ಸಾಂಸ್ಕೃತಿಕ ಪರಂಪರೆಯನ್ನು ಉಳಿಸೋಣ
ಯುಗಾದಿಯ ಕುರಿತು ಲೇಖನ
ಬೇಂದ್ರೆ ಯವರು ಬರೆದಂತೆ *ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ* ಎಂಬಂತೆ ಬಹುತೇಕ ಭಾರತೀಯ ಹಿಂದೂಗಳು ಯುಗಾದಿ ಹಬ್ಬವನ್ನು ಬಹುಶ್ರಧ್ದಾ ಭಕ್ತಿಯಿಂದ ಆಚರಿಸುವರು ಅದರಲ್ಲೂ ದಕ್ಷಿಣ ಭಾರತದಲ್ಲಿ ಇದು ಹೊಸ ವರ್ಷವೆಂದು ಅಚರಿಸುವ ಪ್ರಮುಖ ಹಬ್ಬ
ಶಿಶಿರ ಋತು ಮುಗಿದು ವಸಂತಕಾಲದ ಆಗಮನದ ಹಿನ್ನೆಲೆಯಲ್ಲಿ ಮಾಡಲಾಗುವ ಈ ಹಬ್ಬಕ್ಕೆ ಪ್ರಕೃತಿಯೇ ಚಿಗುರು ಹೂಗಳಿಂದ ಮರಗಿಡಗಳ ಸಿಂಗರಿಸಿದಂತೆ ಪರಿಸರ ನಳಿಸುತ್ತದೆ .ಇದು ಮನೆ ಮನೆಗಳಲ್ಲಿ ಆನಂದ ತರುತ್ತದೆ .
ಜನವರಿ ಒಂದಕ್ಕಿಂತ ನಮಗೆ ಯುಗಾದಿಯೇ ಹೊಸ ವರ್ಷ ಅದರ ಮಹತ್ವ ಆಚರಣೆ ಮತ್ತು ವೈಜ್ಞಾನಿಕ ಕಾರಣಗಳನ್ನು ಈ ಮುಂದಿನಂತೆ ವಿವರಿಸಬಹುದು.
ಯುಗಾದಿ ಹಬ್ಬವನ್ನು ಆಚರಿಸುವುದರ ಮಹತ್ವ ಮತ್ತು ಕಾರಣಗಳು
ಎಲ್ಲ ವರ್ಷಾರಂಭಗಳಲ್ಲಿ ಅತ್ಯಂತ ಯೋಗ್ಯ ವರ್ಷಾರಂಭದ ದಿನವೆಂದರೆ ‘ಚೈತ್ರ ಶುಕ್ಲ ಪ್ರತಿಪದೆ. ’ಜನವರಿ ೧ ರಂದು ವರ್ಷಾರಂಭವನ್ನು ಏಕೆ ಮಾಡಬೇಕು ಎನ್ನುವುದಕ್ಕೆ ಯಾವುದೇ ಕಾರಣ ಇಲ್ಲ. ಯಾರೋ ಒಬ್ಬರು ನಿರ್ಧರಿಸಿದರು ಮತ್ತು ಅದು ಪ್ರಾರಂಭವಾಯಿತು. ತದ್ವಿರುದ್ಧ ಚೈತ್ರ ಶುಕ್ಲ ಪ್ರತಿಪದೆಯಂದು ವರ್ಷಾರಂಭವನ್ನು ಮಾಡಲು ನೈಸರ್ಗಿಕ, ಐತಿಹಾಸಿಕ ಮತ್ತು ಆಧ್ಯಾತ್ಮಿಕ ಕಾರಣಗಳಿವೆ.
ನೈಸಗಿಕ ಕಾರಣಗಳು:
ಸರಿಸುಮಾರು ಪ್ರತಿಪದೆಯ ಸಮಯದಲ್ಲಿ ಸೂರ್ಯನು ವಸಂತ – ಸಂಪಾತದ ಮೇಲೆ ಬರುತ್ತಾನೆ (ಸಂಪಾತ ಬಿಂದು ಎಂದರೆ (ಮಕರ) ಕ್ರಾಂತಿವೃತ್ತ ಮತ್ತು ವಿಷುವವೃತ್ತ (ಕರ್ಕಾಟಕ) ಈ ಎರಡು ವೃತ್ತಗಳು ಯಾವ ಬಿಂದುವಿನಲ್ಲಿ ಪರಸ್ಪರ ಭೇದಿಸುತ್ತವೆಯೋ ಆ ಬಿಂದು) ಮತ್ತು ವಸಂತ ಋತುವು ಪ್ರಾರಂಭವಾಗುತ್ತದೆ. ಎಲ್ಲ ಋತುಗಳಲ್ಲಿ ‘ಕುಸುಮಾಕರಿ ವಸಂತ ಋತುವು ನನ್ನ ವಿಭೂತಿಯಾಗಿದೆ’ ಎಂದು ಭಗವಂತನು ಶ್ರೀಮದ್ಭಗವದ್ಗೀತೆಯಲ್ಲಿ (೧೦:೩೫) ಹೇಳಿದ್ದಾನೆ. ಈ ಸಮಯದಲ್ಲಿ ಸಮಶೀತೋಷ್ಣ, ಉತ್ಸಾಹವರ್ಧಕ ಮತ್ತು ಆಹ್ಲಾದಕರ ವಾತಾವರಣವಿರುತ್ತದೆ. ಶಿಶಿರ ಋತುವಿನಲ್ಲಿ ಗಿಡಮರಗಳ ಎಲೆಗಳು ಉದುರಿ ಹೋಗಿರುತ್ತವೆ ಮತ್ತು ಪ್ರತಿಪದೆಯ ಸಮಯದಲ್ಲಿ ಅವುಗಳಿಗೆ ಹೊಸ ಚಿಗುರು ಬರುತ್ತಿರುತ್ತವೆ. ಗಿಡಮರಗಳು ಚೆನ್ನಾಗಿ ಕಾಣುತ್ತವೆ. ಯುಗಾದಿ ಪಾಡ್ಯದಂದು ಪ್ರಾರಂಭವಾಗುವ ಹೊಸವರ್ಷದ ಕಾಲಚಕ್ರವು ವಿಶ್ವದ ಉತ್ಪತ್ತಿಯ ಕಾಲಚಕ್ರಕ್ಕೆ ಸಂಬಂಧಿಸಿದೆ. ಆದುದರಿಂದ ಸೃಷ್ಟಿಯು ನವಚೇತನದಿಂದ ತುಂಬಿರುತ್ತದೆ. ತದ್ವಿರುದ್ಧವಾಗಿ ಡಿಸೆಂಬರ್ ೩೧ ರಂದು ರಾತ್ರಿ ೧೨ ಗಂಟೆಗೆ ಪ್ರಾರಂಭವಾಗುವ ಹೊಸವರ್ಷದ ಕಾಲಚಕ್ರವು ವಿಶ್ವದ ಲಯಕಾಲಕ್ಕೆ ಸಂಬಂಧಿಸಿದೆ. ಯುಗಾದಿ ಪಾಡ್ಯದಂದು ಪ್ರಾರಂಭವಾಗುವ ಹೊಸವರ್ಷದ ತುಲನೆಯನ್ನು ಸೂರ್ಯೋದಯಕ್ಕೆ ಉದಯವಾಗುವ ತೇಜೋಮಯ ದಿನದೊಂದಿಗೆ ಮಾಡಬಹುದು.
ನಿಸರ್ಗದ ನಿಯಮವನ್ನು ಅನುಸರಿಸಿ ಮಾಡಿದ ವಿಷಯಗಳು ಮನುಷ್ಯರಿಗೆ ಪೂರಕವಾಗಿರುತ್ತವೆ ಮತ್ತು ಅದಕ್ಕೆ ವಿರುದ್ಧವಾಗಿ ಮಾಡಿರುವ ವಿಷಯಗಳು ಮನುಷ್ಯರಿಗೆ ಹಾನಿಕಾರಿಯಾಗಿರುತ್ತವೆ. ಆದುದರಿಂದ ಪಾಶ್ಚಾತ್ಯ ಸಂಸ್ಕೃತಿಗನುಸಾರ ಜನವರಿ ಒಂದರಂದು ಹೊಸವರ್ಷಾರಂಭವನ್ನು ಮಾಡದೇ, ಯುಗಾದಿ ಪಾಡ್ಯದಂದೇ ಹೊಸವರ್ಷವನ್ನು ಆಚರಿಸುವುದರಲ್ಲಿ ನಮ್ಮ ನಿಜವಾದ ಹಿತವಿದೆ.
ಐತಿಹಾಸಿಕ ಕಾರಣಗಳು:
ಈ ದಿನದಂದು ರಾಮನು ವಾಲಿಯನ್ನು ವಧಿಸಿದನು. ವಿಜಯದ ಪ್ರತೀಕವು ಎತ್ತರದಲ್ಲಿರುತ್ತದೆ. ಹಾಗಾಗಿ ಬ್ರಹ್ಮಧ್ವಜ ಎತ್ತರದಲ್ಲಿರುತ್ತದೆ. ಈ ದಿನದಿಂದಲೇ ‘ಶಾಲಿವಾಹನ ಶಕೆ’ ಪ್ರಾರಂಭವಾಯಿತು, ಏಕೆಂದರೆ ಈ ದಿನ ಶಾಲಿವಾಹನನು ಶತ್ರುಗಳ ಮೇಲೆ ವಿಜಯವನ್ನು ಪಡೆದನು.
ಆಧ್ಯಾತ್ಮಿಕ ಕಾರಣಗಳು :
ಬ್ರಹ್ಮದೇವನು ಇದೇ ದಿನದಿಂದು ಸೃಷ್ಟಿಯನ್ನು ನಿರ್ಮಿಸಿದನು. ಅರ್ಥಾತ್ ಈ ದಿನ ಸತ್ಯಯುಗವು ಪ್ರಾರಂಭವಾಯಿತು. ಆದುದರಿಂದಲೇ ಈ ದಿನದಂದು ವರ್ಷಾರಂಭವನ್ನು ಮಾಡುತ್ತಾರೆ. ಯುಗಾದಿಯಂದು ತೇಜ ಮತ್ತು ಪ್ರಜಾಪತಿ ಲಹರಿಗಳು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತವೆ. ಸೂರ್ಯೋದಯದ ಸಮಯದಲ್ಲಿ ಈ ಲಹರಿಗಳಿಂದ ಪ್ರಕ್ಷೇಪಿತವಾಗುವ ಚೈತನ್ಯವು ಹೆಚ್ಚಿನ ಸಮಯದವರೆಗೆ ಉಳಿಯುತ್ತದೆ. ಅದು ಜೀವದ ಜೀವಕೋಶಗಳಲ್ಲಿ ಸಂಗ್ರಹವಾಗುತ್ತದೆ ಹಾಗೂ ಅವಶ್ಯಕತೆಗನುಸಾರ ಆ ಜೀವದಿಂದ ಉಪಯೋಗಿಸಲ್ಪಡುತ್ತದೆ.
*ಚೈತ್ರ ಮಾಸದ ಮಹತ್ವ -
*ಯುಗಾದಿ ಹಬ್ಬದ ಮಹತ್ವ*
ಚೈತ್ರಮಾಸಕ್ಕೆ ವಿಷ್ಣು ನಿಯಾಮಕ
ಚೈತ್ರ ಶುಕ್ಲ ಪ್ರತಿಪತ್ತಿನoದು ಯುಗಾದಿ ಹಬ್ಬದ ದಿನ ನೂತನ ವರ್ಷಾರಂಭ
*ಈ ದಿನ ಅರುಣೋದಯದ ಕಾಲದಲ್ಲಿಯೇ ಎದ್ದು ಭಗವಂತನ ನಾಮಸ್ಮರಣೆಯನ್ನು ಮಾಡುತ್ತಾ -ದೇವರ ಮನೆಗೆ ಹೋಗಿ ದೇವರ ಮುoದೆ ಇಟ್ಟಿರುವ ಪಂಚಾoಗ ,ತರಕಾರಿಗಳು -ಧಾನ್ಯಗಳು ,ಫಲ-ತಾoಬೂಲಗಳು ಎಣ್ಣೆ ನೆಲ್ಲಿಕಾಯಿ* *ಮುoತಾದ ವಸ್ತುಗಳನ್ನು ಹೊಸ ಕನ್ನಡಿಯ ಮೂಲಕ ನೋಡಬೇಕು* .ಯಾವ ಯಾವ ವಸ್ತುಗಳನ್ನು ಕನ್ನಡಿಯ ಮೂಲಕ ನೋಡುವೇವೋ ಅವುಗಳನ್ನು ಬಿoಬರೂಪಿ ಪರಮಾತ್ಮನು ದೊರಕಿಸಿಕೋಡುವನು. ಮುಖಪ್ರಕ್ಷಾಲನೆಯನ್ನು ಮಾಡಿ *ಗಜೇoದ್ರ ಮೋಕ್ಷಪಾರಯಣ ಮಾಡಬೇಕು*
ಯುಗಾದಿಯಂದು ಪ್ರತಿಯೋಬ್ಬನು
ಅಭ್ಯoಜನ ಮಾಡಲೇಬೇಕು . ಈ ಮೊದಲು ಪೂಜಕನು ಸ್ನಾನ ಮಾಡಿ *ಭಗವoತನಿಗೆ ಎಣ್ಣೆ ಸೀಗೆಪುಡಿ -ಬಿಸಿನಿರಿನಿoದ ಅಭ್ಯoಜನವನ್ನು ಮಾಡಿಸಬೇಕು . ಭಗವಂತನಿಗೆ* *ಮಾಡಿ ಉಳಿದ ಎಣ್ಣೆ -ಸೀಗೆಪುಡಿಗೆ ಬೇರೆ ಎಣ್ಣೆ ,ಸೀಗೆಪುಡಿಯನ್ನು ಬೆರೆಸಿ ಪ್ರತಿಯೋಬ್ಬರು ಹಚ್ಚಿಕೊoಡು ನಂತರ ಸ್ನಾನ ಮಾಡಬೇಕು.*
*ಸಪ್ತಚಿರoಜೀವಿಸ್ಮರಣೆ*
ಎಣ್ಣೆಯನ್ನು ಹಚ್ಚಿಕೊಳ್ಳುವಾಗ ಅಶ್ವತ್ಥಾಮಾದಿ ಸಪ್ತ ಚಿರoಜೀವಿಗಳನ್ನು ಮಾರ್ಕoಡೇಯನನ್ನು ಈ ಕೆಳಗೆ ಕೊಟ್ಟಿರುವ ಮಂತ್ರವನ್ನು ಹೇಳಿ ಸ್ಮರಿಸಬೇಕು .
ಅಶ್ವತ್ತಾಮಾ ಬಲಿರ್ವ್ಯಾಸ: ಹನೂಮಾಂಶ್ಚ ವಿಭೀಷಣ: | ಕೃಪ: ಪರಶುರಾಮಶ್ಚ ಸಪ್ತೈತೇ ಚಿರಂಜೀವಿನ: |
ಅಭ್ಯoಜನವನ್ನು ಮಾಡಿದ ನಂತರ ಭಗವಂತನ ವಿಶೇಷ ಪೂಜೆಯನ್ನು ಮಾಡಿ ನಂತರ ಹೊಸಬಟ್ಟೆಯನ್ನು ಧರಿಸಿ ನಿoಬಕ ದಳ ಬಕ್ಷಣ
(ಬೇವು -ಬೆಲ್ಲ)ವನ್ನು ಮಾಡಬೇಕು
*ಬೇವು ಬೆಲ್ಲ ಭಕ್ಷಣೆ ಮಾಡುವಾಗ ಹೇಳಬೇಕಾದ ಮ oತ್ರ
*ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ | ಸರ್ವಾರಿಷ್ಟವಿನಾಶಾಯ ನಿಂಬಕದಳಭಕ್ಷಣಮ್ |*
*ನೂರು ವರ್ಷಆಯುಸ್ಸು -ವಜ್ರದಂತೆ ಧೃಢವಾದ ಶರೀರ ಸರ್ವಸಂಪತ್ತು ಸರ್ವರಿಷ್ಟನಾಶ* *ಇವುಗಳಿಗಾಗಿ ಯುಗಾದಿಯoದು ಬೇವು ಬೆಲ್ಲಗಳ ಭಕ್ಷಣೆ ಮಾಡಬೇಕು*
*ನಂತರ ಪಂಚಾoಗ ಶ್ರವಣಮಾಡಬೇಕು*
ಯುಗಾದಿಯ ಆಚರಣೆಗೆ ಕೆಲ ಭಾಗಗಳಲ್ಲಿ ಅಮಾವಾಸೆಯ ದಿನವೇ ಸಿದ್ಧತೆಗಳು ಅರಂಭವಾಗುತ್ತವೆ .
ಹರಳೆಣ್ಣೆಯ ಅಭ್ಯಂಜನ ಸ್ನಾನ ಮಾಡುವುದು ಈ ಹಬ್ಬದ ವಿಶೇಷ ಗಳಲ್ಲೊಂದು ಹಳ್ಳಿಗಳಲ್ಲಿ ವಯಸ್ಸಿನ ಭೇದ ವಿಲ್ಲದೆ ಪ್ರತಿಯೊಬ್ಬರೂ ಎಣ್ಣೆ ಸ್ನಾನಮಾಡುವರು .ಮನೆಯ ಎಲ್ಲಾ ಬಾಗಿಲಿಗೆ ಮಾವಿನ ಎಲೆ ಬೇವಿನ ಸೊಪ್ಪನ್ನು ಕಟ್ಟಿ ಸಂಭ್ರಮ ಪಡುವರು .ಅಂದು ಕುಟುಂಬದ ಎಲ್ಲಾ ಸದಸ್ಯರು ಹೊಸ ಬಟ್ಟೆಗಳನ್ನು ಉಡುಪು ಧರಿಸಿ ಕರಿಗಡುಬು ಹೋಳಿಗೆ ಮುಂತಾದ ಸಿಹಿ ಭಕ್ಷ್ಯಗಳನ್ನು ತಯಾರಿಸಿ ತಮ್ಮ ಇಷ್ಟ ದೇವರಿಗೆ ಅರ್ಪಣೆ ಮಾಡಿ ಮನೆ ಮಂದಿಯೆಲ್ಲ ಬೇವು ಬೆಲ್ಲ ತಿಂದು ಸಂಭ್ರಮದಿಂದ ಹಬ್ಬ ಆಚರಿಸುತ್ತಾರೆ.
ಬೇವು ಬೆಲ್ಲ ನೀಡಲು ಕಾರಣವೆಂದರೆ ನಮ್ಮ ಮುಂಬರುವ ಹೊಸ ವರ್ಷದಲ್ಲಿ ನಮಗೆ ಬೆಲ್ಲದಂತೆ ಸಿಹಿ ಬಂದಾಗ ಹಿಗ್ಗದೇ ಬೇವಿನಂತೆ ಕಷ್ಟಗಳು ಬಂದಾಗ ಕುಗ್ಗದೆ ಜೀವನದಲ್ಲಿ ಸಮಚಿತ್ತವಾಗಿರಬೇಕು ಎಂಬ ಸಂದೇಶವನ್ನು ನೀಡುತ್ತದೆ ವೈಜ್ಞಾನಿಕ ವಾಗಿ ನೋಡಿದರೂ ಬೇವಿನಲ್ಲಿ ಔಷಧೀಯ ಗುಣವಿರುವುದು ಸಾಬೀತಾಗಿದೆ ಆದ್ದರಿಂದ ನಮ್ಮ ಆರೋಗ್ಯ ದೃಷ್ಟಿಯಿಂದ ಸಹ ಬೇವು ಬೆಲ್ಲ ಮಹತ್ತರವಾದುದಾಗಿದೆ .
ಹಬ್ಬದ ಮಾರನೇ ದಿನ ಕೆಲ ಕಡೆಗಳಲ್ಲಿ ಮನರಂಜನಾ ಆಟಗಳಾದ ,ನೀರು ಹಾಕುವುದು, ಉಯ್ಯಾಲೆ ಆಡುವುದು, ಮೋಡಿಆಟ,ಕೋಲಾಟ ಜೂಜಾಟ ಆಡುವುದು ಕಂಡುಬರುತ್ತದೆ.
ಅಂದು ಸಂಜೆ ಹೊಸ ವರ್ಷದ ಹೊಸ ಚಂದದ ಚಂದಿರನ ನೋಡಲು ಜನರು ಕಾತತರಾಗಿ ಚಂದ್ರನ ದರ್ಶನ ಪಡೆದು ಅದರ ಆಕಾರದ ಮೇಲೆ ಕೆಲ ಕಡೆ ಮುಂದಿನ ವರ್ಷದ ಭವಿಷ್ಯವನ್ನು ಹೇಳುವರು ಉದಾಹರಣೆಗೆ ಚಂದ್ರ ಬಲಕ್ಕೆ ಬಾಗಿದರೆ ಸುಭಿಕ್ಷ ಎಡಕ್ಕೆ ವಾಲಿದರೆ ಮತ್ತೊಂದು ಈಗೆ ಅರ್ಥೈಸಲಾಗುತ್ತದೆ. ಕೆಲವು ಕಡೆ ಯುಗಾದಿ ಹಬ್ಬದ ದಿನ ಮನೆಮಂದಿಯೆಲ್ಲಾ ಕುಳಿತ ವಿಶೇಷ ಪಂಚಾಂಗದ ಪಠಣ ಮಾಡುವರು .
ಕರ್ನಾಟಕದ ಕೆಲ ಜಿಲ್ಲೆಯ ಜನರು ಹಬ್ಬದ ಮಾರನೆಯ ದಿನ ವರುಷದ ತೊಡಕು (ಹೊಸ ತೊಡಕು) ಎಂದು ಮಾಂಸದ ಅಡಿಗೆ ಮಾಡಿ ಊಟ ಮಾಡಿ ಸಂಭ್ರಮ ಪಡುತ್ತಾರೆ.
ಒಟ್ಟಿನಲ್ಲಿ ಉಗಾದಿ ಎಂದು ಆಡುಭಾಷೆಯಲ್ಲಿ ಕರೆಯುವ ಈ ಹಬ್ಬವು ಸಕಲ ಜೀವ ರಾಶಿಯು ಸಂಭ್ರಮ ಪಡುವ ಯುಗದ ಆದಿಯಾಗಿ ಕಂಡುಬರುತ್ತದೆ. ಆದರೆ ಆಧುನಿಕತೆಯ ಪರಿಣಾಮವಾಗಿ ಕೆಲ ಕಡೆ ಈ ಯುಗಾದಿ ಹಬ್ಬದ ದಿನ ಪ್ಲಾಸ್ಟಿಕ್ ತೋರಣ ಪ್ಲಾಸ್ಟಿಕ್ ಎಲೆ ಮುಂತಾದವುಗಳ ಬಳಕೆಯಿಂದ ಪರಿಸರಕ್ಕೆ ಪೂರಕ ಹಬ್ಬ ವಾಗುವ ಬದಲಿಗೆ ಮಾರಕವಾಗುತ್ತಿರುವುದು ವಿಪರ್ಯಾಸ.
ಇನ್ನೂ ಕೆಲ ಕಡೆ ಹಬ್ಬದ ದಿನ ಹೋಟೆಲ್ ಗಳಲ್ಲಿ ಒಬ್ಬಟ್ಟು ಊಟ ಮಾಡಿ .ಪೂಜೆ ಮಾಡಲು ಕೆಲಸದವರಿಗೆ ಹೇಳಿ ಬೇರೆ ಕಡೆ ಪ್ರವಾಸ ಹೋಗುವ ಕೆಲ ಕುಟುಂಬಗಳನ್ನು ಅಲ್ಲಲ್ಲಿ ಕಾಣುತ್ತೇವೆ ಇದೇ ರೀತಿ ಮುಂದುವರೆದರೆ ನಮಯ ಮುಂದಿನ ಪೀಳಿಗೆಗೆ ಈ ಹಬ್ಬದ ಮಹತ್ವ ತಿಳಿಯದೇ ಹೋಗಬಹುದು. ಆಗಾಗದಂತೆ ನೋಡಿಕೊಂಡು ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಬೆಳೆಸುವ ಇಂತಹ ಹಬ್ಬಗಳನ್ನು ಅರ್ಥ ಪೂರ್ಣವಾಗಿ ಆಚರಿಸಿ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸ ಬೇಕಿದೆ .
*ಸಿ.ಜಿ.ವೆಂಕಟೇಶ್ವರ*
ಶಿಕ್ಷಕರು ಹಾಗೂ ಹವ್ಯಾಸಿ ಬರಹಗಾರರು
ಎಸ್. ಎಸ್ ಇ.ಎ ಸರ್ಕಾರಿ ಪ್ರೌಢಶಾಲೆ
*ಗೌರಿಬಿದನೂರು*