ಗಣೇಶ ಚತುರ್ಥಿ ಭಕ್ತಿಯಿಂದ ಆಚರಿಸಿ ಭಾವೈಕ್ಯತೆ ಮೂಡಿಸೋಣ
ಭಾರತವು ಸುಮಾರು ಐದು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ದೇಶವಾಗಿದೆ. ನಮ್ಮ ದೇಶದಲ್ಲಿ ವಿಭಿನ್ನ ಸಂಸ್ಕೃತಿಗಳ, ವಿವಿಧ ಭಾಷೆಗಳ, ವಿವಿಧ ಧರ್ಮಗಳು, ಆಚಾರ ವಿಚಾರ ಹೀಗೆ ವಿವಿಧತೆಗಳ ನಡುವೆಯೂ ಏಕತೆ ಸಾಧಿಸಿ ನಮ್ಮ ದೇಶವು ಒಂದು ಉಪಖಂಡ ಎಂಬ ಹೆಸರಿಗೆ ಅನ್ವರ್ಥಕವಾಗಿ ಶೋಭಿಸುತ್ತಿದೆ.
ನಮ್ಮ ದೇಶದ ಸಾಂಸ್ಕೃತಿಕ ಪರಂಪರೆಯು ಶ್ರೀಮಂತ ಮತ್ತು ವಿಭಿನ್ನ. ನಮ್ಮ ಆಚರಣೆಗಳು ಮತ್ತು ಸಂಸ್ಕೃತಿಗಳು ನಮ್ಮ ಹೆಮ್ಮೆ .ಈ ಆಚರಣೆಗಳು ಹಬ್ಬ ಹರಿದಿನಗಳ ಆಚರಣೆಗಳು ನಮ್ಮ ಸಂಸ್ಕೃತಿ ಪರಂಪರೆಯನ್ನು ಸೂಚಿಸುತ್ತವೆ. ಹಬ್ಬಗಳಲ್ಲಿ ಕೌಟುಂಬಿಕವಾಗಿ ಆಚರಣೆ ಮಾಡುವ ಹಲವಾರು ಹಬ್ಬಗಳನ್ನು ಕಾಣಬಹುದು ಜೊತೆಗೆ ಸಮುದಾಯದ ಜೊತೆಗೆ ಆಚರಿಸುವ ಕೆಲವು ಹಬ್ಬಗಳು ಇವೆ. ಇಂತಹ ಹಬ್ಬಗಳಲ್ಲಿ ಮನೆಯಲ್ಲಿ ವೈಯಕ್ತಿಕವಾಗಿ ಆಚರಿಸುತ್ತಾ ಕ್ರಮೇಣವಾಗಿ ಸಮುದಾಯದಲ್ಲಿ ಆಚರಿಸುವ ಹಬ್ಬವೇ ಗಣೇಶ ಚತುರ್ಥಿ.
ಧಾರ್ಮಿಕವಾಗಿ ನಾವು ಗಣೇಶನನ್ನು ಪುರಾತನ ಕಾಲದಿಂದಲೂ ಪುಜಿಸುತ್ತಾ, ನಮ್ಮ ಸಂಕಷ್ಟಗಳನ್ನು ನಿವಾರಿಸಲು ಸಂಕಷ್ಟಹರನೆಂದು ,ವಿಘ್ನಗಳನ್ನು ಕಳೆಯಲು ವಿಘ್ನ ವಿನಾಯಕ ಎಂದು ಕಾರ್ಯಗಳು ಸುಗಮವಾಗಿ ಸಾಗಲು ಗಣಪನನ್ನು ಸಹಸ್ರನಾಮದ ಮೂಲಕ ಅರ್ಚಿಸಿ ಕೃತರಾರ್ಥರಾಗುತ್ತಿದ್ದೇವೆ.ವೈಯಕ್ತಿಕವಾಗಿ ಗಣಪನ ಭಜಿಸಿ ಒಳಿತು ಕಂಡು ಶಾಂತಿ ನೆಮ್ಮದಿ ಪಡೆದ ನಾವುಗಳು ಕ್ರಮೇಣ ಗಣೇಶನನ್ನು ಸಮುದಾಯಕ್ಕೆ ತಂದು ಸಮುದಾಯದೊಂದಿಗೆ ಉತ್ಸವ ಮಾಡಿ ಗಣೇಶೋತ್ಸವ ಮಾಡಿದ ಕಥೆಯೇ ರೋಚಕ .ಇದರಲ್ಲಿ ದೇಶಪ್ರೇಮದ ಹಿನ್ನೆಲೆ ಇದೆ, ಐತಿಹಾಸಿಕ ಮಹತ್ವ ಇದೆ, ಒಗ್ಗಟ್ಟು ಸಾರಿದ ಹಿರಿಮೆ ಇದೆ, ಸಾಂಸ್ಕೃತಿಕ ಪರಂಪರೆಯನ್ನು ಪೋಷಿಸಿದ ಹೆಮ್ಮೆಯಿದೆ. ಬ್ರಿಟೀಷರ ವಿರುದ್ದ ಸಮರ ಸಾರಿ ಸ್ವಾತಂತ್ರ್ಯ ಪಡೆದ ಕಿಚ್ಚಿನ ಕಥೆ ಇದೆ.ಭಕ್ತಿಯೊಂದಿಗೆ ಭಾವೈಕ್ಯತೆಯನ್ನು ಸಾಧಿಸಿದ ಯಶೋಗಾಥೆಯಿದೆ.
ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಯುರೋಪಿಯನ್ನರು ಕ್ರಮೇಣವಾಗಿ ನಮ್ಮ ದೇಶದಲ್ಲಿ ನೆಲೆಯೂರಿ ನಮ್ಮನ್ನು ಗುಲಾಮರ ರೀತಿ ನಡೆಸಿಕೊಂಡು ನಮ್ಮ ಆಳುತ್ತಾ ನಮ್ಮ ಸ್ವಾತಂತ್ರ್ಯಕ್ಕೆ ಸಂಚಕಾರ ತಂದರು .ಡಚ್ಚರು, ಪ್ರೆಂಚರು, ಪೋರ್ಚುಗೀಸರು ಬ್ರಿಟೀಷರು ನಮ್ಮ ದೇಶಕ್ಕೆ ವ್ಯಾಪಾರ ಮಾಡಲು ಬಂದು ನಿಧಾನವಾಗಿ ನಮ್ಮನ್ನು ಆಳುತ್ತಿದ್ದರೂ ಈ ವಿಷಯ ನಮ್ಮ ಅರಿವಿಗೆ ಬರಲು ನೂರಾರು ವರ್ಷಗಳೇ ಬೇಕಾಯಿತು, ಕಾರಣ ಅಂದು ಶಿಕ್ಷಿತರ ಪ್ರಮಾಣ ಪ್ರತಿಶತ ಹನ್ನೆರಡು ಮಾತ್ರ. ಕೆಲ ದೇಶಭಕ್ತರು ಮತ್ತು ಮಹಾನ್ ವ್ಯಕ್ತಿಗಳು ಸಭೆ ಸಮಾರಂಭಗಳನ್ನು ಆಯೋಜಿಸಿ ಜನರಲ್ಲಿ ದೇಶಭಕ್ತಿಯನ್ನು ಜಾಗೃತಗೊಳಿಸಿದರು.ಅದರ ಪರಿಣಾಮವಾಗಿ 1857 ರಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆದು ಬ್ರಿಟೀಷರಲ್ಲಿ ನಡುಕ ಉಂಟಾಯಿತು.
ಇದನ್ನು ಅರಿತ ಇಂಗ್ಲಿಷರು ಭಾರತೀಯರು ಸಭೆ ಸೇರದಂತೆ, ಒಟ್ಟೊಟ್ಟಿಗೆ ಸೇರದಂತೆ ಕಾನೂನು ರೂಪಿಸಿ ರಾಜಕೀಯ ನಿರ್ಬಂಧಗಳನ್ನು ಹೇರಿದರು .ಆ ಕಾಲದಲ್ಲಿ ನಮ್ಮನ್ನು ಒಂದುಗೂಡಿಸುವ ಚಿಂತನೆ ಮಾಡಿ ರಾಜಕೀಯ ನಿರ್ಬಂಧಗಳನ್ನು ಮೀರಿ ಧಾರ್ಮಿಕವಾಗಿ ನಮ್ಮನ್ನು ಸೇರಿಸುವ ಕಾರ್ಯ ಮಾಡಿದವರು ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸ್ವರಾಜ್ಯ ನನ್ನ ಜನ್ಮಸಿದ್ದ ಹಕ್ಕು ಅದನ್ನು ಪಡೆದೇ ತೀರುವೆ ಎಂದು ಘರ್ಜಿಸಿ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದ ಬಾಲಗಂಗಾಧರ ತಿಲಕ್ ರವರು.
ಭಕ್ತಿ ಹಾಗೂ ಭಾವೈಕ್ಯತೆಯ ಹಿನ್ನೆಲೆಯಲ್ಲಿ ಬಾಲಗಂಗಾಧರ ತಿಲಕರ ಮುಂದಾಳತ್ವದಲ್ಲಿ ಹುಟ್ಟಿ ಬೆಳೆದ ಗಣೇಶ ಹಬ್ಬವು ಇಂದು ನಮ್ಮೆಲ್ಲರ ಅಚ್ಚುಮೆಚ್ಚಿನ ಹಬ್ಬ. ಚದುರಿ ಹೋಗಿದ್ದ ಅಂದಿನ ಅನಕ್ಷರಸ್ಥ ಸಮಾಜದಲ್ಲಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಜನರನ್ನು ಒಂದೇ ವೇದಿಕೆಯಡಿ ಏಕೀಕರಣಗೊಳಿಸಲು ತಿಲಕರು ಆಯ್ಕೆ ಮಾಡಿದ್ದೇ ಈ ಗಣೇಶ ಹಬ್ಬವನ್ನು. ಜನರೂ ಅಷ್ಟೇ. ತಿಲಕರ ಕರೆಗೆ ಜಾತಿ-ಮತ ಬೇಧವಿಲ್ಲದೆ ಬಹುಬೇಗನೆ ಸ್ಪಂದಿಸಿದರು. ದೇಶಾದ್ಯಂತ ಭಕ್ತಿಯ ಪ್ರವಾಹ ಹರಿಯುವುದರೊಂದಿಗೆ ಬ್ರಿಟಿಷರಿಗೆ ನಮ್ಮ ಏಕತೆಯ ಬಿಸಿಯನ್ನೂ ಮುಟ್ಟಿಸಿತು.
ಸ್ವಾತಂತ್ರ್ಯ ಪೂರ್ವದಲ್ಲಿ ಗಣೇಶನ ಹಬ್ಬ ಕೇವಲ ಕುಟುಂಬದ ಆಚರಣೆಯಾಗಿತ್ತು. ಮನೆ-ಮನೆಗಳಲ್ಲಿ ಮಾತ್ರ ಆಚರಣೆಯಲ್ಲಿದ್ದ ಗಣೇಶೋತ್ಸವವನ್ನು ಲೋಕಮಾನ್ಯ ಬಾಲಗಂಗಾಧರ ತಿಲಕರು ಜನರಲ್ಲಿನ ಸ್ವಾತಂತ್ರ್ಯದ ಕಿಚ್ಚನ್ನು ಹೊರಗೆಡುವುವ ಸಾಧನವಾಗಿ ಬಳಸಿಕೊಂಡರು. 1892ರಲ್ಲಿ ಮಹಾರಾಷ್ಟ್ರದಲ್ಲಿ ಬಾವ್ ಸಾಹೆಬ್ ಲಕ್ಷ್ಮಣ್ ಜವೇಲ್ ಅವರು ಪ್ರಪ್ರಥಮ ಸಾರ್ವಜನಿಕ ಗಣೇಶೋತ್ಸವನ್ನು ಆಚರಣೆ ಮಾಡಿದರಾದರೂ, 1893ರಲ್ಲಿ ತಿಲಕರು ಅದಕ್ಕೆ ಸಂಪೂರ್ಣ ಸಾರ್ವಜನಿಕ ಸ್ವರೂಪ ನೀಡಿದರು. ತಮ್ಮ ಕೇಸರಿ ಪತ್ರಿಕೆಯಲ್ಲಿ ಸಾರ್ವಜನಿಕ ಗಣೇಶೋತ್ಸವದ ಪರಿಕಲ್ಪನೆ ಕುರಿತು ಬರೆದಿದ್ದ ತಿಲಕರು, 1894ರಲ್ಲಿ ಪುಣೆಯ ಕೇಸರಿ ವಾಡದಲ್ಲಿ ಪ್ರಪ್ರಥಮ ಸಾರ್ವಜನಿಕ ಗಣೇಶೋತ್ಸವವನ್ನು ಆರಂಭಿಸಿದರು.
ಗಣೇಶ ಚತುರ್ಥಿಯ ಸಾಂಸ್ಕೃತಿಕ ಮಹತ್ವವನ್ನು ಅರಿತಿದ್ದ ಲೋಕಮಾನ್ಯ ತಿಲಕರು, ಬ್ರಾಹ್ಮಣರು ಮತ್ತು ಬ್ರಾಹ್ಮಣೇತರರ ನಡುವಿನ ಅಂತರವನ್ನು ತುಂಬಲು, ಅವರ ನಡುವೆ ಕೆಳಹಂತದಲ್ಲಿ ಐಕ್ಯತೆ ಮೂಡಿಸುವುದಕ್ಕೆ ಸೂಕ್ತ ಸಂದರ್ಭವಾಗಿ ಗಣೇಶೋತ್ಸವದ ಆಚರಣೆಯನ್ನು ರಾಷ್ಟ್ರೀಯ ಹಬ್ಬವಾಗಿ ಸಮರ್ಪಕವಾಗಿ ಬಳಸಿಕೊಂಡರು. ಆರಂಭದಲ್ಲಿ ಇದು ಜಾತಿ-ಜಾತಿಗಳ ನಡುವಿನ ಏಕತೆಯ ಪ್ರತೀಕದಂತೆ ಕಂಡು ಬಂದರೂ ಕ್ರಮೇಣ, ಬ್ರಿಟೀಷ್ ದುರಾಡಳಿತದ ವಿರುದ್ಧ ತಿಲಕರು ಆರಂಭಿಸಿದ ಪರೋಕ್ಷ ಹೋರಾಟ ಎಂಬುದು ಅರ್ಥವಾಯಿತು. ತಿಲಕರು ಬ್ರಿಟಿಷರ ವಿರುದ್ಧ ಭಾರತದ ಪ್ರತಿಭಟನೆಗೆ ಗಣೇಶನನ್ನು ಕೇಂದ್ರ ಬಿಂದುವಾಗಿ ಬಳಸಿಕೊಂಡರು. ಏಕೆಂದರೆ ಗಣೇಶ ಪ್ರತಿಯೊಬ್ಬರ ಪಾಲಿಗೂ ದೇವಸ್ವರೂಪಿಯಾಗಿದ್ದ.
ಮಹಾರಾಷ್ಟ್ರದಲ್ಲಿ ಪೇಶ್ವೆ ಆಡಳಿತದಲ್ಲಿ ಮುಖ್ಯ ಹಬ್ಬವಾಗಿದ್ದ ಗಣೇಶೋತ್ಸವ, ಸ್ವರಾಜ್ ಆಂದೋಲನದ ಸಂದರ್ಭದಲ್ಲಿ ಸಂಘಟಿತ ಸ್ವರೂಪ ಪಡೆಯಿತು. ಗಣೇಶನ ಬೃಹತ್ ವಿಗ್ರಹಗಳನ್ನು ಪ್ರತಿಷ್ಠಾಪಿಸಿ 10ನೇ ದಿನ ಎಲ್ಲ ವಿಗ್ರಹಗಳನ್ನು ವಿಸರ್ಜನೆ ಮಾಡುವ ಪ್ರಕ್ರಿಯೆಯನ್ನು ತಿಲಕರು ಆರಂಭಿಸಿದರು. ನೃತ್ಯ, ನಾಟಕಗಳು, ಕವಿತೆ ವಾಚನ, ಸಂಗೀತ ಗೋಷ್ಠಿಗಳು, ಚರ್ಚಾಗೋಷ್ಠಿಗಳು ಮುಂತಾದವುಗಳ ರೂಪದಲ್ಲಿ ಗಣೇಶೋತ್ಸವವು ಸಮುದಾಯದ ಪಾಲ್ಗೊಳ್ಳುವಿಕೆಗೆ ನೆರವಾಯಿತು. ಜನರ ಮೇಲೆ ನಿಯಂತ್ರಣ ಹೇರಲು ಬ್ರಿಟಿಷ್ ಆಡಳಿತವು ಸಾಮಾಜಿಕ ಮತ್ತು ರಾಜಕೀಯ ಸಭೆಗಳನ್ನು ಬಹಿಷ್ಕರಿಸಿದ ಸಂದರ್ಭದಲ್ಲಿ ಗಣೇಶೋತ್ಸವವು ಎಲ್ಲಾ ಜಾತಿ, ಸಮುದಾಯಗಳು ಒಂದು ಕಡೆ ಕಲೆಯುವ ತಾಣವಾಯಿತು.
ಹೀಗೆ ಗಣೇಶ ಗುಲಾಮಗಿರಿಯ ವಿಘ್ನವನ್ನು ನಿವಾರಿಸಿ ನಮಗೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂಬುದನ್ನು ನಾವು ಸ್ಮರಿಸಲೇಬೇಕು.
ಸ್ವಾತಂತ್ರ್ಯದ ಅಮೃತಮಹೋತ್ಸವ ಆಚರಿಸಕೊಳ್ಳುವ ಈ ದಿನಗಳಲ್ಲಿ ಗಣೇಶ ಉತ್ಸವವನ್ನು ವಿಭಿನ್ನ ದೃಷ್ಟಿಕೋನದಿಂದ ಚಿಂತಿಸಿ ಆಚರಿಸಬೇಕಾದ ಅನಿವಾರ್ಯತೆ ಇದೆ.
ಈ ದಿನಮಾನಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಎಂದರೆ ಹಣ ವಸೂಲಿ ಮಾಡಿ ,ಆರ್ಕೆಸ್ಟ್ರಾ ಮಾಡಿ, ಶಬ್ಬಮಾಲಿನ್ಯ ಮಾಡುತ್ತಾ ಅರೆ ಬರೆ ಬಟ್ಟೆ ಧರಿಸಿ ಅಶ್ಲೀಲ ಹಾಡುಗಳಿಗೆ ನೃತ್ಯ ಮಾಡುವುದು ಎಂಬ ಅಲಿಖಿತ ನಿಯಮವಿದೆ .ಇದು ಬದಲಾಗಬೇಕಿದೆ. ನಮ್ಮ ಸಂಸ್ಕೃತಿ ಕಲೆ , ಸಂಗೀತದ ಕಾರ್ಯಕ್ರಮಗಳನ್ನು ನಾವು ಆಯೋಜಿಸುವ ಮೂಲಕ ಪಾಶ್ಚಿಮಾತ್ಯ ಸಂಸ್ಕೃತಿಗಳ ವ್ಯಾಮೋಹಕ್ಕೆ ಬಲಿಯಾಗದೆ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಉಳಿಸೋಣ.
ಭಕ್ತಿಯಿಂದ ಆಚರಿಸಬೇಕಾದ ಗಣೇಶೋತ್ಸವ ಇಂದು ಅನವಶ್ಯಕ ಪ್ರಚೋದನೆ ಮತ್ತು ಅನಿಶ್ಚಿತತೆ ಅಪನಂಬಿಕೆಗಳು ನುಂಗಿ ಹಾಕುವ ಹಂತಕ್ಕೆ ಬಂದಿರುವುದು ವಿಪರ್ಯಾಸ . ಅಲ್ಲಲ್ಲಿ ಅನ್ಯ ಧರ್ಮಿಯರು ಸಹ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸುವ ಪರಿಪಾಠವು ಭಾವೈಕ್ಯತೆ ಪೂರಕವಾದ ವಾತಾವರಣ ಮೂಢಿಸುತ್ತಿರುವುದು ಆಶಾವಾದವಾಗಿದೆ.ಅಂದು ತಿಲಕರು ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಗಣೇಶೋತ್ಸವವನ್ನು ವೇದಿಕೆ ಮಾಡಿಕೊಂಡ ರೀತಿಯಲ್ಲಿ ಇಂದು ನಾವು ಸಮಾಜದಲ್ಲಿ ಇರುವ ಭ್ರಷ್ಟಾಚಾರ, ಅಸಮಾನತೆ, ಬಡತನ ,ಮುಂತಾದ ಸವಾಲುಗಳನ್ನು ಮೆಟ್ಟಿ ನಿಲ್ಲಲು ಚರ್ಚಿಸುವ ವೇದಿಕೆ ಮಾಡಿಕೊಳ್ಳೋಣ .ಆ ಮೂಲಕ ಸಾಮಾಜಿಕ ಹಬ್ಬವನ್ನು ಸಹಕಾರದ ಹಬ್ಬವಾಗಿ ಪರಿವರ್ತನೆ ಮಾಡೋಣ. ಭಕ್ತಿಯಿಂದ ಭಾವೈಕ್ಯತೆ ಮೂಡಿಸಿ ಏಕತೆಯನ್ನು ಸಾಧಿಸಿ ಭಾರತಾಂಭೆಯ ಕೀರ್ತಿಯನ್ನು ಜಗದೆಲ್ಲೆಡೆ ಪಸರಿಸೋಣ.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
No comments:
Post a Comment