03 May 2021

ಮದುವೆ .ಕಥೆ


 *ಮದುವೆ*


ಕಥೆ 


ಅತೀ ದೊಡ್ಡದೂ ಅಲ್ಲದ ಬಹಳ ಚಿಕ್ಕದೂ ಅಲ್ಲದ ಉದ್ಯಾನವನ ಅದು.ಎಣಿಸಿದರೆ ಹದಿನೈದರಿಂದ ಇಪ್ಪತ್ತು ಮರಗಳಿರಬಹುದು , ಕುಳಿತುಕೊಳ್ಳಲು ಹಳೆಯಕಾಲದ ನಾಲ್ಕೈದು ಕಲ್ಲು ಬೆಂಚುಗಳು, ಅಲ್ಲಲ್ಲಿ ಒಣಗಿರುವ ಗರಿಕೆ ವಾರದಿಂದ ನೀರು ಕಂಡಿಲ್ಲ ಎಂದು ಸಾರುತ್ತಿತ್ತು , ಒಂದು ಅಳಿಲು ಜನರ ಇರುವಿಕೆಯನ್ನೂ  ಮರೆತು ರಾಜಾರೋಷವಾಗಿ ಮರ ಹತ್ತಿ ,ಇಳಿದು ಕುಣಿದಾಡುತ್ತಿತ್ತು , ಹೊಂಗೆಯ ಮರದ ಮೇಲೆ ಎರಡು ಗಿಳಿಗಳು ‌ಕುಳಿತಿದ್ದವು, ಅಗಾಗ್ಗೆ ಕೋಗಿಲೆಯು ತನ್ನ ಕಂಠದ ಸಿರಿಯನ್ನು ಜನರಿಗೆ ಪರಿಚಯಿಸುತ್ತಿತ್ತು ,ಹಿರಿಯೂರಿನ ಆ 

ಉದ್ಯಾನವನ ಬೆಂಗಳೂರು ಮತ್ತು  ದಾವಣಗೆರೆ ಹೆದ್ದಾರಿ ಹತ್ತಿರವಿದ್ದದ್ದರಿಂದ ಬಸ್ಸು ,ಲಾರಿಗಳ ಕರ್ಕಶ ಸದ್ದು ಮತ್ತು  ಹಾರನ್ ಸದ್ದು, ಹಕ್ಕಿ ಪಕ್ಷಿಗಳ ಕಲರವ ನುಂಗಿಹಾಕಿತ್ತು.


"ಈ ಮರ , ಈ ಕಲ್ಲುಬೆಂಚು ಹೇಗಿದ್ದಾವೋ ಹಾಗೇ ಇದಾವೆ , ನಾವೇ ಮನುಷ್ಯರು ಬಹಳ ಬದಲಾಗಿ ಬಿಟ್ಟಿದ್ದೀವಿ ಅಲ್ವಾ ಸತು" ಇಡೀ ಪಾರ್ಕನ್ನು ಒಮ್ಮೆ ದೀರ್ಘವಾಗಿ ನೋಡಿ ನುಡಿದಳು ಸುಜಾತ.


ಅದೇ ಕಡಲೇಕಾಯಿ ಮಂಡಿಯ ಪಾರ್ಕ್ , ಅದೇ ಕಲ್ಲು ಬೆಂಚು ,ಅದೇ ಜೋಡಿಗಳು , ಆದರೆ ಎಂಟು ವರ್ಷಗಳ ಹಿಂದೆ ಇಬ್ಬರೂ ಕುಳಿತಂತೆ ಹತ್ತಿರವಿಲ್ಲ ,ಇಬ್ಬರ ನಡುವೆ ಅಂತರವಿದೆ.


"ಸುಜು ಕೆಲವು ಪರಿಸ್ಥಿತಿಗಳು ,ಸಂದರ್ಭಗಳು ಮನುಷ್ಯರನ್ನು ಅನಿವಾರ್ಯವಾಗಿ ಬದಲಾಗುವಂತೆ ಮಾಡುತ್ತವೆ , ಆ ಬದಲಾವಣೆ ಧನಾತ್ಮಕವಾ ,ಋಣಾತ್ಮಕವಾ, ಒಳ್ಳೆಯದಾ ,ಕೆಟ್ಟದಾ, ಎಂಬುದರ ಮೇಲೆ ವ್ಯಕ್ತಿಯ ವ್ಯಕ್ತಿತ್ವವು ಕಂಡುಬರುವುದು " ಎಂದ ಸತೀಶ , 


"ಹೌದು ಸತು ,ನೀನು ಹೇಳೋದು ನಿಜ , ನನ್ನ ಮತ್ತು ನಿನ್ನ ಜೀವನದಲ್ಲಿ ಹಲವಾರು ಘಟನೆಗಳು, ತಿರುವುಗಳು ಘಟಿಸಿದವು ,ಹೌದು ಕೆಲ ಸಂದರ್ಭದಲ್ಲಿ ನಮ್ಮ ಮನಸ್ಸಿಗೆ ವಿರುದ್ಧವಾಗಿ ಹಲವಾರು ಘಟನೆಗಳು ನಡೆದರೂ ನಾವು ಮೂಕ ಪ್ರೇಕ್ಷಕರಾಗಿ ಹೊಂದಿಕೊಂಡು ಸಾಗಬೇಕು,ಅದಕ್ಕೆ ಉದಾಹರಣೆ  ನಾನು ನಿನ್ನ ಪ್ರೀತಿ ಮಾಡ್ತೀನಿ ಅಂತ ಗೊತ್ತಾಗಿ, ನನ್ನ ಆಸೆಗೆ ವಿರುದ್ಧವಾಗಿ, ನಮ್ಮಪ್ಪ ನನ್ನ ಬೆಂಗಳೂರಿಗೆ ಕರೆದುಕೊಂಡು ಹೋಗಿ ಓದಿಸಿದ್ದು , ಅದ್ಯಾವನಿಗೋ ನನ್ನ ಮದುವೆ ಮಾಡಿಸಿದ್ದು, ನೀನು ಪಿ ಯು ಸಿ ಪೇಲಾಗಿದ್ದು, ನಿಮ್ಮ ಮಾವನವರ ಮನೆ ಬಿಟ್ಟು ಬಂದಿದ್ದು, ನಿನ್ನ ಸ್ವಂತ ಊರಿಗೆ ಹೋಗಿ ಮಾದರಿ ಕೃಷಿಕನಾಗಿದ್ದು, ಅಮ್ಮನಿಗೆ ಒಳ್ಳೆಯ ಮಗನಾಗಿದ್ದು, ಹೀಗೆ ಒಂದೇ ಎರಡೇ ಒಟ್ಟಿನಲ್ಲಿ ನಾವು ಅವನಾಡಿಸುವ ಬೊಂಬೆಗಳು ಎಂಬುದರಲ್ಲಿ ಅನುಮಾನವಿಲ್ಲ. ಅಲ್ಲವೇ? ಎಂದು ದೀರ್ಘವಾಗಿ ಉತ್ತರಿಸುತ್ತಾ,


"ಅದ್ಸರಿ ,ಏನು ನನ್ನ ಹತ್ತಿರ ಮಾತನಾಡಬೇಕು ಎಂದು ಕರೆಸಿಕೊಂಡೆ ನಾ‌ನೇ ಉದ್ದುದ್ದ ಏನೇನೋ ಮಾತಾಡ್ತಾ ಇದಿನಿ ಏನ್ ಸಮಾಚಾರ?" ಕೇಳಿದಳು ಸುಜಾತ 


" ಏನು ಇಲ್ಲ ಸುಜು ನಮ್ಮ ಮದುವೆ ವಿಚಾರ" 


ಮದುವೆ ವಿಚಾರ ಎಂದ ತಕ್ಷಣ ಸುಜಾತಾಳಲ್ಲಿ ವಿದ್ಯುತ್ ಸಂಚಾರವಾದಂತಾಗಿ ಮನದಲ್ಲಿ ತಾನು ಹಲವಾರು ಬಾರಿ ಒಂಟಿಯಾಗಿ ಅಂದುಕೊಂಡ ಮಾತುಗಳು ಅನುರಣಿಸಿದವು, ಹೌದು ನಾನು ಯಶೋಧರನನ್ನು ಮದುವೆ ಆಗಿದ್ದು ನನ್ನ ಸ್ವಂತ ಇಚ್ಛೆಯಿಂದ ಅಲ್ಲ, ನಮ್ಮ ಅಪ್ಪನ ಬಲವಂತದಿಂದ ಈಗ ಅಪ್ಪನೂ ಇಲ್ಲ,

ಮದುವೆಯನ್ನು ಶ್ರೀಮಂತರ ಮನೆಗೆ ಕೊಟ್ಟು ಮಾಡಿದರು  , ಆದರೆ ವ್ಯಕ್ತಿಗಳಿಗೆ ಗುಣದಲ್ಲಿ  ಶ್ರೀಮಂತಿಕೆ  ಇಲ್ಲದಿದ್ದರೆ  ಏನು ಪ್ರಯೋಜನ?

ಗಂಡನೆನಿಸಿಕೊಂಡವನು ಮನೆ ಸೇರದೆ ಮೂರು ಹೊತ್ತು ಕುಡಿದು, ಸಾಂತಮ್ಮನ ಮನೆಯಲ್ಲಿ ಬಿದ್ದಿರುವನು, ಇಂತಹ ಗಂಡ ನನಗೆ ಬೇಕಾ? ಮದುವೆಯಾಗಿ ಮೂರು ವರ್ಷದಲ್ಲಿ ಅವನು ನನಗೆ ಕೊಟ್ಟಿದ್ದಾದರೂ ಏನು? ಒಂದು ಗಂಡು ಮಗು ಅಷ್ಟೇ ಅದಕ್ಕೆ ಪ್ರೀತಿಯಿಂದ ನನ್ನ ಪ್ರಿಯಕರನ ಹೆಸರಾದ ಸತೀಶ್ ಎಂದು ನಾಮಕರಣ ಮಾಡಿರುವೆ , ಸರ್ಕಾರಿ ಶಾಲಾ ಶಿಕ್ಷಕಿಯ ಕೆಲಸವನ್ನು ಹೊಂದಿರುವ ನಾನು ಇಂತಹ ಗಂಡನ ಜೊತೆ ಸಂಸಾರ ಮಾಡುವ ಬದಲಿಗೆ ಇವನಿಗೆ ಡೈವರ್ಸ್ ಏಕೆ   ನೀಡಬಾರದು? ಹೇಗೂ ನನ್ನ ಸತೀಶ ಇನ್ನೂ ಮದುವೆಯಾಗಿಲ್ಲ , ಅವನನ್ನು ಒಪ್ಪಿಸಿ ಏಕೆ ಎರಡನೇ ಮದುವೆ ಆಗಬಾರದು? ..ಆದರೆ ಈ ಮಗು...? ಇರಲಿ ನನ್ನ ಸತೀಶ ಅಂತವನಲ್ಲ  ಈ ಮಗುವನ್ನು ತನ್ನ ಮಗುವಿನಂತೆಯೇ ನೋಡಿಕೊಳ್ಳುವನು, ಇದುವರೆಗೂ ಯಾರದೋ ಮರ್ಜಿಗೋ, ಯಾರನೋ ಮೆಚ್ಚಿಸಲು ಬದುಕಿದ್ದಾಯಿತು ,ಇನ್ನಾದರೂ ನಾವಂದುಕೊಂಡ ಬಾಳು ಬಾಳೋಣ ಎಂದು ನೂರಾರು ಬಾರಿ ಯೋಚಿಸಿದರೂ ಯಾಕೋ ಧೈರ್ಯ ಬಂದಿರಲಿಲ್ಲ ಈಗ ಸತೀಶ ಮದುವೆ ಮಾತು ಆಡಿದ, ಅಂದರೆ ನನ್ನ ಮನಸಿನಲ್ಲಿ ಇರುವುದನ್ನೆ ಅವನು ಹೇಳುತ್ತಿದ್ದಾನೆ ಎಂದು ಬಹಳ ದಿನಗಳ ನಂತರ ಒಳಗೊಳಗೇ ಸಂತಸಗೊಂಡು ನಗಲಾರಂಬಿಸಿದಳು


"ಸುಜು ಯಾಕೆ ಸುಮ್ಮನಾಗಿ ಬಿಟ್ಟೆ"


"ಏನೂ ಇಲ್ಲ ಸತು ನಾನೇ ಹೇಳಬೇಕೆಂದುಕೊಂಡಿದ್ದೆ ಈಗಲಾದರೂ ನೀನು ಕೇಳಿದೆಯಲ್ಲ ಅದಕ್ಕೆ ಸಂತಸದಿಂದ ಮಾತು ಹೊರಡಲಿಲ್ಲ"


"ನಾನೇನು ಕೇಳಿದೆ , ನಮ್ಮ ಮನೆಯಲ್ಲಿ ನಮ್ಮ ದೂರದ ಸಂಬಂಧಿ ಹುಡುಗಿಯೊಂದಿಗೆ ಮದುವೆ ಮಾಡಲು ನಮ್ಮ ತಾಯಿ ಮಾತು ಕತೆ ಮಾಡಿದ್ದಾರೆ , ಆ ವಿಷಯ ಹೇಳಲು ಬಂದೆ "


ಸುಜಾತಾಳ ಕನಸು ಎರಡನೇ ಬಾರಿಗೆ ನುಚ್ಚು ನೂರಾಗಿತ್ತು ,ಒಳಗಿದ್ದ ಬೇಸರ, ಬೇಗುದಿ, ಒತ್ತಡಗಳು ಒಮ್ಮೆಲೆ ಕಣ್ಣೀರಾಗಿ ಹೊರಬಂದು " ಸತು ಅಂದರೆ ನೀನು ನನ್ನ  ಪ್ರೀತಿಸಿದ್ದು ಸುಳ್ಳಾ, ಅಥವಾ ನೀನು ನನ್ನ ಪ್ರೀತಿ ಮಾಡ್ದೆ ಅಂತ ನಂಬಿದ ನಾನೇ ಪೆದ್ದಿನಾ? ಅಯ್ಯೋ ಎಲ್ಲರೂ ನನಗೆ ಮೋಸ ಮಾಡೋರೆ ಜೀವನದಲ್ಲಿ "


" ಸುಜು ಯಾಕೆ ಏನೇನೋ ಮಾತಾಡ್ತಾ ಇದಿಯಾ ? ನಾನು ನಿನ್ನ ಪ್ರೀತಿಸಿದ್ದು ಸೂರ್ಯ ಚಂದ್ರರಷ್ಟೇ ಸತ್ಯ "


"ಪ್ರೀತಿಸಿದ್ದು...... ಅಂದರೆ ಈಗ ಪ್ರೀತಿಸುತ್ತಿಲ್ಲ ಎಂದು ಹೇಳುತ್ತಿರುವೆಯಾ?


ಅಯ್ಯೋ ....ಸುಜು ನಾನೇಗೆ ನಿನಗೆ ಅರ್ಥಮಾಡಿಸಲಿ, ನೀನು ಈಗ ಬೇರೆಯವರ ಹೆಂಡತಿ, ನಾನು ಹೇಗೆ  ಪ್ರೀತಿಸಲು ಸಾಧ್ಯ?"


"ಅವನಿಗೆ ಇವತ್ತೇ ಡೈವೋರ್ಸ್ ಕೊಡ್ತೀನಿ ಬಾ ಇಬ್ಬರೂ ಮತ್ತೆ ಮದುವೆಯಾಗಿ ಪ್ರೀತಿಸುತ್ತಾ ಸಂಸಾರ ಮಾಡೋಣ" ಆವೇಗದಲ್ಲಿ  ,ಸಿಟ್ಟಿನಲ್ಲಿ  ,ಇಷ್ಟು ದಿನವೂ ಮುಚ್ವಿಟ್ಟುಕೊಂಡ ತನ್ನ ಮನದಿಂಗಿತ ಹೇಳಿಯೇಬಿಟ್ಟಳು ಸುಜಾತ.


"ಸುಜು ,ಅದು ಹಾಗಲ್ಲ ,ಒಮ್ಮೆ  ಮದುವೆಯಾದ ಹೆಣ್ಣು ಗಂಡನ ಬಿಟ್ಟರೆ ಸಮಾಜ ಅವಳನ್ನು ನೋಡುವ ದೃಷ್ಟಿಕೋನವೇ ಬೇರೆ , ದುಡುಕಿ ಏನೇನೋ ಮಾತನಾಡಬೇಡ"


"ಸಮಾಜಕ್ಕೆ ಹೆದರಿ ನಾವಂದುಕೊಂಡಂಗೆ ಇರಲು ಅಗಲಿಲ್ಲ ಅಂದರೆ ಅದು ಆತ್ಮ ವಂಚನೆ ಮಾಡಿಕೊಂಡ ಹಾಗೆ ಸತು ಈಗಲೂ ಕಾಲ ಮಿಂಚಿಲ್ಲ ನಮ್ಮಿಬ್ಬರ ಜೀವನದಲ್ಲಿ ಇಬ್ಬರೂ ಬಹಳ ಕಷ್ಟಗಳನ್ನು ಅನುಭವಿಸಿದ್ದೇವೆ  , ಇನ್ನು ಮುಂದಾದರೂ ಇಬ್ಬರೂ ಮದುವೆಯಾಗಿ ಸುಖವಾಗಿರೋಣ"


"ಸುಜು ನನ್ನ ಮೇಲೆ ನೀನು ಇಟ್ಟಿರುವ ಪ್ರೀತಿ ಕಂಡು ನಾನೂ ಮೂಕನಾಗಿರುವೆ ,ಆದರೆ ನೀನು ಈಗ ಪರರ ಹೆಂಡತಿ, ಪರರ ಹೆಂಡತಿಯನ್ನು ತಾಯಿ ಸಮಾನ ನೋಡಬೇಕು ಎಂದು ಪರಮಹಂಸ ಗುರುಗಳು ಹೇಳಿರುವರು ,ಭಾರತೀಯ ‌ಕುಟುಂಬ ಪದ್ದತಿಯಲ್ಲಿ ಗಂಡ, ಹೆಂಡತಿ ಸಂಸಾರ, ಸಂಸ್ಕಾರಕ್ಕೆ ತನ್ನದೇ ಆದ ನೆಲೆ ಬೆಲೆ ಇದೆ ಪಾಶ್ಚಿಮಾತ್ಯ ದೇಶಗಳಂತೆ ದಿನಕ್ಕೊಂದು ಹೆಣ್ಣು,  ಅಥವಾ  ವಾರಕ್ಕೊಂದು  ಗಂಡು ಬದಲಿಸುವ ದೇಶದಲ್ಲಿ ನಾವಿಲ್ಲ . ನಾವು ಕೆಟ್ಟ ದಾರಿಯಲ್ಲಿ ನಡೆದರೆ ನಾವು ಸೇರುವ  ತಾಣವೂ ಕೆಟ್ಟದ್ದಾಗಿ ಅದಕ್ಕೆ ತಕ್ಕ ಪ್ರತಿಫಲ ಅನುಭವಿಸಬೇಕಾಗಬಹುದು , ನಾವು ನಡೆಯೋ ಮಾರ್ಗ " ಸನ್ಮಾರ್ಗ" ಆಗಿದ್ದರೆ ಭಗವಂತ ನಮಗೆ ಒಳಿತುಮಾಡುವ" ಎಂದು ಶ್ರೀ ವೀರೇಶಾನಂದರ ಮಾತುಗಳಿಂದ ಪ್ರೇರಿತನಾಗಿ ಸುಜಾತಳಿಗೆ ಬುದ್ದಿ ಹೇಳಿದನು ಸತೀಶ .


" ಇಷ್ಟವಿಲ್ಲದ ಗಂಡನ ಹುಚ್ಚಾಟ ಸಹಿಸಿಕೊಂಡು ಹೇಗೆ ಜೀವನ ಸಾಗಿಸಲು ಸಾದ್ಯ ಸತು ? ನನಗೆ ಈ ಮಾರ್ಗದ ಬಗ್ಗೆ ಈಗ ನಂಬಿಕೆಯಿಲ್ಲ ಮೊದಲಿನಿಂದಲೂ ಬರೀ ಸಂಕಟಗಳನ್ನು ಕಂಡ ನನಗೆ ನಿನ್ನಿಂದಲಾದರೂ ಸುಖ ಸಿಗಬಹುದು ಎಂಬ ಆಸೆ"


" ಜೀವನದಲ್ಲಿ ಭರವಸೆ ಇರಲಿ ಸುಜು ,ಇಂದಲ್ಲ ನಾಳೆ ನಿನ್ನ ಗಂಡನಿಗೆ ಒಳ್ಳೆಯ ಬುದ್ದಿ ಬರಬಹುದು ,ಅದಕ್ಕಿಂತ ಮಿಗಿಲಾಗಿ ಮುದ್ದಾದ ಮಗನಿದ್ದಾನೆ ಅವನೇ ನಿನ್ನ ಆಶಾ ಕಿರಣ, ಕಷ್ಟಗಳ ಕಾರ್ಮೋಡ ಕರಗಿ  ಸುಖದ ದಿನಗಳು ನಿ‌ನಗೆ ಬಂದೇ ಬರುವವು ಎಂದು ಒಬ್ಬ ಗೆಳೆಯನಾಗಿ ನಿನಗೆ ಹಾರೈಸುವೆ" 


ಮೊದ ಮೊದಲು ಸತೀಶನು ಬೇರೆ ಹೆಣ್ಣ ಮದುವೆಯಾಗುವನು ಎಂಬ ಸಿಟ್ಟಿನಿಂದ ಏನೇನೋ ಮಾತನಾಡಿದಳು ಸುಜಾತ,ಬರು ಬರುತ್ತಾ, ಸತೀಶನ ಒಳ್ಳೆಯ ಗುಣ, ಒಳ್ಳೆಯ ಬುದ್ದಿ, ಕಂಡು ಒಳಗೊಳಗೆ ಅವನ ಬಗ್ಗೆ ಹೆಮ್ಮೆ ಪಟ್ಟುಕೊಂಡಳು, ಮತ್ತು ತನ್ನ ಬಗ್ಗೆ  ಅಸಹ್ಯ ಮೂಡಿತು ಡಬಲ್ ಡಿಗ್ರಿ ಮಾಡಿ ಮೇಡಂ ಆದರೂ ನನ್ನ ಚಿಂತನೆ ಕೆಳಮಟ್ಟಕ್ಕೆ ಇಳಿದಿದ್ದೇಗೆ ?ಪಿ ಯು ಸಿ ಪೇಲಾದ ಸತೀಶ ಇಂತಹ ಉದಾತ್ತ ಚಿಂತನೆ ಬೆಳಿಸಿಕೊಂಡು ಸನ್ಮಾರ್ಗದಲ್ಲಿ ನಡೆಯುತ್ತಿರುವುದು ಹೇಗೆ ಸಾದ್ಯ? ಎಂದು ತನಗೆ ತಾನೇ ಪ್ರಶ್ನೆಗಳನ್ನು ಹಾಕಿಕೊಂಡಳು .ಒಟ್ಟಾರೆ

ಸತೀಶನ ಮಾತುಗಳು ನೊಂದ ಮನಕ್ಕೆ ಆಪ್ತ ಸಲಹೆಗಾರರು ನೀಡುವ ಸಾಂತ್ವನದಂತೆ, ಸ್ವಾಮೀಜಿಯವರು ನೀಡುವ ಪ್ರವಚನದಂತೆ ಸುಜಾತಾಳ ಮನದ ದುಗುಡವನ್ನು ದೂರಮಾಡಿದವು.


"ಅಂದರೆ ನೀನು ಬೇರೆ ಮದುವೆ ಮಾಡಿಕೊಳ್ಳಲು ತೀರ್ಮಾನವನ್ನು ಮಾಡಿಯೇ ಬಂದಿರುವೆ ,ಆಯ್ತು ನಿ‌ನಗೆ ಶುಭವಾಗಲಿ ,ಆಲ್ ದ ಬೆಸ್ಟ್ "ಎಂದು ಕೈ ಮುಂದೆ ಚಾಚಿ ,ಥ್ಯಾಂಕ್ಸ್ ಕೊಡುವಾಗ ಬೇಡವೆಂದರೂ ಇಬ್ಬರ ಕೈ ಮೇಲೆ ಎರಡು ಹನಿಗಳು ಬಿದ್ದವು ಒಂದನಿ ಸುಜಾತಾಳದು ಮತ್ತೊಂದು ಸತೀಶನದು.


"ಬರುವ ಬಸವನ ಹಬ್ಬದ ಅಕ್ಷಯ ತೃತೀಯ ದಿನದಂದು ನನ್ನ ಮದುವೆ ಬರಬೇಕು"


"ನಾನು ಮದುವೆಯಾಗೋ ಹುಡುಗ ,ಬೇರೆ ಹುಡ್ಗಿ ಮಾದುವೆಯಾಗೋದು ನೋಡೋಕೆ ಬರೋದಕ್ಕೆ ನನಗೇನು ಗ್ರಹಚಾರ" ಎಂದು ಎದ್ದು ಹೊರಟಳು ಸುಜಾತ.

ಹೊಂಗೆ ಮರದ ಮೇಲೆ ಅಲ್ಲಿಯವರೆಗೂ ಕುಳಿತಿದ್ದ ಎರಡು ಜೋಡಿ ಹಕ್ಕಿಗಳು ಅತ್ತೊಂದು ಇತ್ತೊಂದು ಹಾರಿ ಹೊರಟವು....



ಚೌಡಗೊಂಡನಹಳ್ಳಿಯ ಚೌಡೇಶ್ವರಿ ದೇವಾಲಯದಲ್ಲಿ ಮದುವೆಯ ಸಡಗರ ನೆಂಟರಿಷ್ಟರಿಂದ ದೇವಾಲಯ ತುಂಬಿ ತುಳುಕುತ್ತಿತ್ತು ,ಸತೀಶ ಮತ್ತು ಭೂದೇವಮ್ಮನ ಒಳ್ಳೆಯತನ ಹಳ್ಳಿಯ  ಪ್ರತಿಮನೆಯಿಂದ ಜನರು ಮದುಮಕ್ಕಳ ಆಶೀರ್ವಾದ ಮಾಡಲು ಬಂದಿದ್ದರು. 

ಎಲ್ಲಾ ಅಗತ್ಯವಾದ ಶಾಸ್ತ್ರಗಳು ಮುಗಿದವು

"ಮೂರ್ತ ಮೀರುತ್ತೆ ತಾಳಿ ಕಟ್ಟಪ್ಪ ಸತೀಶ " ಎಂದು ಚಂದ್ರಯ್ಯ ಸ್ವಾಮಿಗಳು ಹೇಳಿ ಸತೀಶನ ಕೈಗೆ ತಾಳಿ ಕೊಟ್ಟರು.

ಜನರೆಲ್ಲಾ ಅಕ್ಷತೆ ಕಾಳು ಹಾಕಲು ಸಿದ್ದರಾದರು

ಜೋರಾಗಿ ಕೂಗುವ ಒಂದು ಹೆಣ್ಣಿನ ಧ್ವನಿಯ ಕಡೆ ಊರವರ ಗಮನ ಸೆಳೆಯಿತು ಎಲ್ಲರೂ ಆ ಕಡೆ ತಿರುಗಿದರು

" ಏ ಸತೀಶ ..... ಎಷ್ಟು ಕೊಬ್ಬು ನಿನಗೆ.....ನನ್ನನ್ನೇ ಬಿಟ್ಟು ಹೋಗ್ತಿಯಾ.....ಇರು ಮಾಡ್ತಿನಿ.......ಎಂದು ಸಿಟ್ಟಿನಿಂದ ಓಡಿ ಬಂದಳು ಸುಜಾತಾ.


ಸತೀಶನಿಗೆ ಮತ್ತು ಊರವರಿಗೆ ಗಾಬರಿಯಾಗಿ ಏನು ನಡೆಯುತ್ತಿದೆ ಎಂದು ಗೊತ್ತಾಗುವುದರೊಳಗೆ ಸುಜಾತ ಓಡಿ ಹೋಗುತ್ತಿದ್ದ ತನ್ನ ಮೂರು ವರ್ಷದ

ಮಗ ಸತೀಶನನ್ನು ಹಿಡಿದು ಎತ್ತಿಕೊಂಡು ಪ್ರೀತಿಯಿಂದ ಎರಡು ಏಟು ಕೊಟ್ಟಳು, ಎಲ್ಲರೂ ನಿಟ್ಟುಸಿರು ಬಿಟ್ಟರು

" ನನಗೂ ಅಕ್ಷತೆ ಕೊಡ್ರಮ್ಮ" ಎಂದು ಕೇಳಿದಳು ಸುಜಾತ.

ಆ......ಗಟ್ಟಿ ಮೇಳ......... ಗಟ್ಟಿಮೇಳ....... ಎಂದರು ಚಂದ್ರಯ್ಯನವರು...

ಊರ ಜನರೊಂದಿಗೆ ಸುಜಾತಾ ಸಹ  ಅಕ್ಷತೆ ಹಾಕಿ ನಗುತ್ತಾ ಮದುಮಗ ಸತೀಶನಿಗೆ ಕಣ್ಣು ಹೊಡೆದಳು .ಅವಳ ಕಣ್ಣಂಚಿನಲ್ಲಿ ಒಂದು ಹನಿ ಉದುರಿದ್ದನ್ನು ಸತೀಶ ಮಾತ್ರ ನೋಡಿದ .



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

1 comment:

कवित्त कर्ममणि, कर्नाटक said...

ಈ ಜಗತ್ತಿನಲ್ಲಿ ಒಳ್ಳೆಯ ಅಭಿಪ್ರಾಯ ಇಟ್ಟುಕೊಂಡು ಪ್ರಾರಂಭಿಸಲಾದ ಯಾವುದೇ ಕಾರ್ಯ ವಿಪುಲವಾಗಿ ವಿಫಲಗೊಂಡಿಲ್ಲ. ಕನಸಿನ ಕರ್ನಾಟಕ ನಿರ್ಮಾಣಕ್ಕೆ ತಮ್ಮ ಕೊಡುಗೆ ಹೀಗೆಯೇ ನಿಷ್ಕಲ್ಮಶವಾಗಿ ಮುಂದು ವರೆಯಲಿ....👌👌✍️💐💐💐💞

ಶುಭಾಶಯಗಳೊಂದಿಗೆ
ಕವಿತ್ತ ಕರ್ಮಮಣಿ, ಕರ್ನಾಟಕ
ಜಿಲ್ಲಾಧ್ಯಕ್ಷರು: ಕಸ್ತೂರಿ ಸಿರಿಗನ್ನಡ
ವೇದಿಕೆ(ರಿ), ಬೆಳಗಾವಿ-ವಿಜಯಪುರ
ತಾಲೂಕಾಧ್ಯಕ್ಷರು: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ), ರಾಯಬಾಗ 9743867298