿಗಳು ಬಹು ಜನಪ್ರಿಯವಾಗಿವೆ ಅವುಗಳಲ್ಲಿ ಕೆಲವನ್ನು ಹೆಸರಿಸುವುದಾದರೆ  ಕವಿ ಹಾಗೂ  ಪ್ರಧಾನಮಂತ್ರಿಯಾಗಿದ್ದ  ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರಿಂದ ಶ್ರೀಭಾರ್ಗವರಾಘವೀಯಂ ಎಂಬ ಪುಸ್ತಕ  ಬಿಡುಗಡೆಯಾಯಿತು.ಇತರ ಪ್ರಮುಖ ಕೃತಿಗಳೆಂದರೆ ಕಾಕಾ ವಿದುರ,  ಶ್ರೀರಾಘವಾಭ್ಯುದಯಂ, ಶ್ರೀರಾಘವೇಂದ್ರಶತಕಮ್, ಅಷ್ಠಾಧ್ಯಾಯಃ ಪ್ರತಿಸೂತ್ರಂ ಶಬ್ದಬೋಧಸಮೀಕ್ಷಣಂ,  ಶ್ರೀರಾಮಭಕ್ತಿಸರ್ವಸ್ವಂ, ಶ್ರೀಗಂಗಮಹಿಮ್ನಸ್ತೋತ್ರಮ್ ಸರಯೂಲಹರಿ, ಲಘುರಘುವರಂ,  ನಮೋ ರಾಘವಾಯ,  ಶ್ರೀನರ್ಮದಾಷ್ಟಕಮ್,  ಶ್ಲೋಕಮೌಕ್ತಿಕಮ್, ಇವುಗಳ ಜೊತೆಗೆ   ಶ್ರೀರಾಘವಚರಣಚಿಹ್ನಶತಕಮ್, ಶ್ರೀಜಾನಕೀಚರಣಚಿಹ್ನಶತಕಮ್,  ಶ್ರೀರಾಮವಲ್ಲಭಸ್ತೋತ್ರಮ್, ಶ್ರೀಚಿತ್ರಕೂಟವಿಹಾರ್ಯಷ್ಟಕಮ್, ಶ್ರೀಜಾನಕಿಕೃಪಾಕಕ್ಷಸ್ತೋತ್ರಮ್  ಶ್ರೀಭಾರ್ಗವರಾಘವಿ  ಭೃಂಗದೂತಂ ದೂತಕಾವ್ಯ ಇತ್ಯಾದಿ, ಧರ್ಮಗ್ರಂಥಗಳಲ್ಲಿಯೂ ಸಹ ಪಾರಂಗತರಾಗಿದ್ದಾರೆ.ಇವರ ಸಂಸ್ಕೃತ ಪಾಂಡಿತ್ಯವನ್ನು ಹಲವಾರು ವಿಧ್ವಾಂಸರು ಕೊಂಡಾಡಿದ್ದಾರೆ. ಜುಲೈ ೨೦೦೩ ರಲ್ಲಿ ಜೈಪುರದಲ್ಲಿ ರಾಮಭದ್ರಾಚಾರ್ಯ ಅವರು ಮಾಡಿದ ಭಾಷಣದಲ್ಲಿ ದಾಂಡಕ ಶೈಲಿಯಲ್ಲಿ ದೀರ್ಘ ವಾಕ್ಯದ ಬಳಕೆಯಲಿ ಬಹು ವಿಶೇಷಣಗಳೊಂದಿಗೆ ಒಂದು ವಾಕ್ಯವು ಸುಮಾರು ಏಳು ನಿಮಿಷಗಳವರೆಗೆ ಇರುತ್ತದೆ ಮತ್ತು "ಕಾವ್ಯ ಸೌಂದರ್ಯದಿಂದ ತುಂಬಿತ್ತು". ಇದು ರಾಮಭದ್ರಾಚಾರ್ಯರಿಗೆ ಸಂಸ್ಕೃತದ ಮೇಲೆ ಎಂತಹ ಅದ್ಭುತವಾದ ನಿಯಂತ್ರಣವನ್ನು ಹೊಂದಿದೆ ಎಂದು ವಿವರಿಸಲಾಗಿದೆ ಎಂದು ವಿಧ್ವಾಂಸರಾದ  ಶಾಸ್ತ್ರಿರವರು ಮೆಚ್ಚುಗೆ ಸೂಚಿಸುತ್ತಾರೆ.ಜಬಲ್ಪುರದ ಸಂಸ್ಕೃತ ವಿದ್ವಾಂಸರಾದ ಡಾ. ಬ್ರಜೇಶ್ ದೀಕ್ಷಿತ್ ಅವರು ಶ್ರೀಭಾರ್ಗವರಾಘವೀಯಂ ಹಿಂದಿನ ಮೂರು ಸಂಸ್ಕೃತ ಮಹಾಕಾವ್ಯಗಳ ಶೈಲಿಗಳನ್ನು ಸಂಯೋಜಿಸುತ್ತದೆ ಎಂದು ಹೇಳುತ್ತಾರೆ  ಭಾರವಿಯ ಕಿರಾತಾರ್ಜುನೀಯಂನಲ್ಲಿರುವAತೆ ಇದು ಎರಡು ಪ್ರಮುಖ ಪಾತ್ರಗಳನ್ನು ಹೊಂದಿದೆ. ಕಾವ್ಯದ ಶ್ರೇಷ್ಠತೆ ಮತ್ತು ಛಂದೋಶಾಸ್ತ್ರೀಯ ಶಾಸ್ತ್ರದ ವೈವಿಧ್ಯತೆ ಈ ಕೃತಿಯ ಆಕರ್ಷಣೆ ಎಂದರು. ಅಟಲ್ ಬಿಹಾರಿ ವಾಜಪೇಯಿ ಅವರು ರಾಮಭದ್ರಾಚಾರ್ಯರನ್ನು "ವ್ಯಾಕರಣದ ಜೊತೆಗೆ ವೈದಿಕ ಮತ್ತು ಪುರಾಣ ಸಾಹಿತ್ಯದಲ್ಲಿ ಚೆನ್ನಾಗಿ ಪಾರಂಗತರಾಗಿದ್ದಾರೆ" ಎಂದು ಕೊಂಡಾಡುತ್ತಾ  ಅವರ ಬುದ್ಧಿವಂತಿಕೆ ಮತ್ತು ಸ್ಮರಣೆಯನ್ನು ಶ್ಲಾಘಿಸಿದ್ದಾರೆ. ಡಾ. ಮುರಳಿ ಮನೋಹರ ಜೋಶಿಯವರು ರಾಮಭದ್ರಾಚಾರ್ಯರ ಕುರಿತು "ಅತ್ಯಂತ ಪೂಜ್ಯರ ತೀವ್ರವಾದ ಜ್ಞಾನವು ನಿಜವಾಗಿಯೂ ಆರಾಧ್ಯವಾಗಿದೆ" ಎಂದು ಹೇಳಿದ್ದಾರೆ.  ನಾನಾಜಿ ದೇಶಮುಖ್ ಅವರು ರಾಮಭದ್ರಾಚಾರ್ಯರನ್ನು "ದೇಶದ ಬೆರಗುಗೊಳಿಸುವ ರತ್ನ" ಎಂದು ಕರೆದರು.ರಾಮಭದ್ರಾಚಾರ್ಯರು ಕೇವಲ ಭಾರತ ಮಾತ್ರವಲ್ಲ ಅಂತರರಾಷ್ಟಿಯ ಮಟ್ಟದಲ್ಲೂ ಗಮನ ಸೆಳೆದ ವ್ಯಕ್ತಿತ್ವವಾಗಿ ಹೊರ ಹೊಮ್ಮಿದ್ದಾರೆ. ಇಂಡೋನೇಷ್ಯಾದಲ್ಲಿ ನಡೆದ ರಾಮಾಯಣದ ಒಂಬತ್ತನೇ ವಿಶ್ವ ಸಮ್ಮೇಳನದಲ್ಲಿ ರಾಮಭದ್ರಾಚಾರ್ಯರು ಭಾರತೀಯ ನಿಯೋಗವನ್ನು ಮುನ್ನಡೆಸಿದ್ದರು. ಹಿಂದೂ ಧರ್ಮ ಮತ್ತು ಶಾಂತಿಯ ಕುರಿತು ಪ್ರವಚನ ನೀಡಲು ಇಂಗ್ಲೆAಡ್, ಮಾರಿಷಸ್, ಸಿಂಗಾಪುರ ಮತ್ತು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಹಲವಾರು ದೇಶಗಳಿಗೆ ಪ್ರಯಾಣಿಸಿದ್ದಾರೆ.೨೦೦೦ದಲ್ಲಿ  ಯುನೈಟೆಡ್ ನೇಷನ್ಸ್ ನ್ಯೂಯಾರ್ಕ್ ನಗರದಲ್ಲಿ ಆಯೋಜಿಸಿದ್ದ ಮಿಲೇನಿಯಮ್ ವರ್ಲ್ಡ್ ಪೀಸ್ ಶೃಂಗಸಭೆಯಲ್ಲಿ ಭಾರತದ ಆಧ್ಯಾತ್ಮಿಕ ಮತ್ತು ಧಾರ್ಮಿಕ ಗುರುಗಳಲ್ಲಿ ರಾಮಭದ್ರಾಚಾರ್ಯರು ಒಬ್ಬರಾಗಿದ್ದರು. ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಅವರು ಬಡತನ ನಿರ್ಮೂಲನೆ, ಭಯೋತ್ಪಾದನೆ ವಿರುದ್ಧದ ಹೋರಾಟ ಮತ್ತು ಪರಮಾಣು ನಿಶ್ಯಸ್ತ್ರೀಕರಣಕ್ಕಾಗಿ ಶ್ರಮಿಸಲು ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳು ಒಗ್ಗೂಡಬೇಕೆಂದು ಅವರು ಕರೆ ನೀಡಿದರು. ತಮ್ಮ ಭಾಷಣದ ಕೊನೆಯಲ್ಲಿ ಅವರು ಶಾಂತಿ ಮಂತ್ರವನ್ನು ಪಠಿಸಿದರುಇಂತಹ ಮಹಾನ್ ಸಾಧಕರನ್ನು ಹಲವಾರು ಪ್ರಶಸ್ತಿ ಪುರಸ್ಕಾರಗಳು ಹುಡುಕಿಕೊಂಡು ಬಂದಿವೆ ೨೦೧೫ರಲ್ಲಿ, ರಾಮಭದ್ರಾಚಾರ್ಯರಿಗೆ ಭಾರತದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಲಾ¬ತು  ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ಹಲವಾರು ರಾಜ್ಯ ಸರ್ಕಾರಗಳು ಅವರನ್ನು ಗೌರವಿಸಿವೆ. ೨೦೨೧ರಲ್ಲಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಫೆಲೋಶಿಪ್  ನೀಡಲಾಯಿತು  ೧೭ ಫೆಬ್ರವರಿ ೨೦೨೪ರಂದು ರಾಮಭದ್ರಾಚಾರ್ಯರಿಗೆ ೫೮ನೇ ಜ್ಞಾನಪೀಠ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಸಿಹಿಜೀವಿವೆಂಕಟೇಶ್ವರ

ತುಮಕೂರು

೯೯೦೦೯೨೫೫೨೯


09 March 2024

ಕನ್ನಡ ಪುಸ್ತಕ ಕೊಂಡು ಓದಿ...

 



ಕನ್ನಡ ಪುಸ್ತಕ ಕೊಂಡು ಓದಿ...


ಕನ್ನಡಿಗರು ಕನ್ನಡ ಪುಸ್ತಕ ಕೊಂಡು ಓದಿ ಎಂದು ಶಿಕ್ಷಕ ಹಾಗೂ ಸಾಹಿತಿ ಸಿಹಿಜೀವಿ ವೆಂಕಟೇಶ್ವರ ರವರು ಕರೆ ನೀಡಿದರು.

ತುಮಕೂರಿನ ಶಾಂತಿನಗರದ "ಗುಬ್ಬಚ್ಚಿ ಪುಸ್ತಕ " ಮಳಿಗೆಯನ್ನು ಕನ್ನಡ ಪುಸ್ತಕ ಕೊಳ್ಳುವ ಮೂಲಕ ಉದ್ಘಾಟಿಸಿ ಗುಬ್ಬಚ್ಚಿ ಸತೀಶ್ ರವರು ಗೋಮಿನಿ ಪ್ರಕಾಶನದ ಮೂಲಕ ರಾಜ್ಯಾದ್ಯಂತ ಮನೆ ಮಾತಾಗಿದ್ದಾರೆ.ಈಗ ತುಮಕೂರಿನಲ್ಲಿ ಪುಸ್ತಕ ಮಳಿಗೆ ಅರಂಭಿಸಿರುವುದು ಬಹಳ ಸಂತಸದ ವಿಷಯ. ತುಮಕೂರಿನ ಸಾಹಿತ್ಯಾಸಕ್ತರು ಈ ಪುಸ್ತಕ ಮಳಿಗೆ ಸದುಪಯೋಗ ಪಡಿಸಿಕೊಳ್ಳುವಂತೆ ಹೇಳಿದರು.

ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಅನಂದ್ ಪ್ರಕಾಶನದ ಎಂ ವಿ ಶಂಕರಾನಂದ ರವರು ಗುಬ್ಬಚ್ಚಿ ಸತೀಶ್ ರವರು ಆನ್ಲೈನ್ ಮೂಲಕ ತುಮಕೂರಿನ ಮತ್ತು ರಾಜ್ಯದ ಮೂಲೆ ಮೂಲೆಗೆ ಪುಸ್ತಕ ತಲುಪಿಸುವ ನಿಜದ ಸಾಹಿತ್ಯ ಪರಿಚಾರಕ ಅವರ ಈ ಪುಸ್ತಕ ಮಳಿಗೆಯಿಂದ  ತುಮಕೂರಿನ ಸಾಹಿತ್ಯ ಅಭಿಮಾನಿಗಳು ತಮಗೆ ಬೇಕಾದ ಪುಸ್ತಕ ಕೊಂಡು ಓದಲು ಸಹಕಾರಿಯಾಗಲಿದೆ ಎಂದರು.

 ಪುಸ್ತಕ ಮಳಿಗೆ ಉದ್ಘಾಟನಾ  ಕಾರ್ಯಕ್ರಮದಲ್ಲಿ ಲೇಖಕಿ ಚಂಪಾ ರವರು, ಕುಮಾರಿ ಗೋಮಿನಿ ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು.


08 March 2024

ಅರ್ಧನಾರೀಶ್ವರ

 




*ಅರ್ಧನಾರೀಶ್ವರ*


ಮಹಿಳಾ ದಿನ ಮತ್ತು ಶಿವರಾತ್ರಿಗೆ ಸಾಕ್ಷಿಯಾಗಿದೆ ಈ ಶುಕ್ರವಾರ|

ಎಲ್ಲರೂ ಭಕ್ತಿಯಿಂದ ಪೂಜಿಸಿ ಭಜಿಸೋಣ ಅರ್ಧನಾರೀಶ್ವರ|



*ಸಿಹಿಜೀವಿ*