07 August 2022

ಅಂದನಾ ತಿಂಮ..


ವಿಮರ್ಶೆ ೫೦

ಅಂದನಾ ತಿಂಮ

ಬೀಚಿ ಪ್ರಕಾಶನದಿಂದ ಹೊರಬಂದಿರುವ ಅಂದನಾ ತಿಂಮ ಪುಸ್ತಕ ಬೀಚಿಯರೇ ಹೇಳುವಂತೆ ಇದು ಅವರ ಐವತ್ತೊಂದನೇ ಅಪರಾಧ .ಈ ಪುಸ್ತಕ ಓದಿದ ಅಪರಾಧಕ್ಕೆ ನನಗೆ ನಿಜವಾಗಿಯೂ ಬಹಳ ಸಂತಸದ ಶಿಕ್ಷೆ ಲಭಿಸಿತು ಎಂದು ಹೇಳಲು ಸಂತಸವಾಗುತ್ತದೆ .
ಪುಸ್ತಕ ವಿಮರ್ಶಾ ಕಾರ್ಯದಲ್ಲಿ ಇದು ನನಗೆ ಸುವರ್ಣ ಸಂಭ್ರಮ ನಾನು ಓದಿ ನನ್ನ ಅನಿಸಿಕೆ ಬರೆವ ಕಾರ್ಯದಲ್ಲಿ ಇದು ಐವತ್ತನೇ ಪುಸ್ತಕ! ನೂರಾರು ಪುಸ್ತಕ ಓದಿದ್ದರೂ ಕೆಲವೇ ಪುಸ್ತಕಗಳ ಬಗ್ಗೆ ಅನಿಸಿಕೆ ಬರೆಯುವ ಮನಸಾಗಿ ಅದು ಐವತ್ತು ತಲುಪಿದೆ. ಬೀಚಿಯವರ ಪುಸ್ತಕಕ್ಕೆ ವಿಮರ್ಶೆ ಬರೆಯಲು ಎಂಟೆದೆ ಬೇಕು .ನಾನು ಕೇವಲ ಅವರ ಪುಸ್ತಕದ ಬಗ್ಗೆ ನಾಲ್ಕು ಅಭಿಪ್ರಾಯ ಹೇಳಬಹುದು.
ಅಂದನಾ ತಿಂಮ  ಮುಕ್ತಕ, ಹನಿಗವನ, ಕವನ ಮುಂತಾದ ಪ್ರಕಾರಗಳ ಪುಸ್ತಕ .ಎಂದಿನಂತೆ ತಮ್ಮ ಮೊನಚು ವಿಡಂಬನಾತ್ಮಕ ಬರಹ ನಮ್ಮನ್ನು ಸೆಳೆಯುತ್ತದೆ.
ಬೀಚಿಯವರೇ ಹೇಳಿರುವಂತೆ ಕೃತಿ ರಚನೆ ಬರೆಯುವವರು  ತಮ್ಮ ಆತ್ಮ ತೃಪ್ತಿಗಾಗಿ ಮಾಡುವ ಕಾಯಕ ಓದುಗರ ಪ್ರಶಂಸೆ ಮತ್ತು ವಿಮರ್ಶೆ ನಂತರದ ಪ್ರಕ್ರಿಯೆ.
ಸಮಾಜದ ಹಲವಾರು ಮುಖಗಳನ್ನು, ಅರ್ಥಾತ್ ನನ್ನ ಮನದ ಏರಿಳಿತಗಳನ್ನು ಈ ಕೃತಿಯಲ್ಲಿ ಪ್ರತಿಬಿಂಬಿಸಲು ಪ್ರಯತ್ನ ಮಾಡಿದ್ದೇನೆ. ಆದರೆ, ಸಾಧಿಸಿದ್ದೆಷ್ಟು ? ಇದಕ್ಕೆ ಉತ್ತರ, ಕನ್ನಡ ರಸಿಕ ಓದುಗರಲ್ಲಿದೆ. ಈ ಎಲ್ಲವೂ ಮೇರು ಪರ್ವತದಂತಹ ಮಹಾಕೃತಿಗಳೊ ? ಆಚಂದ್ರಾರ್ಕವಾಗಿ ಸದಾ ಇವು ಉಳಿಯುತ್ತವೆಯೇ ? ಅಥವಾ ಇವೆಲ್ಲವೂ ಒಂದು ದೊಡ್ಡ ಕಸದ ಬುಟ್ಟಿಗೆ ಅನ್ನವಾಗುತ್ತವೆಯೇ ? ಈ ಪ್ರಶ್ನೆಗಳಿಗೆ ಉತ್ತರವನ್ನು ಹೇಳುವ ಅಧಿಕಾರ ಯಾರಾದರೊಬ್ಬ ವ್ಯಕ್ತಿಗೆ ಇಲ್ಲ ಎಂಬುದಾದರೆ ಆ ವ್ಯಕ್ತಿ ನಾನು. ನನ್ನ ಕೃತಿಯ ಬೆಲೆಯನ್ನು ನಾನೇ ಕಟ್ಟಲೇ ? ಕಾಲರಾಯ ತನ್ನ ಜರಡಿಯನ್ನು ಸದಾ ಆಡಿಸುತ್ತಲೇ ಇರುತ್ತಾನೆ, ಹುಟ್ಟಿದುದೆಲ್ಲವೂ ಅದರಲ್ಲಿ ಬೀಳಲೇಬೇಕು ಇದು ಪ್ರಕೃತಿಯ ನಿಯಮ.  ಹಾರಿಹೋದುದು ಜೊಳ್ಳು, ಉಳಿದುದು ಕಾಳು. ಇಂದು ಜೊಳ್ಳಾಗಿ ಕಂಡುದುದು ನಾಳೆ ಕಾಳಾದೀತು, ಇಂದು ಕಾಳಾಗಿ ಕಂಡುದುದು ನಾಳೆ ಜೊಳ್ಳಾದೀತು. ಮೌಲ್ಯವನ್ನು ಮುಂದಿನ ಪೀಳಿಗೆ ನಿರ್ಧರಿಸುತ್ತದೆ. ಆ ತಲೆನೋವು ನನಗೇಕೆ ?
“ನಿಮ್ಮ ಇಷ್ಟು ಕೃತಿಗಳಲ್ಲಿ ಅತ್ಯುತ್ತಮ ಕೃತಿ  ಯಾವುದು ?” ಎಂದೊಬ್ಬ ನನ್ನ ಕಿರಿಯ ಮಿತ್ರರು ಹೇಳಿದರು. ಇದುವರೆಗೂ ಆಗಿರುವ ಕೃತಿಗಳಲ್ಲಿ ಒಂದೂ ಅಲ್ಲ, ಆ ಅತ್ಯುತ್ತಮ ಕೃತಿ ಇನ್ನು ಮೇಲಾಗಬೇಕು ಎಂಬುದಷ್ಟೇ ನನ್ನ ಉತ್ತರ. ಈ ಜೀವಮಾನದಲ್ಲಿ ಅದು ಆಗಬಹುದು. ಆಗದೆಯೂ ಇರಬಹುದು. ಆಗದಿದ್ದಲ್ಲಿ ನನಗೆ ದುಃಖವೂ ಇಲ್ಲ. ಬೇರಿನ್ನಾರಾದರೂ ಮಾಡಿ ಯಾರು ಎಂಬ ಆಶೆ ಇದೆ, ನಾನಿದುವರೆಗೂ ಮಾಡಿರುವ ಕೆಲಸದಿಂದ ನನಗೆ ಸಂಪೂರ್ಣ ತೃಪ್ತಿ ಆಗಿದೆ, ಇನ್ನು ನಾನು ಮಾಡುವುದೇನೂ ಉಳಿದಿಲ್ಲ ಎಂದು ಕಾಲು ಚಾಚಿ ಕುಳಿತವನು ಇನ್ನು ಬದುಕಿರುವ ಅವಶ್ಯಕತೆಯಾದರೂ ಏನಿದೆ ? ಆಗಬೇಕಾದ ಕೆಲಸ ಇದೆ ಎಂಬುದಕ್ಕೆ ನಾನಿನ್ನೂ ಬದುಕಿರುವುದೇ ಸಾಕ್ಷಿ. ಕೈಲಿರುವ ಪೇನಾ ಕೆಳಕ್ಕೆ ಬಿದ್ದ ನಂತರ ಸಾಹಿತಿ ಸಾಯಬಾರದು, ಅವನು ಸತ್ತ ನಂತರ ಅವನ ಕೈಲಿರುವ ಪೇನಾ ಕೆಳಕ್ಕೆ ಬೀಳಬೇಕು." ಎಂಬ ಮಾತುಗಳು ಯುವ ಬರಹಗಾರರಿಗೆ ಪಾಠದಂತಿವೆ.

ಈ ಪುಸ್ತಕದಲ್ಲಿ ಮುದ್ರಿತವಾಗಿರುವ ನನ್ನ ಕಾಡಿದ  ಕೆಲ ಸಾಲುಗಳ ಬಗ್ಗೆ ಗಮನಹರಿಸುವುದಾದರೆ
“ಬದುಕಲಿಕೆ ತಿನಬೇಕು, ತಿನ್ನಲು ಬದುಕಲ್ಲ”
"ಗುರಿ ಬೇಕು ಬಾಳಿಂಗೆ, ಗುರಿ ಹಿರಿದು ಬೇಕು”
ಎಂಬುದಾಗಿ ಎಚ್ಚರಿಕೆ ಕೊಡುತ್ತಾ, ಆತ್ಮಮೆಚ್ಚುವಂತೆ ಜೀವನ
ನಡೆಸಬೇಕೆನ್ನುತ್ತಾರೆ ಬೀಚಿಯವರು .

“ದೊಡ್ಡ ಜೇಬಿದೆ ಇವಗೆ, ಹೃದಯ ಬಹು ಚಿಕ್ಕದು; ದೊಡ್ಡ ಹೃದಯದವಗೆ ಚಿಕ್ಕ ಜೇಬು"
ಎಷ್ಟು ಅರ್ಥಗರ್ಭಿತವಾಗಿದೆ ಅಲ್ಲವೆ?
“ಎಲೆ, ಎಲೆ ಹೋಗಲಿ, ಬೇರು ಒಣಗಿಸಬೇಡ
ಬಾಳವೃಕ್ಷದ ಬೇರು ನಂಬಿಕೆಯೊ ತಿಂಮ”
ದೇವರಲ್ಲಿ ನಂಬಿಕೆ, ತಂದೆ-ತಾಯಿಗಳಲ್ಲಿ ನಂಬಿಕೆ, ಮಡದಿ ಮಕ್ಕಳಲ್ಲಿ
ನಂಬಿಕೆ, ತನ್ನಲ್ಲೇ ತನಗೆ ನಂಬಿಕೆ-ಜೀವನದ ಭಾಗ್ಯವೆಲ್ಲ ನಂಬಿಕೆಯ ಆಧಾರದ ಮೇಲಿದೆ. 'ನಂಬಿ ಕೆಟ್ಟವರಿಲ್ಲವೊ' ಎಂಬುದು ದಾಸರು ಕೊಟ್ಟ ಅಭಯ!
ಕಾಲಪ್ರವಾಹದಲ್ಲಿ ರಾಜ್ಯ-ಸಾಮ್ರಾಜ್ಯಗಳೂ, ಮತ ಮಠಗಳೂ, ಭಾಷಾ ಸಾಹಿತ್ಯಗಳೂ, ಕಲಾ-ವೃತ್ತಿಗಳೂ ಕೊಚ್ಚಿಕೊಂಡು ಹೋದವು, ನಾಗರಿಕತೆ ಗಳೆಷ್ಟೋ ಮಣ್ಣುಗೂಡಿದವು. “ಮಾನವತೆ ನಿಂತಿಹದು” ಅಂದನಲ್ಲದೆ
'ಮಂಕುತಿಮ್ಮ' ! ತಿಂಮನೂ ಸಹ “ದೈವಕಿಂತಲು ದೊಡ್ಡದಿನ್ನೊಂದು ಇದೆ ಎನಗೆ ಮಾನವತೆಯೇ ದಾರಿ, ನಡೆಯೋ”
ಎಂದು ಬೆನ್ನು ತಟ್ಟುತ್ತಾನೆ.
ಅನ್ನುವಾಗ ಬೀchiಯವರು ನಮ್ಮ ದೃಷ್ಟಿಗೊಂದು ಹೊಸ ತಿರುವನ್ನೇ
ಕೊಡುತ್ತಾರೆ.
“ಮಕ್ಕಳೊಂದಿಗೆ ಆಟ ಅದು ಸ್ವರ್ಗ ತಿಂದು ಮಕ್ಕಳೇ ದೇವರು | ಹೌದೇನೋ ತಿಂಮ?”
ಬಾಳ ಸಾರ್ಥಕತೆಗೆ ಹೊಸ ದಾರಿ ತೋರಿಸುತ್ತಾರೆ. ಜೀವನ ನಮಗೆ ಸಹ್ಯವಾಗಬೇಕಾದರೆ ಏನು ಮಾಡಬೇಕೆಂಬುದನ್ನು ಬೀchi ಯವರು
“ಎಲ್ಲರೂ ನಗಬೇಕು, ನಗು ಜೀವದುಸಿರು,
ಬಲ್ಲವರ ಹಾಸ್ಯ ರಸಕವಳದೂಟ” ಎಂದು ಹೇಳಿ ನಗು ನಗುತಾ ಬಾಳಬೇಕು ಎಂದು ಕರೆನೀಡಿದ್ದಾರೆ.

ಒಟ್ಟಾರೆ ಬೀಚಿಯವರ ಈ ಪುಸ್ತಕ ಓದುತ್ತಿದ್ದಾಗ ಕಾವ್ಯ ಓದುತ್ತಲೇ ಜೀವನದ ಸತ್ಯಗಳ ಬಗ್ಗೆ ಪ್ರವಚನ ಕೇಳಿದ ಅನುಭವವನ್ನು ಪಡೆದೆ .ನೀವು ಇಂತಹ ಅನುಭವ ಪಡೆಯಬೇಕಾದರೆ  ಒಮ್ಮೆ ತಿಂಮ ಏನಂದ ಎಂದು ಓದಲೇಬೇಕು.

ಪುಸ್ತಕದ ಹೆಸರು: ಅಂದನಾ ತಿಂಮ
ಲೇಖಕರು: ಬೀಚಿ
ಪ್ರಕಾಶನ: ಬೀಚಿ ಪ್ರಕಾಶನ
ಬೆಲೆ: 125₹

ಸಿಹಿಜೀವಿ
ಸಿ ಜಿ ವೆಂಕಟೇಶ್ವರ

 

No comments: