*ನಮ್ಮೂರ ಗಣಪತಿ ಹಬ್ಬ v/s ಇಂದಿನ ಗಣೇಶೋತ್ಸವ*
ಇಂದು ನಾಡಿನಾದ್ಯಂತ ಆಚರಿಸುವ ಗಣೇಶೋತ್ಸವ ನಮ್ಮ ಬಾಲ್ಯದಲ್ಲಿ "ಗಣಪತಿ ಹಬ್ಬ " ಎಂದೇ ಪರಿಚಿತವಾಗಿತ್ತು.ನಮ್ಮ ಊರಿನ ಪಾರ್ಥಲಿಂಗೇಶ್ವರ ಯುವಕಸಂಘದವರು ಬಹಳ ವಿಜೃಂಭಣೆಯಿಂದ ಮೂರುದಿನಗಳ ಕಾಲ ಗಣಪತಿ ಹಬ್ಬ ಆಚರಿಸುತ್ತಿದ್ದರು. ದಿವಂಗತ ಬೋರಿಂಗ್ ಶಿವಣ್ಣ, ಗೌಡ್ರ ಶಿವಣ್ಣ, ಮೆಂಬರ್ ಮಾಲಿಂಗಪ್ಪ , ಐನೊರ ಶಿವಯ್ಯ, ಕಂಡಕ್ಟರ್ ರಾಮಣ್ಣ ಇವರೆಲ್ಲರೂ ಬಹಳ ಮುತುವರ್ಜಿಯಿಂದ ಗಣಪತಿಯ ಹಬ್ಬ ಆಯೋಜನೆ ಮಾಡುತಿದ್ದರು. ಹೊರಕೆರೆ ದೇವರ ಪುರದ ಕುಂಬಾರ ಮನೆಯಿಂದ ಎತ್ತಿನ ಗಾಡಿಯಲ್ಲಿ ಗಣೇಶನ ವಿಗ್ರಹವನ್ನು ತಂದಾಗಿನಿಂದ ನಮ್ಮ ಸಂಭ್ರಮ ಶುರುವಾಗಿ ಗಣಪತಿಯ ನೀರಿನಲ್ಲಿ ಬಿಡುವವರೆಗೂ ನಾವು ಮನೆಯನ್ನೇ ಸೇರುತ್ತಿರಲಿಲ್ಲ .ಅಲ್ಲಿ ಹಾಕುವ ಗ್ರಾಮಾಪೋನ್ ಹಾಡುಗಳ ಕೇಳುತ್ತಾ ಕುಣಿಯುತ್ತಾ ,ಕೊಟ್ಟ ಪ್ರಸಾದ ತಿನ್ನುತ್ತಾ ಕಾಲ ಕಳೆಯುತ್ತಿದ್ದೆವು. ಮೂರನೇ ದಿನದ ಗಣಪತಿ ವಿಸರ್ಜನೆಯ ಮೆರವಣಿಗೆಯಲ್ಲಿ ನಮ್ಮ ಸಂತಸ ನೂರ್ಮಡಿಗೊಳ್ಳುತ್ತಿತ್ತು. ಗಣಪತಿ ಮೆರವಣಿಗೆಗೆ ಎತ್ತಿನ ಗಾಡಿ ಸಿಂಗಾರ ಮಾಡಲು ಸಂಜೆ ನಾಲ್ಕು ಗಂಟೆಯಿಂದಲೇ ತಯಾರಿ ಮಾಡಿಕೊಳ್ಳುತ್ತಿದ್ದೆವು. ಚೆಂಡುಹೂ, ಕನಕಾಂಬರ, ಸೇವಂತಿ ಹೂಗಳು, ಬಾಳೆ ಕಂದು , ಹೊಂಬಾಳೆ, ಮುಂತಾದವುಗಳನ್ನು ಅಲಂಕಾರಕ್ಕಾಗಿ ಬಳಸುತ್ತಿದ್ದೆವು.ರಾತ್ರಿ ಮಂಗಳಾರತಿ ಮಾಡಿ ಗಣಪತಿಯನ್ನು ಅಲಂಕೃತವಾದ ಎತ್ತಿನ ಗಾಡಿಯಲ್ಲಿ ಕೂರಿಸಿ ಮೆರವಣಿಗೆ ಆರಂಭವಾಗುತ್ತಿತ್ತು. ಮೆರವಣಿಗೆಯಲ್ಲಿ ರಾಜಣ್ಣನವರ ಉರಿಮೆ ಸದ್ದಿನ ಜೊತೆಯಲ್ಲಿ ಒಂದು ಡೊಳ್ಳಿನ ಬಡಿತ ಎಂತವರೂ ನಾಲ್ಕೆಜ್ಜೆ ಹಾಕಲೇಬೇಕಿತ್ತು. ದೊಡ್ಡವರು ಚಿಕ್ಕವರೆಂಬ ಭೇದವಿಲ್ಲದೇ ಗಣಪತಿ ಮುಂದೆ ಕುಣಿಯುತ್ತಿದ್ದುದೇ ಒಂದು ಸುಂದರ ನೆನಪು. ಮೆರವಣಿಗೆ ಸಾಗಿ ಬರುವಾಗ ಪ್ರತಿ ಮನೆಯವರು ಗಣಪತಿಗೆ ಹಣ್ಣು ಕಾಯಿ ನೀಡಿ ಮಂಗಳಾರತಿ ಮಾಡಿಸುತ್ತಿದ್ದರು .ಕೆಲ ಮನೆಯವರು ಮಂಡಕ್ಕಿ ಕಾಯಿ ತಂಬಿಟ್ಟು ಪ್ರಸಾದ ಮಾಡಿ ಎಲ್ಲರಿಗೂ ಹಂಚುತ್ತಿದ್ದರು. ಕುಣಿದು ಸುಸ್ತಾದ ನಾವು ಪ್ರಸಾದ ತಿಂದು ನೀರು ಕುಡಿದು ಪುನಃ ಉರುಮೆಯ ಸದ್ದಿಗೆ ಕೈಕಾಲು ಆಡಿಸಲು ಸಿದ್ದರಾಗುತ್ತಿದ್ದೆವು. ಬೀದಿಯಲ್ಲಿ ಸಾಗುವಾಗ ಪಂಜಿನ ದೀಪಗಳು ಮತ್ತು ಪೆಟ್ರೋಮ್ಯಾಕ್ಸ್ ನಮಗೆ ಬೆಳಕು ನೀಡುವ ಸಾಧನಗಳಾಗಿದ್ದವು .ನಮ್ಮೂರ ಗಣಪತಿಯ ಮೆರವಣಿಗೆಯಲ್ಲಿ ಐನೋರ ಶಿವಯ್ಯನವರ ಬೆಂಕಿ ಪ್ರದರ್ಶನ ಪ್ರಮುಖವಾದ ಆಕರ್ಷಣೆಯಾಗಿತ್ತು. ಬಾಯಿಯಲ್ಲಿ ಸೀಮೆಎಣ್ಣೆ ಹಾಕಿಕೊಂಡು ಒಂದು ಉರಿಯುವ ಪಂಜಿಗೆ ಸೀಮೇ ಎಣ್ಣೆಯನ್ನು ಬಾಯಿಯಿಂದ ಉಗುಳುವಾಗ ಶಿವಯ್ಯನವರ ಬಾಯಿಯಿಂದ ಬೆಂಕಿ ಉಗುಳಿದಂತೆ ಕಾಣುತ್ತಿತ್ತು . ಈ ದೃಶ್ಯಗಳನ್ನು ಕಂಡ ಜನ ಸಂತೋಷದಿಂದ ಕೂಗಿ ಮತ್ತೊಮ್ಮೆ ಅದೇ ರೀತಿಯಲ್ಲಿ ಮಾಡಲು ಕೂಗುತ್ತಿದ್ದರು. ಒಕ್ಕಲಿಗರ ಬೀದಿ,ವಡ್ಡರ ಓಣಿ, ಗೊಲ್ಲರಹಟ್ಟಿ ,ಹೊಸ ಹಟ್ಟಿ ದಾಟಿ ನಮ್ಮೂರ ಗೌಡರ ಬಾವಿ ಕಡೆ ವಿಸರ್ಜನೆಗೆ ಹೊರಟಾಗ ರಾತ್ರಿ ಮೂರುಗಂಟೆ ಸಮಯವಾಗಿರುತ್ತಿತ್ತು. ಗೌಡರ ಬಾವಿಯ ಬಳಿ ಎತ್ತಿನ ಗಾಡಿಯಿಂದ ಗಣಪತಿಯ ಇಳಿಸಿ ಪೂಜೆ ಮಾಡಿ ಗಣಪತಿಯ ಹೂವಿನ ಹಾರಗಳನ್ನು ಹರಾಜು ಹಾಕುತ್ತಿದ್ದರು .ಹರಾಜಿನಲ್ಲಿ ಹೂವಿನ ಹಾರ ಪಡೆದವರು ಮುಂದಿನ ವರ್ಷದ ಗಣಪತಿಯ ಹಬ್ಬಕ್ಕೆ ಹಣವನ್ನು ನೀಡುತ್ತಿದ್ದರು .ಅಂದು ನಮ್ಮ ಊರ ಗಣಪ ಪ್ರಕೃತಿ ಸ್ನೇಹಿ, ಏಕತೆಯ ವರ್ಧಕ ಮತ್ತು ನಮ್ಮ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿದ್ದ.
ಕ್ರಮೇಣ ನಾವು ದೊಡ್ಡವರಾದಂತೆ ನಾವು ಗಣಪತಿ ಹಬ್ಬ ಮಾಡಲು ಶುರುಮಾಡಿದೆವು. ನಮ್ಮ ಸ್ನೇಹಿತರು ಕೂಡಿಕೊಂಡು ಹಬ್ಬದ ತಯಾರಿ ಮಾಡಿಕೊಳ್ಳುತ್ತಿದ್ದೆವು. ನಾವು ಹಣ ಕೊಟ್ಟು ಗಣೇಶ ತರದೇ ಜೇಡಿ ಮಣ್ಣಿನಿಂದ ಗಣೇಶನ ವಿಗ್ರಹ ಮಾಡಿ ಶಾಲೆಯಲ್ಲಿ ಶಿಕ್ಷಕರ ಅನುಮತಿ ಪಡೆದು ಒಂದು ಕುರ್ಚಿ ಮೇಲೆ ಕೂರಿಸಿ, ರಟ್ಟಿನಿಂದ ಅಲಂಕಾರ ಮಾಡಿ ಬಣ್ಣದಪೇಪರ್ ಅನ್ನು ವಿವಿದ ಆಕಾರಗಳಲ್ಲಿ ಕತ್ತರಿಸಿ ಮೈದಾ ಹಿಟ್ಟಿನ ಸರಿ ಕಾಸಿ ಟೈನ್ ದಾರಕ್ಕೆ ಅಂಟಿಸಿ , ಶಾಲಾ ಕೊಠಡಿಗಳನ್ನು ಸಿಂಗಾರ ಮಾಡುತ್ತಿದ್ದೆವು. ಗಣೇಶನ ಮಂಟಪದ ಮುಂದೆ ಆಗ ತಾನೆ ಹೊಲದಲ್ಲಿ ಬೆಳೆದ ಸಜ್ಜೆ ತೆನೆ, ರಾಗಿ ತೆನೆ, ಜೋಳದ ತೆನೆ, ಟೊಮ್ಯಾಟೊ ಹಣ್ಣು, ಪಡವಲಕಾಯಿ ಈರೇಕಾಯಿ ಮುಂತಾದವುಗಳನ್ನು ಕಟ್ಟಿ ಅಲಂಕಾರ ಮಾಡುತ್ತಿದ್ದೆವು. ಸಂಜೆ ನಾವೇ ಹಾಡು ಹೇಳುವುದು, ಭಜನೆ ಮಾಡುವುದು, ನಮ್ಮ ಶಾಲೆಯ ಲೈಬ್ರರಿಯ ಪುಸ್ತಕಗಳಲ್ಲಿ ಇರುವ ಕಥಾವಾಚನ ಹೀಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಾವೇ ಆಯೋಜಿಸುತ್ತಿದ್ದೆವು. ಇದಕ್ಕೆ ನಮ್ಮ ಶಿಕ್ಷಕರಾದ ದಿವಂಗತ ತಿಪ್ಪೇಶಪ್ಪ ಸರ್ ಮಾರ್ಗದರ್ಶನ ಮಾಡುತ್ತಿದ್ದರು.
ಮೊನ್ನೆ ನಾನು ಬೈಕ್ ನಲ್ಲಿ ತೆರಳುವಾಗ ನಾಲ್ಕೈದು ಕಡೆ ತಡೆ ಹಾಕಿ ಗಣೇಶೋತ್ಸವ ಮಾಡಲು ಬಲವಂತದ ವಸೂಲಿ ನೋಡಿದಾಗ ಮತ್ತು ಮನೆಯ ಮುಂದೆ ಬಂದು ಐದಾರು ಗಣೇಶೋತ್ಸವ ಸಂಘಗಳು ಗಣೇಶನ ಹೆಸರಲ್ಲಿ ಹಣ ಕೇಳಿ ಪಡೆದುಕೊಂಡದ್ದನ್ನು ನೋಡಿದಾಗ ಗಣೇಶನ ಹಬ್ಬ ಬಲವಂತದ ವಸೂಲಿ ರೂಪ ಪಡೆದದ್ದು ಕಂಡು ಬೇಸರ ವಾಯಿತು. ಹಣ ಕೊಡಲು ನನಗೆ ಬೇಸರವಿಲ್ಲ ಆದರೆ ನಮ್ಮಿಂದ ಪಡೆದ ಹಣವನ್ನು ಗಣೇಶನ ಮುಂದೆ ಅರೆಬರೆ ಬಟ್ಟೆ ತೊಟ್ಟು ,ಅಶ್ಲೀಲ ನೃತ್ಯ ಮಾಡುತ್ತಾ ನೆರೆಹೊರೆಯವರಿಗೆ ತೊಂದರೆ ಕೊಡಲು ಖರ್ಚು ಮಾಡುವರು ಎಂಬುದ ನೆನೆದಾದ ನಮ್ಮ ಹಳ್ಳಿಯ ಬಾಲ್ಯದ ಗಣಪತಿ ಹಬ್ಬ ನೆನಪಾಗುತ್ತದೆ.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
No comments:
Post a Comment