ವಿಮರ್ಶೆ ೪೩
ಮಾಗದೇಯ
ಸದ್ಯೋಜಾತ ಭಟ್ಟರು ಬರೆದ ಐತಿಹಾಸಿಕ ಸತ್ಯಗಳ ವಿಶ್ಲೇಷಣೆಯ ಪುಸ್ತಕ ಮಾಗದೇಯ. ಸದ್ಯೊಜಾತ ಭಟ್ಟರ ಮಿಹಿರ ಕುಲಿ ಓದಿದ ನಾನು ಕುತೂಹಲದೊಂದಿಗೆ ಓದಲು ಆರಂಭಿಸಿದೆ. ಮುನ್ನೂರಾ ಎಂಟು ಪುಟಗಳ ಈ ಪುಸ್ತಕ ಓದಿ ಮುಗಿಸಲು ಒಂದು ವಾರ ಬೇಕಾಯಿತು. ಪುಸ್ತಕ ಓದಿ ಮುಗಿಸಿದ ಮೇಲೆ ಇತಿಹಾಸದ ಶಿಕ್ಷಕನಾದ ನನಗೆ ಇತಿಹಾಸದ ಕೆಲ ಹೊಸ ಅಂಶಗಳು ತಿಳಿದವು .
ಹಿಂದಿನ ಅವರ ಪುಸ್ತಕಗಳಂತೆ ಈ ಪುಸ್ತಕದಲ್ಲಿಯೂ ಸಹ ಅವರು ತಮ್ಮ ಶಿಷ್ಯೆಯಾದ ಮಹತಿಯೊಂದಿಗೆ ಸಂವಾದ ಮಾಡುತ್ತಾ ವಿಷಯ ನಿರೂಪಣೆ ಮಾಡುವ ತಂತ್ರ ಮಾಗದೇಯ ದಲ್ಲೂ ಮುಂದುವರೆದಿದೆ.ಘಟನೆಗಳನ್ನು ಐತಿಹಾಸಿಕ, ಪೌರಾಣಿಕ ಮತ್ತು ಮಹಾಗ್ರಂಥಗಳ ಆಧಾರದ ಮೇಲೆ ವಿಶ್ಲೇಷಣೆಯ ಮೂಲಕ ವಿವರಿಸುವ ರೀತಿ ನಿಜಕ್ಕೂ ನನಗೆ ಬಹಳ ಇಷ್ಟವಾಯಿತು.
'ದೇವಾನುಪ್ರಿಯ'ನೆನ್ನಿಸಿಕೊಂಡ ಇತಿಹಾಸಪುರುಷ ಎಂಬ ಮೊದಲ ಅದ್ಯಾಯದಲ್ಲಿ ಬಿಂಬಿಸಾರ ಮತ್ತು ಸಮುದ್ರ ಗುಪ್ತರ ಬಗ್ಗೆ ನಾವು ಕೇಳಿರದ ವಿವಿಧ ವಿಷಯಗಳ ಬಗ್ಗೆ ಬೆಳಕು ಚೆಲ್ಲಿದೆ.
ಮಿಥಿಲೆಯ ಹಾದಿಯಲ್ಲಿ ರಾಮ ಎಂಬ ಅಧ್ಯಾಯದಲ್ಲಿ ಜನಕ, ಸೀತೆ, ರಾಮ, ಮುಂತಾದ ಪೌರಾಣಿಕ ಪಾತ್ರಗಳ ಬಗ್ಗೆ ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ನಮ್ಮನ್ನು ಚಿಂತನೆಗೆ ಹಚ್ಚುತ್ತವೆ.
ಜಾತಕಉಲ್ಲೇಖಗಳು,ಪುರಾಣೋಲ್ಲಿಖಿತ,ವೈಶಾಲಿಯ ರಾಜ ವಂಶ , ಮಗಧದ ಭೌಗೋಳಿಕ ಅವಲೋಕನ, ಇತಿಹಾಸದತ್ತ ,ಆರ್ಯರು ಮತ್ತು ವ್ರಾತ್ಯರು,ಸೂತಪುರಾಣಿಕರು,ಇನ್ನಷ್ಟು ವಂಶಾವಳಿ,ಪಿತೃಲೋಕದ ಹೆಬ್ಬಾಗಿಲು ಗಯಾ ಮುಂತಾದ ಅದ್ಯಾಯಗಳು ಒಂದಕ್ಕಿಂತ ಒಂದು ಹೊಸ ಚಿಂತನೆಗೆ ಹಚ್ಚಿ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತವೆ.
ಸೇತೂರಾಮ್ ರವರು ಪುಸ್ತಕದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹೀಗೆ ದಾಖಲಿಸಿದ್ದಾರೆ .ಸದ್ಯೋಜಾತ ಭಟ್ಟರು ಮಾಗಧೇಯದಲ್ಲಿ ಅಲೆಕ್ಸಾಂಡರ್ನ ಪೂರ್ವದ ಕಾಲಮಾನದ ಇತಿಹಾಸ ಬಿಚ್ಚಿಟ್ಟಿದ್ದಾರೆ. ಚಾಣಕ್ಯ ಚಂದ್ರಗುಪ್ತರ ಕಾಲ ಕ್ರಿಸ್ತಪೂರ್ವ' ೧೫೩೪. ಅಲೆಕ್ಸಾಂಡರನ ಕಾಲ ಕ್ರಿಸ್ತಪೂರ್ವ ೩೨೭. ಗ್ರೀಕ್ ಲೇಖಕರು ಅವರ ಕಾಲದಲ್ಲಿದ್ದ ಚಂದ್ರಮಸು ಅನ್ನುವವನನ್ನು ಉಲ್ಲೇಖಿಸಿದ್ದಾರಂತೆ. ಇವನನ್ನೇ ಇತಿಹಾಸಕಾರರು ಚಂದ್ರಗುಪ್ತ ಎಂದು ಬಣ್ಣಿಸಿದ್ದಾರಂತೆ ಇಷ್ಟು ಮಾಹಿತಿಗಳನ್ನು ಶ್ರೀಯುತರು ಆಧಾರ ಪ್ರಮಾಣ ಸಮೇತ ಉಲ್ಲೇಖಿಸುತ್ತಾರೆ. ಹೀಗಿದ್ದೂ ಇತಿಹಾಸಕಾರರು ಕ್ರಿಸ್ತ ಪೂರ್ವ ೧೫೩೪ರ ಚಂದ್ರಗುಪ್ತ ಚಾಣಕ್ಯರನ್ನು ಅಲೆಕ್ಸಾಂಡರನ ಕಾಲಕ್ಕೆ ತಂದು ಸುಮಾರು ೧೨೦೦ ವರ್ಷಗಳ ಈ ದೇಶದ ಇತಿಹಾಸವನ್ನೇ ಮುಚ್ಚಿಟ್ಟಿದ್ದಾರೆ. ಈ ದೇಶದ ಅರಿವಿಗೆ ಮಾಗಧೇಯ ಮುಖ್ಯವಾಗತ್ತೆ.
ಇತಿಹಾಸ ಮರೆತ ಸಮುದಾಯಕ್ಕೆ ಭವಿಷ್ಯ ಇರಲ್ಲ ಹಾಗಾಗಿ ಇತಿಹಾಸ ಮುಖ್ಯ ಸಾಧನೆ ಸಂಶೋಧನೆಗಳೆಲ್ಲ. ವ್ಯಕ್ತಿ ಮೂಲಕವೇ ಹೊರತು ಸಂಸ್ಥೆ ಮೂಲಕವಲ್ಲ, ಈ ನಿಟ್ಟಿನಲ್ಲಿ ಶ್ರೀಯುತರ ಪ್ರಯತ್ನ ಸ್ತುತ್ಯಾರ್ಹ ಮಾತ್ರವಲ್ಲ ಶ್ಲಾಘನೀಯವೂ ಕೂಡಾ. ಪ್ರಸ್ತುತದಲ್ಲಿ ಅದು ಮುಖ್ಯವೂ ಹೌದು.
ಮಗಧರ ಕಾಲಜ್ಞಾನದಿಂದ ಆಧುನಿಕ ಕಾಲಮಾಪನದವರೆಗಿನ ವರಾಹಮಿಹಿರರ ಕಾಲಜ್ಞಾನ, ಆರ್ಯಭಟರ ಸಿದ್ಧಾಂತ, ಕೊನೆ ಇಲ್ಲದ ಬಾನಿನಲ್ಲಿ ಭಾನುವಿನ ಹೆಜ್ಜೆಗಳನ್ನು ಕಾಲಮಾಪನದಲ್ಲಿ ಉಪಯೋಗಿಸುವ ತಂತ್ರ, ನಿರಂತರವಾಗಿರುವ ಕಾಲದ ಪ್ರವಾಹವನ್ನು ಕೊನೆಯಿಲ್ಲದ ವರ್ತುಲಗಳಲ್ಲಿ ವಿಂಗಡಿಸುವ ನೈಪುಣ್ಯ ಅವುಗಳಿಗೆ ಹೊಸಭಾಷ್ಯಗಳನ್ನು ಒದಗಿಸುವ ಸಾಧ್ಯತೆಗಳು, ಇವೆಲ್ಲ ನಮ್ಮನ್ನು ಬಡಿದೆಬ್ಬಿಸಿದುದರಿಂದ ಆ ಹೆಸರು ಯಾಕೋ ಬಹಳ ವಿಚಿತ್ರವೆನಿಸಿತು. ಗ್ರಂಥವನ್ನು ಪೂರ್ಣವಾಗಿ ಓದಿದ ಮೇಲೆ ಎಲ್ಲವೂ ತಿಳಿಯದಿದ್ದರೂ ಕಾಲಕ್ಕೆ ಇನ್ನೊಂದು ಆಧ್ಯಾತ್ಮಿಕ ಆಯಾಮವು ಇರುವ ಸಾಧ್ಯತೆ ತಿಳಿದು ಸಂತೋಷವಾಯಿತು. ಸದ್ಯೋಜಾತರ ಗ್ರಂಥ 'ಮಾಗಧೇಯ' ಏನೋ ಹೊಸತನ್ನು ಹೇಳಲಿದೆ ಎನ್ನುವ ನಿರೀಕ್ಷೆ ಹುಸಿಯಾಗಲಿಲ್ಲ ಎಂಬ ಕೆ ಪಿ ರಾವ್ ರವರ ಮಾತುಗಳನ್ನು ಯಾರೂ ಅಲ್ಲಗಳೆಯಲಾರರು.
ಸದ್ಯೋಜಾತ ಭಟ್ಟರು ಬಹುಮುಖ ಪ್ರತಿಭೆಯನ್ನು ಉಳ್ಳವರು, ಸಂಸ್ಕೃತ ಭಾಷೆಯ ಮೇಲೆ ಅತ್ಯುತ್ತಮ ಹಿಡಿತವನ್ನು ಹೊಂದಿರುವವರು. ಶಾಸನಗಳನ್ನು ಓದಲು ತಿಳಿದವರು. ಹಾಗಾಗಿ ಇವರು ತಮ್ಮ ಮಾಗಧೇಯ ಕೃತಿಯಲ್ಲಿ ಕೇವಲ ಪುರಾಣಗಳಲ್ಲಿರುವ ಮಾಹಿತಿಯನ್ನಷ್ಟೇ ನೀಡುತ್ತಾ ಹೋಗುವುದಿಲ್ಲ. ಬದಲಿಗೆ ಮರಾಣಗಳಲ್ಲಿರುವ ಮಾಹಿತಿಯ ಬಗ್ಗೆ ಪಾಶ್ಚಾತ್ಯ ವಿದ್ವಾಂಸರು ಏನು ಹೇಳುತ್ತಾರೆ ಎನ್ನುವುದನ್ನು ದಾಖಲಿಸುವುದರ ಜೊತೆಯಲ್ಲಿ, ಅನೇಕ ಕಡೆ ಖಗೋಳೀಯ ಪುರಾವೆಗಳನ್ನೂ ಒದಗಿಸುತ್ತಾರೆ. ಇದು ಅವರ ಆಧ್ಯಯನದ ಆಳ ಹಾಗೂ ವಿಸ್ತ್ರತ ಹರವನ್ನು ಸೂಚಿಸುತ್ತದೆ. ಹಾಗಾಗಿ ಭಾರತವನ್ನಾಳಿದ ರಾಜವಂಶಗಳ ಹಿನ್ನೆಲೆಯನ್ನು ಓದಿ, ಅರ್ಥ ಮಾಡಿಕೊಂಡು, ಆ ಬಗ್ಗೆ ವಿವೇಚನೆಯನ್ನು ಮಾಡಲು ಮಾಗಧೇಯ ಒಳ್ಳೆಯ ಪ್ರವೇಶವನ್ನು ಕೊಡುತ್ತದೆ. ಈ ಹಿನ್ನೆಲೆಯಲ್ಲಿ ಮಾಗಧೇಯವನ್ನು ನಾವೆಲ್ಲರೂ ಸ್ವಾಗತಿಸಬೇಕು.
ಸದ್ಯೋಜಾತ ಭಟ್ಟರು ಈ ಪುಸ್ತಕದಲ್ಲಿ ಪ್ರಧಾನವಾಗಿ ಮಗಧದ ಇತಿಹಾಸವನ್ನು ದಾಖಲಿಸಿದ್ದಾರೆ. ಆದರೆ ಭಾರತದಲ್ಲಿ ಕನಿಷ್ಠ 120 ಪ್ರಧಾನ ರಾಜವಂಶಗಳು ಆಳಿವೆ. ಈ ವಂಶಗಳಲ್ಲಿ ಅದೆಷ್ಟು ರಾಜ ಮಹಾರಾಜರು ಹುಟ್ಟಿ, ಈ ಭೂಮಿಯಲ್ಲಿ ರಾಜ್ಯಭಾರವನ್ನು ಮಾಡಿದರೋ, ಆ ಎಲ್ಲ ನಿಖರ ಮಾಹಿತಿಯು ನಮಗೆ ದೊರೆಯದಾಗಿದೆ. ಸದ್ಯೋಜಾತ ಭಟ್ಟರು ಈ ಎಲ್ಲ ರಾಜವಂಶಗಳ ಇತಿಹಾಸವ ಕಾಲಬದ್ಧವಾಗಿ ಬರೆದರೆ, ಅದು ನಮ್ಮದೇಶದ ಅತ್ಯಮೂಲ್ಯ ರತ್ನವಾದೀತು ಹಾಗಾಗಿ ಸದ್ಯೋಜಾತ ಭಟ್ಟರು ಇನ್ನು ಮುಂದೆ ಒಂದು ಮಹತ್ವಾಕಾಂಕ್ಷೆಯನ್ನ ಇಟ್ಟುಕೊಂಡು ಬರೆಯುವುದು ಒಳ್ಳೆಯದು. ಸದ್ಯೋಜಾತ ಭಟ್ಟರು, ನಮ್ಮ ಕಣ್ಣಿಗೆ ಬೀಳದೆ ಮರೆಯಾಗಿರುವ ಭಾರತೀಯ ಸಂಸ್ಕೃತಿಯ ವಿವಿಧ ಆಯಾಮಗಳು ಮತ್ತಷ್ಟು ಬರೆಯಲಿ ಎಂದು ಆಶಿಸುತ್ತೇನೆ. ಭಾರತದ ಇತಿಹಾಸದ ಬಗ್ಗೆ ಆಸಕ್ತಿ ಇರುವವರು, ಇತಿಹಾಸ ಬೋಧಿಸುವವರು, ಮತ್ತು ವಿದ್ಯಾರ್ಥಿಗಳು ಈ ಪುಸ್ತಕವನ್ನು ಓದಲೇಬೇಕು ಎಂದು ನಾನು ಪ್ರೀತಿಪೂರ್ವಕವಾಗಿ ಆಗ್ರಹಿಸುತ್ತೇನೆ.
ಪುಸ್ತಕದ ಹೆಸರು: ಮಾಗದೇಯ
ಲೇಖಕರು: ಸದ್ಯೋಜಾತ
ಪ್ರಕಾಶನ: ಸಮನ್ವಿತ .ಬೆಂಗಳೂರು
ಬೆಲೆ:300₹
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು.
No comments:
Post a Comment