24 August 2022

ಪ್ರೌಢ ಶಿಕ್ಷಣದ ಸಾರ್ವತ್ರೀಕರಣ .


 

“ಪ್ರೌಢ ಶಿಕ್ಷಣದ ಸಾರ್ವತ್ರೀಕರಣ”

"ಸಾ ವಿದ್ಯಾಯ ವಿಮುಕ್ತಯೇ" ಎಂಬ ಉಪನಿಷತ್ತಿನ ಉಕ್ತಿಯಂತೆ ಪ್ರತಿಯೊಬ್ಬ ಮಾನವರ ಮುಕ್ತಿ ಮತ್ತು ಅಭಿವೃದ್ಧಿಗೆ ಶಿಕ್ಷಣ ಅಗತ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಈ ದಿಸೆಯಲ್ಲಿ ಎಲ್ಲರಿಗೂ ಶಿಕ್ಷಣ ನೀಡುವ ಪರಿಕಲ್ಪನೆಯನ್ನು ಪರಿಚಯಿಸಿದರು. ಈ ಆಧಾರದ ಮೇಲೆ ನಮ್ಮ ಕೇಂದ್ರ ಸರ್ಕಾರವು ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣಕ್ಕೆ ಎಸ್ ಎಸ್ ಎ   ಎಂಬ ಆಂದೋಲನವನ್ನು ಹಮ್ಮಿಕೊಂಡು ಅದನ್ನು ಬಹುತೇಕ ಯಶಸ್ವಿಗೊಳಿಸಿತು.

ಈಗ ಪ್ರಸ್ತುತ ಕೇಂದ್ರ ಸರ್ಕಾರವು ಪ್ರೌಢಶಿಕ್ಷಣಕ್ಕೆ ಒತ್ತು ನೀಡಿ ಶಿಕ್ಷಣವನ್ನು ನೀಡಲು ಆರ್.ಎಂ.ಎಸ್.ಎ  ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಇದು ಈಗ ಕಾರ್ಯಾರಂಭ ಪೂರ್ವ ಹಂತದಲ್ಲಿದ್ದು ಯೋಜನೆ ಮೂಲಕ  ಅಗತ್ಯ ಕ್ರಮಗಳನ್ನು
ಪೂರೈಸುತ್ತಿದೆ. 
ಸಾರ್ವತ್ರೀಕರಣ ಎಂದರೆ ಎಲ್ಲ ಕಡೆ  ಅಥವಾ ಎಲ್ಲಿಯೂ ಇರುವುದು ಎಂದರ್ಥವಾಗುತ್ತದೆ . ಇಂದಿನ ಪ್ರಸ್ತುತ ಶಿಕ್ಷಣ ವ್ಯವಸ್ಥೆಯನ್ನು ಗಮನಿಸಿದಾಗ ಕಷ್ಟಪಟ್ಟು ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ವಿದ್ಯಾರ್ಥಿಯು ವಿವಿಧ ಕಾರಣಗಳಿಂದ ಪ್ರೌಢ  ಶಿಕ್ಷಣದ ಹಂತಕ್ಕೆ ತಲುಪಿದಾಗ ಹಾಳು ಮತ್ತು ಕೊಳೆ ಆಗಿ ಪ್ರೌಢ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಆಮೇರಿಕಾ ಜಪಾನ್ನಂತಹ ಮುಂದುವರೆದ ದೇಶಗಳಲ್ಲಿ ಪ್ರಾಥಮಿಕ ಹಂತದಲ್ಲಿ ದಾಖಲಾದ ಶೇ.80ರಷ್ಟು ಮಕ್ಕಳು ಪ್ರೌಢಶಿಕ್ಷಣ ಮುಗಿಸಿದರೆ ನಮ್ಮ ದೇಶದಲ್ಲಿ ಇದರ ಪ್ರಮಾಣ  70% ಇರುವುದು ಆತಂಕಕಾರಿಯಾಗಿದೆ.

ಈ ನಿಟ್ಟಿನಲ್ಲಿ ಪ್ರಾಥಮಿಕ ಹಂತದಲ್ಲಿ ದಾಖಲಾದ  ಎಲ್ಲಾ ಮಕ್ಕಳು ಪ್ರೌಢಶಿಕ್ಷಣವನ್ನು ಮುಗಿಸಿ ಉತ್ತಮ ವಿದ್ಯಾವಂತರಾಗಲು ಎಸ್.ಎಸ್.ಎ.2 ಅಥವಾ ಆರ್.ಎಂ.ಎಸ್.ಎ. ಒಂದು ವರದಾನ ಎಂದು ಹೇಳಬಹುದು. ಯೋಜನೆಯಲ್ಲಿ ಕೈಗೊಳ್ಳಲಾಗುತ್ತಿರುವ ಕೆಲವು ಕಾರ್ಯಕ್ರಮಗಳನ್ನು ಈ ಮುಂದಿನಂತೆ ವಿವರಿಸಬಹುದು.

ಮೂಲಭೂತ ಸೌಕರ್ಯಗಳನ್ನು ಒದಗಿಸುವುದು .ಈ ದಿಸೆಯಲ್ಲಿ ದೇಶದಾದ್ಯಂತ ಯೋಜನಾ ಕಾರ್ಯ ಮುಕ್ತಾಯಗೊಂಡಿದ್ದು, ಶಾಲೆಗಳಲ್ಲಿ ಆಗತ್ಯವಿರುವ ಕಟ್ಟಡಗಳು
ಪೀಠೋಪಕರಣಗಳು ಮತ್ತು ಇತರೆ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

ಅಗತ್ಯವಿರುವ ಶಿಕ್ಷಕರ ನೇಮಕ .

ಗುಣಾತ್ಮಕ ಶಿಕ್ಷಣವನ್ನು ನೀಡುವಲ್ಲಿ ಮಕ್ಕಳು ಮತ್ತು ಶಿಕ್ಷಕರ ಅನುಪಾತ ಮುಖ್ಯ ಆದರೆ, ಪ್ರಸ್ತುತ ಮಕ್ಕಳು ಶಿಕ್ಷಕರು ಅನುಪಾತ ಕೆಲವೆಡೆ 100 ಇದ್ದು ಎಸ್.ಎಸ್.ಎ2 ರ ಪ್ರಕಾರ ಇದು ಉತ್ತಮಗೊಳ್ಳಲಿದೆ .

ಶಿಕ್ಷಕರಿಗೆ ಅನುದಾನ .
ಶಿಕ್ಷಕರಿಗೆ ಸರ್ಕಾರದಿಂದ ಇದುವರೆಗೆ ಹಲವಾರು ಕಲಿಕಾ  ಸಾಮಗ್ರಿಗಳನ್ನು ನೀಡಿದ್ದರೂ ಶಿಕ್ಷಕರು ಅಗತ್ಯಕ್ಕನುಗುಣವಾಗಿ ಕಲಿಕಾ ಸಾಮಾಗ್ರಿ ಬೋಧನೆ ನೀಡಲು ಶಿಕ್ಷಕರಿಗೆ ಈ ಯೋಜನೆಯ ಅನುಸಾರ ಅನುದಾನ ನೀಡಲಾಗುತ್ತದೆ.

ಕಲಿಕಾ ಪ್ರಕ್ರಿಯೆ ಹೇಗೆ ಸಾಗಿದೆ ಎಂದು ತಿಳಿಯಲು ಕಾಲಕಾಲಕ್ಕೆ ಈ ವಿಷಯಗಳ ಮೌಲ್ಯ ಮಾಪನ ಮತ್ತು ಹಿಮ್ಮಾಹಿತಿ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಹಂತದಲ್ಲಿ ಹೆಚ್ಚು ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲು ಚಿಂತನೆ ನಡೆಸಲಾಗಿದೆ.

ಶಿಕ್ಷಕರಿಗೆ ತರಬೇತಿ ನೀಡುವುದು.
ಶಿಕ್ಷಕರು ಒಂದರ್ಥದಲ್ಲಿ ವಿದ್ಯಾರ್ಥಿಯಾಗಿದ್ದು ಕಾಲಕಾಲಕ್ಕೆ ಬದಲಾದ ವಿಷಯ ಮತ್ತು ತಂತ್ರಜ್ಞಾನ (ಕಂಪ್ಯೂಟರ್) ತಿಳಿಯಲು  ಶಾಲಾ ಶಿಕ್ಷಕರ ತರಬೇತಿ ಅಗತ್ಯವಾಗಿದೆ. ಶಿಕ್ಷಕರಿಗೆ ತರಬೇತಿ ನೀಡಲು ಈ ಎಸ್.ಎಸ್.ಎ.2 ಕಾರ್ಯ ಕ್ರಮದಲ್ಲಿ ಹಮ್ಮಿಕೊಳ್ಳಲಾಗಿದೆ. ಇದರಿಂದ ಶಿಕ್ಷಣದ ಗುಣಮಟ್ಟ ಹೆಚ್ಚುವಾಗುವುದರಲ್ಲಿ ಸಂದೇಹವಿಲ್ಲ.

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಪ್ರಯೋಜನೆಗಳು

1 ಯೋಜನೆಯಿಂದ ದೇಶದಾದ್ಯಂತ ಪ್ರೌಢ ಶಿಕ್ಷಣದ ಸಾರ್ವತ್ರೀಕರಣ  ಸಾಧಿಸಿದಂತಾಗುತ್ತದೆ.
2. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕಾರಣವಾಗುತ್ತದೆ.
3 ನಮ್ಮ ದೇಶದ ವಿದ್ಯಾರ್ಥಿಗಳು ರಾಷ್ಟ್ರೀಯ ಮುಟ್ಟದ ವಿದ್ಯಾರ್ಥಿಗಳೊಂದಿಗೆ ಸ್ಪರ್ದಿಸಲು ಅನುಕೂಲವಾಗುತ್ತದೆ.
4 ಮೂಲ ವಿಷಯಗಳನ್ನು ಅಭ್ಯಾಸ ಮಾಡುವುದು ಇತ್ತೀಚೆಗೆ ಕಡಿಮೆಯಾಗಿದ್ದು, ಮುಂದಿನ ದಿನಗಳಲ್ಲಿ ಈ ಸಮಸ್ಯೆ ನಿವಾರಣೆಯಾಗುವುದು.
5 ವಿಜ್ಞಾನ ಮತ್ತು ತಂತ್ರಜ್ಞಾನ: ಕ್ಷೇತ್ರದಲ್ಲಿ ಬೆಳವಣಿಗೆ ಆಗಿ ದೇಶವು ಪ್ರಗತಿ ಪಥದಲ್ಲಿ ಸಾಗುವುದು

ಸರ್ವ ಶಿಕ್ಷಾ ಅಭಿಯಾನಕ್ಕೆ ಹಲವು ಅಡೆತಡೆಗಳಿವೆಅವು ಯಾವುವೆಂದರೆ

1 ಪೋಷಕರಲ್ಲಿ ನಿರಾಸೆ
2 ದೇಶದ ಹಲವೆಡೆ ಬಡತನ ಮತ್ತು ಮೂಢನಂಬಿಕೆಗಳು ತಾಂಡವವಾಡುತ್ತಿವೆ.
3. ಸೌಲಭ್ಯಗಳು ಮಕ್ಕಳಿಗೆ ಸರಿಯಾಗಿ
ಸಿಗದೇ ಇರಬಹುದು
4. ಸರಿಯಾದ ಮೇಲ್ವಿಚಾರಣೆಯ ಕೊರತೆಯಿದೆ.
5 ಲಭ್ಯವಿರುವ ಸಂಪನ್ಮೂಲಗಳ ಸರಿಯಾದ ಬಳಕೆ ಆಗದೇ ಇರುವುದು 6 ಕೆಲವು ಭೌಗೋಳಿಕ ಪರಿಸರಗಳು
ಶಿಕ್ಷಣ ನೀಡಲು ಪೂರಕವಾಗಿಲ್ಲದಿರುವುದು. 

ಪರಿಹಾರೋಪಾಯಗಳು

1.ಶಾಲೆ ಮತ್ತು ಸಮುದಾಯದ ನಡುವೆ ಉತ್ತಮ ಸಂಪರ್ಕ ಕಲ್ಪಿಸುವುದು.
2 ವಿದ್ಯಾರ್ಥಿಗಳಿಗೆ ಈಗ ನೀಡುತ್ತಿರುವ ಬಿಸಿಯೂಟ, ಬೈಸಿಕಲ್ ವಿತರಣೆ ಅಂತಹ ಮುಂದುವರೆದ ಸೌಲಭ್ಯಗಳನ್ನು ವಿಸ್ತಾರ ಮಾಡುವುದು.
3. ಮೇಲ್ವಿಚಾರಕರು ಪರಿವೀಕ್ಷಕರ ಕಾರ್ಯ ಒತ್ತಡ ಕಡಿಮೆ ಮಾಡಿ ಶಾಲಾ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದು ಉದಾ: ಇತ್ತೀಚೆಗೆ ಕರ್ನಾಟಕ ಸರ್ಕಾರ, ಸಿ .ಎ.ಇ.ಒ ಹುದ್ದೆ ರದ್ದುಗೊಳಿಸಿ, ಮುಖ್ಯ ಶಿಕ್ಷಕರು ಶಾಲಾ ಶೈಕ್ಷಣಿಕ ಚಟುವಟಿಕೆಗಳ ಕಡೆಗೆ ಗಮನ ಹರಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ.
4. ಪ್ರೌಢ ಶಾಲೆಗಳಲ್ಲಿ ಅಭ್ಯವಿರುವ ಸಂಪನ್ಮೂಲಗಳ ಸದ್ಬಳಕೆ ಆಗುತ್ತಿಲ್ಲ. ಉದಾ - ಕಂಪ್ಯೂಟರ್, ಲ್ಯಾಪ್ಟಾಪ್, ಒ.ಎಚ್.ಪಿ. ಪ್ರೊಜೆಕ್ಟರ್ ಉಕರಣಗಳಿದ್ದರೂ ಅವುಗಳ ಬಳಕೆ ಸರಿಯಾಗಿ ಆಗುತ್ತಿಲ್ಲ ಅವುಗಳನ್ನು ಸಮರ್ಪಕವಾಗಿ ಬಳಕೆ ಮಾಡಲು ಕ್ರಮ ಕೈಗೊಳ್ಳಬೇಕು ಮತ್ತು ಬೋಧನೆಯಲ್ಲಿ ಇವುಗಳ ಬಳಕೆ ಖಡ್ಡಾಯಗೊಳಿಸಬೇಕು.
5 ಗುಡ್ಡಗಾಡು ಮತ್ತು  ಅರಣ್ಯಗಳಿರುವ ಪ್ರದೇಶಗಳಲ್ಲಿ ಶಿಕ್ಷಣ ನೀಡಲು ಸರ್ಕಾರವು ವಿಶೇಷ
ಶಿಕ್ಷಣ ಅಭಿಯಾನ" ಯೋಜನೆಯನ್ನು ತಯಾರಿಸಿ ಅದರ ಅನುಷ್ಠಾನಕ್ಕೆ ಹೆಚ್ಚು ಬದ್ಧತೆ ತೋರಿದರೆ ಪ್ರಸ್ತುತವಿರುವ  ಟೆಂಟ್ ಶಾಲೆ ಮತ್ತು ಮೊಬೈಲ್ ಶಾಲೆಗಳಲ್ಲಿ ಸೌಲಭ್ಯ ನೀಡಿದರೆ ಆ ಪ್ರದೇಶದ ಮಕ್ಕಳ ಶಿಕ್ಷಣ ಉತ್ತಮವಾಗುವುದು.
5ಶಿಕ್ಷಕರು ಸೇವಾ ಮನೋಭಾವದಿಂದ ಕಾರ್ಯ ನಿರ್ವಹಣೆ ಮಾಡಬೇಕು
6 ಸಮುದಾಯಯದ ಸಮರ್ಪಕವಾದ ಪಾಲ್ಗೊಳ್ಳುವಿಕೆಯು ನಮ್ಮ ಈ ಯೋಜನೆ ಮುಖ್ಯವಾದ ಅಂಶವಾಗಿದೆ. 

ಈ ಮೇಲ್ಕಂಡ ಹರಿಹಾರೋಪಾಯಗಳನ್ನು ಗಮನದಲ್ಲಿಟ್ಟುಕೊಂಡು  ಪ್ರತಿಯೊಬ್ಬ ಶಿಕ್ಷಕರು ನಿರ್ವಂಚನೆಯಿಂದ ಕಾರ್ಯ ನಿರ್ವಹಿಸುವುದರ ಜೊತೆಗೆ ಪೋಷಕರು ಮತ್ತು   ಸಮುದಾಯ  ಸಕಾರಾತ್ಮಕವಾಗಿ ಸ್ಪಂದಿಸಬೇಕಾಗಿದೆ ಮತ್ತು ಶಾಲೆಯ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕಾಗಿದೆ. ಪ್ರೌಢ ಶಿಕ್ಷಣ ಸಾರ್ವತ್ರೀಕರಣ  ಒಂದು ಉತ್ತಮವಾದ  ಪರಿಕಲ್ಪನೆ ಯಾಗಿದ್ದು, ಇದು ಜಾರಿಗೊಂಡು ಭಾರತದ ಸಾಕ್ಷರತಾ ಪ್ರಮಾಣ ಶೇ 100 ರಷ್ಟು ಸಾಧಿಸುವುದರಲ್ಲಿ  ಸಂದೇಹವಿಲ್ಲ.

ಸಿಹಿಜೀವಿ
ಸಿ.ಜಿ.ವೆಂಕಟೇಶ್ವರ,
ಸೆಪ್ಟೆಂಬರ್ ತಿಂಗಳ " ಗ್ರಾಮೀಣ ಬದುಕು " ಮಾಸಪತ್ರಿಕೆಯಲ್ಲಿ ಪ್ರಕಟವಾ ಲೇಖನ

No comments: