ಅಪ್ಪ ಅಂದ್ರೆ ಆಕಾಶ.
ವಿಮರ್ಶೆ.೪೫
ಬಹುತೇಕ ದಿನಪತ್ರಿಕೆಗಳಲ್ಲಿ ಓದಿದ್ದ ಲೇಖನಗಳ ಗುಚ್ಛ ಒಂದೇ ಕಡೆ ಓದುವ ಅವಕಾಶ ಅಪ್ಪ ಅಂದ್ರೆ ಆಕಾಶ .ಒಮ್ಮೆ ಓದಿ ಸುಮ್ಮನಿದ್ದರೆ ಸಾಲದು ಆಗಾಗ್ಗೆ ಓದುವ ನಮಗೆ ಚೈತನ್ಯ ನೀಡುವ ಘಟನೆಗಳ ಕಣಜ ಇದು.ಇದರ ಕತೃ ಆತ್ಮೀಯರು ಸಜ್ಜನರಾದ ಎ ಆರ್ ಮಣಿಕಾಂತ್ ರವರು.
ಎ ಆರ್ ಮಣಿಕಾಂತ್
ಜನಿಸಿದ್ದು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆಯಿತನಹಳ್ಳಿ, ಓದಿದ್ದು ಮಂಡ್ಯದ ಪಿ.ಇ.ಎಸ್. ಕಾಲೇಜಿನಲ್ಲಿ ಬಿ.ಇ ಆಟೊಮೊಬೈಲ್, ಒಲಿದಿದ್ದು ಪತ್ರಿಕೋದ್ಯಮ. ಮೊದಲು ಹಾಯ್ ಬೆಂಗಳೂರ್, ನಂತರ ಸಂಯುಕ್ತ ಕರ್ನಾಟಕ, ಆನಂತರ ವಿಜಯ ಕರ್ನಾಟಕದಲ್ಲಿನೌಕರಿ. ವಿಜಯ ಕರ್ನಾಟಕದಲ್ಲಿ ಬರೆಯುತ್ತಿದ್ದ 'ಉಭಯ ಕುಶಲೋಪರಿ ಸಾಂಪ್ರತ', 'ಹಾಡು ಹುಟ್ಟಿದ ಸಮಯ', 'ಮರೆಯಲಿ ಹ್ಯಾಂಗ', 'ಈ ಗುಲಾಬಿಯು ನಿನಗಾಗಿ' ಅಂಕಣಗಳು ಸಕಲೆಂಟು ಮಂದಿಯ ಮೆಚ್ಚುಗೆಗೆ ಪಾತ್ರವಾದವು. ಪ್ರಕಟವಾಗಿರುವ ಪುಸ್ತಕಗಳಲ್ಲಿ. 'ಹಾಡು ಹುಟ್ಟಿದ ಸಮಯ ಮತ್ತು ಈ ಗುಲಾಬಿಯು ನಿನಗಾಗಿ ಪುಸ್ತಕಗಳು ತಲಾ ನಾಲ್ಕು ಮುದ್ರಣಗಳನ್ನು ಕಂಡಿವೆ. 'ಅಮ್ಮ ಹೇಳಿದ ಎಂಟು ಸುಳ್ಳುಗಳು' 60 ತಿಂಗಳಲ್ಲಿ 75,000 ಪ್ರತಿಗಳು ಮಾರಾಟವಾಗಿ ದಾಖಲೆ ಸ್ಥಾಪಿಸಿರುವ ಪುಸ್ತಕ. ಈ ಪುಸ್ತಕಕ್ಕೆ ಸೇಡಂನ 'ಅಮ್ಮ' ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.
ಮಣಿಕಾಂತ್ ರವರ ಬರಹಕ್ಕೆ ಒಂದು ಚಂದದ ಶೈಲಿ ಸಿದ್ಧಿಸಿದೆ. ಇಂಥ ಬರವಣಿಗೆಗೆ ಹೇಳಿ ಮಾಡಿಸಿದ ಶೈಲಿ ಅದು! ಇಲ್ಲಿರುವ ಹಲವಾರು ಕತೆಗಳನ್ನು ಅವರು ಪ್ರತ್ಯಕ್ಷ ನೋಡಿ ಬರೆದಿದ್ದಾರೆ, ಕೇಳಿ ಬರೆದಿದ್ದಾರೆ. ಅಂತರ್ಜಾಲದಿಂದ ಬಸಿದುಕೊಂಡು ಬರೆದಿದ್ದಾರೆ. 'ಒಂದು ಮಾವಿನಮರ', 'ಒಬ್ಬ ಹುಡುಗ ಮತ್ತು ನಾವು ನೀವು...', 'ಪ್ರಾರ್ಥನೆ' ಇಂಥ ಕತೆಗಳನ್ನು ತನ್ನ ಕಲ್ಪನೆಯಿಂದ ಕಡೆದು ಬಿಡಿಸಿದ್ದಾರೆ. ಕೆಲವು ಕತೆಗಳ ಪಾತ್ರಗಳೊಂದಿಗೆ ಮಾತಾಡಿದ್ದಾರೆ! 'ಅಮ್ಮ ಮತ್ತು ಒಂದು ರೂಪಾಯಿ', 'ಅಪ್ಪ ಅಂದ್ರೆ ಆಕಾಶ' - ಕತೆಗಳಲ್ಲಿ ತಾವೇ ಪಾತ್ರವಾಗಿದ್ದಾರೆ! ಇಲ್ಲಿರುವ ಅಷ್ಟೂ 'ಕತೆ'ಗಳಲ್ಲಿ ಮಾತಿನ ತೇವ ಆರದಂತೆ, ತಾವೇ ಎದುರುಕೂತು ಮಾತಾಡಿದಂತೆ 'ಕತೆ' ಹೇಳಿದ್ದಾರೆ.
ಮಣಿಕಾಂತ್ ರವರುಬರೆಯಲು ಆರಿಸಿಕೊಳ್ಳುವ ಕತೆಗಳಲ್ಲೇ ಅವರ ಮನಸ್ಸು ಅರ್ಥವಾಗುತ್ತದೆ. ತನ್ನ ತಮ್ಮ ತಂಗಿಯರಂಥ ಹುಡುಗ ಹುಡುಗಿಯರು ಸೋತು ಕೈಚೆಲ್ಲಿದಾಗ ಅವರನ್ನೊಂದಿಷ್ಟು ಚಂದದ ಬದುಕಿಗೆ ತಿರುಗಿಸಬೇಕೆನ್ನುವ ತಹತಹವಿದೆ. ಸ್ವತಃ ಭಾವುಕರಾದ ಅವರಿಗೆ ಒಂದು ಭಾವನಾ ಪ್ರಪಂಚವನ್ನು ತನ್ನ ಹೊರಗೂ ಕಟ್ಟಬೇಕೆಂಬ ಆಸೆಯಿದೆ. ಹಾಗಾಗಿ ಅವರ ಬರಹಗಳೆಲ್ಲ ಇಂಥ ಆಸೆಗೆ ಸಾಕ್ಷಿಯಾಗುತ್ತವೆ - ತೋಡಿದ್ದಕ್ಕೆ ಜಲವೇ ಸಾಕ್ಷಿಯಾಗುವಂತೆ!
ಇವರ ಬರವಣಿಗೆಯಲ್ಲಿ ಅವರದೇ ಒಂದು 'ರಿದಂ' ಇದೆ. ಒಂದು ಲಾಲಿತ್ಯವಿದೆ. ಭಾಷೆಯನ್ನು ತೀರಾ ಅಲಂಕಾರಗಳಿಂದ ತುಂಬದೆಯೂ ಅದಕ್ಕೆ ಒಂದು ಲಾಲಿತ್ಯವನ್ನು ಲಯವನ್ನು ನೀಡುವಂಥ ಕಲಾವಂತಿಕೆ ಇದೆ. ಅದರಲ್ಲೂ ತನ್ನ ಬರಹಗಳೊಳಗಿನ ಪಾತ್ರಗಳನ್ನು ಮಾತನಾಡಿಸುವಾಗ ಮಣಿರವರ ಬರವಣಿಗೆ ಸೂಪರ್, ಬಹುಪಾಲು ಪಾತ್ರಗಳು ಆಡುವ ಮಾತು ಮಣಿಯವರದೇ ! ಅಲ್ಲಿ ಮಾತಾಡುವುದು ಆ ಪಾತ್ರಗಳಲ್ಲಿ ವ್ಯಕ್ತಿಗಳು ಮಣಿಕಾಂತ್ ರವರ ಗುಣಗ್ರಾಹಿ ಮನಸ್ಸು ನಿರ್ವ್ಯಾಜ ಅಂತಃಕರಣ!
ಈ ಪುಸ್ತಕದ ಎಲ್ಲಾ ಅಧ್ಯಾಯಗಳು ಇಷ್ಟವಾದರೂ ಕೆಲವು ನನ್ನ ಈಗಲೂ ಕಾಡುತ್ತಿವೆ ಅವುಗಳು ...ಎಮ್ಮೆ ಕಾಯುತ್ತಿದ್ದ ಹುಡುಗ ಎಂ.ಎ ಮಾಡಿದವರನ್ನೂ ಮೀರಿಸಿದ,ಅಮ್ಮ ಮತ್ತು ಒಂದು ರುಪಾಯಿ... ಮಕ್ಕಳನ್ನು ಕಳೆದುಕೊಂಡವರು ,
ಅಪ್ಪನಿಂದ ಅನಿಷ್ಟ ಅನ್ನಿಸಿಕೊಂಡವಳು, ಮಿಸ್ ಇಂಡಿಯ ಆದಳು,ಈ ಡಿ.ಸಿ.ಗೆ ವರ್ಗವಾದರೆ ಜನ ಬೀದಿಗಿಳಿದು ಪ್ರತಿಭಟಿಸುತ್ತಾರೆ,
ಟ್ಯೂಶನ್ ಮಾಡಿ ಕೋಟಿ ದುಡಿದ!
'ನೆನಪಿಲ್ಲ' ಎಂದವಳನ್ನೂ ನೆಪ ಹೇಳದೆ ಮದುವೆಯಾದೆ,ಬೇಕರಿಯಲ್ಲಿ ಕ್ಲೀನರ್ ಆಗಿದ್ದ ಹುಡುಗ ಬಾನೆತ್ತರ ಬೆಳೆದ , ಆತ ಒಂದೇ ಬೆರಳಲ್ಲಿ ಪರೀಕ್ಷೆ ಬರೆದು ಡಿಸ್ಟಿಂಕ್ಷನ್ ಪಡೆದ , ಒಂದು ಲೋಟ ಹಾಲಿನ ರೂಪದಲ್ಲಿ ಹಣ ಸಂದಾಯವಾಗಿದೆ,
ಇನ್ನೇಕೆ ತಡ ನೀವೂ ಪುಸ್ತಕ ಖರೀದಿಸಿ ಒಮ್ಮೆ ಓದಿಬಿಡಿ ಕೆಲ ಘಟನೆಗಳು ನಿಮ್ಮನ್ನು ಕಾಡದೇ ಬಿಡವು.
ಪುಸ್ತಕ: ಅಪ್ಪಾ ಅಂದ್ರೆ ಆಕಾಶ
ಲೇಖಕರು: ಎ ಆರ್ ಮಣಿಕಾಂತ್
ಬೆಲೆ: 130
ಪ್ರಕಾಶನ: ನೀಲಿಮಾ ಪ್ರಕಾಶನ ಬೆಂಗಳೂರು.
No comments:
Post a Comment