ವಿಮರ್ಶೆ ೪೯
ಹಂಪಿ ವಿಜಯನಗರ
ಹಂಪಿ ವಿಜಯನಗರ ಒಂದು ಸಂಗ್ರಹಯೋಗ್ಯ ಕೃತಿಯಾಗಿದೆ. ಇದರಲ್ಲಿ ಬರುವ ಹತ್ತೊಂಬತ್ತು ಬರಹಗಳಲ್ಲಿ ಒಂದೊಂದು ಬರಹವೂ ವಿಜಯನಗರ ಇತಿಹಾಸ ಸಂಶೋಧನೆಯ ಒಂದೊಂದು ಸವಾಲುಗಳನ್ನು ಪ್ರತಿನಿಧಿಸುವಂತಹದು. ಪ್ರೊ. ಲಕ್ಷಣ್ ತೆಲಗಾವಿ ಯವರು ಪ್ರತಿಯೊಂದು ಬರಹಕ್ಕೂ ಆಯ್ಕೆಮಾಡಿಕೊಂಡಿರುವ ವಿಷಯ, ಸಂಗ್ರಹಿಸಿರುವ ವಿಪುಲ ಅಕರಸಾಮಗ್ರಿ ವಿಷಯದ ಒಳಹೊಕ್ಕು ನೋಡಿರುವ ಪರಿ ಇವೆಲ್ಲವೂ ನಮಗೆ ಬೆರಗನ್ನುಂಟುಮಾಡುತ್ತವೆ . ಈ ಸಂಕಲನದಲ್ಲಿರುವ ಬಹುತೇಕ ಬರಹಗಳು ಸಂಶೋಧನಾತ್ಮಕ ವಾಗಿದ್ದು, ಪ್ರಥಮಬಾರಿಗೆ ಹಲವಾರು ಹೊಸ ವಿಷಯಗಳನ್ನು ಪ್ರಕಟಪಡಿಸುವಲ್ಲಿ ಯಶಸ್ವಿಯಾಗಿವೆ. ವಿದ್ಯಾರ್ಥಿಗಳಿಗೆ, ಅಧ್ಯಯನಶೀಲರಿಗೆ ಮಾತ್ರವಲ್ಲ, ವಿದ್ವಾಂಸರಿಗೂ ಸಂಶೋಧಕ ರಿಗೂ ಈ ಬರಹ ಸಂಗ್ರಹ ಹೆಚ್ಚಿನ ಪ್ರಯೋಜನವುಳ್ಳ ಪುಸ್ತಕ. ಹಲವಾರು ವರ್ಷಗಳಿಂದ ಪರಿಶ್ರಮವಹಿಸಿ ಸಿದ್ಧಪಡಿಸಲಾಗಿರುವ ಇಲ್ಲಿಯ ಬರಹಗಳು ಹಿರಿಯ ಸಂಶೋಧಕ ಪ್ರೊ. ಲಕ್ಷ್ಮಣ್ ತೆಲಗಾವಿಯವರ ವಿದ್ವತ್ತಿಗೆ ಹಿಡಿದಿರುವ ಕನ್ನಡಿಯಂತಿವೆ. ಹಂಪಿ ಸ್ಮಾರಕಗಳು ಪ್ರೇರಣೆಯ ಪ್ರತೀಕಗಳಾಗಿದ್ದರೆ, ತೆಲಗಾವಿಯವರ ಇಂತಹ ಬರಹಗಳು ಸ್ಫೂರ್ತಿಯ ಸೆಲೆಗಳಾಗಿವೆ.
ಈ ಪುಸ್ತಕದಲ್ಲಿ ನನ್ನ ಗಮನವನ್ನು ಗಾಢವಾಗಿ ಸೆಳೆದ ಬರಹವೆಂದರೆ 'ಒಂದನೇ ಬುಕ್ಕನ ನಾಣ್ಯದ ಮರುಪರಿಶೀಲನೆಯ ನೆಲೆಯಲ್ಲಿ ಆತನ ಶಿಲ್ಪದ ಶೋಧ' ಎಂಬುದು. ಸಂಶೋಧನ ಬರವಣಿಗೆಗೆ ಇದೊಂದು ಅತ್ಯುತ್ತಮ ಉದಾಹರಣೆ. ಪ್ರೊ. ತೆಲಗಾವಿಯವರ ಆಳವಾದ ಅಧ್ಯಯನವನ್ನು ಸಮರ್ಥಿಸುವ ಬರಹವಿದು. ವಿಷಯವನ್ನು ಬೆಳೆಸುವುದು, ವಿವಿಧ ಆಯಾಮಗಳ ಮೂಲಕ ಅದನ್ನು ವಿಶ್ಲೇಷಿಸುವುದು, ತಾರ್ಕಿಕವಾಗಿ ಅಂತ್ಯಗೊಳಿಸುವುದು ಈ ಸಾಧ್ಯತೆಗಳನ್ನು ಅವರು ಇಲ್ಲಿ ಬಹು ಸಮರ್ಪಕವಾಗಿ ತೋರಿಸಿಕೊಟ್ಟಿದ್ದಾರೆ. ಕೆಲವು ನಾಣ್ಯಶಾಸ್ತ್ರಜ್ಞರು ಕೈಗೊಂಡ ಅವಸರದ ಅಥವಾ ಉದ್ದೇಶಪೂರ್ವಕ ಅಧ್ಯಯನದ ಕಾರಣವಾಗಿ ಒಂದನೇ ಬುಕ್ಕನ ನಾಣ್ಯವನ್ನು ತಪ್ಪಾಗಿ ಗುರುತಿಸಿ ಪ್ರಚಾರಕ್ಕೆ ತಂದುದನ್ನು ಪ್ರೊ. ತೆಲಗಾವಿಯವರು ಸಾಧಾರವಾಗಿ ಖಂಡಿಸಿದ್ದಾರೆ.ಅವರ ನಿಲುವು ನಿರ್ಣಯಗಳನ್ನು ಪ್ರಶ್ನಿಸಿದ್ದಾರೆ. ಅವರ ಸಂಶೋಧನೆಯ ಫಲವಾಗಿ ಚಿತ್ರದುರ್ಗ ಬೆಟ್ಟದಲ್ಲಿ ಒಂದನೇ ಬುಕ್ಕನ ಸಮಪ್ರಮಾಣದ ಕುಳಿತಿರುವ ಭಂಗಿಯ ಶಿಲ್ಪ ಬೆಳಕಿಗೆ ಬಂದುದನ್ನು ಕರ್ನಾಟಕದ ವಿದ್ವಾಂಸರು ಗಮನಿಸಬೇಕು.
ಕನ್ನಡದ ಬಖೈರುಸಾಹಿತ್ಯ ಕುರಿತು ಆಳವಾಗಿ ಅಧ್ಯಯನ ಮಾಡಿದವರಲ್ಲಿ ಪ್ರೊ. ತೆಲಗಾವಿಯವರೂ ಒಬ್ಬರು. ಈ ಸಂಕಲನದಲ್ಲಿ ಸೇರಿರುವ 'ರಾಮರಾಜನ ಬಖೈರು: ಪುನರಾವಲೋಕನ' ಎಂಬ ಬರಹವು ಅವರ ಆಳವಾದ ಚಿಂತನೆಯನ್ನು ದೃಢಪಡಿಸುತ್ತದೆ. ಈ ಬಖೈರ್ನ ಅಧ್ಯಯನಮಾರ್ಗವನ್ನು ಪರಿಶೀಲಿಸುವುದರೊಡನೆ, ಈ ಬಖೈರ್ನ ಹುಟ್ಟಿನ ಜತೆಯಲ್ಲಿ ಕಾಣಿಸಿಕೊಂಡ ಇತರ ಪರ್ಶಿಯನ್ಗ್ರಂಥಗಳ ತುಲನೆಯನ್ನೂ ಅವರು ಇಲ್ಲಿ ಮಾಡಿದ್ದಾರೆ. ಈ ಎರಡೂ ಸಂಪ್ರದಾಯಗಳ ಪಠ್ಯಗಳಲ್ಲಿಯ ವ್ಯತ್ಯಾಸಗಳನ್ನು ಸ್ಥೂಲವಾಗಿ ಯಾದರೂ ಪ್ರಸ್ತಾಪಿಸಿದ್ದಾರೆ. ಇದರೊಡನೆ, ಈ ಬಖೈರ್ನ ಉಪಯುಕ್ತತೆ, ವಿಶೇಷಗಳು ಹಾಗೂ ಇತಿಮಿತಿಗಳನ್ನು ಕುರಿತು ಸೂಕ್ಷ್ಮವಾಗಿ ವಿವರಿಸಿದ್ದಾರೆ.
ಪ್ರೊ. ತೆಲಗಾವಿಯವರು ಶ್ರೀಕೃಷ್ಣದೇವರಾಯನ ಆಡಳಿತಾವಧಿಯಲ್ಲಿದ್ದ ವಿಜಯನಗರ ಸೇನೆಯ ವಿವರವಂತೂ ತೀರಾ ರೋಚಕವಾದುದು, ವಿವಿಧ ಮೂಲಗಳಿಂದ ಸಂಗ್ರಹಿಸಲಾದ ಸೇನಾಸಂಖ್ಯೆ ಇತ್ಯಾದಿ ಮಾಹಿತಿ ಕುತೂಹಲ ಕಾರಿಯಾಗಿದೆ. ಈಗಾಗಲೇ ಈ ಸಂಬಂಧದಲ್ಲಿ ವಿದೇಶಿ ಪ್ರವಾಸಿಗರ ಬರಹಗಳನ್ನಾಧರಿಸಿ ಸ್ವಲ್ಪಮಟ್ಟಿಗೆ ಇತರ ಇತಿಹಾಸಕಾರರು ಬರೆದಿದ್ದರೂ ಅವುಗಳ ಪುನರಾವಲೋಕನ ದೊಡನೆ ಪ್ರೊ. ತೆಲಗಾವಿಯವರು ಕೆಲವು ನೂತನಾಂಶಗಳನ್ನು ಪ್ರಸ್ತಾಪಿಸಿದ್ದಾರೆ.
ಈಗಾಗಲೇ ಕೆಲವಾರು ವಿಜಯನಗರ ಶಾಸನಗಳ ಪತ್ತೆಹಚ್ಚಿ ಬೆಳಕಿಗೆ ತರುವುದರೊಡನೆ, ಅವುಗಳ ಅಳವಾದ ಅಧ್ಯಯನ ಕೈಗೊಂಡ ಪ್ರೊ, ತೆಲಗಾವಿಯವರು, ಒಂದನೆಯ ಬುಕ್ಕ ಹಾಗೂ ಅವನ ಅಧೀನದ ರಾಜಪ್ರತಿನಿಧಿಗಳ ಶಾಸನಗಳನ್ನು ಮರು ಅಧ್ಯಯನಕ್ಕೊಳಪಡಿಸಿದ್ದಾರೆ. ಈ ಸಂಕಲನದಲ್ಲಿ ಸೇರಿರುವ 'ದೊಡ್ಡೇರಿ ,ಹರ್ತಿಕೋಟೆ ಶ್ರೀರೇವಣ ಸಿದ್ಧೇಶ್ವರಮಠದ ಸಂಗ್ರಹದಲ್ಲಿರುವ ಒಂದನೇ ಬುಕ್ಕ ಮತ್ತು ರಾಮರಾಯರಿಗೆ ಸಂಬಂಧಿಸಿದ ತಾಮ್ರಪಟಗಳ ನಕಲು ಪ್ರತಿಗಳು ಬರಹವು ಅವರ ಪಾಲಿಗೆ ಸವಾಲಿನದಾಗಿದ್ದು, ಈಗ ಕಾಗದದ ಮೇಲೆ ಉಳಿದುಕೊಂಡಿರುವ ಮೂಲಶಾಸನಪಾಠಗಳನ್ನು ಸಂಶೋಧನಾತ್ಮಕವಾಗಿ ಅಧಿಕೃತಗೊಳಿಸುವ ಕಾರ್ಯದಲ್ಲಿ ಅವರು ಹೆಜ್ಜೆಯಿರಿಸಿದ್ದಾರೆ. ಈ ದಾಖಲೆಗಳನ್ನು ಪರಿಶೀಲನೆ ಗೊಳಪಡಿಸಿ ಅವುಗಳಿಂದ ಕೆಲವು ವಾಸ್ತವಾಂಶಗಳನ್ನು ಸಂಗ್ರಹಿಸಿಕೊಟ್ಟಿದ್ದಾರೆ.
ವಿಜಯನಗರ ಇತಿಹಾಸದ ಸಮಗ್ರತೆ ಕುರಿತು ಎಷ್ಟು ಹೇಳಿದರೂ ಕಡಿಮೆಯೇ, ಕರ್ನಾಟಕದಲ್ಲಿ ಈ ಇತಿಹಾಸದ ಬಗೆಗೆ ನಡೆದಿರುವ ಸಂಶೋಧನೆಗಳಿಗೆ ಹೊರಬಿದ್ದಿರುವ ಪ್ರಕಟಣೆಗಳಿಗೆ ಲೆಕ್ಕವೇ ಇಲ್ಲ. ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಈ ಇತಿಹಾಸ ಅಧ್ಯಯನದಲ್ಲಿ ತೊಡಗಿಸಿ ಕೊಂಡಿರುವ ವಿದ್ವಾಂಸರ ಸಂಖ್ಯೆಯೂ ಬಹು ದೊಡ್ಡದು ಆದರೂ ಹಂಪಿ ಸ್ಮಾರಕಗಳು ಹಾಗೂ ವಿಜಯನಗರ ಸಾಮ್ರಾಟರ ಇತಿಹಾಸ- ಇವುಗಳ ಅಧ್ಯಯನ ಪೂರ್ಣಗೊಂಡಿಲ್ಲ. ತೋಡಿದಷ್ಟೂ ದೂರೆಯುವ ಆಕರಸಂಪತ್ತಾಗಲಿ, ಬರೆದು ಮತ್ತೆ ಮತ್ತೆ ಎದುರಾಗುವ ಚರ್ಚಾಸ್ಪದ ಸಂಗತಿಗಳಾಗಿ ನಮ್ಮ ಮುಂದೆ ನಿಲ್ಲುತ್ತವೆ .ಆ ಚರ್ಚೆಗಳಿಗೆ ತೆಲಗಾವಿರವರ ಈ ಪುಸ್ತಕ ಸಮರ್ಪಕವಾದ ಉತ್ತರ ಎಂಬುದು ನನ್ನ ಅಭಿಪ್ರಾಯ.
ಪುಸ್ತಕದ ಹೆಸರು: ಹಂಪಿ ವಿಜಯನಗರ
ಲೇಖಕರು: ಪ್ರೊ ಲಕ್ಷಣ್ ತೆಲಗಾವಿ.
ಪ್ರಕಾಶನ: ವಾಲ್ಮೀಕಿ ಸಾಹಿತ್ಯ ಸಂಪದ.ಹರ್ತಿಕೋಟೆ.
ಬೆಲೆ: 200₹
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
No comments:
Post a Comment