30 August 2022

ತನಗ ೧

 ತನಗ ೧ 

ಸ್ವರ್ಣ ಗೌರಿಯ ಕಂದ

ಸ್ವಾಗತವು ನಮ್ಮಿಂದ 

ಧರೆಗೆ ಬಂದುಬಿಡು

ವಿಘ್ನವ ಕೊಂದುಬಿಡು 


#ಸಿಹಿಜೀವಿ 


#ಸಿಹಿಜೀವಿ 

ನಮ್ಮೂರ ಗಣಪತಿ


 *ನಮ್ಮೂರ   ಗಣಪತಿ ಹಬ್ಬ v/s ಇಂದಿನ ಗಣೇಶೋತ್ಸವ*


ಇಂದು ನಾಡಿನಾದ್ಯಂತ ಆಚರಿಸುವ ಗಣೇಶೋತ್ಸವ ನಮ್ಮ ಬಾಲ್ಯದಲ್ಲಿ "ಗಣಪತಿ ಹಬ್ಬ " ಎಂದೇ ಪರಿಚಿತವಾಗಿತ್ತು.ನಮ್ಮ ಊರಿನ ಪಾರ್ಥಲಿಂಗೇಶ್ವರ ಯುವಕಸಂಘದವರು ಬಹಳ ವಿಜೃಂಭಣೆಯಿಂದ ಮೂರುದಿನಗಳ ಕಾಲ ಗಣಪತಿ ಹಬ್ಬ ಆಚರಿಸುತ್ತಿದ್ದರು. ದಿವಂಗತ ಬೋರಿಂಗ್ ಶಿವಣ್ಣ, ಗೌಡ್ರ ಶಿವಣ್ಣ, ಮೆಂಬರ್ ಮಾಲಿಂಗಪ್ಪ , ಐನೊರ ಶಿವಯ್ಯ, ಕಂಡಕ್ಟರ್ ರಾಮಣ್ಣ ಇವರೆಲ್ಲರೂ ಬಹಳ ಮುತುವರ್ಜಿಯಿಂದ ಗಣಪತಿಯ ಹಬ್ಬ ಆಯೋಜನೆ ಮಾಡುತಿದ್ದರು. ಹೊರಕೆರೆ ದೇವರ ಪುರದ ಕುಂಬಾರ ಮನೆಯಿಂದ ಎತ್ತಿನ ಗಾಡಿಯಲ್ಲಿ ಗಣೇಶನ ವಿಗ್ರಹವನ್ನು ತಂದಾಗಿನಿಂದ ನಮ್ಮ ಸಂಭ್ರಮ ಶುರುವಾಗಿ ಗಣಪತಿಯ ನೀರಿನಲ್ಲಿ ಬಿಡುವವರೆಗೂ ನಾವು ಮನೆಯನ್ನೇ ಸೇರುತ್ತಿರಲಿಲ್ಲ .ಅಲ್ಲಿ ಹಾಕುವ ಗ್ರಾಮಾಪೋನ್ ಹಾಡುಗಳ ಕೇಳುತ್ತಾ ಕುಣಿಯುತ್ತಾ ,ಕೊಟ್ಟ ಪ್ರಸಾದ ತಿನ್ನುತ್ತಾ ಕಾಲ ಕಳೆಯುತ್ತಿದ್ದೆವು. ಮೂರನೇ ದಿನದ ಗಣಪತಿ ವಿಸರ್ಜನೆಯ ಮೆರವಣಿಗೆಯಲ್ಲಿ ನಮ್ಮ ಸಂತಸ  ನೂರ್ಮಡಿಗೊಳ್ಳುತ್ತಿತ್ತು. ಗಣಪತಿ ಮೆರವಣಿಗೆಗೆ ಎತ್ತಿನ ಗಾಡಿ ಸಿಂಗಾರ ಮಾಡಲು ಸಂಜೆ  ನಾಲ್ಕು ಗಂಟೆಯಿಂದಲೇ ತಯಾರಿ ಮಾಡಿಕೊಳ್ಳುತ್ತಿದ್ದೆವು. ಚೆಂಡುಹೂ, ಕನಕಾಂಬರ, ಸೇವಂತಿ ಹೂಗಳು, ಬಾಳೆ ಕಂದು , ಹೊಂಬಾಳೆ, ಮುಂತಾದವುಗಳನ್ನು ಅಲಂಕಾರಕ್ಕಾಗಿ ಬಳಸುತ್ತಿದ್ದೆವು.ರಾತ್ರಿ ಮಂಗಳಾರತಿ ಮಾಡಿ ಗಣಪತಿಯನ್ನು ಅಲಂಕೃತವಾದ ಎತ್ತಿನ ಗಾಡಿಯಲ್ಲಿ ಕೂರಿಸಿ ಮೆರವಣಿಗೆ ಆರಂಭವಾಗುತ್ತಿತ್ತು.  ಮೆರವಣಿಗೆಯಲ್ಲಿ ರಾಜಣ್ಣನವರ ಉರಿಮೆ ಸದ್ದಿನ ಜೊತೆಯಲ್ಲಿ ಒಂದು ಡೊಳ್ಳಿನ ಬಡಿತ ಎಂತವರೂ  ನಾಲ್ಕೆಜ್ಜೆ ಹಾಕಲೇಬೇಕಿತ್ತು. ದೊಡ್ಡವರು ಚಿಕ್ಕವರೆಂಬ ಭೇದವಿಲ್ಲದೇ ಗಣಪತಿ ಮುಂದೆ ಕುಣಿಯುತ್ತಿದ್ದುದೇ ಒಂದು ಸುಂದರ ನೆನಪು. ಮೆರವಣಿಗೆ ಸಾಗಿ ಬರುವಾಗ ಪ್ರತಿ ಮನೆಯವರು ಗಣಪತಿಗೆ ಹಣ್ಣು ಕಾಯಿ ನೀಡಿ ಮಂಗಳಾರತಿ ಮಾಡಿಸುತ್ತಿದ್ದರು .ಕೆಲ ಮನೆಯವರು ಮಂಡಕ್ಕಿ ಕಾಯಿ ತಂಬಿಟ್ಟು ಪ್ರಸಾದ ಮಾಡಿ ಎಲ್ಲರಿಗೂ ಹಂಚುತ್ತಿದ್ದರು. ಕುಣಿದು ಸುಸ್ತಾದ ನಾವು ಪ್ರಸಾದ ತಿಂದು ನೀರು ಕುಡಿದು ಪುನಃ ಉರುಮೆಯ ಸದ್ದಿಗೆ ಕೈಕಾಲು ಆಡಿಸಲು ಸಿದ್ದರಾಗುತ್ತಿದ್ದೆವು. ಬೀದಿಯಲ್ಲಿ ಸಾಗುವಾಗ ಪಂಜಿನ ದೀಪಗಳು ಮತ್ತು ಪೆಟ್ರೋಮ್ಯಾಕ್ಸ್ ನಮಗೆ ಬೆಳಕು ನೀಡುವ ಸಾಧನಗಳಾಗಿದ್ದವು .ನಮ್ಮೂರ ಗಣಪತಿಯ ಮೆರವಣಿಗೆಯಲ್ಲಿ ಐನೋರ ಶಿವಯ್ಯನವರ ಬೆಂಕಿ ಪ್ರದರ್ಶನ ಪ್ರಮುಖವಾದ ಆಕರ್ಷಣೆಯಾಗಿತ್ತು. ಬಾಯಿಯಲ್ಲಿ ಸೀಮೆಎಣ್ಣೆ ಹಾಕಿಕೊಂಡು ಒಂದು ಉರಿಯುವ ಪಂಜಿಗೆ ಸೀಮೇ ಎಣ್ಣೆಯನ್ನು ಬಾಯಿಯಿಂದ ಉಗುಳುವಾಗ ಶಿವಯ್ಯನವರ ಬಾಯಿಯಿಂದ ಬೆಂಕಿ ಉಗುಳಿದಂತೆ ಕಾಣುತ್ತಿತ್ತು  . ಈ ದೃಶ್ಯಗಳನ್ನು ಕಂಡ ಜನ ಸಂತೋಷದಿಂದ ಕೂಗಿ ಮತ್ತೊಮ್ಮೆ ಅದೇ ರೀತಿಯಲ್ಲಿ ಮಾಡಲು ಕೂಗುತ್ತಿದ್ದರು. ಒಕ್ಕಲಿಗರ ಬೀದಿ,ವಡ್ಡರ ಓಣಿ, ಗೊಲ್ಲರಹಟ್ಟಿ  ,ಹೊಸ ಹಟ್ಟಿ ದಾಟಿ ನಮ್ಮೂರ ಗೌಡರ ಬಾವಿ  ಕಡೆ ವಿಸರ್ಜನೆಗೆ ಹೊರಟಾಗ ರಾತ್ರಿ ಮೂರುಗಂಟೆ ಸಮಯವಾಗಿರುತ್ತಿತ್ತು. ಗೌಡರ ಬಾವಿಯ ಬಳಿ ಎತ್ತಿನ ಗಾಡಿಯಿಂದ  ಗಣಪತಿಯ ಇಳಿಸಿ   ಪೂಜೆ ಮಾಡಿ ಗಣಪತಿಯ ಹೂವಿನ ಹಾರಗಳನ್ನು ಹರಾಜು ಹಾಕುತ್ತಿದ್ದರು .ಹರಾಜಿನಲ್ಲಿ ಹೂವಿನ ಹಾರ ಪಡೆದವರು ಮುಂದಿನ ವರ್ಷದ ಗಣಪತಿಯ ಹಬ್ಬಕ್ಕೆ  ಹಣವನ್ನು ನೀಡುತ್ತಿದ್ದರು .ಅಂದು ನಮ್ಮ ಊರ ಗಣಪ ಪ್ರಕೃತಿ ಸ್ನೇಹಿ, ಏಕತೆಯ  ವರ್ಧಕ ಮತ್ತು ನಮ್ಮ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿದ್ದ.


ಕ್ರಮೇಣ ನಾವು  ದೊಡ್ಡವರಾದಂತೆ  ನಾವು ಗಣಪತಿ ಹಬ್ಬ ಮಾಡಲು ಶುರುಮಾಡಿದೆವು. ನಮ್ಮ ಸ್ನೇಹಿತರು ಕೂಡಿಕೊಂಡು ಹಬ್ಬದ ತಯಾರಿ ಮಾಡಿಕೊಳ್ಳುತ್ತಿದ್ದೆವು. ನಾವು   ಹಣ ಕೊಟ್ಟು ಗಣೇಶ ತರದೇ ಜೇಡಿ ಮಣ್ಣಿನಿಂದ ಗಣೇಶನ ವಿಗ್ರಹ ಮಾಡಿ ಶಾಲೆಯಲ್ಲಿ ಶಿಕ್ಷಕರ ಅನುಮತಿ ಪಡೆದು ಒಂದು ಕುರ್ಚಿ ಮೇಲೆ ಕೂರಿಸಿ, ರಟ್ಟಿನಿಂದ ಅಲಂಕಾರ ಮಾಡಿ ಬಣ್ಣದಪೇಪರ್ ಅನ್ನು ವಿವಿದ ಆಕಾರಗಳಲ್ಲಿ ಕತ್ತರಿಸಿ ಮೈದಾ ಹಿಟ್ಟಿನ ಸರಿ ಕಾಸಿ ಟೈನ್ ದಾರಕ್ಕೆ ಅಂಟಿಸಿ , ಶಾಲಾ ಕೊಠಡಿಗಳನ್ನು ಸಿಂಗಾರ ಮಾಡುತ್ತಿದ್ದೆವು. ಗಣೇಶನ ಮಂಟಪದ ಮುಂದೆ ಆಗ ತಾನೆ ಹೊಲದಲ್ಲಿ ಬೆಳೆದ ಸಜ್ಜೆ ತೆನೆ, ರಾಗಿ ತೆನೆ, ಜೋಳದ ತೆನೆ, ಟೊಮ್ಯಾಟೊ ಹಣ್ಣು, ಪಡವಲಕಾಯಿ ಈರೇಕಾಯಿ ಮುಂತಾದವುಗಳನ್ನು ಕಟ್ಟಿ ಅಲಂಕಾರ ಮಾಡುತ್ತಿದ್ದೆವು. ಸಂಜೆ ನಾವೇ ಹಾಡು ಹೇಳುವುದು, ಭಜನೆ ಮಾಡುವುದು, ನಮ್ಮ ಶಾಲೆಯ ಲೈಬ್ರರಿಯ ಪುಸ್ತಕಗಳಲ್ಲಿ ಇರುವ ಕಥಾವಾಚನ ಹೀಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಾವೇ ಆಯೋಜಿಸುತ್ತಿದ್ದೆವು. ಇದಕ್ಕೆ ನಮ್ಮ ಶಿಕ್ಷಕರಾದ ದಿವಂಗತ ತಿಪ್ಪೇಶಪ್ಪ ಸರ್ ಮಾರ್ಗದರ್ಶನ ಮಾಡುತ್ತಿದ್ದರು.

ಮೊನ್ನೆ ನಾನು ಬೈಕ್ ನಲ್ಲಿ ತೆರಳುವಾಗ ನಾಲ್ಕೈದು ಕಡೆ ತಡೆ ಹಾಕಿ ಗಣೇಶೋತ್ಸವ ಮಾಡಲು ಬಲವಂತದ ವಸೂಲಿ ನೋಡಿದಾಗ  ಮತ್ತು ಮನೆಯ ಮುಂದೆ ಬಂದು ಐದಾರು ಗಣೇಶೋತ್ಸವ ಸಂಘಗಳು ಗಣೇಶನ ಹೆಸರಲ್ಲಿ ಹಣ ಕೇಳಿ ಪಡೆದುಕೊಂಡದ್ದನ್ನು ನೋಡಿದಾಗ ಗಣೇಶನ ಹಬ್ಬ ಬಲವಂತದ ವಸೂಲಿ ರೂಪ ಪಡೆದದ್ದು ಕಂಡು ಬೇಸರ ವಾಯಿತು. ಹಣ ಕೊಡಲು ನನಗೆ ಬೇಸರವಿಲ್ಲ ಆದರೆ ನಮ್ಮಿಂದ ಪಡೆದ ಹಣವನ್ನು  ಗಣೇಶನ ಮುಂದೆ ಅರೆಬರೆ ಬಟ್ಟೆ ತೊಟ್ಟು ,ಅಶ್ಲೀಲ ನೃತ್ಯ ಮಾಡುತ್ತಾ ನೆರೆಹೊರೆಯವರಿಗೆ ತೊಂದರೆ ಕೊಡಲು ಖರ್ಚು ಮಾಡುವರು ಎಂಬುದ ನೆನೆದಾದ ನಮ್ಮ ಹಳ್ಳಿಯ ಬಾಲ್ಯದ ಗಣಪತಿ ಹಬ್ಬ ನೆನಪಾಗುತ್ತದೆ.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ನಮ್ಮ ಅಂತ್ಯ ನಮ್ಮ‌ಕೈಯಲ್ಲೇ...

 ಪ್ರಕೃತಿ ಇರುವುದು ನಮ್ಮ  ಆಸೆಯ ಪೂರೈಸಲು ,ನಮ್ಮ ದುರಾಸೆಗಳನ್ನಲ್ಲ. ನಾವು ಪ್ರಕೃತಿಯ ಜೊತೆಗೆ ಸಾಮರಸ್ಯವನ್ನು ಕಾಪಾಡಿಕೊಂಡು ಬಾಳಬೇಕು. ಆಗ ನಮ್ಮ ಜೀವನವು ಸುಗಮವಾಗಿ ಸಾಗುವುದು. ನಾವು ಪ್ರಕೃತಿಯ ಮೇಲೆ ಅತ್ಯಾಚಾರ ಮಾಡಿ, ಭೂತಾಯಿಯ ಗರ್ಭಕ್ಕೆ ಕೈ ಹಾಕಿದರೆ, ಹಸಿರುಮನೆ ಪರಿಣಾಮ, ಜಾಗತಿಕ ತಾಪಮಾನ, ಅತಿವೃಷ್ಟಿ ಅನಾವೃಷ್ಟಿ, ಭೂಕಂಪ ಇತ್ಯಾದಿಗಳ ಮೂಲಕ ನಮಗೆ ಪ್ರಕೃತಿ ಮಾತೆ ಬಹುದೊಡ್ಡ ಪಾಠ ಕಲಿಸುವಳು.ಈಗಲಾದರೂ ನಾವು ಎಚ್ಚೆತ್ತುಕೊಳ್ಳಬೇಕು ಇಲ್ಲದಿದ್ದರೆ ನಮ್ಮ ಅಂತ್ಯಕ್ಕೆ ನಾವೇ ಕಾರಣರಾಗುತ್ತೇವೆ .

ಸಿರಿಗೌರಿಗೆ ಮನವಿ


 


ಸಿರಿಗೌರಿಗೆ ಮನವಿ 


ಸ್ವರ್ಣ ಗೌರಿ ಹಬ್ಬದ ಶುಭಾಶಯಗಳು 



ಭುವಿಯ ಸಕಲ ಜೀವಿಗಳು

ಅತಿವೃಷ್ಟಿ, ಅನಾವೃಷ್ಟಿ ಯಿಂದ

ಅನುಭವಿಸುತಿಹೆವು ಕಷ್ಟಗಳ ಪರಿಪರಿ |

ನಿನ್ನ ಪುತ್ರನ ಕಳಿಸಿ

ವಿಘ್ನಗಳ ನಿವಾರಿಸು

ಸಕಲ ಜೀವಿಗಳ ಹರಸು ಸಿರಿಗೌರಿ ||



ಸಿಹಿಜೀವಿ

29 August 2022

ನಂಬರ್ ಒನ್

 

ನಂಬರ್ ಒನ್ 


(ಭಾರತ ಹಾಲು ಉತ್ಪಾದನೆಯಲ್ಲಿ ನಂಬರ್ ಒನ್ ಇಂದಿನ ಸುದ್ದಿ)


ಭಾರತವೀಗ ನಂಬರ್ ಒನ್

ಆಗಿದೆ ಅಧಿಕವಾಗಿ ಉತ್ಪಾದಿಸುವ

ಮೂಲಕ ಕ್ಷೀರ |

ಭಾರತಾಂಬೆಯ ಮಕ್ಕಳೆಲ್ಲ 

ಸಂತಸದಿಂದ ಜೈಕಾರ

ಕೂಗೋಣ ಎತ್ತಿ ನಮ್ಮಯ ಕರ ||


ಸಿಹಿಜೀವಿ 

ಸಿ ಜಿ ವೆಂಕಟೇಶ್ವರ

28 August 2022

ಪ್ರಜಾ ಪ್ರಗತಿ ೨೮/೮/೨೨


 

ನೀನನ್ನನೇನೇ ಅನ್ನು...

 



ನೀನನ್ನನೇನೇ ಅನ್ನು 

ನಾನಿನ್ನನೇನೂ ದೂಷಿಸೆನು.

ನೀನಾದರೂ ಅಷ್ಟೇ

ನಾನೇನೆಂದರೂ ಬಿಟ್ಟುಬಿಡು.

ನಾ, ನೀ ಬೇರೆಯಲ್ಲ ಒಂದೇ.

ನೀನಾ ,ನೀ ,ನಾ, ಎಂಬ ಭೇದವೇಕೆ?

ನಾನೆಂಬ ಅಹಂ ಬೇಡವೇ ಬೇಡ.

ನೀನೇ ಎಲ್ಲಾ ಎಂಬ ಭಾವದಿ ಬದುಕೋಣ.

ನಿನ್ನೆಯ ಚಿಂತೆ ಬಿಟ್ಟು 

ನನ್ನಯ ಹೃದಯದಿ

ನೀನೆಲೆಸು ಎಂದಿಗೂ

ನಿನ್ನಯ ಹೃದಯದಿ 

ನಾನು ವಿಹರಿಸುವೆನು.

ನಿನ್ನ ನನ್ನ ನಡುವೆ ಒಲವಿದೆ

ನನ್ನನಿನ್ನ ಬಿಡಿಸಲು ಆಗುವುದೇ?

ನಾ ನೀ ಒಂದೇ ಪ್ರಾಣ 

ನೀನಿಲ್ಲದೇ ನನಗೆ ಜೀವನವಿಲ್ಲ

ನಾನಿಲ್ಲದೆ ನಿನಗೆ ಬಾಳಿಲ್ಲ .

ನಿನಗಾಗಿಯೇ ಮೀಸಲು ನನ ಬಾಳು 

       ಇಂತಿ ನಿನ್ನವ 

         ಸಿಹಿಜೀವಿ


ಅನುಮತಿ

 


ಅನುಮತಿ 


ಅವನು ಹೆಮ್ಮೆಯಿಂದ

ಹೇಳುತ್ತಲೇ ಇದ್ದ ನಮ್ಮ

ಮನೆಗೆ ನಾನೇ ಯಜಮಾನ

ಏನೇ ಕೆಲಸ ಮಾಡಲು ಪಡೆಯಲೇ

ಬೇಕು ನನ್ನ ಅನುಮತಿ| 

ಹೀಗೆ ಮಾತನಾಡಲು

ಮೊದಲು ನಾನು ಪಡೆದಿರುತ್ತೇನೆ

ನನ್ನವಳ ಸಹಮತಿ ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತಟ್ಟೆ ಹೊಟ್ಟೆ...


*ತಟ್ಟೆ ,ಹೊಟ್ಟೆ*


ಅವನು ಗೊಣಗಿದ 

ನನಗೆ ಇತ್ತೀಚಿಗೆ ಯಾಕೋ 

ಜಾಸ್ತಿಯಾಗುತ್ತಿದೆ ಹೊಟ್ಟೆ |

ಅವಳು ಉತ್ತರಿಸಿದಳು 

ಹೌದು ಈಗೀಗ ಕೊಂಚವೂ

ಕಡಿಮೆಯಾಗಿಲ್ಲ ನಿಮ್ಮ ತಟ್ಟೆ ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ಹನಿ .ಹನಿ ಹಳ್ಳ

 


ಹನಿ .ಹನಿ ಹಳ್ಳ 


ಪರ ತೋಟದಲ್ಲಿ 

ಪರಾಗ ಹೀರಲು ಹೊರಟ

ಚಿಟ್ಟೆಗಳು ಹೇಳಿದವು 

ಈ "ಹನಿ "ಗೆ ಯಾವುದೂ ಸಮವಿಲ್ಲ |

ಕ್ರಮೇಣ ಬ್ಲಾಕ್ ಮೇಲ್ ಗೆ ಇಳಿದ

ಪುಷ್ಪ ಖೆಡ್ಡಾ ತೊಡುತ್ತಾ ಹೇಳಿತು

"ಹನಿ ಹನಿ " ಕೂಡಿದರೆ" ಹಳ್ಳ " ||


#ಸಿಹಿಜೀವಿ 

ಸಿ ಜಿ ವೆಂಕಟೇಶ್ವರ

*ಇಂದಿನ ಸಿಂಹ ಧ್ವನಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ* ೨೮/೮/೨೨


 *ಇಂದಿನ ಸಿಂಹ ಧ್ವನಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ*

27 August 2022

ನ್ಯಾನೋಕಥೆ

 



ನ್ಯಾನೋ ಕಥೆ ೫೦

ಪೆಟ್ರೋಲ್ ಖಾಲಿಯಾಗಿತ್ತು! 


"ಅಂಕಲ್ ನಮ್ಮ ಅಪ್ಪ ಅಮ್ಮ ದುಡಿಯಾಕ ಬೆಂಗಳೂರ್ ಗೆ ಹೋಗ್ಯಾರ ಮುಂದ್ಲುವಾರ ಬತ್ತಾರೆ" ಎಂದು ಆಸೆ ಗಣ್ಣಿನಿಂದ ಹೇಳಿದ ನಾಲ್ಕು ವರ್ಷದ ಬಾಲಕನ ಮಾತು ಕೇಳಿ ನೆರೆದಿದ್ದವರಿಗೆ ಮೌನ ತಬ್ಬಿದ ಅನುಭವ. "ನಿನ್ನ ಅಪ್ಪ ಅಮ್ಮ ಆದಷ್ಟು ಬೇಗ ಬರಲಿ" ಎಂದು ಮಗುವಿಗೆ ಸಮಾಧಾನ ಹೇಳಿ ತಿಥಿ ಊಟ ಮಾಡಿ     ಮನೆಯಿಂದ ಹೊರಬಂದ ರವಿಗೆ ಒಂದು ಹಳೆಯ ನ್ಯೂಸ್ ಪೇಪರ್ ಕಾಲಿಗೆ ತಡಕಿತು .ದಪ್ಪ ಅಕ್ಷರಗಳು ಅವನ  ಕಣ್ಣಿಗೆ ಬಿದ್ದವು" ರಸ್ತೆ ಅಪಘಾತದಲ್ಲಿ ದಂಪತಿ ಸಾವು ಮಗು ಅನಾಥ" .ಭಾರವಾದ ಮನಸ್ಸಿನಿಂದ ರವಿ  ಬೈಕ್ ಸ್ಟಾರ್ಟ್ ಮಾಡಿ ರಸ್ತೆಯಲ್ಲಿ ಸಾಗುವಾಗ ಬೈಕ್  ಇಂಜಿನ್ ಆಫ್ ಆಯ್ತು .ಟ್ಯಾಂಕ್ ಬೀಗ ತೆಗೆದು ನೋಡಿದ ಪೆಟ್ರೋಲ್ ಖಾಲಿಯಾಗಿತ್ತು! 



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

*ಗಣೇಶೋತ್ಸವದ ಹಿನ್ನೆಲೆಯಲ್ಲಿ ಇಂದಿನ ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ*27/8/22

 

*ಗಣೇಶೋತ್ಸವದ ಹಿನ್ನೆಲೆಯಲ್ಲಿ  ಇಂದಿನ ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ*

26 August 2022

ಮಾತಿನ ಹಂಗೇಕೆ?


 #ಕಣ್ಣಿನ_ಭಾವಕೆ_ಮಾತಿನ_ಹಂಗೇಕೆ 



ನಿನ್ನೊಂದಿಗೆ ಮಾತನಾಡಲಿಲ್ಲ

ಎಂದು ಪದೇ ಪದೇ ಮುನಿಸಿಕೊಳ್ಳುವುದು ಅದೇಕೆ? |


ಮಾತನಾಡಿಸಲುಸಮಯವಿಲ್ಲದಿದ್ದರೂ 

ಪ್ರತಿದಿನವೂ ಒಮ್ಮೆ ನಿನ್ನ ನೋಡುವೆ

ಕಣ್ಣಿನ ಭಾವಕೆ ಮಾತಿನ ಹಂಗೇಕೆ ||



#ಸಿಹಿಜೀವಿಯ_ಹನಿ 

25 August 2022

ಗಣೇಶ ಚತುರ್ಥಿ ....


 

ಗಣೇಶ ಚತುರ್ಥಿ ಭಕ್ತಿಯಿಂದ ಆಚರಿಸಿ ಭಾವೈಕ್ಯತೆ ಮೂಡಿಸೋಣ

ಭಾರತವು ಸುಮಾರು   ಐದು ಸಾವಿರ  ವರ್ಷಗಳ ಇತಿಹಾಸ ಹೊಂದಿರುವ ದೇಶವಾಗಿದೆ. ನಮ್ಮ ದೇಶದಲ್ಲಿ ವಿಭಿನ್ನ ಸಂಸ್ಕೃತಿಗಳ, ವಿವಿಧ ಭಾಷೆಗಳ, ವಿವಿಧ ಧರ್ಮಗಳು, ಆಚಾರ ವಿಚಾರ ಹೀಗೆ ವಿವಿಧತೆಗಳ ನಡುವೆಯೂ ಏಕತೆ ಸಾಧಿಸಿ ನಮ್ಮ ದೇಶವು ಒಂದು ಉಪಖಂಡ ಎಂಬ ಹೆಸರಿಗೆ ಅನ್ವರ್ಥಕವಾಗಿ ಶೋಭಿಸುತ್ತಿದೆ.

ನಮ್ಮ ದೇಶದ ಸಾಂಸ್ಕೃತಿಕ ಪರಂಪರೆಯು ಶ್ರೀಮಂತ ಮತ್ತು ವಿಭಿನ್ನ. ನಮ್ಮ ಆಚರಣೆಗಳು ಮತ್ತು ಸಂಸ್ಕೃತಿಗಳು ನಮ್ಮ ಹೆಮ್ಮೆ .ಈ ಆಚರಣೆಗಳು ಹಬ್ಬ ಹರಿದಿನಗಳ ಆಚರಣೆಗಳು ನಮ್ಮ ಸಂಸ್ಕೃತಿ ಪರಂಪರೆಯನ್ನು ಸೂಚಿಸುತ್ತವೆ. ಹಬ್ಬಗಳಲ್ಲಿ ಕೌಟುಂಬಿಕವಾಗಿ ಆಚರಣೆ ಮಾಡುವ ಹಲವಾರು ಹಬ್ಬಗಳನ್ನು ಕಾಣಬಹುದು ಜೊತೆಗೆ ಸಮುದಾಯದ ಜೊತೆಗೆ ಆಚರಿಸುವ  ಕೆಲವು ಹಬ್ಬಗಳು ಇವೆ. ಇಂತಹ ಹಬ್ಬಗಳಲ್ಲಿ ಮನೆಯಲ್ಲಿ  ವೈಯಕ್ತಿಕವಾಗಿ ಆಚರಿಸುತ್ತಾ ಕ್ರಮೇಣವಾಗಿ ಸಮುದಾಯದಲ್ಲಿ ಆಚರಿಸುವ ಹಬ್ಬವೇ ಗಣೇಶ ಚತುರ್ಥಿ.
ಧಾರ್ಮಿಕವಾಗಿ  ನಾವು  ಗಣೇಶನನ್ನು  ಪುರಾತನ ಕಾಲದಿಂದಲೂ ಪುಜಿಸುತ್ತಾ, ನಮ್ಮ ಸಂಕಷ್ಟಗಳನ್ನು ನಿವಾರಿಸಲು ಸಂಕಷ್ಟಹರನೆಂದು  ,ವಿಘ್ನಗಳನ್ನು ಕಳೆಯಲು ವಿಘ್ನ ವಿನಾಯಕ ಎಂದು  ಕಾರ್ಯಗಳು ಸುಗಮವಾಗಿ ಸಾಗಲು ಗಣಪನನ್ನು ಸಹಸ್ರನಾಮದ ಮೂಲಕ ಅರ್ಚಿಸಿ ಕೃತರಾರ್ಥರಾಗುತ್ತಿದ್ದೇವೆ.ವೈಯಕ್ತಿಕವಾಗಿ ಗಣಪನ ಭಜಿಸಿ ಒಳಿತು ಕಂಡು ಶಾಂತಿ ನೆಮ್ಮದಿ ಪಡೆದ ನಾವುಗಳು ಕ್ರಮೇಣ ಗಣೇಶನನ್ನು ಸಮುದಾಯಕ್ಕೆ ತಂದು ಸಮುದಾಯದೊಂದಿಗೆ ಉತ್ಸವ ಮಾಡಿ ಗಣೇಶೋತ್ಸವ ಮಾಡಿದ ಕಥೆಯೇ ರೋಚಕ .ಇದರಲ್ಲಿ  ದೇಶಪ್ರೇಮದ  ಹಿನ್ನೆಲೆ ಇದೆ, ಐತಿಹಾಸಿಕ ಮಹತ್ವ ಇದೆ, ಒಗ್ಗಟ್ಟು ಸಾರಿದ ಹಿರಿಮೆ ಇದೆ,  ಸಾಂಸ್ಕೃತಿಕ ಪರಂಪರೆಯನ್ನು ಪೋಷಿಸಿದ ಹೆಮ್ಮೆಯಿದೆ. ಬ್ರಿಟೀಷರ ವಿರುದ್ದ ಸಮರ ಸಾರಿ ಸ್ವಾತಂತ್ರ್ಯ ಪಡೆದ ಕಿಚ್ಚಿನ ಕಥೆ ಇದೆ.ಭಕ್ತಿಯೊಂದಿಗೆ ಭಾವೈಕ್ಯತೆಯನ್ನು ಸಾಧಿಸಿದ ಯಶೋಗಾಥೆಯಿದೆ.

ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಯುರೋಪಿಯನ್ನರು ಕ್ರಮೇಣವಾಗಿ ನಮ್ಮ ದೇಶದಲ್ಲಿ ನೆಲೆಯೂರಿ ನಮ್ಮನ್ನು ಗುಲಾಮರ ರೀತಿ ನಡೆಸಿಕೊಂಡು ನಮ್ಮ ಆಳುತ್ತಾ ನಮ್ಮ ಸ್ವಾತಂತ್ರ್ಯಕ್ಕೆ ಸಂಚಕಾರ ತಂದರು .ಡಚ್ಚರು, ಪ್ರೆಂಚರು, ಪೋರ್ಚುಗೀಸರು ಬ್ರಿಟೀಷರು ನಮ್ಮ ದೇಶಕ್ಕೆ ವ್ಯಾಪಾರ ಮಾಡಲು ಬಂದು ನಿಧಾನವಾಗಿ ನಮ್ಮನ್ನು   ಆಳುತ್ತಿದ್ದರೂ ಈ ವಿಷಯ  ನಮ್ಮ ಅರಿವಿಗೆ ಬರಲು ನೂರಾರು ವರ್ಷಗಳೇ ಬೇಕಾಯಿತು, ಕಾರಣ ಅಂದು ಶಿಕ್ಷಿತರ ಪ್ರಮಾಣ ಪ್ರತಿಶತ ಹನ್ನೆರಡು ಮಾತ್ರ. ಕೆಲ ದೇಶಭಕ್ತರು  ಮತ್ತು ಮಹಾನ್ ವ್ಯಕ್ತಿಗಳು ಸಭೆ ಸಮಾರಂಭಗಳನ್ನು ಆಯೋಜಿಸಿ   ಜನರಲ್ಲಿ ದೇಶಭಕ್ತಿಯನ್ನು ಜಾಗೃತಗೊಳಿಸಿದರು.ಅದರ ಪರಿಣಾಮವಾಗಿ 1857 ರಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆದು ಬ್ರಿಟೀಷರಲ್ಲಿ ನಡುಕ ಉಂಟಾಯಿತು.
ಇದನ್ನು ಅರಿತ ಇಂಗ್ಲಿಷರು ಭಾರತೀಯರು ಸಭೆ ಸೇರದಂತೆ, ಒಟ್ಟೊಟ್ಟಿಗೆ ಸೇರದಂತೆ ಕಾನೂನು ರೂಪಿಸಿ ರಾಜಕೀಯ ನಿರ್ಬಂಧಗಳನ್ನು ಹೇರಿದರು .ಆ ಕಾಲದಲ್ಲಿ ನಮ್ಮನ್ನು ಒಂದುಗೂಡಿಸುವ ಚಿಂತನೆ ಮಾಡಿ ರಾಜಕೀಯ ನಿರ್ಬಂಧಗಳನ್ನು ಮೀರಿ ಧಾರ್ಮಿಕವಾಗಿ ನಮ್ಮನ್ನು ಸೇರಿಸುವ ಕಾರ್ಯ ಮಾಡಿದವರು ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸ್ವರಾಜ್ಯ ನನ್ನ ಜನ್ಮಸಿದ್ದ ಹಕ್ಕು ಅದನ್ನು ಪಡೆದೇ ತೀರುವೆ ಎಂದು ಘರ್ಜಿಸಿ  ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದ ಬಾಲಗಂಗಾಧರ ತಿಲಕ್ ರವರು.

ಭಕ್ತಿ ಹಾಗೂ ಭಾವೈಕ್ಯತೆಯ ಹಿನ್ನೆಲೆಯಲ್ಲಿ ಬಾಲಗಂಗಾಧರ ತಿಲಕರ ಮುಂದಾಳತ್ವದಲ್ಲಿ ಹುಟ್ಟಿ ಬೆಳೆದ ಗಣೇಶ ಹಬ್ಬವು ಇಂದು ನಮ್ಮೆಲ್ಲರ ಅಚ್ಚುಮೆಚ್ಚಿನ ಹಬ್ಬ. ಚದುರಿ ಹೋಗಿದ್ದ ಅಂದಿನ  ಅನಕ್ಷರಸ್ಥ ಸಮಾಜದಲ್ಲಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಜನರನ್ನು ಒಂದೇ ವೇದಿಕೆಯಡಿ ಏಕೀಕರಣಗೊಳಿಸಲು ತಿಲಕರು ಆಯ್ಕೆ ಮಾಡಿದ್ದೇ ಈ ಗಣೇಶ ಹಬ್ಬವನ್ನು. ಜನರೂ ಅಷ್ಟೇ.  ತಿಲಕರ ಕರೆಗೆ ಜಾತಿ-ಮತ ಬೇಧವಿಲ್ಲದೆ ಬಹುಬೇಗನೆ ಸ್ಪಂದಿಸಿದರು. ದೇಶಾದ್ಯಂತ ಭಕ್ತಿಯ ಪ್ರವಾಹ ಹರಿಯುವುದರೊಂದಿಗೆ ಬ್ರಿಟಿಷರಿಗೆ ನಮ್ಮ ಏಕತೆಯ ಬಿಸಿಯನ್ನೂ ಮುಟ್ಟಿಸಿತು.

ಸ್ವಾತಂತ್ರ್ಯ ಪೂರ್ವದಲ್ಲಿ ಗಣೇಶನ ಹಬ್ಬ ಕೇವಲ ಕುಟುಂಬದ ಆಚರಣೆಯಾಗಿತ್ತು. ಮನೆ-ಮನೆಗಳಲ್ಲಿ ಮಾತ್ರ ಆಚರಣೆಯಲ್ಲಿದ್ದ ಗಣೇಶೋತ್ಸವವನ್ನು ಲೋಕಮಾನ್ಯ ಬಾಲಗಂಗಾಧರ  ತಿಲಕರು ಜನರಲ್ಲಿನ ಸ್ವಾತಂತ್ರ್ಯದ ಕಿಚ್ಚನ್ನು ಹೊರಗೆಡುವುವ ಸಾಧನವಾಗಿ ಬಳಸಿಕೊಂಡರು. 1892ರಲ್ಲಿ ಮಹಾರಾಷ್ಟ್ರದಲ್ಲಿ ಬಾವ್ ಸಾಹೆಬ್ ಲಕ್ಷ್ಮಣ್ ಜವೇಲ್ ಅವರು ಪ್ರಪ್ರಥಮ  ಸಾರ್ವಜನಿಕ ಗಣೇಶೋತ್ಸವನ್ನು ಆಚರಣೆ ಮಾಡಿದರಾದರೂ, 1893ರಲ್ಲಿ  ತಿಲಕರು ಅದಕ್ಕೆ ಸಂಪೂರ್ಣ ಸಾರ್ವಜನಿಕ ಸ್ವರೂಪ ನೀಡಿದರು. ತಮ್ಮ ಕೇಸರಿ ಪತ್ರಿಕೆಯಲ್ಲಿ ಸಾರ್ವಜನಿಕ  ಗಣೇಶೋತ್ಸವದ ಪರಿಕಲ್ಪನೆ ಕುರಿತು ಬರೆದಿದ್ದ ತಿಲಕರು, 1894ರಲ್ಲಿ ಪುಣೆಯ ಕೇಸರಿ ವಾಡದಲ್ಲಿ ಪ್ರಪ್ರಥಮ ಸಾರ್ವಜನಿಕ ಗಣೇಶೋತ್ಸವವನ್ನು ಆರಂಭಿಸಿದರು.

ಗಣೇಶ ಚತುರ್ಥಿಯ ಸಾಂಸ್ಕೃತಿಕ ಮಹತ್ವವನ್ನು ಅರಿತಿದ್ದ ಲೋಕಮಾನ್ಯ ತಿಲಕರು, ಬ್ರಾಹ್ಮಣರು ಮತ್ತು ಬ್ರಾಹ್ಮಣೇತರರ ನಡುವಿನ ಅಂತರವನ್ನು ತುಂಬಲು, ಅವರ ನಡುವೆ  ಕೆಳಹಂತದಲ್ಲಿ ಐಕ್ಯತೆ ಮೂಡಿಸುವುದಕ್ಕೆ ಸೂಕ್ತ ಸಂದರ್ಭವಾಗಿ ಗಣೇಶೋತ್ಸವದ ಆಚರಣೆಯನ್ನು ರಾಷ್ಟ್ರೀಯ ಹಬ್ಬವಾಗಿ ಸಮರ್ಪಕವಾಗಿ ಬಳಸಿಕೊಂಡರು. ಆರಂಭದಲ್ಲಿ ಇದು  ಜಾತಿ-ಜಾತಿಗಳ ನಡುವಿನ ಏಕತೆಯ ಪ್ರತೀಕದಂತೆ ಕಂಡು ಬಂದರೂ ಕ್ರಮೇಣ, ಬ್ರಿಟೀಷ್ ದುರಾಡಳಿತದ ವಿರುದ್ಧ ತಿಲಕರು ಆರಂಭಿಸಿದ ಪರೋಕ್ಷ ಹೋರಾಟ ಎಂಬುದು  ಅರ್ಥವಾಯಿತು. ತಿಲಕರು ಬ್ರಿಟಿಷರ ವಿರುದ್ಧ ಭಾರತದ ಪ್ರತಿಭಟನೆಗೆ ಗಣೇಶನನ್ನು ಕೇಂದ್ರ ಬಿಂದುವಾಗಿ ಬಳಸಿಕೊಂಡರು. ಏಕೆಂದರೆ ಗಣೇಶ ಪ್ರತಿಯೊಬ್ಬರ ಪಾಲಿಗೂ  ದೇವಸ್ವರೂಪಿಯಾಗಿದ್ದ.

ಮಹಾರಾಷ್ಟ್ರದಲ್ಲಿ ಪೇಶ್ವೆ ಆಡಳಿತದಲ್ಲಿ ಮುಖ್ಯ ಹಬ್ಬವಾಗಿದ್ದ ಗಣೇಶೋತ್ಸವ, ಸ್ವರಾಜ್ ಆಂದೋಲನದ ಸಂದರ್ಭದಲ್ಲಿ ಸಂಘಟಿತ ಸ್ವರೂಪ ಪಡೆಯಿತು. ಗಣೇಶನ ಬೃಹತ್ ವಿಗ್ರಹಗಳನ್ನು  ಪ್ರತಿಷ್ಠಾಪಿಸಿ 10ನೇ ದಿನ ಎಲ್ಲ ವಿಗ್ರಹಗಳನ್ನು ವಿಸರ್ಜನೆ ಮಾಡುವ ಪ್ರಕ್ರಿಯೆಯನ್ನು ತಿಲಕರು ಆರಂಭಿಸಿದರು. ನೃತ್ಯ, ನಾಟಕಗಳು, ಕವಿತೆ ವಾಚನ, ಸಂಗೀತ ಗೋಷ್ಠಿಗಳು,  ಚರ್ಚಾಗೋಷ್ಠಿಗಳು ಮುಂತಾದವುಗಳ ರೂಪದಲ್ಲಿ ಗಣೇಶೋತ್ಸವವು ಸಮುದಾಯದ ಪಾಲ್ಗೊಳ್ಳುವಿಕೆಗೆ ನೆರವಾಯಿತು. ಜನರ ಮೇಲೆ ನಿಯಂತ್ರಣ ಹೇರಲು ಬ್ರಿಟಿಷ್ ಆಡಳಿತವು  ಸಾಮಾಜಿಕ ಮತ್ತು ರಾಜಕೀಯ ಸಭೆಗಳನ್ನು ಬಹಿಷ್ಕರಿಸಿದ ಸಂದರ್ಭದಲ್ಲಿ ಗಣೇಶೋತ್ಸವವು ಎಲ್ಲಾ ಜಾತಿ, ಸಮುದಾಯಗಳು ಒಂದು ಕಡೆ ಕಲೆಯುವ ತಾಣವಾಯಿತು. 

ಹೀಗೆ ಗಣೇಶ  ಗುಲಾಮಗಿರಿಯ ವಿಘ್ನವನ್ನು  ನಿವಾರಿಸಿ ನಮಗೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂಬುದನ್ನು ನಾವು ಸ್ಮರಿಸಲೇಬೇಕು.
ಸ್ವಾತಂತ್ರ್ಯದ ಅಮೃತಮಹೋತ್ಸವ ಆಚರಿಸಕೊಳ್ಳುವ ಈ ದಿನಗಳಲ್ಲಿ ಗಣೇಶ ಉತ್ಸವವನ್ನು ವಿಭಿನ್ನ ದೃಷ್ಟಿಕೋನದಿಂದ ಚಿಂತಿಸಿ ಆಚರಿಸಬೇಕಾದ ಅನಿವಾರ್ಯತೆ ಇದೆ. 
ಈ ದಿನಮಾನಗಳಲ್ಲಿ  ಸಾರ್ವಜನಿಕ ಗಣೇಶೋತ್ಸವ ಎಂದರೆ ಹಣ   ವಸೂಲಿ ಮಾಡಿ ,ಆರ್ಕೆಸ್ಟ್ರಾ ಮಾಡಿ, ಶಬ್ಬಮಾಲಿನ್ಯ ಮಾಡುತ್ತಾ ಅರೆ ಬರೆ ಬಟ್ಟೆ ಧರಿಸಿ ಅಶ್ಲೀಲ ಹಾಡುಗಳಿಗೆ ನೃತ್ಯ ಮಾಡುವುದು ಎಂಬ ಅಲಿಖಿತ ನಿಯಮವಿದೆ .ಇದು ಬದಲಾಗಬೇಕಿದೆ. ನಮ್ಮ ಸಂಸ್ಕೃತಿ ಕಲೆ , ಸಂಗೀತದ ಕಾರ್ಯಕ್ರಮಗಳನ್ನು ನಾವು ಆಯೋಜಿಸುವ ಮೂಲಕ ಪಾಶ್ಚಿಮಾತ್ಯ ಸಂಸ್ಕೃತಿಗಳ ವ್ಯಾಮೋಹಕ್ಕೆ ಬಲಿಯಾಗದೆ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಉಳಿಸೋಣ.
ಭಕ್ತಿಯಿಂದ ಆಚರಿಸಬೇಕಾದ ಗಣೇಶೋತ್ಸವ ಇಂದು ಅನವಶ್ಯಕ   ಪ್ರಚೋದನೆ ಮತ್ತು ಅನಿಶ್ಚಿತತೆ ಅಪನಂಬಿಕೆಗಳು  ನುಂಗಿ ಹಾಕುವ ಹಂತಕ್ಕೆ ಬಂದಿರುವುದು ವಿಪರ್ಯಾಸ . ಅಲ್ಲಲ್ಲಿ ಅನ್ಯ ಧರ್ಮಿಯರು ಸಹ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸುವ ಪರಿಪಾಠವು ಭಾವೈಕ್ಯತೆ ಪೂರಕವಾದ  ವಾತಾವರಣ ಮೂಢಿಸುತ್ತಿರುವುದು ಆಶಾವಾದವಾಗಿದೆ.ಅಂದು ತಿಲಕರು ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಗಣೇಶೋತ್ಸವವನ್ನು ವೇದಿಕೆ ಮಾಡಿಕೊಂಡ ರೀತಿಯಲ್ಲಿ ಇಂದು ನಾವು ಸಮಾಜದಲ್ಲಿ ಇರುವ  ಭ್ರಷ್ಟಾಚಾರ, ಅಸಮಾನತೆ, ಬಡತನ ,ಮುಂತಾದ ಸವಾಲುಗಳನ್ನು ಮೆಟ್ಟಿ ನಿಲ್ಲಲು ಚರ್ಚಿಸುವ ವೇದಿಕೆ ಮಾಡಿಕೊಳ್ಳೋಣ .ಆ ಮೂಲಕ ಸಾಮಾಜಿಕ ಹಬ್ಬವನ್ನು ಸಹಕಾರದ ಹಬ್ಬವಾಗಿ ಪರಿವರ್ತನೆ ಮಾಡೋಣ. ಭಕ್ತಿಯಿಂದ ಭಾವೈಕ್ಯತೆ ಮೂಡಿಸಿ ಏಕತೆಯನ್ನು ಸಾಧಿಸಿ ಭಾರತಾಂಭೆಯ ಕೀರ್ತಿಯನ್ನು ಜಗದೆಲ್ಲೆಡೆ ಪಸರಿಸೋಣ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ

24 August 2022

ಪ್ರೌಢ ಶಿಕ್ಷಣದ ಸಾರ್ವತ್ರೀಕರಣ .


 

“ಪ್ರೌಢ ಶಿಕ್ಷಣದ ಸಾರ್ವತ್ರೀಕರಣ”

"ಸಾ ವಿದ್ಯಾಯ ವಿಮುಕ್ತಯೇ" ಎಂಬ ಉಪನಿಷತ್ತಿನ ಉಕ್ತಿಯಂತೆ ಪ್ರತಿಯೊಬ್ಬ ಮಾನವರ ಮುಕ್ತಿ ಮತ್ತು ಅಭಿವೃದ್ಧಿಗೆ ಶಿಕ್ಷಣ ಅಗತ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಈ ದಿಸೆಯಲ್ಲಿ ಎಲ್ಲರಿಗೂ ಶಿಕ್ಷಣ ನೀಡುವ ಪರಿಕಲ್ಪನೆಯನ್ನು ಪರಿಚಯಿಸಿದರು. ಈ ಆಧಾರದ ಮೇಲೆ ನಮ್ಮ ಕೇಂದ್ರ ಸರ್ಕಾರವು ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣಕ್ಕೆ ಎಸ್ ಎಸ್ ಎ   ಎಂಬ ಆಂದೋಲನವನ್ನು ಹಮ್ಮಿಕೊಂಡು ಅದನ್ನು ಬಹುತೇಕ ಯಶಸ್ವಿಗೊಳಿಸಿತು.

ಈಗ ಪ್ರಸ್ತುತ ಕೇಂದ್ರ ಸರ್ಕಾರವು ಪ್ರೌಢಶಿಕ್ಷಣಕ್ಕೆ ಒತ್ತು ನೀಡಿ ಶಿಕ್ಷಣವನ್ನು ನೀಡಲು ಆರ್.ಎಂ.ಎಸ್.ಎ  ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಇದು ಈಗ ಕಾರ್ಯಾರಂಭ ಪೂರ್ವ ಹಂತದಲ್ಲಿದ್ದು ಯೋಜನೆ ಮೂಲಕ  ಅಗತ್ಯ ಕ್ರಮಗಳನ್ನು
ಪೂರೈಸುತ್ತಿದೆ. 
ಸಾರ್ವತ್ರೀಕರಣ ಎಂದರೆ ಎಲ್ಲ ಕಡೆ  ಅಥವಾ ಎಲ್ಲಿಯೂ ಇರುವುದು ಎಂದರ್ಥವಾಗುತ್ತದೆ . ಇಂದಿನ ಪ್ರಸ್ತುತ ಶಿಕ್ಷಣ ವ್ಯವಸ್ಥೆಯನ್ನು ಗಮನಿಸಿದಾಗ ಕಷ್ಟಪಟ್ಟು ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ವಿದ್ಯಾರ್ಥಿಯು ವಿವಿಧ ಕಾರಣಗಳಿಂದ ಪ್ರೌಢ  ಶಿಕ್ಷಣದ ಹಂತಕ್ಕೆ ತಲುಪಿದಾಗ ಹಾಳು ಮತ್ತು ಕೊಳೆ ಆಗಿ ಪ್ರೌಢ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಆಮೇರಿಕಾ ಜಪಾನ್ನಂತಹ ಮುಂದುವರೆದ ದೇಶಗಳಲ್ಲಿ ಪ್ರಾಥಮಿಕ ಹಂತದಲ್ಲಿ ದಾಖಲಾದ ಶೇ.80ರಷ್ಟು ಮಕ್ಕಳು ಪ್ರೌಢಶಿಕ್ಷಣ ಮುಗಿಸಿದರೆ ನಮ್ಮ ದೇಶದಲ್ಲಿ ಇದರ ಪ್ರಮಾಣ  70% ಇರುವುದು ಆತಂಕಕಾರಿಯಾಗಿದೆ.

ಈ ನಿಟ್ಟಿನಲ್ಲಿ ಪ್ರಾಥಮಿಕ ಹಂತದಲ್ಲಿ ದಾಖಲಾದ  ಎಲ್ಲಾ ಮಕ್ಕಳು ಪ್ರೌಢಶಿಕ್ಷಣವನ್ನು ಮುಗಿಸಿ ಉತ್ತಮ ವಿದ್ಯಾವಂತರಾಗಲು ಎಸ್.ಎಸ್.ಎ.2 ಅಥವಾ ಆರ್.ಎಂ.ಎಸ್.ಎ. ಒಂದು ವರದಾನ ಎಂದು ಹೇಳಬಹುದು. ಯೋಜನೆಯಲ್ಲಿ ಕೈಗೊಳ್ಳಲಾಗುತ್ತಿರುವ ಕೆಲವು ಕಾರ್ಯಕ್ರಮಗಳನ್ನು ಈ ಮುಂದಿನಂತೆ ವಿವರಿಸಬಹುದು.

ಮೂಲಭೂತ ಸೌಕರ್ಯಗಳನ್ನು ಒದಗಿಸುವುದು .ಈ ದಿಸೆಯಲ್ಲಿ ದೇಶದಾದ್ಯಂತ ಯೋಜನಾ ಕಾರ್ಯ ಮುಕ್ತಾಯಗೊಂಡಿದ್ದು, ಶಾಲೆಗಳಲ್ಲಿ ಆಗತ್ಯವಿರುವ ಕಟ್ಟಡಗಳು
ಪೀಠೋಪಕರಣಗಳು ಮತ್ತು ಇತರೆ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

ಅಗತ್ಯವಿರುವ ಶಿಕ್ಷಕರ ನೇಮಕ .

ಗುಣಾತ್ಮಕ ಶಿಕ್ಷಣವನ್ನು ನೀಡುವಲ್ಲಿ ಮಕ್ಕಳು ಮತ್ತು ಶಿಕ್ಷಕರ ಅನುಪಾತ ಮುಖ್ಯ ಆದರೆ, ಪ್ರಸ್ತುತ ಮಕ್ಕಳು ಶಿಕ್ಷಕರು ಅನುಪಾತ ಕೆಲವೆಡೆ 100 ಇದ್ದು ಎಸ್.ಎಸ್.ಎ2 ರ ಪ್ರಕಾರ ಇದು ಉತ್ತಮಗೊಳ್ಳಲಿದೆ .

ಶಿಕ್ಷಕರಿಗೆ ಅನುದಾನ .
ಶಿಕ್ಷಕರಿಗೆ ಸರ್ಕಾರದಿಂದ ಇದುವರೆಗೆ ಹಲವಾರು ಕಲಿಕಾ  ಸಾಮಗ್ರಿಗಳನ್ನು ನೀಡಿದ್ದರೂ ಶಿಕ್ಷಕರು ಅಗತ್ಯಕ್ಕನುಗುಣವಾಗಿ ಕಲಿಕಾ ಸಾಮಾಗ್ರಿ ಬೋಧನೆ ನೀಡಲು ಶಿಕ್ಷಕರಿಗೆ ಈ ಯೋಜನೆಯ ಅನುಸಾರ ಅನುದಾನ ನೀಡಲಾಗುತ್ತದೆ.

ಕಲಿಕಾ ಪ್ರಕ್ರಿಯೆ ಹೇಗೆ ಸಾಗಿದೆ ಎಂದು ತಿಳಿಯಲು ಕಾಲಕಾಲಕ್ಕೆ ಈ ವಿಷಯಗಳ ಮೌಲ್ಯ ಮಾಪನ ಮತ್ತು ಹಿಮ್ಮಾಹಿತಿ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಹಂತದಲ್ಲಿ ಹೆಚ್ಚು ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲು ಚಿಂತನೆ ನಡೆಸಲಾಗಿದೆ.

ಶಿಕ್ಷಕರಿಗೆ ತರಬೇತಿ ನೀಡುವುದು.
ಶಿಕ್ಷಕರು ಒಂದರ್ಥದಲ್ಲಿ ವಿದ್ಯಾರ್ಥಿಯಾಗಿದ್ದು ಕಾಲಕಾಲಕ್ಕೆ ಬದಲಾದ ವಿಷಯ ಮತ್ತು ತಂತ್ರಜ್ಞಾನ (ಕಂಪ್ಯೂಟರ್) ತಿಳಿಯಲು  ಶಾಲಾ ಶಿಕ್ಷಕರ ತರಬೇತಿ ಅಗತ್ಯವಾಗಿದೆ. ಶಿಕ್ಷಕರಿಗೆ ತರಬೇತಿ ನೀಡಲು ಈ ಎಸ್.ಎಸ್.ಎ.2 ಕಾರ್ಯ ಕ್ರಮದಲ್ಲಿ ಹಮ್ಮಿಕೊಳ್ಳಲಾಗಿದೆ. ಇದರಿಂದ ಶಿಕ್ಷಣದ ಗುಣಮಟ್ಟ ಹೆಚ್ಚುವಾಗುವುದರಲ್ಲಿ ಸಂದೇಹವಿಲ್ಲ.

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಪ್ರಯೋಜನೆಗಳು

1 ಯೋಜನೆಯಿಂದ ದೇಶದಾದ್ಯಂತ ಪ್ರೌಢ ಶಿಕ್ಷಣದ ಸಾರ್ವತ್ರೀಕರಣ  ಸಾಧಿಸಿದಂತಾಗುತ್ತದೆ.
2. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕಾರಣವಾಗುತ್ತದೆ.
3 ನಮ್ಮ ದೇಶದ ವಿದ್ಯಾರ್ಥಿಗಳು ರಾಷ್ಟ್ರೀಯ ಮುಟ್ಟದ ವಿದ್ಯಾರ್ಥಿಗಳೊಂದಿಗೆ ಸ್ಪರ್ದಿಸಲು ಅನುಕೂಲವಾಗುತ್ತದೆ.
4 ಮೂಲ ವಿಷಯಗಳನ್ನು ಅಭ್ಯಾಸ ಮಾಡುವುದು ಇತ್ತೀಚೆಗೆ ಕಡಿಮೆಯಾಗಿದ್ದು, ಮುಂದಿನ ದಿನಗಳಲ್ಲಿ ಈ ಸಮಸ್ಯೆ ನಿವಾರಣೆಯಾಗುವುದು.
5 ವಿಜ್ಞಾನ ಮತ್ತು ತಂತ್ರಜ್ಞಾನ: ಕ್ಷೇತ್ರದಲ್ಲಿ ಬೆಳವಣಿಗೆ ಆಗಿ ದೇಶವು ಪ್ರಗತಿ ಪಥದಲ್ಲಿ ಸಾಗುವುದು

ಸರ್ವ ಶಿಕ್ಷಾ ಅಭಿಯಾನಕ್ಕೆ ಹಲವು ಅಡೆತಡೆಗಳಿವೆಅವು ಯಾವುವೆಂದರೆ

1 ಪೋಷಕರಲ್ಲಿ ನಿರಾಸೆ
2 ದೇಶದ ಹಲವೆಡೆ ಬಡತನ ಮತ್ತು ಮೂಢನಂಬಿಕೆಗಳು ತಾಂಡವವಾಡುತ್ತಿವೆ.
3. ಸೌಲಭ್ಯಗಳು ಮಕ್ಕಳಿಗೆ ಸರಿಯಾಗಿ
ಸಿಗದೇ ಇರಬಹುದು
4. ಸರಿಯಾದ ಮೇಲ್ವಿಚಾರಣೆಯ ಕೊರತೆಯಿದೆ.
5 ಲಭ್ಯವಿರುವ ಸಂಪನ್ಮೂಲಗಳ ಸರಿಯಾದ ಬಳಕೆ ಆಗದೇ ಇರುವುದು 6 ಕೆಲವು ಭೌಗೋಳಿಕ ಪರಿಸರಗಳು
ಶಿಕ್ಷಣ ನೀಡಲು ಪೂರಕವಾಗಿಲ್ಲದಿರುವುದು. 

ಪರಿಹಾರೋಪಾಯಗಳು

1.ಶಾಲೆ ಮತ್ತು ಸಮುದಾಯದ ನಡುವೆ ಉತ್ತಮ ಸಂಪರ್ಕ ಕಲ್ಪಿಸುವುದು.
2 ವಿದ್ಯಾರ್ಥಿಗಳಿಗೆ ಈಗ ನೀಡುತ್ತಿರುವ ಬಿಸಿಯೂಟ, ಬೈಸಿಕಲ್ ವಿತರಣೆ ಅಂತಹ ಮುಂದುವರೆದ ಸೌಲಭ್ಯಗಳನ್ನು ವಿಸ್ತಾರ ಮಾಡುವುದು.
3. ಮೇಲ್ವಿಚಾರಕರು ಪರಿವೀಕ್ಷಕರ ಕಾರ್ಯ ಒತ್ತಡ ಕಡಿಮೆ ಮಾಡಿ ಶಾಲಾ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದು ಉದಾ: ಇತ್ತೀಚೆಗೆ ಕರ್ನಾಟಕ ಸರ್ಕಾರ, ಸಿ .ಎ.ಇ.ಒ ಹುದ್ದೆ ರದ್ದುಗೊಳಿಸಿ, ಮುಖ್ಯ ಶಿಕ್ಷಕರು ಶಾಲಾ ಶೈಕ್ಷಣಿಕ ಚಟುವಟಿಕೆಗಳ ಕಡೆಗೆ ಗಮನ ಹರಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ.
4. ಪ್ರೌಢ ಶಾಲೆಗಳಲ್ಲಿ ಅಭ್ಯವಿರುವ ಸಂಪನ್ಮೂಲಗಳ ಸದ್ಬಳಕೆ ಆಗುತ್ತಿಲ್ಲ. ಉದಾ - ಕಂಪ್ಯೂಟರ್, ಲ್ಯಾಪ್ಟಾಪ್, ಒ.ಎಚ್.ಪಿ. ಪ್ರೊಜೆಕ್ಟರ್ ಉಕರಣಗಳಿದ್ದರೂ ಅವುಗಳ ಬಳಕೆ ಸರಿಯಾಗಿ ಆಗುತ್ತಿಲ್ಲ ಅವುಗಳನ್ನು ಸಮರ್ಪಕವಾಗಿ ಬಳಕೆ ಮಾಡಲು ಕ್ರಮ ಕೈಗೊಳ್ಳಬೇಕು ಮತ್ತು ಬೋಧನೆಯಲ್ಲಿ ಇವುಗಳ ಬಳಕೆ ಖಡ್ಡಾಯಗೊಳಿಸಬೇಕು.
5 ಗುಡ್ಡಗಾಡು ಮತ್ತು  ಅರಣ್ಯಗಳಿರುವ ಪ್ರದೇಶಗಳಲ್ಲಿ ಶಿಕ್ಷಣ ನೀಡಲು ಸರ್ಕಾರವು ವಿಶೇಷ
ಶಿಕ್ಷಣ ಅಭಿಯಾನ" ಯೋಜನೆಯನ್ನು ತಯಾರಿಸಿ ಅದರ ಅನುಷ್ಠಾನಕ್ಕೆ ಹೆಚ್ಚು ಬದ್ಧತೆ ತೋರಿದರೆ ಪ್ರಸ್ತುತವಿರುವ  ಟೆಂಟ್ ಶಾಲೆ ಮತ್ತು ಮೊಬೈಲ್ ಶಾಲೆಗಳಲ್ಲಿ ಸೌಲಭ್ಯ ನೀಡಿದರೆ ಆ ಪ್ರದೇಶದ ಮಕ್ಕಳ ಶಿಕ್ಷಣ ಉತ್ತಮವಾಗುವುದು.
5ಶಿಕ್ಷಕರು ಸೇವಾ ಮನೋಭಾವದಿಂದ ಕಾರ್ಯ ನಿರ್ವಹಣೆ ಮಾಡಬೇಕು
6 ಸಮುದಾಯಯದ ಸಮರ್ಪಕವಾದ ಪಾಲ್ಗೊಳ್ಳುವಿಕೆಯು ನಮ್ಮ ಈ ಯೋಜನೆ ಮುಖ್ಯವಾದ ಅಂಶವಾಗಿದೆ. 

ಈ ಮೇಲ್ಕಂಡ ಹರಿಹಾರೋಪಾಯಗಳನ್ನು ಗಮನದಲ್ಲಿಟ್ಟುಕೊಂಡು  ಪ್ರತಿಯೊಬ್ಬ ಶಿಕ್ಷಕರು ನಿರ್ವಂಚನೆಯಿಂದ ಕಾರ್ಯ ನಿರ್ವಹಿಸುವುದರ ಜೊತೆಗೆ ಪೋಷಕರು ಮತ್ತು   ಸಮುದಾಯ  ಸಕಾರಾತ್ಮಕವಾಗಿ ಸ್ಪಂದಿಸಬೇಕಾಗಿದೆ ಮತ್ತು ಶಾಲೆಯ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕಾಗಿದೆ. ಪ್ರೌಢ ಶಿಕ್ಷಣ ಸಾರ್ವತ್ರೀಕರಣ  ಒಂದು ಉತ್ತಮವಾದ  ಪರಿಕಲ್ಪನೆ ಯಾಗಿದ್ದು, ಇದು ಜಾರಿಗೊಂಡು ಭಾರತದ ಸಾಕ್ಷರತಾ ಪ್ರಮಾಣ ಶೇ 100 ರಷ್ಟು ಸಾಧಿಸುವುದರಲ್ಲಿ  ಸಂದೇಹವಿಲ್ಲ.

ಸಿಹಿಜೀವಿ
ಸಿ.ಜಿ.ವೆಂಕಟೇಶ್ವರ,
ಸೆಪ್ಟೆಂಬರ್ ತಿಂಗಳ " ಗ್ರಾಮೀಣ ಬದುಕು " ಮಾಸಪತ್ರಿಕೆಯಲ್ಲಿ ಪ್ರಕಟವಾ ಲೇಖನ

ಸಿಂಹ ಧ್ವನಿ. ೨೪/೮/೨೨


 

23 August 2022

ಮಕ್ಕಳೆ ಗುಟ್ಟೊಂದ ಹೇಳುವೆ...


 


ಗುಟ್ಟೊಂದು ಹೇಳುವೆ ಕೇಳಿ....



ಗುಟ್ಟೊಂದ ಹೇಳುವೆ ಕೇಳಿ ಮಕ್ಕಳೆ

ಸಾಧಕರಾಗಿ ,ಮುಂದೆ ನಿಮ್ಮದೇ ಇಳೆ||


ಆಹಾರದಲ್ಲಿ ಇರಲಿ ಹಿತಮಿತ 

ನಿನ್ನದಾಗುವುದು ಆರೋಗ್ಯಪಥ ||


ಯಶಸ್ಸಿಗೆ ವಾಮಮಾರ್ಗಗಳಿಲ್ಲ

ಪ್ರಾಮಾಣಿಕ ಪ್ರಯತ್ನಕ್ಕೆ ಸೋಲಿಲ್ಲ ||


ರೂಢಿಸಿಕೊಳ್ಳಿ ಸರಳಜೀವನ 

ಗೌರವಿಸುವರು ನಿನ್ನ ಸಕಲಜನ ||


ಪೂಜಿಸದಿದ್ದರೂ ತಪ್ಪಿಲ್ಲ ದೇವರ

ಗೌರವಿಸುವುದ ಕಲಿ ಗುರುಹಿರಿಯರ ||



ಸಿಹಿಜೀವಿ

ಸಿ ಜಿ ವೆಂಕಟೇಶ್ವರ


21 August 2022

ಚೆಲುವಿನ ಚಿತ್ತಾರ ..


 


#ಸಿಹಿಜೀವಿಯ_ಹನಿ 


ಕತ್ತಲಾಯಿತೆಂದು 

ಬೇಸರಿಸದಿರು ನೋಡಲ್ಲಿ

ಕಂಗೊಳಿಸುತ್ತಿವೆ ಗ್ರಹ ತಾರಾ |

ಕತ್ತಲಲೂ ಮೂಢಿಸಿದೆ 

ಚೆಲುವಿನ ಚಿತ್ತಾರ ||


ಸಿಹಿಜೀವಿ 


ಹಿರಿಯ ನಾಗರಿಕರು...

 



#ವಿಶ್ವಹಿರಿಯನಾಗರಿಕರದಿನ 



ನಾವು ಹಿರಿಯ ಜೀವಗಳು

ಮಾಗಿದ ಬಾಗಿದ ಬೆನ್ನುಗಳು

ನಾವು ಹಿರಿಯ ನಾಗರಿಕರು |

ಅನಾದರ ಮಾಡಿದರೂ

ನಮ್ಮ ಸಾಕದಿದ್ದರೂ ಬೇಸರವಿಲ್ಲ

ಸುಖವಾಗಿ ಬಾಳಲಿ ನಮ್ಮ ಕರು ||



#ಸಿಹಿಜೀವಿಯ_ಹನಿ 

ಶಾಂತಿ...


 



ಮಗ ಎಂ. ಬಿ .ಬಿ.ಎಸ್. ಮುಗಿಸಿ ಒಳ್ಳೆಯ ಅಂಕದೊಂದಿಗೆ ಪಾಸಾಗಿದ್ದಾನೆ ನನ್ನ ಇಚ್ಚೆಯಂತೆ ಎಂ ಡಿ ಸೀಟ್ ಸಿಗುವುದೋ ಇಲ್ಲವೋ ಎಂಬ ಚಿಂತೆ, ಬೇಸರ, ಮಗಳು ಇಂಜಿನಿಯರ್ ಮುಗಿಸಿ ಕೆಲಸಕ್ಕೆ ಹೋಗುತಿಹಳು,ಅವಳಿಗೆ ನನ್ನಿಚ್ಚೆಯ ವರ ಸಿಗುವನೆ? ಎಂಬ‌ ಚಿಂತೆ.ಹದಿನೈದು ಕೋಟಿ ಆಸ್ತಿಯಿದ್ದರೂ ಮನಸ್ಸಿಗೆ ಶಾಂತಿಯಿಲ್ಲ ನೆಮ್ಮದಿಯಿಲ್ಲ ಮನಃಶಾಂತಿ ಪಡೆಯುವುದು ಹೇಗೆ? ಪರಿಹಾರ ಸೂಚಿಸಿ ಸ್ವಾಮಿ.
ಮುಗುಳ್ನಕ್ಕು ಸ್ವಾಮೀಜಿಯವರು ಹೇಳಿದರು.
ಭಕ್ತ, ನಿನಗೆ ಶಾಂತಿಯಿಂದ ಇರಬೇಕೆಂದು
ಇಚ್ಛೆ ಇದೆಯೇ? ಹಾಗಾದರೆ ನಿನ್ನ ಇಚ್ಛೆಗಳನ್ನು
ಶಾಂತಗೊಳಿಸು 
ವಿಶ್ವ ವಾಣಿ ಪತ್ರಿಕೆಯಲ್ಲಿ ಪ್ರಕಟವಾದ  ಪುಟ್ಟ ಕಥೆ ೨೨/೪/೨೧

18 August 2022

ನ‌ನ್ನ ಪುಟ್ಟ ದೇವತೆ...

 


*ನನ್ನ ಪುಟ್ಟ ದೇವತೆ*

ಇವಳು ನನ್ನ ಪುಟ್ಟ ದೇವತೆ
ಸದಾ ನಗುವ ಸಂತಸದ ವರತೆ
ಅವಳ ಕಂಡರೆ ನೋವು ಮಾಯ
ಅವಳಿದ್ದರೆ ಜಗ ಆನಂದಮಯ||

ಚಿನ್ನ ಬೇಡ ಅವಳೇ ಚಿನ್ನಮ್ಮ


ಪ್ರತಿರೂದಲಿ ಅವಳೇ ನನ್ನಮ್ಮ
ಬೆಳೆವ ಸಿರಿ ಮೊಳಕೆಯಲಿ
ನಲಿವಳು ಪರೋಪಕಾರದಲಿ ||

ಬಲು ಚೂಟಿ ಆಟ ಪಾಠದಲಿ
ಬೇಸರವಾದರೆ ಗಂಗೆ ನಯನದಲಿ
ಮನೆಯಲಿದ್ದರೆ ಸಾಕು ಅವಳು
ಹಗಲಾಗುವುದು ಇರುಳು ||

ಅವಳೇ ನಮ್ಮನೆಯ ದೀಪ
ನೀಗಿಸುವಳು ನಮ್ಮಯ ಶಾಪ
ನಮ್ಮ ಭವಿಷ್ಯದ ಭರವಸೆ ಅವಳು
ನಡೆಸುವಳು  ಹಿಡಿದು ಬೆರಳು ||

ಸಿಹಿಜೀವಿ
ಸಿ ಜಿ ವೆಂಕಟೇಶ್ವರ.

16 August 2022

ಎಲೆ ಮರೆಯ ಅಲರು ...


 


ವಿಮರ್ಶೆ ೫೧

ಎಲೆ ಮರೆಯ ಅಲರು.


ಬೆಳಗೆರೆ ಕೃಷ್ಣಶಾಸ್ತ್ರಿಗಳ ಯೇಗ್ದಾಗೆಲ್ಲಾ ಐತೆ ಪುಸ್ತಕ ಓದಿದ ಮೇಲೆ ಅವರ ಇತರ ಕೃತಿಗಳನ್ನು ಓದುವ ಹಂಬಲವಾಯಿತು.ಅದರಂತೆ ಮೊನ್ನೆ ಎಲೆ ಮರೆಯ ಅಲರು ಎಂಬ ಅವರ ಕೃತಿಯನ್ನು ಓದಿದೆ.

ಓದುತ್ತಾ ಬೆಂಗಳೂರು, ತಳಕು, ಆಂದ್ರ ಹೆಗ್ಗೆರೆ ,ಕಾಪರಹಳ್ಳಿ ,ಬೆಳಗೆರೆ ಹೀಗೆ ನಾನಾ ಊರುಗಳ ಸುತ್ತಿದ ಹಾಗೂ ನಾನಾ ವ್ಯಕ್ತಿಗಳ ವ್ಯಕ್ತಿತ್ವದ ಪರಿಚಯವಾಯಿತು.ಕೃಷ್ಣ ಶಾಸ್ತ್ರಿಗಳ ನಿರೂಪಣೆ ಮತ್ತು ಬರವಣಿಗೆಯ ಶೈಲಿ ಓದುಗರನ್ನು ಸೆಳೆಯುತ್ತದೆ. ಒಂದೇ ಸಿಟ್ಟಿಂಗ್ ನಲ್ಲಿ ಕೂತು ಓದುವಂತೆ ಮಾಡುತ್ತದೆ.

ಸ್ವಿಮ್ಮಿಂಗ್ ನಾರಾಯಣ ರವರು ಅವರಿಗೆ ಬೆಂಗಳೂರಿನಲ್ಲಿ ಆಶ್ರಯದಾತರಾಗಿ ಅನ್ನದಾತರಾಗಿ ಸಹಕಾರ ನೀಡಿದ್ದನ್ನು ತಮ್ಮ ಅಗ್ರ ಲೇಖನದಲ್ಲಿ ಕೃತಜ್ಞತಾಪೂರ್ವಕವಾಗಿ ಸ್ಮರಿಸುತ್ತಾ ನಾರಾಯಣ ರವರ ವ್ಯಕ್ತಿತ್ವದ ಪರಿಚಯ ಮಾಡಿದ್ದಾರೆ.

ನಾವೂ ನಾಟಕವಾಡಿದ್ದು ಎಂಬ ಅಧ್ಯಾಯದಲ್ಲಿ ಹುಡುಗಾಟಿಕೆಗೆಂದು ಆಡಿದ ಮಾತು ನಿಜವಾಗಿ ಶಾಲೆಯ ಶಿಕ್ಷಕರ ಮತ್ತು ಹಿರಿಯರ ಬೆಂಬಲದಿಂದ ಯಶಸ್ವಿಯಾಗಿ ಅದರಿಂದ ಬಂದ ಹಣವನ್ನು ವಿದ್ಯಾರ್ಥಿಗಳ ಮಧ್ಯಾಹ್ನದ ಉಪಾಹಾರಕ್ಕೆ ಬಳಸುವ ಅವರ ಮುಂದಾಲೋಚನೆ ಮತ್ತು ಸಹಾಯ ಮಾಡುವ ಗುಣಕ್ಕೆ ಹಿಡಿದ ಕನ್ನಡಿ ಎನ್ನಬಹುದು ಇದು ಮುಂದೆ ಬೆಳಗೆರೆಯಲ್ಲಿ ಶಾರದಾ ಶಾಲೆ ಆರಂಭದಿಂದ ಹಿಡಿದು  ಇತರ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪ್ರಕಟವಾಗಿದ್ದನ್ನು ಕಾಣಬಹುದು.

ಈ ಪುಸ್ತಕದಲ್ಲಿ ಹೆಗ್ಗರೆಯಲ್ಲಿ ಅವರು ಶಿಕ್ಷಕರಾಗಿ ಕಾರ್ಯನಿರ್ವಹಿಸುವ ಸಂಧರ್ಭದಲ್ಲಿ ದಾನಿಗಳಿಂದ ಹಣ ಸಂಗ್ರಹಿಸಿ ಶಾಲಾ ಕೊಠಡಿಗಳು ಮತ್ತು ರಂಗಮಂದಿರ ನಿರ್ಮಾಣ ಮಾಡಿದ ವಿವರಗಳು ಮತ್ತು ಕಬ್ಬಿಣದ ಅಂಗಡಿಯ ಮುಸ್ಲಿಂ ಮಾಲಿಕನ ನಡುವಿನ ಸಂಭಾಷಣೆ ಮತ್ತು ಸಂಬಂಧ ನಮ್ಮನ್ನು ಚಿಂತನೆಗೆ ಹಚ್ಚುತ್ತದೆ. ಸರ್ಕಾರದ ಹಣದಲ್ಲಿ ಎಷ್ಟು ಪರ್ಸೆಂಟ್ ಕಮಿಷನ್  ಹೊಡೆಯೋಣ ಎಂದು ಯೋಚಿಸುವ ಕಂಟ್ರಾಕ್ಟರ್ ಮತ್ತು ಅಧಿಕಾರಿಗಳು ನಮ್ಮ ಕೃಷ್ಣ ಶಾಸ್ತ್ರಿಗಳ ಆದರ್ಶ ರೂಢಿಸಿಕೊಂಡು ಸೇವಾ ಮನೋಭಾವ ಹೊಂದಬೇಕಿದೆ.ಅದು ಅಸಾಧ್ಯ ಕನಸು ಎಂಬುದು ಸಹ ನನಗೆ ಮನವರಿಕೆ ಆಗಿದೆ.ಹೆಗ್ಗೆರೆಯ ನಮ್ಮ ಬಂಧುಗಳ ಮನೆಗೆ ಹೋದಾಗ ಈಗಲೂ ಗಟ್ಟಿಮುಟ್ಟಾಗಿ ನಿಂತ ಶಾಲಾಕೊಠಡಿಗಳು ಮತ್ತು ರಂಗಮಂದಿರ ನೋಡಿ ಮನದಲ್ಲೇ ಕೃಷ್ಣ ಶಾಸ್ತ್ರಿಗಳಿಗೆ ಒಂದು ನಮನ ಸಲ್ಲಿಸುವೆ.   

  ಟಿ ಎಸ್  ವೆಂಕಣ್ಣಯ್ಯನವರ ಆದರ್ಶ ಮತ್ತು ನಮ್ಮ ಒಡೆಯರ ಉನ್ನತವಾದ ಆಡಳಿತ ಚಿಂತನೆ ನಮಗೆ ಈ ಪುಸ್ತಕದಲ್ಲಿ ಶಾಸ್ತ್ರಿರವರು ಕಟ್ಟಿಕೊಟ್ಟಿದ್ದಾರೆ.   ವೆಂಕಣ್ಣಯ್ಯನವರು ಮಹಾರಾಜರ ಮಗನ ಕಲಿಕೆ ಗಣನೀಯವಾಗಿ ಇಲ್ಲದ ಕಾರಣ  ಅನುತ್ತೀರ್ಣ ಮಾಡಿರುತ್ತಾರೆ.   ಆಗ ಅರಮನೆಗೆ ವೆಂಕಣ್ಣಯ್ಯನವರ  ಕರೆಸಿದ ಮಹಾರಾಜರು ಮನಸ್ಸು ಮಾಡಿದ್ದರೆ ಮಗನನ್ನು ಪಾಸು ಮಾಡಲು ಹೇಳಬಹುದಾಗಿತ್ತು ಆದರೆ ಅವರು ಹಾಗೆ ಮಾಡಲಿಲ್ಲ. ಮನೆ ಪಾಠ ಮಾಡಲು ವೆಂಕಣ್ಣಯ್ಯನವರ ಕೇಳಿದರು ಅದಕ್ಕೆ ಒಪ್ಪದೇ ಮನೆ ಪಾಠ ಮಾಡಲು ಅವರ ಶಿಷ್ಯರಾದ ಕುವೆಂಪುರವರ ಗೊತ್ತು ಮಾಡುವ ಭರವಸೆ ನೀಡಿದರು.ಕೊನೆಗೆ ಬಿ ಎಂ ಶ್ರೀ ರವರು ಮನೆ ಪಾಠ ಮಾಡುವ ಮೂಲಕ ಯುವರಾಜರು ಪಾಸಾದರು . ಈ ಘಟನೆಯನ್ನು ಓದಿದ   ಶಿಕ್ಷಕನಾದ ನನಗೆ  ಶಿಕ್ಷಣದ ವ್ಯಾಪರೀಕರಣದ ಈ  ದಿನಗಳಲ್ಲಿ ವೆಂಕಣ್ಣಯ್ಯನವರಂತಹ ಅಧ್ಯಾಪಕರು ಮತ್ತು ಮಹಾರಾಜರಂತಹ ಆಡಳಿತಗಾರರ ಅವಶ್ಯಕತೆ ತೀರಾ ಇದೆ ಎಂದೆನಿಸಿತು.

ಮದ್ದನಕುಂಟೆಯಲ್ಲಿ ಜೈಮಿನಿ ಭಾರತ ಓದಿದ ಘಟನೆಯನ್ನು ನೆನೆಯುತ್ತಾ ಇವರು ಜೈಮಿನಿ ಭಾರತವನ್ನು ತಪ್ಪಾಗಿ ಓದಿದಾಗ  ,ಇವರಿಗೆ  ಮುಜಗರವಾಗದಂತೆ ಆ ಹಳ್ಳಿಯ ಅನಕ್ಷರಸ್ಥರು ತಿದ್ದಿದ ಪರಿಯನ್ನು ಶಾಸ್ತ್ರೀಯವರು ಬಹಳ ಚೆನ್ನಾಗಿ ನಿರೂಪಿಸಿದ್ದಾರೆ.


ಹೀಗೆ ಇಡೀ ಪುಸ್ತಕದಲ್ಲಿ ಎಲೆ ಮರೆಯ ಅಲರುಗಳನ್ನು ನಮಗೆ ತೋರಿಸುವ ಕಾರ್ಯವನ್ನು ಬೆಳಗೆರೆ ಕೃಷ್ಣಶಾಸ್ತ್ರಿಗಳು ಮಾಡಿದ್ದಾರೆ.ಈ ಎಲ್ಲಾ ಅಲರುಗಳು ನಮ್ಮಲ್ಲಿ ಸುಪ್ತವಾಗಿರುವ ಒಳ್ಳೆಯ ಗುಣಗಳನ್ನು ಜಾಗೃತಗೊಳಿಸುವುದರಲ್ಲಿ ಸಂದೇಹವಿಲ್ಲ. ನೀವೂ ಒಮ್ಮೆ ಎಲೆ ಮರೆಯ ಅಲರಿನ ದರ್ಶನ ಮಾಡಲು ಮನವಿ ಮಾಡುವೆ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

13 August 2022

ಮನೆ ಮನೆಯಲ್ಲಿ ತಿರಂಗಾ ...


 



ಮನೆ ಮನೆಯಲ್ಲಿ ತಿರಂಗಾ 


ನಮ್ಮ ರಾಷ್ಟ್ರ ಧ್ವಜ , ರಾಷ್ಟ್ರ ಗೀತೆ ಮತ್ತು ರಾಷ್ಟ್ರ ಲಾಂಛನಗಳನ್ನು ಗೌರವಿಸುವುದು ಪ್ರತಿಯೊಂದು ನಾಗರೀಕನ  ಮೂಲಭೂತ ಕರ್ತವ್ಯವಾಗಿದೆ.ಇತ್ತೀಚಿನ ದಿನಗಳಲ್ಲಿ ಭಾರತೀಯರಲ್ಲಿ ರಾಷ್ಟ್ರಭಕ್ತಿ ಹೆಚ್ಚು ಜಾಗೃತಗೊಂಡಿರುವದು ಕಂಡುಬರುತ್ತಿದೆ. 


ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಪರ್ವಕಾಲದಲ್ಲಿ ಭಾರತ ಸರ್ಕಾರವು ಧ್ವಜ ಸಂಹಿತೆಗೆ ಕೆಲ ತಿದ್ದುಪಡಿ ಮಾಡಿ ಮನೆ  ಮನೆಯಲ್ಲೂ  ಧ್ವಜಾರೋಹಣ ಮಾಡುವ ಅವಕಾಶವನ್ನು ನೀಡಿದೆ.ಸ್ವಾತಂತ್ರ್ಯ ಪಡೆದ ಎಪ್ಪತ್ತೈದು ವರ್ಷಗಳ ಸವಿನೆನಪಿಗಾಗಿ ಮಾಡುವ ಈ ಉಪಕ್ರಮವು ಸರ್ವ ನಾಗರೀಕರಿಂದ ಸ್ವಾಗತಿಸಲ್ಪಟ್ಟು  ದಿನಾಂಕ13 ರ ಆಗಸ್ಟ್ ನ  ಮನೆ ಮನೆಯಲ್ಲೂ  ನಮ್ಮ ತಿರಂಗ ಹಾರಾಡುತ್ತಿದೆ  ಈ ಹಿನ್ನೆಲೆಯಲ್ಲಿ ತಿರಂಗಾ ಹಾರಿಸುವ ಕೆಲ ಮಾಹಿತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಚ್ಚಿಸುವೆ.


ದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವದಂದು ತ್ರಿವರ್ಣ ಧ್ವಜ ಹಾರಿಸಲಾಗುತ್ತದೆಯಾದರೂ ಈ ಎರಡೂ ದಿನಗಳ ಧ್ವಜಾರೋಹಣದ ಮಧ್ಯೆ ವ್ಯತ್ಯಾಸವಿದೆ.

ಭಾರತಕ್ಕೆ 1947ರ ಆ.15ರಂದು ಸ್ವಾತಂತ್ರ್ಯ ಸಿಕ್ಕ ನೆನಪಿಗಾಗಿ ಪ್ರತಿ ಆ.15ಕ್ಕೆ ಧ್ವಜಾರೋಹಣ ಮಾಡಲಾಗುತ್ತದೆ. ಆದರೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಸಂವಿಧಾನ ರಚನೆಯಾಗಿರಲಿಲ್ಲ ಹಾಗೂ ರಾಷ್ಟ್ರಪತಿ ಚುನಾಯಿತರಾಗಿರಲಿಲ್ಲ. ಆ ಹಿನ್ನೆಲೆ ಸ್ವಾತಂತ್ರ್ಯ ದಿನಕ್ಕೆ ಪ್ರಧಾನಿ ಅವರೇ ಧ್ವಜಾರೋಹಣ ಮಾಡುತ್ತಾರೆ. ಹಾಗೆಯೇ 1950ರ ಜ.26ರಂದು ಸಂವಿಧಾನ ರಚನೆಯಾದ ನೆನಪಿಗಾಗಿ ನಡೆಸಲಾಗುವ ಗಣರಾಜ್ಯೋತ್ಸವಕ್ಕೆ ರಾಷ್ಟ್ರಪತಿಗಳೇ ಧ್ವಜಾರೋಹಣ ನಡೆಸುತ್ತಾರೆ.

ಸ್ವಾತಂತ್ರೋತ್ಸವದಂದು ಧ್ವಜವನ್ನು ಕೆಳಗೇ ಕಟ್ಟಿರಲಾಗುತ್ತದೆ. ಹಾಗೆಯೇ ಪ್ರಧಾನಿ ಅವರು ಅದನ್ನು ನಿಧಾನವಾಗಿ ಮೇಲಕ್ಕೇರಿಸಿ, ಧ್ವಜ ಬಿಚ್ಚುತ್ತಾರೆ. ಆದರೆ ಗಣರಾಜ್ಯೋತ್ಸವದಂದು ಧ್ವಜವನ್ನು ಮೊದಲಿಗೇ ಮೇಲೆಯೇ ಕಟ್ಟಲಾಗಿರುತ್ತದೆ. ಅದನ್ನು ರಾಷ್ಟ್ರಪತಿ ಬಿಚ್ಚುತ್ತಾರಷ್ಟೇ. ಇಲ್ಲಿ ಧ್ವಜವನ್ನು ಮೇಲೇರಿಸುವ ಪ್ರಶ್ನೆ ಇರುವುದಿಲ್ಲ. ಇಂಗ್ಲಿಷ್ನಲ್ಲಿ ಸ್ವಾತಂತ್ರೋತ್ಸವದ ಧ್ವಜಾರೋಹಣವು 'Flag Hoisting' ಎಂದು ಗುರುತಿಸಿಕೊಂಡರೆ, ಗಣರಾಜ್ಯೋತ್ಸವದ ಧ್ವಜಾರೋಹಣವು 'Flag Unfurling' ಎಂದು ಗುರುತಿಸಿಕೊಳ್ಳುತ್ತದೆ.

ಸ್ವಾತಂತ್ರೋತ್ಸವದಂದು ಧ್ವಜವನ್ನು ನವದೆಹಲಿಯ ಕೆಂಪು ಕೋಟೆಯಲ್ಲಿ ಹಾರಿಸಲಾಗುತ್ತದೆ. ಗಣರಾಜ್ಯೋತ್ಸವದಂದು ರಾಜಪಥದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಜರುಗುತ್ತದೆ.

ಈಗ ಧ್ವಜವನ್ನು ನಾವೇ ನಮ್ಮ ಮನೆಗಳಲ್ಲಿ ಹಾರಿಸುವ ಅವಕಾಶವನ್ನು ನೀಡಿದ್ದಾರೆ .


"ಹರ್ ಘರ್ ತಿರಂಗಾ" ಎಂಬ ಅಭಿಯಾನದಲ್ಲಿ

2022ಅಗಷ್ಟ 13ರಿಂದ 15ವರೆಗೆ

ಪ್ರತಿಯೊಬ್ಬರೂ ತಮ್ಮ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ  ಭಾರತದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಆಚರಿಸೋಣ

ತ್ರಿವರ್ಣದ ಕಂಪನ್ನು ಹಂಚೋಣ.

ತ್ರಿವರ್ಣ ಧ್ವಜಾರೋಹಣ ಮಾಡಲು ಪಾಲಿಸಬೇಕಾದ ನಿಯಮಗಳನ್ನು ಅನುಸರಿಸಿ ದೇಶಪ್ರೇಮ ಮೆರೆಯೋಣ ಮತ್ತು ತಾಯಿ ಭಾರತಿಗೆ ನಮಿಸೋಣ.


ನಮ್ಮ ಮನೆಯ ಮೇಲೆ  ಅಗಷ್ಟ್  13 ರ  ಶನಿವಾರ ಮುಂಜಾನೆ 7.00 ಘಂಟೆಗೆ ಧ್ವಜಾರೋಹಣ ಮಾಡಿ ಅಗಷ್ಟ 15 ಸೋಮವಾರ ಸಂಜೆ 5.00 ಘಂಟೆಗೆ ಧ್ವಜವನ್ನು ಇಳಸೋಣ.

ನಮ್ಮ ಮನೆಯ ಮೇಲಿನ ಅತೀ ಎತ್ತರದ ಜಾಗದಲ್ಲಿ ಧ್ವಜರೋಹಣ  ಮಾಡೋಣ.

ಧ್ವಜ ಸ್ಥಂಭ & ಧ್ವಜ ನೇರವಾಗಿರುವಂತೆ ನೋಡಿಕೊಳ್ಳೋಣ. ಎಡಕ್ಕೆ ಬಲಕ್ಕೆ ಹಿಂದಕ್ಕೆ ಮುಂದಕ್ಕೆ ವಾಲಿರದಂತೆ ನೋಡಿಕೊಳ್ಳೋಣ.

ತ್ರಿವರ್ಣ ಧ್ವಜಕ್ಕಿಂತ ಎತ್ತರವಾಗಿ ಹಾಗೂ ಸಮಾನವಾಗಿ ಹಾಗೂ ಧ್ವಜದ ಬಲಗಡೆ ಯಾವುದೇ ಧ್ವಜ ಇರದಂತೆ ನೋಡಿಕೊಳ್ಳೋಣ.

ಗ‍ಲೀಜಾದ ಮತ್ತು ಹರಿದ ಧ್ವಜವನ್ನು ಹಾರಿಸದಿರೋಣ .

ಧ್ವಜವನ್ನು ಆಲಂಕಾರಿಕ ವಸ್ತುವಾಗಿ ಯಾವುದೇ ಕಾರಣಕ್ಕೆ ಬಳಸದಿರೋಣ.

ತೊಡುವ ಬಟ್ಟೆಯಲ್ಲಿ ಸೊಂಟಕ್ಕಿಂತ ಕೆಳಭಾಗದಲ್ಲಿ ಧ್ವಜವಿರದಂತೆ ನೋಡಿಕೊಳ್ಳೋಣ  .ಒಂದೇ ದಾರದಲ್ಲಿ ಎರಡು ಧ್ವಜ ಹಾರಿಸದಿರೋಣ .  ಧ್ವಜವನ್ನು ನೆಲಕ್ಕೆ ತಾಕಿಸದಿರೋಣ .ಯಾವುದೇ ಕಾರಣಕ್ಕೂ ತ್ರಿವರ್ಣ ಧ್ವಜವನ್ನು ಬಂಡಲ್ ರೀತಿ ಬಳಸದಿರೋಣ   . ಶ್ವೇತ ವರ್ಣದ ಮಧ್ಯ 24 ಗೆರೆಗಳ ನೀಲಿ ಬಣ್ಣದ ಅಶೋಕ ಚಕ್ರವಿರುವ ಧ್ವಜವನ್ನೇ ಹಾರಿಸೋಣ .

ಧ್ವಜದ ಮೇಲೆ   ಯಾವುದೇ   ಬರಹ ಇರದಂತೆ ನೋಡಿಕೊಳ್ಳೋಣ . ಹಾಗೂ ಧ್ವಜವನ್ನು ಜಾಹೀರಾತಿಗೆ ಬಳಸದಿರೋಣ.

ಧ್ವಜವನ್ನು ಹಾರಿಸುವ ಕಂಬ/ಸ್ತಂಭದ ಮೇಲೆ ಜಾಹಿರಾತು ಇರದಂತೆ ನೋಡಿಕೊಳ್ಳೋಣ.

ಅಸುರಕ್ಷಿತ ಅಥವಾ ಧ್ವಜಕ್ಕೆ ಹಾನಿಯುಂಟಾಗಬಹುದಾದ ಸ್ಥಳದಲ್ಲಿ ಧ್ವಜಾರೋಹಣ ಮಾಡದಿರೋಣ. 

ತ್ರಿವರ್ಣ ಧ್ವಜಕ್ಕೆ ತನ್ನದೇ ಆದ ಗೌರವ ಘನತೆ ಇರುತ್ತದೆ. ಅಗಷ್ಟ್ 15ರಂದು ಸಂಜೆ 5.00 ಘಂಟೆಗೆ ಧ್ವಜ ಇಳಿಸಿದ ನಂತರ ಅಶೋಕ ಚಕ್ರ ಮೇಲೆ ಬರುವಂತೆ ಧ್ವಜವನ್ನು ಮಡಿಕೆ ಮಾಡಿ ಸುರಕ್ಷಿತ ಜಾಗದಲ್ಲ ಇಡೋಣ.


ನಮ್ಮ ಧ್ವಜ ನಮ್ಮ ಹೆಮ್ಮೆ. ಮನೆ ಮನೆಯಲ್ಲಿ ನಮ್ಮ ದ್ವಜ 



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು



12 August 2022

ಶಿವಮೊಗ್ಗ ಸುಬ್ಣಣ್ಣ..

 #ಶಿವಮೊಗ್ಗಸುಬ್ಬಣ್ಣ 


ಕಂಚಿನ ಕಂಟದ 

ಮ್ಯಾಗ್ಸಸ್ಸೇ ಪ್ರಶಸ್ತಿ ಪುರಸ್ಕೃತ

ಗಾಯನದ ಅಣ್ಣ |

ಗಂಧರ್ವ ಲೋಕಕ್ಕೆ

ಇಂದು  ತೆರಳಿದ್ದಾರೆ 

ಹೋಗಿ ಮತ್ತೆ ಭುವಿಗೆ ಬನ್ನಿ 

ನಮ್ಮ ಶಿವಮೊಗ್ಗ  ಸುಬ್ಬಣ್ಣ ||


#ಸಿಹಿಜೀವಿ 

ಸಿ ಜಿ ವೆಂಕಟೇಶ್ವರ

ಉಗ್ಗುವಿಕೆ ರೋಗವಲ್ಲ...


 


ಆತ್ಮಕಥೆ ೩೩ 


ಉಗ್ಗುವಿಕೆ ರೋಗವಲ್ಲ .


ಇತ್ತೀಚಿಗೆ ರಾಬರ್ಟ್ ಕನ್ನಡ ಸಿನಿಮಾ ನೋಡಿದೆ .ಅದರಲ್ಲಿನ ನಾಯಕನ ಒಂದು ಶೇಡ್ ನ ಪಾತ್ರ ಉಗ್ಗುವ ಮಾತನಾಡುವ ಪಾತ್ರ. ಅದೇ ರೀತಿಯಲ್ಲಿ ದಿನನಿತ್ಯದ ಜೀವನದಲ್ಲಿ ಹಲವಾರು ಜನ ಉಗ್ಗುತ್ತಾ ಮಾತನಾಡುವ ಜನರ ನೋಡುತ್ತೇವೆ. ಕೆಲವರು ಉಗ್ಗುವುದನ್ನು ಅಪಹಾಸ್ಯ ಮಾಡುವರಿಗೇನೂ ಕಮ್ಮಿಯಿಲ್ಲ.


ಬಾಲ್ಯದಲ್ಲಿ ನಾನೂ ಸಹ ಈ ಉಗ್ಗುವಿಕೆಯಿಂದ ಬಳಲಿದ್ದಿದೆ. ನಾನು ನಾಲ್ಕನೇ ತರಗತಿಯಲ್ಲಿ ಓದುವಾಗ ನನ್ನ ಸಹಪಾಠಿ ಶಿವಣ್ಣ ಉಗ್ಗುತ್ತಿದ್ದ .ನಾನು ಅವನ ಉಗ್ಗನ್ನು ಪ್ರತಿ ದಿನ ಅಣಕಿಸುತ್ತಾ ಕ್ರಮೇಣ ನನಗೂ ಮಾತನಾಡುವಾಗ  ಉಗ್ಗುವುದು ಸಾಮಾನ್ಯವಾಯಿತು.ಇದು ನಾನು ಪದವಿ ಓದುವ ವರೆಗೂ ಮುಂದುವರೆದು ಒಮ್ಮೆ ಚಿತ್ರದುರ್ಗದಲ್ಲಿ ಮೈಸೂರಿನ ಸ್ಪೀಚ್ ಅಂಡ್ ಇಯರಿಂಗ್ ಸಂಸ್ಥೆಯವರು ಉಚಿತ ಆರೋಗ್ಯ ಶಿಬಿರ ಏರ್ಪಡಿಸಿದ್ದರು .ಅಲ್ಲಿಗೆ ನಾನು ಹೋದಾಗ ವೈದ್ಯರು ಉತ್ತಮವಾಗಿ ಕೌನ್ಸಿಲಿಂಗ್  ಮಾಡುತ್ತಾ ,ಭಯ ಉದ್ವೇಗ ಕಡಿಮೆ ಮಾಡಿಕೊಂಡು ನಿಧಾನವಾಗಿ ಮಾತನಾಡುವ ರೂಡಿ ಮಾಡಿಕೊಳ್ಳಲು ಸಲಹೆ ನೀಡಿದರು .ಅವರ ಸಲಹೆ ಪಾಲಿಸಿದೆ. ಕ್ರಮೇಣವಾಗಿ ಉಗ್ಗು ಮಾಯವಾಗಿ ಈಗ ಸಾಮಾನ್ಯವಾಗಿ ಮಾತನಾಡುತ್ತಾ ಇಪ್ಪತ್ತೆರಡು ವರ್ಷಗಳಿಂದ ಮಕ್ಕಳಿಗೆ ಪಾಠ ಮಾಡುತ್ತಿರುವೆ.  

ತರಗತಿಯ ಕೊಠಡಿಯಲ್ಲಿ ಈ ರೀತಿಯಲ್ಲಿ ಉಗ್ಗುವ ಮಕ್ಕಳ ಅಪಹಾಸ್ಯ ಮಾಡುವ ಮಕ್ಕಳಿಗೆ ಬುದ್ದಿ ಹೇಳಿರುವೆ .ಉಗ್ಗಿನ ಸಮಸ್ಯೆ ಇರುವ ಮಕ್ಕಳಿಗೆ ಕೌನ್ಸಿಲಿಂಗ್ ಸಹ ಮಾಡುತ್ತಿರುವೆ.

ಅಷ್ಟಕ್ಕೂ ಉಗ್ಗು ಎನ್ನುವುದು ರೋಗವೇನಲ್ಲ . ಆತ್ಮವಿಶ್ವಾಸ ಮತ್ತು ಸತತ ಪ್ರಯತ್ನದಿಂದ ಉಗ್ಗು ನಿವಾರಣೆ ಖಚಿತ.  ಇದು ಕೇವಲ ಸಾಮಾನ್ಯರಿಗೆ ಮಾತ್ರ ಅಥವಾ ಇಂತವರಿಗೇ ಬರಬೇಕೆಂದೇನೂ ಇಲ್ಲ ಅದರೆ ಉಗ್ಗು ಮೆಟ್ಟಿ ನಿಂತು ನಮ್ಮ ವ್ಯಕ್ತಿತ್ವ ಕಾಣುವಂತೆ ನಾವು ಬದುಕಬೇಕು. 

ಕೇರಳದ ಮುಖ್ಯ ಮಂತ್ರಿಯಾಗಿದ್ದ ಇಎಂಎಸ್ ನಂಬೂದಿರಿಪಾದ್  ಅವರೂ  ಉಗ್ಗುತ್ತಿದ್ದರು.  ಅವರಿಗೆ ಪತ್ರಕರ್ತರು, 'ನೀವು ಯಾವತ್ತೂ ಉಗ್ಗುತ್ತೀರಾ?' ಎಂದು ಕೇಳಿದ್ದಕ್ಕೆ, 'ಇಲ್ಲ ಇಲ್ಲ. ನಾನು ಮಾತಾಡುವಾಗ ಮಾತ್ರ ಉಗ್ಗುತ್ತೇನೆ' ಎಂದು ಹೇಳಿದ್ದು ನೆನಪಾಗುತ್ತಿದೆ. ನಿಮಗೆ ಗೊತ್ತಿರಲಿ, ನಂಬೂದಿರಿಪಾದ್  ಅವರಿಗೂ ಈ ಸಮಸ್ಯೆ ಇತ್ತು. ಆದರೆ ಅವರು ಎರಡು ಬಾರಿ ಕೇರಳದ ಮುಖ್ಯಮಂತ್ರಿಯಾದರು. ನಮ್ಮ ದೇಶದ ಪ್ರಮುಖ ಕಮ್ಯುನಿಸ್ಟ್ ನಾಯಕ ಎಂದು ಕರೆಯಿಸಿಕೊಂಡರು. ಅವರಿಗೆ ತಮ್ಮ ಉಗ್ಗುವಿಕೆ ಒಂದು ಸಮಸ್ಯೆ ಎಂದು ಅನಿಸಲೇ ಇಲ್ಲ. 

''ನಾನು ಉಗ್ಗುವುವಾಗ ನಿಮಗೆ ತಮಾಷೆ ಎನಿಸುತ್ತದೆ, ಆದರೆ ನನಗೆ ಇನ್ನೂ ತಮಾಷೆಯೆನಿಸುತ್ತದೆ, ಯಾಕೆಂದರೆ ನಾನು ಹೇಳುವುದನ್ನೆಲ್ಲಾ ನೀವು ಗಮನವಿಟ್ಟು ಕೇಳುತ್ತೀರಿ' ಎಂದು ಹೇಳುತ್ತಿದ್ದರು. "ನಾನು ಏನು ಹೇಳುತ್ತೇನೆ ಎಂಬುದನ್ನು ಕೇಳಿ, ನಾನು ಹೇಗೆ ಹೇಳುತ್ತೇನೆ ಎಂಬುದನ್ನಲ್ಲ' ಎಂದು ನಂಬೂದರಿಪಾದ್ ರವರು ಪತ್ರಕರ್ತರಿಗೆ ತಿರುಗೇಟು ನೀಡುತ್ತಿದ್ದರು. 


ನಿಮ್ಮಲ್ಲಿ ಉಗ್ಗುವಿಕೆ ಇದೆ ಎಂಬುದರ ಬಗ್ಗೆ ಹೆಚ್ಚು ಗಮನಕೊಟ್ಟರೆ, ಅದು ಒಂದು ಸಮಸ್ಯೆ ಎನಿಸಬಹುದು. ಆದರೆ ನಾನು ನಿಧಾನವಾಗಿ ಮಾತಾಡುತ್ತೇನೆ ಎಂದು ಅಂದುಕೊಂಡು ಮಾತಾಡಿ, ನಿಮ್ಮ ಸಮಸ್ಯೆ ಅರ್ಧ ಕಮ್ಮಿಯಾಗಿರುತ್ತದೆ.

ಖ್ಯಾತ 'ರಾಕ್ ಅಂಡ್ ರೋಲ್ '  ಹಾಡುಗಾರ ಎಲ್ವಿಸ್ ಪ್ರೆಸ್ಲಿ  ಒಂದು ಕಾಲಕ್ಕೆ ಉಗ್ಗುತ್ತಿದ್ದರು. ಖ್ಯಾತ ಹಾಲಿವುಡ್ ನಟ ಮರ್ಲಿನ್  ಮನ್ರೊಗೂ  ಈ ಸಮಸ್ಯೆಯಿತ್ತು. ಬ್ರಿಟನ್ನ ಜನಪ್ರಿಯ ಪ್ರಧಾನಿ ವಿನ್ ಸ್ಟನ್ ಚರ್ಚಿಲ್ ಕೂಡ ಉಗ್ಗುತ್ತಿದ್ದರು. ಹಾಗೆ ಅಮೆರಿಕದ ಹಾಲಿ ಅಧ್ಯಕ್ಷ ಜೋ ಬಿಡೆನ್ ಅವರಿಗೂ ಉಗ್ಗುವ ಸಮಸ್ಯೆಯಿದೆ. ಇದನ್ನು ಹೊಂದಿಯೂ ಅವರು ಆ ಸ್ಥಾನಕ್ಕೇರಲಿಲ್ಲವೇ? "ಕೆಲವರು ನಡೆಯುವಾಗ ಮುಗ್ಗರಿಸುತ್ತಾರೆ. ಆದರೆ ನಾನು ಮಾತಾಡುವಾಗ' ಎಂದು ನಟಿ ಬ್ರೂಸ್ ವಿಲ್ಲಿಸ್ ಹೇಳಿದ್ದು ಗೊತ್ತಿಲ್ಲವೇ? 'ನಾನು ಉಗ್ಗುತ್ತಿದ್ದೆ. ಆದರೆ ಹಾಡಲಾರಂಭಿಸಿದಾಗ ಉಗ್ಗುತ್ತಿರಲಿಲ್ಲ. ನಂತರ ನಾನು ಹಾಡುವುದನ್ನೇ ನನ್ನ ಕಾಯಕ ಮಾಡಿಕೊಂಡೆ' ಎಂದು ಮಾರ್ಕ್ ಅಂಥೋನಿ ಹೇಳಿದ್ದನ್ನು ನೆನಪಿಸಿಕೊಳ್ಳಿ.  

ಉಗ್ಗುವುದನ್ನು ಯಾರು ಬೇಕಾದರೂ ಹಂತ ಹಂತವಾಗಿ ಕಮ್ಮಿ ಮಾಡಿಕೊಳ್ಳಬಹುದು. ಮೊದಲು ನೀವು ಮಾಡಬೇಕಾದುದೆಂದರೆ  ಉಗ್ಗುವುವಿಕೆ ಮಹಾನ್ ದೋಷ ಮತ್ತು ಅದರಿಂದ ಆತ್ಮವಿಶ್ವಾಸಕ್ಕೆ ಧಕ್ಕೆಯಾಗುತ್ತಿದೆ ಎಂಬುದನ್ನು  ಮೊದಲು ನಿಮ್ಮ ಮನಸಿನಿಂದ ತೆಗೆದು ಹಾಕಿ.ಇದರ ಜೊತೆಗೆ 

ಸಾಮಾನ್ಯ ಮಾತನಾಡುವವರು ಉಗ್ಗುವವರ ಬಗ್ಗೆ ಕೀಳಾಗಿ ಕಾಣುವುದು,  ಅಪಹಾಸ್ಯ ಮಾಡುವುದನ್ನು ನಿಲ್ಲಿಸೋಣ .



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

11 August 2022

ಅರುಣೋದಯ


 ಅರುಣೋದಯ


ಅರುಣೋದಯ



ಕತ್ತಲಲಿ ಬಳಲಿ

ತೊಳಲಾಡುತ್ತಿದ್ದೆ

ಒಬ್ಬಂಟಿಯಾದ ನನ್ನ

ಕಾಡುತ್ತಿತ್ತು ಭಯ |

ನೀ ಬಂದೆ ನನ್ನ

ಬಾಳಲ್ಲಿ ಅಂದಿನಿಂದ 

ಅರುಣೋದಯ ||


#ಸಿಹಿಜೀವಿ

09 August 2022

ಬಂದು ಬಿಡು ಅಮ್ಮ.....

 ನಾನು  ಚಿಕ್ಕವನಿದ್ದಾಗ ಹೆದರಿಸುತ್ತಿದ್ದೆ

ಅಗೋ ಬಂತು ನೋಡು ಗುಮ್ಮ |

ದೊಡ್ಡವನಾಗಿರುವೆ.... ಈಗಲೂ 

ಭಯವಾಗುತ್ತಿದೆ ನನ್ನೇಕೆ ಬಿಟ್ಟುಹೋದೆ

ಬೇಗ ಬಂದು ಬಿಡು ಅಮ್ಮಾ ||


ಸಿಹಿಜೀವಿ 

ನಮ್ಮ ಧ್ವಜ ...


 #ನಮ್ಮ_ರಾಷ್ಟ್ರಧ್ವಜ 


ಧ್ವಜವೆಂದರೆ ಬಟ್ಟೆಯಲ್ಲ

ಮಹಾನ್ ಅಸ್ಮಿತೆ ,ಅದು

ಹೊಂದಿದೆ ಕೇಸರಿ ಬಿಳಿ ಹಸಿರು |

ಮನೆ ಮನೆಯಲೂ ಹಾರಾಡಿಸಿ

ತೋರಿಸುವೆವು  ಧ್ವಜವು ಭಾರತೀಯರ ಉಸಿರು ||


#ಸಿಹಿಜೀವಿ 


07 August 2022

ಅಂದನಾ ತಿಂಮ..


ವಿಮರ್ಶೆ ೫೦

ಅಂದನಾ ತಿಂಮ

ಬೀಚಿ ಪ್ರಕಾಶನದಿಂದ ಹೊರಬಂದಿರುವ ಅಂದನಾ ತಿಂಮ ಪುಸ್ತಕ ಬೀಚಿಯರೇ ಹೇಳುವಂತೆ ಇದು ಅವರ ಐವತ್ತೊಂದನೇ ಅಪರಾಧ .ಈ ಪುಸ್ತಕ ಓದಿದ ಅಪರಾಧಕ್ಕೆ ನನಗೆ ನಿಜವಾಗಿಯೂ ಬಹಳ ಸಂತಸದ ಶಿಕ್ಷೆ ಲಭಿಸಿತು ಎಂದು ಹೇಳಲು ಸಂತಸವಾಗುತ್ತದೆ .
ಪುಸ್ತಕ ವಿಮರ್ಶಾ ಕಾರ್ಯದಲ್ಲಿ ಇದು ನನಗೆ ಸುವರ್ಣ ಸಂಭ್ರಮ ನಾನು ಓದಿ ನನ್ನ ಅನಿಸಿಕೆ ಬರೆವ ಕಾರ್ಯದಲ್ಲಿ ಇದು ಐವತ್ತನೇ ಪುಸ್ತಕ! ನೂರಾರು ಪುಸ್ತಕ ಓದಿದ್ದರೂ ಕೆಲವೇ ಪುಸ್ತಕಗಳ ಬಗ್ಗೆ ಅನಿಸಿಕೆ ಬರೆಯುವ ಮನಸಾಗಿ ಅದು ಐವತ್ತು ತಲುಪಿದೆ. ಬೀಚಿಯವರ ಪುಸ್ತಕಕ್ಕೆ ವಿಮರ್ಶೆ ಬರೆಯಲು ಎಂಟೆದೆ ಬೇಕು .ನಾನು ಕೇವಲ ಅವರ ಪುಸ್ತಕದ ಬಗ್ಗೆ ನಾಲ್ಕು ಅಭಿಪ್ರಾಯ ಹೇಳಬಹುದು.
ಅಂದನಾ ತಿಂಮ  ಮುಕ್ತಕ, ಹನಿಗವನ, ಕವನ ಮುಂತಾದ ಪ್ರಕಾರಗಳ ಪುಸ್ತಕ .ಎಂದಿನಂತೆ ತಮ್ಮ ಮೊನಚು ವಿಡಂಬನಾತ್ಮಕ ಬರಹ ನಮ್ಮನ್ನು ಸೆಳೆಯುತ್ತದೆ.
ಬೀಚಿಯವರೇ ಹೇಳಿರುವಂತೆ ಕೃತಿ ರಚನೆ ಬರೆಯುವವರು  ತಮ್ಮ ಆತ್ಮ ತೃಪ್ತಿಗಾಗಿ ಮಾಡುವ ಕಾಯಕ ಓದುಗರ ಪ್ರಶಂಸೆ ಮತ್ತು ವಿಮರ್ಶೆ ನಂತರದ ಪ್ರಕ್ರಿಯೆ.
ಸಮಾಜದ ಹಲವಾರು ಮುಖಗಳನ್ನು, ಅರ್ಥಾತ್ ನನ್ನ ಮನದ ಏರಿಳಿತಗಳನ್ನು ಈ ಕೃತಿಯಲ್ಲಿ ಪ್ರತಿಬಿಂಬಿಸಲು ಪ್ರಯತ್ನ ಮಾಡಿದ್ದೇನೆ. ಆದರೆ, ಸಾಧಿಸಿದ್ದೆಷ್ಟು ? ಇದಕ್ಕೆ ಉತ್ತರ, ಕನ್ನಡ ರಸಿಕ ಓದುಗರಲ್ಲಿದೆ. ಈ ಎಲ್ಲವೂ ಮೇರು ಪರ್ವತದಂತಹ ಮಹಾಕೃತಿಗಳೊ ? ಆಚಂದ್ರಾರ್ಕವಾಗಿ ಸದಾ ಇವು ಉಳಿಯುತ್ತವೆಯೇ ? ಅಥವಾ ಇವೆಲ್ಲವೂ ಒಂದು ದೊಡ್ಡ ಕಸದ ಬುಟ್ಟಿಗೆ ಅನ್ನವಾಗುತ್ತವೆಯೇ ? ಈ ಪ್ರಶ್ನೆಗಳಿಗೆ ಉತ್ತರವನ್ನು ಹೇಳುವ ಅಧಿಕಾರ ಯಾರಾದರೊಬ್ಬ ವ್ಯಕ್ತಿಗೆ ಇಲ್ಲ ಎಂಬುದಾದರೆ ಆ ವ್ಯಕ್ತಿ ನಾನು. ನನ್ನ ಕೃತಿಯ ಬೆಲೆಯನ್ನು ನಾನೇ ಕಟ್ಟಲೇ ? ಕಾಲರಾಯ ತನ್ನ ಜರಡಿಯನ್ನು ಸದಾ ಆಡಿಸುತ್ತಲೇ ಇರುತ್ತಾನೆ, ಹುಟ್ಟಿದುದೆಲ್ಲವೂ ಅದರಲ್ಲಿ ಬೀಳಲೇಬೇಕು ಇದು ಪ್ರಕೃತಿಯ ನಿಯಮ.  ಹಾರಿಹೋದುದು ಜೊಳ್ಳು, ಉಳಿದುದು ಕಾಳು. ಇಂದು ಜೊಳ್ಳಾಗಿ ಕಂಡುದುದು ನಾಳೆ ಕಾಳಾದೀತು, ಇಂದು ಕಾಳಾಗಿ ಕಂಡುದುದು ನಾಳೆ ಜೊಳ್ಳಾದೀತು. ಮೌಲ್ಯವನ್ನು ಮುಂದಿನ ಪೀಳಿಗೆ ನಿರ್ಧರಿಸುತ್ತದೆ. ಆ ತಲೆನೋವು ನನಗೇಕೆ ?
“ನಿಮ್ಮ ಇಷ್ಟು ಕೃತಿಗಳಲ್ಲಿ ಅತ್ಯುತ್ತಮ ಕೃತಿ  ಯಾವುದು ?” ಎಂದೊಬ್ಬ ನನ್ನ ಕಿರಿಯ ಮಿತ್ರರು ಹೇಳಿದರು. ಇದುವರೆಗೂ ಆಗಿರುವ ಕೃತಿಗಳಲ್ಲಿ ಒಂದೂ ಅಲ್ಲ, ಆ ಅತ್ಯುತ್ತಮ ಕೃತಿ ಇನ್ನು ಮೇಲಾಗಬೇಕು ಎಂಬುದಷ್ಟೇ ನನ್ನ ಉತ್ತರ. ಈ ಜೀವಮಾನದಲ್ಲಿ ಅದು ಆಗಬಹುದು. ಆಗದೆಯೂ ಇರಬಹುದು. ಆಗದಿದ್ದಲ್ಲಿ ನನಗೆ ದುಃಖವೂ ಇಲ್ಲ. ಬೇರಿನ್ನಾರಾದರೂ ಮಾಡಿ ಯಾರು ಎಂಬ ಆಶೆ ಇದೆ, ನಾನಿದುವರೆಗೂ ಮಾಡಿರುವ ಕೆಲಸದಿಂದ ನನಗೆ ಸಂಪೂರ್ಣ ತೃಪ್ತಿ ಆಗಿದೆ, ಇನ್ನು ನಾನು ಮಾಡುವುದೇನೂ ಉಳಿದಿಲ್ಲ ಎಂದು ಕಾಲು ಚಾಚಿ ಕುಳಿತವನು ಇನ್ನು ಬದುಕಿರುವ ಅವಶ್ಯಕತೆಯಾದರೂ ಏನಿದೆ ? ಆಗಬೇಕಾದ ಕೆಲಸ ಇದೆ ಎಂಬುದಕ್ಕೆ ನಾನಿನ್ನೂ ಬದುಕಿರುವುದೇ ಸಾಕ್ಷಿ. ಕೈಲಿರುವ ಪೇನಾ ಕೆಳಕ್ಕೆ ಬಿದ್ದ ನಂತರ ಸಾಹಿತಿ ಸಾಯಬಾರದು, ಅವನು ಸತ್ತ ನಂತರ ಅವನ ಕೈಲಿರುವ ಪೇನಾ ಕೆಳಕ್ಕೆ ಬೀಳಬೇಕು." ಎಂಬ ಮಾತುಗಳು ಯುವ ಬರಹಗಾರರಿಗೆ ಪಾಠದಂತಿವೆ.

ಈ ಪುಸ್ತಕದಲ್ಲಿ ಮುದ್ರಿತವಾಗಿರುವ ನನ್ನ ಕಾಡಿದ  ಕೆಲ ಸಾಲುಗಳ ಬಗ್ಗೆ ಗಮನಹರಿಸುವುದಾದರೆ
“ಬದುಕಲಿಕೆ ತಿನಬೇಕು, ತಿನ್ನಲು ಬದುಕಲ್ಲ”
"ಗುರಿ ಬೇಕು ಬಾಳಿಂಗೆ, ಗುರಿ ಹಿರಿದು ಬೇಕು”
ಎಂಬುದಾಗಿ ಎಚ್ಚರಿಕೆ ಕೊಡುತ್ತಾ, ಆತ್ಮಮೆಚ್ಚುವಂತೆ ಜೀವನ
ನಡೆಸಬೇಕೆನ್ನುತ್ತಾರೆ ಬೀಚಿಯವರು .

“ದೊಡ್ಡ ಜೇಬಿದೆ ಇವಗೆ, ಹೃದಯ ಬಹು ಚಿಕ್ಕದು; ದೊಡ್ಡ ಹೃದಯದವಗೆ ಚಿಕ್ಕ ಜೇಬು"
ಎಷ್ಟು ಅರ್ಥಗರ್ಭಿತವಾಗಿದೆ ಅಲ್ಲವೆ?
“ಎಲೆ, ಎಲೆ ಹೋಗಲಿ, ಬೇರು ಒಣಗಿಸಬೇಡ
ಬಾಳವೃಕ್ಷದ ಬೇರು ನಂಬಿಕೆಯೊ ತಿಂಮ”
ದೇವರಲ್ಲಿ ನಂಬಿಕೆ, ತಂದೆ-ತಾಯಿಗಳಲ್ಲಿ ನಂಬಿಕೆ, ಮಡದಿ ಮಕ್ಕಳಲ್ಲಿ
ನಂಬಿಕೆ, ತನ್ನಲ್ಲೇ ತನಗೆ ನಂಬಿಕೆ-ಜೀವನದ ಭಾಗ್ಯವೆಲ್ಲ ನಂಬಿಕೆಯ ಆಧಾರದ ಮೇಲಿದೆ. 'ನಂಬಿ ಕೆಟ್ಟವರಿಲ್ಲವೊ' ಎಂಬುದು ದಾಸರು ಕೊಟ್ಟ ಅಭಯ!
ಕಾಲಪ್ರವಾಹದಲ್ಲಿ ರಾಜ್ಯ-ಸಾಮ್ರಾಜ್ಯಗಳೂ, ಮತ ಮಠಗಳೂ, ಭಾಷಾ ಸಾಹಿತ್ಯಗಳೂ, ಕಲಾ-ವೃತ್ತಿಗಳೂ ಕೊಚ್ಚಿಕೊಂಡು ಹೋದವು, ನಾಗರಿಕತೆ ಗಳೆಷ್ಟೋ ಮಣ್ಣುಗೂಡಿದವು. “ಮಾನವತೆ ನಿಂತಿಹದು” ಅಂದನಲ್ಲದೆ
'ಮಂಕುತಿಮ್ಮ' ! ತಿಂಮನೂ ಸಹ “ದೈವಕಿಂತಲು ದೊಡ್ಡದಿನ್ನೊಂದು ಇದೆ ಎನಗೆ ಮಾನವತೆಯೇ ದಾರಿ, ನಡೆಯೋ”
ಎಂದು ಬೆನ್ನು ತಟ್ಟುತ್ತಾನೆ.
ಅನ್ನುವಾಗ ಬೀchiಯವರು ನಮ್ಮ ದೃಷ್ಟಿಗೊಂದು ಹೊಸ ತಿರುವನ್ನೇ
ಕೊಡುತ್ತಾರೆ.
“ಮಕ್ಕಳೊಂದಿಗೆ ಆಟ ಅದು ಸ್ವರ್ಗ ತಿಂದು ಮಕ್ಕಳೇ ದೇವರು | ಹೌದೇನೋ ತಿಂಮ?”
ಬಾಳ ಸಾರ್ಥಕತೆಗೆ ಹೊಸ ದಾರಿ ತೋರಿಸುತ್ತಾರೆ. ಜೀವನ ನಮಗೆ ಸಹ್ಯವಾಗಬೇಕಾದರೆ ಏನು ಮಾಡಬೇಕೆಂಬುದನ್ನು ಬೀchi ಯವರು
“ಎಲ್ಲರೂ ನಗಬೇಕು, ನಗು ಜೀವದುಸಿರು,
ಬಲ್ಲವರ ಹಾಸ್ಯ ರಸಕವಳದೂಟ” ಎಂದು ಹೇಳಿ ನಗು ನಗುತಾ ಬಾಳಬೇಕು ಎಂದು ಕರೆನೀಡಿದ್ದಾರೆ.

ಒಟ್ಟಾರೆ ಬೀಚಿಯವರ ಈ ಪುಸ್ತಕ ಓದುತ್ತಿದ್ದಾಗ ಕಾವ್ಯ ಓದುತ್ತಲೇ ಜೀವನದ ಸತ್ಯಗಳ ಬಗ್ಗೆ ಪ್ರವಚನ ಕೇಳಿದ ಅನುಭವವನ್ನು ಪಡೆದೆ .ನೀವು ಇಂತಹ ಅನುಭವ ಪಡೆಯಬೇಕಾದರೆ  ಒಮ್ಮೆ ತಿಂಮ ಏನಂದ ಎಂದು ಓದಲೇಬೇಕು.

ಪುಸ್ತಕದ ಹೆಸರು: ಅಂದನಾ ತಿಂಮ
ಲೇಖಕರು: ಬೀಚಿ
ಪ್ರಕಾಶನ: ಬೀಚಿ ಪ್ರಕಾಶನ
ಬೆಲೆ: 125₹

ಸಿಹಿಜೀವಿ
ಸಿ ಜಿ ವೆಂಕಟೇಶ್ವರ

 

06 August 2022

ಹಂಪಿ ವಿಜಯನಗರ ...


 


ವಿಮರ್ಶೆ ೪೯


ಹಂಪಿ ವಿಜಯನಗರ  


ಹಂಪಿ ವಿಜಯನಗರ ಒಂದು ಸಂಗ್ರಹಯೋಗ್ಯ ಕೃತಿಯಾಗಿದೆ. ಇದರಲ್ಲಿ ಬರುವ  ಹತ್ತೊಂಬತ್ತು ಬರಹಗಳಲ್ಲಿ  ಒಂದೊಂದು ಬರಹವೂ ವಿಜಯನಗರ ಇತಿಹಾಸ ಸಂಶೋಧನೆಯ ಒಂದೊಂದು ಸವಾಲುಗಳನ್ನು ಪ್ರತಿನಿಧಿಸುವಂತಹದು. ಪ್ರೊ. ಲಕ್ಷಣ್ ತೆಲಗಾವಿ ಯವರು ಪ್ರತಿಯೊಂದು ಬರಹಕ್ಕೂ ಆಯ್ಕೆಮಾಡಿಕೊಂಡಿರುವ ವಿಷಯ, ಸಂಗ್ರಹಿಸಿರುವ ವಿಪುಲ ಅಕರಸಾಮಗ್ರಿ   ವಿಷಯದ ಒಳಹೊಕ್ಕು ನೋಡಿರುವ ಪರಿ ಇವೆಲ್ಲವೂ ನಮಗೆ  ಬೆರಗನ್ನುಂಟುಮಾಡುತ್ತವೆ . ಈ ಸಂಕಲನದಲ್ಲಿರುವ ಬಹುತೇಕ ಬರಹಗಳು ಸಂಶೋಧನಾತ್ಮಕ ವಾಗಿದ್ದು, ಪ್ರಥಮಬಾರಿಗೆ ಹಲವಾರು ಹೊಸ ವಿಷಯಗಳನ್ನು ಪ್ರಕಟಪಡಿಸುವಲ್ಲಿ ಯಶಸ್ವಿಯಾಗಿವೆ. ವಿದ್ಯಾರ್ಥಿಗಳಿಗೆ, ಅಧ್ಯಯನಶೀಲರಿಗೆ ಮಾತ್ರವಲ್ಲ, ವಿದ್ವಾಂಸರಿಗೂ ಸಂಶೋಧಕ ರಿಗೂ ಈ ಬರಹ ಸಂಗ್ರಹ ಹೆಚ್ಚಿನ ಪ್ರಯೋಜನವುಳ್ಳ ಪುಸ್ತಕ. ಹಲವಾರು ವರ್ಷಗಳಿಂದ  ಪರಿಶ್ರಮವಹಿಸಿ ಸಿದ್ಧಪಡಿಸಲಾಗಿರುವ ಇಲ್ಲಿಯ ಬರಹಗಳು  ಹಿರಿಯ ಸಂಶೋಧಕ ಪ್ರೊ. ಲಕ್ಷ್ಮಣ್ ತೆಲಗಾವಿಯವರ ವಿದ್ವತ್ತಿಗೆ  ಹಿಡಿದಿರುವ ಕನ್ನಡಿಯಂತಿವೆ. ಹಂಪಿ ಸ್ಮಾರಕಗಳು ಪ್ರೇರಣೆಯ ಪ್ರತೀಕಗಳಾಗಿದ್ದರೆ, ತೆಲಗಾವಿಯವರ ಇಂತಹ ಬರಹಗಳು ಸ್ಫೂರ್ತಿಯ ಸೆಲೆಗಳಾಗಿವೆ. 

 ಈ ಪುಸ್ತಕದಲ್ಲಿ ನನ್ನ ಗಮನವನ್ನು ಗಾಢವಾಗಿ ಸೆಳೆದ ಬರಹವೆಂದರೆ 'ಒಂದನೇ ಬುಕ್ಕನ ನಾಣ್ಯದ ಮರುಪರಿಶೀಲನೆಯ ನೆಲೆಯಲ್ಲಿ ಆತನ ಶಿಲ್ಪದ ಶೋಧ' ಎಂಬುದು. ಸಂಶೋಧನ ಬರವಣಿಗೆಗೆ ಇದೊಂದು ಅತ್ಯುತ್ತಮ ಉದಾಹರಣೆ. ಪ್ರೊ. ತೆಲಗಾವಿಯವರ ಆಳವಾದ ಅಧ್ಯಯನವನ್ನು ಸಮರ್ಥಿಸುವ ಬರಹವಿದು. ವಿಷಯವನ್ನು ಬೆಳೆಸುವುದು, ವಿವಿಧ ಆಯಾಮಗಳ ಮೂಲಕ ಅದನ್ನು ವಿಶ್ಲೇಷಿಸುವುದು, ತಾರ್ಕಿಕವಾಗಿ ಅಂತ್ಯಗೊಳಿಸುವುದು ಈ ಸಾಧ್ಯತೆಗಳನ್ನು ಅವರು ಇಲ್ಲಿ ಬಹು ಸಮರ್ಪಕವಾಗಿ ತೋರಿಸಿಕೊಟ್ಟಿದ್ದಾರೆ. ಕೆಲವು ನಾಣ್ಯಶಾಸ್ತ್ರಜ್ಞರು ಕೈಗೊಂಡ ಅವಸರದ ಅಥವಾ ಉದ್ದೇಶಪೂರ್ವಕ ಅಧ್ಯಯನದ ಕಾರಣವಾಗಿ ಒಂದನೇ ಬುಕ್ಕನ ನಾಣ್ಯವನ್ನು ತಪ್ಪಾಗಿ ಗುರುತಿಸಿ ಪ್ರಚಾರಕ್ಕೆ ತಂದುದನ್ನು ಪ್ರೊ. ತೆಲಗಾವಿಯವರು ಸಾಧಾರವಾಗಿ ಖಂಡಿಸಿದ್ದಾರೆ.ಅವರ ನಿಲುವು ನಿರ್ಣಯಗಳನ್ನು ಪ್ರಶ್ನಿಸಿದ್ದಾರೆ. ಅವರ ಸಂಶೋಧನೆಯ ಫಲವಾಗಿ ಚಿತ್ರದುರ್ಗ ಬೆಟ್ಟದಲ್ಲಿ ಒಂದನೇ ಬುಕ್ಕನ ಸಮಪ್ರಮಾಣದ ಕುಳಿತಿರುವ ಭಂಗಿಯ ಶಿಲ್ಪ ಬೆಳಕಿಗೆ ಬಂದುದನ್ನು ಕರ್ನಾಟಕದ ವಿದ್ವಾಂಸರು ಗಮನಿಸಬೇಕು.


ಕನ್ನಡದ ಬಖೈರುಸಾಹಿತ್ಯ ಕುರಿತು ಆಳವಾಗಿ ಅಧ್ಯಯನ ಮಾಡಿದವರಲ್ಲಿ ಪ್ರೊ. ತೆಲಗಾವಿಯವರೂ ಒಬ್ಬರು. ಈ ಸಂಕಲನದಲ್ಲಿ ಸೇರಿರುವ 'ರಾಮರಾಜನ ಬಖೈರು: ಪುನರಾವಲೋಕನ' ಎಂಬ ಬರಹವು ಅವರ ಆಳವಾದ ಚಿಂತನೆಯನ್ನು ದೃಢಪಡಿಸುತ್ತದೆ. ಈ ಬಖೈರ್ನ ಅಧ್ಯಯನಮಾರ್ಗವನ್ನು ಪರಿಶೀಲಿಸುವುದರೊಡನೆ, ಈ ಬಖೈರ್ನ ಹುಟ್ಟಿನ ಜತೆಯಲ್ಲಿ ಕಾಣಿಸಿಕೊಂಡ ಇತರ ಪರ್ಶಿಯನ್ಗ್ರಂಥಗಳ ತುಲನೆಯನ್ನೂ ಅವರು ಇಲ್ಲಿ ಮಾಡಿದ್ದಾರೆ. ಈ ಎರಡೂ ಸಂಪ್ರದಾಯಗಳ ಪಠ್ಯಗಳಲ್ಲಿಯ ವ್ಯತ್ಯಾಸಗಳನ್ನು ಸ್ಥೂಲವಾಗಿ ಯಾದರೂ ಪ್ರಸ್ತಾಪಿಸಿದ್ದಾರೆ. ಇದರೊಡನೆ, ಈ ಬಖೈರ್ನ ಉಪಯುಕ್ತತೆ, ವಿಶೇಷಗಳು ಹಾಗೂ ಇತಿಮಿತಿಗಳನ್ನು ಕುರಿತು ಸೂಕ್ಷ್ಮವಾಗಿ ವಿವರಿಸಿದ್ದಾರೆ.


ಪ್ರೊ. ತೆಲಗಾವಿಯವರು ಶ್ರೀಕೃಷ್ಣದೇವರಾಯನ ಆಡಳಿತಾವಧಿಯಲ್ಲಿದ್ದ ವಿಜಯನಗರ ಸೇನೆಯ ವಿವರವಂತೂ ತೀರಾ ರೋಚಕವಾದುದು, ವಿವಿಧ ಮೂಲಗಳಿಂದ ಸಂಗ್ರಹಿಸಲಾದ ಸೇನಾಸಂಖ್ಯೆ ಇತ್ಯಾದಿ ಮಾಹಿತಿ ಕುತೂಹಲ ಕಾರಿಯಾಗಿದೆ. ಈಗಾಗಲೇ ಈ ಸಂಬಂಧದಲ್ಲಿ ವಿದೇಶಿ ಪ್ರವಾಸಿಗರ ಬರಹಗಳನ್ನಾಧರಿಸಿ ಸ್ವಲ್ಪಮಟ್ಟಿಗೆ ಇತರ ಇತಿಹಾಸಕಾರರು ಬರೆದಿದ್ದರೂ ಅವುಗಳ ಪುನರಾವಲೋಕನ ದೊಡನೆ ಪ್ರೊ. ತೆಲಗಾವಿಯವರು ಕೆಲವು ನೂತನಾಂಶಗಳನ್ನು ಪ್ರಸ್ತಾಪಿಸಿದ್ದಾರೆ.


ಈಗಾಗಲೇ ಕೆಲವಾರು ವಿಜಯನಗರ ಶಾಸನಗಳ   ಪತ್ತೆಹಚ್ಚಿ ಬೆಳಕಿಗೆ ತರುವುದರೊಡನೆ, ಅವುಗಳ ಅಳವಾದ ಅಧ್ಯಯನ ಕೈಗೊಂಡ ಪ್ರೊ, ತೆಲಗಾವಿಯವರು, ಒಂದನೆಯ ಬುಕ್ಕ ಹಾಗೂ ಅವನ ಅಧೀನದ ರಾಜಪ್ರತಿನಿಧಿಗಳ ಶಾಸನಗಳನ್ನು ಮರು ಅಧ್ಯಯನಕ್ಕೊಳಪಡಿಸಿದ್ದಾರೆ. ಈ ಸಂಕಲನದಲ್ಲಿ ಸೇರಿರುವ 'ದೊಡ್ಡೇರಿ ,ಹರ್ತಿಕೋಟೆ ಶ್ರೀರೇವಣ ಸಿದ್ಧೇಶ್ವರಮಠದ ಸಂಗ್ರಹದಲ್ಲಿರುವ ಒಂದನೇ ಬುಕ್ಕ ಮತ್ತು ರಾಮರಾಯರಿಗೆ ಸಂಬಂಧಿಸಿದ ತಾಮ್ರಪಟಗಳ ನಕಲು ಪ್ರತಿಗಳು ಬರಹವು ಅವರ ಪಾಲಿಗೆ ಸವಾಲಿನದಾಗಿದ್ದು, ಈಗ ಕಾಗದದ ಮೇಲೆ ಉಳಿದುಕೊಂಡಿರುವ ಮೂಲಶಾಸನಪಾಠಗಳನ್ನು ಸಂಶೋಧನಾತ್ಮಕವಾಗಿ ಅಧಿಕೃತಗೊಳಿಸುವ ಕಾರ್ಯದಲ್ಲಿ ಅವರು ಹೆಜ್ಜೆಯಿರಿಸಿದ್ದಾರೆ. ಈ ದಾಖಲೆಗಳನ್ನು ಪರಿಶೀಲನೆ ಗೊಳಪಡಿಸಿ ಅವುಗಳಿಂದ ಕೆಲವು ವಾಸ್ತವಾಂಶಗಳನ್ನು ಸಂಗ್ರಹಿಸಿಕೊಟ್ಟಿದ್ದಾರೆ.


ವಿಜಯನಗರ ಇತಿಹಾಸದ ಸಮಗ್ರತೆ ಕುರಿತು ಎಷ್ಟು ಹೇಳಿದರೂ ಕಡಿಮೆಯೇ, ಕರ್ನಾಟಕದಲ್ಲಿ ಈ ಇತಿಹಾಸದ ಬಗೆಗೆ ನಡೆದಿರುವ ಸಂಶೋಧನೆಗಳಿಗೆ ಹೊರಬಿದ್ದಿರುವ ಪ್ರಕಟಣೆಗಳಿಗೆ ಲೆಕ್ಕವೇ ಇಲ್ಲ. ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಈ ಇತಿಹಾಸ ಅಧ್ಯಯನದಲ್ಲಿ ತೊಡಗಿಸಿ ಕೊಂಡಿರುವ ವಿದ್ವಾಂಸರ ಸಂಖ್ಯೆಯೂ ಬಹು ದೊಡ್ಡದು ಆದರೂ ಹಂಪಿ ಸ್ಮಾರಕಗಳು ಹಾಗೂ ವಿಜಯನಗರ ಸಾಮ್ರಾಟರ ಇತಿಹಾಸ- ಇವುಗಳ ಅಧ್ಯಯನ  ಪೂರ್ಣಗೊಂಡಿಲ್ಲ. ತೋಡಿದಷ್ಟೂ ದೂರೆಯುವ  ಆಕರಸಂಪತ್ತಾಗಲಿ, ಬರೆದು ಮತ್ತೆ ಮತ್ತೆ ಎದುರಾಗುವ  ಚರ್ಚಾಸ್ಪದ ಸಂಗತಿಗಳಾಗಿ ನಮ್ಮ ಮುಂದೆ ನಿಲ್ಲುತ್ತವೆ .ಆ ಚರ್ಚೆಗಳಿಗೆ ತೆಲಗಾವಿರವರ ಈ ಪುಸ್ತಕ ಸಮರ್ಪಕವಾದ ಉತ್ತರ ಎಂಬುದು ನನ್ನ ಅಭಿಪ್ರಾಯ.



ಪುಸ್ತಕದ ಹೆಸರು: ಹಂಪಿ ವಿಜಯನಗರ

ಲೇಖಕರು: ಪ್ರೊ ಲಕ್ಷಣ್ ತೆಲಗಾವಿ.

ಪ್ರಕಾಶನ: ವಾಲ್ಮೀಕಿ ಸಾಹಿತ್ಯ ಸಂಪದ.ಹರ್ತಿಕೋಟೆ.

ಬೆಲೆ: 200₹


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

ಕನ್ನಡ ರಂಗಭೂಮಿಯ ಕಲಾಪ್ರತಿಭೆಗಳು


 


ವಿಮರ್ಶೆ ೪೮
ಕನ್ನಡ ರಂಗಭೂಮಿಯ ಕಲಾಪ್ರತಿಭೆಗಳು .

ಆತ್ಮೀಯರು ಪ್ರಕಾಶಕರು ಹಾಗೂ ಲೇಖಕರಾದ ಎಂ ವಿ ಶಂಕರಾನಂದ ರವರು ಬರೆದ ಕನ್ನಡ ರಂಗಭೂಮಿಯ ಕಲಾಪ್ರತಿಭೆಗಳು ಎಂಬ ಪುಸ್ತಕವನ್ನು ನಾನು ಓದಲು ಕಾರಣ ನಾನೂ ಒಬ್ಬ ಹವ್ಯಾಸಿ ಕಲಾವಿದ .ಈ ಪುಸ್ತಕದಲ್ಲಿ ಲೇಖಕರು ಕರ್ನಾಟಕದ ರಂಗಭೂಮಿಯ ಸಾಧಕರಲ್ಲಿ ಪ್ರಮುಖವಾದ  64 ನಕ್ಷತ್ರಗಳ ಬಗ್ಗೆ ಪರಿಚಯಿಸಿದ್ದಾರೆ.
ಜೊತೆಯಲ್ಲಿ ಕರ್ನಾಟಕದ ರಂಗಭೂಮಿಯ ಬಗ್ಗೆ ವಿವರಣೆಯನ್ನು ಸಹ ನೀಡಿರುವುದು ಪ್ರಶಂಸನಾರ್ಹ.

ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಕೋಡ್ಲಾಪುರದಲ್ಲಿನ ಒಂದು ಪುರೋಹಿತ ಕುಟುಂಬದಲ್ಲಿ,ಜನಿಸಿದ ಶಂಕರಾನಂದ ರವರು ಹುಟ್ಟೂರಿನಲ್ಲೇ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ವಿದ್ಯಾಭ್ಯಾಸ ಮುಗಿಸಿ ,ಮುಂದೆ ಮಧುಗಿರಿಯಲ್ಲಿ ಪಿಯುಸಿ, ಪದವಿ ವ್ಯಾಸಂಗ  ಮಾಡಿ  ಮೈಸೂರಿನಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡಿದ್ದಾರೆ. ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನ ಬುಕ್ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ) ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಮಾಡಿರುವ ಇವರಿಗೆ
ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳು ಹುಡುಕಿಕೊಂಡು ಬಂದಿವೆ . ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ, ಜಿಲ್ಲಾ ಪತ್ರಿಕೆಗಳ ಉಪ ಸಂಪಾದಕರೂ, ಅಂಕಣಕಾರರೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಆನಂದ್ ಪಬ್ಲಿಕೇಷನ್ಸ್ ಸಂಸ್ಥೆ ಆರಂಭಿಸಿ ಹಲವಾರು ಉದಯೋನ್ಮುಖ ಕವಿ, ಲೇಖಕರ ಕೃತಿಗಳನ್ನು ಹೊರತರುವ ಜೊತೆ ಜೊತೆಯಲ್ಲಿ ಅವರೂ ಸಹ ಹಲವಾರು ಕೃತಿಗಳನ್ನು ರಚನೆ ಮಾಡುತ್ತಾ ಕನ್ನಡ ತಾಯಿಗೆ   ಸೇವೆ ಸಲ್ಲಿಸುತ್ತಿದ್ದಾರೆ .

ರಂಗಭೂಮಿ ಎಂದರೆ, ಒಂದು ಪ್ರದೇಶದ, ಜನಸಮುದಾಯದ ಬದುಕಿನ ಸಾಂಸ್ಕೃತಿಕ, ರಾಜಕೀಯ, ಇತಿಹಾಸದೊಂದಿಗೆ, ಸಾಹಿತ್ಯ ಕೃತಿಯಾಗಿ, ರಂಗ ಮಂಚದಲ್ಲಿ ನಾಟಕವಾಗಿ, ರೂಪಕವಾಗಿ ಜನಮನಕ್ಕೆ ಹತ್ತಿರವಾದ ಕಲಾಕ್ಷೇತ್ರ. ಜಗತ್ತಿನಾದ್ಯಂತ ಆಯಾ ಜನಾಂಗ, ದೇಶ, ಪ್ರದೇಶಗಳ ರಂಗಭೂಮಿ ರೂಪು ಗೊಂಡುದುದನ್ನು ನಾವು ಕಾಣುತ್ತೇವೆ.

ಕನ್ನಡದಲ್ಲಿ ಜನಪದ ರಂಗಭೂಮಿ, ವೃತ್ತಿ ರಂಗಭೂಮಿ ಮತ್ತು ಹವ್ಯಾಸಿ ರಂಗಭೂಮಿಗಳಾಗಿ ವಿಂಗಡಿಸಬಹುದು. ಕನ್ನಡ ಜನಪದ ರಂಗಭೂಮಿಯಿಂದ ಪ್ರೇರಣೆ ಪಡೆದ ಮರಾಠಿಯ ಸೀತಾಸ್ವಯಂವರ ನಾಟಕ ಮಹಾರಾಷ್ಟ್ರದ ಉದ್ದಗಲಕ್ಕೂ ಪ್ರದರ್ಶನ ಕಂಡು ಮುಂಬಯಿ ಪ್ರಾಂತ್ಯಕ್ಕೊಳಪಟ್ಟ ಉತ್ತರ ಕರ್ನಾಟಕದ ಪಟ್ಟಣಗಳಿಗೂ ಲಗ್ಗೆ ಇಟ್ಟು, ಕನ್ನಡ ನೆಲದಲ್ಲಿ ಮರಾಠಿ ಮತ್ತು ಪಾರ್ಸಿ ಕಂಪನಿಗಳದ್ದೆ ನಾಟಕದಾಟ, ನಾಟಕದೂಟ, ಕಾರುಬಾರುಗಳಾದಾಗ ಕನ್ನಡಿಗರ ಸ್ವಾಭಿಮಾನ ಕೆಣಕುವಂತಾಯಿತು. ಈ ವೇಳೆಗೆ ಶಾಂತ ಕವಿಗಳೆಂದು ಹೆಸರಾದ ಸಕ್ಕರಿ ಬಾಳಾಚಾರ್ಯರು ಮರಾಠಿ ನಾಟಕಕ್ಕೆ ಪ್ರತಿಯಾಗಿ ಕನ್ನಡ ನಾಟಕಗಳನ್ನು ರಚಿಸುವಲ್ಲಿ ಕಾರಣರಾದರು. ಹೀಗೆ ಸಮಗ್ರ ಕರ್ನಾಟಕ ವೃತ್ತಿ ರಂಗ ಭೂಮಿ ಇತಿಹಾಸದಲ್ಲಿ ಗದಗಿಗೆ ಪ್ರಥಮ ಕೀರ್ತಿ ಸಲ್ಲುವಂತಾಯಿತು.

1856ನೇ ಜನವರಿ 15ರಂದು ಜನಿಸಿದ ಸಕ್ಕರಿ ಬಾಳಾಚಾರ್ಯರು ಗದಗಿನ ಶ್ರೀಮಂತ ಉಮಚಗಿ ಲಚಪ್ಪ ನಾಯಕ ಎಂಬುವರ ಪ್ರೋತ್ಸಾಹದಿಂದ ಹಲವಾರು ಯುವಕರ ನೆರವಿನಿಂದ 1872ರಲ್ಲಿ ವೀರನಾರಾಯಣ ಪ್ರಸಾದಿತ ನಾಟಕ ಮಂಡಳಿ' ಸ್ಥಾಪಿಸಿದರು. ಇದು ಉತ್ತರ ಕರ್ನಾಟಕದ ಪ್ರಥಮ ವೃತ್ತಿ ನಾಟಕ ಸಂಸ್ಥೆ.

ಮುಂದೆಯೂ ಪಾರಸಿ ಕಂಪನಿಗಳ ಪಾರಮ್ಯ ಮೈಸೂರು ಪ್ರಾಂತ್ಯದಲ್ಲಿ ಮುಂದುವರೆದಾಗ, ಮೈಸೂರಿನ ಕೆಲವು ಮಂದಿ ಕಲಾವಿಲಾಸಿಗಳು ಸುಮಾರು 1879-80ರಲ್ಲಿ ಸಿ.ಆರ್.ರಘುನಾಥರಾಯರ ನೇತೃತ್ವದಲ್ಲಿ ಒಂದು ಕನ್ನಡ ನಾಟಕ ಸಂಘವನ್ನು ಆರಂಭಿಸಿ 'ಶ್ರೀ ಶಾಕುಂತಲ ಕರ್ನಾಟಕ ನಾಟಕಸಭಾ' ಎಂದು ಹೆಸರಿಟ್ಟು ಕಾರ್ಯನಿರತರಾದರು. ಮುಂದೆ ಮೈಸೂರು ಒಡೆಯರಾದ ಚಾಮರಾಜೇಂದ್ರರ ನೆರವಿನೊಂದಿಗೆ 1880ರಲ್ಲಿ 'ಶ್ರೀ ಚಾಮರಾಜೇಂದ್ರ ಕರ್ನಾಟಕ ನಾಟಕ ಸಭಾ' ಎಂಬ ಹೆಸರಿನಿಂದ ನಾಟಕ ಮಂಡಳಿಯೊಂದನ್ನು ಸ್ಥಾಪಿಸಿ ಕನ್ನಡ ರಂಗಭೂಮಿಗೆ ಭದ್ರ ಬುನಾದಿ ಹಾಕಿ ಸತ್‌ ಸಂಪ್ರದಾಯವೊಂದನ್ನು ನಿರ್ದಿಷ್ಟವಾಗಿ ರೂಪಿಸಿದರು.

1882ರಲ್ಲಿ ಅರಮನೆಗೆ ಸೇರಿದ ವಿದ್ಯಾರ್ಥಿಗಳಿಂದ 'ಮೈಸೂ‌ರ್  ರಾಯಲ್ ಸ್ಕೂಲ್ ಡ್ರಾಮ್ಯಟಿಕ್ ಕಂಪನಿ' ಸ್ಥಾಪನೆಯಾಯಿತು. ಮುಂದೆ ಪೆರಿಸ್ವಾಮಿ ಅಯ್ಯಂಗಾರ್ -ಚಿನ್ನಸ್ವಾಮೀ ಅಯ್ಯಂಗಾರ್ ಸಹೋದರರ 'ರಸಿಕ ಮನೋಲ್ಲಾಸಿನಿ ನಾಟಕ ಕಂಪನಿ' ಜನ್ಮ ತಾಳಿತು. ನಂತರ ಚಾಮರಾಜೇಂದ್ರ ಕರ್ನಾಟಕ ನಾಟಕ ಸಭಾ ನಿಂತ ಮೇಲೆ ಅದರಲ್ಲಿನ ಕೆಲವರು ಸೇರಿ 1919ರಲ್ಲಿ 'ಶ್ರೀಚಾಮುಂಡೇಶ್ವರಿ ಕರ್ನಾಟಕ ನಾಟಕ ಸಭಾ' ಎಂದು ಎನ್. ಸುಬ್ಬಣ್ಣನವರ ನೇತೃತ್ವದಲ್ಲಿ ಹೊಸ ತಂಡ ರಚನೆಯಾಗಿ ಮುನ್ನಡೆಯಿತು. ಇದರಲ್ಲಿ ಮುಂದೆ ಆರ್. ನಾಗೇಂದ್ರರಾವ್, ಮಳವಳ್ಳಿ ಸುಂದರಮ್ಮನವರು ಬೇರೆ ಬೇರೆ ಕಾಲದಲ್ಲಿ ಆಡಳಿತ ಹೊಣೆ ಹೊತ್ತರು.

ನಾಟ್ಯ ಶಿರೋಮಣಿ ವರದಾಚಾರ್ಯರು 'ರತ್ನಾವಳಿ ನಾಟಕ ಸಭಾ'ವನ್ನು 1902ರಲ್ಲಿ ಸ್ಥಾಪಿಸಿದರು. ಮೈಸೂರು ರಂಗಭೂಮಿಯಲ್ಲಿ ಮೊಟ್ಟಮೊದಲು ವಿದ್ಯುತ್‌ ಶಕ್ತಿಯ ಸಹಾಯದಿಂದ ದೀಪಾಲಂಕಾರ, ಬಣ್ಣಗಳ ವಿಧವನ್ನು ಅಳವಡಿಸಿದರು.

ಮೈಸೂರು ಪ್ರಾಂತ್ಯದಲ್ಲಿ ಇನ್ನೊಂದು ಹೆಸರಾಂತ ಸಂಸ್ಥೆ 'ಶ್ರೀ ಗುಬ್ಬಿ ಚೆನ್ನಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿ' 1884ರಲ್ಲಿ ಗುಬ್ಬಿ ಚಂದಣ್ಣನವರ ನೇತೃತ್ವದಲ್ಲಿ ಹುಟ್ಟಿತು. ಹೀಗೆ ಜನನವಾದ ಕನ್ನಡ ರಂಗಭೂಮಿ ಇಂದು ವಿಶ್ವದ ಗಮನವನ್ನು ಸೆಳೆಯುವ ಮಟ್ಟಿಗೆ ಬೆಳೆದು ನಿಂತಿದೆ.
ಹೀಗೆ ಲೇಖಕರು ಕನ್ನಡ ರಂಗಭೂಮಿ ಬೆಳೆದುಬಂದ ಹಾದಿಯ ಸಂಕ್ಷಿಪ್ತವಾಗಿ ತಿಳಿಸಿದ್ದಾರೆ. ಕನ್ನಡದ ಅರವತ್ತನಾಲ್ಕು  ಕಲಾ ಪ್ರತಿಭೆಗಳ ಸಾಧನೆಗಳ ಬಗ್ಗೆ ಈ ಕೃತಿಯಲ್ಲಿ ಪರಿಚಯಿಸಿಕೊಡುವ ಪ್ರಯತ್ನ ಮಾಡಿರುವ ಲೇಖಕರು ಈ ಕೆಳಗಿನ ನಕ್ಷತ್ರಗಳ ಪರಿಚಯ ಮಾಡಿಕೊಟ್ಟಿದ್ದಾರೆ.
ಟಿ.ಎಸ್.ಲೋಹಿತಾಶ್ವ,ಅವಿನಾಶ್ ಕಾಮತ್, ಮುಖ್ಯಮಂತ್ರಿ ಚಂದ್ರು, ಮಂಡ್ಯ ರಮೇಶ್, ಕೆ.ಮಂಜುನಾಥಯ್ಯ,ಉಮಾಶ್ರೀ ,ಲೋಕನಾಥ್, ಲಕ್ಷ್ಮೀ ಚಂದ್ರಶೇಖರ್
,ಪ್ರಕಾಶ್ ಬೆಳವಾಡಿ,ಅಹಲ್ಯಾ ಬಲ್ಲಾಳ್ ,ಡಿ.ಆರ್. ಕಾಮತ್
, ಬಿ.ಆರ್. ಮಂಜುನಾಥ್ ,ಚಂದ್ರಶೇಖರ ಕಂಬಾರ , ವಾಸುದೇವ ಗಿರಿಮಾಜಿ
, ಧೀರೇಂದ್ರ ಗೋಪಾಲ್, ಜಿ.ವಿ.ಶಿವಾನಂದ್‌ ,ಶಾಂತಾ ಹುಬೈಕ‌
, ಯಶವಂತ ಸರದೇಶಪಾಂಡೆ,
ವಸಂತ ನಾಕೋಡ , ಕಾಳಪ್ಪ ಪತ್ತಾರ, ಕೆ.ಎಸ್.ಪೂರ್ಣಿಮಾ , ರೋಹಿಣಿ ಹಟ್ಟಂಗಡಿ,ಡಾ. ವಿಜಯಾ,ಆದವಾನಿ ಲಕ್ಷ್ಮೀದೇವಿ,ಎಂ.ವಿ.ರಾಜಮ್ಮ,ಕಲ್ಪನಾ
ಬಿ.ಆರ್. ಪಂತಲು,ಕಣಗಲ್ ಪ್ರಭಾಕರ ಶಾಸ್ತ್ರಿ , ಉದಯಕುಮಾರ್
ಸಿ.ಜಿ.ವೆಂಕಟೇಶ್ವರ,ಸುಪ್ರಿಯಾ ಎಸ್. ರಾವ್,ಬಾಲಕೃಷ್ಣ ನಿಲ್ದಾಣ್ಣಾಯ, ಸರೋಜಾ ಹೆಗಡೆ , ಸದಾನಂದ ಸುವರ್ಣ, ವಾಸುಕಿ ವೈಭವ್ , ಭರತ್ ಕುಮಾರ್,ಮರಿಯಪ್ಪ, ನಾಟೇಕ‌ರ್ ಮೋಹನ್,ಕಿಕ್ಕೇರಿ ಕೃಷ್ಣಮೂರ್ತಿ,ಕಿಶೋರಿ ಬಲ್ಲಾಳ್‌,ಆಶಾಲತಾ,ಗಿರಿಜಾ ಲೋಕೇಶ್,  ಲೋಕೇಶ್,
ವೈಶಾಲಿ ಕಾಸರವಳ್ಳಿ,ಕಲ್ಪನಾ ನಾಗನಾಥ್, ದಾಕ್ಷಾಯಿಣಿ ಭಟ್,
ಪ್ರೇಮಾ ಕಾರಂತ,ಯಮುನಾ ಮೂರ್ತಿ,ದೀಪಾ ರವಿಶಂಕರ್,ಪ್ರಸನ್ನ,
ಚಿಟ್ಟಾಣಿ ರಾಮಕೃಷ್ಣ ಹೆಗಡೆ,
ಕಾಳಿಂಗ ನಾವಡ, ಕೆರೆಮನೆ ಶಿವರಾಮ ಹೆಗಡೆ, ಕೆರೆಮನೆ ಶಂಭು ಹೆಗಡೆ, ಕೆರೆಮನೆ ಮಹಾಬಲ ಹೆಗಡೆ
ಹೊ. ಮಂಜುನಾಥ ಭಾಗವತ, ಕ. ಮಂಜುನಾಥ ಭಾಗವತ. ಲೀಲಾವತಿ ಬೈಪಡಿತ್ತಾಯ,ಬಲಿಪ ನಾರಾಯಣ ಭಾಗವತ,ಶೇಣಿ ಗೋಪಾಲಕೃಷ್ಣ ಭಟ್
ನೆಟ್ಟೂರು ನಾರಾಯಣ ಭಾಗವತ .
ಈ ಕಲಾವಿದರ ಬಗ್ಗೆ ತಿಳಿದು ಬಹಳ ಸಂತೋಷವಾಯಿತು.

ಈ ಪುಸ್ತಕದ  ಮುಖಪುಟ ಗಮನ ಸೆಳೆಯುತ್ತದೆ ಅದಕ್ಕೆ ವಿ ಎಲ್ ಪ್ರಕಾಶ್ ರವರು ಅಭಿನಂದನಾರ್ಹರು .ಪುಸ್ತಕ ಅಚ್ಚುಕಟ್ಟಾಗಿ ಬರಲು ಅದರ ಒಳ ವಿನ್ಯಾಸ ಸಹ ಚೆನ್ನಾಗಿ ಮೂಡಿಬಂದಿರುವುದು ಗಮನಾರ್ಹ. ಕಲಾ ನಕ್ಷತ್ರಗಳಿಗೆ ಪೂರಕವಾದ ಚಿತ್ರಗಳು ಬಹಳ ಚೆನ್ನಾಗಿವೆ .ಒಟ್ಟಾರೆ ಈ ಪುಸ್ತಕ ಚೆನ್ನಾಗಿದೆ ರಂಗಭೂಮಿಯ ಬಗ್ಗೆ ಆಸಕ್ತಿ ಇರುವ ಮತ್ತು ಕಲಾರಾಧಕರು ಈ ಪುಸ್ತಕ ಓದಲೇಬೇಕು

ಪುಸ್ತಕದ ಹೆಸರು:ಕನ್ನಡ ರಂಗಭೂಮಿಯ ಕಲಾಪ್ರತಿಭೆಗಳು
ಲೇಖಕರು: ಎಂ ವಿ ಶಂಕರಾನಂದ
ಪ್ರಕಾಶನ: ಆನಂದ್ ಪಬ್ಲಿಕೇಶನ್ .ತುಮಕೂರು
ಬೆಲೆ:450₹

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು

*ಇಂದಿನ ಸಿಂಹ ಧ್ವನಿ ಪತ್ರಿಕೆಯಲ್ಲಿ ೬/೮/೨೨ ಪ್ರಕಟವಾದ ನನ್ನ ಪುಸ್ತಕ ವಿಮರ್ಶೆ " ಧ್ವಜವೆಂದರೆ ಬಟ್ಟೆಯಲ್ಲ "*


 

05 August 2022

ಸೋನಾಗಾಚಿ....


 


ವಿಮರ್ಶೆ ೪೭ 

ಸೋನಾಗಾಚಿ


ಹದಿಮೂರು ಕಥೆಗಳನ್ನು ಹೊಂದಿರುವ "ಸೋನಾಗಾಚಿ " ಕಥಾ ಸಂಕಲನದ ಪ್ರತಿಯೊಂದು ಕಥೆಯೂ ವಿಭಿನ್ನವಾದ ಕಥಾವಸ್ತುವನ್ನು ಹೊಂದಿವೆ. ಇಲ್ಲಿನ ಬಹುತೇಕ ಕಥೆಗಳು ಮಯೂರ ಮಾಸಪತ್ರಿಕೆಯಲ್ಲಿ ಪ್ರಕಟ ಗೊಂಡಂಥವುಗಳೇ ಆಗಿವೆ. ಸುಧಾ ವಾರಪತ್ರಿಕೆ ಮತ್ತು ಸಂಜೆ ವಾಣಿ ವಿಶೇಷಾಂಕದಲ್ಲಿ ಪ್ರಕಟವಾದ ಕಥೆಗಳು ಇವೆ ಕೆಲವನ್ನು ಈಗಾಗಲೇ ಓದಿರುವೆ.ಎಲ್ಲಾ ಕಥೆಗಳು ಒಂದೆಡೆ ಇರುವುದರಿಂದ ಆಗಾಗ ಓದಿ ಮೆಲುಕು ಹಾಕಬಹುದು.

ಹಂದ್ರಾಳ ರವರು ಪಾತ್ರಗಳ ಸೃಷ್ಟಿ ಮಾಡುವಲ್ಲಿ ಘಟನೆಗಳನ್ನು ಕಟ್ಟಿಕೊಡುವುದರಲ್ಲಿ ನಿಸ್ಸೀಮರು 

ರಾಮಲಾಲ್, ಅತ್ತರು ಮಾರುವ ಸಲೀಮ್, ಮಾದೇಗೌಡ  ಕೆಲವು ಉದಾಹರಣೆಗಳು .ಈ ಪಾತ್ರಗಳು  ಸಾಮಾನ್ಯರಲ್ಲಿ ಸಾಮಾನ್ಯರಾದರೂ ಇವರೆಲ್ಲ ಕೊನೆಗೆ ತಮ್ಮ ನಿಜಕ್ಕೆ ಮರಳುವ ಧೀಮಂತರು, ಹಂದ್ರಾಳರ ಕತೆಗಳಿಗಾಗಿಯೇ ಇವರು ನಿಜವಾಗುವ ಪಾತ್ರಗಳಲ್ಲ; ನಿಜ ಜೀವನದಲ್ಲಿಯೂ ನಾವು ಕಾಣುವ ಇಂತಹ ಅಪರೂಪದ ವ್ಯಕ್ತಿಗಳೇ ಹಂದ್ರಾಳರ ಕತೆಗಳಲ್ಲಿ ಹೊಸದಾಗಿ ಜೀವಧಾರಣೆ ಮಾಡಿ ಹೀರೋಗಳಾಗುತ್ತಾರೆ. ಅನೂಹ್ಯಳ ಸುತ್ತ ಕಟ್ಟಿಕೊಂಡಿದ್ದ ಬ್ರೆಕ್ಟನ ಕನಸು ಮುರಿದು ಬಿದ್ದಾಗ ಆತ ವಾಸ್ತವಕ್ಕೆ ಮರಳುತ್ತಾನೆ. 'ಸೋನಾಗಾಚಿ'ಯ ಅಲ್ಲಮಪ್ರಭು ವೇಶ್ಯೆಯನ್ನು ವರಿಸಿ ಉದ್ಧಾರವಾಗುತ್ತಾನೆ. ಇವರೆಲ್ಲರ ಉದ್ಧಾರ ಕತೆಗಾರನ ಕಲ್ಪನೆಯಲ್ಲಷ್ಟೆ ರೂಪು ಪಡೆದದ್ದಲ್ಲ. ನಮ್ಮ ಸುತ್ತ ಕಾಣುವ ವ್ಯಕ್ತಿಗಳ ದೈನಂದಿನ ವಾಸ್ತವಗಳೇ ಇಲ್ಲಿ ಕತೆಯಾಗುತ್ತವೆ. ಸಾಮಾನ್ಯ ಮನುಷ್ಯನ ವಿವೇಕ, ಮತ್ತು ಜಾಣತನಗಳನ್ನು ಈ ಕತೆಗಳು ಗೆಲ್ಲಿಸುತ್ತವೆ. ಬೈ ಎಲೆಕ್ಷನ್‌ನಲ್ಲಿ ಹುರಿಯಾಳಾಗಿ ನಿಲ್ಲುವ ಗಿರಿಗೌಡನಳ್ಳಿಯ ಮಾದೇಗೌಡನ ಒಂದು ಕತೆಯಿದೆ ಇಲ್ಲಿ. ಮಾದೇಗೌಡ ಇಂದಿನ ನಡತೆಗೆಟ್ಟ ಶಕ್ತಿರಾಜಕಾರಣಕ್ಕೆ ತನ್ನ ಹುಂಬತನದಲ್ಲಿ ಬಲಿಯಾದವನು. ಅವನು ಚುನಾವಣೆಯಲ್ಲಿ ಸೋತು, ಕೈ ಬರಿದಾಗಿ ನಿಂತಾಗ, ಹತಾಶೆಗೊಳ್ಳದೆ ಮತ್ತೆ ತನ್ನ ರಾಗಿ ಮಿಶನ್ ಕೆಲಸಕ್ಕೆ ನಿಲ್ಲುತ್ತಾನೆ. ಇವು ಹಂದ್ರಾಳರ ಕಥಾಜಗತ್ತು. ಓದುಗರ ಮನವೊಲಿಸಲು ಹಂದ್ರಾಳರು ಎಲ್ಲಿಯೂ ಕಲ್ಪನೆಯನ್ನು ಉತ್ರ್ಪೇಕ್ಷಿಸು ವುದಿಲ್ಲ. ಇವರು ಕಾಣುವ ವಾಸ್ತವ ಜಗತ್ತು ತೃಣಮಾತ್ರವೂ ಕಲ್ಪಿತ ಎನಿಸುವುದಿಲ್ಲ.  


 'ಪೆಂಚಾಲಯ್ಯನ ಪೆನ್ಷನ್ ಫೈಲು', 'ಕತ್ತಲು ಮತ್ತು ಮಳೆ' 'ಇನ್ನಾದರೂ ಸಾಯಬೇಕು' ಕತೆಗಳನ್ನು ಇಲ್ಲಿ ಉಲ್ಲೇಖಿಸಲೇಬೇಕಿದೆ. ಪೆಂಚಾಲಯ್ಯ ತನ್ನ ಪೆನ್ಷನ್ ಫೈಲಿನಲ್ಲಿ ಸಿಕ್ಕಿಕೊಂಡ ಒಂದು ತೊಡಕನ್ನು ನಿವಾರಿಸಿಕೊಳ್ಳುವ ಕತೆ 'ಪೆಂಚಾಲಯ್ಯನ ಪೆನ್ಷನ್ ಫೈಲು', ಹೆಚ್ಚಿನ ಸಂದರ್ಭಗಳಲ್ಲಿ, ಮನುಷ್ಯ ತನ್ನ ಸಹಜವಾದ ಜಾಣತನವನ್ನೇ ನೆಚ್ಚಿಕೊಳ್ಳುತ್ತಾನೆ. ಆಳದಲ್ಲಿ ನಾವೆಲ್ಲ. ಅಂತಹ ಉಪಾಯಗಾರರೇ, ಕಾನೂನಿನ ಕುರುಡನ್ನೂ ನೌಕರಶಾಹಿಯ ಸಂಚುಗಳನ್ನೂ ಸಿಟ್ಟು ಮತ್ತು ವ್ಯಂಗ್ಯದಲ್ಲಿ ಹಂದ್ರಾಳರು ನಿರೂಪಿಸುವ ಸುಲಭದ ಮಾರ್ಗವನ್ನು ಹಿಡಿಯದೆ ಮನುಷ್ಯರ ತಿಳಿವಳಿಕೆಗೆ ಸಂಭ್ರಮಿಸುವ ಸಂಯಮ ತೋರುತ್ತಾರೆ.  

 ಹಂದ್ರಾಳರ ಕಥಾಜಗತ್ತಿನ ಮನುಷ್ಯರನ್ನ ನಿಕಟವಾಗಿ ನೋಡುವುದರಲ್ಲಿ ಒಂದು ಆನಂದವಿದೆ. ಇವರೆಲ್ಲ ಏಕಾಂತದಲ್ಲಿ ತಮ್ಮ ನೈತಿಕತೆಗೆ ನಿಜ ಎನ್ನುವಂತೆ ಯೋಚಿಸಬಲ್ಲವರು. ಯೋಚನೆಯಂತೆ ಬದುಕಿ ತೋರಿಸಬಲ್ಲ ಈ ಧೀರರು ಯಾವತ್ತೂ ಸದ್ಯಕ್ಕೆ ಸ್ಪಂದಿಸುತ್ತಾರೆ: 'ಪರಿವರ್ತನೆ' ಕತೆಯ ರಾಜಕಾರಣಿ ತಿರುಬೋಕಿ ಜೈಲಿನಲ್ಲಿರುವಾಗ ತನ್ನ ಅಂತರಂಗದ ಮಾತನ್ನು ಆಲಿಸುವುದು ಒಂದು ಲೋಕೋತ್ತರ ವಿದ್ಯಮಾನ. 'ಕತ್ತಲು ಮತ್ತು ಮಳೆ'ಯ ಶಾಲ್ಮಲ ಕೂಡ ತನ್ನ ಆತ್ಮಸಾಕ್ಷಿಯಂತೆ ವರ್ತಿಸುವವಳು. ಆದರೆ ಲೋಕದ ರೀತಿಯನ್ನೂ ಬಲ್ಲವಳು. ಆದ್ದರಿಂದ ತನ್ನನ್ನು ಹಿಂದೊಮ್ಮೆ ಪ್ರೀತಿಸಿದವನ ಬಳಿಗೆ ಆಕೆ ಮರಳಿದಾಗ ಅದೊಂದು ಅನೈತಿಕ ಕ್ರಿಯೆ ಎನಿಸುವುದಿಲ್ಲ.


ಈ ಸಂಕಲನದಲ್ಲಿರುವ ಒಂದು ಅಪೂರ್ವವಾದ ಕತೆ 'ಇನ್ನಾದರೂ ಸಾಯಬೇಕು'. ಹಂದ್ರಾಳರ ಕತೆಗಳಲ್ಲಿ ಅಸಹಜವಾದ ಸಾವು ಕಡಿಮೆ, ಆದರೆ ಈ ಕತೆಯ ಪ್ರೊಫೆಸರ್ ಋಗ್ವದಿ ನೇಣು ಬಿಗಿದುಕೊಂಡು ಸಾಯುತ್ತಾರೆ. ಪ್ರೊ. ಋಗ್ವದಿ ಸಾಯುವ ಉದ್ದೇಶ ಹೊಂದಿರಲಿಲ್ಲವಾದರೂ, ತಮ್ಮ ತಲೆಯೆಲ್ಲ ತುಂಬಿಕೊಂಡ ಸಾವಿನ ಧ್ಯಾನದಿಂದ, ಆತ್ಮಹತ್ಯೆಯ ಒಂದು ಸನ್ನಿವೇಶವನ್ನು ರಿಹರ್ಸಲ್ ಮಾಡುವ ಲಘುವಾದ ಮನಸ್ಥಿತಿಯಲ್ಲೇ ತಂದುಕೊಂಡ ಸಾವು ಇದು. ಸಾಯಬೇಕೆಂದು ಬೆಂಕಿ ಹಚ್ಚಿಕೊಂಡು ಸಾಯದೆ ಆಸ್ಪತ್ರೆ ಸೇರಿದ್ದ ಶಿಷ್ಯ ವೆಂಕಟೇಶ್ ಯಾದವನನ್ನು ಕಾಣಲು ಹೋಗುವ ಪ್ರೊ. ಋಗ್ವದಿ ಅಲ್ಲಿ ಹೇಳುವ ಮಾತು ಅವರ ಮನಸ್ಥಿತಿಯನ್ನು ತೋರುವಂಥದ್ದು, “ಎಂಥ ಅವಿವೇಕಿಯಯ್ಯಾ ನೀನು! ಅದಕ್ಕೊಂದು ಪ್ರಾಪರ್ ಪ್ರಿಪರೇಶನ್ ಬೇಕಾಗುತ್ತೆ. ನೀನು ನೇಣು ಬಿಗಿದುಕೊಳ್ಳಬೇಕಾಗಿತ್ತು” ಎಂದುಬಿಡುತ್ತಾರೆ. ಮಾರನೆಯ ದಿನ ತಾನೇ “ಆರೆ, ಒಂದು ಅಟೆಂಪ್ಟ್ ಏಕೆ ಮಾಡಬಾರದು?” ಎಂದು ತನ್ನ ಕುತೂಹಲಕ್ಕೆ ತನ್ನ ಪ್ರಾಣವನ್ನೇ ಕಳೆದುಕೊಳ್ಳುವ ಋಗ್ವದಿಯ ಕತೆ ಕೇಶವರೆಡ್ಡಿ ಹಂದ್ರಾಳ ಲೋಕ ವೀಕ್ಷಣೆಯ ಪ್ರತಿಭೆಗೆ ಉದಾಹರಣೆಯಾಗುತ್ತದೆ. ಈ ಕತೆ ನಮ್ಮ ವಿರುದ್ಧ ನಮ್ಮನ್ನೇ ಎಚ್ಚರಿಸುತ್ತದೆ.


ಹೀಗೆ ನಮ್ಮ ಮನೆಯ ಸುತ್ತ ಮುತ್ತ ನಡೆಯುವ ಪಾತ್ರಗಳನ್ನು ಚಿತ್ರದಲ್ಲಿ ಕಟ್ಟಿಕೊಡುವ ಕಥೆಗಳು ಕೆಲವೊಮ್ಮೆ ನಮ್ಮ ಕಥೆಯೇನೋ ಅನಿಸುವಷ್ಟು ನಮ್ಮನ್ನು ಕಾಡುತ್ತವೆ.ನೀವು ಒಮ್ಮೆ ಸೋನಾಗಾಚಿ ಓದಿಬಿಡಿ.



ಪುಸ್ತಕದ ಹೆಸರು: ಸೋನಾಗಾಚಿ

ಲೇಖಕರು: ಕೇಶವರೆಡ್ಡಿ ಹಂದ್ರಾಳ 

ಪ್ರಕಾಶನ: ಸಪ್ನ ಬುಕ್ ಹೌಸ್ .ಬೆಂಗಳೂರು

ಬೆಲೆ: 190 ₹


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

ಧ್ವಜವೆಂದರೆ ಬಟ್ಟೆಯಲ್ಲ....

 



ವಿಮರ್ಶೆ ೪೬

ಧ್ವಜವೆಂದರೆ ಬಟ್ಟೆಯಲ್ಲ .

ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ "ಘರ್ ಘರ್ ತಿರಂಗಾ" ಮನೆ ಮನೆಯಲ್ಲಿ ಬಾವುಟ" ಅಭಿಯಾನ ಸದ್ದು ಮಾಡುತ್ತಿದೆ. ಇದರ ಜೊತೆಯಲ್ಲಿ ಕೆಲ ದಿನಗಳ ಹಿಂದೆ  ಕೇಂದ್ರ ಸರ್ಕಾರವು ಧ್ವಜ ಸಂಹಿತೆಗೆ ಕೆಲವು ತಿದ್ದುಪಡಿಗಳನ್ನು ತಂದು ರಾತ್ರಿ ವೇಳೆಯಲ್ಲಿ ಸಹ ದ್ವಜ ಹಾರಾಡಿಸಬಹುದು ಎಂದು ಹೇಳಿದ್ದು ವಿವಾದಕ್ಕೆ ತಿರುಗಿದ್ದು ನಮಗೆ ತಿಳಿದೇ ಇದೆ.ನಮ್ಮ ಹೆಮ್ಮೆ ಹಾಗೂ  ಅಸ್ಮಿತೆಗಳಾದ ರಾಷ್ಟ್ರ ಧ್ವಜ ಹಾಗೂ ರಾಷ್ಟ್ರ ಲಾಂಛನಗಳ ಹೆಸರಿನಲ್ಲಿ  ವಿವಾದಗಳು ಉಂಟಾಗುತ್ತಿರುವುದು ಬೇಸರದ ಸಂಗತಿ.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಪರ್ವ ಕಾಲದಲ್ಲಿ ಭಾರತೀಯರು ಹೆಮ್ಮೆಯಿಂದ ತಮ್ಮ ವಾಟ್ಸಪ್  ಡೀಪಿಗಳಲ್ಲೂ ನಮ್ಮ ತಿರಂಗಾ ಹಾಕಿಕೊಂಡಿರುವುದು ದೇಶಭಕ್ತಿಯ ಜೋಶ್ ನ ಸೂಚಕ ಎಂದರೂ ತಪ್ಪಾಗಲಾರದು.
ಈ ಹಿನ್ನೆಲೆಯಲ್ಲಿ  ಸಂತೋಷ್ ಜಿ ಆರ್ ರವರು ಬರೆದ ಪುಸ್ತಕ ಧ್ವಜವೆಂದರೆ ಬಟ್ಟೆಯಲ್ಲ ಎಂಬ ಪುಸ್ತಕ ನನ್ನ ಆಕರ್ಷಿಸಿತು. ಅದರ ಟ್ಯಾಗ್ ಲೈನ್ ಓದಿದಾಗ ಪುಸ್ತಕ ಓದಲೇ ಬೇಕೆಂದು ಕೈಗೆತ್ತಿಕೊಂಡೆನು. ಆ ಟ್ಯಾಗ್ ಲೈನ್ ಈಗಿತ್ತು. " ವೇದಗಳಿಂದ ವಿವಾದಗಳವರೆಗೆ.... ಸಾಗಿ ಬಂದ ಹಾದಿ".
ಪುಸ್ತಕ ಓದಿ ಮುಗಿಸಿದಾಗ ಒಂದು ಉತ್ತಮ ಆಕರಗ್ರಂಥ ಓದಿದ ಅನುಭವವಾಯಿತು.
ಜಿ.ಆರ್. ಸಂತೋಷ್ ಅವರು ಧ್ವಜವನ್ನು ವಸ್ತುವಾಗಿ ಆಯ್ಕೆ ಮಾಡಿಕೊಂಡು ಈ ಪುಸ್ತಕ ರಚಿಸಿದ್ದಾರೆ. ಇದು ಒಂದು ರೀತಿಯಿಂದ ನಮ್ಮ ದೇಶದ ವಿವಿಧ ಯುಗಗಳ ಧ್ವಜದ ಚರಿತ್ರೆ, ಆದರೆ ಕೇವಲ ರಾಜಮಹಾರಾಜರ ಧ್ವಜಗಳನ್ನು ಚರ್ಚಿಸದೆ, ಸಾಂಸ್ಕೃತಿಕವಾಗಿ ಮಹತ್ವ ಪಡೆಯುವ, ಜನಸಾಮಾನ್ಯರ, ಮಿಡಿತಕ್ಕೆ ಸ್ಪಂದಿಸುವ ಅಂಶಗಳನ್ನು ಚರ್ಚೆಗೆ ತಂದಿರುವುದು ಸ್ವಾಗತಾರ್ಹ. ಇದರೊಂದಿಗೆ ಹೊಯ್ಸಳ, ವಿಜಯನಗರ ಮೊದಲಾದ ರಾಜವಂಶಗಳ ಧ್ವಜದ ವಿವರಗಳಿವೆ. ಪಾಲಿ ಧ್ವಜದ ಕುರಿತ ವಿಶೇಷ ಅಂಶಗಳು ಒತ್ತಟ್ಟಿಗೆ ಬಂದಿವೆ.

ಸಂತೋಷ್ ಜಿ.ಆರ್ ಕನ್ನಡದ ಉದಯೋನ್ಮುಖ ಲೇಖಕರು ಮತ್ತು ಸಂಶೋಧನ ಪ್ರವೃತ್ತಿಯನ್ನು ಹೊಂದಿರುವ ಅಧ್ಯಯನಕಾರರು. ಸಂಸ್ಕೃತಿ, ತತ್ತ್ವಶಾಸ್ತ್ರ, ಸಾಮಾಜಿಕ ಹಾಗೂ ರಾಜಕೀಯ ಚಿಂತನೆ, ಆರ್ಥಿಕತೆ ಮತ್ತು ಸಂತುಲಿತ ಅಭಿವೃದ್ಧಿ ಈ ಕ್ಷೇತ್ರಗಳಲ್ಲಿ ಸಂಶೋಧನೆಯ ಕಾರ್ಯದಲ್ಲಿ ನಿರತವಾಗಿರುವ Foundation for Indic Research Studies (FIRST) ಸಂಸ್ಥೆಯಲ್ಲಿ ಆಡಳಿತಾಧಿಕಾರಿಗಳಾಗಿದ್ದಾರೆ.
ಇವರು ಮೂಲತಃ ವಿಜ್ಞಾನ ಪದವೀಧರರು, ಕಾರ್ಪೋರೇಟ್ ಉದ್ಯಮ ಕ್ಷೇತ್ರದಲ್ಲಿ ಮಾನವಸಂಪನ್ಮೂಲ ಮತ್ತು ಆಡಳಿತ ನಿರ್ವಹಣೆಯ ವಿಭಾಗಗಳಲ್ಲೂ ಕಾರ್ಯನಿರ್ವಹಿಸಿದ್ದಾರೆ. ವಿದ್ಯಾರ್ಥಿ ಮತ್ತು ಯುವಜನರಲ್ಲಿ ವ್ಯಕ್ತಿತ್ವವಿಕಾಸ ಹಾಗೂ ರಾಷ್ಟ್ರೀಯ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಅನೇಕ ಸ್ವಯಂಸೇವಾ ಸಂಸ್ಥೆಗಳ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಇತಿಹಾಸ, ಸಾಹಿತ್ಯ ಮತ್ತು ಪ್ರಾಚೀನ ವಿಜ್ಞಾನ ಪರಂಪರೆ ಇವರ ಆಸಕ್ತಿಯ ವಿಷಯ. ಇದರೊಟ್ಟಿಗೆ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಷ್ಟ್ರಜಾಗೃತಿಯ ಚಿಂತನೆಗಳನ್ನು ಹೊಂದಿರುವ ನೂರಾರು ಲೇಖನಗಳನ್ನು ಕನ್ನಡದ ಅನೇಕ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದಾರೆ.

ಪ್ರಸ್ತುತ ಪುಸ್ತಕದಲ್ಲಿ ಪ್ರಸ್ತಾವಿತ ಕೆಲ ಅಂಶಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತವೆ.
ಧ್ವಜ, ರಾಷ್ಟ್ರಗೀತೆ ಇವು ನಮ್ಮಲ್ಲಿ ಬೆಚ್ಚನೆಯ ಭಾವನೆ ಮೂಡಿಸದಿದ್ದರೆ ಎಲ್ಲವೂ ವ್ಯರ್ಥ, ರಾಜಕಾರಣಿಯ ಚಾಲಾಕಿತನ, ಸಾಹಿತಿಯ ಆತ್ಮರತಿ, ಪತ್ರಕರ್ತನ ಸ್ವಯಂಘೋಷಿತ ಜ್ಞಾನ ಎಲ್ಲವನ್ನೂ ಮೀರಿದ ಎಳೆಯ ಹುಡುಗಿಯ ಚಂಚಲತೆ, ನಿಷ್ಟುರತೆ, ಕಾವ್ಯಮಯ ಬದುಕು ಧ್ವಜಕ್ಕಿದೆ. ಇಲ್ಲದಿದ್ದರೆ ನೂರಾರು ಸೈನಿಕರು ಧ್ವಜಕ್ಕಾಗಿ ರಕ್ತ ಸುರಿಸಿದ್ದನ್ನು ವಿವರಿಸುವುದು ಕಷ್ಟ, ಧ್ವಜ ಹಾರಿಸಲು ಆದೇಶ ಹೊರಡಿಸುವುದನ್ನು ಬಿಟ್ಟು ಬೇರೆ, ಹೃದಯ ಪರಿವರ್ತನೆಯ ದಾರಿಗಳನ್ನು ಅಧಿಕಾರದಲ್ಲಿರುವವರು ಯೋಚಿಸಬೇಕು.  ಸಂತೋಷ್ ರವರು ಬರೆದಿರುವ ಪುಸ್ತಕ ಇತಿಹಾಸ, ಪರಂಪರೆ ಕುರಿತು ಮೆಚ್ಚುಗೆ, ವಿಮರ್ಶೆ ಎರಡನ್ನೂ ಬೆಳೆಸಿಕೊಳ್ಳಲು ಸಹಾಯ ಮಾಡಿದರೆ ಅವರ ಪರಿಶ್ರಮ ಸಾರ್ಥಕ.  ಯಾವುದೇ ಇತಿಹಾಸದ ಅಧ್ಯಯನ ನಮ್ಮನ್ನು ಒಳಗೇ ನೋಯುವಂತೆ, ಮಾಗುವಂತೆ ಮಾಡಬೇಕು. ಭಾರತದ ಇತಿಹಾಸದಲ್ಲಿ ಧ್ವಜ ಒಂದು ಸಂಕೇತ. ಈಗ ಎಡ, ಬಲ ಎಂದು ಕೃತಕ ಪರಿಮಿತ ಗೆರೆ ಕುಯ್ದುಕೊಂಡು ಮುಕ್ತ ಚರ್ಚೆಯೇ ಸಾಧ್ಯವಾಗುತ್ತಿಲ್ಲ.

ಲೇಖಕರು ಈ ಪುಸ್ತಕದಲ್ಲಿ ಕೇವಲ ರಾಷ್ಟ್ರ ಧ್ವಜದ ಬಗ್ಗೆ ಮಾತ್ರ ಉಲ್ಲೇಖ ಮಾಡಿಲ್ಲ ಬದಲಾಗಿ ವಿವಿಧ ಪ್ರಕಾರದ ಧ್ವಜಗಳು ಅವುಗಳ ಅರ್ಥ ಮತ್ತು ಹಿನ್ನೆಲೆಗಳನ್ನು ಸಚಿತ್ರವಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.
ರಾಮಾಯಣ ಮಹಾಭಾರತದ ಕಾಲದಲ್ಲಿ ಬಳಸಿಕೊಂಡು ಬಂದ ಧ್ವಜಗಳು ಅವುಗಳ ಅರ್ಥ ,ವಿಶ್ವವಿದ್ಯಾಲಯ ಮತ್ತು ರಾಷ್ಟ್ರ ಧ್ವಜದ ಬಗ್ಗೆ ವಿವರಗಳನ್ನು ನೀಡಿರುವರು.ಧ್ವಜ ಶಕುನಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.
ಈ ಪುಸ್ತಕದಲ್ಲಿ ಬರುವ
ಕಣ್ಣುರಿಸಿದ ಹಸಿರು ಧ್ವಜ , ಶೌರ್ಯ ಸಾರಿದ ವೀರರು, ಮೇರೆ ಮೀರಿದ ಕನ್ನಡ ಧ್ವಜಗಳು, ವೀರ ಪರಂಪರೆಯ ಕರುನಾಡ ಧ್ವಜಗಳು ,ಪಾಲಿ ಧ್ವಜದ ವಿಶೇಷತೆ, ಪಾಲಿ ಧ್ವಜಾಧೀಶ ಇಮ್ಮಡಿ ಪುಲಕೇಶಿ,ವಿಶ್ವ ಸಾಮ್ರಾಜ್ಯ ಸ್ಥಾಪಿಸಿದ ರಾಷ್ಟ್ರಕೂಟರು,ಶಾರ್ದೂಲ ಧ್ವಜದ ವಿಜಯಗಾಥೆ, ವಿಜಯನಗರದ ವರಾಹ ಧ್ವಜ,ಕೆಳದಿಯ ಗಂಡಭೇರುಂಡ,ವಿಜಯ್ ಧ್ವಜಸ್ತಂಭಗಳು, ಧ್ವಜತಾರಿಣಿ ನಿವೇದಿತಾ, ಧ್ವಜಯುದ್ಧದಿಂದ ಸ್ವಾತಂತ್ರ್ಯದೆಡೆಗೆ,ಹಾರಾಡಿದ ಸ್ವಾತಂತ್ರ್ಯ ಧ್ವಜಗಳು,ಧ್ವಜಧಾರಿಣಿ ಮೇಡಂ ಕಾಮಾ, ಸ್ವರಾಜ್ಯ ಧ್ವಜ ಚರಕಾಂಕಿತ ತ್ರಿವರ್ಣ, ತ್ರಿವರ್ಣದ ವರ್ಣಸಂಕರ,ಧ್ವಜಾರ್ಪಣೆಗೊಂಡ ನವಸುಮಗಳು ,ಸುಭಾಷರ ವ್ಯಾಘ್ರ ಧ್ವಜ,ಆರೆಸ್ಸೆಸ್ ಮತ್ತು ರಾಷ್ಟ್ರ ಧ್ವಜ.,ಧ್ವಜವೇ ಗುರುವಾದಾಗ , ಕರ್ನಾಟಕದಲ್ಲಿ ಧ್ವಜ ಸತ್ಯಾಗ್ರಹಗಳು
ಮುಂತಾದ ಶೀರ್ಷಿಕೆಯ ಅಧ್ಯಾಯಗಳು ನಮಗೆ ವಿಶೇಷವಾದ ಜ್ಞಾನವನ್ನು ನೀಡುತ್ತವೆ.

ದೇಶವಿದೇಶಗಳಲ್ಲಿ ಈ ಪುಸ್ತಕದ ಬಗ್ಗೆ ಒಳ್ಳೆಯ ಅಭಿಪ್ರಾಯ ಕೇಳಿಬಂದಿದೆ ಕೆಲ ಗಣ್ಯರು ಈ ಪುಸ್ತಕದ ಬಗ್ಗೆ ಆಡಿರುವ ಮಾತುಗಳಲ್ಲಿ ಕೆಲವನ್ನು ಹೇಳುವುದಾದರೆ...
"ಮನೆ ಎಂದ ಮೇಲೆ ಅದಕ್ಕೊಂದು ಸೂರು ಇರಬೇಕಲ್ಲವೇ? ಸಮುದಾಯ ಎಂದರೆ ಅದಕ್ಕೊಂದು ಅಸ್ಮಿತೆ ಇರಬೇಕಲ್ಲವೇ? ದೇಶ ಎಂದ ಮೇಲೆ ಅದನ್ನು ಸಂಕೇತಿಸುವ ಹಲವು ಕಿರೀಟಗಳು ನಮಗೆ ಹೆಮ್ಮೆಯಲ್ಲವೇ? ಈ ಎಲ್ಲ ಪ್ರಶ್ನೆಗಳಿಗೆ ಅಕ್ಷರ ಲೋಕದಲ್ಲಿ ಉತ್ತರ ಕೊಟ್ಟ ಪುಸ್ತಕ 'ಧ್ವಜವೆಂದರೆ ಬಟ್ಟೆಯಲ್ಲ'- ಇದರಲ್ಲಿನ ವಿಷಯ ವಿಸ್ತಾರ, ಚಾರಿತ್ರಿಕ ನಿಖರತೆ, ಸತ್ಯದರ್ಶನ ನಮ್ಮ ಭಾರತೀಯತೆಯ ಹೆಮ್ಮೆಯನ್ನ ಮತ್ತು ಗರಿಮೆಯನ್ನ ಇನ್ನೂ ಗಟ್ಟಿಗೊಳಿಸುತ್ತದೆ. ಓದಿಗೆ ಮನನಕ್ಕೆ ಅರಿವಿಗೆ, ಇಂದು ಅರ್ಥೈಸಿಕೊಳ್ಳಬೇಕಾದ ಪುಸ್ತಕ, ಈ ಅಕ್ಷರ ಜ್ಞಾನ ಎಂದು ಟಿ. ಎಸ್. ನಾಗಾಭರಣ ರವರು ಅಭಿಪ್ರಾಯ ಪಟ್ಟಿದ್ದಾರೆ.
"ನಮ್ಮ ರಾಷ್ಟ್ರಧ್ವಜ ರೂಪುಗೊಂಡ ಬಗೆಯ ಇತಿಹಾಸವನ್ನು ತಿಳಿಸುವುದರೊಂದಿಗೆ ಸ್ವಾತಂತ್ರ್ಯ ಚಳವಳಿಯ ಸ್ವರೂಪದ ಪಕ್ಷಿನೋಟವನ್ನೂ ನೀಡುವ ಈ ಅಪೂರ್ವ ಕೃತಿಯು ಆದಷ್ಟೂ ಬೇಗ ಇಂಗ್ಲಿಷ್ ಮತ್ತು ನಮ್ಮ ದೇಶದ ಇತರ ಪ್ರಮುಖ ಭಾಷೆಗಳಿಗೂ ಅನುವಾದಗೊಂಡು ಭಾರತದ ಸಮಸ್ತ ಮನೆ ಮನಗಳನ್ನು ತಲುಪುವಂತಾಗಲಿ ಎಂಬುದೇ ನನ್ನ ಆಶಯ ಎಂದು ಇತಿಹಾಸ ತಜ್ಞರಾದ ಸುರೇಶ್ ಮೂನ ರವರು ಮೆಚ್ಚುಗೆ ಸೂಚಿಸಿದ್ದಾರೆ.
ಭಾರತೀಯರೆಲ್ಲರೂ ಸಹ ಇಂತಹ ಮೌಲಿಕ ಕೃತಿಯನ್ನು ಓದಿ ನಮ್ಮ ಧ್ವಜ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡಬೇಕಿದೆ
ನೀವೂ ಸಹ ಓದುವಿರಲ್ಲವೆ?

ಪುಸ್ತಕದ ಹೆಸರು: ಧ್ವಜವೆಂದರೆ ಬಟ್ಟೆಯಲ್ಲ .
ಲೇಖಕರು: ಸಂತೋಷ್ ಜಿ ಆರ್
ಪ್ರಕಾಶನ: ಹಂಸ ಪ್ರಕಾಶನ. ಬೆಂಗಳೂರು.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ


ಅಪ್ಪ ಅಂದ್ರೆ ಆಕಾಶ...


 


ಅಪ್ಪ ಅಂದ್ರೆ ಆಕಾಶ. 
ವಿಮರ್ಶೆ.೪೫
ಬಹುತೇಕ ದಿನಪತ್ರಿಕೆಗಳಲ್ಲಿ ಓದಿದ್ದ ಲೇಖನಗಳ ಗುಚ್ಛ ಒಂದೇ ಕಡೆ ಓದುವ ಅವಕಾಶ ಅಪ್ಪ ಅಂದ್ರೆ ಆಕಾಶ  .ಒಮ್ಮೆ ಓದಿ ಸುಮ್ಮನಿದ್ದರೆ ಸಾಲದು ಆಗಾಗ್ಗೆ ಓದುವ ನಮಗೆ ಚೈತನ್ಯ ನೀಡುವ ಘಟನೆಗಳ ಕಣಜ ಇದು.ಇದರ ಕತೃ ಆತ್ಮೀಯರು ಸಜ್ಜನರಾದ ಎ ಆರ್ ಮಣಿಕಾಂತ್ ರವರು.
ಎ ಆರ್ ಮಣಿಕಾಂತ್
ಜನಿಸಿದ್ದು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆಯಿತನಹಳ್ಳಿ, ಓದಿದ್ದು ಮಂಡ್ಯದ ಪಿ.ಇ.ಎಸ್. ಕಾಲೇಜಿನಲ್ಲಿ ಬಿ.ಇ ಆಟೊಮೊಬೈಲ್, ಒಲಿದಿದ್ದು ಪತ್ರಿಕೋದ್ಯಮ. ಮೊದಲು ಹಾಯ್ ಬೆಂಗಳೂರ್, ನಂತರ ಸಂಯುಕ್ತ ಕರ್ನಾಟಕ, ಆನಂತರ ವಿಜಯ ಕರ್ನಾಟಕದಲ್ಲಿನೌಕರಿ. ವಿಜಯ ಕರ್ನಾಟಕದಲ್ಲಿ ಬರೆಯುತ್ತಿದ್ದ 'ಉಭಯ ಕುಶಲೋಪರಿ ಸಾಂಪ್ರತ', 'ಹಾಡು ಹುಟ್ಟಿದ ಸಮಯ', 'ಮರೆಯಲಿ ಹ್ಯಾಂಗ', 'ಈ ಗುಲಾಬಿಯು ನಿನಗಾಗಿ' ಅಂಕಣಗಳು ಸಕಲೆಂಟು ಮಂದಿಯ ಮೆಚ್ಚುಗೆಗೆ  ಪಾತ್ರವಾದವು.  ಪ್ರಕಟವಾಗಿರುವ ಪುಸ್ತಕಗಳಲ್ಲಿ.  'ಹಾಡು ಹುಟ್ಟಿದ ಸಮಯ ಮತ್ತು ಈ ಗುಲಾಬಿಯು ನಿನಗಾಗಿ ಪುಸ್ತಕಗಳು ತಲಾ ನಾಲ್ಕು ಮುದ್ರಣಗಳನ್ನು ಕಂಡಿವೆ. 'ಅಮ್ಮ ಹೇಳಿದ ಎಂಟು ಸುಳ್ಳುಗಳು' 60 ತಿಂಗಳಲ್ಲಿ 75,000 ಪ್ರತಿಗಳು ಮಾರಾಟವಾಗಿ ದಾಖಲೆ ಸ್ಥಾಪಿಸಿರುವ ಪುಸ್ತಕ. ಈ ಪುಸ್ತಕಕ್ಕೆ ಸೇಡಂನ 'ಅಮ್ಮ' ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.

ಮಣಿಕಾಂತ್ ರವರ  ಬರಹಕ್ಕೆ ಒಂದು ಚಂದದ ಶೈಲಿ ಸಿದ್ಧಿಸಿದೆ. ಇಂಥ ಬರವಣಿಗೆಗೆ ಹೇಳಿ ಮಾಡಿಸಿದ ಶೈಲಿ ಅದು! ಇಲ್ಲಿರುವ ಹಲವಾರು ಕತೆಗಳನ್ನು ಅವರು ಪ್ರತ್ಯಕ್ಷ ನೋಡಿ ಬರೆದಿದ್ದಾರೆ, ಕೇಳಿ ಬರೆದಿದ್ದಾರೆ. ಅಂತರ್ಜಾಲದಿಂದ ಬಸಿದುಕೊಂಡು ಬರೆದಿದ್ದಾರೆ. 'ಒಂದು ಮಾವಿನಮರ', 'ಒಬ್ಬ ಹುಡುಗ ಮತ್ತು ನಾವು ನೀವು...', 'ಪ್ರಾರ್ಥನೆ' ಇಂಥ ಕತೆಗಳನ್ನು ತನ್ನ ಕಲ್ಪನೆಯಿಂದ ಕಡೆದು ಬಿಡಿಸಿದ್ದಾರೆ. ಕೆಲವು ಕತೆಗಳ ಪಾತ್ರಗಳೊಂದಿಗೆ ಮಾತಾಡಿದ್ದಾರೆ! 'ಅಮ್ಮ ಮತ್ತು ಒಂದು ರೂಪಾಯಿ', 'ಅಪ್ಪ ಅಂದ್ರೆ ಆಕಾಶ' - ಕತೆಗಳಲ್ಲಿ ತಾವೇ ಪಾತ್ರವಾಗಿದ್ದಾರೆ! ಇಲ್ಲಿರುವ ಅಷ್ಟೂ 'ಕತೆ'ಗಳಲ್ಲಿ ಮಾತಿನ ತೇವ ಆರದಂತೆ, ತಾವೇ  ಎದುರುಕೂತು ಮಾತಾಡಿದಂತೆ 'ಕತೆ' ಹೇಳಿದ್ದಾರೆ.

ಮಣಿಕಾಂತ್ ರವರುಬರೆಯಲು ಆರಿಸಿಕೊಳ್ಳುವ ಕತೆಗಳಲ್ಲೇ ಅವರ  ಮನಸ್ಸು ಅರ್ಥವಾಗುತ್ತದೆ.  ತನ್ನ ತಮ್ಮ ತಂಗಿಯರಂಥ ಹುಡುಗ ಹುಡುಗಿಯರು ಸೋತು ಕೈಚೆಲ್ಲಿದಾಗ ಅವರನ್ನೊಂದಿಷ್ಟು ಚಂದದ ಬದುಕಿಗೆ ತಿರುಗಿಸಬೇಕೆನ್ನುವ ತಹತಹವಿದೆ. ಸ್ವತಃ ಭಾವುಕರಾದ  ಅವರಿಗೆ ಒಂದು ಭಾವನಾ ಪ್ರಪಂಚವನ್ನು ತನ್ನ ಹೊರಗೂ ಕಟ್ಟಬೇಕೆಂಬ ಆಸೆಯಿದೆ. ಹಾಗಾಗಿ ಅವರ ಬರಹಗಳೆಲ್ಲ ಇಂಥ ಆಸೆಗೆ ಸಾಕ್ಷಿಯಾಗುತ್ತವೆ - ತೋಡಿದ್ದಕ್ಕೆ ಜಲವೇ ಸಾಕ್ಷಿಯಾಗುವಂತೆ!

ಇವರ ಬರವಣಿಗೆಯಲ್ಲಿ ಅವರದೇ ಒಂದು 'ರಿದಂ' ಇದೆ. ಒಂದು ಲಾಲಿತ್ಯವಿದೆ. ಭಾಷೆಯನ್ನು ತೀರಾ ಅಲಂಕಾರಗಳಿಂದ ತುಂಬದೆಯೂ ಅದಕ್ಕೆ ಒಂದು ಲಾಲಿತ್ಯವನ್ನು ಲಯವನ್ನು ನೀಡುವಂಥ ಕಲಾವಂತಿಕೆ ಇದೆ. ಅದರಲ್ಲೂ ತನ್ನ ಬರಹಗಳೊಳಗಿನ ಪಾತ್ರಗಳನ್ನು ಮಾತನಾಡಿಸುವಾಗ ಮಣಿರವರ  ಬರವಣಿಗೆ ಸೂಪರ್, ಬಹುಪಾಲು ಪಾತ್ರಗಳು ಆಡುವ ಮಾತು ಮಣಿಯವರದೇ ! ಅಲ್ಲಿ ಮಾತಾಡುವುದು ಆ ಪಾತ್ರಗಳಲ್ಲಿ ವ್ಯಕ್ತಿಗಳು ಮಣಿಕಾಂತ್ ರವರ ಗುಣಗ್ರಾಹಿ ಮನಸ್ಸು ನಿರ್ವ್ಯಾಜ ಅಂತಃಕರಣ!

ಈ ಪುಸ್ತಕದ ಎಲ್ಲಾ ಅಧ್ಯಾಯಗಳು ಇಷ್ಟವಾದರೂ ಕೆಲವು ನನ್ನ ಈಗಲೂ ಕಾಡುತ್ತಿವೆ ಅವುಗಳು ...ಎಮ್ಮೆ ಕಾಯುತ್ತಿದ್ದ ಹುಡುಗ ಎಂ.ಎ ಮಾಡಿದವರನ್ನೂ ಮೀರಿಸಿದ,ಅಮ್ಮ ಮತ್ತು ಒಂದು ರುಪಾಯಿ... ಮಕ್ಕಳನ್ನು ಕಳೆದುಕೊಂಡವರು ,
ಅಪ್ಪನಿಂದ ಅನಿಷ್ಟ ಅನ್ನಿಸಿಕೊಂಡವಳು, ಮಿಸ್ ಇಂಡಿಯ ಆದಳು,ಈ ಡಿ.ಸಿ.ಗೆ ವರ್ಗವಾದರೆ ಜನ ಬೀದಿಗಿಳಿದು ಪ್ರತಿಭಟಿಸುತ್ತಾರೆ,
ಟ್ಯೂಶನ್ ಮಾಡಿ ಕೋಟಿ ದುಡಿದ!
'ನೆನಪಿಲ್ಲ' ಎಂದವಳನ್ನೂ ನೆಪ ಹೇಳದೆ ಮದುವೆಯಾದೆ,ಬೇಕರಿಯಲ್ಲಿ ಕ್ಲೀನರ್ ಆಗಿದ್ದ ಹುಡುಗ ಬಾನೆತ್ತರ ಬೆಳೆದ , ಆತ ಒಂದೇ ಬೆರಳಲ್ಲಿ ಪರೀಕ್ಷೆ ಬರೆದು ಡಿಸ್ಟಿಂಕ್ಷನ್ ಪಡೆದ , ಒಂದು ಲೋಟ ಹಾಲಿನ ರೂಪದಲ್ಲಿ ಹಣ ಸಂದಾಯವಾಗಿದೆ,
ಇನ್ನೇಕೆ ತಡ ನೀವೂ ಪುಸ್ತಕ ಖರೀದಿಸಿ ಒಮ್ಮೆ ಓದಿಬಿಡಿ ಕೆಲ ಘಟನೆಗಳು ನಿಮ್ಮನ್ನು ಕಾಡದೇ ಬಿಡವು.

ಪುಸ್ತಕ: ಅಪ್ಪಾ ಅಂದ್ರೆ ಆಕಾಶ
ಲೇಖಕರು: ಎ ಆರ್ ಮಣಿಕಾಂತ್
ಬೆಲೆ: 130
ಪ್ರಕಾಶನ: ನೀಲಿಮಾ ಪ್ರಕಾಶನ ಬೆಂಗಳೂರು.

ಜಲದೀವಿಗೆ .ಪುಸ್ತಕ ವಿಮರ್ಶೆ


 

జలದೀವಿಗೆ 

ಇಂದ್ರಕುಮಾರ್ ರವರು ಜಲದೀವಿಗೆ ಪುಸ್ತಕದಲ್ಲಿ   ಮತ್ತೆಮತ್ತೆ ಪ್ರತಿಪಾದಿಸುವುದು ಶ್ರಮ ಸಹಿತವಾದ ಬದುಕಿನ ಸಮೃದ್ಧತೆಯನ್ನು, ಸುಖವನ್ನು, ದೇಹಶ್ರಮವಿಲ್ಲದ ಕೇವಲ ಬೌದ್ಧಿಕ ಶ್ರಮವನ್ನು ಮಾತ್ರ ಮಾಡುತ್ತ ನಗರದಲ್ಲಿ ಬದುಕುತ್ತಿರುವ ಒಂದು ಬಹುದೊಡ್ಡ ಸಮುದಾಯ ನಿಜವಾದ ಅರ್ಥದಲ್ಲಿ ವಿಶೇಷ ಚೇತನ  ಸಮಾಜ, ತನ್ನ ವಿಕಲತೆಯನ್ನು ಮರೆಮಾಚುವುದಕ್ಕಾಗಿ ಅದು ಜಿಮ್ಗಳನ್ನೋ, ವ್ಯಾಯಾಮಕೇಂದ್ರಗಳನ್ನೋ, ಸ್ಪಾಗಳನ್ನೋ ತೆರೆದುಕೂತಿದೆ. ಮೈಮುರಿದು ದುಡಿಯುವ ಸಂಸ್ಕೃತಿಯಿಂದ ದೂರವಾದ ಜನರು ತಾವಾಗಿಯೇ ರೋಗಗಳ ಅವಾಸಸ್ಥಾನವಾಗುತ್ತಾರೆ. ಹಾಗಾಗಿ ಶ್ರಮದ ಬದುಕಿಗೆ ಮರಳೋಣ ಬನ್ನಿ ಎಂಬ ಕರೆಯನ್ನು ಅನೇಕ ಶ್ರಮಜೀವಿಗಳ ಕಥನಗಳ ಮೂಲಕ ಇಂದ್ರಕುಮಾರ್ ಅವರು ನಮಗೆ ಕೊಡುತ್ತಾರೆ. ಇಲ್ಲೇ ಸ್ವಾಮಿ ಏವೇಕಾನಂದರ ಒಂದು ಮಾತನ್ನು ನೆನಪಿಸುವುದು ಸೂಕ್ತ. "ಮೂರು ಹೊತ್ತು ಧ್ಯಾನ ಮಾಡುವುದು, ನಮಾಜ್ ಮಾಡುವುದು ಆಧ್ಯಾತ್ಮಿಕತೆಯಲ್ಲ, ಶ್ರಮಪಡುವುದು, ಶ್ರಮವನ್ನು ಸುಖ ಎಂದು ಭಾವಿಸುವುದು, ಶ್ರಮದ ಮೂಲಕವೇ ಧ್ಯಾನ ನಡೆಸುವುದು ನಿಜವಾದ ಆಧ್ಯಾತ್ಮಿಕತೆ". ಈ ಮಾತಿನ ಅರ್ಥವನ್ನು ಅರಿತಂತೆ ಇಂದ್ರಕುಮಾರ್ ಅವರು 'ಜಲ ದೀವಿಗೆ' ಪುಸ್ತಕದ ಮೂಲಕ ನಮಗೆ ದರ್ಶನ ಮಾಡಿಸುವವರೆಲ್ಲರೂ ನಿಜವಾದ ಅರ್ಥದಲ್ಲಿ ಶ್ರಮಯೋಗಿಗಳೇ ಆಗಿದ್ದಾರೆ. ಸತ್ಯಮೇವ ಜಯತೇ ಎಷ್ಟು ಮುಖ್ಯವೋ ಶ್ರಮಮೇವ ಜಯತೇ ಕೂಡ ಅಷ್ಟೇ ಮುಖ್ಯ ಎಂಬುದನ್ನು ಒಂದು ತತ್ತ್ವದಂತೆ ತಮ್ಮ ಈ ಪುಸ್ತಕದ ಮೂಲಕ ಪ್ರತಿಪಾದಿಸಿದ್ದಾರೆ.

ಪರಿಸರ, ನೀರು, ವನ್ಯಜೀವಿಗಳ ಸಂರಕ್ಷಣೆ, ನೈಸರ್ಗಿಕ ಮತ್ತು ಸಹಜ ಸಮೃದ್ಧ ಕೃಷಿ ಬಗ್ಗೆ ಹೆಚ್ಚು ಅರಿತಿದ್ದ  ಜಿ ಇಂದ್ರಕುಮಾರ್ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಹಲವಾರು ಬರಹಗಳನ್ನು ಆಗಾಗ್ಗೆ ಬರೆಯುತ್ತಿದ್ದರು ಸಂಯುಕ್ತ ಕರ್ನಾಟಕದ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು, ಆ ಪತ್ರಿಕೆಯಲ್ಲಿ ಪ್ರತಿವಾದ ಅರಣ್ಯ, ನೀರು, ಪರಸರ ಸಂರಕ್ಷಣೆ ಕುರಿತು ಲೇಖನಗಳು ಪ್ರಕಟವಾಗಿವೆ. ಶುಮಕೂರು ನಗರದ ವಾರ್ಡ್ ನಂ.೧ಕ್ಕೆ ಸೇರುವ ಐತಿಹಾಸಿಕ ಮಹತ್ವ ಪಡೆದಿರುವ ಡಿ.ಎಂ.ಪಾಳ್ಯದವರು. ಕೃಷಿಕ ಮೂಲದ ಮನೆತನದವರು, ಎಂ.ಎ. ಓದಿದ್ದು, ಬರವಣಿಗೆಯಲ್ಲಿ ತಮ್ಮದೆ ಆದ ಛಾಪು ಮೂಡಿಸಿಕೊಂಡಿದ್ದರು.ಕನ್ನಡ ಪುಸ್ತಕ ಪ್ರಾಧಿಕಾರ ಅವರ ಪ್ರಥಮ ನಾಟಕ 'ಸಾಲವತಿ'ಯನ್ನು ಪ್ರಕಟಿಸಿತ್ತು . ಈ ನಾಟಕಕ್ಕೆ ಅಖಿಲ ಭಾರತ ಕನ್ನಡ ನಾಟಕ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಬಂದಿದೆ. ನಾಟಕ, ಕಾವ್ಯ, ಕಥೆಗಳ ರಚನೆ, ಇತಿಹಾಸ ಸಂಶೋಧನೆ ಜೊತೆಗೆ ಬಹುಮುಖ ಪ್ರತಿಭೆಯಾಗಿದ್ದರು.
ಜಲದೀವಿಗೆ ಪುಸ್ತಕದಲ್ಲಿ 35 ಲೇಖನಗಳಿದ್ದು   ಈ ಪುಸ್ತಕ ವಿಶೇಷವಾಗಿ ತುಮಕೂರಿನ ಜಲಸಾಕ್ಷರತೆಯ ಬಗ್ಗೆ ಅತೀವ ಕಾಳಜಿಯನ್ನು ಇಟ್ಟುಕೊಂಡಿದೆ. ತುಮಕೂರು ತಾಲ್ಲೂಕಿನ ದೇವರಾಯನದುರ್ಗದ ಬೆಟ್ಟಗಳ ತಪ್ಪಲಿನಲ್ಲಿ ಎಲೆಮರೆಯ ಕಾಯಿಯಂತೆ ಕೆಲಸ ಮಾಡುತ್ತಿರುವ ದುರ್ಗದನಾಗೇನಹಳ್ಳಿಯ ಮಹೇಶ ಎಂಬ ಯುವಕನಿಂದ ತೊಡಗಿ ಮಾನ್ಯ ಶ್ರೀ ಸಿದ್ದರಾಮಯ್ಯನವರ ಸರಕಾರದಲ್ಲಿ ದಕ್ಷ ಮಂತ್ರಿಯಾಗಿ ಕೆಲಸ ಮಾಡಿದ್ದ ಟಿ ಬಿ ಜಯಚಂದ್ರ ಅವರ ಜಲಸಾಹಸಗಳವರೆಗೆ ಈ ಪುಸ್ತಕ ಬೆಳಕು ಚೆಲ್ಲುತ್ತದೆ.

ಬರಗಾಲವನ್ನು ಮೆಟ್ಟಿ ನಿಲ್ಲುವುದು ಹೇಗೆ ಎಂದು ತೋರಿಸಿದ ರೈತರ ಸಾಹಸದ ಕಥನಗಳು, ತಲಪರಿಗೆಗಳ ಮಹತ್ವ ಮತ್ತು ಅವುಗಳನ್ನು ಕಾಪಿಟ್ಟುಕೊಂಡಿರುವ ಜಲಯೋಧರ ದಿಟ್ಟತನದ ಕಥನಗಳು ಈ ಪುಸ್ತಕದ ಶಕ್ತಿಯನ್ನು ಹೆಚ್ಚಿಸಿವೆ. ಅತಿಕಡಿಮೆ ನೀರಿನಲ್ಲಿ ತನ್ನ ತೋಟಗಳನ್ನು ಉಳಿಸಿಕೊಳ್ಳುವುದು ಹೇಗೆ ಎಂಬುದರ ಕುರಿತು ಯೋಚನೆ ಮಾಡಿ ಯಶಸ್ಸುಗಳಿಸಿದ ಕಾಮಣ್ಣನಂಥವರನ್ನು ಇಂದ್ರಕುಮಾರ್ ಅವರು ಕೃಷಿ ವಿಜ್ಞಾನಿ ಎಂದು ಕರೆದಿರುವುದು ಅತ್ಯಂತ ಅರ್ಥಪೂರ್ಣವಾಗಿದೆ. ಇಂತಹ ಹತ್ತು-ಹಲವು ಸಜೀವ ನಿದರ್ಶನಗಳನ್ನು ಇಂದ್ರಕುಮಾರ್ ಅವರು ಕೊಡುತ್ತ ಪೇಟೆ-ಪಟ್ಟಣಗಳ ಕಿಷ್ಕಿಂಧೆಯಂತಹ ಉಸಿರುಗಟ್ಟಿಸುವ ವಾತಾವರಣದಲ್ಲಿ ತಮ್ಮ ಬದುಕನ್ನು ಸವೆಸುತ್ತ,  ಬಂದಿರುವ ಹಳ್ಳಿಯ ಯುವಕರನ್ನು ಕೃಷಿಯ ಸಮೃದ್ಧ ಬದುಕಿನ ಕಡೆಗೆ ಕೈಬೀಸಿ ಕರೆಯುವ ಪ್ರಯತ್ನವನ್ನು ಈ ಪುಸ್ತಕದಲ್ಲಿ ಮಾಡಿರುವುದು ಸ್ತುತ್ಯಾರ್ಹ ಕೆಲಸವಾಗಿದೆ.

ಇಂದ್ರಕುಮಾರ್ ಅವರ ಈ ಪುಸ್ತಕದಲ್ಲಿನ ಒಂದು ಸ್ಥಾಯಿ ಗುಣವೆಂದರೆ ಪರಿಸರ ಕುರಿತ ಆಳವಾದ ಕಾಳಜಿಯನ್ನು ಧರಿಸಿರುವುದು ಈ ಕಾಳಜಿ ಇಲ್ಲಿನ
ಪ್ರತಿಯೊಂದು ಲೇಖನಗಳಲ್ಲೂ ಸತತವಾಗಿ ಹರಿಯುತ್ತಿದೆ. ಆಧುನಿಕ ಕಾಲದಲ್ಲಿ ಒಂಚೂರು ಬೆವರು ಸುರಿಸದ ಜನರು ಸುಲಭ ಜೀವಿಗಳಾಗಿ ರೂಪಾಂತರ ಗೊಂಡಿದ್ದಾರೆ. ಇಡೀ ಜಗತ್ತಿಗೆ ಕೊಳ್ಳುಬಾಕತೆಯ  ರೋಗ ತಗುಲಿದ ಕಾರಣದಿಂದ, ಭೂಮಿ ತನ್ನ ಮರು ಉತ್ಪಾದನಾ ಶಕ್ತಿಯನ್ನು ಕಳೆದುಕೊಂಡಿದೆ. ಇಂತಹ ಬಂಜೆತನವನ್ನು ನಿವಾರಿಸುವುದು ಹೇಗೆ ಎಂಬುದರ ಬಗೆಗೂ ಇಂದ್ರಕುಮಾರ್ ಚಿಂತನೆ ನಡೆಸಿದ್ದಾರೆ.
ಒಟ್ಟಾರೆ ಹೇಳುವುದಾದರೆ ಈ ಜಲದೀವಿಗೆ ಪುಸ್ತಕ ಪರಿಸರದ ಬಗ್ಗೆ ಕಾಳಜಿ ಇರುವ ಸಮಾಜಮುಖಿ ಚಿಂತನೆಯ ಪುಸ್ತಕ ಎಲ್ಲರೂ ಓದಲೇಬೇಕಾದ ಪುಸ್ತಕ ಎಂದು ಹೇಳಬಹುದು.

ಪುಸ್ತಕದ ಹೆಸರು: ಜಲದೀವಿಗೆ
ಪ್ರಕಾಶನ: ಗೋಮಿನಿ ಪ್ರಕಾಶನ ತುಮಕೂರು
ಬೆಲೆ: 110

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು

ಸೀರೆಯಲಿ ನಾರಿ


 #ಸೀರೆಯಲಿ_ನಾರಿ 


ಚೂಡಿದಾರ್, ಗಾಗ್ರ, 

ನೈಟಿ, ಮಿಡಿ ಈಗೆ

ಹೆಂಗಸರಉಡುಗೆಗಳು

ಒಂದೇ ಎರಡೇ?  ತರಹೇವಾರಿ 

ಅದೇನೋ ಕಾಣೆ 

ನೋಡುವುದೇ ಚಂದ

ಸೀರೆಯಲಿ ನಾರಿ ||


#ಸಿಹಿಜೀವಿಯ_ಹನಿ 

04 August 2022

ಮಾಗದೇಯ ಪುಸ್ತಕ ವಿಮರ್ಶೆ....

 


ವಿಮರ್ಶೆ ೪೩

ಮಾಗದೇಯ 


ಸದ್ಯೋಜಾತ ಭಟ್ಟರು ಬರೆದ ಐತಿಹಾಸಿಕ ಸತ್ಯಗಳ ವಿಶ್ಲೇಷಣೆಯ ಪುಸ್ತಕ ಮಾಗದೇಯ. ಸದ್ಯೊಜಾತ ಭಟ್ಟರ ಮಿಹಿರ ಕುಲಿ ಓದಿದ ನಾನು ಕುತೂಹಲದೊಂದಿಗೆ ಓದಲು ಆರಂಭಿಸಿದೆ. ಮುನ್ನೂರಾ ಎಂಟು ಪುಟಗಳ ಈ ಪುಸ್ತಕ ಓದಿ ಮುಗಿಸಲು ಒಂದು ವಾರ ಬೇಕಾಯಿತು. ಪುಸ್ತಕ ಓದಿ ಮುಗಿಸಿದ ಮೇಲೆ ಇತಿಹಾಸದ ಶಿಕ್ಷಕನಾದ ನನಗೆ ಇತಿಹಾಸದ ಕೆಲ ಹೊಸ ಅಂಶಗಳು ತಿಳಿದವು . 


ಹಿಂದಿನ ಅವರ ಪುಸ್ತಕಗಳಂತೆ ಈ ಪುಸ್ತಕದಲ್ಲಿಯೂ ಸಹ ಅವರು ತಮ್ಮ ಶಿಷ್ಯೆಯಾದ ಮಹತಿಯೊಂದಿಗೆ ಸಂವಾದ ಮಾಡುತ್ತಾ ವಿಷಯ ನಿರೂಪಣೆ ಮಾಡುವ ತಂತ್ರ ಮಾಗದೇಯ ದಲ್ಲೂ ಮುಂದುವರೆದಿದೆ.ಘಟನೆಗಳನ್ನು ಐತಿಹಾಸಿಕ, ಪೌರಾಣಿಕ ಮತ್ತು ಮಹಾಗ್ರಂಥಗಳ ಆಧಾರದ ಮೇಲೆ ವಿಶ್ಲೇಷಣೆಯ ಮೂಲಕ ವಿವರಿಸುವ ರೀತಿ ನಿಜಕ್ಕೂ ನನಗೆ ಬಹಳ ಇಷ್ಟವಾಯಿತು.


'ದೇವಾನುಪ್ರಿಯ'ನೆನ್ನಿಸಿಕೊಂಡ ಇತಿಹಾಸಪುರುಷ  ಎಂಬ ಮೊದಲ ಅದ್ಯಾಯದಲ್ಲಿ ಬಿಂಬಿಸಾರ ಮತ್ತು ಸಮುದ್ರ ಗುಪ್ತರ ಬಗ್ಗೆ ನಾವು ಕೇಳಿರದ ವಿವಿಧ ವಿಷಯಗಳ ಬಗ್ಗೆ ಬೆಳಕು ಚೆಲ್ಲಿದೆ.

ಮಿಥಿಲೆಯ ಹಾದಿಯಲ್ಲಿ ರಾಮ ಎಂಬ ಅಧ್ಯಾಯದಲ್ಲಿ ಜನಕ, ಸೀತೆ, ರಾಮ, ಮುಂತಾದ ಪೌರಾಣಿಕ ಪಾತ್ರಗಳ ಬಗ್ಗೆ ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ನಮ್ಮನ್ನು ಚಿಂತನೆಗೆ ಹಚ್ಚುತ್ತವೆ.

ಜಾತಕಉಲ್ಲೇಖಗಳು,ಪುರಾಣೋಲ್ಲಿಖಿತ,ವೈಶಾಲಿಯ ರಾಜ ವಂಶ , ಮಗಧದ ಭೌಗೋಳಿಕ ಅವಲೋಕನ, ಇತಿಹಾಸದತ್ತ ,ಆರ್ಯರು ಮತ್ತು ವ್ರಾತ್ಯರು,ಸೂತಪುರಾಣಿಕರು,ಇನ್ನಷ್ಟು ವಂಶಾವಳಿ,ಪಿತೃಲೋಕದ ಹೆಬ್ಬಾಗಿಲು ಗಯಾ ಮುಂತಾದ ಅದ್ಯಾಯಗಳು ಒಂದಕ್ಕಿಂತ ಒಂದು ಹೊಸ ಚಿಂತನೆಗೆ ಹಚ್ಚಿ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತವೆ. 


ಸೇತೂರಾಮ್ ರವರು ಪುಸ್ತಕದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹೀಗೆ ದಾಖಲಿಸಿದ್ದಾರೆ .ಸದ್ಯೋಜಾತ ಭಟ್ಟರು  ಮಾಗಧೇಯದಲ್ಲಿ ಅಲೆಕ್ಸಾಂಡರ್ನ ಪೂರ್ವದ ಕಾಲಮಾನದ ಇತಿಹಾಸ ಬಿಚ್ಚಿಟ್ಟಿದ್ದಾರೆ. ಚಾಣಕ್ಯ ಚಂದ್ರಗುಪ್ತರ ಕಾಲ ಕ್ರಿಸ್ತಪೂರ್ವ' ೧೫೩೪. ಅಲೆಕ್ಸಾಂಡರನ ಕಾಲ ಕ್ರಿಸ್ತಪೂರ್ವ ೩೨೭. ಗ್ರೀಕ್ ಲೇಖಕರು ಅವರ ಕಾಲದಲ್ಲಿದ್ದ ಚಂದ್ರಮಸು ಅನ್ನುವವನನ್ನು ಉಲ್ಲೇಖಿಸಿದ್ದಾರಂತೆ. ಇವನನ್ನೇ ಇತಿಹಾಸಕಾರರು ಚಂದ್ರಗುಪ್ತ ಎಂದು ಬಣ್ಣಿಸಿದ್ದಾರಂತೆ ಇಷ್ಟು ಮಾಹಿತಿಗಳನ್ನು ಶ್ರೀಯುತರು ಆಧಾರ ಪ್ರಮಾಣ ಸಮೇತ ಉಲ್ಲೇಖಿಸುತ್ತಾರೆ. ಹೀಗಿದ್ದೂ ಇತಿಹಾಸಕಾರರು ಕ್ರಿಸ್ತ ಪೂರ್ವ ೧೫೩೪ರ ಚಂದ್ರಗುಪ್ತ ಚಾಣಕ್ಯರನ್ನು ಅಲೆಕ್ಸಾಂಡರನ ಕಾಲಕ್ಕೆ ತಂದು ಸುಮಾರು ೧೨೦೦ ವರ್ಷಗಳ ಈ ದೇಶದ ಇತಿಹಾಸವನ್ನೇ ಮುಚ್ಚಿಟ್ಟಿದ್ದಾರೆ. ಈ ದೇಶದ ಅರಿವಿಗೆ ಮಾಗಧೇಯ ಮುಖ್ಯವಾಗತ್ತೆ.

ಇತಿಹಾಸ ಮರೆತ ಸಮುದಾಯಕ್ಕೆ ಭವಿಷ್ಯ ಇರಲ್ಲ ಹಾಗಾಗಿ ಇತಿಹಾಸ ಮುಖ್ಯ ಸಾಧನೆ ಸಂಶೋಧನೆಗಳೆಲ್ಲ. ವ್ಯಕ್ತಿ ಮೂಲಕವೇ ಹೊರತು ಸಂಸ್ಥೆ ಮೂಲಕವಲ್ಲ, ಈ ನಿಟ್ಟಿನಲ್ಲಿ ಶ್ರೀಯುತರ ಪ್ರಯತ್ನ ಸ್ತುತ್ಯಾರ್ಹ ಮಾತ್ರವಲ್ಲ ಶ್ಲಾಘನೀಯವೂ ಕೂಡಾ. ಪ್ರಸ್ತುತದಲ್ಲಿ ಅದು ಮುಖ್ಯವೂ ಹೌದು.

ಮಗಧರ ಕಾಲಜ್ಞಾನದಿಂದ ಆಧುನಿಕ ಕಾಲಮಾಪನದವರೆಗಿನ ವರಾಹಮಿಹಿರರ ಕಾಲಜ್ಞಾನ, ಆರ್ಯಭಟರ ಸಿದ್ಧಾಂತ, ಕೊನೆ ಇಲ್ಲದ ಬಾನಿನಲ್ಲಿ ಭಾನುವಿನ ಹೆಜ್ಜೆಗಳನ್ನು ಕಾಲಮಾಪನದಲ್ಲಿ ಉಪಯೋಗಿಸುವ ತಂತ್ರ, ನಿರಂತರವಾಗಿರುವ ಕಾಲದ ಪ್ರವಾಹವನ್ನು ಕೊನೆಯಿಲ್ಲದ ವರ್ತುಲಗಳಲ್ಲಿ ವಿಂಗಡಿಸುವ ನೈಪುಣ್ಯ ಅವುಗಳಿಗೆ ಹೊಸಭಾಷ್ಯಗಳನ್ನು ಒದಗಿಸುವ ಸಾಧ್ಯತೆಗಳು, ಇವೆಲ್ಲ ನಮ್ಮನ್ನು ಬಡಿದೆಬ್ಬಿಸಿದುದರಿಂದ ಆ ಹೆಸರು ಯಾಕೋ ಬಹಳ ವಿಚಿತ್ರವೆನಿಸಿತು. ಗ್ರಂಥವನ್ನು ಪೂರ್ಣವಾಗಿ ಓದಿದ ಮೇಲೆ ಎಲ್ಲವೂ ತಿಳಿಯದಿದ್ದರೂ ಕಾಲಕ್ಕೆ ಇನ್ನೊಂದು ಆಧ್ಯಾತ್ಮಿಕ ಆಯಾಮವು ಇರುವ ಸಾಧ್ಯತೆ ತಿಳಿದು ಸಂತೋಷವಾಯಿತು. ಸದ್ಯೋಜಾತರ ಗ್ರಂಥ 'ಮಾಗಧೇಯ' ಏನೋ ಹೊಸತನ್ನು ಹೇಳಲಿದೆ ಎನ್ನುವ ನಿರೀಕ್ಷೆ ಹುಸಿಯಾಗಲಿಲ್ಲ ಎಂಬ ಕೆ ಪಿ ರಾವ್ ರವರ ಮಾತುಗಳನ್ನು ಯಾರೂ ಅಲ್ಲಗಳೆಯಲಾರರು.


ಸದ್ಯೋಜಾತ ಭಟ್ಟರು ಬಹುಮುಖ ಪ್ರತಿಭೆಯನ್ನು ಉಳ್ಳವರು, ಸಂಸ್ಕೃತ ಭಾಷೆಯ ಮೇಲೆ ಅತ್ಯುತ್ತಮ ಹಿಡಿತವನ್ನು ಹೊಂದಿರುವವರು. ಶಾಸನಗಳನ್ನು ಓದಲು ತಿಳಿದವರು. ಹಾಗಾಗಿ ಇವರು ತಮ್ಮ ಮಾಗಧೇಯ ಕೃತಿಯಲ್ಲಿ ಕೇವಲ ಪುರಾಣಗಳಲ್ಲಿರುವ ಮಾಹಿತಿಯನ್ನಷ್ಟೇ ನೀಡುತ್ತಾ ಹೋಗುವುದಿಲ್ಲ. ಬದಲಿಗೆ ಮರಾಣಗಳಲ್ಲಿರುವ ಮಾಹಿತಿಯ ಬಗ್ಗೆ ಪಾಶ್ಚಾತ್ಯ ವಿದ್ವಾಂಸರು ಏನು ಹೇಳುತ್ತಾರೆ ಎನ್ನುವುದನ್ನು ದಾಖಲಿಸುವುದರ ಜೊತೆಯಲ್ಲಿ, ಅನೇಕ ಕಡೆ ಖಗೋಳೀಯ ಪುರಾವೆಗಳನ್ನೂ ಒದಗಿಸುತ್ತಾರೆ. ಇದು ಅವರ ಆಧ್ಯಯನದ ಆಳ ಹಾಗೂ ವಿಸ್ತ್ರತ ಹರವನ್ನು ಸೂಚಿಸುತ್ತದೆ. ಹಾಗಾಗಿ ಭಾರತವನ್ನಾಳಿದ ರಾಜವಂಶಗಳ ಹಿನ್ನೆಲೆಯನ್ನು ಓದಿ, ಅರ್ಥ ಮಾಡಿಕೊಂಡು, ಆ ಬಗ್ಗೆ ವಿವೇಚನೆಯನ್ನು ಮಾಡಲು ಮಾಗಧೇಯ ಒಳ್ಳೆಯ ಪ್ರವೇಶವನ್ನು ಕೊಡುತ್ತದೆ. ಈ ಹಿನ್ನೆಲೆಯಲ್ಲಿ ಮಾಗಧೇಯವನ್ನು ನಾವೆಲ್ಲರೂ ಸ್ವಾಗತಿಸಬೇಕು.


ಸದ್ಯೋಜಾತ ಭಟ್ಟರು ಈ  ಪುಸ್ತಕದಲ್ಲಿ ಪ್ರಧಾನವಾಗಿ ಮಗಧದ ಇತಿಹಾಸವನ್ನು ದಾಖಲಿಸಿದ್ದಾರೆ. ಆದರೆ ಭಾರತದಲ್ಲಿ ಕನಿಷ್ಠ 120 ಪ್ರಧಾನ ರಾಜವಂಶಗಳು ಆಳಿವೆ. ಈ ವಂಶಗಳಲ್ಲಿ ಅದೆಷ್ಟು ರಾಜ ಮಹಾರಾಜರು ಹುಟ್ಟಿ, ಈ ಭೂಮಿಯಲ್ಲಿ ರಾಜ್ಯಭಾರವನ್ನು ಮಾಡಿದರೋ, ಆ ಎಲ್ಲ ನಿಖರ ಮಾಹಿತಿಯು ನಮಗೆ ದೊರೆಯದಾಗಿದೆ. ಸದ್ಯೋಜಾತ ಭಟ್ಟರು ಈ ಎಲ್ಲ ರಾಜವಂಶಗಳ ಇತಿಹಾಸವ ಕಾಲಬದ್ಧವಾಗಿ ಬರೆದರೆ, ಅದು ನಮ್ಮದೇಶದ ಅತ್ಯಮೂಲ್ಯ ರತ್ನವಾದೀತು ಹಾಗಾಗಿ ಸದ್ಯೋಜಾತ ಭಟ್ಟರು ಇನ್ನು ಮುಂದೆ ಒಂದು ಮಹತ್ವಾಕಾಂಕ್ಷೆಯನ್ನ ಇಟ್ಟುಕೊಂಡು ಬರೆಯುವುದು ಒಳ್ಳೆಯದು. ಸದ್ಯೋಜಾತ ಭಟ್ಟರು, ನಮ್ಮ ಕಣ್ಣಿಗೆ ಬೀಳದೆ ಮರೆಯಾಗಿರುವ ಭಾರತೀಯ ಸಂಸ್ಕೃತಿಯ ವಿವಿಧ ಆಯಾಮಗಳು ಮತ್ತಷ್ಟು ಬರೆಯಲಿ ಎಂದು ಆಶಿಸುತ್ತೇನೆ. ಭಾರತದ ಇತಿಹಾಸದ ಬಗ್ಗೆ ಆಸಕ್ತಿ ಇರುವವರು, ಇತಿಹಾಸ ಬೋಧಿಸುವವರು, ಮತ್ತು ವಿದ್ಯಾರ್ಥಿಗಳು ಈ ಪುಸ್ತಕವನ್ನು ಓದಲೇಬೇಕು ಎಂದು ನಾನು ಪ್ರೀತಿಪೂರ್ವಕವಾಗಿ ಆಗ್ರಹಿಸುತ್ತೇನೆ.



ಪುಸ್ತಕದ ಹೆಸರು: ಮಾಗದೇಯ

ಲೇಖಕರು: ಸದ್ಯೋಜಾತ

ಪ್ರಕಾಶನ: ಸಮನ್ವಿತ .ಬೆಂಗಳೂರು

ಬೆಲೆ:300₹


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು.


02 August 2022

ಎಳೆಯರು ನಾವು....

 #ಕನಸು_ಕಂಗಳ_ಎಳೆಯರು_ನಾವು 


ಎಳೆಯರು ನಾವು 

ಗೆಳೆಯರು ನಾವು 

ಕಣಿದಾಡುವೆವು 

ನಲಿದಾಡುವೆವು.


ಅತಿಯಾಸೆ ನಮಗಿಲ್ಲ

ಸವಿವೆವು ತುಂಡುಬೆಲ್ಲ 

ನಾವು ಚಿಕ್ಕವರಲ್ಲ 

ಎಲ್ಲರಿಗಿಂತ ದೊಡ್ಡವರಲ್ಲ



ನಮ್ಮ ಬಾಲ್ಯ ನಮಗಿರಲಿ 

ಏನೇನೋ ಕಟ್ಟಳೆ ನಿಮಗಿರಲಿ

ಜಾತಿ ಮತಗಳ ಹಂಗು ಬೇಡ

ನಮ್ಮದು ಸುಂದರ ತೋಟ 



#ಸಿಹಿಜೀವಿ

01 August 2022

ಗುಡಿಯ ನೋಡಿರಿ

 #ಗುಡಿಯನೋಡಿರಿ 


ಗುಡಿಯ ನೋಡಿರಿ

ನಮ್ಮ ಸಂಸ್ಕೃತಿಯ 

ಪ್ರತಿಬಿಂಭವು|

ಶಿಲೆಯಲ್ಲವೀ ಗುಡಿಯು

ಕಲೆಯ ಆಗರವು ||


#ಸಿಹಿಜೀವಿ