05 August 2022

ಸೋನಾಗಾಚಿ....


 


ವಿಮರ್ಶೆ ೪೭ 

ಸೋನಾಗಾಚಿ


ಹದಿಮೂರು ಕಥೆಗಳನ್ನು ಹೊಂದಿರುವ "ಸೋನಾಗಾಚಿ " ಕಥಾ ಸಂಕಲನದ ಪ್ರತಿಯೊಂದು ಕಥೆಯೂ ವಿಭಿನ್ನವಾದ ಕಥಾವಸ್ತುವನ್ನು ಹೊಂದಿವೆ. ಇಲ್ಲಿನ ಬಹುತೇಕ ಕಥೆಗಳು ಮಯೂರ ಮಾಸಪತ್ರಿಕೆಯಲ್ಲಿ ಪ್ರಕಟ ಗೊಂಡಂಥವುಗಳೇ ಆಗಿವೆ. ಸುಧಾ ವಾರಪತ್ರಿಕೆ ಮತ್ತು ಸಂಜೆ ವಾಣಿ ವಿಶೇಷಾಂಕದಲ್ಲಿ ಪ್ರಕಟವಾದ ಕಥೆಗಳು ಇವೆ ಕೆಲವನ್ನು ಈಗಾಗಲೇ ಓದಿರುವೆ.ಎಲ್ಲಾ ಕಥೆಗಳು ಒಂದೆಡೆ ಇರುವುದರಿಂದ ಆಗಾಗ ಓದಿ ಮೆಲುಕು ಹಾಕಬಹುದು.

ಹಂದ್ರಾಳ ರವರು ಪಾತ್ರಗಳ ಸೃಷ್ಟಿ ಮಾಡುವಲ್ಲಿ ಘಟನೆಗಳನ್ನು ಕಟ್ಟಿಕೊಡುವುದರಲ್ಲಿ ನಿಸ್ಸೀಮರು 

ರಾಮಲಾಲ್, ಅತ್ತರು ಮಾರುವ ಸಲೀಮ್, ಮಾದೇಗೌಡ  ಕೆಲವು ಉದಾಹರಣೆಗಳು .ಈ ಪಾತ್ರಗಳು  ಸಾಮಾನ್ಯರಲ್ಲಿ ಸಾಮಾನ್ಯರಾದರೂ ಇವರೆಲ್ಲ ಕೊನೆಗೆ ತಮ್ಮ ನಿಜಕ್ಕೆ ಮರಳುವ ಧೀಮಂತರು, ಹಂದ್ರಾಳರ ಕತೆಗಳಿಗಾಗಿಯೇ ಇವರು ನಿಜವಾಗುವ ಪಾತ್ರಗಳಲ್ಲ; ನಿಜ ಜೀವನದಲ್ಲಿಯೂ ನಾವು ಕಾಣುವ ಇಂತಹ ಅಪರೂಪದ ವ್ಯಕ್ತಿಗಳೇ ಹಂದ್ರಾಳರ ಕತೆಗಳಲ್ಲಿ ಹೊಸದಾಗಿ ಜೀವಧಾರಣೆ ಮಾಡಿ ಹೀರೋಗಳಾಗುತ್ತಾರೆ. ಅನೂಹ್ಯಳ ಸುತ್ತ ಕಟ್ಟಿಕೊಂಡಿದ್ದ ಬ್ರೆಕ್ಟನ ಕನಸು ಮುರಿದು ಬಿದ್ದಾಗ ಆತ ವಾಸ್ತವಕ್ಕೆ ಮರಳುತ್ತಾನೆ. 'ಸೋನಾಗಾಚಿ'ಯ ಅಲ್ಲಮಪ್ರಭು ವೇಶ್ಯೆಯನ್ನು ವರಿಸಿ ಉದ್ಧಾರವಾಗುತ್ತಾನೆ. ಇವರೆಲ್ಲರ ಉದ್ಧಾರ ಕತೆಗಾರನ ಕಲ್ಪನೆಯಲ್ಲಷ್ಟೆ ರೂಪು ಪಡೆದದ್ದಲ್ಲ. ನಮ್ಮ ಸುತ್ತ ಕಾಣುವ ವ್ಯಕ್ತಿಗಳ ದೈನಂದಿನ ವಾಸ್ತವಗಳೇ ಇಲ್ಲಿ ಕತೆಯಾಗುತ್ತವೆ. ಸಾಮಾನ್ಯ ಮನುಷ್ಯನ ವಿವೇಕ, ಮತ್ತು ಜಾಣತನಗಳನ್ನು ಈ ಕತೆಗಳು ಗೆಲ್ಲಿಸುತ್ತವೆ. ಬೈ ಎಲೆಕ್ಷನ್‌ನಲ್ಲಿ ಹುರಿಯಾಳಾಗಿ ನಿಲ್ಲುವ ಗಿರಿಗೌಡನಳ್ಳಿಯ ಮಾದೇಗೌಡನ ಒಂದು ಕತೆಯಿದೆ ಇಲ್ಲಿ. ಮಾದೇಗೌಡ ಇಂದಿನ ನಡತೆಗೆಟ್ಟ ಶಕ್ತಿರಾಜಕಾರಣಕ್ಕೆ ತನ್ನ ಹುಂಬತನದಲ್ಲಿ ಬಲಿಯಾದವನು. ಅವನು ಚುನಾವಣೆಯಲ್ಲಿ ಸೋತು, ಕೈ ಬರಿದಾಗಿ ನಿಂತಾಗ, ಹತಾಶೆಗೊಳ್ಳದೆ ಮತ್ತೆ ತನ್ನ ರಾಗಿ ಮಿಶನ್ ಕೆಲಸಕ್ಕೆ ನಿಲ್ಲುತ್ತಾನೆ. ಇವು ಹಂದ್ರಾಳರ ಕಥಾಜಗತ್ತು. ಓದುಗರ ಮನವೊಲಿಸಲು ಹಂದ್ರಾಳರು ಎಲ್ಲಿಯೂ ಕಲ್ಪನೆಯನ್ನು ಉತ್ರ್ಪೇಕ್ಷಿಸು ವುದಿಲ್ಲ. ಇವರು ಕಾಣುವ ವಾಸ್ತವ ಜಗತ್ತು ತೃಣಮಾತ್ರವೂ ಕಲ್ಪಿತ ಎನಿಸುವುದಿಲ್ಲ.  


 'ಪೆಂಚಾಲಯ್ಯನ ಪೆನ್ಷನ್ ಫೈಲು', 'ಕತ್ತಲು ಮತ್ತು ಮಳೆ' 'ಇನ್ನಾದರೂ ಸಾಯಬೇಕು' ಕತೆಗಳನ್ನು ಇಲ್ಲಿ ಉಲ್ಲೇಖಿಸಲೇಬೇಕಿದೆ. ಪೆಂಚಾಲಯ್ಯ ತನ್ನ ಪೆನ್ಷನ್ ಫೈಲಿನಲ್ಲಿ ಸಿಕ್ಕಿಕೊಂಡ ಒಂದು ತೊಡಕನ್ನು ನಿವಾರಿಸಿಕೊಳ್ಳುವ ಕತೆ 'ಪೆಂಚಾಲಯ್ಯನ ಪೆನ್ಷನ್ ಫೈಲು', ಹೆಚ್ಚಿನ ಸಂದರ್ಭಗಳಲ್ಲಿ, ಮನುಷ್ಯ ತನ್ನ ಸಹಜವಾದ ಜಾಣತನವನ್ನೇ ನೆಚ್ಚಿಕೊಳ್ಳುತ್ತಾನೆ. ಆಳದಲ್ಲಿ ನಾವೆಲ್ಲ. ಅಂತಹ ಉಪಾಯಗಾರರೇ, ಕಾನೂನಿನ ಕುರುಡನ್ನೂ ನೌಕರಶಾಹಿಯ ಸಂಚುಗಳನ್ನೂ ಸಿಟ್ಟು ಮತ್ತು ವ್ಯಂಗ್ಯದಲ್ಲಿ ಹಂದ್ರಾಳರು ನಿರೂಪಿಸುವ ಸುಲಭದ ಮಾರ್ಗವನ್ನು ಹಿಡಿಯದೆ ಮನುಷ್ಯರ ತಿಳಿವಳಿಕೆಗೆ ಸಂಭ್ರಮಿಸುವ ಸಂಯಮ ತೋರುತ್ತಾರೆ.  

 ಹಂದ್ರಾಳರ ಕಥಾಜಗತ್ತಿನ ಮನುಷ್ಯರನ್ನ ನಿಕಟವಾಗಿ ನೋಡುವುದರಲ್ಲಿ ಒಂದು ಆನಂದವಿದೆ. ಇವರೆಲ್ಲ ಏಕಾಂತದಲ್ಲಿ ತಮ್ಮ ನೈತಿಕತೆಗೆ ನಿಜ ಎನ್ನುವಂತೆ ಯೋಚಿಸಬಲ್ಲವರು. ಯೋಚನೆಯಂತೆ ಬದುಕಿ ತೋರಿಸಬಲ್ಲ ಈ ಧೀರರು ಯಾವತ್ತೂ ಸದ್ಯಕ್ಕೆ ಸ್ಪಂದಿಸುತ್ತಾರೆ: 'ಪರಿವರ್ತನೆ' ಕತೆಯ ರಾಜಕಾರಣಿ ತಿರುಬೋಕಿ ಜೈಲಿನಲ್ಲಿರುವಾಗ ತನ್ನ ಅಂತರಂಗದ ಮಾತನ್ನು ಆಲಿಸುವುದು ಒಂದು ಲೋಕೋತ್ತರ ವಿದ್ಯಮಾನ. 'ಕತ್ತಲು ಮತ್ತು ಮಳೆ'ಯ ಶಾಲ್ಮಲ ಕೂಡ ತನ್ನ ಆತ್ಮಸಾಕ್ಷಿಯಂತೆ ವರ್ತಿಸುವವಳು. ಆದರೆ ಲೋಕದ ರೀತಿಯನ್ನೂ ಬಲ್ಲವಳು. ಆದ್ದರಿಂದ ತನ್ನನ್ನು ಹಿಂದೊಮ್ಮೆ ಪ್ರೀತಿಸಿದವನ ಬಳಿಗೆ ಆಕೆ ಮರಳಿದಾಗ ಅದೊಂದು ಅನೈತಿಕ ಕ್ರಿಯೆ ಎನಿಸುವುದಿಲ್ಲ.


ಈ ಸಂಕಲನದಲ್ಲಿರುವ ಒಂದು ಅಪೂರ್ವವಾದ ಕತೆ 'ಇನ್ನಾದರೂ ಸಾಯಬೇಕು'. ಹಂದ್ರಾಳರ ಕತೆಗಳಲ್ಲಿ ಅಸಹಜವಾದ ಸಾವು ಕಡಿಮೆ, ಆದರೆ ಈ ಕತೆಯ ಪ್ರೊಫೆಸರ್ ಋಗ್ವದಿ ನೇಣು ಬಿಗಿದುಕೊಂಡು ಸಾಯುತ್ತಾರೆ. ಪ್ರೊ. ಋಗ್ವದಿ ಸಾಯುವ ಉದ್ದೇಶ ಹೊಂದಿರಲಿಲ್ಲವಾದರೂ, ತಮ್ಮ ತಲೆಯೆಲ್ಲ ತುಂಬಿಕೊಂಡ ಸಾವಿನ ಧ್ಯಾನದಿಂದ, ಆತ್ಮಹತ್ಯೆಯ ಒಂದು ಸನ್ನಿವೇಶವನ್ನು ರಿಹರ್ಸಲ್ ಮಾಡುವ ಲಘುವಾದ ಮನಸ್ಥಿತಿಯಲ್ಲೇ ತಂದುಕೊಂಡ ಸಾವು ಇದು. ಸಾಯಬೇಕೆಂದು ಬೆಂಕಿ ಹಚ್ಚಿಕೊಂಡು ಸಾಯದೆ ಆಸ್ಪತ್ರೆ ಸೇರಿದ್ದ ಶಿಷ್ಯ ವೆಂಕಟೇಶ್ ಯಾದವನನ್ನು ಕಾಣಲು ಹೋಗುವ ಪ್ರೊ. ಋಗ್ವದಿ ಅಲ್ಲಿ ಹೇಳುವ ಮಾತು ಅವರ ಮನಸ್ಥಿತಿಯನ್ನು ತೋರುವಂಥದ್ದು, “ಎಂಥ ಅವಿವೇಕಿಯಯ್ಯಾ ನೀನು! ಅದಕ್ಕೊಂದು ಪ್ರಾಪರ್ ಪ್ರಿಪರೇಶನ್ ಬೇಕಾಗುತ್ತೆ. ನೀನು ನೇಣು ಬಿಗಿದುಕೊಳ್ಳಬೇಕಾಗಿತ್ತು” ಎಂದುಬಿಡುತ್ತಾರೆ. ಮಾರನೆಯ ದಿನ ತಾನೇ “ಆರೆ, ಒಂದು ಅಟೆಂಪ್ಟ್ ಏಕೆ ಮಾಡಬಾರದು?” ಎಂದು ತನ್ನ ಕುತೂಹಲಕ್ಕೆ ತನ್ನ ಪ್ರಾಣವನ್ನೇ ಕಳೆದುಕೊಳ್ಳುವ ಋಗ್ವದಿಯ ಕತೆ ಕೇಶವರೆಡ್ಡಿ ಹಂದ್ರಾಳ ಲೋಕ ವೀಕ್ಷಣೆಯ ಪ್ರತಿಭೆಗೆ ಉದಾಹರಣೆಯಾಗುತ್ತದೆ. ಈ ಕತೆ ನಮ್ಮ ವಿರುದ್ಧ ನಮ್ಮನ್ನೇ ಎಚ್ಚರಿಸುತ್ತದೆ.


ಹೀಗೆ ನಮ್ಮ ಮನೆಯ ಸುತ್ತ ಮುತ್ತ ನಡೆಯುವ ಪಾತ್ರಗಳನ್ನು ಚಿತ್ರದಲ್ಲಿ ಕಟ್ಟಿಕೊಡುವ ಕಥೆಗಳು ಕೆಲವೊಮ್ಮೆ ನಮ್ಮ ಕಥೆಯೇನೋ ಅನಿಸುವಷ್ಟು ನಮ್ಮನ್ನು ಕಾಡುತ್ತವೆ.ನೀವು ಒಮ್ಮೆ ಸೋನಾಗಾಚಿ ಓದಿಬಿಡಿ.



ಪುಸ್ತಕದ ಹೆಸರು: ಸೋನಾಗಾಚಿ

ಲೇಖಕರು: ಕೇಶವರೆಡ್ಡಿ ಹಂದ್ರಾಳ 

ಪ್ರಕಾಶನ: ಸಪ್ನ ಬುಕ್ ಹೌಸ್ .ಬೆಂಗಳೂರು

ಬೆಲೆ: 190 ₹


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

No comments: