ಆತ್ಮಕಥೆ ೩೩
ಉಗ್ಗುವಿಕೆ ರೋಗವಲ್ಲ .
ಇತ್ತೀಚಿಗೆ ರಾಬರ್ಟ್ ಕನ್ನಡ ಸಿನಿಮಾ ನೋಡಿದೆ .ಅದರಲ್ಲಿನ ನಾಯಕನ ಒಂದು ಶೇಡ್ ನ ಪಾತ್ರ ಉಗ್ಗುವ ಮಾತನಾಡುವ ಪಾತ್ರ. ಅದೇ ರೀತಿಯಲ್ಲಿ ದಿನನಿತ್ಯದ ಜೀವನದಲ್ಲಿ ಹಲವಾರು ಜನ ಉಗ್ಗುತ್ತಾ ಮಾತನಾಡುವ ಜನರ ನೋಡುತ್ತೇವೆ. ಕೆಲವರು ಉಗ್ಗುವುದನ್ನು ಅಪಹಾಸ್ಯ ಮಾಡುವರಿಗೇನೂ ಕಮ್ಮಿಯಿಲ್ಲ.
ಬಾಲ್ಯದಲ್ಲಿ ನಾನೂ ಸಹ ಈ ಉಗ್ಗುವಿಕೆಯಿಂದ ಬಳಲಿದ್ದಿದೆ. ನಾನು ನಾಲ್ಕನೇ ತರಗತಿಯಲ್ಲಿ ಓದುವಾಗ ನನ್ನ ಸಹಪಾಠಿ ಶಿವಣ್ಣ ಉಗ್ಗುತ್ತಿದ್ದ .ನಾನು ಅವನ ಉಗ್ಗನ್ನು ಪ್ರತಿ ದಿನ ಅಣಕಿಸುತ್ತಾ ಕ್ರಮೇಣ ನನಗೂ ಮಾತನಾಡುವಾಗ ಉಗ್ಗುವುದು ಸಾಮಾನ್ಯವಾಯಿತು.ಇದು ನಾನು ಪದವಿ ಓದುವ ವರೆಗೂ ಮುಂದುವರೆದು ಒಮ್ಮೆ ಚಿತ್ರದುರ್ಗದಲ್ಲಿ ಮೈಸೂರಿನ ಸ್ಪೀಚ್ ಅಂಡ್ ಇಯರಿಂಗ್ ಸಂಸ್ಥೆಯವರು ಉಚಿತ ಆರೋಗ್ಯ ಶಿಬಿರ ಏರ್ಪಡಿಸಿದ್ದರು .ಅಲ್ಲಿಗೆ ನಾನು ಹೋದಾಗ ವೈದ್ಯರು ಉತ್ತಮವಾಗಿ ಕೌನ್ಸಿಲಿಂಗ್ ಮಾಡುತ್ತಾ ,ಭಯ ಉದ್ವೇಗ ಕಡಿಮೆ ಮಾಡಿಕೊಂಡು ನಿಧಾನವಾಗಿ ಮಾತನಾಡುವ ರೂಡಿ ಮಾಡಿಕೊಳ್ಳಲು ಸಲಹೆ ನೀಡಿದರು .ಅವರ ಸಲಹೆ ಪಾಲಿಸಿದೆ. ಕ್ರಮೇಣವಾಗಿ ಉಗ್ಗು ಮಾಯವಾಗಿ ಈಗ ಸಾಮಾನ್ಯವಾಗಿ ಮಾತನಾಡುತ್ತಾ ಇಪ್ಪತ್ತೆರಡು ವರ್ಷಗಳಿಂದ ಮಕ್ಕಳಿಗೆ ಪಾಠ ಮಾಡುತ್ತಿರುವೆ.
ತರಗತಿಯ ಕೊಠಡಿಯಲ್ಲಿ ಈ ರೀತಿಯಲ್ಲಿ ಉಗ್ಗುವ ಮಕ್ಕಳ ಅಪಹಾಸ್ಯ ಮಾಡುವ ಮಕ್ಕಳಿಗೆ ಬುದ್ದಿ ಹೇಳಿರುವೆ .ಉಗ್ಗಿನ ಸಮಸ್ಯೆ ಇರುವ ಮಕ್ಕಳಿಗೆ ಕೌನ್ಸಿಲಿಂಗ್ ಸಹ ಮಾಡುತ್ತಿರುವೆ.
ಅಷ್ಟಕ್ಕೂ ಉಗ್ಗು ಎನ್ನುವುದು ರೋಗವೇನಲ್ಲ . ಆತ್ಮವಿಶ್ವಾಸ ಮತ್ತು ಸತತ ಪ್ರಯತ್ನದಿಂದ ಉಗ್ಗು ನಿವಾರಣೆ ಖಚಿತ. ಇದು ಕೇವಲ ಸಾಮಾನ್ಯರಿಗೆ ಮಾತ್ರ ಅಥವಾ ಇಂತವರಿಗೇ ಬರಬೇಕೆಂದೇನೂ ಇಲ್ಲ ಅದರೆ ಉಗ್ಗು ಮೆಟ್ಟಿ ನಿಂತು ನಮ್ಮ ವ್ಯಕ್ತಿತ್ವ ಕಾಣುವಂತೆ ನಾವು ಬದುಕಬೇಕು.
ಕೇರಳದ ಮುಖ್ಯ ಮಂತ್ರಿಯಾಗಿದ್ದ ಇಎಂಎಸ್ ನಂಬೂದಿರಿಪಾದ್ ಅವರೂ ಉಗ್ಗುತ್ತಿದ್ದರು. ಅವರಿಗೆ ಪತ್ರಕರ್ತರು, 'ನೀವು ಯಾವತ್ತೂ ಉಗ್ಗುತ್ತೀರಾ?' ಎಂದು ಕೇಳಿದ್ದಕ್ಕೆ, 'ಇಲ್ಲ ಇಲ್ಲ. ನಾನು ಮಾತಾಡುವಾಗ ಮಾತ್ರ ಉಗ್ಗುತ್ತೇನೆ' ಎಂದು ಹೇಳಿದ್ದು ನೆನಪಾಗುತ್ತಿದೆ. ನಿಮಗೆ ಗೊತ್ತಿರಲಿ, ನಂಬೂದಿರಿಪಾದ್ ಅವರಿಗೂ ಈ ಸಮಸ್ಯೆ ಇತ್ತು. ಆದರೆ ಅವರು ಎರಡು ಬಾರಿ ಕೇರಳದ ಮುಖ್ಯಮಂತ್ರಿಯಾದರು. ನಮ್ಮ ದೇಶದ ಪ್ರಮುಖ ಕಮ್ಯುನಿಸ್ಟ್ ನಾಯಕ ಎಂದು ಕರೆಯಿಸಿಕೊಂಡರು. ಅವರಿಗೆ ತಮ್ಮ ಉಗ್ಗುವಿಕೆ ಒಂದು ಸಮಸ್ಯೆ ಎಂದು ಅನಿಸಲೇ ಇಲ್ಲ.
''ನಾನು ಉಗ್ಗುವುವಾಗ ನಿಮಗೆ ತಮಾಷೆ ಎನಿಸುತ್ತದೆ, ಆದರೆ ನನಗೆ ಇನ್ನೂ ತಮಾಷೆಯೆನಿಸುತ್ತದೆ, ಯಾಕೆಂದರೆ ನಾನು ಹೇಳುವುದನ್ನೆಲ್ಲಾ ನೀವು ಗಮನವಿಟ್ಟು ಕೇಳುತ್ತೀರಿ' ಎಂದು ಹೇಳುತ್ತಿದ್ದರು. "ನಾನು ಏನು ಹೇಳುತ್ತೇನೆ ಎಂಬುದನ್ನು ಕೇಳಿ, ನಾನು ಹೇಗೆ ಹೇಳುತ್ತೇನೆ ಎಂಬುದನ್ನಲ್ಲ' ಎಂದು ನಂಬೂದರಿಪಾದ್ ರವರು ಪತ್ರಕರ್ತರಿಗೆ ತಿರುಗೇಟು ನೀಡುತ್ತಿದ್ದರು.
ನಿಮ್ಮಲ್ಲಿ ಉಗ್ಗುವಿಕೆ ಇದೆ ಎಂಬುದರ ಬಗ್ಗೆ ಹೆಚ್ಚು ಗಮನಕೊಟ್ಟರೆ, ಅದು ಒಂದು ಸಮಸ್ಯೆ ಎನಿಸಬಹುದು. ಆದರೆ ನಾನು ನಿಧಾನವಾಗಿ ಮಾತಾಡುತ್ತೇನೆ ಎಂದು ಅಂದುಕೊಂಡು ಮಾತಾಡಿ, ನಿಮ್ಮ ಸಮಸ್ಯೆ ಅರ್ಧ ಕಮ್ಮಿಯಾಗಿರುತ್ತದೆ.
ಖ್ಯಾತ 'ರಾಕ್ ಅಂಡ್ ರೋಲ್ ' ಹಾಡುಗಾರ ಎಲ್ವಿಸ್ ಪ್ರೆಸ್ಲಿ ಒಂದು ಕಾಲಕ್ಕೆ ಉಗ್ಗುತ್ತಿದ್ದರು. ಖ್ಯಾತ ಹಾಲಿವುಡ್ ನಟ ಮರ್ಲಿನ್ ಮನ್ರೊಗೂ ಈ ಸಮಸ್ಯೆಯಿತ್ತು. ಬ್ರಿಟನ್ನ ಜನಪ್ರಿಯ ಪ್ರಧಾನಿ ವಿನ್ ಸ್ಟನ್ ಚರ್ಚಿಲ್ ಕೂಡ ಉಗ್ಗುತ್ತಿದ್ದರು. ಹಾಗೆ ಅಮೆರಿಕದ ಹಾಲಿ ಅಧ್ಯಕ್ಷ ಜೋ ಬಿಡೆನ್ ಅವರಿಗೂ ಉಗ್ಗುವ ಸಮಸ್ಯೆಯಿದೆ. ಇದನ್ನು ಹೊಂದಿಯೂ ಅವರು ಆ ಸ್ಥಾನಕ್ಕೇರಲಿಲ್ಲವೇ? "ಕೆಲವರು ನಡೆಯುವಾಗ ಮುಗ್ಗರಿಸುತ್ತಾರೆ. ಆದರೆ ನಾನು ಮಾತಾಡುವಾಗ' ಎಂದು ನಟಿ ಬ್ರೂಸ್ ವಿಲ್ಲಿಸ್ ಹೇಳಿದ್ದು ಗೊತ್ತಿಲ್ಲವೇ? 'ನಾನು ಉಗ್ಗುತ್ತಿದ್ದೆ. ಆದರೆ ಹಾಡಲಾರಂಭಿಸಿದಾಗ ಉಗ್ಗುತ್ತಿರಲಿಲ್ಲ. ನಂತರ ನಾನು ಹಾಡುವುದನ್ನೇ ನನ್ನ ಕಾಯಕ ಮಾಡಿಕೊಂಡೆ' ಎಂದು ಮಾರ್ಕ್ ಅಂಥೋನಿ ಹೇಳಿದ್ದನ್ನು ನೆನಪಿಸಿಕೊಳ್ಳಿ.
ಉಗ್ಗುವುದನ್ನು ಯಾರು ಬೇಕಾದರೂ ಹಂತ ಹಂತವಾಗಿ ಕಮ್ಮಿ ಮಾಡಿಕೊಳ್ಳಬಹುದು. ಮೊದಲು ನೀವು ಮಾಡಬೇಕಾದುದೆಂದರೆ ಉಗ್ಗುವುವಿಕೆ ಮಹಾನ್ ದೋಷ ಮತ್ತು ಅದರಿಂದ ಆತ್ಮವಿಶ್ವಾಸಕ್ಕೆ ಧಕ್ಕೆಯಾಗುತ್ತಿದೆ ಎಂಬುದನ್ನು ಮೊದಲು ನಿಮ್ಮ ಮನಸಿನಿಂದ ತೆಗೆದು ಹಾಕಿ.ಇದರ ಜೊತೆಗೆ
ಸಾಮಾನ್ಯ ಮಾತನಾಡುವವರು ಉಗ್ಗುವವರ ಬಗ್ಗೆ ಕೀಳಾಗಿ ಕಾಣುವುದು, ಅಪಹಾಸ್ಯ ಮಾಡುವುದನ್ನು ನಿಲ್ಲಿಸೋಣ .
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
No comments:
Post a Comment